logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ತೀಡೋಗಣೆ/ಬೇಳೆಗುಂಡು
ಬೇಳೆ ಕಾಳುಗಳನ್ನು ಬೇಯಿಸಿದ ಬಳಿಕ ಅದನ್ನು ತೀಡುಗಣೆ ಬಳಸಿಕೊಂಡು ಒಂದಿಷ್ಟು ಮಸೆದು, ಜಜ್ಜಿ ಕೊಳ್ಳುತ್ತಾರೆ. ತುರ್ತಾಗಿ ಒಂದಿಷ್ಟು ಚಟ್ನಿ ಅರೆದುಕೊಳ್ಳುವುದಕ್ಕೂ ತೀಡುಗಣೆಯು ಬಳಕೆಯಾಗುತ್ತದೆ. ಇದರ ಗಾತ್ರದಲ್ಲಿ ವ್ಯತ್ಯಾಸಗಳಿವೆ. ಇದರ ಹಿಡಿಕೆಯು ಸುಮಾರು ಒಂದು ಅಡಿ ಉದ್ದವಿದ್ದು ಬುಡದಲ್ಲಿ ಸಣ್ಣ ಗಡ್ಡೆಯಂತಹ ರಚನೆ ಇರುತ್ತದೆ. ಗಡ್ಡೆಯು ಸುಮಾರು ಎರಡು ಇಂಚಿನಿಂದ ನಾಲ್ಕು ಇಂಚುಗಳ ವ್ಯಾಸವಿರುತ್ತದೆ. ಇದನ್ನು ಇಂಗಳಾರದ ಮರದಿಂದ ತಯಾರಿಸುತ್ತಾರೆ. ಇಂಗಳಾರ ಔಷಧಿ ಗುಣವುಳ್ಳ ಮರ.

ತುಪ್ಪದ ಕುಡಿಕೆ-ಚಟಿಗೆ
ತುಪ್ಪ ಹಾಕಿಡಲು ಬಳಸುವ ಮಣ್ಣಿನ ಸಾಧನ. ಇದು ಸುಮಾರು ಆರು ಇಂಚು ಎತ್ತರವಿದ್ದು ಮೇಲ್ಭಾಗದ ವ್ಯಾಸವು ಸುಮಾರು ನಾಲ್ಕು ಇಂಚು ಹೊಂದಿರುತ್ತದೆ. ಇದು ದೀರ್ಘಕಾಲದ ವರೆಗೂ ತುಪ್ಪ ಕೆಡದಂತೆ ಕಾಪಾಡುವ ಗುಣ ಹೊಂದಿದೆ ಎನ್ನುವುದು ಜನಪದರ ಅನುಭವ.

ತೂಕದ ಗುಂಡು
ಕಟ್ಟಡ ಕಟ್ಟುವಾಗ ಗೊಡೆಗಳಿಗೆ ಇಟ್ಟ ಕಲ್ಲು/ಇಟ್ಟಿಗೆಗಳ ಗುರುತ್ವಾಕರ್ಷಣ ನೆಲೆಯನ್ನು ಪರೀಕ್ಷಿಸಲು ಬಳಸುವ ಉಪಕರಣ. ಕಬ್ಬಿಣದ ಗುಂಡನ್ನು ಮೇಲಿಂದ ಕೆಳಗೆ ಇಳಿ ಬಿಡಲು ದಾರವನ್ನು ಕಟ್ಟಿರುತ್ತಾರೆ. ಗುಂಡು ಸುಮಾರು ಮೂರು ಇಂಚು ಉದ್ದವಿರುತ್ತದೆ. ಇದಕ್ಕೆ ಸುಮಾರು ಎರಡು ಮೀಟರ್ ಉದ್ದದ ದಾರವನ್ನು ಪೋಣಿಸಿದೆ. ದಾರದಲ್ಲಿ ಚೌಕಕಾರದ ಪುಟ್ಟ ಹಲಗೆ ಕೂಡ ಜೋಡಣೆಯಾಗಿದೆ. ಕಟ್ಟಡದ ಮೂಲೆಯನ್ನು ಅಳತೆ ಮಾಡುವಾಗ ಹಲಗೆ ತುಂಡನ್ನು ಕೈಯಲ್ಲಿ ಗೋಡೆಗೆ ಹಿಡಿದು ದಾರದಲ್ಲಿ ನೇತಾಡುವ ಗುಂಡನ್ನು ಇಳಿಬಿಟ್ಟು ಕಟ್ಟುತ್ತಿರುವ ಗೋಡೆಯು ಸರಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷೆ ಮಾಡುವುದಕ್ಕೆ ಬಳಸುತ್ತಾರೆ. ಗುಂಡು ಸುಮಾರು ಎರಡನೂರ ಐವತ್ತು ಗ್ರಾಂ ತೂಕದ್ದಾಗಿದೆ. ಇದು ಗೋಲಾಕಾರವಿದಲ್ಲಿರುತ್ತದೆ.

