भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Partition

ಪಾರ್ಟಿಶನ್
Kannada Equivalent: (ರೂಪಿಸಬೇಕಿದೆ)
Short Description : ಪ್ರತ್ಯೇಕವಾಗಿ ಬಳಸಲು ಸಾಧ್ಯವಾಗುವಂತೆ ಹಾರ್ಡ್‌ಡಿಸ್ಕ್‌ನಲ್ಲಿ ರೂಪಿಸಿಕೊಂಡಿರುವ ವಿಭಜನೆ ಅಥವಾ ವಿಭಾಗ
Long Description: ನಮ್ಮ ಕಂಪ್ಯೂಟರಿನಲ್ಲಿ ಐದುನೂರು ಗಿಗಾಬೈಟಿನದೋ ಒಂದು ಟೆರಾಬೈಟಿನದೋ ಒಂದು ಹಾರ್ಡ್ ಡಿಸ್ಕ್ ಇರುತ್ತದೆ. ಆದರೆ ಕಂಪ್ಯೂಟರನ್ನು ಚಾಲೂ ಮಾಡಿ ನೋಡಿದಾಗ ಮಾತ್ರ ಸಿ, ಡಿ, ಇ, ಎಫ್ ಎಂದೆಲ್ಲ ಹೆಸರಿರುವ ಮೂರು-ನಾಲ್ಕು ಹಾರ್ಡ್ ಡಿಸ್ಕುಗಳ ಪಟ್ಟಿ ಕಾಣಸಿಗುತ್ತದೆ.
ಹಾರ್ಡ್ ಡಿಸ್ಕ್ ಭೌತಿಕವಾಗಿ ಒಂದೇ ಆಗಿದ್ದರೂ ಅನ್ನು ಹಲವು ಭಾಗಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಬಳಸಲು ಅನುವುಮಾಡಿಕೊಡುವ ಪ್ರಕ್ರಿಯೆಯನ್ನು ಪಾರ್ಟಿಶನ್ ಮಾಡುವುದು ಅಥವಾ ‘ಪಾರ್ಟಿಶನಿಂಗ್’ ಎಂದು ಕರೆಯುತ್ತಾರೆ. ನಾವು ಕಂಪ್ಯೂಟರಿನಲ್ಲಿ ನೋಡುವ ಸಿ, ಡಿ, ಇ, ಎಫ್ ಡ್ರೈವ್‌ಗಳಿಗೆ ‘ಪಾರ್ಟಿಶನ್’ಗಳೆಂದು ಹೆಸರು (ಪಾರ್ಟಿಶನ್ = ವಿಭಜನೆ). ಹಾರ್ಡ್ ಡಿಸ್ಕ್ ಶೇಖರಣಾ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪಾರ್ಟಿಶನ್‌ಗಳು ನೆರವಾಗುತ್ತವೆ.
ಲಭ್ಯವಿರುವ ಒಟ್ಟು ಸ್ಥಳಾವಕಾಶವನ್ನು ಈ ಪಾರ್ಟಿಶನ್‌ಗಳ ನಡುವೆ ನಮ್ಮ ಅಗತ್ಯಕ್ಕೆ ತಕ್ಕಂತೆ ಹಂಚಿಕೊಳ್ಳುವುದು ಸಾಧ್ಯ: ಐದುನೂರು ಗಿಗಾಬೈಟಿನ ಹಾರ್ಡ್ ಡಿಸ್ಕ್‌ನಲ್ಲಿ ನೂರು ಗಿಗಾಬೈಟ್‌ನ ಐದು ಪಾರ್ಟಿಶನ್ ರೂಪಿಸಿಕೊಳ್ಳಬಹುದು, ಇಲ್ಲವೇ ಇನ್ನೂರರ ಎರಡು – ನೂರರ ಒಂದು ಪಾರ್ಟಿಶನ್ ಕೂಡ ಮಾಡಿಕೊಳ್ಳಬಹುದು.
ಹಾರ್ಡ್ ಡಿಸ್ಕ್‌ನಲ್ಲಿ ಪಾರ್ಟಿಶನ್‌ಗಳನ್ನು ರೂಪಿಸಿಕೊಳ್ಳಲು ನೆರವಾಗುವ ಅನೇಕ ತಂತ್ರಾಂಶಗಳು ದೊರಕುತ್ತವೆ (ವಿವರಗಳಿಗೆ ಗೂಗಲ್ ಮಾಡಿ). ಇವನ್ನು ಬಳಸಿ ಹೊಸ ಹಾರ್ಡ್ ಡಿಸ್ಕ್‌ನಲ್ಲಿರುವ ಸ್ಥಳಾವಕಾಶವನ್ನು ನಮಗೆ ಬೇಕಾದಂತೆ ವಿಂಗಡಿಸಿಕೊಳ್ಳಬಹುದು. ಈಗಾಗಲೇ ಬಳಕೆಯಲ್ಲಿರುವ ಹಾರ್ಡ್ ಡಿಸ್ಕ್‌ನ ಪಾರ್ಟಿಶನ್‌ಗಳನ್ನು ಬದಲಿಸುವ ಪ್ರಯತ್ನ ಮಾಡುವುದಾದರೆ ಸಾಕಷ್ಟು ತಾಂತ್ರಿಕ ಪರಿಣತಿ ಹಾಗೂ ಮಾಹಿತಿ ಸುರಕ್ಷತೆಯ ಕುರಿತ ಕಾಳಜಿ ಎರಡೂ ಬೇಕಾಗುತ್ತವೆ.
ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಲು – ನಮ್ಮ ಕಡತಗಳನ್ನು ಉಳಿಸಿಡಲು ಬೇರೆಬೇರೆ ಪಾರ್ಟಿಶನ್ ಬಳಸಿದರೆ ಒಂದು ಪಾರ್ಟಿಶನ್ ಅನ್ನು ಫಾರ್ಮ್ಯಾಟ್ ಮಾಡಬೇಕಾಗಿ ಬಂದರೂ ಇನ್ನೊಂದರಲ್ಲಿರುವ ಮಾಹಿತಿಯನ್ನು ಹಾಗೆಯೇ ಉಳಿಸಿಕೊಳ್ಳಬಹುದು. ಪ್ರತ್ಯೇಕ ಪಾರ್ಟಿಶನ್‌ಗಳಲ್ಲಿ ಇನ್‌ಸ್ಟಾಲ್ ಮಾಡುವ ಮೂಲಕ ಒಂದೇ ಕಂಪ್ಯೂಟರಿನಲ್ಲಿ ಬೇರೆಬೇರೆ ಕಾರ್ಯಾಚರಣ ವ್ಯವಸ್ಥೆಗಳನ್ನು ಬಳಸುವುದು ಕೂಡ ಸಾಧ್ಯವಾಗುತ್ತದೆ.

PoS Terminal

ಪಿಓಎಸ್ ಟರ್ಮಿನಲ್
Kannada Equivalent: (ರೂಪಿಸಬೇಕಿದೆ)
Short Description : ಪಾಯಿಂಟ್ ಆಫ್ ಸೇಲ್ ಟರ್ಮಿನಲ್, ಕ್ರೆಡಿಟ್ ಕಾರ್ಡ್ – ಡೆಬಿಟ್ ಕಾರ್ಡುಗಳ ಮೂಲಕ ಹಣ ಪಾವತಿಸಲು ಬೇಕಾದ ಯಂತ್ರ
Long Description: ಅಂಗಡಿಯಲ್ಲಿನ ವ್ಯವಹಾರ ಪೂರ್ಣವಾಗುವುದು ನಾವು ಕೊಂಡ ವಸ್ತು ಅಥವಾ ಸೇವೆಗೆ ಹಣ ಪಾವತಿಸಿದಾಗಲಷ್ಟೇ. ಹೀಗೆ ವ್ಯವಹಾರ ಪೂರ್ಣಗೊಳಿಸುವ ಸ್ಥಳವನ್ನು (ಉದಾ: ಸೂಪರ್‌ಮಾರ್ಕೆಟ್‌ನ ಬಿಲ್ಲುಕಟ್ಟೆ) ‘ಪಾಯಿಂಟ್ ಆಫ್ ಸೇಲ್’ ಎಂದು ಕರೆಯುತ್ತಾರೆ. ಕ್ರೆಡಿಟ್ ಕಾರ್ಡ್ – ಡೆಬಿಟ್ ಕಾರ್ಡುಗಳ ಮೂಲಕ ಹಣ ಪಾವತಿಸಲು ಬೇಕಾದ ಯಂತ್ರವೂ ಇದೇ ಸ್ಥಳದಲ್ಲಿರುತ್ತದೆ. ಆ ಯಂತ್ರವನ್ನು ‘ಪಿಓಎಸ್ ಟರ್ಮಿನಲ್’ ಎಂದು ಗುರುತಿಸಲು ಇದೇ ಕಾರಣ.
ಕಾರ್ಡಿನ ಅಯಸ್ಕಾಂತೀಯ ಪಟ್ಟಿ ಅಥವಾ ಚಿಪ್‌ನಲ್ಲಿರುವ ಗ್ರಾಹಕನ ಖಾತೆಯ ಮಾಹಿತಿ ಅರಿತು, ಪಿನ್‌ನಂತಹ ಸುರಕ್ಷತಾ ವಿವರಗಳನ್ನೂ ಪಡೆದು, ಪಾವತಿಯಾಗಬೇಕಾದ ಮೊತ್ತವನ್ನು ಖಾತೆಯಿಂದ ವರ್ಗಾಯಿಸಲು ನೆರವಾಗುವುದು ಈ ಯಂತ್ರದ ವೈಶಿಷ್ಟ್ಯ. ಕ್ರೆಡಿಟ್ ಕಾರ್ಡ್ – ಡೆಬಿಟ್ ಕಾರ್ಡ್‌ಗಳಷ್ಟೇ ಅಲ್ಲ, ಮುಂಗಡವಾಗಿ ಹಣ ಪಾವತಿಸಿ ಪಡೆದುಕೊಳ್ಳುವ ‘ಪ್ರೀಪೇಯ್ಡ್ ಕಾರ್ಡ್’ಗಳನ್ನೂ ಈ ಯಂತ್ರಗಳು ನಿಭಾಯಿಸಬಲ್ಲವು.
ಮೊದಲಿಗೆ ಇಂತಹ ಯಂತ್ರಗಳನ್ನು ಪಡೆಯಲು ಬ್ಯಾಂಕುಗಳನ್ನೇ ಸಂಪರ್ಕಿಸಬೇಕಾದ ಅನಿವಾರ್ಯ ಇತ್ತು. ಆದರೆ ಈಗ ಹಲವು ಖಾಸಗಿ ಸಂಸ್ಥೆಗಳೂ ಪಿಓಎಸ್ ಟರ್ಮಿನಲ್‌ಗಳನ್ನು ನೀಡುತ್ತಿವೆ. ಈ ಯಂತ್ರಗಳನ್ನು ಬಳಸುವ ಅಂಗಡಿಯವರು ಅದಕ್ಕಾಗಿ ನಿರ್ದಿಷ್ಟ ಶುಲ್ಕವನ್ನು ನೀಡಬೇಕಾಗುತ್ತದೆ. ಕಾರ್ಡ್ ವಿತರಿಸಿರುವ ಸಂಸ್ಥೆ, ಪಿಓಎಸ್ ಟರ್ಮಿನಲ್ ನಿರ್ವಹಿಸುವ ಸಂಸ್ಥೆ ಹಾಗೂ ಹಣ ವರ್ಗಾವಣೆ ಸಾಧ್ಯವಾಗಿಸುವ ಸಂಸ್ಥೆಗಳು (ರುಪೇ, ವೀಸಾ, ಮಾಸ್ಟರ್‌ಕಾರ್ಡ್ ಇತ್ಯಾದಿ) ಈ ಶುಲ್ಕವನ್ನು ಹಂಚಿಕೊಳ್ಳುತ್ತವೆ.
ಕಾರ್ಡ್ ವಹಿವಾಟಿನ ಮೊತ್ತ ಅಂಗಡಿಯವರ ಖಾತೆಗೆ ವರ್ಗಾವಣೆಯಾಗುವ ಸಂದರ್ಭದಲ್ಲಿ ಅದರಿಂದ ಈ ಶುಲ್ಕವನ್ನು ಮುರಿದುಕೊಳ್ಳುವುದು ಸಾಮಾನ್ಯ ಅಭ್ಯಾಸ.

