logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಮನೆಬಳಕೆ
ಈ ವಿಭಾಗದಲ್ಲಿ ಸಂಗ್ರಹಿತವಾದ ಗೃಹೋಪಯೋಗಿ ವಸ್ತುಗಳಲ್ಲಿ ವಿಶಿಷ್ಟವಾದ ಕೆಲವನ್ನು ಆಯ್ದು ಅವುಗಳನ್ನು ಪರಿಚಯಿಸಿದೆ. ಇವು ಗ್ರಾಮೀಣ ಪ್ರದೇಶದ ಜನರು ಮನೆಗಳಲ್ಲಿ ತಮ್ಮ ದೈನಂದಿನ ಬಳಕೆಗೆ ಬಳಸುವ ವಸ್ತುಗಳು. ಮಣ್ಣು, ಶಿಲೆ, ಲೋಹ, ಬೆತ್ತ, ಬಿದಿರು, ಹಗ್ಗ ಇತ್ಯಾದಿ ಪ್ರಾಕೃತಿಕ ವಸ್ತುಗಳಿಂದ ನಿರ್ಮಿಸಿಕೊಂಡ ಸಾಮಗ್ರಿಗಳು ಇಲ್ಲಿವೆ. ಕೆಲವು ವಸ್ತುಗಳ ಬಳಕೆ ಈಗ ಬೇರೆ ಬೇರೆ ಕಾರಣಗಳಿಗೆ ತಪ್ಪಿಹೋಗಿದೆ. ಎತ್ತಿನಕೊಂಬಿನ ನಶ್ಯದಡಬ್ಬಿ, ಔಂಗುಗಡಿಗೆ, ಮಾನಿಚೇರಿ ಟೋಪಿಯಂಥ ಅಪೂರ್ವ ವಸ್ತುಗಳೂ ನಮ್ಮ ವಸ್ತುಸಂಗ್ರಹಾಲಯದಲ್ಲಿವೆ. ಅವುಗಳ ವಿವರಗಳು ಕೂಡ ಇಲ್ಲಿ ಸೇರ್ಪಡೆಯಾಗಿವೆ.

ಮರದ ಒರಳು/ ಬಡ್ಡೆ ಒರಳು
ಕಾಳು ಒಡೆಯಲು, ಧಾನ್ಯಗಳನ್ನು ನುಚ್ಚು ಮಾಡಲು ಬಳಸುವ ಇಂಥ ಒರಳುಗಳನ್ನು ಕಗ್ಗಲ್ಲಿನಿಂದ ರಚಿಸುತ್ತಾರೆ. ಆದರೆ ಗಟ್ಟಿ ಮರಗಳಾದ ತೇಗ, ಮತ್ತಿ ಮುಂತಾದ ಮರಗಳಿಂದಲೂ ತಯಾರಿಸುತ್ತಾರೆ. ಈ ಒರಳು ಎಲ್ಲಾ ಪ್ರದೇಶಗಳಲ್ಲಿ ಬಳಕೆ ಇರದೆ ಕೆಲವು ಪ್ರದೇಶಗಳಲ್ಲಿ ಅಪರೂಪವಾಗಿ ಬಳಕೆಯಾಗುತ್ತದೆ. ಇದರ ಮಧ್ಯದಲ್ಲಿ ಅರ್ಧ ಅಡಿ ವ್ಯಾಸ, ಅರ್ಧ ಅಡಿ ಆಳದ ಗುಳಿ ಇರುತ್ತದೆ. ಸುಮಾರು ಒಂದೂವರೆ ಅಡಿ ಎತ್ತರ ಇರುತ್ತದೆ. ಇದನ್ನು ನೆಲದಲ್ಲಿ ಹುಗಿದು ಭದ್ರಪಡಿಸಲಾಗುತ್ತದೆ.

ಮರದ ನಶ್ಯ ಡಬ್ಬಿ
ನಶ್ಯ ಸೇದುವವರು ಬಳಸುವ ಸಾಧನ. ಇದು ಸಾಗುವಾನಿ ಮರದಿಂದ ಮಾಡಿದ ಸುಮಾರು ಎರಡೂವರೆ ಇಂಚು ಅಗಲ, ಮೂರು ಇಂಚು ಉದ್ದ ಗಾತ್ರವುಳ್ಳದ್ದಾಗಿದೆ. ಆಯತಾಕಾರದಲ್ಲಿದ್ದು, ಸುಮಾರು ಎಪ್ಪತ್ತನೇ (೧೯೭೦-೮೦) ದಶಕದ ಕಾಲದ್ದಾಗಿದೆ. ನಶ್ಯ ಸೇದುವವರು ನಶ್ಯದ ಡಬ್ಬಿಯಲ್ಲಿ ನಶೆಪುಡಿಯನ್ನು ಹಾಕಿಕೊಂಡು ಜೇಬಿನಲ್ಲಿಟ್ಟುಕೊಳ್ಳುವ ವಿಧಾನ ಬಳಕೆಯಲ್ಲಿತ್ತು. ಇತ್ತೀಚೆಗೆ ಇದರ ಬಳಕೆ ಕಡಿಮೆಯಾಗಿದೆ. ನಶ್ಯದ ಡಬ್ಬಿಗಳಿಗಾಗಿ ಗಾಜು, ಅಲ್ಯೂಮಿನಿಯಂ, ಬೆಳ್ಳಿ, ತೆಂಗಿನಚಿಪ್ಪು ಮುಂತಾದುವು ಬಳಕೆಯಾಗುತ್ತವೆ.

