logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ದಂಟು
[ನಾ] ತಾವರೆ ಮುಂತಾದುದರ ನಾಳ (ಕಟ್ಟಿದ ಪಟ್ಟಮೆ ಸರವಿಗೆ ನೆಟ್ಟನೆದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕಣ್ಗೆಟ್ಟ ಮುದುಪಂಗೆ: ಪಂಪಭಾ, ೧೦. ೧೭)

ದಂಡ
[ನಾ] ಒಂದು ಉದ್ದಳತೆ (ಅದು ಭೂಭಾಗದಿಂದಂ ಐಸಾಸಿರದಂಡಂ ಮೇಗೆ ನೆಗೆದಲ್ಲಿ ಪನ್ನೆರಡು ಯೋಜನ ಸಮವೃತ್ತಮುಂ: ಆದಿಪು, ೧೦. ೨೨ ವ); ಜುಲ್ಮಾನೆ (ಪಾರ್ವನೆಂದೆನ್ನೊಳ್ ಪುಸಿದು ವಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆಱತಿಲ್ಲ ನಿನಗಾನಿತ್ತ ಬ್ರಹ್ಮಾಸ್ತ್ರಮೆಂಬ ದಿವ್ಯಾಸ್ತ್ರಮವಸಾನಕಾಲದೊಳ್ ಬೆಸಕೆಯ್ಯದಿರ್ಕೆ: ಪಂಪಭಾ, ೧. ೧೦೫ ವ); [ನಾ] ಹಿಡಿಕೆ (ಚೇಟಿಕೆ ಬೀಸುವ ಕುಂಚಮೆಯ್ದೆ ಮೆಯ್ದೋಱುವ ಗಾಡಿ ಕಾಂಚನದ ದಂಡದ ಸೀಗುರಿ ನೋೞ್ಪೊಡೆ ಆರುಮಂ ಮಾಱೆ: ಪಂಪಭಾ, ೯. ೧೦೦)

ದಂಡಕಪಾಳಹಸ್ತ
[ನಾ] ಕೈಯಲ್ಲಿ ಯೋಗದಂಡ ಮತ್ತು ಭಿಕ್ಷಾಪತ್ರೆಯುಳ್ಳವನು (ಅಂತು ನೀಲಾಂಬುದಶ್ಯಾಮನುಂ ಕನಕಪಿಂಗಳ ಜಟಾಬಂಧಕಳಾಪನುಂ ದಂಡಕಪಾಳಹಸ್ತನುಂ ಕೃಷ್ಣ ಮೃಗತ್ವಕ್ಪರಿಧಾನನುಮಾಗಿ: ಪಂಪಭಾ, ೧. ೬೯ ವ)

ದಂಡಕಾಷ್ಠ
[ನಾ] ದಂಡಗೋಲು (ಅರಿಗನಂ ಪೊಗೞ್ದಾಡಿದಂ ಅಂದು ದಂಡಕಾಷ್ಠದ ತುದಿಯೊಳ್ ಪಳಂಚಲೆಯೆ ಕೋವಣವಂ ಗುಡಿಗಟ್ಟಿ ನಾರದಂ: ಪಂಪಭಾ, ೧೨. ೨೧೯)

ದಂಡಕ್ರಿಯಾ
[ನಾ] [ಜೈನ] ಕೇವಲಿಯ ಆತ್ಮವು ಮೂಲಶರೀರದಿಂದ ಮೂರರಷ್ಟು ದಪ್ಪವಾಗಿಯೂ ಲೋಕಾಕಾರದಷ್ಟು ಉದ್ದವಾಗಿಯೂ ವ್ಯಾಪಿಸುವುದು (ದಂಡಕ್ರಿಯಾಕರಣಾನಂತರ ಸಮಯದೊಳ್ ಪೂರ್ವೋಕ್ತಬಾಹುಲ್ಯದಿಂ ಲೋಕಾಕಾಶ ವ್ಯಾಪಕಕವಾಟಕ್ರಿಯೆಯಂ ನೆಱಪಿ: ಆದಿಪು, ೧೬. ೪೯ ವ); [ನಾ] [ಜೈನ] ದಂಡ, ಕವಾಟ, ಪ್ರತರ, ಲೋಕಪೂರಣ ಎಂಬ ಸಮುದ್ಘಾತಕ್ರಿಯೆಗಳಲ್ಲಿ ಒಂದು (ಚತುರ್ದಶ ರಜ್ಜ್ವಾಯಾಮಾತ್ಮತ್ರಿಗುಣ ಪ್ರಮಾಣಾತ್ಮಪ್ರದೇಶ ವಿಸರ್ಪಣದಿಂ ದಂಡಕ್ರಿಯಾಕರಣನಂತರಸಮಯದೊಳ್: ಆದಿಪು, ೧೬. ೪೯ ವ)

