भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

MAh

ಎಂಎಎಚ್
Kannada Equivalent: (ರೂಪಿಸಬೇಕಿದೆ)
Short Description : ಮಿಲಿ ಆಂಪಿಯರ್ ಅವರ್; ಬ್ಯಾಟರಿ ಸಾಮರ್ಥ್ಯವನ್ನು ಅಳೆಯುವ ಏಕಮಾನ
Long Description: ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಮುಂತಾದ ಸಾಧನಗಳಲ್ಲಿರುವ ಬ್ಯಾಟರಿ ಸಾಮರ್ಥ್ಯವನ್ನು ಎಂಎಎಚ್‌ಗಳಲ್ಲಿ ಅಳೆಯಲಾಗುತ್ತದೆ. ಇಲ್ಲಿ ಎಂಎಎಚ್ ಅಂದರೆ ಮಿಲಿ ಆಂಪಿಯರ್ ಅವರ್ (ಆಂಪಿಯರ್ ಎನ್ನುವುದು ವಿದ್ಯುತ್ ಪ್ರವಾಹದ ಏಕಮಾನ). ಯಾವುದೇ ಬ್ಯಾಟರಿ – ಪೂರ್ತಿ ಚಾರ್ಜ್ ಆಗಿದ್ದಾಗ – ಎಷ್ಟು ಪ್ರಮಾಣದ ವಿದ್ಯುತ್ತನ್ನು ಎಷ್ಟು ಹೊತ್ತಿನವರೆಗೆ ಪೂರೈಸಬಲ್ಲದು ಎನ್ನುವುದನ್ನು ಇದು ಸೂಚಿಸುತ್ತದೆ.
ವಾಹನಗಳಲ್ಲಿ ಇಂಧನ ಟ್ಯಾಂಕಿನ ಸಾಮರ್ಥ್ಯ ಇರುತ್ತದಲ್ಲ, ಇದೂ ಹಾಗೆಯೇ. ಎರಡು ಲೀಟರ್ ಸಾಮರ್ಥ್ಯದ ಟ್ಯಾಂಕು ಬೈಕಿನಲ್ಲಿದ್ದರೆ ಅಷ್ಟು ಪೆಟ್ರೋಲ್ ತುಂಬಿಸಿ ನಾವು ನೂರು ಕಿಲೋಮೀಟರ್ ಕ್ರಮಿಸಬಹುದು; ಕಾರಿನಲ್ಲಾದರೆ ಇಪ್ಪತ್ತೋ ಮೂವತ್ತೋ ಕಿಲೋಮೀಟರ್ ಹೋಗುವಷ್ಟರಲ್ಲಿ ಇನ್ನೊಂದು ಪೆಟ್ರೋಲ್ ಬಂಕ್ ಹುಡುಕಬೇಕಾಗುತ್ತದೆ.
ಬ್ಯಾಟರಿ ಸಾಮರ್ಥ್ಯವೂ ಅಷ್ಟೆ. ಉದಾಹರಣೆಗೆ ೩೦೦೦ ಎಂಎಎಚ್ ಸಾಮರ್ಥ್ಯದ ಒಂದು ಬ್ಯಾಟರಿಯನ್ನು ತೆಗೆದುಕೊಂಡರೆ ಅದರ ವರ್ತನೆ ಬೇರೆಬೇರೆ ಗ್ಯಾಜೆಟ್‌ಗಳಲ್ಲಿ ಬೇರೆಬೇರೆ ರೀತಿಯಲ್ಲಿರುತ್ತದೆ. ಗಂಟೆಗೆ ೧೦೦ ಮಿಲಿಆಂಪಿಯರ್ ವಿದ್ಯುತ್ ಬೇಡುವ ಗ್ಯಾಜೆಟ್‌ಗೆ ಈ ಬ್ಯಾಟರಿ ೩೦ ಗಂಟೆಗಳ ಕಾಲ ಜೀವತುಂಬಬಲ್ಲದು; ಅದೇರೀತಿ ಗಂಟೆಗೆ ೨೦೦ ಮಿಲಿಆಂಪಿಯರ್ ಬೇಕಾದಾಗ ೧೫ ಗಂಟೆಗಳಲ್ಲೇ ಬ್ಯಾಟರಿ ಖಾಲಿಯಾಗಿಬಿಡುತ್ತದೆ. ಅಂದರೆ, ಒಮ್ಮೆ ಚಾರ್ಜ್ ಮಾಡಿದ ಬ್ಯಾಟರಿ ಎಷ್ಟು ಹೊತ್ತು ಬಾಳುತ್ತದೆ ಎನ್ನುವುದು ಬ್ಯಾಟರಿ ಸಾಮರ್ಥ್ಯದ ಜೊತೆಗೆ ನಮ್ಮ ಮೊಬೈಲ್ ಫೋನು ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರು ಎಷ್ಟು ಪ್ರಮಾಣದ ವಿದ್ಯುತ್ ಬಳಸುತ್ತದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.

MNP

ಎಂಎನ್‌ಪಿ
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ನಂಬರ್ ಪೋರ್ಟಬಿಲಿಟಿ; ಮೊಬೈಲ್ ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಂಡು ಸೇವಾ ಸಂಸ್ಥೆಯನ್ನು ಬದಲಿಸಲು ಅನುವುಮಾಡಿಕೊಡುವ ವ್ಯವಸ್ಥೆ
Long Description: ನಾವು ಯಾವುದೋ ಸಂಸ್ಥೆಯ ಮೊಬೈಲ್ ಸಂಪರ್ಕ ಬಳಸುತ್ತಿರುತ್ತೇವಲ್ಲ, ಅದಕ್ಕಿಂತ ಉತ್ತಮ ಗುಣಮಟ್ಟದ ಸೇವೆ ಹಾಗೂ ಕಡಿಮೆ ದರ ಇನ್ನೊಂದು ಸಂಸ್ಥೆಯಲ್ಲಿ ದೊರಕುತ್ತಿವೆ ಎಂದರೆ ನಮ್ಮ ಈಗಿನ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಂಡೇ ಆ ಹೊಸ ಸಂಸ್ಥೆಯತ್ತ ಮುಖಮಾಡುವುದು ಸಾಧ್ಯವಿದೆ. ಇದನ್ನು ಸಾಧ್ಯವಾಗಿಸಿರುವುದು ‘ಮೊಬೈಲ್ ನಂಬರ್ ಪೋರ್ಟಬಿಲಿಟಿ’ (ಎಂಎನ್‌ಪಿ) ಎನ್ನುವ ಪರಿಕಲ್ಪನೆ. ಸೇವೆ ಬದಲಾದರೂ ಮೊಬೈಲ್ ಸಂಖ್ಯೆ ಬದಲಾಗದಂತೆ ನೋಡಿಕೊಳ್ಳುವುದು, ಆ ಮೂಲಕ ಎಲ್ಲರಿಗೂ ನಮ್ಮ ಸಂಖ್ಯೆಯನ್ನು ಮತ್ತೊಮ್ಮೆ ತಿಳಿಸಬೇಕಾದ ಅನಿವಾರ್ಯತೆಯನ್ನು ತಪ್ಪಿಸುವುದು ಎಂಎನ್‌ಪಿಯ ವೈಶಿಷ್ಟ್ಯ. ಬಳಕೆದಾರರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವ ಮೂಲಕ ಈ ವ್ಯವಸ್ಥೆ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆ ಯಾವಾಗಲೂ ಇರುವಂತೆ ನೋಡಿಕೊಳ್ಳುತ್ತದೆ.
ನಮ್ಮ ಸದ್ಯದ ಮೊಬೈಲ್ ಸಂಪರ್ಕವನ್ನು ಭಾರತದ ಯಾವುದೇ ಮೊಬೈಲ್ ಸೇವೆಗೆ ವರ್ಗಾಯಿಸಲು ‘ಯುನೀಕ್ ಪೋರ್ಟಿಂಗ್ ಕೋಡ್’ ಎಂಬ ಸಂಖ್ಯೆ ಇದ್ದರೆ ಸಾಕು. ಈ ಸಂಖ್ಯೆಯನ್ನು ನಮ್ಮ ಮೊಬೈಲಿನಿಂದ ೧೯೦೦ಗೆ ‘PORT <ಮೊಬೈಲ್ ಸಂಖ್ಯೆ>‘ ಎಂದು ಎಸ್ಸೆಮ್ಮೆಸ್ ಕಳಿಸುವ ಮೂಲಕ ಪಡೆದುಕೊಳ್ಳಬಹುದು. ನಾವು ಯಾವ ಸೇವೆಗೆ ಬದಲಿಸಬೇಕೆಂದಿದ್ದೇವೋ ಆ ಸಂಸ್ಥೆಯವರು ಈ ಸಂಖ್ಯೆಯನ್ನು ಪಡೆದು ನಮ್ಮ ಮೊಬೈಲನ್ನು ತಮ್ಮ ಜಾಲಕ್ಕೆ ಸೇರಿಸಿಕೊಳ್ಳುತ್ತಾರೆ.
ಬೇರೆ ಸಂಸ್ಥೆಯ ಗ್ರಾಹಕರನ್ನು ತಮ್ಮತ್ತ ಸೆಳೆಯಲು, ತಮ್ಮ ಗ್ರಾಹಕರು ಬೇರೆ ಸಂಸ್ಥೆಯತ್ತ ಹೋಗದಂತೆ ತಡೆಯಲು ಮೊಬೈಲ್ ಸಂಸ್ಥೆಗಳು ಆಗಿಂದಾಗ್ಗೆ ವಿಶೇಷ ಕೊಡುಗೆಗಳನ್ನು ಘೋಷಿಸುತ್ತಲೇ ಇರುತ್ತವೆ. ಪೋರ್ಟ್ ಎಂದು ಸಂದೇಶ ಕಳಿಸಿದ ನಂತರವೂ ನಿರ್ಧಾರ ಬದಲಿಸುವಂತೆ ಗ್ರಾಹಕರ ಮನವೊಲಿಸುವ ಪ್ರಯತ್ನಗಳು ನಡೆಯುವುದು ಇಲ್ಲಿ ಸಾಮಾನ್ಯ.

MP3

ಎಂಪಿ೩
Kannada Equivalent: (ರೂಪಿಸಬೇಕಿದೆ)
Short Description : ಎಂಪಿಇಜಿ ಆಡಿಯೋ ಲೇಯರ್ ೩; ಧ್ವನಿರೂಪದ ಕಡತಗಳನ್ನು ಶೇಖರಿಸಿಡಲು ಬಳಕೆಯಾಗುವ ಡಿಜಿಟಲ್ ತಂತ್ರಜ್ಞಾನ
Long Description: ಮೂವಿಂಗ್ ಪಿಕ್ಚರ್ಸ್ ಎಕ್ಸ್‌ಪರ್ಟ್ ಗ್ರೂಪ್ (ಎಂಪಿಇಜಿ) ಎಂಬ ಸಂಸ್ಥೆ ಧ್ವನಿರೂಪದ ಕಡತಗಳನ್ನು ಶೇಖರಿಸಿಡಲು ರೂಪಿಸಿದ ತಂತ್ರಜ್ಞಾನವೇ ಎಂಪಿ೩. ಇದು ‘ಎಂಪಿಇಜಿ ಆಡಿಯೋ ಲೇಯರ್ ೩’ ಎಂಬ ಹೆಸರಿನ ಹ್ರಸ್ವರೂಪ. ಧ್ವನಿರೂಪದ ಮಾಹಿತಿಯನ್ನು ಬಹಳ ಕಡಿಮೆ ಸ್ಥಳಾವಕಾಶ ಬಳಸುವ ಕಡತಗಳಾಗಿ ಉಳಿಸಿಡುವುದು ಈ ತಂತ್ರದ ಹೆಚ್ಚುಗಾರಿಕೆ. ಮೂಲಧ್ವನಿಯಲ್ಲಿ ಮಾನವರಿಂದ ಗ್ರಹಿಸಲು ಅಸಾಧ್ಯವಾದ ಅಷ್ಟೂ ಭಾಗವನ್ನು ತೆಗೆದುಹಾಕುವ ಹಾಗೂ ಮಿಕ್ಕ ಮಾಹಿತಿಯನ್ನು ಬಹಳ ಸಮರ್ಥವಾಗಿ ಕುಗ್ಗಿಸುವ ಮೂಲಕ ಇದು ಸಾಧ್ಯವಾಗುತ್ತದೆ. ಧ್ವನಿಯ ಗುಣಮಟ್ಟ ತೀರಾ ಉನ್ನತವಾಗೇನೂ ಇರಬೇಕಿಲ್ಲ ಎನ್ನುವುದಾದರೆ ಕಡತದ ಗಾತ್ರವನ್ನು ಇನ್ನಷ್ಟು ಕುಗ್ಗಿಸಬಹುದು. ಡಿಜಿಟಲ್ ರೂಪದಲ್ಲಿರುವ ಹಾಡು-ಸಂಗೀತವನ್ನೆಲ್ಲ ಎಂಪಿ೩ ಎಂದೇ ಗುರುತಿಸುವ ಮಟ್ಟಿಗೆ ಈ ತಂತ್ರಜ್ಞಾನ ಜನಪ್ರಿಯವಾಗಿದೆ.
ಎಂಪಿ೩ ತಂತ್ರಜ್ಞಾನ ಅನ್ವಯಿಸುವುದು ಧ್ವನಿರೂಪದ ಕಡತಗಳಿಗೆ ಮಾತ್ರ. ಧ್ವನಿಯ ಜೊತೆಗೆ ವೀಡಿಯೋ, ಸಬ್‌ಟೈಟಲ್ ಮುಂತಾದ ಮಾಹಿತಿಯನ್ನೂ ಸಣ್ಣ ಗಾತ್ರದ ಕಡತಗಳಲ್ಲಿ ಉಳಿಸಿಡಲು ಎಂಪಿ೪ (ಎಂಪಿಇಜಿ-೪ ಪಾರ್ಟ್ ೧೪) ತಂತ್ರಜ್ಞಾನ ಬಳಕೆಯಾಗುತ್ತದೆ.
ಎಂಪಿ೩ ಹಾಗೂ ಎಂಪಿ೪ ತಂತ್ರಜ್ಞಾನ ಬಳಸುವ ಕಡತಗಳ ಫೈಲ್ ಎಕ್ಸ್‌ಟೆನ್ಷನ್ ಆಗಿ ಆ ಹೆಸರುಗಳೇ ಬಳಕೆಯಾಗುತ್ತವೆ. ಎಂಪಿ೪ ತಂತ್ರಜ್ಞಾನ ಬಳಸಿಕೊಂಡು ಧ್ವನಿರೂಪದ ಮಾಹಿತಿಯನ್ನಷ್ಟೇ ಉಳಿಸಿಡುವ ಕಡತಗಳನ್ನು .m4a ಎಂಬ ಫೈಲ್ ಎಕ್ಸ್‌ಟೆನ್ಷನ್‌ನೊಡನೆ ಗುರುತಿಸುವ ಅಭ್ಯಾಸವೂ ಇದೆ.

