logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

FAQ
ಎಫ್‌ಎಕ್ಯೂ
ಪದೇಪದೇ ಕೇಳಲಾಗುವ ಪ್ರಶ್ನೆಗಳು
ಫ್ರೀಕ್ವೆಂಟ್‌ಲಿ ಆಸ್ಕ್‌ಡ್ ಕ್ವೆಶ್ಚನ್ಸ್ (ಪದೇಪದೇ ಕೇಳಲಾಗುವ ಪ್ರಶ್ನೆಗಳು); ನಿರ್ದಿಷ್ಟ ಉತ್ಪನ್ನದ ಕುರಿತು ಬಳಕೆದಾರರು ಕೇಳಬಹುದಾದ ಸಾಮಾನ್ಯ ಪ್ರಶ್ನೆಗಳು ಹಾಗೂ ಅವುಗಳ ಉತ್ತರದ ಪಟ್ಟಿ
ಜಾಲತಾಣ, ಕಂಪ್ಯೂಟರ್ ತಂತ್ರಾಂಶ, ಮೊಬೈಲ್ ಆಪ್ ಅಥವಾ ಹೊಸ ಯಂತ್ರಾಂಶ - ಯಾವುದೇ ಆದರೂ ಅದನ್ನು ಉಪಯೋಗಿಸುವ ಕುರಿತು ಬಳಕೆದಾರರಲ್ಲಿ ಹಲವು ಪ್ರಶ್ನೆಗಳಿರುವುದು ಸಹಜ. ಇಂತಹ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರಗಳನ್ನು ನೀಡುವುದು ಉತ್ಪಾದಕರ ಜವಾಬ್ದಾರಿಯೂ ಹೌದು. ಆದರೆ ಒಂದೇ ಬಗೆಯ ಪ್ರಶ್ನೆಗಳಿಗೆ ಪ್ರತ್ಯೇಕವಾಗಿ ಉತ್ತರಿಸುತ್ತ ಕುಳಿತರೆ ಬಳಕೆದಾರ - ಉತ್ಪಾದಕ ಇಬ್ಬರ ಸಮಯವೂ ಹಾಳು. ಈ ಸನ್ನಿವೇಶವನ್ನು ತಪ್ಪಿಸಲು ಬಳಕೆಯಾಗುವ ಉಪಾಯವೇ ಎಫ್‌ಎಕ್ಯೂ, ಅಂದರೆ 'ಫ್ರೀಕ್ವೆಂಟ್‌ಲಿ ಆಸ್ಕ್‌ಡ್ ಕ್ವೆಶ್ಚನ್ಸ್' (ಪದೇಪದೇ ಕೇಳಲಾಗುವ ಪ್ರಶ್ನೆಗಳು). ನಿರ್ದಿಷ್ಟ ಉತ್ಪನ್ನದ ಕುರಿತು ಬಳಕೆದಾರರು ಕೇಳಬಹುದಾದ ಪ್ರಶ್ನೆಗಳನ್ನು ಗುರುತಿಸಿ ಅವೆಲ್ಲಕ್ಕೂ ಉತ್ತರಗಳನ್ನು ಪಟ್ಟಿಮಾಡಿಡುವುದು ಎಫ್‌ಎಕ್ಯೂ ಬಳಕೆಯ ಹಿಂದಿನ ಉದ್ದೇಶ. ಪ್ರತಿ ಪ್ರಶ್ನೆಗೂ ಸಂಸ್ಥೆಯ ಗ್ರಾಹಕಸೇವಾ ವಿಭಾಗವನ್ನು ಸಂಪರ್ಕಿಸುವ ಬದಲಿಗೆ ಬಹುತೇಕ ಉತ್ತರಗಳನ್ನು ಗ್ರಾಹಕರೇ ಹುಡುಕಿಕೊಳ್ಳುವುದು ಇಂತಹ ಪಟ್ಟಿಯ ಸಹಾಯದಿಂದ ಸಾಧ್ಯವಾಗುತ್ತದೆ. ಪ್ರಶ್ನೆ-ಉತ್ತರಗಳ ಈ ಪಟ್ಟಿಯನ್ನು ತಂತ್ರಾಂಶದೊಡನೆ ಕಡತದಂತೆ, ಜಾಲತಾಣದಲ್ಲೊಂದು ಪುಟದಂತೆ ಅಥವಾ ಯಂತ್ರಾಂಶದ ಜೊತೆಗೆ ಮುದ್ರಿತ ಪುಸ್ತಿಕೆಯಂತೆ ಕೊಡುವುದು ಸಾಧ್ಯ. ಹೊಸ ಪ್ರಶ್ನೆಗಳನ್ನು ಸೇರಿಸಿಕೊಂಡು ಎಫ್‌ಎಕ್ಯೂ ಪಟ್ಟಿಯನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡುವ ಅಭ್ಯಾಸ ಅನೇಕ ಸಂಸ್ಥೆಗಳಿಗೆ ಇರುವುದರಿಂದ ಇದನ್ನು ಜಾಲತಾಣದಲ್ಲಿ ಉಳಿಸಿಡುವ ಅಭ್ಯಾಸವೇ ಹೆಚ್ಚು ವ್ಯಾಪಕ. ಆ ಮೂಲಕ ನಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ಹುಡುಕಿಕೊಳ್ಳುವುದೂ ಸಾಧ್ಯವಾಗುವುದರಿಂದ ಗ್ರಾಹಕರಿಗೂ ಈ ಅಭ್ಯಾಸವೇ ಅಚ್ಚುಮೆಚ್ಚು ಎನ್ನಬಹುದು.

