logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Blacklist
ಬ್ಲ್ಯಾಕ್‌ಲಿಸ್ಟ್
ಕಪ್ಪುಪಟ್ಟಿ
ವೀಕ್ಷಿಸಲು ಅನುಮತಿಯಿಲ್ಲದ ಜಾಲತಾಣಗಳ ಪಟ್ಟಿ
ಕಾಮಗಾರಿಯೊಂದರ ಗುಣಮಟ್ಟದ ಬಗ್ಗೆ ಗಲಾಟೆಯಾದಾಗ ಸಂಬಂಧಪಟ್ಟ ಗುತ್ತಿಗೆದಾರರನ್ನೋ ಕಚ್ಚಾಸಾಮಗ್ರಿ ಪೂರೈಸಿದವರನ್ನೋ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎನ್ನುವ ಹೇಳಿಕೆ ಸಾಮಾನ್ಯವಾಗಿ ಕೇಳಸಿಗುತ್ತದೆ. ಕಪ್ಪುಪಟ್ಟಿ ಎಂಬ ಈ ಹೆಸರಿನ ಮೂಲ ಇಂಗ್ಲಿಷಿನ 'ಬ್ಲ್ಯಾಕ್‌ಲಿಸ್ಟ್'. ಯಾವುದೇ ಉದ್ದೇಶಕ್ಕೆ ಏನನ್ನು ಬಳಸಬಾರದು ಎಂದು ಸೂಚಿಸುವುದು ಈ ಪಟ್ಟಿಯ ಕೆಲಸ. ಗುತ್ತಿಗೆದಾರರ ಉದಾಹರಣೆಯನ್ನೇ ತೆಗೆದುಕೊಂಡರೆ ಮುಂದಿನ ಕಾಮಗಾರಿಯ ಗುತ್ತಿಗೆಯನ್ನು ಕಪ್ಪುಪಟ್ಟಿಯಲ್ಲಿಲ್ಲದವರಿಗೆ ಮಾತ್ರವೇ ಕೊಡುವುದು ಸಾಧ್ಯ. ಈ ಪರಿಕಲ್ಪನೆಗೆ ಡಿಜಿಟಲ್ ಜಗತ್ತಿನಲ್ಲೂ ಅಸ್ತಿತ್ವವಿದೆ. ಯಾವುದೋ ಸಂಸ್ಥೆಯಲ್ಲಿ ನಿರ್ದಿಷ್ಟ ಜಾಲತಾಣಗಳನ್ನು (ಉದಾ: ಸಮಾಜಜಾಲಗಳು, ವೀಡಿಯೋ ತಾಣಗಳು) ನೋಡಲು ಅನುಮತಿಯಿಲ್ಲ ಎನ್ನುವುದಾದರೆ ಅವರು ಆ ತಾಣಗಳನ್ನೆಲ್ಲ ತಮ್ಮ ವ್ಯವಸ್ಥೆಯ ಕಪ್ಪುಪಟ್ಟಿಗೆ ಸೇರಿಸುತ್ತಾರೆ. ಯಾರಾದರೂ ಆ ತಾಣವನ್ನು ತೆರೆಯಲು ಪ್ರಯತ್ನಿಸಿದರೆ ಅವರಿಗೆ "ಈ ತಾಣ ತೆರೆಯುವಂತಿಲ್ಲ"ವೆಂಬ ಸಂದೇಶವಷ್ಟೇ ಕಾಣಿಸುತ್ತದೆ. ನಿರ್ದಿಷ್ಟ ತಾಣಗಳನ್ನು ನಿರ್ಬಂಧಿಸುವ ಬದಲು ಕೆಲವೇ ತಾಣಗಳನ್ನು ವೀಕ್ಷಿಸಲು ಅನುಮತಿನೀಡುವುದೂ ಸಾಧ್ಯ. ಕಚೇರಿಯಲ್ಲಿದ್ದಾಗ ಜಿಮೇಲ್ ತಾಣವನ್ನಷ್ಟೇ ಬಳಸಬಹುದು ಎನ್ನುವುದಾದರೆ ಅದನ್ನು ಆ ಸಂಸ್ಥೆ ತನ್ನ ವ್ಯವಸ್ಥೆಯ ವೈಟ್‌ಲಿಸ್ಟ್‌ಗೆ (ಬಿಳಿಪಟ್ಟಿ) ಸೇರಿಸಬೇಕಾಗುತ್ತದೆ. ಬಿಳಿಪಟ್ಟಿಯಲ್ಲಿ ಯಾವ ತಾಣಗಳಿವೆಯೋ ಬಳಕೆದಾರರು ಅವನ್ನು ಮಾತ್ರ ತೆರೆಯುವುದು ಸಾಧ್ಯವಾಗುತ್ತದೆ. ಸೂಕ್ತ ಆಪ್‌ಗಳನ್ನು ಬಳಸಿ ಈ ಪರಿಕಲ್ಪನೆಯನ್ನು ಮೊಬೈಲ್ ಫೋನಿನಲ್ಲೂ ಅಳವಡಿಸುವುದು ಸಾಧ್ಯ. ಅನಗತ್ಯವಾಗಿ ಕಿರಿಕಿರಿಯುಂಟುಮಾಡುವ ಕರೆಗಳಿಂದ ಪಾರಾಗಲು ಬಳಸಬಹುದಾದ ಆಪ್‌ಗಳನ್ನು ನಿಮ್ಮ ಸ್ಮಾರ್ಟ್‌ಫೋನಿನ ಆಪ್‌ಸ್ಟೋರಿನಲ್ಲಿ ಹುಡುಕಬಹುದು. ಯಾವುದೇ ಆಪ್ ಬಳಸುವ ಮುನ್ನ ಅವುಗಳ ವಿಮರ್ಶೆಯನ್ನು ಪರಿಶೀಲಿಸಲು ಮರೆಯಬೇಡಿ.