Mbps

ಎಂಬಿಪಿಎಸ್
Kannada Equivalent: (ರೂಪಿಸಬೇಕಿದೆ)
Short Description : ಮೆಗಾಬಿಟ್ಸ್ ಪರ್ ಸೆಕೆಂಡ್; ದೂರಸಂಪರ್ಕ ವ್ಯವಸ್ಥೆಯಲ್ಲಿ ದತ್ತಾಂಶ ವರ್ಗಾವಣೆಯ ವೇಗವನ್ನು ಅಳೆಯುವ ಏಕಮಾನಗಳಲ್ಲೊಂದು
Long Description: ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ (ಡೇಟಾ) ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ.
ಡೇಟಾ ರೇಟ್ ಅನ್ನು ಅಳೆಯುವ ಏಕಮಾನವೇ ಡೇಟಾ ರೇಟ್ ಯುನಿಟ್. ಎಂಬಿಪಿಎಸ್ ಎನ್ನುವುದು ಇಂತಹುದೇ ಒಂದು ಡೇಟಾ ರೇಟ್ ಯುನಿಟ್. ಯಾವುದೋ ಅಂತರಜಾಲ ಸಂಪರ್ಕದಲ್ಲಿ ಪ್ರತಿ ಸೆಕೆಂಡಿಗೆ ಹತ್ತು ಲಕ್ಷ ಬಿಟ್‌ನಷ್ಟು ದತ್ತಾಂಶದ ಹರಿವು ಸಾಧ್ಯವಾದರೆ ಅದನ್ನು ೧ ಮೆಗಾಬಿಟ್ಸ್ ಪರ್ ಸೆಕೆಂಡ್ (ಎಂಬಿಪಿಎಸ್) ಸಂಪರ್ಕವೆಂದು ಗುರುತಿಸಲಾಗುತ್ತದೆ. ಕಿಲೋಬಿಟ್ಸ್ ಪರ್ ಸೆಕೆಂಡ್ (ಕೆಬಿಪಿಎಸ್), ಗಿಗಾಬಿಟ್ಸ್ ಪರ್ ಸೆಕೆಂಡ್ (ಜಿಬಿಪಿಎಸ್) ಮುಂತಾದವೂ ಡೇಟಾ ರೇಟ್ ಯುನಿಟ್‌ಗಳೇ.
ದತ್ತಾಂಶದ ರವಾನೆಗೆ ನಾವು ಯಾವುದೇ ಮಾರ್ಗ ಆಯ್ದುಕೊಂಡಾಗ ಅದರ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಪ್ರಮಾಣದ ದತ್ತಾಂಶವಷ್ಟೆ ಹಾದುಹೋಗುವುದು ಸಾಧ್ಯ. ಇದನ್ನು ಆ ಮಾರ್ಗದ ಬ್ಯಾಂಡ್‌ವಿಡ್ತ್ ಎಂದು ಕರೆಯುತ್ತಾರೆ. ಬ್ಯಾಂಡ್‌ವಿಡ್ತ್ ಹೆಚ್ಚಿದ್ದಷ್ಟೂ ಡೇಟಾ ರೇಟ್ ಕೂಡ ಹೆಚ್ಚಾಗಿರುವುದು ಸಾಧ್ಯ.

Multitouch

ಮಲ್ಟಿಟಚ್
Kannada Equivalent: (ರೂಪಿಸಬೇಕಿದೆ)
Short Description : ಟಚ್‌ಸ್ಕ್ರೀನನ್ನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚುಕಡೆ ಸ್ಪರ್ಶಿಸಿದಾಗಲೂ ಅದು ಪ್ರತಿಕ್ರಿಯೆ ನೀಡುವುದನ್ನು ಸಾಧ್ಯವಾಗಿಸುವ ತಂತ್ರಜ್ಞಾನ
Long Description: ಯಾವುದೇ ಟಚ್‌ಸ್ಕ್ರೀನನ್ನು ನಿರ್ದಿಷ್ಟ ಸ್ಥಳದಲ್ಲಿ ಮುಟ್ಟಿದರೆ ಅದು ಪೂರ್ವನಿರ್ಧಾರಿತ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದು (ಉದಾ: ಐಕನ್ ಸ್ಪರ್ಶಿಸಿದರೆ ಆಪ್ ತೆರೆದುಕೊಳ್ಳುವುದು) ನಮಗೆ ಗೊತ್ತು. ಪರದೆಯ ಮೇಲೆ ಮೂಡುವ ಕೀಬೋರ್ಡ್ ಕೀಲಿಗಳನ್ನು ಸ್ಪರ್ಶಿಸಿದಾಗ ಅಕ್ಷರ-ಚಿಹ್ನೆಗಳು ಮೂಡುವುದೂ ಗೊತ್ತು. ಟಚ್‌ಸ್ಕ್ರೀನನ್ನು ಸ್ಪರ್ಶಿಸಿದಾಗ ಅದರ ವಿದ್ಯುತ್ ಕ್ಷೇತ್ರದಲ್ಲಿ (ಇಲೆಕ್ಟ್ರಿಕಲ್ ಫೀಲ್ಡ್) ಆಗುವ ಬದಲಾವಣೆಗಳನ್ನು ಗ್ರಹಿಸುವ ಮೂಲಕ ಇದೆಲ್ಲ ಸಾಧ್ಯವಾಗುತ್ತದೆ.
ಆದರೆ ಇದೆಲ್ಲ ಒಂದು ಸ್ಪರ್ಶದ ವಿಷಯವಾಯಿತು. ಏಕಕಾಲದಲ್ಲಿ ಟಚ್‌ಸ್ಕ್ರೀನನ್ನು ಒಂದಕ್ಕಿಂತ ಹೆಚ್ಚುಕಡೆ ಸ್ಪರ್ಶಿಸಿದಾಗಲೂ ಅದು ಪ್ರತಿಕ್ರಿಯೆ ನೀಡುವುದನ್ನು ಸಾಧ್ಯವಾಗಿಸುವ ತಂತ್ರಜ್ಞಾನವೇ ‘ಮಲ್ಟಿಟಚ್’. ಎರಡು ಬೆರಳುಗಳನ್ನು ಬಳಸಿ ಚಿತ್ರವನ್ನು ಜೂಮ್ ಮಾಡುವಾಗ (ಪಿಂಚ್), ಇ-ಪುಸ್ತಕಗಳನ್ನು ಓದುವಾಗ ಪುಟದ ಅಂಚನ್ನು ಸವರಿ ಮುಂದಿನ ಪುಟಕ್ಕೆ ಹೋಗುವಾಗಲೆಲ್ಲ ಬಳಕೆಯಾಗುವುದು ಇದೇ ತಂತ್ರಜ್ಞಾನ. ಟಚ್‌ಸ್ಕ್ರೀನಿನ ಯಾವ ಒಂದು ಭಾಗವನ್ನು ಮುಟ್ಟಿದ್ದೇವೆ ಎನ್ನುವುದನ್ನು ಗಮನಿಸುವ ಬದಲು ಇಡೀ ಪರದೆಯ ಯಾವಯಾವ ಭಾಗಗಳನ್ನು ಹೇಗೆ (ಉದಾ: ಎಷ್ಟು ಒತ್ತಡದೊಡನೆ) ಸ್ಪರ್ಶಿಸಲಾಗಿದೆ ಎಂದು ಈ ತಂತ್ರಜ್ಞಾನ ಗ್ರಹಿಸಿಕೊಳ್ಳುತ್ತದೆ ಮತ್ತು ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುತ್ತದೆ.

Modular Phone

ಮಾಡ್ಯುಲರ್ ಫೋನ್
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ಫೋನಿನಲ್ಲಿ ಬೇಕಾದ ಭಾಗಗಳನ್ನು ಬೇಕಾದಾಗ ಸೇರಿಸಿಕೊಳ್ಳಲು – ಬದಲಿಸಿಕೊಳ್ಳಲು ಅನುವುಮಾಡಿಕೊಡುವ ಪರಿಕಲ್ಪನೆ
Long Description: ಬೇರೆಬೇರೆ ಸಂಸ್ಥೆಗಳು ತಯಾರಿಸಿದ ಭಾಗಗಳನ್ನು ಕೊಂಡು ಒಟ್ಟಿಗೆ ಜೋಡಿಸಿ ಕಂಪ್ಯೂಟರ್ ರೂಪಿಸಿಕೊಳ್ಳುತ್ತೇವಲ್ಲ, ಬೇಕಾದಾಗ ಬೇಕಾದ ಭಾಗವನ್ನಷ್ಟೆ ಸೇರಿಸಿಕೊಳ್ಳಲು, ಬದಲಿಸಿಕೊಳ್ಳಲು ಅನುವುಮಾಡಿಕೊಡುವುದು ಅವುಗಳ ಪ್ರಮುಖ ವೈಶಿಷ್ಟ್ಯ.
ಹೀಗೆ ಮೊಬೈಲುಗಳನ್ನೂ ಅಪ್‌ಗ್ರೇಡ್ ಮಾಡುವಂತಿದ್ದರೆ? ರ್‍ಯಾಮ್ ಸಾಲದೆಹೋದಾಗ ಒಂದೆರಡು ಜಿಬಿ ಹೆಚ್ಚುವರಿ ರ್‍ಯಾಮ್ ಸೇರಿಸುವಂತಿದ್ದರೆ, ಕ್ಯಾಮೆರಾ ಚೆನ್ನಾಗಿಲ್ಲ ಎನ್ನಿಸಿದಾಗ ಹೊಸ ಕ್ಯಾಮೆರಾ ಅಳವಡಿಸಿಕೊಳ್ಳುವಂತಿದ್ದರೆ?
‘ಮಾಡ್ಯುಲರ್ ಫೋನ್’ ಎಂಬ ಪರಿಕಲ್ಪನೆ ಈ ಕನಸನ್ನು ನನಸಾಗಿಸಲು ಹೊರಟಿದೆ. ಒಂದಷ್ಟು ಭಾಗಗಳನ್ನು ಭದ್ರವಾಗಿ ಮುಚ್ಚಿಟ್ಟು ಮೊಬೈಲ್ ರೂಪಿಸುವ ಬದಲು, ಬೇಕಾದ ಭಾಗಗಳನ್ನು ಬೇಕಾದಾಗ ಸೇರಿಸಿಕೊಳ್ಳಲು – ಬದಲಿಸಿಕೊಳ್ಳಲು ಅನುವುಮಾಡಿಕೊಡುವ ಫೋನುಗಳ ಹಿಂದಿರುವುದು ಇದೇ ಪರಿಕಲ್ಪನೆ.
ಉತ್ತಮ ಕ್ಯಾಮೆರಾ, ಹೆಚ್ಚುವರಿ ಬ್ಯಾಟರಿ ಸಾಮರ್ಥ್ಯ, ಹೊಸ ಸ್ಪೀಕರ್ – ಹೀಗೆ ಅನೇಕ ಭಾಗಗಳನ್ನು ಈ ಪರಿಕಲ್ಪನೆಯನ್ವಯ ರೂಪುಗೊಂಡಿರುವ ಫೋನುಗಳಿಗೆ ಸೇರಿಸುವುದು ಈಗಾಗಲೇ ಸಾಧ್ಯವಾಗಿದೆ. ಇಂತಹ ಫೋನುಗಳು ಸದ್ಯಕ್ಕೆ ಕೊಂಚ ದುಬಾರಿಯೆನ್ನಿಸಬಹುದು; ಆದರೆ ಮುಂದಿನ ದಿನಗಳಲ್ಲಿ ಈ ಪರಿಕಲ್ಪನೆಯಿಂದ ಫೋನುಗಳನ್ನು ಪದೇಪದೇ ಬದಲಿಸಬೇಕಾದ ಪರಿಸ್ಥಿತಿ ನಿವಾರಣೆಯಾಗುವುದಷ್ಟೇ ಅಲ್ಲ, ಇ-ಕಸದ ಸಮಸ್ಯೆ ಹಾಗೂ ಸಂಪನ್ಮೂಲಗಳಿಗಾಗಿ ಪರಿಸರದ ಮೇಲಿನ ಒತ್ತಡವೂ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.