FTTH
ಎಫ್‌ಟಿಟಿಎಚ್
(ರೂಪಿಸಬೇಕಿದೆ)
ಫೈಬರ್ ಟು ದ ಹೋಮ್; ಮನೆ ಅಥವಾ ಕಚೇರಿಯವರೆಗೂ ಆಪ್ಟಿಕಲ್ ಫೈಬರ್ ಸಂಪರ್ಕವನ್ನೇ ಕಲ್ಪಿಸಿಕೊಡುವ ಮೂಲಕ ಅತಿವೇಗದ ಅಂತರಜಾಲ ಸೇವೆ ಒದಗಿಸುವ ತಂತ್ರಜ್ಞಾನ
ಅತ್ಯಂತ ವೇಗವಾದ ಹಾಗೂ ನಿಖರವಾದ ಮಾಹಿತಿ ಸಂವಹನಕ್ಕೆ ಆಪ್ಟಿಕಲ್ ಫೈಬರ್‌ಗಳು ಬಳಕೆಯಾಗುತ್ತವೆ. ವಿಶ್ವದೆಲ್ಲೆಡೆ ಅಂತರಜಾಲ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳಲ್ಲಿ ಇವುಗಳ ಬಳಕೆ ತೀರಾ ಸಾಮಾನ್ಯ; ಆದರೆ ಸಂಪರ್ಕವನ್ನು ಬಳಕೆದಾರರಿಗೆ ಮುಟ್ಟಿಸುವ ಕೊನೆಯ ಹಂತದಲ್ಲಿ (ಇದನ್ನು 'ಲಾಸ್ಟ್ ಮೈಲ್' ಎಂದು ಗುರುತಿಸುತ್ತಾರೆ) ಇನ್ನೂ ಟೆಲಿಫೋನ್ ತಂತಿಗಳಂತಹ ಹಳೆಯ ವಿಧಾನಗಳೇ ಹೆಚ್ಚು ಬಳಕೆಯಾಗುತ್ತವೆ. ಇದನ್ನು ತಪ್ಪಿಸಿ ಬಳಕೆದಾರರ ಮನೆ ಅಥವಾ ಕಚೇರಿಯವರೆಗೂ ಆಪ್ಟಿಕಲ್ ಫೈಬರ್ ಸಂಪರ್ಕವನ್ನೇ ಕಲ್ಪಿಸಿಕೊಡುವುದು ಎಫ್‌ಟಿಟಿಎಚ್ ಪರಿಕಲ್ಪನೆಯ ಉದ್ದೇಶ. ಈ ಹೆಸರಿನ ಪೂರ್ಣರೂಪ 'ಫೈಬರ್ ಟು ದ ಹೋಮ್' ಎಂದು. ಈ ತಂತ್ರಜ್ಞಾನದಲ್ಲಿ ಸಂಪೂರ್ಣವಾಗಿ ಆಪ್ಟಿಕಲ್ ಫೈಬರ್‌ಗಳೇ ಬಳಕೆಯಾಗುವುದರಿಂದ ಸಾಮಾನ್ಯ ಅಂತರಜಾಲ ಸಂಪರ್ಕಗಳಿಗಿಂತ ಅನೇಕ ಪಟ್ಟು ಹೆಚ್ಚಿನ ವೇಗದ ಸಂಪರ್ಕಗಳನ್ನು ಬಳಕೆದಾರರಿಗೆ ನೀಡುವುದು ಸಾಧ್ಯವಾಗುತ್ತದೆ.

FTP
ಎಫ್‌ಟಿಪಿ
(ರೂಪಿಸಬೇಕಿದೆ)
ಫೈಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್; ಯಾವುದೇ ಜಾಲದ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ನಡುವೆ ಕಡತಗಳ ವಿನಿಮಯ ಮಾಡಿಕೊಳ್ಳುವಾಗ ಪಾಲಿಸಬೇಕಾದ ಶಿಷ್ಟಾಚಾರ
ಕಂಪ್ಯೂಟರಿನಲ್ಲಿ ಒಂದು ಫೋಲ್ಡರಿನಿಂದ ಇನ್ನೊಂದು ಫೋಲ್ಡರಿಗೆ ಕಡತಗಳನ್ನು ವರ್ಗಾಯಿಸುವುದು ಅಥವಾ ನಕಲಿಸುವುದು ನಮಗೆ ಬಹಳ ಸುಲಭ. ಬೇರೊಂದು ಕಂಪ್ಯೂಟರಿಗೆ ಕಡತಗಳನ್ನು ವರ್ಗಾಯಿಸಲು ಪೆನ್‌ಡ್ರೈವ್ ಬಳಸುವುದೂ ಸರಾಗವೇ. ಆದರೆ ನಾವು ಕಡತಗಳನ್ನು ವರ್ಗಾಯಿಸಬೇಕಿರುವುದು ಪ್ರಪಂಚದ ಇನ್ನೊಂದು ಮೂಲೆಯಲ್ಲಿರುವ ಕಂಪ್ಯೂಟರಿಗಾದರೆ? ಇಂತಹ ಸನ್ನಿವೇಶಗಳಲ್ಲಿ ಬಳಕೆಯಾಗುವ ಶಿಷ್ಟಾಚಾರವೇ 'ಫೈಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್', ಅಂದರೆ ಎಫ್‌ಟಿಪಿ. ಡಿಜಿಟಲ್ ಜಗತ್ತಿನಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವಾಗ ಪಾಲಿಸಬೇಕಾದ ನಿಯಮಗಳನ್ನು ಸೂಚಿಸುವ ಶಿಷ್ಟಾಚಾರಗಳ (ಪ್ರೋಟೋಕಾಲ್) ಪೈಕಿ ಇದೂ ಒಂದು. ಯಾವುದೇ ಜಾಲದ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ನಡುವೆ ಕಡತಗಳ ವಿನಿಮಯ ಈ ಶಿಷ್ಟಾಚಾರಕ್ಕೆ ಅನುಗುಣವಾಗಿಯೇ ನಡೆಯುತ್ತದೆ (ಮೊಬೈಲ್ ಜಗತ್ತಿನಲ್ಲೂ ಎಫ್‌ಟಿಪಿ ಬಳಕೆ ಉಂಟು). ಈ ಕಂಪ್ಯೂಟರುಗಳು ಪರಸ್ಪರ ಎಷ್ಟೇ ದೂರದಲ್ಲಿದ್ದರೂ ಪರವಾಗಿಲ್ಲ, ನಮ್ಮ ಕಂಪ್ಯೂಟರಿನ ಎರಡು ಫೋಲ್ಡರುಗಳ ನಡುವೆ ಕಡತಗಳನ್ನು ವರ್ಗಾಯಿಸಿದಷ್ಟೇ ಸುಲಭವಾಗಿ ಆ ಎರಡು ಕಂಪ್ಯೂಟರುಗಳ ನಡುವೆ ಕಡತಗಳ ವಿನಿಮಯ ಎಫ್‌ಟಿಪಿ ತಂತ್ರಾಂಶಗಳ ನೆರವಿನಿಂದ ಸಾಧ್ಯವಾಗುತ್ತದೆ. ಕಡತಗಳ ವರ್ಗಾವಣೆ ಹೆಚ್ಚು ಸುರಕ್ಷಿತವಾಗಿ ಆಗಬೇಕಾದಾಗ 'ಸೆಕ್ಯೂರ್ ಎಫ್‌ಟಿಪಿ' ಶಿಷ್ಟಾಚಾರವನ್ನೂ ಬಳಸಲಾಗುತ್ತದೆ. ಸಾಮಾನ್ಯ ಬಳಕೆದಾರರು ಅಂತರಜಾಲ ಸಂಪರ್ಕ ಉಪಯೋಗಿಸುವಾಗ ಅವರ ಬಹಳಷ್ಟು ಕೆಲಸಗಳು ಎಚ್‌ಟಿಟಿಪಿ (ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್) ಶಿಷ್ಟಾಚಾರಕ್ಕೆ ಅನುಗುಣವಾಗಿ ನಡೆಯುತ್ತವೆ. ಹಾಗಾಗಿ ಅವರು ಎಫ್‌ಟಿಪಿ ಬಳಸುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.

Emoji
ಎಮೋಜಿ
(ರೂಪಿಸಬೇಕಿದೆ)
ಎಸ್ಸೆಮ್ಮೆಸ್, ಚಾಟ್ ಹಾಗೂ ವಾಟ್ಸ್‌ಆಪ್ ಮೆಸೇಜಿನಂತಹ ಮಾಧ್ಯಮಗಳಲ್ಲಿ ಭಾವನೆಗಳನ್ನು ಅಭಿವ್ಯಕ್ತಿಸಲು ನೆರವಾಗುವ ಪುಟಾಣಿ ಚಿತ್ರ; ಎಮೋಟೈಕನ್‌ಗಳ ಸುಧಾರಿತ ರೂಪ ಎಂದರೂ ಸರಿಯೇ
ಎಸ್ಸೆಮ್ಮೆಸ್ ಕಳುಹಿಸುವಾಗ, ಚಾಟ್ ಮಾಡುವಾಗಲೆಲ್ಲ ಪಠ್ಯದೊಡನೆ ಕೆಲ ಭಾವನೆಗಳನ್ನೂ ಅಭಿವ್ಯಕ್ತಿಸಲು ನೆರವಾಗುವ ಪುಟ್ಟ ಚಿತ್ರಗಳನ್ನು 'ಎಮೋಜಿ'ಗಳೆಂದು ಕರೆಯುತ್ತಾರೆ. ಈ ಚಿತ್ರಾಕ್ಷರಗಳು ಮೊದಲಿಗೆ ಕಾಣಿಸಿಕೊಂಡದ್ದು ಜಪಾನ್ ದೇಶದಲ್ಲಿ. ಅಲ್ಲಿನ ಎನ್‌ಟಿಟಿ ಡೋಕೋಮೋ ಸಂಸ್ಥೆ ೧೯೯೦ರ ದಶಕದ ಕೊನೆಯಲ್ಲಿ ಇವುಗಳನ್ನು ಪರಿಚಯಿಸಿತಂತೆ. ಸ್ಮಾರ್ಟ್‌ಫೋನುಗಳ, ಮೆಸೇಜಿಂಗ್ ಸೇವೆಗಳ ಬಳಕೆ ಹೆಚ್ಚುತ್ತಿದ್ದಂತೆ ಇವು ಈಗ ಎಲ್ಲೆಲ್ಲೂ ಕಾಣಸಿಗುತ್ತಿವೆ. ಜಿಮೇಲ್, ಫೇಸ್‌ಬುಕ್ ಸೇರಿದಂತೆ ಹಲವೆಡೆ ಎಮೋಟೈಕನ್‌ಗಳನ್ನು ಟೈಪಿಸುತ್ತಿದ್ದಂತೆ ಅದು ತನ್ನಷ್ಟಕ್ಕೆ ತಾನೇ ಎಮೋಜಿ ಆಗಿ ಬದಲಾಗುವ ವ್ಯವಸ್ಥೆ ಕೂಡ ಇದೆ. ಯುನಿಕೋಡ್ ಶಿಷ್ಟತೆಯಲ್ಲೂ ಈ ಚಿತ್ರಾಕ್ಷರಗಳು ಸ್ಥಾನಪಡೆದಿವೆ. ಬೇರೆಬೇರೆ ತಂತ್ರಾಂಶ ಬಳಸುವ ಸಾಧನಗಳಲ್ಲಿ ನಾವು ಬೇರೆಬೇರೆ ವಿನ್ಯಾಸದ ಎಮೋಜಿಗಳನ್ನು ನೋಡಬಹುದು. ಆಪಲ್ ಸಂಸ್ಥೆ ತಯಾರಿಸುವ ಐಫೋನ್, ಐಪ್ಯಾಡ್ ಮುಂತಾದ ಸಾಧನಗಳಲ್ಲಿರುವ ಎಮೋಜಿಗಳ ಪೈಕಿ ಕ್ಯಾಲೆಂಡರ್ ಚಿತ್ರವಿರುವ ಎಮೋಜಿಯಲ್ಲಿ ಜುಲೈ ೧೭ ಎಂಬ ದಿನಾಂಕ ಇದೆ. ಅದಕ್ಕಾಗಿ ಆ ದಿನವನ್ನು ಎಮೋಜಿ ದಿನ ಎಂದು ಕರೆಯುತ್ತಾರೆ. ೨೦೦೨ರಲ್ಲಿ ಆಪಲ್ ಕ್ಯಾಲೆಂಡರ್ ತಂತ್ರಾಂಶ (ಐಕ್ಯಾಲ್) ಬಿಡುಗಡೆಯಾದದ್ದು ಆ ದಿನದಂದು.

