logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಕಂದ್ಲಿ
ಹೊಲಗದ್ದೆಗಳ ಬದುಗಳಲ್ಲಿ ಬೆಳೆದ ಮರಗಿಡಗಳ ರೆಂಬೆ ಕೊಂಬೆಗಳನ್ನು ಕಡಿಯಲು, ಸೌದೆ ಕಡಿಯಲು, ಮನೆಗಳಲ್ಲಿ ಮಾಂಸ ತುಂಡರಿಸಲು ಬಳಕೆ ಮಾಡುತ್ತಾರೆ. ಒಂದು ಅಡಿ ಉದ್ದವಿದ್ದು ಮುಂಭಾಗ ಸ್ವಲ್ಪ ಬಾಗಿರುತ್ತದೆ. ಇದನ್ನು ಕಬ್ಬಿಣದಿಂದ ತಯಾರಿಸಿದ್ದಾರೆ. ಕೊಡ್ಲಿ ಮತ್ತು ಮಚ್ಚುಗಳಿಂದ ಮಾಡುವ ಕೆಲಸಗಳನ್ನೂ ಈ ಆಯುಧದಿಂದ ಮಾಡುತ್ತಾರೆ.

ಕನ್ನಡಿ ಪೆಟ್ಟಿಗೆ
ಮನೆಗಳಲ್ಲಿ ಅಲಂಕಾರಕ್ಕಾಗಿ ಬಳಸುತ್ತಿದ್ದ ವಿಶೇಷ ವಸ್ತು/ಸಾಧನ. ಸಾಮಾನ್ಯವಾಗಿ ಒಂದರಿಂದ ಒಂದೂವರೆ ಅಡಿ ಅಗಲ, ಎರಡರಿಂದ ಎರಡೂವರೆ ಅಡಿ ಎತ್ತರದಲ್ಲಿರುತ್ತದೆ. ಹಗುರವಾದ ಮರದಿಂದ ತಯಾರಿಸಿದ ಈ ಪೆಟ್ಟಿಗೆಗೆ ಕನ್ನಡಿ ಗಾಜನ್ನು ಅಳವಡಿಸಿದ್ದಾರೆ. ಕೆಳಭಾಗದಲ್ಲಿ ಒಂದು ಪೆಟ್ಟಿಗೆಯನ್ನು ತಯಾರಿಸಿ ಅದರಲ್ಲಿ ಕುಂಕುಮ, ತಲೆಗೆ ಹಾಕುವ ಎಣ್ಣೆ, ಬಾಚಣಿಗೆ, ಸುಗಂಧ ದ್ರವ್ಯಗಳು ಮುಂತಾದವನ್ನು ಇಟ್ಟಿರುತ್ತಾರೆ. ತಲೆಬಾಚಿಕೊಳ್ಳಲು ಕೂಡ ಬಳಕೆಯಾಗುತ್ತದೆ. ಹೆಣ್ಣುಮಕ್ಕಳು ಅಲಂಕಾರ ಮಾಡಿಕೊಳ್ಳಲು ಈ ಕನ್ನಡಿ ಪಟ್ಟಿಗೆಯನ್ನು ಉಪಯೋಗಿಸುತ್ತಾರೆ.

ಕರ್ಜಿಕಾಯಿ ಒತ್ತೊಳ್ಳು
ಹಬ್ಬ ಹರಿದಿನ, ಜಾತ್ರೆ, ಉತ್ಸವ, ಮದುವೆ, ಮುಂಜಿಗಳಲ್ಲಿ ಕರ್ಜಿಕಾಯಿ ಮಾಡಲು ಬಳಸುವ ಪರಿಕರ. ಈ ಸಾಧನವು ಸುಮಾರು ಒಂದು ಅಡಿ ಉದ್ದವಿರುತ್ತದೆ. ಇದರ ಮಧ್ಯಭಾಗದಲ್ಲಿ ಸುಮಾರು ಐದು ಇಂಚಿನ ಸುಮಾರು ಅರ್ಧಚಂದ್ರಾಕಾರದ ಎರಡು ಒರಳುಗಳಿವೆ. ಇದರ ಎರಡು ಕಡೆಗೂ ಕಬ್ಬಿಣದ ಕೊಂಡಿಗಳನ್ನು ಹಾಕಿದ್ದಾರೆ. ಒರಳಿನ ಅರ್ಧವೃತ್ತಾಕಾರ ಭಾಗದಲ್ಲಿ ಗರಗಸದ ಪುಟ್ಟ ಹಲ್ಲುಗಳಂತೆ ಕಬ್ಬಿಣದ ತಗಡನ್ನು ಜೋಡಿಸಿರುತ್ತಾರೆ. ಹೆಚ್ಚಾಗಿ ವಿಶೇಷ ದಿನಗಳಲ್ಲಿ ವಿಶೇಷ ಅಡುಗೆ ಮಾಡುವ ಸಂದರ್ಭದಲ್ಲಿ ಈ ಸಲಕರಣೆಯನ್ನು ಬಳಸುತ್ತಾರೆ. ಮರ, ಲೋಹ, ಪ್ಲಾಸ್ಷಿಕ್‌ನಿಂದ ಇದನ್ನು ತಯಾರಿಸುತ್ತಾರೆ.