Malware

ಮಾಲ್‌ವೇರ್
Kannada Equivalent: ಕುತಂತ್ರಾಂಶ
Short Description : ಕಂಪ್ಯೂಟರ್ – ಸ್ಮಾರ್ಟ್‌ಫೋನ್ ಮುಂತಾದ ಸಾಧನಗಳ ಕಾರ್ಯಾಚರಣೆಗೆ ತೊಂದರೆಮಾಡುವುದನ್ನೇ ಉದ್ದೇಶವಾಗಿಟ್ಟುಕೊಂಡ ತಂತ್ರಾಂಶ
Long Description: ಸಾಫ್ಟ್‌ವೇರ್‌ನಿಂದ (ತಂತ್ರಾಂಶ) ಎಷ್ಟು ಉಪಯೋಗವಿದೆಯೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಒಳ್ಳೆಯ ಉದ್ದೇಶಕ್ಕೆ ತಂತ್ರಾಂಶಗಳಿರುವಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು (ಮಾಲ್‌ವೇರ್ – ಕುತಂತ್ರಾಂಶ) ರೂಪುಗೊಂಡಿರುವುದು ಇದಕ್ಕೆ ಕಾರಣ.
ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನಿನಂತಹ ಸಾಧನಗಳ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಹಾಳುಮಾಡುವುದು, ಖಾಸಗಿ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು – ಹೀಗೆ ಕುತಂತ್ರಾಂಶಗಳು ಬೇಕಾದಷ್ಟು ಬಗೆಯಲ್ಲಿ ತೊಂದರೆಕೊಡುತ್ತವೆ. ವೈರಸ್, ಟ್ರೋಜನ್, ಸ್ಪೈವೇರ್, ಆಡ್‌ವೇರ್ ಇವೆಲ್ಲ ಕುತಂತ್ರಾಂಶಗಳಿಗೆ ಉದಾಹರಣೆಗಳು.
ರೋಗ ಬಾರದಂತಿರಲು, ಹಾಗೂ ಬಂದಾಗ ಅದನ್ನು ವಾಸಿಮಾಡಿಕೊಳ್ಳಲು ನಾವು ಔಷಧಿ ತೆಗೆದುಕೊಳ್ಳುತ್ತೇವಲ್ಲ, ಕಂಪ್ಯೂಟರುಗಳ ಪಾಲಿಗೆ ಅಂತಹ ಔಷಧಿಯೆಂದರೆ ಆಂಟಿವೈರಸ್ ತಂತ್ರಾಂಶ. ಆಂಟಿವೈರಸ್ ಬಳಸುವ ಮೂಲಕ ನಾವು ನಮ್ಮ ಕಂಪ್ಯೂಟರನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು. ನಾರ್ಟನ್, ಮೆಕ್‌ಆಫೀ, ಅವಾಸ್ತ್ ಮುಂತಾದ ಹಲವು ಆಂಟಿವೈರಸ್‌ಗಳು ಮಾರುಕಟ್ಟೆಯಲ್ಲಿವೆ. ಈ ಪೈಕಿ ಕೆಲವನ್ನು ಬಳಸಲು ಹಣ ಕೊಡಬೇಕಾಗುತ್ತದೆಯಾದರೆ ಇನ್ನು ಕೆಲವು ಉಚಿತವಾಗಿಯೇ ಸಿಗುತ್ತವೆ. ಆಂಟಿವೈರಸ್ ತಂತ್ರಾಂಶ ಇನ್‌ಸ್ಟಾಲ್ ಮಾಡಿಕೊಂಡ ನಂತರವೂ ಕುತಂತ್ರಾಂಶಗಳಿಂದ ಸುರಕ್ಷಿತವಾಗಿರಲು ಅದನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು.

Mirror Site

ಮಿರರ್ ಸೈಟ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ಜಾಲತಾಣಕ್ಕೆ ಬದಲಿಯಾಗಿ ಕೆಲಸಮಾಡುವ, ಬೇರೊಂದು ಸರ್ವರ್‌ನಲ್ಲಿ ಉಳಿಸಿಟ್ಟಿರುವ ಅದರ ಪ್ರತಿ
Long Description: ಜಾಲತಾಣಗಳಿಂದ ನಾವು ಒಂದಲ್ಲ ಒಂದು ರೀತಿಯ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಲೇ ಇರುತ್ತೇವೆ. ಕಡತಗಳನ್ನು – ತಂತ್ರಾಂಶಗಳನ್ನು ಪಡೆದುಕೊಳ್ಳುವಾಗಲಂತೂ ನಾವು ಡೌನ್‌ಲೋಡ್ ಮಾಡಿಕೊಳ್ಳುವ ಮಾಹಿತಿಯ ಪ್ರಮಾಣ ಸಾಕಷ್ಟು ದೊಡ್ಡದಾಗಿಯೇ ಇರುತ್ತದೆ. ದೊಡ್ಡ ಕಡತಗಳನ್ನು ಎಲ್ಲರೂ ಒಂದೇ ಕಡೆಯಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕೆಂದರೆ ಆ ಸರ್ವರಿನ ಸಾಮರ್ಥ್ಯ ಹೆಚ್ಚಿರಬೇಕು. ಒಂದುವೇಳೆ ಹಾಗಿಲ್ಲದೆ ಹೋದರೆ ಡೌನ್‌ಲೋಡ್‌ಗಳು ನಿಧಾನವಾಗಿಬಿಡುತ್ತವೆ, ಇಲ್ಲವೇ ಕೆಲವು ಬಳಕೆದಾರರಿಗೆ ಆ ಮಾಹಿತಿ ಸಿಗುವುದೇ ಇಲ್ಲ.
ಈ ಪರಿಸ್ಥಿತಿ ತಪ್ಪಿಸಲು ಅನೇಕ ತಾಣಗಳು ತಮ್ಮ ಮಾಹಿತಿಯ ಒಂದಕ್ಕಿಂತ ಹೆಚ್ಚು ಪ್ರತಿಗಳನ್ನು ನಿರ್ವಹಿಸುತ್ತವೆ. ಈ ಎಲ್ಲ ಪ್ರತಿಗಳಲ್ಲೂ ಮೂಲ ತಾಣದಲ್ಲಿರುವ ಮಾಹಿತಿಯೇ ಇರುವುದರಿಂದ ಅವನ್ನು ‘ಮಿರರ್ ಸೈಟ್’ಗಳೆಂದು ಕರೆಯುತ್ತಾರೆ (ಮಿರರ್ ಪದದ ಬಳಕೆ ಕನ್ನಡಿ ಎಂಬ ಅರ್ಥದಲ್ಲಿ). ಒಂದೇ ಮಾಹಿತಿಯನ್ನು ಬೇರೆಬೇರೆ ಬಳಕೆದಾರರು ಬೇರೆಬೇರೆ ತಾಣಗಳಿಂದ ಪಡೆದುಕೊಳ್ಳುವುದನ್ನು, ಹಾಗೂ ಆ ಮೂಲಕ ಡೌನ್‌ಲೋಡ್‌ಗಳು ಬೇಗನೆ ಪೂರ್ಣವಾಗುವುದನ್ನು ಸಾಧ್ಯವಾಗಿಸುವುದು ಮಿರರ್ ಸೈಟುಗಳ ವೈಶಿಷ್ಟ್ಯ.
ಡೌನ್‌ಲೋಡ್‌ಗಳಿಗಷ್ಟೇ ಅಲ್ಲ, ಜಾಲತಾಣಕ್ಕೆ ಭೇಟಿಕೊಡುವವರ ಸಂಖ್ಯೆ ಹೆಚ್ಚಿದಾಗ ಆ ಟ್ರಾಫಿಕ್ ಅನ್ನು ನಿಭಾಯಿಸಲೂ ಮಿರರ್ ತಾಣಗಳನ್ನು ಬಳಸಬಹುದು. ಬೇರೆಬೇರೆ ಪ್ರದೇಶಗಳಲ್ಲಿರುವ ಬಳಕೆದಾರರು ನಿರ್ದಿಷ್ಟ ತಾಣ ತೆರೆದಾಗ ಅವರನ್ನು ತಮ್ಮ ಸಮೀಪದ ಮಿರರ್‌ನತ್ತ ನಿರ್ದೇಶಿಸುವುದೂ ಸಾಧ್ಯ. ಯಾವುದೋ ಒಂದು ಸರ್ವರ್ ವಿಫಲವಾದ ಸಂದರ್ಭದಲ್ಲಿ ಜಾಲತಾಣದ ಕಾರ್ಯಾಚರಣೆಯನ್ನು ಮಿರರ್ ತಾಣಗಳ ನೆರವಿನಿಂದ ತಕ್ಷಣವೇ ಮುಂದುವರೆಸುವುದು ಕೂಡ ಸಾಧ್ಯವಾಗುತ್ತದೆ.
ಅಷ್ಟೇ ಅಲ್ಲ, ಜಾಲತಾಣಗಳಲ್ಲಿರುವ ಮಾಹಿತಿಯ ಬ್ಯಾಕಪ್ ತೆಗೆದಿಟ್ಟುಕೊಳ್ಳಲೂ ಮಿರರ್ ತಾಣಗಳನ್ನು ಬಳಸುವ ಅಭ್ಯಾಸವಿದೆ (ಇತರರ ಮಾಹಿತಿಯನ್ನು ನಕಲಿಸಿಕೊಳ್ಳುವ ಕೃತಿಚೋರರೂ ಬೇರೆ ತಾಣಗಳ ಮಿರರ್ ಸೃಷ್ಟಿಸಿಕೊಳ್ಳುವುದು ತಾಂತ್ರಿಕವಾಗಿ ಸಾಧ್ಯ). ವಿವಾದಾಸ್ಪದ ಜಾಲತಾಣಗಳನ್ನು ನಿರ್ಬಂಧಿಸಿದ ಸಂದರ್ಭಗಳಲ್ಲಿ ಅವುಗಳ ಇನ್ನೊಂದು ಪ್ರತಿಯನ್ನು ಬೇರೊಂದು ದೇಶದಿಂದ ಪ್ರಕಟಿಸುವುದಕ್ಕೂ ಮಿರರ್ ತಾಣಗಳು ಬಳಕೆಯಾದ ಉದಾಹರಣೆಗಳಿವೆ.

