logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

E-Ink
ಇ-ಇಂಕ್
(ರೂಪಿಸಬೇಕಿದೆ)
ಇಲೆಕ್ಟ್ರಾನಿಕ್ ಇಂಕ್; ವಿದ್ಯುನ್ಮಾನ ಸಾಧನಗಳಲ್ಲಿ ಬೆಳಕನ್ನು ಹೊರಸೂಸದ ಪರದೆಗಳನ್ನು ರೂಪಿಸಲು ನೆರವಾಗುವ ತಂತ್ರಜ್ಞಾನ. ಇದು ಇ-ಬುಕ್ ರೀಡರುಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ.
ಕಂಪ್ಯೂಟರ್, ಮೊಬೈಲ್ ಫೋನ್, ಟ್ಯಾಬ್ಲೆಟ್ ಮುಂತಾದ ಸಾಧನಗಳ ಪರದೆ ಬೆಳಕನ್ನು ಹೊರಸೂಸುವುದರಿಂದ ಅವುಗಳನ್ನು ದೀರ್ಘಕಾಲ ಬಳಸಿದರೆ ಕಣ್ಣಿಗೆ ಕಿರಿಕಿರಿಯಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ರೂಪುಗೊಂಡಿರುವುದೇ 'ಇ-ಇಂಕ್' ತಂತ್ರಜ್ಞಾನ. ಈ ತಂತ್ರಜ್ಞಾನ ಬಳಸುವ ಪರದೆಗಳು ಬೆಳಕನ್ನು ಹೊರಸೂಸುವುದಿಲ್ಲವಾದ್ದರಿಂದ ಅವನ್ನು ನೋಡುವುದು ಕಣ್ಣಿಗೆ ಶ್ರಮವೆನಿಸುವುದಿಲ್ಲ. ಇವು ಕಡಿಮೆ ವಿದ್ಯುತ್ ಬಳಸುವುದರಿಂದ ಬ್ಯಾಟರಿಯೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ; ಪದೇಪದೇ ಚಾರ್ಜ್ ಮಾಡುವ ತಾಪತ್ರಯವೂ ಇರುವುದಿಲ್ಲ. ಅಷ್ಟೇ ಅಲ್ಲ, ಪರದೆಯ ಮೇಲೆ ಮೂಡಿರುವ ಪಠ್ಯವನ್ನು ಬಿಸಿಲಿನಲ್ಲೂ ಶ್ರಮವಿಲ್ಲದೆ ಓದುವುದು ಸಾಧ್ಯ. ಹೀಗಾಗಿ ಇ-ಬುಕ್ ರೀಡರುಗಳಲ್ಲಿ ಈ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತದೆ. ಅಮೆಜಾನ್ ಕಿಂಡಲ್, ಕೋಬೋ ಮುಂತಾದ ನಿರ್ಮಾತೃಗಳು ಹಲವು ಮಾದರಿಯ ಇ-ಬುಕ್ ರೀಡರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಪಠ್ಯ-ಚಿತ್ರಗಳನ್ನು ಬಹುವರ್ಣದಲ್ಲಿ ಪ್ರದರ್ಶಿಸುವ ಇ-ಇಂಕ್ ತಂತ್ರಜ್ಞಾನವೂ ಇದೆ; ಆದರೆ ಸದ್ಯ ಮಾರುಕಟ್ಟೆಯಲ್ಲಿರುವ ಬಹುತೇಕ ಇ-ಬುಕ್ ರೀಡರುಗಳು ಕಪ್ಪು ಬಿಳುಪಿನ ಪರದೆಯನ್ನೇ ಬಳಸುತ್ತಿವೆ. ಹಲವು ಸ್ಮಾರ್ಟ್‌ವಾಚ್‌ಗಳಲ್ಲೂ ಇ-ಇಂಕ್ ಪರದೆಯನ್ನು ಬಳಸಲಾಗಿದೆ.

Inbox
ಇನ್‍ಬಾಕ್ಸ್
(ರೂಪಿಸಬೇಕಿದೆ)
ಇಮೇಲ್ ಖಾತೆಯಲ್ಲಿ ನಮಗೆ ಬಂದ ಸಂದೇಶಗಳು ಇರುವ ಫೋಲ್ಡರಿಗೆ ಇನ್‌ಬಾಕ್ಸ್ ಎಂದು ಹೆಸರು.
