logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಒನಕೆ
ಭತ್ತ ಕುಟ್ಟಿ ಅಕ್ಕಿ ಮಾಡುವುದಕ್ಕೆ ಬಳಕೆಯಾಗುತ್ತಿದ್ದ ಪಾರಂಪರಿಕ ಸಾಧನ. ಅಂತೆಯೇ ಜೋಳ, ನವಣೆ, ಗೋಧಿ ಮುಂತಾದ ಧಾನ್ಯಗಳ ಹೊಟ್ಟನ್ನು ತೆಗೆಯುವುದಕ್ಕೂ ಒನಕೆಯು ಬಳಕೆಯಾಗುತ್ತದೆ. ಇದು ಸುಮಾರು ನಾಲ್ಕರಿಂದ ಐದು ಅಡಿಗಳಷ್ಟು ಎತ್ತರವಾಗಿದ್ದು ಸುಮಾರು ಐದರಿಂದ ಎಂಟು ಇಂಚು ಸುತ್ತಳತೆಯುಳ್ಳದ್ದಾಗಿರುತ್ತದೆ. ಇದರ ತಳಭಾಗದಲ್ಲಿ ಕಬ್ಬಿಣದ ಬಳೆಯನ್ನು ಹಾಕಲಾಗುತ್ತದೆ. ಒರಳಿನಲ್ಲಿ ಧಾನ್ಯಗಳನ್ನು ಹಾಕಿ ನಿಂತುಕೊಂಡು ಒನಕೆಯಿಂದ ಕುಟ್ಟುತ್ತಾರೆ. ಒನಕೆಯನ್ನು ಸಾಗುವಾನಿ, ಬಾರಿ, ಬೋರೆ, ತಾಳೆ, ಜಾಲಿ ಮುಂತಾದ ಭಾರವಾದ ಮತ್ತು ಗಟ್ಟಿಮುಟ್ಟಾದ ಮರಗಳಿಂದ ತಯಾರಿಸುತ್ತಾರೆ. ಒನಕೆಯಿಂದ ಕುಟ್ಟುವ ಒರಳಿನ ಬಳಿ ಒಬ್ಬಾಕೆ ಕುಳಿತುಕೊಂಡು ಮತ್ತು ಇನ್ನೊಬ್ಬಾಕೆ ನಿಂತುಕೊಂಡು (ಒಂದೇ ಒನಕೆಯಿಂದ) ಕುಟ್ಟಬಹುದು. ಇದಲ್ಲದೆ ಪ್ರತ್ಯೇಕ ಒನಕೆಗಳನ್ನು ತೆಗೆದುಕೊಂಡು ಒಂದು ಒರಳಲ್ಲಿ ಇಬ್ಬರು ಅಥವಾ ಕೆಲವೊಮ್ಮೆ ಮೂರು ಮಂದಿ ಕೂಡಾ ಕುಟ್ಟಬಹುದು. ಇದಕ್ಕೆ ಸ್ವಲ್ಪ ಪರಿಣತಿಯ ಅಗತ್ಯವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಒಬ್ಬ ವ್ಯಕ್ತಿಯೇ ಕುಳಿತುಕೊಂಡು ಕುಟ್ಟುವುದಕ್ಕೆ ಕಿರು ಒನಕೆಗಳು ಬಳಕೆಯಾಗುತ್ತವೆ. ಇದು ಸುಮಾರು ಮೂರು ಅಡಿಗಳಷ್ಟು ಎತ್ತರವಿರುತ್ತದೆ ಅಷ್ಟೆ.

