भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Debug

ಡೀಬಗ್
Kannada Equivalent: (ರೂಪಿಸಬೇಕಿದೆ)
Short Description : ಸಿದ್ಧವಾದ ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮುನ್ನ ಅದರಲ್ಲಿರಬಹುದಾದ ತಪ್ಪುಗಳನ್ನು (ಬಗ್) ಗುರುತಿಸಿ ಸರಿಪಡಿಸುವ ಕೆಲಸ
Long Description: ತಂತ್ರಾಂಶ ರಚನೆ ಅಸಮರ್ಪಕವಾಗಿದ್ದರೆ ಅದರ ಕಾರ್ಯನಿರ್ವಹಣೆಯಲ್ಲಿ ತಪ್ಪುಗಳಾಗುವುದು ಸಹಜ. ಅನಪೇಕ್ಷಿತ ಫಲಿತಾಂಶಗಳನ್ನು ನೀಡುವ, ಬಳಕೆದಾರರಿಗೆ ಕಿರಿಕಿರಿಮಾಡುವ ಇಂತಹ ತಪ್ಪುಗಳನ್ನು ‘ಬಗ್’ ಎಂದು ಕರೆಯುತ್ತಾರೆ. ಬಗ್ ದೆಸೆಯಿಂದ ತಂತ್ರಾಂಶಗಳ ಕಾರ್ಯನಿರ್ವಹಣೆಯಲ್ಲಾಗುವ ವ್ಯತ್ಯಯ ಕಿರಿಕಿರಿಯ ಜೊತೆಗೆ ಭಾರೀ ಪ್ರಮಾಣದ ಆರ್ಥಿಕ ನಷ್ಟವನ್ನೂ ಉಂಟುಮಾಡಬಲ್ಲದು.
ತಂತ್ರಾಂಶವನ್ನು ಬಳಕೆದಾರರಿಗೆ ನೀಡುವ ಮೊದಲು ಇಂತಹ ತಪ್ಪುಗಳನ್ನೆಲ್ಲ ಗುರುತಿಸಿ ಸರಿಪಡಿಸುವುದು ಅಪೇಕ್ಷಣೀಯ. ‘ಡೀಬಗಿಂಗ್’, ಅಂದರೆ ‘ಡೀಬಗ್ ಮಾಡುವುದು’ ಎಂದು ಗುರುತಿಸುವುದು ಈ ಪ್ರಕ್ರಿಯೆಯನ್ನೇ. ಈ ಕೆಲಸದ ಬಹುಪಾಲು ತಂತ್ರಾಂಶ ಪರೀಕ್ಷೆಯ (ಟೆಸ್ಟಿಂಗ್) ಸಂದರ್ಭದಲ್ಲಿ ನಡೆಯುತ್ತದೆ. ತಂತ್ರಾಂಶ ಅಭಿವರ್ಧನೆಯ (ಡೆವೆಲಪ್‌ಮೆಂಟ್) ಹಂತದಲ್ಲೂ ಆವರೆಗೆ ಸಿದ್ಧವಾದಷ್ಟು ಭಾಗವನ್ನು ಡೀಬಗ್ ಮಾಡುವುದು ಅಪರೂಪವೇನಲ್ಲ.
ಸಣ್ಣಪುಟ್ಟ ಬಗ್‌ಗಳನ್ನು ಹಿಡಿದುಹಾಕುವುದು ಸುಲಭವೇ. ಆದರೆ ಸಂಕೀರ್ಣ ತಂತ್ರಾಂಶಗಳಲ್ಲಿ ಕಾಣಿಸಿಕೊಳ್ಳುವ ಕೆಲ ತಪ್ಪುಗಳ ಮೂಲವನ್ನು ಹುಡುಕಿ ಸರಿಪಡಿಸುವುದು ಸವಾಲಿನ ಕೆಲಸ. ಈ ಪ್ರಕ್ರಿಯೆಯಲ್ಲಿ ನೆರವಾಗಲು ಡೀಬಗರ್‌ಗಳೆಂಬ ತಂತ್ರಾಂಶಗಳನ್ನು ಬಳಸಲಾಗುತ್ತದೆ. ಪರೀಕ್ಷಿಸಲಾಗುತ್ತಿರುವ ತಂತ್ರಾಂಶವನ್ನು ಹೆಜ್ಜೆಗಳಲ್ಲಿ ಕಾರ್ಯಗತಗೊಳಿಸುವ ಮೂಲಕ ನಡುವೆ ಎಲ್ಲೋ ಇರಬಹುದಾದ ತಪ್ಪನ್ನು ಗುರುತಿಸಲು ಸಹಾಯಮಾಡುವುದು ಈ ತಂತ್ರಾಂಶದ ಹೆಚ್ಚುಗಾರಿಕೆ. ಪರೀಕ್ಷೆಯ ಅಗತ್ಯಗಳಿಗೆ ತಕ್ಕಂತೆ ತಂತ್ರಾಂಶದ ಕಾರ್ಯಾಚರಣೆಯನ್ನು ನಿರ್ದಿಷ್ಟ ಹಂತದಲ್ಲಿ ನಿಲ್ಲಿಸುವ ಹಾಗೂ ಆ ಹಂತದ ಇನ್‌ಪುಟ್-ಔಟ್‌ಪುಟ್‌ಗಳನ್ನು ಪರಿಶೀಲಿಸುವ ಸೌಲಭ್ಯವೂ ಬಹುತೇಕ ಡೀಬಗರ್‌ಗಳಲ್ಲಿರುತ್ತದೆ.

Desktop

ಡೆಸ್ಕ್‌ಟಾಪ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರಿನ ವಿಧಗಳಲ್ಲೊಂದು; ಕಂಪ್ಯೂಟರನ್ನು ಆನ್ ಮಾಡಿದ ನಂತರ ಕಾಣುವ, ವಿವಿಧ ಐಕನ್‌ಗಳಿರುವ ಪ್ರಾರಂಭಿಕ ಪರದೆಗೂ ಡೆಸ್ಕ್‌ಟಾಪ್ ಎಂದೇ ಹೆಸರು
Long Description: ಮೇಜಿನ ಮೇಲೆ ಕೂರುವಷ್ಟು ದೊಡ್ಡದಾದ, ಮಾನಿಟರ್ – ಕ್ಯಾಬಿನೆಟ್ – ಕೀಬೋರ್ಡ್ – ಮೌಸ್ – ಸ್ಪೀಕರ್ ಇತ್ಯಾದಿ ನಾಲ್ಕಾರು ಪ್ರತ್ಯೇಕ ಅಂಗಗಳಿರುವ ಕಂಪ್ಯೂಟರನ್ನು ಡೆಸ್ಕ್‌ಟಾಪ್ (‘ಡೆಸ್ಕ್‌ಟಾಪ್ ಕಂಪ್ಯೂಟರ್’ನ ಹ್ರಸ್ವರೂಪ) ಎಂದು ಕರೆಯುವುದು ಸಾಮಾನ್ಯ ಅಭ್ಯಾಸ. ಒಂದು ಕಾಲಕ್ಕೆ ಅತ್ಯಂತ ವ್ಯಾಪಕ ಬಳಕೆಯಲ್ಲಿದ್ದು ಇದೀಗ ನಿಧಾನಕ್ಕೆ ಮರೆಯಾಗುತ್ತಿರುವ ಕಂಪ್ಯೂಟರ್ ಮಾದರಿ ಇದು.
ಹಾಗೆಂದಮಾತ್ರಕ್ಕೆ ಡೆಸ್ಕ್‌ಟಾಪ್ ಎಂಬ ಹೆಸರಿನ ಅರ್ಥ ಮೇಜಿನ ಮೇಲೆ ಕೂರುವ ಕಂಪ್ಯೂಟರು ಎಂದಷ್ಟೇ ಅಲ್ಲ. ಕಂಪ್ಯೂಟರ್ (ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಯಾವುದೇ ಇರಲಿ) ಆನ್ ಮಾಡಿದಾಗ ಪರದೆಯೊಂದು ಕಾಣುತ್ತದಲ್ಲ, ಬೇರೆಬೇರೆ ಐಕನ್‌ಗಳಿರುವಂಥದ್ದು, ಅದನ್ನೂ ಡೆಸ್ಕ್‌ಟಾಪ್ ಎಂದೇ ಕರೆಯುತ್ತಾರೆ. ಕಂಪ್ಯೂಟರ್ ಇಲ್ಲದ ಕಾಲದಲ್ಲಿ ಕೆಲಸದ ಮೇಜಿನ ಮೇಲೆ ಇರುತ್ತಿದ್ದ ವಸ್ತುಗಳೆಲ್ಲ ಈಗ ಕಂಪ್ಯೂಟರಿನ ಈ ಪರದೆಯ ಮೇಲೆ ಇರುತ್ತವಲ್ಲ, ಅದರಿಂದಾಗಿಯೇ ಈ ಪರದೆಗೆ ‘ಡೆಸ್ಕ್‌ಟಾಪ್’ ಎಂಬ ಹೆಸರು ಬಂದಿದೆ.
ಕಡತ – ಪುಸ್ತಕಗಳನ್ನೆಲ್ಲ ವಿನ್ಯಾಸಗೊಳಿಸುವ ಕೋರೆಲ್‌ಡ್ರಾ, ಇನ್‌ಡಿಸೈನ್ ಮುಂತಾದ ತಂತ್ರಾಂಶಗಳನ್ನು ‘ಡಿಟಿಪಿ’ ತಂತ್ರಾಂಶಗಳೆಂದು ಕರೆಯುತ್ತಾರೆ. ಇಲ್ಲಿ ಡಿಟಿಪಿ ಎಂದರೆ ಡೆಸ್ಕ್‌ಟಾಪ್ ಪಬ್ಲಿಶಿಂಗ್. ಮುದ್ರಣಾಲಯದ ಮೇಜಿನ ಮೇಲೆ ಮೊಳೆಜೋಡಿಸಿ ಮಾಡುತ್ತಿದ್ದ ಕೆಲಸ ಈಗ ಕಂಪ್ಯೂಟರಿನಲ್ಲೇ ಆಗುತ್ತದಲ್ಲ, ಹಾಗಾಗಿ ಇಲ್ಲಿಯೂ ಡೆಸ್ಕ್‌ಟಾಪ್ ಬಂದಿದೆ.