ತೂಗುದೀಪ
ದೇವರ ಕೋಣೆ, ದೇವಾಲಯ, ದೈವಾಲಯಗಳಲ್ಲಿ ಸರ್ವ ಸಾಮಾನ್ಯವಾಗಿ ಇರುವ ದೀಪವಿಡುವ ಸಾಧನ. ಇದರಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ - ಸಂಕಲೆ ಮತ್ತು ದೀಪ ಎಂದು. ಸಂಕಲೆಯನ್ನು ಕೊಂಡಿಗೆ ಜೋತು ಹಾಕಲಾಗುತ್ತದೆ. ಸಂಕಲೆಯ ಬುಡವು ದೀಪದೊಂದಿಗೆ ಬಂಧಿತವಾಗಿರುತ್ತದೆ. ದೀಪವೂ ವೃತ್ತಾಕಾರದಲ್ಲಿದ್ದು ಸುಮಾರು ಆರು ಇಂಚು ವ್ಯಾಸವಿದೆ (ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ). ದೀಪದಲ್ಲಿ ಐದು ಸಮಾನ ಅಂತರಗಳಲ್ಲಿ ಬತ್ತಿಗಳನ್ನು ಇಟ್ಟುಕೊಳ್ಳಲು ರಚನೆಗಳಿವೆ. ಇಂಥ ದೀಪಗಳನ್ನು ಹಚ್ಚುವಾಗ ಪೂರ್ವಾಭಿಮುಖವಾಗಿರುವ ಬತ್ತಿಗಳನ್ನು ಮೊದಲು ಉರಿಸಿ ಬಳಿಕ ಪ್ರದಕ್ಷಿಣಾ ರೂಪದಲ್ಲಿ ಹಚ್ಚುವುದು ಸಂಪ್ರದಾಯ. ತೂಗು ದೀಪಗಳನ್ನು ಕಂಚು, ಹಿತ್ತಾಳೆ, ಬೆಳ್ಳಿ ಮುಂತಾದ ಲೋಹಗಳಿಂದ ತಯಾರಿಸುತ್ತಾರೆ.

ತೆಪ್ಪ/ಹರಿಗೋಲು
ನದಿ ಹಾಗೂ ಕೆರೆಗಳಲ್ಲಿ ಮೀನುಗಾರಿಕೆ ಮತ್ತು ನದಿ ದಾಟಲು ಬಳಸುವ ಸಾಧನ. ಸಣ್ಣ ತೆಪ್ಪವು ತಟ್ಟೆಯ ಆಕಾರದಲ್ಲಿ ಸುಮಾರು ಒಂದರಿಂದ ಒಂದೂವರೆ ಅಡಿ ಎತ್ತರವಿರುತ್ತದೆ. ಮೇಲ್ಭಾಗದ ವ್ಯಾಸ ಆರು ಅಡಿ ಇದ್ದು ತಳಭಾಗ ಚಪ್ಪಟೆಯಾಗಿದೆ. ಬಿದಿರು ಅಥವಾ ತಟಿಕೆಯ ಸೀಳುಗಳಿಂದ ಹೆಣೆದು ಅದರ ಹೊರ ಮೈಮೇಲೆ ಪ್ಲಾಸ್ಟಿಕ್ ಚೀಲವನ್ನು ಹೊದಿಸಿ ಚೀಲದ ಮೇಲ್ಭಾಗದಲ್ಲಿ ಡಾಂಬರ್ ಹಾಕಿದ್ದಾರೆ ನೀರು ಒಳಹೋಗದಂತೆ ತಡಯುವುದು ಇದರ ಮುಖ್ಯ ಉದ್ದೇಶ. ಜೋರಾಗಿ ಗಾಳಿ ಬೀಸದ ಎಲ್ಲಾ ನೀರಿನ ತಾಣಗಲ್ಲಿ ಇದು ಸಾಮಾನ್ಯವಾಗಿ ಬಳಕೆಯಾಗುತ್ತದೆ.

