logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಕಾಗಡಿ/ಕಾಗ್ಡಿ
ಚಿಕ್ಕಮಕ್ಕಳನ್ನು (ಸುಮಾರು ಒಂದು ವರ್ಷದಿಂದ ಮೂರು ವರ್ಷ ಪ್ರಾಯ) ಕುಳಿತುಕೊಳ್ಳಿಸಿ ತೂಗಲು/ಆಡಿಸಲು ಬಳಸುವ ಸಾಧನ. ಸುಮಾರು ಒಂದೂವರೆ ಅಡಿ ಎತ್ತರದ ನಾಲ್ಕು ಚೌಕಟ್ಟಿನ ಕಾಲುಗಳಿಗೆ, ತಳಭಾಗ ಮತ್ತು ನಾಲ್ಕು ಬದಿಗಳೂ ಮುಚ್ಚುವಂತೆ ಕೆತ್ತನೆ/ಅಲಂಕಾರ ಮಾಡಿದ ಮರದ ಹಲಗೆಗಳಿಂದ ಕೂಡಿರುತ್ತದೆ. ಈ ಆವರಣ ಹಲಿಗೆಗಳಲ್ಲಿ ಒಂದು ಬದಿಯದು ಮಗುವಿನ ಎರಡು ಕಾಲುಗಳನ್ನು ಹೊರಗೆ ಹಾಕಿ ಜೋತಾಡಿಸಲು ಅನುಕೂಲವಾಗುವಂತೆ ರಚನೆಯಾಗಿದೆ. ಕಾಗಡಿಯ ನಾಲ್ಕು ಚೌಕಟ್ಟಿನ ಕಾಲುಗಳಿಗೆ ಹಗ್ಗ ಹಾಕಿ, ಮೇಲೆ ಮರದ ಜಂತೆಗಳಿಗೆ ಕಟ್ಟಿ, ಕಾಗಡಿಯಲ್ಲಿ ಮಗುವನ್ನು ಕುಳ್ಳಿರಿಸಿ ತೂಗುತ್ತಾರೆ. ಅಗತ್ಯವಿದ್ದಲ್ಲಿ ಒಂದು ಉದ್ದದ ಹಗ್ಗವನ್ನು ಅದಕ್ಕೆ ಕಟ್ಟಿ ಅದನ್ನು ಎಳೆಯುತ್ತಾ ಇದ್ದರೆ ಕಾಗ್ಡಿಯೂ ತೂಗುತ್ತದೆ. ಇನ್ನೂ ಚಿಕ್ಕಮಕ್ಕಳನ್ನು ಕುಳ್ಳಿರಿಸಿ ತೂಗಲು ಇನ್ನೂ ಚಿಕ್ಕ ಕಾಗ್ಡಿಗಳಿವೆ. ತುಂಬ ಸರಳವಾಗಿಯೂ(ಕೇವಲ ನಾಲ್ಕಾರು ಹಲಗೆ ತುಂಡು, ನಾಲ್ಕಾರು ಕೋಲುಗಳನ್ನು ಜೋಡಿಸಿ)ಕಾಗ್ಡಿಯನ್ನು ತಯಾರಿಸುತ್ತಾರೆ. ಅವಕ್ಕೆ ಹಗ್ಗಹಾಕಿ ಜೋತಾಡಿಸಿದರೆ ಅದು ಉಯ್ಯಾಲೆಯಂತೆ ಹೆಚ್ಚು ಹೊತ್ತು ಹಿಂದೆ ಮುಂದೆ ಚಲಿಸುತ್ತಿರುತ್ತದೆ. ಇದರಿಂದ ತಾಯಂದಿರು ಇತರ ಕೆಲಸಗಳನ್ನು ಮಾಡುತ್ತಲೇ ಹಾಡುಗಳನ್ನು ಹಾಡುತ್ತ ಮಗುವನ್ನು ನೋಡಿಕೊಳ್ಳಬಹುದು. ಕಾಗ್ಡಿಯು ಪೂರ್ತಿಯಾಗಿ ಮರಮಟ್ಟುಗಳಿಂದಲೇ ತಯಾರಾಗುತ್ತದೆ. ಕಾಗ್ಡಿಯ ಬಳಕೆ ಉತ್ತರ ಕರ್ನಾಟಕದಲ್ಲಿಯೇ ಹೆಚ್ಚು.

ಕಾಗದದ ಬುಟ್ಟಿ/ರದ್ದಿಬುಟ್ಟಿ
ಅಡುಗೆ ಮನೆಯಲ್ಲಿ ಸಂಬಾರ ಪದಾರ್ಥಗಳು, ಸಾಂಬಾರ್ ಪುಡಿ, ಕಾಳುಗಳು, ಹಿಟ್ಟು, ಇತ್ಯಾದಿಗಳನ್ನು ಇಟ್ಟುಕೊಳ್ಳಲು ಬಳಸುವ ಸಾಧನ. ಬಿದಿರ ಬುಟ್ಟಿ ಮಾಡುವ ಎಲ್ಲ ಕೆಲಸಗಳನ್ನು ಕಾಗದದ ಬುಟ್ಟಿಯು ಕೂಡ ಮಾಡುತ್ತದೆ. ಆದರೆ ಬಿದಿರ ಬುಟ್ಟಿಯಷ್ಟು ಕಾಗದದ ಬುಟ್ಟಿಯು ಗಟ್ಟಿಮುಟ್ಟಾಗಿರುವುದಿಲ್ಲ. ರದ್ದಿಕಾಗದವನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಮಾಡಿ ಮೆಂತೆ ಕಾಳುಗಳಜೊತೆ ನೀರಿನಲ್ಲಿ ನೆನೆಹಾಕಲಾಗುತ್ತದೆ. ಇವು ಚೆನ್ನಾಗಿ ನೆನೆದ ಬಳಿಕ ಕಲ್ಲಿನ ಒರಳಲ್ಲಿ ಇದನ್ನು ಹಾಕಿ ಅರಿಸಿಣ ಪುಡಿಯನ್ನು ಮಿಶ್ರಮಾಡಿ ಚೆನ್ನಾಗಿ ರುಬ್ಬುತ್ತಾರೆ. ಮಡಕೆಯೊಂದನ್ನು ಕವುಚಿ ಅದರ ಮೇಲೆ ಹತ್ತಿಯ ಬಟ್ಟೆಯನ್ನು ನೀರಲ್ಲಿ ಅದ್ದಿ ಹಾಸಿ, ರುಬ್ಬಿದ ಹಿಟ್ಟನ್ನು ನಿಧಾನವಾಗಿ ಮಡಕೆಯ ತಳದ ಹೊರಮೈ ಆಕಾರದಲ್ಲಿ ಹಚ್ಚುತ್ತಾರೆ. ಇದು ಒಣಗಿದ ಬಳಿಕ ಬುಟ್ಟಿಯ ಆಕಾರವು ಪ್ರಾಪ್ತವಾಗುತ್ತದೆ. ಬಳಿಕ ಅಲ್ಲಲ್ಲಿ ತೇಪೆ ಏನಾದರೂ ಬೇಕಾದಲ್ಲಿ ಅದೇ ಹಿಟ್ಟಿನಿಂದ ತೇಪೆ ಹಾಕಿ ಒಣಗಿಸುತ್ತಾರೆ. ಆಗ ಬುಟ್ಟಿ ಸಿದ್ಧವಾಗುತ್ತದೆ. ಮೆಂತೆಯು ಅಂಟಿನ ಗುಣವನ್ನು, ಅರಿಶಿಣವು ಕ್ರಿಮಿನಾಶಕ ಗುಣವನ್ನು ಹೊಂದಿರುವುದನ್ನು ತಿಳಿದ ಜನಪದರು ಸರಳ ತಂತ್ರಜ್ಞಾನವನ್ನು ಬಳಸಿ ಇಂಥ ಉಪಯೋಗಕಾರಿ ಸಾಧನಗಳನ್ನು ತಯಾರಿಸಿಕೊಳ್ಳುತ್ತಾರೆ ಎನ್ನುವುದು ವಿಶೇಷ.

