Computer Tantrajnana Padavivarana Kosha (English-Kannada)
Kannada Abhivrudhhi Pradhikara and Ejnana Trust
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
LED
ಎಲ್ಇಡಿ
Kannada Equivalent: (ರೂಪಿಸಬೇಕಿದೆ)
Short Description : ಲೈಟ್ ಎಮಿಟಿಂಗ್ ಡಯೋಡ್; ವಿದ್ಯುತ್ ಪ್ರವಹಿಸಿದಾಗ ಬೆಳಕನ್ನು ಹೊರಸೂಸುವ ಅರೆವಾಹಕ ಸಾಧನ
Long Description: ಮಕ್ಕಳ ಆಟಿಕೆ, ಸೀರಿಯಲ್ ಸೆಟ್, ಟ್ರಾಫಿಕ್ ಸಿಗ್ನಲ್, ಬಸ್ಸು – ರೈಲಿನ ಬೋರ್ಡು ಮುಂತಾದ ಕಡೆಗಳಲ್ಲಿ ಎಲ್ಇಡಿಗಳು ಬಳಕೆಯಾಗುವುದು ನಮಗೆ ಗೊತ್ತೇ ಇದೆ. ಬಹುತೇಕ ಟೀವಿ, ಮೊಬೈಲ್ ಫೋನುಗಳ ಪರದೆಯನ್ನು ಬೆಳಗುವುದೂ ಇದೇ ಎಲ್ಇಡಿಗಳು.
ಎಲ್ಇಡಿ ಎನ್ನುವುದು ಲೈಟ್ ಎಮಿಟಿಂಗ್ ಡಯೋಡ್ ಎನ್ನುವ ಹೆಸರಿನ ಹ್ರಸ್ವರೂಪ. ಡಯೋಡ್ ಎಂಬ ಅರೆವಾಹಕ (ಸೆಮಿಕಂಡಕ್ಟರ್) ಸಾಧನದ ಮೂಲಕ ವಿದ್ಯುತ್ ಹರಿಸಿದಾಗ ಅದರೊಳಗೆ ಸಂಚರಿಸುವ ಇಲೆಕ್ಟ್ರಾನುಗಳು ಫೋಟಾನ್ ಎಂಬ ಕಣಗಳನ್ನು ಬಿಡುಗಡೆಮಾಡುತ್ತವೆ. ಬೆಳಕಿನ ಮೂಲ ಕಣಗಳೇ ಈ ಫೋಟಾನುಗಳು. ಬಹಳಷ್ಟು ಡಯೋಡುಗಳಿಂದ ಹೊರಸೂಸುವ ಬೆಳಕು ನಮ್ಮ ಕಣ್ಣಿಗೆ ಕಾಣದ ರೂಪದಲ್ಲಿರುತ್ತವೆ (ಉದಾ: ಇನ್ಫ್ರಾರೆಡ್, ಅಂದರೆ ಅತಿರಕ್ತ ಕಿರಣಗಳು). ಡಯೋಡುಗಳ ನಿರ್ಮಾಣದಲ್ಲಿ ನಿರ್ದಿಷ್ಟ ಅರೆವಾಹಕ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಕಣ್ಣಿಗೆ ಕಾಣುವ ಬೆಳಕು ಹೊರಸೂಸುವಂತೆ ಮಾಡುವುದೂ ಸಾಧ್ಯ. ನಿತ್ಯವೂ ನಮ್ಮ ಸಂಪರ್ಕಕ್ಕೆ ಬರುವ ಬಹುತೇಕ ಎಲ್ಇಡಿಗಳು ಇದೇ ಪರಿಕಲ್ಪನೆಯನ್ನು ಬಳಸುತ್ತವೆ.
