logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ತರಂತರ
[ಕ್ರಿವಿ] ಮೇಲಿಂದ ಮೇಲೆ (ತರಂತರದೊಳೆ ಪಾಯ್ದ ಕೂರ್ಗಣೆಗಳಂ ತಱಿದೊಟ್ಟಿ ತೆರಳ್ಚಿ ತೂಳ್ದಿಕೊಂಡು ಎರೆದು ಮಗುೞ್ಚಿ ಸಣ್ಣಿಸಿದಂ ಆಂತ ಚತುರ್ವಲಮಂ ಗುಣಾರ್ಣವಂ: ಪಂಪಭಾ, ೧೧. ೧೪೭)

ತರಣ
[ನಾ] ದಾಟುವಿಕೆ, ಹಾಯ್ದು ಹೋಗುವಿಕೆ (ಈ ಉಪದೇಶದಿನಾದುದು ಉದಗ್ರಸಂಸರಣ ಮಹಾಸಮುದ್ರ ತರಣಂ: ಆದಿಪು, ೫. ೬೬)

ತರಣಿ
[ನಾ] ನದಿ (ಪ್ರವಾಹಾತ್ಯುಷ್ಮತಾಪ ಹಸಿತ ಪ್ರಳಯಕಾಲ ಪ್ರೌಢತರ ತರಣಿಯಂ ವೈತರಣಿಯಂ ಪೊಕ್ಕಾಗಳ್: ಆದಿಪು, ೫. ೮೭ ವ); [ನಾ] ಸೂರ್ಯ (ಗೋಕರ್ಣನಾಥನಂ ಗೌರೀನಾಥನಂ ಅವನಿ ಪವನ ಗಗನ ದಹನ ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರೈಲೋಕ್ಯಸಂಗೀತ ಕೀರ್ತಿಯಂ ಕಂಡು: ಪಂಪಭಾ, ೪. ೨೬ ವ)

ತರತ್
[ಗು] ಮಿಣುಕುವ, ಹೊಳೆಯುವ (ನವಮೇಘಧ್ವನಿ ಪುಷ್ಕರಧ್ವನಿ ತರತ್ತಾರಾಳಿ ಪುಷ್ಪೋಪಹಾರವಿಳಾಸಂ ರುಚಿರಾಂಬುದಂ ಯವನಿಕಾವಿನ್ಯಾಸಂ: ಆದಿಪು, ೬ ೭೨)

ತರತರ
[ನಾ] ಸಾಲು ಸಾಲು (ಓಗಡಿಸದೆ ನಡೆದುದು ಬಲಸಾಗರಂ ಆ ಸಾಗರಂಬರಂ ತರತರದಿಂ: ಆದಿಪು, ೧೨. ೬೪)

ತರತ್ತರಂಗೆ
[ನಾ] ಚಲಿಸುವ ಅಲೆಗಳುಳ್ಳ [ನದಿ] (ಪುಚ್ಚವಣಂ ನೋಡುವೆನೆನ್ನೆಚ್ಚೆಯೊಳೀ ಮುನಿಯ ವರದ ಮಹಿಮೆಯಂ ಎನುತ ಅಂದು ಉಚ್ಚಸ್ತನಿ ಗಂಗೆಗೆ ಶಫರ ಉಚ್ಚಳಿತ ತರತ್ತರಂಗೆಗೆ ಒರ್ವಳೆ ಬಂದಳ್: ಪಂಪಭಾ, ೧. ೯೦)

ತರತ್ತರಳ
[ಗು] ಚಲಿಸುವ, ಚಂಚಲ (ಸುಲಿಪಲ್ ಮಿಂಚಿನ ಗೊಂಚಲುಟ್ಟ ದುಗುಲಂ ಗಂಗಾನದೀಫೇನಂ ಉಜ್ಜ್ವಲ ಮುಕ್ತಾಭರಣಂ ತರತ್ತರಳ ತಾರೋದಾರ ಭಾ ಭಾರಂ .. .. ಕಣ್ಗೊಪ್ಪಿತಾ ಕಾಂತೆಯಾ: ಪಂಪಭಾ, ೧. ೧೩೭)

ತರಳ
[ಗು] ಉಜ್ವಲ (ತಾರಾತರಳಮುಕ್ತಾಫಳ ಲಂಬಲಂಬೂಷ ಭೂಷಿತಮುಂ: ಆದಿಪು, ೭. ೭೬ ವ)

ತರಳತರ
[ಗು] ಹೆಚ್ಚು ಕಾಂತಿಯುಕ್ತವಾದ (ತರಳತರ ವೃತ್ತಮೌಕ್ತಿಕಪರಿಕರಂ ಏಕಾಂತಕಾಂತಂ ಎಕ್ಕಾವಳಿ ಕಂಧರದೊಳ್ ಅಮರ್ದೆಸೆಯೆ: ಆದಿಪು, ೪. ೩೭)

ತರಳಲೋಚನೆ
[ನಾ] ಚಂಚಲವಾದ ಕಣ್ಣುಳ್ಳವಳು (ಓಪನಂ ಮಿಡುಕಲೀಯದೆ ಕಾಲ್ವಿಡಿದೞ್ತು ತೋರ ಕಣ್ಬನಿಗಳನಿಕ್ಕಿದಳ್ ತರಳಲೋಚನೆ ಸಂಕಲೆಯಿಕ್ಕಿದಂತೆವೋಲ್: ಪಂಪಭಾ, ೪. ೯೭)


logo