भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

SEO

ಎಸ್‌ಇಒ
Kannada Equivalent: (ರೂಪಿಸಬೇಕಿದೆ)
Short Description : ಸರ್ಚ್ ಇಂಜನ್ ಆಪ್ಟಿಮೈಸೇಶನ್; ಸರ್ಚ್ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯಲು ಜಾಲತಾಣಗಳು ಅನುಸರಿಸುವ ಕ್ರಮಗಳು
Long Description: ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಏನು ಮಾಹಿತಿ ಬೇಕೆಂದರೂ ನಾವು ಥಟ್ಟನೆ ಸರ್ಚ್ ಇಂಜನ್‌ಗಳತ್ತ ಮುಖಮಾಡುತ್ತೇವೆ. ಹಾಗೆ ಸರ್ಚ್ ಮಾಡುವಾಗಲೂ ಅಷ್ಟೆ, ನಾವು ಗಮನಿಸುವುದು ಫಲಿತಾಂಶ ಪಟ್ಟಿಯ ಮೊದಲ ಕೆಲ ಸ್ಥಾನಗಳಲ್ಲಿರುವ ತಾಣಗಳನ್ನು ಮಾತ್ರವೇ. ಹೀಗಾಗಿಯೇ ಬಹಳಷ್ಟು ಜಾಲತಾಣಗಳು ಸರ್ಚ್ ಫಲಿತಾಂಶಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ಆ ಮೂಲಕ ಹೆಚ್ಚಿನ ಓದುಗರನ್ನು ತಮ್ಮತ್ತ ಸೆಳೆಯುವ, ತಮ್ಮ ವಹಿವಾಟನ್ನು ವಿಸ್ತರಿಸಿಕೊಳ್ಳುವ ಉದ್ದೇಶ ಅವುಗಳದು.
ಸರ್ಚ್ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯಲು ಜಾಲತಾಣಗಳು ಅನುಸರಿಸುವ ಕ್ರಮಗಳನ್ನು ಒಟ್ಟಾರೆಯಾಗಿ ಸರ್ಚ್ ಇಂಜನ್ ಆಪ್ಟಿಮೈಸೇಶನ್ (ಎಸ್‌ಇಒ) ಎಂದು ಕರೆಯುತ್ತಾರೆ.
ಬೇರೆಬೇರೆ ಸರ್ಚ್ ಇಂಜನ್‌ಗಳು ಹೇಗೆ ಕೆಲಸಮಾಡುತ್ತವೆ, ಅವುಗಳ ಬಳಕೆದಾರರು ಏನನ್ನು ಹುಡುಕುತ್ತಾರೆ, ಹುಡುಕಲು ಹೆಚ್ಚಾಗಿ ಬಳಕೆಯಾಗುವ ಕೀವರ್ಡ್‌ಗಳು ಯಾವುವು ಎನ್ನುವುದನ್ನೆಲ್ಲ ಎಸ್‌ಇಒ ತಂತ್ರಗಳು ಗಮನದಲ್ಲಿಟ್ಟುಕೊಳ್ಳುತ್ತವೆ. ಈ ಅಂಶಗಳಿಗೆ ಅನುಗುಣವಾಗಿ ಜಾಲತಾಣದ ವಿನ್ಯಾಸ ಹಾಗೂ ಅದರಲ್ಲಿರುವ ಮಾಹಿತಿಯನ್ನು ಬದಲಿಸಲಾಗುತ್ತದೆ. ಸರ್ಚ್ ಇಂಜನ್‌ಗಳಿಗೆ ಹುಡುಕಲು ಸುಲಭವಾಗುವಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು, ತಾಣದಲ್ಲಿರುವ ಮಾಹಿತಿಯನ್ನು ವ್ಯವಸ್ಥಿತವಾಗಿ ವಿಂಗಡಿಸುವುದು, ಮಾಹಿತಿಯ ಜೊತೆಗೆ ಸೂಕ್ತ ಕೀವರ್ಡ್‌ಗಳನ್ನು (‘ಟ್ಯಾಗ್’) ಜೋಡಿಸಿಡುವುದು, ಓದುಗರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುವಂತೆ – ಅವರು ತಾಣದ ಕೊಂಡಿಗಳನ್ನು ಹೆಚ್ಚುಹೆಚ್ಚಾಗಿ ಶೇರ್ ಮಾಡುವಂತೆ ನೋಡಿಕೊಳ್ಳುವುದು – ಇವೆಲ್ಲ ಎಸ್‌ಇಒ ಚಟುವಟಿಕೆಯ ಅಂಗಗಳೇ.

SSD

ಎಸ್‌ಎಸ್‌ಡಿ
Kannada Equivalent: (ರೂಪಿಸಬೇಕಿದೆ)
Short Description : ಸಾಲಿಡ್ ಸ್ಟೇಟ್ ಡ್ರೈವ್; ಮಾಹಿತಿ ಶೇಖರಣೆಯಲ್ಲಿ ಹಾರ್ಡ್ ಡಿಸ್ಕ್‌ಗೆ ಪರ್ಯಾಯವಾಗಿ ಬೆಳೆಯುತ್ತಿರುವ ಹೆಚ್ಚು ಸಕ್ಷಮ – ವಿಶ್ವಾಸಾರ್ಹ ಸಾಧನ.
Long Description: ಕಂಪ್ಯೂಟರಿನಲ್ಲಿ ಮಾಹಿತಿ ಸಂಗ್ರಹಿಸಿಡಲು ಹಾರ್ಡ್ ಡಿಸ್ಕ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತವೆ. ಆದರೆ ಅವುಗಳಲ್ಲಿ ಮಾಹಿತಿಯನ್ನು ಓದಿ-ಬರೆಯುವ ವೇಗ ಕಡಿಮೆ, ಜೊತೆಗೆ ಯಾಂತ್ರಿಕ ವೈಫಲ್ಯದ ಸಾಧ್ಯತೆಯೂ ಇರುತ್ತದೆ.
ಈ ಪರಿಸ್ಥಿತಿ ಬದಲಿಸಬೇಕೆಂದರೆ ಮಾಹಿತಿ ಶೇಖರಣೆಯಲ್ಲಿ ವಿಭಿನ್ನ ಮಾರ್ಗಗಳ ಬಳಕೆ ಅಗತ್ಯವಾಗುತ್ತದೆ. ಅಂತಹುದೊಂದು ಮಾರ್ಗವೇ ಸಾಲಿಡ್ ಸ್ಟೇಟ್ ಡ್ರೈವ್ (ಎಸ್‌ಎಸ್‌ಡಿ). ಹಾರ್ಡ್ ಡಿಸ್ಕ್‌ನ ತಟ್ಟೆಗಳ, ಚಲಿಸುವ ಭಾಗಗಳ ಜಾಗದಲ್ಲಿ ಇದು ಫ್ಲಾಶ್ ಮೆಮೊರಿ ಚಿಪ್‌ಗಳನ್ನು ಬಳಸುತ್ತದೆ. ಪೆನ್‌ಡ್ರೈವ್‌ಗಳಲ್ಲಿ ಬಳಕೆಯಾಗುವುದೂ ಫ್ಲಾಶ್ ಮೆಮೊರಿಯೇ, ಆದರೆ ಎಸ್‌ಎಸ್‌ಡಿಯಲ್ಲಿ ಇನ್ನೂ ಹೆಚ್ಚು ಕಾರ್ಯಕ್ಷಮತೆಯ ಚಿಪ್‌ಗಳು ಬಳಕೆಯಾಗುತ್ತವೆ ಅಷ್ಟೇ.
ಎಸ್‌ಎಸ್‌ಡಿಗಳು ಹಾರ್ಡ್ ಡಿಸ್ಕ್‌ಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ, ಹೆಚ್ಚು ವೇಗವಾಗಿ ಕೆಲಸಮಾಡುತ್ತವೆ ಮತ್ತು ಅವುಗಳ ವಿಶ್ವಾಸಾರ್ಹತೆಯೂ ಹೆಚ್ಚು. ಜೊತೆಗೆ ಅವುಗಳ ಬೆಲೆಯೂ ಹೆಚ್ಚು: ಸದ್ಯ ಹಲವು ದುಬಾರಿ ಕಂಪ್ಯೂಟರುಗಳಲ್ಲಿ ಮಾತ್ರವೇ ಅವು ಬಳಕೆಯಾಗುತ್ತಿವೆ.
ಹಾರ್ಡ್ ಡಿಸ್ಕ್ ಡ್ರೈವ್ ಹಾಗೂ ಸಾಲಿಡ್ ಸ್ಟೇಟ್ ಡ್ರೈವ್‌ಗಳೆರಡರ ತಂತ್ರಜ್ಞಾನಗಳನ್ನೂ ಒಟ್ಟಿಗೆ ಬಳಸುವ ಸಾಲಿಡ್ ಸ್ಟೇಟ್ ಹೈಬ್ರಿಡ್ ಡ್ರೈವ್ (ಎಸ್‌ಎಸ್‌ಎಚ್‌ಡಿ) ಎನ್ನುವ ಸಾಧನ ಕೂಡ ಇದೆ. ಸಾಮಾನ್ಯ ಹಾರ್ಡ್ ಡಿಸ್ಕ್ ಜೊತೆಗೆ ಕೊಂಚಮಟ್ಟಿನ ಸಾಲಿಡ್ ಸ್ಟೇಟ್ ಶೇಖರಣಾ ಸಾಮರ್ಥ್ಯವನ್ನೂ ಒದಗಿಸುವುದು ಈ ಸಾಧನದ ವೈಶಿಷ್ಟ್ಯ.