ಅಂದಹಾಗೆ ಎಲ್ಇಡಿಗಳ ಬಳಕೆ ಬೆಳಕಿನ ಉತ್ಪಾದನೆಗಷ್ಟೇ ಸೀಮಿತವೇನಲ್ಲ. ನೀರಿನ ಶುದ್ಧೀಕರಣ, ಮಾಹಿತಿ ಸಂವಹನ ಮುಂತಾದ ಕ್ಷೇತ್ರಗಳಲ್ಲೂ ಇವುಗಳ ಬಳಕೆ ಸಾಧ್ಯವಿದೆ. ನಿಸ್ತಂತು (ವೈರ್ಲೆಸ್) ಮಾಹಿತಿ ಸಂವಹನದಲ್ಲಿ ರೇಡಿಯೋ ಅಲೆಗಳ ಬದಲಿಗೆ ಬೆಳಕಿನ ಕಿರಣಗಳನ್ನು ಬಳಸಿದರೆ ಕ್ಷಿಪ್ರ ಹಾಗೂ ಸುರಕ್ಷಿತ ಮಾಹಿತಿ ಸಂವಹನ ಸಾಧ್ಯವಾಗುತ್ತದೆ. ನಮಗೆಲ್ಲ ಪರಿಚಯವಿರುವ ವೈ-ಫೈ ತಂತ್ರಜ್ಞಾನಕ್ಕೆ ಪರ್ಯಾಯವಾಗಿ ಬೆಳೆಯಬಲ್ಲ ಈ ಲೈ-ಫೈ, ಅಂದರೆ ‘ಲೈಟ್ ಎನೇಬಲ್ಡ್ ವೈ-ಫೈ’ಯಲ್ಲಿ ಎಲ್ಇಡಿಗಳ ಬಳಕೆ ಸಾಧ್ಯವೆಂದು ವಿಜ್ಞಾನಿಗಳು ಈಗಾಗಲೇ ತೋರಿಸಿದ್ದಾರೆ.
LMS
ಎಲ್ಎಂಎಸ್
Kannada Equivalent: (ರೂಪಿಸಬೇಕಿದೆ)
Short Description : ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಂ; ಪಾಠಗಳ ನಿರ್ವಹಣೆ, ಸಂಬಂಧಪಟ್ಟ ಕಡತಗಳ ಶೇಖರಣೆ, ವಿದ್ಯಾರ್ಥಿಯ ಪ್ರಗತಿ ಕುರಿತ ಮಾಹಿತಿ ಸಂಗ್ರಹಣೆ ಮುಂತಾದ್ದನ್ನೆಲ್ಲ ನಿಭಾಯಿಸುವ ತಂತ್ರಾಂಶ
Long Description: ನಮ್ಮ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದು ಮಾಹಿತಿ ತಂತ್ರಜ್ಞಾನದ (ಐಟಿ) ಹೆಚ್ಚುಗಾರಿಕೆ. ಐಟಿಯಿಂದ ಗಮನಾರ್ಹವಾಗಿ ಬದಲಾದ ಕ್ಷೇತ್ರಗಳಲ್ಲಿ ಶಿಕ್ಷಣಕ್ಕೆ ಪ್ರಮುಖ ಸ್ಥಾನವಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿಕೊಂಡಿದ್ದು ಇಲ್ಲಿನ ಬದಲಾವಣೆಗಳಲ್ಲೊಂದು. ಇದರಿಂದಾಗಿಯೇ ಇದೀಗ ಕಂಪ್ಯೂಟರು – ಮೊಬೈಲ್ ಫೋನುಗಳ ಮೂಲಕವೂ ಶಿಕ್ಷಣ ಪಡೆಯುವುದು ಸಾಧ್ಯವಾಗಿದೆ.
ಹೀಗೆ ಶಿಕ್ಷಣ ನೀಡಲು ಅಗತ್ಯವಾದ ಸಂಪನ್ಮೂಲಗಳನ್ನೆಲ್ಲ (ಪಠ್ಯ, ವೀಡಿಯೋ, ಧ್ವನಿ, ಆನ್ಲೈನ್ ಪರೀಕ್ಷೆ ಇತ್ಯಾದಿ) ನಿಭಾಯಿಸಬೇಕಲ್ಲ, ಅದಕ್ಕಾಗಿ ಬಳಕೆಯಾಗುವ ತಂತ್ರಾಂಶವೇ ಎಲ್ಎಂಎಸ್, ಅಂದರೆ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಂ.
ಪಾಠಗಳ ನಿರ್ವಹಣೆ, ಸಂಬಂಧಪಟ್ಟ ಕಡತಗಳ ಶೇಖರಣೆ, ವಿದ್ಯಾರ್ಥಿಯ ಪ್ರಗತಿ ಕುರಿತ ಮಾಹಿತಿ ಸಂಗ್ರಹಣೆ – ಇವೆಲ್ಲವೂ ಈ ತಂತ್ರಾಂಶದ ಜವಾಬ್ದಾರಿ. ಹಾಗೆಯೇ ಪರೀಕ್ಷೆಗಳನ್ನು ನಡೆಸಲೂ ಈ ತಂತ್ರಾಂಶವನ್ನು ಬಳಸಬಹುದು.
