logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ನಾಕರಬಟ್ಲು
ಉಪ್ಪಿನಕಾಯಿ, ಪಲ್ಯಗಳು, ಚಟ್ನಿ ಮುಂತಾದುವುಗಳನ್ನು ಬೇರೆ ಬೇರೆಯಾಗಿಯೇ ಹಾಕಿಕೊಂಡು ಏಕಕಾಲದಲ್ಲಿ ಬಡಿಸಲು ಬಳಸುವ ಸಾಧನ. ಇದರ ಬಟ್ಟಲುಗಳು ಸು. ನಾಲ್ಕು ಇಂಚು ವ್ಯಾಸ, ಐದು ಇಂಚು ಎತ್ತರ ಇರುತ್ತದೆ. ಊಟಕ್ಕೆ ಬಡಿಸುವಾಗ ಕಡಿಮೆ ಪಾತ್ರೆಗಳ ಬಳಕೆ ಮತ್ತು ಶ್ರಮದ ಉಳಿತಾಯಕ್ಕೆ ನಾಕರಬಟ್ಲಿನಿಂಥ ಸಲಕರಣೆಗಳು ಸಹಾಯಕವಾಗುತ್ತವೆ. ಇದರ ಬಟ್ಟಲುಗಳು ಹಿಡಿಕೆಯ ಸುತ್ತಲೂ ಇದ್ದು ಅವನ್ನು ಒಟ್ಟಾಗಿ ನೇತಾಡಿಸಲು ಸಾಧ್ಯ. ಇದನ್ನು ಮಣ್ಣು, ಮರ ಮತ್ತು ಲೋಹಗಳಿಂದ ತಯಾರಿಸುತ್ತಾರೆ. ಇವು ಇಂದು ಹೋಟೆಲ್‌ಗಳಲ್ಲೂ ಹೆಚ್ಚು ಬಳಕೆಯಲ್ಲಿವೆ.`

ನಾಮದಯಾ
ತೀರ್ಥವನ್ನು ಹಾಕುವುದಕ್ಕೆ ಬಳಸುವ ಕಂಚಿನ ಪುಟ್ಟ ಪಾತ್ರೆ. ಇದಕ್ಕೆ ಗಿಂಡಿಯ ಆಕಾರವಿರುತ್ತದೆ. ಬದಿಗಳಲ್ಲಿ ಕಿವಿಯ ಆಕಾರದ ಮೂರು ರಚನೆಗಳಿದ್ದು ಅವಕ್ಕೆ ರಂಧ್ರಗಳಿರುತ್ತವೆ. ಈ ರಂಧ್ರಗಳ ಮೂಲಕ ಸರಪಳಿ ಕಟ್ಟಿ ನಾಮದಯವನ್ನು ನೇತುಹಾಕುತ್ತಾರೆ. ತೀರ್ಥವು ನೆಲಸ್ಪರ್ಶವಾಗಬಾರದೆಂಬ ಸಂಕಲ್ಪಕ್ಕಾಗಿ ನಾಮದಯಾದ ತಳಭಾಗದಲ್ಲಿ ಮೂರು ಪುಟ್ಟ ಕಾಲುಗಳಂಥ ರಚನೆಗಳಿರುತ್ತವೆ. ನಾಮದಯಾದಲ್ಲಿ ಸುಮಾರು ಒಂದು ಅಥವಾ ಎರಡು ತೆಂಗಿನಕಾಯಿಗಳ ನೀರು ಹಿಡಿಸುತ್ತದೆ. ಕಂಚಿನಿಂದ ನಾಮದಯಾವನ್ನು ತಯಾರಿಸುತ್ತಾರೆ.

ನಿಂಬೆ ಒತ್ತೊಳ್ಳು
ನಿಂಬೆಯ ರಸವನ್ನು ಹಿಂಡಲು ಬಳಸುವ ಸರಳ ಸಲಕರಣೆ. ಒಂದೇ ಗಾತ್ರದ ಎರಡು ಪುಟ್ಟ ಮರದ ಹಲಗೆಗಳಿಂದ ಇದರ ನಿರ್ಮಾಣ. ಹಿಡಿಕೆಯ ಆಕಾರದ ಮುಂದೆ ಒಂದರಲ್ಲಿ ನಿಂಬೆ ಹೋಳು ನಿಲ್ಲುವಷ್ಟು ಗಾತ್ರದ ಒಂದು ಅರೆರಂಧ್ರವಿದೆ. ರಂಧ್ರದ ಕೆಳಗೆ ಸಣ್ಣ ಸಣ್ಣ ನಾಲ್ಕೋ ಐದೋ ತೀರ ಕಿರು ರಂಧ್ರಗಳು ಇದ್ದು ಹಿಂಡಲ್ಪಟ್ಟ ನಿಂಬೆರಸವು ಕೆಳಗೆ ಒಸರುವುದಕ್ಕೆ ಅನುವಾಗುತ್ತದೆ. ಇನ್ನೊಂದರಲ್ಲಿ ನಿಂಬೆಯ ಹೋಳನ್ನು ಮೇಲಿನಿಂದ ಒತ್ತಲು ಅನುಕೂಲವಾಗುವಂತೆ ಮರದ ಒಂದು ಸಣ್ಣ ಉಂಡೆಯನ್ನು ಮೊಳೆ ಹೊಡೆದು ಜೋಡಿಸಲಾಗುತ್ತದೆ. ಎರಡೂ ಹಲಗೆಗಳ ತುದಿಗೆ ಒಂದು ಬಿಜಾಗ್ರಿಯನ್ನು/ಮರಡನ್ನು ಜೋಡಿಸುತ್ತಾರೆ. ಇದರಿಂದ ಎರಡು ಹಲಗೆಗಳು ಸಲೀಸಾಗಿ ಕಾರ್‍ಯವೆಸಗಲು ಅನುಕೂಲವಾಗುತ್ತದೆ. ಈಗ ಪ್ಲಾಸ್ಟಿಕ್, ಲೋಹದ ಒತ್ತೊಳ್ಳುಗಳು ಬಂದಿವೆ. ಆದುದರಿಂದ ಮರದ ಒತ್ತೊಳ್ಳುಗಳ ಬಳಕೆ ಕಡಿಮೆಯಾಗಿದೆ.

ನೆರಕೋಲು/ಒಕ್ಕಣೆಕೋಲು/ಒಕ್ಕಲುಕೋಲು
ಭತ್ತ, ರಾಗಿ, ಜೋಳ, ಸಜ್ಜೆ, ನವಣೆ ಮುಂತಾದವುಗಳ ಪೈರುಗಳಿಂದ ಧಾನ್ಯಗಳನ್ನು ಪ್ರತ್ಯೇಕಿಸುವ ಕ್ರಿಯೆಯಲ್ಲಿ ಇದು ಒಂದು ಅತ್ಯಗತ್ಯ ಸಲಕರಣಿ. ಈ ಪೈರು/ತೆನೆಗಳನ್ನು ಆಗಾಗ ಅಡಿಮೇಲಾಗಿ ಮಗುಚಿ ಅವುಗಳಿಂದ ಕಾಳುಗಳನ್ನು ಪ್ರತ್ಯೇಕಿಸಲು ಇದು ತುಂಬ ಸಹಾಯಕ. ತೆನೆ ಮತ್ತು ಹುಲ್ಲುಗಳನ್ನು ಒಣಗಿಸುವುದಕ್ಕೂ ಇದನ್ನು ಉಪಯೋಗಿಸುತ್ತಾರೆ. ಭತ್ತ ರಾಗಿ ಮುಂತಾದವುಗಳ ಪೈರುಗಳನ್ನು ಒಕ್ಕಲು ಇದು ಬಳಕೆಯಾಗುವುದರಿಂದ ಇದಕ್ಕೆ ಒಕ್ಕಲುಕೋಲು ಎಂಬ ಹೆಸರು ಬಂದಿದೆ. ಕಿರುಬಿದಿರು ಅಥವಾ ಮರದ ರೆಂಬೆಗಳಿಂದ ಇದನ್ನು ತಯಾರಿಸಲಾಗಿದೆ. ನೇರವಾದ ಕೋಲಿನ ತುದಿಯಲ್ಲಿ ಸ್ವಲ್ಪ ಬಾಗಿದ ಕೋಡಿನ ರಚನೆ ಇರುತ್ತದೆ. ನೆರೆಕೋಲು ಸುಮಾರು ಐದು/ಆರು ಅಡಿ ಉದ್ದವಿರುತ್ತದೆ. ಇದರ ಬಳಕೆ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು. ಕಣ ಒಕ್ಕಲು ಮಾಡುವುದಕ್ಕೆ ಯಂತ್ರಗಳು ಬಂದಿರುವುದರಿಂದ ಒಕ್ಕಣಿ ಕ್ರಿಯೆಯ ಸ್ವರೂಪವು ಈಗ ಬದಲಾಗಿಬಿಟ್ಟಿದೆ.

