logo
भारतवाणी
bharatavani  
logo
Knowledge through Indian Languages
Bharatavani

Computer Tantrajnana Padavivarana Kosha
A B C D E F G H I J K L M N O P Q R S T U V W X Y Z

Please click here to read PDF file Computer Tantrajnana Padavivarana Kosha

Handle
ಹ್ಯಾಂಡಲ್
(ರೂಪಿಸಬೇಕಿದೆ)
ಸಮಾಜಜಾಲದ ನಿರ್ದಿಷ್ಟ ಬಳಕೆದಾರರನ್ನು ಗುರುತಿಸಲು ಬಳಸಬಹುದಾದ ಹೆಸರು
ಇಮೇಲ್ ವಿಳಾಸಗಳಲ್ಲೊಂದು ವೈಶಿಷ್ಟ್ಯವಿದೆ. ಒಂದು ವಿಳಾಸವನ್ನು ಒಬ್ಬರಿಗೆ ಮಾತ್ರವೇ ನೀಡಲು ಸಾಧ್ಯ ಎನ್ನುವುದೇ ಆ ಅಂಶ. ಅಂದರೆ, gmail.com ತಾಣದಲ್ಲಿ xyz ಎಂಬ ಹೆಸರನ್ನು ನೀವು ಆರಿಸಿಕೊಂಡರೆ xyz@gmail.com ನೀವು ಮಾತ್ರವೇ ಆಗಿರಲು ಸಾಧ್ಯ. ಸಮಾಜಜಾಲ, ಅಂದರೆ ಸೋಶಿಯಲ್ ನೆಟ್‌ವರ್ಕ್‌ಗಳಲ್ಲೂ ಅಷ್ಟೇ. ಜನ ನಮ್ಮನ್ನು ಗುರುತಿಸಲು ಬಳಸಬಹುದಾದ ಒಂದು ನಿರ್ದಿಷ್ಟ ಹೆಸರನ್ನು ಅಲ್ಲಿಯೂ ಬಳಸಲಾಗುತ್ತದೆ. 'ಹ್ಯಾಂಡಲ್' ಎನ್ನುವುದು ಈ ಹೆಸರಿನ ಹೆಸರು. ಇದೂ ಕೂಡ ಇಮೇಲ್ ವಿಳಾಸದ ಮೊದಲರ್ಧವಿದ್ದಂತೆಯೇ: ಒಂದು ಸಮಾಜಜಾಲದಲ್ಲಿ ಒಂದು ಹ್ಯಾಂಡಲ್ ಅನ್ನು ಒಬ್ಬರು ಮಾತ್ರ ಬಳಸುವುದು ಸಾಧ್ಯ. ಬಹಳಷ್ಟು ಸಮಾಜಜಾಲಗಳಲ್ಲಿನ ಹ್ಯಾಂಡಲ್ '@' ಚಿಹ್ನೆಯಿಂದ ಪ್ರಾರಂಭವಾಗುತ್ತದೆ. @ejnanadotcom ಎನ್ನುವುದು ಇಂತಹ ಹ್ಯಾಂಡಲ್‌ಗಳಿಗೊಂದು ಉದಾಹರಣೆ; ಇಜ್ಞಾನ ಡಾಟ್ ಕಾಮ್‌ನ ಟ್ವಿಟರ್ ಖಾತೆಯ ಹೆಸರು ಇದು. ಫೇಸ್‌ಬುಕ್ ಖಾತೆ ಹಾಗೂ ಪುಟಗಳನ್ನು ಗುರುತಿಸಲೂ ಇಂತಹವೇ ಹ್ಯಾಂಡಲ್‌ಗಳನ್ನು ಬಳಸಲಾಗುತ್ತದೆ. @ejnana ಎನ್ನುವುದು ಅಲ್ಲಿ ಇಜ್ಞಾನ ಪುಟದ ಹ್ಯಾಂಡಲ್. ನಿಮ್ಮ ಸಂದೇಶಗಳಲ್ಲಿ ನಿರ್ದಿಷ್ಟ ಬಳಕೆದಾರ ಅಥವಾ ಪುಟದ ಪ್ರಸ್ತಾಪ ಮಾಡಲು ಅವರ ಹ್ಯಾಂಡಲ್ ಅನ್ನು ಬಳಸಬಹುದು. '@' ಚಿಹ್ನೆಯಿಂದ ಪ್ರಾರಂಭವಾಗುವ ಹ್ಯಾಂಡಲ್ ಅನ್ನು ನಿಮ್ಮ ಸಂದೇಶದಲ್ಲಿ ಟೈಪ್ ಮಾಡುವ ಮೂಲಕ ನೀವು ಆ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದು ಸಾಧ್ಯ.

