भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Attachment

ಅಟ್ಯಾಚ್‌ಮೆಂಟ್
Kannada Equivalent: ಲಗತ್ತು
Short Description : ಇಮೇಲ್ ಸಂದೇಶದ ಜೊತೆಗೆ ಕಳುಹಿಸುವ ಕಡತ
Long Description: ಇಮೇಲ್ ಸಂದೇಶದ ಜೊತೆಗೆ ಕಳುಹಿಸುವ ಕಡತ ಅಥವಾ ಕಡತಗಳನ್ನು ‘ಅಟ್ಯಾಚ್‌ಮೆಂಟ್’ ಎಂದು ಗುರುತಿಸಲಾಗುತ್ತದೆ. ಪಠ್ಯ, ಚಿತ್ರ, ವೀಡಿಯೋ – ಹೀಗೆ ಹಲವು ಬಗೆಯ ಅಟ್ಯಾಚ್‌ಮೆಂಟ್‌ಗಳನ್ನು ಇಮೇಲ್ ಸಂದೇಶದೊಡನೆ ಕಳುಹಿಸುವುದು ಸಾಧ್ಯ.
ಇಮೇಲ್ ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ಸೇವೆ ಬಳಸಿ ಎಷ್ಟು ಗಾತ್ರದ ಕಡತಗಳನ್ನು ಕಳುಹಿಸಬಹುದು ಎಂದು ನಿರ್ಧರಿಸುತ್ತವೆ. ಆ ಮಿತಿಗಿಂತ ಹೆಚ್ಚು ಗಾತ್ರದ ಕಡತಗಳನ್ನು ಅಟ್ಯಾಚ್‌ಮೆಂಟ್ ಆಗಿ ಕಳುಹಿಸುವಂತಿಲ್ಲ.
ಅವಕಾಶವಿದ್ದಾಗಲೂ ತೀರಾ ದೊಡ್ಡ ಗಾತ್ರದ ಅಟ್ಯಾಚ್‌ಮೆಂಟುಗಳನ್ನು ಕಳುಹಿಸುವುದು ಉತ್ತಮ ಅಭ್ಯಾಸವೇನಲ್ಲ. ಸಾಧ್ಯವಾದ ಕಡೆ ನಾವು ಕಳಿಸಹೊರಟಿರುವ ಕಡತದ ಗಾತ್ರವನ್ನು ಆದಷ್ಟೂ ಕಡಿಮೆಮಾಡುವುದು, ಹೆಚ್ಚು ಸಂಖ್ಯೆಯ ಕಡತಗಳಿದ್ದಾಗ ಅವನ್ನೆಲ್ಲ ಒಟ್ಟುಸೇರಿಸಿ ಜಿಪ್ ಮಾಡುವುದು ಒಳ್ಳೆಯದು. ಅಟ್ಯಾಚ್‌ಮೆಂಟ್ ರೂಪದಲ್ಲಿ ನಾವು ಏನನ್ನು ಕಳುಹಿಸುತ್ತಿದ್ದೇವೆ ಎನ್ನುವುದನ್ನು ಸಂದೇಶದಲ್ಲಿ ಬರೆಯುವುದೂ ಅಪೇಕ್ಷಣೀಯ.
ಸಂದೇಶ ಪಡೆದುಕೊಂಡವರು ಅಟ್ಯಾಚ್‌ಮೆಂಟ್ ಅನ್ನು ಸುಲಭಕ್ಕೆ ತೆರೆಯುವಂತಿರಬೇಕಾದ್ದೂ ಅತ್ಯಗತ್ಯ. ಉದಾ: ನುಡಿ ಕಡತ ಕಳಿಸಿದ್ದರೆ ಅದನ್ನು ‘ನುಡಿ’ ತಂತ್ರಾಂಶ ಇದ್ದವರು ಮಾತ್ರ ತೆರೆದು ನೋಡಬಹುದು. ಇಲ್ಲವಾದರೆ ಬರೀ ಗೋಜಲು ಚಿಹ್ನೆ ಕಾಣುತ್ತವೆ. ಅಂಥ ಸಾಧ್ಯತೆ ಇದ್ದಾಗ ಕಡತವನ್ನು ಪಿಡಿಎಫ್ ಮಾಡಿ ಕಳಿಸಬಹುದು.
ಇಮೇಲ್ ಸೇವೆ ಒದಗಿಸುವ ಸಂಸ್ಥೆಗಳು ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಕೆಲವು ಬಗೆಯ ಕಡತಗಳನ್ನು (ಉದಾ: ಪ್ರೋಗ್ರಾಮ್‌ಗಳು) ಅಟ್ಯಾಚ್‌ಮೆಂಟ್ ರೂಪದಲ್ಲಿ ಕಳುಹಿಸದಂತೆ ನಿರ್ಬಂಧಿಸಿರುತ್ತವೆ. ಆದರೂ ಕೂಡ ನಿಮಗೆ ಬಂದ ಯಾವುದೇ ಅಟ್ಯಾಚ್‌ಮೆಂಟ್ ತೆರೆಯುವ ಮುನ್ನ ಅದನ್ನು ಆಂಟಿವೈರಸ್ ಬಳಸಿ ಸ್ಕ್ಯಾನ್ ಮಾಡುವುದು ಒಳ್ಳೆಯದು.
ಆನ್‌ಲೈನ್ ನಮೂನೆಗಳೊಡನೆ ಲಗತ್ತಿಸುವ ಕಡತಗಳನ್ನೂ ಅಟ್ಯಾಚ್‌ಮೆಂಟ್‌ಗಳೆಂದು ಗುರುತಿಸುವ ಅಭ್ಯಾಸವಿದೆ. ಇಮೇಲ್ ಸಂದೇಶಕ್ಕಾಗಲೀ ಆನ್‌ಲೈನ್ ನಮೂನೆಗಳಲ್ಲಾಗಲಿ ಹೀಗೆ ಕಡತವನ್ನು ಲಗತ್ತಿಸುವ ಪ್ರಕ್ರಿಯೆಯನ್ನು ‘ಅಟ್ಯಾಚ್ ಮಾಡುವುದು’ ಎಂದು ಕರೆಯುತ್ತಾರೆ.

Authentication

ಅಥೆಂಟಿಕೇಶನ್
Kannada Equivalent: (ರೂಪಿಸಬೇಕಿದೆ)
Short Description : ನಿರ್ದಿಷ್ಟ ಸೇವೆ ಪಡೆಯಲು ಪ್ರಯತ್ನಿಸುತ್ತಿರುವ ವ್ಯಕ್ತಿ ಅಧಿಕೃತ ಗ್ರಾಹಕನೋ ಅಲ್ಲವೋ ಎಂದು ಗುರುತಿಸಲು ಬಳಕೆಯಾಗುವ ವ್ಯವಸ್ಥೆ
Long Description: ನಿಮ್ಮ ಆಪ್ತರು ಕಳುಹಿಸಿದ ಇಮೇಲ್ ಸಂದೇಶ ನಿಮಗೆ ಸಿಗುವುದು ಹೇಗೆ? ನೀವು ನಿಮ್ಮ ಇಮೇಲ್ ಖಾತೆಗೆ ಲಾಗಿನ್ ಆಗುತ್ತೀರಿ, ಅಲ್ಲಿ ಆ ಸಂದೇಶ ಓದುತ್ತೀರಿ – ಅಷ್ಟೇ ತಾನೇ?
ಈ ಪ್ರಕ್ರಿಯೆಯ ಮೊದಲ ಹಂತ – ಖಾತೆಗೆ ಲಾಗಿನ್ ಆಗುವುದು – ಮೇಲ್ನೋಟಕ್ಕೆ ಸರಳವೆಂದು ತೋರಿದರೂ ಬಹಳ ಕ್ಲಿಷ್ಟವಾದ ಹಂತ. ನಿಮ್ಮ ವಿವರಗಳನ್ನು (ಯೂಸರ್‌ನೇಮ್, ಪಾಸ್‌ವರ್ಡ್ ಇತ್ಯಾದಿ) ಪರಿಶೀಲಿಸುವುದು, ಹೆಸರನ್ನೂ ಪಾಸ್‌ವರ್ಡನ್ನೂ ಹೊಂದಿಸಿ ಸರಿಯಿದೆಯೇ ನೋಡುವುದು, ಪದೇಪದೇ ತಪ್ಪು ವಿವರಗಳನ್ನು ದಾಖಲಿಸಿದಾಗ ಸುರಕ್ಷತೆಯ ದೃಷ್ಟಿಯಿಂದ ಖಾತೆಯನ್ನು ಲಾಕ್ ಮಾಡುವುದು – ಹೀಗೆ ಅನೇಕ ಕೆಲಸಗಳು ಈ ಹಂತದಲ್ಲಿ ನಡೆಯುತ್ತವೆ. ದಾಖಲಿಸಿದ ಪಾಸ್‌ವರ್ಡನ್ನು ರವಾನಿಸುವಾಗ ಅದು ಕುತಂತ್ರಾಂಶಗಳ ಕೈಗೆ ಸಿಕ್ಕದಂತೆ ನೋಡಿಕೊಳ್ಳುವುದೂ ಈ ಹಂತದ ಜವಾಬ್ದಾರಿಗಳಲ್ಲೊಂದು.
ಇಮೇಲ್ ಮಾತ್ರವೇ ಅಲ್ಲ, ಸೋಶಿಯಲ್ ನೆಟ್‌ವರ್ಕಿನಲ್ಲಿ, ಆನ್‌ಲೈನ್ ಬ್ಯಾಂಕಿಂಗ್ ತಾಣಗಳಲ್ಲಿ, ಕಚೇರಿಯ ಕಂಪ್ಯೂಟರುಗಳಲ್ಲೂ ಇಂತಹ ವ್ಯವಸ್ಥೆಯನ್ನು ನಾವು ಕಾಣಬಹುದು. ನಿರ್ದಿಷ್ಟ ಸೇವೆ ಪಡೆಯಲು ಪ್ರಯತ್ನಿಸುತ್ತಿರುವ ವ್ಯಕ್ತಿ ಅಧಿಕೃತ ಗ್ರಾಹಕನೋ ಅಲ್ಲವೋ ಎಂದು ಗುರುತಿಸಲು ಬಳಕೆಯಾಗುವ ಈ ವ್ಯವಸ್ಥೆಯನ್ನು ‘ಅಥೆಂಟಿಕೇಶನ್’ ಅಥವಾ ‘ದೃಢೀಕರಣ’ ಎಂದು ಕರೆಯುತ್ತಾರೆ.
ಹೀಗೆ ದೃಢೀಕರಿಸಲು ಯೂಸರ್‌ನೇಮ್ – ಪಾಸ್‌ವರ್ಡ್‌ಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸ. ಇದರ ಜೊತೆಗೆ ಈ ಉದ್ದೇಶಕ್ಕಾಗಿ ಒನ್‌ಟೈಮ್ ಪಾಸ್‌ವರ್ಡ್ (ಓಟಿಪಿ), ಬಯೋಮೆಟ್ರಿಕ್ ಅಥೆಂಟಿಕೇಶನ್ (ಬೆರಳ ಗುರುತು – ಕಣ್ಣಿನ ಪಾಪೆ ಬಳಸಿ ದೃಢೀಕರಣ) ಮುಂತಾದ ತಂತ್ರಗಳನ್ನೂ ಬಳಸಲಾಗುತ್ತದೆ.