Emoticon
ಎಮೋಟೈಕನ್
(ರೂಪಿಸಬೇಕಿದೆ)
ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಸಂಕೇತಗಳು (ಐಕನ್)
ಕೆಲವೇ ಪದ-ಅಕ್ಷರಗಳಲ್ಲಿ ನಮ್ಮ ಸಂದೇಶವನ್ನು ಮುಗಿಸಬೇಕಿರುವ ಎಸ್ಸೆಮ್ಮೆಸ್‌ನಂತಹ ಮಾಧ್ಯಮಗಳಲ್ಲಿ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದು ಕಷ್ಟ. ಈ ಸಮಸ್ಯೆಯನ್ನು ಎದುರಿಸಲು ಬಳಕೆಯಾಗುವ ಸುಲಭ ಉಪಾಯವೇ ಎಮೋಟೈಕನ್‌ಗಳ ಬಳಕೆ. ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಈ ಸಂಕೇತಗಳ (ಐಕನ್) ಹೆಸರು ರೂಪುಗೊಂಡಿರುವುದು ಎಮೋಶನ್ ಹಾಗೂ ಐಕನ್ - ಎರಡೂ ಪದಗಳು ಸೇರಿ. ಸಂತೋಷ ವ್ಯಕ್ತಪಡಿಸಲು :-) ದುಃಖ ತೋರಿಸಲು :-( ಮುಂತಾದ ಸಂಕೇತಗಳನ್ನು ನಾವು ಎಸ್ಸೆಮ್ಮೆಸ್ ಕಳುಹಿಸುವಾಗ, ಚಾಟ್ ಮಾಡುವಾಗಲೆಲ್ಲ ಬಳಸುತ್ತೇವಲ್ಲ, ಅವೆಲ್ಲ ಎಮೋಟೈಕನ್‌ಗಳೇ. ಗಹಗಹಿಸಿ ನಗುವ ಮುಖ, ಆಶ್ಚರ್ಯದಿಂದ ಬಾಯಿತೆರೆದಿರುವ ಮುಖ, ಕಿಲಾಡಿತನದಿಂದ ಕಣ್ಣುಹೊಡಿಯುತ್ತಿರುವ ಮುಖ, ಕನ್ನಡಕ ಧರಿಸಿ ಸ್ಮಾರ್ಟ್ ಆಗಿರುವ ಮುಖ, ಮೀಸೆಧಾರಿಯ ನಗುಮುಖಗಳೂ ಎಮೋಟೈಕನ್ ಲೋಕದಲ್ಲಿವೆ. ಇಂತಹ ಎಲ್ಲ ಸಂಕೇತಗಳನ್ನೂ ಅಕ್ಷರ, ಅಂಕಿ ಹಾಗೂ ಲೇಖನ ಚಿಹ್ನೆಗಳ ಜೋಡಣೆಯಿಂದ ರೂಪಿಸಲಾಗಿರುತ್ತದೆ ಎನ್ನುವುದು ವಿಶೇಷ. ಈಗ ಪರಿಚಿತವಾಗಿರುವ ರೂಪದಲ್ಲಿ ಎಮೋಟೈಕನ್‌ಗಳ ಸೃಷ್ಟಿಯಾದದ್ದು ೧೯೮೨ರಲ್ಲಿ. ಅವನ್ನು ರೂಪಿಸಿದ್ದು ಅಮೆರಿಕಾದ ಸ್ಕಾಟ್ ಫಾಲ್‌ಮನ್ ಎನ್ನುವ ವಿಜ್ಞಾನಿ.