Meme

ಮೀಮ್
Kannada Equivalent: (ರೂಪಿಸಬೇಕಿದೆ)
Short Description : ನಿರ್ದಿಷ್ಟ ವಿಷಯ ಕುರಿತು ರೂಪಿಸಲಾಗಿರುವ ಪಠ್ಯ ಹಾಗೂ ಚಿತ್ರದ ಜೋಡಣೆ; ಇವು ವಿಶ್ವವ್ಯಾಪಿ ಜಾಲದಲ್ಲಿ ವ್ಯಾಪಕವಾಗಿ ಕಾಣಸಿಗುತ್ತವೆ.
Long Description: ಯಾವುದೋ ವಿಷಯಕ್ಕೆ ಸಂಬಂಧಪಟ್ಟ ಒಂದು ಚಿತ್ರ, ಅದರ ಮೇಲೆ-ಕೆಳಗೆ ಒಂದೆರಡು ಸಾಲಿನ ಬರಹ ಇರುವ ಹಲವಾರು ಪೋಸ್ಟುಗಳು ಸಮಾಜಜಾಲಗಳಲ್ಲಿ ಹರಿದಾಡುವುದನ್ನು ನೀವು ನೋಡಿರಬಹುದು. ಸಿನಿಮಾಗಳು, ನಟ ನಟಿಯರು, ಕ್ರೀಡೆ, ಟೀವಿ ಕಾರ್ಯಕ್ರಮ, ಪ್ರಚಲಿತ ವಿದ್ಯಮಾನ – ಹೀಗೆ ಇಂತಹ ಚಿತ್ರರೂಪದ ಪೋಸ್ಟುಗಳು ಹಲವು ವಿಷಯಗಳ ಕುರಿತು ಇರಬಹುದು. ಇಂಟರ್‌ನೆಟ್ ಮೀಮ್‌ಗಳೆಂದು ಕರೆಯುವುದು ಇವನ್ನೇ.
ಸಮಾಜಜಾಲದ ಗುಂಪುಗಳಲ್ಲಿ ಮೊದಲಿಗೆ ಕಾಣಿಸಿಕೊಂಡು ಒಬ್ಬ ಬಳಕೆದಾರನಿಂದ ಇನ್ನೊಬ್ಬರಿಗೆ, ಒಂದು ಗುಂಪಿನಿಂದ ಇನ್ನೊಂದಕ್ಕೆ ಪ್ರಸಾರವಾಗುತ್ತ ಸಾಗುವುದು ಮೀಮ್‌ಗಳ ವೈಶಿಷ್ಟ್ಯ. ಇವುಗಳಲ್ಲಿ ಬಳಕೆಯಾಗುವ ಬರಹದ ಶೈಲಿಯಲ್ಲಿ ತಿಳಿಹಾಸ್ಯದಿಂದ ಅಪಹಾಸ್ಯದವರೆಗೆ ಅನೇಕ ಛಾಯೆಗಳನ್ನು ನೋಡಬಹುದು. ನಗೆಯುಕ್ಕಿಸುವ ಮೀಮ್‌ಗಳು ಕಾಣಸಿಗುವಂತೆಯೇ ದ್ವೇಷಸಾಧನೆ ಹಾಗೂ ಇತರರ ಅವಹೇಳನವನ್ನೇ ಗುರಿಯಾಗಿಟ್ಟುಕೊಂಡ ಮೀಮ್‌ಗಳೂ ವ್ಯಾಪಕವಾಗಿ ಸಿಗುತ್ತವೆ. ದೇಶ – ಭಾಷೆ – ರಾಜಕೀಯ ಅಭಿಪ್ರಾಯಗಳಲ್ಲಿನ ವೈರುಧ್ಯದಿಂದ ಹಲವು ಮೀಮ್‌ಗಳು ವಿವಾದಕ್ಕೆ ಕಾರಣವಾಗಿರುವುದೂ ಉಂಟು.
ಫೇಸ್‌ಬುಕ್ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಕನ್ನಡದ ಮೀಮ್‌ಗಳಿಗೆಂದೇ ಮೀಸಲಾದ ಹಲವು ಪುಟಗಳನ್ನು ನಾವು ನೋಡಬಹುದು. ವಿದೇಶಿ ಮೂಲದ ಛಾಯಾಚಿತ್ರಗಳಿಗೆ ಕನ್ನಡ ಪಠ್ಯ ಸೇರಿಸಿರುವ, ಕನ್ನಡದ ಸಂದರ್ಭಕ್ಕೆಂದೇ ಹೊಸದಾಗಿ ರೂಪಿಸಿರುವ ಅನೇಕ ಮೀಮ್‌ಗಳನ್ನು ನಾವು ಇಲ್ಲಿ ನೋಡಬಹುದು.
ಇತರರು ರೂಪಿಸಿದ ಮೀಮ್‌ಗಳನ್ನು ನೋಡಿದರಷ್ಟೇ ಸಾಲದು, ನಾವೂ ಮೀಮ್ ಸೃಷ್ಟಿಸಬೇಕು ಎನ್ನುವುದಾದರೆ ಅದೂ ಸುಲಭ: ಯಾವುದೇ ಚಿತ್ರಕ್ಕೆ ನಮ್ಮ ಪಠ್ಯ ಸೇರಿಸಿ ಮೀಮ್‌ಗಳನ್ನು ಸೃಷ್ಟಿಸಲು ನೆರವಾಗುವ ಹಲವು ತಂತ್ರಾಂಶಗಳು ವಿಶ್ವವ್ಯಾಪಿ ಜಾಲದಲ್ಲಿ ಉಚಿತವಾಗಿ ದೊರಕುತ್ತವೆ.

Moore’s Law

ಮೂರ್ ನಿಯಮ
Kannada Equivalent: (ರೂಪಿಸಬೇಕಿದೆ)
Short Description : ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ವೇಗವನ್ನು ೧೯೬೫ರಷ್ಟು ಹಿಂದೆಯೇ ಸಮರ್ಥವಾಗಿ ಅಂದಾಜಿಸಿದ ಹೇಳಿಕೆ
Long Description: ಕಂಪ್ಯೂಟರ್ ಅಷ್ಟೇ ಅಲ್ಲ, ಯಾವ ವಿದ್ಯುನ್ಮಾನ ಉಪಕರಣವನ್ನೇ ತೆಗೆದುಕೊಂಡರೂ ಅದರ ಮೆದುಳು-ಹೃದಯದ ಕೆಲಸವನ್ನೆಲ್ಲ ಮಾಡಲು ಕನಿಷ್ಠ ಒಂದಾದರೂ ಇಂಟಿಗ್ರೇಟೆಡ್ ಸರ್ಕ್ಯೂಟ್ (ಐಸಿ) ಇರುತ್ತದೆ; ಕಂಪ್ಯೂಟರಿನಲ್ಲಿ ಪ್ರಾಸೆಸರ್ ಇರುತ್ತದಲ್ಲ, ಹಾಗೆ. ಈ ಐಸಿಗಳಲ್ಲಿ ಬೇಕಾದಷ್ಟು ಟ್ರಾನ್ಸಿಸ್ಟರುಗಳಿರುತ್ತವೆ. ಸಾವಿರಗಳಷ್ಟೆ ಏಕೆ, ಲಕ್ಷಗಟ್ಟಲೆ ಟ್ರಾನ್ಸಿಸ್ಟರುಗಳು ಇಂತಹ ಐಸಿಗಳೊಳಗೆ ಅಡಕವಾಗಿರುತ್ತವೆ. ಒಂದು ಐಸಿಯಲ್ಲಿ ಹೆಚ್ಚುಹೆಚ್ಚು ಟ್ರಾನ್ಸಿಸ್ಟರುಗಳನ್ನು ಸೇರಿಸುವುದು ಸಾಧ್ಯವಾದಷ್ಟೂ ಆ ಐಸಿ ಬಳಸುವ ಉಪಕರಣದ ಗಾತ್ರ ಚಿಕ್ಕದಾಗುತ್ತದೆ; ಅಷ್ಟೇ ಅಲ್ಲ, ಅದರ ಕಾರ್ಯಕ್ಷಮತೆ ಕೂಡ ಹೆಚ್ಚುತ್ತದೆ.
ಏಪ್ರಿಲ್ ೧೯೬೫ರ ‘ಇಲೆಕ್ಟ್ರಾನಿಕ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಪ್ರತಿಯೊಂದು ಐಸಿಯಲ್ಲಿ ಅಡಕವಾಗುವ ಟ್ರಾನ್ಸಿಸ್ಟರುಗಳ ಸಂಖ್ಯೆಯ ಬಗೆಗೊಂದು ಹೇಳಿಕೆ ದಾಖಲಾಗಿತ್ತು. ಆ ಲೇಖನ ಬರೆದವರು ಇಂಟೆಲ್ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಗಾರ್ಡನ್ ಮೂರ್. ಐಸಿಗಳಲ್ಲಿರುವ ಟ್ರಾನ್ಸಿಸ್ಟರುಗಳ ಸಂಖ್ಯೆ ಸರಿಸುಮಾರು ಎರಡು ವರ್ಷಗಳಿಗೊಮ್ಮೆಯಂತೆ ದ್ವಿಗುಣಗೊಳ್ಳುತ್ತದೆ ಎನ್ನುವ ಈ ಹೇಳಿಕೆಯೇ ಮುಂದೆ ‘ಮೂರ್ ನಿಯಮ’ (Moore’s Law) ಎಂದು ವಿಖ್ಯಾತವಾಯಿತು. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ವೇಗವನ್ನು ಅತ್ಯಂತ ಸಮರ್ಥವಾಗಿ ಅಂದಾಜಿಸಿದ್ದು ಈ ನಿಯಮದ ಹೆಚ್ಚುಗಾರಿಕೆ.

Metadata

ಮೆಟಾಡೇಟಾ
Kannada Equivalent: (ರೂಪಿಸಬೇಕಿದೆ)
Short Description : ದತ್ತಾಂಶದ ಕುರಿತ ದತ್ತಾಂಶ
Long Description: ಡೇಟಾ ಅಥವಾ ದತ್ತಾಂಶ ಎಂದತಕ್ಷಣ ನಮಗೆ ಹಲವಾರು ಸಂಗತಿಗಳು ನೆನಪಾಗುವುದು ಸಹಜ. ಬ್ಯಾಂಕಿನ ಜಮಾ-ಖರ್ಚು, ತಿಂಗಳ ದಿನಸಿಯ ಪಟ್ಟಿ, ಪರೀಕ್ಷೆಯಲ್ಲಿ ಪಡೆದ ಅಂಕ – ಹೀಗೆ ಒಂದಲ್ಲ ಒಂದು ಬಗೆಯ ದತ್ತಾಂಶ ನಮ್ಮ ಮನಸಿನಲ್ಲಿರುತ್ತದೆ (ಮೊಬೈಲಿನಲ್ಲಿ ಎಷ್ಟು ಡೇಟಾ ಖರ್ಚಾಯಿತು ಎನ್ನುವುದೂ ದತ್ತಾಂಶವೇ!). ಸಂಸ್ಥೆಗಳ ಲಾಭ-ನಷ್ಟದ ಲೆಕ್ಕ, ಶೇರು ಬೆಲೆಯ ಏರಿಳಿತ, ಉದ್ಯೋಗಿಗಳ ವಿವರಗಳೂ ದತ್ತಾಂಶಗಳೇ.
ಈ ದತ್ತಾಂಶಗಳನ್ನೆಲ್ಲ ಕಂಪ್ಯೂಟರಿನಲ್ಲಿ ಉಳಿಸಿಡುವುದು, ಅಗತ್ಯಕ್ಕೆ ತಕ್ಕಂತೆ ಸಂಸ್ಕರಿಸುವುದು ಸಾಮಾನ್ಯ ಸಂಗತಿ. ಆದರೆ ಹೀಗೆ ಅಲ್ಲಿ ಸಂಗ್ರಹವಾಗುವ ದತ್ತಾಂಶದ ಕುರಿತು ಇನ್ನಷ್ಟು ದತ್ತಾಂಶ ಸೃಷ್ಟಿಯಾಗುತ್ತದೆ ಎನ್ನುವುದು ವಿಶೇಷ.
ಈ ತಿಂಗಳ ದಿನಸಿ ಪಟ್ಟಿಯನ್ನು ಒಂದು ಕಡತದಲ್ಲಿ ಉಳಿಸಿಟ್ಟಿದ್ದೀರಿ ಎಂದುಕೊಳ್ಳೋಣ. ಆ ಕಡತದ ಹೆಸರೇನು, ಗಾತ್ರವೆಷ್ಟು, ಅದನ್ನು ರೂಪಿಸಿದ್ದು ಯಾರು, ಯಾವಾಗ ಎಂಬಂತಹ ವಿವರಗಳನ್ನೂ ನೀವು ಬಳಸಿದ ತಂತ್ರಾಂಶ ಆ ಕಡತದ ಜೊತೆಯಲ್ಲಿ ಉಳಿಸಿಡುತ್ತದೆ. ಅಂದರೆ, ನಿಮ್ಮ ದತ್ತಾಂಶದ ಕುರಿತ ದತ್ತಾಂಶ ಇದು. ತಾಂತ್ರಿಕ ಪರಿಭಾಷೆಯಲ್ಲಿ ಇದನ್ನು ‘ಮೆಟಾಡೇಟಾ’ ಎಂದು ಕರೆಯುತ್ತಾರೆ.
ಅಂದಹಾಗೆ ಮೆಟಾಡೇಟಾ ಇರುವುದು ಕಡತಗಳ ಕುರಿತು ಮಾತ್ರವೇನಲ್ಲ. ವೆಬ್ ಪುಟಗಳಲ್ಲಿ ಹಾಗೂ ದತ್ತಸಂಚಯಗಳಲ್ಲಿ (ಡೇಟಾಬೇಸ್) ಕೂಡ ಮೆಟಾಡೇಟಾ ಬಳಕೆ ಸಾಮಾನ್ಯ.

