logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Debug
ಡೀಬಗ್
(ರೂಪಿಸಬೇಕಿದೆ)
ಸಿದ್ಧವಾದ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮುನ್ನ ಅದರಲ್ಲಿರಬಹುದಾದ ತಪ್ಪುಗಳನ್ನು (ಬಗ್) ಗುರುತಿಸಿ ಸರಿಪಡಿಸುವ ಕೆಲಸ
ತಂತ್ರಾಂಶ ರಚನೆ ಅಸಮರ್ಪಕವಾಗಿದ್ದರೆ ಅದರ ಕಾರ್ಯನಿರ್ವಹಣೆಯಲ್ಲಿ ತಪ್ಪುಗಳಾಗುವುದು ಸಹಜ. ಅನಪೇಕ್ಷಿತ ಫಲಿತಾಂಶಗಳನ್ನು ನೀಡುವ, ಬಳಕೆದಾರರಿಗೆ ಕಿರಿಕಿರಿಮಾಡುವ ಇಂತಹ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ. ಬಗ್ ದೆಸೆಯಿಂದ ತಂತ್ರಾಂಶಗಳ ಕಾರ್ಯನಿರ್ವಹಣೆಯಲ್ಲಾಗುವ ವ್ಯತ್ಯಯ ಕಿರಿಕಿರಿಯ ಜೊತೆಗೆ ಭಾರೀ ಪ್ರಮಾಣದ ಆರ್ಥಿಕ ನಷ್ಟವನ್ನೂ ಉಂಟುಮಾಡಬಲ್ಲದು. ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮೊದಲು ಇಂತಹ ತಪ್ಪುಗಳನ್ನೆಲ್ಲ ಗುರುತಿಸಿ ಸರಿಪಡಿಸುವುದು ಅಪೇಕ್ಷಣೀಯ. 'ಡೀಬಗಿಂಗ್', ಅಂದರೆ 'ಡೀಬಗ್ ಮಾಡುವುದು' ಎಂದು ಗುರುತಿಸುವುದು ಈ ಪ್ರಕ್ರಿಯೆಯನ್ನೇ. ಈ ಕೆಲಸದ ಬಹುಪಾಲು ತಂತ್ರಾಂಶ ಪರೀಕ್ಷೆಯ (ಟೆಸ್ಟಿಂಗ್) ಸಂದರ್ಭದಲ್ಲಿ ನಡೆಯುತ್ತದೆ. ತಂತ್ರಾಂಶ ಅಭಿವರ್ಧನೆಯ (ಡೆವೆಲಪ್‌ಮೆಂಟ್) ಹಂತದಲ್ಲೂ ಆವರೆಗೆ ಸಿದ್ಧವಾದಷ್ಟು ಭಾಗವನ್ನು ಡೀಬಗ್ ಮಾಡುವುದು ಅಪರೂಪವೇನಲ್ಲ. ಸಣ್ಣಪುಟ್ಟ ಬಗ್‌ಗಳನ್ನು ಹಿಡಿದುಹಾಕುವುದು ಸುಲಭವೇ. ಆದರೆ ಸಂಕೀರ್ಣ ತಂತ್ರಾಂಶಗಳಲ್ಲಿ ಕಾಣಿಸಿಕೊಳ್ಳುವ ಕೆಲ ತಪ್ಪುಗಳ ಮೂಲವನ್ನು ಹುಡುಕಿ ಸರಿಪಡಿಸುವುದು ಸವಾಲಿನ ಕೆಲಸ. ಈ ಪ್ರಕ್ರಿಯೆಯಲ್ಲಿ ನೆರವಾಗಲು ಡೀಬಗರ್‌ಗಳೆಂಬ ತಂತ್ರಾಂಶಗಳನ್ನು ಬಳಸಲಾಗುತ್ತದೆ. ಪರೀಕ್ಷಿಸಲಾಗುತ್ತಿರುವ ತಂತ್ರಾಂಶವನ್ನು ಹೆಜ್ಜೆಗಳಲ್ಲಿ ಕಾರ್ಯಗತಗೊಳಿಸುವ ಮೂಲಕ ನಡುವೆ ಎಲ್ಲೋ ಇರಬಹುದಾದ ತಪ್ಪನ್ನು ಗುರುತಿಸಲು ಸಹಾಯಮಾಡುವುದು ಈ ತಂತ್ರಾಂಶದ ಹೆಚ್ಚುಗಾರಿಕೆ. ಪರೀಕ್ಷೆಯ ಅಗತ್ಯಗಳಿಗೆ ತಕ್ಕಂತೆ ತಂತ್ರಾಂಶದ ಕಾರ್ಯಾಚರಣೆಯನ್ನು ನಿರ್ದಿಷ್ಟ ಹಂತದಲ್ಲಿ ನಿಲ್ಲಿಸುವ ಹಾಗೂ ಆ ಹಂತದ ಇನ್‌ಪುಟ್-ಔಟ್‌ಪುಟ್‌ಗಳನ್ನು ಪರಿಶೀಲಿಸುವ ಸೌಲಭ್ಯವೂ ಬಹುತೇಕ ಡೀಬಗರ್‌ಗಳಲ್ಲಿರುತ್ತದೆ.