ನೆಲುವು/ಸಿಕ್ಕ
ಹಾಲು, ಮೊಸರು, ಮಜ್ಜಿಗೆ, ತುಪ್ಪ ಇತ್ಯಾದಿ ಪದಾರ್ಥಗಳನ್ನು ಇರಿಸಿದ ಗಡಿಗೆಗಳು ಬೆಕ್ಕು, ಮಕ್ಕಳ ಕೈಗೆ ಸಿಗದಂತೆ ಮತ್ತು ಕೆಡದಂತೆ ಕಾಪಾಡಿ ಇಟ್ಟುಕೊಳ್ಳಲು ಬಳಸುವ ಸಾಧನ. ಇದನ್ನು ಮನೆಯೊಳಗೆ ಹೆಚ್ಚಾಗಿ ಜನರು ಅಡ್ಡಾಡದ ಜಾಗದಲ್ಲಿ ಅಟ್ಟದ ತೊಲೆ, ಅಡ್ಡ, ಕೊಕ್ಕೆ ಮುಂತಾದುವುಗಳಿಗೆ ನೇತುಹಾಕಲಾಗುತ್ತದೆ. ಮೆದೆಹುಲ್ಲು/ನೊದೆ ಹುಲ್ಲಿನಿಂದ ತಳಸಿಂಬೆಯನ್ನು ತಯಾರಿಸಿಕೊಳ್ಳುತ್ತಾರೆ. ಮೂರು ಕಡೆಗಳಿಂದ ಎಳೆದ ಹುರಿಗಳನ್ನು ಸಿಂಬೆಗೆ ಜೋಡಿಸಲಾಗುತ್ತದೆ. ಸಿಂಬೆಯಲ್ಲಿ ಗಡಿಗೆಗಳನ್ನು ಇಡಲಾಗುತ್ತದೆ. ಪ್ರಾದೇಶಿಕವಾಗಿ ಲಭ್ಯವಾಗುವ ಬಳ್ಳಿ, ಹುಲ್ಲು, ಹಳೆಬಟ್ಟೆ, ಹುರಿಹಗ್ಗ ಇತ್ಯಾದಿಗಳಿಂದ ನೆಲುವನ್ನು ತಯಾರಿಸಿಕೊಳ್ಳಬಹುದು. ಇತ್ತೀಚೆಗೆ ನೆಲುವು ಹಾಲು, ಮೊಸರುಗಳನ್ನು ಇಡಲು ಬಳಕೆಯಾಗುವುದರ ಬದಲಾಗಿ ಅಲಂಕಾರಿಕ ಸಾಧನವಾಗಿ ಮಾರ್ಪಟ್ಟು ಹೂಗಿಡಗಳನ್ನು ತೂಗುತ್ತದೆ.

ನೊಗ
ಎತ್ತು/ಕೋಣಗಳನ್ನು ಜತೆಯಾಗಿ ಬಳಸಿಕೊಳ್ಳುವಾಗ ಬಳಸುವ ಸಾಧನ. ಕುಸುರಿ ಕೆತ್ತನೆಯಿಂದ ಕೂಡಿದ ಈ ನೊಗದ ಮಧ್ಯಭಾಗದಲ್ಲಿ ಸುಮಾರು ನಾಲ್ಕು-ಐದು ಅಡಿ ಜಾಗದಲ್ಲಿ ಚಿತ್ತಾರದ ಕೆತ್ತನೆಗಳಿವೆ. ಇದನ್ನು ಮುಖ್ಯವಾಗಿ ಆರಾಧನೆ, ಜಾತ್ರೆ, ಉತ್ಸವಗಳಿಗೆ ಹೋಗುವಾಗ ಬಳಸುತ್ತಾರೆ. ಇದು ಸುಮಾರು ಆರು ಅಡಿ ಉದ್ದವಿರುತ್ತದೆ. ಇದರ ಎರಡು ತುದಿಗಳು ಎತ್ತುಗಳ ಹೆಗಲುಗಳ ಮೇಲೆ ಇಡುವುದಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಂಡಿವೆ. ತುದಿ ಭಾಗಗಳಲ್ಲಿ ನಿರ್ದಿಷ್ಟ ಅಂತರದಲ್ಲಿ ಒಂದು/ಎರಡು ಸಣ್ಣ ರಂಧ್ರಗಳನ್ನು