Memory

ಮೆಮೊರಿ
Kannada Equivalent: (ರೂಪಿಸಬೇಕಿದೆ)
Short Description : ಮಾಹಿತಿ ಶೇಖರಿಸುವ ಮಾಧ್ಯಮ
Long Description: ಕಂಪ್ಯೂಟರ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್ ಇತ್ಯಾದಿಗಳನ್ನು ಬಳಸುವಷ್ಟೂ ಹೊತ್ತು ನಾವು ಒಂದಲ್ಲ ಒಂದು ಬಗೆಯ ಮಾಹಿತಿಯೊಡನೆ ವ್ಯವಹರಿಸುತ್ತೇವೆ. ವಿವಿಧ ತಂತ್ರಾಂಶಗಳನ್ನು ಬಳಸುತ್ತೇವೆ, ಇನ್‌ಪುಟ್ ರೂಪದ ಮಾಹಿತಿ ನೀಡುತ್ತೇವೆ, ಅವುಗಳಿಂದ ಔಟ್‌ಪುಟ್ ಪಡೆದುಕೊಳ್ಳುತ್ತೇವೆ, ಅಗತ್ಯವಾದುದನ್ನು ಉಳಿಸಿಡುತ್ತೇವೆ – ಹೀಗೆ. ಈ ಮಾಹಿತಿಯೆಲ್ಲ ಶೇಖರವಾಗುವುದು ‘ಮೆಮೊರಿ’ಯಲ್ಲಿ.
ಈ ಮೆಮೊರಿ ಹೆಚ್ಚೂಕಡಿಮೆ ನಮ್ಮ ನೆನಪಿನ ಶಕ್ತಿಯಂತೆಯೇ. ಈಗ ಹೊಸದಾಗಿ ಪರಿಚಯವಾದವರೊಬ್ಬರು ನಿಮಗೆ ಅವರ ದೂರವಾಣಿ ಸಂಖ್ಯೆಯನ್ನು ಹೇಳಿದರು ಎಂದುಕೊಳ್ಳೋಣ. ಆ ಸಂಖ್ಯೆಯನ್ನು ಮೊಬೈಲಿನ ಅಡ್ರೆಸ್ ಬುಕ್‌ಗೆ ಸೇರಿಸಿಕೊಳ್ಳುವವರೆಗೆ ಮಾತ್ರ ನೀವು ನೆನಪಿಟ್ಟುಕೊಂಡರೆ ಸಾಕು. ಆಮೇಲೆ ಮರೆತರೂ ಚಿಂತೆಯಿಲ್ಲ. ಬೇಕಾದಾಗ ನೋಡಿಕೊಳ್ಳಲು, ಕರೆಮಾಡಲು ಆ ದೂರವಾಣಿ ಸಂಖ್ಯೆ ಅಡ್ರೆಸ್ ಬುಕ್‌ನಲ್ಲಿ ಭದ್ರವಾಗಿರುತ್ತದಲ್ಲ!
ಕಂಪ್ಯೂಟರ್-ಸ್ಮಾರ್ಟ್‌ಫೋನ್ ಇತ್ಯಾದಿಗಳಲ್ಲೂ ಹಾಗೆಯೇ. ತಕ್ಷಣಕ್ಕೆ ಬೇಕಾದದ್ದೆಲ್ಲ ನೆನಪಿಟ್ಟುಕೊಳ್ಳಲು ಅಲ್ಲಿ ‘ಪ್ರೈಮರಿ ಮೆಮೊರಿ’ ಇರುತ್ತದೆ. ಈ ಕ್ಷಣದಲ್ಲೇ ಬೇಕಾಗದ ವಿಷಯಗಳು ಸೆಕಂಡರಿ ಮೆಮೊರಿಯಲ್ಲಿ ಶೇಖರವಾಗುತ್ತವೆ; ಮೊಬೈಲ್ ಸಂಖ್ಯೆಯನ್ನು ಅಡ್ರೆಸ್ ಬುಕ್‌ಗೆ ಸೇರಿಸಿಟ್ಟುಕೊಂಡಂತೆ!
ಪ್ರೈಮರಿ ಮೆಮೊರಿಗೆ ರ್‍ಯಾಮ್ ಒಂದು ಉದಾಹರಣೆ. ಕಂಪ್ಯೂಟರ್‌ಗೆ ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ರ್‍ಯಾಮ್‌ನಲ್ಲಿರುವ ಸಂಗತಿಗಳೆಲ್ಲ ಉಳಿದಿರುತ್ತವೆ. ರೀಡ್ ಓನ್ಲಿ ಮೆಮೊರಿ ಅಥವಾ ರಾಮ್ ಕೂಡ ಪ್ರೈಮರಿ ಮೆಮೊರಿಯೇ. ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಇತ್ಯಾದಿಗಳೆಲ್ಲ ಸೆಕೆಂಡರಿ ಮೆಮೊರಿಗೆ ಉದಾಹರಣೆಗಳು.

Memory Card

ಮೆಮೊರಿ ಕಾರ್ಡ್
Kannada Equivalent: (ರೂಪಿಸಬೇಕಿದೆ)
Short Description : ಮಾಹಿತಿ ಶೇಖರಣಾ ಮಾಧ್ಯಮಗಳಲ್ಲೊಂದು; ಬಿಲ್ಲೆಯಂತಹ ಆಕಾರದಿಂದಾಗಿ ಇವನ್ನು ಮೆಮೊರಿ ‘ಕಾರ್ಡ್’ ಎಂದು ಕರೆಯುತ್ತಾರೆ.
Long Description: ಡಿಜಿಟಲ್ ಕ್ಯಾಮೆರಾ ಹಾಗೂ ಮೊಬೈಲ್ ಫೋನ್ ಬಳಸುವವರಿಗೆಲ್ಲ ಮೆಮೊರಿ ಕಾರ್ಡುಗಳ ಪರಿಚಯ ಚೆನ್ನಾಗಿಯೇ ಇರುತ್ತದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳನ್ನು ಉಳಿಸಿಡಲು, ಮೊಬೈಲಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಾವು ಇವನ್ನು ಬಳಸುತ್ತೇವೆ. ಟ್ಯಾಬ್ಲೆಟ್ ಕಂಪ್ಯೂಟರುಗಳಲ್ಲಿ, ಎಂಪಿ೩ ಪ್ಲೇಯರಿನಲ್ಲಿ, ಕಾರ್ ಸ್ಟೀರಿಯೋ – ನ್ಯಾವಿಗೇಶನ್ ವ್ಯವಸ್ಥೆಗಳಲ್ಲೂ ಮೆಮೊರಿ ಕಾರ್ಡುಗಳು ಬಳಕೆಯಾಗುತ್ತವೆ.
ಮೆಮೊರಿ ಕಾರ್ಡುಗಳಲ್ಲಿ ಹಲವು ಬಗೆ. ಬೇರೆಬೇರೆ ರೀತಿಯ ಕಾರ್ಡುಗಳ ಗಾತ್ರ-ಆಕಾರಗಳೂ ವಿಭಿನ್ನವಾಗಿರುತ್ತವೆ. ಮೆಮೊರಿ ಸ್ಟಿಕ್, ಕಾಂಪ್ಯಾಕ್ಟ್‌ಫ್ಲಾಶ್, ಸೆಕ್ಯೂರ್ ಡಿಜಿಟಲ್ (ಎಸ್‌ಡಿ) ಇತ್ಯಾದಿಗಳೆಲ್ಲ ಮೆಮೊರಿ ಕಾರ್ಡ್‌ನ ವಿವಿಧ ಅವತಾರಗಳ ಹೆಸರುಗಳು.
ಕೆಲವು ವರ್ಷಗಳ ಹಿಂದೆ ಬೇರೆಬೇರೆ ಸಂಸ್ಥೆಯ ಉತ್ಪನ್ನಗಳಲ್ಲಿ ಬೇರೆಬೇರೆ ರೀತಿಯ ಕಾರ್ಡುಗಳನ್ನು ಬಳಸಬೇಕಾದ ಪರಿಸ್ಥಿತಿ ಇತ್ತು. ಆದರೆ ಎಸ್‌ಡಿ ಕಾರ್ಡುಗಳ ಜನಪ್ರಿಯತೆ ಹೆಚ್ಚಿದಂತೆ ಈ ಪರಿಸ್ಥಿತಿ ಬದಲಾಗಿದೆ. ಬಹುತೇಕ ಎಲ್ಲ ಸಂಸ್ಥೆಯ ಉತ್ಪನ್ನಗಳಲ್ಲೂ ಇದೀಗ ಎಸ್‌ಡಿ ಕಾರ್ಡುಗಳು ಬಳಕೆಯಾಗುತ್ತವೆ. ನಾವು ಮೊಬೈಲಿನಲ್ಲಿ ಬಳಸುವ ಮೈಕ್ರೋ ಎಸ್‌ಡಿ ಕಾರ್ಡು ಇದೇ ಎಸ್‌ಡಿ ಕಾರ್ಡಿನ ಪುಟಾಣಿ ಆವೃತ್ತಿ.
ಮೆಮೊರಿ ಕಾರ್ಡುಗಳು ಕೆಲಸಮಾಡುವ ವಿಧಾನ ನಮಗೆಲ್ಲ ಚಿರಪರಿಚಿತವಾದ ಪೆನ್ ಡ್ರೈವ್‌ಗಳ ಕಾರ್ಯವೈಖರಿಯನ್ನೇ ಹೋಲುತ್ತದೆ. ಆದರೆ ಮೆಮೊರಿ ಕಾರ್ಡನ್ನು ಪೆನ್ ಡ್ರೈವ್‌ಗಳ ಹಾಗೆ ನೇರವಾಗಿ ಯುಎಸ್‌ಬಿ ಮೂಲಕ ಜೋಡಿಸಲಾಗುವುದಿಲ್ಲ ಎನ್ನುವುದೇ ದೊಡ್ಡ ವ್ಯತ್ಯಾಸ. ಮೆಮೊರಿ ಕಾರ್ಡುಗಳನ್ನು ಕಂಪ್ಯೂಟರಿಗೋ ಸ್ಮಾರ್ಟ್‌ಫೋನಿಗೋ ಟೀವಿಗೋ ಸಂಪರ್ಕಿಸಲು ಕಾರ್ಡ್ ರೀಡರ್‌ನಂತಹ ಮಧ್ಯವರ್ತಿಯೊಂದು ಬೇಕೇ ಬೇಕು.

