logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Spam
ಸ್ಪಾಮ್
ರದ್ದಿ ಸಂದೇಶ
ಅನಪೇಕ್ಷಿತವಾಗಿ ಬರುವ ಇಮೇಲ್ ಅಥವಾ ಪಠ್ಯಸಂದೇಶ
ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯಾದಂತೆ ನಮಗೆ ಲಭ್ಯವಿರುವ ಸಂವಹನ ಮಾಧ್ಯಮಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಸಂದೇಶಗಳನ್ನು, ಕಡತಗಳನ್ನು, ಚಿತ್ರ - ಧ್ವನಿ - ವೀಡಿಯೋಗಳನ್ನು ಕ್ಷಣಾರ್ಧದಲ್ಲಿ ಎಲ್ಲಿಗೆ ಬೇಕಾದರೂ ಕಳುಹಿಸುವುದು ಇದೀಗ ಸಾಧ್ಯವಾಗಿದೆ. ಆದರೆ ಈ ಬೆಳವಣಿಗೆಯ ಜೊತೆಗೆ ಅನಗತ್ಯ ಸಂದೇಶಗಳ ಪಿಡುಗು ಕೂಡ ದೊಡ್ಡದಾಗಿ ಬೆಳೆದಿದೆ. ಇಮೇಲ್ ಮಾಧ್ಯಮದಲ್ಲಂತೂ ಬಯಸದ ಮಾಹಿತಿಯನ್ನು ಬಲವಂತವಾಗಿ ಹೊತ್ತುತರುವ ಮಾಹಿತಿಯ ಕಾಟ ವಿಪರೀತ. ಇಂತಹ ರದ್ದಿ ಸಂದೇಶಗಳನ್ನು 'ಸ್ಪಾಮ್' ಎಂದು ಗುರುತಿಸಲಾಗುತ್ತದೆ. ಜಾಹೀರಾತುಗಳಿಂದ ಪ್ರಾರಂಭಿಸಿ ನಕಲಿ ಮಾಲಿನ ಪ್ರಚಾರ - ಕಾನೂನುಬಾಹಿರ ಔಷಧಗಳ ಮಾರಾಟಗಳವರೆಗೆ ಹಲವು ಉದ್ದೇಶಗಳಿಗಾಗಿ ಸ್ಪಾಮ್ ಸಂದೇಶಗಳನ್ನು ಬಳಸಲಾಗುತ್ತದೆ. ಲಾಭದ ಆಸೆ ತೋರಿಸಿ ವಂಚಿಸುವ 'ಫಿಶಿಂಗ್'ನಂತಹ ದುಷ್ಕೃತ್ಯಗಳಲ್ಲೂ ಸ್ಪಾಮ್ ಸಂದೇಶಗಳು ಬಳಕೆಯಾಗುತ್ತವೆ. ನಮ್ಮ ಅನುಮತಿಯಿಲ್ಲದೆ ಬರುವ ಸಂದೇಶಗಳಷ್ಟೆ ಸ್ಪಾಮ್ ಎಂದು ಕರೆಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಯಾವುದೋ ಸನ್ನಿವೇಶದಲ್ಲಿ ನಮ್ಮ ಸಂಪರ್ಕ ವಿವರ ಪಡೆದುಕೊಂಡವರು ಮತ್ತೆಮತ್ತೆ ಇಮೇಲ್ ಕಳುಹಿಸಿ ಕಿರಿಕಿರಿಮಾಡುತ್ತಾರಲ್ಲ (ಉದಾ: ಆನ್‌ಲೈನ್ ಶಾಪಿಂಗ್ ಜಾಲತಾಣಗಳು), ಅಂತಹ ಸಂದೇಶಗಳೂ ಸ್ಪಾಮ್ ಗುಂಪಿಗೇ ಸೇರುತ್ತವೆ. ಅವನ್ನು 'ಬೇಕನ್' ಎಂದು ಗುರುತಿಸಲಾಗುತ್ತದೆ ಎನ್ನುವುದೊಂದೇ ವ್ಯತ್ಯಾಸ. ಅಂದಹಾಗೆ ರದ್ದಿ ಸಂದೇಶಗಳು ಇಮೇಲ್ ಮಾಧ್ಯಮಕ್ಕಷ್ಟೇ ಸೀಮಿತವೇನಲ್ಲ. ಎಸ್ಸೆಮ್ಮೆಸ್ ಮೂಲಕವೂ ದೊಡ್ಡ ಪ್ರಮಾಣದ ಅನುಪಯುಕ್ತ ಸಂದೇಶಗಳು ಹರಿದುಬರುತ್ತವೆ. ವಾಟ್ಸ್‌ಆಪ್‌ನಲ್ಲೂ ಈ ಸಮಸ್ಯೆ ಇದೆ.