Analytics

ಅನಲಿಟಿಕ್ಸ್
Kannada Equivalent: (ರೂಪಿಸಬೇಕಿದೆ)
Short Description : ದತ್ತಾಂಶದ ಸಂಸ್ಕರಣೆ, ವಿಶ್ಲೇಷಣೆ ಹಾಗೂ ಅರ್ಥೈಸಿಕೊಳ್ಳುವಿಕೆಯ ಪ್ರಕ್ರಿಯೆ
Long Description: ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಬಳಕೆ ಪ್ರಾರಂಭವಾದ ನಂತರ ನಮ್ಮ ಪ್ರತಿ ಚಟುವಟಿಕೆಯ ಸುತ್ತಲೂ ಭಾರೀ ಪ್ರಮಾಣದ ದತ್ತಾಂಶ (ಡೇಟಾ) ಸೃಷ್ಟಿಯಾಗುತ್ತದೆ. ಮೊಬೈಲ್ ಫೋನ್ ಬಳಕೆಯ ವಿವರ ಇರಬಹುದು, ಬ್ಯಾಂಕಿನ ಜಮಾ-ಖರ್ಚುಗಳಿರಬಹುದು, ಅಂಗಡಿಯಲ್ಲಿ ಖರೀದಿಸಿದ ವಸ್ತುಗಳ ಪಟ್ಟಿಯೇ ಇರಬಹುದು – ನಮ್ಮ ದಿನನಿತ್ಯದ ವ್ಯವಹಾರ ಕುರಿತ ನೂರೆಂಟು ಬಗೆಯ ವಿವರಗಳು ಹೀಗೆ ದತ್ತಾಂಶದ ರೂಪದಲ್ಲಿ ಸಂಗ್ರಹವಾಗುತ್ತವೆ.
ಸರಿಯಾಗಿ ಬಳಸಿದ್ದೇ ಆದರೆ ಇಷ್ಟೆಲ್ಲ ದತ್ತಾಂಶ ಬಹಳ ಉಪಯುಕ್ತವಾಗಬಲ್ಲವು. ಕಳೆದ ಆರು ತಿಂಗಳಿನಲ್ಲಿ ನಮ್ಮ ಗ್ರಾಹಕರು ತಲಾ ಎಷ್ಟು ಕರೆಗಳನ್ನು ಮಾಡಿದ್ದಾರೆ ಎಂದು ತಿಳಿಯುವ ಸಂಸ್ಥೆ ಅದರ ಆಧಾರದ ಮೇಲೆ ತನ್ನ ಮುಂದಿನ ಹೆಜ್ಜೆಗಳನ್ನು ರೂಪಿಸಿಕೊಳ್ಳಬಹುದು; ಬ್ಯಾಂಕಿನ ಜಮಾ – ಖರ್ಚುಗಳನ್ನು ತಾಳೆನೋಡಿದ ಆದಾಯ ತೆರಿಗೆ ಇಲಾಖೆ ಅದಕ್ಕೆಲ್ಲ ತೆರಿಗೆ ಪಾವತಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಬಹುದು; ಅಂಗಡಿಯಲ್ಲಿ ಯಾವ ಸಮಯದಲ್ಲಿ ಏನೆಲ್ಲ ಮಾರಾಟವಾಗುತ್ತಿದೆ ಎಂದು ತಿಳಿದುಕೊಳ್ಳುವ ಮಾಲೀಕ ಸಂದರ್ಭಕ್ಕೆ ಸರಿಯಾಗಿ ಆಯಾ ವಸ್ತುಗಳನ್ನು ತರಿಸಿಡಲೂ ಬಹುದು!
ಇಷ್ಟೆಲ್ಲ ಆಗಬೇಕೆಂದರೆ ಸಂಬಂಧಪಟ್ಟ ದತ್ತಾಂಶವನ್ನು ಸರಿಯಾಗಿ ಸಂಸ್ಕರಿಸುವುದು, ವಿಶ್ಲೇಷಿಸುವುದು ಹಾಗೂ ಅರ್ಥೈಸಿಕೊಳ್ಳುವುದು ಸಾಧ್ಯವಾಗಬೇಕು. ಇದನ್ನೆಲ್ಲ ಸಾಧ್ಯವಾಗಿಸುವ ತಂತ್ರಗಳನ್ನು ಒಟ್ಟಾರೆಯಾಗಿ ‘ಅನಲಿಟಿಕ್ಸ್’ ಎಂದು ಗುರುತಿಸಲಾಗುತ್ತದೆ. ಕಂಪ್ಯೂಟರ್ ತಂತ್ರಾಂಶಗಳ ಜೊತೆಗೆ ಸಂಖ್ಯಾವಿಜ್ಞಾನ (ಸ್ಟಾಟಿಸ್ಟಿಕ್ಸ್) ಕೂಡ ಇಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಅನಲಿಟಿಕ್ಸ್‌ನ ಅಂಗವಾಗಿ ದತ್ತಾಂಶವನ್ನು ಸಂಸ್ಕರಿಸಿ ಸಿದ್ಧಪಡಿಸುವ ಮಾಹಿತಿಯನ್ನು ಸಂಸ್ಥೆಗಳ ವ್ಯವಹಾರದ ನಿರ್ಧಾರಗಳಲ್ಲಿ ಬಳಸುವುದು ಸರ್ವೇಸಾಮಾನ್ಯ. ವ್ಯವಹಾರದಲ್ಲಿ ಸದ್ಯ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವುದಷ್ಟೇ ಅಲ್ಲ, ಇಂದಿನ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಮುಂದೆ ಏನು ನಡೆಯಬಹುದು ಎಂದು ಊಹಿಸುವುದು – ಮುಂದೆ ಇಂತಹ ಫಲಿತಾಂಶ ಬೇಕೆಂದರೆ ಏನು ಮಾಡಬೇಕೆಂದು ಸೂಚಿಸುವುದು ಕೂಡ ಅನಲಿಟಿಕ್ಸ್ ಸಹಾಯದಿಂದ ಸಾಧ್ಯವಾಗುತ್ತದೆ.

Application Software

ಅಪ್ಲಿಕೇಶನ್ ಸಾಫ್ಟ್‌ವೇರ್
Kannada Equivalent: ಆನ್ವಯಿಕ ತಂತ್ರಾಂಶ
Short Description : ಬಳಕೆದಾರನ ನಿರ್ದಿಷ್ಟ ಉದ್ದೇಶವನ್ನು ಪೂರೈಸಿಕೊಳ್ಳಲು ನೆರವಾಗುವ ತಂತ್ರಾಂಶ
Long Description: ಮೊಬೈಲ್ ಫೋನ್, ಕಂಪ್ಯೂಟರ್ ಮುಂತಾದ ಸಾಧನಗಳಿಗೆಲ್ಲ ಪಾಠಹೇಳುವ ಕೆಲಸ ಸಾಫ್ಟ್‌ವೇರ್, ಅಂದರೆ ತಂತ್ರಾಂಶದ್ದು. ತಂತ್ರಾಂಶಗಳು ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತವೆ ಎನ್ನುವುದರ ಆಧಾರದ ಮೇಲೆ ಅವನ್ನು ಬೇರೆಬೇರೆ ಗುಂಪುಗಳಲ್ಲಿ ವರ್ಗೀಕರಿಸುತ್ತಾರೆ. ಆನ್ವಯಿಕ ಹಾಗೂ ವ್ಯವಸ್ಥಾ ತಂತ್ರಾಂಶಗಳು ಇಂತಹ ಗುಂಪುಗಳಿಗೆ ಎರಡು ಉದಾಹರಣೆ.
ಬಳಕೆದಾರನ ನಿರ್ದಿಷ್ಟ ಉದ್ದೇಶವನ್ನು (ಉದಾ: ಪತ್ರ ಟೈಪ್ ಮಾಡುವುದು, ಲೆಕ್ಕಾಚಾರವನ್ನು ದಾಖಲಿಸಿಕೊಳ್ಳುವುದು ಇತ್ಯಾದಿ) ಪೂರೈಸಿಕೊಳ್ಳಲು ನೆರವಾಗುವ ತಂತ್ರಾಂಶಗಳನ್ನು ಅಪ್ಲಿಕೇಶನ್ ಸಾಫ್ಟ್‌ವೇರ್, ಅಂದರೆ ಆನ್ವಯಿಕ ತಂತ್ರಾಂಶಗಳೆಂದು ಕರೆಯುತ್ತಾರೆ. ಪದಸಂಸ್ಕರಣೆ, ಲೆಕ್ಕಾಚಾರ, ಸ್ಲೈಡ್ ಪ್ರೆಸೆಂಟೇಶನ್‌ಗಳಲ್ಲೆಲ್ಲ ನೆರವಾಗುವ ತಂತ್ರಾಂಶಗಳು (ಹಾಗೂ ಮೊಬೈಲ್ ಆಪ್‌ಗಳು) ಆನ್ವಯಿಕ ತಂತ್ರಾಂಶಗಳೇ.
ಆನ್ವಯಿಕ ತಂತ್ರಾಂಶಗಳು ಕೆಲಸಮಾಡಲು ನೆರವಾಗುವ ಆಪರೇಟಿಂಗ್ ಸಿಸ್ಟಂನಂತಹ ತಂತ್ರಾಂಶಗಳಿಗೆ ಸಿಸ್ಟಂ ಸಾಫ್ಟ್‌ವೇರ್, ಅಂದರೆ ವ್ಯವಸ್ಥಾ ತಂತ್ರಾಂಶಗಳೆಂದು ಹೆಸರು. ಆನ್ವಯಿಕ ತಂತ್ರಾಂಶಗಳಂತೆ ಯಾವುದೋ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಾವು ಇವನ್ನು ಬಳಸುವುದಿಲ್ಲ, ನಿಜ. ಆದರೆ ಆನ್ವಯಿಕ ತಂತ್ರಾಂಶಗಳು ಸರಿಯಾಗಿ ಕೆಲಸಮಾಡಲು ವ್ಯವಸ್ಥಾ ತಂತ್ರಾಂಶಗಳ ಬೆಂಬಲ ಅತ್ಯಗತ್ಯ.