ಕಾಡುಕೋಣದ ಕೋಡು
ಮನೆಯ ಅಲಂಕಾರಕ್ಕಾಗಿ ಬಳಸುವ ಕಾಡುಕೋಣದ ಕೊಂಬುಗಳು. ಮರ ಅಥವಾ ಮಣ್ಣಿನಿಂದ ತಯಾರಿಸಿಕೊಂಡ ಕಾಡುಕೋಣದ ಮುಖಕ್ಕೆ ಈ ಕಾಡುಕೋಣದ ಕೊಂಬುಗಳನ್ನು ಜೋಡಿಸಿಕೊಂಡು ಅಲಂಕಾರಕ್ಕಾಗಿ ಬಳಸುತ್ತಾರೆ. ಮನೆಯ ಒಳಗಿನ ಪಡಸಾಲೆ, ಅಂಗಳದ ಅಗಲವಾದ ಗೋಡೆಗೆ ಇದನ್ನು ಹಾಕುವುದು ಹೆಚ್ಚು. ಕಾಡುಪ್ರಾಣಿಗಳನ್ನು ಬೇಟೆಯಾಡಿದ ವೀರತನದ ಸಾಂಕೇತಿಕದ ಪ್ರತೀಕವಾಗಿ ಇದನ್ನು ಬಳಸುತ್ತಾರೆ. ಇತ್ತೀಚೆಗೆ ಕಾಡುಪ್ರಾಣಿಗಳ ಬೇಟೆ ನಿಷೇಧವಾಗಿರುವ ಕಾರಣ ಇಂತಹ ಕೊಂಬುಗಳ ಬಳಕೆ ಅಪೂರ್ವವಾಗಿದೆ.

ಕಾಲು ದೀಪ/ದೀಪದ ಕಾಲು
ಸೀಮೆಎಣ್ಣೆ ಬುಡ್ಡಿ, ಹಣತೆ ಮುಂತಾದ ದೀಪಗಳನ್ನು ಎತ್ತರದಲ್ಲಿ ಇರಿಸಲು ಬಳಸುವ ಮರದ ಸಾಧನ. ಇದು ಸುಮಾರು ಒಂದರಿಂದ ಐದು ಅಡಿ ಎತ್ತರವಿರುತ್ತದೆ. ಇದರ ಕೆಳಭಾಗವನ್ನು ಕೆಳಪೀಠವೆಂದೂ ಅತೀ ಮೇಲಿನ ಭಾಗವನ್ನು ಮೇಲು ಪೀಠವೆಂದೂ ಕರೆಯುತ್ತಾರೆ. ದೀಪಗಳನ್ನು ಅಗತ್ಯವಾದ ಎತ್ತರದಲ್ಲಿ ಇರಿಸಿಕೊಳ್ಳಲು ಅನುಕೂಲವಾಗುವಂತೆ ಇದರ ಪಟ್ಟಿಗೆ(ಗರಗಸಾಕಾರದ ಮರದ ತುಂಡು) ಕೊಕ್ಕೆಗಳುಳ್ಳ ಅಡ್ಡಪಟ್ಟಿಯನ್ನು ಜೋಡಿಸಿ ಕೊಳ್ಳುವ ಅದರಲ್ಲಿ ದೀಪವಿರಿಸುವ ತಂತ್ರಜ್ಞಾನವೂ ಜನಪದರಲ್ಲಿ ರೂಢಿಯಲ್ಲಿದೆ. ಕೆಳಪೀಠದ ಮೇಲಿನ ಭಾಗವನ್ನು ಪಟ್ಟಿಯೆಂದೂ ಅತೀ ಮೇಲಿನ ಭಾಗವನ್ನು ಮೇಲು ಪೀಠವೆಂದೂ ಕರೆಯುತ್ತಾರೆ.