Mail Server

ಮೇಲ್ ಸರ್ವರ್
Kannada Equivalent: (ರೂಪಿಸಬೇಕಿದೆ)
Short Description : ಬಳಕೆದಾರರು ಕಳಿಸಿದ ಇಮೇಲ್ ಸಂದೇಶಗಳನ್ನು ವಿಳಾಸದಾರರಿಗೆ ತಲುಪಿಸಲು, ಬೇರೆಯವರಿಂದ ಬಂದ ಸಂದೇಶಗಳನ್ನು ಅವರಿಗೆ ತಲುಪಿಸಲು ಬಳಕೆಯಾಗುವ ಸರ್ವರ್
Long Description: ಜಾಲತಾಣದಲ್ಲಿರುವ ಮಾಹಿತಿ ಅಲ್ಲಿಗೆ ಭೇಟಿಕೊಡುವ ಗ್ರಾಹಕರ ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಕಾಣಿಸಿಕೊಳ್ಳಬೇಕೆಂದರೆ ಅದು ಯಾವುದೋ ಕಂಪ್ಯೂಟರಿನಿಂದ ಅಲ್ಲಿಗೆ ವರ್ಗಾವಣೆಯಾಗಬೇಕು. ಬಳಕೆದಾರರ ಬೇಡಿಕೆಯನ್ನು ಪಡೆದುಕೊಂಡು ಅವರಿಗೆ ಬೇಕಾದ ಮಾಹಿತಿಯನ್ನು ಪೂರೈಸುವ ಇಂತಹ ಕಂಪ್ಯೂಟರುಗಳನ್ನು ‘ಸರ್ವರ್’ಗಳೆಂದು ಕರೆಯುತ್ತಾರೆ.
ಇಮೇಲ್ ವ್ಯವಸ್ಥೆಯಲ್ಲಿಯೂ ಹೀಗೆಯೇ. ಬಳಕೆದಾರರು ಕಳಿಸಿದ ಸಂದೇಶಗಳನ್ನು ವಿಳಾಸದಾರರಿಗೆ ತಲುಪಿಸಲು, ಬೇರೆಯವರಿಂದ ಬಂದ ಸಂದೇಶಗಳನ್ನು ಅವರಿಗೆ ತಲುಪಿಸಲು ವಿಶೇಷ ಕಂಪ್ಯೂಟರುಗಳು ಬಳಕೆಯಾಗುತ್ತವೆ. ಇಂತಹ ಕಂಪ್ಯೂಟರುಗಳಿಗೆ ‘ಮೇಲ್ ಸರ್ವರ್’ ಅಥವಾ ‘ಇಮೇಲ್ ಸರ್ವರ್’ಗಳೆಂದು ಹೆಸರು.
ಎಸ್‌ಎಂಟಿಪಿ, ಐಎಂಎಪಿ, ಪಿಓಪಿ೩ ಮುಂತಾದ ನಿರ್ದಿಷ್ಟ ಶಿಷ್ಟಾಚಾರಗಳನ್ನು (ಪ್ರೋಟೋಕಾಲ್) ಪಾಲಿಸುವ ಮೂಲಕ ಇವು ಇಮೇಲ್ ಸಂದೇಶಗಳ ವಿನಿಮಯವನ್ನು ಸಾಧ್ಯವಾಗಿಸುತ್ತವೆ. ಈ ಪೈಕಿ ಇಮೇಲ್ ಸಂದೇಶಗಳನ್ನು ರವಾನಿಸಲು ಎಸ್‌ಎಂಟಿಪಿ (ಸಿಂಪಲ್ ಮೇಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್) ಬಳಕೆಯಾದರೆ ಸಂದೇಶಗಳನ್ನು ಪಡೆದುಕೊಳ್ಳಲು ಐಎಂಎಪಿ (ಇಂಟರ್‌ನೆಟ್ ಮೆಸೇಜ್ ಆಕ್ಸೆಸ್ ಪ್ರೋಟೋಕಾಲ್ – ಐಮ್ಯಾಪ್) ಹಾಗೂ ಪಿಓಪಿ೩ (ಪೋಸ್ಟ್ ಆಫೀಸ್ ಪ್ರೋಟೋಕಾಲ್೩ – ಪಾಪ್೩) ಬಳಕೆಯಾಗುತ್ತವೆ.
ಇಮೇಲ್ ಸಂದೇಶಗಳನ್ನಷ್ಟೇ ಅಲ್ಲ, ಇಮೇಲ್ ವಿಳಾಸಗಳನ್ನು ನಿಭಾಯಿಸುವುದೂ ಈ ಕಂಪ್ಯೂಟರಿನದೇ ಕೆಲಸ. ಇಲ್ಲಿರುವ ಮೇಲ್ ಸರ್ವರ್ ತಂತ್ರಾಂಶ ಹೊಸ ಇಮೇಲ್ ವಿಳಾಸಗಳನ್ನು ರೂಪಿಸುವುದು ಹಾಗೂ ಬಳಸುವುದನ್ನು ಸಾಧ್ಯವಾಗಿಸುತ್ತದೆ. ಜಿಮೇಲ್‌ನಂತಹ ಜಾಲತಾಣಗಳನ್ನು, ಔಟ್‌ಲುಕ್‌ನಂತಹ ತಂತ್ರಾಂಶಗಳನ್ನು ಇಮೇಲ್ ಗ್ರಾಹಕರಾದ ನಾವು ಬಳಸುತ್ತೇವಲ್ಲ, ಅವನ್ನು ಇಮೇಲ್ ಕ್ಲೈಂಟ್‌ಗಳೆಂದು ಗುರುತಿಸಲಾಗುತ್ತದೆ.

Micro PC

ಮೈಕ್ರೋ ಪಿಸಿ
Kannada Equivalent: (ರೂಪಿಸಬೇಕಿದೆ)
Short Description : ಪೆನ್‌ಡ್ರೈವ್‌ನಂತಹ ಸಾಧನದೊಳಗೆ ಅಡಕವಾಗಿರುವ ಕಂಪ್ಯೂಟರ್
Long Description: ಕಂಪ್ಯೂಟರುಗಳು ಮೊದಲಿಗೆ ಕಾಣಿಸಿಕೊಂಡಾಗ ಕೋಣೆಯ ತುಂಬ ತುಂಬಿಕೊಂಡಿರುತ್ತಿದ್ದವಂತೆ. ಆಮೇಲೆ ನಿಧಾನಕ್ಕೆ ಅವುಗಳ ಗಾತ್ರ ಕಡಿಮೆಯಾಗುತ್ತ ಬಂದು ಈಗ ಲ್ಯಾಪ್‌ಟಾಪು, ಟ್ಯಾಬ್ಲೆಟ್ಟು, ಸ್ಮಾರ್ಟ್‌ಫೋನುಗಳೆಲ್ಲ ನಮ್ಮನ್ನು ತಲುಪಿವೆ.
ಕಂಪ್ಯೂಟರಿನ ಗಾತ್ರ ಇದಕ್ಕಿಂತ ಚಿಕ್ಕದಾದರೆ ಹೇಗಿರಬಹುದು? ಮನೆಯ ಟೀವಿಗೆ ಪೆನ್‌ಡ್ರೈವ್ ಜೋಡಿಸಿ ಫೋಟೋ – ವೀಡಿಯೋ ನೋಡಿದಂತೆ ಈ ಪುಟ್ಟ ಕಂಪ್ಯೂಟರನ್ನು ಚುಚ್ಚಿ ಟೀವಿಯನ್ನೇ ಕಂಪ್ಯೂಟರ್ ಮಾಡಿಕೊಂಡುಬಿಡಬಹುದು!
ವಿಚಿತ್ರವೆನಿಸುವ ಈ ಆಲೋಚನೆಯನ್ನು ಸಾಧ್ಯವಾಗಿಸಿರುವುದು ‘ಮೈಕ್ರೋ ಪಿಸಿ’ಗಳು. ಈ ಪುಟ್ಟ ಕಂಪ್ಯೂಟರುಗಳನ್ನು ಎಚ್‌ಡಿಎಂಐ ಪೋರ್ಟ್ (ಎಚ್‌ಡಿ ಸೆಟ್‌ಟಾಪ್ ಬಾಕ್ಸ್ ಜೋಡಿಸಲು ಬಳಕೆಯಾಗುತ್ತದಲ್ಲ, ಯುಎಸ್‌ಬಿ ಪೋರ್ಟ್‌ನಂತಹುದೇ ಕಿಂಡಿ) ಇರುವ ಯಾವುದೇ ಟೀವಿಗೆ ಸುಲಭವಾಗಿ ಜೋಡಿಸಬಹುದು. ಈ ಸಾಧನ, ಅಂತರಜಾಲ ಸಂಪರ್ಕ ಹಾಗೂ ಕೀಬೋರ್ಡ್ – ಮೌಸ್ ಇದ್ದರೆ ಸಾಕು, ಮನೆಯ ಟೀವಿಯೇ ಕಂಪ್ಯೂಟರ್ ಆಗಿ ಬದಲಾಗುತ್ತದೆ (ಮೈಕ್ರೋ ಪಿಸಿಗೆ ವಿದ್ಯುತ್ ಸಂಪರ್ಕ ನೀಡಲು ಪ್ರತ್ಯೇಕ ಅಡಾಪ್ಟರ್ ಅನ್ನೂ ಬಳಸಬೇಕು).
ಮೈಕ್ರೋ ಪಿಸಿಗಳ ಶೇಖರಣಾ ಸಾಮರ್ಥ್ಯ ಕಡಿಮೆಯಿರುವುದರಿಂದ ತಂತ್ರಾಂಶಗಳೂ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಅವು ಅಂತರಜಾಲ ಸಂಪರ್ಕವನ್ನು ಅವಲಂಬಿಸಿರುತ್ತವೆ. ಇದೇ ಕಾರಣದಿಂದಾಗಿ ದೊಡ್ಡಗಾತ್ರದ ಕಡತಗಳನ್ನು ಕಂಪ್ಯೂಟರಿನ ಹೊರಗೆ (ಪೆನ್‌ಡ್ರೈವ್, ಹಾರ್ಡ್ ಡಿಸ್ಕ್, ಗೂಗಲ್ ಡ್ರೈವ್ ಮುಂತಾದೆಡೆ) ಉಳಿಸಿಡಬೇಕಾದ್ದು ಅನಿವಾರ್ಯ.
ಇಂಟೆಲ್‌ನ ‘ಕಂಪ್ಯೂಟ್ ಸ್ಟಿಕ್’, ಗೂಗಲ್‌ನ ‘ಕ್ರೋಮ್‌ಬಿಟ್’ ಸೇರಿದಂತೆ ಅನೇಕ ಮಾದರಿಯ ಮೈಕ್ರೋ ಪಿಸಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ದೊರಕುತ್ತಿವೆ.

Microsite

ಮೈಕ್ರೋಸೈಟ್
Kannada Equivalent: (ರೂಪಿಸಬೇಕಿದೆ)
Short Description : ಸಂಸ್ಥೆಯೊಂದರ ಮೂಲ ಜಾಲತಾಣಕ್ಕೆ ಪೂರಕವಾಗಿ ರೂಪಿಸಲಾಗಿರುವ ಜಾಲತಾಣ; ಇವುಗಳಲ್ಲಿ ಆ ಸಂಸ್ಥೆಯ ನಿರ್ದಿಷ್ಟ ಚಟುವಟಿಕೆಯೊಂದಕ್ಕೆ ಸಂಬಂಧಪಟ್ಟ ಮಾಹಿತಿ ಮಾತ್ರ ಇರುತ್ತದೆ.
Long Description: ವಾಣಿಜ್ಯ ಸಂಸ್ಥೆಗಳು ವಿವಿಧ ಉದ್ದೇಶಗಳಿಗಾಗಿ ಜಾಲತಾಣ, ಅಂದರೆ ವೆಬ್‌ಸೈಟ್‌ಗಳನ್ನು ನಿರ್ಮಿಸಿಕೊಳ್ಳುವುದು ನಮಗೆ ಗೊತ್ತೇ ಇದೆ. ಆಯಾ ಸಂಸ್ಥೆಗೆ ಸಂಬಂಧಪಟ್ಟ ಒಂದಷ್ಟು ಸಾಮಾನ್ಯ ಮಾಹಿತಿ ಇಂತಹ ತಾಣಗಳಲ್ಲಿರುತ್ತದೆ.
ಇದರ ಜೊತೆಗೆ ವಿಶೇಷ ಸನ್ನಿವೇಶಗಳಲ್ಲಿ ಮಾತ್ರವೇ ಪ್ರಸ್ತುತವೆನಿಸುವ (ಉದಾ: ಕಾರ್ಯಕ್ರಮಗಳನ್ನು ಆಯೋಜಿಸಿದಾಗ, ಕೊಡುಗೆಗಳನ್ನು ಘೋಷಿಸಿದಾಗ) ಮಾಹಿತಿಯನ್ನೂ ಪ್ರಕಟಿಸಬೇಕಾದ ಅಗತ್ಯ ಸಂಸ್ಥೆಗಳಿಗೆ ಆಗಾಗ್ಗೆ ಒದಗಿಬರುವುದು ಸಾಧ್ಯ. ಇಂತಹ ಮಾಹಿತಿ ಪ್ರಕಟಿಸಲು ಅವು ರೂಪಿಸಿಕೊಳ್ಳುವ ಹೊಸ ಜಾಲತಾಣಗಳನ್ನು ‘ಮೈಕ್ರೋಸೈಟ್’ ಎಂದು ಗುರುತಿಸುತ್ತಾರೆ. ಉಚಿತ ಕೊಡುಗೆ ಪಡೆಯಲಿಕ್ಕೋ ಯಾವುದೋ ಸ್ಪರ್ಧೆಯಲ್ಲಿ ಭಾಗವಹಿಸಲಿಕ್ಕೋ ಇಂತಹ ಜಾಲತಾಣಕ್ಕೆ ಹೋಗಿ ಎಂದು ಸಂಸ್ಥೆಗಳು ಜಾಹೀರಾತು ನೀಡುತ್ತವಲ್ಲ, ಅಂತಹ ಬಹುತೇಕ ತಾಣಗಳು ಮೈಕ್ರೋಸೈಟ್‌ಗಳೇ ಆಗಿರುತ್ತವೆ.
ಮೂಲ ಸಂಸ್ಥೆಯ ಒಡೆತನದಲ್ಲಿರುವ ಜಾಲತಾಣವೇ ಆದರೂ ಮೈಕ್ರೋಸೈಟ್‌ಗಳಲ್ಲಿರುವುದು ಆ ಸಂಸ್ಥೆಯ ನಿರ್ದಿಷ್ಟ ಚಟುವಟಿಕೆಯೊಂದಕ್ಕೆ ಸಂಬಂಧಪಟ್ಟ ಮಾಹಿತಿ ಮಾತ್ರ. ಮೂಲ ಜಾಲತಾಣಕ್ಕೆ ಹೋಲಿಸಿದರೆ ಮೈಕ್ರೋಸೈಟ್‌ನಲ್ಲಿರುವ ಪುಟಗಳ ಸಂಖ್ಯೆಯೂ ಕಡಿಮೆಯೇ. ಕೆಲವು ಮೈಕ್ರೋಸೈಟ್‌ಗಳು ಸಂಸ್ಥೆಯ ಜಾಲತಾಣದ ಸಬ್‌ಡೊಮೈನ್ ಅನ್ನು ಬಳಸಿದರೆ ಇನ್ನು ಕೆಲವು ಮೈಕ್ರೋಸೈಟ್‌ಗಳಿಗೆ ತಮ್ಮದೇ ಆದ ಪ್ರತ್ಯೇಕ ಡೊಮೈನ್ ನೇಮ್ ಇರುತ್ತದೆ.
ಮೈಕ್ರೋಸೈಟ್‌ಗಳನ್ನು ‘ಮಿನಿಸೈಟ್’ಗಳೆಂದು ಗುರುತಿಸುವ ಅಭ್ಯಾಸವೂ ಇದೆ. ಅಂದಹಾಗೆ ವೆಬ್‌ಸೈಟ್-ಮೈಕ್ರೋಸೈಟ್-ಮಿನಿಸೈಟ್‌ಗಳ ನಡುವಿನ ವ್ಯತ್ಯಾಸವೆಲ್ಲ ಏನಿದ್ದರೂ ಅವುಗಳ ಉದ್ದೇಶದಲ್ಲಿ ಮಾತ್ರ. ತಾಂತ್ರಿಕವಾಗಿ ಅವೆಲ್ಲವೂ ವೆಬ್‌ಸೈಟ್‌ಗಳೇ.

