logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ರಂಟೆ/ಮಡಕೆ
ಉಳುಮೆ ಮಾಡಲು ಬಳಸುವ ಸಾಧನ. ನೊಗಕ್ಕೆ ರಂಟೆಯನ್ನು ಕಟ್ಟಿಕೊಂಡು ಎತ್ತುಗಳ ಸಹಾಯದಿಂದ ರಂಟೆ ಹೊಡೆಯಲಾಗುತ್ತದೆ. ನೊಗಕ್ಕೆ ರಂಟೆ ಕಟ್ಟಿಕೊಳ್ಳಲು ಮಿಣಿ, ಹಗ್ಗ ಹಾಗೂ ಕೊರಳಪಟ್ಟಿ, ಪಟಗಾಣಿ ಇವುಗಳನ್ನು ಬಳಸಲಾಗುತ್ತದೆ. ರಂಟೆಯಲ್ಲಿ ಈಸು, ಮಡಕೆ, ಮೇಳಿ, ಜಿಗಳಿಗಳೆಂಬ ಭಾಗಗಳಿವೆ. ಕಾಳುಗಳನ್ನು ಬಿತ್ತನೆ ಮಾಡುವುದಕ್ಕಾಗಿ ಸಾಲುಗಳನ್ನು ಮಾಡಲು, ಪೈರಿನ ಬುಡಕ್ಕೆ ಮಣ್ಣು ಏರಿಸಲು/ಒಬ್ಬೆ ಏರಿಸಲು, ಬೆಳೆಯ ಸಾಲುಗಳ ಮಧ್ಯೆ ನೀರು ಹಾಯಿಸುವ ಹರಿಓಣಿಗಳನ್ನು ಮಾಡಲು ರಂಟೆಯು ಬಳಕೆಯಾಗುತ್ತದ. ಉತ್ತರ ಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು. ಬೇವು, ಕರಿಜಾಲಿ ಮುಂತಾದ ಮರಗಳಿಂದ ರಂಟೆಯನ್ನು ತಯಾರಿಸುತ್ತಾರೆ. ಕಬ್ಬಿಣದ ನೇಗಿಲು ಮತ್ತು ಟ್ರಾಕ್ಟರ್‌ನೇಗಿಲು ಬಳಕೆಗೆ ಬಂದ ನಂತರ ಇದರ ಬಳಕೆ ಕಡಿಮೆಯಾಗಿದೆ.

ರಂಪಿಗೆ
ಪಾದರಕ್ಷೆಗಳನ್ನು ತಯಾರಿಸುವಾಗ ಚರ್ಮ, ದಾರ ಇತ್ಯಾದಿಗಳನ್ನು ಕತ್ತರಿಸಿಕೊಳ್ಳಲು ಬಳಸುವ ಉಪಕರಣ. ಇದು ತೆಳುವಾದ ತಗಡಿನಿಂದ ನಿರ್ಮಾಣವಾಗಿದ್ದು ಇದರ ಅಲಗು ಅರ್ಧ ಚಂದ್ರಾಕಾರದಲ್ಲಿರುತ್ತದೆ. ಇದನ್ನು ಹಿಡಿದುಕೊಳ್ಳಲು ಮೇಲ್ಭಾಗದಲ್ಲಿ ಒಂದು ಹಿಡಿ ಇರುತ್ತದೆ. ಈ ಹಿಡಿಯು ಅಲಗಿನ ತಗಡಿನ ಭಾಗವೇ ಆಗಿರುತ್ತದೆ. ರಂಪಿಗೆಗಳ ಗಾತ್ರದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಿರುತ್ತದೆ. ಇದು ತುಂಬ ಹರಿತವಾಗಿದೆ. ಪಾದರಕ್ಷೆಗಳು ಕಾರ್ಖಾನೆಗಳಲ್ಲಿ ತಯಾರಾಗುತ್ತಿರುವ ಇಂದಿನ ದಿನಗಳಲ್ಲಿ ಸಮಗಾರರ ರಂಪಿಗೆಯು ನಿಧಾನವಾಗಿ ಮರೆಯಾಗುತ್ತಿದೆ.

ರೋಣಗಲ್ಲು/ರೋಲ್‌ಗುಂಡು
ಕಣದಲ್ಲಿ ಒಕ್ಕಣೆ ಮಾಡುವ ಸಂದರ್ಭದಲ್ಲಿ ಬಳಸುವ ಒಂದು ಬಹುಮುಖ್ಯ ಪರಿಕರ. ಸುಮಾರು ಮೂರು ಅಡಿ ಉದ್ದ ಐದಡಿ ಸುತ್ತಳತೆ ಇರುತ್ತದೆ. ರೋಣುಗಲ್ಲಿನ ಎರಡು ತುದಿಗಳ ಮಧ್ಯ ಭಾಗದಲ್ಲಿ ಸುಮಾರು ಮೂರು ಇಂಚು ಸುತ್ತಳತೆಯ ರಂಧ್ರಗಳಿರುತ್ತದೆ. ಈ ರಂಧ್ರಗಳಿಗೆ ಕಬ್ಬಿಣದ/ಮರದ ಒಂದೊಂದು ಗೂಟವನ್ನು ಸೇರಿಸಿರುತ್ತಾರೆ. ಮರದ ಎರಡು ದಿಂಡುಗಳನ್ನು ಎತ್ತಿನ ನೊಗಕ್ಕೆ ಕಟ್ಟಿ ರೋಣುಗಲ್ಲಿನ ಗೂಟಗಳಿಗೆ ಕಟ್ಟುತ್ತಾರೆ. ಕಣದಲ್ಲಿ ರಾಗಿ, ಜೋಳ ಮುಂತಾದ ತೆನೆಗಳನ್ನು ಹಾಕಿ, ಅದರ ಮೇಲೆ ರೋಣುಗಲ್ಲನ್ನು ಉರುಳಿಸುತ್ತಾರೆ. ವಿಭಿನ್ನ ಗಾತ್ರದ ರೋಣುಗಲ್ಲುಗಳು ಬಳಕೆಯಲ್ಲಿವೆ. ಇತ್ತೀಚೆಗೆ ಯಂತ್ರಗಳಿಂದ ಒಕ್ಕಣೆ ಮಾಡುವುದರಿಂದ ಈ ರೋಣುಗಲ್ಲುಗಳು ಕಣ್ಮರೆಯಾಗುತ್ತಿವೆ. ಈ ಸಾಧನವನ್ನು ಬಿಳಿ ಮತ್ತು ಕಪ್ಪುಕಲ್ಲಿನಿಂದ ತಯಾರಿಸುತ್ತಾರೆ. ಭತ್ತಒಕ್ಕಣೆ ಹಾಗೂ ರಾಗಿಒಕ್ಕಣೆ ಮಾಡುವ ರೋಣಗಲ್ಲುಗಳ ವಿನ್ಯಾಸ ಹಾಗೂ ಆಕರಗಳು ಬೇರೆ ಬೇರೆ ಯಾಗಿರುತ್ತವೆ.


logo