Desktop
ಡೆಸ್ಕ್‌ಟಾಪ್
(ರೂಪಿಸಬೇಕಿದೆ)
ಕಂಪ್ಯೂಟರಿನ ವಿಧಗಳಲ್ಲೊಂದು; ಕಂಪ್ಯೂಟರನ್ನು ಆನ್ ಮಾಡಿದ ನಂತರ ಕಾಣುವ, ವಿವಿಧ ಐಕನ್‌ಗಳಿರುವ ಪ್ರಾರಂಭಿಕ ಪರದೆಗೂ ಡೆಸ್ಕ್‌ಟಾಪ್ ಎಂದೇ ಹೆಸರು
ಮೇಜಿನ ಮೇಲೆ ಕೂರುವಷ್ಟು ದೊಡ್ಡದಾದ, ಮಾನಿಟರ್ - ಕ್ಯಾಬಿನೆಟ್ - ಕೀಬೋರ್ಡ್ - ಮೌಸ್ - ಸ್ಪೀಕರ್ ಇತ್ಯಾದಿ ನಾಲ್ಕಾರು ಪ್ರತ್ಯೇಕ ಅಂಗಗಳಿರುವ ಕಂಪ್ಯೂಟರನ್ನು ಡೆಸ್ಕ್‌ಟಾಪ್ ('ಡೆಸ್ಕ್‌ಟಾಪ್ ಕಂಪ್ಯೂಟರ್'ನ ಹ್ರಸ್ವರೂಪ) ಎಂದು ಕರೆಯುವುದು ಸಾಮಾನ್ಯ ಅಭ್ಯಾಸ. ಒಂದು ಕಾಲಕ್ಕೆ ಅತ್ಯಂತ ವ್ಯಾಪಕ ಬಳಕೆಯಲ್ಲಿದ್ದು ಇದೀಗ ನಿಧಾನಕ್ಕೆ ಮರೆಯಾಗುತ್ತಿರುವ ಕಂಪ್ಯೂಟರ್ ಮಾದರಿ ಇದು. ಹಾಗೆಂದಮಾತ್ರಕ್ಕೆ ಡೆಸ್ಕ್‌ಟಾಪ್ ಎಂಬ ಹೆಸರಿನ ಅರ್ಥ ಮೇಜಿನ ಮೇಲೆ ಕೂರುವ ಕಂಪ್ಯೂಟರು ಎಂದಷ್ಟೇ ಅಲ್ಲ. ಕಂಪ್ಯೂಟರ್ (ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಯಾವುದೇ ಇರಲಿ) ಆನ್ ಮಾಡಿದಾಗ ಪರದೆಯೊಂದು ಕಾಣುತ್ತದಲ್ಲ, ಬೇರೆಬೇರೆ ಐಕನ್‌ಗಳಿರುವಂಥದ್ದು, ಅದನ್ನೂ ಡೆಸ್ಕ್‌ಟಾಪ್ ಎಂದೇ ಕರೆಯುತ್ತಾರೆ. ಕಂಪ್ಯೂಟರ್ ಇಲ್ಲದ ಕಾಲದಲ್ಲಿ ಕೆಲಸದ ಮೇಜಿನ ಮೇಲೆ ಇರುತ್ತಿದ್ದ ವಸ್ತುಗಳೆಲ್ಲ ಈಗ ಕಂಪ್ಯೂಟರಿನ ಈ ಪರದೆಯ ಮೇಲೆ ಇರುತ್ತವಲ್ಲ, ಅದರಿಂದಾಗಿಯೇ ಈ ಪರದೆಗೆ 'ಡೆಸ್ಕ್‌ಟಾಪ್' ಎಂಬ ಹೆಸರು ಬಂದಿದೆ. ಕಡತ - ಪುಸ್ತಕಗಳನ್ನೆಲ್ಲ ವಿನ್ಯಾಸಗೊಳಿಸುವ ಕೋರೆಲ್‌ಡ್ರಾ, ಇನ್‌ಡಿಸೈನ್ ಮುಂತಾದ ತಂತ್ರಾಂಶಗಳನ್ನು 'ಡಿಟಿಪಿ' ತಂತ್ರಾಂಶಗಳೆಂದು ಕರೆಯುತ್ತಾರೆ. ಇಲ್ಲಿ ಡಿಟಿಪಿ ಎಂದರೆ ಡೆಸ್ಕ್‌ಟಾಪ್ ಪಬ್ಲಿಶಿಂಗ್. ಮುದ್ರಣಾಲಯದ ಮೇಜಿನ ಮೇಲೆ ಮೊಳೆಜೋಡಿಸಿ ಮಾಡುತ್ತಿದ್ದ ಕೆಲಸ ಈಗ ಕಂಪ್ಯೂಟರಿನಲ್ಲೇ ಆಗುತ್ತದಲ್ಲ, ಹಾಗಾಗಿ ಇಲ್ಲಿಯೂ ಡೆಸ್ಕ್‌ಟಾಪ್ ಬಂದಿದೆ.

Datatype
ಡೇಟಾಟೈಪ್
(ರೂಪಿಸಬೇಕಿದೆ)
ಯಾವುದೇ ತಂತ್ರಾಂಶದಲ್ಲಿ ಬಳಕೆಯಾಗುವ ದತ್ತಾಂಶ (ಡೇಟಾ) ಯಾವ ಬಗೆಯದಾಗಿರಬೇಕು ಎನ್ನುವುದನ್ನು ಸೂಚಿಸುವ ಅಂಶ
ತಂತ್ರಾಂಶಗಳು ಸದಾಕಾಲವೂ ಒಂದಲ್ಲ ಒಂದು ಬಗೆಯ ದತ್ತಾಂಶವನ್ನು (ಡೇಟಾ) ಬಳಸುತ್ತಿರುತ್ತವೆ. ಬಳಕೆದಾರರು ದಾಖಲಿಸುವ (ಇನ್‌ಪುಟ್) ದತ್ತಾಂಶ, ಆಂತರಿಕ ಲೆಕ್ಕಾಚಾರಗಳಿಗೆ ಬಳಕೆಯಾಗುವ ದತ್ತಾಂಶ, ಅಂತಿಮವಾಗಿ ಉತ್ತರವನ್ನು (ಔಟ್‌ಪುಟ್) ಸಿದ್ಧಪಡಿಸಲು ಬೇಕಾದ ದತ್ತಾಂಶಗಳೆಲ್ಲ ಈ ಪಟ್ಟಿಯಲ್ಲಿ ಸೇರುತ್ತವೆ. ಇಂತಹ ಪ್ರತಿ ಉದಾಹರಣೆಯಲ್ಲೂ ಯಾವ ಬಗೆಯ ದತ್ತಾಂಶವನ್ನು ನಿರೀಕ್ಷಿಸಬೇಕು ಎನ್ನುವ ವಿವರವನ್ನು ತಂತ್ರಾಂಶದಲ್ಲಿ ಮುಂಚಿತವಾಗಿಯೇ ನೀಡಲಾಗಿರುತ್ತದೆ: ಜನ್ಮದಿನ ದಾಖಲಿಸುವಂತೆ ಬಳಕೆದಾರರನ್ನು ಕೇಳಿದ್ದರೆ ಅದಕ್ಕೆ ಪ್ರತಿಯಾಗಿ ಒಂದು ದಿನಾಂಕವೇ ಸಿಗಬೇಕು ಎಂದು ತಂತ್ರಾಂಶಕ್ಕೆ ಗೊತ್ತಿರುತ್ತದೆ. ಇದೇ ರೀತಿ ಪಿನ್‌ಕೋಡ್‌ನಲ್ಲಿ ಅಂಕಿಗಳೇ ಇರಬೇಕು, ಹಣ ವರ್ಗಾಯಿಸುವಾಗ ರೂಪಾಯಿಗಳ ಜೊತೆಗೆ ಪೈಸೆಗಳನ್ನೂ ನಮೂದಿಸಬಹುದು ಎನ್ನುವಂತಹ ನಿಯಮಗಳೂ ಇರುತ್ತವೆ. ಸಂಖ್ಯೆಯೊಂದರಲ್ಲಿ ಎಷ್ಟು ಅಂಕಿಗಳಿರಬಹುದು, ಪಠ್ಯದಲ್ಲಿ ಎಷ್ಟು ಅಕ್ಷರಗಳಿರಬಹುದು ಎನ್ನುವಂತಹ ನಿರ್ಬಂಧಗಳನ್ನೂ ಇಡುವುದು ಸಾಧ್ಯ. ಹೀಗೆ ಯಾವ ದತ್ತಾಂಶ ಯಾವ ಬಗೆಯದಾಗಿರಬೇಕು ಎನ್ನುವುದನ್ನು ಅದರ ಡೇಟಾಟೈಪ್ (ದತ್ತಾಂಶದ ಬಗೆ) ಸೂಚಿಸುತ್ತದೆ. ಅಂಕಿಗಳು, ದಶಾಂಶಗಳು, ಅಕ್ಷರಗಳು, ದಿನಾಂಕ - ಹೀಗೆ ಡೇಟಾಟೈಪ್‌ಗಳಲ್ಲಿ ಹಲವು ವಿಧ. ತಂತ್ರಾಂಶ ಯಾವ ಬಗೆಯ ದತ್ತಾಂಶವನ್ನು ನಿರೀಕ್ಷಿಸುತ್ತದೋ ಅದನ್ನು ಅದೇ ಬಗೆಯಲ್ಲಿ ನೀಡದಿದ್ದರೆ ತಂತ್ರಾಂಶದ ಕಾರ್ಯಾಚರಣೆಯಲ್ಲಿ ಅಡಚಣೆಯಾಗುವ ಸಾಧ್ಯತೆ ಇರುತ್ತದೆ.

Database
ಡೇಟಾಬೇಸ್
ದತ್ತಸಂಚಯ
ದತ್ತಾಂಶವನ್ನು ವ್ಯವಸ್ಥಿತವಾಗಿ ಶೇಖರಿಸಿಟ್ಟು, ಅಗತ್ಯಬಿದ್ದಾಗ ಅಗತ್ಯಬಿದ್ದ ರೂಪದಲ್ಲಿ ಪಡೆದುಕೊಳ್ಳಲು ನೆರವಾಗುವ ವ್ಯವಸ್ಥೆ
ದಿನಸಿ ಅಂಗಡಿಯಿಂದ ತರಬೇಕಾದ ಸಾಮಾನು, ತಿಂಗಳ ಮೊದಲಲ್ಲಿ ಪಾವತಿಸಬೇಕಾದ ಬಿಲ್ಲುಗಳು, ಮಕ್ಕಳು ಬೇರೆಬೇರೆ ವಿಷಯದಲ್ಲಿ ಗಳಿಸಿದ ಅಂಕಗಳು, ಆಪ್ತರ ದೂರವಾಣಿ ಸಂಖ್ಯೆಗಳು - ಹೀಗೆ ನಾವು ಸದಾಕಾಲ ವಿವಿಧ ಬಗೆಯ ದತ್ತಾಂಶಗಳನ್ನು (ಡೇಟಾ) ನಿಭಾಯಿಸುತ್ತಲೇ ಇರುತ್ತೇವೆ. ವೈಯಕ್ತಿಕ ಉದಾಹರಣೆಗಳಲ್ಲಿ ಇಂತಹ ದತ್ತಾಂಶದ ಪ್ರಮಾಣ ಕಡಿಮೆಯಿರುತ್ತದೆ - ಹೈಸ್ಕೂಲು ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿ ಏಳೆಂಟು ವಿಷಯಗಳಿರುತ್ತವಲ್ಲ, ಹಾಗೆ. ಆದರೆ ಯಾವುದೋ ಬ್ಯಾಂಕಿನ ಗ್ರಾಹಕರ ಪಟ್ಟಿಯನ್ನೋ, ಆಧಾರ್‌ನಂತಹ ಯೋಜನೆಗಳಲ್ಲಿ ನೋಂದಾಯಿಸಿಕೊಂಡವರ ವಿವರಗಳನ್ನೋ ನೋಡಿದರೆ ಅಂತಹ ದತ್ತಾಂಶ ಅಪಾರ ಪ್ರಮಾಣದ ದಾಖಲೆಗಳನ್ನು ಒಳಗೊಂಡಿರುತ್ತದೆ. ಇಷ್ಟೆಲ್ಲ ಭಾರೀ ಪ್ರಮಾಣದ ದತ್ತಾಂಶವನ್ನು ಒಂದೆಡೆ ಶೇಖರಿಸಿಟ್ಟು, ಅಗತ್ಯಬಿದ್ದಾಗ ಅಗತ್ಯಬಿದ್ದ ರೂಪದಲ್ಲಿ ಅದನ್ನು ಪಡೆದುಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆಯನ್ನು ಡೇಟಾಬೇಸ್ ಎಂದು ಕರೆಯುತ್ತಾರೆ. ದತ್ತಾಂಶವನ್ನು ಸುಲಭವಾಗಿ ದಾಖಲಿಸಲು, ಅದರಲ್ಲಿ ಬೇಕಾದುದನ್ನು ಹುಡುಕಲು, ಅಗತ್ಯ ರೀತಿಯಲ್ಲಿ ವಿಶ್ಲೇಷಿಸಲು ಹಾಗೂ ವಿವಿಧ ರೀತಿಯ ವರದಿಗಳನ್ನು (ರಿಪೋರ್ಟ್) ತಯಾರಿಸಲು ಡೇಟಾಬೇಸ್‌ಗಳು ನೆರವಾಗುತ್ತದೆ. ಸಂಖ್ಯೆಗಳು, ಪಠ್ಯ, ಚಿತ್ರ, ಕಡತಗಳು - ಹೀಗೆ ಹಲವು ಬಗೆಯ ದತ್ತಾಂಶಗಳನ್ನು ಡೇಟಾಬೇಸ್‌ಗಳ ಮೂಲಕ ನಿಭಾಯಿಸುವುದು ಸಾಧ್ಯ. ಇಂತಹ ಡೇಟಾಬೇಸ್‌ಗಳನ್ನು ನಿರ್ವಹಿಸುವ ತಂತ್ರಾಂಶಗಳನ್ನು ಡೇಟಾಬೇಸ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಡಿಬಿಎಂಎಸ್) ಎಂದು ಕರೆಯುತ್ತಾರೆ. ಮೈಕ್ರೋಸಾಫ್ಟ್ ಆಕ್ಸೆಸ್, ಒರೇಕಲ್, ಎಸ್‌ಕ್ಯೂಎಲ್ ಸರ್ವರ್‌ಗಳೆಲ್ಲ ಡಿಬಿಎಂಎಸ್‌ಗೆ ಉದಾಹರಣೆಗಳು.