Pixel

ಪಿಕ್ಸೆಲ್
Kannada Equivalent: (ರೂಪಿಸಬೇಕಿದೆ)
Short Description : ಪಿಕ್ಚರ್ ಎಲಿಮೆಂಟ್, ಡಿಜಿಟಲ್ ಚಿತ್ರದ ಅತ್ಯಂತ ಸಣ್ಣ ಘಟಕ
Long Description: ಡಿಜಿಟಲ್ ಕ್ಯಾಮೆರಾ ಬಳಸಿ ಕ್ಲಿಕ್ಕಿಸುತ್ತೇವಲ್ಲ, ಅಂತಹ ಪ್ರತಿಯೊಂದು ಚಿತ್ರದಲ್ಲೂ ಅಪಾರ ಸಂಖ್ಯೆಯ ಪುಟ್ಟಪುಟ್ಟ ಚೌಕಗಳಿರುತ್ತವೆ. ಮನೆಯ ನೆಲದಲ್ಲಿ ಟೈಲ್ಸ್ ಇರುತ್ತವಲ್ಲ, ಹಾಗೆ. ಬೇರೆಬೇರೆ ಬಣ್ಣಗಳ ಇಷ್ಟೆಲ್ಲ ಚೌಕಗಳು ಒಟ್ಟಾಗಿ ನಮ್ಮ ಕಣ್ಣಮುಂದೆ ಚಿತ್ರವನ್ನು ಕಟ್ಟಿಕೊಡುತ್ತವೆ.
ಇಂತಹ ಚೌಕಗಳನ್ನು ಪಿಕ್ಸೆಲ್‌ಗಳೆಂದು ಕರೆಯುತ್ತಾರೆ. ಪಿಕ್ಸೆಲ್ ಎಂಬ ಹೆಸರು ‘ಪಿಕ್ಚರ್ ಎಲಿಮೆಂಟ್’ ಎನ್ನುವುದರ ಹ್ರಸ್ವರೂಪ. ಚಿತ್ರದಲ್ಲಿ ಇರುವ ಪಿಕ್ಸೆಲ್‌ಗಳ ಸಂಖ್ಯೆ ಜಾಸ್ತಿಯಾದಷ್ಟೂ ಅದರ ಸ್ಪಷ್ಟತೆ ಹೆಚ್ಚು. ಅಂದರೆ, ಚಿತ್ರದಲ್ಲಿ ಹೆಚ್ಚು ಸಂಖ್ಯೆಯ ಪಿಕ್ಸೆಲ್‌ಗಳಿದ್ದಷ್ಟೂ ಅದನ್ನು ಹೆಚ್ಚುಹೆಚ್ಚು ದೊಡ್ಡದಾಗಿ ಮುದ್ರಿಸಿಕೊಳ್ಳಬಹುದು.
ಹೆಚ್ಚು ಎಂದರೆ ಎಷ್ಟು ಎಂದು ಹೇಳಬೇಕಲ್ಲ, ಅದಕ್ಕೆ ಬಳಕೆಯಾಗುವುದೇ ಮೆಗಾಪಿಕ್ಸೆಲ್. ಒಂದು ಮೆಗಾಪಿಕ್ಸೆಲ್ ಎನ್ನುವುದು ಹತ್ತು ಲಕ್ಷ ಪಿಕ್ಸೆಲ್‌ಗಳಿಗೆ ಸಮಾನ. ಕ್ಯಾಮೆರಾಗಳ ಬಗ್ಗೆ ಹೇಳುವಾಗಲೆಲ್ಲ ಪ್ರಸ್ತಾಪವಾಗುತ್ತದಲ್ಲ, ಅದು ಇದೇ ಮೆಗಾಪಿಕ್ಸೆಲ್.
ಕ್ಯಾಮೆರಾ ಕೊಳ್ಳುವಾಗ ಹೆಚ್ಚಿನ ಮೆಗಾಪಿಕ್ಸೆಲ್ ಬಗೆಗಷ್ಟೇ ಗಮನಹರಿಸಿದರೆ ಸಾಲದು. ಏಕೆಂದರೆ ಕ್ಯಾಮೆರಾಗಳಲ್ಲಿ ನಮ್ಮ ಬಳಕೆಯ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮೆಗಾಪಿಕ್ಸೆಲ್ ಇದ್ದರೆ ಸಾಕಾಗುತ್ತದೆ. ಮೆಗಾಪಿಕ್ಸೆಲ್ ಜೊತೆಗೆ ಕ್ಯಾಮೆರಾದ ಸೆನ್ಸರ್, ಲೆನ್ಸಿನ ಗುಣಮಟ್ಟ ಮುಂತಾದ ಅಂಶಗಳೂ ಚಿತ್ರ ಹೇಗೆ ಮೂಡಿಬರುತ್ತದೆ ಎನ್ನುವುದನ್ನು ನಿರ್ಧರಿಸುತ್ತವೆ.

PDF

ಪಿಡಿಎಫ್
Kannada Equivalent: (ರೂಪಿಸಬೇಕಿದೆ)
Short Description : ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್, ವಿಶೇಷ ತಂತ್ರಾಂಶ – ಫಾಂಟ್ ಇತ್ಯಾದಿಗಳ ಅವಲಂಬನೆಯಿಲ್ಲದೆ ಸುಲಭವಾಗಿ ಹಂಚಿಕೊಳ್ಳಬಹುದಾದ ಕಡತ
Long Description: ನಾವು ರೂಪಿಸಿದ ಕಡತಗಳನ್ನು ಬೇರೊಬ್ಬರೊಡನೆ ಹಂಚಿಕೊಳ್ಳುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇಮೇಲ್ ಮಾಡಿದಾಗ ಕೆಲವೊಮ್ಮೆ ಆ ಕಡತ ಓಪನ್ ಆಗುವುದಿಲ್ಲ, ಅಕ್ಷರಗಳು ಕಾಣುವುದಿಲ್ಲ ಅಥವಾ ಮೂಲ ವಿನ್ಯಾಸ ನಾಪತ್ತೆಯಾಗಿರುತ್ತದೆ!
ಈ ಸಮಸ್ಯೆಯ ಅತ್ಯಂತ ಜನಪ್ರಿಯ ಪರಿಹಾರಗಳಲ್ಲೊಂದು ಆ ಕಡತವನ್ನು ಪಿಡಿಎಫ್ ರೂಪಕ್ಕೆ ಬದಲಿಸುವುದು. ಪಿಡಿಎಫ್ ಎನ್ನುವುದು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ ಎಂಬ ಹೆಸರಿನ ಹ್ರಸ್ವರೂಪ. ಪೋರ್ಟಬಲ್ ಟೀವಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭಕ್ಕೆ ಒಯ್ದು ಬಳಸಬಹುದಿತ್ತಲ್ಲ, ಪಿಡಿಎಫ್ ಕಡತಗಳನ್ನೂ ಹಾಗೆ ಎಲ್ಲಿ ಬೇಕಾದರೂ ಬಳಸಬಹುದು.
ಪಿಡಿಎಫ್ ತಂತ್ರಜ್ಞಾನ ಅಭಿವೃದ್ಧಿಯಾದದ್ದು ೧೯೯೦ರ ದಶಕದ ಪ್ರಾರಂಭದಲ್ಲಿ. ಸದ್ಯ ಇದರ ಜನಪ್ರಿಯತೆ ಎಷ್ಟೆಂದರೆ ಸಾಮಾನ್ಯ ಕಡತಗಳ ಜೊತೆಗೆ ಹಲವು ಅಧಿಕೃತ ಕಾಗದಪತ್ರಗಳೂ ಪಿಡಿಎಫ್ ರೂಪಕ್ಕೆ ಬಂದುಬಿಟ್ಟಿವೆ.
ಪಿಡಿಎಫ್ ಕಡತಗಳನ್ನು ವೀಕ್ಷಿಸಲು ಅಗತ್ಯ ಸೌಲಭ್ಯ ಬಹುತೇಕ ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳಲ್ಲಿ ಪೂರ್ವನಿಯೋಜಿತವಾಗಿಯೇ ಇರುತ್ತದೆ. ಹಾಗೊಮ್ಮೆ ಇಲ್ಲದಿದ್ದರೂ ಆ ಸೌಲಭ್ಯ ಒದಗಿಸುವ ಹಲವು ತಂತ್ರಾಂಶಗಳು – ಮೊಬೈಲ್ ಆಪ್‌ಗಳು ಉಚಿತವಾಗಿಯೇ ಲಭ್ಯವಿವೆ (ಹೆಚ್ಚಿನ ವಿವರಗಳಿಗೆ ಗೂಗಲ್ ಮಾಡಿ, ಅಥವಾ ನಿಮ್ಮ ಫೋನಿನ ಆಪ್ ಸ್ಟೋರಿಗೆ ಭೇಟಿಕೊಡಿ). ಸೂಕ್ತ ತಂತ್ರಾಂಶ ಬಳಸಿ ನಮ್ಮ ಕಂಪ್ಯೂಟರ್ ಇಲ್ಲವೇ ಮೊಬೈಲಿನಲ್ಲಿ ಪಿಡಿಎಫ್ ಕಡತಗಳನ್ನು ರೂಪಿಸಿಕೊಳ್ಳುವುದೂ ಸಾಧ್ಯ – ಇದಕ್ಕೂ ಕೆಲವು ಉಚಿತ ತಂತ್ರಾಂಶಗಳಿವೆ.

PPI

ಪಿಪಿಐ
Kannada Equivalent: (ರೂಪಿಸಬೇಕಿದೆ)
Short Description : ಪಿಕ್ಸೆಲ್ಸ್ ಪರ್ ಇಂಚ್, ಚಿತ್ರದ ಪ್ರತಿ ಇಂಚು ವಿಸ್ತೀರ್ಣದಲ್ಲಿ ಎಷ್ಟು ಪಿಕ್ಸೆಲ್‌ಗಳಿರುತ್ತವೆ ಎಂಬ ಲೆಕ್ಕ.
Long Description: ಡಿಜಿಟಲ್ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡುವಾಗ ‘ಪಿಪಿಐ’ ಪ್ರಸ್ತಾಪ ಬರುತ್ತದಲ್ಲ, ಅದು ‘ಪಿಕ್ಸೆಲ್ಸ್ ಪರ್ ಇಂಚ್’ ಎನ್ನುವುದರ ಹ್ರಸ್ವರೂಪ.

೧೦೦x೧೦೦ ಪಿಕ್ಸೆಲ್‌ನ ಚಿತ್ರಕ್ಕೆ ೧೦ ಪಿಪಿಐ ನಿಗದಿಪಡಿಸಿದರೆ ಅದು ಹತ್ತಿಂಚು ಉದ್ದ-ಅಗಲದಲ್ಲಿ ಮುದ್ರಣವಾಗುತ್ತದೆ. ಅದೇ ೧೦೦ ಪಿಪಿಐ ಇಟ್ಟರೆ ಚಿತ್ರದ ಗಾತ್ರ ಒಂದೇ ಇಂಚು ಉದ್ದ-ಅಗಲಕ್ಕೆ ಇಳಿಯುತ್ತದೆ. ಇದನ್ನು ಪಿಕ್ಸೆಲ್ ಸಾಂದ್ರತೆ (ಪಿಕ್ಸೆಲ್ ಡೆನ್ಸಿಟಿ) ಎಂದೂ ಗುರುತಿಸಲಾಗುತ್ತದೆ. ಇದನ್ನು ಡಿಪಿಐ (ಡಾಟ್ಸ್ ಪರ್ ಇಂಚ್) ಎಂದೂ ಕರೆಯುತ್ತಾರೆ.

ಸ್ಕ್ಯಾನರ್ ಬಳಸಿ ಡಿಜಿಟಲೀಕರಿಸುವ ಚಿತ್ರಗಳು ಹಾಗೂ ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳ ಪರದೆಯ ಗುಣಮಟ್ಟವನ್ನು ಸೂಚಿಸಲಿಕ್ಕೂ ‘ಪಿಪಿಐ’ ಬಳಕೆಯಾಗುತ್ತದೆ. ಹೆಚ್ಚು ಪಿಪಿಐ ಇರುವ ಪರದೆಯಲ್ಲಿ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಮೂಡುತ್ತವೆ. ಹಾಗೆಯೇ ಹೆಚ್ಚು ಪಿಪಿಐ ಅಥವಾ ಡಿಪಿಐನಲ್ಲಿ ಸ್ಕ್ಯಾನ್ ಮಾಡಿದ ಚಿತ್ರಗಳ ಗುಣಮಟ್ಟ ಕೂಡ ಹೆಚ್ಚು ಉತ್ತಮವಾಗಿರುತ್ತದೆ.

