logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

ALU
ಎಎಲ್‍ಯು
(ರೂಪಿಸಬೇಕಿದೆ)
ಅರ್ಥ್‌ಮೆಟಿಕ್ ಲಾಜಿಕ್ ಯುನಿಟ್; ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್‌ನ (ಸಿಪಿಯು) ಒಂದು ಭಾಗ. ದತ್ತಾಂಶ ಸಂಸ್ಕರಣೆಯಲ್ಲಿ ಅಗತ್ಯವಾದ ಅಂಕಗಣಿತ ಹಾಗೂ ತರ್ಕದ ಲೆಕ್ಕಾಚಾರಗಳನ್ನು ಮಾಡುವುದು ಇದರ ಜವಾಬ್ದಾರಿ.
ಯಾವುದೇ ಕಂಪ್ಯೂಟರಿನ ಪ್ರಮುಖ ಅಂಗ ಅದರ ಕೇಂದ್ರೀಯ ಸಂಸ್ಕರಣ ಘಟಕ, ಅರ್ಥಾತ್ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎನ್ನುವ ವಿಷಯ ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಠ್ಯಗಳಲ್ಲೇ ಇರುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳಲ್ಲಿ ನಡೆಯುವ ಅಪಾರ ಪ್ರಮಾಣದ ದತ್ತಾಂಶ ಸಂಸ್ಕರಣೆಯನ್ನು ನಿಭಾಯಿಸುವುದು ಇದರ ಜವಾಬ್ದಾರಿ. ದತ್ತಾಂಶವನ್ನು ಸಂಸ್ಕರಿಸುವ ಈ ಕೆಲಸದಲ್ಲಿ ಹಲವು ವಿಭಾಗಗಳಿರುತ್ತವೆ. ದತ್ತಾಂಶ ಸಂಸ್ಕರಣೆಯಲ್ಲಿ ಅಗತ್ಯವಾದ ಅಂಕಗಣಿತ ಹಾಗೂ ತರ್ಕದ ಲೆಕ್ಕಾಚಾರಗಳನ್ನು ಮಾಡುವುದು ಇಂತಹ ವಿಭಾಗಗಳಲ್ಲೊಂದು. ಸಿಪಿಯು ಒಳಗೆ ಇದನ್ನು ನಿರ್ವಹಿಸುವ ಜವಾಬ್ದಾರಿ ಎಎಲ್‌ಯು ಎಂಬ ಭಾಗದ್ದು. ಈ ಹೆಸರಿನ ಪೂರ್ಣರೂಪ 'ಅರ್ಥ್‌ಮೆಟಿಕ್ ಲಾಜಿಕ್ ಯುನಿಟ್' ಎಂದು. ಕೂಡಿಸುವ - ಕಳೆಯುವ ಸರಳ ಕೆಲಸಗಳಿಂದ ಪ್ರಾರಂಭಿಸಿ ಬೂಲಿಯನ್ ಆಲ್ಜೀಬ್ರಾದವರೆಗೆ ಎಲ್ಲ ಬಗೆಯ ಲೆಕ್ಕಾಚಾರಗಳನ್ನೂ ಇದು ನಿಭಾಯಿಸಬಲ್ಲದು. ಕಂಪ್ಯೂಟರಿನಲ್ಲಿರುವ ಯಾವುದೇ ಮಾಹಿತಿ ಅದಕ್ಕೆ ಅರ್ಥವಾಗುವುದು ದ್ವಿಮಾನ (ಬೈನರಿ) ಪದ್ಧತಿಯ ಅಂಕಿಗಳ ರೂಪದಲ್ಲಿದ್ದಾಗಲಷ್ಟೇ. ಹೀಗಾಗಿ ಎಎಲ್‌ಯುವಿನಲ್ಲಿ ನಡೆಯುವ ಲೆಕ್ಕಾಚಾರಗಳೂ ಇವೇ ಅಂಕಿಗಳನ್ನು ಬಳಸುತ್ತವೆ. ಕಂಪ್ಯೂಟರಿನಲ್ಲಿ, ಸ್ಮಾರ್ಟ್‌ಫೋನಿನಲ್ಲಿ ಸಿಪಿಯು ಕೆಲಸವನ್ನು ಅವುಗಳ ಪ್ರಾಸೆಸರ್ ಮಾಡುತ್ತದಲ್ಲ, ಅಂತಹ ಪ್ರತಿ ಪ್ರಾಸೆಸರ್‌ನಲ್ಲೂ ಎಎಲ್‌ಯು ಇರುತ್ತದೆ. ಉನ್ನತ ಗುಣಮಟ್ಟದ ಚಿತ್ರಗಳನ್ನು (ಗ್ರಾಫಿಕ್ಸ್) ಸಂಸ್ಕರಿಸಲು - ಪ್ರದರ್ಶಿಸಲು ಬಳಕೆಯಾಗುವ ಗ್ರಾಫಿಕ್ಸ್ ಪ್ರಾಸೆಸಿಂಗ್ ಯುನಿಟ್(ಜಿಪಿಯು)ನಲ್ಲೂ ಎಎಲ್‌ಯು ಇರುತ್ತದೆ.