Datatype

ಡೇಟಾಟೈಪ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ತಂತ್ರಾಂಶದಲ್ಲಿ ಬಳಕೆಯಾಗುವ ದತ್ತಾಂಶ (ಡೇಟಾ) ಯಾವ ಬಗೆಯದಾಗಿರಬೇಕು ಎನ್ನುವುದನ್ನು ಸೂಚಿಸುವ ಅಂಶ
Long Description: ತಂತ್ರಾಂಶಗಳು ಸದಾಕಾಲವೂ ಒಂದಲ್ಲ ಒಂದು ಬಗೆಯ ದತ್ತಾಂಶವನ್ನು (ಡೇಟಾ) ಬಳಸುತ್ತಿರುತ್ತವೆ. ಬಳಕೆದಾರರು ದಾಖಲಿಸುವ (ಇನ್‌ಪುಟ್) ದತ್ತಾಂಶ, ಆಂತರಿಕ ಲೆಕ್ಕಾಚಾರಗಳಿಗೆ ಬಳಕೆಯಾಗುವ ದತ್ತಾಂಶ, ಅಂತಿಮವಾಗಿ ಉತ್ತರವನ್ನು (ಔಟ್‌ಪುಟ್) ಸಿದ್ಧಪಡಿಸಲು ಬೇಕಾದ ದತ್ತಾಂಶಗಳೆಲ್ಲ ಈ ಪಟ್ಟಿಯಲ್ಲಿ ಸೇರುತ್ತವೆ.
ಇಂತಹ ಪ್ರತಿ ಉದಾಹರಣೆಯಲ್ಲೂ ಯಾವ ಬಗೆಯ ದತ್ತಾಂಶವನ್ನು ನಿರೀಕ್ಷಿಸಬೇಕು ಎನ್ನುವ ವಿವರವನ್ನು ತಂತ್ರಾಂಶದಲ್ಲಿ ಮುಂಚಿತವಾಗಿಯೇ ನೀಡಲಾಗಿರುತ್ತದೆ: ಜನ್ಮದಿನ ದಾಖಲಿಸುವಂತೆ ಬಳಕೆದಾರರನ್ನು ಕೇಳಿದ್ದರೆ ಅದಕ್ಕೆ ಪ್ರತಿಯಾಗಿ ಒಂದು ದಿನಾಂಕವೇ ಸಿಗಬೇಕು ಎಂದು ತಂತ್ರಾಂಶಕ್ಕೆ ಗೊತ್ತಿರುತ್ತದೆ. ಇದೇ ರೀತಿ ಪಿನ್‌ಕೋಡ್‌ನಲ್ಲಿ ಅಂಕಿಗಳೇ ಇರಬೇಕು, ಹಣ ವರ್ಗಾಯಿಸುವಾಗ ರೂಪಾಯಿಗಳ ಜೊತೆಗೆ ಪೈಸೆಗಳನ್ನೂ ನಮೂದಿಸಬಹುದು ಎನ್ನುವಂತಹ ನಿಯಮಗಳೂ ಇರುತ್ತವೆ. ಸಂಖ್ಯೆಯೊಂದರಲ್ಲಿ ಎಷ್ಟು ಅಂಕಿಗಳಿರಬಹುದು, ಪಠ್ಯದಲ್ಲಿ ಎಷ್ಟು ಅಕ್ಷರಗಳಿರಬಹುದು ಎನ್ನುವಂತಹ ನಿರ್ಬಂಧಗಳನ್ನೂ ಇಡುವುದು ಸಾಧ್ಯ.
ಹೀಗೆ ಯಾವ ದತ್ತಾಂಶ ಯಾವ ಬಗೆಯದಾಗಿರಬೇಕು ಎನ್ನುವುದನ್ನು ಅದರ ಡೇಟಾಟೈಪ್ (ದತ್ತಾಂಶದ ಬಗೆ) ಸೂಚಿಸುತ್ತದೆ. ಅಂಕಿಗಳು, ದಶಾಂಶಗಳು, ಅಕ್ಷರಗಳು, ದಿನಾಂಕ – ಹೀಗೆ ಡೇಟಾಟೈಪ್‌ಗಳಲ್ಲಿ ಹಲವು ವಿಧ. ತಂತ್ರಾಂಶ ಯಾವ ಬಗೆಯ ದತ್ತಾಂಶವನ್ನು ನಿರೀಕ್ಷಿಸುತ್ತದೋ ಅದನ್ನು ಅದೇ ಬಗೆಯಲ್ಲಿ ನೀಡದಿದ್ದರೆ ತಂತ್ರಾಂಶದ ಕಾರ್ಯಾಚರಣೆಯಲ್ಲಿ ಅಡಚಣೆಯಾಗುವ ಸಾಧ್ಯತೆ ಇರುತ್ತದೆ.

Database

ಡೇಟಾಬೇಸ್
Kannada Equivalent: ದತ್ತಸಂಚಯ
Short Description : ದತ್ತಾಂಶವನ್ನು ವ್ಯವಸ್ಥಿತವಾಗಿ ಶೇಖರಿಸಿಟ್ಟು, ಅಗತ್ಯಬಿದ್ದಾಗ ಅಗತ್ಯಬಿದ್ದ ರೂಪದಲ್ಲಿ ಪಡೆದುಕೊಳ್ಳಲು ನೆರವಾಗುವ ವ್ಯವಸ್ಥೆ
Long Description: ದಿನಸಿ ಅಂಗಡಿಯಿಂದ ತರಬೇಕಾದ ಸಾಮಾನು, ತಿಂಗಳ ಮೊದಲಲ್ಲಿ ಪಾವತಿಸಬೇಕಾದ ಬಿಲ್ಲುಗಳು, ಮಕ್ಕಳು ಬೇರೆಬೇರೆ ವಿಷಯದಲ್ಲಿ ಗಳಿಸಿದ ಅಂಕಗಳು, ಆಪ್ತರ ದೂರವಾಣಿ ಸಂಖ್ಯೆಗಳು – ಹೀಗೆ ನಾವು ಸದಾಕಾಲ ವಿವಿಧ ಬಗೆಯ ದತ್ತಾಂಶಗಳನ್ನು (ಡೇಟಾ) ನಿಭಾಯಿಸುತ್ತಲೇ ಇರುತ್ತೇವೆ.
ವೈಯಕ್ತಿಕ ಉದಾಹರಣೆಗಳಲ್ಲಿ ಇಂತಹ ದತ್ತಾಂಶದ ಪ್ರಮಾಣ ಕಡಿಮೆಯಿರುತ್ತದೆ – ಹೈಸ್ಕೂಲು ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿ ಏಳೆಂಟು ವಿಷಯಗಳಿರುತ್ತವಲ್ಲ, ಹಾಗೆ. ಆದರೆ ಯಾವುದೋ ಬ್ಯಾಂಕಿನ ಗ್ರಾಹಕರ ಪಟ್ಟಿಯನ್ನೋ, ಆಧಾರ್‌ನಂತಹ ಯೋಜನೆಗಳಲ್ಲಿ ನೋಂದಾಯಿಸಿಕೊಂಡವರ ವಿವರಗಳನ್ನೋ ನೋಡಿದರೆ ಅಂತಹ ದತ್ತಾಂಶ ಅಪಾರ ಪ್ರಮಾಣದ ದಾಖಲೆಗಳನ್ನು ಒಳಗೊಂಡಿರುತ್ತದೆ.
ಇಷ್ಟೆಲ್ಲ ಭಾರೀ ಪ್ರಮಾಣದ ದತ್ತಾಂಶವನ್ನು ಒಂದೆಡೆ ಶೇಖರಿಸಿಟ್ಟು, ಅಗತ್ಯಬಿದ್ದಾಗ ಅಗತ್ಯಬಿದ್ದ ರೂಪದಲ್ಲಿ ಅದನ್ನು ಪಡೆದುಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆಯನ್ನು ಡೇಟಾಬೇಸ್ ಎಂದು ಕರೆಯುತ್ತಾರೆ. ದತ್ತಾಂಶವನ್ನು ಸುಲಭವಾಗಿ ದಾಖಲಿಸಲು, ಅದರಲ್ಲಿ ಬೇಕಾದುದನ್ನು ಹುಡುಕಲು, ಅಗತ್ಯ ರೀತಿಯಲ್ಲಿ ವಿಶ್ಲೇಷಿಸಲು ಹಾಗೂ ವಿವಿಧ ರೀತಿಯ ವರದಿಗಳನ್ನು (ರಿಪೋರ್ಟ್) ತಯಾರಿಸಲು ಡೇಟಾಬೇಸ್‌ಗಳು ನೆರವಾಗುತ್ತದೆ. ಸಂಖ್ಯೆಗಳು, ಪಠ್ಯ, ಚಿತ್ರ, ಕಡತಗಳು – ಹೀಗೆ ಹಲವು ಬಗೆಯ ದತ್ತಾಂಶಗಳನ್ನು ಡೇಟಾಬೇಸ್‌ಗಳ ಮೂಲಕ ನಿಭಾಯಿಸುವುದು ಸಾಧ್ಯ.
ಇಂತಹ ಡೇಟಾಬೇಸ್‌ಗಳನ್ನು ನಿರ್ವಹಿಸುವ ತಂತ್ರಾಂಶಗಳನ್ನು ಡೇಟಾಬೇಸ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಡಿಬಿಎಂಎಸ್) ಎಂದು ಕರೆಯುತ್ತಾರೆ. ಮೈಕ್ರೋಸಾಫ್ಟ್ ಆಕ್ಸೆಸ್, ಒರೇಕಲ್, ಎಸ್‌ಕ್ಯೂಎಲ್ ಸರ್ವರ್‌ಗಳೆಲ್ಲ ಡಿಬಿಎಂಎಸ್‌ಗೆ ಉದಾಹರಣೆಗಳು.

Domain Name

ಡೊಮೈನ್ ನೇಮ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ಜಾಲತಾಣವನ್ನು ಪ್ರತ್ಯೇಕವಾಗಿ ಗುರುತಿಸಲು ನೆರವಾಗುವ ಹೆಸರು
Long Description: ಅಂತರಜಾಲದಲ್ಲಿ ಅಪಾರ ಸಂಖ್ಯೆಯ ಜಾಲತಾಣಗಳಿರುವುದರಿಂದ ಅವನ್ನೆಲ್ಲ ಪ್ರತ್ಯೇಕವಾಗಿ ಗುರುತಿಸುವುದು ಅನಿವಾರ್ಯ. ಜಾಲತಾಣಗಳನ್ನು ಹೀಗೆ ಗುರುತಿಸಲು ನೆರವಾಗುವ ಹೆಸರೇ ಡೊಮೈನ್ ನೇಮ್. ಇದನ್ನು ‘ಡೊಮೈನ್’ ಎಂದಷ್ಟೇ ಕರೆಯುವ ಅಭ್ಯಾಸವೂ ಇದೆ.
ಇಜ್ಞಾನ ಜಾಲತಾಣದ ಉದಾಹರಣೆ ತೆಗೆದುಕೊಂಡರೆ “ejnana.com” ಎನ್ನುವುದು ಅದರ ಡೊಮೈನ್ ನೇಮ್. ಬಹುತೇಕ ವೆಬ್ ವಿಳಾಸಗಳ ಪ್ರಾರಂಭದಲ್ಲಿ ಕಾಣಿಸುವ “www” ಅದರ ಡೊಮೈನ್ ನೇಮ್‌ನ ಭಾಗವಲ್ಲ ಎನ್ನುವುದು ಗಮನಾರ್ಹ (ಅದೊಂದು ಪೂರ್ವಪ್ರತ್ಯಯ, ಅಂದರೆ ಪ್ರಿಫಿಕ್ಸ್ ಅಷ್ಟೇ). ಡೊಮೈನ್ ನೇಮ್‌ಗಳ ಕೊನೆಯಲ್ಲಿರುವ ಡಾಟ್ ಕಾಮ್, ಡಾಟ್ ಇನ್, ಡಾಟ್ ನೆಟ್ ಮುಂತಾದ ಬಾಲಂಗೋಚಿಗಳನ್ನು ‘ಡೊಮೈನ್ ಸಫಿಕ್ಸ್’ (ಸಫಿಕ್ಸ್ = ಅಂತ್ಯಪ್ರತ್ಯಯ) ಎಂದು ಕರೆಯುತ್ತಾರೆ.
ಪೂರ್ಣಪ್ರಮಾಣದ ಪ್ರತಿ ಜಾಲತಾಣಕ್ಕೂ ತನ್ನದೇ ಆದ ವಿಶಿಷ್ಟ ಡೊಮೈನ್ ನೇಮ್ ಇರಬೇಕಾದ್ದು ಅತ್ಯಗತ್ಯ – ಅಂದರೆ ಇಡೀ ಅಂತರಜಾಲದಲ್ಲಿ ಒಂದೇ ಒಂದು ejnana.com ಮಾತ್ರವೇ ಇರಬಹುದು. ಆದರೆ ಒಂದು ಡೊಮೈನ್ ನೇಮ್ ಅಡಿಯಲ್ಲಿ ಇನ್ನಷ್ಟು ಡೊಮೈನ್ ನೇಮ್‌ಗಳನ್ನು ರೂಪಿಸಿಕೊಳ್ಳುವುದು, ಅದನ್ನು ಬೇರೆಬೇರೆ ಜಾಲತಾಣಗಳಿಗೆ – ಪುಟಗಳಿಗೆ ನಿಯೋಜಿಸುವುದು ಸಾಧ್ಯ (ಉದಾ: ejnana.com ಅಡಿಯಲ್ಲಿ learning.ejnana.com, techbook.ejnana.com ಇತ್ಯಾದಿ).
ಮೂಲ ತಾಣದ ಡೊಮೈನ್ ನೇಮ್ ಅನ್ನು ಅಂತ್ಯಪ್ರತ್ಯಯದಂತೆ ಬಳಸುವ ಇಂತಹ ವಿಳಾಸಗಳಿಗೆ ‘ಸಬ್‌ಡೊಮೈನ್’ಗಳೆಂದು ಹೆಸರು. ಉಚಿತ ಜಾಲತಾಣಗಳನ್ನು, ಬ್ಲಾಗ್‌ಗಳನ್ನು ಒದಗಿಸುವ ವ್ಯವಸ್ಥೆಗಳು (ಉದಾ: ಗೂಗಲ್‌ನ ಬ್ಲಾಗರ್) ತಮ್ಮ ಗ್ರಾಹಕರಿಗೆ ನೀಡುವುದು ಸಬ್‌ಡೊಮೈನ್‌ಗಳನ್ನೇ.