SQL

ಎಸ್‌ಕ್ಯೂಎಲ್
Kannada Equivalent: (ರೂಪಿಸಬೇಕಿದೆ)
Short Description : ಸ್ಟ್ರಕ್ಚರ್ಡ್ ಕ್ವೆರಿ ಲ್ಯಾಂಗ್ವೆಜ್; ದತ್ತಸಂಚಯಗಳನ್ನು ನಿರ್ವಹಿಸುವಾಗ ನಮ್ಮ ಆದೇಶಗಳನ್ನು ದತ್ತಸಂಚಯಕ್ಕೆ ಹೇಳಲು ಬಳಕೆಯಾಗುವ ಭಾಷೆ
Long Description: ಭಾರೀ ಪ್ರಮಾಣದ ದತ್ತಾಂಶವನ್ನು ಉಳಿಸಿಡಲು ದತ್ತಸಂಚಯ, ಅಂದರೆ ಡೇಟಾಬೇಸ್‌ಗಳು ನೆರವಾಗುತ್ತವೆ ಸರಿ. ಆದರೆ ದತ್ತಾಂಶದ ನಿರ್ವಹಣೆ ಒಂದೇಸಲಕ್ಕೆ ಮುಗಿಯುವ ಕೆಲಸವಲ್ಲ: ಹೊಸ ದತ್ತಾಂಶವನ್ನು ಸೇರಿಸುವುದು, ಹಳೆಯದನ್ನು ಬದಲಿಸುವುದು, ಬೇಡದ್ದನ್ನು ಅಳಿಸಿಹಾಕುವುದು – ಹೀಗೆ ಇಲ್ಲಿ ನೂರೆಂಟು ಕೆಲಸಗಳು ನಡೆಯುತ್ತಲೇ ಇರುತ್ತವೆ.
ಇದೆಲ್ಲ ಕೆಲಸಗಳಲ್ಲಿ ನಮಗೇನು ಬೇಕೆಂದು ದತ್ತಸಂಚಯಕ್ಕೆ ಹೇಳಲು ಬಳಕೆಯಾಗುವ ಭಾಷೆಯೇ ಸ್ಟ್ರಕ್ಚರ್ಡ್ ಕ್ವೆರಿ ಲ್ಯಾಂಗ್ವೆಜ್. ತಾಂತ್ರಿಕ ಪರಿಭಾಷೆಯಲ್ಲಿ ಎಸ್‌ಕ್ಯೂಎಲ್ ಅಥವಾ ಸೀಕ್ವೆಲ್ ಎಂದು ಗುರುತಿಸುವುದು ಇದನ್ನೇ. ನಮಗೆ ಬೇಕಾದ ದತ್ತಾಂಶವನ್ನು (ಉದಾ: ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ ಗ್ರಾಹಕರು) ದತ್ತಸಂಚಯದಿಂದ ಪಡೆದುಕೊಳ್ಳಬೇಕೆಂದರೆ ಅಗತ್ಯ ನಿರ್ದೇಶನಗಳನ್ನು ಇದೇ ಭಾಷೆಯಲ್ಲಿ ಬರೆಯಬೇಕಾದ್ದು ಅಗತ್ಯ. ದತ್ತಾಂಶವನ್ನು ಬದಲಾಯಿಸಲು, ಅಳಿಸಿಹಾಕಲು, ಇರುವ ದತ್ತಾಂಶಕ್ಕೆ ಹೊಸ ವಿವರಗಳನ್ನು ಹೆಚ್ಚುವರಿಯಾಗಿ ಸೇರಿಸಲು ಅಗತ್ಯ ನಿರ್ದೇಶನಗಳೂ ಈ ಭಾಷೆಯಲ್ಲಿವೆ.
ನಮ್ಮನಿಮ್ಮಂತಹ ಬಳಕೆದಾರರಷ್ಟೇ ಅಲ್ಲ, ಜಾಲತಾಣಗಳು ಹಾಗೂ ಇತರ ತಂತ್ರಾಂಶಗಳೂ ಎಸ್‌ಕ್ಯೂಎಲ್ ಅನ್ನು ಬಳಸುತ್ತವೆ. ಜಾಲತಾಣದಲ್ಲಿ ನೋಂದಣಿ ಸಂಖ್ಯೆಯನ್ನು ದಾಖಲಿಸಿ ಪರೀಕ್ಷಾ ಫಲಿತಾಂಶ ನೋಡುತ್ತೇವಲ್ಲ, ಅಂತಹ ಚಟುವಟಿಕೆಗಳ ಹಿಂದೆ ಇರುವುದು ಎಸ್‌ಕ್ಯೂಎಲ್ ಕೈವಾಡವೇ!
ಎಸ್‌ಕ್ಯೂಎಲ್ ಅನ್ನು ೧೯೭೫ರಲ್ಲಿ ಮೊದಲ ಬಾರಿಗೆ ರೂಪಿಸಿದ್ದು ಐಬಿಎಂ ಸಂಸ್ಥೆಯ ಸಾಧನೆ. ಅಲ್ಲಿಂದ ಮುಂದಕ್ಕೆ ವಿವಿಧ ಡೇಟಾಬೇಸ್ ಮ್ಯಾನೇಜ್‌ಮೆಂಟ್ ಸಿಸ್ಟಂಗಳ (ಡಿಬಿಎಂಎಸ್) ಅಗತ್ಯಕ್ಕೆ ತಕ್ಕಂತೆ ಈ ಭಾಷೆ ಬದಲಾಗುತ್ತ ಬಂದಿದೆ. ಒರೇಕಲ್, ಎಸ್‌ಕ್ಯೂಎಲ್ ಸರ್ವರ್ ಮುಂತಾದ ಬೇರೆಬೇರೆ ಡಿಬಿಎಂಎಸ್‌ಗಳಲ್ಲಿ ಬಳಕೆಯಾಗುವ ಎಸ್‌ಕ್ಯೂಎಲ್‌ನಲ್ಲಿ ಕೊಂಚ ವ್ಯತ್ಯಾಸಗಳಿದ್ದರೂ ಅದರ ಮೂಲ ಸ್ವರೂಪ ಮಾತ್ರ ಒಂದೇ.

SDLC

ಎಸ್‌ಡಿಎಲ್‌ಸಿ
Kannada Equivalent: (ರೂಪಿಸಬೇಕಿದೆ)
Short Description : ಸಿಸ್ಟಮ್ಸ್ ಡೆವೆಲಪ್‌ಮೆಂಟ್ ಲೈಫ್ ಸೈಕಲ್; ತಂತ್ರಾಂಶ ಅಭಿವರ್ಧನೆಯ ಪ್ರತಿಯೊಂದು ಹಂತದಲ್ಲೂ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳನ್ನು ವಿವರಿಸುವ ನಿಯಮಗಳ ಚೌಕಟ್ಟು
Long Description: ಹೊಸದಾಗಿ ತಂತ್ರಾಂಶವೊಂದನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಅನೇಕ ಹಂತಗಳಿರುತ್ತವೆ. ಇಂತಹ ಪ್ರತಿಯೊಂದು ಹಂತದಲ್ಲೂ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳನ್ನು ವಿವರಿಸುವ ನಿಯಮಗಳ ಚೌಕಟ್ಟನ್ನು ಸಿಸ್ಟಮ್ಸ್ ಡೆವೆಲಪ್‌ಮೆಂಟ್ ಲೈಫ್ ಸೈಕಲ್ (ತಂತ್ರಾಂಶ ವ್ಯವಸ್ಥೆಗಳ ಅಭಿವರ್ಧನೆಯ ಜೀವನಚಕ್ರ) ಎಂದು ಕರೆಯುತ್ತಾರೆ. ಎಸ್‌ಡಿಎಲ್‌ಸಿ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ. ಸಾಮಾನ್ಯ ಬಳಕೆಯಲ್ಲಿ ‘ಸಾಫ್ಟ್‌ವೇರ್ ಡೆವೆಲಪ್‌ಮೆಂಟ್ ಲೈಫ್ ಸೈಕಲ್’ ಎಂದು ಗುರುತಿಸುವುದೂ ಇದನ್ನೇ.
ಎಸ್‌ಡಿಎಲ್‌ಸಿಯನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ಅನುಷ್ಠಾನಗೊಳಿಸಲು ಸಂಸ್ಥೆಗಳು ಹಲವು ಕಾರ್ಯವಿಧಾನ ಮಾದರಿಗಳನ್ನು (ಪ್ರಾಸೆಸ್ ಮಾಡೆಲ್) ಬಳಸುತ್ತವೆ. ಮೂಲತಃ ಈ ಎಲ್ಲ ಮಾದರಿಗಳಲ್ಲೂ ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆಯಲ್ಲಿರುವ ಮೂಲ ಹೆಜ್ಜೆಗಳೇ (ರಿಕ್ವೈರ್‌ಮೆಂಟ್ಸ್ ಅನಾಲಿಸಿಸ್, ಡಿಸೈನ್, ಡೆವೆಲಪ್‌ಮೆಂಟ್, ಟೆಸ್ಟಿಂಗ್ ಇತ್ಯಾದಿ) ಬಳಕೆಯಾಗುತ್ತವಾದರೂ ಆ ಹೆಜ್ಜೆಗಳ ಅನುಷ್ಠಾನ ಮಾತ್ರ ಭಿನ್ನವಾಗಿರುತ್ತದೆ. ವಾಟರ್‌ಫಾಲ್ ಮಾಡೆಲ್, ಇನ್‌ಕ್ರಿಮೆಂಟಲ್ ಮಾಡೆಲ್, ಅಜೈಲ್ – ಇವು ಕಾರ್ಯವಿಧಾನ ಮಾದರಿಗೆ ಕೆಲ ಉದಾಹರಣೆಗಳು.
ಈ ಪೈಕಿ ವಾಟರ್‌ಫಾಲ್ ಮಾದರಿಯಲ್ಲಿ ತಂತ್ರಾಂಶ ಅಭಿವರ್ಧನೆಯ ಅಷ್ಟೂ ಕೆಲಸವನ್ನು ಒಟ್ಟಿಗೆ ಒಂದೇ ಕಂತಿನಲ್ಲಿ ಮುಗಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಇನ್‌ಕ್ರಿಮೆಂಟಲ್ ಹಾಗೂ ಅಜೈಲ್ ಮಾದರಿಗಳಲ್ಲಿ ಇಡೀ ಪ್ರಕ್ರಿಯೆಯನ್ನು ಹಲವು ಭಾಗಗಳಾಗಿ ವಿಭಜಿಸಿಕೊಂಡು ಅವನ್ನು ಒಂದಾದನಂತರ ಒಂದರಂತೆ ಪೂರ್ಣಗೊಳಿಸಲಾಗುತ್ತದೆ.

Short URL

ಶಾರ್ಟ್ ಯುಆರ್‌ಎಲ್
Kannada Equivalent: (ರೂಪಿಸಬೇಕಿದೆ)
Short Description : ಉದ್ದನೆಯ ಯುಆರ್‌ಎಲ್‌ಗಳನ್ನು ಕಿರಿದಾಗಿಸಿ ರೂಪಿಸಿಕೊಂಡ ಪುಟ್ಟ ವಿಳಾಸ
Long Description: ಬೇರೆಬೇರೆ ಜಾಲತಾಣಗಳಿಗೆ ಭೇಟಿಕೊಡಲು ನಾವು ಬ್ರೌಸರ್ ತಂತ್ರಾಂಶಗಳನ್ನು ಬಳಸುತ್ತೇವಲ್ಲ, ಅದರ ಮೇಲ್ತುದಿಯಲ್ಲಿರುವ ವಿಳಾಸಪಟ್ಟಿಯಲ್ಲಿ (ಅಡ್ರೆಸ್ ಬಾರ್) ನಾವು ಭೇಟಿಕೊಟ್ಟಿರುವ ತಾಣ ಅಥವಾ ಪುಟದ ಪೂರ್ಣ ವಿಳಾಸವನ್ನು ನೋಡಬಹುದು.
ಈ ವಿಳಾಸಕ್ಕೆ ‘ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್’ ಅಥವಾ ‘ಯುಆರ್‌ಎಲ್’ ಎಂದು ಹೆಸರು. ನೀವು ಇಜ್ಞಾನ ಜಾಲತಾಣಕ್ಕೆ ಭೇಟಿಕೊಟ್ಟಿದ್ದೀರಿ ಎಂದುಕೊಂಡರೆ ನಿಮಗೆ ಮೊದಲು ಕಾಣಿಸುವ ಪುಟದ ಯುಆರ್‌ಎಲ್ ‘http://www.ejnana.com/’ ಎಂದಿರುತ್ತದೆ. ಒಳಗಿನ ಪುಟಗಳಿಗೆ ಹೋದಂತೆ ಈ ಯುಆರ್‌ಎಲ್‌ನ ಉದ್ದ ಜಾಸ್ತಿಯಾಗುತ್ತ ಹೋಗುತ್ತದೆ (ಉದಾ: http://www.ejnana.com/p/blog-page_13.html). ಆನ್‌ಲೈನ್ ಶಾಪಿಂಗ್ ತಾಣಗಳಲ್ಲಂತೂ ನಾವು ಇನ್ನೂ ಉದ್ದನೆಯ ಯುಆರ್‌ಎಲ್‌ಗಳನ್ನು ನೋಡಬಹುದು.
ಇಷ್ಟೆಲ್ಲ ಉದ್ದದ ವಿಳಾಸಗಳನ್ನು ನೆನಪಿಟ್ಟುಕೊಳ್ಳುವುದು, ಹಂಚಿಕೊಳ್ಳುವುದು ಕಷ್ಟ. ಈ ಸಮಸ್ಯೆಯನ್ನು ತಪ್ಪಿಸಲು ಸೃಷ್ಟಿಯಾಗಿರುವುದೇ ‘ಶಾರ್ಟ್ ಯುಆರ್‌ಎಲ್’ ಪರಿಕಲ್ಪನೆ. ತೀರಾ ಉದ್ದನೆಯ ಯುಆರ್‌ಎಲ್‌ಗಳನ್ನು ಕಿರಿದಾಗಿಸಿ ಪುಟ್ಟ ವಿಳಾಸಗಳನ್ನು ಸೃಷ್ಟಿಸುವುದು ಈ ಪರಿಕಲ್ಪನೆಯ ಉದ್ದೇಶ. ಇಂತಹ ಸೇವೆ ಒದಗಿಸುವ ಯಾವುದೇ ತಾಣಕ್ಕೆ (ಉದಾ: bit.ly, goo.gl, tinyurl.com) ಹೋದರೆ ಉದ್ದನೆಯ ವಿಳಾಸಗಳನ್ನು ಶಾರ್ಟ್ ಯುಆರ್‌ಎಲ್ ಆಗಿ ಪರಿವರ್ತಿಸಿಕೊಳ್ಳುವುದು ಸಾಧ್ಯ. ಎರಡೂ ವಿಳಾಸಗಳನ್ನು ನೆನಪಿಟ್ಟುಕೊಳ್ಳುವ ಇಂತಹ ತಾಣಗಳು ಅವೆರಡನ್ನೂ ಹೊಂದಿಸಿ ಬಳಕೆದಾರರು ಪುಟ್ಟ ವಿಳಾಸ ದಾಖಲಿಸಿದಾಗೆಲ್ಲ ಅವರನ್ನು ಮೂಲ ವಿಳಾಸಕ್ಕೇ ಕರೆದೊಯ್ಯುತ್ತವೆ.

Submarine Communications Cable

ಸಬ್‌ಮರೀನ್ ಕಮ್ಯೂನಿಕೇಶನ್ಸ್ ಕೇಬಲ್
Kannada Equivalent: (ರೂಪಿಸಬೇಕಿದೆ)
Short Description : ವಿವಿಧ ರಾಷ್ಟ್ರಗಳ – ಖಂಡಗಳ ನಡುವೆ ಮಾಹಿತಿ ಸಂವಹನ ಸಾಧ್ಯವಾಗಿಸುವ ಸಮುದ್ರದಾಳದ ಕೇಬಲ್
Long Description: ನಾವು ಮೊಬೈಲಿನಲ್ಲಿ ಮಾತನಾಡುತ್ತೇವೆ, ಅಂತರಜಾಲ ಸಂಪರ್ಕ ಬಳಸುತ್ತೇವೆ. ಇದೆಲ್ಲ ಹೇಗೆ ಸಾಧ್ಯವಾಗುತ್ತದೆ ಎಂದು ಕೇಳಿದರೆ ಕಿಟಕಿಯಿಂದಾಚೆ ಕಾಣುವ ಮೊಬೈಲ್ ಟವರ್ ಅನ್ನು ತೋರಿಸುತ್ತೇವೆ. ಆದರೆ ಅಲ್ಲಿಂದ ಮುಂದಿನ ಸಂಪರ್ಕ ಸಾಧ್ಯವಾಗುವುದು, ನಮ್ಮ ಕರೆ ಬೇರೆಲ್ಲೋ ಇರುವ ಇನ್ನೊಬ್ಬರನ್ನು ತಲುಪುವುದು ಹೇಗೆ?
ಉತ್ತರ ಗೊತ್ತಿಲ್ಲದಿದ್ದರೆ ಆಕಾಶ ನೋಡಬೇಕಿಲ್ಲ, ಕಾಲ ಕೆಳಗಿನ ನೆಲವನ್ನಷ್ಟೇ ನೋಡಿದರೆ ಸಾಕು. ಏಕೆಂದರೆ ಮೊಬೈಲ್ ಟವರ್‌ಗಳ ನಂತರದ ಹಂತದ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುವುದು ನೆಲದಡಿಯ ಕೇಬಲ್ಲುಗಳು. ಇಲ್ಲಿ ಬಳಕೆಯಾಗುವುದೇ ಆಪ್ಟಿಕಲ್ ಫೈಬರ್ ಕೇಬಲ್ ಅಥವಾ ಓಎಫ್‌ಸಿ.
ನೆಲದ ಮೇಲೇನೋ ಸರಿ, ಬಡಾವಣೆಯಿಂದ ಬಡಾವಣೆಗೆ – ಊರಿಂದ ಊರಿಗೆ ಈ ಕೇಬಲ್ಲುಗಳು ಸಂಪರ್ಕ ಕಲ್ಪಿಸುತ್ತವೆ. ಆದರೆ ಸಂವಹನದ ಸಮುದ್ರೋಲ್ಲಂಘನ? ಅಲ್ಲೂ ಇಂತಹ ಕೇಬಲ್ಲುಗಳೇ ಬಳಕೆಯಾಗುತ್ತವೆ!
ವಿವಿಧ ರಾಷ್ಟ್ರಗಳ – ಖಂಡಗಳ ನಡುವೆ ಸಂವಹನ ಸಾಧ್ಯವಾಗಿಸುವ ಇಂತಹ ಕೇಬಲ್ಲುಗಳನ್ನು ಸಬ್‌ಮರೀನ್ ಕಮ್ಯೂನಿಕೇಶನ್ಸ್ ಕೇಬಲ್ಲುಗಳೆಂದು ಕರೆಯುತ್ತಾರೆ. ನಾವು-ನೀವು ರಸ್ತೆಬದಿಯಲ್ಲಿ ಕಾಣುವ ಕೇಬಲ್ಲುಗಳಿಗಿಂತ ಹೆಚ್ಚು ಸದೃಢ ರಚನೆಯ ಈ ಕೇಬಲ್ಲುಗಳನ್ನು ಸಮುದ್ರದಾಳದಲ್ಲಿ ಹುದುಗಿಸಿಡಲು ವಿಶೇಷ ಹಡಗುಗಳು ಬಳಕೆಯಾಗುತ್ತವೆ. ಇಂತಹ ಕೇಬಲ್ಲುಗಳನ್ನು ಅಳವಡಿಸಿ ನಿರ್ವಹಿಸುವುದೇ ಹಲವು ದೊಡ್ಡ ಸಂಸ್ಥೆಗಳ ಕೆಲಸ.

Soft Copy – Hard Copy

ಸಾಫ್ಟ್‌ ಕಾಪಿ – ಹಾರ್ಡ್ ಕಾಪಿ
Kannada Equivalent: (ರೂಪಿಸಬೇಕಿದೆ)
Short Description : ಡಿಜಿಟಲ್ ರೂಪದಲ್ಲಿರುವ ಕಡತ ಹಾಗೂ ಅವುಗಳ ಮುದ್ರಿತ ರೂಪವನ್ನು ಪ್ರತಿನಿಧಿಸುವ ಹೆಸರುಗಳು
Long Description: ಕೆಲವು ದಶಕಗಳ ಹಿಂದೆ ಕಡತ ಎಂದರೆ ಅದು ಕಾಗದದ ಮೇಲೆಯೇ ಇರಬೇಕಿದ್ದು ಅನಿವಾರ್ಯವಾಗಿತ್ತು. ಮಾಹಿತಿ ತಂತ್ರಜ್ಞಾನ ಬೆಳೆದಂತೆ ಈ ಪರಿಸ್ಥಿತಿ ಬದಲಾಗಿದ್ದು ನಮಗೆಲ್ಲ ಗೊತ್ತೇ ಇದೆ. ಕಂಪ್ಯೂಟರ್ ಬಳಸಿ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಉಳಿಸಿಡಲು ಸಾಧ್ಯವಾದಮೇಲೆ ಅಲ್ಲೂ ಕಡತಗಳನ್ನು ರೂಪಿಸುವುದು ಸಾಧ್ಯವಾಯಿತು. ‘ಸಾಫ್ಟ್ ಕಾಪಿ’ ಎಂದು ಗುರುತಿಸಲಾಗುವುದು ಕಡತಗಳ ಈ ಡಿಜಿಟಲ್ ರೂಪವನ್ನೇ. ಇದೇರೀತಿ ಭೌತಿಕ ರೂಪದಲ್ಲಿರುವ ಕಡತವನ್ನು ‘ಹಾರ್ಡ್ ಕಾಪಿ’ ಎಂದು ಕರೆಯುತ್ತಾರೆ.
ಸಾಫ್ಟ್‌ಕಾಪಿ – ಹಾರ್ಡ್‌ಕಾಪಿಗಳ ನಡುವೆ ಇನ್ನೂ ಅನೇಕ ವ್ಯತ್ಯಾಸಗಳಿವೆ. ಸಾಫ್ಟ್‌ಕಾಪಿಗಳು ಕಾಗದ ಬಳಸುವುದಿಲ್ಲವಾದ್ದರಿಂದ ಆ ಮಟ್ಟಿಗೆ ಅವು ಪರಿಸರಸ್ನೇಹಿ; ಅವುಗಳನ್ನು ರೂಪಿಸಲು ಖರ್ಚೂ ಕಡಿಮೆ. ಪುಸ್ತಕದ ವಿಷಯಕ್ಕೆ ಬಂದರಂತೂ ಸಾಫ್ಟ್ ಕಾಪಿಯ ಪ್ರಕಟಣೆ (ಇ-ಪುಸ್ತಕ) ಹಾರ್ಡ್ ಕಾಪಿ ಪ್ರಕಟಣೆಯ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ಖರ್ಚಿನ ವ್ಯವಹಾರ. ಸಾಫ್ಟ್ ಕಾಪಿಯನ್ನು ಬದಲಿಸುವುದು – ಹಂಚುವುದು ಸುಲಭವಾದ್ದರಿಂದ ಅದರ ನಿರ್ವಹಣೆಯೂ ಬಹಳ ಸುಲಭ.
ಕಾಗದರೂಪದಲ್ಲಿರುವ ಪ್ರಮುಖ ದಾಖಲೆಗಳನ್ನು ವಾತಾವರಣದ ಪ್ರಭಾವದಿಂದ ಸುರಕ್ಷಿತವಾಗಿಡಲು ನಾವು ಎಚ್ಚರವಹಿಸುತ್ತೇವಲ್ಲ, ಅದೇ ರೀತಿ ಡಿಜಿಟಲ್ ರೂಪದಲ್ಲಿರುವ ಕಡತಗಳನ್ನು ಕಾಯ್ದಿಡಲಿಕ್ಕೂ ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹಾರ್ಡ್ ಡಿಸ್ಕ್‌ನಂತಹ ಸಾಧನಗಳ ಯಾಂತ್ರಿಕ ವೈಫಲ್ಯದಿಂದ, ಕುತಂತ್ರಾಂಶಗಳ ಕಾಟದಿಂದ ಅವು ಹಾಳಾಗದಂತೆ ನೋಡಿಕೊಳ್ಳಲು ಕಡತಗಳನ್ನು ಬ್ಯಾಕಪ್ ಮಾಡಿಡುವುದು ಇಂತಹ ಕ್ರಮಗಳಲ್ಲೊಂದು.
ಬಹಳಷ್ಟು ಸಾರಿ ಸಾಫ್ಟ್ ಕಾಪಿಗಳನ್ನು ತೆರೆಯಲು ನಿರ್ದಿಷ್ಟ ತಂತ್ರಾಂಶ ಹಾಗೂ ಫಾಂಟುಗಳೇ ಬೇಕಿರುತ್ತವೆ. ಅಂತಹ ಕಡತಗಳನ್ನು (ಉದಾ: ಪ್ರಕಾಶಕ್ ಫಾಂಟುಗಳನ್ನು ಬಳಸಿ ರೂಪಿಸಿದ ಪೇಜ್‌ಮೇಕರ್ ಕಡತ) ಉಳಿಸಿಡುವಾಗ ಸಾಧ್ಯವಾದರೆ ಅಗತ್ಯ ತಂತ್ರಾಂಶ ಹಾಗೂ ಫಾಂಟುಗಳನ್ನೂ ಉಳಿಸಿಟ್ಟುಕೊಳ್ಳಬಹುದು. ಇದು ಸಾಧ್ಯವಾಗದ ಪಕ್ಷದಲ್ಲಿ ಅಂತಹ ಕಡತಗಳನ್ನು ಪಿಡಿಎಫ್ ರೂಪಕ್ಕಾದರೂ ಬದಲಿಸಿಟ್ಟುಕೊಳ್ಳುವುದು ಒಳ್ಳೆಯದು.