Ergonomics
ಎರ್ಗೊನಾಮಿಕ್ಸ್
(ರೂಪಿಸಬೇಕಿದೆ)
ವಿವಿಧ ವಸ್ತುಗಳಿಗೆ ಹಾಗೂ ಅವುಗಳನ್ನು ಬಳಸುವ ಪರಿಸರಕ್ಕೆ ಅತ್ಯಂತ ಸಮರ್ಪಕವಾದ ವಿನ್ಯಾಸಗಳನ್ನು ರೂಪಿಸುವ ವಿಜ್ಞಾನದ ಶಾಖೆ
ರೇಜರ್‌ನಿಂದ ಪ್ರಾರಂಭಿಸಿ ಕುರ್ಚಿ, ಚಾಕು, ಟಿವಿ ರಿಮೋಟ್, ರೋಡ್‌ರೋಲರ್‌ವರೆಗೆ ಯಾವುದೇ ವಸ್ತುವಿನ ವಿನ್ಯಾಸವಾದರೂ ಅದು ಬಳಕೆದಾರನಿಗೆ ಅನುಕೂಲವಾಗುವಂತಿರಬೇಕು. ಹೀಗಾಗಿಯೇ ವಸ್ತುಗಳ ವಿನ್ಯಾಸ ಬಹಳ ದೊಡ್ಡ ಕ್ಷೇತ್ರವಾಗಿ ಬೆಳೆದಿದೆ; ಕೆಲ ವರ್ಷದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ನಾವು ಬಳಸುವ ಬಹುತೇಕ ವಸ್ತುಗಳ ವಿನ್ಯಾಸವೆಲ್ಲ ಗಣನೀಯವಾಗಿ ಬದಲಾಗಿದೆ. ಯಂತ್ರಗಳ ವಿನ್ಯಾಸವಷ್ಟೇ ಅಲ್ಲ, ಅವುಗಳನ್ನು ನಾವು ಬಳಸುವ ಸ್ಥಳದ ವಿನ್ಯಾಸವೂ ನಮಗೆ ತೊಂದರೆಮಾಡದಂತಿರಬೇಕು. ಅಷ್ಟೇ ಅಲ್ಲ, ವಿವಿಧ ಸಾಧನಗಳನ್ನು ಬಳಸುವಾಗ ನಮ್ಮ ದೈಹಿಕ ಭಂಗಿ ಕೂಡ ಸರಿಯಾಗಿರಬೇಕು. ಇದೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಬೇರೆಬೇರೆ ಸನ್ನಿವೇಶಗಳಿಗೆ ಮಾನವ ಅಂಗಾಂಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ನೋಡಿಕೊಂಡು ಅತ್ಯಂತ ಸಮರ್ಪಕವಾದ ವಿನ್ಯಾಸಗಳನ್ನು ರೂಪಿಸುವ ವಿಜ್ಞಾನದ ಶಾಖೆಯೇ ಎರ್ಗೊನಾಮಿಕ್ಸ್. ಕಂಪ್ಯೂಟರನ್ನೋ ಮೊಬೈಲ್ ಫೋನನ್ನೋ ಗಂಟೆಗಟ್ಟಲೆ ಬಳಸುವುದು ಇದೀಗ ಸಾಮಾನ್ಯ ಸಂಗತಿ. ಆದರೆ ಲ್ಯಾಪ್‌ಟಾಪನ್ನೋ ಡೆಸ್ಕ್‌ಟಾಪನ್ನೋ ಬಳಸುವಾಗ ನಾವು ಕುಳಿತಿರುವ ಭಂಗಿ ಸರಿಯಿಲ್ಲದಿದ್ದರೆ, ಕತ್ತು ಬಗ್ಗಿಸಿಕೊಂಡು ಮೊಬೈಲ್ ಫೋನನ್ನು ದೀರ್ಘಕಾಲ ದಿಟ್ಟಿಸುತ್ತಿದ್ದರೆ ಅದು ಹಲವು ದೈಹಿಕ ತೊಂದರೆಗಳಿಗೆ ಕಾರಣವಾಗಬಹುದು. ಹೀಗಾಗಿ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಆರಾಮವಾಗಿ ಕೆಲಸಮಾಡಬೇಕೆಂದರೆ ಎರ್ಗೊನಾಮಿಕ್ ವಿನ್ಯಾಸದ ಪೀಠೋಪಕರಣ ಬಳಸುವುದು ಅಪೇಕ್ಷಣೀಯ. ಇದೇ ರೀತಿ ಲ್ಯಾಪ್‌ಟಾಪ್-ಮೊಬೈಲ್ ಇತ್ಯಾದಿಗಳನ್ನು ಬಳಸುವಾಗ ನಮ್ಮ ದೈಹಿಕ ಭಂಗಿ ಹೇಗಿದ್ದರೆ ಒಳ್ಳೆಯದು ಎನ್ನುವುದನ್ನೂ ಎರ್ಗೊನಾಮಿಕ್ಸ್ ಪರಿಕಲ್ಪನೆಗಳು ವಿವರಿಸುತ್ತವೆ.

LED
ಎಲ್‌ಇಡಿ
(ರೂಪಿಸಬೇಕಿದೆ)
ಲೈಟ್ ಎಮಿಟಿಂಗ್ ಡಯೋಡ್; ವಿದ್ಯುತ್ ಪ್ರವಹಿಸಿದಾಗ ಬೆಳಕನ್ನು ಹೊರಸೂಸುವ ಅರೆವಾಹಕ ಸಾಧನ
ಮಕ್ಕಳ ಆಟಿಕೆ, ಸೀರಿಯಲ್ ಸೆಟ್, ಟ್ರಾಫಿಕ್ ಸಿಗ್ನಲ್, ಬಸ್ಸು - ರೈಲಿನ ಬೋರ್ಡು ಮುಂತಾದ ಕಡೆಗಳಲ್ಲಿ ಎಲ್‌ಇಡಿಗಳು ಬಳಕೆಯಾಗುವುದು ನಮಗೆ ಗೊತ್ತೇ ಇದೆ. ಬಹುತೇಕ ಟೀವಿ, ಮೊಬೈಲ್ ಫೋನುಗಳ ಪರದೆಯನ್ನು ಬೆಳಗುವುದೂ ಇದೇ ಎಲ್‌ಇಡಿಗಳು. ಎಲ್‌ಇಡಿ ಎನ್ನುವುದು ಲೈಟ್ ಎಮಿಟಿಂಗ್ ಡಯೋಡ್ ಎನ್ನುವ ಹೆಸರಿನ ಹ್ರಸ್ವರೂಪ. ಡಯೋಡ್ ಎಂಬ ಅರೆವಾಹಕ (ಸೆಮಿಕಂಡಕ್ಟರ್) ಸಾಧನದ ಮೂಲಕ ವಿದ್ಯುತ್ ಹರಿಸಿದಾಗ ಅದರೊಳಗೆ ಸಂಚರಿಸುವ ಇಲೆಕ್ಟ್ರಾನುಗಳು