EXIF
ಎಕ್ಸಿಫ್
(ರೂಪಿಸಬೇಕಿದೆ)
ಎಕ್ಸ್‌ಚೇಂಜಬಲ್ ಇಮೇಜ್ ಫೈಲ್ ಫಾರ್ಮ್ಯಾಟ್; ಡಿಜಿಟಲ್ ಛಾಯಾಚಿತ್ರಗಳ ತಾಂತ್ರಿಕ ವಿವರಗಳನ್ನು ನೀಡುವ ಮಾಹಿತಿ
ಡಿಜಿಟಲ್ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸಿದಾಗ ಆ ಚಿತ್ರದ ಜೊತೆಗೆ ಉಳಿಸಿಡಲಾಗುವ ಹೆಚ್ಚುವರಿ ಮಾಹಿತಿಯೇ ಎಕ್ಸಿಫ್. ಇದು 'ಎಕ್ಸ್‌ಚೇಂಜಬಲ್ ಇಮೇಜ್ ಫೈಲ್ ಫಾರ್ಮ್ಯಾಟ್' ಎಂಬ ಹೆಸರಿನ ಹ್ರಸ್ವರೂಪ. ಚಿತ್ರ ಕ್ಲಿಕ್ಕಿಸಿದ್ದು ಯಾವಾಗ, ಉಪಯೋಗಿಸಿದ ಕ್ಯಾಮೆರಾ ಯಾವುದು, ಬಳಸಿದ ಸೆಟಿಂಗ್ (ಐಎಸ್‌ಒ, ಶಟರ್ ಸ್ಪೀಡ್, ಅಪರ್ಚರ್ ಇತ್ಯಾದಿ) ಏನು ಎನ್ನುವ ವಿವರವೆಲ್ಲ ಎಕ್ಸಿಫ್ ಡೇಟಾದಲ್ಲಿರುತ್ತದೆ. ಅಷ್ಟೇ ಅಲ್ಲ, ನಿಮ್ಮ ಕ್ಯಾಮೆರಾದಲ್ಲಿ (ಮೊಬೈಲ್ ಕ್ಯಾಮೆರಾ ಸೇರಿದಂತೆ) ಜಿಪಿಎಸ್ ಸೌಲಭ್ಯ ಬಳಸುತ್ತಿದ್ದರೆ ಚಿತ್ರ ಕ್ಲಿಕ್ಕಿಸಿದ್ದು ಎಲ್ಲಿ ಎನ್ನುವ ಮಾಹಿತಿಯೂ ಇದರಲ್ಲಿ ಸೇರಿಕೊಳ್ಳುತ್ತದೆ. ಚಿತ್ರಗಳನ್ನು ವೀಕ್ಷಿಸುವ ಅಥವಾ ಸಂಪಾದಿಸುವ ಹಲವು ತಂತ್ರಾಂಶಗಳಲ್ಲಿ ನೀವು ಚಿತ್ರದ ಎಕ್ಸಿಫ್ ವಿವರಗಳನ್ನು ನೋಡಬಹುದು. ಕೆಲವೊಮ್ಮೆ ಚಿತ್ರದ ಬಗ್ಗೆ ಇಷ್ಟೆಲ್ಲ ವಿವರ ಹಂಚಿಕೊಳ್ಳುವುದು ಅನಗತ್ಯ ಎನಿಸುತ್ತದಲ್ಲ, ಅಂತಹ ಸಂದರ್ಭಗಳಲ್ಲಿ ಚಿತ್ರದಿಂದ ಎಕ್ಸಿಫ್ ವಿವರಗಳನ್ನು ತೆಗೆದುಹಾಕಲು ಅನುವುಮಾಡಿಕೊಡುವ ತಂತ್ರಾಂಶಗಳೂ ಇವೆ.

Extranet
ಎಕ್ಸ್‌ಟ್ರಾನೆಟ್
(ರೂಪಿಸಬೇಕಿದೆ)
ನಿರ್ಬಂಧಿತ ಪ್ರವೇಶವಿರುವ ಇಂಟ್ರಾನೆಟ್ ಅನ್ನು ಜಾಲತಾಣವೊಂದರ ಮೂಲಕ ಪ್ರವೇಶಿಸಲು ಅನುವುಮಾಡಿಕೊಡುವ ವ್ಯವಸ್ಥೆ
ಭಾರೀ ಸಂಖ್ಯೆಯ ಕಂಪ್ಯೂಟರುಗಳ ಪರಸ್ಪರ ಸಂಪರ್ಕದಿಂದ ರೂಪುಗೊಂಡ ಬೃಹತ್ ಜಾಲವೇ ಇಂಟರ್‌ನೆಟ್. ಯಾರು ಬೇಕಿದ್ದರೂ ಇದರ ಸಂಪರ್ಕವನ್ನು ಪಡೆದುಕೊಳ್ಳುವುದು, ಮುಕ್ತವಾಗಿ ಬಳಸುವುದು ಸಾಧ್ಯ. ನಿರ್ದಿಷ್ಟ ಮಿತಿಯೊಳಗೆ ಮಾತ್ರವೇ ಕಾರ್ಯನಿರ್ವಹಿಸುವ, ಆಯ್ದ ಬಳಕೆದಾರರಿಗಷ್ಟೇ ಪ್ರವೇಶವಿರುವ ಖಾಸಗಿ ಜಾಲಗಳೂ ಇವೆ. ಇಂತಹ ಜಾಲಗಳಿಗೆ ಇಂಟ್ರಾನೆಟ್ ಎಂದು ಹೆಸರು. ಈ ಎರಡೂ ಜಾಲಗಳನ್ನು ಬಳಸಿಕೊಳ್ಳುವುದು 'ಎಕ್ಸ್‌ಟ್ರಾನೆಟ್' ಪರಿಕಲ್ಪನೆಯ ವೈಶಿಷ್ಟ್ಯ. ನಿರ್ಬಂಧಿತ ಪ್ರವೇಶವಿರುವ ಇಂಟ್ರಾನೆಟ್ ಅನ್ನು ಜಾಲತಾಣವೊಂದರ ಮೂಲಕ ಪ್ರವೇಶಿಸಲು ಇದು ಅನುವುಮಾಡಿಕೊಡುತ್ತದೆ. ಜಾಲತಾಣದಲ್ಲಿರುವ ಈ ವ್ಯವಸ್ಥೆ ಅಂತರಜಾಲದ ಮೂಲಸೌಕರ್ಯ ಬಳಸಿಕೊಳ್ಳುತ್ತದಾದರೂ ಸೂಕ್ತ ಅನುಮತಿಯಿರುವ (ಅದಕ್ಕೆ ಬೇಕಾದ ಪಾಸ್‌ವರ್ಡ್ ಇತ್ಯಾದಿಗಳನ್ನು ತಿಳಿದಿರುವ) ಬಳಕೆದಾರರು ಮಾತ್ರ ಇಂಟ್ರಾನೆಟ್ ಅನ್ನು ಪ್ರವೇಶಿಸುವುದು ಸಾಧ್ಯವಾಗುತ್ತದೆ. ಹೊರಗಿನ ಬಳಕೆದಾರರೊಡನೆ ತಮ್ಮ ಇಂಟ್ರಾನೆಟ್‌ನಲ್ಲಿರುವ ಮಾಹಿತಿಯನ್ನು ಹಂಚಿಕೊಳ್ಳುವ ಅವಶ್ಯಕತೆ ಬಂದಾಗ ಸಂಸ್ಥೆಗಳು ಎಕ್ಸ್‌ಟ್ರಾನೆಟ್ ಪರಿಕಲ್ಪನೆಯ ಮೊರೆಹೋಗುತ್ತವೆ. ಇಮೇಲ್ ಸೇವೆಗೋ ಸಮಾಜಜಾಲಕ್ಕೋ ಲಾಗ್‌ಇನ್ ಆಗುವಂತೆಯೇ ಅಂತಹ ಬಳಕೆದಾರರು ಬ್ರೌಸರ್ ತಂತ್ರಾಂಶ ಬಳಸಿ ಸಂಸ್ಥೆಯ ಇಂಟ್ರಾನೆಟ್ ಪ್ರವೇಶಿಸುವುದು ಸಾಧ್ಯ. ಹೀಗೆ ಪ್ರವೇಶಿಸುವಾಗ ಸಾಮಾನ್ಯ ಜಾಲತಾಣಗಳ ಹೋಲಿಕೆಯಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಇಂತಹ ಬಳಕೆದಾರರು ಇಂಟ್ರಾನೆಟ್‌ನಲ್ಲಿರುವ ಮಾಹಿತಿಯಲ್ಲಿ ನಿರ್ದಿಷ್ಟ ಭಾಗವನ್ನಷ್ಟೇ ಪಡೆದುಕೊಳ್ಳುವಂತೆ ನಿರ್ಬಂಧಿಸುವ ಅಭ್ಯಾಸಗಳೂ ಇವೆ.

