logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Attachment
ಅಟ್ಯಾಚ್‌ಮೆಂಟ್
ಲಗತ್ತು
ಇಮೇಲ್ ಸಂದೇಶದ ಜೊತೆಗೆ ಕಳುಹಿಸುವ ಕಡತ
ಇಮೇಲ್ ಸಂದೇಶದ ಜೊತೆಗೆ ಕಳುಹಿಸುವ ಕಡತ ಅಥವಾ ಕಡತಗಳನ್ನು 'ಅಟ್ಯಾಚ್‌ಮೆಂಟ್' ಎಂದು ಗುರುತಿಸಲಾಗುತ್ತದೆ. ಪಠ್ಯ, ಚಿತ್ರ, ವೀಡಿಯೋ - ಹೀಗೆ ಹಲವು ಬಗೆಯ ಅಟ್ಯಾಚ್‌ಮೆಂಟ್‌ಗಳನ್ನು ಇಮೇಲ್ ಸಂದೇಶದೊಡನೆ ಕಳುಹಿಸುವುದು ಸಾಧ್ಯ. ಇಮೇಲ್ ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ಸೇವೆ ಬಳಸಿ ಎಷ್ಟು ಗಾತ್ರದ ಕಡತಗಳನ್ನು ಕಳುಹಿಸಬಹುದು ಎಂದು ನಿರ್ಧರಿಸುತ್ತವೆ. ಆ ಮಿತಿಗಿಂತ ಹೆಚ್ಚು ಗಾತ್ರದ ಕಡತಗಳನ್ನು ಅಟ್ಯಾಚ್‌ಮೆಂಟ್ ಆಗಿ ಕಳುಹಿಸುವಂತಿಲ್ಲ. ಅವಕಾಶವಿದ್ದಾಗಲೂ ತೀರಾ ದೊಡ್ಡ ಗಾತ್ರದ ಅಟ್ಯಾಚ್‌ಮೆಂಟುಗಳನ್ನು ಕಳುಹಿಸುವುದು ಉತ್ತಮ ಅಭ್ಯಾಸವೇನಲ್ಲ. ಸಾಧ್ಯವಾದ ಕಡೆ ನಾವು ಕಳಿಸಹೊರಟಿರುವ ಕಡತದ ಗಾತ್ರವನ್ನು ಆದಷ್ಟೂ ಕಡಿಮೆಮಾಡುವುದು, ಹೆಚ್ಚು ಸಂಖ್ಯೆಯ ಕಡತಗಳಿದ್ದಾಗ ಅವನ್ನೆಲ್ಲ ಒಟ್ಟುಸೇರಿಸಿ ಜಿಪ್ ಮಾಡುವುದು ಒಳ್ಳೆಯದು. ಅಟ್ಯಾಚ್‌ಮೆಂಟ್ ರೂಪದಲ್ಲಿ ನಾವು ಏನನ್ನು ಕಳುಹಿಸುತ್ತಿದ್ದೇವೆ ಎನ್ನುವುದನ್ನು ಸಂದೇಶದಲ್ಲಿ ಬರೆಯುವುದೂ ಅಪೇಕ್ಷಣೀಯ. ಸಂದೇಶ ಪಡೆದುಕೊಂಡವರು ಅಟ್ಯಾಚ್‌ಮೆಂಟ್ ಅನ್ನು ಸುಲಭಕ್ಕೆ ತೆರೆಯುವಂತಿರಬೇಕಾದ್ದೂ ಅತ್ಯಗತ್ಯ. ಉದಾ: ನುಡಿ ಕಡತ ಕಳಿಸಿದ್ದರೆ ಅದನ್ನು 'ನುಡಿ' ತಂತ್ರಾಂಶ ಇದ್ದವರು ಮಾತ್ರ ತೆರೆದು ನೋಡಬಹುದು. ಇಲ್ಲವಾದರೆ ಬರೀ ಗೋಜಲು ಚಿಹ್ನೆ ಕಾಣುತ್ತವೆ. ಅಂಥ ಸಾಧ್ಯತೆ ಇದ್ದಾಗ ಕಡತವನ್ನು ಪಿಡಿಎಫ್ ಮಾಡಿ ಕಳಿಸಬಹುದು. ಇಮೇಲ್ ಸೇವೆ ಒದಗಿಸುವ ಸಂಸ್ಥೆಗಳು ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಕೆಲವು ಬಗೆಯ ಕಡತಗಳನ್ನು (ಉದಾ: ಪ್ರೋಗ್ರಾಮ್‌ಗಳು) ಅಟ್ಯಾಚ್‌ಮೆಂಟ್ ರೂಪದಲ್ಲಿ ಕಳುಹಿಸದಂತೆ ನಿರ್ಬಂಧಿಸಿರುತ್ತವೆ. ಆದರೂ ಕೂಡ ನಿಮಗೆ ಬಂದ ಯಾವುದೇ ಅಟ್ಯಾಚ್‌ಮೆಂಟ್ ತೆರೆಯುವ ಮುನ್ನ ಅದನ್ನು ಆಂಟಿವೈರಸ್ ಬಳಸಿ ಸ್ಕ್ಯಾನ್ ಮಾಡುವುದು ಒಳ್ಳೆಯದು. ಆನ್‌ಲೈನ್ ನಮೂನೆಗಳೊಡನೆ ಲಗತ್ತಿಸುವ ಕಡತಗಳನ್ನೂ ಅಟ್ಯಾಚ್‌ಮೆಂಟ್‌ಗಳೆಂದು ಗುರುತಿಸುವ ಅಭ್ಯಾಸವಿದೆ. ಇಮೇಲ್ ಸಂದೇಶಕ್ಕಾಗಲೀ ಆನ್‌ಲೈನ್ ನಮೂನೆಗಳಲ್ಲಾಗಲಿ ಹೀಗೆ ಕಡತವನ್ನು ಲಗತ್ತಿಸುವ ಪ್ರಕ್ರಿಯೆಯನ್ನು 'ಅಟ್ಯಾಚ್ ಮಾಡುವುದು' ಎಂದು ಕರೆಯುತ್ತಾರೆ.