Software

ಸಾಫ್ಟ್‌ವೇರ್
Kannada Equivalent: ತಂತ್ರಾಂಶ
Short Description : ಕಂಪ್ಯೂಟರ್ ತನ್ನ ಕೆಲಸಗಳನ್ನು ಮಾಡಲು ನೀಡುವ ನಿರ್ದೇಶನಗಳ ಸಂಗ್ರಹ
Long Description: ಕಂಪ್ಯೂಟರ್‌ಗೆ ತನ್ನದೇ ಆದ ಸ್ವಂತ ಬುದ್ಧಿ ಇರುವುದಿಲ್ಲ. ಅದು ಯಾವ ಕೆಲಸ ಮಾಡಬೇಕಾದರೂ ಕೆಲಸದ ಎಲ್ಲ ಹೆಜ್ಜೆಗಳ ವಿವರವನ್ನೂ ಅದಕ್ಕೆ ಹೇಳಿಕೊಡಬೇಕು.
ಹೀಗೆ ಕಂಪ್ಯೂಟರಿಗೆ ಪಾಠಹೇಳುವುದು ಸಾಫ್ಟ್‌ವೇರ್ ಅಥವಾ ತಂತ್ರಾಂಶದ ಕೆಲಸ. ನಾವು ಕೊಟ್ಟ ವಿವರಗಳನ್ನು (ಇನ್‌ಪುಟ್) ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು, ಯಾವ ರೀತಿಯ ಉತ್ತರ (ಔಟ್‌ಪುಟ್) ಕೊಡಬೇಕು ಎನ್ನುವುದನ್ನೆಲ್ಲ ಅದು ಕಂಪ್ಯೂಟರ್‌ಗೆ ವಿವರಿಸುತ್ತದೆ.
ವಿವಿಧ ಉದ್ದೇಶ ಹಾಗೂ ಉಪಯೋಗಗಳಿಗಾಗಿ ಅನೇಕ ಬಗೆಯ ತಂತ್ರಾಂಶಗಳು ಬಳಕೆಯಾಗುತ್ತವೆ. ಕಂಪ್ಯೂಟರ್ ತನ್ನ ಕೆಲಸ ಪ್ರಾರಂಭಿಸಲು ನೆರವಾಗುವ ಬಯಾಸ್‌ನಿಂದ ಪ್ರಾರಂಭಿಸಿ ಅದರ ಕೆಲಸಕಾರ್ಯಗಳನ್ನೆಲ್ಲ ನಿಯಂತ್ರಿಸುವ ಆಪರೇಟಿಂಗ್ ಸಿಸ್ಟಂವರೆಗೆ ಎಲ್ಲವೂ ತಂತ್ರಾಂಶಗಳೇ. ಕಂಪ್ಯೂಟರ್ ಬಳಸಿ ಕಡತಗಳನ್ನು ರೂಪಿಸಲು, ಚಿತ್ರಬರೆಯಲು, ಆಟವಾಡಲು, ಹಾಡು ಕೇಳಲು, ಸಿನಿಮಾ ನೋಡಲು ನಾವು ವಿವಿಧ ತಂತ್ರಾಂಶಗಳನ್ನು ಬಳಸುತ್ತೇವೆ.
ಕಂಪ್ಯೂಟರ್ ಅಷ್ಟೇ ಅಲ್ಲ, ಮೊಬೈಲ್ ಫೋನ್, ಟ್ಯಾಬ್ಲೆಟ್, ಸೆಟ್‌ಟಾಪ್ ಬಾಕ್ಸ್ ಮುಂತಾದ ಹಲವಾರು ವಿದ್ಯುನ್ಮಾನ ಸಾಧನಗಳಲ್ಲೂ ತಂತ್ರಾಂಶಗಳು ಬಳಕೆಯಾಗುತ್ತವೆ: ನಮಗೆಲ್ಲ ಚಿರಪರಿಚಿತವಾದ ಮೊಬೈಲ್ ಆಪ್‌ಗಳೂ ತಂತ್ರಾಂಶಗಳೇ. ಆಧುನಿಕ ಕಾರುಗಳಲ್ಲಿ, ಟೀವಿ – ಫ್ರಿಜ್ – ವಾಶಿಂಗ್ ಮಶೀನುಗಳ ಕಾರ್ಯಾಚರಣೆಯಲ್ಲೂ ತಂತ್ರಾಂಶಗಳ ಕೈವಾಡ ಇರುತ್ತದೆ.

Software Engineering

ಸಾಫ್ಟ್‌ವೇರ್ ಇಂಜಿನಿಯರಿಂಗ್
Kannada Equivalent: (ರೂಪಿಸಬೇಕಿದೆ)
Short Description : ನಮ್ಮ ಅಗತ್ಯಗಳಿಗೆ ತಕ್ಕಂತೆ ಪರಿಣಾಮಕಾರಿಯಾಗಿ ಕೆಲಸಮಾಡುವ ತಂತ್ರಾಂಶವನ್ನು ನಿಗದಿತ ಅವಧಿ ಹಾಗೂ ವೆಚ್ಚದ ಮಿತಿಯೊಳಗೆ ರೂಪಿಸಲು ನೆರವಾಗುವ ಪ್ರಕ್ರಿಯೆ
Long Description: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳನ್ನೆಲ್ಲ ಸಾಫ್ಟ್‌ವೇರ್ ಇಂಜಿನಿಯರುಗಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಸಾಫ್ಟ್‌ವೇರ್ ಇಂಜಿನಿಯರುಗಳ ಕೆಲಸ ಪ್ರೋಗ್ರಾಮುಗಳನ್ನು – ತಂತ್ರಾಂಶಗಳನ್ನು ರಚಿಸುವುದು ಎನ್ನುವುದೂ ಸಾಮಾನ್ಯವಾಗಿರುವ ಇನ್ನೊಂದು ಅಭಿಪ್ರಾಯ.
ಆದರೆ ಸಾಫ್ಟ್‌ವೇರ್ ಇಂಜಿನಿಯರಿಂಗ್ ಕ್ಷೇತ್ರದ ವ್ಯಾಪ್ತಿ ಇಷ್ಟು ಸೀಮಿತವೇನಲ್ಲ. ಇದು ತಂತ್ರಾಂಶ ಅಭಿವೃದ್ಧಿಯನ್ನು ಪ್ರೋಗ್ರಾಮಿಂಗ್‌ಗಷ್ಟೇ ಸೀಮಿತವಾಗಿ ನೋಡದೆ ಅದನ್ನೊಂದು ಕ್ರಮಬದ್ಧ ಪ್ರಕ್ರಿಯೆಯಾಗಿ ರೂಪಿಸಲು ನೆರವಾಗುತ್ತದೆ.
ನಮ್ಮ ಅಗತ್ಯಗಳಿಗೆ ತಕ್ಕಂತೆ ಪರಿಣಾಮಕಾರಿಯಾಗಿ ಕೆಲಸಮಾಡುವ ತಂತ್ರಾಂಶವನ್ನು ನಿಗದಿತ ಅವಧಿ ಹಾಗೂ ವೆಚ್ಚದ ಮಿತಿಯೊಳಗೆ ರೂಪಿಸುವುದು ಸಾಫ್ಟ್‌ವೇರ್ ಇಂಜಿನಿಯರಿಂಗ್‌ನ ಮೂಲ ಉದ್ದೇಶ.
ತಂತ್ರಾಂಶದ ಉದ್ದೇಶವನ್ನು ನಿಖರವಾಗಿ ಗುರುತಿಸಿ ವಿಶ್ಲೇಷಿಸುವ ಮೂಲಕ ಈ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ತಂತ್ರಾಂಶದ ಉದ್ದೇಶ ಸ್ಪಷ್ಟವಾದ ನಂತರ ಅದಕ್ಕೆ ಅಗತ್ಯವಾದ ವಿನ್ಯಾಸವನ್ನು (ಡಿಸೈನ್) ಸಿದ್ಧಪಡಿಸಲಾಗುತ್ತದೆ. ತಂತ್ರಾಂಶ ಅಭಿವರ್ಧನೆಯ (ಡೆವೆಲಪ್‌ಮೆಂಟ್) ಕೆಲಸ ಪ್ರಾರಂಭವಾಗುವುದು ಇವೆಲ್ಲ ಮುಗಿದ ನಂತರವೇ.
ತಂತ್ರಾಂಶ ರಚನೆ ಮುಗಿದ ತಕ್ಷಣ ಅದನ್ನು ಗ್ರಾಹಕರಿಗೆ ಕೊಟ್ಟುಬಿಡುವಂತಿಲ್ಲ. ಅದನ್ನು ವಿವರವಾಗಿ ಪರೀಕ್ಷಿಸಿ, ಇರಬಹುದಾದ ಕುಂದುಕೊರತೆಗಳನ್ನು ಸೂಕ್ತ ಸಮಯದಲ್ಲಿ ಪತ್ತೆಹಚ್ಚಿ ಸರಿಪಡಿಸುವುದು ಕೂಡ ಮುಖ್ಯ ಎಂದು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆ ಹೇಳುತ್ತದೆ. ಈ ಎಲ್ಲ ಹಂತಗಳ ವಿವರಗಳನ್ನೂ ಕಡತಗಳಲ್ಲಿ ದಾಖಲಿಸಿ ಭವಿಷ್ಯದ ಬಳಕೆಗಾಗಿ ಉಳಿಸಿಡುವುದು ಕೂಡ ಸಾಫ್ಟ್‌ವೇರ್ ಇಂಜಿನಿಯರಿಂಗ್‌ನ ಭಾಗವೇ.

Software Project Management

ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್
Kannada Equivalent: (ರೂಪಿಸಬೇಕಿದೆ)
Short Description : ತಂತ್ರಾಂಶ ಅಭಿವೃದ್ಧಿಯ ಕೆಲಸ ಒಂದು ನಿರ್ದಿಷ್ಟ ಯೋಜನೆಗೆ ಅನುಗುಣವಾಗಿ ನಡೆಯುವಂತೆ ನೋಡಿಕೊಳ್ಳುವ ಪ್ರಕ್ರಿಯೆ
Long Description: ತಂತ್ರಾಂಶಗಳನ್ನು ರೂಪಿಸುವಾಗ ಕೆಲಸದ ಅಗಾಧತೆ, ಸಂಕೀರ್ಣ ವಿನ್ಯಾಸ ಇವೆಲ್ಲ ಸೇರಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಬಹಳ ಕ್ಲಿಷ್ಟವಾಗಿಬಿಡುತ್ತದೆ. ನಿಗದಿತ ಅವಧಿಯೊಳಗೆ ನಿರ್ದಿಷ್ಟ ವೆಚ್ಚದಲ್ಲಿ ಬಳಕೆದಾರರ ಅಗತ್ಯಗಳಿಗೆ ಸರಿಹೊಂದುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕಾದ ಸವಾಲನ್ನು ಎದುರಿಸುವ ಈ ಕೆಲಸ ಸುಲಭವೇನಲ್ಲ.
ಇಂತಹ ಸನ್ನಿವೇಶಗಳಲ್ಲಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಒಂದು ನಿರ್ದಿಷ್ಟ ಯೋಜನೆಗೆ ಅನುಗುಣವಾಗಿ ನಡೆದರೆ ಮಾತ್ರ ಅದು ಯಶಸ್ವಿಯಾಗುವುದು ಸಾಧ್ಯ. ಹಾಗೊಂದು ಯೋಜನೆಯನ್ನು ರೂಪಿಸಿ ಅದರಂತೆ ತಂತ್ರಾಂಶ ಅಭಿವೃದ್ಧಿಯ ಕೆಲಸ ಕೈಗೊಳ್ಳಲು ನೆರವಾಗುವುದು ‘ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್’ ಎಂಬ ಪರಿಕಲ್ಪನೆ.
ನಿರ್ದಿಷ್ಟ ಅವಧಿಯಲ್ಲಿ ನಡೆಯುವ ತಂತ್ರಾಂಶವೊಂದರ ರಚನೆ, ಬದಲಾವಣೆ ಅಥವಾ ಉನ್ನತೀಕರಣದ ಕೆಲಸವನ್ನು ಪ್ರಾಜೆಕ್ಟ್ ಎಂದು ಕರೆಯಬಹುದು. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸಮಾಡುವವರು ಪ್ರಾಜೆಕ್ಟುಗಳ ಬಗ್ಗೆ ಮಾತನಾಡುತ್ತಾರಲ್ಲ, ಅವೂ ಇಂತಹವೇ.
ಯಾವುದೇ ಪ್ರಾಜೆಕ್ಟಿಗೆ ಸಾಕಷ್ಟು ನಿರ್ಬಂಧಗಳಿರುತ್ತವೆ: ಸಮಯ, ವೆಚ್ಚ, ವ್ಯಾಪ್ತಿ – ಹೀಗೆ. ಈ ಎಲ್ಲ ನಿರ್ಬಂಧಗಳನ್ನೂ ಅರಿತುಕೊಂಡು ನಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸಿದಾಗಲಷ್ಟೆ ಪ್ರಾಜೆಕ್ಟ್ ಯಶಸ್ವಿಯಾಗುವುದು ಸಾಧ್ಯ. ಇದು ಸಾಧ್ಯವಾಗುವ ನಿಟ್ಟಿನಲ್ಲಿ ನೆರವು ನೀಡುವುದು ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನ ಉದ್ದೇಶ. ತಂತ್ರಾಂಶ ತಯಾರಿಯ ಪ್ರಕ್ರಿಯೆಯುದ್ದಕ್ಕೂ ಗ್ರಾಹಕರೊಡನೆ ನಡೆಯುವ ಸಂವಹನ, ತಯಾರಾಗುವ ತಂತ್ರಾಂಶದ ಗುಣಮಟ್ಟ ಮುಂತಾದ ಅಂಶಗಳಿಗೂ ಇಲ್ಲಿ ಪ್ರಾಮುಖ್ಯವಿರುತ್ತದೆ.