Affiliate

ಅಫಿಲಿಯೇಟ್
Kannada Equivalent: (ರೂಪಿಸಬೇಕಿದೆ)
Short Description : ದೊಡ್ಡ ಸಂಸ್ಥೆಯೊಂದರ ಪರವಾಗಿ ಕಾರ್ಯನಿರ್ವಹಿಸುವ, ಅವರ ಉತ್ಪನ್ನಗಳಿಗೆ ಪ್ರಚಾರ ನೀಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ
Long Description: ಅಂತರಜಾಲದ ಮೂಲಕ ವ್ಯವಹರಿಸುವ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಹಲವು ವಿಧಾನಗಳನ್ನು ಬಳಸುತ್ತವೆ. ದೂರದರ್ಶನದಲ್ಲಿ – ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಈ ಪೈಕಿ ಒಂದು ವಿಧಾನವಾದರೆ ಸಂಭಾವ್ಯ ಗ್ರಾಹಕರ ಗುಂಪುಗಳನ್ನು ನೇರವಾಗಿ ತಲುಪಲು ಪ್ರಯತ್ನಿಸುವುದು ಇನ್ನೊಂದು ವಿಧಾನ.
ಗ್ರಾಹಕರನ್ನು ನೇರವಾಗಿ ತಲುಪುವ ಪ್ರಯತ್ನದ ಒಂದು ರೂಪವೇ ಅಫಿಲಿಯೇಟ್ ಮಾರ್ಕೆಟಿಂಗ್. ದೊಡ್ಡ ಸಂಸ್ಥೆಯೊಂದರ ಪರವಾಗಿ ಕಾರ್ಯನಿರ್ವಹಿಸುವ, ಅವರ ಉತ್ಪನ್ನಗಳಿಗೆ ಪ್ರಚಾರ ನೀಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಅಫಿಲಿಯೇಟ್ ಎಂದು ಗುರುತಿಸಲಾಗುತ್ತದೆ. ಅಫಿಲಿಯೇಟ್ ಮಾರ್ಕೆಟಿಂಗ್ ತಂತ್ರ ಬಳಸುವ ಸಂಸ್ಥೆಗಳು ತಮ್ಮ ಉತ್ಪನ್ನದ ಪ್ರಚಾರದಲ್ಲಿ ಇಂತಹ ಅಫಿಲಿಯೇಟ್‌ಗಳ ನೆರವು ಪಡೆದುಕೊಳ್ಳುತ್ತವೆ. ಈ ಅಫಿಲಿಯೇಟ್‌ಗಳು ತಮ್ಮ ಬ್ಲಾಗ್, ಜಾಲತಾಣ ಅಥವಾ ಇನ್ನಾವುದೇ ಪ್ರಕಟಣೆಯ ಮೂಲಕ ಸಂಸ್ಥೆಯ ಉತ್ಪನ್ನಗಳಿಗೆ ಪ್ರಚಾರ ದೊರಕಿಸಿಕೊಡುತ್ತಾರೆ, ಆ ಕೆಲಸಕ್ಕಾಗಿ ಒಂದಷ್ಟು ಪ್ರತಿಫಲವನ್ನೂ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಪ್ರತಿಫಲ ತಮ್ಮಿಂದಾಗಿ ಸಂಸ್ಥೆಗೆ ದೊರೆತ ವ್ಯಾಪಾರದ ಒಂದು ಭಾಗವಾಗಿರುತ್ತದೆ (ಕಮೀಶನ್). ಈ ಮೊತ್ತವನ್ನು ಸಂಸ್ಥೆಗಳು ಹಣದ ರೂಪದಲ್ಲೋ, ತಮ್ಮದೇ ತಾಣದಲ್ಲಿ ಬಳಸಬಹುದಾದ ಗಿಫ್ಟ್ ಕೂಪನ್‌ಗಳ ರೂಪದಲ್ಲೋ ನೀಡುತ್ತವೆ.
ಯಾವ ಅಫಿಲಿಯೇಟ್ ಮೂಲಕ ಎಷ್ಟು ವ್ಯಾಪಾರ ಸಿಕ್ಕಿದೆ ಎನ್ನುವುದು ಸಂಸ್ಥೆಗಳಿಗೆ ಗೊತ್ತಾಗಬೇಕಲ್ಲ, ಅದಕ್ಕಾಗಿ ಅವು ಪ್ರತಿ ಅಫಿಲಿಯೇಟ್‌ಗೂ ಪ್ರತ್ಯೇಕ ಕೊಂಡಿಗಳನ್ನು (ಲಿಂಕ್) ನೀಡಿರುತ್ತವೆ. ಇವಕ್ಕೆ ಅಫಿಲಿಯೇಟ್ ಲಿಂಕ್ ಎಂದು ಹೆಸರು. ಗ್ರಾಹಕರು ಅಂತಹ ಕೊಂಡಿಗಳ ಮೂಲಕ ಸಂಸ್ಥೆಯ ಜಾಲತಾಣಕ್ಕೆ ಹೋದಾಗ ಅವರು ಯಾವ ಅಫಿಲಿಯೇಟ್ ಮೂಲಕ ಇತ್ತ ಬಂದಿದ್ದಾರೆ ಎನ್ನುವುದು ಸಂಸ್ಥೆಗೆ ಗೊತ್ತಾಗುತ್ತದೆ, ಆ ಗ್ರಾಹಕರು ಮಾಡಬಹುದಾದ ಖರೀದಿಗೆ ಕಮೀಶನ್ ನೀಡುವುದೂ ಸುಲಭವಾಗುತ್ತದೆ.
ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಹಲವು ದೊಡ್ಡ ಆನ್‌ಲೈನ್ ಅಂಗಡಿಗಳು ನಮ್ಮ ದೇಶದಲ್ಲೂ ಅಫಿಲಿಯೇಟ್ ಮಾರ್ಕೆಟಿಂಗ್ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಇಂತಹ ಪ್ರತಿ ಕಾರ್ಯಕ್ರಮದ ನಿಯಮ-ನಿಬಂಧನೆಗಳು ಬೇರೆಬೇರೆಯಾಗಿರುವುದರಿಂದ ಹೆಚ್ಚಿನ ವಿವರಗಳಿಗೆ ಆಯಾ ಅಫಿಲಿಯೇಟ್ ಕಾರ್ಯಕ್ರಮದ ಜಾಲತಾಣಕ್ಕೆ ಭೇಟಿನೀಡುವುದೇ ಸೂಕ್ತ (ಅಂತಹ ತಾಣಗಳ ವಿವರವನ್ನು ಗೂಗಲ್ ಮೂಲಕ ಪಡೆಯಬಹುದು).

Antivirus

ಆಂಟಿವೈರಸ್
Kannada Equivalent: (ರೂಪಿಸಬೇಕಿದೆ)
Short Description : ಕುತಂತ್ರಾಂಶಗಳ (ಮಾಲ್‌ವೇರ್) ಕಾಟದಿಂದ ಪಾರಾಗಲು ನೆರವಾಗುವ ತಂತ್ರಾಂಶ
Long Description: ನಮ್ಮ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳನ್ನೆಲ್ಲ ಕಾಡುವ ಕುತಂತ್ರಾಂಶಗಳಿಂದ (ಮಾಲ್‌ವೇರ್) ಪಾರಾಗಲು ನೆರವಾಗುವ ತಂತ್ರಾಂಶವೇ ಆಂಟಿವೈರಸ್. ಕುತಂತ್ರಾಂಶಗಳನ್ನು ಗುರುತಿಸಿ ಅವು ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿಗೆ ಏನೂ ತೊಂದರೆಮಾಡದಂತೆ ತಡೆಯುವುದು ಈ ತಂತ್ರಾಂಶದ ಕೆಲಸ.
ಆಂಟಿವೈರಸ್‌ಗಳ ಕೆಲಸ ನಡೆಯುವುದು ಕುತಂತ್ರಾಂಶಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ದತ್ತಸಂಚಯವನ್ನು (ಡೇಟಾಬೇಸ್) ಆಧರಿಸಿಕೊಂಡು. ವೈರಸ್ ವಿರೋಧಿ ತಂತ್ರಾಂಶ ರೂಪಿಸುವ ಸಂಸ್ಥೆಗಳು ಯಾವೆಲ್ಲ ಕುತಂತ್ರಾಂಶಗಳನ್ನು ಪತ್ತೆಮಾಡಿರುತ್ತವೆಯೋ ಅವೆಲ್ಲವುಗಳ ‘ಸಿಗ್ನೇಚರ್’, ಅರ್ಥಾತ್ ಗುಣಲಕ್ಷಣಗಳನ್ನು ಇಂತಹ ದತ್ತಸಂಚಯಗಳಲ್ಲಿ ಸಂಗ್ರಹಿಸಲಾಗಿರುತ್ತದೆ. ಹೊಸಹೊಸ ಕುತಂತ್ರಾಂಶಗಳು ಪತ್ತೆಯಾದಂತೆಲ್ಲ ಅವುಗಳ ಬಗೆಗಿನ ಮಾಹಿತಿ ಈ ದತ್ತಸಂಚಯವನ್ನು ಸೇರಿಕೊಳ್ಳುತ್ತದೆ (ನಿರ್ದಿಷ್ಟ ಪರೀಕ್ಷೆಗಳ ಮೂಲಕ ಹೊಸ ಕುತಂತ್ರಾಂಶಗಳನ್ನು ತಡೆಯುವ ಚಾಕಚಕ್ಯತೆಯೂ ಹಲವು ಆಂಟಿವೈರಸ್‌ಗಳಲ್ಲಿರುತ್ತದೆ).
ಆಂಟಿವೈರಸ್ ತಂತ್ರಾಂಶಗಳನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು ಎನ್ನುವುದು ಇದೇ ಕಾರಣಕ್ಕಾಗಿ. ಹೀಗೆ ಮಾಡುವುದರಿಂದ ಹೊಸ ಕುತಂತ್ರಾಂಶಗಳ ಬಗೆಗಿನ ಮಾಹಿತಿ ನಮ್ಮ ಕಂಪ್ಯೂಟರ್‌ನಲ್ಲಿರುವ ವೈರಸ್ ವಿರೋಧಿ ತಂತ್ರಾಂಶಕ್ಕೂ ಸಿಗುವಂತೆ ಮಾಡಬಹುದು. ಇದರಿಂದಾಗಿ ನಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಸಾಧ್ಯ. ಅಷ್ಟೇ ಅಲ್ಲ, ನಮ್ಮ ಕಂಪ್ಯೂಟರ್‌ನಿಂದ ಕುತಂತ್ರಾಂಶಗಳು ಇತರೆಡೆಗೂ ಹರಡಿ ಬೇರೆಯವರಿಗೆ ತೊಂದರೆಯಾಗುವುದನ್ನು ಕೂಡ ತಪ್ಪಿಸಬಹುದು.