Handwriting recognition
ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್
(ರೂಪಿಸಬೇಕಿದೆ)
ಹಸ್ತಾಕ್ಷರವನ್ನು ಗುರುತಿಸುವ ತಂತ್ರಜ್ಞಾನ
ಮುದ್ರಿತ ಅಕ್ಷರಗಳನ್ನು ಗುರುತಿಸಿ ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಓಸಿಆರ್ ತಂತ್ರಜ್ಞಾನದಂತೆ ಹಸ್ತಾಕ್ಷರವನ್ನು ಗುರುತಿಸುವ 'ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್' ತಂತ್ರಜ್ಞಾನವೂ ಇದೆ. ಕೈಬರಹದ ಕಡತದ ಚಿತ್ರ - ಟಚ್‌ಸ್ಕ್ರೀನ್ ಮೇಲೆ ಬರೆದ ಪಠ್ಯವನ್ನೆಲ್ಲ ಪರಿಶೀಲಿಸಿ ಅದರಲ್ಲಿರುವ ಅಕ್ಷರಗಳನ್ನು ಗುರುತಿಸುವುದು, ಹಾಗೆ ಗುರುತಿಸಿದ್ದನ್ನು ಕಂಪ್ಯೂಟರಿಗೆ ಅರ್ಥವಾಗುವ ಭಾಷೆಗೆ ಬದಲಿಸುವುದು ಈ ತಂತ್ರಜ್ಞಾನದ ಕೆಲಸ. ಹಸ್ತಾಕ್ಷರ ಗುರುತಿಸಲು ಎರಡು ಮಾರ್ಗಗಳನ್ನು ಅನುಸರಿಸುವುದು ಸಾಧ್ಯ. ಈ ಪೈಕಿ ಮೊದಲನೆಯದು 'ಇಂಟೆಲಿಜೆಂಟ್ ಕ್ಯಾರೆಕ್ಟರ್ ರೆಕಗ್ನಿಶನ್' (ಐಸಿಆರ್). ಈ ವಿಧಾನದಲ್ಲಿ ಬರಹದ ಪ್ರತಿ ಅಕ್ಷರವನ್ನೂ ಪ್ರತ್ಯೇಕವಾಗಿ ಗುರುತಿಸಲು ಪ್ರಯತ್ನಿಸಲಾಗುತ್ತದೆ. ಹಲವು ಅರ್ಜಿಗಳನ್ನು ತುಂಬುವಾಗ ಅಕ್ಷರಗಳನ್ನು ಚಿಕ್ಕಚಿಕ್ಕ ಚೌಕಗಳೊಳಗೆ ಪ್ರತ್ಯೇಕವಾಗಿ ಬರೆಯುತ್ತೇವಲ್ಲ, ಆ ಮಾದರಿಯ ಪಠ್ಯವನ್ನು ಪರಿಶೀಲಿಸಲು ಇದು ಸೂಕ್ತ ವಿಧಾನ. ಬರಹದ ಸ್ವರೂಪ ಗೊತ್ತಿದ್ದ ಸಂದರ್ಭದಲ್ಲೂ (ಉದಾ: ಪತ್ರದ ಪಿನ್‌ಕೋಡ್‌ನಲ್ಲಿ ಅಂಕಿಗಳಷ್ಟೇ ಇರುತ್ತದೆ) ಈ ವಿಧಾನವನ್ನು ಬಳಸಬಹುದು. ಎರಡನೇ ವಿಧಾನ 'ಇಂಟೆಲಿಜೆಂಟ್ ವರ್ಡ್ ರೆಕಗ್ನಿಶನ್' (ಐಡಬ್ಲ್ಯೂಆರ್). ಇಲ್ಲಿ ಅಕ್ಷರಗಳ ಬದಲು ಪದಗಳನ್ನು ಪ್ರತ್ಯೇಕವಾಗಿ ಗುರುತಿಸುವ ಪ್ರಯತ್ನ ನಡೆಯುತ್ತದೆ. ಅರ್ಜಿ ನಮೂನೆಯಂತಹ ನಿರ್ಬಂಧಗಳೇನೂ ಇಲ್ಲದಾಗ ಉದ್ದಕ್ಕೆ ಬರೆದುಕೊಂಡು ಹೋಗುತ್ತೇವಲ್ಲ, ಅಂತಹ ಪಠ್ಯವನ್ನು