HTTP
ಎಚ್‌ಟಿಟಿಪಿ
(ರೂಪಿಸಬೇಕಿದೆ)
ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್; ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಯ ವಿನಿಮಯ ಮಾಡಿಕೊಳ್ಳುವಾಗ ಪಾಲಿಸಬೇಕಾದ ನಿಯಮಗಳನ್ನು ಸೂಚಿಸುವ ಶಿಷ್ಟಾಚಾರ
ಬಹುತೇಕ ಎಲ್ಲ ಜಾಲತಾಣಗಳ ವಿಳಾಸವೂ 'ಹೆಚ್‌ಟಿಟಿಪಿ' ಎನ್ನುವ ಅಕ್ಷರಗಳಿಂದ ಪ್ರಾರಂಭವಾಗುತ್ತದಲ್ಲ, ಇಲ್ಲಿ 'ಹೆಚ್‌ಟಿಟಿಪಿ' ಎನ್ನುವುದು 'ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್' ಎಂಬ ಹೆಸರಿನ ಹ್ರಸ್ವರೂಪ. ಇಂದಿನ ಕಂಪ್ಯೂಟರ್ ಪ್ರಪಂಚದಲ್ಲಿ ಪ್ರತಿ ಕ್ಷಣವೂ ಒಂದಲ್ಲ ಒಂದು ಬಗೆಯ ಸಂವಹನ ನಡೆಯುತ್ತಿರುತ್ತದೆ. ಬಳಕೆದಾರರೊಡನೆ, ಕಂಪ್ಯೂಟರಿನ ವಿವಿಧ ಯಂತ್ರಾಂಶಗಳ ನಡುವೆ, ಅಂತರಜಾಲದಲ್ಲಿರುವ ಬೇರೆ ಕಂಪ್ಯೂಟರುಗಳೊಡನೆ ಮಾಹಿತಿಯ ವಿನಿಮಯ ಸಾಗಿರುತ್ತದೆ. ಹೀಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಲ್ಲ, ಅದಕ್ಕೆ ಹಲವು ಶಿಷ್ಟಾಚಾರಗಳನ್ನು (ಪ್ರೋಟೋಕಾಲ್) ರೂಪಿಸಲಾಗಿದೆ. ಹೆಚ್‌ಟಿಟಿಪಿ ಕೂಡ ಇಂತಹುದೇ ಒಂದು ಶಿಷ್ಟಾಚಾರ. ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಬಹುತೇಕ ಸಂವಹನವೆಲ್ಲ ಈ ಶಿಷ್ಟಾಚಾರಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ನಾವು ಬ್ರೌಸರಿನಲ್ಲಿ ತಾಣದ ವಿಳಾಸ ಟೈಪ್ ಮಾಡಿ ಎಂಟರ್ ಒತ್ತಿದಾಗ ವೆಬ್ ಪುಟ ತೆರೆದುಕೊಳ್ಳುತ್ತದಲ್ಲ, ಇದರ ಹಿನ್ನೆಲೆಯಲ್ಲಿ ನಮ್ಮ ಕಂಪ್ಯೂಟರಿನಿಂದ ಜಾಲತಾಣದ ಸರ್ವರ್‌ಗೆ ಹೋದ ಹೆಚ್‌ಟಿಟಿಪಿ ಆದೇಶವೊಂದು ಕೆಲಸಮಾಡಿರುತ್ತದೆ. ಯಾವ ಸಂದರ್ಭದಲ್ಲಿ ಯಾವರೀತಿಯ ಎರರ್ ಸಂದೇಶಗಳನ್ನು ತೋರಿಸಬೇಕು ಎನ್ನುವುದೂ ಹೆಚ್‌ಟಿಟಿಪಿ ಶಿಷ್ಟಾಚಾರದ್ದೇ ನಿಯಮ.

