भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

RFID

ಆರ್‌ಎಫ್‌ಐಡಿ
Kannada Equivalent: (ರೂಪಿಸಬೇಕಿದೆ)
Short Description : ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್; ಪರಸ್ಪರ ಸಮೀಪದಲ್ಲಿರುವ ಸಂಪರ್ಕ ಸಾಧನಗಳ ನಡುವೆ ರೇಡಿಯೋ ಸಂಕೇತಗಳ ಮೂಲಕ ಮಾಹಿತಿ ವಿನಿಮಯವನ್ನು ಸಾಧ್ಯವಾಗಿಸುವ ವ್ಯವಸ್ಥೆ
Long Description: ದೊಡ್ಡದೊಡ್ಡ ಅಂಗಡಿಗಳಲ್ಲಿ ಶಾಪಿಂಗ್ ಮುಗಿಸಿ ಹೊರಟಾಗ ಬಿಲ್ಲುಕಟ್ಟೆಯಲ್ಲಿರುವ ವ್ಯಕ್ತಿ ನಾವು ಕೊಂಡ ವಸ್ತುಗಳಿಂದ ಪುಟ್ಟದೊಂದು ಸಾಧನವನ್ನು ಕಿತ್ತುತೆಗೆಯುವುದನ್ನು ನೀವು ನೋಡಿರಬಹುದು. ತೆಗೆಯಲು ಮರೆತು ಹಾಗೆಯೇ ಕೊಟ್ಟಾಗ ನೀವೇನಾದರೂ ಅದನ್ನು ಹೊರಗೆ ಕೊಂಡೊಯ್ಯಲು ಪ್ರಯತ್ನಿಸಿದರೆ ಬಾಗಿಲ ಬಳಿಯ ಸೆನ್ಸರ್ ಅರಚಿಕೊಳ್ಳುವುದರ ಅನುಭವವೂ ಆಗಿರಬಹುದು. ಕಳವಿನ ಚಟವಿರುವ ಅನೇಕರು ಇದರಿಂದಾಗಿಯೇ ಸಿಕ್ಕಿ ಬೀಳುತ್ತಾರೆ.
ಇಲ್ಲಿ ಬಳಕೆಯಾಗುವ ತಂತ್ರಜ್ಞಾನವೇ ‘ಆರ್‌ಎಫ್‌ಐಡಿ’, ಅರ್ಥಾತ್ ‘ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್’. ಸಣ್ಣಗಾತ್ರದ ಟ್ಯಾಗ್‌ಗಳು ಹಾಗೂ ಅದರಲ್ಲಿರುವ ಮಾಹಿತಿಯನ್ನು ಓದಬಲ್ಲ ಸೆನ್ಸರುಗಳು ಈ ವ್ಯವಸ್ಥೆಯ ಜೀವಾಳ. ಈ ಆರ್‌ಎಫ್‌ಐಡಿ ಟ್ಯಾಗ್‌ಗಳು ತಮ್ಮಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ರೇಡಿಯೋ ಸಂಕೇತಗಳ ಮೂಲಕ ಬಿತ್ತರಿಸಬಲ್ಲವು. ಅವು ಬಿತ್ತರಿಸುವ ಸಂಕೇತಗಳನ್ನು ಅರ್ಥಮಾಡಿಕೊಳ್ಳುವುದು ಸೆನ್ಸರುಗಳ ಕೆಲಸ.
ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ ಅಂಗಡಿಗಳಲ್ಲಿ ಕಳವು ತಡೆಗೆ, ದಾಸ್ತಾನಿನ ಮಾಹಿತಿ ಸಂಗ್ರಹಣೆಗೆ, ಟಿಕೇಟುಗಳ ತಪಾಸಣೆಗೆಲ್ಲ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಬೀಟ್ ಪೋಲೀಸರು ಯಾವೆಲ್ಲ ರಸ್ತೆಗಳಿಗೆ ಭೇಟಿಕೊಟ್ಟಿದ್ದಾರೆ, ಕಸ ಸಂಗ್ರಹಣಾ ವಾಹನಗಳು ಎಲ್ಲೆಲ್ಲಿ ಸಂಚರಿಸಿವೆ ಎನ್ನುವುದನ್ನು ತಿಳಿಯಲಿಕ್ಕೂ ಆರ್‌ಎಫ್‌ಐಡಿ ಬಳಸಿದ ಉದಾಹರಣೆಗಳಿವೆ.
ಬಾರ್ ಕೋಡ್‌ನಂತೆ ಇಲ್ಲಿ ನಿರ್ದಿಷ್ಟ ಸಂಕೇತವನ್ನೇ ಸ್ಕ್ಯಾನ್ ಮಾಡುವ ಅಗತ್ಯ ಇಲ್ಲ; ಹಾಗಾಗಿ ಅಂಗಡಿಯಲ್ಲಿ ಕೊಂಡ ವಸ್ತುಗಳನ್ನು ಬುಟ್ಟಿಯಲ್ಲಿದ್ದಂತೆಯೇ ಗುರುತಿಸುವುದು, ಜೇಬಿನಲ್ಲೋ ಪರ್ಸಿನಲ್ಲೋ ಇರುವ ಟಿಕೇಟನ್ನು ಅಲ್ಲಿದ್ದಂತೆಯೇ ಪರಿಶೀಲಿಸುವುದು ಸಾಧ್ಯವಾಗುತ್ತದೆ.

RSS

ಆರ್‌ಎಸ್‌ಎಸ್
Kannada Equivalent: (ರೂಪಿಸಬೇಕಿದೆ)
Short Description : ರಿಚ್ ಸೈಟ್ ಸಮ್ಮರಿ; ವಿವಿಧ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು – ಅವುಗಳನ್ನು ಪ್ರತ್ಯೇಕವಾಗಿ ಸಂದರ್ಶಿಸುವ ಅಗತ್ಯವಿಲ್ಲದೆ – ನೇರವಾಗಿ ಪಡೆದುಕೊಳ್ಳಲು ನೆರವಾಗುವ ತಂತ್ರಜ್ಞಾನ
Long Description: ವಿಶ್ವವ್ಯಾಪಿ ಜಾಲದಲ್ಲಿ ಪ್ರತಿ ವಿಷಯಕ್ಕೂ ಸಂಬಂಧಪಟ್ಟ ಲಕ್ಷಗಟ್ಟಲೆ ಜಾಲತಾಣಗಳಿವೆ. ಆ ಪೈಕಿ ಹಲವು ತಾಣಗಳಲ್ಲಿ ನಮಗೆ ಇಷ್ಟವಾಗುವ – ಉಪಯುಕ್ತವೆನಿಸುವ ಮಾಹಿತಿ ದೊರಕುವುದು ಸಾಮಾನ್ಯ. ಆದರೆ ಅಷ್ಟೂ ಜಾಲತಾಣಗಳ ವಿಳಾಸ ನೆನಪಿಟ್ಟುಕೊಳ್ಳುವುದು, ಅಲ್ಲಿ ಪ್ರಕಟವಾಗುವ ಹೊಸ ಬರಹಗಳನ್ನು ಗಮನಿಸುವುದು ಕಷ್ಟದ ಕೆಲಸ.
ವಿವಿಧ ತಾಣಗಳಲ್ಲಿ ಪ್ರಕಟವಾಗುವ ಹೊಸ ಬರಹಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಿ ಈ ಸಮಸ್ಯೆಯನ್ನು ಕೊಂಚಮಟ್ಟಿಗೆ ಪರಿಹರಿಸುವ ತಂತ್ರಜ್ಞಾನವೇ ಆರ್‌ಎಸ್‌ಎಸ್, ಅರ್ಥಾತ್ ‘ರಿಚ್ ಸೈಟ್ ಸಮ್ಮರಿ’. ರಿಯಲಿ ಸಿಂಪಲ್ ಸಿಂಡಿಕೇಶನ್ ಎಂದೂ ಕರೆಸಿಕೊಳ್ಳುವ ಈ ವ್ಯವಸ್ಥೆಯನ್ನು ಬಳಸಿ ವಿವಿಧ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ನೇರವಾಗಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಹೀಗೆ ಪಡೆದ ಮಾಹಿತಿಯನ್ನು ಒಟ್ಟುಸೇರಿಸಿ ಒಂದೇಕಡೆ ಪ್ರದರ್ಶಿಸುವ ಹಲವಾರು ಜಾಲತಾಣಗಳಿವೆ.
ಅಷ್ಟೇ ಅಲ್ಲ, ನಮ್ಮ ಆಯ್ಕೆಯ ತಾಣಗಳಿಂದ ಆರ್‌ಎಸ್‌ಎಸ್ ಫೀಡ್ ಪಡೆದು ಆ ಲೇಖನಗಳನ್ನೆಲ್ಲ ಒಂದೇಕಡೆ ನೋಡಲು ನೆರವಾಗುವ ತಂತ್ರಾಂಶಗಳು – ಮೊಬೈಲ್ ಆಪ್‌ಗಳೂ ಇವೆ. ಕೆಲವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಇಂತಹ ತಂತ್ರಾಂಶಗಳ ಬಳಕೆ ಈಗ ಕಡಿಮೆಯಾಗಿದೆಯಾದರೂ ಒಟ್ಟಾರೆಯಾಗಿ ಆರ್‌ಎಸ್‌ಎಸ್ ವ್ಯವಸ್ಥೆ ಜಾಲಲೋಕದಲ್ಲಿ ಇನ್ನೂ ವ್ಯಾಪಕವಾಗಿ ಬಳಕೆಯಾಗುತ್ತಿದೆ.

