logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಬಂಚಿಸು
[ಕ್ರಿ] ಮರೆಮಾಚು (ಕೆಲಕೆಲವು ಅವಿನಾಣಂಗಳಂ ನಾಣ್ಚಿ ಬಂಚಿಸಿ ಪಿರಿದುಮನುರಾಗದಿಮೆನ್ನ ಬರೆದ ಪಟಮನಿದಂ ಅರ್ಚಿಸಿ: ಆದಿಪು, ೩. ೪೩ ವ); [ಕ್ರಿ] ವಂಚಿಸು (ಲಸನ್ನೇತ್ರಂಗಳಂ ಕೂಡೆ ಬಂಚಿಸುತುಂ ಮೆಟ್ಟುವ ಮೆಟ್ಟಿನೊಳ್ಪು: ಆದಿಪು, ೭. ೧೨೩); [ಕ್ರಿ] ತಿಳಿಯದ ರೀತಿಯಲ್ಲಿ (ಎನ್ನಂ ಬಂಚಿಸಿ ಪೋದುದಱೊಳ್ ನಿನಗೆ ಪಗೆವರಿಂದ ಇನಿತೆಡಱಾಯ್ತು: ಪಂಪಭಾ, ೧೩. ೧೦೪)

ಬಂಟು
[ನಾ] ಮೈಗಾವಲ ಪಡೆ (ತುರಗಮುಮೊಂದು ಸತ್ತಿಗೆಯುಮೊಂದಿರೆ ಕಾಪಿನ ಬಂಟು ಸುತ್ತಲುಂ ಬರೆ: ಆದಿಪು, ೧೧. ೪೬)

ಬಂಡಣ
[ನಾ] [ಭಂಡನ] ಯುದ್ಧ (ಬಂಡಣದೊಳೆನ್ನನೋಡಿಸಿ ಕೊಂಡುಯ್ದಂ ನಿನ್ನನಾ ಸರಿತ್ಸುತಂ ಆನುಂ ಪೆಂಡತಿಯೆಂ: ಪಂಪಭಾ, ೧. ೭೬)

ಬಂಡಳಿಸು
[ಕ್ರಿ] ಕೇಕೆ ಹಾಕು (ತೂಗುಂಗೊಂಬಿನೊಳ್ ಪಾಯ್ದು ಬಂಡಳಿಸುತ್ತಿರ್ಪ ಶುಕಾಳಿ: ಆದಿಪು, ೧೧. ೯೬) [ಎಲ್. ಬಸವರಾಜು ಸ್ವೀಕರಿಸಿರುವ ಪಾಠ; ಟಿವಿವೆಂ ಅವರಲ್ಲಿರುವುದು ‘ಮಂಡಳಿಸು’]

ಬಂಡು
[ನಾ] ಹೂವಿನ ಮಕರಂದ (ಓಗರವೂಗಳ ಬಂಡಂ ಎಯ್ದೆ ಪೀರುತ್ತ ಒಡವಂದುವು ಇಂದ್ರವನದಿಂ ಮಱಿದುಂಬಿಗಳ್: ಪಂಪಭಾ, ೧೧. ೮೧)

ಬಂದ
[ಗು] [√ವರ್] ಚಿಗುರಿದ (ಮೃದುಮಧುರಸ್ವನಂ ನೆಗೞೆ ಬಂದ ಎಳಮಾವಿನೊಳಿರ್ದು ಕೂಡೆ ಪಾಡಿದುದು ಮದಾಳಿಮಾಲೆ: ಪಂಪಭಾ, ೧೪. ೧೨)

ಬಂದ ಕರ್ಬು
[ನಾ] [√ಬಲ್] ಬಲಿತ ಕಬ್ಬು (ಕಾಯ್ತು ಕರೆವಂತಿರ್ದತ್ತು ಚೆಂದೆಂಗು ಸಾರಲೆವಂತಿರ್ದುದು ಬಂದ ಕರ್ಬು: ಆದಿಪು, ೧೧. ೬೮)

ಬಂದ ಕೋಡು
[ನಾ] [√ವರ್] ಮೂಡಿದ ಕೊಂಬೆ (ಮಾವಿನ ಬಂದ ಕೋಡೆ ಕೋಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ: ಪಂಪಭಾ, ೨. ೧೫)

ಬಂದ ದೂವೆ
[ನಾ] ಚಿಗುರಿದ ಎಳೆ ಹುಲ್ಲು (ಚಂದ್ರನನಂಭೋನಿಧಿ ಬಂದ ದೂವೆ ಮಲೆಯಂ ಕಾರ್ಗಾಲಮಂ .. .. ಸೋಗೆ ನೆನೆವಂತಾಂ ನೆನೆವೆಂ ಸರೋಜಮುಖಿಯಂ: ಆದಿಪು, ೧೨. ೩೧)

ಬಂದ ಬಟ್ಟೆಯಿನೆ ಬಿಜಯಂಗೆಯ್
ಬಂದ ದಾರಿ ಹಿಡಿದು ಹೊರಟುಹೋಗು (ಕೆಮ್ಮಗೆ ನಿಮ್ಮಡಿ ಬೞಲಿಸಲ್ವೇಡ ಬಂದ ಬಟ್ಟೆಯಿನೆ ಬಿಜಯಂಗೆಯ್ಯಿಂ: ಪಂಪಭಾ, ೯. ೪೮ ವ)


logo