ತೊಟ್ಟಿಲು
ಮಕ್ಕಳನ್ನು ತೂಗಿ ಮಲಗಿಸಲು ಬಳಸುವ ಸಾಧನ. ಇದು ಸುಮಾರು ಒಂದೂವರೆ ಅಡಿ ಎತ್ತರ, ಮೂರು ಅಡಿ ಉದ್ದ, ಒಂದೂವರೆ ಅಡಿ ಅಳತೆಯುಳ್ಳದ್ದಾಗಿರುತ್ತದೆ. ಇದರ ಒಳಭಾಗದಲ್ಲಿ ಹಲಗೆಗಳನ್ನು ಜೋಡಿಸಲು ಎರಡು ಪಟ್ಟಿಗಳಿರುತ್ತವೆ. ಹಲಗೆಗಳನ್ನು ಜೋಡಿಸಲು ಕ್ರಮವಾಗಿ ನಾಲ್ಕು ಕಂಬಗಳಿದ್ದು, ಕೆಲವು ತೊಟ್ಟಿಲುಗಳಲ್ಲಿ ಇದರ ಮೇಲೆ ಬುಗುರಿಯಾಕಾರದ ಮಣಿಗಳಿರುತ್ತವೆ. ಮಕ್ಕಳ ನಾಮಕರಣದ ಬಳಿಕ ಸಾಮಾನ್ಯವಾಗಿ ತೊಟ್ಟಲಿನ ಬಳಕೆಯಾಗುತ್ತದೆ. ಆರ್ಥಿಕತೆಗನುಗುಣವಾಗಿ ತೊಟ್ಟಿಲನ್ನು ಬಳಕೆಮಾಡುತ್ತಾರೆ. ತೊಟ್ಟಿಲನ್ನು ಸಾಮಾನ್ಯವಾಗಿ ತೇಗ, ಹಲಸು ಮುಂತಾದ ಮರದಿಂದ ತಯಾರಿಸುತ್ತಾರೆ. ತೊಟ್ಟಿಲುಗಳನ್ನು ಕಲಾತ್ಮಕವಾಗಿ ರಚಿಸುತ್ತಾರೆ. ಲೋಹಗಳಿಂದಲೂ ತೊಟ್ಟಿಲುಗಳನ್ನು ನಿರ್ಮಿಸುತ್ತಾರೆ.

