logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಚಿನಿವಾರ ತಕ್ಕಡಿ
ಚಿನ್ನ ಬೆಳ್ಳಿಯಂಥ ಅಮೂಲ್ಯ ಲೋಹಗಳನ್ನು ತೂಕ ಮಾಡುವುದಕ್ಕೆ ಬಳಸುವ ಸಾಧನ. ತಕ್ಕಡಿದಿಂಡು ಸುಮಾರು ಏಳು ಇಂಚು ಉದ್ದವಿದ್ದು, ಮಧ್ಯಭಾಗದಲ್ಲಿ ಒಂದು ಹಿಡಿಕೆ ಇದೆ. ದಿಂಡಿನ ಕೆಳಭಾಗದಲ್ಲಿ ಒಂದು ಮುಳ್ಳು ಇದೆ. ತಕ್ಕಡಿ ದಿಂಡಿನ ಎರಡು ತುದಿಗೂ ಒಂದು ಅಡಿ ಉದದ ಮೂರು ದಾರಗಳಿಂದ ತಕ್ಕಡಿಯ ತಟ್ಟೆಗಳನ್ನು ಕಟ್ಟಿದ್ದಾರೆ. ತಕ್ಕಡಿಯ ಮಧ್ಯಭಾಗದ ಹಿಡಿಕೆಯನ್ನು ಕೈಯಿಂದ ಎತ್ತಿಹಿಡಿದು ತೂಕ ಮಾಡುತ್ತಾರೆ. ಎಡಭಾಗದ ತಕ್ಕಡಿ ತಟ್ಟೆಯಲ್ಲಿ ತೂಕದ ಕಲ್ಲನ್ನೂ ಬಲಭಾಗದ ತಕ್ಕಡಿ ತಟ್ಟೆಯಲ್ಲಿ ಚಿನ್ನ ಬೆಳ್ಳಿ(ಆಭರಣ)ಗಳನ್ನೂ ಇಟ್ಟು ತೂಕಮಾಡುವುದು ಸಂಪ್ರದಾಯ ಹಾಗೂ ನಿಯಮ.

ಚಿಬ್ಲು/ಚಿಬ್ಲಿ
ಗಡಿಗೆಯಿಂದ ಅನ್ನ ಬಸಿಯುವ ಸಾಧನವಾದರೂ ಅದು ಹೋಳಿಗೆ ಒಬ್ಬಟ್ಟು ಮುಂತಾದ ಕರಿದ ತಿಂಡಿಗಳನ್ನು ಬಿಸಿಯಿದ್ದಾಗ ಹಾಕಲು, ರೊಟ್ಟಿ ಚಪಾತಿ ಮುಂತಾದುವನ್ನು ಸುಡುವ/ಬೇಯಿಸುವ ಮುನ್ನ ಮತ್ತು ಬಳಿಕ ಅವನ್ನು ಹಾಕಲು, ಪಾತ್ರೆಗಳಿಗೆ ಮುಚ್ಚಲು ಬಳಸುತ್ತಾರೆ. ಇದು ಬಿದಿರಿನ ಚಿಕ್ಕ ಚಿಕ್ಕ ಸೀಳುಗಳಿಂದ ಹೆಣೆದ ವೃತ್ತಾಕಾರದ ವಸ್ತು. ಸುಮಾರು ಒಂದು ಅಡಿಯಿಂದ ಒಂದೂವರೆ ಅಡಿಗಳಷ್ಟು ವ್ಯಾಸವುಳ್ಳದ್ದಾಗಿದೆ. ಇದರ ಮೂಲಕ ಗಾಳಿಯು ಚೆನ್ನಾಗಿ ಆಡುವುದರಿಂದ ವಸ್ತುಗಳು ಬೇಗನೆ ಒಣಗಲು ಅನುಕೂಲ. ಸಾಕಷ್ಟು ಸಂದು/ಎಡೆಗಳಿರುವುದರಿಂದ ಗಂಜಿ, ಎಣ್ಣೆ, ನೀರು ಕೆಳಗೆ ಸುರಿಯುತ್ತದೆ ಮತ್ತು ಇದರ ಮೇಲೆ ಉಳಿದ ವಸ್ತುಗಳು ಗರಿಗರಿಯಾಗಿರಲು ಅನುಕೂಲವಾಗುತ್ತದೆ. ತುಂಬ ಹಗುರವಾಗಿರುವುದರಿಂದ ಬಳಸಲು ಯೋಗ್ಯವಾಗಿದೆ. ಅಡುಗೆ ಮನೆಯಲ್ಲಿ ಇದು ಮಹಿಳೆಯರಿಗೆ ಪ್ರಿಯವೂ, ಪೂಜನೀಯವೂ, ಬಹೂಪಯೋಗಿಯೂ ಆದ ವಸ್ತುಗಳಲ್ಲೊಂದಾಗಿದೆ.