Augmented Reality

ಆಗ್‌ಮೆಂಟೆಡ್ ರಿಯಾಲಿಟಿ
Kannada Equivalent: ಅತಿವಾಸ್ತವ
Short Description : ವಾಸ್ತವ ಸಂಗತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸುವುದು. ಕಣ್ಣಮುಂದಿನ ನೈಜ ದೃಶ್ಯಕ್ಕೆ ಪೂರಕವಾದ ಛಾಯಾವಾಸ್ತವ (ವರ್ಚುಯಲ್) ಮಾಹಿತಿಯನ್ನು ಪ್ರದರ್ಶಿಸಲು ಅನುವುಮಾಡಿಕೊಡುವ ತಂತ್ರಜ್ಞಾನ
Long Description: ನಮ್ಮ ಕಣ್ಣಮುಂದಿನ ದೃಶ್ಯವನ್ನು ಗಮನಿಸಿಕೊಂಡು ಅದಕ್ಕೆ ಪೂರಕವಾದ ಮಾಹಿತಿಯನ್ನು ಒದಗಿಸುವ ತಂತ್ರಜ್ಞಾನವನ್ನು ‘ಆಗ್‌ಮೆಂಟೆಡ್ ರಿಯಾಲಿಟಿ’ (ಎಆರ್) ಎಂದು ಕರೆಯುತ್ತಾರೆ. ಮೊಬೈಲ್ ಫೋನ್, ಸ್ಮಾರ್ಟ್ ಕನ್ನಡಕ ಮುಂತಾದ ಹಲವು ಸಾಧನಗಳ ಮೂಲಕ ನಮ್ಮನ್ನು ತಲುಪಬಲ್ಲ ಈ ಮಾಹಿತಿ ಚಿತ್ರ, ಧ್ವನಿ ಅಥವಾ ಪಠ್ಯ – ಯಾವ ರೂಪದಲ್ಲಾದರೂ ಇರಬಹುದು. ಒಟ್ಟಾರೆಯಾಗಿ ತಂತ್ರಜ್ಞಾನದ ಮೂಲಕ ಲಭ್ಯವಾಗುವ ಮಾಹಿತಿಗೂ ನಮ್ಮ ಕಣ್ಣಿಗೆ ಕಾಣುವ ವಾಸ್ತವ ಜಗತ್ತಿಗೂ ನಡುವೆ ವ್ಯತ್ಯಾಸವೇ ಇಲ್ಲವೇನೋ ಎನ್ನುವಂತಹ ಭಾವನೆ ಮೂಡಿಸುವುದು ಈ ತಂತ್ರಜ್ಞಾನದ ಮುಖ್ಯ ಉದ್ದೇಶ.
ಶಿಕ್ಷಣ, ವೈದ್ಯಕೀಯ, ಪುರಾತತ್ವ ವಿಜ್ಞಾನ, ಪ್ರವಾಸೋದ್ಯಮ, ಗೃಹನಿರ್ಮಾಣ ವಿಜ್ಞಾನ, ಯಂತ್ರೋಪಕರಣ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವುದು ಸಾಧ್ಯ ಎಂದು ತಜ್ಞರು ಹೇಳುತ್ತಾರೆ. ಭಾರತವೂ ಸೇರಿದಂತೆ ಹಲವು ದೇಶಗಳ ಪತ್ರಿಕೆಗಳಲ್ಲಿ – ಜಾಹೀರಾತುಗಳಲ್ಲಿ ಈ ತಂತ್ರಜ್ಞಾನ ಈಗಾಗಲೇ ಬಳಕೆಯಾಗುತ್ತಿದೆ. ನಿರ್ದಿಷ್ಟ ಚಿತ್ರವನ್ನು ಮೊಬೈಲ್ ಕ್ಯಾಮೆರಾ ಬಳಸಿ ಸ್ಕ್ಯಾನ್ ಮಾಡಿದಾಗ ಅಲ್ಲಿ ಛಾಯಾಚಿತ್ರದ ಬದಲು ವೀಡಿಯೋ ಕಾಣಿಸಿಕೊಳ್ಳುವುದು ಈ ತಂತ್ರಜ್ಞಾನ ಬಳಕೆಯಾಗುವ ಬಗೆಯ ಉದಾಹರಣೆಗಳಲ್ಲೊಂದು.

Autoplay

ಆಟೋಪ್ಲೇ
Kannada Equivalent: (ರೂಪಿಸಬೇಕಿದೆ)
Short Description : ಕಡತಗಳು, ತಂತ್ರಾಂಶಗಳು ತಮ್ಮಷ್ಟಕ್ಕೆ ತಾವೇ ಚಾಲೂ ಆಗುವ ಪ್ರಕ್ರಿಯೆ
Long Description: ಕೆಲವೊಂದು ಜಾಲತಾಣಗಳನ್ನು ತೆರೆದಾಗ ಅಲ್ಲಿರುವ ವೀಡಿಯೋಗಳು ತಮ್ಮಷ್ಟಕ್ಕೆ ತಾವೇ ಚಾಲೂ ಆಗುವುದನ್ನು ನೀವು ಗಮನಿಸಿರಬಹುದು. ಯೂಟ್ಯೂಬ್‌ನಲ್ಲಿ ನೋಡುತ್ತಿರುವ ವೀಡಿಯೋ ಮುಗಿದ ತಕ್ಷಣ ಇನ್ನೊಂದು ವೀಡಿಯೋ ಪ್ರಾರಂಭವಾಗುವುದೂ ನಿಮ್ಮ ಗಮನಕ್ಕೆ ಬಂದಿರಲು ಸಾಧ್ಯ.
ಧ್ವನಿ ಹಾಗೂ ವೀಡಿಯೋ ರೂಪದ ಕಡತಗಳು ಹೀಗೆ ತಮ್ಮಷ್ಟಕ್ಕೆ ತಾವೇ ಚಾಲೂ ಆಗುವ ಪ್ರಕ್ರಿಯೆಯನ್ನು ‘ಆಟೋಪ್ಲೇ’ ಎಂದು ಕರೆಯುತ್ತಾರೆ. ಬಳಕೆದಾರರಿಂದ ಯಾವುದೇ ಆದೇಶವನ್ನು (ಇನ್‌ಪುಟ್) ನಿರೀಕ್ಷಿಸದೆ ತನ್ನಷ್ಟಕ್ಕೆ ತಾನೇ ಪ್ರಾರಂಭವಾಗುವುದು ಈ ಪ್ರಕ್ರಿಯೆಯ ಸ್ವರೂಪ.
ಹೊಸದೊಂದು ಶೇಖರಣಾ ಮಾಧ್ಯಮವನ್ನು (ಉದಾ: ಪೆನ್ ಡ್ರೈವ್ ಅಥವಾ ಮೆಮೊರಿ ಕಾರ್ಡ್) ಕಂಪ್ಯೂಟರಿಗೆ ಸಂಪರ್ಕಿಸಿದಾಗ ಅದರಲ್ಲಿರುವ ಮಾಹಿತಿಯೂ ಇದೇ ರೀತಿ ಸ್ವಯಂಚಾಲಿತವಾಗಿ ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯ. ಈ ಪ್ರಕ್ರಿಯೆಗೂ ‘ಆಟೋಪ್ಲೇ’ ಎಂದೇ ಹೆಸರು. ಆಟೋಪ್ಲೇ ಸ್ವರೂಪ ಹೇಗಿರಬೇಕೆಂದು ತೀರ್ಮಾನಿಸುವ, ಯಾವುದೇ ಮಾಹಿತಿ ಸ್ವಯಂಚಾಲಿತವಾಗಿ ತೆರೆದುಕೊಳ್ಳದಂತೆ ತಡೆಯುವ ಸ್ವಾತಂತ್ರ್ಯವೂ ಬಳಕೆದಾರರಿಗೆ ಇರುತ್ತದೆ.
ವೀಡಿಯೋಗಳು ನಮ್ಮ ಇಚ್ಛೆಗೆ ವಿರುದ್ಧವಾಗಿ ಆಟೋಪ್ಲೇ ಆಗದಂತೆ ತಡೆಯುವುದೂ ಸಾಧ್ಯ. ಆಟೋಪ್ಲೇ ಪ್ರಕ್ರಿಯೆಯನ್ನು ಪ್ರತಿಬಂಧಿಸುವ ಸೌಲಭ್ಯ ಫೇಸ್‌ಬುಕ್ ಹಾಗೂ ಯೂಟ್ಯೂಬ್ ಆಯ್ಕೆಗಳಲ್ಲಿ ದೊರಕುತ್ತದೆ. ಫೇಸ್‌ಬುಕ್‌ನಲ್ಲಿ ಈ ಆಯ್ಕೆ ‘ಸೆಟಿಂಗ್ಸ್’ > ‘ವೀಡಿಯೋಸ್’ ಅಡಿಯಲ್ಲಿರುತ್ತದೆ. ‘ಆಟೋಪ್ಲೇ ವೀಡಿಯೋಸ್’ ಅನ್ನು ‘ಆಫ್’ ಎಂದು ಸೂಚಿಸುವ ಮೂಲಕ ವೀಡಿಯೋಗಳು ಸ್ವಯಂಚಾಲಿತವಾಗಿ ಚಾಲೂ ಆಗುವುದನ್ನು ತಪ್ಪಿಸಬಹುದು. ವೀಡಿಯೋ ಇದ್ದಕ್ಕಿದ್ದಂತೆ ಪ್ರಾರಂಭವಾದಾಗ ಮುಜುಗರವಾಗುವುದನ್ನು, ಮೊಬೈಲ್ ಡೇಟಾ ವ್ಯರ್ಥವಾಗುವುದನ್ನೆಲ್ಲ ಈ ಸೌಲಭ್ಯ ಬಳಸುವ ಮೂಲಕ ತಪ್ಪಿಸಬಹುದು.

Autoresponder

ಆಟೋರೆಸ್ಪಾಂಡರ್
Kannada Equivalent: (ರೂಪಿಸಬೇಕಿದೆ)
Short Description : ಇಮೇಲ್ ಖಾತೆದಾರರ ಪರವಾಗಿ ಸ್ವಯಂಚಾಲಿತ ಪ್ರತ್ಯುತ್ತರಗಳನ್ನು ಕಳಿಸುವ ಸವಲತ್ತು
Long Description: ಸಂಸ್ಥೆಗಳ ಗ್ರಾಹಕ ಸೇವಾ ವಿಭಾಗಕ್ಕೆ ಇಮೇಲ್ ಸಂದೇಶ ಕಳಿಸಿದಾಗ “ನಿಮ್ಮ ಪತ್ರ ತಲುಪಿದೆ” ಎಂದು ಹೇಳುವ ಪ್ರತಿಕ್ರಿಯೆ ಥಟ್ಟನೆ ಪ್ರತ್ಯಕ್ಷವಾಗುವುದನ್ನು ನೀವು ಗಮನಿಸಿರಬಹುದು. ಇದೇ ರೀತಿ “ನಾನು ರಜೆಯಲ್ಲಿದ್ದೇನೆ, ಕಚೇರಿಗೆ ಮರಳಿದ ಕೂಡಲೇ ಉತ್ತರಿಸುವೆ” ಎನ್ನುವಂತಹ ಸಂದೇಶಗಳು ನಿಮ್ಮ ಮಿತ್ರರ ಖಾತೆಗಳಿಂದಲೂ ಬಂದಿರಬಹುದು.
ಇಮೇಲ್ ಖಾತೆದಾರರ ಪರವಾಗಿ ಇಂತಹ ಪೂರ್ವನಿರ್ಧಾರಿತ ಸಂದೇಶಗಳನ್ನು ಕಳುಹಿಸುವುದು ಒಂದು ತಂತ್ರಾಂಶದ ಕೆಲಸ. ಸ್ವಯಂಚಾಲಿತವಾಗಿ (ಆಟೋಮ್ಯಾಟಿಕ್) ಪ್ರತ್ಯುತ್ತರಗಳನ್ನು (ರೆಸ್ಪಾನ್ಸ್) ಕಳಿಸುವುದರಿಂದಲೇ ಈ ತಂತ್ರಾಂಶವನ್ನು ‘ಆಟೋರೆಸ್ಪಾಂಡರ್’ ಎಂದು ಕರೆಯುತ್ತಾರೆ.
‘ಆಟೋಮ್ಯಾಟಿಕ್ ರಿಪ್ಲೈ’ ಹಾಗೂ ‘ವೆಕೇಶನ್ ರೆಸ್ಪಾಂಡರ್’ ಎಂದೂ ಕರೆಸಿಕೊಳ್ಳುವ ಈ ಸೌಲಭ್ಯ ಬಹುತೇಕ ಎಲ್ಲ ಇಮೇಲ್ ಸೇವೆಗಳಲ್ಲೂ ಇರುತ್ತದೆ. ಕಚೇರಿಗೆ ರಜೆ ಹಾಕಿದ್ದಾಗ, ಅಂತರಜಾಲ ಸಂಪರ್ಕವಿಲ್ಲದ ಸ್ಥಳಗಳಲ್ಲಿದ್ದಾಗ ನಮಗೆ ಬರುವ ಇಮೇಲ್ ಸಂದೇಶಗಳಿಗೆ ಈ ಸೌಲಭ್ಯ ಬಳಸಿ ಸ್ವಯಂಚಾಲಿತ ಉತ್ತರಗಳನ್ನು ಕಳಿಸುವುದು ಸಾಧ್ಯ. ನಿಮ್ಮ ಪತ್ರಕ್ಕೆ ಪ್ರತಿಕ್ರಿಯೆ ನೀಡುವುದು ಯಾವಾಗ ಸಾಧ್ಯವಾಗಬಹುದು ಎನ್ನುವ ಮಾಹಿತಿಯನ್ನು ಈ ಉತ್ತರಗಳಲ್ಲಿ ಸೂಚಿಸುವುದು ಸಾಮಾನ್ಯ ಅಭ್ಯಾಸ. ಇಂತಹ ಉತ್ತರಗಳನ್ನು ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಕಳಿಸಬೇಕು ಎಂದು ಸೂಚಿಸುವುದು ಕೂಡ ಸಾಧ್ಯ.
ಗ್ರಾಹಕ ಸೇವಾ ವಿಭಾಗಕ್ಕೆ ಕಳಿಸಿದ ಪತ್ರಕ್ಕೆ ಉತ್ತರಿಸುವಾಗ ಸ್ವೀಕೃತಿ ಸಂಖ್ಯೆಯಂತಹ ಹೆಚ್ಚುವರಿ ಮಾಹಿತಿಯೂ ಸೇರಬೇಕಾಗುತ್ತದಲ್ಲ, ಅದಕ್ಕಾಗಿ ಕೊಂಚ ಹೆಚ್ಚಿನ ಸವಲತ್ತುಗಳುಳ್ಳ ಆಟೋರೆಸ್ಪಾಂಡರ್‌ಗಳು ಬಳಕೆಯಾಗುತ್ತವೆ.