RGB

ಆರ್‌ಜಿಬಿ
Kannada Equivalent: (ರೂಪಿಸಬೇಕಿದೆ)
Short Description : ಡಿಜಿಟಲ್ ಜಗತ್ತಿನ ಎಲ್ಲ ಬಣ್ಣಗಳಿಗೂ ಮೂಲವಾದ ಕೆಂಪು, ಹಸಿರು ಹಾಗೂ ನೀಲಿ (ರೆಡ್-ಗ್ರೀನ್-ಬ್ಲೂ) ಬಣ್ಣಗಳನ್ನು ಸೂಚಿಸುವ ಹೆಸರು
Long Description: ಪ್ರಾಥಮಿಕ ಬಣ್ಣಗಳನ್ನು (ಪ್ರೈಮರಿ ಕಲರ್ಸ್) ಸೇರಿಸಿ ಹೊಸ ಬಣ್ಣಗಳನ್ನು ರೂಪಿಸಿಕೊಳ್ಳುವುದು ಹೊಸ ಸಂಗತಿಯೇನಲ್ಲ. ಯಾವ ಬಣ್ಣಕ್ಕೆ ಯಾವ ಬಣ್ಣ ಸೇರಿಸಿದರೆ ಯಾವ ಬಣ್ಣ ಸೃಷ್ಟಿಯಾಗುತ್ತದೆ ಎನ್ನುವುದನ್ನು ಮಕ್ಕಳು ಶಾಲೆಯ ದಿನಗಳಲ್ಲೇ ಆಸಕ್ತಿಯಿಂದ ಕಲಿಯುತ್ತಾರೆ. ಉದಾ: ಹಳದಿ ಮತ್ತು ನೀಲಿ ಸೇರಿಸಿದರೆ ಹಸಿರು ಬಣ್ಣ ಬರುತ್ತದೆ.
ಭೌತಿಕ ಜಗತ್ತಿನಲ್ಲಿರುವಂತೆ ಡಿಜಿಟಲ್ ಜಗತ್ತಿನಲ್ಲೂ ಅಸಂಖ್ಯ ಬಣ್ಣಗಳು ನಮ್ಮ ಮುಂದೆ ಕಾಣಸಿಗುತ್ತವಲ್ಲ, ಅಲ್ಲಿಯೂ ಇಂತಹುದೇ ತಂತ್ರ ಬಳಕೆಯಾಗುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಇತ್ಯಾದಿಗಳಲ್ಲಿ ನಮಗೆ ಕಾಣಿಸುವ ಎಲ್ಲ ಬಣ್ಣಗಳೂ ಕೆಂಪು, ಹಸಿರು ಹಾಗೂ ನೀಲಿ ಬಣ್ಣದ ಬೆಳಕಿನ ಸಂಯೋಜನೆಯಿಂದ ರೂಪುಗೊಂಡಿರುತ್ತವೆ.
ಮೂರೂ ಬಣ್ಣಗಳ ಇಂಗ್ಲಿಷ್ ಹೆಸರಿನ (ರೆಡ್-ಗ್ರೀನ್-ಬ್ಲೂ) ಮೊದಲ ಅಕ್ಷರಗಳನ್ನು ಸೇರಿಸಿ ಈ ವ್ಯವಸ್ಥೆಯನ್ನು ಆರ್‌ಜಿಬಿ ಎಂದು ಕರೆಯಲಾಗುತ್ತದೆ. ನಮ್ಮ ಆಯ್ಕೆಯ ಬಣ್ಣ ಕಾಣಬೇಕಾದರೆ ಈ ಮೂರು ಬಣ್ಣಗಳು ಯಾವ ಪ್ರಮಾಣದಲ್ಲಿ ಬೆರೆಯಬೇಕು ಎನ್ನುವುದನ್ನು ಪ್ರತ್ಯೇಕ ಸಂಖ್ಯೆಗಳು ಸೂಚಿಸುತ್ತವೆ. ಮೂರೂ ಬಣ್ಣಗಳನ್ನು ಸೊನ್ನೆಯ ಮಟ್ಟದಲ್ಲಿಟ್ಟರೆ ಕಪ್ಪು, ಗರಿಷ್ಠ ಮಟ್ಟಕ್ಕೆ ಕೊಂಡೊಯ್ದರೆ ಬಿಳಿ, ಕೆಂಪು-ಹಸಿರು ಮಾತ್ರವೇ ಬಳಕೆಯಾದರೆ ಕಂದುಬಣ್ಣ – ಹೀಗೆ ಮೂರು ಬಣ್ಣಗಳ ಪ್ರಮಾಣವನ್ನು ಬದಲಿಸುತ್ತ ಹೋದಂತೆ ಹೊಸ ಬಣ್ಣಗಳು ಸೃಷ್ಟಿಯಾಗುತ್ತವೆ.
ಅಂದಹಾಗೆ ಆರ್‌ಜಿಬಿ ಸಂಯೋಜನೆಯಲ್ಲಿ ರೂಪುಗೊಂಡ ಬಣ್ಣಗಳು ಪರದೆಯ ಮೇಲೆ ಪ್ರದರ್ಶನಕ್ಕೆ ಹೊಂದುವಷ್ಟು ಚೆನ್ನಾಗಿ ಮುದ್ರಣಕ್ಕೆ ಹೊಂದಿಕೊಳ್ಳುವುದಿಲ್ಲ. ಏಕೆಂದರೆ ಮುದ್ರಣದಲ್ಲಿ ಕೈಗೆ ಮೆತ್ತುವ ಉತ್ಪಾದಿತ ಬಣ್ಣಗಳು ಬಳಕೆಯಾಗುತ್ತವೆ. ಹಾಗಾಗಿ ಮುದ್ರಣವನ್ನೇ ಉದ್ದೇಶವಾಗಿಟ್ಟುಕೊಂಡು ಕಂಪ್ಯೂಟರ್ ಚಿತ್ರಗಳನ್ನು ರೂಪಿಸುವಾಗ ಆರ್‌ಜಿಬಿ ಬದಲಿಗೆ ‘ಸಿಎಂವೈಕೆ’ಯನ್ನೂ ಬಳಸಲಾಗುತ್ತದೆ. ಆರ್‌ಜಿಬಿಯಲ್ಲಿ ಕೆಂಪು, ಹಸಿರು, ನೀಲಿ ಇದ್ದಂತೆ ಸಿಎಂವೈಕೆಯಲ್ಲಿ ಸಿಯಾನ್ (ಹಸಿರು ಛಾಯೆಯ ನೀಲಿ), ಮಜೆಂಟಾ (ಕಡುಗೆಂಪು), ಹಳದಿ ಹಾಗೂ ಕಪ್ಪು ಬಣ್ಣಗಳನ್ನು ಬಳಸಲಾಗುತ್ತದೆ.

ROM

ರಾಮ್
Kannada Equivalent: (ರೂಪಿಸಬೇಕಿದೆ)
Short Description : ರೀಡ್ ಓನ್ಲಿ ಮೆಮೊರಿ; ಇಲ್ಲಿ ಶೇಖರವಾಗಿರುವ ಮಾಹಿತಿಯನ್ನು ಓದಬಹುದೇ ವಿನಾ ಬದಲಾಯಿಸಲು ಸಾಧ್ಯವಿಲ್ಲ. ಕಂಪ್ಯೂಟರಿನ – ಸ್ಮಾರ್ಟ್‌ಫೋನಿನ ಕೆಲಸ ಪ್ರಾರಂಭವಾಗಲು ಬೇಕಾದ ಕೆಲ ತಂತ್ರಾಂಶಗಳನ್ನು ಇದರಲ್ಲಿ ಉಳಿಸಿಟ್ಟಿರುತ್ತಾರೆ.
Long Description: ಕಂಪ್ಯೂಟರಿನ ಮೆಮೊರಿ ಬಗ್ಗೆ ಮಾತನಾಡುವಾಗಲೆಲ್ಲ ರ್‍ಯಾಮ್ ಮತ್ತು ರಾಮ್ ಎಂಬ ಎರಡು ಹೆಸರುಗಳು ನಮ್ಮ ಮನಸ್ಸಿಗೆ ಬರುತ್ತವೆ. ಈ ಪೈಕಿ ರಾಮ್ ಎನ್ನುವುದು ರೀಡ್ ಓನ್ಲಿ ಮೆಮೊರಿ ಎಂಬ ಹೆಸರಿನ ಹ್ರಸ್ವರೂಪ. ಇಲ್ಲಿ ಶೇಖರವಾಗಿರುವ ಮಾಹಿತಿ ವಿದ್ಯುತ್ ಸಂಪರ್ಕವಿದ್ದರೂ ಇಲ್ಲದಿದ್ದರೂ ಹಾಗೆಯೇ ಉಳಿದಿರುತ್ತದೆ. ಹೆಸರೇ ಹೇಳುವಂತೆ ಇಲ್ಲಿರುವ ಮಾಹಿತಿಯನ್ನು ಓದುವುದು ಮಾತ್ರ ಸಾಧ್ಯ, ಬದಲಾಯಿಸುವುದು ಅಷ್ಟು ಸುಲಭವಲ್ಲ (ವಿಶೇಷ ಯಂತ್ರಾಂಶಗಳ ಸಹಾಯದಿಂದ ಅಳಿಸಿ ಮತ್ತೆ ಬರೆಯಬಹುದಾದ ರಾಮ್‌ಗಳೂ ಇವೆ). ಕಂಪ್ಯೂಟರಿನ ಉದಾಹರಣೆ ತೆಗೆದುಕೊಳ್ಳುವುದಾದರೆ ಅದರ ಕೆಲಸ ಪ್ರಾರಂಭವಾಗಲು ಬೇಕಾದ ನಿರ್ದೇಶನಗಳು ರಾಮ್‌ನಲ್ಲಿ ದಾಖಲಾಗಿರುತ್ತವೆ.
ಕಂಪ್ಯೂಟರಿನಂತೆ ಸ್ಮಾರ್ಟ್‌ಫೋನಿನಲ್ಲೂ ರಾಮ್ ಇರುತ್ತದೆ. ಮೊಬೈಲಿನ ಆಪರೇಟಿಂಗ್ ಸಿಸ್ಟಂ ಇತ್ಯಾದಿಗಳೆಲ್ಲ ಶೇಖರವಾಗುವುದು ಇಲ್ಲೇ. ಕಂಪ್ಯೂಟರಿನಲ್ಲಿರುವಂತೆ ಪ್ರತ್ಯೇಕವಾಗಿರುವ ಬದಲು ಮೊಬೈಲಿನ ಆಂತರಿಕ ಶೇಖರಣಾ ಸಾಮರ್ಥ್ಯದ (ಇಂಟರ್ನಲ್ ಮೆಮೊರಿ) ಒಂದು ಭಾಗವೇ ರಾಮ್‌ನಂತೆ ಬಳಕೆಯಾಗುತ್ತದೆ ಎನ್ನುವುದು ವ್ಯತ್ಯಾಸ. ಮೊಬೈಲಿನಲ್ಲಿ ೩೨ ಜಿಬಿ ಶೇಖರಣಾ ಸಾಮರ್ಥ್ಯವಿದೆ ಎಂದು ತಯಾರಕರು ಹೇಳಿಕೊಂಡರೂ ಅಷ್ಟು ಮೆಮೊರಿ ನಮ್ಮ ಬಳಕೆಗೆ ಸಿಗುವುದಿಲ್ಲವಲ್ಲ, ಅದಕ್ಕೆ ಇದೇ ಕಾರಣ.