ತೊರಳಿ ಕಲ್ಲು/ತೊಳಲಿಕಲ್ಲು
ಭತ್ತವನ್ನು ಅಕ್ಕಿ ಮಾಡಿಕೊಳ್ಳಲು ಬಳಸುವ ಒಂದು ವಿಧದ ಬೀಸುವಕಲ್ಲು. ಇದರಲ್ಲೂ ಬೀಸುಕಲ್ಲಿನ ಹಾಗೆಯೇ ಎರಡು ಮುಖ್ಯ ಭಾಗಗಳಿವೆ-ಅಡಿಗಲ್ಲು ಮತ್ತು ತಿರುಗಲ್ಲು. ಅಡಿಗಲ್ಲಿನ ಮೇಲ್ಭಾಗ ಮತ್ತು ತಿರುಗಲ್ಲಿನ ಕೆಳಭಾಗದಲ್ಲಿ ಭತ್ತವು ಸಾಧಾರಣವಾಗಿ ಅಡಗಬಲ್ಲಷ್ಟು ಗಾತ್ರದ ಅನೇಕ ಗೆರೆಗಳನ್ನು ಕೊರೆಯಲಾಗಿರುತ್ತದೆ. ಆದರೆ ಅವು ಭತ್ತವನ್ನು ಹಿಡಿದಿಡದೆ ಜಾರುವುದಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಂಡಿರುತ್ತವೆ. ಈ ತಂತ್ರಜ್ಞಾನದಿಂದ ಈ ಬೀಸುಗಲ್ಲನ್ನು ತಿರುಗಿಸಿದಾಗ ಭತ್ತದ ಹೊಟ್ಟಷ್ಟೆ ಕಳಚಿಕೊಂಡು ಅಕ್ಕಿಯು ಸಿದ್ಧವಾಗುತ್ತದೆ ಮಾತ್ರವಲ, ಅಕ್ಕಿಯು ತುಂಡಾಗುವುದು ಕಡಿಮೆ. ತಿರುಗಲ್ಲಿನ ಇನ್ನೊಂದು ವೈಶಿಷ್ಟವೆಂದರೆ ಅದರ ರಂಧ್ರವು ತುಂಬ ದೊಡ್ಡದಾಗಿದ್ದು ಹೆಚ್ಚು ಪ್ರಮಾಣದ ಭತ್ತವನ್ನು ಸುರಿಯಲು ಅನುಕೂಲವಾಗುವಂತಿರುತ್ತದೆ. ತೊರಳಿ ಕಲ್ಲುಗಳು ಉಳಿದ ಬೀಸುಕಲ್ಲುಗಳಿಗಿಂತ ಗಾತ್ರದಲ್ಲಿ ದೊಡ್ಡದಿರುತ್ತವೆ ಹಾಗೂ ಇವುಗಳ ಗಾತ್ರದಲ್ಲಿ ವ್ಯತ್ಯಾಸಗಳಿವೆ. ಇದನ್ನು ಸಾಮಾನ್ಯವಾಗಿ ಇಬ್ಬರು ಸೇರಿಕೊಂಡು ಬೀಸುತ್ತಾರೆ. ಇದನ್ನು ಮರದಿಂದಲೂ, ಕಲ್ಲಿನಿಂದಲೂ ತಯಾರಿಸುತ್ತಾರೆ. ಕರ್ನಾಟಕದ ಗದಗ, ಧಾರವಾಡ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ರೈಸ್ ಮಿಲ್ಲುಗಳು ಮತ್ತು ಗಿರಣಿಗಳು ಬಂದ ಬಳಿಕ ತೊರಳಿ ಕಲ್ಲುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ.

ದಂಡ/ಯೋಗದಂಡ
ಋಷಿಮುನಿಗಳು ಮತ್ತು ಜಂಗಮರು ಧ್ಯಾನಮಾಡುವಾಗ ಬಳಸುವ ಸಾಧನ. ಇದು ಸುಮಾರು ಒಂದೂವರೆ ಅಡಿ ಉದ್ದವಿದ್ದು, ಸುಮಾರು ಹತ್ತು ಇಂಚು ಅಗಲವಿರುವ ದೋಣಿಯಾಕಾರದ ಮೇಲ್ತುದಿಯನ್ನು ಹೊಂದಿದೆ. ಇದರ ಮೇಲೆ ಎಡತೋಳನ್ನು ಇಟ್ಟುಕೊಂಡು ಧ್ಯಾನ ಮಾಡುತ್ತಿದ್ದರು. ಜಂಗಮರು ಕೂಡ ದಂಡವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುತ್ತಿದ್ದರು. ದಂಡಕ್ಕೆ ಜನಪದರು ಬಹಳ ಭಕ್ತಿಭಾವದಿಂದ ನಮಸ್ಕರಿಸುತ್ತಾರೆ. ಋಷಿಮುನಿಗಳಿಗೆ ಮತ್ತು ಜಂಗಮರಿಗೆ ಎಷ್ಟು ಬೆಲೆ ಇದೆಯೋ ಅಷ್ಟೇ ಬೆಲೆ ಈ ದಂಡಕ್ಕೂ ಕೊಡುತ್ತಾರೆ. ದಂಡವನ್ನು ಸಾಗುವಾನಿ, ಮತ್ತಿ ಮುಂತಾದ ಮರಗಳಿಂದ ತಯಾರಿಸುತ್ತಾರೆ.