ಕಾಗದದ ಕಡತಗಳನ್ನು ನಿಭಾಯಿಸುವ ಕಚೇರಿಗಳಲ್ಲಿ ಒಳಬರುವ ಕಡತಗಳನ್ನು, ಹೊರಹೋಗುವ ಕಡತಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳುವ ಅಭ್ಯಾಸವಿದೆ. ಹೊಸದಾಗಿ ಪರಿಶೀಲನೆಗೆ ಬಂದ ಕಡತಗಳನ್ನು 'ಇನ್ ಟ್ರೇ'ಯಲ್ಲೂ ಪರಿಶೀಲನೆಯ ನಂತರ ಮುಂದಿನ ಕ್ರಮಕ್ಕೆ ಕಳುಹಿಸಬೇಕಾದವನ್ನು 'ಔಟ್ ಟ್ರೇ'ಯಲ್ಲೂ ಇಡುವುದು ಇದನ್ನು ಸಾಧಿಸುವ ಕ್ರಮಗಳಲ್ಲೊಂದು. ಕಾಗದದ ಕಡತಗಳಿಗಿಂತ ಸಂಪೂರ್ಣ ಭಿನ್ನವಾದ ಇಮೇಲ್ ವ್ಯವಸ್ಥೆಯಲ್ಲೂ ಇಂತಹುದೇ ಒಂದು ಪರಿಕಲ್ಪನೆಯಿದೆ. ನಮಗೆ ಬಂದ ಇಮೇಲ್ ಸಂದೇಶಗಳನ್ನು, ನಾವು ಕಳುಹಿಸುತ್ತಿರುವ ಸಂದೇಶಗಳನ್ನು ಪ್ರತ್ಯೇಕವಾಗಿಡುವುದು ಈ ಪರಿಕಲ್ಪನೆಯ ಉದ್ದೇಶ. ಇದಕ್ಕಾಗಿ ನಮ್ಮ ಇಮೇಲ್ ಖಾತೆಯಲ್ಲಿ ಪ್ರತ್ಯೇಕ ಫೋಲ್ಡರುಗಳನ್ನು ಬಳಸಲಾಗುತ್ತದೆ, ಕಚೇರಿಯಲ್ಲಿ ಬೇರೆಬೇರೆ ಕಾಗದಗಳನ್ನು ಬೇರೆಬೇರೆ ಫೈಲುಗಳಲ್ಲಿ ಇಡುವಂತೆಯೇ! ಈ ಪೈಕಿ ನಮಗೆ ಬಂದ ಸಂದೇಶಗಳು 'ಇನ್‌ಬಾಕ್ಸ್'ನಲ್ಲಿರುತ್ತವೆ. ಇಮೇಲ್ ಖಾತೆಗೆ ಲಾಗಿನ್ ಆದಾಗ ಮೊದಲಿಗೆ ಇದೇ ಫೋಲ್ಡರ್ ಕಾಣಿಸಿಕೊಳ್ಳುವುದು ಸಾಮಾನ್ಯ. ನಾವು ಇಮೇಲ್‌ಗಳನ್ನು ಕಳಿಸುತ್ತೇವಲ್ಲ, ಅವು ವಿಳಾಸದಾರರಿಗೆ ರವಾನೆಯಾಗುವವರೆಗೂ ಉಳಿದುಕೊಳ್ಳುವ ಫೋಲ್ಡರಿಗೆ 'ಔಟ್‌ಬಾಕ್ಸ್' ಎಂದು ಹೆಸರು. ಬಹಳಷ್ಟು ಸಂದರ್ಭಗಳಲ್ಲಿ ಇಮೇಲ್‌ಗಳು ಥಟ್ಟನೆ ರವಾನೆಯಾಗುವುದರಿಂದ ಇದು ನಮ್ಮ ಗಮನಕ್ಕೆ ಬರುವುದೇ ಅಪರೂಪ - ಅಂತರಜಾಲ ಸಂಪರ್ಕ ಇಲ್ಲದಾಗ, ವೇಗ ಕಡಿಮೆಯಿದ್ದಾಗ ಅಥವಾ ದೊಡ್ಡ ಅಟ್ಯಾಚ್‌ಮೆಂಟ್ ಜೊತೆಗೆ ಇಮೇಲ್ ಕಳಿಸಿದರಷ್ಟೇ ಅದು ಈ ಫೋಲ್ಡರಿನ ಮೂಲಕ ಹಾದುಹೋಗುವುದನ್ನು ನೋಡಬಹುದು. ರವಾನೆಯಾದ ಸಂದೇಶಗಳ ಒಂದು ಪ್ರತಿ 'ಸೆಂಟ್ ಮೆಸೇಜಸ್' ಎಂಬ ಫೋಲ್ಡರಿನಲ್ಲಿ ಉಳಿದುಕೊಂಡಿರುತ್ತದೆ.

E-Book
ಇ-ಬುಕ್
ವಿದ್ಯುನ್ಮಾನ ಪುಸ್ತಕ
ಇಲೆಕ್ಟ್ರಾನಿಕ್ ಬುಕ್; ಕಂಪ್ಯೂಟರ್, ಮೊಬೈಲ್ ಫೋನ್, ಟ್ಯಾಬ್ಲೆಟ್, ಇ-ಬುಕ್ ರೀಡರ್ ಮುಂತಾದ ಸಾಧನಗಳಲ್ಲಿ ಓದಬಹುದಾದ ವಿದ್ಯುನ್ಮಾನ ರೂಪದ ಪುಸ್ತಕ
ಪ್ರಕಟವಾದ ಒಳ್ಳೆಯ ಪುಸ್ತಕಗಳೆಲ್ಲ ನಮಗೆ ಸಿಗುವುದಿಲ್ಲ, ಸಿಕ್ಕರೂ ಎಲ್ಲವನ್ನೂ ಕೊಂಡಿಟ್ಟುಕೊಳ್ಳಲು ಮನೆಯಲ್ಲಿ ಜಾಗ ಇರುವುದಿಲ್ಲ. ಈ ಸಮಸ್ಯೆ ತಪ್ಪಿಸಲು ಹುಟ್ಟಿಕೊಂಡದ್ದೇ ವಿದ್ಯುನ್ಮಾನ ಪುಸ್ತಕ, ಅಂದರೆ ಇ-ಬುಕ್‌ಗಳ ಪರಿಕಲ್ಪನೆ. ಪುಸ್ತಕದ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಅದರ ಭೌತಿಕ ರೂಪವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಇ-ಪುಸ್ತಕಗಳ ವೈಶಿಷ್ಟ್ಯ. ಇವನ್ನು ಓದಲೆಂದೇ ಕಿಂಡಲ್‌ನಂತಹ ಪ್ರತ್ಯೇಕ ಸಾಧನಗಳು (ಇ-ಬುಕ್ ರೀಡರ್) ರೂಪುಗೊಂಡಿವೆ. ಅಂತಹುದೊಂದು ಸಾಧನವಿದ್ದರೆ ಸಾಕು, ಆ ಪುಸ್ತಕಗಳಂತೆ ಇ-ಪುಸ್ತಕದಲ್ಲೂ ಪುಟ ತಿರುಗಿಸಬಹುದು, ಬುಕ್‌ಮಾರ್ಕ್ ಇಡಬಹುದು! ಪ್ರತ್ಯೇಕವಾಗಿ ಇ-ಬುಕ್ ರೀಡರನ್ನೇಕೆ ಕೊಳ್ಳಬೇಕು ಎನ್ನುವವರೂ ಚಿಂತಿಸಬೇಕಿಲ್ಲ. ಅಪಾರ ಸಂಖ್ಯೆಯ ವಿದ್ಯುನ್ಮಾನ ಪುಸ್ತಕಗಳನ್ನು ನಮ್ಮ ಕಂಪ್ಯೂಟರ್, ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೇ ದೊರಕಿಸುವ ಅಮೆಜಾನ್ ಕಿಂಡಲ್ ಹಾಗೂ ಗೂಗಲ್ ಪ್ಲೇ ಬುಕ್ಸ್‌ನಂತಹ ಹಲವು ತಂತ್ರಾಂಶಗಳು - ಮೊಬೈಲ್ ಆಪ್‌ಗಳು ಇವೆ. ಇ-ಪುಸ್ತಕಗಳ ಡಿಜಿಟಲ್ ಗ್ರಂಥಾಲಯಗಳೂ ರೂಪುಗೊಂಡಿವೆ. ಹೀಗೆ ಹಲವೆಡೆಗಳಲ್ಲಿ ದೊರಕುವ ಇ-ಪುಸ್ತಕಗಳ ಪೈಕಿ ಕೆಲವು ಉಚಿತವಾದರೆ ಇನ್ನು ಕೆಲವನ್ನು ದುಡ್ಡುಕೊಟ್ಟು ಕೊಳ್ಳಬೇಕು.

