logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಭರ್ಚಿ
ಪ್ರಾಣಿಗಳನ್ನು ಬೇಟೆಯಾಡಲು ಮುಖ್ಯವಾಗಿ ಬಳಕೆಯಾಗುವ ಒಂದು ಸಾಧನ. ಕೆಲಮೊಮ್ಮೆ ಆತ್ಮರಕ್ಷಣೆಗಾಗಿಯೂ ಇದು ಬಳಕೆಯಾಗುತ್ತದೆ. ಸುಮಾರು ಆರರಿಂದ ಎಂಟು ಅಡಿಗಳಷ್ಟು ಉದ್ದದ ಈ ಆಯುಧಕ್ಕೆ ಕಬ್ಬಿಣದ ದಪ್ಪ ತಗಡಿನ, ಸುಮಾರು ಒಂದುವರೆ ಅಡಿ ಉದ್ದದ, ತುದಿ ಚೂಪಾಗಿರುವ ಇನ್ನೊಂದು ಸಲಕರಣೆಯು ಭದ್ರವಾಗಿ ಜೋಡಿಸಲ್ಪಟ್ಟಿರುತ್ತದೆ. ಈ ಸಲಕರಣೆಯ ಬುಡಭಾಗವು ಕೊಳವೆಯಾಕಾರದಲ್ಲಿ ನಿರ್ಮಿತವಾಗಿದ್ದು ಮರದ ಉದ್ದದ ಹಿಡಿಗೆ ಭದ್ರವಾಗಿ ಜೋಡಿಸುವುದಕ್ಕೆ ಅನುಕೂಲವಾಗುವಂತಿರುತ್ತದೆ. ಭರ್ಚಿಯ ತುದಿಯಲ್ಲಿನ ಕಬ್ಬಿಣದ ಭಾಗವು ಸು. ಮೂರು ಇಂಚು ಅಗಲದ ಅಲಗಿನಿಂದ ನಿರ್ಮಾಣಗೊಂಡಿರುತ್ತದೆ. ಭರ್ಚಿಯನ್ನು ಎರಡು ಕೈಗಳನ್ನು ಬಳಸಿಕೊಂಡು ಉಪಯೋಗಿಸುತ್ತಾರೆ. ಬೇಟೆಯಲ್ಲಿ ಒಂದೇಕೈಯಲ್ಲಿ ಹಿಡಿದು ಎಸೆಯುವುದು ಹೆಚ್ಚು ಪರಿಣಾಮಕಾರಿ. ರಾತ್ರಿಹೊತ್ತು ಹೊಲ, ತೋಟಗಳ ಕಾವಲಿಗೆ ಹೋಗುವಾಗ ಭರ್ಚಿ ಹೆಚ್ಚು ಉಪಯೋಗವಾಗುತ್ತದೆ. ಅಂತೆಯೇ ಮನೆಯ ಛಾವಣಿ, ಜಂತೆ ಮುಂತಾದೆಡೆ ಇಲ್ಲವೇ ಇತರೆಡೆ ಹಾವು ಮುಂತಾದ ಅಪಾಯಕಾರಿ ಪ್ರಾಣಿಗಳನ್ನು ಕೊಲ್ಲಲು ಗೃಹಬಳಕೆಯ ಸಾಧನವಾಗಿಯೂ ಬಳಕೆಯಾಗುತ್ತದೆ. ಉತ್ತರ ಕರ್ನಾಟಕದ ಹಳ್ಳಿಯ ಎಲ್ಲ ಮನೆಗಳಲ್ಲಿಯೂ ಭರ್ಚಿಯು ಒಂದು ಅತ್ಯವಶ್ಯಕ. ಸಾಮಾನ್ಯವಾಗಿ ಇದಕ್ಕೆ ಕರಿಮತ್ತಿ ಸಾಗುವಾನಿ ಮುಂತಾದ ಮರಗಳ ಬಳಕೆಯಾಗುತ್ತವೆ. ಭರ್ಚಿಗಳಲ್ಲಿ ಇನ್ನೂ ಕೆಲವು ಪ್ರಕಾರಗಳಿರುತ್ತವೆ. ಸಣ್ಣ ಗಾತ್ರದ ಇನ್ನೊಂದು ಭರ್ಚಿಯು ಸುಮಾರು ನಾಲ್ಕು ಅಡಿ ಉದ್ದವಿರುತ್ತದೆ. ಗಾತ್ರಕ್ಕೆ ಅನುಗುಣವಾಗಿ ಇದರ ಹಿಡಿಕೆ ಕೂಡ ಚಿಕ್ಕದೇ. ಸುತ್ತಳತೆ ಸುಮಾರು ಒಂದೂವರೆಯಿಂದ ಎರಡೂವರೇ ಇಂಚು ಅಷ್ಟೆ. ಅತಿ ಚಿಕ್ಕ ಗಾತ್ರದ ಭರ್ಚಿಗೆ ಕೈ ಭರ್ಚಿ ಎಂದು ಹೆಸರು. ಇದು ಒಟ್ಟು ಸುಮಾರು ಒಂದಡಿಯಷ್ಟು ಉದ್ದವಿರುತ್ತದೆ, ಇದರ ಕಬ್ಬಿಣದ ಭಾಗ ಮತ್ತು ಮರದ ಹಿಡಿಕೆ ಸಮ ಉದ್ದವಾಗಿರುತ್ತದೆ. ಕೈ ಭರ್ಚಿಯನ್ನು ಸೊಂಟದಲ್ಲಿ ಕೂಡ ಸಿಕ್ಕಿಸಿಕೊಳ್ಳಬಹುದು. ಸಣ್ಣ ಭರ್ಚಿ ಮತ್ತು ಕೈ ಭರ್ಚಿಗಳನ್ನು ಬಳಸಲು ಒಂದೇ ಕೈ ಸಾಕು. ಓಡುತ್ತಿರುವ ಪ್ರಾಣೆಗಳಿಗೆ ಎಸೆದು ಕೊಲ್ಲುವುದಕ್ಕೆ/ಬೇಟೆಯಾಡುವುದಕ್ಕೆ ಸಣ್ಣ ಭರ್ಚಿಯು ಬಳಕೆಯಾಗುತ್ತದೆ. ಹಿಂದಿನ ಕಾಲದ ಗ್ರಾಮ ಜೀವನದಲ್ಲಿ ತಳವಾರರು ತಮ್ಮ ವೃತ್ತಿಯ ಸಂದರ್ಭದಲ್ಲಿ ಭರ್ಚಿಗಳನ್ನು ಹಿಡಿದು ತಿರುಗಾಡುತ್ತಿದ್ದರು.

ಭಾರಕಲ್ಲು
ಬೀಸುವ ಸಂದರ್ಭದಲ್ಲಿ ಬೀಸುವ ಕಲ್ಲಿನ ಮೇಲೆ ಇಟ್ಟುಕೊಳ್ಳಲು ಬಳಕೆಯಾಗುವ ವಸ್ತು. ಕಲ್ಲಿನ ಮೇಲೆ ಭಾರ ಹಾಕುವುದು ಇದರ ಉದ್ದೇಶ. ಗಟ್ಟಿಕಾಳುಗಳನ್ನು ಬೀಸುವಾಗ ಈ ವಸ್ತುವನ್ನು ಬಳಸುತ್ತಾರೆ. ಇದು ಸುಮಾರು ಆರು ಇಂಚು ಎತ್ತರವಿದ್ದು ತಳವು ಚಪ್ಪಟೆ ಇರುತ್ತದೆ. ಮಧ್ಯಭಾಗದಲ್ಲಿ ಎರಡು ಇಂಚು ರಂಧ್ರವಿರುತ್ತದೆ. ಇದರ ವ್ಯಾಸ ಹತ್ತು ಇಂಚು ಮೇಲ್ಭಾಗದ ವ್ಯಾಸ ಎಂಟು ಇಂಚು. ಕಲ್ಲಿನ ಮೇಲು ಭಾಗದ ಎರಡು ಭಾಗಗಳಲ್ಲಿ ಒಂದಡೆ ಹಿಡಿಕೆ ಹಾಕಲು ಅನುಕೂಲವಿದ್ದು ಸ್ವಲ್ಪ ಹೆಚ್ಚು ಉದ್ದವಾಗಿರುತ್ತದೆ. ಇನ್ನೊಂದಡೆ ಬೀಸುವಾಗ ಕೈಯಿಂದ ದೂಡಿಕೊಳ್ಳವುದಕ್ಕೆ/ಎಳೆದುಕೊಳ್ಳುವುದಕ್ಕೆ ಅನುಕೂಲವಾಗುವಂತೆ ಕಲ್ಲು ಸ್ವಲ್ಪ ಹೆಚ್ಚು ದೂರಕ್ಕೆ ಚಾಚಿಕೊಂಡಿರುತ್ತದೆ. ತೊಗರಿ, ಅಲಸಂಡೆ, ಜೋಳ ಇತ್ಯಾದಿಗಳನ್ನು ಬೇಗ ಒಡೆಯುವ/ಹಿಟ್ಟು ಮಾಡುವ ಉದ್ದೇಶಕ್ಕೆ ಇದನ್ನು ಬಳಸುತ್ತಾರೆ. ಬೀಸುವ ಕಲ್ಲಿನ ಮಧ್ಯದ ಗೂಟಕ್ಕೆ ಇದನ್ನೂ ಸಿಕ್ಕಿಸಿಕೊಳ್ಳಲಾಗುತ್ತದೆ ಇದರ ಮೇಲ್ಭಾಗದಲ್ಲಿ ಚಿತ್ರಗಳಿರುತ್ತವೆ. ಕಪ್ಪು ಕಲ್ಲಿನಿಂದ ತಯಾರಿಸುತ್ತಾರೆ. ಇವುಗಳ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ.


logo