ಕೊರೆದು ಅವುಗಳ ಮೂಲಕ ಕೊರಳ ಪಟ್ಟಿಯನ್ನು ಜೋಡಿಸಲಾಗುತ್ತದೆ. ನೊಗದ ಮಧ್ಯದಲ್ಲಿ ಪಟ್ಟಿಗಳನ್ನು ಕೊರೆದಿರುತ್ತಾರೆ. ಇದರಿಂದ ಎತ್ತುಗಳಿಗೆ ಪರಸ್ಪರ ಸಮಾನವಾಗಿ ಶ್ರಮವು ಹಂಚಿಹೋಗುತ್ತದೆ. ನೊಗಗಳಲ್ಲಿ ನಾನಾ ಬಗೆಯವು ಇವೆ. ಇವುಗಳಲ್ಲಿ ಒಂಟೆತ್ತಿನ ನೊಗ, ಎಂಟು ಗೇಣಿನ ನೊಗ, ಹತ್ತು ಗೇಣಿನ ನೊಗ, ಹನ್ನೆರಡು ಗೇಣಿನ ನೊಗ ಮುಂತಾದುವು ಒಂದು ವಿಧದವು. ಎಂಟು ಗೇಣಿನ ನೊಗವು ರೆಂಟೆ ಹೊಡೆಯಲು, ಹತ್ತು ಗೇಣಿನ ನೊಗವು ಕುಂಟೆ ಹೊಡೆಯಲು, ಹನ್ನೆರಡು ಗೇಣಿನ ನೊಗವು ಕುಂಟೆ ಎಡೆಗುಂಟೆ ಹೊಡೆಯಲು ಬಳಕೆಯಾಗುತ್ತವೆ. ಕಬ್ಬಿಣದ ರೆಂಟೆಯನ್ನು ಉಪಯೋಗಿಸುವಾಗ ಕಡಿಮೆ ಉದ್ದದ ನೊಗವನ್ನು ಬಳಸಲಾಗುತ್ತದೆ. ಇದರ ಉದ್ದವು ಸುಮಾರು ನಾಲ್ಕೂವರೆ ಅಡಿ. ಬಂಡಿನೊಗವು ಇನ್ನೊಂದು ಬಗೆಯದು. ಇದು ಎತ್ತಿನ ಗಾಡಿಗಳಿಗೆ ಬಳಕೆಯಾಗುತ್ತದೆ. ಬಂಡಿ ನೊಗಗಳು ಸಾಮಾನ್ಯವಾಗಿ ಇತರ ನೊಗಗಳಂತೆ ಇರುತ್ತವಾದರೂ ವಿಶೇಷ ಸಂದರ್ಭಗಳಲ್ಲಿ (ಮದುವೆ ದಿಬ್ಬಣ, ಜಾತ್ರೆ, ಎತ್ತುಗಳ ಮೆರವಣಿಗೆಇ॒ತ್ಯಾದಿ) ಬಳಸುವ ನೊಗಗಳು ಸಾಗುವಾನಿ, ಹೊನ್ನೆ ಮುಂತಾದ ಮರಗಳಿಂದ ತಯಾರಾಗುತ್ತವೆ. ಇಂಥ ನೊಗಗಳಲ್ಲಿ ಬಸವಣ್ಣ, ಸಿಂಹ, ಮುಂತಾದ ಚಿತ್ರಗಳಿವೆ. ನೊಗಗಳ ಕುರಿತಾಗಿ ಜನಪದರಲ್ಲಿ ವಿಶೇಷ ಗೌರವ, ನಂಬಿಕೆ, ವಿಧಿನಿಷೇಧಗಳಿವೆ. ಬಳಕೆಯಾಗುತ್ತಿರುವಾಗ ನೊಗ ಮುರಿದು ಹೋಗಬಾರದೆಂದು ಶ್ರದ್ಧೆ ವಹಿಸಲಾಗುತ್ತದೆ. ನೊಗಗಳನ್ನು ಸಾಮಾನ್ಯವಾಗಿ ಕಾಸರಕನ, ಅರೆಬೇವು, ತೇಗ ಮರಗಳಿಂದ ತಯಾರಿಸುತ್ತಾರೆ. ಅದನ್ನು ತುಳಿಯಬಾರದು, ಉರಿಸಬಾರದು ಎಂಬ ನಂಬಿಕೆಗಳಿವೆ.


logo