E-Waste
ಇ-ವೇಸ್ಟ್
ವಿದ್ಯುನ್ಮಾನ ಕಸ
ಇಲೆಕ್ಟ್ರಾನಿಕ್ ವೇಸ್ಟ್; ಕಸದ ರಾಶಿ ಸೇರುವ ನಿರುಪಯುಕ್ತ ವಿದ್ಯುನ್ಮಾನ ಸಾಧನಗಳನ್ನು ಪ್ರತಿನಿಧಿಸುವ ಹೆಸರು
ವಿದ್ಯುನ್ಮಾನ ಸಾಧನಗಳ ಜಗತ್ತಿನಲ್ಲಿ ಬಹಳ ವೇಗವಾಗಿ ಬದಲಾವಣೆಗಳಾಗುತ್ತಿರುತ್ತವೆ. ಈ ವೇಗಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಬಳಕೆದಾರರಾದ ನಾವುಗಳೂ ಆಗಿಂದಾಗ್ಗೆ ಹೊಸಹೊಸ ಸಾಧನಗಳನ್ನು ಕೊಳ್ಳುತ್ತಿರುತ್ತೇವೆ, ಹಳೆಯವನ್ನು ಮನೆಯಿಂದಾಚೆಗೆ ಕಳುಹಿಸುತ್ತೇವೆ. ಇದನ್ನೇ ವಿದ್ಯುನ್ಮಾನ ಕಸ, ಅಥವಾ 'ಇ-ಕಸ' (ಇಲೆಕ್ಟ್ರಾನಿಕ್ ವೇಸ್ಟ್) ಎಂದು ಗುರುತಿಸಲಾಗುತ್ತದೆ. ಇಂತಹ ಪ್ರತಿ ಸಾಧನದಲ್ಲೂ ದೊಡ್ಡ ಸಂಖ್ಯೆಯ ಬಿಡಿಭಾಗಗಳಿರುತ್ತವೆ, ಮತ್ತು ಅಂತಹ ಪ್ರತಿಯೊಂದು ಬಿಡಿಭಾಗವನ್ನೂ ಪ್ಲಾಸ್ಟಿಕ್ಕಿನಿಂದ ಚಿನ್ನದವರೆಗೆ ಅನೇಕ ವಸ್ತುಗಳನ್ನು ಬಳಸಿ ರೂಪಿಸಲಾಗಿರುತ್ತದೆ. ಈ ವಸ್ತುಗಳ ಪೈಕಿ ಅನೇಕ ವಿಷಕಾರಿ ಅಂಶಗಳೂ ಇರುತ್ತವೆ. ನಾವು ಹೊರಹಾಕುವ ವಿದ್ಯುನ್ಮಾನ ಸಾಧನಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅದರಲ್ಲಿರುವ ವಿಷಕಾರಿ ಅಂಶಗಳು ಪರಿಸರಕ್ಕೆ ಹಾನಿ ಉಂಟುಮಾಡಬಲ್ಲವು. ಹೀಗಾಗಿಯೇ ಪರಿಸರ ಸೇವಾ ಸಂಸ್ಥೆಗಳು, ಸರಕಾರಗಳು ಹಾಗೂ ಕೆಲವೊಮ್ಮೆ ವಿದ್ಯುನ್ಮಾನ ಉತ್ಪನ್ನ ತಯಾರಿಸುವ ಸಂಸ್ಥೆಗಳೂ ಇ-ಕಸದ ಸಮರ್ಪಕ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನದಲ್ಲಿರುತ್ತವೆ. ಉಪಯುಕ್ತ ವಸ್ತುಗಳನ್ನು (ಉದಾ: ಚಿನ್ನ, ತಾಮ್ರ) ಇ-ಕಸದಿಂದ ಬೇರ್ಪಡಿಸಿ ಮರುಬಳಕೆ ಮಾಡುವುದು, ಹಾಗೂ ನಿರುಪಯುಕ್ತ ಭಾಗಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಪರಿಸರದ ದೃಷ್ಟಿಯಿಂದ ಮಾತ್ರವಲ್ಲ, ಆರ್ಥಿಕವಾಗಿಯೂ ಸಾಕಷ್ಟು ಲಾಭದಾಯಕ. ಅಷ್ಟೇ ಅಲ್ಲ, ನವೀಕರಿಸಲಾಗದ ಸಂಪನ್ಮೂಲಗಳ (ಉದಾ: ಗ್ಯಾಲಿಯಂ, ಇಂಡಿಯಂ ಮುಂತಾದ ವಿರಳ ಧಾತುಗಳು, ಅಂದರೆ ರೇರ್ ಅರ್ಥ್ ಎಲಿಮೆಂಟ್ಸ್) ದೃಷ್ಟಿಯಿಂದ ನೋಡಿದರೆ ಮರುಬಳಕೆ ಅನಿವಾರ್ಯವೂ ಹೌದು.

