logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಚ್ಚಸಿರಿಕಂಡ
[ನಾ] ಅಚ್ಚ ಶ್ರೀಗಂಧ (ಅಗರುವ ಮೆಚ್ಚು ಅಚ್ಚ ಸಿರಿಕಂಡದೊಳ್ ಅಗ್ಗಲಿಸಿತ್ತು ಸೂಡುಶಯ್ಯೆಗಳ ಬಯಕ್ಕೆ ಜೊಂಪಲರ್ದವು: ಪಂಪಭಾ, ೫. ೩೦)

ಅಚ್ಚಿಗ
[ನಾ] ಭ್ರಾಂತಿ, ಗೊಂದಲ (ನೀನೆಱಗಿದೆ ಎನ್ನ ಪಕ್ಕದೆ ಪೆಱಳ್ಗೆನೆ ಬೆರ್ಚಿ ಲತಾಂಗಿಗಾಗಳಾನೆಱಗಿದೆಂ ಆದುದಾ ಲತೆಯಿಂ ಅಚ್ಚಿಗಮಿಂತೆನಗಂ ಲತಾಂಗಿಗಂ: ಆದಿಪು, ೪. ೧೩); [ನಾ] ದುಃಖ (ನಲ್ಲಳಗಲ್ಕೆಯಿಂದಂ ಆದ ಅದವೞಲಚ್ಚಿಗಂ ಮಱುಕಮೆಂಬಿವಱಿಂದೆ ಕನಲ್ದು ಮುನ್ನೆ ಬೇಟದ ಸವಿಗಂಡನಲ್ಲದಱಿಯಂ ಶ್ರಮಮಂ ಕಡುವೇಟಕಾಱರಾ: ಆದಿಪು, ೧೨. ೨೨); [ನಾ] ಗಾಬರಿ (ನೆಗೞ್ದೆನ್ನ ಗುಣಮಲಂಘ್ಯಂ ಜಗದೊಳದಂ ಕಿಡಿಸಿದಪ್ಪನೀ ನೃಪನೆಂದು ಅಚ್ಚಿಗದೊಳೆ ಪುಯ್ಯಲಿಪಂತೆವೊಲ್ ಒಗೆದುದು ಚಳದನಿಲಹತ ಪಯೋಧಿನಾದಂ: ಆದಿಪು, ೧೨. ೭೬)

ಅಚ್ಚಿಗಂಗೊಳ್
[ಕ್ರಿ] ತುಂಬ ದುಃಖಪಡು (ಅಚಳಿತಧೈರ್ಯನ ಮನಮಂ ಚಳಿಯಿಸಲಾಱದೆ ಅಚ್ಚರಸೆಯರ್ ಅಚ್ಚಿಗಂಗೊಂಡಂತಾಗೆಯುಂ: ಪಂಪಭಾ, ೭. ೯೪ ವ)

ಅಚ್ಚಿಱಿ
[ಕ್ರಿ] ಮುದ್ರೆಯೊತ್ತು (ಅಂದಿನ ರೂಪು ಶಾಸನಂ ಬರೆದುದು ಬರ್ಚಿಸಿತ್ತು ಅಮರ್ದುದು ಅೞ್ದುದು ಅಳಂಕಿದುದು ಉರ್ಚಿ ಪೊಕ್ಕು ಬೇರ್ವರಿದುದು ಬೆಚ್ಚುದು ಅಚ್ಚಿಱಿದುದು: ಆದಿಪು, ೩. ೪೩); [ಕ್ರಿ] ಎರಕವಾಗು (ಆತ್ಮಾಂಗದೊಳ್ ರೋಹಿಣೀಚರಣಾಲಕ್ತಕಂ ಅಚ್ಚಿಱಿದುದು: ಪಂಪಭಾ, ೪. ೫೦); [ಕ್ರಿ] ಮುದ್ರೆ ಹಾಕು (ಮೆಯ್ಯನಿಕ್ಕುತ್ತಿರೆ ಪತ್ತಿ ಕೆಂದಳಿರ್ಗಳಚ್ಚುಗಳಚ್ಚಿಱಿದಂತೆ ಕಾಮನ ಬೇಟದಚ್ಚುಗಳ ಮಾೞ್ಕೆಯೊಳ್ ಇರ್ದುದು ಮೆಯ್ ಸುಭದ್ರೆಯಾ: ಪಂಪಭಾ, ೫. ೧೭)

