logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (Kannada-Kannada)

ಪಣತಿ
(ನಾ)
ಹಣತೆ, ಪ್ರಣತಿ ದೀಪದ ಬಟ್ಟಲು. ದೇವರ ಗುಡಿಗಳಲ್ಲಿ ದೀಪ ಹಚ್ಚಲು ತಯಾರಿಸಿದ ಮಣ್ಣಿನ ಹಣತೆ. ಸಾಮಾನ್ಯವಾಗಿ ದೀಪಾವಳಿ, ಕಾರ್ತೀಕ ಮಾಸ ಮತ್ತು ದೀಪೋತ್ಸವ ಸಂದರ್ಭಗಳಲ್ಲಿ ಪಣತಿಗಳಲ್ಲಿ ಎಣ್ಣೆ ಹಾಕಿ ದೀಪ ಹಚ್ಚುವರು. 'ಎನಿತು ಹಾರಿದರು ಚಟಾಕಿಗಳ ಮದ್ದು ಹಣತೆ ಮಾಡುವದಿಲ್ಲ ಕಿಂಚಿತ್ತು ಸದ್ದು' (ದಿನಕರ ದೇಸಾಯಿ) 'ಅಮ್ಮ ಹಚ್ಚಿಟ್ಟ ಹಣತೆಗೆ ನೂರು 'ಹೂ' ಕುಡಿಕೆಗಳ ನಾಚಿಸುವ ಬೆಳಕು' (ಎಂ.ಆರ್. ಕಮಲ) ಆರತೀ - ಆರತೀ - ಆರತೀ ಇದು ಮಣ್ಣಿನದಲ್ಲಾಪ್ರಣತಿ' (ಬೇಂದ್ರೆ) ಪಣತಿಗೆ ಎಣ್ಣಿಲ್ಲ ಉರಿಲಾಕ ಬತ್ತಿಲ್ಲ (ಗಾದೆ) ಅಂಗೈ ಅಗಲದ ಗದ್ದೆಗಿಷ್ಟು ನೀರು ನೀರಾಗಿಷ್ಟು ಬೇರು (ಒಗಟು)

ಪರ್ಯಾಣ
(ನಾ)
ಅಗಲವಾದ ಮಣ್ಣಿನ ತಟ್ಟೆ, ಹರಿವಾಣ, ಇದನ್ನು ತಾಟಿನಂತೆ ಊಟಕ್ಕೆ ಬಳಸಲಾಗುತ್ತಿತ್ತು

ಪಲ್ಟಿ
(ನಾ)
ಕುಂಡಾಳಿ, ಪರಟೆ, ಮಣ್ಣಿನ ಚಿಕ್ಕ ಬೋಗುಣಿ, ಚಿಪ್ಪು, ಟೆಂಗಿನ ಪರಟೆ, ಆಕಾರದಲ್ಲಿ ಇದು ಪರಟೆಯಂತಿರುವುದು ಜನರಾಡುವ ಭಾಷೆಯಲ್ಲಿ ಪಲ್ಟಿ ಆಗಿರುವಂತೆ ತೋರುತ್ತದೆ. ಇದನ್ನು ಚಟ್ನಿ ಮೆಣಸಿನ ಹಿಂಡಿ ಹಾಕಿಡಲು ಬಳಸುವರು.

ಪಳತ
(ನಾ)
ರಾಗಿ, ಭತ್ತ ಮೊದಲಾದ ಧಾನ್ಯಗಳನ್ನು ತುಂಬಿಡುವ ದೊಡ್ಡಗಾತ್ರದ ಮಣ್ಣಿನ ವಾಡೆ.