ಕಲೆ
ಜನಪದ ಬದುಕಲ್ಲಿ ಹಾಡು ಕುಣಿತಗಳದು ಸಿಂಹಪಾಲು. ಬದುಕಿನ ಕಷ್ಟಕಾರ್ಪಣ್ಯಗಳನ್ನು ಸಹ್ಯವಾಗಿಸಿಕೊಳ್ಳಲು, ಸುಖ ಸಂತೋಷಗಳನ್ನು ಇತರರಿಗೆ ಹಂಚಲು, ಕಲೆ ಮನುಷ್ಯಮನಸ್ಸಿಗೆ ಸೂಕ್ತ ಮಾಧ್ಯಮ. ಈ ವಿಭಾಗದಲ್ಲಿ ಕೆಲವು ಕಲಾ ಪರಿಕರಗಳನ್ನು ಪರಿಚಯ ಮಾಡಿಸಲು ಪ್ರಾರಂಭಿಸಿದೆ. ಇದರಲ್ಲಿ ಧಾರ್ಮಿಕ ಕಲಾಪರಿಕರಗಳು, ಮನೋರಂಜನೆ ಕಲಾಪರಿಕರಗಳು, ಮತ್ತು ಉಭಯೋದ್ದೇಶೀ ಪರಿಕರಗಳು ಒಳಗೊಳ್ಳುತ್ತವೆ. ದೃಶ್ಯ ಮತ್ತು ಶ್ರವ್ಯಕಲೆಗಳ ಪರಿಕರಗಳು ಜನಪದರ ಕಲಾಸಕ್ತಿಯ ದ್ಯೋತಕಗಳಾಗಿ ತಮ್ಮದೇ ವೈಶಿಷ್ಟಗಳನ್ನುಳ್ಳವು. ಈ ವಿಭಾಗದಲ್ಲಿ ಕೆಲವು ವಸ್ತುಗಳು ಮಾತ್ರ ಈ ಪ್ರಾಥಮಿಕ ಹಂತದಲ್ಲಿ ಅಡಕವಾಗಿವೆ. ಮುಂದಿನ ಸಂಪುಟಗಳು ಇನ್ನಷ್ಟು ಇಂಥ ಸಾಮಗ್ರಿಗಳಿಂದ ಸಂಪನ್ನವಾಗಲಿವೆ.

ಕಲ್ಪಟ್ಟಿ
ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಅಡುಗೆ ಮಾಡುವ ಆಟಕ್ಕಾಗಿ ಇದನ್ನು ಬಳಸುತ್ತಾರೆ. ಇದು ಸುಮಾರು೨ ಇಂಚು ವ್ಯಾಸ ಇದೆ. ಆಟ ಆಡುವ ಸಂದರ್ಭದಲ್ಲಿ ಚಟ್ನಿ, ಹಿಂಡಿ, ಮೊಸರು ಇಡುವ ಪಾತ್ರವನ್ನಾಗಿ ಇದನ್ನು ಬಳಕೆ ಮಾಡುತ್ತಾರೆ. ಬಳಪದ ಕಲ್ಲಿನಿಂದ ತಯಾರಿಸಲಾಗಿದೆ.

ಕಲ್ಬಟ್ಟಿ/ಕಲ್ಪಟ್ಟಿ
ಉಪ್ಪಿನಕಾಯಿ, ಚಟ್ನಿಪುಡಿ, ಖಾರದ ಹಿಂಡಿ, ಅರಸಿನ ಪುಡಿ, ಖಾರಪುಡಿ (ಮೆಣಸಿನಪುಡಿ) ಮುಂತಾದವುಗಳನ್ನು ಜೋಪಾನವಾಗಿಡಲು ಬಳಸುವ ಸಾಧನ. ಇದರ ಗಾತ್ರ, ಆಕಾರಗಳಲ್ಲಿ ವ್ಯತ್ಯಾಸ ಇರುತ್ತದೆ. ಬೆಣ್ಣೆಯನ್ನು ಕೂಡ ಕಲ್ಬಟ್ಟಿಯಲ್ಲಿ ಜೋಪಾನವಾಗಿ ಇಟ್ಟುಕೊಳ್ಳಬಹುದು. ಕೆಲವು ಕಲ್ಬಟ್ಟಗಳಿಗೆ ಕಲ್ಲಿನದೇ ಮುಚ್ಚಳ ಕೂಡ ಇರುತ್ತದೆ. ಇದನ್ನು ಕರಿಕಲ್ಲಿನಿಂದ ತಯಾರಿಸುತ್ತಾರೆ. ಇದರಲ್ಲಿರಿಸಿದ ವಸ್ತುಗಳು ಬೇಗ ಕೆಡುವುದಿಲ್ಲ ಎಂಬುದು ಜನಪದರ ಅನುಭವ.