Software Maintenance

ಸಾಫ್ಟ್‌ವೇರ್ ಮೇಂಟೆನೆನ್ಸ್
Kannada Equivalent: ತಂತ್ರಾಂಶ ನಿರ್ವಹಣೆ
Short Description : ಈಗಾಗಲೇ ಇರುವ ತಂತ್ರಾಂಶವನ್ನು ನಿರ್ವಹಿಸುವ, ಅಗತ್ಯಗಳಿಗೆ ತಕ್ಕಂತೆ ಬದಲಾಯಿಸಿಕೊಳ್ಳುವ ಕೆಲಸ
Long Description: ಕಂಪ್ಯೂಟರಿನ ನಿರ್ವಹಣೆಯೆಂದ ತಕ್ಷಣ ಹೆಚ್ಚಾಗಿ ನಮ್ಮ ಮನಸ್ಸಿಗೆ ಬರುವುದು ಯಂತ್ರಾಂಶದ (ಹಾರ್ಡ್‌ವೇರ್) ನಿರ್ವಹಣೆಯ ವಿಷಯವೇ. ಮೌಸ್ ಕೆಲಸಮಾಡುತ್ತಿಲ್ಲವೆಂದೋ ಮೋಡೆಮ್ ಕೆಟ್ಟಿದೆಯೆಂದೋ ಇನ್ನಾವುದೋ ಭಾಗ ಹಳೆಯದಾಗಿದೆಯೆಂದೋ ಸಾಕಷ್ಟು ಖರ್ಚುಮಾಡಿರುವ ವಿಷಯ ನಮ್ಮೆಲ್ಲರ ನೆನಪಿನಲ್ಲೂ ಇರುತ್ತದೆ.
ಆದರೆ ನಿರ್ವಹಣೆ ಬೇಕಿರುವುದು ಕೇವಲ ಯಂತ್ರಾಂಶಕ್ಕೆ ಮಾತ್ರವಲ್ಲ, ನಾವು ಬರೆಯುವ ತಂತ್ರಾಂಶವನ್ನು (ಸಾಫ್ಟ್‌ವೇರ್) ನಿರ್ವಹಿಸುವುದೂ ಸಾಕಷ್ಟು ದೊಡ್ಡ ಕೆಲಸವೇ.
ತಂತ್ರಾಂಶದ ರಚನೆಯ ಸಂದರ್ಭದಲ್ಲಿದ್ದ ಅಗತ್ಯಗಳು ನಂತರದ ದಿನಗಳಲ್ಲಿ ಬದಲಾದರೆ ತಂತ್ರಾಂಶದಲ್ಲಿ ಬದಲಾವಣೆಗಳು ಬೇಕಾಗುತ್ತವೆ. ತಂತ್ರಾಂಶ ತನ್ನ ಮೂಲ ಉದ್ದೇಶವನ್ನು ಬಹಳ ಚೆನ್ನಾಗಿ ಪೂರೈಸಿದಾಗಲೂ ಅಷ್ಟೆ: ಬಳಕೆದಾರರು ಅದಕ್ಕೆ ಹೆಚ್ಚುವರಿ ಸೌಲಭ್ಯಗಳನ್ನು ಸೇರಿಸುವಂತೆ ಕೇಳಿದಾಗಲೂ ತಂತ್ರಾಂಶದಲ್ಲಿ ಬದಲಾವಣೆ ಅಗತ್ಯವಾಗುತ್ತದೆ. ತಂತ್ರಾಂಶದ ಬಳಕೆಯಾಗುತ್ತಿರುವ ಕಂಪ್ಯೂಟರುಗಳಲ್ಲಿ ಯಂತ್ರಾಂಶದ, ಅಥವಾ ಆಪರೇಟಿಂಗ್ ಸಿಸ್ಟಂನಂತಹ ತಂತ್ರಾಂಶಗಳ ಬದಲಾವಣೆಯಾದಾಗಲೂ ತಂತ್ರಾಂಶದಲ್ಲಿ ಬದಲಾವಣೆಗಳು ಅಗತ್ಯವಾಗಬಹುದು. ತಂತ್ರಾಂಶ ರಚಿಸುವವರ, ಬಳಸುವವರಷ್ಟೇ ಅಲ್ಲದೆ ಈ ಚಟುವಟಿಕೆಗೆ ಸರಕಾರ ಅಥವಾ ಮಾರುಕಟ್ಟೆಯ ಕಡೆಯಿಂದ ಕಾಣಿಸಿಕೊಳ್ಳುವ ಬದಲಾವಣೆಗಳೂ ಕಾರಣವಾಗಬಹುದು (ಉದಾ: ತೆರಿಗೆ ಸ್ವರೂಪದ ಬದಲಾವಣೆ, ವೆಬ್‌ಸೈಟುಗಳು ಮೊಬೈಲಿನಲ್ಲೂ ಸರಿಯಾಗಿ ಕೆಲಸಮಾಡಬೇಕಾದ ಅನಿವಾರ್ಯತೆ ಇತ್ಯಾದಿ).
ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಪತ್ತೆಯಾದ ತೊಂದರೆಗಳನ್ನು ಸರಿಪಡಿಸುವುದು, ಬದಲಾದ ಪರಿಸ್ಥಿತಿಯಲ್ಲಿ ತಂತ್ರಾಂಶದ ಕಾರ್ಯಾಚರಣೆ ನಿರಾತಂಕವಾಗಿರುವಂತೆ ನೋಡಿಕೊಳ್ಳುವುದು, ತಂತ್ರಾಂಶದ ಕಾರ್ಯಕ್ಷಮತೆಯನ್ನು ಉತ್ತಮಪಡಿಸುವುದು – ಹೀಗೆ ತಂತ್ರಾಂಶ ನಿರ್ವಹಣೆಯ ಚಟುವಟಿಕೆಗಳಲ್ಲಿ ಅನೇಕ ವಿಧಗಳಿರುತ್ತವೆ. ತಂತ್ರಾಂಶದಲ್ಲಿ ಯಾವುದೇ ತೊಂದರೆ ಕಾಣಿಸಿಕೊಳ್ಳುವ ಮೊದಲೇ ಅವುಗಳ ಸಾಧ್ಯತೆಯನ್ನು ಅಂದಾಜಿಸಿ ಸರಿಪಡಿಸುವುದೂ ಈ ಚಟುವಟಿಕೆಗಳ ಭಾಗವಾಗಿರುವುದು ಸಾಧ್ಯ.

Syntax

ಸಿಂಟ್ಯಾಕ್ಸ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ಪ್ರೋಗ್ರಾಮುಗಳನ್ನು ಬರೆಯುವಾಗ ಅಲ್ಲಿನ ಪದವಿನ್ಯಾಸ ಹಾಗೂ ವಾಕ್ಯರಚನೆಯನ್ನು ನಿರ್ದೇಶಿಸುವ ನಿಯಮಗಳು
Long Description: ಉಪಯೋಗಿಸುವ ಭಾಷೆ ಯಾವುದೇ ಆದರೂ ಅದರ ಬರವಣಿಗೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾದ್ದು ಅನಿವಾರ್ಯ. ಈ ನಿಯಮ ಭೌತಿಕ ಜಗತ್ತಿನ ಭಾಷೆಗಳಿಗಷ್ಟೇ ಅಲ್ಲ, ಕಂಪ್ಯೂಟರ್ ಪ್ರಪಂಚದ ಭಾಷೆಗಳಿಗೂ ಅನ್ವಯಿಸುತ್ತದೆ.
ಯಾವುದೇ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ಪ್ರೋಗ್ರಾಮುಗಳನ್ನು ಬರೆಯುವಾಗ ಅಲ್ಲಿನ ಪದವಿನ್ಯಾಸ ಹಾಗೂ ವಾಕ್ಯರಚನೆ ನಿರ್ದಿಷ್ಟವಾಗಿ ಹೀಗೆಯೇ ಇರಬೇಕು ಎಂದು ನಿರ್ದೇಶಿಸುವ ಹಲವು ನಿಯಮಗಳಿರುತ್ತವೆ. ಇಂತಹ ನಿಯಮಗಳನ್ನು ಒಟ್ಟಾಗಿ ಆ ಪ್ರೋಗ್ರಾಮಿಂಗ್ ಭಾಷೆಯ ‘ಸಿಂಟ್ಯಾಕ್ಸ್’ ಎಂದು ಕರೆಯುತ್ತಾರೆ. ಪ್ರೋಗ್ರಾಮಿನಲ್ಲಿ ಬಳಸಬಹುದಾದ ಪದಗಳು, ಲೇಖನಚಿಹ್ನೆಗಳು, ಅವೆಲ್ಲವುಗಳ ಅಪೇಕ್ಷಿತ ಅನುಕ್ರಮ – ಇದೆಲ್ಲ ಸೇರಿ ಸಿಂಟ್ಯಾಕ್ಸ್ ರೂಪುಗೊಂಡಿರುತ್ತದೆ.
ಬೇರೆಬೇರೆ ಪ್ರೋಗ್ರಾಮಿಂಗ್ ಭಾಷೆಗಳಿಗೆ ಈ ನಿಯಮಗಳು ಬೇರೆಬೇರೆಯಾಗಿರುವುದು ಸಾಮಾನ್ಯ. ಕೆಲವು ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದೇ ರೀತಿಯ ಅಥವಾ ಒಂದಕ್ಕೊಂದು ಬಹುಪಾಲು ಹೋಲಿಕೆಯಾಗುವ ಸಿಂಟ್ಯಾಕ್ಸ್ ಇರುವುದೂ ಉಂಟು.
ಸಿಂಟ್ಯಾಕ್ಸ್‌ನಲ್ಲಿ ಯಾವುದೇ ತಪ್ಪುಗಳಿದ್ದರೆ ನಮ್ಮ ಪ್ರೋಗ್ರಾಮು ಸರಿಯಾಗಿ ಕೆಲಸಮಾಡುವುದಿಲ್ಲ. ಒಂದು ಅಲ್ಪವಿರಾಮವೋ ಪೂರ್ಣವಿರಾಮವೋ ಬಿಟ್ಟುಹೋಗಿದ್ದರೂ ಪ್ರೋಗ್ರಾಮ್ ತನ್ನ ಕೆಲಸ ಮಾಡುವಲ್ಲಿ ವಿಫಲವಾಗುತ್ತದೆ. ಇಂತಹ ತಪ್ಪುಗಳನ್ನು ‘ಸಿಂಟ್ಯಾಕ್ಸ್ ಎರರ್’ ಎಂದು ಗುರುತಿಸಲಾಗುತ್ತದೆ. ನಮ್ಮ ಪ್ರೋಗ್ರಾಮು ಕಂಪೈಲ್ ಆಗುವ ಮೊದಲೇ ಇಂತಹ ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಸೌಲಭ್ಯ ಬಹುತೇಕ ಐಡಿಇಗಳಲ್ಲಿ ಇರುತ್ತದೆ.
ಉಪಯೋಗಿಸುವ ಭಾಷೆ ಯಾವುದೇ ಆದರೂ ಅದರ ಬರವಣಿಗೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾದ್ದು ಅನಿವಾರ್ಯ. ಈ ನಿಯಮ ಭೌತಿಕ ಜಗತ್ತಿನ ಭಾಷೆಗಳಿಗಷ್ಟೇ ಅಲ್ಲ, ಕಂಪ್ಯೂಟರ್ ಪ್ರಪಂಚದ ಭಾಷೆಗಳಿಗೂ ಅನ್ವಯಿಸುತ್ತದೆ.
ಯಾವುದೇ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ಪ್ರೋಗ್ರಾಮುಗಳನ್ನು ಬರೆಯುವಾಗ ಅಲ್ಲಿನ ಪದವಿನ್ಯಾಸ ಹಾಗೂ ವಾಕ್ಯರಚನೆ ನಿರ್ದಿಷ್ಟವಾಗಿ ಹೀಗೆಯೇ ಇರಬೇಕು ಎಂದು ನಿರ್ದೇಶಿಸುವ ಹಲವು ನಿಯಮಗಳಿರುತ್ತವೆ. ಇಂತಹ ನಿಯಮಗಳನ್ನು ಒಟ್ಟಾಗಿ ಆ ಪ್ರೋಗ್ರಾಮಿಂಗ್ ಭಾಷೆಯ ‘ಸಿಂಟ್ಯಾಕ್ಸ್’ ಎಂದು ಕರೆಯುತ್ತಾರೆ. ಪ್ರೋಗ್ರಾಮಿನಲ್ಲಿ ಬಳಸಬಹುದಾದ ಪದಗಳು, ಲೇಖನಚಿಹ್ನೆಗಳು, ಅವೆಲ್ಲವುಗಳ ಅಪೇಕ್ಷಿತ ಅನುಕ್ರಮ – ಇದೆಲ್ಲ ಸೇರಿ ಸಿಂಟ್ಯಾಕ್ಸ್ ರೂಪುಗೊಂಡಿರುತ್ತದೆ.
ಬೇರೆಬೇರೆ ಪ್ರೋಗ್ರಾಮಿಂಗ್ ಭಾಷೆಗಳಿಗೆ ಈ ನಿಯಮಗಳು ಬೇರೆಬೇರೆಯಾಗಿರುವುದು ಸಾಮಾನ್ಯ. ಕೆಲವು ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದೇ ರೀತಿಯ ಅಥವಾ ಒಂದಕ್ಕೊಂದು ಬಹುಪಾಲು ಹೋಲಿಕೆಯಾಗುವ ಸಿಂಟ್ಯಾಕ್ಸ್ ಇರುವುದೂ ಉಂಟು.
ಸಿಂಟ್ಯಾಕ್ಸ್‌ನಲ್ಲಿ ಯಾವುದೇ ತಪ್ಪುಗಳಿದ್ದರೆ ನಮ್ಮ ಪ್ರೋಗ್ರಾಮು ಸರಿಯಾಗಿ ಕೆಲಸಮಾಡುವುದಿಲ್ಲ. ಒಂದು ಅಲ್ಪವಿರಾಮವೋ ಪೂರ್ಣವಿರಾಮವೋ ಬಿಟ್ಟುಹೋಗಿದ್ದರೂ ಪ್ರೋಗ್ರಾಮ್ ತನ್ನ ಕೆಲಸ ಮಾಡುವಲ್ಲಿ ವಿಫಲವಾಗುತ್ತದೆ. ಇಂತಹ ತಪ್ಪುಗಳನ್ನು ‘ಸಿಂಟ್ಯಾಕ್ಸ್ ಎರರ್’ ಎಂದು ಗುರುತಿಸಲಾಗುತ್ತದೆ. ನಮ್ಮ ಪ್ರೋಗ್ರಾಮು ಕಂಪೈಲ್ ಆಗುವ ಮೊದಲೇ ಇಂತಹ ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಸೌಲಭ್ಯ ಬಹುತೇಕ ಐಡಿಇಗಳಲ್ಲಿ ಇರುತ್ತದೆ.