Domain Name
ಡೊಮೈನ್ ನೇಮ್
(ರೂಪಿಸಬೇಕಿದೆ)
ಯಾವುದೇ ಜಾಲತಾಣವನ್ನು ಪ್ರತ್ಯೇಕವಾಗಿ ಗುರುತಿಸಲು ನೆರವಾಗುವ ಹೆಸರು
ಅಂತರಜಾಲದಲ್ಲಿ ಅಪಾರ ಸಂಖ್ಯೆಯ ಜಾಲತಾಣಗಳಿರುವುದರಿಂದ ಅವನ್ನೆಲ್ಲ ಪ್ರತ್ಯೇಕವಾಗಿ ಗುರುತಿಸುವುದು ಅನಿವಾರ್ಯ. ಜಾಲತಾಣಗಳನ್ನು ಹೀಗೆ ಗುರುತಿಸಲು ನೆರವಾಗುವ ಹೆಸರೇ ಡೊಮೈನ್ ನೇಮ್. ಇದನ್ನು 'ಡೊಮೈನ್' ಎಂದಷ್ಟೇ ಕರೆಯುವ ಅಭ್ಯಾಸವೂ ಇದೆ. ಇಜ್ಞಾನ ಜಾಲತಾಣದ ಉದಾಹರಣೆ ತೆಗೆದುಕೊಂಡರೆ "ejnana.com" ಎನ್ನುವುದು ಅದರ ಡೊಮೈನ್ ನೇಮ್. ಬಹುತೇಕ ವೆಬ್ ವಿಳಾಸಗಳ ಪ್ರಾರಂಭದಲ್ಲಿ ಕಾಣಿಸುವ "www" ಅದರ ಡೊಮೈನ್ ನೇಮ್‌ನ ಭಾಗವಲ್ಲ ಎನ್ನುವುದು ಗಮನಾರ್ಹ (ಅದೊಂದು ಪೂರ್ವಪ್ರತ್ಯಯ, ಅಂದರೆ ಪ್ರಿಫಿಕ್ಸ್ ಅಷ್ಟೇ). ಡೊಮೈನ್ ನೇಮ್‌ಗಳ ಕೊನೆಯಲ್ಲಿರುವ ಡಾಟ್ ಕಾಮ್, ಡಾಟ್ ಇನ್, ಡಾಟ್ ನೆಟ್ ಮುಂತಾದ ಬಾಲಂಗೋಚಿಗಳನ್ನು 'ಡೊಮೈನ್ ಸಫಿಕ್ಸ್' (ಸಫಿಕ್ಸ್ = ಅಂತ್ಯಪ್ರತ್ಯಯ) ಎಂದು ಕರೆಯುತ್ತಾರೆ. ಪೂರ್ಣಪ್ರಮಾಣದ ಪ್ರತಿ ಜಾಲತಾಣಕ್ಕೂ ತನ್ನದೇ ಆದ ವಿಶಿಷ್ಟ ಡೊಮೈನ್ ನೇಮ್ ಇರಬೇಕಾದ್ದು ಅತ್ಯಗತ್ಯ - ಅಂದರೆ ಇಡೀ ಅಂತರಜಾಲದಲ್ಲಿ ಒಂದೇ ಒಂದು ejnana.com ಮಾತ್ರವೇ ಇರಬಹುದು. ಆದರೆ ಒಂದು ಡೊಮೈನ್ ನೇಮ್ ಅಡಿಯಲ್ಲಿ ಇನ್ನಷ್ಟು ಡೊಮೈನ್ ನೇಮ್‌ಗಳನ್ನು ರೂಪಿಸಿಕೊಳ್ಳುವುದು, ಅದನ್ನು ಬೇರೆಬೇರೆ ಜಾಲತಾಣಗಳಿಗೆ - ಪುಟಗಳಿಗೆ ನಿಯೋಜಿಸುವುದು ಸಾಧ್ಯ (ಉದಾ: ejnana.com ಅಡಿಯಲ್ಲಿ learning.ejnana.com, techbook.ejnana.com ಇತ್ಯಾದಿ). ಮೂಲ ತಾಣದ ಡೊಮೈನ್ ನೇಮ್ ಅನ್ನು ಅಂತ್ಯಪ್ರತ್ಯಯದಂತೆ ಬಳಸುವ ಇಂತಹ ವಿಳಾಸಗಳಿಗೆ 'ಸಬ್‌ಡೊಮೈನ್'ಗಳೆಂದು ಹೆಸರು. ಉಚಿತ ಜಾಲತಾಣಗಳನ್ನು, ಬ್ಲಾಗ್‌ಗಳನ್ನು ಒದಗಿಸುವ ವ್ಯವಸ್ಥೆಗಳು (ಉದಾ: ಗೂಗಲ್‌ನ ಬ್ಲಾಗರ್) ತಮ್ಮ ಗ್ರಾಹಕರಿಗೆ ನೀಡುವುದು ಸಬ್‌ಡೊಮೈನ್‌ಗಳನ್ನೇ.