Ad blocker

ಆಡ್ ಬ್ಲಾಕರ್
Kannada Equivalent: (ರೂಪಿಸಬೇಕಿದೆ)
Short Description : ಜಾಲತಾಣಗಳಲ್ಲಿ ಅನಗತ್ಯ ಜಾಹೀರಾತುಗಳು ಕಾಣದಂತೆ ನಿರ್ಬಂಧಿಸಿ ನಮ್ಮ ಜಾಲಾಟವನ್ನು ಸರಾಗವಾಗಿಸುವ ತಂತ್ರಾಂಶ
Long Description: ಜಾಲತಾಣಗಳಲ್ಲಿ ಜಾಹೀರಾತುಗಳ ಹಾವಳಿ ವಿಪರೀತ ಎನ್ನುವುದು ಹಲವರ ಅಭಿಪ್ರಾಯ. ಕೆಲವು ತಾಣಗಳಲ್ಲಂತೂ ಮಾಹಿತಿಗಿಂತ ಹೆಚ್ಚು ಜಾಹೀರಾತೇ ಇರುತ್ತದೆ. ಚಿತ್ರರೂಪದ್ದಷ್ಟೇ ಅಲ್ಲ, ವೀಡಿಯೋ – ಧ್ವನಿ ಮುಂತಾದ ವಿವಿಧ ರೂಪಗಳಲ್ಲೂ ಜಾಹೀರಾತುಗಳು ನಮ್ಮನ್ನು ಕಾಡುತ್ತವೆ. ಅಷ್ಟೇ ಏಕೆ, ಜಾಹೀರಾತುಗಳ ಮೂಲಕ ಕುತಂತ್ರಾಂಶಗಳ ನುಸುಳುವಿಕೆಯೂ ಸಾಧ್ಯ.
ಹೀಗೆ ಕಿರಿಕಿರಿ ಮಾಡುವ ಜಾಹೀರಾತುಗಳನ್ನು ನಿರ್ಬಂಧಿಸಿ ನಮ್ಮ ಜಾಲಾಟವನ್ನು ಸರಾಗವಾಗಿಸುವ ತಂತ್ರಾಂಶಗಳನ್ನು ‘ಜಾಹೀರಾತು ನಿರ್ಬಂಧಕ’, ಅಂದರೆ ‘ಆಡ್ ಬ್ಲಾಕರ್’ಗಳೆಂದು ಕರೆಯುತ್ತಾರೆ. ನಾವು ಭೇಟಿಕೊಡಲು ಬಯಸಿರುವ ಪುಟದಲ್ಲಿ ಜಾಹೀರಾತುಗಳನ್ನು ಗುರುತಿಸಿ ಅವು ಮಾತ್ರ ತೆರೆಯದಂತೆ ಮಾಡುವುದು, ಆ ಮೂಲಕ ನಮಗೆ ಆಗುವ ಕಿರಿಕಿರಿಯನ್ನು ತಡೆಯುವುದು ಈ ತಂತ್ರಾಂಶಗಳ ವೈಶಿಷ್ಟ್ಯ.
ಆದರೆ ಇಲ್ಲೊಂದು ಸಮಸ್ಯೆಯಿದೆ. ಬಹಳಷ್ಟು ಜಾಲತಾಣಗಳಿಗೆ ಜಾಹೀರಾತುಗಳೇ ಆದಾಯದ ಪ್ರಮುಖ ಮೂಲ (ಲಾಭಾಪೇಕ್ಷೆಯಿಲ್ಲದ, ಜಾಹೀರಾತುಗಳನ್ನು ಪ್ರದರ್ಶಿಸದ ತಾಣಗಳ ಮಾತು ಬೇರೆ). ಜಾಲತಾಣಕ್ಕೆ ಭೇಟಿಕೊಡುವ ನಮ್ಮಂತಹ ಬಳಕೆದಾರರು ಅವರಿಗೆ ಯಾವುದೇ ಶುಲ್ಕ ನೀಡುವುದಿಲ್ಲ; ಇಷ್ಟರ ಮೇಲೆ ಜಾಹೀರಾತುಗಳೂ ಪ್ರದರ್ಶನವಾಗದಂತೆ ತಡೆದರೆ ಆ ತಾಣಗಳು ನಡೆಯುವುದು ಹೇಗೆ?
ಹೀಗಾಗಿ ಜಾಹೀರಾತು ನಿರ್ಬಂಧಕ ತಂತ್ರಾಂಶಗಳನ್ನು ಬಳಸುವ ಕಂಪ್ಯೂಟರು ಅಥವಾ ಸ್ಮಾರ್ಟ್‌ಫೋನುಗಳಲ್ಲಿ ತಮ್ಮ ತಾಣವೇ ತೆರೆದುಕೊಳ್ಳದಂತೆ ಮಾಡುವ ನಿಟ್ಟಿನಲ್ಲೂ ಹಲವು ಜಾಲತಾಣಗಳು ಯೋಚಿಸಿವೆ. ಕೊಂಚ ಹಣಕೊಟ್ಟು ನೋಂದಾಯಿಸಿಕೊಂಡ ಗ್ರಾಹಕರಿಗೆ ಜಾಹೀರಾತುಗಳಿಲ್ಲದ ಆವೃತ್ತಿಯನ್ನು ನೀಡುವ ಪ್ರಯತ್ನಗಳೂ ನಡೆದಿವೆ.

Adware

ಆಡ್‌ವೇರ್
Kannada Equivalent: (ರೂಪಿಸಬೇಕಿದೆ)
Short Description : ಜಾಹೀರಾತು ಪ್ರದರ್ಶನವನ್ನೇ ಉದ್ದೇಶವಾಗಿಟ್ಟುಕೊಂಡ ತಂತ್ರಾಂಶ
Long Description: ವಿಶ್ವವ್ಯಾಪಿ ಜಾಲದಲ್ಲಿರುವ ಬಹುತೇಕ ಮಾಹಿತಿಯನ್ನು ಬಳಸಲು ನಾವು ಯಾವುದೇ ಶುಲ್ಕ ನೀಡುವುದಿಲ್ಲವಲ್ಲ, ಹಾಗಾಗಿ ಅನೇಕ ಜಾಲತಾಣಗಳು ಜಾಹೀರಾತುಗಳನ್ನು ಪ್ರದರ್ಶಿಸಿ ಹಣ ಸಂಪಾದಿಸಿಕೊಳ್ಳುತ್ತವೆ. ತಂತ್ರಾಂಶಗಳೂ ಮೊಬೈಲ್ ಆಪ್‌ಗಳೂ ಜಾಹೀರಾತುಗಳನ್ನು ಪ್ರದರ್ಶಿಸುತ್ತವೆ. ಬಳಕೆದಾರರಿಂದ ಯಾವುದೇ ಶುಲ್ಕ ಕೇಳದ ಅದೆಷ್ಟೋ ತಂತ್ರಾಂಶಗಳು (‘ಫ್ರೀವೇರ್’) ಹಣ ಸಂಪಾದಿಸುವುದೇ ಜಾಹೀರಾತುಗಳ ಮೂಲಕ.
ಇವುಗಳ ಜೊತೆಗೆ ಜಾಹೀರಾತು ಪ್ರದರ್ಶನವನ್ನೇ ಕೆಲಸವಾಗಿಟ್ಟುಕೊಂಡ ತಂತ್ರಾಂಶಗಳೂ ಇವೆ. ಬಳಕೆದಾರರ ಕಂಪ್ಯೂಟರನ್ನೋ ಮೊಬೈಲನ್ನೋ ಸೇರಿಕೊಂಡು ಅನಪೇಕ್ಷಿತವಾಗಿ ಜಾಹೀರಾತುಗಳನ್ನು ಪ್ರದರ್ಶಿಸುವುದು, ಬ್ರೌಸರ್ ತೆರೆದ ತಕ್ಷಣ ಯಾವುದೋ ತಾಣವನ್ನು ಪ್ರದರ್ಶಿಸುವುದು, ನಮ್ಮ ಆಯ್ಕೆಯ ಸರ್ಚ್ ಇಂಜಿನ್ ಬದಲು ಬೇರಾವುದೋ ವ್ಯವಸ್ಥೆಯತ್ತ ನಮ್ಮ ಹುಡುಕಾಟವನ್ನು ಮರುನಿರ್ದೇಶಿಸುವುದು – ಇದು ಇಂತಹ ತಂತ್ರಾಂಶಗಳ ಸ್ವರೂಪ.
ಈ ತಂತ್ರಾಂಶಗಳನ್ನು ‘ಆಡ್‌ವೇರ್’ಗಳೆಂದು ಕರೆಯುತ್ತಾರೆ. ಬಹಳಷ್ಟು ಆಡ್‌ವೇರ್‌ಗಳು ಬಳಕೆದಾರರ ಅರಿವಿಗೆ ಬಾರದಂತೆ ಅವರ ಕಂಪ್ಯೂಟರನ್ನೋ ಮೊಬೈಲ್ ಫೋನನ್ನೋ ಸೇರುವುದರಿಂದ ಅವನ್ನು ಕುತಂತ್ರಾಂಶಗಳ ಗುಂಪಿಗೆ ಸೇರಿಸಬಹುದು. ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ, ಅವರ ಬ್ರೌಸಿಂಗ್ ಅಭ್ಯಾಸವನ್ನು ಗಮನಿಸಿಕೊಳ್ಳುತ್ತ ಪ್ರದರ್ಶಿಸುವ ಜಾಹೀರಾತುಗಳನ್ನು ಅದಕ್ಕೆ ಅನುಗುಣವಾಗಿ ಬದಲಿಸುವ ಆಡ್‌ವೇರ್‌ಗಳೂ ಇವೆ.
ಸುಮ್ಮನೆ ಜಾಹೀರಾತುಗಳನ್ನಷ್ಟೇ ಪ್ರದರ್ಶಿಸುವ ಆಡ್‌ವೇರ್‌ನಿಂದ ಕಿರಿಕಿರಿಯಾಗುವುದು ನಿಜವಾದರೂ ಕುತಂತ್ರಾಂಶಗಳಂತೆ ಅದರಿಂದ ಬೇರೆ ಯಾವುದೇ ಹಾನಿ ಆಗುವುದಿಲ್ಲ. ಹೀಗಾಗಿ ಅನೇಕ ಆಡ್‌ವೇರ್‌ಗಳು ಆಂಟಿವೈರಸ್ ತಂತ್ರಾಂಶಗಳ ಕಣ್ತಪ್ಪಿಸುವಲ್ಲಿ ಯಶಸ್ವಿಯಾಗುತ್ತವೆ. ಅವುಗಳ ನಿವಾರಣೆಗೆ ಆಡ್‌ವೇರ್ ನಿರ್ಬಂಧಕ ತಂತ್ರಾಂಶಗಳನ್ನು (ಆಡ್‌ವೇರ್ ರಿಮೂವಲ್ ಟೂಲ್) ಬಳಸಬಹುದು.