ಡಿಜಿಟಲೀಕರಿಸಲು ಈ ವಿಧಾನವನ್ನು ಬಳಸಬಹುದು. ಹಸ್ತಾಕ್ಷರವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ತಂತ್ರಜ್ಞಾನ ಕನ್ನಡದಲ್ಲೂ ಇದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನುಗಳಿಗೆ ಲಭ್ಯವಿರುವ 'ಗೂಗಲ್ ಹ್ಯಾಂಡ್‌ರೈಟಿಂಗ್ ಇನ್‌ಪುಟ್' ಆಪ್ ಇಂತಹ ಸೌಲಭ್ಯಗಳಿಗೊಂದು ಉದಾಹರಣೆ.

Hamburger Icon
ಹ್ಯಾಂಬರ್ಗರ್ ಐಕನ್
(ರೂಪಿಸಬೇಕಿದೆ)
ಮೊಬೈಲ್ ಆಪ್‌ಗಳಲ್ಲಿ, ಜಾಲತಾಣಗಳಲ್ಲಿ ಕಾಣಸಿಗುವ ಮೂರು ಅಡ್ಡಗೆರೆ ಅಥವಾ ಚುಕ್ಕಿಗಳ ಚಿತ್ರ (ಐಕನ್); ಇದನ್ನು ಕ್ಲಿಕ್ ಮಾಡಿದರೆ ಸಂಬಂಧಪಟ್ಟ ಮೆನು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ
ಮೊಬೈಲ್ ಆಪ್ ಹಾಗೂ ಕೆಲವು ವೆಬ್‌ಸೈಟುಗಳಲ್ಲಿ ಪರದೆಯ ಒಂದು ಮೂಲೆಯಲ್ಲಿ ಮೂರು ಅಡ್ಡಗೆರೆಗಳ ಒಂದು ಚಿತ್ರ (ಐಕನ್) ಇರುವುದನ್ನು ನೀವು ನೋಡಿರಬಹುದು. ಇದರ ಹೆಸರೇ 'ಹ್ಯಾಂಬರ್ಗರ್ ಐಕನ್.' ಮೊಬೈಲಿನ ಪರದೆಯ ಮೇಲೆ ಲಭ್ಯವಿರುವ ಜಾಗ ಕಡಿಮೆಯಲ್ಲ, ಕಂಪ್ಯೂಟರ್ ಪರದೆಯಲ್ಲಿ ಮಾಡಿದಂತೆ ತಂತ್ರಾಂಶದ ನೂರೆಂಟು ಆಯ್ಕೆಗಳನ್ನೆಲ್ಲ (ಮೆನು) ಅಲ್ಲಿ ವಿವರವಾಗಿ ಪ್ರದರ್ಶಿಸುವುದು ಕಷ್ಟ. ಅಂತಹ ಆಯ್ಕೆಗಳನ್ನು ಹಿನ್ನೆಲೆಯಲ್ಲಿಟ್ಟು ಬಳಕೆದಾರ ಬೇಕೆಂದಾಗ ಮಾತ್ರ ಕಾಣಿಸುವಂತೆ ಮಾಡಲು ಈ ಐಕನ್ ಬಳಕೆಯಾಗುತ್ತದೆ. ಇದರಲ್ಲಿರುವ ಮೂರು ಅಡ್ಡಗೆರೆಗಳು ಬರ್ಗರ್ ರಚನೆಯನ್ನು ನೆನಪಿಸುವುದರಿಂದ ಅದಕ್ಕೆ ಹಾಗೆ ಹೆಸರು ಬಂದಿದೆ. ಮೊಬೈಲುಗಳ ಮೂಲಕವೇ ಜನಪ್ರಿಯವಾದ ಈ ಐಕನ್ ಈಗ ಹಲವು ಜಾಲತಾಣಗಳ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ಕಾಣಿಸಿಕೊಳ್ಳುತ್ತಿದೆ, ಮೆನು ಬೇಕಿದ್ದರೆ ಈ ಚಿತ್ರವನ್ನು ಕ್ಲಿಕ್ ಮಾಡಬೇಕೆನ್ನುವುದು ಬಳಕೆದಾರರಿಗೂ ಪರಿಚಯವಾಗುತ್ತಿದೆ.