Domain Name Registrar

ಡೊಮೈನ್ ನೇಮ್ ರಿಜಿಸ್ಟ್ರಾರ್
Kannada Equivalent: (ರೂಪಿಸಬೇಕಿದೆ)
Short Description : ಗ್ರಾಹಕರಿಗೆ ಡೊಮೈನ್ ನೇಮ್‌ಗಳನ್ನು ಒದಗಿಸುವ ಹಾಗೂ ಡೊಮೈನ್ ನೇಮ್ ಸಿಸ್ಟಂಗಳನ್ನು ನಿಭಾಯಿಸುವ ಸಂಸ್ಥೆ
Long Description: ಪ್ರಚಾರಕ್ಕಾಗಿ, ವ್ಯಾಪಾರಕ್ಕಾಗಿ, ಹವ್ಯಾಸಕ್ಕಾಗಿ – ಹೀಗೆ ಹಲವಾರು ಉದ್ದೇಶಗಳಿಗಾಗಿ ಜಾಲತಾಣಗಳನ್ನು (ವೆಬ್‌ಸೈಟ್) ರೂಪಿಸಿಕೊಳ್ಳುವುದು ಸಾಮಾನ್ಯ ಅಭ್ಯಾಸ. ಜಾಲತಾಣ ರೂಪಿಸುವಾಗ ತಮ್ಮದೇ ಸ್ವಂತ ವಿಳಾಸ, ಅಂದರೆ ಡೊಮೈನ್ ನೇಮ್ ಬೇಕೆನ್ನುವವರು (ಉದಾ: ಇಜ್ಞಾನ ಡಾಟ್ ಕಾಮ್) ವಾರ್ಷಿಕ ಬಾಡಿಗೆಯ ಆಧಾರದ ಮೇಲೆ ಅದನ್ನು ಪಡೆದುಕೊಳ್ಳುವುದು ಸಾಧ್ಯ.
ಹೀಗೆ ಡೊಮೈನ್ ನೇಮ್‌ಗಳನ್ನು ಒದಗಿಸುವ ಹಾಗೂ ಡೊಮೈನ್ ನೇಮ್ ಸಿಸ್ಟಂಗಳನ್ನು ನಿಭಾಯಿಸುವ ಸಂಸ್ಥೆಗಳಿಗೆ ‘ಡೊಮೈನ್ ನೇಮ್ ರಿಜಿಸ್ಟ್ರಾರ್’ಗಳೆಂದು ಹೆಸರು. ನಮಗೆ ಬೇಕಾದ ಜಾಲತಾಣದ ವಿಳಾಸವನ್ನು ಇಂತಹ ರಿಜಿಸ್ಟ್ರಾರ್‌ಗಳ ಮೂಲಕವೇ ಪಡೆದುಕೊಳ್ಳಬೇಕು. ನಿಮಗೆ ಯಾವ ಬಾಲಂಗೋಚಿಯಿರುವ ವಿಳಾಸ ಬೇಕು ಎನ್ನುವುದರ ಮೇಲೆ ನೀವು ಪಾವತಿಸಬೇಕಾದ ಬಾಡಿಗೆಯ ಮೊತ್ತ ನಿರ್ಧಾರವಾಗುತ್ತದೆ. ಡಾಟ್ ಕಾಮ್, ಡಾಟ್ ಇನ್, ಡಾಟ್ ನೆಟ್ ಮುಂತಾದ ಆಯ್ಕೆಗಳ ಪೈಕಿ ನೀವು ಯಾವುದನ್ನು ಆರಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ಈ ಬಾಡಿಗೆಯ ಮೊತ್ತ ಒಂದೆರಡು ನೂರು ರೂಪಾಯಿಗಳಿಂದ ಸಾವಿರಗಳವರೆಗೂ ಇರಬಹುದು.
ಡೊಮೈನ್ ನೇಮ್ ರಿಜಿಸ್ಟ್ರಾರ್‌ಗಳ ಜಾಲತಾಣದಲ್ಲಿ ನಮಗೆ ಬೇಕಾದ ಡೊಮೈನ್ ನೇಮ್ ಇನ್ನೂ ಲಭ್ಯವಿದೆಯೇ ಎಂದು ಪರೀಕ್ಷಿಸುವ, ಲಭ್ಯವಿದ್ದಲ್ಲಿ ನಿರ್ದಿಷ್ಟ ಅವಧಿಗೆ ಅದನ್ನು ಬಾಡಿಗೆಗೆ ಪಡೆಯುವ ಅವಕಾಶ ಇರುತ್ತದೆ.

Domain Parking

ಡೊಮೈನ್ ಪಾರ್ಕಿಂಗ್
Kannada Equivalent: (ರೂಪಿಸಬೇಕಿದೆ)
Short Description : ಮುಂದೆಂದೋ ಬೇಕಾಗಬಹುದಾದ ಜಾಲತಾಣದ ವಿಳಾಸವನ್ನು ಈಗಲೇ ಕಾದಿರಿಸಿಕೊಳ್ಳುವ ಅಭ್ಯಾಸ
Long Description: ಮಾಹಿತಿ ಪ್ರಸಾರದಿಂದ ಪ್ರಾರಂಭಿಸಿ ವ್ಯಾಪಾರದವರೆಗೆ ಅನೇಕ ಉದ್ದೇಶಗಳಿಗಾಗಿ ಜಾಲತಾಣಗಳನ್ನು ಬಳಸುವುದು ಸಾಮಾನ್ಯ. ಹೊಸದೊಂದು ಯೋಜನೆ ಕೈಗೆತ್ತಿಕೊಳ್ಳುವಾಗ ಅದಕ್ಕೆ ಹೊಂದುವಂತಹ ಹೆಸರಿನ ಜಾಲತಾಣ (ಡೊಮೈನ್ ನೇಮ್) ಲಭ್ಯವಿದೆಯೇ ಎಂದು ಪರೀಕ್ಷಿಸುವುದೂ ಅಪರೂಪವೇನಲ್ಲ. ಹೀಗಾಗಿಯೇ ಜಾಲತಾಣಗಳಿಗೆ ಇದೀಗ ಎಲ್ಲಿಲ್ಲದ ಮಹತ್ವ.
ಮುಂದೆಂದೋ ಬೇಕಾಗಬಹುದಾದ ಜಾಲತಾಣದ ವಿಳಾಸವನ್ನು ಈಗಲೇ ಕಾದಿರಿಸಿಕೊಳ್ಳುವ ಅಭ್ಯಾಸಕ್ಕೆ ಕಾರಣವಾಗಿರುವುದು ಇದೇ ಅಂಶ. ಈ ಅಭ್ಯಾಸವನ್ನು ‘ಡೊಮೈನ್ ಪಾರ್ಕಿಂಗ್’ ಎಂದು ಕರೆಯುತ್ತಾರೆ. ಮುಂದೊಮ್ಮೆ ನಮಗೆ ಬೇಕಾಗಬಹುದಾದ, ನಮ್ಮ ವಿರುದ್ಧ ಅಪಪ್ರಚಾರ ಮಾಡಲು ಬಳಕೆಯಾಗಬಲ್ಲಂತಹ ಹೆಸರಿನ ತಾಣಗಳನ್ನು ಹೀಗೆ ಕಾದಿರಿಸಿಕೊಳ್ಳುವ ಮೂಲಕ ಅದು ಕುತಂತ್ರಿಗಳ ಕೈಸೇರದಂತೆ ತಡೆಯುವುದು ಸಾಧ್ಯವಾಗುತ್ತದೆ. ನಮ್ಮ ತಾಣದ ಹೆಸರಿನಂತೆಯೇ ಕಾಣುವ (ಉದಾ: paypal ಬದಲು paypa1) ಹೆಸರಿನ ತಾಣಗಳನ್ನು ಕಾದಿರಿಸಿಕೊಳ್ಳುವ ಮೂಲಕ ಫಿಶಿಂಗ್‌ನಂತಹ ಆನ್‌ಲೈನ್ ವಂಚನೆಗಳನ್ನೂ ತಡೆಯಬಹುದು.
ಹೀಗೆ ಪಾರ್ಕ್ ಮಾಡಲಾದ ಜಾಲತಾಣಗಳಲ್ಲಿ ‘ಶೀಘ್ರವೇ ಬರಲಿದೆ’ ಎನ್ನುವಂತಹ ಸಂದೇಶಗಳನ್ನು (ಹಾಗೂ ಕೆಲವೊಮ್ಮೆ ಜಾಹೀರಾತುಗಳನ್ನು) ಬಿಟ್ಟರೆ ಬೇರೆ ಯಾವ ಮಾಹಿತಿಯೂ ಇರುವುದಿಲ್ಲ. ಮುಂದೆ ಹೆಚ್ಚು ಹಣಕ್ಕೆ ಮಾರಲೆಂದು ಡೊಮೈನ್ ನೇಮ್‌ಗಳನ್ನು ಕೊಂಡಿಟ್ಟುಕೊಳ್ಳುತ್ತಾರಲ್ಲ (ಸೈಬರ್ ಸ್ಕ್ವಾಟರ್‍ಸ್), ಅವರು ಇಂತಹ ತಾಣಗಳಲ್ಲಿ ಆಸಕ್ತ ಗ್ರಾಹಕರಿಗೆಂದು ತಮ್ಮ ಸಂಪರ್ಕ ವಿವರಗಳನ್ನೂ ಪ್ರಕಟಿಸಿರುತ್ತಾರೆ. ಅಷ್ಟೇ ಅಲ್ಲ, ತಾಣಗಳು ಮಾರಾಟವಾಗುವವರೆಗೂ ಅದರಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಿ ಒಂದಷ್ಟು ಹಣವನ್ನೂ ಸಂಪಾದಿಸಿಕೊಳ್ಳುತ್ತಾರೆ.