Spamdexing
ಸ್ಪಾಮ್‌ಡೆಕ್ಸಿಂಗ್
(ರೂಪಿಸಬೇಕಿದೆ)
ಸರ್ಚ್ ಫಲಿತಾಂಶಗಳಲ್ಲಿ ಒಳ್ಳೆಯ ಸ್ಥಾನ ಪಡೆದುಕೊಳ್ಳುವ ಉದ್ದೇಶದಿಂದ ಸರ್ಚ್ ಇಂಜನ್‌ಗಳನ್ನು, ಅವು ತಯಾರಿಸುವ ಸೂಚಿಯನ್ನು (ಇಂಡೆಕ್ಸ್) ಮೋಸಗೊಳಿಸಲು ನಡೆಯುವ ಪ್ರಯತ್ನ
ವಿಶ್ವವ್ಯಾಪಿ ಜಾಲದಲ್ಲಿ ನಮಗೆ ಬೇಕಾದುದನ್ನು ಹುಡುಕಿಕೊಳ್ಳುವಾಗ ಸರ್ಚ್ ಫಲಿತಾಂಶದ ಮೊದಲ ಕೆಲ ಸ್ಥಾನಗಳಲ್ಲಿರುವ ತಾಣಗಳನ್ನು ಮಾತ್ರವೇ ಗಮನಿಸುವುದು ನಮ್ಮ ಅಭ್ಯಾಸ. ಹೀಗಾಗಿಯೇ ಜಾಲತಾಣಗಳು ಸರ್ಚ್ ಫಲಿತಾಂಶಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ, ಸರ್ಚ್ ಇಂಜನ್ ಆಪ್ಟಿಮೈಸೇಶನ್ (ಎಸ್‌ಇಒ) ಪ್ರಕ್ರಿಯೆಯ ಮೊರೆಹೋಗುತ್ತವೆ. ಜಾಲತಾಣದಲ್ಲಿ ನಿಜಕ್ಕೂ ಉಪಯುಕ್ತ ಮಾಹಿತಿಯಿದ್ದರೆ, ಎಸ್‌ಇಒ ಪ್ರಕ್ರಿಯೆಯಲ್ಲಿ ಅದನ್ನು ಸರಿಯಾಗಿ ನಿರ್ವಹಿಸಿದರೆ ನೋಡುಗರನ್ನು ಆಕರ್ಷಿಸುವುದು ಸುಲಭ ನಿಜ. ಆದರೆ ಜನರಿಗೆ ತೊಂದರೆಕೊಡುವ ಉದ್ದೇಶದ ತಾಣಗಳು, ಖೊಟ್ಟಿ ಜಾಹೀರಾತುಗಳಿಂದ ದುಡ್ಡುಮಾಡಲು ಹೊರಟ ತಾಣಗಳಿಗೂ ಜನರನ್ನು ಸೆಳೆಯುವ ಹುನ್ನಾರವಿರುತ್ತದಲ್ಲ - ಅವರೂ ಸರ್ಚ್ ಫಲಿತಾಂಶದ ಮೊದಲ ಸ್ಥಾನಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಸರ್ಚ್ ಫಲಿತಾಂಶದಲ್ಲಿ ತಮ್ಮ ತಾಣ ಉತ್ತಮ ಸ್ಥಾನ ಪಡೆಯುವಂತೆ ಮಾಡಲು ಅವರು ಜನಪ್ರಿಯ ಕೀರ್ವರ್ಡ್‌ಗಳನ್ನು ತಮ್ಮ ತಾಣದಲ್ಲಿ ಸುಮ್ಮನೆ ಸೇರಿಸುತ್ತಾರೆ, ತಮ್ಮ ಪೋಸ್ಟುಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ ವಿಷಯಗಳನ್ನು ಸುಮ್ಮನೆ ಪ್ರಸ್ತಾಪಿಸುತ್ತಾರೆ. ಬಳಕೆದಾರರನ್ನು ಮೋಸಗೊಳಿಸುವ ಸ್ಪಾಮ್ ಸಂದೇಶಗಳಂತೆ ಈ ಚಟುವಟಿಕೆ ಸರ್ಚ್ ಇಂಜನ್‌ಗಳನ್ನು, ಅವು ತಯಾರಿಸುವ ಸೂಚಿಯನ್ನು (ಇಂಡೆಕ್ಸ್) ಮೋಸಗೊಳಿಸಲು ಪ್ರಯತ್ನಿಸುತ್ತದೆ. ಹಾಗಾಗಿ ಇದನ್ನು 'ಸ್ಪಾಮ್‌ಡೆಕ್ಸಿಂಗ್' ಎಂದು ಕರೆಯುತ್ತಾರೆ. ಈ ಕುತಂತ್ರ ತಡೆಗೆ ಸರ್ಚ್ ಇಂಜನ್‌ಗಳು ಹಲವು ಕ್ರಮಗಳನ್ನು ಕೈಗೊಂಡರೂ ಕೆಲವೊಮ್ಮೆ ಅವನ್ನೆಲ್ಲ ಮೀರಿ ದುರುದ್ದೇಶಪೂರಿತ ತಾಣಗಳು ಸರ್ಚ್ ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳುವುದುಂಟು. ಹಾಗಾಗಿ ಅಪರಿಚಿತ ತಾಣಗಳಲ್ಲಿ ನಾವು ಏನು ಕ್ಲಿಕ್ ಮಾಡುತ್ತೇವೆ ಎನ್ನುವ ಬಗ್ಗೆ ಎಚ್ಚರವಹಿಸಬೇಕಾದ್ದು ಅನಿವಾರ್ಯ - ಆ ತಾಣ ನಮ್ಮ ಸರ್ಚ್ ಫಲಿತಾಂಶದ ಮೊದಲ ಸ್ಥಾನದಲ್ಲೇ ಇದ್ದರೂ ಕೂಡ!

Speech to Text
ಸ್ಪೀಚ್ ಟು ಟೆಕ್ಸ್ಟ್
(ರೂಪಿಸಬೇಕಿದೆ)
ಧ್ವನಿಯನ್ನು ಪಠ್ಯರೂಪಕ್ಕೆ ಪರಿವರ್ತಿಸುವ ತಂತ್ರಜ್ಞಾನ
ಕಂಪ್ಯೂಟರಿಗೆ, ಸ್ಮಾರ್ಟ್‌ಫೋನಿಗೆ ಆದೇಶ ನೀಡಲು ನಾವು ಹಲವು ಮಾರ್ಗಗಳನ್ನು ಬಳಸುವುದು ಸಾಧ್ಯ. ಕೀಲಿ ಒತ್ತುವುದು, ಮೌಸಿನ ಕ್ಲಿಕ್, ಬೆರಳ ಸ್ಪರ್ಶಗಳೆಲ್ಲ ಇಂತಹ ಮಾರ್ಗಗಳೇ. ಬಳಕೆದಾರರ ಧ್ವನಿಯನ್ನು ಗುರುತಿಸುವ 'ಸ್ಪೀಚ್ ರೆಕಗ್ನಿಶನ್' ತಂತ್ರಜ್ಞಾನ ಕೂಡ ಆದೇಶಗಳನ್ನು ಗ್ರಹಿಸಲೆಂದೇ ಇರುವ ಉಪಾಯ. ಬಳಕೆದಾರರ ಧ್ವನಿಯನ್ನು ಗ್ರಹಿಸಲು ಸಾಧ್ಯವಾದ ಮೇಲೆ ಅದನ್ನು ಪಠ್ಯರೂಪಕ್ಕೂ ಪರಿವರ್ತಿಸಿದರೆ ಹೇಗೆ? 'ಸ್ಪೀಚ್ ಟು ಟೆಕ್ಸ್ಟ್' ತಂತ್ರಜ್ಞಾನದ ಬೆಳವಣಿಗೆಗೆ ಕಾರಣವಾಗಿರುವುದು ಇದೇ ಆಲೋಚನೆ. ನಮ್ಮ ಮಾತುಗಳನ್ನು ಬೇರೆಯವರಿಂದ ಬರೆಸಿದಂತೆಯೇ (ಉಕ್ತಲೇಖನ) ಕೆಲಸಮಾಡುವ ವಿಧಾನ ಇದು. ಬೇರೊಬ್ಬ ವ್ಯಕ್ತಿ ಬರೆದುಕೊಳ್ಳುವ ಬದಲಿಗೆ ಇಲ್ಲಿ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಆ ಕೆಲಸ ಮಾಡುತ್ತದೆ ಎನ್ನುವುದಷ್ಟೇ ವ್ಯತ್ಯಾಸ. ಭಾಷಣಗಳನ್ನು, ಸಭೆಯ ನಡಾವಳಿಗಳನ್ನು ಕ್ಷಿಪ್ರವಾಗಿ ಪಠ್ಯರೂಪಕ್ಕೆ ಪರಿವರ್ತಿಸಲು ಇದು ಸುಲಭ ವಿಧಾನ. ದೈಹಿಕ ಸಮಸ್ಯೆಗಳಿಂದ ಕೀಬೋರ್ಡ್ ಬಳಸಲು ಸಾಧ್ಯವಿಲ್ಲದವರಿಗೂ ಸ್ಪೀಚ್ ಟು ಟೆಕ್ಸ್ಟ್ ತಂತ್ರಾಂಶಗಳು ನೆರವಾಗಬಲ್ಲವು (ಇಂತಹ ಯಾವುದೇ ತಂತ್ರಾಂಶ ನಮ್ಮ ಧ್ವನಿಯನ್ನು ಎಷ್ಟು ನಿಖರವಾಗಿ ಗುರುತಿಸಬಲ್ಲದು ಎನ್ನುವುದು ನಮ್ಮ ಉಚ್ಚಾರಣೆ, ತಂತ್ರಾಂಶದ ಕಾರ್ಯಕ್ಷಮತೆ, ನಾವು ಬಳಸುವ ಮೈಕ್‌ನ ಗುಣಮಟ್ಟ - ಹೀಗೆ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ).