PCB

ಪಿಸಿಬಿ
Kannada Equivalent: (ರೂಪಿಸಬೇಕಿದೆ)
Short Description : ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್; ವಿದ್ಯುನ್ಮಾನ ಸಾಧನಗಳಲ್ಲಿ ವಿವಿಧ ಬಿಡಿಭಾಗಗಳನ್ನು ಜೋಡಿಸಲು, ಪರಸ್ಪರ ಸಂಪರ್ಕಿಸಲು ಬಳಕೆಯಾಗುವ ಫಲಕ
Long Description: ಯಾವುದೇ ವಿದ್ಯುನ್ಮಾನ ಸಾಧನವನ್ನು ತೆರೆದು ನೋಡಿದರೆ ಟ್ರಾನ್ಸಿಸ್ಟರ್, ರೆಸಿಸ್ಟರ್, ಐಸಿ ಮುಂತಾದ ಅನೇಕ ಸಣ್ಣಸಣ್ಣ ಭಾಗಗಳನ್ನು ಒಂದು ಫಲಕದ ಮೇಲೆ ಜೋಡಿಸಿರುವುದು ನಮ್ಮ ಗಮನಕ್ಕೆ ಬರುತ್ತದೆ. ಇಂತಹ ಭಾಗಗಳೆಲ್ಲ ಆ ಫಲಕದ ಮೂಲಕವೇ ಒಂದಕ್ಕೊಂದು ಸಂಪರ್ಕಿತವಾಗಿರುತ್ತವೆ ಮತ್ತು ಬಾಹ್ಯ ವಿದ್ಯುತ್ ಸಂಪರ್ಕದ ತಂತಿಯೂ ಒಂದಲ್ಲ ಒಂದು ರೀತಿಯಲ್ಲಿ ಈ ಫಲಕದತ್ತಲೇ ಬಂದಿರುತ್ತದೆ.
ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್, ಅಂದರೆ ಪಿಸಿಬಿ ಎಂದು ಕರೆಯುವುದು ಇಂತಹ ಫಲಕಗಳನ್ನೇ. ಇದರ ಮೇಲೆ ಜೋಡಿಸುವ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಪರ್ಕ ಕಲ್ಪಿಸಲು ಪ್ರತ್ಯೇಕ ತಂತಿಗಳ ಬದಲಿಗೆ ಈ ಫಲಕದ ಮೇಲೆಯೇ ಇರುವ ಹಾದಿಗಳನ್ನು ಬಳಸಲಾಗುತ್ತದೆ. ಈ ಸಂಪರ್ಕಗಳು (ಸರ್ಕ್ಯೂಟ್, ಅಂದರೆ ವಿದ್ಯುತ್‌ಪಥ) ಈ ಫಲಕದ ಮೇಲೆಯೇ ಮುದ್ರಿತವಾದಂತೆ ಕಾಣುತ್ತವಲ್ಲ, ಹಾಗಾಗಿಯೇ ಈ ಫಲಕಕ್ಕೆ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಎಂದು ಹೆಸರು ಬಂದಿದೆ. ದೊಡ್ಡ ಸಂಖ್ಯೆಯ ಬಿಡಿಭಾಗಗಳನ್ನು ಸಣ್ಣ ಜಾಗದಲ್ಲಿ ಅಚ್ಚುಕಟ್ಟಾಗಿ ಜೋಡಿಸಲು ಸಾಧ್ಯವಾಗಿಸುವುದು ಈ ಫಲಕದ ಹೆಗ್ಗಳಿಕೆ.
ಕಂಪ್ಯೂಟರು – ಮೊಬೈಲಿನಲ್ಲೆಲ್ಲ ಮದರ್‌ಬೋರ್ಡ್ ಇರುತ್ತದಲ್ಲ, ಪ್ರತಿನಿತ್ಯವೂ ನಮ್ಮ ಸಂಪರ್ಕಕ್ಕೆ ಬರುವ ಪಿಸಿಬಿಗೆ ಅದೊಂದು ಉತ್ತಮ ಉದಾಹರಣೆ. ಪ್ರಾಸೆಸರ್, ರ್‍ಯಾಮ್ ಸೇರಿದಂತೆ ಕಂಪ್ಯೂಟರಿನ – ಮೊಬೈಲಿನ ಹಲವು ಪ್ರಮುಖ ಭಾಗಗಳನ್ನು ಈ ಫಲಕದ ಮೇಲೆಯೇ ಜೋಡಿಸಿರುತ್ತಾರೆ. ಟೀವಿ, ಮೊಬೈಲ್ ಕ್ಯಾಮೆರಾ, ಟ್ಯಾಬ್ಲೆಟ್ ಮುಂತಾದ ಇತರ ಸಾಧನಗಳಲ್ಲೂ ಪಿಸಿಬಿಗಳು ಇರುತ್ತವೆ.

Pull – Push

ಪುಲ್-ಪುಶ್
Kannada Equivalent: (ರೂಪಿಸಬೇಕಿದೆ)
Short Description : ಮಾಹಿತಿ ಒದಗಿಸುವ ಎರಡು ಮಾರ್ಗಗಳು; ನಾವೇ ಬೇಡಿಕೆ ಸಲ್ಲಿಸಿ ಪಡೆದುಕೊಳ್ಳುವುದು ‘ಪುಲ್’ ಎಂದು ಕರೆಸಿಕೊಂಡರೆ ಹೊಸ ಮಾಹಿತಿಯನ್ನು ನಾವು ಕೇಳದೆಯೇ ನಮ್ಮ ಗಮನಕ್ಕೆ ತರುವುದಕ್ಕೆ ‘ಪುಶ್’ ಎಂದು ಹೆಸರು.
Long Description: ಜಾಲತಾಣ ತೆರೆದು ಇಮೇಲ್‌ಗಳನ್ನು ನೋಡುವಾಗ, ತಂತ್ರಾಂಶವನ್ನು ಡೌನ್‌ಲೋಡ್ ಮಾಡುವಾಗಲೆಲ್ಲ ಮಾಹಿತಿ ಬೇಕೆಂದು ಬೇಡಿಕೆ ಸಲ್ಲಿಸುವವರು ನಾವು. ಇಮೇಲ್ ತಾಣಕ್ಕೆ ಲಾಗಿನ್ ಆಗುವುದು, ಡೌನ್‌ಲೋಡ್ ಕೊಂಡಿಯ ಮೇಲೆ ಕ್ಲಿಕ್ ಮಾಡುವುದು – ಇವೆಲ್ಲ ನಾವು ಬೇಡಿಕೆ ಸಲ್ಲಿಸುವ ಮಾರ್ಗಗಳು. ಈ ಉದಾಹರಣೆಗಳಲ್ಲಿ ಮಾಹಿತಿ ನಮ್ಮತ್ತ ಬರಲಿ ಎಂದು ನಾವು ಕೇಳುವುದರಿಂದ ಇವನ್ನು ‘ಪುಲ್’ ಎಂದು ಗುರುತಿಸಲಾಗುತ್ತದೆ.
ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವು ಕೇಳದೆಯೇ ಮಾಹಿತಿಯನ್ನು ನಮ್ಮ ಗಮನಕ್ಕೆ ತರಲಾಗುತ್ತದೆ. ಸುದ್ದಿಗಳನ್ನು ಹಂಚುವ ಮೊಬೈಲ್ ಆಪ್ ಇತ್ತೀಚಿನ ಸುದ್ದಿಯನ್ನೂ, ಪ್ರಯಾಣ ಸೇವೆಗಳ ಆಪ್ ಹೊಸ ಆಫರುಗಳನ್ನೂ ನಮ್ಮ ಮೊಬೈಲಿನ ಪರದೆಗೆ ತಲುಪಿಸುತ್ತದಲ್ಲ – ಇವನ್ನು ನಾವಾಗಿ ಕೇಳದೆಯೇ ಪಡೆಯುವುದು, ಇಮೇಲ್ ಅಥವಾ ಮೆಸೇಜಿಂಗ್ ತಂತ್ರಾಂಶವನ್ನು ತೆರೆಯದೆಯೇ ಓದುವುದು ಸಾಧ್ಯ. ಮಾಹಿತಿಯನ್ನು ಹೀಗೆ ಕಳುಹಿಸುವ ತಂತ್ರಜ್ಞಾನಕ್ಕೆ ‘ಪುಶ್’ ಎಂದು ಹೆಸರು (ಉದಾಹರಣೆಯಲ್ಲಿ ಹೇಳಿದಂತಹ ಸಂದೇಶಗಳನ್ನು ‘ಪುಶ್ ನೋಟಿಫಿಕೇಶನ್ಸ್’ ಎಂದು ಕರೆಯುತ್ತಾರೆ). ಇಮೇಲ್ ಸೇವೆಗಳಲ್ಲೂ ಪುಶ್ ತಂತ್ರದ ಬಳಕೆ ಉಂಟು. ಹೊಸ ಸಂದೇಶ ಬಂದ ವಿಷಯ ಇಮೇಲ್ ಆಪ್ ತೆರೆಯದೆಯೇ ಗೊತ್ತಾಗುವುದು ಇದರ ಮೂಲಕವೇ. ಎಸ್ಸೆಮ್ಮೆಸ್‌ನಲ್ಲೂ ಪುಶ್ ಬಳಕೆ ಸಾಧ್ಯವಿದೆ.
ಅಂದಹಾಗೆ ಈ ತಂತ್ರಗಳು ನಾವು ಸಂದೇಶಗಳನ್ನು ಹೇಗೆ ಪಡೆದುಕೊಳ್ಳುತ್ತೇವೆ ಎನ್ನುವುದನ್ನು ಮಾತ್ರ ನಿರ್ದೇಶಿಸುತ್ತವೆ. ಅನಪೇಕ್ಷಿತ (ಸ್ಪಾಮ್) ಸಂದೇಶಗಳನ್ನು ತಲುಪಿಸಲು ಇವೆರಡೂ ತಂತ್ರಗಳು ಬಳಕೆಯಾಗುವುದರಿಂದ ಸ್ಪಾಮ್‌ಗೂ ಈ ಪುಲ್-ಪುಶ್ ತಂತ್ರಗಳಿಗೂ ನೇರವಾದ ಸಂಬಂಧವೇನಿಲ್ಲ. ಆದರೆ ಮೊಬೈಲಿನಲ್ಲಿ ಪುಶ್ ಸಂದೇಶಗಳ ಕಾಟ ಜಾಸ್ತಿಯಾದ ಸಂದರ್ಭದಲ್ಲಿ ಅವನ್ನು ನಿರ್ಬಂಧಿಸುವುದು ಸಾಧ್ಯವಿದೆ: ಆಂಡ್ರಾಯ್ಡ್ ಬಳಕೆದಾರರು ಇದಕ್ಕೆ ‘ಆಪ್ ನೋಟಿಫಿಕೇಶನ್ಸ್’ ಆಯ್ಕೆ ಬಳಸಬಹುದು.