Downtime

ಡೌನ್‌ಟೈಮ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ಕಂಪ್ಯೂಟರ್ ವ್ಯವಸ್ಥೆಯ ಕಾರ್ಯಾಚರಣೆ ಸ್ಥಗಿತವಾಗಿರುವ ಅವಧಿ
Long Description: ಬ್ಯಾಂಕಿಂಗ್ ವ್ಯವಹಾರ, ಆನ್‌ಲೈನ್ ಸೇವೆಗಳು, ಕಚೇರಿ ನಿರ್ವಹಣೆ ಮುಂತಾದ ಅನೇಕ ಉದ್ದೇಶಗಳಿಗಾಗಿ ಕಂಪ್ಯೂಟರ್ ವ್ಯವಸ್ಥೆಗಳು ಬಳಕೆಯಾಗುತ್ತವೆ. ಇವುಗಳ ಅಗತ್ಯ ಯಾವಾಗ ಬೇಕಾದರೂ ಬೀಳಬಹುದಲ್ಲ, ಹಾಗಾಗಿ ಈ ಕಂಪ್ಯೂಟರ್ ವ್ಯವಸ್ಥೆಗಳು ವರ್ಷದ ಎಲ್ಲ ದಿನಗಳಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಕೆಲಸಮಾಡುತ್ತಿರುತ್ತವೆ.
ಇಷ್ಟೂ ಸಮಯ ಅವುಗಳ ಕಾರ್ಯಾಚರಣೆ ಸುಗಮವಾಗಿರಬೇಕು ಎನ್ನುವುದು ಎಲ್ಲರ ಅಪೇಕ್ಷೆ. ಆದರೆ ಅನೇಕ ಕಾರಣಗಳಿಂದ ಇದು ಸಾಧ್ಯವಾಗದೆ ಹೋಗಬಹುದು; ಯಾಂತ್ರಿಕ ವೈಫಲ್ಯ, ತಂತ್ರಾಂಶದ ಸಮಸ್ಯೆ, ಕುತಂತ್ರಾಂಶಗಳ ಹಾವಳಿ – ಹೀಗೆ ಅನೇಕ ಸಂಗತಿಗಳು ಕಂಪ್ಯೂಟರ್ ವ್ಯವಸ್ಥೆಗಳ ಕಾರ್ಯಾಚರಣೆಗೆ ಅಡ್ಡಿಪಡಿಸಬಲ್ಲವು. ಇಂತಹ ಯಾವುದೇ ಕಾರಣದಿಂದ ಕಾರ್ಯಾಚರಣೆ ನಿಂತುಹೋಗುತ್ತದಲ್ಲ, ಹಾಗೆ ಅವುಗಳ ಸೇವೆ ಅಲಭ್ಯವಾಗಿರುವ ಅವಧಿಯನ್ನು ‘ಡೌನ್‌ಟೈಮ್’ ಎಂದು ಕರೆಯುತ್ತಾರೆ. ಇದಕ್ಕೆ ಔಟೇಜ್ ಎಂಬ ಹೆಸರೂ ಇದೆ.
ಯಾಂತ್ರಿಕ ವೈಫಲ್ಯ, ಅಂತರಜಾಲ ಸಂಪರ್ಕದ ಅಡಚಣೆ ಮುಂತಾದ ಸಂದರ್ಭಗಳಲ್ಲಿ ಡೌನ್‌ಟೈಮ್ ಅನಿರೀಕ್ಷಿತವಾಗಿ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅಡಚಣೆಯನ್ನು ಕ್ಷಿಪ್ರವಾಗಿ ನಿವಾರಿಸಿ ಕಂಪ್ಯೂಟರ್ ವ್ಯವಸ್ಥೆಯ ಕಾರ್ಯಾಚರಣೆಯನ್ನು ಪುನರಾರಂಭಿಸಲು ತಂತ್ರಜ್ಞರ ತಂಡ ಸನ್ನದ್ಧವಾಗಿರುತ್ತದೆ. ಯಂತ್ರಾಂಶಗಳ ಬದಲಾವಣೆ, ಕಂಪ್ಯೂಟರ್ ವ್ಯವಸ್ಥೆ ಅಥವಾ ತಂತ್ರಾಂಶದ ಉನ್ನತೀಕರಣದಂತಹ ಪೂರ್ವನಿರ್ಧಾರಿತ ಸನ್ನಿವೇಶಗಳಲ್ಲೂ ಡೌನ್‌ಟೈಮ್ ಅಗತ್ಯವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಆ ಕಂಪ್ಯೂಟರ್ ವ್ಯವಸ್ಥೆಯ ಬಳಕೆದಾರರಿಗೆ ಡೌನ್‌ಟೈಮ್ ಕುರಿತ ಮಾಹಿತಿಯನ್ನು ಮುಂಚಿತವಾಗಿಯೇ ನೀಡಲಾಗಿರುತ್ತದೆ. ವ್ಯವಸ್ಥೆಯ ಬಳಕೆ ಕಡಿಮೆಯಿರುವ ಸಮಯಕ್ಕೆ (ಉದಾ: ರಾತ್ರಿ, ವಾರಾಂತ್ಯಗಳು ಇತ್ಯಾದಿ) ಸರಿಯಾಗಿ ಇಂತಹ ಡೌನ್‌ಟೈಮ್ ಅನ್ನು ಯೋಜಿಸಲಾಗುವುದು ಸಾಮಾನ್ಯ.

Knowledge Management

ನಾಲೆಜ್ ಮ್ಯಾನೇಜ್‌ಮೆಂಟ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ಕೆಲಸಕ್ಕೆ ಮಹತ್ವದ್ದೆನಿಸುವ ತಿಳಿವಳಿಕೆಯನ್ನೆಲ್ಲ ಸೂಕ್ತವಾಗಿ ನಿರ್ವಹಿಸಲು ನೆರವಾಗುವ ಪ್ರಕ್ರಿಯೆ
Long Description: ಸಣ್ಣ ಅಂಗಡಿಯಿಂದ ಬಹುರಾಷ್ಟ್ರೀಯ ಉದ್ದಿಮೆಯವರೆಗೆ ಪ್ರತಿಯೊಂದು ಸಂಸ್ಥೆಯಲ್ಲೂ ಜ್ಞಾನದ, ತಿಳಿವಳಿಕೆಯ ದೊಡ್ಡ ಸಂಗ್ರಹವೇ ಇರುತ್ತದೆ. ಪುಟ್ಟ ಬೇಕರಿಯಲ್ಲಿ ತಯಾರಿಸುವ ತಿನಿಸಿನ ಪಾಕವಿಧಾನ (ರೆಸೀಪಿ) ಇರಬಹುದು, ತಂತ್ರಾಂಶ ರಚನೆಯಲ್ಲಿ ಪಾಲಿಸಬೇಕಾದ ನಿಯಮಗಳಿರಬಹುದು, ಕಾರ್ಖಾನೆಯ ಬೃಹತ್ ಯಂತ್ರವನ್ನು ನಿರ್ವಹಿಸುವ ಸರಿಯಾದ ವಿಧಾನವೇ ಇರಬಹುದು – ಸಂಸ್ಥೆಯ ವ್ಯವಹಾರ ಸರಾಗವಾಗಿ ನಡೆಯಲು ಇಂತಹ ಜ್ಞಾನ ಅತ್ಯವಶ್ಯಕ.
ಸಣ್ಣ ಸಂಸ್ಥೆಗಳಲ್ಲಿ ಇದನ್ನು ನಿಭಾಯಿಸುವುದು ಅಷ್ಟೇನೂ ಕಷ್ಟವಲ್ಲ, ನಿಜ. ಆದರೆ ಸಂಸ್ಥೆಯ ವಹಿವಾಟು, ಉದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತ ಹೋದಂತೆ ಅಗತ್ಯವಾದ ತಿಳಿವಳಿಕೆ ಅಗತ್ಯಬಿದ್ದ ತಕ್ಷಣದಲ್ಲೇ ಸಿಗುವಂತೆ ನೋಡಿಕೊಳ್ಳಲು ಬೇಕಾದ ವ್ಯವಸ್ಥೆ ಇರಬೇಕಾಗುತ್ತದೆ. ಯಾವುದೋ ಯಂತ್ರದ ಕಾರ್ಯಾಚರಣೆಯಲ್ಲಿ ಅಡಚಣೆಯಾದ ಕ್ಷಣದಲ್ಲಿ ಅದನ್ನು ಸರಿಪಡಿಸಲು ಏನು ಮಾಡಬೇಕು ಎಂದು ಹುಡುಕಾಡುವಂತಾಗಬಾರದಲ್ಲ!
ಇಂತಹ ಪರಿಸ್ಥಿತಿ ತಪ್ಪಿಸಿ, ಸಂಸ್ಥೆಗೆ ಮಹತ್ವದ್ದೆನಿಸುವ ತಿಳಿವಳಿಕೆಯನ್ನೆಲ್ಲ ಸೂಕ್ತವಾಗಿ ನಿರ್ವಹಿಸಲು ನೆರವಾಗುವ ಪ್ರಕ್ರಿಯೆಯನ್ನು ‘ತಿಳಿವಳಿಕೆಯ ನಿರ್ವಹಣೆ’ (ನಾಲೆಜ್ ಮ್ಯಾನೇಜ್‌ಮೆಂಟ್) ಎಂದು ಕರೆಯುತ್ತಾರೆ. ಈ ಪ್ರಕ್ರಿಯೆ ತಿಳಿವಳಿಕೆಯ ದಾಖಲಾತಿಯಿಂದ ಪ್ರಾರಂಭಿಸಿ ಅದರ ವ್ಯವಸ್ಥಿತ ಶೇಖರಣೆ, ನಿರ್ವಹಣೆ ಹಾಗೂ ಬಳಕೆಯ ಕುರಿತ ರೂಪುರೇಷೆಗಳನ್ನು ಒದಗಿಸುತ್ತದೆ. ಉದ್ಯೋಗಿಗಳಲ್ಲಿರಬಹುದಾದ ಹೊಸ ಜ್ಞಾನವನ್ನು ದಾಖಲಿಸುವುದು ಹಾಗೂ ಅನುಭವದ ಆಧಾರದ ಮೇಲೆ ಈಗಾಗಲೇ ದಾಖಲಾಗಿರುವುದನ್ನು ಬದಲಿಸುವುದು ಕೂಡ ಇದೇ ಪ್ರಕ್ರಿಯೆಯಡಿ ಬರುತ್ತದೆ.

Netiquette

ನೆಟಿಕೆಟ್
Kannada Equivalent: (ರೂಪಿಸಬೇಕಿದೆ)
Short Description : ಅಂತರಜಾಲದ ಲೋಕದಲ್ಲಿ ಇತರರೊಡನೆ ಸಂವಹನ ನಡೆಸುವಾಗ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸುವ ಶಿಷ್ಟಾಚಾರ
Long Description: ಶಾಲೆ, ಕಚೇರಿ, ಸಮಾರಂಭ, ಸಾರ್ವಜನಿಕ ಸ್ಥಳ ಮುಂತಾದ ಬೇರೆಬೇರೆ ಸಂದರ್ಭ-ಸ್ಥಳಗಳಲ್ಲಿ ನಮ್ಮ ವರ್ತನೆ ಹೀಗೆಯೇ ಇರಬೇಕು ಎಂದು ಸಮಾಜ ಅಪೇಕ್ಷಿಸುತ್ತದೆ. ಈ ಅಪೇಕ್ಷೆಗಳನ್ನು ನಿರ್ದೇಶಿಸುವುದು ಶಿಷ್ಟಾಚಾರ, ಅಂದರೆ ಎಟಿಕೆಟ್‌ನ ಕೆಲಸ.
ಜಾಲಲೋಕದಲ್ಲೂ ನಾವು ಪಾಲಿಸಬೇಕಾದ ಇಂತಹುದೇ ಶಿಷ್ಟಾಚಾರ ಇದೆ. ಇಮೇಲ್ ಹಾಗೂ ಮೊಬೈಲ್ ಸಂದೇಶಗಳನ್ನು ಕಳಿಸುವಾಗ, ಸಮಾಜಜಾಲಗಳಲ್ಲಿ ಇತರರೊಡನೆ ಸಂವಹನ ನಡೆಸುವಾಗ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸುವ ಈ ಶಿಷ್ಟಾಚಾರವನ್ನು ‘ನೆಟಿಕೆಟ್’ ಎಂದು ಕರೆಯುತ್ತಾರೆ. ನೆಟ್ ಹಾಗೂ ಎಟಿಕೆಟ್ ಎಂಬ ಪದಗಳ ಜೋಡಣೆಯಿಂದ ಸೃಷ್ಟಿಯಾಗಿರುವ ಹೆಸರು ಇದು.
ಅನಗತ್ಯವಾಗಿ ಸಂದೇಶಗಳನ್ನು ಕಳಿಸುವುದು, ಇಮೇಲ್ ಸಂದೇಶಗಳಿಗೆ ಸುಖಾಸುಮ್ಮನೆ ‘ರಿಪ್ಲೈ ಆಲ್’ ಮಾಡುವುದು, ಸಿಕ್ಕಿದ್ದನ್ನೆಲ್ಲಾ ಫಾರ್‌ವರ್ಡ್ ಮಾಡುವುದು, ಬೇರೊಬ್ಬರ ಕುರಿತು ಇಲ್ಲಸಲ್ಲದ ಸುದ್ದಿ ಹಬ್ಬಿಸುವುದು, ನಮಗೆ ದೊರೆತ ಮಾಹಿತಿಯ ದುರ್ಬಳಕೆ ಮಾಡಿಕೊಳ್ಳುವುದು – ಇವೆಲ್ಲ ಸರಿಯಲ್ಲ ಎಂದು ನೆಟಿಕೆಟ್ ಹೇಳುತ್ತದೆ. ಹಾಗೆಯೇ ಜಾಲಲೋಕದ ಎಲ್ಲ ಬಳಕೆದಾರರೂ ಇತರರ ಖಾಸಗಿತನವನ್ನು ಗೌರವಿಸಬೇಕು ಎನ್ನುವುದು ನೆಟಿಕೆಟ್‌ನ ನಿರೀಕ್ಷೆ.
ಅಂದಹಾಗೆ ಈ ಶಿಷ್ಟಾಚಾರ ಎಲ್ಲೋ ಒಂದೆಡೆ ಬರೆದಿಟ್ಟ ನಿಯಮಗಳ ಪಟ್ಟಿಯೇನಲ್ಲ. ತಂತ್ರಜ್ಞಾನ ಬದಲಾದಂತೆ ಬಳಕೆದಾರರಿಂದ ಸಮುದಾಯ ನಿರೀಕ್ಷಿಸುವ ಅಂಶಗಳೂ ಬದಲಾಗುತ್ತ ಹೋಗುತ್ತವೆ. ಕಂಪ್ಯೂಟರಿನಲ್ಲಿ – ಮೊಬೈಲಿನಲ್ಲಿ ಕನ್ನಡ ಟೈಪ್ ಮಾಡುವ ಎಷ್ಟೆಲ್ಲ ಸೌಲಭ್ಯಗಳು ಈಗ ಲಭ್ಯವಿವೆಯಲ್ಲ, ನಮ್ಮ ಸಂವಹನಕ್ಕೆ ಕಂಗ್ಲಿಶ್ (ಇಂಗ್ಲಿಶ್ ಲಿಪಿಯಲ್ಲಿ ಬರೆದ ಕನ್ನಡ) ಬದಲು ಕನ್ನಡ ಲಿಪಿಯನ್ನೇ ಬಳಸುವುದು ಒಳ್ಳೆಯದು ಎಂಬ ಶಿಷ್ಟಾಚಾರವನ್ನು ನಾವೇ ಬೇಕಾದರೂ ರೂಪಿಸಿಕೊಳ್ಳಬಹುದು – ಪಾಲಿಸಬಹುದು!