Modem

ಮೋಡೆಮ್
Kannada Equivalent: (ರೂಪಿಸಬೇಕಿದೆ)
Short Description : ‘ಮಾಡ್ಯುಲೇಟರ್-ಡಿಮಾಡ್ಯುಲೇಟರ್’ ಎನ್ನುವುದರ ಸಂಕ್ಷಿಪ್ತ ರೂಪ; ಅಂತರಜಾಲ ಸಂಪರ್ಕ ಪಡೆಯಲು ಅತ್ಯಗತ್ಯವಾಗಿ ಬೇಕಾದ ಸಾಧನ
Long Description: ಅಂತರಜಾಲ ಸಂಪರ್ಕ ಸಾಧಿಸಲು ಅತ್ಯಗತ್ಯವಾಗಿ ಬೇಕಾದ ಸಾಧನ ಮೋಡೆಮ್. ಈಗ ಹಲವು ಬಗೆಯ ಅಂತರಜಾಲ ಸಂಪರ್ಕಗಳನ್ನು ಪಡೆಯುವುದು ಸಾಧ್ಯವಿದೆಯಲ್ಲ, ಅಂತಹ ಪ್ರತಿಯೊಂದು ಬಗೆಯ ಸಂಪರ್ಕದಲ್ಲೂ ಅದಕ್ಕೆ ಸೂಕ್ತವಾದ ಮೋಡೆಮ್ ಬಳಕೆ ಅನಿವಾರ್ಯ.
ಮೋಡೆಮ್ ಎಂಬ ಹೆಸರು ‘ಮಾಡ್ಯುಲೇಟರ್-ಡಿಮಾಡ್ಯುಲೇಟರ್’ ಎನ್ನುವುದರ ಸಂಕ್ಷಿಪ್ತ ರೂಪ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಇತ್ಯಾದಿಗಳಿಂದ ಹೊರಹೋಗುವ ಡಿಜಿಟಲ್ ಮಾಹಿತಿಯನ್ನು ಅನಲಾಗ್ ರೂಪಕ್ಕೆ ಬದಲಿಸುವುದು, ಹಾಗೂ ಅನಲಾಗ್ ರೂಪದಲ್ಲಿ ಒಳಬರುವ ಮಾಹಿತಿಯನ್ನು ಕಂಪ್ಯೂಟರಿಗೆ ಅರ್ಥವಾಗುವ ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಈ ಸಾಧನದ ಕೆಲಸ.
ಅಂತರಜಾಲ ಬಂದ ಹೊಸತರಲ್ಲಿ ಮನೆಯಲ್ಲಿ ಇರುತ್ತಿದ್ದದ್ದು ಒಂದೇ ಕಂಪ್ಯೂಟರ್. ಮೋಡೆಮ್ ಸಂಪರ್ಕವನ್ನು ಅದಕ್ಕೆ ಜೋಡಿಸಿಬಿಟ್ಟರೆ ಕೆಲಸ ಅಷ್ಟಕ್ಕೇ ಮುಗಿಯುತ್ತಿತ್ತು. ಆದರೆ ಈಗ ‘ಸ್ಮಾರ್ಟ್’ ಸಾಧನಗಳು ಹೆಚ್ಚಾಗಿ ಮನೆತುಂಬಾ ಕಂಪ್ಯೂಟರುಗಳೇ ಆಗಿಬಿಟ್ಟಿವೆಯಲ್ಲ, ಹಾಗಾಗಿ ಅಂತರಜಾಲ ಸಂಪರ್ಕವನ್ನು ಅವಕ್ಕೆಲ್ಲ ಹಂಚಿಕೊಡುವ ಸಾಧನವೂ ಈಗ ಇರಬೇಕಾಗುತ್ತದೆ. ‘ರೂಟರ್’ ಎಂದು ಕರೆಯುವುದು ಇದೇ ಸಾಧನವನ್ನು. ವೈ-ಫೈ ಸೌಲಭ್ಯವಿರುವ ರೂಟರ್ ಅನ್ನು ಸಾಮಾನ್ಯ ಮೋಡೆಮ್‌ಗೆ ಜೋಡಿಸಿದರೆ ವೈ-ಫೈ ಸೌಲಭ್ಯ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.
ಮೋಡೆಮ್ ಹಾಗೂ ರೂಟರ್ ಎರಡರ ಕೆಲಸಗಳನ್ನೂ ಒಂದೇ ಸಾಧನ ಮಾಡುವುದು ಈಗ ಸಾಮಾನ್ಯ ಸಂಗತಿ. ನಮ್ಮ ಮನೆಗಳಲ್ಲಿ ವೈ-ಫೈ ಸೌಲಭ್ಯವಿರುತ್ತದಲ್ಲ, ಅಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸಿಕೊಡುವ ಮೋಡೆಮ್ ಹಾಗೂ ವೈ-ಫೈ ಮೂಲಕ ಬೇರೆಬೇರೆ ಸಾಧನಗಳಿಗೆ ಅದನ್ನು ಒದಗಿಸುವ ರೂಟರ್ ಎರಡೂ ಒಂದೇ ಸಾಧನದಲ್ಲಿ ಅಡಕವಾಗಿರುತ್ತದೆ. ಅಂತರಜಾಲ ಸಂಪರ್ಕ ಪಡೆದುಕೊಳ್ಳಲು, ಹಾಟ್‌ಸ್ಪಾಟ್ ಮೂಲಕ ಅದನ್ನು ಇತರ ಸಾಧನಗಳಿಗೆ ಹಂಚಲು ಇಂದಿನ ಸ್ಮಾರ್ಟ್‌ಫೋನುಗಳಲ್ಲೂ ಮೋಡೆಮ್-ರೂಟರ್ ಜೋಡಿ ಇರುತ್ತದೆ.

Mouse

ಮೌಸ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರ್ ಪರದೆಯ ಮೇಲೆ ಅತ್ತಿತ್ತ ಓಡಾಡಲು, ಕೊಂಡಿಗಳ ಮೇಲೆ ಕ್ಲಿಕ್ ಮಾಡಲು, ಕಡತಗಳನ್ನು ನಿಭಾಯಿಸಲು ನೆರವಾಗುವ ಸಾಧನ
Long Description: ವಿಶ್ವದೆಲ್ಲೆಡೆಯ ಕಂಪ್ಯೂಟರ್ ಬಳಕೆದಾರರ ಅಚ್ಚುಮೆಚ್ಚಿನ ಸಂಗಾತಿ ಮೌಸ್. ಕಂಪ್ಯೂಟರ್ ಪರದೆಯ ಮೇಲೆ ಅತ್ತಿತ್ತ ಓಡಾಡಲು, ಕೊಂಡಿಗಳ ಮೇಲೆ ಕ್ಲಿಕ್ ಮಾಡಲು, ಕಡತಗಳನ್ನು ನಿಭಾಯಿಸಲು ನೆರವಾಗುವ ಸಾಧನ ಇದು. ಕಂಪ್ಯೂಟರ್ ಬಳಕೆದಾರರು ಪಠ್ಯರೂಪದ ಆದೇಶಗಳನ್ನು ಟೈಪ್ ಮಾಡಬೇಕಿದ್ದ ಪರಿಸ್ಥಿತಿ (ಕ್ಯಾರೆಕ್ಟರ್ ಯೂಸರ್ ಇಂಟರ್‌ಫೇಸ್, ಸಿಯುಐ) ತಪ್ಪಿಸಿ ಚಿತ್ರಾತ್ಮಕ ಸಂಪರ್ಕ ಸಾಧನ (ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್, ಜಿಯುಐ) ಬಳಸುವುದನ್ನು ಸುಲಭವಾಗಿಸಿದ್ದು ಈ ಸಾಧನದ ಹೆಚ್ಚುಗಾರಿಕೆ.
ಗಟ್ಟಿಯಾದ ಯಾವುದೇ ಪದಾರ್ಥದ ಮೇಲೆ ಮೌಸ್ ಓಡಾಡಿಸಿದರೆ ಕಂಪ್ಯೂಟರ್ ಪರದೆಯ ಮೇಲಿನ ಮೌಸ್ ಪಾಯಿಂಟರ್ (ಕರ್ಸರ್) ಕೂಡ ಅದರಂತೆಯೇ ಓಡಾಡುವುದನ್ನು ನಾವು ನೋಡಿದ್ದೇವೆ. ಇಂದಿನ ಆಪ್ಟಿಕಲ್ ಮೌಸ್‌ಗಳಲ್ಲಿ ಇದು ಸಾಧ್ಯವಾಗುವುದು ಬೆಳಕಿನ ಕಿರಣಗಳ ಮೂಲಕ: ಮೌಸ್ ಕೆಳಬದಿಯಲ್ಲಿ ಹೊರಹೊಮ್ಮುವ ಬೆಳಕು ಅದರ ಚಲನೆಯನ್ನು ಗುರುತಿಸಲು ನೆರವಾಗುತ್ತದೆ (ಹಿಂದಿನ ಕಾಲದ ಮೌಸ್‌ಗಳಲ್ಲಿ ಪುಟ್ಟದೊಂದು ಚೆಂಡಿನಂತಹ ವಸ್ತು ಈ ಕೆಲಸವನ್ನು ಮಾಡುತ್ತಿತ್ತು).
ಚಲನೆಯನ್ನು ಗುರುತಿಸಿದ ಮೇಲೆ ಆ ಮಾಹಿತಿಯನ್ನು ಕಂಪ್ಯೂಟರಿಗೆ ಕಳಿಸಬೇಕಲ್ಲ, ಇಲಿಬಾಲದಂತಹ ವೈರು ಮೌಸ್‌ಗೂ ಕಂಪ್ಯೂಟರಿಗೂ ಸಂಪರ್ಕ ಕಲ್ಪಿಸುವುದು ಇದೇ ಕೆಲಸಕ್ಕಾಗಿ. ಬಾಲವಿಲ್ಲದ ವೈರ್‌ಲೆಸ್ ಮೌಸ್‌ಗಳಲ್ಲಿ ರೇಡಿಯೋ ಅಲೆಗಳು ಈ ಕೆಲಸ ಮಾಡುತ್ತವೆ. ಇಂತಹ ಮೌಸ್‌ಗಳಿಂದ ಕಳಿಸಲಾಗುವ ಮಾಹಿತಿಯನ್ನು ಯುಎಸ್‌ಬಿ ಮೂಲಕ ಕಂಪ್ಯೂಟರಿಗೆ ಜೋಡಿಸಲಾದ ಪುಟಾಣಿ ರಿಸೀವರ್ ಪಡೆದುಕೊಳ್ಳುತ್ತದೆ. ಬ್ಲೂಟೂತ್ ಸಂಪರ್ಕ ಬಳಸಿಕೊಳ್ಳುವ ಮೌಸ್‌ಗಳೂ ಇವೆ; ಇವನ್ನು ಬಳಸುವಾಗ ಕಂಪ್ಯೂಟರಿಗೆ ಪ್ರತ್ಯೇಕ ರಿಸೀವರ್ ಜೋಡಿಸುವ ಅಗತ್ಯ ಇರುವುದಿಲ್ಲ.
ಅಂದಹಾಗೆ ಮೌಸ್ ರೂಪಿಸಿದ್ದು ಡಗ್ಲಸ್ ಎಂಗೆಲ್‌ಬರ್ಟ್ ಎಂಬ ಅಮೆರಿಕನ್ ತಂತ್ರಜ್ಞ. ಆತ ಮೊತ್ತಮೊದಲ ಬಾರಿಗೆ ಮೌಸ್ ಕಾರ್ಯಾಚರಣೆಯನ್ನು ಪ್ರದರ್ಶಿಸಿದ್ದು ೧೯೬೮ರಲ್ಲಿ.