">

Multitouch
ಮಲ್ಟಿಟಚ್
(ರೂಪಿಸಬೇಕಿದೆ)
ಟಚ್‌ಸ್ಕ್ರೀನನ್ನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚುಕಡೆ ಸ್ಪರ್ಶಿಸಿದಾಗಲೂ ಅದು ಪ್ರತಿಕ್ರಿಯೆ ನೀಡುವುದನ್ನು ಸಾಧ್ಯವಾಗಿಸುವ ತಂತ್ರಜ್ಞಾನ
ಯಾವುದೇ ಟಚ್‌ಸ್ಕ್ರೀನನ್ನು ನಿರ್ದಿಷ್ಟ ಸ್ಥಳದಲ್ಲಿ ಮುಟ್ಟಿದರೆ ಅದು ಪೂರ್ವನಿರ್ಧಾರಿತ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು (ಉದಾ: ಐಕನ್ ಸ್ಪರ್ಶಿಸಿದರೆ ಆಪ್ ತೆರೆದುಕೊಳ್ಳುವುದು) ನಮಗೆ ಗೊತ್ತು. ಪರದೆಯ ಮೇಲೆ ಮೂಡುವ ಕೀಬೋರ್ಡ್ ಕೀಲಿಗಳನ್ನು ಸ್ಪರ್ಶಿಸಿದಾಗ ಅಕ್ಷರ-ಚಿಹ್ನೆಗಳು ಮೂಡುವುದೂ ಗೊತ್ತು. ಟಚ್‌ಸ್ಕ್ರೀನನ್ನು ಸ್ಪರ್ಶಿಸಿದಾಗ ಅದರ ವಿದ್ಯುತ್ ಕ್ಷೇತ್ರದಲ್ಲಿ (ಇಲೆಕ್ಟ್ರಿಕಲ್ ಫೀಲ್ಡ್) ಆಗುವ ಬದಲಾವಣೆಗಳನ್ನು ಗ್ರಹಿಸುವ ಮೂಲಕ ಇದೆಲ್ಲ ಸಾಧ್ಯವಾಗುತ್ತದೆ. ಆದರೆ ಇದೆಲ್ಲ ಒಂದು ಸ್ಪರ್ಶದ ವಿಷಯವಾಯಿತು. ಏಕಕಾಲದಲ್ಲಿ ಟಚ್‌ಸ್ಕ್ರೀನನ್ನು ಒಂದಕ್ಕಿಂತ ಹೆಚ್ಚುಕಡೆ ಸ್ಪರ್ಶಿಸಿದಾಗಲೂ ಅದು ಪ್ರತಿಕ್ರಿಯೆ ನೀಡುವುದನ್ನು ಸಾಧ್ಯವಾಗಿಸುವ ತಂತ್ರಜ್ಞಾನವೇ 'ಮಲ್ಟಿಟಚ್'. ಎರಡು ಬೆರಳುಗಳನ್ನು ಬಳಸಿ ಚಿತ್ರವನ್ನು ಜೂಮ್ ಮಾಡುವಾಗ (ಪಿಂಚ್), ಇ-ಪುಸ್ತಕಗಳನ್ನು ಓದುವಾಗ ಪುಟದ ಅಂಚನ್ನು ಸವರಿ ಮುಂದಿನ ಪುಟಕ್ಕೆ ಹೋಗುವಾಗಲೆಲ್ಲ ಬಳಕೆಯಾಗುವುದು ಇದೇ ತಂತ್ರಜ್ಞಾನ. ಟಚ್‌ಸ್ಕ್ರೀನಿನ ಯಾವ ಒಂದು ಭಾಗವನ್ನು ಮುಟ್ಟಿದ್ದೇವೆ ಎನ್ನುವುದನ್ನು ಗಮನಿಸುವ ಬದಲು ಇಡೀ ಪರದೆಯ ಯಾವಯಾವ ಭಾಗಗಳನ್ನು ಹೇಗೆ (ಉದಾ: ಎಷ್ಟು ಒತ್ತಡದೊಡನೆ) ಸ್ಪರ್ಶಿಸಲಾಗಿದೆ ಎಂದು ಈ ತಂತ್ರಜ್ಞಾನ ಗ್ರಹಿಸಿಕೊಳ್ಳುತ್ತದೆ ಮತ್ತು ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುತ್ತದೆ.

Modular Phone
ಮಾಡ್ಯುಲರ್ ಫೋನ್
(ರೂಪಿಸಬೇಕಿದೆ)
ಮೊಬೈಲ್ ಫೋನಿನಲ್ಲಿ ಬೇಕಾದ ಭಾಗಗಳನ್ನು ಬೇಕಾದಾಗ ಸೇರಿಸಿಕೊಳ್ಳಲು - ಬದಲಿಸಿಕೊಳ್ಳಲು ಅನುವುಮಾಡಿಕೊಡುವ ಪರಿಕಲ್ಪನೆ
ಬೇರೆಬೇರೆ ಸಂಸ್ಥೆಗಳು ತಯಾರಿಸಿದ ಭಾಗಗಳನ್ನು ಕೊಂಡು ಒಟ್ಟಿಗೆ ಜೋಡಿಸಿ ಕಂಪ್ಯೂಟರ್ ರೂಪಿಸಿಕೊಳ್ಳುತ್ತೇವಲ್ಲ, ಬೇಕಾದಾಗ ಬೇಕಾದ ಭಾಗವನ್ನಷ್ಟೆ ಸೇರಿಸಿಕೊಳ್ಳಲು, ಬದಲಿಸಿಕೊಳ್ಳಲು ಅನುವುಮಾಡಿಕೊಡುವುದು ಅವುಗಳ ಪ್ರಮುಖ ವೈಶಿಷ್ಟ್ಯ. ಹೀಗೆ ಮೊಬೈಲುಗಳನ್ನೂ ಅಪ್‌ಗ್ರೇಡ್ ಮಾಡುವಂತಿದ್ದರೆ? ರ್‍ಯಾಮ್ ಸಾಲದೆಹೋದಾಗ ಒಂದೆರಡು ಜಿಬಿ ಹೆಚ್ಚುವರಿ ರ್‍ಯಾಮ್ ಸೇರಿಸುವಂತಿದ್ದರೆ, ಕ್ಯಾಮೆರಾ ಚೆನ್ನಾಗಿಲ್ಲ ಎನ್ನಿಸಿದಾಗ ಹೊಸ ಕ್ಯಾಮೆರಾ ಅಳವಡಿಸಿಕೊಳ್ಳುವಂತಿದ್ದರೆ? 