ಪಾತ್ರೆ
(ನಾ)
ಪಾತ್ರಿ, ಮಡಕೆ, ನೀರಿನಗಡಿಗೆ, ಪಾತ್ರೆ ವೇದಕಾಲದ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ. 'ಮಣ್ಣು ಪಾತ್ರೆಯಂಥಾ ಮಾಯಾಶರೀರ' (ತತ್ವಪದ) ಪಾತ್ರೆ ಇದ್ದಷ್ಟೇ ನೀರು ಸಿಕ್ಕೀತು (ಗಾದೆ)

ಪಾಸಾಲೆ
(ನಾ)
ಬಾನಿ, ತೆರೆದ ಬಾಯಿಯ ಪಾತ್ರೆ ನೋಡಿ - ಬಾನಿ. 'ಮಣ್ಣ ಪಾಸಾಲೆಯಲ್ಲಿ ಜೀವ ಅಂಕುರಗೊಳ್ಳುವ ಗುಟ್ಟು' (ವೀಚಿ)

ಪಿಂಗಾಣಿ
(ನಾ)
ಬಿಳಿಯ ಜೇಡಿಮಣ್ಣಿನಿಂದ ಮಾಡಿದ ಪಾತ್ರೆ. ಪಿಂಗಾಣಿ ಪಾತ್ರೆಗಳು ಮೊತ್ತಮೊದಲು ಚೀನಾ ದೇಶದಲ್ಲಿ ಹುಟ್ಟಿಕೊಂಡವು. ಈಗ ಪ್ರಪಂಚದಾದ್ಯಾಂತ ಪಿಂಗಾಣಿ ವಸ್ತುಗಳು ಬಳಕೆಯಲ್ಲಿವೆ, ಬಾಂಕಾಕಿನ ಕೆಲಡಿನ್ (Celadon) ಎಂಬ ಹೆಸರಿನ ಕಂಪನಿ ಪಿಂಗಾಣಿ ವಸ್ತುಗಳನ್ನು ತಯಾರಿಸ ತೊಡಗಿದ್ದರಿಂದ ಇಂಗ್ಲೀಷ್-ನಲ್ಲಿ ಇದಕ್ಕೆ ಕೆಲಡಿನ್ ಎಂಬ ಹೆಸರು ಬಂದಿತೆಂದು ಕೆಲವರು ಹೇಳುವರು. ಚೈನಾ ಮಣ್ಣಿನಿಂದ ಮಾಡಿದ ಪಿಂಗಾಣಿಗಳು ಸುಟ್ಟಮೇಲೆ ಬಿಳಿ ಆಗುತ್ತವೆ ಗೃಹೋಪಯೋಗಿ ವಸ್ತುಗಳಿಂದ ಮೊದಲ್ಗೊಂಡು ಅಲಂಕಾರದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುವರು. ಪಿಂಗಾಣಿಯನ್ನು 'ಮಣ್ಣಿನ ಮುತ್ತು' ಎಂದು ಕರೆಯಲಾಗುತ್ತದೆ.

ಪಿಸುಗು ಮಣ್ಣು
(ನಾ)
ಜಿಗುಟಿಲ್ಲದ ಮಣ್ಣು. ಮಡಕೆ ಮಾಡಲು ಯೋಗ್ಯವಲ್ಲದ ಮಣ್ಣು.

ಪೀಕದಾನಿ
(ನಾ)
ಉಗುಳುವ ಪಾತ್ರೆ, ಪಡಿಗ, ಎಲೆ - ಅಡಿಕೆ ಜಿಗಿದು ಉಗುಳಲು ಬಳಸುವ ಪಾತ್ರೆ. ಲಖನೌ ಪೀಕದಾನಿ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ ವಿವಿಧ ಪಶು - ಪಕ್ಷಿಗಳ ರೂಪವಿರುವ ಮಣ್ಣಿನ ಪೀಕದಾನಿಗಳನ್ನು ತಯಾರಿಸುವರು.

ಫಿಲ್ಟರ್
(ನಾ)
ಇದು ಇಂಗ್ಲಿಷ್ ಪದ. ನೀರನ್ನು ಸೋಸಿ ಕುಡಿಯಲು ಬಳಸುವ ಪಾತ್ರೆ, ನಗರಗಳಲ್ಲಿ ಬೇಸಿಗೆಯಲ್ಲಿ ಕುಡಿಯಲು ತಂಪಾದ ನೀರನ್ನು ಪಡೆಯಲು ಮಣ್ಣಿನಿಂದ ತಯಾರಿಸಿದ ಫಿಲ್ಟರ್-ಗಳನ್ನು ಬಳಸುವರು.


logo