logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

PPI
ಪಿಪಿಐ
(ರೂಪಿಸಬೇಕಿದೆ)
ಪಿಕ್ಸೆಲ್ಸ್ ಪರ್ ಇಂಚ್, ಚಿತ್ರದ ಪ್ರತಿ ಇಂಚು ವಿಸ್ತೀರ್ಣದಲ್ಲಿ ಎಷ್ಟು ಪಿಕ್ಸೆಲ್‌ಗಳಿರುತ್ತವೆ ಎಂಬ ಲೆಕ್ಕ.
ಡಿಜಿಟಲ್ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ 'ಪಿಪಿಐ' ಪ್ರಸ್ತಾಪ ಬರುತ್ತದಲ್ಲ, ಅದು 'ಪಿಕ್ಸೆಲ್ಸ್ ಪರ್ ಇಂಚ್' ಎನ್ನುವುದರ ಹ್ರಸ್ವರೂಪ. ೧೦೦x೧೦೦ ಪಿಕ್ಸೆಲ್‌ನ ಚಿತ್ರಕ್ಕೆ ೧೦ ಪಿಪಿಐ ನಿಗದಿಪಡಿಸಿದರೆ ಅದು ಹತ್ತಿಂಚು ಉದ್ದ-ಅಗಲದಲ್ಲಿ ಮುದ್ರಣವಾಗುತ್ತದೆ. ಅದೇ ೧೦೦ ಪಿಪಿಐ ಇಟ್ಟರೆ ಚಿತ್ರದ ಗಾತ್ರ ಒಂದೇ ಇಂಚು ಉದ್ದ-ಅಗಲಕ್ಕೆ ಇಳಿಯುತ್ತದೆ. ಇದನ್ನು ಪಿಕ್ಸೆಲ್ ಸಾಂದ್ರತೆ (ಪಿಕ್ಸೆಲ್ ಡೆನ್ಸಿಟಿ) ಎಂದೂ ಗುರುತಿಸಲಾಗುತ್ತದೆ. ಇದನ್ನು ಡಿಪಿಐ (ಡಾಟ್ಸ್ ಪರ್ ಇಂಚ್) ಎಂದೂ ಕರೆಯುತ್ತಾರೆ. ಸ್ಕ್ಯಾನರ್ ಬಳಸಿ ಡಿಜಿಟಲೀಕರಿಸುವ ಚಿತ್ರಗಳು ಹಾಗೂ ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳ ಪರದೆಯ ಗುಣಮಟ್ಟವನ್ನು ಸೂಚಿಸಲಿಕ್ಕೂ 'ಪಿಪಿಐ' ಬಳಕೆಯಾಗುತ್ತದೆ. ಹೆಚ್ಚು ಪಿಪಿಐ ಇರುವ ಪರದೆಯಲ್ಲಿ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಮೂಡುತ್ತವೆ. ಹಾಗೆಯೇ ಹೆಚ್ಚು ಪಿಪಿಐ ಅಥವಾ ಡಿಪಿಐನಲ್ಲಿ ಸ್ಕ್ಯಾನ್ ಮಾಡಿದ ಚಿತ್ರಗಳ ಗುಣಮಟ್ಟ ಕೂಡ ಹೆಚ್ಚು ಉತ್ತಮವಾಗಿರುತ್ತದೆ.

PCB
ಪಿಸಿಬಿ
(ರೂಪಿಸಬೇಕಿದೆ)
ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್; ವಿದ್ಯುನ್ಮಾನ ಸಾಧನಗಳಲ್ಲಿ ವಿವಿಧ ಬಿಡಿಭಾಗಗಳನ್ನು ಜೋಡಿಸಲು, ಪರಸ್ಪರ ಸಂಪರ್ಕಿಸಲು ಬಳಕೆಯಾಗುವ ಫಲಕ
ಯಾವುದೇ ವಿದ್ಯುನ್ಮಾನ ಸಾಧನವನ್ನು ತೆರೆದು ನೋಡಿದರೆ ಟ್ರಾನ್ಸಿಸ್ಟರ್, ರೆಸಿಸ್ಟರ್, ಐಸಿ ಮುಂತಾದ ಅನೇಕ ಸಣ್ಣಸಣ್ಣ ಭಾಗಗಳನ್ನು ಒಂದು ಫಲಕದ ಮೇಲೆ ಜೋಡಿಸಿರುವುದು ನಮ್ಮ ಗಮನಕ್ಕೆ ಬರುತ್ತದೆ. ಇಂತಹ ಭಾಗಗಳೆಲ್ಲ ಆ ಫಲಕದ ಮೂಲಕವೇ ಒಂದಕ್ಕೊಂದು ಸಂಪರ್ಕಿತವಾಗಿರುತ್ತವೆ ಮತ್ತು ಬಾಹ್ಯ ವಿದ್ಯುತ್ ಸಂಪರ್ಕದ ತಂತಿಯೂ ಒಂದಲ್ಲ ಒಂದು ರೀತಿಯಲ್ಲಿ ಈ ಫಲಕದತ್ತಲೇ ಬಂದಿರುತ್ತದೆ. ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್, ಅಂದರೆ ಪಿಸಿಬಿ ಎಂದು ಕರೆಯುವುದು ಇಂತಹ ಫಲಕಗಳನ್ನೇ. ಇದರ ಮೇಲೆ ಜೋಡಿಸುವ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಪರ್ಕ ಕಲ್ಪಿಸಲು ಪ್ರತ್ಯೇಕ ತಂತಿಗಳ ಬದಲಿಗೆ ಈ ಫಲಕದ ಮೇಲೆಯೇ ಇರುವ ಹಾದಿಗಳನ್ನು ಬಳಸಲಾಗುತ್ತದೆ. ಈ ಸಂಪರ್ಕಗಳು (ಸರ್ಕ್ಯೂಟ್, ಅಂದರೆ ವಿದ್ಯುತ್‌ಪಥ) ಈ ಫಲಕದ ಮೇಲೆಯೇ ಮುದ್ರಿತವಾದಂತೆ ಕಾಣುತ್ತವಲ್ಲ, ಹಾಗಾಗಿಯೇ ಈ ಫಲಕಕ್ಕೆ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಎಂದು ಹೆಸರು ಬಂದಿದೆ. ದೊಡ್ಡ ಸಂಖ್ಯೆಯ ಬಿಡಿಭಾಗಗಳನ್ನು ಸಣ್ಣ ಜಾಗದಲ್ಲಿ ಅಚ್ಚುಕಟ್ಟಾಗಿ ಜೋಡಿಸಲು ಸಾಧ್ಯವಾಗಿಸುವುದು ಈ ಫಲಕದ ಹೆಗ್ಗಳಿಕೆ. ಕಂಪ್ಯೂಟರು - ಮೊಬೈಲಿನಲ್ಲೆಲ್ಲ ಮದರ್‌ಬೋರ್ಡ್ ಇರುತ್ತದಲ್ಲ, ಪ್ರತಿನಿತ್ಯವೂ ನಮ್ಮ ಸಂಪರ್ಕಕ್ಕೆ ಬರುವ ಪಿಸಿಬಿಗೆ ಅದೊಂದು ಉತ್ತಮ ಉದಾಹರಣೆ. ಪ್ರಾಸೆಸರ್, ರ್‍ಯಾಮ್ ಸೇರಿದಂತೆ ಕಂಪ್ಯೂಟರಿನ - ಮೊಬೈಲಿನ ಹಲವು ಪ್ರಮುಖ ಭಾಗಗಳನ್ನು ಈ ಫಲಕದ ಮೇಲೆಯೇ ಜೋಡಿಸಿರುತ್ತಾರೆ. ಟೀವಿ, ಮೊಬೈಲ್ ಕ್ಯಾಮೆರಾ, ಟ್ಯಾಬ್ಲೆಟ್ ಮುಂತಾದ ಇತರ ಸಾಧನಗಳಲ್ಲೂ ಪಿಸಿಬಿಗಳು ಇರುತ್ತವೆ.