ದಂಡಧರ
[ನಾ] ದಂಡ ನೀಡುವ ಅಧಿಕಾರವಿರುವವನು; (ಮತ್ತಂ ದಂಡಧರರಿಲ್ಲದಂದು ತಂತಮ್ಮ ವೃತ್ತಿಗಳಂ ಪ್ರಜೆಗಳತಿಕ್ರಮಿಸಿ ನಡೆಗುಂ ಎಂದು: ಆದಿಪು, ೮. ೭೪ ವ); ದಂಡವನ್ನು ಹಿಡಿದಿರುವವನು, ದಂಡಧಾರಿ (ನೃಪತಿ ನುಡಿಯೆ ನುಡಿಯಿಂ ನೀಪಿರ್ಮೆಡೆಯೊಳಿರಿಂ ನೀಮಱಿವಿರ್ ಮಿಡುಕಿದೊಡನೆ ಚಿತ್ರವೇತ್ರದಂಡಧರರ್ಕಳ್: ಪಂಪಭಾ, ೧೪. ೨೨)

ದಂಡನಾಯಕ
[ನಾ] ಸೇನಾಪತಿ (ತಪೋವಿಘಾತಂ ಮಾಡಿಂ ಎಂದು ತನ್ನ ನೆಚ್ಚಿನ ಅಚ್ಚರಸೆಯರುಮಂ ಆಱುಂ ಋತುಗಳುಮಂ ಗಂಧರ್ವರುಮಂ ಕಾಮದೇವನಂ ದಂಡನಾಯಕಂ ಮಾಡಿ ಪೇೞ್ದಾಗಳ್: ಪಂಪಭಾ, ೭. ೮೦ ವ)

ದಂಡನೀತಿ
[ನಾ] ರಾಜನೀತಿ (ನಿನ್ನ ದಂಡನೀತಿಯ ಪುದುವೆ ವಲಂ ದಂಡರತ್ನಮೆಂಬುದು ಪೆಱತೇ: ಆದಿಪು, ೧೩. ೨೭)

ದಂಡರತ್ನ
[ನಾ] [ಜೈನ] ಚಕ್ರವರ್ತಿಗಳಿಗೆ ದೊರಕುವ ಹದಿನಾಲ್ಕು ರತ್ನಗಳಲ್ಲಿ ಒಂದು (ನಿನ್ನ ದಂಡನೀತಿಯ ಪುದುವೆ ವಲಂ ದಂಡರತ್ನಮೆಂಬುದು ಪೆಱತೇ: ಆದಿಪು, ೧೩. ೨೭)

ದಂಡಿಗೆ
[ನಾ] ವೀಣೆಯ ತಂತಿಗಳ ಆಧಾರವಾದ ಮರದ ಭಾಗ (ಸುರಯುವತಿ ತಂತ್ರೀನಾದಂ ಕೊಳೆ ಬೀಣೆಯ ದಂಡಿಗೆಯುಂ ತಳಿರ್ತುದೆಂಬೊಂದು ಶಂಕೆಯಂ ಪುಟ್ಟಿಸಿದಳ್: ಆದಿಪು, ೭. ೨೧); [ನಾ] ಪಲ್ಲಕ್ಕಿ (ಗುಡಿಯ ಗೂಂಟಕ್ಕೆ ಬಲ್ಲಡವಿಗಳುಂ ದಂಡಿಗೆಗೆ ವೇಣುವನಂಗಳುಂ ಆನೆಗಂಬಕ್ಕೆ ಪೆರ್ಮರಂಗಳುಮಂ ಆ ಪಡೆಗೆ ನೆಱೆಯವೆನಿಸಿ: ಪಂಪಭಾ, ೯. ೧೦೪ ವ)


logo