Raspberry Pi

ರಾಸ್‍ಬೆರಿ ಪೈ
Kannada Equivalent: (ರೂಪಿಸಬೇಕಿದೆ)
Short Description : ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನವನ್ನು ಪರಿಚಯಿಸುವ ಉದ್ದೇಶದ, ಕಡಿಮೆ ಬೆಲೆಯ ಪುಟ್ಟ ಕಂಪ್ಯೂಟರ್. ಕೀಬೋರ್ಡ್, ಮಾನಿಟರ್‌ಗಳನ್ನೆಲ್ಲ ಸಂಪರ್ಕಿಸಿ ಇದನ್ನು ಕಂಪ್ಯೂಟರಿನಂತೆಯೇ ಬಳಸುವುದು, ಪ್ರೋಗ್ರಾಮುಗಳನ್ನು ಬರೆಯುವುದು, ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದೆಲ್ಲ ಸಾಧ್ಯ.
Long Description: ಕಂಪ್ಯೂಟರಿನಿಂದಾಗಿ ಓದಿನತ್ತ ವಿದ್ಯಾರ್ಥಿಗಳ ಗಮನ ಕಡಿಮೆಯಾಯಿತು ಎನ್ನುವವರು ಅನೇಕರಿದ್ದಾರೆ. ಕಂಪ್ಯೂಟರ್ ಮುಂದೆ ಕುಳಿತು ವೃಥಾ ಕಾಲಹರಣ ಮಾಡಿ ಈ ಆರೋಪವನ್ನು ಪುಷ್ಟೀಕರಿಸುವ ವಿದ್ಯಾರ್ಥಿಗಳೂ ಇದ್ದಾರೆ. ಇವರೆಲ್ಲರ ನಡುವೆ ಕಂಪ್ಯೂಟರನ್ನು ಶೈಕ್ಷಣಿಕ ಸಾಧನದಂತೆ ಬಳಸುವ ಹಲವು ಪ್ರಯತ್ನಗಳೂ ನಡೆದಿವೆ.
ಇಂತಹ ಪ್ರಯತ್ನಗಳಲ್ಲೊಂದು ರಾಸ್‌ಬೆರಿ ಪೈ. ಹಣ್ಣಿನಿಂದ ಮಾಡುವ ಸಿಹಿತಿಂಡಿಯಂತೆ ಕೇಳುವ ಈ ಹೆಸರು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನವನ್ನು ಪರಿಚಯಿಸುವ ಪುಟ್ಟದೊಂದು ಸಾಧನದ್ದು (ಅಂದಹಾಗೆ ಈ ಹೆಸರಿನಲ್ಲಿರುವ ‘ಪೈ’ ತಿಂಡಿಯ ಹೆಸರಾದ pie ಅಲ್ಲ, ಗ್ರೀಕ್ ವರ್ಣಮಾಲೆಯ ಅಕ್ಷರ pi). ಸರಳ ವಿನ್ಯಾಸದ ಈ ಸಾಧನವನ್ನು ರೂಪಿಸಿದ್ದು ಯುನೈಟೆಡ್ ಕಿಂಗ್‌ಡಂನ ರಾಸ್‌ಬೆರಿ ಪೈ ಫೌಂಡೇಶನ್ ಎಂಬ ಸಂಸ್ಥೆ.
ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳಿಗೆ ಬೇಕಾದ ಪ್ರಾಸೆಸರ್, ರ್‍ಯಾಮ್, ಯುಎಸ್‌ಬಿ ಪೋರ್ಟ್ ಮುಂತಾದ ಅನೇಕ ಸವಲತ್ತುಗಳು ಅಂಗೈಯಗಲದ ಈ ಪುಟ್ಟ ಸಾಧನದಲ್ಲಿರುತ್ತವೆ. ಕೀಬೋರ್ಡ್, ಮಾನಿಟರ್ ಇತ್ಯಾದಿಗಳನ್ನು ಸಂಪರ್ಕಿಸಿ ಇದನ್ನೊಂದು ಕಂಪ್ಯೂಟರಿನಂತೆಯೇ ಬಳಸುವುದು, ಅದಕ್ಕಾಗಿ ಪ್ರೋಗ್ರಾಮುಗಳನ್ನು ಬರೆಯುವುದು, ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದೆಲ್ಲ ಸಾಧ್ಯ. ಹೆಚ್ಚು ಸಂಕೀರ್ಣವಾದ ಪ್ರಯೋಗಗಳಿಗೆ ಈ ಸಾಧನವನ್ನು ಬಳಸಿಕೊಳ್ಳಬೇಕು ಎನ್ನುವವರು ಕ್ಯಾಮೆರಾ, ಕಾರ್ಡ್ ರೀಡರ್, ಟಚ್‌ಸ್ಕ್ರೀನ್ ಮುಂತಾದ ಹೆಚ್ಚುವರಿ ಯಂತ್ರಾಂಶ ಭಾಗಗಳನ್ನೂ ಕೊಂಡು ಬಳಸಬಹುದು.
ಇಷ್ಟೆಲ್ಲ ಸೌಲಭ್ಯಗಳನ್ನು ಪೂರ್ಣಪ್ರಮಾಣದ ಕಂಪ್ಯೂಟರುಗಳಿಗಿಂತ ಕಡಿಮೆ ಬೆಲೆಯಲ್ಲಿ ಒದಗಿಸುವುದು ಈ ಸಾಧನದ ಹೆಚ್ಚುಗಾರಿಕೆ. ಮೂಲತಃ ಶೈಕ್ಷಣಿಕ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಸೃಷ್ಟಿಯಾದ ಈ ಸಾಧನ ಇದೀಗ ವಿಶ್ವದೆಲ್ಲೆಡೆಯ ತಂತ್ರಜ್ಞಾನ ಆಸಕ್ತರನ್ನೂ ತನ್ನತ್ತ ಸೆಳೆದುಕೊಂಡಿರುವುದು ಇದೇ ಕಾರಣದಿಂದ.