Pull - Push
ಪುಲ್-ಪುಶ್
(ರೂಪಿಸಬೇಕಿದೆ)
ಮಾಹಿತಿ ಒದಗಿಸುವ ಎರಡು ಮಾರ್ಗಗಳು; ನಾವೇ ಬೇಡಿಕೆ ಸಲ್ಲಿಸಿ ಪಡೆದುಕೊಳ್ಳುವುದು 'ಪುಲ್' ಎಂದು ಕರೆಸಿಕೊಂಡರೆ ಹೊಸ ಮಾಹಿತಿಯನ್ನು ನಾವು ಕೇಳದೆಯೇ ನಮ್ಮ ಗಮನಕ್ಕೆ ತರುವುದಕ್ಕೆ 'ಪುಶ್' ಎಂದು ಹೆಸರು.
ಜಾಲತಾಣ ತೆರೆದು ಇಮೇಲ್‌ಗಳನ್ನು ನೋಡುವಾಗ, ತಂತ್ರಾಂಶವನ್ನು ಡೌನ್‌ಲೋಡ್ ಮಾಡುವಾಗಲೆಲ್ಲ ಮಾಹಿತಿ ಬೇಕೆಂದು ಬೇಡಿಕೆ ಸಲ್ಲಿಸುವವರು ನಾವು. ಇಮೇಲ್ ತಾಣಕ್ಕೆ ಲಾಗಿನ್ ಆಗುವುದು, ಡೌನ್‌ಲೋಡ್ ಕೊಂಡಿಯ ಮೇಲೆ ಕ್ಲಿಕ್ ಮಾಡುವುದು - ಇವೆಲ್ಲ ನಾವು ಬೇಡಿಕೆ ಸಲ್ಲಿಸುವ ಮಾರ್ಗಗಳು. ಈ ಉದಾಹರಣೆಗಳಲ್ಲಿ ಮಾಹಿತಿ ನಮ್ಮತ್ತ ಬರಲಿ ಎಂದು ನಾವು ಕೇಳುವುದರಿಂದ ಇವನ್ನು 'ಪುಲ್' ಎಂದು ಗುರುತಿಸಲಾಗುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವು ಕೇಳದೆಯೇ ಮಾಹಿತಿಯನ್ನು ನಮ್ಮ ಗಮನಕ್ಕೆ ತರಲಾಗುತ್ತದೆ. ಸುದ್ದಿಗಳನ್ನು ಹಂಚುವ ಮೊಬೈಲ್ ಆಪ್ ಇತ್ತೀಚಿನ ಸುದ್ದಿಯನ್ನೂ, ಪ್ರಯಾಣ ಸೇವೆಗಳ ಆಪ್ ಹೊಸ ಆಫರುಗಳನ್ನೂ ನಮ್ಮ ಮೊಬೈಲಿನ ಪರದೆಗೆ ತಲುಪಿಸುತ್ತದಲ್ಲ - ಇವನ್ನು ನಾವಾಗಿ ಕೇಳದೆಯೇ ಪಡೆಯುವುದು, ಇಮೇಲ್ ಅಥವಾ ಮೆಸೇಜಿಂಗ್ ತಂತ್ರಾಂಶವನ್ನು ತೆರೆಯದೆಯೇ ಓದುವುದು ಸಾಧ್ಯ. ಮಾಹಿತಿಯನ್ನು ಹೀಗೆ ಕಳುಹಿಸುವ ತಂತ್ರಜ್ಞಾನಕ್ಕೆ 'ಪುಶ್' ಎಂದು ಹೆಸರು (ಉದಾಹರಣೆಯಲ್ಲಿ ಹೇಳಿದಂತಹ ಸಂದೇಶಗಳನ್ನು 'ಪುಶ್ ನೋಟಿಫಿಕೇಶನ್ಸ್' ಎಂದು ಕರೆಯುತ್ತಾರೆ). ಇಮೇಲ್ ಸೇವೆಗಳಲ್ಲೂ ಪುಶ್ ತಂತ್ರದ ಬಳಕೆ ಉಂಟು. ಹೊಸ ಸಂದೇಶ ಬಂದ ವಿಷಯ ಇಮೇಲ್ ಆಪ್ ತೆರೆಯದೆಯೇ ಗೊತ್ತಾಗುವುದು ಇದರ ಮೂಲಕವೇ. ಎಸ್ಸೆಮ್ಮೆಸ್‌ನಲ್ಲೂ ಪುಶ್ ಬಳಕೆ ಸಾಧ್ಯವಿದೆ. ಅಂದಹಾಗೆ ಈ ತಂತ್ರಗಳು ನಾವು ಸಂದೇಶಗಳನ್ನು ಹೇಗೆ ಪಡೆದುಕೊಳ್ಳುತ್ತೇವೆ ಎನ್ನುವುದನ್ನು ಮಾತ್ರ ನಿರ್ದೇಶಿಸುತ್ತವೆ. ಅನಪೇಕ್ಷಿತ (ಸ್ಪಾಮ್) ಸಂದೇಶಗಳನ್ನು ತಲುಪಿಸಲು ಇವೆರಡೂ ತಂತ್ರಗಳು ಬಳಕೆಯಾಗುವುದರಿಂದ ಸ್ಪಾಮ್‌ಗೂ ಈ ಪುಲ್-ಪುಶ್ ತಂತ್ರಗಳಿಗೂ ನೇರವಾದ ಸಂಬಂಧವೇನಿಲ್ಲ. ಆದರೆ ಮೊಬೈಲಿನಲ್ಲಿ ಪುಶ್ ಸಂದೇಶಗಳ ಕಾಟ ಜಾಸ್ತಿಯಾದ ಸಂದರ್ಭದಲ್ಲಿ ಅವನ್ನು ನಿರ್ಬಂಧಿಸುವುದು ಸಾಧ್ಯವಿದೆ: ಆಂಡ್ರಾಯ್ಡ್ ಬಳಕೆದಾರರು ಇದಕ್ಕೆ 'ಆಪ್ ನೋಟಿಫಿಕೇಶನ್ಸ್' ಆಯ್ಕೆ ಬಳಸಬಹುದು.

