logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Autoplay
ಆಟೋಪ್ಲೇ
(ರೂಪಿಸಬೇಕಿದೆ)
ಕಡತಗಳು, ತಂತ್ರಾಂಶಗಳು ತಮ್ಮಷ್ಟಕ್ಕೆ ತಾವೇ ಚಾಲೂ ಆಗುವ ಪ್ರಕ್ರಿಯೆ
ಕೆಲವೊಂದು ಜಾಲತಾಣಗಳನ್ನು ತೆರೆದಾಗ ಅಲ್ಲಿರುವ ವೀಡಿಯೋಗಳು ತಮ್ಮಷ್ಟಕ್ಕೆ ತಾವೇ ಚಾಲೂ ಆಗುವುದನ್ನು ನೀವು ಗಮನಿಸಿರಬಹುದು. ಯೂಟ್ಯೂಬ್‌ನಲ್ಲಿ ನೋಡುತ್ತಿರುವ ವೀಡಿಯೋ ಮುಗಿದ ತಕ್ಷಣ ಇನ್ನೊಂದು ವೀಡಿಯೋ ಪ್ರಾರಂಭವಾಗುವುದೂ ನಿಮ್ಮ ಗಮನಕ್ಕೆ ಬಂದಿರಲು ಸಾಧ್ಯ. ಧ್ವನಿ ಹಾಗೂ ವೀಡಿಯೋ ರೂಪದ ಕಡತಗಳು ಹೀಗೆ ತಮ್ಮಷ್ಟಕ್ಕೆ ತಾವೇ ಚಾಲೂ ಆಗುವ ಪ್ರಕ್ರಿಯೆಯನ್ನು 'ಆಟೋಪ್ಲೇ' ಎಂದು ಕರೆಯುತ್ತಾರೆ. ಬಳಕೆದಾರರಿಂದ ಯಾವುದೇ ಆದೇಶವನ್ನು (ಇನ್‌ಪುಟ್) ನಿರೀಕ್ಷಿಸದೆ ತನ್ನಷ್ಟಕ್ಕೆ ತಾನೇ ಪ್ರಾರಂಭವಾಗುವುದು ಈ ಪ್ರಕ್ರಿಯೆಯ ಸ್ವರೂಪ. ಹೊಸದೊಂದು ಶೇಖರಣಾ ಮಾಧ್ಯಮವನ್ನು (ಉದಾ: ಪೆನ್ ಡ್ರೈವ್ ಅಥವಾ ಮೆಮೊರಿ ಕಾರ್ಡ್) ಕಂಪ್ಯೂಟರಿಗೆ ಸಂಪರ್ಕಿಸಿದಾಗ ಅದರಲ್ಲಿರುವ ಮಾಹಿತಿಯೂ ಇದೇ ರೀತಿ ಸ್ವಯಂಚಾಲಿತವಾಗಿ ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯ. ಈ ಪ್ರಕ್ರಿಯೆಗೂ 'ಆಟೋಪ್ಲೇ' ಎಂದೇ ಹೆಸರು. ಆಟೋಪ್ಲೇ ಸ್ವರೂಪ ಹೇಗಿರಬೇಕೆಂದು ತೀರ್ಮಾನಿಸುವ, ಯಾವುದೇ ಮಾಹಿತಿ ಸ್ವಯಂಚಾಲಿತವಾಗಿ ತೆರೆದುಕೊಳ್ಳದಂತೆ ತಡೆಯುವ ಸ್ವಾತಂತ್ರ್ಯವೂ ಬಳಕೆದಾರರಿಗೆ ಇರುತ್ತದೆ. ವೀಡಿಯೋಗಳು ನಮ್ಮ ಇಚ್ಛೆಗೆ ವಿರುದ್ಧವಾಗಿ ಆಟೋಪ್ಲೇ ಆಗದಂತೆ ತಡೆಯುವುದೂ ಸಾಧ್ಯ. ಆಟೋಪ್ಲೇ ಪ್ರಕ್ರಿಯೆಯನ್ನು ಪ್ರತಿಬಂಧಿಸುವ ಸೌಲಭ್ಯ ಫೇಸ್‌ಬುಕ್ ಹಾಗೂ ಯೂಟ್ಯೂಬ್ ಆಯ್ಕೆಗಳಲ್ಲಿ ದೊರಕುತ್ತದೆ. ಫೇಸ್‌ಬುಕ್‌ನಲ್ಲಿ ಈ ಆಯ್ಕೆ 'ಸೆಟಿಂಗ್ಸ್' > 'ವೀಡಿಯೋಸ್' ಅಡಿಯಲ್ಲಿರುತ್ತದೆ. 'ಆಟೋಪ್ಲೇ ವೀಡಿಯೋಸ್' ಅನ್ನು 'ಆಫ್' ಎಂದು ಸೂಚಿಸುವ ಮೂಲಕ ವೀಡಿಯೋಗಳು ಸ್ವಯಂಚಾಲಿತವಾಗಿ ಚಾಲೂ ಆಗುವುದನ್ನು ತಪ್ಪಿಸಬಹುದು. ವೀಡಿಯೋ ಇದ್ದಕ್ಕಿದ್ದಂತೆ ಪ್ರಾರಂಭವಾದಾಗ ಮುಜುಗರವಾಗುವುದನ್ನು, ಮೊಬೈಲ್ ಡೇಟಾ ವ್ಯರ್ಥವಾಗುವುದನ್ನೆಲ್ಲ ಈ ಸೌಲಭ್ಯ ಬಳಸುವ ಮೂಲಕ ತಪ್ಪಿಸಬಹುದು.