Net Neutrality

ನೆಟ್ ನ್ಯೂಟ್ರಾಲಿಟಿ
Kannada Equivalent: (ರೂಪಿಸಬೇಕಿದೆ)
Short Description : ಅಂತರಜಾಲ – ವಿಶ್ವವ್ಯಾಪಿ ಜಾಲಗಳನ್ನು ಮುಕ್ತವಾಗಿ ಉಳಿಸಿಕೊಳ್ಳಬೇಕು, ಅಲ್ಲಿ ಯಾವುದೇ ರೀತಿಯ ಪಕ್ಷಪಾತಕ್ಕೆ ಅವಕಾಶವಿರದ ತಾಟಸ್ಥ್ಯ ಇರಬೇಕು ಎನ್ನುವುದನ್ನು ಪ್ರತಿಪಾದಿಸುವ ಪರಿಕಲ್ಪನೆ
Long Description: ವಿಶ್ವದೆಲ್ಲೆಡೆ ಕೋಟ್ಯಂತರ ಕಂಪ್ಯೂಟರುಗಳು, ಮೊಬೈಲ್ ದೂರವಾಣಿ ಮತ್ತಿತರ ಸಾಧನಗಳು ಇದೀಗ ಅಂತರಜಾಲದ ಸಂಪರ್ಕದಲ್ಲಿವೆ. ಇಷ್ಟು ಅಗಾಧ ಪ್ರಮಾಣದ ವ್ಯವಸ್ಥೆಯಾದ ಅಂತರಜಾಲಕ್ಕೆ ಯಾರೂ ಮಾಲೀಕರಿಲ್ಲ. ಅಂದರೆ, ಅಂತರಜಾಲದ ಆಗುಹೋಗುಗಳನ್ನು ಯಾರೂ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಂತ್ರಿಸುವಂತಿಲ್ಲ. ತಂತ್ರಾಂಶ ಅಭಿವರ್ಧನೆಯಲ್ಲಿ ದಶಕಗಳ ಅನುಭವವಿರುವ ಸಂಸ್ಥೆಯೇ ಆಗಲಿ, ನಿನ್ನೆಯಷ್ಟೇ ತಂತ್ರಜ್ಞಾನದ ಸಂಪರ್ಕಕ್ಕೆ ಬಂದ ವಿದ್ಯಾರ್ಥಿಯೇ ಆಗಿರಲಿ – ಇಲ್ಲಿ ಎಲ್ಲರಿಗೂ ಸಮಾನ ಅವಕಾಶ. ತಮ್ಮ ಉತ್ಪನ್ನಗಳನ್ನು ಜನರಿಗೆ ಪರಿಚಯಿಸಲು, ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸಲು ಇಲ್ಲಿ ಎಲ್ಲರೂ ಸ್ವತಂತ್ರರು.
ಈ ಪೈಕಿ ಹೆಚ್ಚು ಸೌಲಭ್ಯವಿರುವ ಸಂಸ್ಥೆಗಳು – ಹಣಕಾಸಿನ ಶಕ್ತಿಯಿರುವ ದೊಡ್ಡ ಸಂಸ್ಥೆಗಳೇ ಆಗಲಿ, ಮೂಲಸೌಕರ್ಯದ ಮಾಲೀಕರಾದ ದೂರಸಂಪರ್ಕ ಸಂಸ್ಥೆಗಳೇ ಆಗಲಿ – ತಮ್ಮ ಸ್ಥಾನದ ಪ್ರಭಾವ ಬಳಸಿ ತಮಗೆ ಅಥವಾ ತಮ್ಮ ಗ್ರಾಹಕರಿಗೆ ಲಾಭಮಾಡಿಕೊಡಲು ಹೊರಟರೆ ಅದು ತಪ್ಪು. ನಿರ್ದಿಷ್ಟ ಮೊಬೈಲ್ ಸಂಪರ್ಕ ಬಳಸಿದರೆ ಇಂತಿಷ್ಟು ಜಾಲತಾಣಗಳನ್ನು ಉಚಿತವಾಗಿ ಬಳಸಬಹುದು ಎನ್ನುವಂತಹ ಯೋಜನೆಗಳ ವಿರುದ್ಧ ಪ್ರತಿಭಟನೆ ನಡೆಯುವುದಕ್ಕೆ ಇದೇ ಕಾರಣ.
ಅಂತರಜಾಲ – ವಿಶ್ವವ್ಯಾಪಿ ಜಾಲಗಳನ್ನು ರೂಪಿಸಿ ಬೆಳೆಸಿದ ಮಹನೀಯರ ಉದ್ದೇಶದಂತೆ ಅವು ಮುಕ್ತವಾಗಿಯೇ ಉಳಿಯಬೇಕು, ಯಾವುದೇ ಪಕ್ಷಪಾತ ತೋರದೆ ತಟಸ್ಥವಾಗುಳಿದು ಎಲ್ಲರಿಗೂ ಸಮಾನ ಅವಕಾಶ ಒದಗಿಸಬೇಕು, ಹೊಸಹೊಸ ಆವಿಷ್ಕಾರಗಳನ್ನು ಯಾರೇ ಮಾಡಿದರೂ ಪ್ರೋತ್ಸಾಹಿಸಬೇಕು ಎನ್ನುವುದು ನೆಟ್ ನ್ಯೂಟ್ರಾಲಿಟಿ ಪರಿಕಲ್ಪನೆಯ ಮೂಲಮಂತ್ರ (ನ್ಯೂಟ್ರಾಲಿಟಿ ಎಂದರೆ ತಾಟಸ್ಥ್ಯ ಎಂದರ್ಥ). ಈ ಪರಿಕಲ್ಪನೆಗೆ ಯಾರೂ ಧಕ್ಕೆತಾರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಾಗತಿಕ ಸ್ವಯಂಸೇವಾ ಸಂಸ್ಥೆಗಳೂ ಆಯಾ ದೇಶದ ಸರಕಾರಗಳೂ ವಹಿಸಿಕೊಂಡಿವೆ. ಜಾಲಲೋಕದ ಸಾಮಾನ್ಯ ಬಳಕೆದಾರರೂ ಕಾಲಕಾಲಕ್ಕೆ ಅವರನ್ನೆಲ್ಲ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

Network

ನೆಟ್‌ವರ್ಕ್
Kannada Equivalent: ಜಾಲ
Short Description : ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಂಪ್ಯೂಟರುಗಳ, ಪೂರಕ ಸಾಧನಗಳ ನಡುವೆ ಸಂಪರ್ಕ ಏರ್ಪಡಿಸಿ ಆ ಮೂಲಕ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆ
Long Description: ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಂಪ್ಯೂಟರುಗಳ ನಡುವೆ ಸಂಪರ್ಕ ಏರ್ಪಡಿಸಿ ಆ ಮೂಲಕ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆಯನ್ನು ಕಂಪ್ಯೂಟರ್ ನೆಟ್‌ವರ್ಕ್ (ಜಾಲ) ಎಂದು ಕರೆಯುತ್ತಾರೆ.
ಯಾವುದೇ ಜಾಲದಲ್ಲಿರುವ ಕಂಪ್ಯೂಟರುಗಳು ಒಂದೇ ಕೋಣೆಯಲ್ಲಿರಬಹುದು, ಪ್ರಪಂಚದ ವಿವಿಧ ಮೂಲೆಗಳಲ್ಲೂ ಇರಬಹುದು. ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಅವುಗಳ ಹೆಸರುಗಳು ಬದಲಾಗುತ್ತವೆ: ನಿರ್ದಿಷ್ಟ ಮಿತಿಯಲ್ಲಿ – ಒಂದು ಕಟ್ಟಡ ಅಥವಾ ಆವರಣದ ಒಳಗೆ – ಅಸ್ತಿತ್ವದಲ್ಲಿರುವ ಜಾಲಗಳಿಗೆ ಲೋಕಲ್ ಏರಿಯಾ ನೆಟ್‌ವರ್ಕ್ (ಲ್ಯಾನ್) ಎಂದು ಹೆಸರು; ಇನ್ನೂ ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಿರುವ ಜಾಲ ವೈಡ್ ಏರಿಯಾ ನೆಟ್‌ವರ್ಕ್ (ವ್ಯಾನ್).
ಇಂತಹ ಅಸಂಖ್ಯ ಜಾಲಗಳು ಹಾಗೂ ವೈಯಕ್ತಿಕ ಕಂಪ್ಯೂಟರುಗಳ ಜೋಡಣೆಯಿಂದ ‘ಇಂಟರ್‌ನೆಟ್’ (ಅಂತರಜಾಲ) ರೂಪುಗೊಳ್ಳುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವವರಾದರೂ ಈ ಜಾಲದ ಸಂಪರ್ಕ ಪಡೆದುಕೊಳ್ಳುವುದು ಸಾಧ್ಯ.
ನಿರ್ದಿಷ್ಟ ಗುಂಪುಗಳ (ಉದಾ: ಒಂದು ಸಂಸ್ಥೆಯ ಉದ್ಯೋಗಿಗಳು, ನಿರ್ದಿಷ್ಟ ಸೇವೆಯ ಗ್ರಾಹಕರು, ಯಾವುದೋ ಸಂಘಟನೆಯ ಸದಸ್ಯರು ಇತ್ಯಾದಿ) ಬಳಕೆಗಾಗಿ ಮಾತ್ರವೇ ಮೀಸಲಿರುವ ಜಾಲಗಳೂ ಇವೆ. ಅವನ್ನು ‘ಇಂಟ್ರಾನೆಟ್’ಗಳೆಂದು ಕರೆಯುತ್ತಾರೆ.