ಕುಂಕುಮದ ಭರಣಿ/ಬಟ್ಲು
ಅರಸಿನ ಮತ್ತು ಕುಂಕುಮಗಳನ್ನು ಹಾಕಿ ಇಡಲು ಬಳಸುವ ಸಾಧನ. ವೃತ್ತಾಕಾರದಲ್ಲಿದ್ದು ಆಲಂಕಾರಿಕವಾಗಿ ಕೆತ್ತನೆ ಮಾಡಿದ್ದಾರೆ. ಸಣ್ಣ ಹಿಡಿಕೆಯಂಥ ರಚನೆ ಇರುವ ಮುಚ್ಚಳ ಇದೆ. ಮುಚ್ಚಳದಲ್ಲೂ ಆಲಂಕಾರಿಕ ಕೆತ್ತನೆ ಇದೆ. ಇವುಗಳ ಗಾತ್ರದಲ್ಲಿ ವ್ಯತ್ಯಾಸಗಳಿರುತ್ತವೆ. ದೇವರ ಪೂಜೆಯ ಸಂದರ್ಭಗಳಲ್ಲಿ, ದಿನಬಳಕೆಯಲ್ಲಿ, ಮಹಿಳಾ ಅತಿಥಿಗಳು ಬಂದಾಗ ಇದು ಉಪಯೋಗವಾಗುತ್ತದೆ. ವೃತ್ತ, ಆಯತ, ಕೂರ್ಮಾಕಾರಗಳಲ್ಲಿ ಕುಂಕುಮ ಬಟ್ಲುಗಳು ವಿನ್ಯಾಸಗೊಂಡಿರುತ್ತವೆ. ಕುಂಕುಮದ ಕರಡಿಗೆಗಳ ಒಳಗೆಯೇ ಕುಂಕುಮ, ಅರಸಿಣ, ಕೇಸರಿ, ಗುಲಾಬಿ ಬಣ್ಣಗಳ ಹುಡಿಗಳನ್ನು ಇರಿಸಿಕೊಳ್ಳಲು ಯೋಗ್ಯವಾಗುವಂತೆ ಅಳವಡಿಸಿ ಅವಕ್ಕೆ ಬೇರೆ ಬೇರೆಯೇ ಮುಚ್ಚಳುಗಳನ್ನು ಕೌಶಲದಿಂದ ಅಳವಡಿಸಲಾಗುತ್ತದೆ. ಸಾಗುವಾನಿ, ಶ್ರೀಗಂಧ, ಹಲಸು ಮುಂತಾದ ಮರಗಳಿಂದ ಇಂಥ ಬಟ್ಟಲುಗಳನ್ನು ತಯಾರಿಸುತ್ತಾರೆ.

ಕುಟಾಣಿ/ಕುಟ್ನಿ
ಎಲೆ ಅಡಿಕೆ ಕುಟ್ಟಿಕೊಳ್ಳಲು ಬಳಸುವ ಲೋಹದ ಸಾಧನ. ಇದು ಒರಳಿನ ಆಕಾರವಿದ್ದು, ಎತ್ತರ ಸುಮಾರು ನಾಲ್ಕು ಇಂಚು. ಒರಳಿನ ಆಳ ಸುಮಾರು ಮೂರುವರೆ ಇಂಚು. ಇದಕ್ಕೆ ಪೂರಕವಾಗಿ ಒಂದು ಅಡಿ ಉದ್ದದ ಕಬ್ಬಿಣದ ಕೋಲು ಇದೆ. ಇದರ ಬುಡ ದಪ್ಪವಿದ್ದು ತುದಿಗೆ ಹೋದಂತೆಲ್ಲಾ ಗಾತ್ರದಲ್ಲಿ ಚಿಕ್ಕದಾಗುತ್ತದೆ. ತುದಿ ದುಂಡಗಿರುತ್ತದೆ. ಅಡಿಕೆ ಎಲೆಅಡಕೆ ತಿನ್ನುವ ಅಭ್ಯಾಸ ಉಳ್ಳವರು, ಅದರಲ್ಲೂ ಬಾಯಲ್ಲಿ ಹಲ್ಲಿಲ್ಲದವರು ಇದನ್ನು ಎಲೆಅಡಕೆ ಕುಟ್ಟಿಕೊಳ್ಳಲು ಬಳಸುತ್ತಾರೆ. ಇನ್ನಿತರ ಸಣ್ಣ ಪ್ರಮಾಣದ ಘನವಸ್ತುಗಳನ್ನು ಪುಡಿಮಾಡಲು ಕೂಡ ಇದು ಉಪಯೋಗವಾಗುತ್ತದೆ. ಇದರ ಸ್ವರೂಪದಲ್ಲಿ ವ್ಯತ್ಯಾಸ ಕಂಡು ಬರುತ್ತವೆ.