Autoresponder
ಆಟೋರೆಸ್ಪಾಂಡರ್
(ರೂಪಿಸಬೇಕಿದೆ)
ಇಮೇಲ್ ಖಾತೆದಾರರ ಪರವಾಗಿ ಸ್ವಯಂಚಾಲಿತ ಪ್ರತ್ಯುತ್ತರಗಳನ್ನು ಕಳಿಸುವ ಸವಲತ್ತು
ಸಂಸ್ಥೆಗಳ ಗ್ರಾಹಕ ಸೇವಾ ವಿಭಾಗಕ್ಕೆ ಇಮೇಲ್ ಸಂದೇಶ ಕಳಿಸಿದಾಗ "ನಿಮ್ಮ ಪತ್ರ ತಲುಪಿದೆ" ಎಂದು ಹೇಳುವ ಪ್ರತಿಕ್ರಿಯೆ ಥಟ್ಟನೆ ಪ್ರತ್ಯಕ್ಷವಾಗುವುದನ್ನು ನೀವು ಗಮನಿಸಿರಬಹುದು. ಇದೇ ರೀತಿ "ನಾನು ರಜೆಯಲ್ಲಿದ್ದೇನೆ, ಕಚೇರಿಗೆ ಮರಳಿದ ಕೂಡಲೇ ಉತ್ತರಿಸುವೆ" ಎನ್ನುವಂತಹ ಸಂದೇಶಗಳು ನಿಮ್ಮ ಮಿತ್ರರ ಖಾತೆಗಳಿಂದಲೂ ಬಂದಿರಬಹುದು. ಇಮೇಲ್ ಖಾತೆದಾರರ ಪರವಾಗಿ ಇಂತಹ ಪೂರ್ವನಿರ್ಧಾರಿತ ಸಂದೇಶಗಳನ್ನು ಕಳುಹಿಸುವುದು ಒಂದು ತಂತ್ರಾಂಶದ ಕೆಲಸ. ಸ್ವಯಂಚಾಲಿತವಾಗಿ (ಆಟೋಮ್ಯಾಟಿಕ್) ಪ್ರತ್ಯುತ್ತರಗಳನ್ನು (ರೆಸ್ಪಾನ್ಸ್) ಕಳಿಸುವುದರಿಂದಲೇ ಈ ತಂತ್ರಾಂಶವನ್ನು 'ಆಟೋರೆಸ್ಪಾಂಡರ್' ಎಂದು ಕರೆಯುತ್ತಾರೆ. 'ಆಟೋಮ್ಯಾಟಿಕ್ ರಿಪ್ಲೈ' ಹಾಗೂ 'ವೆಕೇಶನ್ ರೆಸ್ಪಾಂಡರ್' ಎಂದೂ ಕರೆಸಿಕೊಳ್ಳುವ ಈ ಸೌಲಭ್ಯ ಬಹುತೇಕ ಎಲ್ಲ ಇಮೇಲ್ ಸೇವೆಗಳಲ್ಲೂ ಇರುತ್ತದೆ. ಕಚೇರಿಗೆ ರಜೆ ಹಾಕಿದ್ದಾಗ, ಅಂತರಜಾಲ ಸಂಪರ್ಕವಿಲ್ಲದ ಸ್ಥಳಗಳಲ್ಲಿದ್ದಾಗ ನಮಗೆ ಬರುವ ಇಮೇಲ್ ಸಂದೇಶಗಳಿಗೆ ಈ ಸೌಲಭ್ಯ ಬಳಸಿ ಸ್ವಯಂಚಾಲಿತ ಉತ್ತರಗಳನ್ನು ಕಳಿಸುವುದು ಸಾಧ್ಯ. ನಿಮ್ಮ ಪತ್ರಕ್ಕೆ ಪ್ರತಿಕ್ರಿಯೆ ನೀಡುವುದು ಯಾವಾಗ ಸಾಧ್ಯವಾಗಬಹುದು ಎನ್ನುವ ಮಾಹಿತಿಯನ್ನು ಈ ಉತ್ತರಗಳಲ್ಲಿ ಸೂಚಿಸುವುದು ಸಾಮಾನ್ಯ ಅಭ್ಯಾಸ. ಇಂತಹ ಉತ್ತರಗಳನ್ನು ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಕಳಿಸಬೇಕು ಎಂದು ಸೂಚಿಸುವುದು ಕೂಡ ಸಾಧ್ಯ. ಗ್ರಾಹಕ ಸೇವಾ ವಿಭಾಗಕ್ಕೆ ಕಳಿಸಿದ ಪತ್ರಕ್ಕೆ ಉತ್ತರಿಸುವಾಗ ಸ್ವೀಕೃತಿ ಸಂಖ್ಯೆಯಂತಹ ಹೆಚ್ಚುವರಿ ಮಾಹಿತಿಯೂ ಸೇರಬೇಕಾಗುತ್ತದಲ್ಲ, ಅದಕ್ಕಾಗಿ ಕೊಂಚ ಹೆಚ್ಚಿನ ಸವಲತ್ತುಗಳುಳ್ಳ ಆಟೋರೆಸ್ಪಾಂಡರ್‌ಗಳು ಬಳಕೆಯಾಗುತ್ತವೆ.
">

Ad blocker
ಆಡ್ ಬ್ಲಾಕರ್
(ರೂಪಿಸಬೇಕಿದೆ)
ಜಾಲತಾಣಗಳಲ್ಲಿ ಅನಗತ್ಯ ಜಾಹೀರಾತುಗಳು ಕಾಣದಂತೆ ನಿರ್ಬಂಧಿಸಿ ನಮ್ಮ ಜಾಲಾಟವನ್ನು ಸರಾಗವಾಗಿಸುವ ತಂತ್ರಾಂಶ
ಜಾಲತಾಣಗಳಲ್ಲಿ ಜಾಹೀರಾತುಗಳ ಹಾವಳಿ ವಿಪರೀತ ಎನ್ನುವುದು ಹಲವರ ಅಭಿಪ್ರಾಯ. ಕೆಲವು ತಾಣಗಳಲ್ಲಂತೂ ಮಾಹಿತಿಗಿಂತ ಹೆಚ್ಚು ಜಾಹೀರಾತೇ ಇರುತ್ತದೆ. ಚಿತ್ರರೂಪದ್ದಷ್ಟೇ ಅಲ್ಲ, ವೀಡಿಯೋ - ಧ್ವನಿ ಮುಂತಾದ ವಿವಿಧ ರೂಪಗಳಲ್ಲೂ ಜಾಹೀರಾತುಗಳು ನಮ್ಮನ್ನು ಕಾಡುತ್ತವೆ. ಅಷ್ಟೇ ಏಕೆ, ಜಾಹೀರಾತುಗಳ ಮೂಲಕ ಕುತಂತ್ರಾಂಶಗಳ ನುಸುಳುವಿಕೆಯೂ ಸಾಧ್ಯ. ಹೀಗೆ ಕಿರಿಕಿರಿ ಮಾಡುವ ಜಾಹೀರಾತುಗಳನ್ನು ನಿರ್ಬಂಧಿಸಿ ನಮ್ಮ ಜಾಲಾಟವನ್ನು ಸರಾಗವಾಗಿಸುವ ತಂತ್ರಾಂಶಗಳನ್ನು 'ಜಾಹೀರಾತು ನಿರ್ಬಂಧಕ', ಅಂದರೆ 'ಆಡ್ ಬ್ಲಾಕರ್'ಗಳೆಂದು