logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಕೊಣಮಿಗೆ
ರೊಟ್ಟಿ ಮಾಡುವುದಕ್ಕೆ, ಹಿಟ್ಟು ಕಲಸಿಕೊಳ್ಳಲು ಮತ್ತು ಆ ಬಳಿಕ ರೊಟ್ಟಿ ಬಡಿಯಲು/ತಟ್ಟಲು ಬಳಸಿಕೊಳ್ಳುತ್ತಾರೆ. ಇದರ ಆಕಾರ ಮತ್ತು ಗಾತ್ರಗಳಲ್ಲಿ ವ್ಯತ್ಯಾಸ ಇರುತ್ತದೆ. ವೃತ್ತಾಕಾರದ ಕೊಣಮಿಗೆಯು ರೊಟ್ಟಿ ತಯಾರಿಸಿಕೊಳ್ಳಲು ಬಳಕೆಯಾದರೆ ಆಯತಾಕಾರದವುಗಳಲ್ಲಿ ಅನ್ನ ಮೊಸರು ಕಲಸಿಕೊಳ್ಳಲು ಬಳಕೆಯಾಗುತ್ತದೆ. ಇವನ್ನು ಕಗ್ಗಲ್ಲು, ಮರ ಮತ್ತು ಲೋಹಗಳಿಂದ ತಯಾರಿಸುತ್ತಾರೆ. ಸಾಗುವಾನಿ, ಮಾವು, ಅತ್ತಿ ಮುಂತಾದ ಮರಗಳು ತಯಾರಿಕೆಗೆ ಬಳಕೆಯಾಗುತ್ತವ. ರೊಟ್ಟಿ ಮಾಡುವ ಯಂತ್ರವು ಬಂದ ಮೇಲೆ ಕೊಣಮಿಗೆ ಬಳಕೆ ಕಡಿಮೆಯಾಗುತ್ತಾ ಬಂದಿದೆ.

ಕೋಡಣಸು/ಕೊಡಂಚು
ಎತ್ತಿನ ಕೋಡುಗಳ ತುದಿಗೆ ಅಲಂಕಾರಕ್ಕಾಗಿ ಬಳಸುವ ಪುಟ್ಟ ಸಾಧನ. ಇವು ಕೊಳವೆಯ ಆಕಾರದಲ್ಲಿದ್ದು ಅದರ ತುದಿಯು ದುಂಡಾಕಾರ/ಪುಟ್ಟ ಕಳಸಾಕಾರದಲ್ಲಿರುತ್ತದೆ. ಕೋಡಣಸುಗಳ ಬುಡದಲ್ಲಿ ಎರಡು ಪುಟ್ಟ ರಂಧ್ರಗಳಿದ್ದು ಅವುಗಳ ಮೂಲಕ ಮೊಳೆ/ತಂತಿಗಳನ್ನು ಕೋಡಿನ ತುದಿಯಲ್ಲಿ ಕೊರೆದ ಪುಟ್ಟರಂಧ್ರದೊಳಗೂ ಬರುವಂತೆ ಹಾಯಿಸಿ ತಂತಿಯ ತುದಿಗಳನ್ನು ಒಳಕ್ಕೆ ಬಾಗಿಸಲಾಗುತ್ತದೆ. ಕೋಡಣಸುಗಳು ಸುಮಾರು ಎರಡರಿಂದ ಐದು ಇಂಚುಗಳಷ್ಟು ಉದ್ದವಿರುತ್ತವೆ. ಇವುಗಳ ಸುತ್ತಲೂ ಅಲಂಕಾರಕ್ಕಾಗಿ ಕಿರು ಪ್ರಮಾಣದ ಕುಸುರಿ ಕೆಲಸ ಮಾಡಿರುವುದೂ ಕಂಡುಬರುತ್ತದೆ. ಕೋಡಣಸುಗಳನ್ನು ಎತ್ತುಗಳಿಗೆ ಸಾಮಾನ್ಯವಾಗಿ ನಿತ್ಯವೂ ತೊಡಿಸುತ್ತಾರೆ. ಕೆಲವೆಡೆ ಕಾರಹುಣ್ಣಿಮೆಯ ಹಬ್ಬದಂದು ಕರಿಹೋರಿಗೆ ಚಿನ್ನ ಬೆಳ್ಳಿಯ ಕೋಡಣಸುಗಳನ್ನು ತೊಡಿಸಿ ಬಂಗಾರದ ಗೆಜ್ಜೆಗಳಿಂದ ಅಲಂಕರಿಸುವ ಸಂಭ್ರಮೋಪೇತ ಆಚರಣೆ ನಡೆಯುತ್ತಿತ್ತು. ಹಬ್ಬ, ಮೆರವಣಿಗೆಗಳಂಥ ಸಂದರ್ಭಗಳಲ್ಲಿ ಎತ್ತುಗಳ ಕೊಂಬುಗಳ ತುದಿಗೆ ಕೋಡಣಸನ್ನು ಹಾಕಿ ಅವುಗಳ ತುದಿಗೆ ಉಣ್ಣೆಯ ಗೊಂಡೆಗಳನ್ನು ಕಟ್ಟಿ ಇನ್ನಷ್ಟು ಅಂದವಾಗಿ ಅಲಂಕಾರ ಮಾಡುತ್ತಾರೆ. ಕೋಡಣಸುಗಳನ್ನು ಅಲಂಕಾರಕ್ಕಾಗಿ ಮಾತ್ರ ಬಳಸದೆ ಎತ್ತುಗಳು ಪರಸ್ಪರ ಇರಿಯುವಾಗ, ಮನುಷ್ಯರಿಗೆ ಹಾಯುವಾಗ, ಹೆಚ್ಚಿನ ಅಪಾಯವನ್ನು ತಪ್ಪಿಸುವುದಕ್ಕಾಗಿಯೂ ಬಳಸಲಾಗುತ್ತದೆ. ಕೋಡಣಸುಗಳನ್ನು ಅಲ್ಯೂಮಿನಿಯಂ, ಕಂಚು/ಹಿತ್ತಾಳೆ, ಬೆಳ್ಳಿ, ಬಂಗಾರಗಳಿಂದ ಕೂಡ ತಯಾರಿಸುತ್ತಾರೆ. ಅಮೂಲ್ಯ ಲೋಹಗಳ ಕೋಡನಸುಗಳನ್ನು ಅಪೂರ್ವ ಸಂದರ್ಭಗಳಲ್ಲಷ್ಟೇ ಬಳಸುತ್ತಾರೆ.

ಕೋಲಾಟದ ಕೋಲುಗಳು
ಕೋಲಾಟದಲ್ಲಿ ಬಳಸುವ ವಸ್ತುಗಳು. ಇವು ಸುಮಾರು ಹದಿನಾಲ್ಕು ಇಂಚು ಉದ್ದ, ಮೂರು ಇಂಚು ಸುತ್ತಳತೆ ಹೊಂದಿವ. ಜನಪದ ಕಲೆಯಾದ ಕೋಲಾಟದಲ್ಲಿ ಒಬ್ಬರು ಮತ್ತೊಬ್ಬರೊಂದಿಗೆ ಕೋಲು ಹಾಕಲು ಬಳಸುವ ಈ ಕೋಲುಗಳ ನಾದವು ಜೋರಾಗಿಯೂ ಹಿತಕರವಾಗಿಯೂ ಇರುತ್ತದೆ. ಇವುಗಳನ್ನು ಅತ್ತಿಮರದಿಂದ ಕಲಾವಿದರೇ ತಯಾರಿಸಿಕೊಳ್ಳುತ್ತಾರೆ. ಕೋಲು ಕತ್ತರಿಸುವಾಗ ಹಾಗೂ ಆಟ ಮುಗಿದಾಗ ವಿಶಿಷ್ಠ ಬಗೆಯ ವಿಧಿ-ನಿಷೇಧ, ಪದ್ಧತಿ ಆಚರಣೆಗಳ ಚೌಕಟ್ಟಿನಲ್ಲಿ ನಡೆಯುವುದು ಗಮನಾರ್ಹ.

