logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಶಂಖ
ದೇವರ ಪೂಜೆಯಲ್ಲಿ ಬಳಕೆಯಾಗುವ ವಸ್ತು. ವಿಷ್ಣು ಭಕ್ತರಾದ ದಾಸರು ಇದನ್ನು ಹೆಚ್ಚು ಬಳಸುತ್ತಾರೆ. ದಾಸಪ್ಪನವರನ್ನು ಭಕ್ತರು ಮನೆಮನೆಗೆ ಕರೆದು ಪೂಜಿಸುವ ಸಂಪ್ರದಾಯವಿದ್ದು ಆ ಬಗೆಯ ಪೂಜಾ ಸಂದರ್ಭದಲ್ಲಿ ದಾಸಪ್ಪಗಳು ಶಂಖವನ್ನು ಊದುವ ಮೂಲಕ ಪೂಜೆ ಪೂರೈಸುತ್ತಾರೆ. ಹುಟ್ಟಿದಾಗ, ಸತ್ತಾಗ ಆಗುವ ಸೂತಕ ಕಳೆಯಲು ಶಂಖವು ದಾಸರಿಂದ ಪೂಜೆಯಲ್ಲಿ ಬಳಕೆಯಾಗುತ್ತದೆ. ಶಂಖವು ಯಾವುದೇ ಮನುಷ್ಯ ನಿರ್ಮಿತಿಯಲ್ಲ. ಪ್ರಕೃತಿ ಸಹಜವಾಗಿ ಸಮುದ್ರ ದಂಡೆಗಳಲ್ಲಿ ಸಿಗುತ್ತದೆ. ಶಂಖದ ಚಿಪ್ಪಿನ ರಕ್ಷಣಾ ಕವಚವನ್ನು ಹೊಂದಿರುವ ಸಾಗರ ಜೀವಿ. ಅದನ್ನು ಚಿಪ್ಪಿನಿಂದ ಹೊರತೆಗೆದು ಊದುವ ಪೂಜಾ ಪರಿಕರವಾಗಿ ಬಳಸುತ್ತಾರೆ. ಸಣ್ಣಗಾತ್ರದ ಶಂಖದಿಂದ ದೊಡ್ಡಗಾತ್ರದ ಶಂಖದವರೆಗೂ ಇರುತ್ತದೆ. ಶಂಖದ ಆಕಾರ, ಬಣ್ಣ, ಭಾರ ಇತ್ಯಾದಿಗಳ ಬಗೆಗೆ ಎಲ್ಲರಿಗೂ ತಿಳಿದಿದೆ. ಹೆಚ್ಚಿನ ಶಂಖಗಳು ಎಡಮುರಿಗಳಾಗಿರುತ್ತವೆ. ಬಲಮುರಿ ಶಂಖಕ್ಕೆ ವಿಶೇಷ ಪ್ರಾಧಾನ್ಯವಿದೆ.

ಶಸ್ತ್ರ
ಮೈಲಾರಲಿಂಗನ ಭಕ್ತರಾದ ಗೊಗ್ಗಯ್ಯಗಳು/ಗೊರವಯ್ಯಗಳು, ವೀರಭದ್ರನ ಭಕ್ತರು ಹರಕೆ ತೀರಿಸಲು ಬಳಸುವ ಸಲಕರಣೆ. ಇದು ಸುಮಾರು ಎರಡು ಅಡಿ ಉದ್ದದ, ಚಿಕ್ಕ ಮೊಳೆಯಷ್ಟು ದಪ್ಪದ ಸಾಧನ. ಇದನ್ನು ಎಡಕೆನ್ನೆಯಿಂದ ಬಲಕೆನ್ನೆಯತ್ತ ಚುಚ್ಚಿ ಸುಮಾರು ಅರ್ಧದಷ್ಟನ್ನು ದಾಟಿಸುತ್ತಾರೆ. ಹಾಗೆ ಶಸ್ತ್ರವನ್ನು ಚುಚ್ಚಿಕೊಂಡು ಇವರು ಗಂಟೆಗಟ್ಟಲೆ ಇರುತ್ತಾರೆ. ಚುಚ್ಚಿದ ಶಸ್ತ್ರವನ್ನು ತೆಗೆಯುವಾಗ ಆಗುವ ಗಾಯಕ್ಕೆ ವಿಭೂತಿ ಬಂಢಾರವನ್ನು ಹಚ್ಚುವ ಕ್ರಮವಿದೆ. ಶಸ್ತ್ರವನ್ನು ತಾಮ್ರದಿಂದ ತಯಾರಿಸುತ್ತಾರೆ. ಇದರ ತುದಿ ಚೂಪಾಗಿದ್ದು. ಬುಡವು ಮೊಳೆಯ ತಲೆಯಂತೆ ಚಪ್ಪಟೆಯಾಗಿರುತ್ತದೆ.

