logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅನಿಲ ನಿಯತಾಂಕ
(ಭೌ) ೧ ಮೋಲ್ ಆದರ್ಶ ಅನಿಲದ ಉಷ್ಣತೆ, ಒತ್ತಡ ಹಾಗೂ ಗಾತ್ರಗಳಿಗಿರುವ ಸಂಬಂಧ ನಿರೂಪಿಸುವ pV=RT ಎಂಬ ‘ಸಾರ್ವತ್ರಿಕ ಅನಿಲ ಸಮೀಕರಣ’ದಲ್ಲಿ ಕಂಡುಬರುವ ನಿಯತಾಂಕ. ಇಲ್ಲಿ p ಒತ್ತಡ, Vಗಾತ್ರ ಹಾಗೂ T ನಿರಪೇಕ್ಷ ಉಷ್ಣತೆ. R ಅನಿಲ ನಿಯತಾಂಕದ ಪ್ರತೀಕ. ಇದರ ಮೌಲ್ಯ 8.3145 JK–1 mol–1
gas constant

ಅನಿಲ ನಿಯಮ
(ಭೌ) ಅನಿಲದ ಒತ್ತಡ, ಗಾತ್ರ ಹಾಗೂ ಉಷ್ಣತೆಗಳ ಪರಸ್ಪರ ಸಂಬಂಧ ಸೂಚಿಸುವ ನಿಯಮ. ಬಾಯ್ಲ್-ಚಾರ್ಲ್ಸ್ ಹಾಗೂ ಒತ್ತಡ ನಿಯಮಗಳು ಜೊತೆಗೂಡಿದ pV=RT ಎಂಬ ಸಮೀಕರಣ. ಇದರಲ್ಲಿ p ಒತ್ತಡ, V ಗಾತ್ರ T ನಿರಪೇಕ್ಷ ಉಷ್ಣತೆ, R ಅನಿಲ ನಿಯತಾಂಕ. ಇಂಥ ನಿಯಮ ಅನು ಸರಿಸುವ ಅನಿಲಕ್ಕೆ ಆದರ್ಶ/ಪರಿಪೂರ್ಣ ಅನಿಲವೆಂದು ಹೆಸರು
gas law

ಅನಿಲ ಮಾಪಕ
(ತಂ) ರಾಸಾಯನಿಕ ಕ್ರಿಯೆಯ ಸಮಯದಲ್ಲಿ ಅನಿಲ ಮಿಶ್ರಣದಲ್ಲಿ ವಿವಿಧ ಅನಿಲಗಳ ಗಾತ್ರಗಳನ್ನು ಅಳೆಯಲು ಬಳಸುವ ಉಪಕರಣ. ಇದರಲ್ಲಿ ಅಳತೆ ಗುರುತುಗಳುಳ್ಳ ಒಂದು ಗಾಜಿನ ನಳಿಕೆ ಇರುತ್ತದೆ. ಇದರ ಒಂದು ತುದಿ ಮುಚ್ಚಿದ್ದು ತೆರೆದ ತುದಿ ಪಾದರಸದಲ್ಲಿ ಅದ್ದಿರುತ್ತದೆ. ನಳಿಕೆಯ ಮೂಲಕ ಹೋಗುವ ಎರಡು ತಂತಿಗಳ ಸಹಾಯದಿಂದ ಅನಿಲ ಮಿಶ್ರಣದಲ್ಲಿ ವಿದ್ಯುತ್ ಕಿಡಿ ಸಿಡಿಸಿದಾಗ ಅನಿಲಗಳ ನಡುವೆ ರಾಸಾಯನಿಕ ಕ್ರಿಯೆ ಜರಗಿ ವಿವಿಧ ಅನಿಲಗಳ ಗಾತ್ರಗಳು ತಿಳಿದುಬರುತ್ತವೆ
eudiometer

ಅನಿಲ ಮೊಗವಾಡ
(ಸಾ) ವಿಷಮಿಶ್ರಿತ ಗಾಳಿಯಿಂದ ರಕ್ಷಿಸಿಕೊಳ್ಳಲು ಧರಿಸುವ ಶ್ವಾಸಾನುಕೂಲ ಸಲಕರಣೆಯುಳ್ಳ ಮೊಗವಾಡ. ಇದರಲ್ಲಿ ಒಂದು ಶೋಧಕವೂ ಅಧಿಶೋಷಕ ಸಾಮಗ್ರಿಯ ಒಂದು ಸ್ತರವೂ ಇವೆ. ಇವು ವಿಷಾನಿಲ, ಬಾಷ್ಪ ಮುಂತಾದ ಮಲಿನ ವಸ್ತುಗಳನ್ನು ಹೀರಿಕೊಂಡು ಕಣ್ಣುಗಳನ್ನೂ ಶ್ವಾಸಕಾಂಗಗಳನ್ನೂ ರಕ್ಷಿಸುತ್ತವೆ
gas mask