Page Orientation
ಪೇಜ್ ಓರಿಯೆಂಟೇಶನ್
(ರೂಪಿಸಬೇಕಿದೆ)
ವಿನ್ಯಾಸಗೊಳಿಸಿರುವ ಪುಟವನ್ನು ಮುದ್ರಿಸುವಾಗ ಕಾಗದವನ್ನು ಲಂಬವಾಗಿ ಬಳಸಬೇಕೋ ಅಡ್ಡಲಾಗಿ ಬಳಸಬೇಕೋ ಎನ್ನುವುದನ್ನು ಸೂಚಿಸುವ ಅಂಶ
ಪುಸ್ತಕವಿರಲಿ, ಒಂದೆರಡು ಪುಟಗಳ ಕಡತವೇ ಇರಲಿ - ಮುದ್ರಣಕ್ಕೆ ಬಳಸಲಾಗುವ ಕಾಗದ ಸಾಮಾನ್ಯವಾಗಿ ಆಯತಾಕಾರದಲ್ಲೇ ಇರುತ್ತದೆ. ಈ ಕಾಗದದ ಮೇಲೆ ಮಾಹಿತಿ ಹೇಗೆ ಮುದ್ರಣವಾಗಬೇಕು ಎಂದು ತೀರ್ಮಾನಿಸುವುದು ಕಡತ ರೂಪಿಸುವ ವಿನ್ಯಾಸಕಾರನ ಕೆಲಸ. ಬಹಳಷ್ಟು ಕಡತಗಳಲ್ಲಿ ಕಾಗದವನ್ನು ಲಂಬವಾಗಿ (ಕಡಿಮೆ ಅಗಲ, ಹೆಚ್ಚು ಉದ್ದ) ಬಳಸುವುದು ಸಾಮಾನ್ಯ ಅಭ್ಯಾಸ. ಮುದ್ರಣವಾಗುವ ಮಾಹಿತಿ ಸಾಧ್ಯವಾದಷ್ಟೂ ಅಗಲವಿರಬೇಕು ಎನ್ನುವುದಾದರೆ ಅದನ್ನು ಕಾಗದದ ಮೇಲೆ ಅಡ್ಡಡ್ಡಲಾಗಿ (ಹೆಚ್ಚು ಅಗಲ, ಕಡಿಮೆ ಉದ್ದ) ಮುದ್ರಿಸಬಹುದು. ಕಡತದ ಪುಟಗಳನ್ನು ವಿನ್ಯಾಸಗೊಳಿಸುವಾಗ ಈ ಪೈಕಿ ಯಾವ ಆಯ್ಕೆ ಬಳಸಲಾಗಿದೆ ಎನ್ನುವುದನ್ನು ಆಯಾ ಪುಟದ 'ಪೇಜ್ ಓರಿಯೆಂಟೇಶನ್' ಸೂಚಿಸುತ್ತದೆ. ಕಡತವನ್ನು ರೂಪಿಸುವಾಗಲೇ ಈ ಆಯ್ಕೆಯನ್ನು ಮಾಡಿಕೊಳ್ಳುವುದು ಸಾಧ್ಯ. ನಿರ್ದಿಷ್ಟ ಪುಟದ ಮುದ್ರಣಕ್ಕೆ ಕಾಗದವನ್ನು ಲಂಬವಾಗಿ ಬಳಸುವುದು ಸಾಧ್ಯವಿದ್ದರೆ ಅದರ ಪೇಜ್ ಓರಿಯೆಂಟೇಶನ್ 'ಪೋರ್ಟ್ರೇಟ್' ಆಗಿರುತ್ತದೆ. ಭಾವಚಿತ್ರಗಳು ಸಾಮಾನ್ಯವಾಗಿ ಇದೇ ರೀತಿಯಲ್ಲಿ ಮುದ್ರಣವಾಗುತ್ತವಲ್ಲ, ಹಾಗಾಗಿಯೇ ಇಲ್ಲೂ ಅದೇ ಹೆಸರನ್ನು ಬಳಸಲಾಗಿದೆ (ಪೋರ್ಟ್ರೇಟ್=ಭಾವಚಿತ್ರ). ಇದೇ ರೀತಿ ಅಡ್ಡಡ್ಡಲಾಗಿ ಮುದ್ರಣವಾಗಬೇಕಾದ ಪುಟಗಳ ಪೇಜ್ ಓರಿಯೆಂಟೇಶನ್ ಅನ್ನು 'ಲ್ಯಾಂಡ್‌ಸ್ಕೇಪ್' ಎಂದು ಗುರುತಿಸಲಾಗುತ್ತದೆ. ಪ್ರಕೃತಿ ದೃಶ್ಯಗಳನ್ನು (ಲ್ಯಾಂಡ್‌ಸ್ಕೇಪ್) ಹೀಗೆಯೇ ಮುದ್ರಿಸುತ್ತಾರಲ್ಲ, ಈ ಹೆಸರಿಗೆ ಕಾರಣವಾಗಿರುವುದು ಅದೇ ಅಂಶ. ಅಂದಹಾಗೆ ಮುದ್ರಣವಾಗಬೇಕಿರುವ ಕಾಗದ ಬಹುತೇಕ ಪ್ರಿಂಟರುಗಳೊಳಗೆ ಹೋಗುವುದು - ಹೊರಬರುವುದು ಲಂಬವಾಗಿಯೇ. ಲ್ಯಾಂಡ್‌ಸ್ಕೇಪ್ ರೂಪದಲ್ಲಿ ಮುದ್ರಣವಾಗಬೇಕಿರುವ ಮಾಹಿತಿಯನ್ನು ಸೂಕ್ತವಾಗಿ ತಿರುಗಿಸಿಕೊಂಡು ಮುದ್ರಿಸಲಾಗುತ್ತದೆ ಅಷ್ಟೇ.

