logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಏಸಾಡು
[ಕ್ರಿ] ಬಾಣ ಬಿಡು, ಯುದ್ಧ ಮಾಡು (ಉತ್ತರಭರತದೊಳಾದ ಆಪತ್ತಂ ನೀನಱಿಯೆಯಕ್ಕುಂ ಅನಿತುಂ ಬಲಮಂ ಮುತ್ತಿ ಚಿಲಾತಾವರ್ತರ್ ಸುತ್ತಲುಂ ಏಸಾಡಿ ಪಿರಿದು ತಿಣಿಕಂ ತಂದರ್: ಆದಿಪು, ೧೪. ೭೦)

ಏಂ
[ಅ] ಏನು ಕಾರಣ, ಏಕೆ (ಇಱಿವಂತು ನಿನಗೆ ಮನದೊಳ್ ತಱಿಸಲವುಂಟಪ್ಪೊಡೆ ಎಲವೊ ದೇವೇಶನಂ ಏಂ ಸೆಱೆವಿಡಿದೆ: ಪಂಪಭಾ, ೧೦. ೧೨೧)

ಏಂ ಗಳ
ಏನಪ್ಪಾ! ಹಾಗಲ್ಲವೇ (ಪಸಿವನಾಮೇಗೊಂಡು ಏಂ ಗಳ ಗೆಯ್ವೆವು: ಆದಿಪು, ೭. ೭೩)

ಏಂ ಪಿರಿದೋ
ಏನು ದೊಡ್ಡದೋ! (ಕೊಡಗೂಸುತನದ ಭಯದಿಂ ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲೊೞ್ಕುಡಿಯಲ್ ಒಡಗೂಡೆ ಗಂಗೆಯ ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ: ಪಂಪಭಾ, ೧. ೯೨)

ಏ ಕಜ್ಜಂ
ಆಗಬೇಕಾದುದೇನು, ಏನು ಉಪಯೋಗ? (ರವಿರಶ್ಮಿಗಳ್ ಪುಗಲೆವೇಡ ಈ ರಶ್ಮಿಗಳ್ ಸಾಲ್ಗುಂ ಇಂತೇ ಕಜ್ಜಂ ಬೆಳಗು: ಆದಿಪು, ೬. ೧೦೪)

ಏಕಕಾರ್ಯಾಳೋಚನಪರ
[ನಾ] ಒಂದೇ ಕಾರ್ಯದ ಬಗ್ಗೆ ಆಸಕ್ತರಾದ[ವರು] (ಎಂದು ತಮ್ಮೊಳ್ ಅಯ್ವರುಂ ಏಕಕಾರ್ಯಾಳೋಚನಪರರಾಗಿ ದ್ವೈತವನದೊಳ್ ಅದ್ವೈತಸಾಹಸರಿರ್ಪನ್ನೆಗಂ: ಪಂಪಭಾ, ೭. ೩೦ ವ)

ಏಕಗ್ರಾಹಿ
[ನಾ] ಒಂದೇ ಪಟ್ಟು ಹಿಡಿದವನು. ಹಟಮಾರಿ (ಕಣ್ಗಾಣದ ಇಂತಪ್ಪ ಏಕಗ್ರಾಹಿಗಂ ಒಱಂಟಂಗಂ ರಥಮಂ ಎಸಗೆಂ ಎಂದು ವರೂಥದಿಂದ ಇೞಿದು ಪೋಗೆ: ಪಂಪಭಾ, ೧೨. ೨೦೫ ವ)

ಏಕಚ್ಛತ್ರಚ್ಛಾಯೆ
[ನಾ] ಒಂದೇ ಕೊಡೆಯ ನೆರಳು, ಒಬ್ಬ ರಾಜನ ಆಳ್ವಿಕೆ (ಅಂತು ಭರತಂ ಭರತಮಂಡಲಮಂ ಏಕಛತ್ರಚ್ಛಾಯೆಯಿಂದಂ ಪ್ರತಿಪಾಲಿಸುತ್ತಮಿರೆಯಿರೆ: ಆದಿಪು, ೫. ೪ ವ)

ಏಕತ್ವ
[ನಾ] ಷೋಡಶಭಾವನೆಗಳಲ್ಲಿ ಒಂದು (ಮಮತ್ವಮಂ ಬಿಸುಟು ನೀನೇಕತ್ವಮಂ ಭವ್ಯ ಭಾವಿಸು ನಿನ್ನೀ ತನುವಂ ತಪೋವನವನಕ್ರೀಡಾಸುಖಕ್ಕೊಡ್ಡು: ಆದಿಪು, ೨. ೪೭)

ಏಕತ್ವವಿತರ್ಕವಿಚಾರ
[ನಾ] [ಜೈನ] ಎರಡನೆಯ ಶುಕ್ಲಧ್ಯಾನ, ಮೋಹಕರ್ಮಸಹಿತವಾಗಿ ಜ್ಞಾನಾವರಣೀಯ, ದರ್ಶನಾವರಣೀಯ ಮತ್ತು ಅಂತರಾಯ ಎಂಬ ಮೂರು ಕರ್ಮಗಳ ನಾಶವಾಗಿ ಕೇವಲಜ್ಞಾನಪ್ರಾಪ್ತಿಗೆ ಎಡೆಮಾಡಿಕೊಡುವಂಥದು (ವೀತರಾಗದ್ವೇಷಭಾವನಾಭಾವಿತ ಯಥಾಖ್ಯಾನಚಾರಿತ್ರಕ್ಷೀಣ ಕಷಾಯ ವೀತರಾಗಚ್ಛದ್ಮ ಗುಣಸ್ಥಾನಂ ಏಕತ್ವವಿತರ್ಕವಿಚಾರಾಭಿಧಾನಧ್ಯಾನಪರಿಣತಂ: ಆದಿಪು, ೧೦. ೧೪ ವ)


logo