Page Orientation

ಪೇಜ್ ಓರಿಯೆಂಟೇಶನ್
Kannada Equivalent: (ರೂಪಿಸಬೇಕಿದೆ)
Short Description : ವಿನ್ಯಾಸಗೊಳಿಸಿರುವ ಪುಟವನ್ನು ಮುದ್ರಿಸುವಾಗ ಕಾಗದವನ್ನು ಲಂಬವಾಗಿ ಬಳಸಬೇಕೋ ಅಡ್ಡಲಾಗಿ ಬಳಸಬೇಕೋ ಎನ್ನುವುದನ್ನು ಸೂಚಿಸುವ ಅಂಶ
Long Description: ಪುಸ್ತಕವಿರಲಿ, ಒಂದೆರಡು ಪುಟಗಳ ಕಡತವೇ ಇರಲಿ – ಮುದ್ರಣಕ್ಕೆ ಬಳಸಲಾಗುವ ಕಾಗದ ಸಾಮಾನ್ಯವಾಗಿ ಆಯತಾಕಾರದಲ್ಲೇ ಇರುತ್ತದೆ. ಈ ಕಾಗದದ ಮೇಲೆ ಮಾಹಿತಿ ಹೇಗೆ ಮುದ್ರಣವಾಗಬೇಕು ಎಂದು ತೀರ್ಮಾನಿಸುವುದು ಕಡತ ರೂಪಿಸುವ ವಿನ್ಯಾಸಕಾರನ ಕೆಲಸ.
ಬಹಳಷ್ಟು ಕಡತಗಳಲ್ಲಿ ಕಾಗದವನ್ನು ಲಂಬವಾಗಿ (ಕಡಿಮೆ ಅಗಲ, ಹೆಚ್ಚು ಉದ್ದ) ಬಳಸುವುದು ಸಾಮಾನ್ಯ ಅಭ್ಯಾಸ. ಮುದ್ರಣವಾಗುವ ಮಾಹಿತಿ ಸಾಧ್ಯವಾದಷ್ಟೂ ಅಗಲವಿರಬೇಕು ಎನ್ನುವುದಾದರೆ ಅದನ್ನು ಕಾಗದದ ಮೇಲೆ ಅಡ್ಡಡ್ಡಲಾಗಿ (ಹೆಚ್ಚು ಅಗಲ, ಕಡಿಮೆ ಉದ್ದ) ಮುದ್ರಿಸಬಹುದು. ಕಡತದ ಪುಟಗಳನ್ನು ವಿನ್ಯಾಸಗೊಳಿಸುವಾಗ ಈ ಪೈಕಿ ಯಾವ ಆಯ್ಕೆ ಬಳಸಲಾಗಿದೆ ಎನ್ನುವುದನ್ನು ಆಯಾ ಪುಟದ ‘ಪೇಜ್ ಓರಿಯೆಂಟೇಶನ್’ ಸೂಚಿಸುತ್ತದೆ. ಕಡತವನ್ನು ರೂಪಿಸುವಾಗಲೇ ಈ ಆಯ್ಕೆಯನ್ನು ಮಾಡಿಕೊಳ್ಳುವುದು ಸಾಧ್ಯ.
ನಿರ್ದಿಷ್ಟ ಪುಟದ ಮುದ್ರಣಕ್ಕೆ ಕಾಗದವನ್ನು ಲಂಬವಾಗಿ ಬಳಸುವುದು ಸಾಧ್ಯವಿದ್ದರೆ ಅದರ ಪೇಜ್ ಓರಿಯೆಂಟೇಶನ್ ‘ಪೋರ್ಟ್ರೇಟ್’ ಆಗಿರುತ್ತದೆ. ಭಾವಚಿತ್ರಗಳು ಸಾಮಾನ್ಯವಾಗಿ ಇದೇ ರೀತಿಯಲ್ಲಿ ಮುದ್ರಣವಾಗುತ್ತವಲ್ಲ, ಹಾಗಾಗಿಯೇ ಇಲ್ಲೂ ಅದೇ ಹೆಸರನ್ನು ಬಳಸಲಾಗಿದೆ (ಪೋರ್ಟ್ರೇಟ್=ಭಾವಚಿತ್ರ). ಇದೇ ರೀತಿ ಅಡ್ಡಡ್ಡಲಾಗಿ ಮುದ್ರಣವಾಗಬೇಕಾದ ಪುಟಗಳ ಪೇಜ್ ಓರಿಯೆಂಟೇಶನ್ ಅನ್ನು ‘ಲ್ಯಾಂಡ್‌ಸ್ಕೇಪ್’ ಎಂದು ಗುರುತಿಸಲಾಗುತ್ತದೆ. ಪ್ರಕೃತಿ ದೃಶ್ಯಗಳನ್ನು (ಲ್ಯಾಂಡ್‌ಸ್ಕೇಪ್) ಹೀಗೆಯೇ ಮುದ್ರಿಸುತ್ತಾರಲ್ಲ, ಈ ಹೆಸರಿಗೆ ಕಾರಣವಾಗಿರುವುದು ಅದೇ ಅಂಶ.
ಅಂದಹಾಗೆ ಮುದ್ರಣವಾಗಬೇಕಿರುವ ಕಾಗದ ಬಹುತೇಕ ಪ್ರಿಂಟರುಗಳೊಳಗೆ ಹೋಗುವುದು – ಹೊರಬರುವುದು ಲಂಬವಾಗಿಯೇ. ಲ್ಯಾಂಡ್‌ಸ್ಕೇಪ್ ರೂಪದಲ್ಲಿ ಮುದ್ರಣವಾಗಬೇಕಿರುವ ಮಾಹಿತಿಯನ್ನು ಸೂಕ್ತವಾಗಿ ತಿರುಗಿಸಿಕೊಂಡು ಮುದ್ರಿಸಲಾಗುತ್ತದೆ ಅಷ್ಟೇ.

Page View

ಪೇಜ್ ವ್ಯೂ
Kannada Equivalent: (ರೂಪಿಸಬೇಕಿದೆ)
Short Description : ಜಾಲತಾಣಕ್ಕೆ ಭೇಟಿಕೊಟ್ಟ ಬಳಕೆದಾರರು ಯಾವುದೇ ವೆಬ್ ಪುಟವನ್ನು ತೆರೆಯುವ – ವೀಕ್ಷಿಸುವ ಪ್ರಕ್ರಿಯೆ
Long Description: ಒಂದು ಜಾಲತಾಣದಲ್ಲಿ ಹಲವು ಪುಟಗಳಿರುತ್ತವಲ್ಲ, ಬಳಕೆದಾರರು ಆ ಪುಟಗಳನ್ನು ಎಷ್ಟುಬಾರಿ ತೆರೆಯುತ್ತಾರೆ ಎಂಬುದನ್ನು ಗಮನಿಸಿಕೊಳ್ಳುವ ಮೂಲಕ ಜಾಲತಾಣದ ಜನಪ್ರಿಯತೆಯನ್ನು ಅಂದಾಜಿಸುವುದು ಸಾಧ್ಯ. ಈ ಸಂಖ್ಯೆಯನ್ನು ದಾಖಲಿಸಿಕೊಳ್ಳುವುದು ಜಾಲಲೋಕದ ಸಾಮಾನ್ಯ ಅಭ್ಯಾಸವೂ ಹೌದು.
ಬಳಕೆದಾರ ಯಾವುದೇ ವೆಬ್ ಪುಟವನ್ನು ತೆರೆಯುವ – ವೀಕ್ಷಿಸುವ ಈ ಪ್ರಕ್ರಿಯೆಯನ್ನು ‘ಪೇಜ್ ವ್ಯೂ’ ಎಂದು ಗುರುತಿಸುತ್ತಾರೆ. ಉದಾಹರಣೆಗೆ, ಮಾರ್ಚ್ ೨೦೧೭ರಲ್ಲಿ ಇಜ್ಞಾನ ಡಾಟ್ ಕಾಮ್‌ನಲ್ಲಿ ದಾಖಲಾದ ಪೇಜ್ ವ್ಯೂಗಳ ಒಟ್ಟು ಮೊತ್ತ ೪೬,೩೧೮. ಈ ಅವಧಿಯಲ್ಲಿ ಓದುಗರು ಜಾಲತಾಣದ ಪುಟಗಳನ್ನು ಒಟ್ಟು ಎಷ್ಟು ಬಾರಿ ತೆರೆದಿದ್ದಾರೆ ಎನ್ನುವುದನ್ನು ಈ ಸಂಖ್ಯೆ ಸೂಚಿಸುತ್ತದೆ. ಪೇಜ್‌ವ್ಯೂಗಳ ಸಂಖ್ಯೆ ಹೆಚ್ಚಿದ್ದಷ್ಟೂ ಜಾಲತಾಣದತ್ತ ಬರುವ ‘ಟ್ರಾಫಿಕ್’ ಹೆಚ್ಚಿದೆ ಎಂದರ್ಥ.
ಅಂದಹಾಗೆ ಒಂದೇ ವ್ಯಕ್ತಿ ಜಾಲತಾಣದ ವಿವಿಧ ಪುಟಗಳನ್ನು ವೀಕ್ಷಿಸಿದ್ದರೆ ಅವರು ಒಂದಕ್ಕಿಂತ ಹೆಚ್ಚು ಪೇಜ್‌ವ್ಯೂಗಳನ್ನು ದಾಖಲಿಸುತ್ತಾರೆ. ಹೀಗಾಗಿ ಜಾಲತಾಣಕ್ಕೆ ಭೇಟಿಕೊಟ್ಟವರ ಸಂಖ್ಯೆ ಅಲ್ಲಿ ದಾಖಲಾದ ಪೇಜ್‌ವ್ಯೂಗಳ ಸಂಖ್ಯೆಗಿಂತ ಕಡಿಮೆಯಿರುವುದು ಖಂಡಿತಾ ಸಾಧ್ಯ. ಈ ಗೊಂದಲವನ್ನು ನಿವಾರಿಸಲೆಂದೇ ಕೆಲ ಜಾಲತಾಣಗಳು ಪೇಜ್‌ವ್ಯೂ ಹಾಗೂ ಸಂದರ್ಶಕರ ಸಂಖ್ಯೆಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳುತ್ತವೆ. ಪುಟವನ್ನು ತೆರೆದ ಹಾಗೂ ಮುಚ್ಚಿದ ಸಮಯವನ್ನು ಗುರುತಿಸಿಕೊಳ್ಳುವ ಮೂಲಕ ಓದುಗರು ಅಲ್ಲಿ ಎಷ್ಟು ಹೊತ್ತು ಉಳಿದಿದ್ದರು ಎನ್ನುವುದನ್ನು ದಾಖಲಿಸಿಕೊಳ್ಳುವ ಅಭ್ಯಾಸವೂ ಇದೆ.

Piracy

ಪೈರಸಿ
Kannada Equivalent: (ರೂಪಿಸಬೇಕಿದೆ)
Short Description : ಹಕ್ಕುಸ್ವಾಮ್ಯವಿರುವ ಮಾಹಿತಿಯನ್ನು ಅದರ ಮಾಲೀಕರಿಗೆ ಪ್ರತಿಫಲ ನೀಡದೆ ಅಕ್ರಮವಾಗಿ ಬಳಸಿಕೊಳ್ಳುವ ಸಮಸ್ಯೆ
Long Description: ಪಠ್ಯ, ಚಿತ್ರ, ಸಂಗೀತ, ಚಲನಚಿತ್ರ, ತಂತ್ರಾಂಶ ಮುಂತಾದ ಯಾವುದೇ ಮಾಹಿತಿಯನ್ನು ಅದರ ಹಕ್ಕುಸ್ವಾಮ್ಯ ಹೊಂದಿದವರಿಗೆ ಪ್ರತಿಫಲ ನೀಡದೆ ಅಕ್ರಮವಾಗಿ ಬಳಸಿಕೊಳ್ಳುವ ಸಮಸ್ಯೆಯ ಹೆಸರೇ ‘ಪೈರಸಿ’.
ಅನಧಿಕೃತ ತಾಣಗಳಿಂದ ಎಂಪಿ೩ ಡೌನ್‌ಲೋಡ್ ಮಾಡಿಕೊಳ್ಳುವುದು, ಕಂಪ್ಯೂಟರಿನಲ್ಲಿ ಅನಧಿಕೃತ ತಂತ್ರಾಂಶಗಳನ್ನು ಬಳಸುವುದು, ರಸ್ತೆಬದಿ ಮಾರಾಟಗಾರರಿಂದ ನಕಲಿ ಸಿ.ಡಿ. ಹಾಗೂ ಪುಸ್ತಕಗಳನ್ನು ಕೊಳ್ಳುವುದು – ಇವೆಲ್ಲವೂ ಪೈರಸಿಗೆ ಉದಾಹರಣೆ.
ಹಡಗುಗಳ ಮೇಲೆ ದಾಳಿಮಾಡಿ ಅದನ್ನು ಲೂಟಿಮಾಡುವ ಕಡಲುಗಳ್ಳರನ್ನು ಇಂಗ್ಲಿಷಿನಲ್ಲಿ ಪೈರೇಟ್ ಎಂದು ಕರೆಯುತ್ತಾರಲ್ಲ, ‘ಪೈರಸಿ’ ಹೆಸರಿಗೂ ಅದೇ ಮೂಲ. ಕಂಪ್ಯೂಟರಿನ ಮುಂದೆ ಕುಳಿತು ಕದಿಯುವವರೂ ಸಮುದ್ರದಲ್ಲಿ ಕಳ್ಳತನಮಾಡುವ ಆ ಪೈರೇಟ್‌ಗಳಂತೆಯೇ. ಅದು ಹೇಗೆ ಎಂದು ಕೇಳಿದಿರಾದರೆ ಅದಕ್ಕೆ ಉತ್ತರಿಸುವುದು ಬಹಳ ಸುಲಭ: ಪೈರಸಿಯಿಂದಾಗಿ ಮೂಲ ಹಕ್ಕುದಾರರಿಗೆ ಯಾವುದೇ ಪ್ರತಿಫಲ ಸಿಗುವುದಿಲ್ಲವಾದ್ದರಿಂದ ಈ ಪಿಡುಗು ದೊಡ್ಡ ಪ್ರಮಾಣದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.
ಪೈರಸಿ ಪೀಡೆಯ ನೇರ ಪರಿಣಾಮ ಉದ್ಯೋಗಾವಕಾಶಗಳ ಮೇಲೆ, ಹಾಗೂ ಒಟ್ಟಾರೆ ಅರ್ಥವ್ಯವಸ್ಥೆಯ ಮೇಲೂ ಬೀಳುವುದರಿಂದ ಉದ್ದಿಮೆಗಳು ಹಾಗೂ ಸರಕಾರಗಳು ಪೈರಸಿ ಪೀಡೆಯ ಕುರಿತು ಸದಾಕಾಲ ಕಿಡಿಕಾರುತ್ತಲೇ ಇರುತ್ತವೆ. ಪೈರಸಿ ತಡೆಗೆ ಹಲವು ಕಾನೂನುಗಳೂ ಇವೆ; ಪೈರಸಿ ಆರೋಪಿಗಳಿಗೆ ಶಿಕ್ಷೆಯಾದ ಉದಾಹರಣೆ ಕೂಡ ಇದೆ!

Port

ಪೋರ್ಟ್
Kannada Equivalent: (ರೂಪಿಸಬೇಕಿದೆ)
Short Description : ವಿದ್ಯುನ್ಮಾನ ಉಪಕರಣವೊಂದರ ಅಂತರ ಸಂಪರ್ಕ ಸಾಧನ; ಒಂದು ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸಮಾಡಲೆಂದು ಸಿದ್ಧಪಡಿಸಿದ ತಂತ್ರಾಂಶವನ್ನು ಇನ್ನೊಂದೆಡೆಯೂ ಕೆಲಸಮಾಡುವಂತೆ ಮಾಡುವ ಪ್ರಕ್ರಿಯೆ; ಯಾವುದೇ ಸರ್ವರ್ ನಿರ್ದಿಷ್ಟ ಕೆಲಸಕ್ಕಾಗಿ ಯಾವ ಶಿಷ್ಟಾಚಾರವನ್ನು ಬಳಸುತ್ತಿದೆ ಎಂದು ಸೂಚಿಸುವ ಸಂಖ್ಯೆ
Long Description: ಪೋರ್ಟ್ ಎಂದಾಕ್ಷಣ ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯನ್ನು ಬದಲಿಸುವ ಪ್ರಕ್ರಿಯೆಯೇ ನಮ್ಮ ನೆನಪಿಗೆ ಬರುತ್ತದೆ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪೋರ್ಟ್ ಎನ್ನುವುದಕ್ಕೆ ಇನ್ನೂ ಕೆಲವು ಅರ್ಥಗಳಿವೆ.
ಪೆನ್ ಡ್ರೈವ್, ಮೌಸ್, ಕೀಬೋರ್ಡ್, ಮಾನಿಟರ್ ಮುಂತಾದ ಯಂತ್ರಾಂಶಗಳನ್ನು ಕಂಪ್ಯೂಟರಿನೊಡನೆ ಬಳಸುತ್ತೇವಲ್ಲ, ಅವನ್ನೆಲ್ಲ ಸಂಪರ್ಕಿಸುವ ಅಂತರ ಸಂಪರ್ಕ ಸಾಧನಗಳನ್ನು (ಇಂಟರ್‌ಫೇಸ್) ‘ಪೋರ್ಟ್’ಗಳೆಂದು ಗುರುತಿಸುತ್ತಾರೆ. ಮೊಬೈಲ್ ಫೋನಿಗೆ ಚಾರ್ಜಿಂಗ್ ಕೇಬಲ್ ಜೋಡಿಸುವುದು, ಟೀವಿಗೆ ಎಚ್‌ಡಿಎಂಐ ಸಂಪರ್ಕ ಕಲ್ಪಿಸುವುದೂ ಪೋರ್ಟ್‌ಗಳ ಮೂಲಕವೇ.
ತಂತ್ರಾಂಶದ ಲೋಕದಲ್ಲೂ ಪೋರ್ಟ್ ಪರಿಕಲ್ಪನೆ ಇದೆ. ಯಾವುದೋ ಒಂದು ಕಾರ್ಯಾಚರಣ ವ್ಯವಸ್ಥೆಯಲ್ಲಿ (ಉದಾ: ವಿಂಡೋಸ್) ಕೆಲಸಮಾಡಲೆಂದು ಸಿದ್ಧಪಡಿಸಿದ ಕಂಪ್ಯೂಟರ್ ತಂತ್ರಾಂಶ ಅಥವಾ ಮೊಬೈಲ್ ಆಪ್ ಅನ್ನು ಇನ್ನೊಂದು ವ್ಯವಸ್ಥೆಯಲ್ಲೂ (ಉದಾ: ಮ್ಯಾಕ್) ಕೆಲಸಮಾಡುವಂತೆ ಪರಿವರ್ತಿಸುವ ಕೆಲಸವನ್ನು ‘ಪೋರ್ಟ್ ಮಾಡುವುದು’ ಎಂದು ಕರೆಯುತ್ತಾರೆ.
ಇನ್ನು ಅಂತರಜಾಲದ ವಿಷಯಕ್ಕೆ ಬಂದರೆ ಅಲ್ಲೂ ಪೋರ್ಟ್‌ಗಳ ಪ್ರಸ್ತಾಪ ಕೇಳಸಿಗುತ್ತದೆ. ಯಾವುದೇ ಸರ್ವರ್ ನಿರ್ದಿಷ್ಟ ಕೆಲಸಕ್ಕಾಗಿ ಯಾವ ಶಿಷ್ಟಾಚಾರವನ್ನು ಬಳಸುತ್ತಿದೆ ಎನ್ನುವುದನ್ನು ‘ಇಂಟರ್‌ನೆಟ್ ಪೋರ್ಟ್’ ಸೂಚಿಸುತ್ತದೆ. ಜಾಲತಾಣಗಳನ್ನು ಪ್ರದರ್ಶಿಸಲು, ಇಮೇಲ್ ಸಂದೇಶಗಳನ್ನು ನಿಭಾಯಿಸಲು, ಎಫ್‌ಟಿಪಿ ಮನವಿಗಳಿಗೆ ಸ್ಪಂದಿಸಲು ಸರ್ವರ್‌ಗಳು ಬೇರೆಬೇರೆ ಪೋರ್ಟ್‌ಗಳನ್ನು ಬಳಸುತ್ತವೆ. ಇಂತಹ ಪೋರ್ಟ್‌ಗಳನ್ನು ನಿರ್ದಿಷ್ಟ ಸಂಖ್ಯೆಗಳು ಪ್ರತಿನಿಧಿಸುತ್ತವೆ. ಕೆಲವೊಮ್ಮೆ ಈ ಸಂಖ್ಯೆಗಳನ್ನು ಜಾಲತಾಣದ ವಿಳಾಸದಲ್ಲೇ ಬಳಸುವುದೂ ಇದೆ (ಉದಾ: http://www.ejnana.com:80/).

Proximity Sensor

ಪ್ರಾಕ್ಸಿಮಿಟಿ ಸೆನ್ಸರ್
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲಿನ ಸಮೀಪದಲ್ಲಿರಬಹುದಾದ ವಸ್ತುಗಳನ್ನು ಗ್ರಹಿಸುವ ಸಾಧನ
Long Description: ಈಗಿನ ಮೊಬೈಲುಗಳಲ್ಲಿ ಹಲವಾರು ಬಗೆಯ ಸೆನ್ಸರುಗಳ ಬಳಕೆ ಸರ್ವೇಸಾಮಾನ್ಯ. ಇಂತಹ ಸೆನ್ಸರುಗಳ ಪೈಕಿ ಪ್ರಾಕ್ಸಿಮಿಟಿ ಸೆನ್ಸರ್ ಕೂಡ ಒಂದು.
ಪ್ರಾಕ್ಸಿಮಿಟಿ ಎಂದರೆ ಸಾಮೀಪ್ಯ ಎಂದರ್ಥ. ನಮ್ಮ ಮೊಬೈಲಿನ ಸಮೀಪದಲ್ಲಿರಬಹುದಾದ ವಸ್ತುಗಳನ್ನು – ಭೌತಿಕ ಸಂಪರ್ಕದ ಅಗತ್ಯವಿಲ್ಲದೆಯೇ – ಗ್ರಹಿಸುವ ಸಾಧನ ಪ್ರಾಕ್ಸಿಮಿಟಿ ಸೆನ್ಸರ್. ಬಹುತೇಕ ಮೊಬೈಲುಗಳ ಮೇಲ್ತುದಿಯಲ್ಲಿ, ಇಯರ್‌ಪೀಸ್ ಹಾಗೂ ಸೆಲ್ಫಿ ಕ್ಯಾಮೆರಾದ ಆಸುಪಾಸಿನಲ್ಲಿ ನಾವು ಇದನ್ನು ನೋಡಬಹುದು.
ನಮಗೆ ಬೇಕಾದ ನಂಬರ್ ಡಯಲ್ ಮಾಡಿ ಮೊಬೈಲನ್ನು ಕಿವಿಯ ಬಳಿ ಕೊಂಡೊಯ್ದ ತಕ್ಷಣವೇ ಅದರ ಪರದೆ ಆರಿಹೋಗುತ್ತದಲ್ಲ, ಆ ವಿದ್ಯಮಾನಕ್ಕೆ ಕಾರಣವಾಗುವುದು ಇದೇ ಪ್ರಾಕ್ಸಿಮಿಟಿ ಸೆನ್ಸರ್. ಕರೆಯ ನಡುವೆ ನಮ್ಮ ಕಿವಿಯೋ ಕೆನ್ನೆಯೋ ಟಚ್‌ಸ್ಕ್ರೀನ್‌ಗೆ ತಗುಲಿ ಅನಪೇಕ್ಷಿತ ಪರಿಣಾಮಗಳಾಗುವುದನ್ನು ಇದು ತಡೆಯುತ್ತದೆ; ನಾವು ಮಾತನಾಡುತ್ತಿದ್ದಷ್ಟು ಹೊತ್ತು ಪರದೆಯನ್ನು ಬೆಳಗಲು ಬ್ಯಾಟರಿ ವ್ಯರ್ಥವಾಗುವುದನ್ನೂ ತಪ್ಪಿಸುತ್ತದೆ. ಅಷ್ಟೇ ಅಲ್ಲ, ಫೋನನ್ನು ಕಿವಿಯಿಂದ ದೂರಕ್ಕೆ ಕೊಂಡೊಯ್ದ ಕೂಡಲೆ ಅದರ ಪರದೆ ಮತ್ತೆ ಚಾಲೂ ಆಗುವಂತೆ ಮಾಡುವುದೂ ಇದೇ ಸಾಧನದ ಕೆಲಸ.
ಅಂದಹಾಗೆ ಪ್ರಾಕ್ಸಿಮಿಟಿ ಸೆನ್ಸರ್ ಬಳಕೆ ಮೊಬೈಲ್ ಫೋನುಗಳಿಗಷ್ಟೇ ಸೀಮಿತವೇನಲ್ಲ. ಈ ಸಾಧನಕ್ಕೆ ಹಲವಾರು ಔದ್ಯಮಿಕ ಉಪಯೋಗಗಳೂ ಇವೆ. ಅಂಗಾಂಗಗಳ ಚಲನೆಯ ಮೂಲಕ ವಿದ್ಯುನ್ಮಾನ ಸಾಧನಗಳನ್ನು ನಿಯಂತ್ರಿಸುವ ಜೆಸ್ಚರ್ ಕಂಟ್ರೋಲ್ ತಂತ್ರಜ್ಞಾನದಲ್ಲೂ ಕ್ಯಾಮೆರಾ ಬದಲಿಗೆ ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಬಳಸುವ ಪ್ರಯತ್ನ ನಡೆದಿದೆ.