Ethernet
ಈಥರ್‍‍ನೆಟ್
(ರೂಪಿಸಬೇಕಿದೆ)
ಕೇಬಲ್‌ಗಳ ಮೂಲಕ ಕಂಪ್ಯೂಟರುಗಳನ್ನು, ಸಂಬಂಧಪಟ್ಟ ಸಾಧನಗಳನ್ನು ಸಂಪರ್ಕಿಸುವ ಮಾನಕ
ಒಂದಕ್ಕಿಂತ ಹೆಚ್ಚು ಕಂಪ್ಯೂಟರುಗಳ ನಡುವೆ ಪರಸ್ಪರ ಸಂಪರ್ಕ ಏರ್ಪಟ್ಟಾಗ ಅದನ್ನು ನೆಟ್‌ವರ್ಕ್, ಅಂದರೆ ಜಾಲ ಎಂದು ಕರೆಯುತ್ತಾರೆ. ಒಂದೇ ಕಟ್ಟಡದೊಳಗೆ ಕಾರ್ಯನಿರ್ವಹಿಸುವ ಸ್ಥಳೀಯ ಜಾಲ ಇರಲಿ, ವಿಶ್ವಮಟ್ಟದ ವ್ಯಾಪ್ತಿಯಿರುವ ಅಂತರಜಾಲವೇ ಇರಲಿ - ಹೀಗೆ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ನಡುವೆ ಮಾಹಿತಿ ವಿನಿಮಯ ಸಾಧ್ಯವಾಗುತ್ತದೆ. ಕಂಪ್ಯೂಟರುಗಳ ನಡುವೆ ಸಂಪರ್ಕ ಕಲ್ಪಿಸಲು ಅನೇಕ ಮಾರ್ಗಗಳಿವೆ. ಕೇಬಲ್‌ಗಳ ಬಳಕೆ ಇಂತಹ ಮಾರ್ಗಗಳಲ್ಲೊಂದು. ಈಥರ್‌ನೆಟ್ ಎನ್ನುವುದು ಹೀಗೆ ಕೇಬಲ್‌ಗಳ ಮೂಲಕ ಕಂಪ್ಯೂಟರುಗಳನ್ನು, ಸಂಬಂಧಪಟ್ಟ ಸಾಧನಗಳನ್ನು ಸಂಪರ್ಕಿಸುವ ಮಾನಕ (ಸ್ಟಾಂಡರ್ಡ್). ಕೇಬಲ್ ಸಂಪರ್ಕದ ಮೂಲಕ ರೂಪಿಸಲಾಗುವ ಸ್ಥಳೀಯ ಜಾಲಗಳಲ್ಲಿ ದತ್ತಾಂಶದ ಪ್ರಸರಣ ಯಾವ ರೀತಿಯಲ್ಲಿ ಆಗುತ್ತದೆ ಎನ್ನುವುದನ್ನು ಈ ಮಾನಕ ನಿರ್ದೇಶಿಸುತ್ತದೆ. ಈ ರೀತಿಯಾಗಿ ಕಂಪ್ಯೂಟರುಗಳನ್ನು, ರೂಟರುಗಳನ್ನೆಲ್ಲ ಸಂಪರ್ಕಿಸಲು ಬಳಕೆಯಾಗುವ ಕೇಬಲ್ ಅನ್ನು ಈಥರ್‌ನೆಟ್ ಕೇಬಲ್ ಎಂದು ಕರೆಯುತ್ತಾರೆ. ನೋಡಲು ದೂರವಾಣಿ ಕೇಬಲ್ಲಿನಂತೆಯೇ ಕಾಣುವ ಇದು ಗಾತ್ರದಲ್ಲಿ ಮಾತ್ರ ದೊಡ್ಡದಾಗಿರುತ್ತದೆ ಎನ್ನುವುದು ವಿಶೇಷ. ಕೇಬಲ್ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ ಬಳಸುವ ಕಂಪ್ಯೂಟರುಗಳಲ್ಲಿ ಬಳಕೆಯಾಗುವುದು ಇದೇ ಕೇಬಲ್. ಈ ಕೇಬಲ್‌ನ ಕೊನೆಗಳು ಕಂಪ್ಯೂಟರಿಗೆ - ರೂಟರಿಗೆ ಸಂಪರ್ಕಗೊಳ್ಳುತ್ತವಲ್ಲ, ಅವನ್ನು ಆರ್‌ಜೆ೪೫ ಕನೆಕ್ಟರುಗಳೆಂದು ಕರೆಯುತ್ತಾರೆ. ಬಹುತೇಕ ಕಂಪ್ಯೂಟರುಗಳಲ್ಲಿ ಇವನ್ನು ಸಂಪರ್ಕಿಸಲು ಬೇಕಾದ ವ್ಯವಸ್ಥೆ ಪೂರ್ವನಿಯೋಜಿತವಾಗಿಯೇ ಇರುತ್ತದೆ. ವೈಫೈ ತಂತ್ರಜ್ಞಾನದ ಜನಪ್ರಿಯತೆ ಹೆಚ್ಚಿದಂತೆ ಹಲವು ಕ್ಷೇತ್ರಗಳಲ್ಲಿ ಈಥರ್‌ನೆಟ್ ಬಳಕೆ ನಿಧಾನವಾಗಿ ಕಡಿಮೆಯಾಗುತ್ತಿದೆ.