App

ಆಪ್
Kannada Equivalent: (ರೂಪಿಸಬೇಕಿದೆ)
Short Description : ಸ್ಮಾರ್ಟ್‌ಫೋನ್ – ಟ್ಯಾಬ್ಲೆಟ್ ಸೇರಿದಂತೆ ವಿವಿಧ ವಿದ್ಯುನ್ಮಾನ ಸಾಧನಗಳಲ್ಲಿ ಬಳಕೆಯಾಗುವ ತಂತ್ರಾಂಶ, ‘ಅಪ್ಲಿಕೇಶನ್’ ಎಂಬ ಹೆಸರಿನ ಹ್ರಸ್ವರೂಪ
Long Description: ಆಪ್ ಎನ್ನುವುದು ಸ್ಮಾರ್ಟ್‌ಫೋನ್ ಬಳಕೆದಾರರಿಗೆಲ್ಲ ಅತ್ಯಂತ ಪರಿಚಿತವಾದ ಹೆಸರು. ನಮ್ಮ ಮೊಬೈಲಿನಲ್ಲಿ ಬೇರೆಬೇರೆ ಆಪ್‌ಗಳನ್ನು ಬಳಸಿ ಬೇರೆಬೇರೆ ಕೆಲಸಗಳನ್ನು ಸಾಧಿಸಿಕೊಳ್ಳುವುದು ನಮಗೆಲ್ಲ ಚೆನ್ನಾಗಿಯೇ ಗೊತ್ತು.
ಆಪ್ ಎನ್ನುವುದು ‘ಅಪ್ಲಿಕೇಶನ್’ ಎಂಬ ಹೆಸರಿನ ಹ್ರಸ್ವರೂಪ. ಅಪ್ಲಿಕೇಶನ್ ಎಂದರೂ ಆಪ್ ಎಂದರೂ ತಂತ್ರಾಂಶವೇ.
ಮೊಬೈಲ್ ಸಾಧನಗಳಲ್ಲಿ ಬಳಕೆಯಾಗುವ ಪ್ರತಿ ಕಾರ್ಯಾಚರಣ ವ್ಯವಸ್ಥೆಯಲ್ಲೂ ಹಲವಾರು ರೀತಿಯ ಆಪ್‌ಗಳು ದೊರಕುತ್ತವೆ. ಇದಕ್ಕಾಗಿ ಆಯಾ ಕಾರ್ಯಾಚರಣ ವ್ಯವಸ್ಥೆಗಳು ತಮ್ಮದೇ ಆದ ಆಪ್ ಸ್ಟೋರುಗಳನ್ನು ರೂಪಿಸಿಕೊಂಡಿರುತ್ತವೆ. ಸ್ವಂತದ ಓಎಸ್ ಇಲ್ಲದ ಅಮೆಜಾನ್‌ನಂತಹ ಸಂಸ್ಥೆಗಳೂ ಆಪ್ ಅಂಗಡಿಗಳನ್ನು ರೂಪಿಸಿಕೊಂಡಿವೆ.
ಆಪ್ ಎಂದತಕ್ಷಣ ಮೊಬೈಲು – ಟ್ಯಾಬ್ಲೆಟ್ಟುಗಳಷ್ಟೇ ನಮ್ಮ ನೆನಪಿಗೆ ಬರುತ್ತವಲ್ಲ, ಆಪ್‌ಗಳ ಬಳಕೆಯಾಗುವುದು ಈ ಸಾಧನಗಳಲ್ಲಿ ಮಾತ್ರವೇನಲ್ಲ. ಇದೀಗ ಕಂಪ್ಯೂಟರುಗಳಲ್ಲೂ ಆಪ್ ಬಳಕೆ ಸಾಮಾನ್ಯವಾಗಿದೆ. ಗೂಗಲ್ ಕ್ರೋಮ್ ಬ್ರೌಸರ್‌ನ ಬಳಕೆದಾರರು ಅದರಲ್ಲಿ ಅನೇಕ ಬಗೆಯ ಆಪ್‌ಗಳನ್ನು ಬಳಸಬಹುದು. ಗೂಗಲ್‌ನದೇ ಉತ್ಪನ್ನವಾದ ‘ಕ್ರೋಮ್‌ಬುಕ್’ನಂತಹ ಕಂಪ್ಯೂಟರ್ ಕೊಂಡವರು ಈ ಆಪ್‌ಗಳನ್ನು ಮಾತ್ರವೇ ಬಳಸುವುದು ಸಾಧ್ಯ.
ಮೊಬೈಲುಗಳಲ್ಲಿ ಇರುವಂತೆ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿಗಳಲ್ಲೂ (ಉದಾ: ವಿಂಡೋಸ್ ೧೦) ಆಪ್ ಸ್ಟೋರ್ ಇದೆ. ಮೊಬೈಲ್ ಆಪ್ ಸ್ಟೋರುಗಳಂತೆ ಇಲ್ಲಿಯೂ ಉಚಿತ ಹಾಗೂ ಹಣ ಪಾವತಿಸಿ ಬಳಸಬೇಕಾದ ಆಪ್‌ಗಳೆರಡೂ ದೊರಕುತ್ತವೆ.

App Store

ಆಪ್ ಸ್ಟೋರ್
Kannada Equivalent: (ರೂಪಿಸಬೇಕಿದೆ)
Short Description : ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮುಂತಾದ ವಿದ್ಯುನ್ಮಾನ ಸಾಧನಗಳಲ್ಲಿ ಬಳಸಬಹುದಾದ ಆಪ್‌ಗಳನ್ನು ಪಡೆದುಕೊಳ್ಳಲು ರೂಪಿಸಲಾಗಿರುವ ವ್ಯವಸ್ಥೆ
Long Description: ಆಂಡ್ರಾಯ್ಡ್, ಐಓಎಸ್, ವಿಂಡೋಸ್ – ಹೀಗೆ ಹಲವಾರು ಕಾರ್ಯಾಚರಣ ವ್ಯವಸ್ಥೆಗಳು (ಓಎಸ್) ಇಂದಿನ ಸ್ಮಾರ್ಟ್‌ಫೋನುಗಳಲ್ಲಿ ಬಳಕೆಯಾಗುತ್ತವೆ. ಸ್ಮಾರ್ಟ್‌ಫೋನ್ ಎಂದಾಕ್ಷಣ ಅದರಲ್ಲಿ ಉಪಯೋಗಿಸಲು ಆಪ್‌ಗಳು ಬೇಕಲ್ಲ, ಯಾವ ಮೊಬೈಲಿನಲ್ಲಿ ಯಾವೆಲ್ಲ ಆಪ್‌ಗಳು ಸಿಗುತ್ತವೆ ಎನ್ನುವುದು ಅದರಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಯನ್ನೇ ನೇರವಾಗಿ ಅವಲಂಬಿಸಿರುತ್ತದೆ.
ಇಂತಹ ಪ್ರತಿಯೊಂದು ಕಾರ್ಯಾಚರಣ ವ್ಯವಸ್ಥೆಯಲ್ಲೂ ಆಪ್‌ಗಳನ್ನು ಪಡೆದುಕೊಳ್ಳಲು ನಿರ್ದಿಷ್ಟ ವ್ಯವಸ್ಥೆ ಇರುತ್ತದೆ. ನಮಗೆ ಅಗತ್ಯವಾದ ಆಪ್ ಅನ್ನು ಹುಡುಕುವ, ಆರಿಸಿಕೊಳ್ಳುವ, ಅಗತ್ಯವಾದರೆ ಹಣ ಪಾವತಿಸುವ ಮತ್ತು ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳುವ (ಇನ್‌ಸ್ಟಾಲ್) ಸೌಲಭ್ಯವನ್ನು ಒದಗಿಸುವ ಇಂತಹ ವ್ಯವಸ್ಥೆಗಳನ್ನು ಆಪ್ ಅಂಗಡಿಗಳೆಂದೇ (ಆಪ್ ಸ್ಟೋರ್) ಕರೆಯುವುದು ವಾಡಿಕೆ. ಬರಿಯ ಸ್ಮಾರ್ಟ್‌ಫೋನ್‌ಗಳಿಗಷ್ಟೇ ಅಲ್ಲ, ಟ್ಯಾಬ್ಲೆಟ್ಟುಗಳಿಗೆ – ಸ್ಮಾರ್ಟ್ ವಾಚುಗಳಿಗೆಂದೇ ರೂಪಿಸಲಾದ ಆಪ್‌ಗಳೂ ಇಂತಹ ಅಂಗಡಿಗಳಲ್ಲಿ ದೊರಕುತ್ತವೆ. ಸ್ಮಾರ್ಟ್ ಟೀವಿಗಳಲ್ಲಿ ಪ್ರತ್ಯೇಕ ಆಪ್ ಅಂಗಡಿಗಳಿರುವುದೂ ಉಂಟು.
ಬೇರೆಬೇರೆ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಆಪ್ ಅಂಗಡಿಗಳನ್ನು ಬೇರೆಬೇರೆ ಹೆಸರಿನಿಂದ ಗುರುತಿಸುವ ಅಭ್ಯಾಸವಿದೆ. ಐಓಎಸ್ ಸಾಧನಗಳಲ್ಲಿ ‘ಆಪಲ್ ಆಪ್ ಸ್ಟೋರ್’ ಇದ್ದರೆ ಆಂಡ್ರಾಯ್ಡ್‌ನಲ್ಲಿ ‘ಗೂಗಲ್ ಪ್ಲೇ’ ಸ್ಟೋರ್ ಇದೆ. ಅದೇ ರೀತಿ ವಿಂಡೋಸ್ ಫೋನುಗಳಲ್ಲಿ ‘ವಿಂಡೋಸ್ ಸ್ಟೋರ್’ ಇರುತ್ತದೆ.
ಅಂದಹಾಗೆ ಕಾರ್ಯಾಚರಣ ವ್ಯವಸ್ಥೆಯ ನಿರ್ಮಾತೃಗಳು ಮಾತ್ರ ಆಪ್ ಅಂಗಡಿಗಳನ್ನು ರೂಪಿಸಬೇಕು ಎಂದೇನೂ ಇಲ್ಲ. ಸ್ವಂತ ಮೊಬೈಲ್ ಓಎಸ್ ಇಲ್ಲದ ಹಲವು ಸಂಸ್ಥೆಗಳೂ ಇಂತಹ ಆಪ್ ಅಂಗಡಿಗಳನ್ನು ರೂಪಿಸಿ ನಡೆಸುತ್ತಿವೆ. ಇಂತಹ ಸಂಸ್ಥೆಗಳ ಸಾಲಿನಲ್ಲಿ ನಾವು ಅಮೆಜಾನ್, ಸ್ಯಾಮ್‌ಸಂಗ್ ಮುಂತಾದ ದೊಡ್ಡ ಹೆಸರುಗಳನ್ನೂ ನೋಡಬಹುದು.