Authentication
ಅಥೆಂಟಿಕೇಶನ್
(ರೂಪಿಸಬೇಕಿದೆ)
ನಿರ್ದಿಷ್ಟ ಸೇವೆ ಪಡೆಯಲು ಪ್ರಯತ್ನಿಸುತ್ತಿರುವ ವ್ಯಕ್ತಿ ಅಧಿಕೃತ ಗ್ರಾಹಕನೋ ಅಲ್ಲವೋ ಎಂದು ಗುರುತಿಸಲು ಬಳಕೆಯಾಗುವ ವ್ಯವಸ್ಥೆ
ನಿಮ್ಮ ಆಪ್ತರು ಕಳುಹಿಸಿದ ಇಮೇಲ್ ಸಂದೇಶ ನಿಮಗೆ ಸಿಗುವುದು ಹೇಗೆ? ನೀವು ನಿಮ್ಮ ಇಮೇಲ್ ಖಾತೆಗೆ ಲಾಗಿನ್ ಆಗುತ್ತೀರಿ, ಅಲ್ಲಿ ಆ ಸಂದೇಶ ಓದುತ್ತೀರಿ - ಅಷ್ಟೇ ತಾನೇ? ಈ ಪ್ರಕ್ರಿಯೆಯ ಮೊದಲ ಹಂತ - ಖಾತೆಗೆ ಲಾಗಿನ್ ಆಗುವುದು - ಮೇಲ್ನೋಟಕ್ಕೆ ಸರಳವೆಂದು ತೋರಿದರೂ ಬಹಳ ಕ್ಲಿಷ್ಟವಾದ ಹಂತ. ನಿಮ್ಮ ವಿವರಗಳನ್ನು (ಯೂಸರ್‌ನೇಮ್, ಪಾಸ್‌ವರ್ಡ್ ಇತ್ಯಾದಿ) ಪರಿಶೀಲಿಸುವುದು, ಹೆಸರನ್ನೂ ಪಾಸ್‌ವರ್ಡನ್ನೂ ಹೊಂದಿಸಿ ಸರಿಯಿದೆಯೇ ನೋಡುವುದು, ಪದೇಪದೇ ತಪ್ಪು ವಿವರಗಳನ್ನು ದಾಖಲಿಸಿದಾಗ ಸುರಕ್ಷತೆಯ ದೃಷ್ಟಿಯಿಂದ ಖಾತೆಯನ್ನು ಲಾಕ್ ಮಾಡುವುದು - ಹೀಗೆ ಅನೇಕ ಕೆಲಸಗಳು ಈ ಹಂತದಲ್ಲಿ ನಡೆಯುತ್ತವೆ. ದಾಖಲಿಸಿದ ಪಾಸ್‌ವರ್ಡನ್ನು ರವಾನಿಸುವಾಗ ಅದು ಕುತಂತ್ರಾಂಶಗಳ ಕೈಗೆ ಸಿಕ್ಕದಂತೆ ನೋಡಿಕೊಳ್ಳುವುದೂ ಈ ಹಂತದ ಜವಾಬ್ದಾರಿಗಳಲ್ಲೊಂದು. ಇಮೇಲ್ ಮಾತ್ರವೇ ಅಲ್ಲ, ಸೋಶಿಯಲ್ ನೆಟ್‌ವರ್ಕಿನಲ್ಲಿ, ಆನ್‌ಲೈನ್ ಬ್ಯಾಂಕಿಂಗ್ ತಾಣಗಳಲ್ಲಿ, ಕಚೇರಿಯ ಕಂಪ್ಯೂಟರುಗಳಲ್ಲೂ ಇಂತಹ ವ್ಯವಸ್ಥೆಯನ್ನು ನಾವು ಕಾಣಬಹುದು. ನಿರ್ದಿಷ್ಟ ಸೇವೆ ಪಡೆಯಲು ಪ್ರಯತ್ನಿಸುತ್ತಿರುವ ವ್ಯಕ್ತಿ ಅಧಿಕೃತ ಗ್ರಾಹಕನೋ ಅಲ್ಲವೋ ಎಂದು ಗುರುತಿಸಲು ಬಳಕೆಯಾಗುವ ಈ ವ್ಯವಸ್ಥೆಯನ್ನು 'ಅಥೆಂಟಿಕೇಶನ್' ಅಥವಾ 'ದೃಢೀಕರಣ' ಎಂದು ಕರೆಯುತ್ತಾರೆ. ಹೀಗೆ ದೃಢೀಕರಿಸಲು ಯೂಸರ್‌ನೇಮ್ - ಪಾಸ್‌ವರ್ಡ್‌ಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸ. ಇದರ ಜೊತೆಗೆ ಈ ಉದ್ದೇಶಕ್ಕಾಗಿ ಒನ್‌ಟೈಮ್ ಪಾಸ್‌ವರ್ಡ್ (ಓಟಿಪಿ), ಬಯೋಮೆಟ್ರಿಕ್ ಅಥೆಂಟಿಕೇಶನ್ (ಬೆರಳ ಗುರುತು - ಕಣ್ಣಿನ ಪಾಪೆ ಬಳಸಿ ದೃಢೀಕರಣ) ಮುಂತಾದ ತಂತ್ರಗಳನ್ನೂ ಬಳಸಲಾಗುತ್ತದೆ.