Signal Strength

ಸಿಗ್ನಲ್ ಸ್ಟ್ರೆಂಥ್
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲಿಗೆ ಸಿಗುತ್ತಿರುವ ಸಂಕೇತದ ಶಕ್ತಿ
Long Description: ಮೊಬೈಲ್ ಪರದೆಯ ಬಲಭಾಗದ ಮೇಲ್ತುದಿಯಲ್ಲಿ ಕಾಣಿಸುವ ಸಣ್ಣ ಗೆರೆಗಳು ಮೊಬೈಲ್ ಸಂಕೇತದ ಶಕ್ತಿ ಎಷ್ಟಿದೆಯೆಂದು ತಿಳಿಸುತ್ತವೆ. ಅಲ್ಲಿ ಹೆಚ್ಚು ಗೆರೆಗಳಿದ್ದರೆ ನಮ್ಮ ಮೊಬೈಲಿಗೆ ಸಿಗುತ್ತಿರುವ ಸಂಕೇತದ ಶಕ್ತಿ (ಸಿಗ್ನಲ್ ಸ್ಟ್ರೆಂಥ್) ತೃಪ್ತಿಕರವಾಗಿದೆ ಎಂದು ಅರ್ಥ. ಹಾಗಿದ್ದಾಗ ಮೊಬೈಲ್ ಕರೆ ಮಾಡುವುದು, ಇಂಟರ್‌ನೆಟ್ ಬಳಸುವುದೆಲ್ಲ ಸರಾಗ. ಕಾಣಿಸುವ ಗೆರೆಗಳ ಸಂಖ್ಯೆ ಕಡಿಮೆಯಾದಷ್ಟೂ ಸಂಕೇತದ ಶಕ್ತಿ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬಹುದು.
ಮೊಬೈಲ್ ಸಂಕೇತದ ಶಕ್ತಿಯನ್ನು ಡಿಬಿಎಂ (dBm) ಎಂಬ ಏಕಮಾನದಲ್ಲಿ ಅಳೆಯಲಾಗುತ್ತದೆ. ಡಿಬಿಎಂ ಎನ್ನುವುದು ಡೆಸಿಬಲ್-ಮಿಲಿವ್ಯಾಟ್ಸ್ ಎಂಬ ಹೆಸರಿನ ಹ್ರಸ್ವರೂಪ. ಮೊಬೈಲಿನ ಸೆಟಿಂಗ್ಸ್‌ಗೆ ಹೋದರೆ ಸದ್ಯ ನಮಗೆ ದೊರಕುತ್ತಿರುವ ಸಿಗ್ನಲ್ ಸ್ಟ್ರೆಂಥ್ ಎಷ್ಟು ಎಂದು ತಿಳಿದುಕೊಳ್ಳಬಹುದು (ಆಂಡ್ರಾಯ್ಡ್‌ನಲ್ಲಿ ಅಬೌಟ್ > ಸ್ಟೇಟಸ್ > ಸಿಮ್ ಸ್ಟೇಟಸ್).
ಈ ಸಂಖ್ಯೆ ಸಾಮಾನ್ಯವಾಗಿ ಋಣಾತ್ಮಕವಾಗಿರುತ್ತದೆ (ನೆಗೆಟಿವ್). ಇದು ಸೊನ್ನೆಗೆ ಸಮೀಪವಿದ್ದಷ್ಟೂ (-೬೦, -೮೦, -೯೦ ಹೀಗೆ) ಮೊಬೈಲ್ ಸಂಕೇತ ಸಾಕಷ್ಟು ಶಕ್ತಿಶಾಲಿಯಾಗಿದೆ ಎಂದರ್ಥ. -೧೦೦ ಅಥವಾ ಅದಕ್ಕೂ ಕಡಿಮೆಯಾದಾಗ (-೧೧೦, -೧೨೦ ಹೀಗೆ) “ಮೊಬೈಲಿನಲ್ಲಿ ಸಿಗ್ನಲ್ ಇಲ್ಲ”ವೆಂದು ದೂರುವ ಪರಿಸ್ಥಿತಿ ಬರುತ್ತದೆ.

SIM

ಸಿಮ್
Kannada Equivalent: (ರೂಪಿಸಬೇಕಿದೆ)
Short Description : ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್; ಮೊಬೈಲ್ ಚಂದಾದಾರರನ್ನು ಗುರುತಿಸುವ, ಮೊಬೈಲ್ ಜಾಲದ ಸಂಪರ್ಕ ಕಲ್ಪಿಸಿಕೊಡುವ ಘಟಕ
Long Description: ‘ಸಿಮ್’ ಎಂಬ ಹೆಸರು ‘ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್’, ಅಂದರೆ ಚಂದಾದಾರರನ್ನು ಗುರುತಿಸುವ ಘಟಕ ಎನ್ನುವುದರ ಹ್ರಸ್ವರೂಪ.
ಮೊಬೈಲ್ ಜಾಲ ಹಾಗೂ ನಮ್ಮ ದೂರವಾಣಿಯ ನಡುವೆ ಸಂಪರ್ಕ ಏರ್ಪಡಿಸುವುದು ಸಿಮ್‌ನ ಕೆಲಸ. ಹೆಸರೇ ಹೇಳುವಂತೆ ಅದು ಮೊಬೈಲ್ ಚಂದಾದಾರರನ್ನು ಗುರುತಿಸಬೇಕಲ್ಲ, ಈ ಉದ್ದೇಶಕ್ಕಾಗಿ ಬಳಕೆಯಾಗುವ ಇಂಟರ್‌ನ್ಯಾಶನಲ್ ಮೊಬೈಲ್ ಸಬ್‌ಸ್ಕ್ರೈಬರ್ ಐಡೆಂಟಿಟಿ (ಐಎಂಎಸ್‌ಐ) ಸಂಖ್ಯೆ ಸಿಮ್‌ನಲ್ಲಿ ಶೇಖರವಾಗಿರುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು ಮೊಬೈಲ್ ಚಂದಾದಾರರನ್ನು ಗುರುತಿಸಿ ಅವರ ದೂರವಾಣಿಗೆ ಜಾಲದ ಸಂಪರ್ಕ ಕಲ್ಪಿಸಿಕೊಡುವ ಕೆಲಸವನ್ನು ಸಿಮ್ ಮಾಡುತ್ತದೆ.
ಇಷ್ಟೆಲ್ಲ ಕೆಲಸಮಾಡುವ ಸಿಮ್‌ಗೂ ಒಂದು ಗುರುತು ಬೇಕಲ್ಲ, ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್ (ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಪ್ರಪಂಚದಲ್ಲಿರುವ ಪ್ರತಿಯೊಂದು ಸಿಮ್‌ಗೂ ಪ್ರತ್ಯೇಕ ಐಸಿಸಿಐಡಿ ಇರಬೇಕು ಎನ್ನುವುದು ನಿಯಮ.
ಫೋನುಗಳ ಸುದ್ದಿ ಬಂದಾಗ ಐಎಂಇಐ ಎನ್ನುವ ಇನ್ನೊಂದು ಸಂಖ್ಯೆಯ ಪ್ರಸ್ತಾಪವೂ ಬರುತ್ತದಲ್ಲ, ಅದಕ್ಕೂ ಸಿಮ್‌ಗೂ ಯಾವ ಸಂಬಂಧವೂ ಇಲ್ಲ. ‘ಇಂಟರ್‌ನ್ಯಾಶನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ’ ಎಂಬ ಹೆಸರಿನ ಹ್ರಸ್ವರೂಪವಾದ ಐಎಂಇಐ, ಪ್ರಪಂಚದಲ್ಲಿರುವ ಪ್ರತಿಯೊಂದು ಮೊಬೈಲ್ ದೂರವಾಣಿಯನ್ನೂ ಪ್ರತ್ಯೇಕವಾಗಿ ಗುರುತಿಸುವ ಸಂಖ್ಯೆ.

Supercomputer

ಸೂಪರ್‌ಕಂಪ್ಯೂಟರ್
Kannada Equivalent: (ರೂಪಿಸಬೇಕಿದೆ)
Short Description : ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯವಿರುವ, ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಬಳಕೆಯಾಗುವ ಕಂಪ್ಯೂಟರುಗಳು
Long Description: ಪ್ರಪಂಚದಲ್ಲಿ ಅನೇಕ ಬಗೆಯ ಕಂಪ್ಯೂಟರುಗಳಿರುವುದು ನಮಗೆಲ್ಲ ಗೊತ್ತು. ಅವುಗಳ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವವುಗಳನ್ನು ಸೂಪರ್‌ಕಂಪ್ಯೂಟರ್‌ಗಳೆಂದು ಕರೆಯುತ್ತಾರೆ. ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಇವು ಬಳಕೆಯಾಗುತ್ತವೆ.
ಇವುಗಳ ಸಂಸ್ಕರಣಾ ಸಾಮರ್ಥ್ಯವನ್ನು ಅಳೆಯಲು ‘ಫ್ಲೋಟಿಂಗ್ ಪಾಯಿಂಟ್ ಇನ್ಸ್‌ಟ್ರಕ್ಷನ್ಸ್ ಪರ್ ಸೆಕೆಂಡ್’ (ಫ್ಲಾಪ್ಸ್) ಎಂಬ ಏಕಮಾನವನ್ನು ಬಳಸಲಾಗುತ್ತದೆ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಎಷ್ಟು ಲೆಕ್ಕಾಚಾರಗಳನ್ನು ಮಾಡಬಲ್ಲದು ಎನ್ನುವುದನ್ನು ಈ ಮಾಪನ ಸೂಚಿಸುತ್ತದೆ. ನಮ್ಮ-ನಿಮ್ಮ ಮನೆಗಳಲ್ಲಿರುವ ಇಂದಿನ ಸಾಮಾನ್ಯ ಕಂಪ್ಯೂಟರುಗಳು ಪ್ರತಿ ಸೆಕೆಂಡಿಗೆ ಇಂತಹ ನೂರಾರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲವು.
ಯಾವುದೋ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ ನೂರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲದು ಎಂದರೆ ಅದರ ಸಾಮರ್ಥ್ಯ ಒಂದು ಗಿಗಾಫ್ಲಾಪ್ಸ್ ಆಗುತ್ತದೆ. ಮೇಲ್ನೋಟಕ್ಕೆ ಇದು ಬಹಳ ದೊಡ್ಡ ಸಾಮರ್ಥ್ಯವೆಂದು ತೋರಿದರೂ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯದ ಮುಂದೆ ಇದು ತೃಣಸಮಾನ. ಏಕೆಂದರೆ ಸದ್ಯದ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯ ಹತ್ತಾರು ಪೆಟಾಫ್ಲಾಪ್ಸ್‌ಗಳಲ್ಲಿರುತ್ತದೆ. ಪೆಟಾ ಎಂದರೆ ಒಂದರ ಮುಂದೆ ಹದಿನೈದು ಸೊನ್ನೆ ಜೋಡಿಸಿದಷ್ಟು ದೊಡ್ಡ ಸಂಖ್ಯೆ!