ಅನಿಲ ವರ್ಣಲೇಖನ
(ರ) ಬಾಷ್ಪಶೀಲ ಸಂಯುಕ್ತಗಳಲ್ಲಿಯ ಘಟಕಗಳ ಪ್ರಮಾಣಗಳನ್ನು ವಿಶ್ಲೇಷಿಸಿ ಪ್ರತ್ಯೇಕಿಸಿ ತಿಳಿಯಲು ಬಳಸುವ ತಂತ್ರ. ಇದರಲ್ಲಿ, ಸ್ಥಿರ ಅಧಿಶೋಷಕ ಸ್ತರದ ಮೂಲಕ ಅನಿಲವನ್ನು ನಿಧಾನವಾಗಿ ಹಾಯಿಸಲಾಗುತ್ತದೆ
gas chromatography

ಅನಿಲೀಕರಣ
(ರ) ಯಾವುದೇ ವಸ್ತುವನ್ನು ಅನಿಲವಾಗಿ ಪರಿವರ್ತಿಸಲು ಬಳಸುವ ರಾಸಾಯನಿಕ ಅಥವಾ ಉಷ್ಣ ಪ್ರಕ್ರಿಯೆ. ಉದಾ: ಕಲ್ಲಿದ್ದಲನ್ನು ‘ಹೈಗ್ಯಾಸ್’ ಪ್ರಕ್ರಿಯೆಯ ಮೂಲಕ ಅನಿಲ ರೂಪದ ಇಂಧನವಾಗಿ ಪರಿವರ್ತಿಸಲಾಗುತ್ತದೆ
gasification

ಅನಿಲೀನ್
(ರ) ತೈಲಸದೃಶ ದ್ರವ; ದ್ರಬಿಂ ೮0 ಸೆ; ಕುಬಿಂ ೧೮೪.೪0 ಸೆ; ಸಾಸಾಂ ೧.೦೨೪. ನೀರಿನಲ್ಲಿ ಅಲ್ಪ ದ್ರಾವ್ಯಶೀಲ. C6H5NH2. ರಂಗು, ಔಷಧಿ, ಪ್ಲಾಸ್ಟಿಕ್ ಮತ್ತಿತರ ವಸ್ತುಗಳ ತಯಾರಿಕೆಯಲ್ಲಿ ಬಳಕೆ. ನೈಟ್ರೊಬೆನ್ಝೀನ್‌ನ (C6H5.NO2) ಅಪಕರ್ಷಣದಿಂದ ಲಭ್ಯ
aniline

ಅನಿಲೀನ್ ರಂಗುಗಳು
(ರ) ಅನಿಲೀನ್ ಆಧಾರಿತ ಸಂಶ್ಲೇಷಿತ ರಂಗುಗಳ ಸಾರ್ವತ್ರಿಕ ನಾಮ
aniline dyes

ಅನಿಶ್ಚಯತಾ ಕೋಷ್ಟಕ
(ಸಂಕ) ಯಾವುದೇ ವಿಷಯ ಕುರಿತಂತೆ ವಿಭಿನ್ನ ಜನರಲ್ಲಿ ಭಿನ್ನಾಭಿಪ್ರಾಯಗಳಿರುವಾಗ ಈ ಅನಿಶ್ಚಯತೆಗಳನ್ನು ಪರಿಮಾಣೀಕರಿಸಿ ಪ್ರಕಟಿಸುವ ಕೋಷ್ಟಕ
contingency table