ಕರೆಯುತ್ತಾರೆ. ನಾವು ಭೇಟಿಕೊಡಲು ಬಯಸಿರುವ ಪುಟದಲ್ಲಿ ಜಾಹೀರಾತುಗಳನ್ನು ಗುರುತಿಸಿ ಅವು ಮಾತ್ರ ತೆರೆಯದಂತೆ ಮಾಡುವುದು, ಆ ಮೂಲಕ ನಮಗೆ ಆಗುವ ಕಿರಿಕಿರಿಯನ್ನು ತಡೆಯುವುದು ಈ ತಂತ್ರಾಂಶಗಳ ವೈಶಿಷ್ಟ್ಯ. ಆದರೆ ಇಲ್ಲೊಂದು ಸಮಸ್ಯೆಯಿದೆ. ಬಹಳಷ್ಟು ಜಾಲತಾಣಗಳಿಗೆ ಜಾಹೀರಾತುಗಳೇ ಆದಾಯದ ಪ್ರಮುಖ ಮೂಲ (ಲಾಭಾಪೇಕ್ಷೆಯಿಲ್ಲದ, ಜಾಹೀರಾತುಗಳನ್ನು ಪ್ರದರ್ಶಿಸದ ತಾಣಗಳ ಮಾತು ಬೇರೆ). ಜಾಲತಾಣಕ್ಕೆ ಭೇಟಿಕೊಡುವ ನಮ್ಮಂತಹ ಬಳಕೆದಾರರು ಅವರಿಗೆ ಯಾವುದೇ ಶುಲ್ಕ ನೀಡುವುದಿಲ್ಲ; ಇಷ್ಟರ ಮೇಲೆ ಜಾಹೀರಾತುಗಳೂ ಪ್ರದರ್ಶನವಾಗದಂತೆ ತಡೆದರೆ ಆ ತಾಣಗಳು ನಡೆಯುವುದು ಹೇಗೆ? ಹೀಗಾಗಿ ಜಾಹೀರಾತು ನಿರ್ಬಂಧಕ ತಂತ್ರಾಂಶಗಳನ್ನು ಬಳಸುವ ಕಂಪ್ಯೂಟರು ಅಥವಾ ಸ್ಮಾರ್ಟ್‌ಫೋನುಗಳಲ್ಲಿ ತಮ್ಮ ತಾಣವೇ ತೆರೆದುಕೊಳ್ಳದಂತೆ ಮಾಡುವ ನಿಟ್ಟಿನಲ್ಲೂ ಹಲವು ಜಾಲತಾಣಗಳು ಯೋಚಿಸಿವೆ. ಕೊಂಚ ಹಣಕೊಟ್ಟು ನೋಂದಾಯಿಸಿಕೊಂಡ ಗ್ರಾಹಕರಿಗೆ ಜಾಹೀರಾತುಗಳಿಲ್ಲದ ಆವೃತ್ತಿಯನ್ನು ನೀಡುವ ಪ್ರಯತ್ನಗಳೂ ನಡೆದಿವೆ.

Adware
ಆಡ್‌ವೇರ್
(ರೂಪಿಸಬೇಕಿದೆ)
ಜಾಹೀರಾತು ಪ್ರದರ್ಶನವನ್ನೇ ಉದ್ದೇಶವಾಗಿಟ್ಟುಕೊಂಡ ತಂತ್ರಾಂಶ
ವಿಶ್ವವ್ಯಾಪಿ ಜಾಲದಲ್ಲಿರುವ ಬಹುತೇಕ ಮಾಹಿತಿಯನ್ನು ಬಳಸಲು ನಾವು ಯಾವುದೇ ಶುಲ್ಕ ನೀಡುವುದಿಲ್ಲವಲ್ಲ, ಹಾಗಾಗಿ ಅನೇಕ ಜಾಲತಾಣಗಳು ಜಾಹೀರಾತುಗಳನ್ನು ಪ್ರದರ್ಶಿಸಿ ಹಣ ಸಂಪಾದಿಸಿಕೊಳ್ಳುತ್ತವೆ. ತಂತ್ರಾಂಶಗಳೂ ಮೊಬೈಲ್ ಆಪ್‌ಗಳೂ ಜಾಹೀರಾತುಗಳನ್ನು ಪ್ರದರ್ಶಿಸುತ್ತವೆ. ಬಳಕೆದಾರರಿಂದ ಯಾವುದೇ ಶುಲ್ಕ ಕೇಳದ ಅದೆಷ್ಟೋ ತಂತ್ರಾಂಶಗಳು ('ಫ್ರೀವೇರ್') ಹಣ ಸಂಪಾದಿಸುವುದೇ ಜಾಹೀರಾತುಗಳ ಮೂಲಕ. ಇವುಗಳ ಜೊತೆಗೆ ಜಾಹೀರಾತು ಪ್ರದರ್ಶನವನ್ನೇ ಕೆಲಸವಾಗಿಟ್ಟುಕೊಂಡ ತಂತ್ರಾಂಶಗಳೂ ಇವೆ. ಬಳಕೆದಾರರ ಕಂಪ್ಯೂಟರನ್ನೋ ಮೊಬೈಲನ್ನೋ ಸೇರಿಕೊಂಡು ಅನಪೇಕ್ಷಿತವಾಗಿ ಜಾಹೀರಾತುಗಳನ್ನು ಪ್ರದರ್ಶಿಸುವುದು, ಬ್ರೌಸರ್ ತೆರೆದ ತಕ್ಷಣ ಯಾವುದೋ ತಾಣವನ್ನು ಪ್ರದರ್ಶಿಸುವುದು, ನಮ್ಮ ಆಯ್ಕೆಯ ಸರ್ಚ್ ಇಂಜಿನ್ ಬದಲು ಬೇರಾವುದೋ ವ್ಯವಸ್ಥೆಯತ್ತ ನಮ್ಮ ಹುಡುಕಾಟವನ್ನು ಮರುನಿರ್ದೇಶಿಸುವುದು - ಇದು ಇಂತಹ ತಂತ್ರಾಂಶಗಳ ಸ್ವರೂಪ. ಈ ತಂತ್ರಾಂಶಗಳನ್ನು 'ಆಡ್‌ವೇರ್'ಗಳೆಂದು ಕರೆಯುತ್ತಾರೆ. ಬಹಳಷ್ಟು ಆಡ್‌ವೇರ್‌ಗಳು ಬಳಕೆದಾರರ ಅರಿವಿಗೆ ಬಾರದಂತೆ ಅವರ ಕಂಪ್ಯೂಟರನ್ನೋ ಮೊಬೈಲ್ ಫೋನನ್ನೋ ಸೇರುವುದರಿಂದ ಅವನ್ನು ಕುತಂತ್ರಾಂಶಗಳ ಗುಂಪಿಗೆ ಸೇರಿಸಬಹುದು. ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ, ಅವರ ಬ್ರೌಸಿಂಗ್ ಅಭ್ಯಾಸವನ್ನು ಗಮನಿಸಿಕೊಳ್ಳುತ್ತ ಪ್ರದರ್ಶಿಸುವ ಜಾಹೀರಾತುಗಳನ್ನು ಅದಕ್ಕೆ ಅನುಗುಣವಾಗಿ ಬದಲಿಸುವ ಆಡ್‌ವೇರ್‌ಗಳೂ ಇವೆ. ಸುಮ್ಮನೆ ಜಾಹೀರಾತುಗಳನ್ನಷ್ಟೇ ಪ್ರದರ್ಶಿಸುವ ಆಡ್‌ವೇರ್‌ನಿಂದ ಕಿರಿಕಿರಿಯಾಗುವುದು ನಿಜವಾದರೂ ಕುತಂತ್ರಾಂಶಗಳಂತೆ ಅದರಿಂದ ಬೇರೆ ಯಾವುದೇ ಹಾನಿ ಆಗುವುದಿಲ್ಲ. ಹೀಗಾಗಿ ಅನೇಕ ಆಡ್‌ವೇರ್‌ಗಳು ಆಂಟಿವೈರಸ್ ತಂತ್ರಾಂಶಗಳ ಕಣ್ತಪ್ಪಿಸುವಲ್ಲಿ ಯಶಸ್ವಿಯಾಗುತ್ತವೆ. ಅವುಗಳ ನಿವಾರಣೆಗೆ ಆಡ್‌ವೇರ್ ನಿರ್ಬಂಧಕ ತಂತ್ರಾಂಶಗಳನ್ನು (ಆಡ್‌ವೇರ್ ರಿಮೂವಲ್ ಟೂಲ್) ಬಳಸಬಹುದು.

Onsite
ಆನ್‌ಸೈಟ್
(ರೂಪಿಸಬೇಕಿದೆ)
ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಉದ್ಯೋಗಿಗಳು ತಮ್ಮ ಗ್ರಾಹಕರ ಕಚೇರಿಯಲ್ಲೇ ಕುಳಿತು ಅವರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಪರಿಕಲ್ಪನೆ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರ ಪರಿಚಯವಿದ್ದರೆ ನೀವು 'ಆನ್‌ಸೈಟ್' ಎಂಬ ಪದವನ್ನು ಕೇಳಿರುವ ಸಾಧ್ಯತೆ ಹೆಚ್ಚು. 'ಆನ್‌ಸೈಟ್' ಹೆಸರಿನಲ್ಲಿ ವಿದೇಶಕ್ಕೆ ಹಾರುವವರನ್ನೂ ನೀವು ನೋಡಿರಬಹುದು. ಈ ಪದ ಮೂಲತಃ ಐಟಿ ಕ್ಷೇತ್ರದ್ದೇನಲ್ಲ; ಮಾಹಿತಿ ತಂತ್ರಜ್ಞಾನ ಕೆಲಸಗಳ ಹೊರಗುತ್ತಿಗೆ (ಔಟ್‌ಸೋರ್ಸಿಂಗ್) ಸಂದರ್ಭದಲ್ಲಿ ಐಟಿ ಕ್ಷೇತ್ರವನ್ನು ಪ್ರವೇಶಿಸಿದ ಪದ ಇದು. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಅವರ ಕಚೇರಿಯಲ್ಲೇ ಕೆಲಸ ನಡೆಯುವ ಸನ್ನಿವೇಶವನ್ನು ಇದು ಪ್ರತಿನಿಧಿಸುತ್ತದೆ. ವಾರಂಟಿ ಅವಧಿಯಲ್ಲಿ ಯಂತ್ರೋಪಕರಣಗಳ ನಿರ್ವಹಣೆಗೆ ತಂತ್ರಜ್ಞರು ನಮ್ಮ ಮನೆಗೇ ಬರುವ ಸೇವೆಯನ್ನು 'ಆನ್‌ಸೈಟ್ ವಾರಂಟಿ' ಎಂದು ಕರೆಯುತ್ತಾರಲ್ಲ, ಇದೂ ಹಾಗೆಯೇ. ಹಿಂದೆ ಆನ್‌ಸೈಟ್ ಕೆಲಸ ಬಹುತೇಕ ವಿದೇಶಗಳಲ್ಲೇ ನಡೆಯುತ್ತಿತ್ತು; ಆದರೆ ಬದಲಾದ ಸನ್ನಿವೇಶದಲ್ಲಿ ಬನಶಂಕರಿಯಲ್ಲಿನ ಕಚೇರಿ ಉದ್ಯೋಗಿಗಳು ಹೊಸೂರು ರಸ್ತೆಯಲ್ಲಿರುವ ಗ್ರಾಹಕರ ಕಚೇರಿಗೆ ಆನ್‌ಸೈಟ್ ಹೋಗುವುದು ಅಪರೂಪವೇನೂ ಅಲ್ಲ. ಇದರ ಬದಲು ಗ್ರಾಹಕರಿಂದ ಕೆಲಸವನ್ನಷ್ಟೇ ಪಡೆದುಕೊಂಡು ಅದನ್ನು ಬೇರೆಡೆ ಇರುವ ತಮ್ಮ ಕಚೇರಿಯಿಂದ ನಿರ್ವಹಿಸುವುದನ್ನು 'ಆಫ್‌ಶೋರ್' (ಕಡಲದಂಡೆಯ ಆಚೆ) ಎಂದು ಗುರುತಿಸುತ್ತಾರೆ. ಸಮುದ್ರ ದಡದಿಂದ ದೂರ ಸಮುದ್ರದಲ್ಲಿ ನಡೆಯುವ ತೈಲ ಅನ್ವೇಷಣೆಯ ಕೆಲಸವನ್ನು ಈ ಪದ ಮೂಲತಃ ಪ್ರತಿನಿಧಿಸುತ್ತಿತ್ತಂತೆ. ವಿದೇಶಿ ಕೆಲಸಗಳ ಹೊರಗುತ್ತಿಗೆಯ ಬಹುಪಾಲು ಭಾರತದಂತಹ ದೇಶಗಳಿಗೆ ಬರುತ್ತಿದ್ದುದೇ ಐಟಿ ಕ್ಷೇತ್ರದಲ್ಲಿ ಈ ಪ್ರಯೋಗ ಪ್ರಾರಂಭವಾದುದರ ಮೂಲ ಎನ್ನಬಹುದು. ಒಂದೇ ದೇಶದಲ್ಲಿ, ಆದರೆ ಕಡಿಮೆ ಖರ್ಚಿನ ಬೇರೆ ಊರಿನಲ್ಲಿ ನಡೆಯುವ ಕೆಲಸಗಳನ್ನು 'ಆನ್‌ಶೋರ್' ಹಾಗೂ ಸಮೀಪದಲ್ಲೇ ಇರುವ (ಸರಿಸುಮಾರು ಅದೇ ಕಾಲಮಾನ ಬಳಸುವ) ಮತ್ತೊಂದು ದೇಶದಲ್ಲಿ ನಡೆಯುವ ಕೆಲಸಗಳನ್ನು 'ನಿಯರ್‌ಶೋರ್' ಎಂದು ಗುರುತಿಸುವ ಅಭ್ಯಾಸವೂ ಇದೆ.