Network Coverage

ನೆಟ್‌ವರ್ಕ್ ಕವರೇಜ್
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ
Long Description: ಮೊಬೈಲ್ ಜಾಲದ ಸಂಕೇತಗಳು (ಸಿಗ್ನಲ್) ಯಾವೆಲ್ಲ ಪ್ರದೇಶಗಳನ್ನು ತಲುಪಬಲ್ಲವು ಎನ್ನುವುದನ್ನು ಅದರ ಪ್ರಸಾರ ವ್ಯಾಪ್ತಿ, ಅಂದರೆ ನೆಟ್‌ವರ್ಕ್ ಕವರೇಜ್, ಸೂಚಿಸುತ್ತದೆ. ಪಕ್ಕದೂರಿನಲ್ಲಿರುವ ಮೊಬೈಲ್ ಟವರಿನ ಕವರೇಜ್ ನಮ್ಮ ಹಳ್ಳಿಯವರೆಗೆ ಮಾತ್ರ ಇದೆ ಎನ್ನುವುದಾದರೆ ನಮ್ಮೂರ ಪಕ್ಕದ ಇನ್ನೊಂದು ಹಳ್ಳಿಯಲ್ಲಿ ಮೊಬೈಲ್ ಬಳಸುವುದು ಸಾಧ್ಯವಾಗುವುದಿಲ್ಲ.
ಯಾವುದೇ ಮೊಬೈಲ್ ಜಾಲ ನಿರ್ದಿಷ್ಟ ಸಮಯದಲ್ಲಿ ಎಷ್ಟು ಕರೆಗಳನ್ನು, ಎಷ್ಟು ಪ್ರಮಾಣದ ದತ್ತಾಂಶ (ಡೇಟಾ) ವಿನಿಮಯವನ್ನು ನಿಭಾಯಿಸಬಲ್ಲದು ಎಂಬುದನ್ನು ಸೂಚಿಸುವುದು ಅದರ ಧಾರಣಶಕ್ತಿ (ನೆಟ್‌ವರ್ಕ್ ಕೆಪ್ಯಾಸಿಟಿ). ಇದು ಆ ಸ್ಥಳದಲ್ಲಿ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ ಹೇಗಿದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.
ನಾವಿರುವ ಪ್ರದೇಶ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿಯ ಅಂಚಿನಲ್ಲೋ, ಹೊರಗೋ ಇದ್ದರೆ ಕರೆಮಾಡಲು – ಅಂತರಜಾಲ ಸಂಪರ್ಕ ಬಳಸಲು ಕಷ್ಟವಾಗುತ್ತದೆ. ನಮ್ಮಲ್ಲಿ ಕವರೇಜ್ ಚೆನ್ನಾಗಿದ್ದರೂ ಮೊಬೈಲ್ ಬಳಸುತ್ತಿರುವವರ ಸಂಖ್ಯೆ ವಿಪರೀತ ಜಾಸ್ತಿಯಿದ್ದರೆ (ಕೆಪ್ಯಾಸಿಟಿ ಪೂರ್ಣವಾಗಿ ಬಳಕೆಯಾಗುತ್ತಿದ್ದರೆ) ಆಗಲೂ ಕರೆಮಾಡಲು – ಅಂತರಜಾಲ ಸಂಪರ್ಕ ಬಳಸಲು ಪರದಾಡುವ ಪರಿಸ್ಥಿತಿ ಬರುವ ಸಾಧ್ಯತೆಯಿದೆ.

Network Capacity

ನೆಟ್‌ವರ್ಕ್ ಕೆಪ್ಯಾಸಿಟಿ
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ಜಾಲದ ಧಾರಣ ಶಕ್ತಿ
Long Description: ಮೊಬೈಲ್ ಜಾಲದ ಸಂಕೇತಗಳು (ಸಿಗ್ನಲ್) ಯಾವೆಲ್ಲ ಪ್ರದೇಶಗಳನ್ನು ತಲುಪಬಲ್ಲವು ಎನ್ನುವುದನ್ನು ಅದರ ಪ್ರಸಾರ ವ್ಯಾಪ್ತಿ, ಅಂದರೆ ನೆಟ್‌ವರ್ಕ್ ಕವರೇಜ್, ಸೂಚಿಸುತ್ತದೆ. ಪಕ್ಕದೂರಿನಲ್ಲಿರುವ ಮೊಬೈಲ್ ಟವರಿನ ಕವರೇಜ್ ನಮ್ಮ ಹಳ್ಳಿಯವರೆಗೆ ಮಾತ್ರ ಇದೆ ಎನ್ನುವುದಾದರೆ ನಮ್ಮೂರ ಪಕ್ಕದ ಇನ್ನೊಂದು ಹಳ್ಳಿಯಲ್ಲಿ ಮೊಬೈಲ್ ಬಳಸುವುದು ಸಾಧ್ಯವಾಗುವುದಿಲ್ಲ.
ಯಾವುದೇ ಮೊಬೈಲ್ ಜಾಲ ನಿರ್ದಿಷ್ಟ ಸಮಯದಲ್ಲಿ ಎಷ್ಟು ಕರೆಗಳನ್ನು, ಎಷ್ಟು ಪ್ರಮಾಣದ ದತ್ತಾಂಶ (ಡೇಟಾ) ವಿನಿಮಯವನ್ನು ನಿಭಾಯಿಸಬಲ್ಲದು ಎಂಬುದನ್ನು ಸೂಚಿಸುವುದು ಅದರ ಧಾರಣಶಕ್ತಿ (ನೆಟ್‌ವರ್ಕ್ ಕೆಪ್ಯಾಸಿಟಿ). ಇದು ಆ ಸ್ಥಳದಲ್ಲಿ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ ಹೇಗಿದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.
ನಾವಿರುವ ಪ್ರದೇಶ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿಯ ಅಂಚಿನಲ್ಲೋ, ಹೊರಗೋ ಇದ್ದರೆ ಕರೆಮಾಡಲು – ಅಂತರಜಾಲ ಸಂಪರ್ಕ ಬಳಸಲು ಕಷ್ಟವಾಗುತ್ತದೆ. ನಮ್ಮಲ್ಲಿ ಕವರೇಜ್ ಚೆನ್ನಾಗಿದ್ದರೂ ಮೊಬೈಲ್ ಬಳಸುತ್ತಿರುವವರ ಸಂಖ್ಯೆ ವಿಪರೀತ ಜಾಸ್ತಿಯಿದ್ದರೆ (ಕೆಪ್ಯಾಸಿಟಿ ಪೂರ್ಣವಾಗಿ ಬಳಕೆಯಾಗುತ್ತಿದ್ದರೆ) ಆಗಲೂ ಕರೆಮಾಡಲು – ಅಂತರಜಾಲ ಸಂಪರ್ಕ ಬಳಸಲು ಪರದಾಡುವ ಪರಿಸ್ಥಿತಿ ಬರುವ ಸಾಧ್ಯತೆಯಿದೆ.

Performance Engineering

ಪರ್‌ಫಾರ್ಮೆನ್ಸ್ ಇಂಜಿನಿಯರಿಂಗ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ತಂತ್ರಾಂಶ ತನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವಂತೆ ರೂಪಿಸಲು ನೆರವಾಗುವ ಪ್ರಕ್ರಿಯೆ
Long Description: ತಂತ್ರಾಂಶ ಯಾವ ಕೆಲಸಕ್ಕೆಂದು ತಯಾರಾಗಿದೆಯೋ ಆ ಕೆಲಸವನ್ನು ಮಾಡುವಷ್ಟೇ ಮುಖ್ಯವಾದದ್ದು ಆ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವುದು. ಉದಾಹರಣೆಗೆ ಮೊಬೈಲಿನಲ್ಲಿ ಮೆಸೇಜ್ ಕಳುಹಿಸಲು ಸಾಧ್ಯವಾಗುವುದು ಎಷ್ಟು ಮುಖ್ಯವೋ ಅದಕ್ಕೆ ತಗುಲುವ ಸಮಯ ಅತ್ಯಂತ ಕಡಿಮೆ ಇರಬೇಕಾದ್ದೂ ಅಷ್ಟೇ ಮುಖ್ಯ. ಒಂದು ಮೆಸೇಜ್ ಕಳಿಸಲು ಮೂವತ್ತು ಸೆಕೆಂಡಿನ ಬದಲು ಮೂವತ್ತು ನಿಮಿಷ ಬೇಕು ಎಂದರೆ ಕಾಯಲು ಯಾರಿಗೆ ತಾನೇ ತಾಳ್ಮೆ ಇರುತ್ತದೆ?
ತಂತ್ರಾಂಶ ತನ್ನ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯ, ಅಂದರೆ ‘ಪರ್‌ಫಾರ್ಮೆನ್ಸ್’ಗೆ ಪ್ರಾಮುಖ್ಯ ಸಿಗುವುದೇ ಈ ಕಾರಣದಿಂದಾಗಿ.
ತನ್ನ ಕೆಲಸವನ್ನು ಸರಿಯಾಗಿ, ಸಮರ್ಥವಾಗಿ ನಿರ್ವಹಿಸುವಂತಹ ತಂತ್ರಾಂಶವನ್ನು ರೂಪಿಸಲು ಪರ್‌ಫಾರ್ಮೆನ್ಸ್ ಇಂಜಿನಿಯರಿಂಗ್ ನಮಗೆ ನೆರವಾಗುತ್ತದೆ. ತಂತ್ರಾಂಶ ಬಳಕೆದಾರರ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಉನ್ನತ ಮಟ್ಟದ ಕಾರ್ಯಕ್ಷಮತೆಯನ್ನೂ ಹೊಂದಿರಬೇಕು, ಮಾಡುವ ಕೆಲಸವನ್ನು ಆದಷ್ಟೂ ಬೇಗನೆ – ತಪ್ಪುಗಳಿಗೆ ಆಸ್ಪದವಿಲ್ಲದಂತೆ ಮಾಡಿ ಮುಗಿಸಬೇಕು ಎನ್ನುವುದು ಪರ್‌ಫಾರ್ಮೆನ್ಸ್ ಇಂಜಿನಿಯರಿಂಗ್ ಪರಿಕಲ್ಪನೆಯ ಆಶಯ.
ತಂತ್ರಾಂಶದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೆಲಸ ತಂತ್ರಾಂಶ ಅಭಿವೃದ್ಧಿಯ ಪ್ರತಿ ಹಂತದಲ್ಲೂ ಆಗಬೇಕಾಗುತ್ತದೆ. ತಂತ್ರಾಂಶ ಯಾವ ಹೆಜ್ಜೆಯಲ್ಲಿ ಏನು ಕೆಲಸ ಮಾಡಬೇಕು ಎಂದು ತೀರ್ಮಾನವಾಗುವ ಸಂದರ್ಭದಲ್ಲೇ ಆ ಕೆಲಸಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದು ಎನ್ನುವುದನ್ನೂ ಅಂದಾಜಿಸಿಕೊಳ್ಳುವುದು, ಅದಕ್ಕೆ ತಕ್ಕಂತೆಯೇ ತಂತ್ರಾಂಶವನ್ನು ವಿನ್ಯಾಸಗೊಳಿಸುವುದು ಒಳ್ಳೆಯದು.