Analytics
ಅನಲಿಟಿಕ್ಸ್
(ರೂಪಿಸಬೇಕಿದೆ)
ದತ್ತಾಂಶದ ಸಂಸ್ಕರಣೆ, ವಿಶ್ಲೇಷಣೆ ಹಾಗೂ ಅರ್ಥೈಸಿಕೊಳ್ಳುವಿಕೆಯ ಪ್ರಕ್ರಿಯೆ
ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಬಳಕೆ ಪ್ರಾರಂಭವಾದ ನಂತರ ನಮ್ಮ ಪ್ರತಿ ಚಟುವಟಿಕೆಯ ಸುತ್ತಲೂ ಭಾರೀ ಪ್ರಮಾಣದ ದತ್ತಾಂಶ (ಡೇಟಾ) ಸೃಷ್ಟಿಯಾಗುತ್ತದೆ. ಮೊಬೈಲ್ ಫೋನ್ ಬಳಕೆಯ ವಿವರ ಇರಬಹುದು, ಬ್ಯಾಂಕಿನ ಜಮಾ-ಖರ್ಚುಗಳಿರಬಹುದು, ಅಂಗಡಿಯಲ್ಲಿ ಖರೀದಿಸಿದ ವಸ್ತುಗಳ ಪಟ್ಟಿಯೇ ಇರಬಹುದು - ನಮ್ಮ ದಿನನಿತ್ಯದ ವ್ಯವಹಾರ ಕುರಿತ ನೂರೆಂಟು ಬಗೆಯ ವಿವರಗಳು ಹೀಗೆ ದತ್ತಾಂಶದ ರೂಪದಲ್ಲಿ ಸಂಗ್ರಹವಾಗುತ್ತವೆ. ಸರಿಯಾಗಿ ಬಳಸಿದ್ದೇ ಆದರೆ ಇಷ್ಟೆಲ್ಲ ದತ್ತಾಂಶ ಬಹಳ ಉಪಯುಕ್ತವಾಗಬಲ್ಲವು. ಕಳೆದ ಆರು ತಿಂಗಳಿನಲ್ಲಿ ನಮ್ಮ ಗ್ರಾಹಕರು ತಲಾ ಎಷ್ಟು ಕರೆಗಳನ್ನು ಮಾಡಿದ್ದಾರೆ ಎಂದು ತಿಳಿಯುವ ಸಂಸ್ಥೆ ಅದರ ಆಧಾರದ ಮೇಲೆ ತನ್ನ ಮುಂದಿನ ಹೆಜ್ಜೆಗಳನ್ನು ರೂಪಿಸಿಕೊಳ್ಳಬಹುದು; ಬ್ಯಾಂಕಿನ ಜಮಾ - ಖರ್ಚುಗಳನ್ನು ತಾಳೆನೋಡಿದ ಆದಾಯ ತೆರಿಗೆ ಇಲಾಖೆ ಅದಕ್ಕೆಲ್ಲ ತೆರಿಗೆ ಪಾವತಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಬಹುದು; ಅಂಗಡಿಯಲ್ಲಿ ಯಾವ ಸಮಯದಲ್ಲಿ ಏನೆಲ್ಲ ಮಾರಾಟವಾಗುತ್ತಿದೆ ಎಂದು ತಿಳಿದುಕೊಳ್ಳುವ ಮಾಲೀಕ ಸಂದರ್ಭಕ್ಕೆ ಸರಿಯಾಗಿ ಆಯಾ ವಸ್ತುಗಳನ್ನು ತರಿಸಿಡಲೂ ಬಹುದು! ಇಷ್ಟೆಲ್ಲ ಆಗಬೇಕೆಂದರೆ ಸಂಬಂಧಪಟ್ಟ ದತ್ತಾಂಶವನ್ನು ಸರಿಯಾಗಿ ಸಂಸ್ಕರಿಸುವುದು, ವಿಶ್ಲೇಷಿಸುವುದು ಹಾಗೂ ಅರ್ಥೈಸಿಕೊಳ್ಳುವುದು ಸಾಧ್ಯವಾಗಬೇಕು. ಇದನ್ನೆಲ್ಲ ಸಾಧ್ಯವಾಗಿಸುವ ತಂತ್ರಗಳನ್ನು ಒಟ್ಟಾರೆಯಾಗಿ 'ಅನಲಿಟಿಕ್ಸ್' ಎಂದು ಗುರುತಿಸಲಾಗುತ್ತದೆ. ಕಂಪ್ಯೂಟರ್ ತಂತ್ರಾಂಶಗಳ ಜೊತೆಗೆ ಸಂಖ್ಯಾವಿಜ್ಞಾನ (ಸ್ಟಾಟಿಸ್ಟಿಕ್ಸ್) ಕೂಡ ಇಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಅನಲಿಟಿಕ್ಸ್‌ನ ಅಂಗವಾಗಿ ದತ್ತಾಂಶವನ್ನು ಸಂಸ್ಕರಿಸಿ ಸಿದ್ಧಪಡಿಸುವ ಮಾಹಿತಿಯನ್ನು ಸಂಸ್ಥೆಗಳ ವ್ಯವಹಾರದ ನಿರ್ಧಾರಗಳಲ್ಲಿ ಬಳಸುವುದು ಸರ್ವೇಸಾಮಾನ್ಯ. ವ್ಯವಹಾರದಲ್ಲಿ ಸದ್ಯ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವುದಷ್ಟೇ ಅಲ್ಲ, ಇಂದಿನ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಮುಂದೆ ಏನು ನಡೆಯಬಹುದು ಎಂದು ಊಹಿಸುವುದು - ಮುಂದೆ ಇಂತಹ ಫಲಿತಾಂಶ ಬೇಕೆಂದರೆ ಏನು ಮಾಡಬೇಕೆಂದು ಸೂಚಿಸುವುದು ಕೂಡ ಅನಲಿಟಿಕ್ಸ್ ಸಹಾಯದಿಂದ ಸಾಧ್ಯವಾಗುತ್ತದೆ.

Unboxed
ಅನ್‌ಬಾಕ್ಸ್‌ಡ್
(ರೂಪಿಸಬೇಕಿದೆ)
ಮೂಲ ಪ್ಯಾಕಿಂಗ್‌ನಲ್ಲಿಲ್ಲ ಎನ್ನುವ ಕಾರಣಕ್ಕಾಗಿ ಕಡಿಮೆ ಬೆಲೆಗೆ ಮಾರಾಟವಾಗುವ ವಿದ್ಯುನ್ಮಾನ ಉಪಕರಣಗಳು