MAC Address

ಮ್ಯಾಕ್ ಅಡ್ರೆಸ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರಿನ ನೆಟ್‌ವರ್ಕ್ ಕಾರ್ಡ್ ಅನ್ನು ಪ್ರತ್ಯೇಕವಾಗಿ ಗುರುತಿಸಲು ಬಳಕೆಯಾಗುವ ವಿಳಾಸ
Long Description: ನಿಮ್ಮ ಕಂಪ್ಯೂಟರು ಜಾಲವೊಂದರ (ನೆಟ್‌ವರ್ಕ್) ಸಂಪರ್ಕಕ್ಕೆ ಬರಬೇಕಾದರೆ ಅದರಲ್ಲಿ ನೆಟ್‌ವರ್ಕ್ ಕಾರ್ಡ್ ಎಂಬ ಸಾಧನವೊಂದು ಇರಬೇಕು. ಇಂತಹ ಪ್ರತಿಯೊಂದು ಸಾಧನವನ್ನೂ ಪ್ರತ್ಯೇಕವಾಗಿ ಗುರುತಿಸಲು ಬಳಕೆಯಾಗುವ ವಿಳಾಸವೇ ‘ಮೀಡಿಯಾ ಆಕ್ಸೆಸ್ ಕಂಟ್ರೋಲ್ ಅಡ್ರೆಸ್’. ಹ್ರಸ್ವವಾಗಿ ಇದನ್ನೇ ‘ಮ್ಯಾಕ್ ಅಡ್ರೆಸ್’ ಎಂದು ಕರೆಯುತ್ತಾರೆ (ಇಲ್ಲಿ ಬಳಕೆಯಾಗಿರುವ ‘ಮ್ಯಾಕ್’ಗೂ ‘ಮ್ಯಾಕ್’ ಬ್ರಾಂಡಿನ ಕಂಪ್ಯೂಟರುಗಳಿಗೂ ಸಂಬಂಧವಿಲ್ಲ). B4-B6-76-B9-12-E3 ಇದು ಮ್ಯಾಕ್ ಅಡ್ರೆಸ್‌ಗೊಂದು ಉದಾಹರಣೆ.
ಯಂತ್ರಾಂಶ ಭಾಗವೊಂದನ್ನು ಗುರುತಿಸುವುದರಿಂದ ಇದನ್ನು ಯಂತ್ರಾಂಶ ವಿಳಾಸ (ಹಾರ್ಡ್‌ವೇರ್ ಅಡ್ರೆಸ್) ಎಂದೂ ಕರೆಯುವ ಅಭ್ಯಾಸವಿದೆ. ಫಿಸಿಕಲ್ ಅಡ್ರೆಸ್ ಎನ್ನುವುದೂ ಇದೇ ಮ್ಯಾಕ್ ಅಡ್ರೆಸ್‌ನ ಇನ್ನೊಂದು ಹೆಸರುಗಳು.
ಅಂತರಜಾಲದ ಸಂಪರ್ಕದಲ್ಲಿರುವ ಸಾಧನಗಳನ್ನು ಗುರುತಿಸಲು ಐಪಿ ಅಡ್ರೆಸ್ ಎಂಬ ವಿಳಾಸ ಬಳಕೆಯಾಗುತ್ತದಲ್ಲ, ಅದು ಮ್ಯಾಕ್ ಅಡ್ರೆಸ್‌ಗಿಂತ ಭಿನ್ನವಾದದ್ದು. ಬೇರೆಬೇರೆ ಅಂತರಜಾಲ ಸಂಪರ್ಕಗಳನ್ನು ಬಳಸುವಾಗ ನಮ್ಮ ಐಪಿ ವಿಳಾಸ ಬೇರೆಬೇರೆಯಾಗಿರುವುದು ಸಾಧ್ಯ; ಆದರೆ ಒಂದು ನೆಟ್‌ವರ್ಕ್ ಕಾರ್ಡಿನ ಮ್ಯಾಕ್ ಅಡ್ರೆಸ್ ಯಾವಾಗಲೂ ಒಂದೇ ಆಗಿರುತ್ತದೆ. ಒಂದು ಕಂಪ್ಯೂಟರಿನಲ್ಲಿ ಎರಡು ನೆಟ್‌ವರ್ಕ್ ಕಾರ್ಡುಗಳಿದ್ದ ಪಕ್ಷದಲ್ಲಿ (ಉದಾ: ಈಥರ್‌ನೆಟ್ ಕಾರ್ಡ್ ಮತ್ತು ವೈ-ಫೈ ಕಾರ್ಡ್) ಆ ಕಂಪ್ಯೂಟರಿನಲ್ಲಿ ಎರಡು ಮ್ಯಾಕ್ ಅಡ್ರೆಸ್‌ಗಳು ಬಳಕೆಯಾಗುವುದು ಸಾಧ್ಯ.

Music Streaming

ಮ್ಯೂಸಿಕ್ ಸ್ಟ್ರೀಮಿಂಗ್
Kannada Equivalent: (ರೂಪಿಸಬೇಕಿದೆ)
Short Description : ಡೌನ್‌ಲೋಡ್ ಮಾಡಿಕೊಳ್ಳುವ ಬದಲು ವಿಶ್ವವ್ಯಾಪಿ ಜಾಲದಲ್ಲೇ ಹಾಡುಗಳನ್ನು ಕೇಳಲು ಅನುವುಮಾಡಿಕೊಡುವ ವ್ಯವಸ್ಥೆ
Long Description: ಒಂದು ಕಾಲ ಇತ್ತು. ಹೊಸ ಸಿನಿಮಾ ಹಾಡನ್ನು ಬೇಕೆಂದಾಗ ಕೇಳಬೇಕಾದರೆ ಅಂಗಡಿಗೆ ಹೋಗಿ ಆಡಿಯೋ ಕ್ಯಾಸೆಟ್ ಕೊಳ್ಳಬೇಕಿತ್ತು. ಇಲ್ಲದಿದ್ದರೆ ರೇಡಿಯೋದಲ್ಲೋ ಟೀವಿಯ ಚಿತ್ರಹಾರ್ – ಚಿತ್ರಮಂಜರಿಗಳಲ್ಲೋ ನಮ್ಮ ಇಷ್ಟದ ಹಾಡು ಪ್ರಸಾರವಾಗುವುದನ್ನೇ ಕಾಯಬೇಕಿತ್ತು. ತಂತ್ರಜ್ಞಾನ ಬೆಳೆದಂತೆ ಸಿ.ಡಿ., ಡಿವಿಡಿಗಳು ಬಂದವು. ಎಂಪಿ೩ ಅಂತೂ ಹಾಡು ಕೇಳುವ ಅನುಭವವನ್ನು ಆಮೂಲಾಗ್ರವಾಗಿ ಬದಲಿಸಿಬಿಟ್ಟಿತು.
ಇದರ ಜೊತೆಯಲ್ಲೇ ಪೈರಸಿ ಪಿಡುಗು ಕೂಡ ಬೆಳೆಯಿತು. ನಕಲಿ ಸಿ.ಡಿ.ಗಳಷ್ಟೇ ಅಲ್ಲ, ಎಂಪಿ೩ಗಳನ್ನು ಗೆಳೆಯರಿಂದ ಕಾಪಿಮಾಡಿಕೊಳ್ಳುವ ಸರಳ ಅಭ್ಯಾಸ ಕೂಡ ಈ ಪಿಡುಗಿಗೆ ನೀರೆರೆಯಿತು ಎನ್ನಬಹುದು.
ಪೈರಸಿಗೆ ಪ್ರೋತ್ಸಾಹಿಸದೆಯೇ ಸೂಪರ್‌ಹಿಟ್ ಹಾಡುಗಳನ್ನು ಕೇಳುವ ಸೌಲಭ್ಯವನ್ನು ನಮಗೆ ಒದಗಿಸಿರುವುದು ಮ್ಯೂಸಿಕ್ ಸ್ಟ್ರೀಮಿಂಗ್ ತಾಣಗಳು. ಹಾಡನ್ನು ಡೌನ್‌ಲೋಡ್ ಮಾಡಿಕೊಳ್ಳಲು ಬಿಡದೆ ನಮಗೆ ಬೇಕಾದ ಹಾಡನ್ನು ವಿಶ್ವವ್ಯಾಪಿ ಜಾಲದಲ್ಲೇ ಕೇಳಿಸುವುದು ಈ ತಾಣಗಳ ವೈಶಿಷ್ಟ್ಯ. ಡೆಸ್ಕ್‌ಟಾಪ್-ಲ್ಯಾಪ್‌ಟಾಪ್‌ಗಳಲ್ಲಷ್ಟೇ ಏಕೆ, ಈ ಸೌಲಭ್ಯವನ್ನು ಮೊಬೈಲ್ ಆಪ್‌ಗಳ ಮೂಲಕವೂ ಪಡೆದುಕೊಳ್ಳುವುದು ಸಾಧ್ಯ. ಇಂತಹ ಅನೇಕ ಆಪ್‌ಗಳು ಇದೀಗ ನಮ್ಮ ದೇಶದಲ್ಲಿ ಜನಪ್ರಿಯವಾಗುತ್ತಿವೆ. ಅಷ್ಟೇ ಅಲ್ಲ, ಹಿಂದಿ – ಇಂಗ್ಲಿಷ್ ಜೊತೆಗೆ ಪ್ರಾದೇಶಿಕ ಭಾಷೆಗಳ ಹಾಡುಗಳನ್ನೂ ತಮ್ಮ ಗ್ರಾಹಕರಿಗೆ ಕೇಳಿಸುತ್ತಿವೆ.
ಇಂತಹ ಬಹುತೇಕ ಸೇವೆಗಳನ್ನು ಬಳಸಿ ಹಾಡು ಕೇಳಲು ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ (ಆದರೆ ಹಾಡು ಕೇಳುವ ಸಮಯದಲ್ಲಿ ಅಂತರಜಾಲ ಸಂಪರ್ಕ ಇರಲೇಬೇಕು). ಹಾಡುಗಳ ನಡುವೆ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೂಲಕ ಈ ತಾಣಗಳು ಹಣ ಸಂಪಾದಿಸುತ್ತವೆ, ಆ ಆದಾಯದ ಒಂದು ಭಾಗವನ್ನು ಹಾಡುಗಳ ಮೂಲ ಮಾಲೀಕರಿಗೂ ನೀಡುತ್ತವೆ. ಜಾಹೀರಾತು ಬೇಡ, ನಮ್ಮ ನೆಚ್ಚಿನ ಹಾಡುಗಳನ್ನು ಅಂತರಜಾಲ ಸೌಲಭ್ಯವಿಲ್ಲದಾಗಲೂ (ಆಫ್‌ಲೈನ್) ಕೇಳುವಂತಿರಬೇಕು ಎಂದೆಲ್ಲ ಹೇಳುವವರು ನಿರ್ದಿಷ್ಟ ಶುಲ್ಕಕ್ಕೆ ಪ್ರತಿಯಾಗಿ ಆ ಸೌಲಭ್ಯಗಳನ್ನೂ ಪಡೆದುಕೊಳ್ಳಬಹುದು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App