Page View
ಪೇಜ್ ವ್ಯೂ
(ರೂಪಿಸಬೇಕಿದೆ)
ಜಾಲತಾಣಕ್ಕೆ ಭೇಟಿಕೊಟ್ಟ ಬಳಕೆದಾರರು ಯಾವುದೇ ವೆಬ್ ಪುಟವನ್ನು ತೆರೆಯುವ - ವೀಕ್ಷಿಸುವ ಪ್ರಕ್ರಿಯೆ
ಒಂದು ಜಾಲತಾಣದಲ್ಲಿ ಹಲವು ಪುಟಗಳಿರುತ್ತವಲ್ಲ, ಬಳಕೆದಾರರು ಆ ಪುಟಗಳನ್ನು ಎಷ್ಟುಬಾರಿ ತೆರೆಯುತ್ತಾರೆ ಎಂಬುದನ್ನು ಗಮನಿಸಿಕೊಳ್ಳುವ ಮೂಲಕ ಜಾಲತಾಣದ ಜನಪ್ರಿಯತೆಯನ್ನು ಅಂದಾಜಿಸುವುದು ಸಾಧ್ಯ. ಈ ಸಂಖ್ಯೆಯನ್ನು ದಾಖಲಿಸಿಕೊಳ್ಳುವುದು ಜಾಲಲೋಕದ ಸಾಮಾನ್ಯ ಅಭ್ಯಾಸವೂ ಹೌದು. ಬಳಕೆದಾರ ಯಾವುದೇ ವೆಬ್ ಪುಟವನ್ನು ತೆರೆಯುವ - ವೀಕ್ಷಿಸುವ ಈ ಪ್ರಕ್ರಿಯೆಯನ್ನು 'ಪೇಜ್ ವ್ಯೂ' ಎಂದು ಗುರುತಿಸುತ್ತಾರೆ. ಉದಾಹರಣೆಗೆ, ಮಾರ್ಚ್ ೨೦೧೭ರಲ್ಲಿ ಇಜ್ಞಾನ ಡಾಟ್ ಕಾಮ್‌ನಲ್ಲಿ ದಾಖಲಾದ ಪೇಜ್ ವ್ಯೂಗಳ ಒಟ್ಟು ಮೊತ್ತ ೪೬,೩೧೮. ಈ ಅವಧಿಯಲ್ಲಿ ಓದುಗರು ಜಾಲತಾಣದ ಪುಟಗಳನ್ನು ಒಟ್ಟು ಎಷ್ಟು ಬಾರಿ ತೆರೆದಿದ್ದಾರೆ ಎನ್ನುವುದನ್ನು ಈ ಸಂಖ್ಯೆ ಸೂಚಿಸುತ್ತದೆ. ಪೇಜ್‌ವ್ಯೂಗಳ ಸಂಖ್ಯೆ ಹೆಚ್ಚಿದ್ದಷ್ಟೂ ಜಾಲತಾಣದತ್ತ ಬರುವ 'ಟ್ರಾಫಿಕ್' ಹೆಚ್ಚಿದೆ ಎಂದರ್ಥ. ಅಂದಹಾಗೆ ಒಂದೇ ವ್ಯಕ್ತಿ ಜಾಲತಾಣದ ವಿವಿಧ ಪುಟಗಳನ್ನು ವೀಕ್ಷಿಸಿದ್ದರೆ ಅವರು ಒಂದಕ್ಕಿಂತ ಹೆಚ್ಚು ಪೇಜ್‌ವ್ಯೂಗಳನ್ನು ದಾಖಲಿಸುತ್ತಾರೆ. ಹೀಗಾಗಿ ಜಾಲತಾಣಕ್ಕೆ ಭೇಟಿಕೊಟ್ಟವರ ಸಂಖ್ಯೆ ಅಲ್ಲಿ ದಾಖಲಾದ ಪೇಜ್‌ವ್ಯೂಗಳ ಸಂಖ್ಯೆಗಿಂತ ಕಡಿಮೆಯಿರುವುದು ಖಂಡಿತಾ ಸಾಧ್ಯ. ಈ ಗೊಂದಲವನ್ನು ನಿವಾರಿಸಲೆಂದೇ ಕೆಲ ಜಾಲತಾಣಗಳು ಪೇಜ್‌ವ್ಯೂ ಹಾಗೂ ಸಂದರ್ಶಕರ ಸಂಖ್ಯೆಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳುತ್ತವೆ. ಪುಟವನ್ನು ತೆರೆದ ಹಾಗೂ ಮುಚ್ಚಿದ ಸಮಯವನ್ನು ಗುರುತಿಸಿಕೊಳ್ಳುವ ಮೂಲಕ ಓದುಗರು ಅಲ್ಲಿ ಎಷ್ಟು ಹೊತ್ತು ಉಳಿದಿದ್ದರು ಎನ್ನುವುದನ್ನು ದಾಖಲಿಸಿಕೊಳ್ಳುವ ಅಭ್ಯಾಸವೂ ಇದೆ.