ಕುಡುಗೋಲು/ಕತ್ತಿ
ಪೈರುಗಳ ಕಟಾವಿಗೆ, ಸೊಪ್ಪು, ಹುಲ್ಲು, ಕಳೆ ಇತ್ಯಾದಿಗಳನ್ನು ಕತ್ತರಿಸಲು ಬಳಸುವ ಸಾಧನ. ಇದಕ್ಕೆ ಮರದ ಹಿಡಿ, ಕಬ್ಬಿಣದ ಅಲಗು. ಅಲಗು ಬಾಗಿರುವುದರಿಂದ ಇದಕ್ಕೆ ಕುಡುಗೋಲು ಎಂಬ ಹೆಸರು. ಇದನ್ನು ಕಮ್ಮಾರರು ಪಾರಂಪರಿಕವಾಗಿ ತಯಾರಿಸುತ್ತಾರೆ. ಇದು ಬಾಗಿರುವುದರಿಂದ ಪೈರು ಮತ್ತು ಹುಲ್ಲಿನಂತಹ ಬೆಳೆಗಳನ್ನು ಕತ್ತರಿಸಲು ಅನುಕೂಲಕರವಾಗಿದೆ. ತರಕಾರಿ ಮತ್ತು ಮಾಂಸ ಹೆಚ್ಚುವುದಕ್ಕೂ ಬಳಕೆಯಾಗುತ್ತದೆ. ಇವುಗಳಲ್ಲಿ ನಾನಾ ಪ್ರಕಾರ/ಗಾತ್ರಗಳಿರುತ್ತವೆ.

ಕುಂದಣಿಗೆ
ಒರಳಿನಲ್ಲಿ ಕಾಳುಗಳನ್ನು, ಕಾರವನ್ನು ಕುಟ್ಟುವಾಗ ಕಾಳುಗಳು, ಕಾರ ಆಚೆ ಈಚೆ ಸಿಡಿದು ಹೋಗದಂತೆ ತಡೆಯಲು ಬಳಸುವ ಸಾಧನ. ಇದು ಚಕ್ರಾಕಾರದಲ್ಲಿದ್ದು ಸುಮಾರು ಒಂದು ಅಡಿ ಎತ್ತರ, ಕಂಠ ಸುಮಾರು ಎರಡು ಇಂಚು ದಪ್ಪ ಇರುತ್ತದೆ. ಸುಮಾರು ಇಪ್ಪತ್ತು ಇಂಚು ಸುತ್ತಳತೆ ಇದೆ. ಇದನ್ನು ಒರಳು ಕಲ್ಲಿನ ಮೇಲೆ ಇಟ್ಟು ಧಾನ್ಯಗಳನ್ನು ಕುಟ್ಟುತ್ತಾರೆ. ಇದರ ತಳಭಾಗ ಒರಳುಕಲ್ಲಿನ ಬಾಯ ಅಳತೆಗೆ ಹೊಂದಿಕೆಯಾಗುವಂತೆ ಇದ್ದು ಮೇಲ್ಭಾಗ ಸ್ವಲ್ಪ ಹೆಚ್ಚು ಅಗಲವಿರುತ್ತದೆ. ಕೆಲವೊಮ್ಮೆ ಇದರ ತಳಭಾಗದ ಸುತ್ತಲೂ ಸುಂದರ ಕೆತ್ತನೆ ಕೆಲಸ ಮಾಡಿರುತ್ತಾರೆ.

ಕುರ್ಚಿಗೆ
ಕಳೆ ಕೀಳಲು ವ್ಯಾಪಕವಾಗಿ ಬಳಕೆಯಾಗುವ ಸಾಧನ. ಇದಕ್ಕೆ ಮರದ ಹಿಡಿ, ಕಬ್ಬಿಣದ ಅಲಗು. ಅಲಗಿನ ಮುಂಭಾಗವು ತೆಳುವಾಗಿರುವುದರಿಂದ ಮಣ್ಣಿನ ಮೇಲ್ಪದರದಲ್ಲಿ ಹಬ್ಬಿರುವ ಕಳೆ ಗಿಡಗಳ ಬೇರುಗಳನ್ನು ಕತ್ತರಿಸಲು ಯೋಗ್ಯವಾಗಿರುತ್ತದೆ. ಕುರ್ಚಿಗೆಗಳ ವಿನ್ಯಾಸಗಳಲ್ಲಿ ವ್ಯತ್ಯಾಸಗಳಿವೆ. ಬೆಳ್ಳುಳ್ಳಿಯ ಬೆಳೆಯಲ್ಲಿನ ಕಳೆಗಳನ್ನು ತೆಗೆಯಲು ಬಳಸುವ ಕುರ್ಚಿಗೆ ಚಿಕ್ಕದು. ಬಾಗಿದ ಅಲಗು ಒಟ್ಟು ಒಂದು ಅಡಿ ಉದ್ದವಿದೆ. ಬಾಗಿದ ಮುಂಭಾಗವು ಸಾಮಾನ್ಯವಾಗಿ ನಾಲ್ಕು ಇಂಚು ಉದ್ದವಿರುತ್ತದೆ. ಉಳುಮೆಯಾದ ನೆಲವನ್ನು ಸಮತಟ್ಟು ಮಾಡಲು ಮತ್ತು ಸಡಿಲು/ನುಸುಲುಗೊಳಿಸಲು ಬಳಸುವ ಕುಂಟೆಯಲ್ಲಿ ಸಿಕ್ಕಿಕೊಳ್ಳುವ ಬೇರು ನಾರುಗಳ ತೊಂದರೆಯನ್ನು ನಿವಾರಿಸಲು ಕೂಡ ಕುರ್ಚಿಗೆ ಬಳಕೆಯಾಗುತ್ತದೆ. ಕುರ್ಚಿಗೆಯನ್ನು ಹಳೆಯ/ಸವೆದ ಕುಡುಗೋಲುಗಳಿಂದಲೂ ತಯಾರಿಸಿಕೊಳ್ಳಬಹುದು.