ಚಿಮಟಿಗೆ/ಮುಳ್ಳುಗಡ್ಡಿ
ಮನುಷ್ಯರು ಅಥವಾ ಪ್ರಾಣಿಗಳ ದೇಹದೊಳಗೆ ಚುಚ್ಚಿಕೊಂಡ ಮುಳ್ಳು, ಸೇರಿದ ಕಸಕಡ್ಡಿ-ಕಲ್ಲುಚೂರು ಮುಂತಾದುವನ್ನು ಕೀಳಲು ಬಳಸುವ ಸಾಮಗ್ರಿ ಇವು ಇಕ್ಕುಳದ ಹಾಗಿದ್ದು ಗಾತ್ರದಲ್ಲಿ ವಿಭಿನ್ನವಾಗಿರುತ್ತದೆ. ಜಾನುವಾರುಗಳಿಗಾಗಿ ಬಳಸುವ ಚಿಮಟಿಗೆ ದೊಡ್ಡದು, ಮನುಷ್ಯರ ಅಗತ್ಯಕ್ಕೆ ಬಳಸುವುವು ಸಣ್ಣವು. ಉತ್ತರ ಕರ್ನಾಟಕದ ಪಶುಪಾಲಕರಲ್ಲಿ ಇವುಗಳ ಬಳಕೆ ಹೆಚ್ಚು. ಕುರಿ, ದನಗಳ ಕಾಲಗೊರಸಿನಲ್ಲಿ ಸಿಕ್ಕಿಹಾಕಿಕೊಂಡ ಸಣ್ಣ ಗಾತ್ರದ ಕಲ್ಲು ಮುಂತಾದುವನ್ನು ಕೀಳುವುದಕ್ಕೂ ಚಿಮಟಿಗೆಯು ಬಳಕೆಯಾಗುತ್ತದೆ. ಚಿಮಟಿಗೆಗಳನ್ನು ಜೋಡಿಸಿಕೊಂಡಿರುವ ಗುಚ್ಛದಲ್ಲಿ ಸೂಜಿಯಂಥ ಮತ್ತು ಸೌಟಿನಂಥ ವಸ್ತುಗಳಿರುತ್ತವೆ. ದೇಹದಲ್ಲಿ ಸೇರಿಕೊಂಡ ಮುಳ್ಳು ಅಥವಾ ಕಶ್ಮಲಗಳನ್ನು ಬಗಿದು ತೆಗೆಯಲು ಸೂಜಿಯಾಕಾರದ ಉಪಕರಣವನ್ನು ಬಳಸಿದರೆ ಗಾಯವಾದ ಜಾಗಕ್ಕೆ ಔಷಧ ಹಾಕಲು ಸೌಟಿನಾಕಾರದ ಉಪಕರಣದ ಬಳಕೆಯಾಗುತ್ತದೆ. ಕಿವಿಯ ಗುಗ್ಗೆ/ಕೊಕ್ಕಿಯನ್ನು ತೆಗೆದು ಹಾಕಲೂ ಇದು ಬಳಕೆಯಾಗುತ್ತದೆ. ಚಿಮಟಿಗೆಯು ಉತ್ತರ ಕರ್ನಾಟಕದ ಪಶುಪಾಲಕರಲ್ಲಿ, ವಿಶೇಷವಾಗಿ ಅಲೆಮಾರಿ ಕುರಿಗಾಹಿಗಳಲ್ಲಿ ಬಳಕೆ ಹೆಚ್ಚು. ಚಿಮಟಿಗೆಯನ್ನು ಕಬ್ಬಿಣ, ತಾಮ್ರ ಮುಂತಾದ ಲೋಹಗಳಿಂದ ತಯಾರಿಸುತ್ತಾರೆ. ಜೋಳಿಗೇರು ಎನ್ನುವ ಸಮುದಾಯದವರು ಚಿಮಟಿಗೆಯನ್ನು ತಯಾರಿಸಿ ಗ್ರಾಮ, ಸಂತೆ, ಜಾತ್ರೆ ಮುಂತಾದ ಸ್ಥಳಗಳಲ್ಲಿ ಮಾರಾಟಮಾಡುತ್ತಾರೆ.