ಫೋಟಾನ್ ಎಂಬ ಕಣಗಳನ್ನು ಬಿಡುಗಡೆಮಾಡುತ್ತವೆ. ಬೆಳಕಿನ ಮೂಲ ಕಣಗಳೇ ಈ ಫೋಟಾನುಗಳು. ಬಹಳಷ್ಟು ಡಯೋಡುಗಳಿಂದ ಹೊರಸೂಸುವ ಬೆಳಕು ನಮ್ಮ ಕಣ್ಣಿಗೆ ಕಾಣದ ರೂಪದಲ್ಲಿರುತ್ತವೆ (ಉದಾ: ಇನ್‌ಫ್ರಾರೆಡ್, ಅಂದರೆ ಅತಿರಕ್ತ ಕಿರಣಗಳು). ಡಯೋಡುಗಳ ನಿರ್ಮಾಣದಲ್ಲಿ ನಿರ್ದಿಷ್ಟ ಅರೆವಾಹಕ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಕಣ್ಣಿಗೆ ಕಾಣುವ ಬೆಳಕು ಹೊರಸೂಸುವಂತೆ ಮಾಡುವುದೂ ಸಾಧ್ಯ. ನಿತ್ಯವೂ ನಮ್ಮ ಸಂಪರ್ಕಕ್ಕೆ ಬರುವ ಬಹುತೇಕ ಎಲ್‌ಇಡಿಗಳು ಇದೇ ಪರಿಕಲ್ಪನೆಯನ್ನು ಬಳಸುತ್ತವೆ. ಅಂದಹಾಗೆ ಎಲ್‌ಇಡಿಗಳ ಬಳಕೆ ಬೆಳಕಿನ ಉತ್ಪಾದನೆಗಷ್ಟೇ ಸೀಮಿತವೇನಲ್ಲ. ನೀರಿನ ಶುದ್ಧೀಕರಣ, ಮಾಹಿತಿ ಸಂವಹನ ಮುಂತಾದ ಕ್ಷೇತ್ರಗಳಲ್ಲೂ ಇವುಗಳ ಬಳಕೆ ಸಾಧ್ಯವಿದೆ. ನಿಸ್ತಂತು (ವೈರ್‌ಲೆಸ್) ಮಾಹಿತಿ ಸಂವಹನದಲ್ಲಿ ರೇಡಿಯೋ ಅಲೆಗಳ ಬದಲಿಗೆ ಬೆಳಕಿನ ಕಿರಣಗಳನ್ನು ಬಳಸಿದರೆ ಕ್ಷಿಪ್ರ ಹಾಗೂ ಸುರಕ್ಷಿತ ಮಾಹಿತಿ ಸಂವಹನ ಸಾಧ್ಯವಾಗುತ್ತದೆ. ನಮಗೆಲ್ಲ ಪರಿಚಯವಿರುವ ವೈ-ಫೈ ತಂತ್ರಜ್ಞಾನಕ್ಕೆ ಪರ್ಯಾಯವಾಗಿ ಬೆಳೆಯಬಲ್ಲ ಈ ಲೈ-ಫೈ, ಅಂದರೆ 'ಲೈಟ್ ಎನೇಬಲ್ಡ್ ವೈ-ಫೈ'ಯಲ್ಲಿ ಎಲ್‌ಇಡಿಗಳ ಬಳಕೆ ಸಾಧ್ಯವೆಂದು ವಿಜ್ಞಾನಿಗಳು ಈಗಾಗಲೇ ತೋರಿಸಿದ್ದಾರೆ.

LMS
ಎಲ್‍ಎಂಎಸ್
(ರೂಪಿಸಬೇಕಿದೆ)
ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಂ; ಪಾಠಗಳ ನಿರ್ವಹಣೆ, ಸಂಬಂಧಪಟ್ಟ ಕಡತಗಳ ಶೇಖರಣೆ, ವಿದ್ಯಾರ್ಥಿಯ ಪ್ರಗತಿ ಕುರಿತ ಮಾಹಿತಿ ಸಂಗ್ರಹಣೆ ಮುಂತಾದ್ದನ್ನೆಲ್ಲ ನಿಭಾಯಿಸುವ ತಂತ್ರಾಂಶ
ನಮ್ಮ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದು ಮಾಹಿತಿ ತಂತ್ರಜ್ಞಾನದ (ಐಟಿ) ಹೆಚ್ಚುಗಾರಿಕೆ. ಐಟಿಯಿಂದ ಗಮನಾರ್ಹವಾಗಿ ಬದಲಾದ ಕ್ಷೇತ್ರಗಳಲ್ಲಿ ಶಿಕ್ಷಣಕ್ಕೆ ಪ್ರಮುಖ ಸ್ಥಾನವಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿಕೊಂಡಿದ್ದು ಇಲ್ಲಿನ ಬದಲಾವಣೆಗಳಲ್ಲೊಂದು. ಇದರಿಂದಾಗಿಯೇ ಇದೀಗ ಕಂಪ್ಯೂಟರು - ಮೊಬೈಲ್ ಫೋನುಗಳ ಮೂಲಕವೂ ಶಿಕ್ಷಣ ಪಡೆಯುವುದು ಸಾಧ್ಯವಾಗಿದೆ. ಹೀಗೆ ಶಿಕ್ಷಣ ನೀಡಲು ಅಗತ್ಯವಾದ ಸಂಪನ್ಮೂಲಗಳನ್ನೆಲ್ಲ (ಪಠ್ಯ, ವೀಡಿಯೋ, ಧ್ವನಿ, ಆನ್‌ಲೈನ್ ಪರೀಕ್ಷೆ ಇತ್ಯಾದಿ) ನಿಭಾಯಿಸಬೇಕಲ್ಲ, ಅದಕ್ಕಾಗಿ ಬಳಕೆಯಾಗುವ ತಂತ್ರಾಂಶವೇ ಎಲ್‌ಎಂಎಸ್, ಅಂದರೆ ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಂ. ಪಾಠಗಳ ನಿರ್ವಹಣೆ, ಸಂಬಂಧಪಟ್ಟ ಕಡತಗಳ ಶೇಖರಣೆ, ವಿದ್ಯಾರ್ಥಿಯ ಪ್ರಗತಿ ಕುರಿತ ಮಾಹಿತಿ ಸಂಗ್ರಹಣೆ - ಇವೆಲ್ಲವೂ ಈ ತಂತ್ರಾಂಶದ ಜವಾಬ್ದಾರಿ. ಹಾಗೆಯೇ ಪರೀಕ್ಷೆಗಳನ್ನು ನಡೆಸಲೂ ಈ ತಂತ್ರಾಂಶವನ್ನು ಬಳಸಬಹುದು. ಆನ್‌ಲೈನ್ ತರಗತಿಗಳನ್ನು ನಡೆಸುವ ಜಾಲತಾಣಗಳು, ತಮ್ಮ ಉದ್ಯೋಗಿಗಳಿಗೆ ಇ-ಲರ್ನಿಂಗ್ ಸೌಲಭ್ಯ ಒದಗಿಸುವ ಸಂಸ್ಥೆಗಳು ಎಲ್‌ಎಂಎಸ್ ತಂತ್ರಾಂಶಗಳನ್ನು ವ್ಯಾಪಕವಾಗಿ ಬಳಸುತ್ತವೆ. ಶಾಲಾ ತರಗತಿಗಳಿಗೆ ಪೂರಕವಾಗಿ ನಡೆಯುವ ಚಟುವಟಿಕೆಗಳನ್ನು ನಿಭಾಯಿಸಲೂ ಈ ತಂತ್ರಾಂಶಗಳನ್ನು ಬಳಸುವುದು ಸಾಧ್ಯ. ಸಕ್ಸೆಸ್‌ಫ್ಯಾಕ್ಟರ್ಸ್ ಲರ್ನಿಂಗ್, ಸಮ್‌ಟೋಟಲ್ ಲರ್ನ್ ಮುಂತಾದವು ಕಾರ್ಪೊರೇಟ್ ಕ್ಷೇತ್ರದಲ್ಲಿ ಎಲ್‌ಎಂಎಸ್ ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಗೆ ಕೆಲ ಉದಾಹರಣೆಗಳು. ವಾಣಿಜ್ಯ ಉತ್ಪನ್ನಗಳ ಜೊತೆಗೆ ಮೂಡಲ್‌ನಂತಹ (moodle) ಮುಕ್ತ (ಓಪನ್‌ಸೋರ್ಸ್) ತಂತ್ರಾಂಶಗಳೂ ಎಲ್‌ಎಂಎಸ್‌ಗಳ ಪೈಕಿ ಸಾಕಷ್ಟು ಹೆಸರು ಗಳಿಸಿವೆ.

SEO
ಎಸ್‌ಇಒ
(ರೂಪಿಸಬೇಕಿದೆ)
ಸರ್ಚ್ ಇಂಜನ್ ಆಪ್ಟಿಮೈಸೇಶನ್; ಸರ್ಚ್ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯಲು ಜಾಲತಾಣಗಳು ಅನುಸರಿಸುವ ಕ್ರಮಗಳು
ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಏನು ಮಾಹಿತಿ ಬೇಕೆಂದರೂ ನಾವು ಥಟ್ಟನೆ ಸರ್ಚ್ ಇಂಜನ್‌ಗಳತ್ತ ಮುಖಮಾಡುತ್ತೇವೆ. ಹಾಗೆ ಸರ್ಚ್ ಮಾಡುವಾಗಲೂ ಅಷ್ಟೆ, ನಾವು ಗಮನಿಸುವುದು ಫಲಿತಾಂಶ ಪಟ್ಟಿಯ ಮೊದಲ ಕೆಲ ಸ್ಥಾನಗಳಲ್ಲಿರುವ ತಾಣಗಳನ್ನು ಮಾತ್ರವೇ. ಹೀಗಾಗಿಯೇ ಬಹಳಷ್ಟು ಜಾಲತಾಣಗಳು ಸರ್ಚ್ ಫಲಿತಾಂಶಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ಆ ಮೂಲಕ ಹೆಚ್ಚಿನ ಓದುಗರನ್ನು ತಮ್ಮತ್ತ ಸೆಳೆಯುವ, ತಮ್ಮ ವಹಿವಾಟನ್ನು ವಿಸ್ತರಿಸಿಕೊಳ್ಳುವ ಉದ್ದೇಶ ಅವುಗಳದು. ಸರ್ಚ್ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯಲು ಜಾಲತಾಣಗಳು ಅನುಸರಿಸುವ ಕ್ರಮಗಳನ್ನು ಒಟ್ಟಾರೆಯಾಗಿ ಸರ್ಚ್ ಇಂಜನ್ ಆಪ್ಟಿಮೈಸೇಶನ್ (ಎಸ್‌ಇಒ) ಎಂದು ಕರೆಯುತ್ತಾರೆ. ಬೇರೆಬೇರೆ ಸರ್ಚ್ ಇಂಜನ್‌ಗಳು ಹೇಗೆ ಕೆಲಸಮಾಡುತ್ತವೆ, ಅವುಗಳ ಬಳಕೆದಾರರು ಏನನ್ನು ಹುಡುಕುತ್ತಾರೆ, ಹುಡುಕಲು ಹೆಚ್ಚಾಗಿ ಬಳಕೆಯಾಗುವ ಕೀವರ್ಡ್‌ಗಳು ಯಾವುವು ಎನ್ನುವುದನ್ನೆಲ್ಲ ಎಸ್‌ಇಒ ತಂತ್ರಗಳು ಗಮನದಲ್ಲಿಟ್ಟುಕೊಳ್ಳುತ್ತವೆ. ಈ ಅಂಶಗಳಿಗೆ ಅನುಗುಣವಾಗಿ ಜಾಲತಾಣದ ವಿನ್ಯಾಸ ಹಾಗೂ ಅದರಲ್ಲಿರುವ ಮಾಹಿತಿಯನ್ನು ಬದಲಿಸಲಾಗುತ್ತದೆ. ಸರ್ಚ್ ಇಂಜನ್‌ಗಳಿಗೆ ಹುಡುಕಲು ಸುಲಭವಾಗುವಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು, ತಾಣದಲ್ಲಿರುವ ಮಾಹಿತಿಯನ್ನು ವ್ಯವಸ್ಥಿತವಾಗಿ ವಿಂಗಡಿಸುವುದು, ಮಾಹಿತಿಯ ಜೊತೆಗೆ ಸೂಕ್ತ ಕೀವರ್ಡ್‌ಗಳನ್ನು ('ಟ್ಯಾಗ್') ಜೋಡಿಸಿಡುವುದು, ಓದುಗರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುವಂತೆ - ಅವರು ತಾಣದ ಕೊಂಡಿಗಳನ್ನು ಹೆಚ್ಚುಹೆಚ್ಚಾಗಿ ಶೇರ್ ಮಾಡುವಂತೆ ನೋಡಿಕೊಳ್ಳುವುದು - ಇವೆಲ್ಲ ಎಸ್‌ಇಒ ಚಟುವಟಿಕೆಯ ಅಂಗಗಳೇ.