Algorithm

ಆಲ್ಗರಿದಮ್
Kannada Equivalent: ಕ್ರಮಾವಳಿ
Short Description : ಯಾವುದೇ ಸಮಸ್ಯೆಯನ್ನು ಪರಿಹರಿಸಲು ಕೈಗೊಳ್ಳಬೇಕಾದ ಹೆಜ್ಜೆಗಳ ಸರಣಿ
Long Description: ಪ್ರೋಗ್ರಾಮ್ ಬರೆಯಲು ಹೊರಟಾಗ ಅದರ ಪ್ರತಿಯೊಂದು ಹೆಜ್ಜೆಯನ್ನೂ ಪ್ರತ್ಯೇಕವಾಗಿ ವಿವರಿಸಬೇಕಾಗುತ್ತದೆ. ಇಂತಹ ಹೆಜ್ಜೆಗಳ ಸರಣಿಯೇ ಆಲ್ಗರಿದಮ್.
ಪ್ರೋಗ್ರಾಮ್‌ಗೆ ನೀಡಲಾಗುವ ಇನ್‌ಪುಟ್ ಅನ್ನು ಸೂಕ್ತವಾಗಿ ಸಂಸ್ಕರಿಸಿ ನಮಗೆ ಬೇಕಾದ ರೂಪದ ಔಟ್‌ಪುಟ್ ನೀಡುವಂತೆ ನಿರ್ದೇಶಿಸುವುದು ಆಲ್ಗರಿದಮ್‌ನ ಕೆಲಸ. ಉಳಿಸಿಟ್ಟ ಕಡತದ ಮೇಲೆ ಕ್ಲಿಕ್ಕಿಸಿದಾಗ ಅದು ತೆಗೆದುಕೊಳ್ಳುವುದರಿಂದ ಹಿಡಿದು ಅತ್ಯಂತ ಕ್ಲಿಷ್ಟವಾದ ಸಮಸ್ಯೆಯನ್ನು ಬಿಡಿಸುವವರೆಗೆ ಕಂಪ್ಯೂಟರಿನಲ್ಲಿ ಯಾವ ಕೆಲಸ ಆಗಬೇಕಾದರೂ ಅದಕ್ಕೆ ಸಂಬಂಧಪಟ್ಟ ಪ್ರತಿಯೊಂದು ಹೆಜ್ಜೆಯನ್ನೂ ಆ ಪ್ರೋಗ್ರಾಮಿನ ಆಲ್ಗರಿದಮ್ ಪರಿಗಣಿಸಿರಬೇಕು. ಪ್ರೋಗ್ರಾಮ್ ಬರೆಯುವ ಮುನ್ನ ಅದರ ತರ್ಕ (ಲಾಜಿಕ್) ಹೇಗಿರಬೇಕು ಎನ್ನುವುದನ್ನು ಅಂತಿಮಗೊಳಿಸುವಲ್ಲಿ ಆಲ್ಗರಿದಮ್‌ನದೇ ಪ್ರಮುಖ ಪಾತ್ರ.
ಪ್ರೋಗ್ರಾಮ್ ಬರೆಯಲು ಹೊರಟಿರುವುದು ಯಾವ ಭಾಷೆಯಲ್ಲೇ (ಸಿ++, ಜಾವಾ ಇತ್ಯಾದಿ) ಆಗಲಿ, ಆ ಕೆಲಸ ಶುರುಮಾಡುವ ಮೊದಲು ನಮ್ಮ ಉದ್ದೇಶಕ್ಕೆ ಹೊಂದುವ ಸಮರ್ಥ ಆಲ್ಗರಿದಮ್ ಅನ್ನು ಆರಿಸಿಕೊಳ್ಳುವುದು ಪ್ರೋಗ್ರಾಮಿಂಗ್‌ನ ಮಹತ್ವದ ಹೆಜ್ಜೆಗಳಲ್ಲೊಂದು. ವೇಗ, ಸಂಪನ್ಮೂಲದ ಬಳಕೆ, ಅನುಷ್ಠಾನದ ಜಟಿಲತೆ ಮುಂತಾದ ಅಂಶಗಳಮೇಲೆ ವಿವಿಧ ಆಲ್ಗರಿದಮ್‌ಗಳನ್ನು ಹೋಲಿಸಿ ಅವುಗಳ ಪೈಕಿ ಅತ್ಯಂತ ಸೂಕ್ತವೆಂದು ತೋರುವುದನ್ನಷ್ಟೆ ಆಯ್ದುಕೊಂಡು ಮುಂದುವರೆಯುವುದು ಸಾಮಾನ್ಯ ಅಭ್ಯಾಸ. ಹೀಗೆ ಆರಿಸಲಾದ ಆಲ್ಗರಿದಮ್‌ನ ತರ್ಕ ಎಷ್ಟು ಸಮರ್ಥವಾಗಿರುತ್ತದೋ ಅಂತಿಮವಾಗಿ ಸಿದ್ಧವಾಗುವ ಪ್ರೋಗ್ರಾಮಿನ ಸಾಮರ್ಥ್ಯದ ಪ್ರಮಾಣವೂ ಅಷ್ಟೇ ಇರುತ್ತದೆ.

Aspect Ratio

ಆಸ್ಪೆಕ್ಟ್ ರೇಶಿಯೋ
Kannada Equivalent: (ರೂಪಿಸಬೇಕಿದೆ)
Short Description : ಡಿಜಿಟಲ್ ರೂಪದಲ್ಲಿರುವ ಚಿತ್ರವೊಂದರ ಉದ್ದ ಮತ್ತು ಅಗಲಗಳ ನಡುವಿನ ಅನುಪಾತ
Long Description: ಡಿಜಿಟಲ್ ರೂಪದಲ್ಲಿರುವ ಚಿತ್ರವೊಂದರ ಉದ್ದ ಮತ್ತು ಅಗಲಗಳ ನಡುವಿನ ಅನುಪಾತವನ್ನು ಅದರ ‘ಆಸ್ಪೆಕ್ಟ್ ರೇಶಿಯೋ’ ಸೂಚಿಸುತ್ತದೆ. ಉದಾಹರಣೆಗೆ ಒಂದು ಚಿತ್ರದ ಅಗಲ ಅದರ ಎತ್ತರದ ಒಂದೂವರೆಪಟ್ಟು ದೊಡ್ಡದಿದೆ ಎನ್ನುವುದಾದರೆ ಅದರ ಆಸ್ಪೆಕ್ಟ್ ರೇಶಿಯೋ ೩:೨ ಆಗಿರುತ್ತದೆ. ಪ್ರದರ್ಶಕಗಳು (ಡಿಸ್ಪ್ಲೇ) ಹಾಗೂ ಮುದ್ರಿತ ಛಾಯಾಚಿತ್ರಗಳ ಉದ್ದ-ಅಗಲಗಳ ಅನುಪಾತವನ್ನು ಪ್ರತಿನಿಧಿಸಲೂ ಆಸ್ಪೆಕ್ಟ್ ರೇಶಿಯೋವನ್ನೇ ಬಳಸಲಾಗುತ್ತದೆ.
ಚಿತ್ರಗಳನ್ನು ಮುದ್ರಿಸುವಾಗ ಹಾಗೂ ಬೇರೆಬೇರೆ ಗಾತ್ರದ ಪರದೆಗಳ ಮೇಲೆ ಪ್ರದರ್ಶಿಸುವಾಗ ಅದರ ಆಸ್ಪೆಕ್ಟ್ ರೇಶಿಯೋ ಕಡೆಗೆ ಗಮನಹರಿಸಬೇಕಾದ್ದು ಅನಿವಾರ್ಯ. ಉದಾಹರಣೆಗೆ ೪:೩ ಆಸ್ಪೆಕ್ಟ್ ರೇಶಿಯೋದಲ್ಲಿ ತೆಗೆದ ಚಿತ್ರವನ್ನು ನೀವು ೬”x೪” ಗಾತ್ರದಲ್ಲಿ ಮುದ್ರಿಸಹೊರಟರೆ ಚಿತ್ರದ ಸ್ವಲ್ಪ ಭಾಗ ಕತ್ತರಿಸಿಹೋಗುತ್ತದೆ. ಅದೇ ೩:೨ ಆಸ್ಪೆಕ್ಟ್ ರೇಶಿಯೋದಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ೬”x೪” ಗಾತ್ರದಲ್ಲಿ ಪೂರ್ಣವಾಗಿ ಮುದ್ರಿಸಿಕೊಳ್ಳಬಹುದು. ೪:೩ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರ ೬”x೪.೫” ಗಾತ್ರದಲ್ಲಿ ಸರಿಯಾಗಿ ಮುದ್ರಣವಾಗುತ್ತದೆ. ಇದೇರೀತಿ ೧೬:೯ ಆಸ್ಪೆಕ್ಟ್ ರೇಶಿಯೋ ಇರುವ ಟೀವಿಯಲ್ಲಿ ೩:೨ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರವನ್ನು ನೋಡಿದರೆ ಎರಡೂ ಬದಿಗಳಲ್ಲಿ ಕಪ್ಪು ಬಣ್ಣ ಕಾಣಿಸುತ್ತದೆ; ೧೬:೯ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರವನ್ನೇ ನೋಡಿದರೆ ಈ ಸಮಸ್ಯೆ ಇರದು!
ಬಹುತೇಕ ಕ್ಯಾಮೆರಾಗಳಲ್ಲಿ ಚಿತ್ರ ಕ್ಲಿಕ್ಕಿಸುವ ಮುನ್ನವೇ ನಮಗೆ ಬೇಕಾದ ಆಸ್ಪೆಕ್ಟ್ ರೇಶಿಯೋ ಹೊಂದಿಸಿಕೊಳ್ಳುವುದು ಸಾಧ್ಯ. ಕ್ಲಿಕ್ಕಿಸಿದ ನಂತರದಲ್ಲಿ ಚಿತ್ರದ ಒಂದಷ್ಟು ಭಾಗವನ್ನು ಕತ್ತರಿಸುವ ಮೂಲಕ ಅವುಗಳ ಆಸ್ಪೆಕ್ಟ್ ರೇಶಿಯೋ ಬದಲಿಸಿಕೊಳ್ಳಬಹುದು. ಕಂಪ್ಯೂಟರಿನಲ್ಲಿ ಚಿತ್ರಗಳನ್ನು ಹಿಗ್ಗಿಸಲು ಇಲ್ಲವೇ ಕುಗ್ಗಿಸಲು ಪ್ರಯತ್ನಿಸುವಾಗ ಅವುಗಳ ಮೂಲ ಆಸ್ಪೆಕ್ಟ್ ರೇಶಿಯೋ ಉಳಿಸಿಕೊಳ್ಳಬೇಕಾಗುತ್ತದೆ.