Processor

ಪ್ರಾಸೆಸರ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ವಿದ್ಯುನ್ಮಾನ ಸಾಧನಗಳ ಕೇಂದ್ರೀಯ ಸಂಸ್ಕರಣ ಘಟಕ (ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ ಅಥವಾ ಸಿಪಿಯು); ಈ ಸಾಧನಗಳ ಕಾರ್ಯಾಚರಣೆಯನ್ನು ನಿರ್ದೇಶಿಸುವ, ನಿಯಂತ್ರಿಸುವ ಯಂತ್ರಾಂಶ
Long Description: ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಓದಿದವರೆಲ್ಲರಿಗೂ ಕೇಂದ್ರೀಯ ಸಂಸ್ಕರಣ ಘಟಕ ಅಥವಾ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎಂಬ ಹೆಸರಿನ ಪರಿಚಯ ಇರುತ್ತದೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮುಂತಾದ ಸಾಧನಗಳಲ್ಲಿ ಸಿಪಿಯುನಂತೆ ಕೆಲಸಮಾಡುವುದು ಅವುಗಳ ಪ್ರಾಸೆಸರ್. ಈ ಸಾಧನಗಳ ಚಟುವಟಿಕೆಯ ಪ್ರತಿ ಹೆಜ್ಜೆಯಲ್ಲೂ ನಡೆಯುವ ಅಸಂಖ್ಯ ಲೆಕ್ಕಾಚಾರಗಳನ್ನೆಲ್ಲ ನಿಭಾಯಿಸುವುದು ಪ್ರಾಸೆಸರ್‌ನ ಜವಾಬ್ದಾರಿ.
ಪ್ರಾಸೆಸರ್ ಸಾಮರ್ಥ್ಯವನ್ನು ಅದರ ವೇಗದ (ಕ್ಲಾಕ್ ಸ್ಪೀಡ್) ಮೂಲಕ ಪ್ರತಿನಿಧಿಸುವುದು ಸಂಪ್ರದಾಯ. ಈ ಪ್ರಾಸೆಸರ್ ೩ ಗಿಗಾಹರ್ಟ್ಸ್‌ನದು ಎಂದು ಹೇಳುತ್ತಾರಲ್ಲ, ಆ ಸಂಖ್ಯೆ ಸೂಚಿಸುವುದು ಇದೇ ಕ್ಲಾಕ್ ಸ್ಪೀಡ್ ಅನ್ನು. ಹರ್ಟ್ಸ್ ಎನ್ನುವುದು ಇದರ ಏಕಮಾನ.
ಪ್ರಾಸೆಸರ್ ಕಾರ್ಯಕ್ಷಮತೆ ಅದರ ಕ್ಲಾಕ್ ಸ್ಪೀಡ್ ಜೊತೆಗೆ ಇನ್ನೂ ಅನೇಕ ಸಂಗತಿಗಳನ್ನು ಅವಲಂಬಿಸಿರುತ್ತದೆ. ಅದರಲ್ಲಿರುವ ತಿರುಳುಗಳ (ಕೋರ್) ಸಂಖ್ಯೆ ಇಂತಹ ಸಂಗತಿಗಳಲ್ಲೊಂದು.
ಒಂದು ಪ್ರಾಸೆಸರ್‌ನಲ್ಲಿ ಎರಡು ತಿರುಳುಗಳಿವೆ (ಡ್ಯುಯಲ್ ಕೋರ್) ಎನ್ನುವುದಾದರೆ ಸೈದ್ಧಾಂತಿಕವಾಗಿ ಅದು ತನ್ನ ಕೆಲಸಗಳನ್ನು ಎರಡು ಪಟ್ಟು ವೇಗವಾಗಿ ಮಾಡಬಲ್ಲದು. ಅಷ್ಟೇ ಅಲ್ಲ, ವಿವಿಧ ಕೆಲಸಗಳನ್ನು ಈ ತಿರುಳುಗಳು ತಮ್ಮ ನಡುವೆ ಹಂಚಿಕೊಳ್ಳುವುದರಿಂದ ಒಂದೇ ಸಮಯಕ್ಕೆ ಹಲವು ಕೆಲಸಗಳಲ್ಲಿ ತೊಡಗಿಕೊಳ್ಳುವುದು (ಮಲ್ಟಿ ಟಾಸ್ಕಿಂಗ್) ಕೂಡ ಸಾಧ್ಯವಾಗುತ್ತದೆ. ಒಂದು-ಎರಡು ತಿರುಳುಗಳ ಪ್ರಾಸೆಸರ್‌ಗಳಿಗಿಂತ ನಾಲ್ಕು ತಿರುಳುಗಳ ‘ಕ್ವಾಡ್-ಕೋರ್’, ಎಂಟು ತಿರುಳುಗಳ ‘ಆಕ್ಟಾ-ಕೋರ್’ ಪ್ರಾಸೆಸರ್ ಕಾರ್ಯಕ್ಷಮತೆ ಹೆಚ್ಚು ಎನ್ನುವುದಕ್ಕೆ ಇದೇ ಕಾರಣ.

Predictive Text Input

ಪ್ರೆಡಿಕ್ಟಿವ್ ಟೆಕ್ಸ್ಟ್ ಇನ್‌ಪುಟ್
Kannada Equivalent: (ರೂಪಿಸಬೇಕಿದೆ)
Short Description : ಟೈಪಿಸಿದ ಮೊದಲ ಕೆಲ ಅಕ್ಷರಗಳ ಆಧಾರದ ಮೇಲೆ ಪದವನ್ನು ಊಹಿಸುವ, ಆ ಮೂಲಕ ಮಿಕ್ಕ ಅಕ್ಷರಗಳನ್ನು ಟೈಪಿಸುವ ಕೆಲಸವನ್ನು ತಪ್ಪಿಸಲು ನೆರವಾಗುವ ವ್ಯವಸ್ಥೆ
Long Description: ಹಿಂದಿನ ಕಾಲದ ಎಸ್ಸೆಮ್ಮೆಸ್ ಇರಲಿ, ಇಂದಿನ ವಾಟ್ಸ್‌ಆಪ್ ಇರಲಿ, ಮೆಸೇಜ್ ಕಳಿಸಲು ಮೊಬೈಲ್ ಫೋನ್ ಬಳಸುವುದು ತೀರಾ ಸಾಮಾನ್ಯವೆನ್ನಿಸುವ ಸಂಗತಿ. ಸಾಮಾನ್ಯ ಮೊಬೈಲಿನ ಕೀಪ್ಯಾಡಿನಲ್ಲೇ ಕಂಪ್ಯೂಟರ್ ಕೀಲಿಮಣೆಗಿಂತ ವೇಗವಾಗಿ ಟೈಪ್ ಮಾಡಬಲ್ಲವರು ಇದ್ದಾರೆ. ಇನ್ನು ಸ್ಮಾರ್ಟ್‌ಫೋನಿನಲ್ಲಂತೂ ಕಂಪ್ಯೂಟರ್ ಕೀಲಿಮಣೆಯ ವಿನ್ಯಾಸವನ್ನೇ ಹೋಲುವ ವ್ಯವಸ್ಥೆಗಳು ಬಂದಿವೆ. ಆದರೂ ಮೊಬೈಲಿನ ಪುಟ್ಟ ಕೀಪ್ಯಾಡನ್ನು ಕುಟ್ಟುವುದು, ಸ್ಮಾರ್ಟ್‌ಫೋನ್ ಪರದೆಯ ಮೇಲೆ ಕಾಣುವ ಅಕ್ಷರಗಳನ್ನು ಮುಟ್ಟುವುದು ಹಲವರಿಗೆ ಇನ್ನೂ ಕಿರಿಕಿರಿಯ ಸಂಗತಿ.
ಈ ಕಿರಿಕಿರಿಯನ್ನು ಕೊಂಚಮಟ್ಟಿಗೆ ನಿವಾರಿಸುವುದು ‘ಪ್ರೆಡಿಕ್ಟಿವ್ ಟೆಕ್ಸ್ಟ್’ ವ್ಯವಸ್ಥೆ. ನಾವು ಟೈಪಿಸಿದ ಮೊದಲ ಕೆಲ ಅಕ್ಷರಗಳ ಆಧಾರದ ಮೇಲೆ ಪದವನ್ನು ಊಹಿಸುವುದು, ಆ ಮೂಲಕ ಮಿಕ್ಕ ಅಕ್ಷರಗಳನ್ನು ಟೈಪಿಸುವ ಕೆಲಸ ತಪ್ಪಿಸುವುದು ಈ ವ್ಯವಸ್ಥೆಯ ವೈಶಿಷ್ಟ್ಯ.
ಸಾಮಾನ್ಯ ಮೊಬೈಲಿನ ಕೀಪ್ಯಾಡಿನಲ್ಲಿ ಎಲ್ಲ ಅಕ್ಷರಗಳೂ ಒಂಬತ್ತೇ ಕೀಲಿಗಳಲ್ಲಿ (೧-೯) ಅಡಕವಾಗಿರುತ್ತವಲ್ಲ, ನಾವು ಯಾವೆಲ್ಲ ಕೀಲಿ ಒತ್ತಿದ್ದೇವೆ ಎನ್ನುವುದರ ಆಧಾರದ ಮೇಲೆ ಪದ ಯಾವುದಿರಬಹುದು ಎಂದು ಊಹಿಸಿಕೊಡುವ ಕೆಲಸವನ್ನು T9 (ಟೆಕ್ಸ್ಟ್ ಆನ್ ೯ ಕೀಸ್) ಎಂಬ ಜನಪ್ರಿಯ ವ್ಯವಸ್ಥೆ ಮಾಡುತ್ತದೆ. ಟಚ್‌ಸ್ಕ್ರೀನ್ ಮೇಲೆ ಮೂಡುವ ಕೀಲಿಮಣೆಗಳಲ್ಲೂ ಇಂತಹುದೇ ಕೆಲಸಮಾಡುವ ಅನೇಕ ವ್ಯವಸ್ಥೆಗಳನ್ನು ನಾವು ಬಹುತೇಕ ಎಲ್ಲ ಫೋನುಗಳಲ್ಲೂ ನೋಡಬಹುದು. ಇಂಗ್ಲಿಷ್ ಮಾತ್ರವೇ ಏಕೆ, ಈ ವ್ಯವಸ್ಥೆಗಳು ಕನ್ನಡ ಸೇರಿದಂತೆ ಹಲವು ಸ್ಥಳೀಯ ಭಾಷೆಗಳಲ್ಲೂ ಇವೆ.

Primary Memory

ಪ್ರೈಮರಿ ಮೆಮೊರಿ
Kannada Equivalent: (ರೂಪಿಸಬೇಕಿದೆ)
Short Description : ವಿದ್ಯುನ್ಮಾನ ಸಾಧನಗಳಲ್ಲಿ ತಕ್ಷಣಕ್ಕೆ ಬೇಕಾದ ದತ್ತಾಂಶ-ಮಾಹಿತಿಯನ್ನೆಲ್ಲ ಉಳಿಸಿಟ್ಟುಕೊಳ್ಳುವ ಮಾಧ್ಯಮ
Long Description: ಕಂಪ್ಯೂಟರಿನ ಕೆಲಸಗಳನ್ನೆಲ್ಲ ಅದರ ಪ್ರಾಸೆಸರ್ ನಿರ್ವಹಿಸುತ್ತದೆ ನಿಜ. ಆದರೆ ಆ ಕೆಲಸಗಳಿಗೆ ಬೇಕಾದ ದತ್ತಾಂಶ ಮತ್ತು ಮಾಹಿತಿ ಎಲ್ಲವನ್ನೂ ಶೇಖರಿಸಿಟ್ಟುಕೊಳ್ಳಲು ಬೇಕಾದ ಜ್ಞಾಪಕ ಶಕ್ತಿ ಅದರಲ್ಲಿರುವುದಿಲ್ಲ.

ಈಗ ನೀವೊಂದು ಪತ್ರವನ್ನು ಟೈಪ್ ಮಾಡುತ್ತಿದ್ದೀರಿ ಎಂದುಕೊಳ್ಳೋಣ. ಹೊಸದೊಂದು ಕಡತ ತೆರೆದು ಟೈಪ್ ಮಾಡಲು ಶುರುಮಾಡಿದ ತಕ್ಷಣ ಅದೇನೂ ನಿಮ್ಮ ಕಂಪ್ಯೂಟರಿನ ಹಾರ್ಡ್‌ಡಿಸ್ಕ್‌ನಲ್ಲಿ ಹೋಗಿ ಕುಳಿತುಕೊಳ್ಳುವುದಿಲ್ಲ. ಉಳಿಸಬೇಕೋ ಬೇಡವೋ ಎಂದು ತೀರ್ಮಾನಿಸಿ, ಕಡತಕ್ಕೊಂದು ಹೆಸರು ಕೊಟ್ಟು, ಇದನ್ನು ಉಳಿಸಿಡು ಎಂದು ಹೇಳುವವರೆಗೂ ನೀವು ಟೈಪ್ ಮಾಡಿದ್ದೆಲ್ಲ ರ್‍ಯಾಮ್ ಅಥವಾ ರ್‍ಯಾಂಡಮ್ ಆಕ್ಸೆಸ್ ಮೆಮೊರಿಯಲ್ಲಿ ಉಳಿದುಕೊಂಡಿರುತ್ತದೆ.

ಕಂಪ್ಯೂಟರಿನ ಪ್ರೈಮರಿ ಮೆಮೊರಿಗೆ ರ್‍ಯಾಮ್ ಒಂದು ಉದಾಹರಣೆ. ತಾನು ಬಳಸುತ್ತಿರುವ ದತ್ತಾಂಶ ಹಾಗೂ ಮಾಹಿತಿಯನ್ನೆಲ್ಲ ಪ್ರಾಸೆಸರ್ ಇದರಲ್ಲಿ ಉಳಿಸಿಡುತ್ತದೆ. ಕಂಪ್ಯೂಟರ್‌ಗೆ ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ರ್‍ಯಾಮ್‌ನಲ್ಲಿರುವ ಸಂಗತಿಗಳೆಲ್ಲ ಉಳಿದಿರುತ್ತವೆ. ಇದ್ದಕ್ಕಿದ್ದಂತೆ ಕರೆಂಟು ಹೋದಾಗ ನೀವು ಟೈಪ್ ಮಾಡುತ್ತಿದ್ದ ಇನ್ನೂ ಸೇವ್ ಮಾಡದ ಕಡತ ಮಾಯವಾಗಿಬಿಡುತ್ತದಲ್ಲ, ಅದಕ್ಕೆ ಇದೇ ಕಾರಣ!