ಹೊಸ ಮಾದರಿ ಮೊಬೈಲ್ ಫೋನುಗಳನ್ನು ಪರಿಚಯಿಸುವ ವೀಡಿಯೋಗಳನ್ನು ನೀವು ಯೂಟ್ಯೂಬ್‌ನಲ್ಲಿ ನೋಡಿರಬಹುದು. ಇಂತಹ ಬಹುತೇಕ ವೀಡಿಯೋಗಳು ಪ್ರಾರಂಭವಾಗುವುದು ಮೊಬೈಲ್ ಇಟ್ಟಿರುವ ಪೆಟ್ಟಿಗೆಯನ್ನು (ಬಾಕ್ಸ್) ತೆರೆದು ಅದರೊಳಗೆ ಏನೆಲ್ಲ ಇದೆ ಎಂದು ಹೇಳುವ ಮೂಲಕ. ಹಾಗಾಗಿಯೇ ಈ ಪರಿಚಯಗಳನ್ನು 'ಅನ್‌ಬಾಕ್ಸಿಂಗ್' ಎಂದೂ ಕರೆಯುತ್ತಾರೆ. ಈ ಪರಿಕಲ್ಪನೆಗೆ ಇನ್ನೊಂದು ಆಯಾಮವೂ ಇದೆ. ಆನ್‌ಲೈನ್ ಅಂಗಡಿಗಳಿಂದ ಮೊಬೈಲ್ ತರಿಸುವ ನಾವು ಮನೆಯಲ್ಲೇ ಅನ್‌ಬಾಕ್ಸ್ ಮಾಡುತ್ತೇವೆ: ಪ್ಲಾಸ್ಟಿಕ್ ಹೊರಕವಚವನ್ನು ಹರಿದು, ಪೆಟ್ಟಿಗೆಯ ಮೇಲಿನ ಸೀಲ್ ಒಡೆದು ಮೊಬೈಲನ್ನು ಹೊರತೆಗೆಯುತ್ತೇವೆ. ಇದರ ನಂತರದಲ್ಲೂ ಮೊಬೈಲನ್ನು ಅಂಗಡಿಗೆ ಮರಳಿಸುವಂತಹ ಸನ್ನಿವೇಶ ಕೆಲವೊಮ್ಮೆ ಎದುರಾಗುತ್ತದೆ. ಅಂಗಡಿಯವರು ಒಪ್ಪಿದರೆ ಅದನ್ನು ಮರಳಿಸಿ ನಾವು ಆರಾಮಾಗಿರುತ್ತೇವೆ. ಆದರೆ ಹಾಗೆ ಮರಳಿಸಿದ ಫೋನನ್ನು ಅಂಗಡಿಯವರು ಮತ್ತೆ ಇನ್ನೊಬ್ಬರಿಗೆ ಮಾರುವುದು ಕಷ್ಟ - ತಾವು ಕೊಳ್ಳುವ ಫೋನಿನ ಪೆಟ್ಟಿಗೆ ಸೀಲ್ ಆಗಿರಬೇಕು ಎಂದು ಗ್ರಾಹಕರು ನಿರೀಕ್ಷಿಸುತ್ತಾರಲ್ಲ! ಇಂತಹ ಫೋನುಗಳನ್ನು 'ಅನ್‌ಬಾಕ್ಸ್‌ಡ್' ಫೋನುಗಳೆಂಬ ಹಣೆಪಟ್ಟಿಯೊಡನೆ ಹಲವು ಆನ್‌ಲೈನ್ ಅಂಗಡಿಗಳಲ್ಲಿ ಮಾರಲಾಗುತ್ತದೆ. ಫೋನು ಹೊಸದೇ, ಪೆಟ್ಟಿಗೆಯಲ್ಲಿರಬೇಕಾದ ಇತರ ವಸ್ತುಗಳೂ ಫೋನಿನ ಜೊತೆಗಿರುತ್ತವೆ; ಆದರೆ ಪೆಟ್ಟಿಗೆ ಸೀಲ್ ಆಗಿಲ್ಲದ ಕಾರಣದಿಂದ ಅದರ ಬೆಲೆ ಮಾತ್ರ ಮೂಲ ಬೆಲೆಗಿಂತ ಕೊಂಚ ಕಡಿಮೆಯಿರುತ್ತದೆ. ವಾರಂಟಿಯೂ ಇರುತ್ತದಾದರೂ ಹೊಸ ಫೋನುಗಳ ಹೋಲಿಕೆಯಲ್ಲಿ ವಾರಂಟಿ ಅವಧಿ ಕೊಂಚ ಕಡಿಮೆ ಇರಬಹುದು.

Unmount
ಅನ್‌ಮೌಂಟ್
(ರೂಪಿಸಬೇಕಿದೆ)
ಮಾಹಿತಿ ಸಂಗ್ರಹಣೆ ಹಾಗೂ ವರ್ಗಾವಣೆಗಾಗಿ ಬಳಸಿದ ಪೆನ್ ಡ್ರೈವ್‌ನಂತಹ ಸಾಧನವನ್ನು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನಿನಿಂದ ಬೇರ್ಪಡಿಸುವ ಸರಿಯಾದ ಕ್ರಮ
ಡಿಜಿಟಲ್ ರೂಪದ ಮಾಹಿತಿಯನ್ನು ಶೇಖರಿಸಲು, ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಲು ಮೆಮೊರಿ ಕಾರ್ಡ್, ಪೆನ್ ಡ್ರೈವ್ ಮುಂತಾದ ಫ್ಲಾಶ್ ಮೆಮೊರಿ ಆಧಾರಿತ ಸಾಧನಗಳನ್ನು ಬಳಸುವ ಅಭ್ಯಾಸ ಬಹಳ ಸಾಮಾನ್ಯ. ಈ ಸಾಧನಗಳನ್ನು ಕಂಪ್ಯೂಟರಿಗೋ ಸ್ಮಾರ್ಟ್‌ಫೋನಿಗೋ ಸಂಪರ್ಕಿಸುವ ಪ್ರಕ್ರಿಯೆಯನ್ನು 'ಮೌಂಟ್ ಮಾಡುವುದು' ಎಂದು ಕರೆಯುತ್ತಾರೆ. ಈ ಪ್ರಕ್ರಿಯೆಯ ಮೂಲಕ ನಿರ್ದಿಷ್ಟ ಸಾಧನದಲ್ಲಿ ಏನಿದೆ ಎಂದು ತಿಳಿದುಕೊಳ್ಳುವುದು, ಅದರಿಂದ/ಅದಕ್ಕೆ ಮಾಹಿತಿ ವರ್ಗಾವಣೆ ಮಾಡುವುದು ಕಂಪ್ಯೂಟರಿಗೆ (ಅಥವಾ ಸ್ಮಾರ್ಟ್‌ಫೋನಿಗೆ) ಸಾಧ್ಯವಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಮೆಮೊರಿ ಕಾರ್ಡ್ - ಪೆನ್‌ಡ್ರೈವ್‌ಗಳನ್ನು ಜೋಡಿಸಿದ ಕೂಡಲೇ ಈ ಕೆಲಸ ಸ್ವಯಂಚಾಲಿತವಾಗಿ ನಡೆಯುತ್ತದೆ. ಆದರೆ ಈ ಸಾಧನಗಳ ಸಂಪರ್ಕ ತಪ್ಪಿಸುವುದು ಪ್ರತ್ಯೇಕವಾಗಿ ಮಾಡಬೇಕಾದ ಕೆಲಸ. ಮಾಹಿತಿ ವರ್ಗಾವಣೆಯಾಗುತ್ತಿರುವಾಗ ಕಂಪ್ಯೂಟರ್ ಜೊತೆಗಿನ ಸಂಪರ್ಕ ಇದ್ದಕ್ಕಿದ್ದಂತೆ ತಪ್ಪಿಹೋದರೆ ಮಾಹಿತಿ ನಷ್ಟವಾಗುವ ('ಕರಪ್ಟ್' ಆಗುವ) ಇಲ್ಲವೇ ಮೆಮೊರಿ ಕಾರ್ಡ್ - ಪೆನ್‌ಡ್ರೈವ್‌ಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಈ ಸಾಧ್ಯತೆಯನ್ನು ತಪ್ಪಿಸಲು ಅವನ್ನು 'ಅನ್‌ಮೌಂಟ್' ಮಾಡಬೇಕಾದ್ದು (ಹಾಗೂ ಅನ್‌ಮೌಂಟ್ ಮಾಡಿದ್ದಾಯಿತು ಎಂಬ ಸಂದೇಶ ದೊರೆತ ನಂತರವೇ ಅವನ್ನು ಹೊರತೆಗೆಯಬೇಕಾದ್ದು) ಅತ್ಯಗತ್ಯ. ನಮ್ಮ ಕೆಲಸ ಮುಗಿಯಿತು, ಈಗ ಮಾಹಿತಿ ವರ್ಗಾವಣೆಯನ್ನು ನಿಲ್ಲಿಸಬಹುದು ಎಂದು ಕಂಪ್ಯೂಟರಿಗೆ ಅಥವಾ ಸ್ಮಾರ್ಟ್‌ಫೋನಿಗೆ ತಿಳಿಸುವ ಕ್ರಮ ಇದು. ವಿಂಡೋಸ್ ಬಳಸುವ ಕಂಪ್ಯೂಟರುಗಳಲ್ಲಿ ಪರದೆಯ ಕೆಳಭಾಗದ ಬಲತುದಿಯಲ್ಲಿ (ಗಡಿಯಾರದ ಪಕ್ಕ) ಕಾಣುವ ಪೆನ್‌ಡ್ರೈವ್ ಚಿಹ್ನೆಯ ಮೇಲೆ - ಅಥವಾ ಮೈ ಕಂಪ್ಯೂಟರ್‌ನಲ್ಲಿ ನಮ್ಮ ಪೆನ್‌ಡ್ರೈವ್ ಹೆಸರಿನ ಮೇಲೆ - ರೈಟ್ ಕ್ಲಿಕ್ ಮಾಡಿ ಅನ್‌ಮೌಂಟ್ ಮಾಡುವುದು ಸಾಧ್ಯ (ಇದನ್ನು ಎಜೆಕ್ಟ್ ಎಂದೂ ಕರೆಯುತ್ತಾರೆ). ಎಸ್‌ಡಿ ಕಾರ್ಡ್ ಬಳಸಬಹುದಾದ ಅಥವಾ ಓಟಿಜಿ ಸೌಲಭ್ಯವಿರುವ ಆಂಡ್ರಾಯ್ಡ್ ಫೋನುಗಳಲ್ಲಿ 'ಸೆಟಿಂಗ್ಸ್ - ಸ್ಟೋರೇಜ್ ಆಂಡ್ ಯುಎಸ್‌ಬಿ' ಆಯ್ಕೆ ಬಳಸಿ ಅನ್‌ಮೌಂಟ್ ಮಾಡುವುದು ಸಾಧ್ಯ.

Application Software
ಅಪ್ಲಿಕೇಶನ್ ಸಾಫ್ಟ್‌ವೇರ್
ಆನ್ವಯಿಕ ತಂತ್ರಾಂಶ
ಬಳಕೆದಾರನ ನಿರ್ದಿಷ್ಟ ಉದ್ದೇಶವನ್ನು ಪೂರೈಸಿಕೊಳ್ಳಲು ನೆರವಾಗುವ ತಂತ್ರಾಂಶ
ಮೊಬೈಲ್ ಫೋನ್, ಕಂಪ್ಯೂಟರ್ ಮುಂತಾದ ಸಾಧನಗಳಿಗೆಲ್ಲ ಪಾಠಹೇಳುವ ಕೆಲಸ ಸಾಫ್ಟ್‌ವೇರ್, ಅಂದರೆ ತಂತ್ರಾಂಶದ್ದು. ತಂತ್ರಾಂಶಗಳು ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತವೆ ಎನ್ನುವುದರ ಆಧಾರದ ಮೇಲೆ ಅವನ್ನು ಬೇರೆಬೇರೆ ಗುಂಪುಗಳಲ್ಲಿ ವರ್ಗೀಕರಿಸುತ್ತಾರೆ. ಆನ್ವಯಿಕ ಹಾಗೂ ವ್ಯವಸ್ಥಾ ತಂತ್ರಾಂಶಗಳು ಇಂತಹ ಗುಂಪುಗಳಿಗೆ ಎರಡು ಉದಾಹರಣೆ. ಬಳಕೆದಾರನ ನಿರ್ದಿಷ್ಟ ಉದ್ದೇಶವನ್ನು (ಉದಾ: ಪತ್ರ ಟೈಪ್ ಮಾಡುವುದು, ಲೆಕ್ಕಾಚಾರವನ್ನು ದಾಖಲಿಸಿಕೊಳ್ಳುವುದು ಇತ್ಯಾದಿ) ಪೂರೈಸಿಕೊಳ್ಳಲು ನೆರವಾಗುವ ತಂತ್ರಾಂಶಗಳನ್ನು ಅಪ್ಲಿಕೇಶನ್ ಸಾಫ್ಟ್‌ವೇರ್, ಅಂದರೆ ಆನ್ವಯಿಕ ತಂತ್ರಾಂಶಗಳೆಂದು ಕರೆಯುತ್ತಾರೆ. ಪದಸಂಸ್ಕರಣೆ, ಲೆಕ್ಕಾಚಾರ, ಸ್ಲೈಡ್ ಪ್ರೆಸೆಂಟೇಶನ್‌ಗಳಲ್ಲೆಲ್ಲ ನೆರವಾಗುವ ತಂತ್ರಾಂಶಗಳು (ಹಾಗೂ ಮೊಬೈಲ್ ಆಪ್‌ಗಳು) ಆನ್ವಯಿಕ ತಂತ್ರಾಂಶಗಳೇ. ಆನ್ವಯಿಕ ತಂತ್ರಾಂಶಗಳು ಕೆಲಸಮಾಡಲು ನೆರವಾಗುವ ಆಪರೇಟಿಂಗ್ ಸಿಸ್ಟಂನಂತಹ ತಂತ್ರಾಂಶಗಳಿಗೆ ಸಿಸ್ಟಂ ಸಾಫ್ಟ್‌ವೇರ್, ಅಂದರೆ ವ್ಯವಸ್ಥಾ ತಂತ್ರಾಂಶಗಳೆಂದು ಹೆಸರು. ಆನ್ವಯಿಕ ತಂತ್ರಾಂಶಗಳಂತೆ ಯಾವುದೋ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಾವು ಇವನ್ನು ಬಳಸುವುದಿಲ್ಲ, ನಿಜ. ಆದರೆ ಆನ್ವಯಿಕ ತಂತ್ರಾಂಶಗಳು ಸರಿಯಾಗಿ ಕೆಲಸಮಾಡಲು ವ್ಯವಸ್ಥಾ ತಂತ್ರಾಂಶಗಳ ಬೆಂಬಲ ಅತ್ಯಗತ್ಯ.