ALU

ಎಎಲ್‍ಯು
Kannada Equivalent: (ರೂಪಿಸಬೇಕಿದೆ)
Short Description : ಅರ್ಥ್‌ಮೆಟಿಕ್ ಲಾಜಿಕ್ ಯುನಿಟ್; ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್‌ನ (ಸಿಪಿಯು) ಒಂದು ಭಾಗ. ದತ್ತಾಂಶ ಸಂಸ್ಕರಣೆಯಲ್ಲಿ ಅಗತ್ಯವಾದ ಅಂಕಗಣಿತ ಹಾಗೂ ತರ್ಕದ ಲೆಕ್ಕಾಚಾರಗಳನ್ನು ಮಾಡುವುದು ಇದರ ಜವಾಬ್ದಾರಿ.
Long Description: ಯಾವುದೇ ಕಂಪ್ಯೂಟರಿನ ಪ್ರಮುಖ ಅಂಗ ಅದರ ಕೇಂದ್ರೀಯ ಸಂಸ್ಕರಣ ಘಟಕ, ಅರ್ಥಾತ್ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎನ್ನುವ ವಿಷಯ ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಠ್ಯಗಳಲ್ಲೇ ಇರುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳಲ್ಲಿ ನಡೆಯುವ ಅಪಾರ ಪ್ರಮಾಣದ ದತ್ತಾಂಶ ಸಂಸ್ಕರಣೆಯನ್ನು ನಿಭಾಯಿಸುವುದು ಇದರ ಜವಾಬ್ದಾರಿ.
ದತ್ತಾಂಶವನ್ನು ಸಂಸ್ಕರಿಸುವ ಈ ಕೆಲಸದಲ್ಲಿ ಹಲವು ವಿಭಾಗಗಳಿರುತ್ತವೆ. ದತ್ತಾಂಶ ಸಂಸ್ಕರಣೆಯಲ್ಲಿ ಅಗತ್ಯವಾದ ಅಂಕಗಣಿತ ಹಾಗೂ ತರ್ಕದ ಲೆಕ್ಕಾಚಾರಗಳನ್ನು ಮಾಡುವುದು ಇಂತಹ ವಿಭಾಗಗಳಲ್ಲೊಂದು.
ಸಿಪಿಯು ಒಳಗೆ ಇದನ್ನು ನಿರ್ವಹಿಸುವ ಜವಾಬ್ದಾರಿ ಎಎಲ್‌ಯು ಎಂಬ ಭಾಗದ್ದು. ಈ ಹೆಸರಿನ ಪೂರ್ಣರೂಪ ‘ಅರ್ಥ್‌ಮೆಟಿಕ್ ಲಾಜಿಕ್ ಯುನಿಟ್’ ಎಂದು. ಕೂಡಿಸುವ – ಕಳೆಯುವ ಸರಳ ಕೆಲಸಗಳಿಂದ ಪ್ರಾರಂಭಿಸಿ ಬೂಲಿಯನ್ ಆಲ್ಜೀಬ್ರಾದವರೆಗೆ ಎಲ್ಲ ಬಗೆಯ ಲೆಕ್ಕಾಚಾರಗಳನ್ನೂ ಇದು ನಿಭಾಯಿಸಬಲ್ಲದು.
ಕಂಪ್ಯೂಟರಿನಲ್ಲಿರುವ ಯಾವುದೇ ಮಾಹಿತಿ ಅದಕ್ಕೆ ಅರ್ಥವಾಗುವುದು ದ್ವಿಮಾನ (ಬೈನರಿ) ಪದ್ಧತಿಯ ಅಂಕಿಗಳ ರೂಪದಲ್ಲಿದ್ದಾಗಲಷ್ಟೇ. ಹೀಗಾಗಿ ಎಎಲ್‌ಯುವಿನಲ್ಲಿ ನಡೆಯುವ ಲೆಕ್ಕಾಚಾರಗಳೂ ಇವೇ ಅಂಕಿಗಳನ್ನು ಬಳಸುತ್ತವೆ.
ಕಂಪ್ಯೂಟರಿನಲ್ಲಿ, ಸ್ಮಾರ್ಟ್‌ಫೋನಿನಲ್ಲಿ ಸಿಪಿಯು ಕೆಲಸವನ್ನು ಅವುಗಳ ಪ್ರಾಸೆಸರ್ ಮಾಡುತ್ತದಲ್ಲ, ಅಂತಹ ಪ್ರತಿ ಪ್ರಾಸೆಸರ್‌ನಲ್ಲೂ ಎಎಲ್‌ಯು ಇರುತ್ತದೆ. ಉನ್ನತ ಗುಣಮಟ್ಟದ ಚಿತ್ರಗಳನ್ನು (ಗ್ರಾಫಿಕ್ಸ್) ಸಂಸ್ಕರಿಸಲು – ಪ್ರದರ್ಶಿಸಲು ಬಳಕೆಯಾಗುವ ಗ್ರಾಫಿಕ್ಸ್ ಪ್ರಾಸೆಸಿಂಗ್ ಯುನಿಟ್(ಜಿಪಿಯು)ನಲ್ಲೂ ಎಎಲ್‌ಯು ಇರುತ್ತದೆ.

API

ಎಪಿಐ
Kannada Equivalent: (ರೂಪಿಸಬೇಕಿದೆ)
Short Description : ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್‌ಫೇಸ್; ಎರಡು ತಂತ್ರಾಂಶಗಳ ನಡುವೆ ಮಾಹಿತಿಯ ವಿನಿಮಯ ಸಾಧ್ಯವಾಗಿಸುವ ವ್ಯವಸ್ಥೆ
Long Description: ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ನೂರೆಂಟು ಬಗೆಯ ಕೆಲಸಗಳನ್ನು ಸುಲಭವಾಗಿ ಸಾಧಿಸಿಕೊಳ್ಳಬಹುದು. ಇದಕ್ಕೆಲ್ಲ ಬೇಕಾದ ತಂತ್ರಾಂಶಗಳನ್ನು (ಸಾಫ್ಟ್‌ವೇರ್) ಸಿದ್ಧಪಡಿಸುವುದು ತಂತ್ರಾಂಶ ಪರಿಣತರ ಕೆಲಸ.
ಯಾವುದೇ ತಂತ್ರಾಂಶವಾದರೂ ಅದರಿಂದ ನಿರ್ದಿಷ್ಟವಾದ ಕೆಲ ಅಪೇಕ್ಷೆಗಳಿರುತ್ತವೆ. ಅಂತಹ ಪ್ರತಿಯೊಂದು ಅಪೇಕ್ಷೆಯನ್ನೂ ನಾವು ಸಿದ್ಧಪಡಿಸುವ ಹೊಸ ತಂತ್ರಾಂಶವೇ ಪೂರೈಸಬೇಕು ಎಂದೇನೂ ಇಲ್ಲ. ನಮ್ಮ ತಂತ್ರಾಂಶ ಮಾಡಬೇಕಾದ ಕೆಲಸದ ಒಂದು ಭಾಗವನ್ನು ಚೆಂದವಾಗಿ ಮಾಡಬಲ್ಲ ಇನ್ನೊಂದು ತಂತ್ರಾಂಶ ಈಗಾಗಲೇ ಇದೆ ಎನ್ನುವುದಾದರೆ ನಮ್ಮ ತಂತ್ರಾಂಶ ಅದರ ಸೇವೆಯನ್ನು ಪಡೆದುಕೊಳ್ಳುವುದು ಸಾಧ್ಯ.
ಇದರ ಅರ್ಥ ಬೇರೊಬ್ಬರ ತಂತ್ರಾಂಶವನ್ನು ಕದ್ದು ಅಥವಾ ಕಾಪಿಹೊಡೆದು ಬಳಸುವುದು ಎಂದಲ್ಲ. ಎರಡು ತಂತ್ರಾಂಶಗಳ ನಡುವೆ ಮಾಹಿತಿಯ ವಿನಿಮಯ ಸಾಧ್ಯವಾದರೆ ಅವು ಒಟ್ಟಿಗೆ ಕೆಲಸಮಾಡಬಲ್ಲವು ಎನ್ನುವುದು ಇಲ್ಲಿರುವ ಆಲೋಚನೆ. ಇದನ್ನು ಸಾಧ್ಯವಾಗಿಸುವ ಪರಿಕಲ್ಪನೆಯೇ ಎಪಿಐ, ಅರ್ಥಾತ್ ‘ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್‌ಫೇಸ್’.
ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಸೇರಿದಂತೆ ಬೇರೊಂದು ತಂತ್ರಾಂಶದಲ್ಲಿರುವ ಸೌಲಭ್ಯವನ್ನು ನಮ್ಮ ತಂತ್ರಾಂಶದಲ್ಲಿ ಬಳಸಿಕೊಳ್ಳಬೇಕು ಎಂದಾಗ ಎಪಿಐಗಳು ನಮಗೆ ನೆರವಾಗುತ್ತವೆ. ಆಯಾ ತಂತ್ರಾಂಶದ ನಿರ್ಮಾತೃಗಳು ರೂಪಿಸಿರುವ ವಿನ್ಯಾಸಕ್ಕೆ ಅನುಗುಣವಾಗಿ ನಮ್ಮ ತಂತ್ರಾಂಶ ಅಲ್ಲಿಗೆ ಮಾಹಿತಿ ರವಾನಿಸಿದರೆ ನಿರ್ದಿಷ್ಟ ರೂಪದ ಫಲಿತಾಂಶ ನಮಗೆ ಅಲ್ಲಿಂದ ದೊರಕುತ್ತದೆ. ಈ ಸೇವೆ ಕೆಲವುಬಾರಿ ಉಚಿತವಾಗಿ ದೊರೆತರೆ ಇನ್ನು ಕೆಲ ಉದಾಹರಣೆಗಳಲ್ಲಿ ಇದಕ್ಕಾಗಿ ಹಣನೀಡಬೇಕಾಗಬಹುದು.
ಕಂಪ್ಯೂಟರಿನಲ್ಲಿ ಕ್ಲಿಕ್ ಮಾಡುವುದು – ಮೊಬೈಲ್ ಪರದೆಯನ್ನು ಮುಟ್ಟಿದ್ದೆಲ್ಲ ತಂತ್ರಾಂಶಗಳಿಗೆ ಗೊತ್ತಾಗುತ್ತದಲ್ಲ, ಅಂತಹ ಉದಾಹರಣೆಗಳಲ್ಲೆಲ್ಲ ಬಳಕೆಯಾಗುವುದು ಇಂತಹ ಎಪಿಐಗಳೇ. ನಮ್ಮ ಜಾಲತಾಣದಲ್ಲಿ ನೇರವಾಗಿ ಕನ್ನಡದಲ್ಲೇ ಟೈಪಿಸುವುದು ಸಾಧ್ಯವಾಗಬೇಕು ಎನ್ನುವವರು ಅಲ್ಲಿ ಗೂಗಲ್ ಟ್ರಾನ್ಸ್‌ಲಿಟರೇಟ್ ಸೌಲಭ್ಯ ನೀಡುತ್ತಾರಲ್ಲ, ಅದು ಕೆಲಸಮಾಡುವುದೂ ಎಪಿಐ ಮೂಲಕವೇ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App