ಅಚ್ಚು
[ನಾ] [ಅಕ್ಷ] ಎರಕ ಹೊಯ್ದ ವಸ್ತು (ಶೋಭಿಸಿದಂ ಕುಮಾರನಾನಂದದಿತರೂಪನಂದೆಸೆಯೆ ತಂದೆಯೊಳಚ್ಚಿನೊಳ್ ಒತ್ತಿದಂತೆವೋಲ್: ಆದಿಪು, ೮. ೪೩) [ನಾ] ಬಂಡಿಯ ಇರಚಿ (ಉಡಿದಿರ್ದೆಚ್ಚೞಿವೀಸು ತೞ್ಗಿದ ನೊಗಂ ಜೀಱೆೞ್ದ ಚಕ್ರಂ: ಪಂಪಭಾ, ೧೦. ೯೧)

ಅಚ್ಚುಡಿ
[ಕ್ರಿ] [ರಥದ] ಅಚ್ಚು ಮುರಿ (ನರನ ರಥಮಂ ಪಡುವು ಎಣ್ಗಾವುದುವರಂ ಸಿಡಿಲ್ವಿನಂ ಎಚ್ಚು ಅಚ್ಚುಡಿಯೆ: ಪಂಪಭಾ, ೧೧. ೨೦)

ಅಚ್ಛಜಳ
[ನಾ] ಶುದ್ಧ ನೀರು, ತಿಳಿ ನೀರು (ಕುಂದಧವಳ ನೃಪದಶನೇಂದು ಜ್ಯೋತ್ಸ್ನಾಮೃತಾಚ್ಛಜಳ ಪರಿಷೇಕಂ ಮಾಂದಿಸುವಂತಾದುದು ನೃಪನಂದನೆಯ ಎರ್ದೆಯೊಳಗೆ ಬಳೆದ ಶೋಕಾನಳನಂ: ಆದಿಪು, ೩. ೪೯)

ಅಚ್ಛಾಂಬು
[ನಾ] ಶುದ್ಧವಾದ ನೀರು (ವನಕುಸುಮಸ್ತಬಕದ ನೆೞಲಿನಿಸಚ್ಛಾಂಬುವಿನೊಳೆಸೆಯೆ: ಆದಿಪು, ೧೧. ೬೨)

ಅಚ್ಛೋದಕ
[ನಾ] (ಅಚ್ಛ+ಉದಕ) ನಿರ್ಮಲವಾದ ನೀರು, ತಿಳಿನೀರು (ಕರಿಯೂಥಪತಿಗಳೆರಡುಂ ಸರಸೀಜಳಮಂ ವಿಳಾಸದಿಂ ಪುಗುವವೊಲಾದರದಿಂದೆ ಪೊಕ್ಕು ತುಳುಕಿದರ್ ಅರವಿಂದರಜಃಪಿಶಂಗಿತಾಚ್ಛೋದಕಮಂ: ಆದಿಪು, ೧೪. ೧೦೬)

ಅಚ್ಯುತೇಂದ್ರ
[ನಾ] [ಜೈನ] ಅಚ್ಯುತಕಲ್ಪದ ಇಂದ್ರ (ಅಚ್ಯುತೇಂದ್ರನೊಡನೆ ನಿಜಪೂಜಾವಿಳಾಸಮಂ ಮೆಱೆಯಲೆಂದು ಪೋಗಿ: ಆದಿಪು, ೨. ೭೭ ವ)


logo