ಹಾಗೆಂದಮಾತ್ರಕ್ಕೆ ಪ್ರೈಮರಿ ಮೆಮೊರಿಯ ಹಣೆಬರಹವೇ ಇಷ್ಟು ಅಂತೇನೂ ಇಲ್ಲ. ಪ್ರೈಮರಿ ಮೆಮೊರಿಗೆ ಇನ್ನೊಂದು ಉದಾಹರಣೆಯಾದ ರೀಡ್ ಓನ್ಲಿ ಮೆಮೊರಿ ಅಥವಾ ರಾಮ್‌ನ ಕತೆಯೇ ಬೇರೆ. ಇದರ ನೆನಪಿನಲ್ಲಿರುವ ಸಂಗತಿಗಳೆಲ್ಲ ಕರೆಂಟಿದ್ದರೂ ಇಲ್ಲದಿದ್ದರೂ ಹಾಗೆಯೇ ಉಳಿದಿರುತ್ತವೆ. ಆದರೆ ರಾಮ್‌ನಲ್ಲಿರುವುದನ್ನು ಓದುವುದು ಮಾತ್ರ ಸಾಧ್ಯ; ಬದಲಾಯಿಸುವಂತಿಲ್ಲ. ಕಂಪ್ಯೂಟರ್‌ನ ಕೆಲಸ ಪ್ರಾರಂಭವಾಗಲು ಬೇಕಾದ ಕೆಲ ನಿರ್ದೇಶನಗಳು ಇಲ್ಲಿ ಶೇಖರವಾಗಿರುತ್ತವೆ.

Plugin

ಪ್ಲಗಿನ್
Kannada Equivalent: (ರೂಪಿಸಬೇಕಿದೆ)
Short Description : ನಿರ್ದಿಷ್ಟ ತಂತ್ರಾಂಶದ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಅದಕ್ಕೆ ಹೆಚ್ಚಿನ ಸಾಮರ್ಥ್ಯ ಸೇರಿಸುವ ಸೌಲಭ್ಯ
Long Description: ತಂತ್ರಾಂಶಗಳು ಎಷ್ಟೆಲ್ಲ ಕೆಲಸ ಮಾಡಿದರೂ ನಮಗೆ ಅದರಲ್ಲಿ ಒಂದಲ್ಲ ಒಂದು ಕೊರತೆ ಕಾಣಸಿಗುವುದು ಸಾಮಾನ್ಯ. ಬ್ರೌಸರ್ ವಿಷಯವನ್ನೇ ತೆಗೆದುಕೊಳ್ಳಿ – ಬೇರೆಬೇರೆ ಜಾಲತಾಣಗಳ ಸೇವೆಯನ್ನು, ನಮ್ಮ ಕಂಪ್ಯೂಟರಿನಲ್ಲಿರುವ ಇತರ ತಂತ್ರಾಂಶಗಳನ್ನು ಬ್ರೌಸರ್ ಕಿಟಕಿಯಿಂದಲೇ ಬಳಸುವಂತಿದ್ದರೆ ಎಷ್ಟು ಚೆಂದ ಅಲ್ಲವೇ?
ನಿರ್ದಿಷ್ಟ ತಂತ್ರಾಂಶದ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಅದಕ್ಕೆ ಹೆಚ್ಚಿನ ಸಾಮರ್ಥ್ಯ ಸೇರಿಸುವ ಸೌಲಭ್ಯಗಳು ಈ ಆಲೋಚನೆಯನ್ನು ಕಾರ್ಯಗತಗೊಳಿಸಬಲ್ಲವು. ಇಂತಹ ಸೌಲಭ್ಯಗಳನ್ನು ‘ಪ್ಲಗಿನ್’ಗಳೆಂದು ಕರೆಯಲಾಗುತ್ತದೆ. ಪ್ರತ್ಯೇಕ ತಂತ್ರಾಂಶವನ್ನು ಬಳಸುವ ಅಗತ್ಯವಿಲ್ಲದೆ ಬ್ರೌಸರ್ ಪರದೆಯೊಳಗೇ ಪಿಡಿಎಫ್ ಕಡತಗಳನ್ನು ತೆರೆಯುವುದು ಸಾಧ್ಯವಾಗುತ್ತದಲ್ಲ, ಅದಕ್ಕೆ ಇಂತಹ ಪ್ಲಗಿನ್‌ಗಳೇ ಕಾರಣ.
ಇನ್ನೊಂದು ತಂತ್ರಾಂಶವನ್ನೋ ಜಾಲತಾಣವನ್ನೋ ಬಳಸುವುದಕ್ಕಷ್ಟೇ ಸೀಮಿತವಾಗುವುದರ ಬದಲು ಬ್ರೌಸರ್‌ಗೆ ಹೊಸ ಅನುಕೂಲತೆಗಳನ್ನು (ಉದಾ: ಹೊಸ ಮೆನು ಆಯ್ಕೆಗಳು – ಬಟನ್‌ಗಳು ಇತ್ಯಾದಿ) ಸೇರಿಸುವ ಸೌಲಭ್ಯಗಳೂ ಇವೆ. ಇಂತಹ ಸೌಲಭ್ಯಗಳನ್ನು ‘ಬ್ರೌಸರ್ ಎಕ್ಸ್‌ಟೆನ್ಷನ್’, ಅಂದರೆ ವಿಸ್ತರಣೆಗಳೆಂದು ಗುರುತಿಸಲಾಗುತ್ತದೆ.
ದುರುದ್ದೇಶಪೂರಿತ ಅಥವಾ ಅಸಮರ್ಪಕ ವಿನ್ಯಾಸವಿರುವ ಪ್ಲಗಿನ್‌ಗಳ ಬಳಕೆ ಸುರಕ್ಷತೆಯ ಸಮಸ್ಯೆಗಳನ್ನು ತಂದೊಡ್ಡಬಹುದು. ಹಾಗಾಗಿ ನಮ್ಮ ಬ್ರೌಸರಿನಲ್ಲಿ ಅಳವಡಿಸಲಾಗಿರುವ ಪ್ಲಗಿನ್‌ಗಳನ್ನು, ಎಕ್ಸ್‌ಟೆನ್ಷನ್‌ಗಳನ್ನು ಆಗಿಂದಾಗ್ಗೆ ಪರಿಶೀಲಿಸಿ ಅನಗತ್ಯವಾದವುಗಳನ್ನು ತೆಗೆದುಹಾಕುವುದು ಒಳ್ಳೆಯ ಅಭ್ಯಾಸ. ಬ್ರೌಸರಿನ ಸೆಟಿಂಗ್ಸ್ ಮೆನು ಮೂಲಕ ಈ ಕೆಲಸ ಮಾಡುವುದು ಸಾಧ್ಯ.

Function Key

ಫಂಕ್ಷನ್ ಕೀ
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರ್ ಕೀಬೋರ್ಡಿನಲ್ಲಿ ನಿರ್ದಿಷ್ಟ ಪೂರ್ವನಿರ್ಧಾರಿತ ಕೆಲಸಗಳಿಗಾಗಿ (ಫಂಕ್ಷನ್) ಬಳಕೆಯಾಗುವ ಕೀಲಿಗಳು
Long Description: ಕಂಪ್ಯೂಟರ್ ಕೀಲಿಮಣೆಯಲ್ಲಿ ಹಲವು ಬಗೆಯ ಕೀಲಿಗಳಿರುವುದನ್ನು ನಾವು ನೋಡಬಹುದು. ಈ ಪೈಕಿ ಕೆಲವು ಅಕ್ಷರ – ಅಂಕಿ – ಲೇಖನಚಿಹ್ನೆಗಳನ್ನು ಮೂಡಿಸಲು ಬಳಕೆಯಾದರೆ ಇನ್ನು ಕೆಲವು ವಿಶಿಷ್ಟ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಕೀಲಿಮಣೆಯ ಮೊದಲ ಸಾಲಿನಲ್ಲಿ ಕಾಣಸಿಗುವ, ಇಂಗ್ಲಿಷಿನ ‘ಎಫ್’ ಅಕ್ಷರದಿಂದ ಶುರುವಾಗುವ ಹನ್ನೆರಡು ಕೀಲಿಗಳು (F1-F12) ಈ ಪೈಕಿ ಎರಡನೆಯ ಗುಂಪಿಗೆ ಸೇರುತ್ತವೆ.
ಈ ಕೀಲಿಗಳನ್ನು ‘ಫಂಕ್ಷನ್ ಕೀ’ಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಕಾಣಸಿಗುವ ‘ಎಫ್’ ಅಕ್ಷರ ‘ಫಂಕ್ಷನ್’ ಎಂಬ ಹೆಸರನ್ನು ಸೂಚಿಸುತ್ತದೆ. ನಿರ್ದಿಷ್ಟ ಪೂರ್ವನಿರ್ಧಾರಿತ ಕೆಲಸಗಳಿಗಾಗಿ (ಫಂಕ್ಷನ್) ಬಳಕೆಯಾಗುವುದು ಈ ಕೀಲಿಗಳ ವೈಶಿಷ್ಟ್ಯ. ಇವುಗಳನ್ನು ಪ್ರತ್ಯೇಕವಾಗಿ ಬಳಸುವ ಮೂಲಕ (ಉದಾ: ಸಹಾಯ ಪಡೆಯಲು ‘F1’) ಅಥವಾ ಇತರ ಕೀಲಿಗಳೊಡನೆ ಬಳಸುವ ಮೂಲಕ (ಉದಾ: ಕಿಟಕಿ ಮುಚ್ಚಲು ‘Alt+F4’) ಬೇರೆಬೇರೆ ಕೆಲಸಗಳನ್ನು ಸಾಧಿಸಿಕೊಳ್ಳಬಹುದು. ಬಹುತೇಕ ಕೀಬೋರ್ಡ್ ಶಾರ್ಟ್‌ಕಟ್‌ಗಳು ಫಂಕ್ಷನ್ ಕೀಲಿಗಳನ್ನು ಬಳಸುತ್ತವೆ.
ಈ ಕೀಲಿಗಳ ಕಾರ್ಯಾಚರಣೆ ನಾವು ಬಳಸುತ್ತಿರುವ ತಂತ್ರಾಂಶಕ್ಕೆ ಅನುಗುಣವಾಗಿ ಬದಲಾಗಬಹುದು. ನಿರ್ದಿಷ್ಟ ಫಂಕ್ಷನ್ ಕೀಲಿಯನ್ನು ಹಲವು ತಂತ್ರಾಂಶಗಳು ಒಂದೇ ಉದ್ದೇಶಕ್ಕೆ ಬಳಸುವ ಉದಾಹರಣೆಗಳೂ ಇವೆ. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸಮಾಡುವ ಅನೇಕ ತಂತ್ರಾಂಶಗಳು ಸಹಾಯ ಪಡೆಯಲು F1, ರಿಫ್ರೆಶ್ ಮಾಡಲು F5, ಕಿಟಕಿ ಮುಚ್ಚಲು Alt+F4 ಮುಂತಾದ ಕೀಲಿಗಳನ್ನು ಬಳಸುವುದನ್ನು ಇಲ್ಲಿ ಉದಾಹರಿಸಬಹುದು.