Operating System
ಆಪರೇಟಿಂಗ್ ಸಿಸ್ಟಂ
ಕಾರ್ಯಾಚರಣ ವ್ಯವಸ್ಥೆ
ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ವ್ಯವಸ್ಥೆ
ಲ್ಯಾಪ್‌ಟಾಪ್, ಡೆಸ್ಕ್‌ಟಾಪ್, ಟ್ಯಾಬ್ಲೆಟ್, ಮೊಬೈಲ್ ಫೋನ್ ಮುಂತಾದ ಯಾವುದೇ ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ವ್ಯವಸ್ಥೆಯನ್ನು ಆಪರೇಟಿಂಗ್ ಸಿಸ್ಟಂ (ಕಾರ್ಯಾಚರಣ ವ್ಯವಸ್ಥೆ) ಎಂದು ಕರೆಯುತ್ತಾರೆ. ಕಂಪ್ಯೂಟರಿನ ವಿಂಡೋಸ್ - ಲಿನಕ್ಸ್, ಮೊಬೈಲಿನ ಆಂಡ್ರಾಯ್ಡ್ - ಐಓಎಸ್‌ಗಳೆಲ್ಲ ಕಾರ್ಯಾಚರಣ ವ್ಯವಸ್ಥೆಗಳೇ. ಕಂಪ್ಯೂಟರಿನಲ್ಲಿ, ಮೊಬೈಲಿನಲ್ಲಿ ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಬಳಸಬೇಕಾದರೂ ಕಾರ್ಯಾಚರಣ ವ್ಯವಸ್ಥೆ ಇರಲೇಬೇಕು. ಅಷ್ಟೇ ಅಲ್ಲ, ಅವನ್ನೆಲ್ಲ ಬಳಸಿ ಯಾವ ಕೆಲಸ ಮಾಡಬೇಕೆಂದರೂ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗಿರಬೇಕು. ಕಂಪ್ಯೂಟರಿನ ಉದಾಹರಣೆ ತೆಗೆದುಕೊಂಡರೆ ನಾವು ಸ್ವಿಚ್ ಒತ್ತಿದಾಗ ಅದು ಮೊದಲಿಗೆ ಪ್ರಾರಂಭಿಸುವುದು ಈ ಕಾರ್ಯಾಚರಣ ವ್ಯವಸ್ಥೆಯನ್ನೇ ('ಬೂಟ್' ಮಾಡುವುದು ಎನ್ನುವುದು ಇದಕ್ಕೇ). ಒಮ್ಮೆ ಕಂಪ್ಯೂಟರ್ ಬೂಟ್ ಆದಮೇಲೆ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಕಾರ್ಯಾಚರಣ ವ್ಯವಸ್ಥೆಯ ಸಹಾಯ ಬೇಕು. ಬೇರೆ ತಂತ್ರಾಂಶಗಳನ್ನು ತೆರೆಯಲು, ಅವುಗಳನ್ನು ಬಳಸಿ ಕೆಲಸಮಾಡಲು, ಮಾಡಿದ ಕೆಲಸವನ್ನು ಉಳಿಸಿಡಲು, ಕಡೆಗೆ ಹೊಸ ತಂತ್ರಾಂಶಗಳನ್ನು ರೂಪಿಸಲಿಕ್ಕೂ ಈ ವ್ಯವಸ್ಥೆ ಸಹಾಯಮಾಡುತ್ತದೆ.

App
ಆಪ್
(ರೂಪಿಸಬೇಕಿದೆ)
ಸ್ಮಾರ್ಟ್‌ಫೋನ್ - ಟ್ಯಾಬ್ಲೆಟ್ ಸೇರಿದಂತೆ ವಿವಿಧ ವಿದ್ಯುನ್ಮಾನ ಸಾಧನಗಳಲ್ಲಿ ಬಳಕೆಯಾಗುವ ತಂತ್ರಾಂಶ, 'ಅಪ್ಲಿಕೇಶನ್' ಎಂಬ ಹೆಸರಿನ ಹ್ರಸ್ವರೂಪ
ಆಪ್ ಎನ್ನುವುದು ಸ್ಮಾರ್ಟ್‌ಫೋನ್ ಬಳಕೆದಾರರಿಗೆಲ್ಲ ಅತ್ಯಂತ ಪರಿಚಿತವಾದ ಹೆಸರು. ನಮ್ಮ ಮೊಬೈಲಿನಲ್ಲಿ ಬೇರೆಬೇರೆ ಆಪ್‌ಗಳನ್ನು ಬಳಸಿ ಬೇರೆಬೇರೆ ಕೆಲಸಗಳನ್ನು ಸಾಧಿಸಿಕೊಳ್ಳುವುದು ನಮಗೆಲ್ಲ ಚೆನ್ನಾಗಿಯೇ ಗೊತ್ತು. ಆಪ್ ಎನ್ನುವುದು 'ಅಪ್ಲಿಕೇಶನ್' ಎಂಬ ಹೆಸರಿನ ಹ್ರಸ್ವರೂಪ. ಅಪ್ಲಿಕೇಶನ್ ಎಂದರೂ ಆಪ್ ಎಂದರೂ ತಂತ್ರಾಂಶವೇ. ಮೊಬೈಲ್ ಸಾಧನಗಳಲ್ಲಿ ಬಳಕೆಯಾಗುವ ಪ್ರತಿ ಕಾರ್ಯಾಚರಣ ವ್ಯವಸ್ಥೆಯಲ್ಲೂ ಹಲವಾರು ರೀತಿಯ ಆಪ್‌ಗಳು ದೊರಕುತ್ತವೆ. ಇದಕ್ಕಾಗಿ ಆಯಾ ಕಾರ್ಯಾಚರಣ ವ್ಯವಸ್ಥೆಗಳು ತಮ್ಮದೇ ಆದ ಆಪ್ ಸ್ಟೋರುಗಳನ್ನು ರೂಪಿಸಿಕೊಂಡಿರುತ್ತವೆ. ಸ್ವಂತದ ಓಎಸ್ ಇಲ್ಲದ ಅಮೆಜಾನ್‌ನಂತಹ ಸಂಸ್ಥೆಗಳೂ ಆಪ್ ಅಂಗಡಿಗಳನ್ನು