(ಸಂ) ಎತ್ತರ ಯಾ ತಗಲುವ ಸಮಯಗಳಂಥ ಚರಗಳು ನಿರ್ದಿಷ್ಟ ವರ್ಗಾಂತರದಲ್ಲಿ ಯಾವುದೇ ಮೌಲ್ಯವನ್ನು ತೆಗೆದುಕೊಳ್ಳಬಹುದು. ಉದಾ: ಒಬ್ಬ ವ್ಯಕ್ತಿಯ ಎತ್ತರ ೧೪೫.೩ ಸೆಮೀ, ೧೪೫.೩೬ ಸೆಮೀ, ೧೪೫.೩೬೨ ಸೆಮೀ ಇತ್ಯಾದಿ ಯಾಗಿ ಯಾವುದೇ ಮೌಲ್ಯವನ್ನು ತೆಗೆದುಕೊಳ್ಳಬಹುದು. ಇದು ಒಂದು ಅವಿಚ್ಛಿನ್ನ ಚರ. ಅಳೆಯುವ ಸಾಧನದ ಇತಿಮಿತಿಯಿಂದಾಗಿ ಅವಿಚ್ಛಿನ್ನ ಚರಗಳನ್ನು ವಿಚ್ಛಿನ್ನವಾಗಿ ಗುರುತಿಸಿಕೊಳ್ಳುವುದು ರೂಢಿ
continuous variable
ಅವಿಚ್ಛಿನ್ನ ಫಲನ
(ಗ) ಸ್ವಪ್ರಾಂತದ ಪ್ರತಿಯೊಂದು ಬಿಂದುವಿನಲ್ಲಿಯೂ ಅವಿಚ್ಛಿನ್ನವಾಗಿರುವ ಫಲನ. ಆಗಿದ್ದರೆ, ಆಗ x = aಯಲ್ಲಿ ಈ ಫಲನ ಅವಿಚ್ಛಿನ್ನ. ಜ್ಯಾಮಿತೀಯವಾಗಿ, ಫಲನದ ಆಲೇಖಕ್ಕೆ ಈ ಬಿಂದು ವಿನಲ್ಲಿ ಮುರಿತ/ಜಿಗಿತ ಇರುವುದಿಲ್ಲ. ನೋಡಿ: ವಿಚ್ಛಿನ್ನ ಫಲನ
continuous function
ಅವಿಚ್ಛಿನ್ನ ರೋಹಿತ
(ಭೌ) ಎಲ್ಲ ಅಲೆಯುದ್ದಗಳಿದ್ದು, ಅಲೆಯುದ್ದ ಬದಲಾದಂತೆ ತೀವ್ರತೆಯಲ್ಲಿ ಅವಿಚ್ಛಿನ್ನ / ಅವಿರತ ವ್ಯತ್ಯಾಸಗಳನ್ನು ಪ್ರದರ್ಶಿಸುವ ರೋಹಿತ
continuous spectrum
ಅವಿಚ್ಛಿನ್ನತೆ
(ಸಾ) ತುಂಡಾಗದಿರುವಿಕೆ. ಅಖಂಡತೆ. ಸಂತತತೆ, ಸಾತತ್ಯ
continuity
ಅವಿಡಿಟಿ
(ವೈ) ಪ್ರತಿಜನಕ ಮತ್ತು ಪ್ರತಿಕಾಯಗಳ ನಡುವೆ ಇರುವ ಸೆಳೆಬಲದ ಅಂದಾಜು ಅಳೆತ. ಪ್ರತಿಜನಕ-ಪ್ರತಿ ಕಾಯಗಳ ಸಂಕೀರ್ಣ ರೂಪುಗೊಳ್ಳುವ ವೇಗವನ್ನು ಆಧರಿಸಿ, ಅವುಗಳ ನಡುವೆ ಇರುವ ಪರಸ್ಪರ ಆಕರ್ಷಕ ಬಲವನ್ನು ಅಳೆಯಲಾಗುತ್ತದೆ. ಬಂಧಕತ್ರಾಣ (ರ) ವಿಯೋಜನೆಯ ಪ್ರಮಾಣ ಅವಲಂಬಿಸಿದಂತೆ ಆಮ್ಲದ ಅಥವಾ ಪ್ರತ್ಯಾಮ್ಲದ ರಾಸಾಯನಿಕ ಶಕ್ತಿ
avidity
ಅವಿಪಥೀ
(ಭೌ) ಗೋಳೀಯ ವಿಪಥನರಹಿತ ಪ್ರತಿಬಿಂಬ ಕೊಡುವ ದೃಕ್ ವ್ಯವಸ್ಥೆ ಕುರಿತ. ಗೋಳಾಪಸರಣ ರಹಿತವಾದ
aplanatic
ಅವಿಪರ್ಯಯಶೀಲ
(ಭೌ) (ಒಂದು ದಿಶೆಯಲ್ಲಿ) ಒಂದು ಸ್ಥಿತಿಯಿಂದ ಮತ್ತೊಂದಕ್ಕೆ ಸ್ವಪ್ರೇರಿತವಾಗಿ ಬದಲುವ ಆದರೆ ವಿರುದ್ಧ ದಿಶೆಯಲ್ಲಿ ಬದಲದ ಪ್ರವೃತ್ತಿಯುಳ್ಳ (ಭೌತಿಕ ವ್ಯವಸ್ಥೆಗಳು). ಅಪರಾವರ್ತ
irreversible
ಅವಿಪರ್ಯಯಶೀಲ ಕ್ರಿಯೆ
(ರ) ಒಂದು ದಿಶೆಯಲ್ಲಿ ಮಾತ್ರ ಸಂಭವಿಸುವ, ಆದ್ದರಿಂದ ಸಮಾಪ್ತಿಯತ್ತ ಸಾಗುವ ರಾಸಾಯನಿಕ ಕ್ರಿಯೆ
irreversible reaction
ಅವಿಭಜನೀಯ
(ಗ) ಭಾಗಿಸಲು ಸಾಧ್ಯವಾಗದ ಉದಾ: ೧೦ನ್ನು ೩ರಿಂದ ನಿಶ್ಶೇಷವಾಗಿ ಭಾಗಿಸಲಾಗದು. ಆದ್ದರಿಂದ ೩ ಕುರಿತಂತೆ ೧೦ ಅವಿಭಜನೀಯ
indivisible
ಅವಿಭಾಜ್ಯ ಸಂಖ್ಯೆ
(ಗ) ಸ್ವತಃ ತಾನು ಮತ್ತು ೧ ಮಾತ್ರ ಭಾಜಕ ಆಗಿರುವ ಮತ್ತು ಬೇರಾವ ಸಂಖ್ಯೆಯಿಂದಲೂ ಭಾಗವಾಗದ ಪೂರ್ಣಾಂಕ. ಉದಾ: ೨, ೩, ೫, ೭, ೧೧, ೧೩,....೩೭,....೫೫೨೧