Speech Recognition
ಸ್ಪೀಚ್ ರೆಕಗ್ನಿಶನ್
(ರೂಪಿಸಬೇಕಿದೆ)
ನಮ್ಮ ಮಾತನ್ನು ಆಲಿಸಿ, ನಾವು ಏನು ಹೇಳುತ್ತಿದ್ದೇವೆ ಎಂದು ಗುರುತಿಸಿ ಅರ್ಥೈಸಿಕೊಂಡು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಅನುವುಮಾಡಿಕೊಡುವ ತಂತ್ರಜ್ಞಾನ
ಕಂಪ್ಯೂಟರಿಗೆ ಆದೇಶಗಳನ್ನು ನೀಡಲು ಕೀಲಿಮಣೆ - ಮೌಸ್ ಬಳಸುವುದು ನಮಗೆ ಗೊತ್ತು. ಸ್ಮಾರ್ಟ್‌ಫೋನಿನಲ್ಲಿ ಟಚ್ ಸ್ಕ್ರೀನ್ ಬಳಸುವುದೂ ನಮಗೆ ಬಹಳ ಸುಲಭ. ಅಂಗಾಂಗಗಳ ಚಲನೆಯ ಮೂಲಕವೇ ಸಾಧನಗಳನ್ನು ನಿಯಂತ್ರಿಸುವ 'ಜೆಸ್ಚರ್ ಕಂಟ್ರೋಲ್' ಬಗೆಗೂ ನಾವು ಕೇಳಿದ್ದೇವೆ. ಕಂಪ್ಯೂಟರು - ಸ್ಮಾರ್ಟ್‌ಫೋನುಗಳಿಗೆ ಆದೇಶ ನೀಡಲು ಇಷ್ಟೆಲ್ಲ ಕಷ್ಟಪಡುವ ಬದಲಿಗೆ ಅವುಗಳೊಡನೆಯೂ ಮಾತನಾಡುವಂತಿದ್ದರೆ? ಮಸಾಲೆದೋಸೆ - ಕಾಫಿ ಬೇಕೆಂದು ಹೋಟಲ್ ಮಾಣಿಗೆ ಹೇಳಿದಂತೆ ಮನೆಯ ನಂಬರ್ ಡಯಲ್ ಮಾಡೆಂದು ನಮ್ಮ ಫೋನಿಗೂ ಹೇಳಬಹುದು, ಅಲ್ಲವೇ? ಇದನ್ನು ಸಾಧ್ಯವಾಗಿಸಿರುವ ತಂತ್ರಜ್ಞಾನವೇ ಸ್ಪೀಚ್ ರೆಕಗ್ನಿಶನ್. ನಾವು ಏನು ಹೇಳುತ್ತಿದ್ದೇವೆ ಎಂದು ಗುರುತಿಸಿ, ಅದನ್ನು ಅರ್ಥೈಸಿಕೊಂಡು, ನಿರ್ದಿಷ್ಟ ಕೆಲಸ ಕೈಗೊಳ್ಳುವಂತೆ ಕಂಪ್ಯೂಟರಿಗೋ ಸ್ಮಾರ್ಟ್‌ಫೋನಿಗೋ ನಿರ್ದೇಶಿಸುವುದನ್ನು ಈ ತಂತ್ರಜ್ಞಾನ ಸಾಧ್ಯವಾಗಿಸುತ್ತದೆ. ಅಷ್ಟೇ ಅಲ್ಲ, ಧ್ವನಿರೂಪದಲ್ಲಿರುವ ಕಡತಗಳನ್ನು (ಭಾಷಣ, ಟೀವಿ ಕಾರ್ಯಕ್ರಮ ಇತ್ಯಾದಿ) ಪಠ್ಯರೂಪಕ್ಕೆ ಪರಿವರ್ತಿಸುವಲ್ಲೂ ಈ ತಂತ್ರಜ್ಞಾನದ ಬಳಕೆ ಸಾಧ್ಯ. ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಮುಂತಾದ ಅನೇಕ ಸಾಧನಗಳಲ್ಲಿ ಈ ತಂತ್ರಜ್ಞಾನ ಈಗಾಗಲೇ ಬಳಕೆಗೆ ಬಂದಿದೆ. ಆಂಡ್ರಾಯ್ಡ್‌ನ 'ಓಕೆ ಗೂಗಲ್' ಹಾಗೂ ಗೂಗಲ್ ಅಸಿಸ್ಟೆಂಟ್, ಆಪಲ್‌ನ 'ಸಿರಿ' ಹಾಗೂ ಮೈಕ್ರೋಸಾಫ್ಟ್‌ನ 'ಕೊರ್ಟಾನಾ' ಸ್ಪೀಚ್ ರೆಕಗ್ನಿಶನ್ ಬಳಸುತ್ತಿರುವ ಇಂತಹ ಸೌಲಭ್ಯಗಳಿಗೆ ಪ್ರಮುಖ ಉದಾಹರಣೆಗಳು. ನಿರ್ದಿಷ್ಟ ಆಪ್ ತೆರೆಯುವುದು, ದೂರವಾಣಿ ಕರೆ ಮಾಡುವುದು, ಸಂದೇಶ ಕಳುಹಿಸುವುದು, ಅಗತ್ಯ ಮಾಹಿತಿ ಹುಡುಕುವುದು, ಮಾಡಬೇಕಾದ ಕೆಲಸಗಳನ್ನು ಗುರುತಿಟ್ಟುಕೊಳ್ಳುವುದು - ಹೀಗೆ ಹಲವಾರು ಉದ್ದೇಶಗಳಿಗೆ ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.