'ಮಾಡ್ಯುಲರ್ ಫೋನ್' ಎಂಬ ಪರಿಕಲ್ಪನೆ ಈ ಕನಸನ್ನು ನನಸಾಗಿಸಲು ಹೊರಟಿದೆ. ಒಂದಷ್ಟು ಭಾಗಗಳನ್ನು ಭದ್ರವಾಗಿ ಮುಚ್ಚಿಟ್ಟು ಮೊಬೈಲ್ ರೂಪಿಸುವ ಬದಲು, ಬೇಕಾದ ಭಾಗಗಳನ್ನು ಬೇಕಾದಾಗ ಸೇರಿಸಿಕೊಳ್ಳಲು - ಬದಲಿಸಿಕೊಳ್ಳಲು ಅನುವುಮಾಡಿಕೊಡುವ ಫೋನುಗಳ ಹಿಂದಿರುವುದು ಇದೇ ಪರಿಕಲ್ಪನೆ. ಉತ್ತಮ ಕ್ಯಾಮೆರಾ, ಹೆಚ್ಚುವರಿ ಬ್ಯಾಟರಿ ಸಾಮರ್ಥ್ಯ, ಹೊಸ ಸ್ಪೀಕರ್ - ಹೀಗೆ ಅನೇಕ ಭಾಗಗಳನ್ನು ಈ ಪರಿಕಲ್ಪನೆಯನ್ವಯ ರೂಪುಗೊಂಡಿರುವ ಫೋನುಗಳಿಗೆ ಸೇರಿಸುವುದು ಈಗಾಗಲೇ ಸಾಧ್ಯವಾಗಿದೆ. ಇಂತಹ ಫೋನುಗಳು ಸದ್ಯಕ್ಕೆ ಕೊಂಚ ದುಬಾರಿಯೆನ್ನಿಸಬಹುದು; ಆದರೆ ಮುಂದಿನ ದಿನಗಳಲ್ಲಿ ಈ ಪರಿಕಲ್ಪನೆಯಿಂದ ಫೋನುಗಳನ್ನು ಪದೇಪದೇ ಬದಲಿಸಬೇಕಾದ ಪರಿಸ್ಥಿತಿ ನಿವಾರಣೆಯಾಗುವುದಷ್ಟೇ ಅಲ್ಲ, ಇ-ಕಸದ ಸಮಸ್ಯೆ ಹಾಗೂ ಸಂಪನ್ಮೂಲಗಳಿಗಾಗಿ ಪರಿಸರದ ಮೇಲಿನ ಒತ್ತಡವೂ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.

Malware
ಮಾಲ್‌ವೇರ್
ಕುತಂತ್ರಾಂಶ
ಕಂಪ್ಯೂಟರ್ - ಸ್ಮಾರ್ಟ್‌ಫೋನ್ ಮುಂತಾದ ಸಾಧನಗಳ ಕಾರ್ಯಾಚರಣೆಗೆ ತೊಂದರೆಮಾಡುವುದನ್ನೇ ಉದ್ದೇಶವಾಗಿಟ್ಟುಕೊಂಡ ತಂತ್ರಾಂಶ
ಸಾಫ್ಟ್‌ವೇರ್‌ನಿಂದ (ತಂತ್ರಾಂಶ) ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಒಳ್ಳೆಯ ಉದ್ದೇಶಕ್ಕೆ ತಂತ್ರಾಂಶಗಳಿರುವಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು (ಮಾಲ್‌ವೇರ್ - ಕುತಂತ್ರಾಂಶ) ರೂಪುಗೊಂಡಿರುವುದು ಇದಕ್ಕೆ ಕಾರಣ. ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನಿನಂತಹ ಸಾಧನಗಳ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಹಾಳುಮಾಡುವುದು, ಖಾಸಗಿ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು - ಹೀಗೆ ಕುತಂತ್ರಾಂಶಗಳು ಬೇಕಾದಷ್ಟು ಬಗೆಯಲ್ಲಿ ತೊಂದರೆಕೊಡುತ್ತವೆ. ವೈರಸ್, ಟ್ರೋಜನ್, ಸ್ಪೈವೇರ್, ಆಡ್‌ವೇರ್ ಇವೆಲ್ಲ ಕುತಂತ್ರಾಂಶಗಳಿಗೆ ಉದಾಹರಣೆಗಳು. ರೋಗ ಬಾರದಂತಿರಲು, ಹಾಗೂ ಬಂದಾಗ ಅದನ್ನು ವಾಸಿಮಾಡಿಕೊಳ್ಳಲು ನಾವು ಔಷಧಿ ತೆಗೆದುಕೊಳ್ಳುತ್ತೇವಲ್ಲ, ಕಂಪ್ಯೂಟರುಗಳ ಪಾಲಿಗೆ ಅಂತಹ ಔಷಧಿಯೆಂದರೆ ಆಂಟಿವೈರಸ್ ತಂತ್ರಾಂಶ. ಆಂಟಿವೈರಸ್ ಬಳಸುವ ಮೂಲಕ ನಾವು ನಮ್ಮ ಕಂಪ್ಯೂಟರನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು. ನಾರ್ಟನ್, ಮೆಕ್‌ಆಫೀ, ಅವಾಸ್ತ್ ಮುಂತಾದ ಹಲವು ಆಂಟಿವೈರಸ್‌ಗಳು ಮಾರುಕಟ್ಟೆಯಲ್ಲಿವೆ. ಈ ಪೈಕಿ ಕೆಲವನ್ನು ಬಳಸಲು ಹಣ ಕೊಡಬೇಕಾಗುತ್ತದೆಯಾದರೆ ಇನ್ನು ಕೆಲವು ಉಚಿತವಾಗಿಯೇ ಸಿಗುತ್ತವೆ. ಆಂಟಿವೈರಸ್ ತಂತ್ರಾಂಶ ಇನ್‌ಸ್ಟಾಲ್ ಮಾಡಿಕೊಂಡ ನಂತರವೂ ಕುತಂತ್ರಾಂಶಗಳಿಂದ ಸುರಕ್ಷಿತವಾಗಿರಲು ಅದನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು.