ಚಿರತೆಯ ಮುಖ
ಮನೆಯ ಅಲಂಕಾರಕ್ಕೆ ಬಳಸಿದ ಒಂದು ವಿಶೇಷ ಪರಿಕರ. ಬೇಟೆಗಾರಿಕೆಯಲ್ಲಿ ದೊರೆತ ಚಿರತೆಯ ಮುಖವನ್ನು ರಕ್ಷಿಸಿ ಸುಮಾರು ಒಂದುವರೆ ಅಡಿ ಎತ್ತರ, ಒಂದು ಅಡಿ ಅಗಲದ ಮರದ ಹಲಗೆಯ ತುಂಡಿಗೆ ಅಳವಡಿಸಲಾಗಿದೆ. ಹಿಂದೆ ದೊಡ್ಡ ದೊಡ್ಡ ಶ್ರೀಮಂತ ಮನೆತನಗಳಲ್ಲಿ ಇಂಥ ವಸ್ತುಗಳನ್ನು ಅಲಂಕಾರಕ್ಕಾಗಿ ಮತ್ತು ಪ್ರತಿಷ್ಠೆಗಾಗಿ ಬಳಸಿಕೊಳ್ಳುತ್ತಿದ್ದರು. ಇದು ಸುಮಾರು ಇಪ್ಪತ್ತನೇ ಶತಮಾನದ ಪೂರ್ವಾರ್ಧದ್ದಾಗಿದೆ ಎಂದು ವಕ್ತೃಗಳು ಹೇಳುತ್ತಾರೆ.

ಚೊಂಗ್ಯನ ಮಣೆ/ಚೊಂಗ್ಯೆ ಮಣೆ
ಇದು ಧಾರ್ಮಿಕ ಮಹತ್ವವನ್ನು ಒಳಗೊಂಡ ಒಂದು ವಸ್ತು. ಮೊಹರಂ ಹಬ್ಬದ ಕೊನೆಯ ದಿನ ಮತ್ತು ಕೌಡಿಪೀರ ಹಬ್ಬದ (ಮೊಹರಂ ಆಚರಣೆಯ ಒಂದು ತಿಂಗಳ ನಂತರ ಆಚರಿಸುವ ಅಂಥದೇ ಇನ್ನೊಂದು ಹಬ್ಬ) ಕೊನೆಯ ದಿನ ಹೋಳಿಗೆಗಳನ್ನು ಮಾಡುವಾಗ ಅದರ ಮೇಲೆ ಮೊಹರು ಬೀಳುವಂತೆ ಒತ್ತುವ ಮಣೆ. ಇದು ವೃತ್ತಾಕಾರದಲ್ಲಿದೆ. ಇದರ ಗಾತ್ರ ಮತ್ತು ವಿನ್ಯಾಸಗಳಲ್ಲಿ ವ್ಯತ್ಯಾಸಗಳಿವೆ. ಸಾಧಾರಣವಾಗಿ ಸುಮಾರು ಆರು ಇಂಚು ವ್ಯಾಸದ್ದಾಗಿರುತ್ತದೆ. ಮೇಲ್ಭಾಗದಲ್ಲಿ ಚಿತ್ತಾರಗಳಿರುತ್ತವೆ. ಮರ ಮತ್ತು ಬಳಪದ ಕಲ್ಲುಗಳಿಂದ ಈ ಮಣೆಗಳನ್ನು ತಯಾರಿಸಲಾಗುತ್ತದೆ.