ರೂಪಿಸಿಕೊಂಡಿವೆ. ಆಪ್ ಎಂದತಕ್ಷಣ ಮೊಬೈಲು - ಟ್ಯಾಬ್ಲೆಟ್ಟುಗಳಷ್ಟೇ ನಮ್ಮ ನೆನಪಿಗೆ ಬರುತ್ತವಲ್ಲ, ಆಪ್‌ಗಳ ಬಳಕೆಯಾಗುವುದು ಈ ಸಾಧನಗಳಲ್ಲಿ ಮಾತ್ರವೇನಲ್ಲ. ಇದೀಗ ಕಂಪ್ಯೂಟರುಗಳಲ್ಲೂ ಆಪ್ ಬಳಕೆ ಸಾಮಾನ್ಯವಾಗಿದೆ. ಗೂಗಲ್ ಕ್ರೋಮ್ ಬ್ರೌಸರ್‌ನ ಬಳಕೆದಾರರು ಅದರಲ್ಲಿ ಅನೇಕ ಬಗೆಯ ಆಪ್‌ಗಳನ್ನು ಬಳಸಬಹುದು. ಗೂಗಲ್‌ನದೇ ಉತ್ಪನ್ನವಾದ 'ಕ್ರೋಮ್‌ಬುಕ್'ನಂತಹ ಕಂಪ್ಯೂಟರ್ ಕೊಂಡವರು ಈ ಆಪ್‌ಗಳನ್ನು ಮಾತ್ರವೇ ಬಳಸುವುದು ಸಾಧ್ಯ. ಮೊಬೈಲುಗಳಲ್ಲಿ ಇರುವಂತೆ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿಗಳಲ್ಲೂ (ಉದಾ: ವಿಂಡೋಸ್ ೧೦) ಆಪ್ ಸ್ಟೋರ್ ಇದೆ. ಮೊಬೈಲ್ ಆಪ್ ಸ್ಟೋರುಗಳಂತೆ ಇಲ್ಲಿಯೂ ಉಚಿತ ಹಾಗೂ ಹಣ ಪಾವತಿಸಿ ಬಳಸಬೇಕಾದ ಆಪ್‌ಗಳೆರಡೂ ದೊರಕುತ್ತವೆ.

App Store
ಆಪ್ ಸ್ಟೋರ್
(ರೂಪಿಸಬೇಕಿದೆ)
ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮುಂತಾದ ವಿದ್ಯುನ್ಮಾನ ಸಾಧನಗಳಲ್ಲಿ ಬಳಸಬಹುದಾದ ಆಪ್‌ಗಳನ್ನು ಪಡೆದುಕೊಳ್ಳಲು ರೂಪಿಸಲಾಗಿರುವ ವ್ಯವಸ್ಥೆ
ಆಂಡ್ರಾಯ್ಡ್, ಐಓಎಸ್, ವಿಂಡೋಸ್ - ಹೀಗೆ ಹಲವಾರು ಕಾರ್ಯಾಚರಣ ವ್ಯವಸ್ಥೆಗಳು (ಓಎಸ್) ಇಂದಿನ ಸ್ಮಾರ್ಟ್‌ಫೋನುಗಳಲ್ಲಿ ಬಳಕೆಯಾಗುತ್ತವೆ. ಸ್ಮಾರ್ಟ್‌ಫೋನ್ ಎಂದಾಕ್ಷಣ ಅದರಲ್ಲಿ ಉಪಯೋಗಿಸಲು ಆಪ್‌ಗಳು ಬೇಕಲ್ಲ, ಯಾವ ಮೊಬೈಲಿನಲ್ಲಿ ಯಾವೆಲ್ಲ ಆಪ್‌ಗಳು ಸಿಗುತ್ತವೆ ಎನ್ನುವುದು ಅದರಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಯನ್ನೇ ನೇರವಾಗಿ ಅವಲಂಬಿಸಿರುತ್ತದೆ. ಇಂತಹ ಪ್ರತಿಯೊಂದು ಕಾರ್ಯಾಚರಣ ವ್ಯವಸ್ಥೆಯಲ್ಲೂ ಆಪ್‌ಗಳನ್ನು ಪಡೆದುಕೊಳ್ಳಲು ನಿರ್ದಿಷ್ಟ ವ್ಯವಸ್ಥೆ ಇರುತ್ತದೆ. ನಮಗೆ ಅಗತ್ಯವಾದ ಆಪ್ ಅನ್ನು ಹುಡುಕುವ, ಆರಿಸಿಕೊಳ್ಳುವ, ಅಗತ್ಯವಾದರೆ ಹಣ ಪಾವತಿಸುವ ಮತ್ತು ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳುವ (ಇನ್‌ಸ್ಟಾಲ್) ಸೌಲಭ್ಯವನ್ನು ಒದಗಿಸುವ ಇಂತಹ ವ್ಯವಸ್ಥೆಗಳನ್ನು ಆಪ್ ಅಂಗಡಿಗಳೆಂದೇ (ಆಪ್ ಸ್ಟೋರ್) ಕರೆಯುವುದು ವಾಡಿಕೆ. ಬರಿಯ ಸ್ಮಾರ್ಟ್‌ಫೋನ್‌ಗಳಿಗಷ್ಟೇ ಅಲ್ಲ, ಟ್ಯಾಬ್ಲೆಟ್ಟುಗಳಿಗೆ - ಸ್ಮಾರ್ಟ್ ವಾಚುಗಳಿಗೆಂದೇ ರೂಪಿಸಲಾದ ಆಪ್‌ಗಳೂ ಇಂತಹ ಅಂಗಡಿಗಳಲ್ಲಿ ದೊರಕುತ್ತವೆ. ಸ್ಮಾರ್ಟ್ ಟೀವಿಗಳಲ್ಲಿ ಪ್ರತ್ಯೇಕ ಆಪ್ ಅಂಗಡಿಗಳಿರುವುದೂ ಉಂಟು. ಬೇರೆಬೇರೆ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಆಪ್ ಅಂಗಡಿಗಳನ್ನು ಬೇರೆಬೇರೆ ಹೆಸರಿನಿಂದ ಗುರುತಿಸುವ ಅಭ್ಯಾಸವಿದೆ. ಐಓಎಸ್ ಸಾಧನಗಳಲ್ಲಿ 'ಆಪಲ್ ಆಪ್ ಸ್ಟೋರ್' ಇದ್ದರೆ ಆಂಡ್ರಾಯ್ಡ್‌ನಲ್ಲಿ 'ಗೂಗಲ್ ಪ್ಲೇ' ಸ್ಟೋರ್ ಇದೆ. ಅದೇ ರೀತಿ ವಿಂಡೋಸ್ ಫೋನುಗಳಲ್ಲಿ 'ವಿಂಡೋಸ್ ಸ್ಟೋರ್' ಇರುತ್ತದೆ. ಅಂದಹಾಗೆ ಕಾರ್ಯಾಚರಣ ವ್ಯವಸ್ಥೆಯ ನಿರ್ಮಾತೃಗಳು ಮಾತ್ರ ಆಪ್ ಅಂಗಡಿಗಳನ್ನು ರೂಪಿಸಬೇಕು ಎಂದೇನೂ ಇಲ್ಲ. ಸ್ವಂತ ಮೊಬೈಲ್ ಓಎಸ್ ಇಲ್ಲದ ಹಲವು ಸಂಸ್ಥೆಗಳೂ ಇಂತಹ ಆಪ್ ಅಂಗಡಿಗಳನ್ನು ರೂಪಿಸಿ ನಡೆಸುತ್ತಿವೆ. ಇಂತಹ ಸಂಸ್ಥೆಗಳ ಸಾಲಿನಲ್ಲಿ ನಾವು ಅಮೆಜಾನ್, ಸ್ಯಾಮ್‌ಸಂಗ್ ಮುಂತಾದ ದೊಡ್ಡ ಹೆಸರುಗಳನ್ನೂ ನೋಡಬಹುದು.

Optical Media
ಆಪ್ಟಿಕಲ್ ಮೀಡಿಯಾ
(ರೂಪಿಸಬೇಕಿದೆ)
ಮಾಹಿತಿಯನ್ನು ಉಳಿಸಿಡಲು - ಮತ್ತೆ ಓದಲು ಬೆಳಕಿನ ಕಿರಣಗಳನ್ನು ಬಳಸುವ ಸಿ.ಡಿ., ಡಿವಿಡಿ ಮುಂತಾದ ಸಾಧನಗಳು
ಕಂಪ್ಯೂಟರ್ ಲೋಕದಲ್ಲಿ ಮಾಹಿತಿ ಶೇಖರಣೆಗೆ ಬಳಸುವ ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಸಿ.ಡಿ., ಡಿವಿಡಿ ಮುಂತಾದ ಸಾಧನಗಳನ್ನು ಸ್ಟೋರೇಜ್ ಮೀಡಿಯಾ ಎಂದು ಗುರುತಿಸುವ ಅಭ್ಯಾಸವಿದೆ. ಸಾಮಾನ್ಯ ಬಳಕೆಯಲ್ಲಿ ಈ ಹೆಸರನ್ನು 'ಮೀಡಿಯಾ' ಎಂದು ಹ್ರಸ್ವಗೊಳಿಸಿ ಬಳಸಲಾಗುತ್ತದೆ. ಬೇರೆಬೇರೆ ರೀತಿಯ ಶೇಖರಣಾ ಸಾಧನಗಳು ಬೇರೆಬೇರೆ ತಂತ್ರಜ್ಞಾನಗಳನ್ನು ಬಳಸುತ್ತವೆ. ಈ ಪೈಕಿ ಮಾಹಿತಿಯನ್ನು ಉಳಿಸಿಡಲು - ಮತ್ತೆ ಓದಲು ಬೆಳಕಿನ ಕಿರಣಗಳನ್ನು ಬಳಸುವ ಸಾಧನಗಳನ್ನು 'ಆಪ್ಟಿಕಲ್ ಮೀಡಿಯಾ' ಎಂದು ಕರೆಯುತ್ತಾರೆ (ಆಪ್ಟಿಕಲ್ = ಬೆಳಕಿಗೆ ಸಂಬಂಧಿಸಿದ). ಸಿ.ಡಿ., ಡಿವಿಡಿ, ಬ್ಲೂರೇ ಡಿಸ್ಕ್ ಮುಂತಾದ ಎಲ್ಲ ಸಾಧನಗಳೂ ಆಪ್ಟಿಕಲ್ ಮೀಡಿಯಾ ಗುಂಪಿಗೆ ಸೇರುತ್ತವೆ. ವಿಶೇಷ ಲೇಪನವಿರುವ ಪ್ಲಾಸ್ಟಿಕ್ಕಿನ ತಟ್ಟೆಯ ಮೇಲೆ ಲೇಸರ್ ಕಿರಣಗಳ ಸಹಾಯದಿಂದ ಮಾಹಿತಿಯನ್ನು ಉಳಿಸಿಡುವುದು, ಮತ್ತೆ ಅದೇ ಕಿರಣಗಳ ಸಹಾಯದಿಂದ ಮಾಹಿತಿಯನ್ನು ಓದುವುದು ಈ ಸಾಧನಗಳ ವೈಶಿಷ್ಟ್ಯ. ಇವುಗಳನ್ನು ಆಪ್ಟಿಕಲ್ ಡಿಸ್ಕ್‌ಗಳೆಂದೂ ಕರೆಯಲಾಗುತ್ತದೆ. ಆಪ್ಟಿಕಲ್ ಡಿಸ್ಕ್‌ಗಳಿಗೆ ಮಾಹಿತಿ ಸೇರಿಸಲು - ಅವುಗಳಲ್ಲಿರುವ ಮಾಹಿತಿಯನ್ನು ಓದಲು ನೆರವಾಗುವ ಸಾಧನಗಳನ್ನು 'ಆಪ್ಟಿಕಲ್ ಡ್ರೈವ್'ಗಳೆಂದು ಕರೆಯುತ್ತಾರೆ. ಕಂಪ್ಯೂಟರಿನಲ್ಲಷ್ಟೇ ಅಲ್ಲ, ಡಿವಿಡಿ-ಬ್ಲೂರೇ ಪ್ಲೇಯರುಗಳಲ್ಲೂ ಇವು ಬಳಕೆಯಾಗುತ್ತವೆ. ಪೆನ್‌ಡ್ರೈವ್‌ನಂತಹ ಫ್ಲ್ಯಾಶ್ ಮೆಮೊರಿ ಆಧರಿತ ಸಾಧನಗಳು, ಎಕ್ಸ್‌ಟರ್ನಲ್ ಹಾರ್ಡ್ ಡಿಸ್ಕ್‌ಗಳು ಹಾಗೂ ಕ್ಲೌಡ್ ಆಧರಿತ ಆನ್‌ಲೈನ್ ಶೇಖರಣಾ ಸೇವೆಗಳ ಜನಪ್ರಿಯತೆ ಹೆಚ್ಚಿದಂತೆ ಆಪ್ಟಿಕಲ್ ಡಿಸ್ಕ್‌ಗಳ ಬಳಕೆ ನಿಧಾನಕ್ಕೆ ಕಡಿಮೆಯಾಗುತ್ತಿದೆ.

