ಆರಿದ್ರಾ ಎಂಬ ನಕ್ಷತ್ರ ಮತ್ತು ಆಗ ಬೀಳುವ ಮಳೆ (ಮೈಸೂ.ಜಿ/ಚಾಮ.ಜಿ).
ಆದ್ರಿ ಬಂದರೆ ದರಿದ್ರ ಇಲ್ಲ (ದಾವ.ಜಿ) ಕೆಲವು ಭಾಗಗಳವರು ಇದನ್ನು ಅನಿಶ್ಚಿತಮಳೆ ಎನ್ನುತ್ತಾರೆ. ಆದ್ರೆ ಆದ್ರಿ ಹೋದ್ರೆ ಹೋದ್ರಿ ಎಂಬ ಮಾತು ಈ ಹಿನ್ನೆಲೆಯಲ್ಲಿ ಹುಟ್ಟಿದೆ. ಆರಿದ್ರ ಮಳೆ ಆಗುವಾಗ ಗುಡುಗು ಸಿಡಿಲು ಇರುವುದಿಲ್ಲವಂತೆ. ಆದ್ರೆ ಗುಡುಗಿದರೆ ಆರು ಮಳೆಯಿಲ್ಲ ಎಂಬ ಮಾತೂ ಇದೆ (ಶಿವ.ಜಿ)
ಆದ್ರಿಗಾಳಿ
ಆರಿದ್ರಾ ನಕ್ಷತ್ರದ ಮಳೆಯ ಸಂದರ್ಭದಲ್ಲಿ ಬೀಸುವ ಗಾಳಿ. ಈ ಗಾಳಿ ತುಂಬ ಶೀತದಿಂದ ಕೂಡಿದ್ದು ಎಂಥ ಒರಟು ಮೈಯನ್ನೂ ನಡುಗಿಸುತ್ತದೆ.
ಆದ್ರಿ ಗಾಳಿ ಬೀಸಿ ಅಳ್ಳಳ್ಳೆ ಮೇಲೆ ಹೆಟ್ಟುವಾಗ ಹಾಳ್ ನನ್ ಜೀವ ಹೆಣ್ಣಾಗಾದ್ರೂ ಹುಟ್ಟಾರ್ದಿತ್ತೆ (ಧಾರ.ಜಿ).
ಆದ್ರಿಮರ
ದೀರ್ಘಕಾಲದ ಆಯುಷ್ಯ ಇರುವ ಒಂದು ವೃಕ್ಷ
ಆದ್ರಿಮಳೆ
ಆರಿದ್ರ ನಕ್ಷತ್ರದಲ್ಲಿ ಬೀಳುವ ಮಳೆ
ಆದ್ರಿಮಳೆ ಹಬ್ಬ/ಆದ್ರೆ ಮಳೆ ಹಬ್ಬ
ಆರಿದ್ರಾ ಮಳೆ ಬೀಳುವ ಸಂದರ್ಭದಲ್ಲಿ ಆಚರಿಸುವ ಒಂದು ಹಬ್ಬ. ಬಿತ್ತಿದ ಪೈರು ಹಸುರಾಗಿ ಕುಡಿಯೊಡೆದು ಎಲ್ಲೆಲ್ಲಿಯೂ ಸಮೃದ್ಧಿ ಸೂಸುವ ಸಂದರ್ಭದಲ್ಲಿ ರೈತರು ಈ ಹಬ್ಬವನ್ನು ಆಚರಿಸುತ್ತಾರೆ (ಧಾರ.ಜಿ)