ಜಂತಕುಂಟೆ
ಒಕ್ಕುಲು ಮಾಡುವ ಸಂದರ್ಭದಲ್ಲಿ ಭತ್ತ, ರಾಗಿ, ಜೋಳ, ಸಜ್ಜೆ ಮುಂತಾದುವುಗಳ ಕಾಳುಗಳು ಬೇರ್ಪಟ್ಟ ಬಳಿಕ ಉಳಿಯುವ ಹುಲ್ಲು ಮತ್ತು ತೆನೆಯ ಅವಶೇಷ (ಕಂಕಿ)ಗಳನ್ನು ಬೇರ್ಪಡಿಸಿ ತೆಗೆಯಲು ಬಳಸುವ ಸಾಧನ. ಇದರ ದಿಂಡಿಗೆ ಸಾಮಾನ್ಯವಾಗಿ ಹಲ್ಲಿನಾಕಾರದ ನಾಲ್ಕು ಅಥವಾ ಆರು ರಚನೆಗಳನ್ನು ಜೋಡಿಸಿರುತ್ತಾರೆ. ಒಂದು ಈಸನ್ನೂ ಜೋಡಿಸುತ್ತಾರೆ. ಜಂತುಕುಂಟೆಯಿಂದ ಪ್ರತ್ಯೇಕಿಸಲ್ಪಟ್ಟ ಹುಲ್ಲು ಮತ್ತು ಕಂಕಿಯ ರಾಶಿಯನ್ನು ಆ ಬಳಿಕ ಅಲ್ಲಿಂದ ಸ್ಥಳಾಂತರಿಸಲಾಗುತ್ತದೆ. ಹೊಲದ ಮಡಿ ಗಳನ್ನು ಸಮತಟ್ಟು ಮಾಡಿಕೊಳ್ಳುವುದಕ್ಕೂ ಜಂತುಕುಂಟೆಯು ಬಳಕೆಯಾಗುತ್ತದೆ. ಜಂತಕುಂಟೆಯನ್ನು ಮರದಿಂದ ತಯಾರಿಸುತ್ತಾರೆ. ಇತ್ತೀಚಿಗೆ ಕಬ್ಬಿಣದ ಜಂತಕುಂಟೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಜತಿಗೆ/ಪಟಗಾಣಿ
ಎತ್ತುಗಳ ಕೊರಳಿಗೆ ಕಟ್ಟುವ ಸಾಧನ. ಗಾಡಿಗೆ/ಉಳುಮೆಗೆ ಹೂಡಿದ ಎತ್ತುಗಳ ಕೊರಳಿಗೆ ಕಟ್ಟಿದ ನೊಗದ ಹಗ್ಗವು ಘರ್ಷಿಸಿ ಕೊರಳಿಗೆ ಗಾಯವಾಗಬಾರದೆಂಬ ಮತ್ತು ನೊಗದಿಂದ ಎತ್ತುಗಳು ಹೊರಕ್ಕೆ ಸರಿಯಬಾದರೆಂಬ ಉದ್ದೇಶದಿಂದ ಇವನ್ನು ಕಟ್ಟುತ್ತಾರೆ. ಇವು ಮಧ್ಯದಲ್ಲಿ ಸುಮಾರು ಏಳರಿಂದ ಎಂಟು ಇಂಚುಗಳಷ್ಟು ಅಗಲವಾಗಿದ್ದು ಸುಮಾರು ಇಪ್ಪತ್ತರಿಂದ ಇಪ್ಪತ್ತನಾಲ್ಕು ಇಂಚು ಉದ್ದವಿರುತ್ತವೆ. ಸರಳವಾದ ಚರ್ಮದ ಪಟ್ಟಿಗಳಿಂದ ತೊಡಗಿ ವಿಶೇಷ ವಿನ್ಯಾಸಗಳಿಂದಲೂ ಅಲಂಕಾರಿಕ ಹೆಣೆಗೆಗಳಿಂದಲೂ ಕೂಡಿದ ಜತೆಗೆಗಳನ್ನು ಚರ್ಮದಿಂದ ನಿರ್ಮಿಸುತ್ತಾರೆ. ಜತಿಗೆಗಳನ್ನು ಚರ್ಮ, ನೂಲು, ಬೂತಾಳೆ/ಕತ್ತಾಳೆ ಪಟ್ಟಿ ಮುಂತಾದವುಗಳಿಂದ ತಯಾರಿಸುತ್ತಾರೆ. ಜತಿಗೆಯ ಎರಡು ಕೊನೆಗಳಲ್ಲಿಯೂ ರಂಧ್ರ ಮಾಡಿ ಹಗ್ಗಗಳನ್ನು ಜೋಡಿಸಿ ಎತ್ತುಗಳ ಕೊರಳುಗಳಿಗೆ ಕಟ್ಟಲಾಗುತ್ತದೆ.

ಜರಿ ಪಟಗ
ಹಬ್ಬ, ಜಾತ್ರೆ, ಮದುವೆ ಮುಂತಾದ ಶುಭಸಂದರ್ಭಗಳಲ್ಲಿ ಪುರುಷರು ತಲೆಗೆ ಸುತ್ತಿಕೊಳ್ಳಲು ಬಳಸುವ ವಸ್ತ್ರ. ಈ ಪಟಗವನ್ನು ಮನೆಯ ಹಿರಿಯ ಗ್ರಾಮದ ಮುಖಂಡರು ಸುತ್ತಿಕೊಳ್ಳುವ ಕ್ರಮ ಹೆಚ್ಚು ರೂಢಿಯಲ್ಲಿತ್ತು. ಇದು ಪ್ರತಿಷ್ಠೆಯ ಸಂಕೇತವಾಗಿಯೂ ಬಳಕೆಯಾಗುತ್ತಿತ್ತು. ಇದು ಸುಮಾರು ಎರಡು ಮೀಟರ್ ಉದ್ದ ಒಂದೂವರೆ ಮೀಟರ್ ಅಗಲವಿದ್ದು, ಆಯತಾಕಾರದಲ್ಲಿರುತ್ತದೆ. ಇದನ್ನು ರೇಷ್ಮೆ ನೂಲಿನಿಂದ ತಯಾರಿಸುತ್ತಾರೆ. ಜನರು ತಮ್ಮ ಆರ್ಥಿಕತೆಗನುಗುಣವಾಗಿ ವಿವಿಧ ರೀತಿಯ ರುಮಾಲುಗಳನ್ನು ಬಳಸುತ್ತಾರೆ. ಈ ಪಟಗವನ್ನು ನೇಕಾರರು ಹೆಣೆಯುತ್ತಾರೆ.