ಅನಿಶ್ಚಿತತಾ ತತ್ತ್ವ
(ಭೌ) ಅನಿರ್ಧರಣೀಯತಾ ತತ್ತ್ವ. ಏಕಕಾಲಿಕವಾಗಿ ಕಣದ (ಉದಾ : ಎಲೆಕ್ಟ್ರಾನ್) ಸ್ಥಾನವನ್ನೂ ಸಂವೇಗವನ್ನೂ ನಿಷ್ಕೃಷ್ಟವಾಗಿ ನಿರ್ಧರಿಸುವುದು ಅಸಾಧ್ಯ. ಕಣಸ್ಥಾನವು ಹೆಚ್ಚು ಹೆಚ್ಚು ನಿಖರವಾಗಿ ತಿಳಿದಿರುವಾಗ ಅದರ ಸಂವೇಗವನ್ನು ಕಡಿಮೆ ಕಡಿಮೆ ನಿಖರವಾಗಿ ನಿರ್ಧರಿಸಬಹುದು. ಸ್ಥಾನ ಕುರಿತ ಮೌಲ್ಯ ವ್ಯಾಪ್ತಿ x ಮತ್ತು ಸಂವೇಗ ಕುರಿತ ಮೌಲ್ಯವ್ಯಾಪ್ತಿ p ಆಗಿದ್ದರೆ ಆಗ xx.p . h. ಇಲ್ಲಿ h ಪ್ಲಾಂಕ್ ಸ್ಥಿರಾಂಕ. ಈ ತತ್ವವನ್ನು ಪ್ರಥಮತಃ ಮಂಡಿಸಿದವರು (೧೯೨೭) ವರ್ನರ್ ಹೈಸನ್‌ಬರ್ಗ್ (೧೯೦೧-೭೬). ದ್ರವ್ಯದ ಕಣ-ತರಂಗ ದ್ವೈತದ ಕಾರಣವಾಗಿ ಈ ಅನಿಶ್ಚಿತತೆ ಉಂಟಾಗುವುದು. ಉದಾಹರಣೆಗೆ ಯಾವುದೇ ಕಣದ ನೆಲೆಯನ್ನು ಖಚಿತವಾಗಿ ತಿಳಿಯಲು ವೀಕ್ಷಕ ಆ ಕಣಕ್ಕೆ ವಿಕಿರಣದ ಫೋಟಾನೊಂದನ್ನು ಬಡಿದು ಪುಟ ನೆಗೆಸಬೇಕು. ಸ್ವತಃ ಈ ಸ್ಥಾನ ನಿರ್ಧರಣ ಕ್ರಿಯೆಯೇ ಕಣದ ನೆಲೆಯನ್ನು ಮುನ್ನುಡಿಯಲಾಗದ ತೆರದಲ್ಲಿ ವಿಚಲಿಸುವುದು. ಕಣಸ್ಥಾನವನ್ನು ನಿಷ್ಕೃಷ್ಟವಾಗಿ ಅರಿಯಲು ಹ್ರಸ್ವ ಅಲೆಯುದ್ದದ ಫೋಟಾನ್‌ಗಳನ್ನು ಬಳಸಬೇಕು. ಸಹಜವಾಗಿಯೇ ಇವುಗಳೊಂದಿಗೆ ಹೊಂದಿಕೊಂಡಿರುವ ಬೃಹತ್ ಸಂವೇಗಗಳು ಕಣದ ನೆಲೆ ಕುರಿತಂತೆ ಬೃಹತ್ ಪರಿಣಾಮ ಬೀರುತ್ತವೆ. ಹೀಗಲ್ಲದೇ ದೀರ್ಘ ಅಲೆಯುದ್ದದ ಫೋಟಾನ್‌ಗಳನ್ನು ನಿಯೋಜಿಸಿದ್ದಾದರೆ ಕಣದ ನೆಲೆಯ ಮೇಲಾಗುವ ಪರಿಣಾಮ ಅತ್ಯಲ್ಪ, ನಿಜ. ಆದರೆ ಆಗ ಲಭಿಸುವ ಫಲಿತಾಂಶ ಮಾತ್ರ ಕಡಿಮೆ ನಿಖರವಾಗಿರುವುದು. (ಸಾ) ವರ್ತಮಾನವನ್ನು ಕುರಿತು ಸಂಪೂರ್ಣವಾಗಿ ಗ್ರಹಿಸಲು ಅಸಾಧ್ಯವಾದುದರಿಂದ, ಭವಿಷ್ಯತ್ತಿನಲ್ಲಿ ಆಗುವ ಪರಿಣಾಮವನ್ನು ನಿಖರವಾಗಿ ತಿಳಿಯುವುದೂ ಅಸಾಧ್ಯ ಎಂಬುದು ಈ ತತ್ತ್ವದ ಸಾರಾಂಶ
uncertainty principle


logo