ಮರದ ನಾಗರ ಹಾವು
ಪೌರಾಣಿಕ ನಾಟಕದಲ್ಲಿ ಬಳಸುವ ನಾಗಾಸ್ತ್ರ. ಇದು ಸುಮಾರು ಮೂರು ಅಡಿ ಉದ್ದವಿದ್ದು, ಹಾವಿನಂತೆ ನುಲಿದುಕೊಂಡಿರುತ್ತದೆ. ಮುಂದಿನ ಭಾಗವು ಹಾವಿನ ಹೆಡೆಯ ಆಕಾರದಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿ ಜನಪದರು ಪೌರಾಣಿಕ ನಾಟಕಗಳನ್ನು ಕಲಿಯುವ ಸಂದರ್ಭದಲ್ಲಿಯೂ ಹಾಗೂ ನಾಟಕಗಳ ಪ್ರದರ್ಶನದಲ್ಲಿಯೂ ಈ ಮರದ ಹಾವನ್ನು ಬಳಸುತ್ತಾರೆ. ಹಾವಿನ ಕಲ್ಪನೆ ಮಾಡಿಕೊಂಡು ಈ ವಸ್ತುವನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಹಾವು ಬಳಕೆಗೆ ಬಂದಮೇಲೆ ಮರದ ಹಾವಿನ ಬಳಕೆ ಕಡಿಮೆಯಾಗಿದೆ. ಇದನ್ನು ಸಾಗುವಾನಿ ಮರದಿಂದ ತಯಾರಿಸಿದ್ದಾರೆ.

ಮರದ ಬಾಗಿಲು
ಇದು ಹಳೆ ಮನೆಯೊಂದರ ವಿಶಿಷ್ಟವಾದ ಮರದ ಬಾಗಿಲು. ಸುಮಾರು ಮೂರೂವರೆ ಅಡಿ ಅಗಲ ಆರೂವರೆ ಅಡಿ ಎತ್ತರವಿದೆ. ಸುಮಾರು ನಾಲ್ಕು ಇಂಚು ದಪ್ಪ ಉಳ್ಳ ಹಲಗೆಯ ಮೂರು ತುಂಡುಗಳನ್ನು ಮೊಳೆ ಹೊಡೆದು ಹಾಗೆಯೇ ಜೋಡಿಸಲಾಗಿದೆ. ಬಾಗಿಲ ಒಂದು ಭಾಗದಲ್ಲಿ ಮೇಲೆ-ಕೆಳಗೆ ಸುಮಾರು ಒಂದು ಅಡಿ ಉದ್ದವುಳ್ಳ ಕಬ್ಬಿಣದ ಗೂಟಗಳನ್ನು ಜೋಡಿಸಿದ್ದಾರೆ. ಹೀಗೆ ಬಾಗಿಲನ್ನು ತೆಗೆಯಲು ಮತ್ತು ಮುಚ್ಚುವುದಕ್ಕೆ ಅನುಕೂಲವಾಗುತ್ತದೆ. ತಗಡು, ಪ್ಲೈವುಡ್ ಮುಂತಾದ ಬಾಗಿಲುಗಳು ಬಳಕೆಗೆ ಬಂದ ನಂತರ ಇಂತಹ ದಪ್ಪ ಮತ್ತು ಭಾರವಾದ ಬಾಗಿಲುಗಳ ಬಳಕೆ ಅಪರೂಪವಾಗಿದೆ.