ಕ್ವಿಂಟಾಲ್ ಬುಟ್ಟಿ/ಗೂಡೆ
ಜೋಳ, ರಾಗಿ, ಭತ್ತ, ಮುಂತಾದ ದವಸ ಧಾನ್ಯಗಳನ್ನು ತುಂಬಿಡಲು ಇದನ್ನು ಬಳಸುತ್ತಾರೆ. ಸುಮಾರು ಎರಡೂವರೆ ಅಡಿ ಅಗಲವಿದ್ದು ಸುಮಾರು ಒಂದೂವರೆ ಅಡಿ ಎತ್ತರವಿದೆ. ತಳಭಾಗವು ಸಮತಟ್ಟಾಗಿದ್ದು ಒಂದೂವರೆ ಅಡಿ ವ್ಯಾಸವಿದೆ. ಈ ಬುಟ್ಟಿಯನ್ನು ಬಿದಿರನ ಸೀಳುಗಳಿಂದ ಹೆಣೆಯಲಾಗಿದ್ದು ಇದಕ್ಕೆ ಹತ್ತಿ ಬಟ್ಟೆಯನ್ನು ಸುಟ್ಟು ಗೇರು ಎಣ್ಣೆಯಲ್ಲಿ ಮಿಶ್ರಣಮಾಡಿ ಸವರಿರುತ್ತಾರೆ. ಇದು ಬುಟ್ಟಿಗಳಲ್ಲಿಯೇ ಅತ್ಯಂತ ದೊಡ್ಡದು. ಈ ಬುಟ್ಟಿಯಲ್ಲಿ ಸುಮಾರು ಒಂದು ಕ್ವಿಂಟಾಲ್ ಧಾನ್ಯಗಳನ್ನು ಸಂಗ್ರಹಿಸಬಹುದು. ಇದನ್ನು ರೈತರು ಕ್ವಿಂಟಾಲ್ ಬುಟ್ಟಿ ಎಂದೇ ಕರೆಯುತ್ತಾರೆ. ಈ ಬುಟ್ಟಿಯನ್ನು ಕಣದಲ್ಲಿನ ಕಾಳುಗಳನ್ನು ಮನೆಗೆ ತಂದು ಹಾಕುವುದಕ್ಕೂ ಹೊಲದಲ್ಲಿ ಜೋಳ, ಸಜ್ಜೆ, ತೆನೆಗಳನ್ನು ಹೊತ್ತು ಹಾಕುವುದಕ್ಕೂ ಬಳಸುತ್ತಾರೆ. ಭತ್ತವನ್ನು ಅಕ್ಕಿಮಾಡಿಸಲು ಗಿರಣಿಗೆ ಹೊತ್ತುಕೊಂಡು ಹೋಗಲು ಕೂಡ ಬಳಸುತ್ತಾರೆ.

ಗಂಡುಗೊಡಲಿ
ಮಾರಿಹಬ್ಬದ ಸಂದರ್ಭದಲ್ಲಿ ಮಾರಿದೇವತೆಗೆ ಪ್ರಾಣಿಬಲಿ ಕೊಡಲು ಬಳಕೆಯಾಗುವ ಆಯುಧ. ಇದು ಅರ್ಧ ಚಂದ್ರಾಕೃತಿಯಲ್ಲಿದ್ದು ಅದರ ಎರಡು ತುದಿಯಲ್ಲಿ ಚಿಕ್ಕ ಗುಂಡುಗಳ ರೀತಿಯಲ್ಲಿ ರಚನೆ ಮಾಡಿರುತ್ತಾರೆ. ಅರ್ಧ ಚಂದ್ರಾಕೃತಿಯುಳ್ಳ ಕೊಡಲಿಯ ಮಧ್ಯಭಾಗವು ಸುಮಾರು ಎರಡೂವರೆಯಿಂದ ಮೂರು ಇಂಚು ಅಗಲವಿರುತ್ತದೆ, ಇಲ್ಲಿ ಹಿಡಿ ಹಾಕುವ ವ್ಯವಸ್ಥೆ ಇರುತ್ತದೆ. ಎರಡೂ ತುದಿಗಳ ಅಗಲ ಕಡಿಮೆ. ಸು. ಮೂರೂವರೆಯಿಂದ ನಾಲ್ಕು ಅಡಿ ಉದ್ದದ ಬಿದಿರಿನ ಅಥವಾ ಮರದ ಹಿಡಿ ಹಾಕಿರುತ್ತಾರೆ. ಗ್ರಾಮದೇವತೆ ಹಬ್ಬದ ಸಂದರ್ಭದಲ್ಲಿ ಗ್ರಾಮದೇವಿಗೆ ಬಂದ ಹರಕೆ ಕುರಿಮರಿ, ಕುರಿ, ಮೇಕೆ, ಕೋಣ ಮುಂತಾದುವನ್ನು ಕಡಿಯಲು ಇದನ್ನು ಬಳಸುತ್ತಾರೆ. ಅಲ್ಲದೆ ಪ್ರತಿವರ್ಷ ಮಾರಿಹಬ್ಬದಲ್ಲಿ ಮಾರೆಮ್ಮ ದೇವಿಗೆ ಪ್ರಾಣಿಗಳನ್ನು ಬಲಿನೀಡುವಾಗ ಅವನ್ನು ಇದರಿಂದ ಕತ್ತರಿಸುತ್ತಾರೆ (ಈಗ ಪ್ರಾಣಿಬಲಿ ನಿಷಿದ್ಧವಾಗಿದೆ). ಮಹಾನವಮಿ ಹಬ್ಬದ ಸಂದರ್ಭದಲ್ಲಿ ಆಯುಧ ಪೂಜೆ ಮಾಡುವಾಗಲೂ ಇದು ಒಳಪಡುತ್ತದೆ. ಹಿಂದೆ ಕಳ್ಳಕಾಕರಿಂದ ಊರನ್ನು ರಕ್ಷಿಸಿದವರಿಗೆ ಈ ಆಯುಧವನ್ನು ಬಹುಮಾನವಾಗಿ ನೀಡುತ್ತಿದ್ದರು.

ಗಣ್ಣೊ
ಲಂಬಾಣಿ ಮಹಿಳೆಯರು ಮದುವೆ ಸಂದರ್ಭದಲ್ಲಿ ಬಳಸುವ ವಸ್ತ್ರ. ಇದು ಚೌಕಾಕಾರದಿಂದ ಕೂಡಿದ್ದು ಎಂಟು ಇಂಚು ಉದ್ದ- ಅಗಲವಿದೆ. ಲಮಾಣಿ ಮಹಿಳೆ ಲಗ್ನವಾದ ನಂತರ ಗಂಡನ ಮನೆಗೆ ಬಂದಾಗ ನೀರು/ಗಂಗೆ ತರುವ ಆಚರಣೆಯಲ್ಲಿ ಕೊಡ ಹೊತ್ತು ತರುವಾಗ ತಲೆಯ ಮೇಲಿನ ಸಿಂಬೆಗೆ ಅಲಂಕಾರಯುತವಾಗಿ ನೇತಾಡಿಸುವುದಕ್ಕೆ ಬಳಸುವ ವಸ್ತ್ರ. ಇದನ್ನು ನಾನಾ ಬಣ್ಣದ ದಾರಗಳನ್ನು ಬಳಸಿ ಕಸೂತಿಹಾಕಿ ಸಮುದಾಯದ ಮಹಿಳೆಯರೇ ತಯಾರಿಸುತ್ತಾರೆ.

ಗಂಧ ತೇಯುವ ಕಲ್ಲು/ಸಾಣೆಕಲ್ಲು
ಶ್ರೀಗಂಧ, ಚಂದನ, ಔಷಧದ ಬೇರು-ನಾರು, ಬಜೆ, ಗೋರಂಧ ಮುಂತಾದವುಗಳನ್ನು ತೇಯಲು ಬಳಸುತ್ತಾರೆ. ಚಿಕ್ಕ ಮಕ್ಕಳಿಗೆ ಗದ್ದಕಟ್ಟು(ಕೆನ್ನೆಬಾವು/ಕೆಪ್ಪಟ್ರಾಯ) ಆದಾಗ ನಾಮದಂಡೆಯನ್ನು ತೇಯಲು ಬಳಸುತ್ತಾರೆ. ಇದನ್ನು ವಿಶಿಷ್ಟವಾದ ಬಳಪದ ಕಲ್ಲಿನಿಂದ ತಯಾರಿಸಿದೆ. ಇದರ ಮೇಲೆ ತೇಯ್ದ ಔಷಧವನ್ನು ಕುಡಿಸುವುದರಿಂದ ಮಕ್ಕಳು ಬೇಗ ಆರೋಗ್ಯವಂತರಾಗುತ್ತಾರೆ ಎಂಬ ನಂಬಿಕೆ ಜನಪದರದು. ಈ ವಸ್ತುವು ಸುಮಾರು ಒಂದು ಅಡಿ ವ್ಯಾಸವಿದ್ದು ವೃತ್ತಾಕಾರದಲ್ಲಿರುತ್ತದೆ. ಇದರ ಮಧ್ಯಭಾಗವು ಸ್ವಲ್ಪ ತಗ್ಗಾಗಿರುತ್ತದೆ. ನೆಲದಲ್ಲಿಟ್ಟರೆ ಅಲುಗಾಡದಂತೆ ಅದರ ತಳವು ವಿನ್ಯಾಸಗೊಂಡಿದೆ. ಇವುಗಳ ಗಾತ್ರದಲ್ಲಿ ವ್ಯತ್ಯಾಸವಿರುತ್ತವ. ಕಲ್ಲಿನಲ್ಲಿ ಗಂಧತೇಯುವ ಘಟ್ಟಿವಳ್ತಿಯರ ಕುರಿತಾಗಿ ಹಳೆಯ ಕಾವ್ಯಗಳು ವಿವರಗಳನ್ನು ಕೊಡುತ್ತವೆ.