ಕಲ್ಬಾನಿ /ಕಲ್ಲುಬಾನಿ
ಕಲ್‌ಗಚ್ಚು ನೀರನ್ನು (ದ್ರವ ವಸ್ತುಗಳನ್ನು) ಸಂಗ್ರಹಿಸಿಡುವ ಸಾಧನ. ಇದು ಸುಮಾರು ಎಂಟು ಇಂಚು ಉದ್ದವಿದ್ದು ತಳಭಾಗವು ಸುಮಾರು ೬ ಇಂಚು ವ್ಯಾಸವಿದೆ, ಹಿಡಿಯಲು ಎರಡು ಕಡೆಗೂ ಹಿಡಿಕೆಗಳಿವೆ. ಒಣ ಮೆಣಸಿನಕಾಯಿ, ಸಾವಿಗೆ, ಉಪ್ಪಿನಕಾಯಿ ಹಾಗೂ ಇದರಲ್ಲೇ ಸ್ವಲ್ಪದೊಡ್ಡ ಬಾನಿಗಳು ದನ, ಕರು, ಎತ್ತು, ಎಮ್ಮೆಗಳಿಗೆ ಕುಡಿಯಲಿಕ್ಕೆ ಮನೆ ಮುಸುರೆ ತುಂಬಿಡಲು ಹಾಗೂ ಅನ್ನ, ಹುರುಳಿ ಬಸಿಯಲಿ ಬಳಕೆಯಾಗುತ್ತದೆ. ಅಲ್ಲದೇ ಉಂಡಿ(ಸಿಹಿ ತಿಂಡಿಗಳು) ಮುಂತಾದವುಗಳನ್ನು ಹಾಕಿಡಲೂ ಸಹ ಬಳಸುತ್ತಾರೆ. ಕಲ್ಬಾನಿಯನ್ನು ಬಳಪದ ಕಲ್ಲಿನಿಂದ ತಯಾರಿಸಲಾಗುತ್ತದೆ.

ಕಲ್ಲಿ/ಜಾನುವಾರುಗಳ ಮೈ ಉಜ್ಜುವ ಕಲ್ಲಿ
ಇದು ಪಶುಪಾಲನೆಗೆ ಸಂಬಂಧಿಸಿದ ಕೆಲಸಕ್ಕೆ ಬಳಸುವ ಸಾಧನ. ಎತ್ತು, ದನಕರುಗಳ ಮೈ ಉಜ್ಜಲು (ಮಾಲೀಸು) ಇದನ್ನು ಬಳಸುತ್ತಾರೆ. ಇದರಿಂದ ಅವುಗಳ ಚರ್ಮವು ಕಾಂತಿಯುತವಾಗುತ್ತದೆ. ಎತ್ತುಗಳು ದಣಿದಾಗ ಕೂಡ ಕಲ್ಲಿಯಿಂದ ಅವುಗಳ ಮೈ ಉಜ್ಜುತ್ತಾರೆ. ಇದರಿಂದ ಅವುಗಳ ಬಳಲಿಕೆ ಶಮನವಾಗುತ್ತದೆ. ಕಲ್ಲಿಯನ್ನು ತೆಂಗಿನನಾರನ್ನು ನೆಯ್ಗೆಮಾಡಿ ತಯಾರಿಸುತ್ತಾರೆ.