Requirement

ರಿಕ್ವೈರ್‌ಮೆಂಟ್
Kannada Equivalent: (ರೂಪಿಸಬೇಕಿದೆ)
Short Description : ತಂತ್ರಾಂಶ ರಚನೆ ಅಥವಾ ಬದಲಾವಣೆಯ ಉದ್ದೇಶವನ್ನು ಕುರಿತ ವಿವರಗಳು
Long Description: ಹಲವು ಉದ್ದೇಶಗಳಿಗಾಗಿ ತಂತ್ರಾಂಶಗಳನ್ನು (ಸಾಫ್ಟ್‌ವೇರ್) ಸಿದ್ಧಪಡಿಸುವುದು, ಸಿದ್ಧ ತಂತ್ರಾಂಶದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುವುದು ತೀರಾ ಸಾಮಾನ್ಯ ಸಂಗತಿ.
ಹೀಗೆ ತಂತ್ರಾಂಶ ತಯಾರಿ ಅಥವಾ ಬದಲಾವಣೆಗೆ ಹೊರಡುವ ಮುನ್ನ ತಿಳಿದಿರಬೇಕಾದ ಮೊತ್ತಮೊದಲ ಸಂಗತಿ ಎಂದರೆ ಈ ಪ್ರಕ್ರಿಯೆಯಿಂದ ನಾವೇನು ನಿರೀಕ್ಷಿಸುತ್ತಿದ್ದೇವೆ ಎನ್ನುವುದರ ವಿವರ. ಸಾಫ್ಟ್‌ವೇರ್ ಕ್ಷೇತ್ರದ ಪರಿಭಾಷೆಯಲ್ಲಿ ಇದನ್ನು ರಿಕ್ವೈರ್‌ಮೆಂಟ್ ಎಂದು ಕರೆಯುತ್ತಾರೆ. ತಂತ್ರಾಂಶ ರಚನೆ ಅಥವಾ ಬದಲಾವಣೆಯಿಂದ ನಾವು ಏನನ್ನು ಸಾಧಿಸಲು ಹೊರಟಿದ್ದೇವೆ, ನಮ್ಮ ತಂತ್ರಾಂಶ ನಿರ್ದಿಷ್ಟವಾಗಿ ಪರಿಹರಿಸಬೇಕಾದ ಸಮಸ್ಯೆಗಳು ಯಾವುವು, ನಿರ್ದಿಷ್ಟ ಸನ್ನಿವೇಶಗಳಲ್ಲಿ ಅದರ ವರ್ತನೆ ಹೇಗಿರಬೇಕು ಎನ್ನುವುದನ್ನೆಲ್ಲ ಈ ಹಂತದಲ್ಲಿ ಗುರುತಿಸಿ ದಾಖಲಿಸಿಕೊಳ್ಳಲಾಗುತ್ತದೆ.
ತಂತ್ರಾಂಶ ಬೇಕಿರುವುದು ಬಳಕೆದಾರರಿಗೇ ಆದರೂ ಆ ತಂತ್ರಾಂಶದ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆಯಿರುವುದು, ಅದನ್ನೆಲ್ಲ ತಂತ್ರಜ್ಞಾನದ ಭಾಷೆಯಲ್ಲಿ ಹೇಳಲು ಸಾಧ್ಯವಾಗುವುದು ಅಪರೂಪ. ಅಲ್ಲದೆ ತಂತ್ರಾಂಶ ರಚನೆಯ ಕೆಲಸ ಶುರುವಾದ ಮೇಲೆ ಅದು ಮುಗಿಯುವಷ್ಟರಲ್ಲಿ ಬಳಕೆದಾರರ ಅಗತ್ಯಗಳು ಬದಲಾಗುವುದೂ ಉಂಟು. ಇಂತಹ ಸನ್ನಿವೇಶಗಳನ್ನು ತಪ್ಪಿಸಲು ಈ ಹಂತದಲ್ಲಿ ದಾಖಲಿಸಿಕೊಂಡ ಅಷ್ಟೂ ವಿಷಯಗಳನ್ನು ಒಂದು ಕಡತದಲ್ಲಿ ಅಡಕಗೊಳಿಸಿ ಬಳಕೆದಾರರೊಡನೆ ಹಂಚಿಕೊಳ್ಳಲಾಗುತ್ತದೆ ಮತ್ತು ಅದರಲ್ಲಿರುವ ಅಂಶಗಳಿಗೆ ಅವರ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ತಂತ್ರಾಂಶ ರಚನೆ ಪ್ರಕ್ರಿಯೆ ನಡೆಯುತ್ತಿದ್ದಾಗ ಅದರ ಸ್ವರೂಪ ಬದಲಿಸಬೇಕಾದರೆ ಪಾಲಿಸಬೇಕಾದ ನಿಯಮಗಳನ್ನೂ (ಉದಾ: ಯಾವ ರೀತಿಯ ಬದಲಾವಣೆಗಳನ್ನು ಕೇಳುವಂತಿಲ್ಲ, ಯಾವ ಬದಲಾವಣೆಗಳನ್ನು ಹೆಚ್ಚಿನ ಸಮಸ್ಯೆಯಿಲ್ಲದೆ ಮಾಡಬಹುದು ಇತ್ಯಾದಿ) ಬಹಳಷ್ಟು ಬಾರಿ ಈ ಹಂತದಲ್ಲೇ ರೂಪಿಸಿಕೊಳ್ಳಲಾಗುತ್ತದೆ.

Refresh

ರಿಫ್ರೆಶ್
Kannada Equivalent: (ರೂಪಿಸಬೇಕಿದೆ)
Short Description : ನಾವು ವೀಕ್ಷಿಸುತ್ತಿರುವ ಪುಟದ ಮಾಹಿತಿಯನ್ನು ಮತ್ತೊಮ್ಮೆ ಪಡೆದುಕೊಳ್ಳುವ ಪ್ರಕ್ರಿಯೆ
Long Description: ಬಹಳಷ್ಟು ಜಾಲತಾಣಗಳಲ್ಲಿರುವ ಮಾಹಿತಿ ಆಗಿಂದಾಗ್ಗೆ ಬದಲಾಗುತ್ತಿರುವುದು ಸಾಮಾನ್ಯ ಸಂಗತಿ. ಇತ್ತೀಚಿನ ಸುದ್ದಿ, ಶೇರು ಬೆಲೆ, ಕ್ರಿಕೆಟ್ ಸ್ಕೋರುಗಳನ್ನೆಲ್ಲ ತೋರಿಸುವ ತಾಣಗಳಲ್ಲಿ ಇಂತಹ ಬದಲಾವಣೆಗಳು ಬಹಳ ಕ್ಷಿಪ್ರವಾಗಿರುತ್ತವೆ. ನಾವು ಈಗಾಗಲೇ ತೆರೆದಿರುವ ಪುಟದಲ್ಲಿ ಈ ಹೊಸ ಮಾಹಿತಿಯೂ ಕಾಣಿಸಿಕೊಳ್ಳುವಂತೆ ಮಾಡುವ ಪ್ರಕ್ರಿಯೆಯೇ ‘ರಿಫ್ರೆಶ್’.
ಯಾವುದೇ ಪುಟವನ್ನು ರಿಫ್ರೆಶ್ ಮಾಡುವುದು ಎಂದರೆ ಆ ಪುಟದ ಮಾಹಿತಿಯನ್ನು ಮತ್ತೊಮ್ಮೆ ಪಡೆಯುವುದು ಎಂದರ್ಥ. ಹೀಗೆ ಮಾಡಿದಾಗ ಅಲ್ಲಿರುವ ಹೊಸ ಮಾಹಿತಿ ನಮ್ಮ ಪರದೆಯಲ್ಲೂ ಕಾಣಿಸಿಕೊಳ್ಳುತ್ತದೆ.
ಬಹುತೇಕ ಬ್ರೌಸರ್ ತಂತ್ರಾಂಶಗಳಲ್ಲಿ F5 ಕೀಲಿಯನ್ನು ಒತ್ತುವ ಮೂಲಕ ಪುಟವನ್ನು ರಿಫ್ರೆಶ್ ಮಾಡಬಹುದು. ಹೀಗೆ ಮಾಡಿದಾಗ ಕೆಲವೊಮ್ಮೆ ಸ್ಥಳೀಯವಾಗಿ ಉಳಿಸಿಡಲಾಗಿರುವ (ಕ್ಯಾಶ್) ಮಾಹಿತಿಯನ್ನೇ ಮತ್ತೆ ತೋರಿಸುವ ಸಾಧ್ಯತೆಯಿರುತ್ತದೆ; ಇದರ ಬದಲಿಗೆ ಮಾಹಿತಿಯನ್ನು ಸರ್ವರ್‌ನಿಂದಲೇ ಹೊಸದಾಗಿ ಪಡೆಯುವಂತೆ ಮಾಡಲು Ctrl+F5 ಬಳಸಬಹುದು. ನಿರ್ದಿಷ್ಟ ಅವಧಿಗೊಮ್ಮೆ ಹೊಸ ಮಾಹಿತಿಯನ್ನು ತೋರಿಸುವ ಸ್ವಯಂಚಾಲಿತ ರಿಫ್ರೆಶ್ ವ್ಯವಸ್ಥೆಯೂ ಕೆಲವು ಜಾಲತಾಣಗಳಲ್ಲಿರುತ್ತದೆ.
ಮೊಬೈಲಿನಲ್ಲಿ ಫಂಕ್ಷನ್ ಕೀಲಿಗಳಿರುವುದಿಲ್ಲವಲ್ಲ, ಅಲ್ಲಿ ಬ್ರೌಸರಿನ ಸೆಟಿಂಗ್ಸ್‌ಗೆ ಹೋಗಿ ಪುಟವನ್ನು ರಿಫ್ರೆಶ್ ಮಾಡುವುದು ಸಾಧ್ಯ. ಪುಟದ ಮೇಲ್ತುದಿಯಿಂದ ಕೆಳಮುಖವಾಗಿ ಸ್ವೈಪ್ ಮಾಡುವುದು (ಪುಲ್‌ಡೌನ್) ಈ ಕೆಲಸ ಸಾಧಿಸಿಕೊಳ್ಳಲು ಇರುವ ಇನ್ನೊಂದು ಆಯ್ಕೆ.
ಅಂದಹಾಗೆ ರಿಫ್ರೆಶ್ ಬರಿಯ ಜಾಲತಾಣಗಳಿಗೆ – ಬ್ರೌಸರ್‌ಗಳಿಗೆ ಸೀಮಿತವಾದ ಸಂಗತಿಯೇನಲ್ಲ, ಕಂಪ್ಯೂಟರಿನ ಫೋಲ್ಡರುಗಳಲ್ಲೂ (ಹೊಸದಾಗಿ ಸೇರಿಸಿದ ಕಡತಗಳನ್ನು ನೋಡಲು) ರಿಫ್ರೆಶ್ ಮಾಡುವುದು ಸಾಧ್ಯ. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಈ ಉದ್ದೇಶಕ್ಕಾಗಿ F5 ಕೀಲಿಯೇ ಬಳಕೆಯಾಗುತ್ತದೆ.

Refurbished

ರೀಫರ್ಬಿಶ್‌ಡ್
Kannada Equivalent: (ರೂಪಿಸಬೇಕಿದೆ)
Short Description : ತಯಾರಕರೇ ಸರಿಪಡಿಸಿ ಮತ್ತೆ ಹೊಸದಾಗಿಸಿದ ಸಾಧನ
Long Description: ರೀಫರ್ಬಿಶ್ಡ್ ಎನ್ನುವ ಪದವನ್ನು ‘ಮತ್ತೆ ಹೊಸದಾಗಿಸಿದ’ ಎಂದು ಅರ್ಥೈಸಬಹುದು. ವಾರಂಟಿ ಅವಧಿಯಲ್ಲಿ ಕೆಟ್ಟುಹೋದ ಸಾಧನಗಳನ್ನು ಗ್ರಾಹಕರು ಸೇವಾಕೇಂದ್ರಕ್ಕೆ ಮರಳಿಸುತ್ತಾರಲ್ಲ, ಅವುಗಳನ್ನು ತಯಾರಕರೇ ಸರಿಪಡಿಸಿ ಈ ಹೆಸರಿನಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡುತ್ತಾರೆ. ಅಂಗಡಿಗಳಲ್ಲಿ ಪ್ರದರ್ಶನಕ್ಕಿಟ್ಟ ಸಾಧನಗಳು, ಪರೀಕ್ಷೆ – ವಿಮರ್ಶೆಗೆ ಬಳಕೆಯಾಗುವ ಸಾಧನಗಳೂ ಇದೇ ಹಾದಿಯತ್ತ ಹೊರಳುವುದು ಸಾಧ್ಯ.
ರೀಫರ್ಬಿಶ್ಡ್ ಸಾಧನಗಳಿಗೆ ಒಂದಷ್ಟು ಅವಧಿಯ ವಾರಂಟಿಯನ್ನೂ ಕೊಡುವ ಅಭ್ಯಾಸವಿದೆ. ಇವುಗಳ ಬೆಲೆ, ಹೊಸ ಸಾಧನಗಳ ಹೋಲಿಕೆಯಲ್ಲಿ, ಸಹಜವಾಗಿಯೇ ಕಡಿಮೆಯಿರುತ್ತದೆ.
ಇಂತಹ ಸಾಧನಗಳು ಸೇವಾಕೇಂದ್ರಕ್ಕೆ ಹೋಗುವ ಮುನ್ನ ಒಂದಷ್ಟು ದಿನ ಬಳಕೆಯಾಗಿರುತ್ತವಲ್ಲ, ಹಾಗಾಗಿ ನಾವು ಕೊಳ್ಳುವ ರೀಫರ್ಬಿಶ್ಡ್ ಸಾಧನಗಳಲ್ಲಿ ಸಣ್ಣಪುಟ್ಟ ಗೀಚುಗಳು ಇರುವುದು ಸಾಧ್ಯ. ಆದರೆ ತಯಾರಕರೇ ಸಂಪೂರ್ಣವಾಗಿ ಪರೀಕ್ಷಿಸಿ ಅಗತ್ಯಬಿದ್ದಲ್ಲಿ ಹೊಸ ಭಾಗಗಳನ್ನೂ ಅಳವಡಿಸಿರುವುದರಿಂದ ಇವು ಸೆಕೆಂಡ್ ಹ್ಯಾಂಡ್ ಸಾಧನಗಳಿಗಿಂತ ಕೊಂಚ ಭಿನ್ನ ಎನ್ನಬಹುದು.

Reuse

ರೀಯೂಸ್
Kannada Equivalent: ಮರುಬಳಕೆ
Short Description : ಒಂದು ಅಗತ್ಯಕ್ಕೆ ಪ್ರತಿಯಾಗಿ ರೂಪಿಸಿದ ತಂತ್ರಾಂಶದ ಭಾಗಗಳನ್ನು ಇತರ ಸನ್ನಿವೇಶಗಳಲ್ಲೂ ಬಳಸಿಕೊಳ್ಳುವ ಪರಿಕಲ್ಪನೆ
Long Description: ರೀಯೂಸ್, ಅಂದರೆ ಮರುಬಳಕೆಯ ಪರಿಕಲ್ಪನೆ ನಮ್ಮೆಲ್ಲರಿಗೂ ಪರಿಚಿತ. ವಸ್ತುಗಳನ್ನು ಒಂದೇ ಬಾರಿ ಬಳಸಿ ಎಸೆಯದೆ ಸಾಧ್ಯವಾದಷ್ಟು ಸಾರಿ ಮತ್ತೆ ಬಳಸುವುದು ಪರಿಸರ ಸಂರಕ್ಷಣೆಗೆ ಪೂರಕ ಎನ್ನುವುದು ಈ ಪರಿಕಲ್ಪನೆಯ ಆಶಯ.
ಈ ಪರಿಕಲ್ಪನೆ ಕಂಪ್ಯೂಟರ್ ಪ್ರಪಂಚದಲ್ಲೂ ಇದೆ. ಒಂದು ಅಗತ್ಯಕ್ಕೆ ಪ್ರತಿಯಾಗಿ ರೂಪಿಸಿದ ತಂತ್ರಾಂಶದ ಭಾಗಗಳನ್ನು ಇತರ ಸನ್ನಿವೇಶಗಳಲ್ಲೂ ಬಳಸಿಕೊಳ್ಳುವುದು ಸಾಧ್ಯವಾದರೆ ಆ ಮೂಲಕ ಸಾಕಷ್ಟು ಶ್ರಮ, ಸಮಯ ಹಾಗೂ ಹಣವನ್ನು ಉಳಿಸಬಹುದು ಎನ್ನುವುದು ಇದರ ಹಿಂದಿರುವ ಉದ್ದೇಶ. ಇಂತಹ ಭಾಗಗಳನ್ನು ಮೊದಲಬಾರಿ ವಿನ್ಯಾಸಗೊಳಿಸುವುದು ಕೊಂಚ ಹೆಚ್ಚಿನ ಕೆಲಸ ಎನ್ನಿಸಬಹುದಾದರೂ ಮುಂದೆ ಅದರ ಮರುಬಳಕೆಯಿಂದ ಲಾಭವೇ ಹೆಚ್ಚು.
ಹೀಗೆ ಮತ್ತೆ ಬಳಸಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದಲೇ ತಂತ್ರಾಂಶಗಳನ್ನು ಘಟಕಗಳಾಗಿ ರೂಪಿಸಲಾಗಿರುವುದುಂಟು. ನಿರ್ದಿಷ್ಟ ದತ್ತಾಂಶಗಳನ್ನು (ಇನ್‌ಪುಟ್) ಸ್ವೀಕರಿಸಿ ನಿರ್ದಿಷ್ಟ ಫಲಿತಾಂಶ (ಔಟ್‌ಪುಟ್) ನೀಡುವಂತೆ ಈ ಘಟಕಗಳನ್ನು ವಿನ್ಯಾಸಗೊಳಿಸಿರುವುದರಿಂದ ಅವನ್ನು ಬೇರೆಬೇರೆ ಕಡೆಗಳಲ್ಲೂ ಬಳಸುವುದು ಸಾಧ್ಯವಾಗುತ್ತದೆ.
ತಂತ್ರಾಂಶದ ಭಾಗಗಳಷ್ಟೇ ಅಲ್ಲದೆ ಅದರ ವಿನ್ಯಾಸ (ಡಿಸೈನ್) ಹಾಗೂ ಅಭಿವೃದ್ಧಿಗೆ (ಡೆವೆಲಪ್‌ಮೆಂಟ್) ಸಂಬಂಧಪಟ್ಟ ಕಡತಗಳು, ಪರೀಕ್ಷೆಯ (ಟೆಸ್ಟಿಂಗ್) ಯೋಜನೆ ಮುಂತಾದ ಅನೇಕ ಅಂಶಗಳೂ ಮರುಬಳಕೆಯ ಪರಿಧಿಯೊಳಗೆ ಬರುತ್ತವೆ. ಎಕ್ಸೆಲ್‌ನಂತಹ ತಂತ್ರಾಂಶಗಳಲ್ಲಿ ಬಳಸಲು ಫಾರ್ಮುಲಾ ಇತ್ಯಾದಿಗಳನ್ನು ಗೂಗಲ್‌ನಲ್ಲಿ ಹುಡುಕಿಕೊಳ್ಳುತ್ತೇವಲ್ಲ, ಅದು ಕೂಡ ಒಂದು ರೀತಿಯ ಮರುಬಳಕೆಯೇ!