ದಂಡಿಗೆ/ತಕ್ಕಡಿ
ತೂಕಮಾಡಲು ಕಬ್ಬಿಣದ ಮಾಪಕಗಳು ಬರುವ ಮುನ್ನ ಹಳ್ಳಿಗಳಲ್ಲಿ ಬೆಳೆದ ಬೆಳೆಗಳನ್ನು ಮತ್ತು ಇತರ ವಸ್ತುಗಳನ್ನು ತೂಕ ಮಾಡುವುದಕ್ಕೆ ಬಳಸುತ್ತಿದ್ದ ಸಾಧನ. ಇದರಲ್ಲಿ ದಿಂಡು, ಪಲ್ಟಿ ಎಂಬ ಭಾಗಗಳಿವೆ. ದಿಂಡನ್ನು ಸು. ನಾಲ್ಕರಿಂದ ಐದು ಅಡಿಗಳಷ್ಟು ಉದ್ದದ ಬಲವಾದ ಮರದ ದಂಡವೊಂದರಿಂದ ತಯಾರಿಸುತ್ತಾರೆ. ಎರಡು ತುದಿಗಳಲ್ಲಿ ಕೊರೆದ ರಂಧ್ರಗಳ ಮೂಲಕ ನೂಲು/ಹಗ್ಗದಿಂದ ಜೋತಾಡಿಸಲಾಗುವ ತಟ್ಟೆಯಾಕಾರದ ಪಲ್ಟಿಗಳಿರುತ್ತವೆ. ಇವು ಮಧ್ಯದಲ್ಲಿ ಒಂದೆರಡಿಂಚು ತಗ್ಗಾಗಿ ವೃತ್ತಾಕಾರದ ರಚನೆಗಳು. ಇವನ್ನು ಬಿದಿರಿನ ಸೀಳುಗಳಿಂದ ಹೆಣೆದು ಅದರ ರಂಧ್ರಗಳು ಮುಚ್ಚುಹೋಗುವಂತೆ ಗೇರಣ್ಣೆ, ಸುಟ್ಟಬಟ್ಟೆಯ ಬೂದಿಯನ್ನು ಚೆನ್ನಾಗಿ ಮಿಶ್ರಮಾಡಿಕೊಂಡು ಲೇಪಿಸುತ್ತಾರೆ. ಪಲ್ಟಿಗಳ ವ್ಯಾಸವು ಸುಮಾರು ಹನ್ನೆರಡರಿಂದ ಇಪ್ಪತ್ತು ಇಂಚು ಇರುತ್ತವೆ. ದಂಡಿಗೆಯಲ್ಲಿ ಗಾತ್ರ, ವಿನ್ಯಾಸಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ದಿಕಾಂಬ್ಲಿ ಬೀಜ
ಎತ್ತು ಮತ್ತು ಎಮ್ಮೆಗಳಿಗೆ ದೃಷ್ಟಿಯಾಗದಂತೆ ಕೊರಳಿಗೆ ಕಟ್ಟುವ ಒಂದು ಸಾಧನ. ದಿಕಾಂಬ್ಲಿ ಎನ್ನುವುದು ಲಂಬಾಣಿಗರ ಭಾಷೆ. ಇದು ಸು. ಎರಡು ಇಂಚು ವ್ಯಾಸವಿರುವ ಬೀಜ. ಕಂದು ಬಣ್ಣದ್ದಾಗಿದ್ದು ನಯವಾಗಿ ಚಪ್ಪಟೆಯಾಗಿದೆ. ಸಾಮಾನ್ಯವಾಗಿ ಆಕಳು ಮತ್ತು ಎಮ್ಮೆಗಳು ಗರ್ಭಧರಿಸಿದಾಗ ಪೀಡೆ, ಪಿಶಾಚಿಗಳ ಕೆಟ್ಟ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಜಾನುವಾರುಗಳ ಕೊರಳಿಗೆ ಕಟ್ಟುತ್ತಾರೆ. ಇದರಿಂದ ಪೀಡೆ ಪಿಶಾಚಿಗಳ ಕಾಟ ಬರುವುದಿಲ್ಲ ಎನ್ನುವುದು ಲಂಬಾಣಿಗರ ನಂಬಿಕೆ.


logo