Https
ಎಚ್‌ಟಿಟಿಪಿಎಸ್
(ರೂಪಿಸಬೇಕಿದೆ)
ಎಚ್‌ಟಿಟಿಪಿ ಸೆಕ್ಯೂರ್; ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಯ ಸುರಕ್ಷಿತ ವಿನಿಮಯವನ್ನು ಸಾಧ್ಯವಾಗಿಸುವ ಶಿಷ್ಟಾಚಾರ
ಆನ್‌ಲೈನ್ ಲೋಕದಲ್ಲಿ ಹಣಕಾಸಿನ ವಹಿವಾಟು ನಡೆಸುವ ಸಂದರ್ಭದಲ್ಲಿ ಬಳಸುವ ಜಾಲತಾಣದ ವಿಳಾಸ 'https://' ಎಂದು ಪ್ರಾರಂಭವಾಗುವುದನ್ನು ನೀವು ನೋಡಿರಬಹುದು, ಬ್ರೌಸರಿನ ಅಡ್ರೆಸ್ ಪಟ್ಟಿಯಲ್ಲಿ ಪುಟ್ಟದೊಂದು ಬೀಗದ ಚಿತ್ರ ಕಾಣಿಸಿಕೊಳ್ಳುವುದನ್ನೂ ಗಮನಿಸಿರಬಹುದು. ಸಾಮಾನ್ಯವಾಗಿ ಕಾಣಸಿಗುವ httpಯ ಹೋಲಿಕೆಯಲ್ಲಿ 'https://'ನಲ್ಲಿರುವ ಹೆಚ್ಚುವರಿ 's' ಸೆಕ್ಯೂರ್ ಅರ್ಥಾತ್ ಸುರಕ್ಷಿತ ಎನ್ನುವುದರ ಸೂಚಕ. ಇಂತಹ ಸುರಕ್ಷಿತ ತಾಣಗಳು ಸಾಮಾನ್ಯ ತಾಣಗಳಿಗಿಂತ ಪ್ರತ್ಯೇಕವಾದ ಶಿಷ್ಟತೆಯನ್ನು (ಪ್ರೋಟೋಕಾಲ್) ಬಳಸುತ್ತವೆ. ನೀವು ತೆರೆದಿರುವ ತಾಣದ ವಿವರಗಳನ್ನು ಪರಿಶೀಲಿಸಿ ಅದು ವಿಶ್ವಾಸಾರ್ಹವೋ ಅಲ್ಲವೋ ಎಂದು ನಿಮಗೆ ತಿಳಿಸುವುದು ಈ ಶಿಷ್ಟತೆಯ ಕೆಲಸ. ಅಷ್ಟೇ ಅಲ್ಲ, ಈ ವ್ಯವಸ್ಥೆ ಬಳಕೆದಾರ ಹಾಗೂ ಜಾಲತಾಣದ ನಡುವಿನ ಮಾಹಿತಿ ಸಂವಹನವನ್ನು ಸುರಕ್ಷಿತಗೊಳಿಸುತ್ತದೆ. ಇದರಿಂದಾಗಿ ಜಾಲತಾಣದಲ್ಲಿ ನೀವು ದಾಖಲಿಸುವ ಪಾಸ್‌ವರ್ಡ್ (ಗುಪ್ತಪದ), ಕ್ರೆಡಿಟ್ ಕಾರ್ಡ್ ವಿವರ ಮುಂತಾದ ಖಾಸಗಿ ಮಾಹಿತಿ ಅಂತರಜಾಲದ ಮೂಲಕ ಸಾಗುವಾಗ ಬೇರೆ ಯಾರೂ ಅದನ್ನು ಕದಿಯುವುದು ಸಾಧ್ಯವಿಲ್ಲದಂತಾಗುತ್ತದೆ. ಹಣಕಾಸು ವಹಿವಾಟು ನಡೆಸುವಾಗ ಮಾತ್ರವೇ ಅಲ್ಲ, ಇಮೇಲ್ ಹಾಗೂ ಸಮಾಜಜಾಲಗಳ ಮೂಲಕವೂ ಸಾಕಷ್ಟು ಪ್ರಮಾಣದ ಖಾಸಗಿ ಮಾಹಿತಿ ವಿನಿಮಯವಾಗುವುದರಿಂದ ಆ ತಾಣಗಳಿಗೂ ಹೆಚ್ಚುವರಿ ಸುರಕ್ಷತೆ ಬೇಕಾಗುತ್ತದೆ. ಹೀಗಾಗಿಯೇ ಇಂತಹ ಸೇವೆ ಒದಗಿಸುವ ಹಲವಾರು ತಾಣಗಳು ಈ ರೀತಿಯ ಹೆಚ್ಚುವರಿ ಸುರಕ್ಷತೆ ಬಳಸುತ್ತವೆ.

HDMI
ಎಚ್‌ಡಿಎಂಐ
(ರೂಪಿಸಬೇಕಿದೆ)
ಹೈ ಡೆಫನಿಶನ್ ಮಲ್ಟಿಮೀಡಿಯಾ ಇಂಟರ್‌ಫೇಸ್; ಉನ್ನತ ಗುಣಮಟ್ಟದ ವೀಡಿಯೋ ಸಂಕೇತಗಳನ್ನು ಅಷ್ಟೇ ಉತ್ತಮ ಗುಣಮಟ್ಟದಲ್ಲಿ ವೀಕ್ಷಿಸಲು ಅನುವುಮಾಡಿಕೊಡುವ ತಂತ್ರಜ್ಞಾನ
ಉತ್ತಮ ಗುಣಮಟ್ಟದ ವೀಡಿಯೋ ಚಿತ್ರೀಕರಿಸುವುದು ಈಗ ಬಹಳ ಸುಲಭ. ಹೀಗೆ ಚಿತ್ರೀಕರಿಸಿದ ವೀಡಿಯೋಗಳನ್ನು ಅಷ್ಟೇ ಒಳ್ಳೆಯ ಗುಣಮಟ್ಟದಲ್ಲಿ ನೋಡಲು ನೆರವಾಗುವ ತಂತ್ರಜ್ಞಾನದ ಹೆಸರು ಎಚ್‌ಡಿಎಂಐ. ಈ ಹೆಸರು 'ಹೈ ಡೆಫನಿಶನ್ ಮಲ್ಟಿಮೀಡಿಯಾ ಇಂಟರ್‌ಫೇಸ್' ಎನ್ನುವುದರ ಹ್ರಸ್ವರೂಪ. ಅತ್ಯುತ್ತಮ ಗುಣಮಟ್ಟದ ವೀಡಿಯೋ ಸಂಕೇತಗಳನ್ನು ಅತ್ಯಂತ ಕ್ಷಿಪ್ರವಾಗಿ ವರ್ಗಾಯಿಸುವ ಸಾಮರ್ಥ್ಯ ಈ ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯ. ಎಚ್‌ಡಿ ಟೀವಿಗಳಲ್ಲಿ, ಡಿವಿಡಿ ಪ್ಲೇಯರುಗಳಲ್ಲಿ, ಸೆಟ್ ಟಾಪ್ ಬಾಕ್ಸುಗಳಲ್ಲಿ, ಕಂಪ್ಯೂಟರುಗಳಲ್ಲಿ, ಹಲವಾರು ಡಿಜಿಟಲ್ ಕ್ಯಾಮೆರಾ, ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೂ ಈಗ ಎಚ್‌ಡಿಎಂಐ ಪೋರ್ಟ್ ಇರುತ್ತದೆ. ನೋಡಲು ಸರಿಸುಮಾರು ಯುಎಸ್‌ಬಿ ಪೋರ್ಟ್‌ನಂತೆಯೇ ಕಾಣುವ ಎಚ್‌ಡಿಎಂಐ ಪೋರ್ಟ್ ಮೂಲಕ ನಾವು ವಿವಿಧ ಸಾಧನಗಳನ್ನು ಪರಸ್ಪರ ಸಂಪರ್ಕಿಸಿ ಎಚ್‌ಡಿ ಗುಣಮಟ್ಟದ ವೀಡಿಯೋ ವೀಕ್ಷಿಸುವುದು ಸಾಧ್ಯ. ಕ್ರೋಮ್‌ಕಾಸ್ಟ್‌ನಂತಹ ಮೀಡಿಯಾ ಸ್ಟ್ರೀಮಿಂಗ್ ಸಾಧನಗಳನ್ನೂ ಎಚ್‌ಡಿಎಂಐ ಪೋರ್ಟ್ ಮೂಲಕ ಸಂಪರ್ಕಿಸಲಾಗುತ್ತದೆ. ಹಲವು ಪ್ರೊಜೆಕ್ಟರುಗಳೂ ಎಚ್‌ಡಿಎಂಐ ಸಂಪರ್ಕವನ್ನೇ ಬಳಸುತ್ತವೆ. ಅಂದಹಾಗೆ ಎಚ್‌ಡಿಎಂಐ ಸೌಲಭ್ಯವಿರುವ ಉಪಕರಣಗಳನ್ನು ಸಂಪರ್ಕಿಸಲು ಎಚ್‌ಡಿಎಂಐ ಕೇಬಲ್ಲುಗಳನ್ನೇ ಬಳಸಬೇಕಾದ್ದು ಕಡ್ಡಾಯ.

NFC
ಎನ್‌ಎಫ್‌ಸಿ
(ರೂಪಿಸಬೇಕಿದೆ)
ನಿಯರ್ ಫೀಲ್ಡ್ ಕಮ್ಯೂನಿಕೇಶನ್; ಪರಸ್ಪರ ಸಮೀಪವಿರುವ ಸಾಧನಗಳ ನಡುವೆ ನಿಸ್ತಂತು ಸಂವಹನವನ್ನು ಸಾಧ್ಯವಾಗಿಸುವ ತಂತ್ರಜ್ಞಾನ
ಬಹುತೇಕ ಮೊಬೈಲ್ ಫೋನುಗಳಲ್ಲಿ, ಹಲವು ಕ್ರೆಡಿಟ್ ಕಾರ್ಡುಗಳಲ್ಲಿ ಎನ್‌ಎಫ್‌ಸಿ ಸೌಲಭ್ಯವಿರುವುದರ ಕುರಿತು ನಾವು ಕೇಳುತ್ತಿರುತ್ತೇವೆ. ಎನ್‌ಎಫ್‌ಸಿ ಎಂಬ ಈ ಹೆಸರು 'ನಿಯರ್ ಫೀಲ್ಡ್ ಕಮ್ಯೂನಿಕೇಶನ್' ಎನ್ನುವುದರ ಹ್ರಸ್ವರೂಪ. ಪರಸ್ಪರ ಸಮೀಪವಿರುವ ಸಾಧನಗಳ ನಡುವೆ ನಿಸ್ತಂತು ಸಂವಹನವನ್ನು (ವೈರ್‌ಲೆಸ್ ಕಮ್ಯೂನಿಕೇಶನ್) ಸಾಧ್ಯವಾಗಿಸುವ ತಂತ್ರಜ್ಞಾನ ಇದು. ಮ್ಯಾಗ್ನೆಟಿಕ್ ಇಂಡಕ್ಷನ್ (ಕಾಂತ ಪ್ರೇರಣೆ) ಎಂಬ ವಿದ್ಯಮಾನವನ್ನು ಬಳಸಿಕೊಂಡು ಕೆಲಸಮಾಡುವ ಈ ತಂತ್ರಜ್ಞಾನ ಪರಸ್ಪರ ಹತ್ತಿರದಲ್ಲಿರುವ ಎರಡು ಸಾಧನಗಳ ನಡುವೆ ಮಾಹಿತಿ ವಿನಿಮಯವನ್ನು ಸಾಧ್ಯವಾಗಿಸುತ್ತದೆ. ಮಾಹಿತಿ ವಿನಿಮಯವಷ್ಟೇ ಏಕೆ, ನಿಸ್ತಂತು ಹಣಪಾವತಿಯಿಂದ ಜಾಹೀರಾತು ಪ್ರಸಾರದವರೆಗೆ ಹಲವು ಉದ್ದೇಶಗಳಿಗಾಗಿ ಎನ್‌ಎಫ್‌ಸಿ ಬಳಕೆ ಸಾಧ್ಯ. ಮೊಬೈಲಿನೊಡನೆ ಬ್ಲೂಟೂತ್ ಸಂಪರ್ಕ ಕಲ್ಪಿಸಿಕೊಳ್ಳಲು ಎನ್‌ಎಫ್‌ಸಿ ಬಳಸುವ ಸ್ಪೀಕರ್ - ಹೆಡ್‌ಫೋನ್ ಇತ್ಯಾದಿಗಳೂ ಇವೆ. ಸೂಪರ್‌ಮಾರ್ಕೆಟಿನಲ್ಲಿ ಕೊಂಡ ವಸ್ತುಗಳಿಗೆ ಹಣ ಪಾವತಿಸಲು ಬಿಲ್ಲಿಂಗ್ ವಿಭಾಗದಲ್ಲಿರುವ ರೀಡರಿನ ಮುಂದೆ ಎನ್‌ಎಫ್‌ಸಿ ಕ್ರೆಡಿಟ್ ಕಾರ್ಡನ್ನೋ ಮೊಬೈಲ್ ಫೋನನ್ನೋ ಹಿಡಿದು ಮುಂದೆ ಸಾಗುವ ಕಲ್ಪನೆಯನ್ನು ಈ ತಂತ್ರಜ್ಞಾನ ಬಳಸಿ ಸಾಕಾರಗೊಳಿಸಬಹುದು. ಹಾಗೆ ಮಾಡಿದಾಗ ಎನ್‌ಎಫ್‌ಸಿ ಮೂಲಕ ವರ್ಗಾವಣೆಯಾಗುವ ಮಾಹಿತಿ ಬಳಸಿ ಬಿಲ್ಲಿನ ಹಣವನ್ನು ನಮ್ಮ ಖಾತೆಯಿಂದ ಅಂಗಡಿಯವರ ಖಾತೆಗೆ ವರ್ಗಾಯಿಸುವುದು ಸಾಧ್ಯವಾಗುತ್ತದೆ.