ಗಾಜಿನ ಸೀಸೆ
ಮನೆಗಳಲ್ಲಿ ಅಲಂಕಾರಕ್ಕಾಗಿ ಇಡಲು ಬಳಸುವ ಒಂದು ವಿಶೇಷ ಸಾಧನ. ಈ ಸೀಸೆಯು ಸುಮಾರು ಒಂದು ಅಡಿ ಎತ್ತರವಿದೆ. ಸುಮಾರು ಮೂರು ಇಂಚು ಅಗಲವಿದೆ. ಇದರ ಕಂಠವು ಸುಮಾರು ಎರಡು ಇಂಚು ಎತ್ತರವಿದ್ದು ಸುಮಾರು ಒಂದು ಇಂಚು ವ್ಯಾಸವಿದೆ. ಇದರ ಮೇಲ್ಭಾಗದಲ್ಲಿ ಗೋಡೆಗೆ ನೇತುಹಾಕಲು ಒಂದು ಕಬ್ಬಿಣದ ಕೊಂಡಿ ಇದೆ. ವಿಶೇಷವೆಂದರೆ ಈ ಸೀಸೆಯ ಒಳಗಡೆ ಮುತ್ತು ಮಣಿಗಳು, ಉಲ್ಲನ್ ದಾರ ಮತ್ತು ಪ್ಲಾಸ್ಟಿಕ್‌ನಿಂದ ಹೆಣೆದ ನಾಲ್ಕು ಕಂಬಗಳಿದ್ದು ಮಂಚದ ಆಕೃತಿಯಲ್ಲಿದೆ. ಮಂಚದ ಮೇಲೆ ತಾಯಿ ಮತ್ತು ಮಗು ಮಲಗಿರುವ ಗೊಂಬೆಗಳಿವೆ. ಇಳಿಬಿಟ್ಟಿರುವ ಬಲ್ಬಿನಂತೆ ಇರುವ ಒಂದು ದೊಡ್ಡ ಮುತ್ತನ್ನು ನೇತುಹಾಕಲಾಗಿದೆ. ಒಟ್ಟಾರೆ ಅಲಂಕಾರದ ಸೀಸೆಯು ನೋಡಲು ತುಂಬಾ ಚೆನ್ನಾಗಿದೆ ಮತ್ತು ವಿಸ್ಮಯಕಾರಿಯಾಗಿದೆ. ಇದನ್ನು ಮನೆಯ ಗೋಡೆ ಅಥವಾ ಬೆಂಚಿನ ಮೇಲೆ ಇಡುವ ಕ್ರಮವು ರೂಢಿಯಲ್ಲಿದೆ. ಆಲಂಕಾರಿಕ ಗಾಜಿನ ಸೀಸೆಗಳಲ್ಲಿ ವಿವಿಧ ಬಗೆಗಳಿರುತ್ತವೆ. ಇವುಗಳನ್ನು ಕುಶಲತೆಯಿಂದ ಹೆಣೆದಿದ್ದಾರೆ.