Firmware

ಫರ್ಮ್‌ವೇರ್
Kannada Equivalent: (ರೂಪಿಸಬೇಕಿದೆ)
Short Description : ನಿರ್ದಿಷ್ಟ ಯಂತ್ರಾಂಶದ ಜೊತೆಗಷ್ಟೇ ಕೆಲಸಮಾಡುವ, ಸೀಮಿತ ಉದ್ದೇಶದ ತಂತ್ರಾಂಶ
Long Description: ಮಾಹಿತಿ ತಂತ್ರಜ್ಞಾನ ಎಂದಾಕ್ಷಣ ಹಾರ್ಡ್‌ವೇರ್ (ಯಂತ್ರಾಂಶ) ಹಾಗೂ ಸಾಫ್ಟ್‌ವೇರ್‌ಗಳ (ತಂತ್ರಾಂಶ) ಪ್ರಸ್ತಾಪ ಬರುವುದು ಸಾಮಾನ್ಯ. ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನಿನ ಉದಾಹರಣೆಯನ್ನೇ ತೆಗೆದುಕೊಂಡರೆ ತಂತ್ರಾಂಶದ ಸಹಾಯದಿಂದ ನಾವು ಅದರ ಭೌತಿಕ ಭಾಗಗಳನ್ನು – ಅಂದರೆ ಯಂತ್ರಾಂಶವನ್ನು – ಬಳಸುವುದು ಸಾಧ್ಯವಾಗುತ್ತದೆ.
ಕಂಪ್ಯೂಟರು – ಸ್ಮಾರ್ಟ್‌ಫೋನುಗಳಷ್ಟೇ ಏಕೆ, ಡಿಜಿಟಲ್ ಕ್ಯಾಮೆರಾ, ಟೀವಿಯ ಸೆಟ್ ಟಾಪ್ ಬಾಕ್ಸ್, ಅಂತರಜಾಲ ಸಂಪರ್ಕ ಕಲ್ಪಿಸುವ ಮೋಡೆಮ್ – ಹೀಗೆ ಇನ್ನೂ ಅದೆಷ್ಟೋ ಸಾಧನಗಳು ಕೆಲಸಮಾಡಲು ತಂತ್ರಾಂಶ ಬೇಕು. ಕಂಪ್ಯೂಟರಿನಲ್ಲೋ ಸ್ಮಾರ್ಟ್‌ಫೋನಿನಲ್ಲೋ ಮಾಡಿದಂತೆ ಈ ತಂತ್ರಾಂಶವನ್ನು ನಮಗಿಷ್ಟಬಂದಂತೆ ಬದಲಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದೊಂದೇ ವ್ಯತ್ಯಾಸ ಅಷ್ಟೆ.
ಹೀಗೆ ನಿರ್ದಿಷ್ಟ ಯಂತ್ರಾಂಶದ ಜೊತೆಗಷ್ಟೇ ಕೆಲಸಮಾಡುವ, ಸೀಮಿತ ಉದ್ದೇಶದ ತಂತ್ರಾಂಶವನ್ನು ಫರ್ಮ್‌ವೇರ್ ಎಂದು ಕರೆಯುತ್ತಾರೆ. ಮೇಲೆ ಹೇಳಿದ ಸಾಧನಗಳಲ್ಲಷ್ಟೇ ಅಲ್ಲ, ಕಂಪ್ಯೂಟರು – ಸ್ಮಾರ್ಟ್‌ಫೋನುಗಳಲ್ಲೂ ಫರ್ಮ್‌ವೇರ್ ಬಳಕೆ ಇದೆ. ಕಂಪ್ಯೂಟರ್ ಚಾಲೂ ಮಾಡಿದ ಕೂಡಲೆ ಅದು ಏನು ಕೆಲಸಮಾಡಬೇಕೆಂದು ಹೇಳುವ ತಂತ್ರಾಂಶ, ಮೊಬೈಲ್ ಫೋನಿನ ಕಾರ್ಯಾಚರಣ ವ್ಯವಸ್ಥೆಗಳೆಲ್ಲ ಫರ್ಮ್‌ವೇರ್‌ನ ವಿವಿಧ ರೂಪಗಳೇ.
ಯಂತ್ರಾಂಶ ನಿರ್ಮಾತೃಗಳು ತಮ್ಮ ಉತ್ಪನ್ನಗಳೊಡನೆ ಬಳಸಬೇಕಾದ ಫರ್ಮ್‌ವೇರ್ ಅನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡುತ್ತಿರುತ್ತಾರೆ. ಸ್ಮಾರ್ಟ್‌ಫೋನ್ – ಸೆಟ್‌ಟಾಪ್ ಬಾಕ್ಸ್ ಮುಂತಾದ ಉದಾಹರಣೆಗಳಲ್ಲಿ ಈ ಉನ್ನತೀಕರಣ ಸ್ವಯಂಚಾಲಿತವಾಗಿಯೇ ಆಗುತ್ತದೆ; ಇನ್ನು ಕೆಲ ಸಾಧನಗಳ (ಉದಾ: ಡಿಜಿಟಲ್ ಕ್ಯಾಮೆರಾ) ಫರ್ಮ್‌ವೇರ್‌ನಲ್ಲಿ ಸಮಸ್ಯೆ ಕಂಡುಬಂದರೆ ಅದನ್ನು ಉನ್ನತೀಕರಿಸಲು ಸೇವಾಕೇಂದ್ರಕ್ಕೇ ಹೋಗಬೇಕಾಗುವುದೂ ಉಂಟು.

Font

ಫಾಂಟ್
Kannada Equivalent: ಅಕ್ಷರಶೈಲಿ
Short Description : ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳಲ್ಲಿ ಪಠ್ಯವನ್ನು ಮೂಡಿಸಲು ನೆರವಾಗುವ ಅಕ್ಷರಶೈಲಿ
Long Description: ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿರುವುದು ಹೊಸ ಸಂಗತಿಯೇನಲ್ಲ. ಅದರಲ್ಲಿ ಪಠ್ಯರೂಪದ ಮಾಹಿತಿಯ ಪಾಲು ಬಹಳ ದೊಡ್ಡದು. ನೀವು ಓದುತ್ತಿರುವ ಪುಸ್ತಕ, ಕಂಪ್ಯೂಟರಿನಲ್ಲಿ ತೆರೆದಿರುವ ವೆಬ್‌ಸೈಟು, ಮೊಬೈಲ್ ಪರದೆಯಲ್ಲಿ ಕಾಣಿಸಿಕೊಂಡಿರುವ ಹೊಸ ವಾಟ್ಸ್‌ಆಪ್ ಸಂದೇಶ – ಒಂದಲ್ಲ ಒಂದು ಬಗೆಯಲ್ಲಿ ಪಠ್ಯರೂಪದ ಮಾಹಿತಿ ನಮ್ಮೆದುರು ಕಾಣಿಸಿಕೊಳ್ಳುತ್ತಲೇ ಇರುತ್ತದೆ.
ಈ ಮಾಹಿತಿಯೆಲ್ಲ ನಮಗೆ ತಲುಪಬೇಕಾದರೆ ಅದನ್ನು ಯಾರೋ ಒಬ್ಬರು ಕಂಪ್ಯೂಟರಿನಲ್ಲಿ ಅಥವಾ ಮೊಬೈಲಿನಲ್ಲಿ ಟೈಪ್ ಮಾಡಬೇಕು ತಾನೆ, ಹಾಗೆ ಮಾಡಲು ಅಕ್ಷರಶೈಲಿಗಳು ಬೇಕು. ಕಂಪ್ಯೂಟರಿನ ಭಾಷೆಯಲ್ಲಿ ಇವಕ್ಕೆ ಫಾಂಟ್‌ಗಳೆಂದು ಹೆಸರು. ವಿವಿಧ ಭಾಷೆಗಳಿಗೆ ವಿವಿಧ ಫಾಂಟುಗಳು ಲಭ್ಯ; ಒಂದೊಂದು ಫಾಂಟಿನ ಅಕ್ಷರಗಳೂ ಒಂದೊಂದು ವಿನ್ಯಾಸದಲ್ಲಿರುವುದು ಸಾಮಾನ್ಯ.
ಫಾಂಟ್ ಅನ್ನು ಒಂದಷ್ಟು ಆಕಾರಗಳ ಗುಂಪು ಎಂದು ಕರೆಯಬಹುದು. ಅಕ್ಷರವನ್ನೋ ಅಂಕೆಯನ್ನೋ ಲೇಖನ ಚಿಹ್ನೆಯನ್ನೋ ಪ್ರತಿನಿಧಿಸುವ ಇಂತಹ ಆಕಾರಗಳನ್ನು ‘ಗ್ಲಿಫ್’, ಅಂದರೆ ಅಕ್ಷರಭಾಗಗಳೆಂದು ಕರೆಯುತ್ತಾರೆ. ಇಂಗ್ಲಿಷಿನ ಉದಾಹರಣೆಯನ್ನೇ ತೆಗೆದುಕೊಂಡರೆ ದೊಡ್ಡಕ್ಷರದ ‘ಎ’ ಒಂದು ಗ್ಲಿಫ್, ಸಣ್ಣಕ್ಷರದ ‘ಎ’ ಇನ್ನೊಂದು ಗ್ಲಿಫ್. ಕನ್ನಡದಂತಹ ಭಾಷೆಗಳಲ್ಲಿ ಕೆಲವು ಅಕ್ಷರಗಳಿಗೆ ಪ್ರತ್ಯೇಕ ಗ್ಲಿಫ್ ಇದ್ದರೆ ಇನ್ನು ಕೆಲ ಅಕ್ಷರಗಳು ಹಲವು ಗ್ಲಿಫ್‌ಗಳ ಜೋಡಣೆಯಿಂದ ರೂಪುಗೊಳ್ಳುತ್ತವೆ. ಈ ಜೋಡಣೆ ಬೇರೆಬೇರೆ ಫಾಂಟುಗಳಲ್ಲಿ ಬೇರೆಬೇರೆ ರೀತಿಯಲ್ಲಿರಬಹುದು.

Form Factor

ಫಾರ್ಮ್ ಫ್ಯಾಕ್ಟರ್
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ಫೋನಿನ ಆಕಾರ-ಸ್ವರೂಪವನ್ನು ಸೂಚಿಸುವ ಹೆಸರು
Long Description: ಮಾರುಕಟ್ಟೆಯಲ್ಲಿ ದೊರಕುವ ಮೊಬೈಲ್ ಫೋನುಗಳಲ್ಲಿ ನೂರೆಂಟು ವಿಧ – ಬೇರೆಬೇರೆ ನಿರ್ಮಾತೃಗಳು, ಬೇರೆಬೇರೆ ಗಾತ್ರ, ಬೇರೆಬೇರೆ ಸವಲತ್ತುಗಳನ್ನು ಇಲ್ಲಿ ನಾವು ಕಾಣಬಹುದು. ವೈವಿಧ್ಯ ಕಡಿಮೆಯಿರುವುದು ಬಹುಶಃ ಮೊಬೈಲುಗಳ ಆಕಾರ ಹಾಗೂ ಸ್ವರೂಪದಲ್ಲಿ ಮಾತ್ರವೇ ಇರಬೇಕು.
ಮೊಬೈಲ್ ಫೋನುಗಳು ಪ್ರಚಲಿತಕ್ಕೆ ಬಂದ ದಿನದಿಂದ ಇಂದಿನವರೆಗೂ ಅವುಗಳ ಆಕಾರ-ಸ್ವರೂಪಗಳು ಕೆಲವೇ ಬಗೆಯದಾಗಿರುವುದನ್ನು ನಾವು ನೋಡಬಹುದು: ಕವಚವನ್ನು ತೆರೆದು (ಫ್ಲಿಪ್) ಬಳಸಬಹುದಾದ ಫೋನುಗಳು, ಮೇಲ್ಭಾಗವನ್ನು ಜಾರಿಸಿದರೆ (ಸ್ಲೈಡ್) ಕೀಲಿಮಣೆ ಕಾಣುವ ಫೋನುಗಳು, ತಿರುಗಿಸಬಹುದಾದ (ಸ್ವಿವೆಲ್) ಪರದೆಯ ಫೋನುಗಳು, ದಪ್ಪನೆಯ ಪಟ್ಟಿಯಂತಿರುವ (ಬಾರ್) ಸರಳ ವಿನ್ಯಾಸದ ಫೋನುಗಳು – ಹೀಗೆ.
ಮಾರುಕಟ್ಟೆಯಲ್ಲಿರುವ ಬಹುತೇಕ ಮಾದರಿಯ ಮೊಬೈಲುಗಳು ಈ ಪೈಕಿ ಯಾವುದೋ ಒಂದು ಆಕಾರ-ಸ್ವರೂಪದ್ದಾಗಿರುವುದು ಸಾಮಾನ್ಯ. ಇದನ್ನು ಆ ಫೋನಿನ ‘ಫಾರ್ಮ್ ಫ್ಯಾಕ್ಟರ್’ ಎಂದು ಕರೆಯುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ‘ಬಾರ್’ ಸ್ವರೂಪದ ಫೋನುಗಳದೇ ಸಾಮ್ರಾಜ್ಯ; ಇಂದಿನ ಬಹುತೇಕ ಎಲ್ಲ ಸ್ಮಾರ್ಟ್‌ಫೋನುಗಳೂ ಇದೇ ಫಾರ್ಮ್ ಫಾಕ್ಟರ್ ಹೊಂದಿರುತ್ತವೆ ಎಂದರೂ ಸರಿಯೇ. ಬೇರೆಬೇರೆ ಫಾರ್ಮ್ ಫ್ಯಾಕ್ಟರಿನ ಕೆಲವು ಫೋನುಗಳೂ ಮಾರುಕಟ್ಟೆಯಲ್ಲಿವೆ. ಮೇಲೆ ಹೇಳಿದ ಯಾವುದೇ ಫಾರ್ಮ್ ಫ್ಯಾಕ್ಟರ್ ವ್ಯಾಖ್ಯಾನಕ್ಕೂ ಹೊಂದದ ಕೆಲ ಮಾದರಿಗಳೂ (ಉದಾ: ವಾಚ್ ರೂಪದ ಫೋನು, ಎರಡು ಪರದೆಯಿರುವ ಫೋನು ಇತ್ಯಾದಿ) ಒಮ್ಮೊಮ್ಮೆ ಮಾರುಕಟ್ಟೆಗೆ ಬರುವುದುಂಟು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App