Encoding
ಎನ್‌ಕೋಡಿಂಗ್
(ರೂಪಿಸಬೇಕಿದೆ)
ಕಂಪ್ಯೂಟರಿನಂತಹ ಸಾಧನಗಳಲ್ಲಿ ದಾಖಲಿಸಿದ ಪಠ್ಯವನ್ನು ದ್ವಿಮಾನ ಪದ್ಧತಿಯ ಅಂಕಿಗಳ ರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆ
ಕಂಪ್ಯೂಟರಿನಲ್ಲಾಗಲಿ ಸ್ಮಾರ್ಟ್‌ಫೋನಿನಲ್ಲೇ ಆಗಲಿ, ನಾವು ಟೈಪ್ ಮಾಡಿದ ಪಠ್ಯ ಅಂತಿಮವಾಗಿ ಶೇಖರವಾಗುವುದು ದ್ವಿಮಾನ ಪದ್ಧತಿಯ (ಬೈನರಿ) ಅಂಕಿಗಳ ರೂಪದಲ್ಲೇ. ಹೀಗೆ ಶೇಖರವಾಗುವ ಪ್ರತಿ ಅಕ್ಷರ, ಅಂಕಿ ಹಾಗೂ ವ್ಯಾಕರಣ ಚಿಹ್ನೆಯನ್ನೂ ನಿರ್ದಿಷ್ಟವಾದ ಒಂದು ಸಂಖ್ಯೆ ಪ್ರತಿನಿಧಿಸುತ್ತದೆ. ಪಠ್ಯವನ್ನು ಹೀಗೆ ಸಂಖ್ಯಾರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆಯಿದೆಯಲ್ಲ, ಅದನ್ನು 'ಎನ್‌ಕೋಡಿಂಗ್' ಎಂದು ಕರೆಯುತ್ತಾರೆ. ಇಲ್ಲಿ ನಿರ್ದಿಷ್ಟ ಸೂತ್ರ ಬಳಸಿಕೊಂಡು ಮೂಲ ದತ್ತಾಂಶವನ್ನು ಮುಂದಿನ ಬಳಕೆಗಾಗಿ (ಉದಾ: ಹಾರ್ಡ್ ಡಿಸ್ಕ್‌ನಲ್ಲಿ ಉಳಿಸಿಡಲು) ಪರಿವರ್ತಿಸಲಾಗುತ್ತದೆ. ಹೀಗೆ ಪರಿವರ್ತಿಸುವಾಗ ಯಾವ ಅಕ್ಷರವನ್ನು ಯಾವ ಸಂಖ್ಯೆ ಪ್ರತಿನಿಧಿಸಬೇಕು ಎಂದು ತಿಳಿಸುವ ಕೆಲಸವನ್ನು ಎನ್‌ಕೋಡಿಂಗ್ ವ್ಯವಸ್ಥೆಗಳು ಮಾಡುತ್ತವೆ. ನಾವು ಆಗಿಂದಾಗ್ಗೆ ಕೇಳುವ ಹೆಸರುಗಳಾದ ಆಸ್ಕಿ (ಅಮೆರಿಕನ್ ಸ್ಟಾಂಡರ್ಡ್ ಕೋಡ್ ಫಾರ್ ಇನ್‌ಫರ್ಮೇಶನ್ ಇಂಟರ್‌ಚೇಂಜ್), ಯುನಿಕೋಡ್ ಮುಂತಾದವೆಲ್ಲ ಎನ್‌ಕೋಡಿಂಗ್ ವ್ಯವಸ್ಥೆಗಳೇ. ಆಸ್ಕಿಯ ಉದಾಹರಣೆಯನ್ನೇ ತೆಗೆದುಕೊಂಡರೆ ೦ಯಿಂದ ೧೨೭ರವರೆಗಿನ ಸಂಖ್ಯೆಗಳು ಅಲ್ಲಿ ಇಂಗ್ಲಿಷ್ ವರ್ಣಮಾಲೆ, ಅಂಕಿಗಳು ಹಾಗೂ ಕೆಲವು ಚಿಹ್ನೆಗಳನ್ನು ಪ್ರತಿನಿಧಿಸುತ್ತವೆ. ಸೀಮಿತ ಸಂಖ್ಯೆಯ ಅಕ್ಷರ ಹಾಗೂ ಚಿಹ್ನೆಗಳನ್ನಷ್ಟೇ ಪ್ರತಿನಿಧಿಸುವ ಈ ವ್ಯವಸ್ಥೆಗೆ ತದ್ವಿರುದ್ಧವಾಗಿ ವಿಶ್ವದ ಹಲವು ಲಿಪಿಗಳನ್ನು ಒಂದೇ ಎನ್‌ಕೋಡಿಂಗ್ ವ್ಯವಸ್ಥೆ ಮೂಲಕ ಪ್ರತಿನಿಧಿಸುತ್ತಿರುವುದು ಯುನಿಕೋಡ್‌ನ ಹೆಗ್ಗಳಿಕೆ. ಹೀಗಾಗಿಯೇ ಒಂದೇ ಕಡತದಲ್ಲಿ ಹಲವು ಭಾಷೆಗಳ ಪಠ್ಯವನ್ನು - ನಿರ್ದಿಷ್ಟ ಫಾಂಟ್‌ಗಳನ್ನೇ ಉಪಯೋಗಿಸಬೇಕೆಂಬ ನಿರ್ಬಂಧವಿಲ್ಲದೆ - ಉಳಿಸಿಡುವುದನ್ನು ಯುನಿಕೋಡ್ ಸಾಧ್ಯವಾಗಿಸುತ್ತದೆ.