ಟೊಪ್ಪಿಗೆ
ಗ್ರಾಮೀಣ ಪ್ರದೇಶಗಳಲ್ಲಿ ದನ, ಎಮ್ಮೆ, ಆಡು, ಕುರಿ ಮೇಯಿಸುವವರು ಟೊಪ್ಪಿಗೆಯನ್ನು ಬಳಸುತ್ತಾರೆ. ಮಾನಿಚೇರಿ ಹುಲ್ಲಿನ ಕಡ್ಡಿಯಿಂದ ಹೆಣೆಯುತ್ತಾರೆ. ಈ ಹುಲ್ಲಿನ ಕಡ್ಡಿಯು ಒಂದು ಹಂತಕ್ಕೆ ಬೆಳೆದು ಬಂದಾಗ ಅಂದರೆ ಹೆಚ್ಚು ಎಳೆಯದೂ ಅಲ್ಲ, ಹೆಚ್ಚು ಬಲಿತಿರುವುದೂ ಅಲ್ಲದೆ, ಹೆಣೆಯಲು ಅನುಕೂಲವಾಗುವಂತಹ ಅವಧಿಯಲ್ಲಿ ಅವನ್ನು ಕತ್ತರಿಸಿ ಕೊಂಡು ಹೆಣೆಯುತ್ತಾರೆ. ವರ್ಷದ ಒಂದು ಅವಧಿಯಲ್ಲಿ ಮಾತ್ರ ಈ ಮಾನಿಚೇರಿ ಹುಲ್ಲಿನ ಕಡ್ಡಿಸಿಗುತ್ತದೆ. ಪೋಲಿಸರ ಟೊಪ್ಪಿಗೆಯಂತೆಯೇ ಇದರ ಆಕಾರ ಇರುತ್ತದೆ. ಇದನ್ನು ಹಾಕಿಕೊಳ್ಳುವುದರಿಂದ ಇದು ಬಿಸಿಲಿನ ತಾಪವನ್ನು ತಡೆದು ದೇಹಕ್ಕೆ ಹಿತನೀಡುತ್ತದೆ. ಹುಲ್ಲನ್ನು ಸಂಗ್ರಹಿಸಿ, ಬಿಸಿಲಿನಲ್ಲಿ ಒಂದು ಹದಕ್ಕೆ ಒಣಗಿಸಿ ಟೊಪ್ಪಿಗೆ ಹೆಣೆಯುವುದು ಒಂದು ವಿಶೇಷ ಕರಕುಶಲ ಕಲೆಯಾಗಿದೆ.

ಡೊಪ್ಪಿ ಉಚ್ಚೋಡು
ಬಾಗಿಲ ತೋಳು ಕಿಟಿಕಿಗಳ ಪಟ್ಟಿ ಮುಂತಾದ ವಸ್ತುಗಳಿಗೆ ಆಲಂಕಾರಿಕ ಗೆರೆ ಹಾಕಲು ಬಳಸುವ ವಸ್ತು. ಇದರ ಉದ್ದ ಸುಮಾರು ಏಳೂವರೆ ಇಂಚು, ಎತ್ತರ ಎರಡೂವರೆ ಇಂಚು, ಅಗಲ ಒಂದೂವರೆ ಇಂಚು. ಇದು ಉಚ್ಚೋಡು ರೀತಿಯಲ್ಲಿದೆ. ಆದರೆ ಗಾತ್ರದಲ್ಲಿ ಚಿಕ್ಕದು. ಇದರ ಮಧ್ಯಭಾಗದಲ್ಲಿ ಗೀಟು ಕೊರೆಯುವ ಲೋಹದ ವಸ್ತುವಾಗಿದೆ. ಇದನ್ನು ಅಳತೆಗೆ ತಕ್ಕಂತೆ ಗೀಟು/ಗೆರೆ ಕೊರೆಯಲು ಅನುಕೂಲವಾಗುವಂತೆ ಹೊಂದಿಸಿಕೊಳ್ಳಬಹುದು. ಬಾಗಿಲ ತೋಳು, ತಟ್ಟಿ, ತಲೆಪಟ್ಟಿ ಬಾಗಿಲು ಎತ್ತಿನ ಗಾಡಿಯ ಪಟ್ಟಿ ಮುಂತಾದವುಗಳಿಗೆ ಆಲಂಕಾರಿಕ ಗೆರೆ ಹಾಕಿಕೊಳ್ಳಲು ಬಳಸುತ್ತಾರೆ.


logo