Piracy
ಪೈರಸಿ
(ರೂಪಿಸಬೇಕಿದೆ)
ಹಕ್ಕುಸ್ವಾಮ್ಯವಿರುವ ಮಾಹಿತಿಯನ್ನು ಅದರ ಮಾಲೀಕರಿಗೆ ಪ್ರತಿಫಲ ನೀಡದೆ ಅಕ್ರಮವಾಗಿ ಬಳಸಿಕೊಳ್ಳುವ ಸಮಸ್ಯೆ
ಪಠ್ಯ, ಚಿತ್ರ, ಸಂಗೀತ, ಚಲನಚಿತ್ರ, ತಂತ್ರಾಂಶ ಮುಂತಾದ ಯಾವುದೇ ಮಾಹಿತಿಯನ್ನು ಅದರ ಹಕ್ಕುಸ್ವಾಮ್ಯ ಹೊಂದಿದವರಿಗೆ ಪ್ರತಿಫಲ ನೀಡದೆ ಅಕ್ರಮವಾಗಿ ಬಳಸಿಕೊಳ್ಳುವ ಸಮಸ್ಯೆಯ ಹೆಸರೇ 'ಪೈರಸಿ'. ಅನಧಿಕೃತ ತಾಣಗಳಿಂದ ಎಂಪಿ೩ ಡೌನ್‌ಲೋಡ್ ಮಾಡಿಕೊಳ್ಳುವುದು, ಕಂಪ್ಯೂಟರಿನಲ್ಲಿ ಅನಧಿಕೃತ ತಂತ್ರಾಂಶಗಳನ್ನು ಬಳಸುವುದು, ರಸ್ತೆಬದಿ ಮಾರಾಟಗಾರರಿಂದ ನಕಲಿ ಸಿ.ಡಿ. ಹಾಗೂ ಪುಸ್ತಕಗಳನ್ನು ಕೊಳ್ಳುವುದು - ಇವೆಲ್ಲವೂ ಪೈರಸಿಗೆ ಉದಾಹರಣೆ. ಹಡಗುಗಳ ಮೇಲೆ ದಾಳಿಮಾಡಿ ಅದನ್ನು ಲೂಟಿಮಾಡುವ ಕಡಲುಗಳ್ಳರನ್ನು ಇಂಗ್ಲಿಷಿನಲ್ಲಿ ಪೈರೇಟ್ ಎಂದು ಕರೆಯುತ್ತಾರಲ್ಲ, 'ಪೈರಸಿ' ಹೆಸರಿಗೂ ಅದೇ ಮೂಲ. ಕಂಪ್ಯೂಟರಿನ ಮುಂದೆ ಕುಳಿತು ಕದಿಯುವವರೂ ಸಮುದ್ರದಲ್ಲಿ ಕಳ್ಳತನಮಾಡುವ ಆ ಪೈರೇಟ್‌ಗಳಂತೆಯೇ. ಅದು ಹೇಗೆ ಎಂದು ಕೇಳಿದಿರಾದರೆ ಅದಕ್ಕೆ ಉತ್ತರಿಸುವುದು ಬಹಳ ಸುಲಭ: ಪೈರಸಿಯಿಂದಾಗಿ ಮೂಲ ಹಕ್ಕುದಾರರಿಗೆ ಯಾವುದೇ ಪ್ರತಿಫಲ ಸಿಗುವುದಿಲ್ಲವಾದ್ದರಿಂದ ಈ ಪಿಡುಗು ದೊಡ್ಡ ಪ್ರಮಾಣದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಪೈರಸಿ ಪೀಡೆಯ ನೇರ ಪರಿಣಾಮ ಉದ್ಯೋಗಾವಕಾಶಗಳ ಮೇಲೆ, ಹಾಗೂ ಒಟ್ಟಾರೆ ಅರ್ಥವ್ಯವಸ್ಥೆಯ ಮೇಲೂ ಬೀಳುವುದರಿಂದ ಉದ್ದಿಮೆಗಳು ಹಾಗೂ ಸರಕಾರಗಳು ಪೈರಸಿ ಪೀಡೆಯ ಕುರಿತು ಸದಾಕಾಲ ಕಿಡಿಕಾರುತ್ತಲೇ ಇರುತ್ತವೆ. ಪೈರಸಿ ತಡೆಗೆ ಹಲವು ಕಾನೂನುಗಳೂ ಇವೆ; ಪೈರಸಿ ಆರೋಪಿಗಳಿಗೆ ಶಿಕ್ಷೆಯಾದ ಉದಾಹರಣೆ ಕೂಡ ಇದೆ!

Port
ಪೋರ್ಟ್
(ರೂಪಿಸಬೇಕಿದೆ)
ವಿದ್ಯುನ್ಮಾನ ಉಪಕರಣವೊಂದರ ಅಂತರ ಸಂಪರ್ಕ ಸಾಧನ; ಒಂದು ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸಮಾಡಲೆಂದು ಸಿದ್ಧಪಡಿಸಿದ ತಂತ್ರಾಂಶವನ್ನು ಇನ್ನೊಂದೆಡೆಯೂ ಕೆಲಸಮಾಡುವಂತೆ ಮಾಡುವ ಪ್ರಕ್ರಿಯೆ; ಯಾವುದೇ ಸರ್ವರ್ ನಿರ್ದಿಷ್ಟ ಕೆಲಸಕ್ಕಾಗಿ ಯಾವ ಶಿಷ್ಟಾಚಾರವನ್ನು ಬಳಸುತ್ತಿದೆ ಎಂದು ಸೂಚಿಸುವ ಸಂಖ್ಯೆ
ಪೋರ್ಟ್ ಎಂದಾಕ್ಷಣ ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯನ್ನು ಬದಲಿಸುವ ಪ್ರಕ್ರಿಯೆಯೇ ನಮ್ಮ ನೆನಪಿಗೆ ಬರುತ್ತದೆ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪೋರ್ಟ್ ಎನ್ನುವುದಕ್ಕೆ ಇನ್ನೂ ಕೆಲವು ಅರ್ಥಗಳಿವೆ. ಪೆನ್ ಡ್ರೈವ್, ಮೌಸ್, ಕೀಬೋರ್ಡ್, ಮಾನಿಟರ್ ಮುಂತಾದ ಯಂತ್ರಾಂಶಗಳನ್ನು ಕಂಪ್ಯೂಟರಿನೊಡನೆ ಬಳಸುತ್ತೇವಲ್ಲ, ಅವನ್ನೆಲ್ಲ ಸಂಪರ್ಕಿಸುವ ಅಂತರ ಸಂಪರ್ಕ ಸಾಧನಗಳನ್ನು (ಇಂಟರ್‌ಫೇಸ್) 'ಪೋರ್ಟ್'ಗಳೆಂದು ಗುರುತಿಸುತ್ತಾರೆ. ಮೊಬೈಲ್ ಫೋನಿಗೆ ಚಾರ್ಜಿಂಗ್ ಕೇಬಲ್ ಜೋಡಿಸುವುದು, ಟೀವಿಗೆ ಎಚ್‌ಡಿಎಂಐ ಸಂಪರ್ಕ ಕಲ್ಪಿಸುವುದೂ ಪೋರ್ಟ್‌ಗಳ ಮೂಲಕವೇ. ತಂತ್ರಾಂಶದ ಲೋಕದಲ್ಲೂ ಪೋರ್ಟ್ ಪರಿಕಲ್ಪನೆ ಇದೆ. ಯಾವುದೋ ಒಂದು ಕಾರ್ಯಾಚರಣ ವ್ಯವಸ್ಥೆಯಲ್ಲಿ (ಉದಾ: ವಿಂಡೋಸ್) ಕೆಲಸಮಾಡಲೆಂದು ಸಿದ್ಧಪಡಿಸಿದ ಕಂಪ್ಯೂಟರ್ ತಂತ್ರಾಂಶ ಅಥವಾ ಮೊಬೈಲ್ ಆಪ್ ಅನ್ನು ಇನ್ನೊಂದು ವ್ಯವಸ್ಥೆಯಲ್ಲೂ (ಉದಾ: ಮ್ಯಾಕ್) ಕೆಲಸಮಾಡುವಂತೆ ಪರಿವರ್ತಿಸುವ ಕೆಲಸವನ್ನು 'ಪೋರ್ಟ್ ಮಾಡುವುದು' ಎಂದು ಕರೆಯುತ್ತಾರೆ. ಇನ್ನು ಅಂತರಜಾಲದ ವಿಷಯಕ್ಕೆ ಬಂದರೆ ಅಲ್ಲೂ ಪೋರ್ಟ್‌ಗಳ ಪ್ರಸ್ತಾಪ ಕೇಳಸಿಗುತ್ತದೆ. ಯಾವುದೇ ಸರ್ವರ್ ನಿರ್ದಿಷ್ಟ ಕೆಲಸಕ್ಕಾಗಿ ಯಾವ ಶಿಷ್ಟಾಚಾರವನ್ನು ಬಳಸುತ್ತಿದೆ ಎನ್ನುವುದನ್ನು 'ಇಂಟರ್‌ನೆಟ್ ಪೋರ್ಟ್' ಸೂಚಿಸುತ್ತದೆ. ಜಾಲತಾಣಗಳನ್ನು ಪ್ರದರ್ಶಿಸಲು, ಇಮೇಲ್ ಸಂದೇಶಗಳನ್ನು ನಿಭಾಯಿಸಲು, ಎಫ್‌ಟಿಪಿ ಮನವಿಗಳಿಗೆ ಸ್ಪಂದಿಸಲು ಸರ್ವರ್‌ಗಳು ಬೇರೆಬೇರೆ ಪೋರ್ಟ್‌ಗಳನ್ನು ಬಳಸುತ್ತವೆ. ಇಂತಹ ಪೋರ್ಟ್‌ಗಳನ್ನು ನಿರ್ದಿಷ್ಟ ಸಂಖ್ಯೆಗಳು ಪ್ರತಿನಿಧಿಸುತ್ತವೆ. ಕೆಲವೊಮ್ಮೆ ಈ ಸಂಖ್ಯೆಗಳನ್ನು ಜಾಲತಾಣದ ವಿಳಾಸದಲ್ಲೇ ಬಳಸುವುದೂ ಇದೆ (ಉದಾ: http://www.ejnana.com:80/).

Proximity Sensor
ಪ್ರಾಕ್ಸಿಮಿಟಿ ಸೆನ್ಸರ್
(ರೂಪಿಸಬೇಕಿದೆ)
ಮೊಬೈಲಿನ ಸಮೀಪದಲ್ಲಿರಬಹುದಾದ ವಸ್ತುಗಳನ್ನು ಗ್ರಹಿಸುವ ಸಾಧನ
ಈಗಿನ ಮೊಬೈಲುಗಳಲ್ಲಿ ಹಲವಾರು ಬಗೆಯ ಸೆನ್ಸರುಗಳ ಬಳಕೆ ಸರ್ವೇಸಾಮಾನ್ಯ. ಇಂತಹ ಸೆನ್ಸರುಗಳ ಪೈಕಿ ಪ್ರಾಕ್ಸಿಮಿಟಿ ಸೆನ್ಸರ್ ಕೂಡ ಒಂದು. ಪ್ರಾಕ್ಸಿಮಿಟಿ ಎಂದರೆ ಸಾಮೀಪ್ಯ ಎಂದರ್ಥ. ನಮ್ಮ ಮೊಬೈಲಿನ ಸಮೀಪದಲ್ಲಿರಬಹುದಾದ ವಸ್ತುಗಳನ್ನು - ಭೌತಿಕ ಸಂಪರ್ಕದ ಅಗತ್ಯವಿಲ್ಲದೆಯೇ - ಗ್ರಹಿಸುವ ಸಾಧನ ಪ್ರಾಕ್ಸಿಮಿಟಿ ಸೆನ್ಸರ್. ಬಹುತೇಕ ಮೊಬೈಲುಗಳ ಮೇಲ್ತುದಿಯಲ್ಲಿ, ಇಯರ್‌ಪೀಸ್ ಹಾಗೂ ಸೆಲ್ಫಿ ಕ್ಯಾಮೆರಾದ ಆಸುಪಾಸಿನಲ್ಲಿ ನಾವು ಇದನ್ನು ನೋಡಬಹುದು. ನಮಗೆ ಬೇಕಾದ ನಂಬರ್ ಡಯಲ್ ಮಾಡಿ ಮೊಬೈಲನ್ನು ಕಿವಿಯ ಬಳಿ ಕೊಂಡೊಯ್ದ ತಕ್ಷಣವೇ ಅದರ ಪರದೆ ಆರಿಹೋಗುತ್ತದಲ್ಲ, ಆ ವಿದ್ಯಮಾನಕ್ಕೆ ಕಾರಣವಾಗುವುದು ಇದೇ ಪ್ರಾಕ್ಸಿಮಿಟಿ ಸೆನ್ಸರ್. ಕರೆಯ ನಡುವೆ ನಮ್ಮ ಕಿವಿಯೋ ಕೆನ್ನೆಯೋ ಟಚ್‌ಸ್ಕ್ರೀನ್‌ಗೆ ತಗುಲಿ ಅನಪೇಕ್ಷಿತ ಪರಿಣಾಮಗಳಾಗುವುದನ್ನು ಇದು ತಡೆಯುತ್ತದೆ; ನಾವು ಮಾತನಾಡುತ್ತಿದ್ದಷ್ಟು ಹೊತ್ತು ಪರದೆಯನ್ನು ಬೆಳಗಲು ಬ್ಯಾಟರಿ ವ್ಯರ್ಥವಾಗುವುದನ್ನೂ ತಪ್ಪಿಸುತ್ತದೆ. ಅಷ್ಟೇ ಅಲ್ಲ, ಫೋನನ್ನು ಕಿವಿಯಿಂದ ದೂರಕ್ಕೆ ಕೊಂಡೊಯ್ದ ಕೂಡಲೆ ಅದರ ಪರದೆ ಮತ್ತೆ ಚಾಲೂ ಆಗುವಂತೆ ಮಾಡುವುದೂ ಇದೇ ಸಾಧನದ ಕೆಲಸ. ಅಂದಹಾಗೆ ಪ್ರಾಕ್ಸಿಮಿಟಿ ಸೆನ್ಸರ್ ಬಳಕೆ ಮೊಬೈಲ್ ಫೋನುಗಳಿಗಷ್ಟೇ ಸೀಮಿತವೇನಲ್ಲ. ಈ ಸಾಧನಕ್ಕೆ ಹಲವಾರು ಔದ್ಯಮಿಕ ಉಪಯೋಗಗಳೂ ಇವೆ. ಅಂಗಾಂಗಗಳ ಚಲನೆಯ ಮೂಲಕ ವಿದ್ಯುನ್ಮಾನ ಸಾಧನಗಳನ್ನು ನಿಯಂತ್ರಿಸುವ ಜೆಸ್ಚರ್ ಕಂಟ್ರೋಲ್ ತಂತ್ರಜ್ಞಾನದಲ್ಲೂ ಕ್ಯಾಮೆರಾ ಬದಲಿಗೆ ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಬಳಸುವ ಪ್ರಯತ್ನ ನಡೆದಿದೆ.

Processor
ಪ್ರಾಸೆಸರ್
(ರೂಪಿಸಬೇಕಿದೆ)
ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ವಿದ್ಯುನ್ಮಾನ ಸಾಧನಗಳ ಕೇಂದ್ರೀಯ ಸಂಸ್ಕರಣ ಘಟಕ (ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ ಅಥವಾ ಸಿಪಿಯು); ಈ ಸಾಧನಗಳ ಕಾರ್ಯಾಚರಣೆಯನ್ನು ನಿರ್ದೇಶಿಸುವ, ನಿಯಂತ್ರಿಸುವ ಯಂತ್ರಾಂಶ
ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಓದಿದವರೆಲ್ಲರಿಗೂ ಕೇಂದ್ರೀಯ ಸಂಸ್ಕರಣ ಘಟಕ ಅಥವಾ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎಂಬ ಹೆಸರಿನ ಪರಿಚಯ ಇರುತ್ತದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳಲ್ಲಿ ಸಿಪಿಯುನಂತೆ ಕೆಲಸಮಾಡುವುದು ಅವುಗಳ ಪ್ರಾಸೆಸರ್. ಈ ಸಾಧನಗಳ ಚಟುವಟಿಕೆಯ ಪ್ರತಿ ಹೆಜ್ಜೆಯಲ್ಲೂ ನಡೆಯುವ ಅಸಂಖ್ಯ ಲೆಕ್ಕಾಚಾರಗಳನ್ನೆಲ್ಲ ನಿಭಾಯಿಸುವುದು ಪ್ರಾಸೆಸರ್‌ನ ಜವಾಬ್ದಾರಿ. ಪ್ರಾಸೆಸರ್ ಸಾಮರ್ಥ್ಯವನ್ನು ಅದರ ವೇಗದ (ಕ್ಲಾಕ್ ಸ್ಪೀಡ್) ಮೂಲಕ ಪ್ರತಿನಿಧಿಸುವುದು ಸಂಪ್ರದಾಯ. ಈ ಪ್ರಾಸೆಸರ್ ೩ ಗಿಗಾಹರ್ಟ್ಸ್‌ನದು ಎಂದು ಹೇಳುತ್ತಾರಲ್ಲ, ಆ ಸಂಖ್ಯೆ ಸೂಚಿಸುವುದು ಇದೇ ಕ್ಲಾಕ್ ಸ್ಪೀಡ್ ಅನ್ನು. ಹರ್ಟ್ಸ್ ಎನ್ನುವುದು ಇದರ ಏಕಮಾನ. ಪ್ರಾಸೆಸರ್ ಕಾರ್ಯಕ್ಷಮತೆ ಅದರ ಕ್ಲಾಕ್ ಸ್ಪೀಡ್ ಜೊತೆಗೆ ಇನ್ನೂ ಅನೇಕ ಸಂಗತಿಗಳನ್ನು ಅವಲಂಬಿಸಿರುತ್ತದೆ. ಅದರಲ್ಲಿರುವ ತಿರುಳುಗಳ (ಕೋರ್) ಸಂಖ್ಯೆ ಇಂತಹ ಸಂಗತಿಗಳಲ್ಲೊಂದು. ಒಂದು ಪ್ರಾಸೆಸರ್‌ನಲ್ಲಿ ಎರಡು ತಿರುಳುಗಳಿವೆ (ಡ್ಯುಯಲ್ ಕೋರ್) ಎನ್ನುವುದಾದರೆ ಸೈದ್ಧಾಂತಿಕವಾಗಿ ಅದು ತನ್ನ ಕೆಲಸಗಳನ್ನು ಎರಡು ಪಟ್ಟು ವೇಗವಾಗಿ ಮಾಡಬಲ್ಲದು. ಅಷ್ಟೇ ಅಲ್ಲ, ವಿವಿಧ ಕೆಲಸಗಳನ್ನು ಈ ತಿರುಳುಗಳು ತಮ್ಮ ನಡುವೆ ಹಂಚಿಕೊಳ್ಳುವುದರಿಂದ ಒಂದೇ ಸಮಯಕ್ಕೆ ಹಲವು ಕೆಲಸಗಳಲ್ಲಿ ತೊಡಗಿಕೊಳ್ಳುವುದು (ಮಲ್ಟಿ ಟಾಸ್ಕಿಂಗ್) ಕೂಡ ಸಾಧ್ಯವಾಗುತ್ತದೆ. ಒಂದು-ಎರಡು ತಿರುಳುಗಳ ಪ್ರಾಸೆಸರ್‌ಗಳಿಗಿಂತ ನಾಲ್ಕು ತಿರುಳುಗಳ 'ಕ್ವಾಡ್-ಕೋರ್', ಎಂಟು ತಿರುಳುಗಳ 'ಆಕ್ಟಾ-ಕೋರ್' ಪ್ರಾಸೆಸರ್ ಕಾರ್ಯಕ್ಷಮತೆ ಹೆಚ್ಚು ಎನ್ನುವುದಕ್ಕೆ ಇದೇ ಕಾರಣ.