Upload
ಅಪ್‌ಲೋಡ್
(ರೂಪಿಸಬೇಕಿದೆ)
ವಿಶ್ವವ್ಯಾಪಿ ಜಾಲಕ್ಕೆ ಮಾಹಿತಿಯನ್ನು ಸೇರಿಸುವ ಪ್ರಕ್ರಿಯೆ
ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ನಾವು ಪ್ರತಿ ಕ್ಷಣವೂ ಒಂದಲ್ಲ ಒಂದು ರೀತಿಯಲ್ಲಿ ಮಾಹಿತಿಯನ್ನು ಬಳಸುತ್ತೇವೆ. ಬಹಳಷ್ಟು ಸಾರಿ ಇತರೆಡೆಗಳಿಂದ ಮಾಹಿತಿ ಪಡೆದುಕೊಂಡರೆ ಇನ್ನು ಕೆಲವೊಮ್ಮೆ ನಾವೇ ಮಾಹಿತಿಯನ್ನು ಇನ್ನೊಂದೆಡೆಗೆ ರವಾನಿಸುತ್ತೇವೆ. ಈ ಪೈಕಿ ಇತರೆಡೆಗಳಿಂದ ಮಾಹಿತಿ ಪಡೆದುಕೊಳ್ಳುವ ಪ್ರಕ್ರಿಯೆ 'ಡೌನ್‌ಲೋಡ್' ಎಂದು ಕರೆಸಿಕೊಂಡರೆ ನಮ್ಮಲ್ಲಿರುವ ಮಾಹಿತಿಯನ್ನು ಜಾಲಕ್ಕೆ ಸೇರಿಸುವ ಕೆಲಸವನ್ನು 'ಅಪ್‌ಲೋಡ್' ಎಂದು ಗುರುತಿಸಲಾಗುತ್ತದೆ. ಡೌನ್‌ಲೋಡ್ ಪ್ರಕ್ರಿಯೆಯಲ್ಲಿ ಬೇರೊಂದು ಕಡೆಯಲ್ಲಿರುವ ಮಾಹಿತಿಯ ಒಂದು ಪ್ರತಿ ನಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ಟಿಗೆ ಬರುತ್ತದೆ. ಇದೇರೀತಿ ನಮ್ಮ ಮಾಹಿತಿಯ ಒಂದು ಪ್ರತಿಯನ್ನು ಬೇರೊಂದು ಕಂಪ್ಯೂಟರಿಗೆ ವರ್ಗಾಯಿಸುವುದು ಅಪ್‌ಲೋಡ್ ಪ್ರಕ್ರಿಯೆಯ ಕೆಲಸ. ಡೌನ್‌ಲೋಡ್‌ನಲ್ಲಿ ಹಲವು ವಿಧಗಳಿವೆ. ಯಾವುದೋ ಜಾಲತಾಣದಿಂದ ನಿರ್ದಿಷ್ಟ ಕಡತವನ್ನು (ತಂತ್ರಾಂಶ, ಅರ್ಜಿ ನಮೂನೆ, ಹಾಡು-ವೀಡಿಯೋ ಇತ್ಯಾದಿ) ನಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳುವ ಕೆಲಸವನ್ನಷ್ಟೇ ನಾವು ಡೌನ್‌ಲೋಡ್ ಎಂದು ಕರೆಯುತ್ತೇವೆ ನಿಜ. ಆದರೆ ಜಾಲತಾಣಗಳನ್ನು ವೀಕ್ಷಿಸುವಾಗ ಚಿತ್ರಗಳು - ಪಠ್ಯಗಳೆಲ್ಲ ನಮ್ಮ ಕಂಪ್ಯೂಟರಿಗೆ ಬರುತ್ತವಲ್ಲ, ಅದೂ ಡೌನ್‌ಲೋಡ್ ಎಂದೇ ಪರಿಗಣಿಸಲ್ಪಡುತ್ತದೆ. ನಮ್ಮ ಕಡತವನ್ನು ಇತರರೊಡನೆ ಹಂಚಿಕೊಳ್ಳಲು ಗೂಗಲ್ ಡ್ರೈವ್‌ನಂತಹ ಜಾಲತಾಣಕ್ಕೆ ಸೇರಿಸುವುದು, ನಮ್ಮ ಜಾಲತಾಣದಲ್ಲಿರಬೇಕಾದ ಮಾಹಿತಿಯನ್ನು ತಾಣದ ಸರ್ವರ್‌ಗೆ ಏರಿಸುವುದು, ಇಮೇಲ್ ಸಂದೇಶದೊಡನೆ ಅಟ್ಯಾಚ್‌ಮೆಂಟ್ ಕಳುಹಿಸುವುದು - ಇವೆಲ್ಲ ಅಪ್‌ಲೋಡ್‌ಗೆ ಉದಾಹರಣೆಗಳು.

