logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಡೊಪ್ಪಿ ಉಚ್ಚೋಡು
ಬಾಗಿಲ ತೋಳು ಕಿಟಿಕಿಗಳ ಪಟ್ಟಿ ಮುಂತಾದ ವಸ್ತುಗಳಿಗೆ ಆಲಂಕಾರಿಕ ಗೆರೆ ಹಾಕಲು ಬಳಸುವ ವಸ್ತು. ಇದರ ಉದ್ದ ಸುಮಾರು ಏಳೂವರೆ ಇಂಚು, ಎತ್ತರ ಎರಡೂವರೆ ಇಂಚು, ಅಗಲ ಒಂದೂವರೆ ಇಂಚು. ಇದು ಉಚ್ಚೋಡು ರೀತಿಯಲ್ಲಿದೆ. ಆದರೆ ಗಾತ್ರದಲ್ಲಿ ಚಿಕ್ಕದು. ಇದರ ಮಧ್ಯಭಾಗದಲ್ಲಿ ಗೀಟು ಕೊರೆಯುವ ಲೋಹದ ವಸ್ತುವಾಗಿದೆ. ಇದನ್ನು ಅಳತೆಗೆ ತಕ್ಕಂತೆ ಗೀಟು/ಗೆರೆ ಕೊರೆಯಲು ಅನುಕೂಲವಾಗುವಂತೆ ಹೊಂದಿಸಿಕೊಳ್ಳಬಹುದು. ಬಾಗಿಲ ತೋಳು, ತಟ್ಟಿ, ತಲೆಪಟ್ಟಿ ಬಾಗಿಲು ಎತ್ತಿನ ಗಾಡಿಯ ಪಟ್ಟಿ ಮುಂತಾದವುಗಳಿಗೆ ಆಲಂಕಾರಿಕ ಗೆರೆ ಹಾಕಿಕೊಳ್ಳಲು ಬಳಸುತ್ತಾರೆ.

ಡೊಳ್ಳಿನ ಪಡಗ
ಕರ್ನಾಟಕ ಜನಪದ ವಾದ್ಯಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಒಂದು ವಾದ್ಯ-ಡೊಳ್ಳು. ಇದು ಮೂಲತಃ ಒಂದು ಧಾರ್ಮಿಕ ವಾದ್ಯ. ಆತೋದ್ಯವಾದ್ಯ ವಿಭಾಗಕ್ಕೆ ಸೇರಿದ್ದು. ಹಾಲುಮತ ಸಮುದಾಯದವರು ಇದನ್ನು ತಮ್ಮ ಕುಲವಾದ್ಯವೆಂದು ಪರಿಗಣಿಸುತ್ತಾರೆ. ಬೀರಪ್ಪ, ಮಾಲಿಂಗರಾಯ, ಮಾಯವ್ವ, ಅಮೋಘಸಿದ್ಧ, ರೇವಣಸಿದ್ಧ ಮುಂತಾದ ದೈವಗಳ ಆರಾಧನೆಯಲ್ಲಿ ಇದು ಬಳಕೆಯಾಗುತ್ತದೆ. ಗ್ರಾಮದ ಪ್ರತಿಯೊಂದು ಮಂಗಳ ಕಾರ್‍ಯಕ್ಕೂ ಇದು ಅತ್ಯಗತ್ಯವೆಂದು ಪರಿಗಣಿತವಾಗಿದೆ. ಸುಮಾರು ಅರ್ಧ ಅಂಗುಲ ದಪ್ಪದ ಒಂದೂವರೆ ಅಥವಾ ಎರಡು ಅಡಿ ವ್ಯಾಸದ ಮರದ ತುಂಡನ್ನು ಸಿಲಿಂಡರ್ ಆಕಾರದಲ್ಲಿ ಕೊರೆಯಲಾಗುತ್ತದೆ. ವು, ಹೊನ್ನೆ, ಮಾವು, ಹೆಬ್ಬೇವು, ಹಲಸು, ಹೆಬ್ಬಲಸು, ಶಿವನೆ ಇತ್ಯಾದಿ ಮರಗಳಿಂದ ಪಡಗಗಳನ್ನು ತಯಾರಿಸುತ್ತಾರೆ.