ಒರಳುಕಲ್ಲು
ಜೋಳದ ಜರಗು, ಭತ್ತ, ಗೋಧಿ ಮುಂತಾದುವನ್ನು ಕುಟ್ಟುವುದಕ್ಕೂ ಚಟ್ನಿ, ಹಿಂಡಿ(ಖಾರ ತಿಂಡಿ) ಇತ್ಯಾದಿಗಳನ್ನು ಅರೆಯುವುದಕ್ಕೂ ಬೇಳೆ ಹೂರಣವನ್ನು ರುಬ್ಬುವುದಕ್ಕೂ ಬಳಸುವ ಸಾಧನ. ಒರಳುಕಲ್ಲನ್ನು ಮನೆಯಲ್ಲಿ ಮುಖ್ಯವಾಗಿ ಎರಡು ಕಡೆಗಳಲ್ಲಿ ಸ್ಥಾಪಿಸುತ್ತಾರೆ-ಅಡುಗೆಮನೆ ಮತ್ತು ಪಡಸಾಲೆಗಳಲ್ಲಿ. ಅಡುಗೆ ಮನೆಯಲ್ಲಿನ ಒರಳು ಕಲ್ಲಿನಲ್ಲಿ ಹೆಚ್ಚಾಗಿ ರುಬ್ಬುವ ಮತ್ತು ಅರೆಯುವ ಕ್ರಿಯೆಗಳು ನಡೆಯುತ್ತವೆ. ಪಡಸಾಲೆ ಅಥವಾ ಕಟ್ಟೆಗಳ ಮೇಲೆ ಇಟ್ಟಿರುವ ಒರಳು ಕಲ್ಲು ಕುಟ್ಟುವುದಕ್ಕೆ ಬಳಕೆಯಾಗುತ್ತದೆ. ಸಾಮಾನ್ಯವಾಗಿ ರುಬ್ಬುವ ಮತ್ತು ಅರೆಯುವ ಒರಳು ಕಲ್ಲುಗಳು ಸುಮಾರು ಆರು ಇಂಚು ವ್ಯಾಸ ಮತ್ತು ಸುಮಾರು ಆರರಿಂದ ಎಂಟು ಇಂಚು ಆಳವಿರುತ್ತವೆ. ರುಬ್ಬುಗುಂಡುಗಳನ್ನು ಮತ್ತು ಮಡ್ಡೊನಕೆ/ಮೊಂಡೊನಕೆಯನ್ನು ಬಳಸಿಕೊಂಡು ರುಬ್ಬುವ, ಅರೆಯುವ ಕೆಲಸ ಮಾಡುತ್ತಾರೆ. ಒರಳು ಕಲ್ಲಿನ ಬಾಯಿಯು ಸುಮಾರು ಅರ್ಧ ಅಡಿ ವ್ಯಾಸವಿರುತ್ತದೆ. ಒನಕೆಗಳನ್ನು ಬಳಸಿ ಇದರಲ್ಲಿ ಕುಟ್ಟುವ ಕೆಲಸವನ್ನು ಮಾಡುತ್ತಾರೆ. ಒರಳು ಕಲ್ಲಿಗೆ ಸಂಬಂಧಿಸಿ ಅದರ ಮೇಲೆ ಕುಳಿತುಕೊಳ್ಳಬಾರದು, ಅದನ್ನು ತುಳಿಯಬಾರದು ಮುಂತಾದ ನಿಷೇಧಗಳಿವೆ. ಮದುವೆಯಂಥ ಸಮಾರಂಭಗಳಲ್ಲಿ ಇದನ್ನು ಪೂಜಿಸುವ ಸಂಪ್ರದಾಯ ಜನಪದರಲ್ಲಿದೆ. ಒರಳು ಕಲ್ಲುಗಳನ್ನು ಕಗ್ಗಲ್ಲಿಂದಲೇ ತಯಾರಿಸಲಾಗುತ್ತದೆ. ರೈಸ್ ಮಿಲ್ಲುಗಳು, ಮಿಕ್ಸಿ-ಗ್ರೈಂಡರ್‌ಗಳು ಬಂದ ಬಳಿಕ ಒರಳು ಕಲ್ಲುಗಳ ಬಳಕೆ ಮೂಲೆಗುಂಪಾಗತೊಡಗಿವೆ. ಆದರೆ ಆಚರಣೆಯಲ್ಲಿ ಉಳಿದಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಪ್ರತಿ ಮನೆಗಳ ಅಡುಗೆಮನೆಯ ಮೂಲೆಯಲ್ಲಿ ಒರಳು ಕಲ್ಲನ್ನು ಪ್ರತಿಷ್ಠಾಪಿಸುದನ್ನು ಈಗಲೂ ಕಾಣಬಹುದು.


logo