MAh
ಎಂಎಎಚ್
(ರೂಪಿಸಬೇಕಿದೆ)
ಮಿಲಿ ಆಂಪಿಯರ್ ಅವರ್; ಬ್ಯಾಟರಿ ಸಾಮರ್ಥ್ಯವನ್ನು ಅಳೆಯುವ ಏಕಮಾನ
ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಮುಂತಾದ ಸಾಧನಗಳಲ್ಲಿರುವ ಬ್ಯಾಟರಿ ಸಾಮರ್ಥ್ಯವನ್ನು ಎಂಎಎಚ್‌ಗಳಲ್ಲಿ ಅಳೆಯಲಾಗುತ್ತದೆ. ಇಲ್ಲಿ ಎಂಎಎಚ್ ಅಂದರೆ ಮಿಲಿ ಆಂಪಿಯರ್ ಅವರ್ (ಆಂಪಿಯರ್ ಎನ್ನುವುದು ವಿದ್ಯುತ್ ಪ್ರವಾಹದ ಏಕಮಾನ). ಯಾವುದೇ ಬ್ಯಾಟರಿ - ಪೂರ್ತಿ ಚಾರ್ಜ್ ಆಗಿದ್ದಾಗ - ಎಷ್ಟು ಪ್ರಮಾಣದ ವಿದ್ಯುತ್ತನ್ನು ಎಷ್ಟು ಹೊತ್ತಿನವರೆಗೆ ಪೂರೈಸಬಲ್ಲದು ಎನ್ನುವುದನ್ನು ಇದು ಸೂಚಿಸುತ್ತದೆ. ವಾಹನಗಳಲ್ಲಿ ಇಂಧನ ಟ್ಯಾಂಕಿನ ಸಾಮರ್ಥ್ಯ ಇರುತ್ತದಲ್ಲ, ಇದೂ ಹಾಗೆಯೇ. ಎರಡು ಲೀಟರ್ ಸಾಮರ್ಥ್ಯದ ಟ್ಯಾಂಕು ಬೈಕಿನಲ್ಲಿದ್ದರೆ ಅಷ್ಟು ಪೆಟ್ರೋಲ್ ತುಂಬಿಸಿ ನಾವು ನೂರು ಕಿಲೋಮೀಟರ್ ಕ್ರಮಿಸಬಹುದು; ಕಾರಿನಲ್ಲಾದರೆ ಇಪ್ಪತ್ತೋ ಮೂವತ್ತೋ ಕಿಲೋಮೀಟರ್ ಹೋಗುವಷ್ಟರಲ್ಲಿ ಇನ್ನೊಂದು ಪೆಟ್ರೋಲ್ ಬಂಕ್ ಹುಡುಕಬೇಕಾಗುತ್ತದೆ. ಬ್ಯಾಟರಿ ಸಾಮರ್ಥ್ಯವೂ ಅಷ್ಟೆ. ಉದಾಹರಣೆಗೆ ೩೦೦೦ ಎಂಎಎಚ್ ಸಾಮರ್ಥ್ಯದ ಒಂದು ಬ್ಯಾಟರಿಯನ್ನು ತೆಗೆದುಕೊಂಡರೆ ಅದರ ವರ್ತನೆ ಬೇರೆಬೇರೆ ಗ್ಯಾಜೆಟ್‌ಗಳಲ್ಲಿ ಬೇರೆಬೇರೆ ರೀತಿಯಲ್ಲಿರುತ್ತದೆ. ಗಂಟೆಗೆ ೧೦೦ ಮಿಲಿಆಂಪಿಯರ್ ವಿದ್ಯುತ್ ಬೇಡುವ ಗ್ಯಾಜೆಟ್‌ಗೆ ಈ ಬ್ಯಾಟರಿ ೩೦ ಗಂಟೆಗಳ ಕಾಲ ಜೀವತುಂಬಬಲ್ಲದು; ಅದೇರೀತಿ ಗಂಟೆಗೆ ೨೦೦ ಮಿಲಿಆಂಪಿಯರ್ ಬೇಕಾದಾಗ ೧೫ ಗಂಟೆಗಳಲ್ಲೇ ಬ್ಯಾಟರಿ ಖಾಲಿಯಾಗಿಬಿಡುತ್ತದೆ. ಅಂದರೆ, ಒಮ್ಮೆ ಚಾರ್ಜ್ ಮಾಡಿದ ಬ್ಯಾಟರಿ ಎಷ್ಟು ಹೊತ್ತು ಬಾಳುತ್ತದೆ ಎನ್ನುವುದು ಬ್ಯಾಟರಿ ಸಾಮರ್ಥ್ಯದ ಜೊತೆಗೆ ನಮ್ಮ ಮೊಬೈಲ್ ಫೋನು ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರು ಎಷ್ಟು ಪ್ರಮಾಣದ ವಿದ್ಯುತ್ ಬಳಸುತ್ತದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.