Hacker
ಹ್ಯಾಕರ್
(ರೂಪಿಸಬೇಕಿದೆ)
ಬೇರೊಬ್ಬರ ಕಂಪ್ಯೂಟರ್ ವ್ಯವಸ್ಥೆಯನ್ನು ಪ್ರವೇಶಿಸಿ ಅಲ್ಲಿರುವ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವ ವ್ಯಕ್ತಿ
ಬೇರೊಬ್ಬರ ಕಂಪ್ಯೂಟರ್ ವ್ಯವಸ್ಥೆಯನ್ನು ಪ್ರವೇಶಿಸಿ ಅಲ್ಲಿರುವ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವ ಪ್ರಕ್ರಿಯೆಯನ್ನು ಹ್ಯಾಕಿಂಗ್ ಎಂದು ಗುರುತಿಸಲಾಗುತ್ತದೆ. ಇದರಲ್ಲಿ ತೊಡಗಿದವರನ್ನು ಹ್ಯಾಕರ್‌ಗಳೆಂದು ಕರೆಯುವುದು ಸಾಮಾನ್ಯ ಅಭ್ಯಾಸ. ಹ್ಯಾಕರ್‌ಗಳ ಉದ್ದೇಶ ಅನೇಕ ಬಗೆಯದಾಗಿರುವುದು ಸಾಧ್ಯ. ಹ್ಯಾಕರುಗಳ ಪೈಕಿ ಅನೇಕರು ಇತರರ ಮಾಹಿತಿಯನ್ನು ಕದ್ದು ಅದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಾಹ್ಯ ಜಗತ್ತು ವಿಲನ್‌ಗಳಂತೆ ನೋಡುವುದು ಇಂತಹವರನ್ನೇ. ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಇವರ ಕೆಲಸ ಶಿಕ್ಷಾರ್ಹ ಅಪರಾಧವೆನಿಸಿಕೊಳ್ಳುತ್ತದೆ. ಆದರೆ ಎಲ್ಲ ಹ್ಯಾಕರ್‌ಗಳೂ ಖಳನಾಯಕರೇ ಆಗಬೇಕೆಂದಿಲ್ಲ. ಕಂಪ್ಯೂಟರ್ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರೀಕ್ಷಿಸಿ ಅವುಗಳ ಸುರಕ್ಷತೆಯಲ್ಲಿರಬಹುದಾದ ದೋಷಗಳನ್ನು ಗುರುತಿಸುವ ಹ್ಯಾಕರ್‌ಗಳೂ ಇದ್ದಾರೆ. ತಮ್ಮ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಬಯಸುವ ಸಂಸ್ಥೆಗಳಿಗೆ ಈ ಬಗೆಯ ಹ್ಯಾಕರುಗಳಿಂದ ಮಹತ್ವದ ನೆರವು ದೊರಕುತ್ತದೆ. ದುರುದ್ದೇಶಪೂರಿತ ವ್ಯಕ್ತಿಗಳು ನಮ್ಮ ವ್ಯವಸ್ಥೆಯನ್ನು ಹಾಳುಗೆಡವಲು