ಗಾರೆ ಉಜ್ಜುವ ಮಣೆ/ಕತ್ತಿ/ತ್ಯಾಪೆ/ಕರ್ಣಿ
ಕಟ್ಟಡ ನಿರ್ಮಾಣ ಮಾಡುವಾಗ ಸಿಮೆಂಟನ್ನು ಗೋಡೆಗೆ ಲೇಪಿಸಲು ಹಾಗೂ ನಯಗೊಳಿಸಲು ಬಳಸುವ ಸಲಕರಣೆ. ಸಾಮಾನ್ಯವಾಗಿ ಪುರಾತನ ಕಾಲದಿಂದಲೂ ಮಣ್ಣನ್ನು ನಯಗೊಳಿಸಲು ಈ ಉಪಕರಣ ವಿವಿಧ ರೂಪಗಳಲ್ಲಿ ಬಳಕೆಯಾಗುತ್ತಿತ್ತು. ಅರಳಿ ಎಲೆ ಆಕಾರದಲ್ಲಿದ್ದು ಆರು ಇಂಚು ಉದ್ದ, ತಳದಲ್ಲಿ ನಾಲ್ಕು ಇಂಚು ಅಗಲವಿದೆ. ತ್ಯಾಪಿ ನಾನಾ ಗಾತ್ರಗಳಲ್ಲಿರುತ್ತವೆ. ಮರ ಹಾಗೂ ಕಬ್ಬಿಣದಿಂದ ಮಾಡಿದ ತ್ಯಾಪಿಗಳಿವೆ. ಕಬ್ಬಿಣದಿಂದ ತಯಾರಿಸಿದ ತ್ಯಾಪಿಯ ಹಿಡಿಕೆಯನ್ನು ಮರದಿಂದ ಮಾಡಲಾಗಿದೆ.

ಗಾರೆ ತಿಕ್ಕುವ ಕಲ್ಲು/ಬೆಣ್ಣಕಲ್ಲು
ಮನೆಗಳಲ್ಲಿ ನೆಲವನ್ನು ಸಮತಟ್ಟಾಗಿಯೂ ಹೊಳೆಯುವಂತೆಯೂ ತಿಕ್ಕಲು ಬಳಸುವ ಕಲ್ಲು. ಈ ಕಲ್ಲನ್ನು ಸಮುದ್ರ, ನದಿ, ಹೊಳೆಗಳ ದಡದಲ್ಲಿ ಆಯ್ದು ತರುತ್ತಾರೆ. ಇದು ಬೆಣ್ಣೆಯಂತೆ ನಯವಾಗಿರುವುದರಿಂದ ಇದಕ್ಕೆ ಬೆಣ್ಣೆಕಲ್ಲು ಎಂತಲೂ ಕರೆಯುತ್ತಾರೆ. ಮನೆಗಳಲ್ಲಿ ಗೊಡೆ ಅಥವಾ ನೆಲ ಅಲ್ಲಲ್ಲಿ ಹೊಡೆದುಹೋದಾಗ ಆ ಜಾಗದಲ್ಲಿ ಅದಕ್ಕೆ ಗಾರೆ ಕಲಸಿ ಮೆತ್ತಿದ ನಂತರ ಅದರ ಮೇಲೆ ಸ್ವಲ್ಪ ಸಿಮೆಂಟ್ ಹಾಕಿ ಗಾರೆ ತಿಕ್ಕುವ ಕಲ್ಲಿನಿಂದ ಚೆನ್ನಾಗಿ ತಿಕ್ಕಿ ನಯಗೊಳಿಸುತ್ತಾರೆ. ಸಿಮೆಂಟು ಬಳಕೆಗೆ ಬರುವ ಮೊದಲು ಸುಣ್ಣದ ಗಾರೆಯನ್ನು ಗೋಡೆ/ನೆಲಕ್ಕೆ ಹಾಕಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಹೆಚ್ಚು ಬಳಕೆಯಲ್ಲಿತ್ತು. ಮರಳು ಸುಣ್ಣ ಮಿಶ್ರಣ ಮಾಡಿ ಈ ಗಾರೆ ತಿಕ್ಕುವ ಕಲ್ಲಿನಿಂದ ಚೆನ್ನಾಗಿ ತಿಕ್ಕಿ ನಯಗೊಳಿಸುತ್ತಿದ್ದರು.


logo