Secondary Memory

ಸೆಕೆಂಡರಿ ಮೆಮೊರಿ
Kannada Equivalent: (ರೂಪಿಸಬೇಕಿದೆ)
Short Description : ಈ ಕ್ಷಣಕ್ಕೆ ಅಗತ್ಯವಿಲ್ಲದ ಮಾಹಿತಿಯನ್ನು ಬೇಕಾದಾಗ ಬಳಸಲು ಅನುವಾಗುವಂತೆ ಉಳಿಸಿಟ್ಟುಕೊಳ್ಳುವ ಶೇಖರಣಾ ಮಾಧ್ಯಮ
Long Description: ಕಂಪ್ಯೂಟರಿನಲ್ಲಿ ರಾಶಿಗಟ್ಟಲೆ ಮಾಹಿತಿ ಶೇಖರವಾಗಿದ್ದರೂ ಅದರಲ್ಲಿ ಎಲ್ಲವೂ ಎಲ್ಲ ಸಮಯದಲ್ಲೂ ಬೇಕಾಗುವುದಿಲ್ಲ. ಹಾಗಾಗಿ ಅದನ್ನೆಲ್ಲ ನಮಗೆ ಬೇಕಾದಾಗ ಪಡೆದುಕೊಳ್ಳಲು ಆಗುವಂತೆ ಬೇರೊಂದು ಕಡೆ ಉಳಿಸಿಡಬೇಕಾಗುತ್ತದೆ. ಹೀಗೆ ಉಳಿಸಿಡಲು ಸೆಕೆಂಡರಿ ಮೆಮೊರಿ ಬಳಕೆಯಾಗುತ್ತದೆ.

ಕಂಪ್ಯೂಟರ್‌ನಲ್ಲಿರುವ ಎಲ್ಲ ಕಡತಗಳು ಹಾಗೂ ತಂತ್ರಾಂಶಗಳು ಸೆಕೆಂಡರಿ ಮೆಮೊರಿಯಲ್ಲೇ ಶೇಖರವಾಗಿರುತ್ತವೆ. ಅಗತ್ಯಬಿದ್ದಾಗ ಅಗತ್ಯವಾದಷ್ಟೆ ವಿಷಯಗಳು ಅಲ್ಲಿಂದ ಪ್ರೈಮರಿ ಮೆಮೊರಿಗೆ ವರ್ಗಾವಣೆಯಾಗುತ್ತವೆ. ಬದಲಾದದ್ದನ್ನು ಅಥವಾ ಹೊಸದಾಗಿ ಸೇರಿದ್ದನ್ನು ‘ಸೇವ್’ ಮಾಡಿದಾಗ ಅದು ಮತ್ತೆ ಸೆಕೆಂಡರಿ ಮೆಮೊರಿಗೇ ಹೋಗಿ ಉಳಿದುಕೊಳ್ಳುತ್ತದೆ.

ಹಾರ್ಡ್‌ಡಿಸ್ಕ್, ಸೀಡಿ/ಡೀವೀಡಿ, ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಇತ್ಯಾದಿಗಳೆಲ್ಲ ಸೆಕೆಂಡರಿ ಮೆಮೊರಿಗೆ ಉದಾಹರಣೆಗಳು.

Selfie Stick

ಸೆಲ್ಫಿ ಸ್ಟಿಕ್
Kannada Equivalent: (ರೂಪಿಸಬೇಕಿದೆ)
Short Description : ಸ್ವತಃ ಛಾಯಾಗ್ರಾಹಕನೇ ತನ್ನ ಸ್ವಂತ ಚಿತ್ರವನ್ನು ಕೊಂಚ ದೂರದಿಂದಲೂ ಸೆರೆಹಿಡಿಯಲು ನೆರವಾಗುವ ಕೋಲಿನಂತಹ ಸಾಧನ
Long Description: ಸ್ವತಃ ಛಾಯಾಗ್ರಾಹಕನೇ ಸೆರೆಹಿಡಿಯುವ ತನ್ನ ಸ್ವಂತ ಚಿತ್ರವನ್ನು ‘ಸೆಲ್ಫಿ’ ಎಂದು ಕರೆಯುವ ವಿಷಯ ನಮಗೆ ಗೊತ್ತೇ ಇದೆ. ಸೆಲ್ಫಿ ಕ್ಲಿಕ್ಕಿಸುವುದೂ ನಮಗೆ ಚೆನ್ನಾಗಿ ಗೊತ್ತು: ಮೊಬೈಲ್ ಹಿಡಿದ ಕೈಯನ್ನು ಮುಂದಕ್ಕೆ ಚಾಚಿ, ನಮ್ಮ ಭಂಗಿಯನ್ನು ಬೇಕಾದಂತೆ ಸರಿಹೊಂದಿಸಿಕೊಂಡು ಚಿತ್ರ ಕ್ಲಿಕ್ಕಿಸಿದರೆ ಆಯಿತು; ಸೆಲ್ಫಿ ರೆಡಿ!
ಆದರೆ ಹೀಗೆ ಚಿತ್ರವನ್ನು ಕ್ಲಿಕ್ಕಿಸುವಾಗ ನಮ್ಮ ಮುಂದಿರುವ ಆಯ್ಕೆಗಳು ಕಡಿಮೆ: ವಿಭಿನ್ನ ಕೋನಗಳಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಲು ಕೈಯನ್ನು ಎಷ್ಟು ದೂರ ತಾನೆ ಚಾಚಲು ಸಾಧ್ಯ? ಈ ಕೊರತೆಯನ್ನು ‘ಸೆಲ್ಫಿ ಸ್ಟಿಕ್’ ಎನ್ನುವ ಸಾಧನ ತುಂಬಿಕೊಟ್ಟಿದೆ. ಚಾಚಿದ ಕೈಗಿಂತ ಹೆಚ್ಚು ದೂರದಿಂದ ಸೆಲ್ಫಿ ಕ್ಲಿಕ್ಕಿಸುವುದನ್ನು ಸಾಧ್ಯವಾಗಿಸುವುದು ಈ ಕೋಲಿನ ಹೆಚ್ಚುಗಾರಿಕೆ. ಕೋಲಿನ ಒಂದು ತುದಿಗೆ ಕ್ಯಾಮೆರಾ ಸಿಕ್ಕಿಸಿ ಇನ್ನೊಂದು ತುದಿಯನ್ನು ಕೈಲಿ ಹಿಡಿದುಕೊಂಡು ಬೇಕಾದ ಕೋನದಲ್ಲಿ ನಮ್ಮ ಸ್ವಂತಚಿತ್ರ ಕ್ಲಿಕ್ಕಿಸಿಕೊಳ್ಳಲು ಇದು ನೆರವಾಗುತ್ತದೆ.
ಅಷ್ಟುದ್ದ ಕೋಲಿನ ತುದಿಯಲ್ಲಿರುವ ಕ್ಯಾಮೆರಾ ಕ್ಲಿಕ್ಕಿಸುವುದು ಹೇಗೆ? ಟೈಮರ್ ಬಳಸುವುದು ಒಂದು ಆಯ್ಕೆ; ಅದು ಕಷ್ಟ ಎನ್ನುವವರಿಗೆ ಹಿಡಿಯಲ್ಲೇ ಬಟನ್ ಇರುವ ಸೆಲ್ಫಿ ಸ್ಟಿಕ್‌ಗಳೂ ಇವೆ. ಇಲ್ಲಿ ಪುಟ್ಟದೊಂದು ಕೇಬಲ್ ಅಥವಾ ಬ್ಲೂಟೂತ್ ಮೂಲಕ ಸೆಲ್ಫಿ ಸ್ಟಿಕ್ ಅನ್ನು ಮೊಬೈಲಿಗೆ ಸಂಪರ್ಕಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಸಾಧ್ಯ. ಪ್ರತ್ಯೇಕ ರಿಮೋಟ್ ಕಂಟ್ರೋಲ್ ಸೌಲಭ್ಯವಿರುವ ಸೆಲ್ಫಿ ಸ್ಟಿಕ್‌ಗಳೂ ಇವೆ.

Scareware

ಸ್ಕೇರ್‌ವೇರ್
Kannada Equivalent: (ರೂಪಿಸಬೇಕಿದೆ)
Short Description : ಬಳಕೆದಾರರಲ್ಲಿ ಹೆದರಿಕೆಹುಟ್ಟಿಸಿ ಮಾರಾಟಮಾಡುವ ನಿಷ್ಪ್ರಯೋಜಕ, ಅಥವಾ ದುರುದ್ದೇಶಪೂರಿತ ತಂತ್ರಾಂಶ
Long Description: “ನಿಮ್ಮ ಕಂಪ್ಯೂಟರಿಗೆ ವೈರಸ್ ಬಂದಿದೆ”, “ನಿಮ್ಮ ಫೋನಿನ ಮಾಹಿತಿ ಸುರಕ್ಷಿತವಾಗಿಲ್ಲ” ಎಂದೆಲ್ಲ ಹೆದರಿಸುವ ಜಾಹೀರಾತುಗಳು ಹಲವು ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಇಂತಹ ನಕಲಿ ಸಂದೇಶಗಳನ್ನು ತೋರಿಸಿ ಬಳಕೆದಾರರನ್ನು ಹೆದರಿಸುವುದು ಆನ್‌ಲೈನ್ ಜಗತ್ತಿನ ದೊಡ್ಡ ಹಗರಣಗಳಲ್ಲೊಂದು. ಕಂಪ್ಯೂಟರಿಗೆ ಅಥವಾ ಸ್ಮಾರ್ಟ್‌ಫೋನಿಗೆ ವೈರಸ್ ಬಂದಿದೆ ಎಂದು ಹೆದರಿಸಿ ನಿಷ್ಪ್ರಯೋಜಕ, ಅಥವಾ ದುರುದ್ದೇಶಪೂರಿತ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಹಾಗೂ ಅದಕ್ಕಾಗಿ ಅವರಿಂದ ಹಣವನ್ನೂ ವಸೂಲಿಮಾಡುವುದು ಈ ಹಗರಣದ ಮೂಲಮಂತ್ರ.
ಬಳಕೆದಾರರನ್ನು ಹೆದರಿಸಿ ದುಡ್ಡುಕೀಳುವುದೇ ಇಂತಹ ತಂತ್ರಾಂಶಗಳ ಮುಖ್ಯ ಉದ್ದೇಶವಾದ್ದರಿಂದ ಇವುಗಳನ್ನು ‘ಸ್ಕೇರ್‌ವೇರ್’ಗಳೆಂದು ಕರೆಯುತ್ತಾರೆ. ಬೆದರುಬೊಂಬೆಗಳ ಹಾಗೆ ಸುಖಾಸುಮ್ಮನೆ ಹೆದರಿಸುವುದೇ ಇವುಗಳ ಕೆಲಸವಾದ್ದರಿಂದ ನಾವು ಇವನ್ನು ಬೆದರು ತಂತ್ರಾಂಶ ಎಂದೂ ಕರೆಯಬಹುದು.
ಇಂತಹ ಸಂದೇಶಗಳನ್ನು ನಂಬಿ ಯಾವಯಾವುದೋ ತಂತ್ರಾಂಶಗಳನ್ನು ಕೊಂಡರೆ ದುಡ್ಡು ಹಾಳಾಗುವುದೊಂದೇ ಅಪಾಯವಲ್ಲ; ಅವರು ಹಣಪಡೆದು ನೀಡುವ ತಂತ್ರಾಂಶ ದುರುದ್ದೇಶಪೂರಿತವಾಗಿರುವ ಹಾಗೂ ಅವುಗಳ ಮೂಲಕವೇ ನಮ್ಮ ಕಂಪ್ಯೂಟರ್-ಸ್ಮಾರ್ಟ್‌ಫೋನುಗಳಿಗೆ ತೊಂದರೆ ಎದುರಾಗುವ ಸಾಧ್ಯತೆಯೂ ಇರುತ್ತದೆ.
ಈ ಅಪಾಯಗಳಿಂದ ಪಾರಾಗುವ ವಿಧಾನ ಸರಳ: ನಂಬಲರ್ಹವಾದ ಆಂಟಿವೈರಸ್ ತಂತ್ರಾಂಶಗಳನ್ನಷ್ಟೇ ಬಳಸುವುದು, ಅವನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡುತ್ತಿರುವುದು ಹಾಗೂ ಸುಖಾಸುಮ್ಮನೆ ಹೆದರಿಸುವ ಜಾಹೀರಾತುಗಳನ್ನು ನಂಬದಿರುವುದು!