ಶಹನಾಯಿ/ಸುಂದರಿ
ಕೊಳವೆಯಾಕಾರದಲ್ಲಿರುವ ಶಹನಾಯಿಯು ಊದುವ ವಾದ್ಯವಾಗಿದೆ(ಸುಷಿರ). ಇದರ ತುದಿಯು ಪುಟ್ಟ ಧ್ವನಿವರ್ಧಕದ ಬಾಯಿಯಾಕಾರದಲ್ಲಿದೆ. ಸುಮಾರು ಒಂದೂವರೆ ಅಡಿ ಉದ್ದ ಇರುವ ಶಹನಾಯಿಗೆ ಒಂದು ಇಂಚು ಅಂತರದಲ್ಲಿ ಏಳು, ಅಧಿಕ ಒಂದು ಮತ್ತು ಪಾರ್ಶ್ವದಲ್ಲಿ ಎರಡೆರಡು ಹೀಗೆ ಒಟ್ಟು ಹನ್ನೆರಡು ರಂಧ್ರಗಳಿರುತ್ತವೆ. ಊದುವ ತುದಿ ಸುಮಾರು ಅರ್ಧ ಇಂಚು ವ್ಯಾಸವಿದ್ದು ಮತ್ತೊಂದು ಕೊನೆಯು ಸುಮಾರು ಒಂದು ಇಂಚು ವ್ಯಾಸವಿದೆ. ಶಹನಾಯಿಯು ಉತ್ಕೃಷ್ಟ ಸಂಗೀತೋಪಕರಣವಾಗಿದ್ದು ಶ್ರೇಷ್ಟ ಮರದಿಂದಷ್ಟೇ ಅದನ್ನು ತಯಾರಿಸುತ್ತಾರೆ. ದೊಡ್ಡಾಟದಲ್ಲಿ ಬಳಕೆಯಾಗುವ ಮುಖವಿಣೆಯು ಶಹನಾಯಿಯ ಸೋದರವರ್ಗದ ವಾದ್ಯ. ಮುಖವೀಣೆಯ ಪಡುಗಕ್ಕೆ ಒಂದ್ರಿ ಎಂದು ಹೆಸರು.

ಶ್ಯಾವಿಗೆ ಮಣೆ
ರಳ ತಂತ್ರದಲ್ಲಿ ಶ್ಯಾವಿಗೆ ಮಾಡಲು ಬಳಸುತ್ತಿದ್ದ ಹಲಗೆ. ಇದು ಸುಮಾರು ಮೂರೂವರೆಯಿಂದ ನಾಲ್ಕು ಅಡಿ ಉದ್ದ, ಆರು ಇಂಚು ಅಗಲ, ಒಂದು ಇಂಚು ದಪ್ಪದ ಹಲಗೆ. ಇದರ ಒಂದು ತುದಿಯಲ್ಲಿ ಅಡ್ಡಡ್ಡವಾಗಿ ಅರ್ಧ ಇಂಚುಗಳ ಅಂತರದಲ್ಲಿ ಹದಿನೈದರಿಂದ ಇಪ್ಪತ್ತು ಗೆರೆಗಳನ್ನು ಕೊರೆಯಲಾಗುತ್ತದೆ. ಈ ಸಲಕರಣೆಯನ್ನು ಮನೆಯ ಮುಂಭಾಗದ ಕಟ್ಟೆಯಲ್ಲಿ, ತುದಿಯು ಕಟ್ಟೆಯ ಮುಂದೆ ಬರುವಂತೆ, ಇರಿಸಿಕೊಂಡು ಹಲಗೆಯ ಇಬ್ಬದಿಗಳಲ್ಲೂ ಕಾಲು ಹಾಕಿ ಕುಳಿತು, ಶ್ಯಾವಿಗೆಯ ಹಿಟ್ಟನ್ನು ಗೆರೆಕೊರೆದ ಭಾಗಗಳಲ್ಲಿಟ್ಟು, ಕೌಶಲಪೂರ್ಣವಾಗಿ ತಿಕ್ಕಲಾಗುತ್ತದೆ. ಆಗ ಮಣೆಯ ಇಬ್ಭಾಗಗಳಲ್ಲೂ ಶ್ಯಾವಿಗೆಯ ಎಳೆಗಳು ಇಳಿಯ ತೊಡಗುತ್ತವೆ. ಅವನ್ನು ಕೆಳಗೆ ನಿಂತಿರುವ ಹೆಣ್ಮಕ್ಕಳು ಮೊರ/ತಟ್ಟೆಗಳಲ್ಲಿ ಸಂಗ್ರಹಿಸಿ ಶ್ಯಾವಿಗೆ ಕೋಲಲ್ಲಿ ಒಣ ಹಾಕುತ್ತಾರೆ. ಪರಿಣತಿ ಇಲ್ಲದಿದ್ದರೆ ಇದರಲ್ಲಿ ತಯಾರಾಗುವ ಶ್ಯಾವಿಗೆಯು ದಪ್ಪದಪ್ಪವಾಗಿ ಇಳಿಯುತ್ತದೆ; ಪರಿಣತಿ ಇದ್ದರೆ ನೂಲಿನಂತೆ ಸುಂದರವಾಗಿ ತಯಾರಾಗುತ್ತದೆ. ಈ ಮಣೆಯನ್ನು ಸಾಗುವಾನಿ, ಇಂಗಳಾರ, ಹಲಸು ಮುಂತಾದ ಮರಗಳಿಂದ ತಯಾರಿಸಲಾಗುತ್ತದೆ. ಒತ್ತು ಶ್ಯಾವಿಗೆ ಮಣೆಗಳು ಮತ್ತು ಆಧುನಿಕ ಚಕ್ರಸಹಿತ ಮಣೆಗಳು ಬಂದ ಬಳಿಕ ಇಂಥ ಮಣೆಗಳು ಮರೆಯಾಗುತ್ತಿವೆ.


logo