Encryption
ಎನ್‌ಕ್ರಿಪ್ಶನ್
ಗೂಢ ಲಿಪೀಕರಣ
ಜಾಲಗಳ ಮೂಲಕ ಮಾಹಿತಿ ರವಾನಿಸುವಾಗ ನಿರ್ದಿಷ್ಟ ಸೂತ್ರ ಬಳಸಿ ಗೂಢಲಿಪಿಯನ್ನಾಗಿ ಪರಿವರ್ತಿಸುವ ಮೂಲಕ ಅದು ವಿಳಾಸದಾರರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳುವ ಪ್ರಕ್ರಿಯೆ
ಅಂತರಜಾಲ ಸಂಪರ್ಕವಿಲ್ಲದ ಕಾಲದಲ್ಲಿ ನಮ್ಮ ಕಂಪ್ಯೂಟರಿನ ತಂತ್ರಾಂಶಗಳನ್ನು ಹೇಗೆ ಬಳಸುತ್ತಿದ್ದೆವೋ ವಿವಿಧ ಜಾಲತಾಣಗಳನ್ನು ಈಗ ಅಷ್ಟೇ ಸರಾಗವಾಗಿ ಬಳಸುತ್ತೇವೆ. ಆದರೆ ಅಂತರಜಾಲ ಸಂಪರ್ಕವಿಲ್ಲದ ಕಂಪ್ಯೂಟರಿನಲ್ಲಿ ತಂತ್ರಾಂಶ ಬಳಸುವುದಕ್ಕೂ ಜಾಲತಾಣಗಳನ್ನು ಬಳಸುವುದಕ್ಕೂ ಒಂದು ಮುಖ್ಯ ವ್ಯತ್ಯಾಸವಿದೆ. ಜಾಲತಾಣಗಳ ಮೂಲಕ ವ್ಯವಹರಿಸುವಾಗ ಅಪಾರ ಪ್ರಮಾಣದ ಮಾಹಿತಿಯನ್ನು ನಾವು ನಮ್ಮ ಕಂಪ್ಯೂಟರಿನಿಂದ ಹೊರಕ್ಕೆ ಕಳುಹಿಸುತ್ತೇವೆ ಎನ್ನುವುದೇ ಆ ವ್ಯತ್ಯಾಸ. ಹೀಗೆ ಹೊರಹೋಗುವ ಮಾಹಿತಿಯಲ್ಲಿ ಒಂದಷ್ಟು ನಮ್ಮ ಖಾಸಗಿ ಮಾಹಿತಿಯಾಗಿರುತ್ತದೆ, ಇನ್ನಷ್ಟು ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟದ್ದೂ ಇರುತ್ತದೆ. ಈ ಮಾಹಿತಿಯೆಲ್ಲ ಕಿಡಿಗೇಡಿಗಳ ಕೈಗೆ ಸಿಕ್ಕದಂತೆ, ನಾವು ಯಾರಿಗೆ ಕಳುಹಿಸಿದ್ದೆವೋ ಅವರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳಲು ಎನ್‌ಕ್ರಿಪ್‌ಶನ್, ಅಂದರೆ ಗೂಢ ಲಿಪೀಕರಣವನ್ನು ಬಳಸಲಾಗುತ್ತದೆ. ಕಳುಹಿಸಲಾಗುವ ಮಾಹಿತಿಯನ್ನು ನಿರ್ದಿಷ್ಟ ಸೂತ್ರ ಬಳಸಿ ಗೂಢಲಿಪಿಯನ್ನಾಗಿ ಪರಿವರ್ತಿಸುವುದು ಎನ್‌ಕ್ರಿಪ್‌ಶನ್‌ನ ಮೂಲ ಮಂತ್ರ. ಮನೆಯ ಬಾಗಿಲಿಗೆ ಎರಡು ಡೋರ್‌ಲಾಕ್ ಇರುತ್ತದಲ್ಲ, ಹಾಗೆ ಗೂಢಲಿಪಿಯನ್ನಾಗಿ ಪರಿವರ್ತಿಸುವ ಸೂತ್ರದಲ್ಲೂ ಎರಡು ಭಾಗಗಳಿರುತ್ತವೆ. ಇವೆರಡೂ ಬೀಗದ ಕೀಲಿಗಳು ಸಿಕ್ಕವರು ಮಾತ್ರ ಗೂಢಲಿಪಿಯನ್ನು ಮತ್ತೆ ಮೂಲರೂಪಕ್ಕೆ ಬದಲಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಾಹಿತಿ ಸಂವಹನದಲ್ಲಿ ಎನ್‌ಕ್ರಿಪ್‌ಶನ್‌ನ ಹಲವು ವಿಧಾನಗಳು ಬಳಕೆಯಾಗುತ್ತವೆ. ನಾವು ಯಾರಿಗೆ ಕಳುಹಿಸಿದ್ದೆವೋ ಅವರು ನಾವು ಕಳುಹಿಸಿದ ಮಾಹಿತಿಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎನ್ನುವುದು ಆಯಾ ವಿಧಾನವನ್ನು ಅವಲಂಬಿಸಿರುತ್ತದೆ. 'ಪಬ್ಲಿಕ್ ಕೀ ಎನ್‌ಕ್ರಿಪ್‌ಶನ್' ಎನ್ನುವ ವಿಧಾನದಲ್ಲಿ ಮೇಲಿನ ಉದಾಹರಣೆಯ ಎರಡು ಬೀಗಗಳ ಪೈಕಿ ಒಂದರ ಕೀಲಿ ಮೂಲ ವಿಳಾಸದಾರರ ಬಳಿಯಲ್ಲಿ ಮಾತ್ರವೇ ಇರುವಂತೆ ನೋಡಿಕೊಳ್ಳಲಾಗುತ್ತದೆ.