Mirror Site
ಮಿರರ್ ಸೈಟ್
(ರೂಪಿಸಬೇಕಿದೆ)
ಯಾವುದೇ ಜಾಲತಾಣಕ್ಕೆ ಬದಲಿಯಾಗಿ ಕೆಲಸಮಾಡುವ, ಬೇರೊಂದು ಸರ್ವರ್‌ನಲ್ಲಿ ಉಳಿಸಿಟ್ಟಿರುವ ಅದರ ಪ್ರತಿ
ಜಾಲತಾಣಗಳಿಂದ ನಾವು ಒಂದಲ್ಲ ಒಂದು ರೀತಿಯ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಲೇ ಇರುತ್ತೇವೆ. ಕಡತಗಳನ್ನು - ತಂತ್ರಾಂಶಗಳನ್ನು ಪಡೆದುಕೊಳ್ಳುವಾಗಲಂತೂ ನಾವು ಡೌನ್‌ಲೋಡ್ ಮಾಡಿಕೊಳ್ಳುವ ಮಾಹಿತಿಯ ಪ್ರಮಾಣ ಸಾಕಷ್ಟು ದೊಡ್ಡದಾಗಿಯೇ ಇರುತ್ತದೆ. ದೊಡ್ಡ ಕಡತಗಳನ್ನು ಎಲ್ಲರೂ ಒಂದೇ ಕಡೆಯಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕೆಂದರೆ ಆ ಸರ್ವರಿನ ಸಾಮರ್ಥ್ಯ ಹೆಚ್ಚಿರಬೇಕು. ಒಂದುವೇಳೆ ಹಾಗಿಲ್ಲದೆ ಹೋದರೆ ಡೌನ್‌ಲೋಡ್‌ಗಳು ನಿಧಾನವಾಗಿಬಿಡುತ್ತವೆ, ಇಲ್ಲವೇ ಕೆಲವು ಬಳಕೆದಾರರಿಗೆ ಆ ಮಾಹಿತಿ ಸಿಗುವುದೇ ಇಲ್ಲ. ಈ ಪರಿಸ್ಥಿತಿ ತಪ್ಪಿಸಲು ಅನೇಕ ತಾಣಗಳು ತಮ್ಮ ಮಾಹಿತಿಯ ಒಂದಕ್ಕಿಂತ ಹೆಚ್ಚು ಪ್ರತಿಗಳನ್ನು ನಿರ್ವಹಿಸುತ್ತವೆ. ಈ ಎಲ್ಲ ಪ್ರತಿಗಳಲ್ಲೂ ಮೂಲ ತಾಣದಲ್ಲಿರುವ ಮಾಹಿತಿಯೇ ಇರುವುದರಿಂದ ಅವನ್ನು 'ಮಿರರ್ ಸೈಟ್'ಗಳೆಂದು ಕರೆಯುತ್ತಾರೆ (ಮಿರರ್ ಪದದ ಬಳಕೆ ಕನ್ನಡಿ ಎಂಬ ಅರ್ಥದಲ್ಲಿ). ಒಂದೇ ಮಾಹಿತಿಯನ್ನು ಬೇರೆಬೇರೆ ಬಳಕೆದಾರರು ಬೇರೆಬೇರೆ ತಾಣಗಳಿಂದ ಪಡೆದುಕೊಳ್ಳುವುದನ್ನು, ಹಾಗೂ ಆ ಮೂಲಕ ಡೌನ್‌ಲೋಡ್‌ಗಳು ಬೇಗನೆ ಪೂರ್ಣವಾಗುವುದನ್ನು ಸಾಧ್ಯವಾಗಿಸುವುದು ಮಿರರ್ ಸೈಟುಗಳ ವೈಶಿಷ್ಟ್ಯ. ಡೌನ್‌ಲೋಡ್‌ಗಳಿಗಷ್ಟೇ ಅಲ್ಲ, ಜಾಲತಾಣಕ್ಕೆ ಭೇಟಿಕೊಡುವವರ ಸಂಖ್ಯೆ ಹೆಚ್ಚಿದಾಗ ಆ ಟ್ರಾಫಿಕ್ ಅನ್ನು ನಿಭಾಯಿಸಲೂ ಮಿರರ್ ತಾಣಗಳನ್ನು ಬಳಸಬಹುದು. ಬೇರೆಬೇರೆ ಪ್ರದೇಶಗಳಲ್ಲಿರುವ ಬಳಕೆದಾರರು ನಿರ್ದಿಷ್ಟ ತಾಣ ತೆರೆದಾಗ ಅವರನ್ನು ತಮ್ಮ ಸಮೀಪದ ಮಿರರ್‌ನತ್ತ ನಿರ್ದೇಶಿಸುವುದೂ ಸಾಧ್ಯ. ಯಾವುದೋ ಒಂದು ಸರ್ವರ್ ವಿಫಲವಾದ ಸಂದರ್ಭದಲ್ಲಿ ಜಾಲತಾಣದ ಕಾರ್ಯಾಚರಣೆಯನ್ನು ಮಿರರ್ ತಾಣಗಳ ನೆರವಿನಿಂದ ತಕ್ಷಣವೇ ಮುಂದುವರೆಸುವುದು ಕೂಡ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಜಾಲತಾಣಗಳಲ್ಲಿರುವ ಮಾಹಿತಿಯ ಬ್ಯಾಕಪ್ ತೆಗೆದಿಟ್ಟುಕೊಳ್ಳಲೂ ಮಿರರ್ ತಾಣಗಳನ್ನು ಬಳಸುವ ಅಭ್ಯಾಸವಿದೆ (ಇತರರ ಮಾಹಿತಿಯನ್ನು ನಕಲಿಸಿಕೊಳ್ಳುವ ಕೃತಿಚೋರರೂ ಬೇರೆ ತಾಣಗಳ ಮಿರರ್ ಸೃಷ್ಟಿಸಿಕೊಳ್ಳುವುದು ತಾಂತ್ರಿಕವಾಗಿ ಸಾಧ್ಯ). ವಿವಾದಾಸ್ಪದ ಜಾಲತಾಣಗಳನ್ನು ನಿರ್ಬಂಧಿಸಿದ ಸಂದರ್ಭಗಳಲ್ಲಿ ಅವುಗಳ ಇನ್ನೊಂದು ಪ್ರತಿಯನ್ನು ಬೇರೊಂದು ದೇಶದಿಂದ ಪ್ರಕಟಿಸುವುದಕ್ಕೂ ಮಿರರ್ ತಾಣಗಳು ಬಳಕೆಯಾದ ಉದಾಹರಣೆಗಳಿವೆ.