ಆನ್ಲೈನ್ ತರಗತಿಗಳನ್ನು ನಡೆಸುವ ಜಾಲತಾಣಗಳು, ತಮ್ಮ ಉದ್ಯೋಗಿಗಳಿಗೆ ಇ-ಲರ್ನಿಂಗ್ ಸೌಲಭ್ಯ ಒದಗಿಸುವ ಸಂಸ್ಥೆಗಳು ಎಲ್ಎಂಎಸ್ ತಂತ್ರಾಂಶಗಳನ್ನು ವ್ಯಾಪಕವಾಗಿ ಬಳಸುತ್ತವೆ. ಶಾಲಾ ತರಗತಿಗಳಿಗೆ ಪೂರಕವಾಗಿ ನಡೆಯುವ ಚಟುವಟಿಕೆಗಳನ್ನು ನಿಭಾಯಿಸಲೂ ಈ ತಂತ್ರಾಂಶಗಳನ್ನು ಬಳಸುವುದು ಸಾಧ್ಯ.
ಸಕ್ಸೆಸ್ಫ್ಯಾಕ್ಟರ್ಸ್ ಲರ್ನಿಂಗ್, ಸಮ್ಟೋಟಲ್ ಲರ್ನ್ ಮುಂತಾದವು ಕಾರ್ಪೊರೇಟ್ ಕ್ಷೇತ್ರದಲ್ಲಿ ಎಲ್ಎಂಎಸ್ ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಗೆ ಕೆಲ ಉದಾಹರಣೆಗಳು. ವಾಣಿಜ್ಯ ಉತ್ಪನ್ನಗಳ ಜೊತೆಗೆ ಮೂಡಲ್ನಂತಹ (moodle) ಮುಕ್ತ (ಓಪನ್ಸೋರ್ಸ್) ತಂತ್ರಾಂಶಗಳೂ ಎಲ್ಎಂಎಸ್ಗಳ ಪೈಕಿ ಸಾಕಷ್ಟು ಹೆಸರು ಗಳಿಸಿವೆ.
Laser Printer
ಲೇಸರ್ ಪ್ರಿಂಟರ್
Kannada Equivalent: (ರೂಪಿಸಬೇಕಿದೆ)
Short Description : ಬೆಳಕಿನ ಕಿರಣಗಳ ಸಹಾಯದಿಂದ ಮುದ್ರಿಸುವ ಯಂತ್ರ
Long Description: ಡಿಜಿಟಲ್ ಕಡತಗಳ ಮುದ್ರಣದಲ್ಲಿ ಹಲವು ಬಗೆಯ ಪ್ರಿಂಟರುಗಳು ಬಳಕೆಯಾಗುತ್ತವೆ. ಈ ಪೈಕಿ ಲೇಸರ್ ಪ್ರಿಂಟರುಗಳದು ಪ್ರಮುಖ ಹೆಸರು. ಕಡಿಮೆ ಸಂಖ್ಯೆಯ ಪ್ರಿಂಟುಗಳು ಸಾಕು ಎನ್ನುವವರು ಇಂಕ್ಜೆಟ್ ಪ್ರಿಂಟರುಗಳನ್ನು ಬಳಸಿದರೆ ಹೆಚ್ಚು ಪ್ರತಿಗಳನ್ನು ಮುದ್ರಿಸುವ ಅಗತ್ಯವಿರುವಲ್ಲಿ ಲೇಸರ್ ಪ್ರಿಂಟರ್ಗೆ ಮೊದಲ ಪ್ರಾಶಸ್ತ್ಯ.