ಕುಲಾವಿ/ಕುಲಾಯಿ
ಬಿಸಿಲು, ಶೀತಬಾಧೆಯನ್ನು ತಡೆಯುವುದು ಇದರ ಮುಸಣ್ಣಮಕ್ಕಳಿಗೆ ತಲೆಗೆ ಕಟ್ಟಲು ಉಪಯೋಗವಾಗುವ ಬಟ್ಟೆಯ ಟೋಪಿ. ಚಿಕ್ಕಮಕ್ಕಳಿಗೆ ಇದನ್ನು ಕಟ್ಟುವುದರಿಂದ ಧೂಳು, ಖ್ಯ ಉದ್ದೇಶ. ಇದು ಪುಟ್ಟಮಕ್ಕಳಿಗೆ ಅಲಂಕಾರ ಸಾಧನವೂ ಹೌದು. ತಲೆಯ ಮೇಲ್ಭಾಗ ಮತ್ತು ಹಿಂಭಾಗವು ಆವೃತವಾಗುವಷ್ಟು ಗಾತ್ರದಲ್ಲಿ ಇದನ್ನು ರಚಿಸಿಕೊಂಡು ಕಿವಿಯ ಇಕ್ಕೆಲಗಳಿಂದಲೂ ಕೆಳಗಿಳಿಸಿ ಗಲ್ಲದ ಕೆಳಭಾಗದಲ್ಲಿ ಇದನ್ನು ಎರಡು ಕಸೆಗಳಿಂದ ಕಟ್ಟುತ್ತಾರೆ. ಇದು ವರ್ಣಮಯವಾಗಿರುತ್ತದೆ. ಇದರ ಮೇಲ್ಭಾಗ ಮತ್ತು ಅಂಚುಗಳುದ್ದಕ್ಕೂ ಪುಟ್ಟ ಪುಟ್ಟ ಕುಂಚಿಕೆಗಳನ್ನು ಹೆಣೆಯುತ್ತಾರೆ. ಇದು ಕೇವಲ ಅಲಂಕಾರದ ಉದ್ದೇಶವುಳ್ಳವು. ಮೃದುವಾದ ಹತ್ತಿ ಬಟ್ಟೆ ಅಥವಾ ಮೃದುವಾದ ಉಣ್ಣೆಬಟ್ಟೆಯಿಂದ ತಯಾರಿಸಿಕೊಳ್ಳುತ್ತಾರೆ. ಹಸುಗೂಸಿಗೆ ತಾಯಿಯ ಕಡೆಯಿಂದ ಮೊದಲು ಕುಲಾವಿಯನ್ನು ಹೊಲಿಸಿಕೊಡಿಸುವ ಸಂಪ್ರದಾಯವಿದೆ. ಬೇರೆ ಬೇರೆ ತೆರನ ವಿನ್ಯಾಸದ ಮತ್ತು ಗುಣಮಟ್ಟದ ಸಿದ್ಧಟೊಪ್ಪಿಗೆಗಳು ಮಾರುಕಟ್ಟೆಗೆ ಬಂದಿರುವುದರಿಂದ ಹಳೆಯ ರೀತಿಯ ಕುಲಾವಿಗಳು ವಿರಳವಾಗುತ್ತಿವೆ. ಕುಲಾವಿಯ ಪ್ರತಿ ನೆಯ್ಗೆಯಲ್ಲೂ ವಾತ್ಸಲ್ಯವು ಅನಾವರಣಗೊಳ್ಳುತ್ತದೆ.


logo