Meme
ಮೀಮ್
(ರೂಪಿಸಬೇಕಿದೆ)
ನಿರ್ದಿಷ್ಟ ವಿಷಯ ಕುರಿತು ರೂಪಿಸಲಾಗಿರುವ ಪಠ್ಯ ಹಾಗೂ ಚಿತ್ರದ ಜೋಡಣೆ; ಇವು ವಿಶ್ವವ್ಯಾಪಿ ಜಾಲದಲ್ಲಿ ವ್ಯಾಪಕವಾಗಿ ಕಾಣಸಿಗುತ್ತವೆ.
ಯಾವುದೋ ವಿಷಯಕ್ಕೆ ಸಂಬಂಧಪಟ್ಟ ಒಂದು ಚಿತ್ರ, ಅದರ ಮೇಲೆ-ಕೆಳಗೆ ಒಂದೆರಡು ಸಾಲಿನ ಬರಹ ಇರುವ ಹಲವಾರು ಪೋಸ್ಟುಗಳು ಸಮಾಜಜಾಲಗಳಲ್ಲಿ ಹರಿದಾಡುವುದನ್ನು ನೀವು ನೋಡಿರಬಹುದು. ಸಿನಿಮಾಗಳು, ನಟ ನಟಿಯರು, ಕ್ರೀಡೆ, ಟೀವಿ ಕಾರ್ಯಕ್ರಮ, ಪ್ರಚಲಿತ ವಿದ್ಯಮಾನ - ಹೀಗೆ ಇಂತಹ ಚಿತ್ರರೂಪದ ಪೋಸ್ಟುಗಳು ಹಲವು ವಿಷಯಗಳ ಕುರಿತು ಇರಬಹುದು. ಇಂಟರ್‌ನೆಟ್ ಮೀಮ್‌ಗಳೆಂದು ಕರೆಯುವುದು ಇವನ್ನೇ. ಸಮಾಜಜಾಲದ ಗುಂಪುಗಳಲ್ಲಿ ಮೊದಲಿಗೆ ಕಾಣಿಸಿಕೊಂಡು ಒಬ್ಬ ಬಳಕೆದಾರನಿಂದ ಇನ್ನೊಬ್ಬರಿಗೆ, ಒಂದು ಗುಂಪಿನಿಂದ ಇನ್ನೊಂದಕ್ಕೆ ಪ್ರಸಾರವಾಗುತ್ತ ಸಾಗುವುದು ಮೀಮ್‌ಗಳ ವೈಶಿಷ್ಟ್ಯ. ಇವುಗಳಲ್ಲಿ ಬಳಕೆಯಾಗುವ ಬರಹದ ಶೈಲಿಯಲ್ಲಿ ತಿಳಿಹಾಸ್ಯದಿಂದ ಅಪಹಾಸ್ಯದವರೆಗೆ ಅನೇಕ ಛಾಯೆಗಳನ್ನು ನೋಡಬಹುದು. ನಗೆಯುಕ್ಕಿಸುವ ಮೀಮ್‌ಗಳು ಕಾಣಸಿಗುವಂತೆಯೇ ದ್ವೇಷಸಾಧನೆ ಹಾಗೂ ಇತರರ ಅವಹೇಳನವನ್ನೇ ಗುರಿಯಾಗಿಟ್ಟುಕೊಂಡ ಮೀಮ್‌ಗಳೂ ವ್ಯಾಪಕವಾಗಿ ಸಿಗುತ್ತವೆ. ದೇಶ - ಭಾಷೆ - ರಾಜಕೀಯ ಅಭಿಪ್ರಾಯಗಳಲ್ಲಿನ ವೈರುಧ್ಯದಿಂದ ಹಲವು ಮೀಮ್‌ಗಳು ವಿವಾದಕ್ಕೆ ಕಾರಣವಾಗಿರುವುದೂ ಉಂಟು. ಫೇಸ್‌ಬುಕ್ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಕನ್ನಡದ ಮೀಮ್‌ಗಳಿಗೆಂದೇ ಮೀಸಲಾದ ಹಲವು ಪುಟಗಳನ್ನು ನಾವು ನೋಡಬಹುದು. ವಿದೇಶಿ ಮೂಲದ ಛಾಯಾಚಿತ್ರಗಳಿಗೆ ಕನ್ನಡ ಪಠ್ಯ ಸೇರಿಸಿರುವ, ಕನ್ನಡದ ಸಂದರ್ಭಕ್ಕೆಂದೇ ಹೊಸದಾಗಿ ರೂಪಿಸಿರುವ ಅನೇಕ ಮೀಮ್‌ಗಳನ್ನು ನಾವು ಇಲ್ಲಿ ನೋಡಬಹುದು. ಇತರರು ರೂಪಿಸಿದ ಮೀಮ್‌ಗಳನ್ನು ನೋಡಿದರಷ್ಟೇ ಸಾಲದು, ನಾವೂ ಮೀಮ್ ಸೃಷ್ಟಿಸಬೇಕು ಎನ್ನುವುದಾದರೆ ಅದೂ ಸುಲಭ: ಯಾವುದೇ ಚಿತ್ರಕ್ಕೆ ನಮ್ಮ ಪಠ್ಯ ಸೇರಿಸಿ ಮೀಮ್‌ಗಳನ್ನು ಸೃಷ್ಟಿಸಲು ನೆರವಾಗುವ ಹಲವು ತಂತ್ರಾಂಶಗಳು ವಿಶ್ವವ್ಯಾಪಿ ಜಾಲದಲ್ಲಿ ಉಚಿತವಾಗಿ ದೊರಕುತ್ತವೆ.