Scanner

ಸ್ಕ್ಯಾನರ್
Kannada Equivalent: (ರೂಪಿಸಬೇಕಿದೆ)
Short Description : ಮುದ್ರಿತ ಕಡತಗಳನ್ನು, ಛಾಯಾಚಿತ್ರಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿಕೊಡುವ ಸಾಧನ
Long Description: ಕಂಪ್ಯೂಟರ್ ಬಳಸಿ ಕಡತಗಳನ್ನು ರೂಪಿಸುವುದು, ಪ್ರಿಂಟರ್ ನೆರವಿನಿಂದ ಅವನ್ನು ಮುದ್ರಿಸಿ ಭೌತಿಕ ರೂಪಕ್ಕೆ ತರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಇದಕ್ಕೆ ವ್ಯತಿರಿಕ್ತವಾಗಿ ಹಲವಾರು ಬಾರಿ ಭೌತಿಕ ಕಡತಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಅಗತ್ಯವೂ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬರುವ ಸಾಧನವೇ ಸ್ಕ್ಯಾನರ್. ಮುದ್ರಿತ ಕಡತಗಳನ್ನು, ಛಾಯಾಚಿತ್ರಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿಕೊಡುವುದು (“ಸ್ಕ್ಯಾನ್ ಮಾಡುವುದು”) ಇದರ ವೈಶಿಷ್ಟ್ಯ.
ಕಡತದತ್ತ ಬೆಳಕನ್ನು ಚಿಮ್ಮಿಸಿ ಅದರ ಚಿತ್ರರೂಪವನ್ನು ಸೆರೆಹಿಡಿಯುವುದು ಸ್ಕ್ಯಾನರುಗಳ ಕಾರ್ಯವಿಧಾನ. ಅವು ಕೆಲಸಮಾಡುವುದು ಬಹುತೇಕ ಡಿಜಿಟಲ್ ಕ್ಯಾಮೆರಾದಂತೆಯೇ ಎನ್ನಬಹುದು. ಕ್ಯಾಮೆರಾ ಕೈಲಿ ಹಿಡಿದು ಚಿತ್ರ ಕ್ಲಿಕ್ಕಿಸುವ ಬದಲಿಗೆ ಯಾಂತ್ರೀಕೃತ ವ್ಯವಸ್ಥೆಯೊಂದು ಆ ಕೆಲಸ ಮಾಡುತ್ತದೆ ಎನ್ನುವುದಷ್ಟೇ ವ್ಯತ್ಯಾಸ.
ಬಹುತೇಕ ಸ್ಕ್ಯಾನರುಗಳಲ್ಲಿ ನಮ್ಮ ಕಡತವನ್ನು ಸ್ಕ್ಯಾನ್ ಮಾಡಲು ಅದನ್ನೊಂದು ಸಮತಲವಾದ ಫಲಕದ ಮೇಲೆ ಇಡಬೇಕಾಗುತ್ತದೆ (ಫೋಟೋಕಾಪಿ/ಜೆರಾಕ್ಸ್ ಯಂತ್ರದಂತೆ). ಆ ಫಲಕದ ಕೆಳಗಿನಿಂದ ಕಡತದತ್ತ ಬೆಳಕು ಹಾಯಿಸಿ ಅದರ ಚಿತ್ರರೂಪವನ್ನು ಸೆರೆಹಿಡಿಯಲಾಗುತ್ತದೆ. ಇಂತಹ ಸಾಧನಗಳನ್ನು ‘ಫ್ಲ್ಯಾಟ್‌ಬೆಡ್’ ಸ್ಕ್ಯಾನರುಗಳೆಂದು ಕರೆಯುತ್ತಾರೆ. ಕಡತದ ಹಾಳೆಯನ್ನು ಒಂದುಕಡೆ ಊಡಿಸಿದರೆ ಅದನ್ನು ಸ್ಕ್ಯಾನ್ ಮಾಡಿಕೊಂಡು ಹೊರತಳ್ಳುವ ‘ಶೀಟ್-ಫೆಡ್’ ಸ್ಕ್ಯಾನರುಗಳೂ ಇವೆ. ಇನ್ನು ಬುಕ್ ಸ್ಕ್ಯಾನರುಗಳು ಇಡೀ ಪುಸ್ತಕಗಳನ್ನೇ ಸ್ಕ್ಯಾನ್ ಮಾಡಲು ನೆರವಾಗುತ್ತವೆ.
ಸ್ಕ್ಯಾನರ್ ಸಾಮರ್ಥ್ಯದ ಮಿತಿಯೊಳಗೆ ಅದರ ತಾಂತ್ರಿಕ ಹೊಂದಾಣಿಕೆಗಳನ್ನು ಬದಲಿಸುವ ಮೂಲಕ ಸ್ಕ್ಯಾನ್ ಮಾಡಲಾದ ಕಡತದ ಗುಣಮಟ್ಟವನ್ನು ಬದಲಿಸಿಕೊಳ್ಳುವುದು ಸಾಧ್ಯ (ಉದಾ: ಸಮಾಜಜಾಲಗಳಲ್ಲಿ ಹಂಚಿಕೊಳ್ಳಲು ಕಡಿಮೆ ಗುಣಮಟ್ಟ ಸಾಕು; ಮರುಮುದ್ರಣಕ್ಕೋ ಓಸಿಆರ್‌ನಂತಹ ತಂತ್ರಾಂಶಗಳಲ್ಲಿ ಬಳಸಲೋ ಆದರೆ ಸ್ಕ್ಯಾನಿಂಗ್ ಹೆಚ್ಚು ಸ್ಪಷ್ಟವಾಗಿರಬೇಕಾದ್ದು ಅನಿವಾರ್ಯ). ಈ ಹೊಂದಾಣಿಕೆಗಳನ್ನು ಸ್ಕ್ಯಾನರ್‌ನ ಜೊತೆ ಬರುವ ತಂತ್ರಾಂಶದಲ್ಲಿ ಮಾಡಿಕೊಳ್ಳಬಹುದು. ಇಂತಹ ತಂತ್ರಾಂಶಗಳು ಸ್ಕ್ಯಾನ್ ಆದ ಕಡತವನ್ನು ಅಷ್ಟಿಷ್ಟು ಬದಲಿಸುವ ಆಯ್ಕೆಯನ್ನೂ ಕೊಡುತ್ತವೆ. ಮೊಬೈಲಿನ ಕ್ಯಾಮೆರಾವನ್ನೇ ಸ್ಕ್ಯಾನರಿನಂತೆ ಬಳಸಿ ಕಡತಗಳನ್ನು ಸ್ಕ್ಯಾನ್ ಮಾಡಿಕೊಡುವ ಆಪ್‌ಗಳೂ ಇವೆ.

Screenshot

ಸ್ಕ್ರೀನ್ ಶಾಟ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರ್, ಮೊಬೈಲ್ ಅಥವಾ ಟ್ಯಾಬ್ಲೆಟ್ ಪರದೆಯ ಮೇಲೆ ಒಂದು ನಿರ್ದಿಷ್ಟ ಸಮಯದಲ್ಲಿ ಮೂಡಿರುವ ಮಾಹಿತಿಯ ಚಿತ್ರರೂಪ
Long Description: ಕಂಪ್ಯೂಟರ್, ಮೊಬೈಲ್ ಅಥವಾ ಟ್ಯಾಬ್ಲೆಟ್ ಪರದೆಯ ಮೇಲೆ ಒಂದು ನಿರ್ದಿಷ್ಟ ಸಮಯದಲ್ಲಿ ಮೂಡಿರುವ ಮಾಹಿತಿಯನ್ನು ಚಿತ್ರರೂಪದಲ್ಲಿ ಸೆರೆಹಿಡಿದಿಟ್ಟುಕೊಳ್ಳುವುದು ಸಾಧ್ಯ. ಹೀಗೆ ಸೆರೆಹಿಡಿಯಲಾದ ಚಿತ್ರವೇ ‘ಸ್ಕ್ರೀನ್‌ಶಾಟ್’ (ಗಮನಿಸಿ: ಪರದೆಯ ಮೇಲಿರುವುದು ಪಠ್ಯವೇ ಆಗಿದ್ದರೂ ಅದು ಸ್ಕ್ರೀನ್‌ಶಾಟ್‌ನಲ್ಲಿ ಸೆರೆಯಾಗುವುದು ಚಿತ್ರರೂಪದಲ್ಲೇ).
ನಾವು ನೋಡುತ್ತಿರುವ ಮಾಹಿತಿಯನ್ನು ಅದೇ ರೂಪದಲ್ಲಿ ಉಳಿಸಿಟ್ಟುಕೊಳ್ಳಬೇಕು ಎಂದಾಗ ಈ ಪರಿಕಲ್ಪನೆ ನಮ್ಮ ನೆರವಿಗೆ ಬರುತ್ತದೆ. ತಂತ್ರಾಂಶದ ಕಾರ್ಯಾಚರಣೆ ವಿವರಿಸಲು, ನಮಗೆ ಕಂಡ ಎರರ್ ಮೆಸೇಜನ್ನು ಬೇರೊಬ್ಬರೊಡನೆ ಹಂಚಿಕೊಳ್ಳಲು, ಕುತೂಹಲಕರವೆನಿಸಿದ ಮಾಹಿತಿಯನ್ನು ಹಾಗೆಯೇ ಉಳಿಸಿಟ್ಟುಕೊಳ್ಳಲು – ಅನೇಕ ಉದ್ದೇಶಗಳಿಗಾಗಿ ಸ್ಕ್ರೀನ್‌ಶಾಟ್‌ಗಳನ್ನು ಬಳಸುವುದು ಸಾಧ್ಯ (ಈಚೆಗೆ ಸಮಾಜಜಾಲದ ಜಗಳಗಳಲ್ಲೂ ಸ್ಕ್ರೀನ್‌ಶಾಟ್ ಬಳಕೆ ವ್ಯಾಪಕವಾಗಿದೆ!).
ಸ್ಕ್ರೀನ್‌ಶಾಟ್ ಪಡೆಯುವ ವಿಧಾನ ಬೇರೆಬೇರೆ ಸಾಧನಗಳಲ್ಲಿ ಬೇರೆಬೇರೆಯಾಗಿರುವುದು ಸಾಧ್ಯ. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಕಂಪ್ಯೂಟರುಗಳಲ್ಲಿ ‘ಪ್ರಿಂಟ್ ಸ್ಕ್ರೀನ್’ ಗುಂಡಿ ಒತ್ತುವ ಮೂಲಕ ಇಡೀ ಪರದೆಯ ಸ್ಕ್ರೀನ್‌ಶಾಟ್ ಪಡೆದುಕೊಳ್ಳಬಹುದು (ಸಕ್ರಿಯ ತಂತ್ರಾಂಶವಷ್ಟೇ ಕಾಣುವ ಚಿತ್ರಕ್ಕಾಗಿ ‘ಆಲ್ಟ್+ಪ್ರಿಂಟ್ ಸ್ಕ್ರೀನ್’ ಬಳಸಬೇಕು).
ಹಲವು ಆಂಡ್ರಾಯ್ಡ್ ಫೋನುಗಳಲ್ಲಿ ವಾಲ್ಯೂಂ ಗುಂಡಿಯ ಕೆಳಭಾಗ ಮತ್ತು ಪವರ್ ಗುಂಡಿಯನ್ನು ಒಟ್ಟಿಗೆ ಒತ್ತುವ ಮೂಲಕ ಸ್ಕ್ರೀನ್‌ಶಾಟ್ ಪಡೆಯುವುದು ಸಾಧ್ಯ. ಬಹಳಷ್ಟು ಫೋನುಗಳಲ್ಲಿ ಇದಲ್ಲದೆ ಬೇರೆ ಆಯ್ಕೆಗಳೂ ಇರುತ್ತವೆ; ಆ ಕುರಿತ ವಿವರಗಳನ್ನು ಗೂಗಲ್ ಮಾಡಿ ತಿಳಿದುಕೊಳ್ಳಬಹುದು.
< previous12Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App