ಮರದ ಸರಪಳಿ
ಮರದಿಂದ ತಯಾರಿಸಿದ ಸರಪಳಿ. ಇದನ್ನು ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಒಂದೇ ಮರದ ತುಂಡಿನಿಂದ ಕೊರೆದು ಸುಂದರವಾದ ಈ ಸರಪಳಿ ನಿರ್ಮಿಸಲಾಗಿದೆ. ಇದು ಕಲಾವಿದನ ಉತ್ತಮ ಕಲಾ ಕೌಶಲ್ಯಕ್ಕೆ ಸಾಕ್ಷಿಯೆನಿಸಿದೆ. ಮರದ ತುಂಡು ಎಲ್ಲೂ ಒಡೆಯದಂತೆ ಒಂದರೊಳಗೆ ಮತ್ತೊಂದು ಬಳೆಯನ್ನು ಜೋಡಿಸಿ ಒಂದು ಅಡಿಯಷ್ಟು ಉದ್ದದ ಈ ಸರಪಳಿಯನ್ನು ನಿರ್ಮಿಸಲಾಗಿದೆ. ಇದರ ಒಂದು ತುದಿಯಲ್ಲಿ ಚೌಕಾಕಾರದ ಬೀಗವಿರುವಂತೆ ಕೆತ್ತಲಾಗಿದೆ. ಬಡಗಿಗಳು ಹವ್ಯಾಸಕ್ಕಾಗಿಯೂ ಇಂತಹವುಗಳನ್ನು ಅಪರೂಪವಾಗಿ ನಿರ್ಮಿಸುತ್ತಿದ್ದರು ಎನ್ನಲಾಗಿದೆ. ಈ ಸರಪಳಿಯಲ್ಲಿ ಎಲ್ಲಿಯೂ ಕೊಂಡಿಗಳು ಜೋಡಣೆಯಾಗದೆ ತಾಳ್ಮೆಯಿಂದ ಅವುಗಳನ್ನು ಕೊರೆದೇ ತಯಾರಿಸಿದ ಜಾಣ್ಮೆಯು ದಂಗುಬಡಿಸುವಂಥದ್ದು.

ಮರದ ಸುತ್ತಿಗೆ/ಜಾಗಟಿ ಸುತ್ತಿಗೆ
ಜಾಗಟೆಯನ್ನು ಬಾರಿಸುವುದಕ್ಕೆ/ ಹೊಡೆಯುವುದಕ್ಕೆ ಬಳಸುವ ಮರದ ಸುತ್ತಿಗೆ. ಈ ಸುತ್ತಿಗೆಯ ಹಿಡಿಕೆಯು ಸುಮಾರು ಒಂದು ಅಡಿ ಉದ್ದವಿದ್ದು ಸುಮಾರು ಐದು ಇಂಚು ಸುತ್ತಿಗೆ ಇರುತ್ತದೆ. ಜಾಗಟೆಯನ್ನು ದಾಸಯ್ಯ ಎಂಬ ಒಕ್ಕಲಿಗ ಜನರು ಬಾರಿಸುತ್ತಾರೆ. ಇವರು ಹಬ್ಬಹರಿದಿನ, ಜಾತ್ರೆ, ಉತ್ಸವ, ಸಂತೆಗಳಲ್ಲಿ ಜಾಗಟೆ ಬಾರಿಸುತ್ತಾರೆ. ಮನೆ ಮನೆಗಳಿಗೆ ಹೋಗಿ, ದೇವರ ಹರಿಗೆಯನ್ನು ಇಟ್ಟು, ಎಡೆಹಾಕಿ, ಜಾಗಟೆ ಬಾರಿಸಿ, ಪೂಜೆ ಮಾಡುತ್ತಾರೆ. ಸುತ್ತಿಗೆಯ ಆಕಾರವು ಕಬ್ಬಿಣದ ಸಣ್ಣ ಸುತ್ತಿಗೆಯತಿದೆ. ಈ ಸುತ್ತಿಗೆಯನ್ನು ಬನ್ನಿ ಮರದಿಂದ ತಯಾರಿಸಿದ್ದಾರೆ.

ಮಸಿದವತಿ
ಹಿಂದಿನ ಕಾಲದಲ್ಲಿ ಕಲಮು ಎಂಬ ಲೇಖನ ಸಾಮಗ್ರಿಯನ್ನು ಬಳಸಲು ಅನಿವಾರ್‍ಯವಾಗಿ ಬೇಕಾಗಿದ್ದ ಮಸಿ ಕುಡಿಕೆ. ಇಂಥ ಎರಡು ಪುಟ್ಟ ಕುಡಿಕೆಗಳನ್ನು/ಕುಪ್ಪಿಗಳನ್ನು ಇರಿಸಲು ಅನುಕೂಲವಾಗುವಂತೆ ಅದನ್ನು ಮರದ ಚೌಕಟ್ಟಿನಲ್ಲಿ ಅಳವಡಿಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಮಸಿಕುಡಿಕೆಗಳು ಭದ್ರವಾಗಿ ಸ್ಥಾಪಿತವಾಗಲು ಬೇಕಾದಂತೆ ಅರೆ ರಂಧ್ರಗಳನ್ನು ಕೆತ್ತಿ ಮಸಿಕುಡಿಕೆಯನ್ನು ಸ್ಥಾಪಿಸಿದ್ದಾರೆ. ಬದಿಯಲ್ಲಿ ಕಲಮುಗಳನ್ನು ಇರಿಸಿಕೊಳ್ಳಲು ಕೂಡ ಒಂದು ಪುಟ್ಟ ಖಾನೆ ಇದೆ. ಕಲಮನ್ನು ಮಸಿದವತಿಯಲ್ಲಿನ ಮಸಿಯಲ್ಲಿ ಆಗಾಗ ಅದ್ದಿಕೊಂಡು ಬರವಣಿಗೆ ಮಾಡುತ್ತಿದ್ದರು. ಬರವಣಿಗೆ ಬಲ್ಲವರೆಲ್ಲರಿಗೂ ಮಸಿದವತಿ ಅಗತ್ಯದ ವಸ್ತುವಾಗಿತ್ತು. ಬಾಲ್‌ಪಾಯಿಂಟ್ ಪೆನ್ನುಗಳು ಬಂದ ಬಳಿಕ ಇದರ ಅಗತ್ಯವೇ ಇಲ್ಲದಂತಾಗಿದೆ.

ಮಾಪನ
ಎಣಿಸುವುದು, ತೂಕಮಾಡುವುದು ಮತ್ತು ಅಳತೆ ಮಾಡುವುದು ಒಂದು ಅದ್ಭುತ ಲೋಕ. ಲೋಕವ್ಯಾಪಾರವೇ ಈ ಮುಗ್ಗಾಲಿ ವಹಿವಾಟಿನಲ್ಲಿ ನಡೆಯುತ್ತದೆಯಲ್ಲವೇ? ಜನಪದರು ಈ ಅತ್ಯಗತ್ಯ ಮತ್ತು ಕೌಶಲಪೂರ್ಣ ಕೆಲಸವನ್ನು ಎಷ್ಟು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂಬುದನ್ನು ಅಧ್ಯಯನ ಮಾಡುವುದೇ ಕುತೂಹಲದ ಸಂಗತಿ. ಅಂತಹ ಸಾಧನಗಳಲ್ಲಿ ಕೆಲವನ್ನಷ್ಟೆ ಸದ್ಯ ಪರಿಚಯಿಸುತ್ತಿದ್ದೇವೆ.

ಮೀನಿನ ಗಾಳ
ಕೆರೆ, ಕಟ್ಟೆ, ನದಿ, ಸರೋವರಗಳಲ್ಲಿ ಮೀನು ಹಿಡಿಯಲು ಬಳಸುವ ಸಾಧನ. ಸುಮಾರು ಹತ್ತು ಮೀಟರ್ ಉದ್ದವಿರುವ ಗಟ್ಟಿ ದಾರವನ್ನು ಸುಮಾರು ಎರಡುವರೆ ಅಡಿ ಉದ್ದದ ಬಿದಿರಿನ ಕೋಲಿಗೆ ಕಟ್ಟುತ್ತಾರೆ. ದಾರದ ತುದಿಗೆ ಉಕ್ಕಿನ ಕೊಂಡಿಯನ್ನು(ಗಾಳ) ಕಟ್ಟುತ್ತಾರೆ. ಈ ಕೊಂಡಿಯ ಮುಂದಿನ ತುದಿಯು ಚೂಪಾಗಿದೆ. ಇದಕ್ಕೆ ಎರೆಹುಳು, ಪುಟ್ಟಮೀನು, ಕರಿದ ತಿಂಡಿಗಳು ಮುಂತಾದ ಎರೆಗಳನ್ನು ಸಿಕ್ಕಿಸಿ ನಂತರ ಕೊಕ್ಕೆಸಮೇತ ದಾರವನ್ನು ನೀರಿನಲ್ಲಿ ಬಿಡುತ್ತಾರೆ. ದಾರದ ಅರ್ಧಭಾಗಕ್ಕೆ ಬೆಂಡಿನ ತುಂಡೊಂದನ್ನು ಕಟ್ಟಿರುತ್ತಾರೆ. ಎರೆಯನ್ನು ತಿನ್ನಲು ಬಾಯಿಹಾಕಿದಾಗ ಮೀನು ಗಾಳದಲ್ಲಿ ಸಿಕ್ಕಿಕೊಳ್ಳುತ್ತದೆ. ಮೀನು ಗಾಳಕ್ಕೆ ಸಿಕ್ಕಿದಾಗ ಬೆಂಡು ಮುಳುಗಿಹೋಗುತ್ತದೆ. ಆಗ ಗಾಳವನ್ನು ಮೇಲಕ್ಕೆ ಎತ್ತುತ್ತಾರೆ. ಈ ಗಾಳವನ್ನು ಮೀನುಗಾರರು ಬಳಸುತ್ತಾರೆ. ಹಾಗೂ ಹವ್ಯಾಸಿ ಮೀನು ಬೇಟೆಗಾರರು ಬಳಸುತ್ತಾರೆ.


logo