ಏನೇನೆಲ್ಲ ಮಾಡಬಹುದು ಎಂದು ಊಹಿಸಿ, ಅವರ ಕುತಂತ್ರಗಳು ಸಫಲವಾಗದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಇಂತಹ ಹ್ಯಾಕರುಗಳ ನೆರವಿನಿಂದ ಸಾಧ್ಯವಾಗುತ್ತದೆ. ಅಂದಹಾಗೆ ಹ್ಯಾಕಿಂಗ್‌ನ ಸ್ವರೂಪ ಮೂಲತಃ ಹೀಗಿರಲಿಲ್ಲವಂತೆ. ೧೯೬೦ರ ದಶಕದಲ್ಲಿ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಹ್ಯಾಕಿಂಗ್ ಕಲ್ಪನೆ ಜನ್ಮತಳೆದ ಸಂದರ್ಭದಲ್ಲಿ ಚಿತ್ರವಿಚಿತ್ರ ತಂತ್ರಾಂಶಗಳನ್ನು ಬರೆಯುವವರು, ಕುಚೋದ್ಯಕ್ಕಾಗಿ ಪ್ರಾಕ್ಟಿಕಲ್ ಜೋಕ್ ಮಾಡುವವರು, ಏನೇನೋ ಸಾಹಸಮಾಡುವವರನ್ನೆಲ್ಲ ಹ್ಯಾಕರ್‌ಗಳೆಂದು ಕರೆಯಲಾಗುತ್ತಿತ್ತು. ಕಂಪ್ಯೂಟರುಗಳ ಸುರಕ್ಷತಾ ವ್ಯವಸ್ಥೆಯನ್ನು ಭೇದಿಸಿ ಅದರಲ್ಲಿನ ಹುಳುಕುಗಳನ್ನು ತೋರಿಸಿಕೊಡುವುದೂ ಅಂದಿನ ಹ್ಯಾಕರ್‌ಗಳ ಹವ್ಯಾಸಗಳಲ್ಲೊಂದಾಗಿತ್ತು ಎಂದು ಇತಿಹಾಸ ಹೇಳುತ್ತದೆ.

Haptics
ಹ್ಯಾಪ್ಟಿಕ್ಸ್
(ರೂಪಿಸಬೇಕಿದೆ)
ಕಂಪ್ಯೂಟರ್ - ಸ್ಮಾರ್ಟ್‌ಫೋನ್‌ಗಳ ಜೊತೆಗಿನ ನಮ್ಮ ಒಡನಾಟಕ್ಕೆ ಸ್ಪರ್ಶದ ಅನುಭವವನ್ನೂ ಸೇರಿಸುವ ತಂತ್ರಜ್ಞಾನ
ಕಂಪ್ಯೂಟರ್ - ಸ್ಮಾರ್ಟ್‌ಫೋನ್‌ಗಳನ್ನೆಲ್ಲ ಬಳಸುವಾಗ ನಮ್ಮ ಅನುಭವವೆಲ್ಲ ನೋಡುವುದಕ್ಕೆ ಹಾಗೂ ಕೇಳುವುದಕ್ಕಷ್ಟೇ ಸೀಮಿತವಾಗಿರುವುದು ಸಾಮಾನ್ಯ. ನೋಡುವ - ಕೇಳುವ ಅನುಭವದ ಜೊತೆಗೆ ಈ ಒಡನಾಟಕ್ಕೆ ಸ್ಪರ್ಶದ ಅನುಭವವನ್ನೂ ಸೇರಿಸುವುದು 'ಹ್ಯಾಪ್ಟಿಕ್ಸ್'ನ ಹೆಚ್ಚುಗಾರಿಕೆ. ಛಾಯಾವಾಸ್ತವದ (ವರ್ಚುಯಲ್ ರಿಯಾಲಿಟಿ) ಜಗತ್ತಿಗೆ ಇದು ಸ್ಪರ್ಶದ ಹೊಸ ಆಯಾಮವನ್ನು ಸೇರಿಸುತ್ತದೆ. ಕಂಪ್ಯೂಟರಿನಲ್ಲಿ ಟೈಪಿಸುವಾಗ ಅದರ ಕೀಲಿಗಳು ನಮ್ಮ ಸ್ಪರ್ಶಕ್ಕೆ ಸ್ಪಂದಿಸುವುದು ನಮ್ಮ ಅನುಭವಕ್ಕೆ ಬರುತ್ತದೆ. ಅದೇ ಮೊಬೈಲ್ ಟಚ್‌ಸ್ಕ್ರೀನ್ ಮೇಲಿನ ಕೀಲಿಮಣೆಯಾದರೆ ಅದರಲ್ಲಿನ ಕೀಲಿಗಳು ನೋಡಲು ಎಷ್ಟೇ ಸಹಜವಾಗಿ ಕಂಡರೂ ಅವುಗಳನ್ನು ಸ್ಪರ್ಶಿಸುವ ಅನುಭವ ಮಾತ್ರ ಸಿಗುವುದಿಲ್ಲ. ಪರದೆಯ ಮೇಲಿನ ಕೀಲಿಯನ್ನು ಸ್ಪರ್ಶಿಸಿದಾಗ ಮೊಬೈಲು ಸಣ್ಣದಾಗಿ ಕಂಪಿಸುವಂತೆ ಮಾಡಿ ಸ್ಪರ್ಶದ ಅನುಭವವನ್ನೂ ನೀಡುವುದು ಹ್ಯಾಪ್ಟಿಕ್ಸ್‌ನಿಂದಾಗಿ ಸಾಧ್ಯವಾಗುತ್ತದೆ. ಮೊಬೈಲಿನಲ್ಲಷ್ಟೇ ಅಲ್ಲ, ಕಂಪ್ಯೂಟರ್ ಆಟಗಳಲ್ಲಿ ಬಳಕೆಯಾಗುವ ಜಾಯ್‌ಸ್ಟಿಕ್‌ನಂತಹ ಸಾಧನಗಳಲ್ಲೂ ಸ್ಪರ್ಶದ ಅನುಭವ ನೀಡಬಹುದು; ಅಂದರೆ, ಕಾರ್ ರೇಸ್ ಆಟದಲ್ಲಿ ನಿಮ್ಮ ಕಾರು ಹಳ್ಳಕೊಳ್ಳಗಳಿಗೆ ಇಳಿದಾಗ - ರೋಡ್ ಹಂಪ್ ಮೇಲೆ ಹಾದುಹೋದಾಗ ಜಾಯ್‌ಸ್ಟಿಕ್ ಅಲುಗಾಡುವಂತೆ ಮಾಡುವುದು ಹ್ಯಾಪ್ಟಿಕ್ಸ್ ಸಹಾಯದಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಟಚ್‌ಸ್ಕ್ರೀನ್ ಪರದೆಯ ಮೇಲೆ ಕಾಣುವ ಚಿತ್ರವನ್ನು ಮುಟ್ಟಿದರೆ ಅದರಲ್ಲಿರುವ ವಸ್ತುಗಳನ್ನು ಮುಟ್ಟಿದ ಅನುಭವವೇ ಆಗುವಂತೆಯೂ ಇದು ಮಾಡಬಲ್ಲದು. ಈ ಪರಿಕಲ್ಪನೆಯನ್ನು 'ವರ್ಚುಯಲ್ ಟಚ್' ಎಂದು ಕರೆಯುತ್ತಾರೆ.

Hashtag
ಹ್ಯಾಶ್‌ಟ್ಯಾಗ್
(ರೂಪಿಸಬೇಕಿದೆ)
ಹ್ಯಾಶ್ (#) ಸಂಕೇತದಿಂದ ಪ್ರಾರಂಭವಾಗುವ ಯಾವುದೇ ಪದ ಅಥವಾ ಪದಗುಚ್ಛ; ಸಮಾಜಜಾಲಗಳಲ್ಲಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಬರಹಗಳನ್ನು ಒಟ್ಟಿಗೆ ಗುರುತಿಸಲು ಇವು ಬಳಕೆಯಾಗುತ್ತವೆ.
ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ಸಮಾಜಜಾಲಗಳಲ್ಲಿ ನಾವು ದಿನವೂ ನೋಡುವ ಅನೇಕ ಸಂದೇಶಗಳಲ್ಲಿ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ಬಳಸಲಾಗಿರುತ್ತದೆ. ಇಂತಹ ಪದಗಳನ್ನು 'ಹ್ಯಾಶ್‌ಟ್ಯಾಗ್'ಗಳೆಂದು ಕರೆಯುತ್ತಾರೆ. ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌ಟ್ಯಾಗ್‌ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಬೆಂಗಳೂರಿಗೆ ಸಂಬಂಧಪಟ್ಟ ವಿಷಯವೆಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ #Kannada - ಹೀಗೆ ಯಾವುದೇ ಬಗೆಯ ಹ್ಯಾಶ್‌ಟ್ಯಾಗ್‌ಗಳನ್ನು ನಾವೇ ಸ್ವತಃ ರೂಪಿಸಿಕೊಳ್ಳಬಹುದು, ಅಥವಾ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಲೂಬಹುದು. ಇಂತಹ ಯಾವುದೇ ಹ್ಯಾಶ್‌ಟ್ಯಾಗ್ ಬಳಸಿರುವ ಎಲ್ಲ ಸಂದೇಶಗಳನ್ನೂ ಸಮಾಜ ಜಾಲಗಳು ಪ್ರತ್ಯೇಕವಾಗಿ ವರ್ಗೀಕರಿಸುತ್ತವೆ. ಹಾಗಾಗಿ ನಿರ್ದಿಷ್ಟ ಹ್ಯಾಶ್‌ಟ್ಯಾಗ್ ಬಳಸಿರುವ ಸಂದೇಶಗಳನ್ನು ಒಟ್ಟಾಗಿ ನೋಡುವುದು, ಹಾಗೂ ಅದನ್ನು ಎಷ್ಟು ಮಂದಿ ಬಳಸಿದ್ದಾರೆ ಎನ್ನುವುದರ ಆಧಾರದ ಮೇಲೆ ಆ ವಿಷಯದ ಜನಪ್ರಿಯತೆಯನ್ನು ಅರಿಯುವುದು ಕೂಡ ಸಾಧ್ಯವಾಗುತ್ತದೆ. ನಿರ್ದಿಷ್ಟ ವಿಷಯದ ಕುರಿತು ಹಂಚಿಕೊಳ್ಳಲಾಗಿರುವ ಮಾಹಿತಿ ಅಥವಾ ಸಂದೇಶಗಳನ್ನು ಹುಡುಕುವುದಕ್ಕೂ ಹ್ಯಾಶ್‌ಟ್ಯಾಗ್‌ಗಳು ಸಹಕಾರಿ. ಹ್ಯಾಶ್‌ಟ್ಯಾಗ್‌ನಲ್ಲಿ ಒಂದೇ ಪದ ಇರಬೇಕು, ಪ್ರಾರಂಭ '#'ನೊಡನೆ ಆಗಿರಬೇಕು ಎನ್ನುವುದು ನಿಯಮ. ಹ್ಯಾಶ್‌ಟ್ಯಾಗ್‌ನಲ್ಲಿ ಅಕ್ಷರ, ಅಂಕಿ ಹಾಗೂ ಅಂಡರ್‌ಸ್ಕೋರ್('_')ಗಳನ್ನು ಮಾತ್ರ ಬಳಸಬಹುದು. ಇತರ ಲೇಖನಚಿಹ್ನೆಗಳಿಗಾಗಲೀ ಖಾಲಿಜಾಗಗಳಿಗಾಗಲೀ (ಸ್ಪೇಸ್) ಹ್ಯಾಶ್‌ಟ್ಯಾಗ್‌ನಲ್ಲಿ ಜಾಗವಿಲ್ಲ.


logo