SSD
ಎಸ್‌ಎಸ್‌ಡಿ
(ರೂಪಿಸಬೇಕಿದೆ)
ಸಾಲಿಡ್ ಸ್ಟೇಟ್ ಡ್ರೈವ್; ಮಾಹಿತಿ ಶೇಖರಣೆಯಲ್ಲಿ ಹಾರ್ಡ್ ಡಿಸ್ಕ್‌ಗೆ ಪರ್ಯಾಯವಾಗಿ ಬೆಳೆಯುತ್ತಿರುವ ಹೆಚ್ಚು ಸಕ್ಷಮ - ವಿಶ್ವಾಸಾರ್ಹ ಸಾಧನ.
ಕಂಪ್ಯೂಟರಿನಲ್ಲಿ ಮಾಹಿತಿ ಸಂಗ್ರಹಿಸಿಡಲು ಹಾರ್ಡ್ ಡಿಸ್ಕ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತವೆ. ಆದರೆ ಅವುಗಳಲ್ಲಿ ಮಾಹಿತಿಯನ್ನು ಓದಿ-ಬರೆಯುವ ವೇಗ ಕಡಿಮೆ, ಜೊತೆಗೆ ಯಾಂತ್ರಿಕ ವೈಫಲ್ಯದ ಸಾಧ್ಯತೆಯೂ ಇರುತ್ತದೆ. ಈ ಪರಿಸ್ಥಿತಿ ಬದಲಿಸಬೇಕೆಂದರೆ ಮಾಹಿತಿ ಶೇಖರಣೆಯಲ್ಲಿ ವಿಭಿನ್ನ ಮಾರ್ಗಗಳ ಬಳಕೆ ಅಗತ್ಯವಾಗುತ್ತದೆ. ಅಂತಹುದೊಂದು ಮಾರ್ಗವೇ ಸಾಲಿಡ್ ಸ್ಟೇಟ್ ಡ್ರೈವ್ (ಎಸ್‌ಎಸ್‌ಡಿ). ಹಾರ್ಡ್ ಡಿಸ್ಕ್‌ನ ತಟ್ಟೆಗಳ, ಚಲಿಸುವ ಭಾಗಗಳ ಜಾಗದಲ್ಲಿ ಇದು ಫ್ಲಾಶ್ ಮೆಮೊರಿ ಚಿಪ್‌ಗಳನ್ನು ಬಳಸುತ್ತದೆ. ಪೆನ್‌ಡ್ರೈವ್‌ಗಳಲ್ಲಿ ಬಳಕೆಯಾಗುವುದೂ ಫ್ಲಾಶ್ ಮೆಮೊರಿಯೇ, ಆದರೆ ಎಸ್‌ಎಸ್‌ಡಿಯಲ್ಲಿ ಇನ್ನೂ ಹೆಚ್ಚು ಕಾರ್ಯಕ್ಷಮತೆಯ ಚಿಪ್‌ಗಳು ಬಳಕೆಯಾಗುತ್ತವೆ ಅಷ್ಟೇ. ಎಸ್‌ಎಸ್‌ಡಿಗಳು ಹಾರ್ಡ್ ಡಿಸ್ಕ್‌ಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ, ಹೆಚ್ಚು ವೇಗವಾಗಿ ಕೆಲಸಮಾಡುತ್ತವೆ ಮತ್ತು ಅವುಗಳ ವಿಶ್ವಾಸಾರ್ಹತೆಯೂ ಹೆಚ್ಚು. ಜೊತೆಗೆ ಅವುಗಳ ಬೆಲೆಯೂ ಹೆಚ್ಚು: ಸದ್ಯ ಹಲವು ದುಬಾರಿ ಕಂಪ್ಯೂಟರುಗಳಲ್ಲಿ ಮಾತ್ರವೇ ಅವು ಬಳಕೆಯಾಗುತ್ತಿವೆ. ಹಾರ್ಡ್ ಡಿಸ್ಕ್ ಡ್ರೈವ್ ಹಾಗೂ ಸಾಲಿಡ್ ಸ್ಟೇಟ್ ಡ್ರೈವ್‌ಗಳೆರಡರ ತಂತ್ರಜ್ಞಾನಗಳನ್ನೂ ಒಟ್ಟಿಗೆ ಬಳಸುವ ಸಾಲಿಡ್ ಸ್ಟೇಟ್ ಹೈಬ್ರಿಡ್ ಡ್ರೈವ್ (ಎಸ್‌ಎಸ್‌ಎಚ್‌ಡಿ) ಎನ್ನುವ ಸಾಧನ ಕೂಡ ಇದೆ. ಸಾಮಾನ್ಯ ಹಾರ್ಡ್ ಡಿಸ್ಕ್ ಜೊತೆಗೆ ಕೊಂಚಮಟ್ಟಿನ ಸಾಲಿಡ್ ಸ್ಟೇಟ್ ಶೇಖರಣಾ ಸಾಮರ್ಥ್ಯವನ್ನೂ ಒದಗಿಸುವುದು ಈ ಸಾಧನದ ವೈಶಿಷ್ಟ್ಯ.


logo