Recycle Bin

ರೀಸೈಕಲ್ ಬಿನ್
Kannada Equivalent: (ರೂಪಿಸಬೇಕಿದೆ)
Short Description : ಬಳಕೆದಾರರು ಅಳಿಸಿದ ಕಡತಗಳನ್ನು ತಾತ್ಕಾಲಿಕವಾಗಿ ಉಳಿಸಿಟ್ಟುಕೊಳ್ಳುವ ಸ್ಥಳ
Long Description: ಕಂಪ್ಯೂಟರಿನಲ್ಲಾಗಲಿ ಸ್ಮಾರ್ಟ್‌ಫೋನಿನಲ್ಲೇ ಆಗಲಿ ಸಂಗ್ರಹವಾಗುವ ಮಾಹಿತಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಇಷ್ಟೆಲ್ಲ ಮಾಹಿತಿಯನ್ನು ತುಂಬಿಟ್ಟುಕೊಳ್ಳಲು ಮೆಮೊರಿ ಸಾಲದೆ ಹೋದಾಗ ಅಥವಾ ಈ ರಾಶಿಯಲ್ಲಿ ಬೇಕಾದುದನ್ನು ಹುಡುಕಿಕೊಳ್ಳಲು ಕಷ್ಟ ಎನಿಸಿದಾಗ ನಾವು ಅನಗತ್ಯ ಕಡತಗಳನ್ನು ಅಳಿಸಿಹಾಕಲು ಪ್ರಯತ್ನಿಸುತ್ತೇವೆ.
ಅನಗತ್ಯ ಕಡತಗಳನ್ನು ಅಳಿಸುವುದು (ಡಿಲೀಟ್) ಒಳ್ಳೆಯ ಕ್ರಮವೇ. ಆದರೆ ಕೆಲ ಸಂದರ್ಭಗಳಲ್ಲಿ ನಮ್ಮ ಆತುರದಿಂದಲೋ ಕಣ್ತಪ್ಪಿನಿಂದಲೋ ಅನಗತ್ಯ ಕಡತಗಳ ಜೊತೆಗೆ ಬೇಕಾದ ಕಡತಗಳೂ ಡಿಲೀಟ್ ಆಗಿಬಿಡುತ್ತವೆ. ತಕ್ಷಣದಲ್ಲೇ ಆಗಲಿ ಕೆಲ ದಿನಗಳ ನಂತರವೇ ಆಗಲಿ, ಆ ಕಡತ ಮತ್ತೆ ಬೇಕು ಎನ್ನುವುದು ಅರಿವಾದಾಗ ಪರದಾಟ ತಪ್ಪಿದ್ದಲ್ಲ!
ಈ ಪರದಾಟವನ್ನು ತಪ್ಪಿಸಲು ನಮ್ಮ ಸಹಾಯಕ್ಕೆ ಬರುವ ಉಪಾಯವೇ ‘ರೀಸೈಕಲ್ ಬಿನ್’. ಕಂಪ್ಯೂಟರಿನಲ್ಲಿ ಯಾವುದೋ ಕಡತವನ್ನು ಆಯ್ದು ಡಿಲೀಟ್ ಗುಂಡಿ ಒತ್ತಿದ ತಕ್ಷಣ ಆ ಕಡತವನ್ನು ಅಳಿಸಿಹಾಕುವ ಬದಲು ತಾತ್ಕಾಲಿಕವಾಗಿ ಇಲ್ಲಿಗೆ ವರ್ಗಾಯಿಸಲಾಗುತ್ತದೆ. ಈ ಕಡತ ನಿಜಕ್ಕೂ ಬೇಡವೆಂದು ತೀರ್ಮಾನಿಸಿ ಪೂರ್ಣವಾಗಿ ಅಳಿಸಿಹಾಕುವವರೆಗೂ ಅದು ರೀಸೈಕಲ್ ಬಿನ್‌ನಲ್ಲಿಯೇ ಇರುತ್ತದೆ, ಮತ್ತು ತಪ್ಪಾಗಿ ಅಳಿಸಿದ ಕಡತವಾಗಿದ್ದರೆ ಅದನ್ನು ವಾಪಸ್ ಪಡೆಯುವುದು ಸುಲಭವಾಗುತ್ತದೆ.
ರೀಸೈಕಲ್ ಬಿನ್ ಆಯ್ಕೆ ಹಲವು ಸ್ಮಾರ್ಟ್‌ಫೋನುಗಳಲ್ಲೂ ಲಭ್ಯವಿದೆ. ಡಿಲೀಟ್ ಮಾಡಿದ ಕಡತ ರೀಸೈಕಲ್ ಬಿನ್‌ಗೆ ಹೋಗಬೇಕೋ ಅಥವಾ ನೇರವಾಗಿ ಅಳಿಸಿಹೋಗಬೇಕೋ ಎನ್ನುವುದನ್ನೂ ಕೆಲ ಫೋನುಗಳಲ್ಲಿ ನಾವೇ ಸೂಚಿಸಬಹುದು. ಇದು ಕಂಪ್ಯೂಟರಿಗೂ ಅನ್ವಯಿಸುತ್ತದೆ – ವಿಂಡೋಸ್ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಡಿಲೀಟ್ ಕೀಲಿ ಒತ್ತುವ ಬದಲು ಶಿಫ್ಟ್-ಡಿಲೀಟ್ ಒತ್ತುವ ಮೂಲಕ ಬೇಡದ ಕಡತಗಳು ರೀಸೈಕಲ್ ಬಿನ್‌ನಲ್ಲೂ ಉಳಿಯದಂತೆ ಅಳಿಸಿಹಾಕಬಹುದು.

RuPay

ರುಪೇ
Kannada Equivalent: (ರೂಪಿಸಬೇಕಿದೆ)
Short Description : ಕ್ರೆಡಿಟ್ ಕಾರ್ಡ್ – ಡೆಬಿಟ್ ಕಾರ್ಡ್ ಪಾವತಿಗಳನ್ನು ನಿರ್ವಹಿಸುವ ಭಾರತೀಯ ವ್ಯವಸ್ಥೆ
Long Description: ಪ್ರಪಂಚದಲ್ಲಿ ಕ್ರೆಡಿಟ್ ಕಾರ್ಡ್ – ಡೆಬಿಟ್ ಕಾರ್ಡ್ ನೀಡುವ ಸಾವಿರಾರು ಬ್ಯಾಂಕುಗಳಿವೆ, ಲಕ್ಷಗಟ್ಟಲೆ ವ್ಯಾಪಾರಸ್ಥರಿದ್ದಾರೆ, ಕೋಟ್ಯಂತರ ಸಂಖ್ಯೆಯ ಗ್ರಾಹಕರಿದ್ದಾರೆ. ಕಾರ್ಡ್ ನೀಡುವ ಪ್ರತಿ ಬ್ಯಾಂಕಿನ ಸಂಪರ್ಕ ಪ್ರತಿಯೊಬ್ಬ ವ್ಯಾಪಾರಸ್ಥನಿಗೂ ಇರಬೇಕು ಎಂದರೆ ಅದು ಅಸಾಧ್ಯವೇ ಸರಿ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕ, ವ್ಯಾಪಾರಸ್ಥ ಹಾಗೂ ಬ್ಯಾಂಕುಗಳ ನಡುವಿನ ಸಂಪರ್ಕ ಸೇತುವಿನಂತೆ ವೀಸಾ ಹಾಗೂ ಮಾಸ್ಟರ್‌ಕಾರ್ಡ್‌ನಂತಹ ಸಂಸ್ಥೆಗಳು ಕೆಲಸಮಾಡುತ್ತವೆ.
ಯಾವುದೇ ವ್ಯಾಪಾರಸ್ಥನೊಡನೆ ವ್ಯವಹರಿಸುವಾಗ ಗ್ರಾಹಕ ತನ್ನ ಕಾರ್ಡ್ ಬಳಸುತ್ತಾನೆ ಎಂದುಕೊಳ್ಳೋಣ. ಆತನ ಬ್ಯಾಂಕ್ ಖಾತೆ ಪರಿಶೀಲಿಸಿ ಅದರಲ್ಲಿ ಸಾಕಷ್ಟು ಹಣವಿದ್ದರೆ ಅದನ್ನು ಆತನ ಬ್ಯಾಂಕಿನಿಂದ ವ್ಯಾಪಾರಸ್ಥನ ಬ್ಯಾಂಕಿಗೆ-ಖಾತೆಗೆ ವರ್ಗಾಯಿಸಲು ನೆರವಾಗುವುದು ಈ ಸಂಸ್ಥೆಗಳ ಕೆಲಸ. ಇದಕ್ಕಾಗಿ ಅವು ಬ್ಯಾಂಕುಗಳಿಂದ ಶುಲ್ಕ ವಸೂಲಿ ಮಾಡುತ್ತವೆ.
ಈ ಕೆಲಸಕ್ಕಾಗಿ ವಿದೇಶಿ ಸಂಸ್ಥೆಗಳನ್ನೇ ಅವಲಂಬಿಸುವುದು ಅನಿವಾರ್ಯವೇನಲ್ಲ. ಇಂತಹುದೇ ಕೆಲಸಮಾಡುವ ‘ರುಪೇ’ ಎಂಬ ಭಾರತೀಯ ವ್ಯವಸ್ಥೆಯೂ ಇದೆ. ಭಾರತ ಸರಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಎಂಬ ಸಂಸ್ಥೆ ನಿರ್ವಹಿಸುತ್ತಿರುವ ವ್ಯವಸ್ಥೆ ಇದು. ವೀಸಾ – ಮಾಸ್ಟರ್‌ಕಾರ್ಡ್ ಮೊದಲಾದ ಸಂಸ್ಥೆಗಳು ಮಾಡುವಂತಹುದೇ ಕೆಲಸವನ್ನು ಅವಕ್ಕಿಂತ ಬಹಳ ಕಡಿಮೆ ಶುಲ್ಕದಲ್ಲಿ ಮಾಡುವುದು ‘ರುಪೇ’ಯ ಹೆಚ್ಚುಗಾರಿಕೆ.