Spider
ಸ್ಪೈಡರ್
(ರೂಪಿಸಬೇಕಿದೆ)
ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸಿ ಆ ತಾಣಗಳಲ್ಲಿ ಏನೆಲ್ಲ ಇದೆ ಎನ್ನುವ ಬಗ್ಗೆ ಮಾಹಿತಿ ಕಲೆಹಾಕುವ ತಂತ್ರಾಂಶ; ಸರ್ಚ್ ಫಲಿತಾಂಶಗಳಲ್ಲಿ ಈ ಮಾಹಿತಿಯನ್ನೇ ಬಳಸಲಾಗುತ್ತದೆ.
ವಿಶ್ವವ್ಯಾಪಿ ಜಾಲದಲ್ಲಿ ನಮಗೆ ಬೇಕಾದ ಮಾಹಿತಿ ಎಲ್ಲಿದೆ ಎನ್ನುವುದನ್ನು ಸರ್ಚ್ ಇಂಜನ್‌ಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು, ನಿಜ. ಆದರೆ ಇಷ್ಟೆಲ್ಲ ವಿಷಯಗಳನ್ನು ನಮಗೆ ತಿಳಿಸಲು ಸರ್ಚ್ ಇಂಜನ್‌ಗೆ ಸಾಧ್ಯವಾಗುವುದು ಹೇಗೆ? ಈ ಕೆಲಸಕ್ಕಾಗಿ ಅವು ಸಾಕಷ್ಟು ತಯಾರಿ ಮಾಡಿಟ್ಟುಕೊಂಡಿರುತ್ತವೆ. ಸ್ವಯಂಚಾಲಿತ ತಂತ್ರಾಂಶ, ಅಂದರೆ 'ಬಾಟ್'ಗಳ ನೆರವಿನಿಂದ ಅಪಾರ ಸಂಖ್ಯೆಯ ಜಾಲತಾಣಗಳನ್ನು ಪರಿಶೀಲಿಸುವ ಸರ್ಚ್ ಇಂಜನ್‌ಗಳು ಆ ತಾಣಗಳಲ್ಲಿ ಏನೆಲ್ಲ ಇದೆ ಎನ್ನುವ ಬಗ್ಗೆ ಒಂದಷ್ಟು ವಿವರಗಳನ್ನು ಉಳಿಸಿಟ್ಟುಕೊಳ್ಳುತ್ತವೆ. ನಾವು ಸರ್ಚ್ ಮಾಡಿದಾಗ ನಮಗೆ ಬೇಕಾದ ಮಾಹಿತಿಯಿರುವ ಜಾಲತಾಣಗಳ ಪಟ್ಟಿ ಥಟ್ಟನೆ ಕಾಣಿಸಿಕೊಳ್ಳುವುದಕ್ಕೆ ಈ ವಿವರಗಳೇ ಮೂಲ. ಈ ಬಾಟ್‌ಗಳ ಹುಡುಕಾಟ ಸಾಮಾನ್ಯವಾಗಿ ಅತ್ಯಂತ ಪ್ರಸಿದ್ಧ ಜಾಲತಾಣಗಳು ಹಾಗೂ ಅತಿಹೆಚ್ಚು ಬಳಕೆದಾರರಿರುವ ಸರ್ವರ್‌ಗಳಿಂದ ಪ್ರಾರಂಭವಾಗುತ್ತದೆ. ತಾಣಗಳಲ್ಲಿರುವ ಮಾಹಿತಿಯನ್ನು ಗಮನಿಸುವುದರ ಜೊತೆಗೆ ಅಲ್ಲಿರುವ ಎಲ್ಲ ಲಿಂಕ್‌ಗಳನ್ನೂ ಇವು ಹಿಂಬಾಲಿಸುವುದರಿಂದ ಬಾಟ್‌ಗಳ ನಿಲುಕಿಗೆ ಸಿಗುವ ಪುಟಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಹೀಗೆ ವಿವರ ಸಂಗ್ರಹಿಸುವ ತಂತ್ರಾಂಶಗಳಿಗೆ ನೆರವಾಗಲೆಂದೇ ಜಾಲತಾಣಗಳಲ್ಲಿ ನಿರ್ದಿಷ್ಟ ರೂಪದ ಮಾಹಿತಿಯನ್ನು ಉಳಿಸಿಡುವ ಅಭ್ಯಾಸವೂ ಇದೆ. ಅಷ್ಟೇ ಏಕೆ, ಬಾಟ್‌ಗಳಿಗೆ ನಮ್ಮ ತಾಣದಲ್ಲಿರುವ ಮಾಹಿತಿಯ ತಂಟೆಗೆ ಬರಬೇಡಿ ಎಂದು ಸೂಚಿಸುವುದೂ ಸಾಧ್ಯ. ಬೃಹತ್ ಜೇಡರಬಲೆಯಂತಿರುವ ಜಾಲಲೋಕದಲ್ಲಿ ಸರಾಗವಾಗಿ ಓಡಾಡುತ್ತವಲ್ಲ, ಅದಕ್ಕಾಗಿಯೇ ಈ ಬಾಟ್‌ಗಳನ್ನು 'ಸ್ಪೈಡರ್' (ಜೇಡ) ಎಂದೂ ಗುರುತಿಸಲಾಗುತ್ತದೆ. ವೆಬ್ ಕ್ರಾಲರ್ ಎನ್ನುವುದು ಇವುಗಳ ಇನ್ನೊಂದು ಹೆಸರು.