Moore's Law
ಮೂರ್ ನಿಯಮ
(ರೂಪಿಸಬೇಕಿದೆ)
ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ವೇಗವನ್ನು ೧೯೬೫ರಷ್ಟು ಹಿಂದೆಯೇ ಸಮರ್ಥವಾಗಿ ಅಂದಾಜಿಸಿದ ಹೇಳಿಕೆ
ಕಂಪ್ಯೂಟರ್ ಅಷ್ಟೇ ಅಲ್ಲ, ಯಾವ ವಿದ್ಯುನ್ಮಾನ ಉಪಕರಣವನ್ನೇ ತೆಗೆದುಕೊಂಡರೂ ಅದರ ಮೆದುಳು-ಹೃದಯದ ಕೆಲಸವನ್ನೆಲ್ಲ ಮಾಡಲು ಕನಿಷ್ಠ ಒಂದಾದರೂ ಇಂಟಿಗ್ರೇಟೆಡ್ ಸರ್ಕ್ಯೂಟ್ (ಐಸಿ) ಇರುತ್ತದೆ; ಕಂಪ್ಯೂಟರಿನಲ್ಲಿ ಪ್ರಾಸೆಸರ್ ಇರುತ್ತದಲ್ಲ, ಹಾಗೆ. ಈ ಐಸಿಗಳಲ್ಲಿ ಬೇಕಾದಷ್ಟು ಟ್ರಾನ್ಸಿಸ್ಟರುಗಳಿರುತ್ತವೆ. ಸಾವಿರಗಳಷ್ಟೆ ಏಕೆ, ಲಕ್ಷಗಟ್ಟಲೆ ಟ್ರಾನ್ಸಿಸ್ಟರುಗಳು ಇಂತಹ ಐಸಿಗಳೊಳಗೆ ಅಡಕವಾಗಿರುತ್ತವೆ. ಒಂದು ಐಸಿಯಲ್ಲಿ ಹೆಚ್ಚುಹೆಚ್ಚು ಟ್ರಾನ್ಸಿಸ್ಟರುಗಳನ್ನು ಸೇರಿಸುವುದು ಸಾಧ್ಯವಾದಷ್ಟೂ ಆ ಐಸಿ ಬಳಸುವ ಉಪಕರಣದ ಗಾತ್ರ ಚಿಕ್ಕದಾಗುತ್ತದೆ; ಅಷ್ಟೇ ಅಲ್ಲ, ಅದರ ಕಾರ್ಯಕ್ಷಮತೆ ಕೂಡ ಹೆಚ್ಚುತ್ತದೆ. ಏಪ್ರಿಲ್ ೧೯೬೫ರ 'ಇಲೆಕ್ಟ್ರಾನಿಕ್ಸ್' ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಪ್ರತಿಯೊಂದು ಐಸಿಯಲ್ಲಿ ಅಡಕವಾಗುವ ಟ್ರಾನ್ಸಿಸ್ಟರುಗಳ ಸಂಖ್ಯೆಯ ಬಗೆಗೊಂದು ಹೇಳಿಕೆ ದಾಖಲಾಗಿತ್ತು. ಆ ಲೇಖನ ಬರೆದವರು ಇಂಟೆಲ್ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಗಾರ್ಡನ್ ಮೂರ್. ಐಸಿಗಳಲ್ಲಿರುವ ಟ್ರಾನ್ಸಿಸ್ಟರುಗಳ ಸಂಖ್ಯೆ ಸರಿಸುಮಾರು ಎರಡು ವರ್ಷಗಳಿಗೊಮ್ಮೆಯಂತೆ ದ್ವಿಗುಣಗೊಳ್ಳುತ್ತದೆ ಎನ್ನುವ ಈ ಹೇಳಿಕೆಯೇ ಮುಂದೆ 'ಮೂರ್ ನಿಯಮ' (Moore's Law) ಎಂದು ವಿಖ್ಯಾತವಾಯಿತು. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ವೇಗವನ್ನು ಅತ್ಯಂತ ಸಮರ್ಥವಾಗಿ ಅಂದಾಜಿಸಿದ್ದು ಈ ನಿಯಮದ ಹೆಚ್ಚುಗಾರಿಕೆ.

Metadata
ಮೆಟಾಡೇಟಾ
(ರೂಪಿಸಬೇಕಿದೆ)
ದತ್ತಾಂಶದ ಕುರಿತ ದತ್ತಾಂಶ
ಡೇಟಾ ಅಥವಾ ದತ್ತಾಂಶ ಎಂದತಕ್ಷಣ ನಮಗೆ ಹಲವಾರು ಸಂಗತಿಗಳು ನೆನಪಾಗುವುದು ಸಹಜ. ಬ್ಯಾಂಕಿನ ಜಮಾ-ಖರ್ಚು, ತಿಂಗಳ ದಿನಸಿಯ ಪಟ್ಟಿ, ಪರೀಕ್ಷೆಯಲ್ಲಿ ಪಡೆದ ಅಂಕ - ಹೀಗೆ ಒಂದಲ್ಲ ಒಂದು ಬಗೆಯ ದತ್ತಾಂಶ ನಮ್ಮ ಮನಸಿನಲ್ಲಿರುತ್ತದೆ (ಮೊಬೈಲಿನಲ್ಲಿ ಎಷ್ಟು ಡೇಟಾ ಖರ್ಚಾಯಿತು ಎನ್ನುವುದೂ ದತ್ತಾಂಶವೇ!). ಸಂಸ್ಥೆಗಳ ಲಾಭ-ನಷ್ಟದ ಲೆಕ್ಕ, ಶೇರು ಬೆಲೆಯ ಏರಿಳಿತ, ಉದ್ಯೋಗಿಗಳ ವಿವರಗಳೂ ದತ್ತಾಂಶಗಳೇ. ಈ ದತ್ತಾಂಶಗಳನ್ನೆಲ್ಲ ಕಂಪ್ಯೂಟರಿನಲ್ಲಿ ಉಳಿಸಿಡುವುದು, ಅಗತ್ಯಕ್ಕೆ ತಕ್ಕಂತೆ ಸಂಸ್ಕರಿಸುವುದು ಸಾಮಾನ್ಯ ಸಂಗತಿ. ಆದರೆ ಹೀಗೆ ಅಲ್ಲಿ ಸಂಗ್ರಹವಾಗುವ ದತ್ತಾಂಶದ ಕುರಿತು ಇನ್ನಷ್ಟು ದತ್ತಾಂಶ ಸೃಷ್ಟಿಯಾಗುತ್ತದೆ ಎನ್ನುವುದು ವಿಶೇಷ. ಈ ತಿಂಗಳ ದಿನಸಿ ಪಟ್ಟಿಯನ್ನು ಒಂದು ಕಡತದಲ್ಲಿ ಉಳಿಸಿಟ್ಟಿದ್ದೀರಿ ಎಂದುಕೊಳ್ಳೋಣ. ಆ ಕಡತದ ಹೆಸರೇನು, ಗಾತ್ರವೆಷ್ಟು, ಅದನ್ನು ರೂಪಿಸಿದ್ದು ಯಾರು, ಯಾವಾಗ ಎಂಬಂತಹ ವಿವರಗಳನ್ನೂ ನೀವು ಬಳಸಿದ ತಂತ್ರಾಂಶ ಆ ಕಡತದ ಜೊತೆಯಲ್ಲಿ ಉಳಿಸಿಡುತ್ತದೆ. ಅಂದರೆ, ನಿಮ್ಮ ದತ್ತಾಂಶದ ಕುರಿತ ದತ್ತಾಂಶ ಇದು. ತಾಂತ್ರಿಕ ಪರಿಭಾಷೆಯಲ್ಲಿ ಇದನ್ನು 'ಮೆಟಾಡೇಟಾ' ಎಂದು ಕರೆಯುತ್ತಾರೆ. ಅಂದಹಾಗೆ ಮೆಟಾಡೇಟಾ ಇರುವುದು ಕಡತಗಳ ಕುರಿತು ಮಾತ್ರವೇನಲ್ಲ. ವೆಬ್ ಪುಟಗಳಲ್ಲಿ ಹಾಗೂ ದತ್ತಸಂಚಯಗಳಲ್ಲಿ (ಡೇಟಾಬೇಸ್) ಕೂಡ ಮೆಟಾಡೇಟಾ ಬಳಕೆ ಸಾಮಾನ್ಯ.

Memory
ಮೆಮೊರಿ
(ರೂಪಿಸಬೇಕಿದೆ)
ಮಾಹಿತಿ ಶೇಖರಿಸುವ ಮಾಧ್ಯಮ
ಕಂಪ್ಯೂಟರ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್ ಇತ್ಯಾದಿಗಳನ್ನು ಬಳಸುವಷ್ಟೂ ಹೊತ್ತು ನಾವು ಒಂದಲ್ಲ ಒಂದು ಬಗೆಯ ಮಾಹಿತಿಯೊಡನೆ ವ್ಯವಹರಿಸುತ್ತೇವೆ. ವಿವಿಧ ತಂತ್ರಾಂಶಗಳನ್ನು ಬಳಸುತ್ತೇವೆ, ಇನ್‌ಪುಟ್ ರೂಪದ ಮಾಹಿತಿ ನೀಡುತ್ತೇವೆ, ಅವುಗಳಿಂದ ಔಟ್‌ಪುಟ್ ಪಡೆದುಕೊಳ್ಳುತ್ತೇವೆ, ಅಗತ್ಯವಾದುದನ್ನು ಉಳಿಸಿಡುತ್ತೇವೆ - ಹೀಗೆ. ಈ ಮಾಹಿತಿಯೆಲ್ಲ ಶೇಖರವಾಗುವುದು 'ಮೆಮೊರಿ'ಯಲ್ಲಿ. ಈ ಮೆಮೊರಿ ಹೆಚ್ಚೂಕಡಿಮೆ ನಮ್ಮ ನೆನಪಿನ ಶಕ್ತಿಯಂತೆಯೇ. ಈಗ ಹೊಸದಾಗಿ ಪರಿಚಯವಾದವರೊಬ್ಬರು ನಿಮಗೆ ಅವರ ದೂರವಾಣಿ ಸಂಖ್ಯೆಯನ್ನು ಹೇಳಿದರು ಎಂದುಕೊಳ್ಳೋಣ. ಆ ಸಂಖ್ಯೆಯನ್ನು ಮೊಬೈಲಿನ ಅಡ್ರೆಸ್ ಬುಕ್‌ಗೆ ಸೇರಿಸಿಕೊಳ್ಳುವವರೆಗೆ ಮಾತ್ರ ನೀವು ನೆನಪಿಟ್ಟುಕೊಂಡರೆ ಸಾಕು. ಆಮೇಲೆ ಮರೆತರೂ ಚಿಂತೆಯಿಲ್ಲ. ಬೇಕಾದಾಗ ನೋಡಿಕೊಳ್ಳಲು, ಕರೆಮಾಡಲು ಆ ದೂರವಾಣಿ ಸಂಖ್ಯೆ ಅಡ್ರೆಸ್ ಬುಕ್‌ನಲ್ಲಿ ಭದ್ರವಾಗಿರುತ್ತದಲ್ಲ! ಕಂಪ್ಯೂಟರ್-ಸ್ಮಾರ್ಟ್‌ಫೋನ್ ಇತ್ಯಾದಿಗಳಲ್ಲೂ ಹಾಗೆಯೇ. ತಕ್ಷಣಕ್ಕೆ ಬೇಕಾದದ್ದೆಲ್ಲ ನೆನಪಿಟ್ಟುಕೊಳ್ಳಲು ಅಲ್ಲಿ 'ಪ್ರೈಮರಿ ಮೆಮೊರಿ' ಇರುತ್ತದೆ. ಈ ಕ್ಷಣದಲ್ಲೇ ಬೇಕಾಗದ ವಿಷಯಗಳು ಸೆಕಂಡರಿ ಮೆಮೊರಿಯಲ್ಲಿ ಶೇಖರವಾಗುತ್ತವೆ; ಮೊಬೈಲ್ ಸಂಖ್ಯೆಯನ್ನು ಅಡ್ರೆಸ್ ಬುಕ್‌ಗೆ ಸೇರಿಸಿಟ್ಟುಕೊಂಡಂತೆ! ಪ್ರೈಮರಿ ಮೆಮೊರಿಗೆ ರ್‍ಯಾಮ್ ಒಂದು ಉದಾಹರಣೆ. ಕಂಪ್ಯೂಟರ್‌ಗೆ ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ರ್‍ಯಾಮ್‌ನಲ್ಲಿರುವ ಸಂಗತಿಗಳೆಲ್ಲ ಉಳಿದಿರುತ್ತವೆ. ರೀಡ್ ಓನ್ಲಿ ಮೆಮೊರಿ ಅಥವಾ ರಾಮ್ ಕೂಡ ಪ್ರೈಮರಿ ಮೆಮೊರಿಯೇ. ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಇತ್ಯಾದಿಗಳೆಲ್ಲ ಸೆಕೆಂಡರಿ ಮೆಮೊರಿಗೆ ಉದಾಹರಣೆಗಳು.