ಹೆಸರೇ ಹೇಳುವಂತೆ ಲೇಸರ್ ಪ್ರಿಂಟರುಗಳಲ್ಲಿ ಬೆಳಕಿನ ಕಿರಣಗಳ ಬಳಕೆಯಾಗುತ್ತದೆ. ನಾವು ಮುದ್ರಿಸಬೇಕಿರುವ ವಿನ್ಯಾಸಕ್ಕೆ ಅನುಗುಣವಾಗಿ ಈ ಕಿರಣಗಳು ಪ್ರಿಂಟರಿನ ‘ಫೋಟೋರಿಸೆಪ್ಟರ್’ (ಡ್ರಮ್) ಮೇಲೆ ಬೀಳುತ್ತವೆ, ಆ ಕಿರಣಗಳು ಎಲ್ಲೆಲ್ಲಿ ಬೀಳುತ್ತವೋ ಅಲ್ಲಿನ ವಿದ್ಯುತ್ ಪೂರೈಕೆಯಲ್ಲಿ (ಚಾರ್ಜ್) ವ್ಯತ್ಯಾಸವಾಗುತ್ತದೆ ಹಾಗೂ ಆ ಮೂಲಕ ಡ್ರಮ್ ಮೇಲೆ ಪುಟದ ವಿನ್ಯಾಸ ರೂಪುಗೊಳ್ಳುತ್ತದೆ. ಅದರ ಮೇಲೆ ಟೋನರ್ (ಬಣ್ಣ) ಅನ್ನು ಹಚ್ಚುವುದು ಮುಂದಿನ ಹೆಜ್ಜೆ. ಬಣ್ಣ ಹಚ್ಚಿದ ಡ್ರಮ್ ಮೇಲೆ ಪೇಪರ್ ಹಾದುಬಂದಾಗ ಆ ಬಣ್ಣ ಕಾಗದಕ್ಕೆ ವರ್ಗಾವಣೆಯಾಗುತ್ತದೆ, ನಮಗೆ ಬೇಕಾದ ಪ್ರಿಂಟ್ಔಟ್ ಸಿದ್ಧವಾಗುತ್ತದೆ!
ಅಂದಹಾಗೆ ಫೋಟೋಕಾಪಿ (ಜ಼ೆರಾಕ್ಸ್) ಯಂತ್ರಗಳಲ್ಲಿ ಬಳಕೆಯಾಗುವುದೂ ಇದೇ ತಂತ್ರಜ್ಞಾನ. ‘ಜ಼ೆರಾಗ್ರಫಿ’ ಎನ್ನುವುದು ಇದರ ಹೆಸರು. ಫೋಟೋಕಾಪಿ ಯಂತ್ರಗಳಲ್ಲಿ ನಮ್ಮ ಕಡತದ ಛಾಯೆ ಮುದ್ರಣವಾದರೆ ಲೇಸರ್ ಪ್ರಿಂಟರಿನಲ್ಲಿ ಮುದ್ರಣವಾಗುವ ಸಾಮಗ್ರಿ ಕಂಪ್ಯೂಟರಿನಿಂದ ಬರುತ್ತದೆ ಎನ್ನುವುದಷ್ಟೇ ವ್ಯತ್ಯಾಸ.
ಬಹುತೇಕ ಲೇಸರ್ ಪ್ರಿಂಟರುಗಳಲ್ಲಿ ಕಪ್ಪು ಬಣ್ಣವೊಂದೇ ಉಪಯೋಗವಾಗುತ್ತದೆ, ನಿಜ. ಆದರೆ ಬಹುವರ್ಣದಲ್ಲಿ ಮುದ್ರಿಸಬಲ್ಲ ಲೇಸರ್ ಪ್ರಿಂಟರುಗಳೂ ಇವೆ. ಈ ಬಣ್ಣಗಳೆಲ್ಲ ಪುಡಿಯ ರೂಪದಲ್ಲಿರುತ್ತದೆ ಎನ್ನುವುದು ಲೇಸರ್ ಪ್ರಿಂಟರಿಗೂ ದ್ರವರೂಪದ ಬಣ್ಣಗಳನ್ನು ಬಳಸುವ ಇಂಕ್ಜೆಟ್ ಪ್ರಿಂಟರಿಗೂ ಇರುವ ವ್ಯತ್ಯಾಸಗಳಲ್ಲೊಂದು. ಲೇಸರ್ ಪ್ರಿಂಟರ್ ಮುದ್ರಣದ ಗುಣಮಟ್ಟ ಇಂಕ್ಜೆಟ್ಗಿಂತ ಉತ್ತಮವಾಗಿರುವುದಕ್ಕೂ ಇದೇ ಕಾರಣ.
Like Farming