RFID
ಆರ್‌ಎಫ್‌ಐಡಿ
(ರೂಪಿಸಬೇಕಿದೆ)
ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್; ಪರಸ್ಪರ ಸಮೀಪದಲ್ಲಿರುವ ಸಂಪರ್ಕ ಸಾಧನಗಳ ನಡುವೆ ರೇಡಿಯೋ ಸಂಕೇತಗಳ ಮೂಲಕ ಮಾಹಿತಿ ವಿನಿಮಯವನ್ನು ಸಾಧ್ಯವಾಗಿಸುವ ವ್ಯವಸ್ಥೆ
ದೊಡ್ಡದೊಡ್ಡ ಅಂಗಡಿಗಳಲ್ಲಿ ಶಾಪಿಂಗ್ ಮುಗಿಸಿ ಹೊರಟಾಗ ಬಿಲ್ಲುಕಟ್ಟೆಯಲ್ಲಿರುವ ವ್ಯಕ್ತಿ ನಾವು ಕೊಂಡ ವಸ್ತುಗಳಿಂದ ಪುಟ್ಟದೊಂದು ಸಾಧನವನ್ನು ಕಿತ್ತುತೆಗೆಯುವುದನ್ನು ನೀವು ನೋಡಿರಬಹುದು. ತೆಗೆಯಲು ಮರೆತು ಹಾಗೆಯೇ ಕೊಟ್ಟಾಗ ನೀವೇನಾದರೂ ಅದನ್ನು ಹೊರಗೆ ಕೊಂಡೊಯ್ಯಲು ಪ್ರಯತ್ನಿಸಿದರೆ ಬಾಗಿಲ ಬಳಿಯ ಸೆನ್ಸರ್ ಅರಚಿಕೊಳ್ಳುವುದರ ಅನುಭವವೂ ಆಗಿರಬಹುದು. ಕಳವಿನ ಚಟವಿರುವ ಅನೇಕರು ಇದರಿಂದಾಗಿಯೇ ಸಿಕ್ಕಿ ಬೀಳುತ್ತಾರೆ. ಇಲ್ಲಿ ಬಳಕೆಯಾಗುವ ತಂತ್ರಜ್ಞಾನವೇ 'ಆರ್‌ಎಫ್‌ಐಡಿ', ಅರ್ಥಾತ್ 'ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್'. ಸಣ್ಣಗಾತ್ರದ ಟ್ಯಾಗ್‌ಗಳು ಹಾಗೂ ಅದರಲ್ಲಿರುವ ಮಾಹಿತಿಯನ್ನು ಓದಬಲ್ಲ ಸೆನ್ಸರುಗಳು ಈ ವ್ಯವಸ್ಥೆಯ ಜೀವಾಳ. ಈ ಆರ್‌ಎಫ್‌ಐಡಿ ಟ್ಯಾಗ್‌ಗಳು ತಮ್ಮಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ರೇಡಿಯೋ ಸಂಕೇತಗಳ ಮೂಲಕ ಬಿತ್ತರಿಸಬಲ್ಲವು. ಅವು ಬಿತ್ತರಿಸುವ ಸಂಕೇತಗಳನ್ನು ಅರ್ಥಮಾಡಿಕೊಳ್ಳುವುದು ಸೆನ್ಸರುಗಳ ಕೆಲಸ. ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ ಅಂಗಡಿಗಳಲ್ಲಿ ಕಳವು ತಡೆಗೆ, ದಾಸ್ತಾನಿನ ಮಾಹಿತಿ ಸಂಗ್ರಹಣೆಗೆ, ಟಿಕೇಟುಗಳ ತಪಾಸಣೆಗೆಲ್ಲ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಬೀಟ್ ಪೋಲೀಸರು ಯಾವೆಲ್ಲ ರಸ್ತೆಗಳಿಗೆ ಭೇಟಿಕೊಟ್ಟಿದ್ದಾರೆ, ಕಸ ಸಂಗ್ರಹಣಾ ವಾಹನಗಳು ಎಲ್ಲೆಲ್ಲಿ ಸಂಚರಿಸಿವೆ ಎನ್ನುವುದನ್ನು ತಿಳಿಯಲಿಕ್ಕೂ ಆರ್‌ಎಫ್‌ಐಡಿ ಬಳಸಿದ ಉದಾಹರಣೆಗಳಿವೆ. ಬಾರ್ ಕೋಡ್‌ನಂತೆ ಇಲ್ಲಿ ನಿರ್ದಿಷ್ಟ ಸಂಕೇತವನ್ನೇ ಸ್ಕ್ಯಾನ್ ಮಾಡುವ ಅಗತ್ಯ ಇಲ್ಲ; ಹಾಗಾಗಿ ಅಂಗಡಿಯಲ್ಲಿ ಕೊಂಡ ವಸ್ತುಗಳನ್ನು ಬುಟ್ಟಿಯಲ್ಲಿದ್ದಂತೆಯೇ ಗುರುತಿಸುವುದು, ಜೇಬಿನಲ್ಲೋ ಪರ್ಸಿನಲ್ಲೋ ಇರುವ ಟಿಕೇಟನ್ನು ಅಲ್ಲಿದ್ದಂತೆಯೇ ಪರಿಶೀಲಿಸುವುದು ಸಾಧ್ಯವಾಗುತ್ತದೆ.


logo