logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ದಿಂಕುಗೊಳ್
[ಕ್ರಿ] ಚಿಮ್ಮು, ಹಾರು, ಕುಪ್ಪಳಿಸು (ನಡುವ ಸರಲ್ಗೆ ಮೆಯ್ಯೊಳ್ ಅಡಂಗುವ ಸಂಕುಗೆ ದಿಂಕುಗೊಳ್ವ ಕಕ್ಕಡೆಗೆ ಇದಿರ್ ಉರ್ಚುವ: ಪಂಪಭಾ, ೧೦. ೯೪)

ದಿಂಡುಮಗುೞ್
[ಕ್ರಿ] ಕುಸಿದು ಬೀಳು (ಕೀೞಂ ಕರ್ಚಿ ದಿಂಡುಮಗುೞ್ದು ಕೆಡೆದ ಜಾತ್ಯಶ್ವಂಗಳುಂ: ಪಂಪಭಾ, ೧೦. ೧೧೬ ವ)

ದಿಕ್ಕನ್ಯೆ
[ನಾ] [ಜೈನ] ರುಚಕಾಚಳದ ಉತ್ತರದ ಶಿಖರಗಳ ದೇವಿಯರು (ತದ್ಗಿರೀಂದ್ರೋತ್ತರ ಕಕುದ್ದೇಶದ .. .. ಎಂಟು ಕೂಟಂಗಳೊಳಿರ್ಪ ಲಂಬೂಷೆ ಚಿತ್ರರೇಖೆ ಪುಂಡರೀಕಿಣಿ ವಾರುಣಿ ಆದರ್ಶೆ ಶ್ರೀ ಹ್ರೀ ಧೃತಿ ಎಂಬ ಎಣ್ಬರುಂ ದಿಕ್ಕನ್ಯೆಯರಂ: ಆದಿಪು, ೭. ೩ ವ)

ದಿಕ್ಕರಿ
[ನಾ] [ಅಷ್ಟ] ದಿಗ್ಗಜ (ಕುಡಿವುದಂ ಏೞುಮಂಬುಧಿಯುಮಂ ಕುಲಶೈಲಕುಳಂಗಳುಂ ತಗುಳ್ದಡರ್ವುದನೊಂದಿ ಬಾಳರವಿ ತನ್ನಯ ಸೋಗಿಲ ಮೇಗೆ ರಾಗದಿಂ ಪೊಡರ್ವುದಂ ಅಂತೆ ದಿಕ್ಕರಿಗಳ್ ಅಂಬುಜಪತ್ರಾಂಬುವಿಂ ಬೆಡಂಗಡಸಿರೆ ಮಜ್ಜನಂಬುಗಿಪುದಂ ಸತಿ ಕಂಡೊಸೆದಳ್ ನಿಶಾಂತದೊಳ್: ಪಂಪಭಾ, ೧. ೧೪೦) [ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಭೌಮ ಮತ್ತು ಸುಪ್ರತೀಕ]

ದಿಕ್ಕರಿಕರಾನುಕಾರಿ
[ನಾ] ದಿಕ್ಕರಿಯ ಸೊಂಡಿಲನ್ನು ಹೋಲುವ (ದಿಕ್ಕರಿಕರಾನುಕಾರಿಗಳಪ್ಪ ಬಾಹುಗಳಿಂದಂ ಓರೊರ್ವರಂ ತೆಗೆದಪ್ಪಿ ನಿಬಿಡಾಲಿಂಗನಂಗೆಯ್ದು: ಪಂಪಭಾ, ೪. ೩೩ ವ)

ದಿಕ್ಕುಮಾರಿಕಾ ಮಹತ್ತರಿಕೆ
[ನಾ] [ಜೈನ] ಜಿನಜನನಿಯ ಗರ್ಭಶೋಧನಕ್ಕೆ ನಿಯೋಜಿತರಾದ ದೇವತೆಯರು (ವೈಡೂರ್ಯ ರುಚಕ ಮಣಿಪ್ರಭ ರುಚಿಕೋತ್ತರಂಗಳೆಂಬ ವಿಕಟಕೂಟಾಧೀಶೆಯರಪ್ಪ ರುಚಿಕೆ ರುಚಿಕಾಸ್ಯೆ ರುಚಿಕಾಂತೆ ರುಚಕಪ್ರಭೆಯೆಂಬ ನಾಲ್ವರುಂ ದಿಕ್ಕುಮಾರಿಕಾ ಮಹತ್ತರಿಕೆಯರುಮಂ: ಆದಿಪು, ೭. ೩ ವ)

ದಿಕ್ಚಕ್ರ
[ನಾ] ದಿಙ್ಮಂಡಲ (ಆಡುವಲ್ಲಿ ಮಕುಟವ್ಯಾಲಗ್ನರತ್ನಪ್ರಭಾ ಪರಿವೇಷಂ ಲಲಿತೇಂದ್ರಚಾಪರುಚಿಯಂ ಮಾಡಿತ್ತು ದಿಕ್ಷಕ್ರದೊಳ್: ಆದಿಪು, ೭. ೧೨೦)

ದಿಕ್ತಟ
[ನಾ] ದಿಕ್ಕಿನ ಕೊನೆ (ಬಧಿರಿತ ಸಮಸ್ತ ದಿಕ್ತಟಂ ಅಧಿರಿತ ಸರ್ವ ಇಭ್ಯಗರ್ವಿತಂ ಕ್ಷುಭಿತಾಂಭೋಸಲಿಲಂ ಪರೆದುದು ಧುರವಿಧಾನ ಪಟುಪಟಹ ಕಹಳ ಭೇರೀರಭಸಂ: ಪಂಪಭಾ, ೧೨. ೧೭೧)

ದಿಗಂಗನೆ
[ನಾ] [ಜೈನ] ಕೂಟಾಷ್ಟಕದಲ್ಲಿ ರಮಿಸುವ ಎಂಟು ಮಂದಿ ದೇವಿಯರು (ಕೂಟಾಷ್ಟಕಂಗಳೊಳ್ ರಮಿಯಿಸುವ ಸುಪ್ರತಿಷ್ಠಿತೆ ಸುಪ್ರಣಿಧಿ ಸುಪ್ರಬುದ್ಧೆ ಯಶೋಧರೆ ಲಕ್ಷ್ಮೀಮತಿ ಕೀರ್ತಿಮತಿ ವಸುಂಧರೆ ಚಿತ್ರೆ ಎಂಬ ಎಣ್ಬರುಂ ದಿಗಂಗನೆಯರಂ: ಆದಿಪು, ೭. ೩ ವ)

ದಿಗಂತ
[ನಾ] ದಿಕ್ಕಿನ ಕೊನೆ (ದಿವ್ಯಮುನಿಪುಂಗವರಂ ಬಗೆದಿರ್ಪಿನಂ ನಿಜಾತ್ಯಂತಪತಿವ್ರತಾಗುಣದಿನರ್ಚಿಸಿ ಮೆಚ್ಚಿಸು ನೀಂ ದಿಗಂತವಿಶ್ರಾಂತಯಶರ್ಕಳಂ ವರತನೂಭವರಂ ಪಡೆ ನೀಂ ತಳೋದರೀ: ಪಂಪಭಾ, ೧. ೧೧೮)


logo