Spyware
ಸ್ಪೈವೇರ್
(ರೂಪಿಸಬೇಕಿದೆ)
ಬಳಕೆದಾರರಿಗೆ ಗೊತ್ತಾಗದಂತೆ ಅವರ ಕಂಪ್ಯೂಟರಿನಲ್ಲಿ ಅವಿತಿದ್ದು ಅವರ ಚಟುವಟಿಕೆಗಳನ್ನೆಲ್ಲ ಗಮನಿಸಿಕೊಳ್ಳುವ, ಆ ಬಗ್ಗೆ ತನ್ನ ಸೃಷ್ಟಿಕರ್ತನಿಗೆ ಮಾಹಿತಿ ನೀಡುವ ಕುತಂತ್ರಾಂಶ
ಕಂಪ್ಯೂಟರುಗಳ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಹಾಳುಮಾಡುವುದು, ವೈಯಕ್ತಿಕ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು - ಹೀಗೆ ಹಲವು ರೀತಿಯಲ್ಲಿ ತೊಂದರೆಕೊಡುವ ದುರುದ್ದೇಶಪೂರಿತ ತಂತ್ರಾಂಶಗಳನ್ನು ಮಾಲ್‌ವೇರ್ ಅಥವಾ ಕುತಂತ್ರಾಂಶಗಳೆಂದು ಗುರುತಿಸಲಾಗುತ್ತದೆ. ಇಂತಹ ಕುತಂತ್ರಾಂಶಗಳಲ್ಲಿ ಸ್ಪೈವೇರ್ ಕೂಡ ಒಂದು. ಬಳಕೆದಾರರಿಗೆ ಗೊತ್ತಾಗದಂತೆ ಅವರ ಕಂಪ್ಯೂಟರಿನಲ್ಲಿ ಅವಿತಿದ್ದು ಅವರ ಚಟುವಟಿಕೆಗಳನ್ನೆಲ್ಲ ಗಮನಿಸಿಕೊಳ್ಳುವುದು ಮತ್ತು ಆ ಬಗ್ಗೆ ತನ್ನ ಸೃಷ್ಟಿಕರ್ತನಿಗೆ ಮಾಹಿತಿ ನೀಡುವುದು ಈ ಕುತಂತ್ರಾಂಶದ ಕೆಲಸ. ಬಳಕೆದಾರರು ಯಾವ ತಾಣಗಳಿಗೆ ಭೇಟಿಕೊಡುತ್ತಾರೆ ಎನ್ನುವ ಬಗೆಗೆ ಮಾಹಿತಿ ಸಂಗ್ರಹಿಸುವುದು, ಅವರು ಟೈಪ್ ಮಾಡಿದ್ದನ್ನೆಲ್ಲ ಒಂದೆಡೆ ದಾಖಲಿಸಿಕೊಂಡು ಅದರಲ್ಲಿರಬಹುದಾದ ಖಾಸಗಿ ಮಾಹಿತಿಯನ್ನು (ಉದಾ: ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್ ವಿವರ) ದುರುಪಯೋಗಪಡಿಸಿಕೊಳ್ಳುವುದು, ತಂತ್ರಾಂಶಗಳ ಆಯ್ಕೆಗಳನ್ನು ಬದಲಿಸುವುದು, ನಮ್ಮ ಆಯ್ಕೆಯ ಜಾಲತಾಣದ ಬದಲು ಬೇರೆ ಯಾವುದೋ ತಾಣವನ್ನು ತೆರೆಯುವುದು - ಹೀಗೆ ಸ್ಪೈವೇರ್ ಹಾವಳಿ ಅನೇಕ ಬಗೆಯದಾಗಿರುತ್ತದೆ. ಜಾಹೀರಾತುಗಳನ್ನು ಪ್ರದರ್ಶಿಸುವ ಕೆಲ ತಂತ್ರಾಂಶಗಳೂ (ಆಡ್‌ವೇರ್) ಗೂಢಚರ್ಯೆ ಮಾಡುತ್ತವೆ. ಇಂಟರ್‌ನೆಟ್ ಬ್ರೌಸಿಂಗ್ ವೇಗ ಹೆಚ್ಚಿಸುತ್ತೇವೆಂದೋ ಕುತಂತ್ರಾಂಶಗಳಿಂದ ರಕ್ಷಿಸುತ್ತೇವೆಂದೋ ಹೇಳಿಕೊಳ್ಳುವ ತಂತ್ರಾಂಶಗಳು ಸ್ವತಃ ಸ್ಪೈವೇರ್‌ಗಳಾಗಿರುವ ಸಾಧ್ಯತೆ ಇರುತ್ತದೆ. ಇತರ ಕುತಂತ್ರಾಂಶಗಳಂತೆ ಸ್ಪೈವೇರ್‌ಗಳಿಂದ ಪಾರಾಗಲೂ ಆಂಟಿವೈರಸ್ ತಂತ್ರಾಂಶಗಳ ಮೊರೆಹೋಗುವುದು ಅನಿವಾರ್ಯ. ಅಪರಿಚಿತ ತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದನ್ನು ತಪ್ಪಿಸುವುದೂ ಒಳ್ಳೆಯ ಅಭ್ಯಾಸವೇ.

Smart Home
ಸ್ಮಾರ್ಟ್ ಹೋಮ್
(ರೂಪಿಸಬೇಕಿದೆ)
ಗೃಹೋಪಯೋಗಿ ಸಾಧನಗಳೆಲ್ಲ ಸ್ಮಾರ್ಟ್ ಆಗಿರುವ ಮನೆ
ಫೋನು, ವಾಚು, ಟೀವಿ, ಲೈಟ್ ಬಲ್ಬು, ಪೆನ್ನು - ಹೀಗೆ ಈಗಿನ ಕಾಲದಲ್ಲಿ ಪ್ರತಿಯೊಂದು ಸಾಧನವೂ ಸ್ಮಾರ್ಟ್ ಆಗಿಬಿಟ್ಟಿದೆ. ಮನೆಯ ಸಾಧನಗಳೆಲ್ಲ ಸ್ಮಾರ್ಟ್ ಆದಮೇಲೆ ಇನ್ನೇನು, ಪೂರ್ತಿ ಮನೆಯೂ ಸ್ಮಾರ್ಟ್ ಆಗುವುದೇ ಬಾಕಿ! ಗೃಹೋಪಯೋಗಿ ಸಾಧನಗಳೆಲ್ಲ ಸ್ಮಾರ್ಟ್ ಆಗಿರುವ ಮನೆಯನ್ನು 'ಸ್ಮಾರ್ಟ್ ಹೋಮ್' ಎಂದು ಕರೆಯುತ್ತಾರೆ. ಇಲ್ಲಿನ ಫ್ಯಾನು-ಲೈಟುಗಳನ್ನು ಮೊಬೈಲಿನಿಂದ ನಿಯಂತ್ರಿಸಬಹುದು, ವಾಶಿಂಗ್ ಮಶೀನ್ - ಮೈಕ್ರೋವೇವ್ ಓವನ್ ಕೆಲಸಗಳನ್ನೆಲ್ಲ ಆಫೀಸಿನಲ್ಲಿ ಕುಳಿತೇ ಗಮನಿಸಿಕೊಳ್ಳಬಹುದು, ಸೆಕ್ಯೂರಿಟಿ ಕ್ಯಾಮೆರಾಗೆ ಕಾಣುತ್ತಿರುವ ದೃಶ್ಯಗಳನ್ನು ಸ್ಮಾರ್ಟ್‌ಫೋನಿನಲ್ಲಿ ನೋಡಬಹುದು (ಇಲ್ಲಿ ಹೇಳಿರುವ ಪೈಕಿ ಹಲವಾರು ಸಾಧನಗಳು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ದೊರಕುತ್ತಿವೆ). ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್‌ಗಳಿಗೆಲ್ಲ ಇರುವಂತೆ ಸ್ಮಾರ್ಟ್ ಮನೆಗೆ ನಿರ್ದಿಷ್ಟವಾದ ಸ್ವರೂಪವೇನೂ ಇರುವುದಿಲ್ಲ. ಅದು ವಿವಿಧ ಸೌಲಭ್ಯಗಳು ಸೇರಿದ ಒಂದು ವಿಶಾಲವಾದ ಪರಿಕಲ್ಪನೆಯಾದ್ದರಿಂದ ನಿಮ್ಮ ಕನಸಿನ ಮನೆ ಇನ್ನೊಬ್ಬರ ಸ್ಮಾರ್ಟ್‌ಮನೆಗಿಂತ ಸಂಪೂರ್ಣ ಭಿನ್ನವಾಗಿರುವುದು ಸಾಧ್ಯ. ಅಂದಹಾಗೆ ಸ್ಮಾರ್ಟ್‌ಮನೆಯಲ್ಲಿ ಏನೇನು ಸಾಧ್ಯವಾಗಬಹುದು ಎನ್ನುವುದಕ್ಕೆ ಇನ್ನೂ ಹಲವು ಉದಾಹರಣೆಗಳಿವೆ. ಹಿರಿಯರ ಆರೋಗ್ಯದ ಮೇಲೆ ನಿಗಾ ಇಡುವ ಯಂತ್ರಗಳಿಂದ ಪ್ರಾರಂಭಿಸಿ ಸಾಕುಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಊಟ ಹಾಕುವ ವ್ಯವಸ್ಥೆಯವರೆಗೆ ಅದೆಷ್ಟೋ ಸ್ಮಾರ್ಟ್ ಸಾಧನಗಳು ಈಗಾಗಲೇ ರೂಪುಗೊಂಡಿವೆ. ಅಷ್ಟೇ ಏಕೆ, ಕೊಂಚ ತಾಂತ್ರಿಕ ಪರಿಣತಿ ಇದ್ದರೆ ಹೊಸ ವ್ಯವಸ್ಥೆಗಳನ್ನು ನಾವೇ ರೂಪಿಸಿ ಸ್ಮಾರ್ಟ್ ಮನೆಯ ಸಾಧ್ಯತೆಗಳನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವುದೂ ಸಾಧ್ಯವಿದೆ.

Smishing
ಸ್ಮಿಶಿಂಗ್
(ರೂಪಿಸಬೇಕಿದೆ)
ಎಸ್ಸೆಮ್ಮೆಸ್ ಮಾಧ್ಯಮದ ಮೂಲಕ ನಡೆಯುವ ಫಿಶಿಂಗ್ ಹಗರಣ; ನಕಲಿ ಸಂದೇಶಗಳನ್ನು ಕಳಿಸಿ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯಲು ಪ್ರಯತ್ನಿಸುವ ತಂತ್ರ.
ನಕಲಿ ಇಮೇಲ್ ಸಂದೇಶಗಳನ್ನು ಕಳಿಸಿ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯಲು ಪ್ರಯತ್ನಿಸುವುದು ಅಂತರಜಾಲ ಲೋಕದ ಅತಿದೊಡ್ಡ ಹಗರಣಗಳಲ್ಲೊಂದು. 'ಫಿಶಿಂಗ್' ಎಂದು ಕರೆಯುವುದು ಇದನ್ನೇ. ದೊಡ್ಡಮೊತ್ತದ ಬಹುಮಾನ - ವಿದೇಶದಲ್ಲಿ ಕೆಲಸ ಮುಂತಾದ ಆಮಿಷಗಳನ್ನು ತೋರಿಸಿ ಹಣ ಕೇಳುವುದು, ಬ್ಯಾಂಕು - ಕ್ರೆಡಿಟ್ ಕಾರ್ಡ್ ಸಂಸ್ಥೆಗಳ ಹೆಸರಿನಲ್ಲಿ ಇಮೇಲ್ ಕಳಿಸಿ ಖಾತೆಯ ಮಾಹಿತಿ ನೀಡುವಂತೆ ಹೇಳುವುದೆಲ್ಲ ಈ ಹಗರಣದ ವಿವಿಧ ರೂಪಗಳು. ಇಮೇಲ್ ಬದಲು ದೂರವಾಣಿ ಕರೆಯ ಮೂಲಕ ನಡೆಯುವ ಈ ಹಗರಣಕ್ಕೆ 'ವಿಶಿಂಗ್' (ವಾಯ್ಸ್ ಫಿಶಿಂಗ್ ಎಂಬ ಅರ್ಥದಲ್ಲಿ) ಎಂದು ಹೆಸರು. ಫಿಶಿಂಗ್ ಹಗರಣ ಎಸ್ಸೆಮ್ಮೆಸ್ ಮೂಲಕವೂ ನಡೆಯುತ್ತದೆ. ಫಿಶಿಂಗ್‌ನ ಈ ರೂಪವನ್ನು 'ಸ್ಮಿಶಿಂಗ್' ಎಂದು