API
ಎಪಿಐ
(ರೂಪಿಸಬೇಕಿದೆ)
ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್‌ಫೇಸ್; ಎರಡು ತಂತ್ರಾಂಶಗಳ ನಡುವೆ ಮಾಹಿತಿಯ ವಿನಿಮಯ ಸಾಧ್ಯವಾಗಿಸುವ ವ್ಯವಸ್ಥೆ
ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ನೂರೆಂಟು ಬಗೆಯ ಕೆಲಸಗಳನ್ನು ಸುಲಭವಾಗಿ ಸಾಧಿಸಿಕೊಳ್ಳಬಹುದು. ಇದಕ್ಕೆಲ್ಲ ಬೇಕಾದ ತಂತ್ರಾಂಶಗಳನ್ನು (ಸಾಫ್ಟ್‌ವೇರ್) ಸಿದ್ಧಪಡಿಸುವುದು ತಂತ್ರಾಂಶ ಪರಿಣತರ ಕೆಲಸ. ಯಾವುದೇ ತಂತ್ರಾಂಶವಾದರೂ ಅದರಿಂದ ನಿರ್ದಿಷ್ಟವಾದ ಕೆಲ ಅಪೇಕ್ಷೆಗಳಿರುತ್ತವೆ. ಅಂತಹ ಪ್ರತಿಯೊಂದು ಅಪೇಕ್ಷೆಯನ್ನೂ ನಾವು ಸಿದ್ಧಪಡಿಸುವ ಹೊಸ ತಂತ್ರಾಂಶವೇ ಪೂರೈಸಬೇಕು ಎಂದೇನೂ ಇಲ್ಲ. ನಮ್ಮ ತಂತ್ರಾಂಶ ಮಾಡಬೇಕಾದ ಕೆಲಸದ ಒಂದು ಭಾಗವನ್ನು ಚೆಂದವಾಗಿ ಮಾಡಬಲ್ಲ ಇನ್ನೊಂದು ತಂತ್ರಾಂಶ ಈಗಾಗಲೇ ಇದೆ ಎನ್ನುವುದಾದರೆ ನಮ್ಮ ತಂತ್ರಾಂಶ ಅದರ ಸೇವೆಯನ್ನು ಪಡೆದುಕೊಳ್ಳುವುದು ಸಾಧ್ಯ. ಇದರ ಅರ್ಥ ಬೇರೊಬ್ಬರ ತಂತ್ರಾಂಶವನ್ನು ಕದ್ದು ಅಥವಾ ಕಾಪಿಹೊಡೆದು ಬಳಸುವುದು ಎಂದಲ್ಲ. ಎರಡು ತಂತ್ರಾಂಶಗಳ ನಡುವೆ ಮಾಹಿತಿಯ ವಿನಿಮಯ ಸಾಧ್ಯವಾದರೆ ಅವು ಒಟ್ಟಿಗೆ ಕೆಲಸಮಾಡಬಲ್ಲವು ಎನ್ನುವುದು ಇಲ್ಲಿರುವ ಆಲೋಚನೆ. ಇದನ್ನು ಸಾಧ್ಯವಾಗಿಸುವ ಪರಿಕಲ್ಪನೆಯೇ ಎಪಿಐ, ಅರ್ಥಾತ್ 'ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್‌ಫೇಸ್'. ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಸೇರಿದಂತೆ ಬೇರೊಂದು ತಂತ್ರಾಂಶದಲ್ಲಿರುವ ಸೌಲಭ್ಯವನ್ನು ನಮ್ಮ ತಂತ್ರಾಂಶದಲ್ಲಿ ಬಳಸಿಕೊಳ್ಳಬೇಕು ಎಂದಾಗ ಎಪಿಐಗಳು ನಮಗೆ ನೆರವಾಗುತ್ತವೆ. ಆಯಾ ತಂತ್ರಾಂಶದ ನಿರ್ಮಾತೃಗಳು ರೂಪಿಸಿರುವ ವಿನ್ಯಾಸಕ್ಕೆ ಅನುಗುಣವಾಗಿ ನಮ್ಮ ತಂತ್ರಾಂಶ ಅಲ್ಲಿಗೆ ಮಾಹಿತಿ ರವಾನಿಸಿದರೆ ನಿರ್ದಿಷ್ಟ ರೂಪದ ಫಲಿತಾಂಶ ನಮಗೆ ಅಲ್ಲಿಂದ ದೊರಕುತ್ತದೆ. ಈ ಸೇವೆ ಕೆಲವುಬಾರಿ ಉಚಿತವಾಗಿ ದೊರೆತರೆ ಇನ್ನು ಕೆಲ ಉದಾಹರಣೆಗಳಲ್ಲಿ ಇದಕ್ಕಾಗಿ ಹಣನೀಡಬೇಕಾಗಬಹುದು. ಕಂಪ್ಯೂಟರಿನಲ್ಲಿ ಕ್ಲಿಕ್ ಮಾಡುವುದು - ಮೊಬೈಲ್ ಪರದೆಯನ್ನು ಮುಟ್ಟಿದ್ದೆಲ್ಲ ತಂತ್ರಾಂಶಗಳಿಗೆ ಗೊತ್ತಾಗುತ್ತದಲ್ಲ, ಅಂತಹ ಉದಾಹರಣೆಗಳಲ್ಲೆಲ್ಲ ಬಳಕೆಯಾಗುವುದು ಇಂತಹ ಎಪಿಐಗಳೇ. ನಮ್ಮ ಜಾಲತಾಣದಲ್ಲಿ ನೇರವಾಗಿ ಕನ್ನಡದಲ್ಲೇ ಟೈಪಿಸುವುದು ಸಾಧ್ಯವಾಗಬೇಕು ಎನ್ನುವವರು ಅಲ್ಲಿ ಗೂಗಲ್ ಟ್ರಾನ್ಸ್‌ಲಿಟರೇಟ್ ಸೌಲಭ್ಯ ನೀಡುತ್ತಾರಲ್ಲ, ಅದು ಕೆಲಸಮಾಡುವುದೂ ಎಪಿಐ ಮೂಲಕವೇ.


logo