Predictive Text Input
ಪ್ರೆಡಿಕ್ಟಿವ್ ಟೆಕ್ಸ್ಟ್ ಇನ್‌ಪುಟ್
(ರೂಪಿಸಬೇಕಿದೆ)
ಟೈಪಿಸಿದ ಮೊದಲ ಕೆಲ ಅಕ್ಷರಗಳ ಆಧಾರದ ಮೇಲೆ ಪದವನ್ನು ಊಹಿಸುವ, ಆ ಮೂಲಕ ಮಿಕ್ಕ ಅಕ್ಷರಗಳನ್ನು ಟೈಪಿಸುವ ಕೆಲಸವನ್ನು ತಪ್ಪಿಸಲು ನೆರವಾಗುವ ವ್ಯವಸ್ಥೆ
ಹಿಂದಿನ ಕಾಲದ ಎಸ್ಸೆಮ್ಮೆಸ್ ಇರಲಿ, ಇಂದಿನ ವಾಟ್ಸ್‌ಆಪ್ ಇರಲಿ, ಮೆಸೇಜ್ ಕಳಿಸಲು ಮೊಬೈಲ್ ಫೋನ್ ಬಳಸುವುದು ತೀರಾ ಸಾಮಾನ್ಯವೆನ್ನಿಸುವ ಸಂಗತಿ. ಸಾಮಾನ್ಯ ಮೊಬೈಲಿನ ಕೀಪ್ಯಾಡಿನಲ್ಲೇ ಕಂಪ್ಯೂಟರ್ ಕೀಲಿಮಣೆಗಿಂತ ವೇಗವಾಗಿ ಟೈಪ್ ಮಾಡಬಲ್ಲವರು ಇದ್ದಾರೆ. ಇನ್ನು ಸ್ಮಾರ್ಟ್‌ಫೋನಿನಲ್ಲಂತೂ ಕಂಪ್ಯೂಟರ್ ಕೀಲಿಮಣೆಯ ವಿನ್ಯಾಸವನ್ನೇ ಹೋಲುವ ವ್ಯವಸ್ಥೆಗಳು ಬಂದಿವೆ. ಆದರೂ ಮೊಬೈಲಿನ ಪುಟ್ಟ ಕೀಪ್ಯಾಡನ್ನು ಕುಟ್ಟುವುದು, ಸ್ಮಾರ್ಟ್‌ಫೋನ್ ಪರದೆಯ ಮೇಲೆ ಕಾಣುವ ಅಕ್ಷರಗಳನ್ನು ಮುಟ್ಟುವುದು ಹಲವರಿಗೆ ಇನ್ನೂ ಕಿರಿಕಿರಿಯ ಸಂಗತಿ. ಈ ಕಿರಿಕಿರಿಯನ್ನು ಕೊಂಚಮಟ್ಟಿಗೆ ನಿವಾರಿಸುವುದು 'ಪ್ರೆಡಿಕ್ಟಿವ್ ಟೆಕ್ಸ್ಟ್' ವ್ಯವಸ್ಥೆ. ನಾವು ಟೈಪಿಸಿದ ಮೊದಲ ಕೆಲ ಅಕ್ಷರಗಳ ಆಧಾರದ ಮೇಲೆ ಪದವನ್ನು ಊಹಿಸುವುದು, ಆ ಮೂಲಕ ಮಿಕ್ಕ ಅಕ್ಷರಗಳನ್ನು ಟೈಪಿಸುವ ಕೆಲಸ ತಪ್ಪಿಸುವುದು ಈ ವ್ಯವಸ್ಥೆಯ ವೈಶಿಷ್ಟ್ಯ. ಸಾಮಾನ್ಯ ಮೊಬೈಲಿನ ಕೀಪ್ಯಾಡಿನಲ್ಲಿ ಎಲ್ಲ ಅಕ್ಷರಗಳೂ ಒಂಬತ್ತೇ ಕೀಲಿಗಳಲ್ಲಿ (೧-೯) ಅಡಕವಾಗಿರುತ್ತವಲ್ಲ, ನಾವು ಯಾವೆಲ್ಲ ಕೀಲಿ ಒತ್ತಿದ್ದೇವೆ ಎನ್ನುವುದರ ಆಧಾರದ ಮೇಲೆ ಪದ ಯಾವುದಿರಬಹುದು ಎಂದು ಊಹಿಸಿಕೊಡುವ ಕೆಲಸವನ್ನು T9 (ಟೆಕ್ಸ್ಟ್ ಆನ್ ೯ ಕೀಸ್) ಎಂಬ ಜನಪ್ರಿಯ ವ್ಯವಸ್ಥೆ ಮಾಡುತ್ತದೆ. ಟಚ್‌ಸ್ಕ್ರೀನ್ ಮೇಲೆ ಮೂಡುವ ಕೀಲಿಮಣೆಗಳಲ್ಲೂ ಇಂತಹುದೇ ಕೆಲಸಮಾಡುವ ಅನೇಕ ವ್ಯವಸ್ಥೆಗಳನ್ನು ನಾವು ಬಹುತೇಕ ಎಲ್ಲ ಫೋನುಗಳಲ್ಲೂ ನೋಡಬಹುದು. ಇಂಗ್ಲಿಷ್ ಮಾತ್ರವೇ ಏಕೆ, ಈ ವ್ಯವಸ್ಥೆಗಳು ಕನ್ನಡ ಸೇರಿದಂತೆ ಹಲವು ಸ್ಥಳೀಯ ಭಾಷೆಗಳಲ್ಲೂ ಇವೆ.


logo