Permalink

ಪರ್ಮಾಲಿಂಕ್
Kannada Equivalent: (ರೂಪಿಸಬೇಕಿದೆ)
Short Description : ಪರ್ಮನೆಂಟ್ ಲಿಂಕ್; ಜಾಲತಾಣದಲ್ಲಿ ಪ್ರಕಟವಾದ ಪ್ರತಿ ಬರಹಕ್ಕೂ ನೀಡಲಾಗಿರುವ ಪ್ರತ್ಯೇಕ ಕೊಂಡಿ
Long Description: ಜಾಲತಾಣಗಳಲ್ಲಿನ ಮಾಹಿತಿ ಬಹಳ ಕ್ಷಿಪ್ರವಾಗಿ ಬದಲಾಗುತ್ತಿರುತ್ತದೆ. ಹೊಸ ಸುದ್ದಿಗಳು, ಬರಹಗಳು, ಲೇಖನ, ಚಿತ್ರಗಳು ಬಂದಂತೆಲ್ಲ ಹಳೆಯವನ್ನು ಹುಡುಕುವುದು ಕಷ್ಟವಾಗುತ್ತದೆ. ಇವತ್ತು ಮುಖಪುಟದಲ್ಲಿದ್ದ ಬರಹ ನಾಳೆ ಬರುವಷ್ಟರಲ್ಲಿ ಅಲ್ಲಿಂದ ಮಾಯವಾಗಿರುವುದು ಇಲ್ಲಿ ಸರ್ವೇಸಾಮಾನ್ಯ.
ಎಲ್ಲ ಬರಹಗಳಿಗೂ ಒಂದೊಂದು ಪ್ರತ್ಯೇಕ ಕೊಂಡಿ (ಲಿಂಕ್) ನೀಡುವುದು ಈ ಸಮಸ್ಯೆಯನ್ನು ಪರಿಹರಿಸುವ ವಿಧಾನಗಳಲ್ಲೊಂದು. ಇಂತಹ ಕೊಂಡಿಯ ಹೆಸರೇ ‘ಪರ್ಮಾಲಿಂಕ್.’ ನಮಗೆ ಬೇಕಾದ ಲೇಖನ ತಾಣದ ಮುಖಪುಟದಿಂದ – ಹೊಸ ಲೇಖನಗಳ ಪಟ್ಟಿಯಿಂದ ಮಾಯವಾದರೂ ಸ್ಥಿರವಾದ (ಪರ್ಮನೆಂಟ್) ಈ ಕೊಂಡಿಯ (ಲಿಂಕ್) ಮೂಲಕ ಅದನ್ನು ನಾವು ಯಾವಾಗ ಬೇಕಾದರೂ ತೆರೆಯಬಹುದು. ಪರ್ಮನೆಂಟ್ ಲಿಂಕ್ ಎನ್ನುವುದರ ಸಂಕ್ಷಿಪ್ತರೂಪವೇ ಪರ್ಮಾಲಿಂಕ್.
“ಈ ದಿನ ಈ ತಾಣದ ಮುಖಪುಟದಲ್ಲಿ ಕಾಣುತ್ತಿದ್ದ ಬರಹ” ಎನ್ನುವ ಬದಲಿಗೆ ಆ ಬರಹದ ಕೊಂಡಿಯನ್ನೇ ನೇರವಾಗಿ ಉಳಿಸಿಟ್ಟುಕೊಳ್ಳುವುದು ಪರ್ಮಾಲಿಂಕ್‌ಗಳಿಂದಾಗಿ ಸಾಧ್ಯವಾಗುತ್ತದೆ. ಬುಕ್‌ಮಾರ್ಕಿಂಗ್ ವ್ಯವಸ್ಥೆಗಳಲ್ಲಿ ಪರ್ಮಾಲಿಂಕ್‌ಗಳನ್ನು ಉಳಿಸಿಟ್ಟುಕೊಂಡರೆ ನಮಗೆ ಬೇಕಾದ ಲೇಖನವನ್ನು – ಅದು ಎಷ್ಟೇ ಹಳೆಯದಾದರೂ – ಬೇಕಾದಾಗ ತೆರೆದು ಓದಬಹುದು.
ಅಂದಹಾಗೆ ಬ್ಲಾಗುಗಳ ಲೋಕದಲ್ಲಿ ಪರ್ಮಾಲಿಂಕ್‌ಗಳ ಬಳಕೆ ವ್ಯಾಪಕವಾಗಿದೆ. ಹೊಸ ಬ್ಲಾಗ್ ಪೋಸ್ಟುಗಳನ್ನು ಬರೆಯುವಾಗ ಪರ್ಮಾಲಿಂಕ್ ಹೇಗಿರಬೇಕು ಎಂದು ಸೂಚಿಸುವ ಸೌಲಭ್ಯವೂ ಹಲವು ಸಿಎಂಎಸ್‌ಗಳಲ್ಲಿರುತ್ತದೆ.

Power Supply

ಪವರ್ ಸಪ್ಲೈ
Kannada Equivalent: (ರೂಪಿಸಬೇಕಿದೆ)
Short Description : ವಿದ್ಯುನ್ಮಾನ ಸಾಧನಗಳಿಗೆ ಅಗತ್ಯ ಪ್ರಮಾಣದಲ್ಲಿ ಅಗತ್ಯ ರೂಪದ ವಿದ್ಯುತ್ತನ್ನು ಒದಗಿಸುವ ಯಂತ್ರಾಂಶ ಘಟಕ
Long Description: ಇಲೆಕ್ಟ್ರಿಕ್ ಹಾಗೂ ಇಲೆಕ್ಟ್ರಾನಿಕ್ ಸಾಧನಗಳು ಕೆಲಸಮಾಡಲು ಅತ್ಯಗತ್ಯವಾಗಿ ಬೇಕಾದ್ದು ವಿದ್ಯುತ್ತಿನ ಪೂರೈಕೆ. ಬೇಕಾದಾಗ ಬೇಕಾದ ರೂಪ ಹಾಗೂ ಪ್ರಮಾಣದ ವಿದ್ಯುತ್ತು ದೊರೆತರಷ್ಟೇ ಈ ಸಾಧನಗಳು ಕೆಲಸಮಾಡುವುದು ಸಾಧ್ಯ.
ಅಗತ್ಯ ಪ್ರಮಾಣದಲ್ಲಿ ಅಗತ್ಯ ರೂಪದ ವಿದ್ಯುತ್ತನ್ನು ಒದಗಿಸುವ ಜವಾಬ್ದಾರಿ ಪ್ರತಿ ಸಾಧನದಲ್ಲೂ ಇರುವ ‘ಪವರ್ ಸಪ್ಲೈ’ ಎಂಬ ಯಂತ್ರಾಂಶ ಘಟಕದ್ದು. ಮನೆಗೆ ಪೂರೈಕೆಯಾಗುವ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು, ಅದರ ವೋಲ್ಟೇಜನ್ನು ಅಗತ್ಯ ಪ್ರಮಾಣದಲ್ಲಿ ನಿಯಂತ್ರಿಸುವುದು, ಅಗತ್ಯವಾದ ಕಡೆಗಳಲ್ಲಿ ವಿದ್ಯುತ್ತಿನ ದ್ವಿಮುಖ ಪ್ರವಾಹವನ್ನು (ಎ.ಸಿ.) ಏಕಮುಖ ಪ್ರವಾಹಕ್ಕೆ (ಡಿ.ಸಿ.) ಪರಿವರ್ತಿಸುವುದು – ಇದೆಲ್ಲ ಪವರ್ ಸಪ್ಲೈಯ ಕೆಲಸಗಳು. ವಿದ್ಯುತ್ ಪೂರೈಕೆಯಲ್ಲಿ ಏರುಪೇರಾದಾಗ ಮುಖ್ಯ ಸಾಧನಕ್ಕೆ ವಿದ್ಯುತ್ ಸಂಪರ್ಕವನ್ನು ತಪ್ಪಿಸಿ ಆಗಬಹುದಾದ ಹಾನಿಯನ್ನು ತಡೆಯುವ ಸೌಲಭ್ಯವೂ ಅನೇಕ ಪವರ್ ಸಪ್ಲೈಗಳಲ್ಲಿ ಇರುತ್ತದೆ.
ಡೆಸ್ಕ್‌ಟಾಪ್ ಕಂಪ್ಯೂಟರ್ ಸೇರಿದಂತೆ ಅನೇಕ ಉದಾಹರಣೆಗಳಲ್ಲಿ ಈ ಯಂತ್ರಾಂಶ ಘಟಕ ಸಾಧನದ ಒಳಭಾಗದಲ್ಲೇ ಇರುತ್ತದೆ. ಹಲವು ಪ್ರಿಂಟರುಗಳು, ಮಾನಿಟರ್‌ಗಳಲ್ಲಿ ನಾವೇ ನೋಡುವಂತೆ ಬಾಹ್ಯ ಪವರ್ ಸಪ್ಲೈ ಬಳಕೆಯೂ ಸಾಮಾನ್ಯವೇ. ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಕಂಪ್ಯೂಟರುಗಳಲ್ಲಿ ಈ ಯಂತ್ರಾಂಶ ಘಟಕ ಚಾರ್ಜರಿನ ಒಂದು ಅಂಗವಾಗಿರುತ್ತದೆ. ಹೀಗೆ ಪವರ್ ಸಪ್ಲೈ ಅನ್ನು ಮುಖ್ಯ ಸಾಧನದಿಂದ ಹೊರಗಿಡುವ ಮೂಲಕ ಸಾಧನದ ಒಟ್ಟಾರೆ ಗಾತ್ರ ಹಾಗೂ ತೂಕವನ್ನು ಕಡಿಮೆಮಾಡುವುದು ಸಾಧ್ಯವಾಗುತ್ತದೆ.

Podcast

ಪಾಡ್‍ಕಾಸ್ಟ್
Kannada Equivalent: (ರೂಪಿಸಬೇಕಿದೆ)
Short Description : ಅಂತರಜಾಲದ ಮೂಲಕ ಹಂಚಿಕೊಳ್ಳುವ ಧ್ವನಿರೂಪದ ಕಡತ
Long Description: ಬಾನುಲಿಯ (ರೇಡಿಯೋ) ಪ್ರಸರಣ ನಮಗೆಲ್ಲ ಪರಿಚಿತ. ಇದನ್ನು ಇಂಗ್ಲಿಷಿನಲ್ಲಿ ಬ್ರಾಡ್‌ಕಾಸ್ಟ್ ಎಂದು ಕರೆಯುತ್ತಾರೆ. ಮನೆಯಲ್ಲಿ ಕೆಲಸಮಾಡುವಾಗ, ಹೊರಗೆ ಪ್ರಯಾಣಿಸುವಾಗ, ಕಡೆಗೆ ಕರೆಂಟಿಲ್ಲವೆಂದು ಟೀವಿ ಆರಿಸಿ ಕುಳಿತಿದ್ದಾಗಲೂ ಕೇಳಬಹುದಾದದ್ದು ಇದರ ವೈಶಿಷ್ಟ್ಯ. ಆದರೆ ಈ ಸಂವಹನ ಏಕಮುಖವಾದ್ದರಿಂದ ವಿವಿಧ ಬಾನುಲಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಕೇಳುವುದಷ್ಟೇ ನಮಗಿರುವ ಆಯ್ಕೆ. ಈ ಮಾಧ್ಯಮದ ಮೂಲಕ ಮಾಹಿತಿ ಹಂಚಿಕೊಳ್ಳುವ ಅವಕಾಶ ನಮಗೆ ಸಿಗುವುದು ಬಾನುಲಿಯವರು ನಮ್ಮನ್ನು ಆಹ್ವಾನಿಸಿದಾಗ ಮಾತ್ರ.
ಇದರ ಬದಲು ನಮ್ಮ ಮಾಹಿತಿಯನ್ನು ಧ್ವನಿರೂಪದ ಕಡತಗಳಲ್ಲಿ ಉಳಿಸಿಟ್ಟು ಇತರರೊಡನೆ ಹಂಚಿಕೊಂಡರೆ? ಅವರೆಲ್ಲ ಅದನ್ನು ಬೇಕೆಂದಾಗ ಬೇಕಾದ ಕಡೆ – ರೇಡಿಯೋ ಕೇಳುವಂತೆಯೇ – ಕೇಳಬಹುದಲ್ಲ?
ಈ ಆಲೋಚನೆಯಿಂದ ಹುಟ್ಟಿದ್ದೇ ‘ಪಾಡ್‌ಕಾಸ್ಟ್’ನ ಪರಿಕಲ್ಪನೆ. ಭಾಷಣ, ಸಂದರ್ಶನ, ಹಾಡು, ಚರ್ಚೆ – ಹೀಗೆ ಯಾವುದೇ ಬಗೆಯ ಮಾಹಿತಿಯನ್ನು ರೆಕಾರ್ಡ್ ಮಾಡಿ ಆ ಕಡತವನ್ನು ಜಾಲಲೋಕದಲ್ಲಿ ಹಂಚಿಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ. ಹೀಗೆ ಹಂಚಲಾದ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡವರು ತಮ್ಮ ಮೊಬೈಲ್ ಫೋನ್, ಟ್ಯಾಬ್ಲೆಟ್ ಇತ್ಯಾದಿಗಳಲ್ಲಿ ಅದನ್ನು ಎಲ್ಲಿ ಬೇಕಾದರೂ ಕೇಳಬಹುದು.
ಅಂದಹಾಗೆ ಪಾಡ್‌ಕಾಸ್ಟ್ ಹೆಸರಿನ ಉತ್ತರಾರ್ಧ ‘ಕಾಸ್ಟ್’ ಬಂದಿರುವುದು ‘ಬ್ರಾಡ್‌ಕಾಸ್ಟ್’ನಿಂದ. ಈ ಪರಿಕಲ್ಪನೆಯ ವಿಕಾಸವಾಗುತ್ತಿದ್ದ ಸಮಯದಲ್ಲಿ ಆಪಲ್ ಸಂಸ್ಥೆಯ ‘ಐಪಾಡ್’ ಸಾಧನ ಜನಪ್ರಿಯವಾಗಿತ್ತು, ಹಾಗಾಗಿ ‘ಐಪಾಡ್‌ನಲ್ಲಿ ಕೇಳಬಹುದಾದ ಬ್ರಾಡ್‌ಕಾಸ್ಟ್’ ಎನ್ನುವ ಅರ್ಥದಲ್ಲಿ ಇದನ್ನು ‘ಪಾಡ್‌ಕಾಸ್ಟ್’ ಎಂದು ಕರೆಯಲಾಯಿತು. ಪಾಡ್‌ಕಾಸ್ಟ್‌ಗಳನ್ನು ಐಪಾಡ್‌ನಲ್ಲಿ ಮಾತ್ರವೇ ಅಲ್ಲ, ನಮ್ಮ-ನಿಮ್ಮ ಮೊಬೈಲುಗಳಲ್ಲೂ ಸರಾಗವಾಗಿ ಕೇಳಬಹುದು.