ಡೋಣಿ
ಮೈಲಾರಲಿಂಗನ ಆರಾಧಕರಾದ ಗೊರವಯ್ಯಗಳು ಆಹಾರ ಭಿಕ್ಷೆಯನ್ನು ಸ್ವೀಕರಿಸುವುದಕ್ಕೆ ಬಳಸುವ ವಿಶಿಷ್ಟಪಾತ್ರೆ. ಇದು ಸುಮಾರು ಎರಡು ಇಂಚು ಉದ್ದ, ಆರು ಇಂಚು ಅಗಲ, ಐದು ಇಂಚು ಎತ್ತರದ ದೋಣಿಯಾಕಾರದ ಪಾತ್ರೆ. ಇದರ ತಳಭಾಗವು ಚಪ್ಪಟೆಯಾಗಿದ್ದು ಡೋಣಿಯು ಮೇಲಕ್ಕೆ ಹೋದಂತೆ ಅಗಲವಾಗುತ್ತ ಹೋಗುತ್ತದೆ. ಹಗುರವಾದ ಇಂಗಳಾರದಂಥ ಮರದ ತುಂಡನ್ನು ಕೊರೆದು ಇದಕ್ಕೆ ನಿರ್ದಿಷ್ಟ ರೂಪ ಕೊಡುತ್ತಾರೆ. ನಿತ್ಯ ಸಂಚಾರ ಮಾಡುತ್ತ ಭಿಕ್ಷೆಗೆ ಗೊರವರು ತೆರಳಿದಾಗ ಭಕ್ತರು ನೀಡುವ ಆಹಾರ ಭಿಕ್ಷೆಯನ್ನು ಅವರು ಈ ಪಾತ್ರೆಯಲ್ಲಿಯೇ ಸ್ವೀಕರಿಸಿ, ಇದೇ ಪಾತ್ರೆಯಲ್ಲಿಯೇ ಉಣ್ಣುತ್ತಾರೆ. ಉಂಡ ಬಳಿಕ ತೊಳೆದು ಒಣಗಿಸಿಕೊಳ್ಳುತ್ತಾರೆ. ಮೈಲಾರಲಿಂಗನ ಜಾತ್ರೆಯಲ್ಲಿ, ಹುಣ್ಣಿಮೆ ಅಮವಾಸ್ಯೆಯಂಥ ಪರ್ವದಿನಗಳಲ್ಲಿ ಭಾನುವಾರ, ಸೋಮವಾರಗಳಂಥ ದಿನಗಳಲ್ಲಿ ಗೊರವರು ಮೈಲಾರ ದೇವಾಲಯದ ಆವರಣದಲ್ಲಿ ಪ್ರಸಾದ ಸ್ವೀಕಾರಕ್ಕಾಗಿ ಡೋಣಿಯನ್ನು ಇಟ್ಟು ಕುಳಿತುಕೊಳ್ಳುತ್ತಾರೆ. ಹಣ್ಣು ತುಪ್ಪದ ಆಚರಣೆಯೆಂಬ ಆಚರಣೆಯಲ್ಲಿ ಭಕ್ತರು ಗೊರವರಿಗೆ ಬಾಳೆಹಣ್ಣು, ತುಪ್ಪ, ಬೆಲ್ಲ, ಸಕ್ಕರೆ ಮುಂತಾದವುನ್ನು ಮಿಶ್ರಮಾಡಿ ಇದೇ ಪಾತ್ರೆಗೆ ನೀಡುತ್ತಾರೆ. ಮೈಲಾರಲಿಂಗನ ಪರಿವಾರವಾದ ನಾಯಿಯು ತಿನ್ನುವಂತೆ ಗೊರವರು ಕೂಡ ಈ ಡೋಣಿಯಲ್ಲಿ ಆಹಾರ ಸ್ವೀಕರಿಸುವ ಆಚರಣೆಯು ಮೈಲಾರಲಿಂಗನ ಜಾತ್ರೆಯಲ್ಲಿ ನಡೆಯುತ್ತದೆ. ಕಂಚಿನ ಡೋನಿಗಳು ಬಂದ ಬಳಿಕ ಮರದ ಡೋಣಿಗಳು ಮರೆಯಾಗುತ್ತಿವೆ.


logo