">

Domain Name Registrar
ಡೊಮೈನ್ ನೇಮ್ ರಿಜಿಸ್ಟ್ರಾರ್
(ರೂಪಿಸಬೇಕಿದೆ)
ಗ್ರಾಹಕರಿಗೆ ಡೊಮೈನ್ ನೇಮ್‌ಗಳನ್ನು ಒದಗಿಸುವ ಹಾಗೂ ಡೊಮೈನ್ ನೇಮ್ ಸಿಸ್ಟಂಗಳನ್ನು ನಿಭಾಯಿಸುವ ಸಂಸ್ಥೆ
ಪ್ರಚಾರಕ್ಕಾಗಿ, ವ್ಯಾಪಾರಕ್ಕಾಗಿ, ಹವ್ಯಾಸಕ್ಕಾಗಿ - ಹೀಗೆ ಹಲವಾರು ಉದ್ದೇಶಗಳಿಗಾಗಿ ಜಾಲತಾಣಗಳನ್ನು (ವೆಬ್‌ಸೈಟ್) ರೂಪಿಸಿಕೊಳ್ಳುವುದು ಸಾಮಾನ್ಯ ಅಭ್ಯಾಸ. ಜಾಲತಾಣ ರೂಪಿಸುವಾಗ ತಮ್ಮದೇ ಸ್ವಂತ ವಿಳಾಸ, ಅಂದರೆ ಡೊಮೈನ್ ನೇಮ್ ಬೇಕೆನ್ನುವವರು (ಉದಾ: ಇಜ್ಞಾನ ಡಾಟ್ ಕಾಮ್) ವಾರ್ಷಿಕ ಬಾಡಿಗೆಯ ಆಧಾರದ ಮೇಲೆ ಅದನ್ನು ಪಡೆದುಕೊಳ್ಳುವುದು ಸಾಧ್ಯ. ಹೀಗೆ ಡೊಮೈನ್ ನೇಮ್‌ಗಳನ್ನು ಒದಗಿಸುವ ಹಾಗೂ ಡೊಮೈನ್ ನೇಮ್ ಸಿಸ್ಟಂಗಳನ್ನು ನಿಭಾಯಿಸುವ ಸಂಸ್ಥೆಗಳಿಗೆ 'ಡೊಮೈನ್ ನೇಮ್ ರಿಜಿಸ್ಟ್ರಾರ್'ಗಳೆಂದು ಹೆಸರು. ನಮಗೆ ಬೇಕಾದ ಜಾಲತಾಣದ ವಿಳಾಸವನ್ನು ಇಂತಹ ರಿಜಿಸ್ಟ್ರಾರ್‌ಗಳ ಮೂಲಕವೇ ಪಡೆದುಕೊಳ್ಳಬೇಕು. ನಿಮಗೆ ಯಾವ ಬಾಲಂಗೋಚಿಯಿರುವ ವಿಳಾಸ ಬೇಕು ಎನ್ನುವುದರ ಮೇಲೆ ನೀವು ಪಾವತಿಸಬೇಕಾದ ಬಾಡಿಗೆಯ ಮೊತ್ತ ನಿರ್ಧಾರವಾಗುತ್ತದೆ. ಡಾಟ್ ಕಾಮ್, ಡಾಟ್ ಇನ್, ಡಾಟ್ ನೆಟ್ ಮುಂತಾದ ಆಯ್ಕೆಗಳ ಪೈಕಿ ನೀವು ಯಾವುದನ್ನು ಆರಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ಈ ಬಾಡಿಗೆಯ ಮೊತ್ತ ಒಂದೆರಡು ನೂರು ರೂಪಾಯಿಗಳಿಂದ ಸಾವಿರಗಳವರೆಗೂ ಇರಬಹುದು. ಡೊಮೈನ್ ನೇಮ್ ರಿಜಿಸ್ಟ್ರಾರ್‌ಗಳ ಜಾಲತಾಣದಲ್ಲಿ ನಮಗೆ ಬೇಕಾದ ಡೊಮೈನ್ ನೇಮ್ ಇನ್ನೂ ಲಭ್ಯವಿದೆಯೇ ಎಂದು ಪರೀಕ್ಷಿಸುವ, ಲಭ್ಯವಿದ್ದಲ್ಲಿ ನಿರ್ದಿಷ್ಟ ಅವಧಿಗೆ ಅದನ್ನು ಬಾಡಿಗೆಗೆ ಪಡೆಯುವ ಅವಕಾಶ ಇರುತ್ತದೆ.

Domain Parking
ಡೊಮೈನ್ ಪಾರ್ಕಿಂಗ್
(ರೂಪಿಸಬೇಕಿದೆ)
ಮುಂದೆಂದೋ ಬೇಕಾಗಬಹುದಾದ ಜಾಲತಾಣದ ವಿಳಾಸವನ್ನು ಈಗಲೇ ಕಾದಿರಿಸಿಕೊಳ್ಳುವ ಅಭ್ಯಾಸ
ಮಾಹಿತಿ ಪ್ರಸಾರದಿಂದ ಪ್ರಾರಂಭಿಸಿ ವ್ಯಾಪಾರದವರೆಗೆ ಅನೇಕ ಉದ್ದೇಶಗಳಿಗಾಗಿ ಜಾಲತಾಣಗಳನ್ನು ಬಳಸುವುದು ಸಾಮಾನ್ಯ. ಹೊಸದೊಂದು ಯೋಜನೆ ಕೈಗೆತ್ತಿಕೊಳ್ಳುವಾಗ ಅದಕ್ಕೆ ಹೊಂದುವಂತಹ ಹೆಸರಿನ ಜಾಲತಾಣ (ಡೊಮೈನ್ ನೇಮ್) ಲಭ್ಯವಿದೆಯೇ ಎಂದು ಪರೀಕ್ಷಿಸುವುದೂ ಅಪರೂಪವೇನಲ್ಲ. ಹೀಗಾಗಿಯೇ ಜಾಲತಾಣಗಳಿಗೆ ಇದೀಗ ಎಲ್ಲಿಲ್ಲದ ಮಹತ್ವ. ಮುಂದೆಂದೋ ಬೇಕಾಗಬಹುದಾದ ಜಾಲತಾಣದ ವಿಳಾಸವನ್ನು ಈಗಲೇ ಕಾದಿರಿಸಿಕೊಳ್ಳುವ ಅಭ್ಯಾಸಕ್ಕೆ ಕಾರಣವಾಗಿರುವುದು ಇದೇ ಅಂಶ. ಈ ಅಭ್ಯಾಸವನ್ನು 'ಡೊಮೈನ್ ಪಾರ್ಕಿಂಗ್' ಎಂದು ಕರೆಯುತ್ತಾರೆ. ಮುಂದೊಮ್ಮೆ ನಮಗೆ ಬೇಕಾಗಬಹುದಾದ, ನಮ್ಮ ವಿರುದ್ಧ ಅಪಪ್ರಚಾರ ಮಾಡಲು ಬಳಕೆಯಾಗಬಲ್ಲಂತಹ ಹೆಸರಿನ ತಾಣಗಳನ್ನು ಹೀಗೆ ಕಾದಿರಿಸಿಕೊಳ್ಳುವ ಮೂಲಕ ಅದು ಕುತಂತ್ರಿಗಳ ಕೈಸೇರದಂತೆ ತಡೆಯುವುದು ಸಾಧ್ಯವಾಗುತ್ತದೆ. ನಮ್ಮ ತಾಣದ ಹೆಸರಿನಂತೆಯೇ ಕಾಣುವ (ಉದಾ: paypal ಬದಲು paypa1) ಹೆಸರಿನ ತಾಣಗಳನ್ನು ಕಾದಿರಿಸಿಕೊಳ್ಳುವ ಮೂಲಕ ಫಿಶಿಂಗ್‌ನಂತಹ ಆನ್‌ಲೈನ್ ವಂಚನೆಗಳನ್ನೂ ತಡೆಯಬಹುದು. ಹೀಗೆ ಪಾರ್ಕ್ ಮಾಡಲಾದ ಜಾಲತಾಣಗಳಲ್ಲಿ 'ಶೀಘ್ರವೇ ಬರಲಿದೆ' ಎನ್ನುವಂತಹ ಸಂದೇಶಗಳನ್ನು (ಹಾಗೂ ಕೆಲವೊಮ್ಮೆ ಜಾಹೀರಾತುಗಳನ್ನು) ಬಿಟ್ಟರೆ ಬೇರೆ ಯಾವ ಮಾಹಿತಿಯೂ ಇರುವುದಿಲ್ಲ. ಮುಂದೆ ಹೆಚ್ಚು ಹಣಕ್ಕೆ ಮಾರಲೆಂದು ಡೊಮೈನ್ ನೇಮ್‌ಗಳನ್ನು ಕೊಂಡಿಟ್ಟುಕೊಳ್ಳುತ್ತಾರಲ್ಲ (ಸೈಬರ್ ಸ್ಕ್ವಾಟರ್‍ಸ್), ಅವರು ಇಂತಹ ತಾಣಗಳಲ್ಲಿ ಆಸಕ್ತ ಗ್ರಾಹಕರಿಗೆಂದು ತಮ್ಮ ಸಂಪರ್ಕ ವಿವರಗಳನ್ನೂ ಪ್ರಕಟಿಸಿರುತ್ತಾರೆ. ಅಷ್ಟೇ ಅಲ್ಲ, ತಾಣಗಳು ಮಾರಾಟವಾಗುವವರೆಗೂ ಅದರಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಿ ಒಂದಷ್ಟು ಹಣವನ್ನೂ ಸಂಪಾದಿಸಿಕೊಳ್ಳುತ್ತಾರೆ.

Downtime
ಡೌನ್‌ಟೈಮ್
(ರೂಪಿಸಬೇಕಿದೆ)
ಯಾವುದೇ ಕಂಪ್ಯೂಟರ್ ವ್ಯವಸ್ಥೆಯ ಕಾರ್ಯಾಚರಣೆ ಸ್ಥಗಿತವಾಗಿರುವ ಅವಧಿ
ಬ್ಯಾಂಕಿಂಗ್ ವ್ಯವಹಾರ, ಆನ್‌ಲೈನ್ ಸೇವೆಗಳು, ಕಚೇರಿ ನಿರ್ವಹಣೆ ಮುಂತಾದ ಅನೇಕ ಉದ್ದೇಶಗಳಿಗಾಗಿ ಕಂಪ್ಯೂಟರ್ ವ್ಯವಸ್ಥೆಗಳು ಬಳಕೆಯಾಗುತ್ತವೆ. ಇವುಗಳ ಅಗತ್ಯ ಯಾವಾಗ ಬೇಕಾದರೂ ಬೀಳಬಹುದಲ್ಲ, ಹಾಗಾಗಿ ಈ ಕಂಪ್ಯೂಟರ್ ವ್ಯವಸ್ಥೆಗಳು ವರ್ಷದ ಎಲ್ಲ ದಿನಗಳಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಕೆಲಸಮಾಡುತ್ತಿರುತ್ತವೆ. ಇಷ್ಟೂ ಸಮಯ ಅವುಗಳ ಕಾರ್ಯಾಚರಣೆ ಸುಗಮವಾಗಿರಬೇಕು ಎನ್ನುವುದು ಎಲ್ಲರ ಅಪೇಕ್ಷೆ. ಆದರೆ ಅನೇಕ ಕಾರಣಗಳಿಂದ ಇದು ಸಾಧ್ಯವಾಗದೆ ಹೋಗಬಹುದು; ಯಾಂತ್ರಿಕ ವೈಫಲ್ಯ, ತಂತ್ರಾಂಶದ ಸಮಸ್ಯೆ, ಕುತಂತ್ರಾಂಶಗಳ ಹಾವಳಿ - ಹೀಗೆ ಅನೇಕ ಸಂಗತಿಗಳು ಕಂಪ್ಯೂಟರ್ ವ್ಯವಸ್ಥೆಗಳ ಕಾರ್ಯಾಚರಣೆಗೆ ಅಡ್ಡಿಪಡಿಸಬಲ್ಲವು. ಇಂತಹ ಯಾವುದೇ ಕಾರಣದಿಂದ ಕಾರ್ಯಾಚರಣೆ ನಿಂತುಹೋಗುತ್ತದಲ್ಲ, ಹಾಗೆ ಅವುಗಳ ಸೇವೆ ಅಲಭ್ಯವಾಗಿರುವ ಅವಧಿಯನ್ನು 'ಡೌನ್‌ಟೈಮ್' ಎಂದು ಕರೆಯುತ್ತಾರೆ. ಇದಕ್ಕೆ ಔಟೇಜ್ ಎಂಬ ಹೆಸರೂ ಇದೆ. ಯಾಂತ್ರಿಕ ವೈಫಲ್ಯ, ಅಂತರಜಾಲ ಸಂಪರ್ಕದ ಅಡಚಣೆ ಮುಂತಾದ ಸಂದರ್ಭಗಳಲ್ಲಿ ಡೌನ್‌ಟೈಮ್ ಅನಿರೀಕ್ಷಿತವಾಗಿ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅಡಚಣೆಯನ್ನು ಕ್ಷಿಪ್ರವಾಗಿ ನಿವಾರಿಸಿ ಕಂಪ್ಯೂಟರ್ ವ್ಯವಸ್ಥೆಯ ಕಾರ್ಯಾಚರಣೆಯನ್ನು ಪುನರಾರಂಭಿಸಲು ತಂತ್ರಜ್ಞರ ತಂಡ ಸನ್ನದ್ಧವಾಗಿರುತ್ತದೆ. ಯಂತ್ರಾಂಶಗಳ ಬದಲಾವಣೆ, ಕಂಪ್ಯೂಟರ್ ವ್ಯವಸ್ಥೆ ಅಥವಾ ತಂತ್ರಾಂಶದ ಉನ್ನತೀಕರಣದಂತಹ ಪೂರ್ವನಿರ್ಧಾರಿತ ಸನ್ನಿವೇಶಗಳಲ್ಲೂ ಡೌನ್‌ಟೈಮ್ ಅಗತ್ಯವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಆ ಕಂಪ್ಯೂಟರ್ ವ್ಯವಸ್ಥೆಯ ಬಳಕೆದಾರರಿಗೆ ಡೌನ್‌ಟೈಮ್ ಕುರಿತ ಮಾಹಿತಿಯನ್ನು ಮುಂಚಿತವಾಗಿಯೇ ನೀಡಲಾಗಿರುತ್ತದೆ. ವ್ಯವಸ್ಥೆಯ ಬಳಕೆ ಕಡಿಮೆಯಿರುವ ಸಮಯಕ್ಕೆ (ಉದಾ: ರಾತ್ರಿ, ವಾರಾಂತ್ಯಗಳು ಇತ್ಯಾದಿ) ಸರಿಯಾಗಿ ಇಂತಹ ಡೌನ್‌ಟೈಮ್ ಅನ್ನು ಯೋಜಿಸಲಾಗುವುದು ಸಾಮಾನ್ಯ.

Knowledge Management
ನಾಲೆಜ್ ಮ್ಯಾನೇಜ್‌ಮೆಂಟ್
(ರೂಪಿಸಬೇಕಿದೆ)
ಯಾವುದೇ ಕೆಲಸಕ್ಕೆ ಮಹತ್ವದ್ದೆನಿಸುವ ತಿಳಿವಳಿಕೆಯನ್ನೆಲ್ಲ ಸೂಕ್ತವಾಗಿ ನಿರ್ವಹಿಸಲು ನೆರವಾಗುವ ಪ್ರಕ್ರಿಯೆ
ಸಣ್ಣ ಅಂಗಡಿಯಿಂದ ಬಹುರಾಷ್ಟ್ರೀಯ ಉದ್ದಿಮೆಯವರೆಗೆ ಪ್ರತಿಯೊಂದು ಸಂಸ್ಥೆಯಲ್ಲೂ ಜ್ಞಾನದ, ತಿಳಿವಳಿಕೆಯ ದೊಡ್ಡ ಸಂಗ್ರಹವೇ ಇರುತ್ತದೆ. ಪುಟ್ಟ ಬೇಕರಿಯಲ್ಲಿ ತಯಾರಿಸುವ ತಿನಿಸಿನ ಪಾಕವಿಧಾನ (ರೆಸೀಪಿ) ಇರಬಹುದು, ತಂತ್ರಾಂಶ ರಚನೆಯಲ್ಲಿ ಪಾಲಿಸಬೇಕಾದ ನಿಯಮಗಳಿರಬಹುದು, ಕಾರ್ಖಾನೆಯ ಬೃಹತ್ ಯಂತ್ರವನ್ನು ನಿರ್ವಹಿಸುವ ಸರಿಯಾದ ವಿಧಾನವೇ ಇರಬಹುದು - ಸಂಸ್ಥೆಯ ವ್ಯವಹಾರ ಸರಾಗವಾಗಿ ನಡೆಯಲು ಇಂತಹ ಜ್ಞಾನ ಅತ್ಯವಶ್ಯಕ. ಸಣ್ಣ ಸಂಸ್ಥೆಗಳಲ್ಲಿ ಇದನ್ನು ನಿಭಾಯಿಸುವುದು ಅಷ್ಟೇನೂ ಕಷ್ಟವಲ್ಲ, ನಿಜ. ಆದರೆ ಸಂಸ್ಥೆಯ ವಹಿವಾಟು, ಉದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತ ಹೋದಂತೆ ಅಗತ್ಯವಾದ ತಿಳಿವಳಿಕೆ ಅಗತ್ಯಬಿದ್ದ ತಕ್ಷಣದಲ್ಲೇ ಸಿಗುವಂತೆ ನೋಡಿಕೊಳ್ಳಲು ಬೇಕಾದ ವ್ಯವಸ್ಥೆ ಇರಬೇಕಾಗುತ್ತದೆ. ಯಾವುದೋ ಯಂತ್ರದ ಕಾರ್ಯಾಚರಣೆಯಲ್ಲಿ ಅಡಚಣೆಯಾದ ಕ್ಷಣದಲ್ಲಿ ಅದನ್ನು ಸರಿಪಡಿಸಲು ಏನು ಮಾಡಬೇಕು ಎಂದು ಹುಡುಕಾಡುವಂತಾಗಬಾರದಲ್ಲ! ಇಂತಹ ಪರಿಸ್ಥಿತಿ ತಪ್ಪಿಸಿ, ಸಂಸ್ಥೆಗೆ ಮಹತ್ವದ್ದೆನಿಸುವ ತಿಳಿವಳಿಕೆಯನ್ನೆಲ್ಲ ಸೂಕ್ತವಾಗಿ ನಿರ್ವಹಿಸಲು ನೆರವಾಗುವ ಪ್ರಕ್ರಿಯೆಯನ್ನು 'ತಿಳಿವಳಿಕೆಯ ನಿರ್ವಹಣೆ' (ನಾಲೆಜ್ ಮ್ಯಾನೇಜ್‌ಮೆಂಟ್) ಎಂದು ಕರೆಯುತ್ತಾರೆ. ಈ ಪ್ರಕ್ರಿಯೆ ತಿಳಿವಳಿಕೆಯ ದಾಖಲಾತಿಯಿಂದ ಪ್ರಾರಂಭಿಸಿ ಅದರ ವ್ಯವಸ್ಥಿತ ಶೇಖರಣೆ, ನಿರ್ವಹಣೆ ಹಾಗೂ ಬಳಕೆಯ ಕುರಿತ ರೂಪುರೇಷೆಗಳನ್ನು ಒದಗಿಸುತ್ತದೆ. ಉದ್ಯೋಗಿಗಳಲ್ಲಿರಬಹುದಾದ ಹೊಸ ಜ್ಞಾನವನ್ನು ದಾಖಲಿಸುವುದು ಹಾಗೂ ಅನುಭವದ ಆಧಾರದ ಮೇಲೆ ಈಗಾಗಲೇ ದಾಖಲಾಗಿರುವುದನ್ನು ಬದಲಿಸುವುದು ಕೂಡ ಇದೇ ಪ್ರಕ್ರಿಯೆಯಡಿ ಬರುತ್ತದೆ.