Responsive Web Design

ರೆಸ್ಪಾನ್ಸಿವ್ ವೆಬ್ ಡಿಸೈನ್
Kannada Equivalent: (ರೂಪಿಸಬೇಕಿದೆ)
Short Description : ನಿರ್ದಿಷ್ಟ ಜಾಲತಾಣವನ್ನು ನಾವು ಯಾವ ಸಾಧನದಲ್ಲಿ ವೀಕ್ಷಿಸುತ್ತಿದ್ದೇವೋ ಅದರ ಪರದೆಯ ಗಾತ್ರಕ್ಕೆ ತಕ್ಕಂತೆ ಪುಟದ ವಿನ್ಯಾಸ ಬದಲಾಗುವಂತೆ ಮಾಡುವ ತಂತ್ರ
Long Description: ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ಪರಿಚಯವಾದ ಸಂದರ್ಭದಲ್ಲಿ ಜಾಲತಾಣಗಳನ್ನು ನೋಡಲು ಕಂಪ್ಯೂಟರುಗಳು ಮಾತ್ರವೇ ಬಳಕೆಯಾಗುತ್ತಿದ್ದವು. ಅವುಗಳಲ್ಲಿ ಬಳಕೆಯಾಗುತ್ತಿದ್ದ ಯಂತ್ರಾಂಶ-ತಂತ್ರಾಂಶಗಳ ರೂಪುರೇಖೆಯಲ್ಲೂ ಹೆಚ್ಚಿನ ವ್ಯತ್ಯಾಸಗಳಿರುತ್ತಿರಲಿಲ್ಲ.
ಆದರೆ ಈಗ ಹಾಗಲ್ಲ. ನಾಲ್ಕಿಂಚು ಪರದೆಯ ಸ್ಮಾರ್ಟ್‌ಫೋನಿನಿಂದ ಹಿಡಿದು ನಲವತ್ತು ಇಂಚಿನ ಸ್ಮಾರ್ಟ್ ಟಿವಿಯವರೆಗೆ ವಿವಿಧ ಸಾಧನಗಳಲ್ಲಿ ನಾವು ಜಾಲತಾಣಗಳನ್ನು ವೀಕ್ಷಿಸುತ್ತೇವೆ. ಬೇರೆಬೇರೆ ಸಾಧನಗಳಲ್ಲಿ ಬೇರೆಬೇರೆ ಕಾರ್ಯಾಚರಣ ವ್ಯವಸ್ಥೆಗಳನ್ನು – ಬ್ರೌಸರ್ ತಂತ್ರಾಂಶಗಳನ್ನೂ ಬಳಸುತ್ತೇವೆ.
ಹೀಗಾಗಿ ಇಂದಿನ ಜಾಲತಾಣಗಳು ಎಲ್ಲಬಗೆಯ ಸಾಧನ ಹಾಗೂ ತಂತ್ರಾಂಶಗಳಲ್ಲೂ ಸರಿಯಾಗಿ ಕಾಣಿಸುವಂತಿರಬೇಕಾದ್ದು ಅನಿವಾರ್ಯ. ದೊಡ್ಡ ಪರದೆಗಳಿಗೆ ಮಾತ್ರವೇ ಹೊಂದುವಂತೆ ಪುಟಗಳ ವಿನ್ಯಾಸ ಮಾಡಿಟ್ಟರೆ ಅದನ್ನು ಮೊಬೈಲಿನಲ್ಲಿ ನೋಡುವುದೇ ಕಷ್ಟವಾಗುತ್ತದಲ್ಲ!
ಈ ಸಮಸ್ಯೆಯನ್ನು ಪರಿಹರಿಸಿ, ಪರದೆಯ ಗಾತ್ರಕ್ಕೆ ತಕ್ಕಂತೆ ಪುಟದ ವಿನ್ಯಾಸ ಬದಲಾಗುವಂತೆ ಮಾಡುವ ತಂತ್ರವೇ ‘ರೆಸ್ಪಾನ್ಸಿವ್ ವೆಬ್ ಡಿಸೈನ್’. ಈ ತಂತ್ರ ಬಳಸಿ ರೂಪಿಸಲಾದ ಪುಟಗಳು ನಾವು ಯಾವ ಸಾಧನ ಬಳಸುತ್ತಿದ್ದೇವೋ ಆ ಸಾಧನದ ಪರದೆಯ ಗಾತ್ರವನ್ನು ಗ್ರಹಿಸಿಕೊಂಡು ಅದಕ್ಕೆ ತಕ್ಕಂತೆ ತಮ್ಮ ವಿನ್ಯಾಸವನ್ನು ಬದಲಿಸಿಕೊಳ್ಳುತ್ತವೆ. ಸನ್ನಿವೇಶಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವುದರಿಂದಲೇ ಈ ವಿನ್ಯಾಸಕ್ಕೆ ‘ರೆಸ್ಪಾನ್ಸಿವ್’ ಎಂಬ ಹೆಸರು ಬಂದಿದೆ (ರೆಸ್ಪಾನ್ಸ್ = ಪ್ರತಿಕ್ರಿಯೆ).
ಈಗ ಬಹುತೇಕ ಬಳಕೆದಾರರು ಜಾಲತಾಣಗಳನ್ನು ತಮ್ಮ ಮೊಬೈಲಿನಿಂದಲೇ ತೆರೆಯುವುದರಿಂದ ರೆಸ್ಪಾನ್ಸಿವ್ ವಿನ್ಯಾಸಕ್ಕೆ ಎಲ್ಲಿಲ್ಲದ ಮಹತ್ವ. ನಾವು ಬಳಸುತ್ತಿರುವ ತಂತ್ರಾಂಶವನ್ನು ಗಮನಿಸಿಕೊಂಡು ಅದರಲ್ಲಿನ ಸೌಲಭ್ಯಗಳಿಗೆ ತಕ್ಕಂತೆ ಜಾಲತಾಣದ ಮಾಹಿತಿಯನ್ನು ಹೊಂದಿಸಿಕೊಳ್ಳುವುದೂ ರೆಸ್ಪಾನ್ಸಿವ್ ವಿನ್ಯಾಸದ ಪರಿಧಿಯಲ್ಲೇ ಬರುತ್ತದೆ.

Roaming

ರೋಮಿಂಗ್
Kannada Equivalent: (ರೂಪಿಸಬೇಕಿದೆ)
Short Description : ಸೇವಾಸಂಸ್ಥೆಯ ಭೌಗೋಳಿಕ ಮಿತಿಯ ಹೊರಗೂ ಬಳಕೆದಾರರು ತಮ್ಮ ಮೊಬೈಲ್ ಸಂಪರ್ಕ ಬಳಸಲು ಅನುವುಮಾಡಿಕೊಡುವ ವ್ಯವಸ್ಥೆ
Long Description: ಮೊಬೈಲ್ ಫೋನ್ ಸಂಪರ್ಕ ಪಡೆದುಕೊಳ್ಳುವಾಗ ನಾವು ಯಾವುದೋ ಒಂದು ಸಂಸ್ಥೆಯನ್ನು ಆಯ್ದುಕೊಂಡಿರುತ್ತೇವೆ. ನಮಗೆ ಮೊಬೈಲ್ ಜಾಲದ ಸೌಲಭ್ಯಗಳನ್ನು ಬಳಸಲು ಅನುವುಮಾಡಿಕೊಡುವುದು ಮತ್ತು ಅದಕ್ಕೆ ಪ್ರತಿಯಾಗಿ ಶುಲ್ಕ ಪಡೆದುಕೊಳ್ಳುವುದು ಆ ಸಂಸ್ಥೆಯ ಜವಾಬ್ದಾರಿ.
ಆದರೆ ನಾವು ಹೋದಲ್ಲೆಲ್ಲ ಆ ಸಂಸ್ಥೆಯ ಸೇವೆ ಲಭ್ಯವಿರಬೇಕು ಎಂದೇನೂ ಇಲ್ಲ. ಹೀಗಿರುವಾಗ ಸೇವಾಸಂಸ್ಥೆಯ ಭೌಗೋಳಿಕ ಮಿತಿಗಳನ್ನೆಲ್ಲ ಮೀರಿ ಬಳಕೆದಾರರು ತಮ್ಮ ಮೊಬೈಲ್ ಸಂಪರ್ಕವನ್ನು ಎಲ್ಲಿ ಬೇಕಾದರೂ ಬಳಸಲು ಅನುವುಮಾಡಿಕೊಡುವ ವ್ಯವಸ್ಥೆಯೇ ರೋಮಿಂಗ್. ಬೇರೆ ರಾಜ್ಯಕ್ಕೋ ದೇಶಕ್ಕೋ ಹೋದಾಗ ನಮ್ಮ ಸಂಪರ್ಕದ ಬದಲು ಅಲ್ಲಿ ಸಕ್ರಿಯವಾಗಿರುವ ಮೊಬೈಲ್ ಸೇವಾಸಂಸ್ಥೆಯ ಸಂಪರ್ಕ ಬಳಸುವುದನ್ನು ಈ ವ್ಯವಸ್ಥೆ ಸಾಧ್ಯವಾಗಿಸುತ್ತದೆ.
ರೋಮಿಂಗ್‌ನಲ್ಲಿರುವಾಗ ನಾವು ಯಾವ ಸಂಸ್ಥೆಯ ಸೇವೆ ಬಳಸುತ್ತೇವೆ ಎನ್ನುವುದು ಬಹಳಷ್ಟು ಸಾರಿ ಸ್ವಯಂಚಾಲಿತವಾಗಿಯೇ ತೀರ್ಮಾನವಾಗುತ್ತದೆ. ಒಂದೊಮ್ಮೆ ಹಾಗೆ ಆಗದಿದ್ದಲ್ಲಿ ನಾವು ನಮ್ಮ ಇಷ್ಟದ ಸಂಸ್ಥೆಯ ಸೇವೆಯನ್ನು ಆರಿಸಿಕೊಳ್ಳುವುದೂ ಸಾಧ್ಯ.
ರೋಮಿಂಗ್ ಸೌಲಭ್ಯ ಒದಗಿಸುವುದಕ್ಕಾಗಿಯೇ ಹೆಚ್ಚುವರಿ ಶುಲ್ಕ ವಿಧಿಸುವ ಅಭ್ಯಾಸ ಕೆಲಸಮಯದ ಹಿಂದೆ ಇತ್ತು. ಆದರೆ ಈಗ ಬಹುತೇಕ ಸಂಸ್ಥೆಗಳು ಈ ಸೌಲಭ್ಯಕ್ಕಾಗಿ ಪ್ರತ್ಯೇಕ ಶುಲ್ಕವನ್ನೇನೂ ಪಡೆದುಕೊಳ್ಳುವುದಿಲ್ಲ. ರೋಮಿಂಗ್‌ನಲ್ಲಿ ನಾವು ಎರಡೆರಡು ಸಂಸ್ಥೆಗಳ ಸೇವೆ ಬಳಸುವುದರಿಂದ ದೂರವಾಣಿ ಕರೆ ಮಾಡಿದ್ದಕ್ಕೆ, ಎಸ್ಸೆಮ್ಮೆಸ್ ಕಳಿಸಿದ್ದಕ್ಕೆಲ್ಲ ಹೆಚ್ಚುವರಿ ಹಣ ನೀಡಬೇಕಾದ್ದು ಮಾತ್ರ ಇನ್ನೂ ಅನಿವಾರ್ಯ. ದೇಶದೊಳಗಿನ ರೋಮಿಂಗ್‌ಗೆ ಹೋಲಿಸಿದರೆ ಅಂತಾರಾಷ್ಟ್ರೀಯ ರೋಮಿಂಗ್ ಇನ್ನೂ ದುಬಾರಿ. ಈ ಎಲ್ಲ ಸನ್ನಿವೇಶಗಳಲ್ಲೂ ನಮ್ಮಿಂದ ಹಣಪಡೆದು ಇನ್ನೊಂದು ಸಂಸ್ಥೆಗೆ ಅವರ ಪಾಲನ್ನು ಪಾವತಿಸುವ ಜವಾಬ್ದಾರಿಯನ್ನು ಮೂಲ ಮೊಬೈಲ್ ಸೇವಾಸಂಸ್ಥೆಯೇ ನಿರ್ವಹಿಸುತ್ತದೆ.