MNP
ಎಂಎನ್‌ಪಿ
(ರೂಪಿಸಬೇಕಿದೆ)
ಮೊಬೈಲ್ ನಂಬರ್ ಪೋರ್ಟಬಿಲಿಟಿ; ಮೊಬೈಲ್ ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಂಡು ಸೇವಾ ಸಂಸ್ಥೆಯನ್ನು ಬದಲಿಸಲು ಅನುವುಮಾಡಿಕೊಡುವ ವ್ಯವಸ್ಥೆ
ನಾವು ಯಾವುದೋ ಸಂಸ್ಥೆಯ ಮೊಬೈಲ್ ಸಂಪರ್ಕ ಬಳಸುತ್ತಿರುತ್ತೇವಲ್ಲ, ಅದಕ್ಕಿಂತ ಉತ್ತಮ ಗುಣಮಟ್ಟದ ಸೇವೆ ಹಾಗೂ ಕಡಿಮೆ ದರ ಇನ್ನೊಂದು ಸಂಸ್ಥೆಯಲ್ಲಿ ದೊರಕುತ್ತಿವೆ ಎಂದರೆ ನಮ್ಮ ಈಗಿನ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಂಡೇ ಆ ಹೊಸ ಸಂಸ್ಥೆಯತ್ತ ಮುಖಮಾಡುವುದು ಸಾಧ್ಯವಿದೆ. ಇದನ್ನು ಸಾಧ್ಯವಾಗಿಸಿರುವುದು 'ಮೊಬೈಲ್ ನಂಬರ್ ಪೋರ್ಟಬಿಲಿಟಿ' (ಎಂಎನ್‌ಪಿ) ಎನ್ನುವ ಪರಿಕಲ್ಪನೆ. ಸೇವೆ ಬದಲಾದರೂ ಮೊಬೈಲ್ ಸಂಖ್ಯೆ ಬದಲಾಗದಂತೆ ನೋಡಿಕೊಳ್ಳುವುದು, ಆ ಮೂಲಕ ಎಲ್ಲರಿಗೂ ನಮ್ಮ ಸಂಖ್ಯೆಯನ್ನು ಮತ್ತೊಮ್ಮೆ ತಿಳಿಸಬೇಕಾದ ಅನಿವಾರ್ಯತೆಯನ್ನು ತಪ್ಪಿಸುವುದು ಎಂಎನ್‌ಪಿಯ ವೈಶಿಷ್ಟ್ಯ. ಬಳಕೆದಾರರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವ ಮೂಲಕ ಈ ವ್ಯವಸ್ಥೆ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆ ಯಾವಾಗಲೂ ಇರುವಂತೆ ನೋಡಿಕೊಳ್ಳುತ್ತದೆ. ನಮ್ಮ ಸದ್ಯದ ಮೊಬೈಲ್ ಸಂಪರ್ಕವನ್ನು ಭಾರತದ ಯಾವುದೇ ಮೊಬೈಲ್ ಸೇವೆಗೆ ವರ್ಗಾಯಿಸಲು 'ಯುನೀಕ್ ಪೋರ್ಟಿಂಗ್ ಕೋಡ್' ಎಂಬ ಸಂಖ್ಯೆ ಇದ್ದರೆ ಸಾಕು. ಈ ಸಂಖ್ಯೆಯನ್ನು ನಮ್ಮ ಮೊಬೈಲಿನಿಂದ ೧೯೦೦ಗೆ 'PORT <ಮೊಬೈಲ್ ಸಂಖ್ಯೆ>' ಎಂದು ಎಸ್ಸೆಮ್ಮೆಸ್ ಕಳಿಸುವ ಮೂಲಕ ಪಡೆದುಕೊಳ್ಳಬಹುದು. ನಾವು ಯಾವ ಸೇವೆಗೆ ಬದಲಿಸಬೇಕೆಂದಿದ್ದೇವೋ ಆ ಸಂಸ್ಥೆಯವರು ಈ ಸಂಖ್ಯೆಯನ್ನು ಪಡೆದು ನಮ್ಮ ಮೊಬೈಲನ್ನು ತಮ್ಮ ಜಾಲಕ್ಕೆ ಸೇರಿಸಿಕೊಳ್ಳುತ್ತಾರೆ. ಬೇರೆ ಸಂಸ್ಥೆಯ ಗ್ರಾಹಕರನ್ನು ತಮ್ಮತ್ತ ಸೆಳೆಯಲು, ತಮ್ಮ ಗ್ರಾಹಕರು ಬೇರೆ ಸಂಸ್ಥೆಯತ್ತ ಹೋಗದಂತೆ ತಡೆಯಲು ಮೊಬೈಲ್ ಸಂಸ್ಥೆಗಳು ಆಗಿಂದಾಗ್ಗೆ ವಿಶೇಷ ಕೊಡುಗೆಗಳನ್ನು ಘೋಷಿಸುತ್ತಲೇ ಇರುತ್ತವೆ. ಪೋರ್ಟ್ ಎಂದು ಸಂದೇಶ ಕಳಿಸಿದ ನಂತರವೂ ನಿರ್ಧಾರ ಬದಲಿಸುವಂತೆ ಗ್ರಾಹಕರ ಮನವೊಲಿಸುವ ಪ್ರಯತ್ನಗಳು ನಡೆಯುವುದು ಇಲ್ಲಿ ಸಾಮಾನ್ಯ.