ಕಲ್ಲು ಕುಡಿಕೆ
ಚಟ್ನಿ, ಕಾರ, ಮೊಸರು ಮಂತಾದುವುಗಳನ್ನು ಇಡಲು ಬಳಸುವ ಪರಿಕರ. ಇದು ಸುಮಾರು ಅರ್ಧ ಅಡಿಯಿಂದ ಒಂಭತ್ತು ಇಂಚು ಎತ್ತರವಿರುತ್ತದೆ. ತಳಭಾಗ ಸಮತಟ್ಟಾಗಿದ್ದು ಮೇಲ್ಭಾಗವು ಸುಮಾರು ಐದರಿಂದ ಎಂಟು ಇಂಚು ವ್ಯಾಸವಿರುತ್ತದೆ. ಬಾಯಿಯ ಹೊರ ಅಂಚಿಗೆ ಅರ್ಧ ಇಂಚಿನ ಪಟ್ಟಿ ಇರುತ್ತದೆ. ತಳಭಾಗದಿಂದ ಮೇಲ್ಭಾಗಕ್ಕೆ ಹೋದಂತೆಲ್ಲಾ ಸುತ್ತಳತೆಯು ಚಿಕ್ಕದಾಗುತ್ತಾ ಹೋಗುತ್ತದೆ. ಇದರಲ್ಲಿ ಚಟ್ನಿ, ಕಾರ, ಮೊಸರು ಮುಂತಾದುವನ್ನು ಹಾಕಿಟ್ಟರೆ ಬಹಳ ದೀರ್ಘಕಾಲ ಕೆಡುವುದಿಲ್ಲ. ಕಲ್ಲು, ಕುಡಿಕೆಗಳ ಗಾತ್ರದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿರುತ್ತದೆ. ಇಂತಹ ಕುಡಿಕೆಗಳನ್ನು ಗ್ರಾಮೀಣ ಪ್ರದೇಶದ ಕೆಲವು ಮನೆಗಳಲ್ಲಿ ಇಂದಿಗೂ ಬಳಸುತ್ತಾರೆ. ಕಲ್ಲುಕುಡಿಕೆಯನ್ನು ಬಳಪದ ಕಲ್ಲಿನಿಂದ ತಯಾರಿಸುತ್ತಾರೆ.`

ಕಲ್ಲು ಚಟಗೆ
ಸಣ್ಣ ಪ್ರಮಾಣದಲ್ಲಿ ಉಪ್ಪು, ಖಾರ, ಉಪ್ಪಿನಕಾಯಿ ಮುಂತಾದುವನ್ನು ಹಾಕಿಡಲು ಬಳಸುವ ಬಳಪ ಕಲ್ಲಿನಿಂದ ಸಣ್ಣ ಪಾತ್ರೆ. ಇದರ ತಳವು ಚಪ್ಪಟೆಯಾಗಿರುವುದರಿಂದ ಭದ್ರವಾಗಿ ಸಮತಟ್ಟಾದ ಜಾಗದಲ್ಲಿ ಇಡುವುದಕ್ಕೆ ಅನುಕೂಲವಾಗಿದೆ. ತಳದ ವ್ಯಾಸವು ಹೆಚ್ಚು, ಬಾಯಿಯ ವ್ಯಾಸವು ಸ್ವಲ್ಪ ಕಡಿಮೆ ಇರುತ್ತದೆ. ಸುಮಾರು ನಾಲ್ಕು ಇಂಚು ವ್ಯಾಸದಿಂದ ಸುಮಾರು ಎಂಟು ಇಂಚಿನ ತನಕ ಬಾಯಿಯ ವ್ಯಾಸವಿರುತ್ತದೆ. ಚಟಿಗೆಯ ಗಾತ್ರಕ್ಕನುಸಾರವಾಗಿ ಅದರಲ್ಲಿ ಹಾಕಿಡುವ ವಸ್ತುಗಳ ಪ್ರಮಾಣವೂ ನಿರ್ಧರಿತವಾಗುತ್ತದೆ. ಆಮ್ಲ, ಕ್ಷಾರ, ಲವಣರಸಗಳನ್ನು ತಡೆದುಕೊಳ್ಳುವ ಈ ಚಟಿಗೆಗಳನ್ನು ಬಳಪದ ಕಲ್ಲಿನಿಂದ (ಬಿಜಾಪುರದ ಭೀಮಾನದಿ ತೀರದಲ್ಲಿ ಲಭ್ಯ) ತಯಾರಿಸುತ್ತಾರೆ. ಅದುರಿಂದಲೇ ಇದರಲ್ಲಿರಿಸಿದ ಉಪ್ಪು, ಉಪ್ಪಿನಕಾಯಿ, ಖಾರಪುಡಿಗಳು ತುಂಬಕಾಲ ಕೆಡದೆ ಉಳಿಯುತ್ತವ. ಕಲ್ಲು ಚಟಿಗೆಯು ಗಾತ್ರದಲ್ಲಿ ಇನ್ನೂ ದೊಡ್ಡದಾಗಿದ್ದರೆ ಅದನ್ನು ಕಲ್ಬಾನಿ ಎಂದು ಕರೆಯುತ್ತಾರೆ.


logo