Ransomware

ರ್‍ಯಾನ್‌ಸಮ್‌ವೇರ್
Kannada Equivalent: (ರೂಪಿಸಬೇಕಿದೆ)
Short Description : ಮಾಹಿತಿಯನ್ನು ಗೂಢಲಿಪೀಕರಣಗೊಳಿಸಿ ಬಳಸಲಾಗದಂತೆ ಮಾಡುವ ಮತ್ತು ಅದನ್ನು ಸರಿಪಡಿಸಲು ಹಣಕ್ಕಾಗಿ ಬೇಡಿಕೆಯಿಡುವ ಕುತಂತ್ರಾಂಶ
Long Description: ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುವ ದುರುಳರ ಬಗ್ಗೆ ನಾವು ಕೇಳಿದ್ದೇವಲ್ಲ, ಅಂತಹ ದುಷ್ಕರ್ಮಿಗಳು ಸೈಬರ್ ಲೋಕದಲ್ಲೂ ಇದ್ದಾರೆ. ಅವರು ಒತ್ತೆಯಾಳುಗಳಾಗಿ ಇರಿಸಿಕೊಳ್ಳುವುದು ಜನರನ್ನಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳನ್ನು!
ಈ ಕೆಟ್ಟ ಉದ್ದೇಶಕ್ಕಾಗಿ ಬಳಕೆಯಾಗುವ ತಂತ್ರಾಂಶಗಳನ್ನು ‘ರ್‍ಯಾನ್‌ಸಮ್‌ವೇರ್’ ಎಂದು ಗುರುತಿಸಲಾಗುತ್ತದೆ (‘ರ್‍ಯಾನ್‌ಸಮ್’ ಎಂದರೆ ಸುಲಿಗೆಯ ಹಣ). ಸೈಬರ್ ಲೋಕವನ್ನು ಕಾಡುವ ಹಲವು ಬಗೆಯ ಕುತಂತ್ರಾಂಶಗಳಲ್ಲಿ ಇದೂ ಒಂದು.
ತಂತ್ರಾಂಶಗಳನ್ನು – ಕಡತಗಳನ್ನು ಗೂಢಲಿಪೀಕರಣಗೊಳಿಸಿ (ಎನ್‌ಕ್ರಿಪ್ಟ್ ಮಾಡಿ) ಬಳಸಲಾಗದಂತೆ ಮಾಡುವುದು ರ್‍ಯಾನ್‌ಸಮ್‌ವೇರ್ ಕಾರ್ಯವೈಖರಿ. ಕೆಡಿಸಿದ ಕಡತಗಳನ್ನು ಮತ್ತೆ ಸರಿಪಡಿಸಬೇಕಾದರೆ ನಾವು ಕೇಳಿದಷ್ಟು ದುಡ್ಡುಕೊಡಿ ಎಂದು ಈ ಕುತಂತ್ರಾಂಶ ರೂಪಿಸಿದವರು ಬೇಡಿಕೆಯಿಡುತ್ತಾರೆ. ಕಂಪ್ಯೂಟರಿಗೆ – ಅದರಲ್ಲಿನ ಕಡತಗಳಿಗೆ ಪಾಸ್‌ವರ್ಡ್ ಹಾಕಿ ಲಾಕ್ ಮಾಡಿಟ್ಟು ಅದೇನೆಂದು ಹೇಳಲು ಹಣಕೇಳುವ ಉದಾಹರಣೆಗಳೂ ಇವೆ. ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳ ಜೊತೆಗೆ ಸ್ಮಾರ್ಟ್ ಟೀವಿಗಳಲ್ಲೂ ರ್‍ಯಾನ್‌ಸಮ್‌ವೇರ್ ಹಾವಳಿ ಕಂಡುಬಂದಿದೆಯಂತೆ.
ಈ ಕುತಂತ್ರಾಂಶದ ಬಲೆಗೆ ಬೀಳದಿರಲು ಕೆಲ ಸೂತ್ರಗಳಿವೆ. ಅಪರಿಚಿತರು ಕಳಿಸಿದ ಇಮೇಲ್-ಮೆಸೇಜುಗಳ ಮೂಲಕವಾಗಲಿ ಸಂಶಯಾಸ್ಪದ ಜಾಲತಾಣಗಳಿಂದಾಗಲಿ ಏನನ್ನೂ ಡೌನ್‌ಲೋಡ್ ಮಾಡದಿರುವುದು ರ್‍ಯಾನ್‌ಸಮ್‌ವೇರ್‌ನಿಂದ ಪಾರಾಗುವ ಮೊದಲ ಹೆಜ್ಜೆ. ನಮ್ಮ ಮಾಹಿತಿಯನ್ನು ಕಾಲಕಾಲಕ್ಕೆ ಬ್ಯಾಕಪ್ ಮಾಡಿಡುವುದು ಹಾಗೂ ಸೂಕ್ತ ಆಂಟಿವೈರಸ್ ತಂತ್ರಾಂಶ ಬಳಸುವುದು ಕೂಡ ಒಳ್ಳೆಯ ಯೋಚನೆಗಳೇ.

RAM

ರ್‍ಯಾಮ್
Kannada Equivalent: (ರೂಪಿಸಬೇಕಿದೆ)
Short Description : ರ್‍ಯಾಂಡಮ್ ಆಕ್ಸೆಸ್ ಮೆಮೊರಿ; ಕಂಪ್ಯೂಟರ್ ಅಥವಾ ಮೊಬೈಲ್ ಕೆಲಸಮಾಡುತ್ತಿರುವಾಗ ಮಾಹಿತಿಯನ್ನು ತಾತ್ಕಾಲಿಕವಾಗಿ ಉಳಿಸಿಟ್ಟುಕೊಳ್ಳುವ ಶೇಖರಣಾ ವ್ಯವಸ್ಥೆ. ಈ ಮಾಹಿತಿ ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ಉಳಿದಿರುತ್ತದೆ.
Long Description: ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ಕೆಲಸಮಾಡುವಾಗ ನಾವು ಒಂದಲ್ಲ ಒಂದು ರೀತಿಯ ಮಾಹಿತಿಯೊಡನೆ ವ್ಯವಹರಿಸುತ್ತಿರುತ್ತೇವೆ, ಮತ್ತು ಈ ಮಾಹಿತಿ ಅಂತಿಮವಾಗಿ ಹಾರ್ಡ್ ಡಿಸ್ಕ್‌ನಲ್ಲೋ, ಪೆನ್‌ಡ್ರೈವ್‌ನಲ್ಲೋ, ಮೆಮೊರಿ ಕಾರ್ಡಿನಲ್ಲೋ ಶೇಖರವಾಗುತ್ತದೆ. ನಾವು ಕೆಲಸಮಾಡುತ್ತಿರುವಷ್ಟು ಹೊತ್ತು – ಕಡತವನ್ನು ಉಳಿಸುವ ಮೊದಲು – ಇದನ್ನೆಲ್ಲ ಸಂಗ್ರಹಿಸಿಟ್ಟುಕೊಳ್ಳಲು ರ್‍ಯಾಮ್, ಅಂದರೆ ರ್‍ಯಾಂಡಮ್ ಆಕ್ಸೆಸ್ ಮೆಮೊರಿ ಬಳಕೆಯಾಗುತ್ತದೆ.
ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಕೆಲಸಮಾಡುತ್ತಿರುವಾಗ ತಾನು ಆ ಕ್ಷಣದಲ್ಲಿ ಬಳಸುತ್ತಿರುವ ದತ್ತಾಂಶ ಹಾಗೂ ಮಾಹಿತಿಯನ್ನೆಲ್ಲ ಇದರಲ್ಲಿ ಉಳಿಸಿಡುತ್ತದೆ. ರ್‍ಯಾಮ್ ಒಂದು ತಾತ್ಕಾಲಿಕ ಶೇಖರಣಾ ವ್ಯವಸ್ಥೆ ಮಾತ್ರ. ಅಂದರೆ, ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ರ್‍ಯಾಮ್‌ನಲ್ಲಿರುವ ಸಂಗತಿಗಳೆಲ್ಲ ಉಳಿದಿರುತ್ತವೆ. ಇದ್ದಕ್ಕಿದ್ದಂತೆ ಕರೆಂಟು ಹೋದಾಗ ನೀವು ನೋಟ್‌ಪ್ಯಾಡಿನಲ್ಲಿ ಟೈಪ್ ಮಾಡುತ್ತಿದ್ದ, ಇನ್ನೂ ಸೇವ್ ಮಾಡದ, ಕಡತ ಮಾಯವಾಗಿಬಿಡುತ್ತದಲ್ಲ, ಅದಕ್ಕೆ ಇದೇ ಕಾರಣ!
ನಾವು ಸೇರಿಸುತ್ತಿರುವ ಮಾಹಿತಿಯನ್ನು ನಿರ್ದಿಷ್ಟ ಅವಧಿಗೊಮ್ಮೆ ಸ್ವಯಂಚಾಲಿತವಾಗಿ ಸೇವ್ ಮಾಡಿಟ್ಟುಕೊಳ್ಳುವ ಸೌಲಭ್ಯ ಕೆಲ ತಂತ್ರಾಂಶಗಳಲ್ಲಿರುತ್ತದೆ. ಆ ಸೌಲಭ್ಯವಿಲ್ಲದ ತಂತ್ರಾಂಶಗಳಲ್ಲಿ ನಾವು ಸೇರಿಸುವ ಮಾಹಿತಿಯನ್ನು ಆಗಿಂದಾಗ್ಗೆ ಸೂಕ್ತವಾಗಿ ಉಳಿಸಿಡುವುದು ಒಳ್ಳೆಯದು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App