ಕರೆಯುತ್ತಾರೆ. ಇದನ್ನು ಇಂಗ್ಲಿಷಿನಲ್ಲಿ 'SMiShing' ಎಂದು ಬರೆಯುವ ಅಭ್ಯಾಸವಿದೆ (SMS ಅನ್ನು ದೊಡ್ಡಕ್ಷರಗಳಲ್ಲಿ ಬರೆದಿರುವುದನ್ನು ಗಮನಿಸಿ). ಬಹುಮಾನದ ಆಮಿಷ ತೋರಿಸಲು, ಖಾಸಗಿ ಮಾಹಿತಿ ನೀಡುವಂತೆ ಕೇಳಲು ಇಲ್ಲಿ ಇಮೇಲ್ ಸಂದೇಶದ ಬದಲು ಎಸ್ಸೆಮ್ಮೆಸ್ ಮಾಧ್ಯಮ ಬಳಕೆಯಾಗುತ್ತದೆ. ನಿಯಮಿತವಾಗಿ ಇಮೇಲ್ ನೋಡದವರೂ ಎಸ್ಸೆಮ್ಮೆಸ್ ಸಂದೇಶಗಳನ್ನು ಓದುತ್ತಾರೆ ಎನ್ನುವುದು ಎಸ್ಸೆಮ್ಮೆಸ್ ಫಿಶಿಂಗ್ ಹಿಂದಿರುವ ದುರುದ್ದೇಶ. ವಾಟ್ಸ್‌ಆಪ್‌ನಂತಹ ಮೆಸೇಜಿಂಗ್ ಸೇವೆಗಳಲ್ಲೂ ಈ ಹಗರಣ ನಡೆಯುವುದುಂಟು. ಬಹಳಷ್ಟು ಸಾರಿ ಇಮೇಲ್ ಸೇವೆಗಳು ಫಿಶಿಂಗ್ ಸಂದೇಶಗಳನ್ನು ಸಂಶಯಾಸ್ಪದವೆಂದು ಗುರುತಿಸುತ್ತವೆ. ಆದರೆ ಎಸ್ಸೆಮ್ಮೆಸ್‌ನಲ್ಲಿ ಇಂತಹ ಸೌಲಭ್ಯ ಇರುವುದಿಲ್ಲವಾದ್ದರಿಂದ ಅಪರಿಚಿತರಿಂದ ಬರುವ ಸಂದೇಶಗಳ ಬಗ್ಗೆ ನಾವು ಎಚ್ಚರವಹಿಸಬೇಕಾದ್ದು ಅನಿವಾರ್ಯ. ಇಂತಹ ಸಂದೇಶಗಳಲ್ಲಿರಬಹುದಾದ ಯಾವುದೇ ಕೊಂಡಿಯ ಮೇಲೆ ಕ್ಲಿಕ್ ಮಾಡುವುದು ಅಥವಾ ಅವರು ಕೇಳಿದ ಮಾಹಿತಿಯನ್ನು ಹಂಚಿಕೊಳ್ಳುವುದು ಹಾನಿಕಾರಕವಾಗಬಲ್ಲದು.

Sandbox
ಸ್ಯಾಂಡ್‌ಬಾಕ್ಸ್
(ರೂಪಿಸಬೇಕಿದೆ)
ತಂತ್ರಾಂಶಗಳನ್ನು ರೂಪಿಸುವಾಗ ಇಲ್ಲವೇ ಬದಲಾಯಿಸುವಾಗ ಹೊಸ ಆಲೋಚನೆಗಳನ್ನು ಪ್ರಯೋಗಿಸಿ ನೋಡಲು ಬಳಕೆಯಾಗುವ ಕಂಪ್ಯೂಟರ್ ವ್ಯವಸ್ಥೆ
ತಂತ್ರಜ್ಞಾನದ ಪ್ರಪಂಚದಲ್ಲಿ ಕೇಳಸಿಗುವ ಕೆಲ ಹೆಸರುಗಳ ಮೂಲ ಅರ್ಥಕ್ಕೂ ಅವು ಇಲ್ಲಿ ಬಳಕೆಯಾಗುವ ಸನ್ನಿವೇಶಕ್ಕೂ ಸಂಬಂಧವೇ ಇರುವುದಿಲ್ಲ. ಅಂತಹ ಹೆಸರುಗಳಿಗೆ 'ಸ್ಯಾಂಡ್‌ಬಾಕ್ಸ್' ಒಂದು ಉದಾಹರಣೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಯಾಂಡ್‌ಬಾಕ್ಸ್ ಎಂಬ ಹೆಸರಿಗೆ ಹಲವು ಅರ್ಥಗಳಿವೆ. ಆ ಪೈಕಿ ಮೊದಲನೆಯದು ತಂತ್ರಾಂಶ ಅಭಿವರ್ಧನೆಗೆ (ಸಾಫ್ಟ್‌ವೇರ್ ಡೆವೆಲಪ್‌ಮೆಂಟ್) ಸಂಬಂಧಪಟ್ಟಿದ್ದು. ತಂತ್ರಾಂಶಗಳನ್ನು ರೂಪಿಸುವಾಗ ಇಲ್ಲವೇ ಬದಲಾಯಿಸುವಾಗ ಹೊಸ ಆಲೋಚನೆಗಳನ್ನು ಪ್ರಯೋಗಿಸಿ ನೋಡಲು ಬಳಕೆಯಾಗುವ ಕಂಪ್ಯೂಟರ್ ವ್ಯವಸ್ಥೆಯನ್ನು ಸ್ಯಾಂಡ್‌ಬಾಕ್ಸ್ ಎಂದು ಕರೆಯುತ್ತಾರೆ. ಗ್ರಾಹಕರು ಬಳಸುತ್ತಿರುವ ವ್ಯವಸ್ಥೆಗೂ ಸ್ಯಾಂಡ್‌ಬಾಕ್ಸ್‌ಗೂ ಯಾವುದೇ ರೀತಿಯ ನೇರ ಸಂಪರ್ಕ ಇರುವುದಿಲ್ಲವಾದ್ದರಿಂದ ತಂತ್ರಜ್ಞರು ಇಲ್ಲಿ ಮುಕ್ತವಾಗಿ ಪ್ರಯೋಗಗಳನ್ನು ಮಾಡುವುದು ಸಾಧ್ಯವಾಗುತ್ತದೆ, ಮರಳಿನ ಗುಡ್ಡೆಯಲ್ಲಿ ಮಕ್ಕಳು ಆಡಿದಂತೆ! ಕಂಪ್ಯೂಟರ್ ಸುರಕ್ಷತೆಯ (ಸೆಕ್ಯೂರಿಟಿ) ಕ್ಷೇತ್ರದಲ್ಲೂ ಸ್ಯಾಂಡ್‌ಬಾಕ್ಸ್‌ನ ಪರಿಕಲ್ಪನೆ ಇದೆ. ಅಪರಿಚಿತ ಅಥವಾ ನಂಬಲರ್ಹವೆನಿಸದ ತಂತ್ರಾಂಶಗಳನ್ನು ಬಳಸಬೇಕಾದಾಗ ಅವುಗಳ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಲು, ಸಂಶಯಾಸ್ಪದ ಹೆಜ್ಜೆಗಳಿಗೆ ತಡೆಯೊಡ್ಡಲು ಬಳಕೆಯಾಗುವ ವ್ಯವಸ್ಥೆಯ ಹೆಸರೂ ಸ್ಯಾಂಡ್‌ಬಾಕ್ಸ್ ಎಂದೇ. ಸಮುದಾಯದ ನೆರವಿನಿಂದ ರೂಪುಗೊಂಡಿರುವ, ಬೆಳೆಯುತ್ತಿರುವ ಆನ್‌ಲೈನ್ ವಿಶ್ವಕೋಶ ವಿಕಿಪೀಡಿಯದಲ್ಲೂ ಸ್ಯಾಂಡ್‌ಬಾಕ್ಸ್ ಇದೆ. ಹೊಸದಾಗಿ ಬರೆಯಲು ಹೊರಟವರು ಲೇಖನಗಳನ್ನು ಸೇರಿಸುವ - ಬದಲಿಸುವ ಮುನ್ನ ಆ ಪ್ರಕ್ರಿಯೆಯನ್ನು, ಅಲ್ಲಿನ ಆಯ್ಕೆಗಳನ್ನು ಅಭ್ಯಾಸಮಾಡಲು ನೆರವಾಗುವ ಪುಟವನ್ನು ಅಲ್ಲಿ ಸ್ಯಾಂಡ್‌ಬಾಕ್ಸ್ ಎಂದು ಕರೆಯುತ್ತಾರೆ.