Popup

ಪಾಪ್ ಅಪ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರಿನಲ್ಲಿ, ಬಹಳಷ್ಟು ಸಾರಿ ಅನಪೇಕ್ಷಿತವಾಗಿ, ತೆರೆದುಕೊಳ್ಳುವ ಹೊಸ ಕಿಟಕಿ (ವಿಂಡೋ)
Long Description: ವಿಶ್ವವ್ಯಾಪಿ ಜಾಲದಲ್ಲಿ ಜಾಲತಾಣಗಳನ್ನು ವೀಕ್ಷಿಸುತ್ತಿರುವಾಗ ಕೊಂಡಿಗಳ (ಲಿಂಕ್) ಮೇಲೆ ಕ್ಲಿಕ್ಕಿಸುವುದು, ಬೇರೆಬೇರೆ ಜಾಲತಾಣಗಳಿಗೆ ಭೇಟಿಕೊಡುವುದು ಸಾಮಾನ್ಯ ಸಂಗತಿ. ಹೀಗೆ ಮಾಡುವಾಗ ಕೆಲವೊಮ್ಮೆ ಹೊಸ ಕಿಟಕಿಗಳು (ವಿಂಡೋ) ಇದ್ದಕ್ಕಿದ್ದಂತೆ ತೆರೆದುಕೊಳ್ಳುತ್ತವಲ್ಲ, ಇಂತಹ ಕಿಟಕಿಗಳನ್ನು ‘ಪಾಪ್-ಅಪ್’ ಕಿಟಕಿಗಳೆಂದು ಕರೆಯುತ್ತಾರೆ.
ಪಾಪ್-ಅಪ್‌ಗಳನ್ನು ಹೆಚ್ಚಾಗಿ ಬಳಸಲಾಗುವುದು ಜಾಹೀರಾತಿನ ಪ್ರದರ್ಶನಕ್ಕಾಗಿ. ಸಾಮಾನ್ಯ ಜಾಹೀರಾತುಗಳಷ್ಟೇ ಅಲ್ಲ, ಬಳಕೆದಾರರನ್ನು ಮೋಸಗೊಳಿಸಲು ರೂಪಿಸಲಾಗಿರುವ ನಕಲಿ ತಾಣಗಳ – ಕುತಂತ್ರಾಂಶಗಳ ಪ್ರಚಾರದಲ್ಲೂ ಇವು ವ್ಯಾಪಕವಾಗಿ ಬಳಕೆಯಾಗುತ್ತವೆ. ಅನೇಕ ಸಂದರ್ಭಗಳಲ್ಲಿ ಇಂತಹ ಪಾಪ್-ಅಪ್ ಜಾಹೀರಾತುಗಳು ಕಾಣಿಸಿಕೊಳ್ಳುವುದಕ್ಕೆ ಯಾವುದೋ ಒಂದು ಕುತಂತ್ರಾಂಶವೇ ಕಾರಣವಾಗಿರುತ್ತದೆ (ಜಾಹೀರಾತುಗಳನ್ನು ಪ್ರದರ್ಶಿಸಿ ಆ ಮೂಲಕ ದುಡ್ಡುಮಾಡುವ ಉದ್ದೇಶದ ಇಂತಹ ಕುತಂತ್ರಾಂಶಗಳನ್ನು ‘ಆಡ್‌ವೇರ್’ಗಳೆಂದು ಗುರುತಿಸಲಾಗುತ್ತದೆ).
ಪಾಪ್-ಅಪ್ ಕಿಟಕಿಗಳು ಹಾಗೂ ಜಾಹೀರಾತುಗಳು ಬಳಕೆದಾರರಿಗೆ ಕಿರಿಕಿರಿ ಉಂಟುಮಾಡುತ್ತವಲ್ಲ, ಹಾಗಾಗಿ ಅವುಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆದಿವೆ. ಇಂತಹ ಕಿಟಕಿಗಳನ್ನು ತೆರೆಯದಂತೆ ತಡೆಹಿಡಿಯುವ ‘ಪಾಪ್-ಅಪ್ ಬ್ಲಾಕರ್’ ಸೌಲಭ್ಯ ಇಂದಿನ ಹಲವು ಬ್ರೌಸರುಗಳ ಅಂಗವೇ ಆಗಿಬಿಟ್ಟಿದೆ. ಜಾಹೀರಾತುಗಳನ್ನು ತಡೆಯುವ ‘ಆಡ್ ಬ್ಲಾಕರ್’ ತಂತ್ರಾಂಶಗಳೂ ಪಾಪ್-ಅಪ್ ಕಿರಿಕಿರಿ ನಿವಾರಿಸುವಲ್ಲಿ ನೆರವಾಗುತ್ತವೆ.
ಅಂದಹಾಗೆ ಎಲ್ಲ ಪಾಪ್-ಅಪ್ ಕಿಟಕಿಗಳನ್ನೂ ತಡೆದುಬಿಟ್ಟರೆ ಅವು ನಮಗೆ ನಿಜಕ್ಕೂ ಬೇಕಾದ ಸಂದರ್ಭಗಳಲ್ಲಿ (ಉದಾ: ಕೆಲ ನೆಟ್‌ಬ್ಯಾಂಕಿಂಗ್ ತಾಣಗಳಲ್ಲಿ) ತೊಂದರೆಯಾಗಬಹುದು. ಹಾಗಾಗಿ ಈ ತಂತ್ರಾಂಶಗಳು ನಿರ್ದಿಷ್ಟ ತಾಣಗಳಿಗೆ ಪಾಪ್-ಅಪ್ ಕಿಟಕಿಗಳನ್ನು ತೆರೆಯಲು ಅನುಮತಿಸುವ ಸ್ವಾತಂತ್ರ್ಯವನ್ನು ಬಳಕೆದಾರರಾದ ನಮಗೇ ನೀಡುತ್ತವೆ.

Point of Interconnection

ಪಾಯಿಂಟ್ ಆಫ್ ಇಂಟರ್‌ಕನೆಕ್ಶನ್
Kannada Equivalent: (ರೂಪಿಸಬೇಕಿದೆ)
Short Description : ಬೇರೆಬೇರೆ ಮೊಬೈಲ್ ಸಂಸ್ಥೆಗಳ ಗ್ರಾಹಕರ ನಡುವೆ ಪರಸ್ಪರ ಸಂವಹನ ಸಾಧ್ಯವಾಗುವಂತೆ ಆ ಸಂಸ್ಥೆಗಳು ರೂಪಿಸಿಕೊಳ್ಳುವ ಸಂಪರ್ಕ
Long Description: ಬೇರೆಬೇರೆ ಬಳಕೆದಾರರು ಬೇರೆಬೇರೆ ಸಂಸ್ಥೆಗಳಿಂದ ದೂರವಾಣಿ ಸಂಪರ್ಕ ಪಡೆದು ಬಳಸುವುದು ತೀರಾ ಸಾಮಾನ್ಯ ಸಂಗತಿ. ಈ ಸಂಪರ್ಕ ಬಳಸಿಕೊಂಡು ನಮ್ಮ ಗೆಳೆಯರನ್ನು – ಅವರು ಯಾವುದೇ ಸಂಸ್ಥೆಯ ಚಂದಾದಾರರಾಗಿರಲಿ – ಸುಲಭವಾಗಿ ಸಂಪರ್ಕಿಸಬಹುದೆನ್ನುವುದೂ ನಮಗೆ ಗೊತ್ತು.
ಮೊಬೈಲ್ ಆಗಿರಲಿ ಲ್ಯಾಂಡ್‌ಲೈನ್ ಆಗಿರಲಿ, ದೂರವಾಣಿ ಸೇವೆ ಒದಗಿಸುವ ಪ್ರತಿಯೊಂದು ಸಂಸ್ಥೆಯೂ ತನ್ನ ಚಂದಾದಾರರ ಅಗತ್ಯಗಳನ್ನು ಪೂರೈಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತದೆ. ಆ ಚಂದಾದಾರರು ಬೇರೆ ಸಂಸ್ಥೆಯ ಗ್ರಾಹಕರಿಗೂ ಕರೆಮಾಡಬೇಕಲ್ಲ, ಅದಕ್ಕಾಗಿಯೇ ಪ್ರತಿ ಸಂಸ್ಥೆಯೂ ಇತರ ಸಂಸ್ಥೆಗಳ ಇಂತಹವೇ ವ್ಯವಸ್ಥೆಗಳೊಡನೆ ಸಂಪರ್ಕ ಏರ್ಪಡಿಸಿಕೊಂಡಿರುತ್ತದೆ. ‘ಪಾಯಿಂಟ್ ಆಫ್ ಇಂಟರ್‌ಕನೆಕ್ಷನ್’ ಎಂದು ಕರೆಯುವುದು ಈ ಸಂಪರ್ಕವನ್ನೇ.
ಯಾವುದೇ ಸಂಸ್ಥೆಗಳ ನಡುವೆ ಇಂತಹ ಸಂಪರ್ಕಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದರೆ ಆ ಸಂಸ್ಥೆಗಳ ಚಂದಾದಾರರು ಪರಸ್ಪರ ಕರೆಮಾಡಲು ಪರದಾಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ದೂರವಾಣಿ ಸಂಸ್ಥೆಗಳು ಹೊಸ ಸಂಸ್ಥೆಗಳೊಡನೆಯೂ ಸಂಪರ್ಕ ಕಲ್ಪಿಸಿಕೊಳ್ಳಬೇಕಾದ್ದು ಕಡ್ಡಾಯವೆಂದು ಟ್ರಾಯ್‌ನಂತಹ ನಿಯಂತ್ರಕರು ಹೇಳುವುದು ಇದೇ ಕಾರಣಕ್ಕಾಗಿ.
ಅಂದಹಾಗೆ ಪಾಯಿಂಟ್ ಆಫ್ ಇಂಟರ್‌ಕನೆಕ್ಷನ್ ಮೂಲಕ ಎರಡನೆಯ ಸಂಸ್ಥೆಯ ವ್ಯವಸ್ಥೆಯನ್ನು ಪ್ರವೇಶಿಸುವ ಪ್ರತಿ ಕರೆಗೂ ಆ ಕರೆಮಾಡಿದ ಚಂದಾದಾರರ ಸಂಸ್ಥೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ. ಕರೆಮಾಡುವವರು ಸ್ವೀಕರಿಸುವವರು ಇಬ್ಬರೂ ಒಂದೇ ಸಂಸ್ಥೆಯ ಚಂದಾದಾರರಾದರೆ ಅಷ್ಟು ಹಣ ಸಂಸ್ಥೆಗೇ ಉಳಿಯುತ್ತದೆ. ತಮ್ಮದೇ ಸಂಸ್ಥೆಯ ಚಂದಾದಾರರಿಗೆ ಕರೆಮಾಡಿದರೆ ವಿಶೇಷ ಕೊಡುಗೆಗಳೆಲ್ಲ ಇರುತ್ತವಲ್ಲ, ಅದಕ್ಕೆ ಇದೇ ಕಾರಣ!

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App