Affiliate
ಅಫಿಲಿಯೇಟ್
(ರೂಪಿಸಬೇಕಿದೆ)
ದೊಡ್ಡ ಸಂಸ್ಥೆಯೊಂದರ ಪರವಾಗಿ ಕಾರ್ಯನಿರ್ವಹಿಸುವ, ಅವರ ಉತ್ಪನ್ನಗಳಿಗೆ ಪ್ರಚಾರ ನೀಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ
ಅಂತರಜಾಲದ ಮೂಲಕ ವ್ಯವಹರಿಸುವ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಹಲವು ವಿಧಾನಗಳನ್ನು ಬಳಸುತ್ತವೆ. ದೂರದರ್ಶನದಲ್ಲಿ - ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಈ ಪೈಕಿ ಒಂದು ವಿಧಾನವಾದರೆ ಸಂಭಾವ್ಯ ಗ್ರಾಹಕರ ಗುಂಪುಗಳನ್ನು ನೇರವಾಗಿ ತಲುಪಲು ಪ್ರಯತ್ನಿಸುವುದು ಇನ್ನೊಂದು ವಿಧಾನ. ಗ್ರಾಹಕರನ್ನು ನೇರವಾಗಿ ತಲುಪುವ ಪ್ರಯತ್ನದ ಒಂದು ರೂಪವೇ ಅಫಿಲಿಯೇಟ್ ಮಾರ್ಕೆಟಿಂಗ್. ದೊಡ್ಡ ಸಂಸ್ಥೆಯೊಂದರ ಪರವಾಗಿ ಕಾರ್ಯನಿರ್ವಹಿಸುವ, ಅವರ ಉತ್ಪನ್ನಗಳಿಗೆ ಪ್ರಚಾರ ನೀಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಅಫಿಲಿಯೇಟ್ ಎಂದು ಗುರುತಿಸಲಾಗುತ್ತದೆ. ಅಫಿಲಿಯೇಟ್ ಮಾರ್ಕೆಟಿಂಗ್ ತಂತ್ರ ಬಳಸುವ ಸಂಸ್ಥೆಗಳು ತಮ್ಮ ಉತ್ಪನ್ನದ ಪ್ರಚಾರದಲ್ಲಿ ಇಂತಹ ಅಫಿಲಿಯೇಟ್‌ಗಳ ನೆರವು ಪಡೆದುಕೊಳ್ಳುತ್ತವೆ. ಈ ಅಫಿಲಿಯೇಟ್‌ಗಳು ತಮ್ಮ ಬ್ಲಾಗ್, ಜಾಲತಾಣ ಅಥವಾ ಇನ್ನಾವುದೇ ಪ್ರಕಟಣೆಯ ಮೂಲಕ ಸಂಸ್ಥೆಯ ಉತ್ಪನ್ನಗಳಿಗೆ ಪ್ರಚಾರ ದೊರಕಿಸಿಕೊಡುತ್ತಾರೆ, ಆ ಕೆಲಸಕ್ಕಾಗಿ ಒಂದಷ್ಟು ಪ್ರತಿಫಲವನ್ನೂ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಪ್ರತಿಫಲ ತಮ್ಮಿಂದಾಗಿ ಸಂಸ್ಥೆಗೆ ದೊರೆತ ವ್ಯಾಪಾರದ ಒಂದು ಭಾಗವಾಗಿರುತ್ತದೆ (ಕಮೀಶನ್). ಈ ಮೊತ್ತವನ್ನು ಸಂಸ್ಥೆಗಳು ಹಣದ ರೂಪದಲ್ಲೋ, ತಮ್ಮದೇ ತಾಣದಲ್ಲಿ ಬಳಸಬಹುದಾದ ಗಿಫ್ಟ್ ಕೂಪನ್‌ಗಳ ರೂಪದಲ್ಲೋ ನೀಡುತ್ತವೆ. ಯಾವ ಅಫಿಲಿಯೇಟ್ ಮೂಲಕ ಎಷ್ಟು ವ್ಯಾಪಾರ ಸಿಕ್ಕಿದೆ ಎನ್ನುವುದು ಸಂಸ್ಥೆಗಳಿಗೆ ಗೊತ್ತಾಗಬೇಕಲ್ಲ, ಅದಕ್ಕಾಗಿ ಅವು ಪ್ರತಿ ಅಫಿಲಿಯೇಟ್‌ಗೂ ಪ್ರತ್ಯೇಕ ಕೊಂಡಿಗಳನ್ನು (ಲಿಂಕ್) ನೀಡಿರುತ್ತವೆ. ಇವಕ್ಕೆ ಅಫಿಲಿಯೇಟ್ ಲಿಂಕ್ ಎಂದು ಹೆಸರು. ಗ್ರಾಹಕರು ಅಂತಹ ಕೊಂಡಿಗಳ ಮೂಲಕ ಸಂಸ್ಥೆಯ ಜಾಲತಾಣಕ್ಕೆ ಹೋದಾಗ ಅವರು ಯಾವ ಅಫಿಲಿಯೇಟ್ ಮೂಲಕ ಇತ್ತ ಬಂದಿದ್ದಾರೆ ಎನ್ನುವುದು ಸಂಸ್ಥೆಗೆ ಗೊತ್ತಾಗುತ್ತದೆ, ಆ ಗ್ರಾಹಕರು ಮಾಡಬಹುದಾದ ಖರೀದಿಗೆ ಕಮೀಶನ್ ನೀಡುವುದೂ ಸುಲಭವಾಗುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಹಲವು ದೊಡ್ಡ ಆನ್‌ಲೈನ್ ಅಂಗಡಿಗಳು ನಮ್ಮ ದೇಶದಲ್ಲೂ ಅಫಿಲಿಯೇಟ್ ಮಾರ್ಕೆಟಿಂಗ್ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಇಂತಹ ಪ್ರತಿ ಕಾರ್ಯಕ್ರಮದ ನಿಯಮ-ನಿಬಂಧನೆಗಳು ಬೇರೆಬೇರೆಯಾಗಿರುವುದರಿಂದ ಹೆಚ್ಚಿನ ವಿವರಗಳಿಗೆ ಆಯಾ ಅಫಿಲಿಯೇಟ್ ಕಾರ್ಯಕ್ರಮದ ಜಾಲತಾಣಕ್ಕೆ ಭೇಟಿನೀಡುವುದೇ ಸೂಕ್ತ (ಅಂತಹ ತಾಣಗಳ ವಿವರವನ್ನು ಗೂಗಲ್ ಮೂಲಕ ಪಡೆಯಬಹುದು).