Hard Disk
ಹಾರ್ಡ್‌ಡಿಸ್ಕ್
(ರೂಪಿಸಬೇಕಿದೆ)
ಮಾಹಿತಿ ಶೇಖರಣಾ ಮಾಧ್ಯಮಗಳಲ್ಲೊಂದು; ಇಲ್ಲಿ ಮಾಹಿತಿ ಶೇಖರಣೆಗಾಗಿ ಲೋಹದ ತಟ್ಟೆಗಳು ಬಳಕೆಯಾಗುವುದರಿಂದ ಇದನ್ನು ಹಾರ್ಡ್ ಡಿಸ್ಕ್ ಎಂದು ಕರೆಯುತ್ತಾರೆ.
ಕಂಪ್ಯೂಟರಿನ ಭಾಗಗಳ ಬಗ್ಗೆ ಕೇಳಿದಾಗ ನಮಗೆ ಥಟ್ಟನೆ ನೆನಪಾಗುವ ಹೆಸರುಗಳ ಪೈಕಿ ಹಾರ್ಡ್ ಡಿಸ್ಕ್ ಕೂಡ ಒಂದು. ಮತ್ತೊಮ್ಮೆ ಬಳಸಲು ಬೇಕಾದ ಮಾಹಿತಿಯನ್ನು ಉಳಿಸಿಡಲು ನಾವು ಈ ಸಾಧನವನ್ನು ಬಳಸುತ್ತೇವೆ. ಇದು ಕಂಪ್ಯೂಟರಿನ ಸೆಕೆಂಡರಿ ಮೆಮೊರಿಗೆ ಒಂದು ಉದಾಹರಣೆ. ಹಾರ್ಡ್ ಡಿಸ್ಕ್ ಎನ್ನುವ ಹೆಸರಿಗೆ ಕಾರಣ ಅದರಲ್ಲಿ ಬಳಕೆಯಾಗುವ ಲೋಹದ ತಟ್ಟೆಗಳು. ಅಯಸ್ಕಾಂತೀಯ ಲೇಪನವಿರುವ ಈ ತಟ್ಟೆಗಳ ಮೇಲೆ ಓಡಾಡುವ ಒಂದು ಪುಟ್ಟ ಕಡ್ಡಿಯಂತಹ ಸಾಧನ ನಮ್ಮ ಮಾಹಿತಿಯನ್ನು ಅಲ್ಲಿ ಬರೆದಿಡುತ್ತದೆ, ಬರೆದಿಟ್ಟ ಮಾಹಿತಿಯನ್ನು ಮತ್ತೆ ಓದಲೂ ನೆರವಾಗುತ್ತದೆ. ಈ ತಟ್ಟೆಗಳು, ಓದು-ಬರಹದ ಕಡ್ಡಿ, ಅದು ಓಡಾಡಲು ಬೇಕಾದ ವ್ಯವಸ್ಥೆಯೆಲ್ಲ ಸೇರಿದ್ದೇ ಹಾರ್ಡ್ ಡಿಸ್ಕ್ ಡ್ರೈವ್ (ಎಚ್‌ಡಿಡಿ). ಇದನ್ನು ನಾವು ಸರಳವಾಗಿ ಹಾರ್ಡ್ ಡಿಸ್ಕ್ ಎಂದು ಕರೆಯುತ್ತೇವೆ ಅಷ್ಟೆ: ಕಂಪ್ಯೂಟರಿನ ಒಳಗೆ ಅಡಕವಾಗಿರುವುದು ಇಂಟರ್ನಲ್ ಹಾರ್ಡ್ ಡಿಸ್ಕ್, ಪ್ರತ್ಯೇಕವಾಗಿ ಹೊರಗಿನಿಂದ ಜೋಡಿಸಬಹುದಾದದ್ದು ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್. ಪೆನ್‌ಡ್ರೈವ್ ಇತ್ಯಾದಿಗಳಿಗೆ ಹೋಲಿಸಿದರೆ ಹಾರ್ಡ್ ಡಿಸ್ಕ್‌ನಲ್ಲಿ ಶೇಖರಿಸಿಡಬಹುದಾದ ಮಾಹಿತಿಯ ಪ್ರಮಾಣ ಹೆಚ್ಚು, ಅದಕ್ಕೆ ತಗಲುವ ವೆಚ್ಚ ಕಡಿಮೆ. ಆದರೆ ಇಲ್ಲಿ ಚಲಿಸುವ ಭಾಗಗಳಿರುವುದರಿಂದ ಮಾಹಿತಿಯನ್ನು ಓದಿ-ಬರೆಯುವ ವೇಗ ಕಡಿಮೆ, ಯಾಂತ್ರಿಕ ವೈಫಲ್ಯದ ಸಾಧ್ಯತೆಯೂ ಉಂಟು. ಹಾಗಾಗಿ ಈಚೆಗೆ ಎಚ್‌ಡಿಡಿಗೆ ಪರ್ಯಾಯವಾಗಿ ಬಳಸಬಹುದಾದ ತಂತ್ರಜ್ಞಾನಗಳೂ ರೂಪುಗೊಳ್ಳುತ್ತಿವೆ.


logo