End User
ಎಂಡ್ ಯೂಸರ್
(ರೂಪಿಸಬೇಕಿದೆ)
ಯಾವುದೇ ತಂತ್ರಾಂಶ ಅಥವಾ ತಂತ್ರಾಂಶ ಸೇವೆಯ ಬಳಕೆದಾರರನ್ನು ಸೂಚಿಸುವ ಹೆಸರು
ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಾಗ, ಜಾಲತಾಣಗಳಲ್ಲಿ ನೋಂದಾಯಿಸಿಕೊಳ್ಳುವಾಗ ಬಳಕೆಯ ನಿಯಮ-ನಿಬಂಧನೆಗಳನ್ನು ಕುರಿತ ವಿಸ್ತೃತ ಮಾಹಿತಿ ನಮಗೆ ಕಾಣಸಿಗುವುದು ಸಾಮಾನ್ಯ. ಇನ್‌ಸ್ಟಾಲ್ ಮಾಡುವ ಅಥವಾ ನೋಂದಣಿಯ ಪ್ರಕ್ರಿಯೆ ಪೂರ್ಣಗೊಳ್ಳುವುದು ಇದನ್ನೆಲ್ಲ ಓದಿ ಒಪ್ಪಿದ್ದೇನೆ ಎಂದು ದೃಢೀಕರಿಸಿದ ನಂತರವೇ. ನಿರ್ದಿಷ್ಟ ತಂತ್ರಾಂಶ ಅಥವಾ ಜಾಲತಾಣದ ಬಳಕೆಯನ್ನು ಕುರಿತ ಈ ನಿಯಮ-ನಿಬಂಧನೆಗಳನ್ನು 'ಎಂಡ್ ಯೂಸರ್ ಲೈಸೆನ್ಸ್ ಅಗ್ರೀಮೆಂಟ್' (ಇಯುಎಲ್‌ಎ) ಎಂದು ಕರೆಯುತ್ತಾರೆ. ಇದನ್ನು ತಂತ್ರಾಂಶದ ನಿರ್ಮಾತೃ ಹಾಗೂ ಅದರ ಬಳಕೆದಾರರ ನಡುವಿನ ಒಪ್ಪಂದ ಎಂದೂ ಕರೆಯಬಹುದು. ಇಲ್ಲಿ ಬಳಕೆಯಾಗಿರುವ 'ಎಂಡ್ ಯೂಸರ್' ಎಂಬ ಹೆಸರು ಯಾವುದೇ ತಂತ್ರಾಂಶ ಅಥವಾ ತಂತ್ರಾಂಶ ಸೇವೆಯ ಬಳಕೆದಾರರನ್ನು ಸೂಚಿಸುತ್ತದೆ. ತಂತ್ರಾಂಶಗಳು - ಜಾಲತಾಣಗಳು ಸೃಷ್ಟಿಯಾಗುವುದೇ ಇವರನ್ನು ಗಮನದಲ್ಲಿಟ್ಟುಕೊಂಡು. ತಂತ್ರಾಂಶ ರಚನೆ ಹಾಗೂ ನಿರ್ವಹಣೆ ಪ್ರಕ್ರಿಯೆಯಲ್ಲಿ ವಿನ್ಯಾಸಕರು - ತಂತ್ರಜ್ಞರು ಒಂದು ಕೊನೆಯಲ್ಲಿದ್ದರೆ 'ಎಂಡ್ ಯೂಸರ್'ಗಳು ಇನ್ನೊಂದು ಕೊನೆಯಲ್ಲಿರುತ್ತಾರೆ. ತಮ್ಮ ಕೆಲಸಗಳಲ್ಲಿ ತಂತ್ರಾಂಶವನ್ನು ಬಳಸುವ ಜೊತೆಗೆ ಅದರ ಕುರಿತು ಹಿಮ್ಮಾಹಿತಿ ನೀಡುವುದು, ಬೇಕಾದ ಹೊಸ ಸೌಲಭ್ಯಗಳ ಕುರಿತು ತಂತ್ರಜ್ಞರ ಗಮನಸೆಳೆಯುವುದೂ ಇಂತಹ ಬಳಕೆದಾರರದೇ ಜವಾಬ್ದಾರಿ. ಹೊಸ ತಂತ್ರಾಂಶಗಳನ್ನು ಪರಿಚಯಿಸುವಾಗ, ಇರುವ ತಂತ್ರಾಂಶಕ್ಕೆ ಹೊಸ ಸೌಲಭ್ಯಗಳನ್ನು ಸೇರಿಸುವಾಗ ಪರೀಕ್ಷೆಯ (ಟೆಸ್ಟಿಂಗ್) ಹಂತದಲ್ಲಿ ಈ ಗುಂಪಿನ ಸಹಾಯವನ್ನೂ ಪಡೆದುಕೊಳ್ಳುವುದು ವಾಡಿಕೆ.

MP3
ಎಂಪಿ೩
(ರೂಪಿಸಬೇಕಿದೆ)
ಎಂಪಿಇಜಿ ಆಡಿಯೋ ಲೇಯರ್ ೩; ಧ್ವನಿರೂಪದ ಕಡತಗಳನ್ನು ಶೇಖರಿಸಿಡಲು ಬಳಕೆಯಾಗುವ ಡಿಜಿಟಲ್ ತಂತ್ರಜ್ಞಾನ
ಮೂವಿಂಗ್ ಪಿಕ್ಚರ್ಸ್ ಎಕ್ಸ್‌ಪರ್ಟ್ ಗ್ರೂಪ್ (ಎಂಪಿಇಜಿ) ಎಂಬ ಸಂಸ್ಥೆ ಧ್ವನಿರೂಪದ ಕಡತಗಳನ್ನು ಶೇಖರಿಸಿಡಲು ರೂಪಿಸಿದ ತಂತ್ರಜ್ಞಾನವೇ ಎಂಪಿ೩. ಇದು 'ಎಂಪಿಇಜಿ ಆಡಿಯೋ ಲೇಯರ್ ೩' ಎಂಬ ಹೆಸರಿನ ಹ್ರಸ್ವರೂಪ. ಧ್ವನಿರೂಪದ ಮಾಹಿತಿಯನ್ನು ಬಹಳ ಕಡಿಮೆ ಸ್ಥಳಾವಕಾಶ ಬಳಸುವ ಕಡತಗಳಾಗಿ ಉಳಿಸಿಡುವುದು ಈ ತಂತ್ರದ ಹೆಚ್ಚುಗಾರಿಕೆ. ಮೂಲಧ್ವನಿಯಲ್ಲಿ ಮಾನವರಿಂದ ಗ್ರಹಿಸಲು ಅಸಾಧ್ಯವಾದ ಅಷ್ಟೂ ಭಾಗವನ್ನು ತೆಗೆದುಹಾಕುವ ಹಾಗೂ ಮಿಕ್ಕ ಮಾಹಿತಿಯನ್ನು ಬಹಳ ಸಮರ್ಥವಾಗಿ ಕುಗ್ಗಿಸುವ ಮೂಲಕ ಇದು ಸಾಧ್ಯವಾಗುತ್ತದೆ. ಧ್ವನಿಯ ಗುಣಮಟ್ಟ ತೀರಾ ಉನ್ನತವಾಗೇನೂ ಇರಬೇಕಿಲ್ಲ ಎನ್ನುವುದಾದರೆ ಕಡತದ ಗಾತ್ರವನ್ನು ಇನ್ನಷ್ಟು ಕುಗ್ಗಿಸಬಹುದು. ಡಿಜಿಟಲ್ ರೂಪದಲ್ಲಿರುವ ಹಾಡು-ಸಂಗೀತವನ್ನೆಲ್ಲ ಎಂಪಿ೩ ಎಂದೇ ಗುರುತಿಸುವ ಮಟ್ಟಿಗೆ ಈ ತಂತ್ರಜ್ಞಾನ ಜನಪ್ರಿಯವಾಗಿದೆ. ಎಂಪಿ೩ ತಂತ್ರಜ್ಞಾನ ಅನ್ವಯಿಸುವುದು ಧ್ವನಿರೂಪದ ಕಡತಗಳಿಗೆ ಮಾತ್ರ. ಧ್ವನಿಯ ಜೊತೆಗೆ ವೀಡಿಯೋ, ಸಬ್‌ಟೈಟಲ್ ಮುಂತಾದ ಮಾಹಿತಿಯನ್ನೂ ಸಣ್ಣ ಗಾತ್ರದ ಕಡತಗಳಲ್ಲಿ ಉಳಿಸಿಡಲು ಎಂಪಿ೪ (ಎಂಪಿಇಜಿ-೪ ಪಾರ್ಟ್ ೧೪) ತಂತ್ರಜ್ಞಾನ ಬಳಕೆಯಾಗುತ್ತದೆ. ಎಂಪಿ೩ ಹಾಗೂ ಎಂಪಿ೪ ತಂತ್ರಜ್ಞಾನ ಬಳಸುವ ಕಡತಗಳ ಫೈಲ್ ಎಕ್ಸ್‌ಟೆನ್ಷನ್ ಆಗಿ ಆ ಹೆಸರುಗಳೇ ಬಳಕೆಯಾಗುತ್ತವೆ. ಎಂಪಿ೪ ತಂತ್ರಜ್ಞಾನ ಬಳಸಿಕೊಂಡು ಧ್ವನಿರೂಪದ ಮಾಹಿತಿಯನ್ನಷ್ಟೇ ಉಳಿಸಿಡುವ ಕಡತಗಳನ್ನು .m4a ಎಂಬ ಫೈಲ್ ಎಕ್ಸ್‌ಟೆನ್ಷನ್‌ನೊಡನೆ ಗುರುತಿಸುವ ಅಭ್ಯಾಸವೂ ಇದೆ.

Mbps
ಎಂಬಿಪಿಎಸ್
(ರೂಪಿಸಬೇಕಿದೆ)
ಮೆಗಾಬಿಟ್ಸ್ ಪರ್ ಸೆಕೆಂಡ್; ದೂರಸಂಪರ್ಕ ವ್ಯವಸ್ಥೆಯಲ್ಲಿ ದತ್ತಾಂಶ ವರ್ಗಾವಣೆಯ ವೇಗವನ್ನು ಅಳೆಯುವ ಏಕಮಾನಗಳಲ್ಲೊಂದು
ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ (ಡೇಟಾ) ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ. ಡೇಟಾ ರೇಟ್ ಅನ್ನು ಅಳೆಯುವ ಏಕಮಾನವೇ ಡೇಟಾ ರೇಟ್ ಯುನಿಟ್. ಎಂಬಿಪಿಎಸ್ ಎನ್ನುವುದು ಇಂತಹುದೇ ಒಂದು ಡೇಟಾ ರೇಟ್ ಯುನಿಟ್. ಯಾವುದೋ ಅಂತರಜಾಲ ಸಂಪರ್ಕದಲ್ಲಿ ಪ್ರತಿ ಸೆಕೆಂಡಿಗೆ ಹತ್ತು ಲಕ್ಷ ಬಿಟ್‌ನಷ್ಟು ದತ್ತಾಂಶದ ಹರಿವು ಸಾಧ್ಯವಾದರೆ ಅದನ್ನು ೧ ಮೆಗಾಬಿಟ್ಸ್ ಪರ್ ಸೆಕೆಂಡ್ (ಎಂಬಿಪಿಎಸ್) ಸಂಪರ್ಕವೆಂದು ಗುರುತಿಸಲಾಗುತ್ತದೆ. ಕಿಲೋಬಿಟ್ಸ್ ಪರ್ ಸೆಕೆಂಡ್ (ಕೆಬಿಪಿಎಸ್), ಗಿಗಾಬಿಟ್ಸ್ ಪರ್ ಸೆಕೆಂಡ್ (ಜಿಬಿಪಿಎಸ್) ಮುಂತಾದವೂ ಡೇಟಾ ರೇಟ್ ಯುನಿಟ್‌ಗಳೇ. ದತ್ತಾಂಶದ ರವಾನೆಗೆ ನಾವು ಯಾವುದೇ ಮಾರ್ಗ ಆಯ್ದುಕೊಂಡಾಗ ಅದರ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಪ್ರಮಾಣದ ದತ್ತಾಂಶವಷ್ಟೆ ಹಾದುಹೋಗುವುದು ಸಾಧ್ಯ. ಇದನ್ನು ಆ ಮಾರ್ಗದ ಬ್ಯಾಂಡ್‌ವಿಡ್ತ್ ಎಂದು ಕರೆಯುತ್ತಾರೆ. ಬ್ಯಾಂಡ್‌ವಿಡ್ತ್ ಹೆಚ್ಚಿದ್ದಷ್ಟೂ ಡೇಟಾ ರೇಟ್ ಕೂಡ ಹೆಚ್ಚಾಗಿರುವುದು ಸಾಧ್ಯ.


logo