Memory Card
ಮೆಮೊರಿ ಕಾರ್ಡ್
(ರೂಪಿಸಬೇಕಿದೆ)
ಮಾಹಿತಿ ಶೇಖರಣಾ ಮಾಧ್ಯಮಗಳಲ್ಲೊಂದು; ಬಿಲ್ಲೆಯಂತಹ ಆಕಾರದಿಂದಾಗಿ ಇವನ್ನು ಮೆಮೊರಿ 'ಕಾರ್ಡ್' ಎಂದು ಕರೆಯುತ್ತಾರೆ.
ಡಿಜಿಟಲ್ ಕ್ಯಾಮೆರಾ ಹಾಗೂ ಮೊಬೈಲ್ ಫೋನ್ ಬಳಸುವವರಿಗೆಲ್ಲ ಮೆಮೊರಿ ಕಾರ್ಡುಗಳ ಪರಿಚಯ ಚೆನ್ನಾಗಿಯೇ ಇರುತ್ತದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳನ್ನು ಉಳಿಸಿಡಲು, ಮೊಬೈಲಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಾವು ಇವನ್ನು ಬಳಸುತ್ತೇವೆ. ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲಿ, ಎಂಪಿ೩ ಪ್ಲೇಯರಿನಲ್ಲಿ, ಕಾರ್ ಸ್ಟೀರಿಯೋ - ನ್ಯಾವಿಗೇಶನ್ ವ್ಯವಸ್ಥೆಗಳಲ್ಲೂ ಮೆಮೊರಿ ಕಾರ್ಡುಗಳು ಬಳಕೆಯಾಗುತ್ತವೆ. ಮೆಮೊರಿ ಕಾರ್ಡುಗಳಲ್ಲಿ ಹಲವು ಬಗೆ. ಬೇರೆಬೇರೆ ರೀತಿಯ ಕಾರ್ಡುಗಳ ಗಾತ್ರ-ಆಕಾರಗಳೂ ವಿಭಿನ್ನವಾಗಿರುತ್ತವೆ. ಮೆಮೊರಿ ಸ್ಟಿಕ್, ಕಾಂಪ್ಯಾಕ್ಟ್‌ಫ್ಲಾಶ್, ಸೆಕ್ಯೂರ್ ಡಿಜಿಟಲ್ (ಎಸ್‌ಡಿ) ಇತ್ಯಾದಿಗಳೆಲ್ಲ ಮೆಮೊರಿ ಕಾರ್ಡ್‌ನ ವಿವಿಧ ಅವತಾರಗಳ ಹೆಸರುಗಳು. ಕೆಲವು ವರ್ಷಗಳ ಹಿಂದೆ ಬೇರೆಬೇರೆ ಸಂಸ್ಥೆಯ ಉತ್ಪನ್ನಗಳಲ್ಲಿ ಬೇರೆಬೇರೆ ರೀತಿಯ ಕಾರ್ಡುಗಳನ್ನು ಬಳಸಬೇಕಾದ ಪರಿಸ್ಥಿತಿ ಇತ್ತು. ಆದರೆ ಎಸ್‌ಡಿ ಕಾರ್ಡುಗಳ ಜನಪ್ರಿಯತೆ ಹೆಚ್ಚಿದಂತೆ ಈ ಪರಿಸ್ಥಿತಿ ಬದಲಾಗಿದೆ. ಬಹುತೇಕ ಎಲ್ಲ ಸಂಸ್ಥೆಯ ಉತ್ಪನ್ನಗಳಲ್ಲೂ ಇದೀಗ ಎಸ್‌ಡಿ ಕಾರ್ಡುಗಳು ಬಳಕೆಯಾಗುತ್ತವೆ. ನಾವು ಮೊಬೈಲಿನಲ್ಲಿ ಬಳಸುವ ಮೈಕ್ರೋ ಎಸ್‌ಡಿ ಕಾರ್ಡು ಇದೇ ಎಸ್‌ಡಿ ಕಾರ್ಡಿನ ಪುಟಾಣಿ ಆವೃತ್ತಿ. ಮೆಮೊರಿ ಕಾರ್ಡುಗಳು ಕೆಲಸಮಾಡುವ ವಿಧಾನ ನಮಗೆಲ್ಲ ಚಿರಪರಿಚಿತವಾದ ಪೆನ್ ಡ್ರೈವ್‌ಗಳ ಕಾರ್ಯವೈಖರಿಯನ್ನೇ ಹೋಲುತ್ತದೆ. ಆದರೆ ಮೆಮೊರಿ ಕಾರ್ಡನ್ನು ಪೆನ್ ಡ್ರೈವ್‌ಗಳ ಹಾಗೆ ನೇರವಾಗಿ ಯುಎಸ್‌ಬಿ ಮೂಲಕ ಜೋಡಿಸಲಾಗುವುದಿಲ್ಲ ಎನ್ನುವುದೇ ದೊಡ್ಡ ವ್ಯತ್ಯಾಸ. ಮೆಮೊರಿ ಕಾರ್ಡುಗಳನ್ನು ಕಂಪ್ಯೂಟರಿಗೋ ಸ್ಮಾರ್ಟ್‌ಫೋನಿಗೋ ಟೀವಿಗೋ ಸಂಪರ್ಕಿಸಲು ಕಾರ್ಡ್ ರೀಡರ್‌ನಂತಹ ಮಧ್ಯವರ್ತಿಯೊಂದು ಬೇಕೇ ಬೇಕು.


logo