Antivirus
ಆಂಟಿವೈರಸ್
(ರೂಪಿಸಬೇಕಿದೆ)
ಕುತಂತ್ರಾಂಶಗಳ (ಮಾಲ್‌ವೇರ್) ಕಾಟದಿಂದ ಪಾರಾಗಲು ನೆರವಾಗುವ ತಂತ್ರಾಂಶ
ನಮ್ಮ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳನ್ನೆಲ್ಲ ಕಾಡುವ ಕುತಂತ್ರಾಂಶಗಳಿಂದ (ಮಾಲ್‌ವೇರ್) ಪಾರಾಗಲು ನೆರವಾಗುವ ತಂತ್ರಾಂಶವೇ ಆಂಟಿವೈರಸ್. ಕುತಂತ್ರಾಂಶಗಳನ್ನು ಗುರುತಿಸಿ ಅವು ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿಗೆ ಏನೂ ತೊಂದರೆಮಾಡದಂತೆ ತಡೆಯುವುದು ಈ ತಂತ್ರಾಂಶದ ಕೆಲಸ. ಆಂಟಿವೈರಸ್‌ಗಳ ಕೆಲಸ ನಡೆಯುವುದು ಕುತಂತ್ರಾಂಶಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ದತ್ತಸಂಚಯವನ್ನು (ಡೇಟಾಬೇಸ್) ಆಧರಿಸಿಕೊಂಡು. ವೈರಸ್ ವಿರೋಧಿ ತಂತ್ರಾಂಶ ರೂಪಿಸುವ ಸಂಸ್ಥೆಗಳು ಯಾವೆಲ್ಲ ಕುತಂತ್ರಾಂಶಗಳನ್ನು ಪತ್ತೆಮಾಡಿರುತ್ತವೆಯೋ ಅವೆಲ್ಲವುಗಳ 'ಸಿಗ್ನೇಚರ್', ಅರ್ಥಾತ್ ಗುಣಲಕ್ಷಣಗಳನ್ನು ಇಂತಹ ದತ್ತಸಂಚಯಗಳಲ್ಲಿ ಸಂಗ್ರಹಿಸಲಾಗಿರುತ್ತದೆ. ಹೊಸಹೊಸ ಕುತಂತ್ರಾಂಶಗಳು ಪತ್ತೆಯಾದಂತೆಲ್ಲ ಅವುಗಳ ಬಗೆಗಿನ ಮಾಹಿತಿ ಈ ದತ್ತಸಂಚಯವನ್ನು ಸೇರಿಕೊಳ್ಳುತ್ತದೆ (ನಿರ್ದಿಷ್ಟ ಪರೀಕ್ಷೆಗಳ ಮೂಲಕ ಹೊಸ ಕುತಂತ್ರಾಂಶಗಳನ್ನು ತಡೆಯುವ ಚಾಕಚಕ್ಯತೆಯೂ ಹಲವು ಆಂಟಿವೈರಸ್‌ಗಳಲ್ಲಿರುತ್ತದೆ). ಆಂಟಿವೈರಸ್ ತಂತ್ರಾಂಶಗಳನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು ಎನ್ನುವುದು ಇದೇ ಕಾರಣಕ್ಕಾಗಿ. ಹೀಗೆ ಮಾಡುವುದರಿಂದ ಹೊಸ ಕುತಂತ್ರಾಂಶಗಳ ಬಗೆಗಿನ ಮಾಹಿತಿ ನಮ್ಮ ಕಂಪ್ಯೂಟರ್‌ನಲ್ಲಿರುವ ವೈರಸ್ ವಿರೋಧಿ ತಂತ್ರಾಂಶಕ್ಕೂ ಸಿಗುವಂತೆ ಮಾಡಬಹುದು. ಇದರಿಂದಾಗಿ ನಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಸಾಧ್ಯ. ಅಷ್ಟೇ ಅಲ್ಲ, ನಮ್ಮ ಕಂಪ್ಯೂಟರ್‌ನಿಂದ ಕುತಂತ್ರಾಂಶಗಳು ಇತರೆಡೆಗೂ ಹರಡಿ ಬೇರೆಯವರಿಗೆ ತೊಂದರೆಯಾಗುವುದನ್ನು ಕೂಡ ತಪ್ಪಿಸಬಹುದು.

Augmented Reality
ಆಗ್‌ಮೆಂಟೆಡ್ ರಿಯಾಲಿಟಿ
ಅತಿವಾಸ್ತವ
ವಾಸ್ತವ ಸಂಗತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸುವುದು. ಕಣ್ಣಮುಂದಿನ ನೈಜ ದೃಶ್ಯಕ್ಕೆ ಪೂರಕವಾದ ಛಾಯಾವಾಸ್ತವ (ವರ್ಚುಯಲ್) ಮಾಹಿತಿಯನ್ನು ಪ್ರದರ್ಶಿಸಲು ಅನುವುಮಾಡಿಕೊಡುವ ತಂತ್ರಜ್ಞಾನ
ನಮ್ಮ ಕಣ್ಣಮುಂದಿನ ದೃಶ್ಯವನ್ನು ಗಮನಿಸಿಕೊಂಡು ಅದಕ್ಕೆ ಪೂರಕವಾದ ಮಾಹಿತಿಯನ್ನು ಒದಗಿಸುವ ತಂತ್ರಜ್ಞಾನವನ್ನು 'ಆಗ್‌ಮೆಂಟೆಡ್ ರಿಯಾಲಿಟಿ' (ಎಆರ್) ಎಂದು ಕರೆಯುತ್ತಾರೆ. ಮೊಬೈಲ್ ಫೋನ್, ಸ್ಮಾರ್ಟ್ ಕನ್ನಡಕ ಮುಂತಾದ ಹಲವು ಸಾಧನಗಳ ಮೂಲಕ ನಮ್ಮನ್ನು ತಲುಪಬಲ್ಲ ಈ ಮಾಹಿತಿ ಚಿತ್ರ, ಧ್ವನಿ ಅಥವಾ ಪಠ್ಯ - ಯಾವ ರೂಪದಲ್ಲಾದರೂ ಇರಬಹುದು. ಒಟ್ಟಾರೆಯಾಗಿ ತಂತ್ರಜ್ಞಾನದ ಮೂಲಕ ಲಭ್ಯವಾಗುವ ಮಾಹಿತಿಗೂ ನಮ್ಮ ಕಣ್ಣಿಗೆ ಕಾಣುವ ವಾಸ್ತವ ಜಗತ್ತಿಗೂ ನಡುವೆ ವ್ಯತ್ಯಾಸವೇ ಇಲ್ಲವೇನೋ ಎನ್ನುವಂತಹ ಭಾವನೆ ಮೂಡಿಸುವುದು ಈ ತಂತ್ರಜ್ಞಾನದ ಮುಖ್ಯ ಉದ್ದೇಶ. ಶಿಕ್ಷಣ, ವೈದ್ಯಕೀಯ, ಪುರಾತತ್ವ ವಿಜ್ಞಾನ, ಪ್ರವಾಸೋದ್ಯಮ, ಗೃಹನಿರ್ಮಾಣ ವಿಜ್ಞಾನ, ಯಂತ್ರೋಪಕರಣ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವುದು ಸಾಧ್ಯ ಎಂದು ತಜ್ಞರು ಹೇಳುತ್ತಾರೆ. ಭಾರತವೂ ಸೇರಿದಂತೆ ಹಲವು ದೇಶಗಳ ಪತ್ರಿಕೆಗಳಲ್ಲಿ - ಜಾಹೀರಾತುಗಳಲ್ಲಿ ಈ ತಂತ್ರಜ್ಞಾನ ಈಗಾಗಲೇ ಬಳಕೆಯಾಗುತ್ತಿದೆ. ನಿರ್ದಿಷ್ಟ ಚಿತ್ರವನ್ನು ಮೊಬೈಲ್ ಕ್ಯಾಮೆರಾ ಬಳಸಿ ಸ್ಕ್ಯಾನ್ ಮಾಡಿದಾಗ ಅಲ್ಲಿ ಛಾಯಾಚಿತ್ರದ ಬದಲು ವೀಡಿಯೋ ಕಾಣಿಸಿಕೊಳ್ಳುವುದು ಈ ತಂತ್ರಜ್ಞಾನ ಬಳಕೆಯಾಗುವ ಬಗೆಯ ಉದಾಹರಣೆಗಳಲ್ಲೊಂದು.


logo