logo
भारतवाणी
bharatavani  
logo
Knowledge through Indian Languages
Bharatavani

Janapada Vastukosha (Kannada)

ಲಕ್ಷ್ಮೀಕೊಡ
ಹಟ್ಟಿ ಹಬ್ಬದ (ದೀಪಾವಳಿ) ಸಂದರ್ಭದಲ್ಲಿ ಪೂಜೆಗೊಳ್ಳುವ ಒಂದು ಸಾಧನ. ಇದು ಲಕ್ಕಮ್ಮ(ಲಕ್ಷ್ಮೀ)ನ ಸಂಕೇತವಾಗಿ ಜನಪದರಿಂದ ಆರಾಧನೆಗೊಳ್ಳುತ್ತದೆ. ಈ ಕೊಡದ ಮೇಲೆ ತೆಂಗಿನಕಾಯಿ, ಕುಪ್ಪಸದ ಕಣ, ತಾಳಿ, ಮುತ್ತಿನ ಸರ ಇತ್ಯಾದಿಗಳನ್ನು ಇರಿಸಲಾಗುತ್ತದೆ. ಹಟ್ಟಿ ಹಬ್ಬವನ್ನು ಜನಪದರು ಮುಂಜಾನೆ/ಹಗಲು/ಸಾಯಂಕಾಲ ಹೊತ್ತಿಗೆ ಮಾಡಬಹುದಾದರೂ ಲಕ್ಷ್ಮೀಕೊಡವಂತೂ ಅನಿವಾರ್‍ಯವಾಗಿರುತ್ತದೆ. ಲಕ್ಕಮ್ಮ ದೇವತೆ ಸಮೃದ್ಧಿಯನ್ನು ಸಂಕೇತಿಸುತ್ತಾಳೆ. ಕೊಡನ್ನು ಆವೆ ಮಣ್ಣಿನಿಂದ ತಯಾರಿಸುತ್ತಾರೆ. ಕೊಡಕ್ಕೆ ಸಾಮಾನ್ಯವಾಗಿ ನಾಗನ ಹೆಡೆಗಳ ಚಿತ್ರಗಳಿಂದ ಅಲಂಕರಿಸುತ್ತಾರೆ. ಈ ಕೊಡವನ್ನು ಜೋಪಾನವಾಗಿ ತೆಗೆದಿರಿಸಿ ಮುಂದಿನ ವರ್ಷವೂ ಬಳಸಿಕೊಳ್ಳುತ್ತಾರೆ.

ಲಗಾಮು
ಕುದುರೆಗಳನ್ನು ನಿಯಂತ್ರಿಸಲು ಬಳಸುವ ಸಾಧನ. ಇದು ಸುಮಾರು ಆರರಿಂದ ಏಳು ಅಡಿ ಉದ್ದವಿದ್ದು ಸುಮಾರು ಅರ್ಧದ ಬಳಿಕ ಎರಡಾಗಿ ವಿಭಾಗಗೊಂಡು ತುದಿಯಲ್ಲಿ ಪರಸ್ಪರ ಸಿಕ್ಕಿಸಿರುವ ಎರಡು ಕಬ್ಬಿಣದ ಪುಟ್ಟದಿಂಡುಗಳನ್ನು ಹೊಂದಿರುತ್ತದೆ. ಈ ಕಬ್ಬಿಣದ ರಚನೆಗಳು ಸುಮಾರು ಎರಡು ಇಂಚು ಉದ್ದವಿರುತ್ತವೆ. ಇವುಗಳ ಇನ್ನೆರಡು ತುದಿಗೆ ಸುಮಾರು ಎರಡು ಇಂಚು ವ್ಯಾಸದ ಉಂಗುರ(ರಿಂಗ್)ಗಳನ್ನು ಜೋಡಿಸಿರುತ್ತಾರೆ. ಕಬ್ಬಿಣದ ಕಿರುದಿಂಡುಗಳು ಕುದುರೆಯ ಬಾಯೊಳಗೆ ಹೋಗಿರುತ್ತವೆ. ಲಗಾಮಿನ ಹಗ್ಗಗಳನ್ನು ಚರ್ಮದ ಮಿಣಿಗಳಿಂದಲೂ ನೂಲನ್ನು ಚೆನ್ನಾಗಿ ಹೆಣೆದ ಹಗ್ಗಗಳಿಂದಲೂ ರಚಿಸುತ್ತಾರೆ. ಬಾಯೊಳಗೆ ಸಲಕರಣೆ ಅಳವಡಿಸಿ ಪ್ರಾಣಿಗಳನ್ನು ನಿಯಂತ್ರಿಸಲು ಬಳಸುವ ಏಕೈಕೆ ಸಾಧನ ಲಗಾಮು ಮಾತ್ರ.

ಲಾಟೀನು/ಲಾಟಾಣ
ಬೆಳಕಿಗಾಗಿ ಬಳಸುವ ಸಾಧನ. ದೀಪ ಹೊತ್ತಿಸಿದ ನಂತರ ಗಾಳಿಗೆ ನಂದಿಹೋಗದಂತೆ(ಆರಿ ಹೋಗದಂತೆ) ಗಾಜಿನ ಬುರುಡೆಯನ್ನು ಅಳವಡಿಸಲಾಗುತ್ತದೆ. ಇದರ ಬತ್ತಿಯನ್ನು ಎತ್ತುವುದಕ್ಕೆ ಮತ್ತು ಇಳಿಸುವುದಕ್ಕೆ ವ್ಯವಸ್ಥೆ ಇರುತ್ತದೆ. ಸೀಮೆಎಣ್ಣಿ ಹಾಕಲು ಬುಡದಲ್ಲಿ ನಳಿಕೆಯ ವ್ಯವಸ್ಥೆ ಇರುತ್ತದೆ. ಎತ್ತಿಕೊಂಡು ಒಯ್ಯಲು ಮೇಲ್ಭಾಗದಲ್ಲಿ ಹಿಡಿಕೆಯ ವ್ಯವಸ್ಥೆ ಇದೆ. ಕಬ್ಬಿಣದ ತೆಳು ತಗಡಿನಿಂದ ಲಾಟೀನುಗಳನ್ನು ತಯಾರಿಸುತ್ತಾರೆ. ಸೀಮೆ ಎಣ್ಣೆ ಮತ್ತು ಬತ್ತಿಗಳಿಂದ ಉರಿಯುತ್ತದೆ ಲಾಟಾನುಗಳನ್ನು ಮನೆ, ಕಾವಲು ಚಪ್ಪರ, ಎತ್ತಿನಗಾಡಿಗಳ ರಾತ್ರಿ ಪಯಣಗಳಿಗೆ ಬಳಸುತ್ತಿದ್ದರು.


logo