Netiquette
ನೆಟಿಕೆಟ್
(ರೂಪಿಸಬೇಕಿದೆ)
ಅಂತರಜಾಲದ ಲೋಕದಲ್ಲಿ ಇತರರೊಡನೆ ಸಂವಹನ ನಡೆಸುವಾಗ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸುವ ಶಿಷ್ಟಾಚಾರ
ಶಾಲೆ, ಕಚೇರಿ, ಸಮಾರಂಭ, ಸಾರ್ವಜನಿಕ ಸ್ಥಳ ಮುಂತಾದ ಬೇರೆಬೇರೆ ಸಂದರ್ಭ-ಸ್ಥಳಗಳಲ್ಲಿ ನಮ್ಮ ವರ್ತನೆ ಹೀಗೆಯೇ ಇರಬೇಕು ಎಂದು ಸಮಾಜ ಅಪೇಕ್ಷಿಸುತ್ತದೆ. ಈ ಅಪೇಕ್ಷೆಗಳನ್ನು ನಿರ್ದೇಶಿಸುವುದು ಶಿಷ್ಟಾಚಾರ, ಅಂದರೆ ಎಟಿಕೆಟ್‌ನ ಕೆಲಸ. ಜಾಲಲೋಕದಲ್ಲೂ ನಾವು ಪಾಲಿಸಬೇಕಾದ ಇಂತಹುದೇ ಶಿಷ್ಟಾಚಾರ ಇದೆ. ಇಮೇಲ್ ಹಾಗೂ ಮೊಬೈಲ್ ಸಂದೇಶಗಳನ್ನು ಕಳಿಸುವಾಗ, ಸಮಾಜಜಾಲಗಳಲ್ಲಿ ಇತರರೊಡನೆ ಸಂವಹನ ನಡೆಸುವಾಗ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸುವ ಈ ಶಿಷ್ಟಾಚಾರವನ್ನು 'ನೆಟಿಕೆಟ್' ಎಂದು ಕರೆಯುತ್ತಾರೆ. ನೆಟ್ ಹಾಗೂ ಎಟಿಕೆಟ್ ಎಂಬ ಪದಗಳ ಜೋಡಣೆಯಿಂದ ಸೃಷ್ಟಿಯಾಗಿರುವ ಹೆಸರು ಇದು. ಅನಗತ್ಯವಾಗಿ ಸಂದೇಶಗಳನ್ನು ಕಳಿಸುವುದು, ಇಮೇಲ್ ಸಂದೇಶಗಳಿಗೆ ಸುಖಾಸುಮ್ಮನೆ 'ರಿಪ್ಲೈ ಆಲ್' ಮಾಡುವುದು, ಸಿಕ್ಕಿದ್ದನ್ನೆಲ್ಲಾ ಫಾರ್‌ವರ್ಡ್ ಮಾಡುವುದು, ಬೇರೊಬ್ಬರ ಕುರಿತು ಇಲ್ಲಸಲ್ಲದ ಸುದ್ದಿ ಹಬ್ಬಿಸುವುದು, ನಮಗೆ ದೊರೆತ ಮಾಹಿತಿಯ ದುರ್ಬಳಕೆ ಮಾಡಿಕೊಳ್ಳುವುದು - ಇವೆಲ್ಲ ಸರಿಯಲ್ಲ ಎಂದು ನೆಟಿಕೆಟ್ ಹೇಳುತ್ತದೆ. ಹಾಗೆಯೇ ಜಾಲಲೋಕದ ಎಲ್ಲ ಬಳಕೆದಾರರೂ ಇತರರ ಖಾಸಗಿತನವನ್ನು ಗೌರವಿಸಬೇಕು ಎನ್ನುವುದು ನೆಟಿಕೆಟ್‌ನ ನಿರೀಕ್ಷೆ. ಅಂದಹಾಗೆ ಈ ಶಿಷ್ಟಾಚಾರ ಎಲ್ಲೋ ಒಂದೆಡೆ ಬರೆದಿಟ್ಟ ನಿಯಮಗಳ ಪಟ್ಟಿಯೇನಲ್ಲ. ತಂತ್ರಜ್ಞಾನ ಬದಲಾದಂತೆ ಬಳಕೆದಾರರಿಂದ ಸಮುದಾಯ ನಿರೀಕ್ಷಿಸುವ ಅಂಶಗಳೂ ಬದಲಾಗುತ್ತ ಹೋಗುತ್ತವೆ. ಕಂಪ್ಯೂಟರಿನಲ್ಲಿ - ಮೊಬೈಲಿನಲ್ಲಿ ಕನ್ನಡ ಟೈಪ್ ಮಾಡುವ ಎಷ್ಟೆಲ್ಲ ಸೌಲಭ್ಯಗಳು ಈಗ ಲಭ್ಯವಿವೆಯಲ್ಲ, ನಮ್ಮ ಸಂವಹನಕ್ಕೆ ಕಂಗ್ಲಿಶ್ (ಇಂಗ್ಲಿಶ್ ಲಿಪಿಯಲ್ಲಿ ಬರೆದ ಕನ್ನಡ) ಬದಲು ಕನ್ನಡ ಲಿಪಿಯನ್ನೇ ಬಳಸುವುದು ಒಳ್ಳೆಯದು ಎಂಬ ಶಿಷ್ಟಾಚಾರವನ್ನು ನಾವೇ ಬೇಕಾದರೂ ರೂಪಿಸಿಕೊಳ್ಳಬಹುದು - ಪಾಲಿಸಬಹುದು!


logo