भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

SQL

ಎಸ್‌ಕ್ಯೂಎಲ್
Kannada Equivalent: (ರೂಪಿಸಬೇಕಿದೆ)
Short Description : ಸ್ಟ್ರಕ್ಚರ್ಡ್ ಕ್ವೆರಿ ಲ್ಯಾಂಗ್ವೆಜ್; ದತ್ತಸಂಚಯಗಳನ್ನು ನಿರ್ವಹಿಸುವಾಗ ನಮ್ಮ ಆದೇಶಗಳನ್ನು ದತ್ತಸಂಚಯಕ್ಕೆ ಹೇಳಲು ಬಳಕೆಯಾಗುವ ಭಾಷೆ
Long Description: ಭಾರೀ ಪ್ರಮಾಣದ ದತ್ತಾಂಶವನ್ನು ಉಳಿಸಿಡಲು ದತ್ತಸಂಚಯ, ಅಂದರೆ ಡೇಟಾಬೇಸ್‌ಗಳು ನೆರವಾಗುತ್ತವೆ ಸರಿ. ಆದರೆ ದತ್ತಾಂಶದ ನಿರ್ವಹಣೆ ಒಂದೇಸಲಕ್ಕೆ ಮುಗಿಯುವ ಕೆಲಸವಲ್ಲ: ಹೊಸ ದತ್ತಾಂಶವನ್ನು ಸೇರಿಸುವುದು, ಹಳೆಯದನ್ನು ಬದಲಿಸುವುದು, ಬೇಡದ್ದನ್ನು ಅಳಿಸಿಹಾಕುವುದು – ಹೀಗೆ ಇಲ್ಲಿ ನೂರೆಂಟು ಕೆಲಸಗಳು ನಡೆಯುತ್ತಲೇ ಇರುತ್ತವೆ.
ಇದೆಲ್ಲ ಕೆಲಸಗಳಲ್ಲಿ ನಮಗೇನು ಬೇಕೆಂದು ದತ್ತಸಂಚಯಕ್ಕೆ ಹೇಳಲು ಬಳಕೆಯಾಗುವ ಭಾಷೆಯೇ ಸ್ಟ್ರಕ್ಚರ್ಡ್ ಕ್ವೆರಿ ಲ್ಯಾಂಗ್ವೆಜ್. ತಾಂತ್ರಿಕ ಪರಿಭಾಷೆಯಲ್ಲಿ ಎಸ್‌ಕ್ಯೂಎಲ್ ಅಥವಾ ಸೀಕ್ವೆಲ್ ಎಂದು ಗುರುತಿಸುವುದು ಇದನ್ನೇ. ನಮಗೆ ಬೇಕಾದ ದತ್ತಾಂಶವನ್ನು (ಉದಾ: ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ ಗ್ರಾಹಕರು) ದತ್ತಸಂಚಯದಿಂದ ಪಡೆದುಕೊಳ್ಳಬೇಕೆಂದರೆ ಅಗತ್ಯ ನಿರ್ದೇಶನಗಳನ್ನು ಇದೇ ಭಾಷೆಯಲ್ಲಿ ಬರೆಯಬೇಕಾದ್ದು ಅಗತ್ಯ. ದತ್ತಾಂಶವನ್ನು ಬದಲಾಯಿಸಲು, ಅಳಿಸಿಹಾಕಲು, ಇರುವ ದತ್ತಾಂಶಕ್ಕೆ ಹೊಸ ವಿವರಗಳನ್ನು ಹೆಚ್ಚುವರಿಯಾಗಿ ಸೇರಿಸಲು ಅಗತ್ಯ ನಿರ್ದೇಶನಗಳೂ ಈ ಭಾಷೆಯಲ್ಲಿವೆ.
ನಮ್ಮನಿಮ್ಮಂತಹ ಬಳಕೆದಾರರಷ್ಟೇ ಅಲ್ಲ, ಜಾಲತಾಣಗಳು ಹಾಗೂ ಇತರ ತಂತ್ರಾಂಶಗಳೂ ಎಸ್‌ಕ್ಯೂಎಲ್ ಅನ್ನು ಬಳಸುತ್ತವೆ. ಜಾಲತಾಣದಲ್ಲಿ ನೋಂದಣಿ ಸಂಖ್ಯೆಯನ್ನು ದಾಖಲಿಸಿ ಪರೀಕ್ಷಾ ಫಲಿತಾಂಶ ನೋಡುತ್ತೇವಲ್ಲ, ಅಂತಹ ಚಟುವಟಿಕೆಗಳ ಹಿಂದೆ ಇರುವುದು ಎಸ್‌ಕ್ಯೂಎಲ್ ಕೈವಾಡವೇ!
ಎಸ್‌ಕ್ಯೂಎಲ್ ಅನ್ನು ೧೯೭೫ರಲ್ಲಿ ಮೊದಲ ಬಾರಿಗೆ ರೂಪಿಸಿದ್ದು ಐಬಿಎಂ ಸಂಸ್ಥೆಯ ಸಾಧನೆ. ಅಲ್ಲಿಂದ ಮುಂದಕ್ಕೆ ವಿವಿಧ ಡೇಟಾಬೇಸ್ ಮ್ಯಾನೇಜ್‌ಮೆಂಟ್ ಸಿಸ್ಟಂಗಳ (ಡಿಬಿಎಂಎಸ್) ಅಗತ್ಯಕ್ಕೆ ತಕ್ಕಂತೆ ಈ ಭಾಷೆ ಬದಲಾಗುತ್ತ ಬಂದಿದೆ. ಒರೇಕಲ್, ಎಸ್‌ಕ್ಯೂಎಲ್ ಸರ್ವರ್ ಮುಂತಾದ ಬೇರೆಬೇರೆ ಡಿಬಿಎಂಎಸ್‌ಗಳಲ್ಲಿ ಬಳಕೆಯಾಗುವ ಎಸ್‌ಕ್ಯೂಎಲ್‌ನಲ್ಲಿ ಕೊಂಚ ವ್ಯತ್ಯಾಸಗಳಿದ್ದರೂ ಅದರ ಮೂಲ ಸ್ವರೂಪ ಮಾತ್ರ ಒಂದೇ.

SDLC

ಎಸ್‌ಡಿಎಲ್‌ಸಿ
Kannada Equivalent: (ರೂಪಿಸಬೇಕಿದೆ)
Short Description : ಸಿಸ್ಟಮ್ಸ್ ಡೆವೆಲಪ್‌ಮೆಂಟ್ ಲೈಫ್ ಸೈಕಲ್; ತಂತ್ರಾಂಶ ಅಭಿವರ್ಧನೆಯ ಪ್ರತಿಯೊಂದು ಹಂತದಲ್ಲೂ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳನ್ನು ವಿವರಿಸುವ ನಿಯಮಗಳ ಚೌಕಟ್ಟು
Long Description: ಹೊಸದಾಗಿ ತಂತ್ರಾಂಶವೊಂದನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಅನೇಕ ಹಂತಗಳಿರುತ್ತವೆ. ಇಂತಹ ಪ್ರತಿಯೊಂದು ಹಂತದಲ್ಲೂ ಕೈಗೊಳ್ಳಬೇಕಾದ ನಿರ್ದಿಷ್ಟ ಚಟುವಟಿಕೆಗಳನ್ನು ವಿವರಿಸುವ ನಿಯಮಗಳ ಚೌಕಟ್ಟನ್ನು ಸಿಸ್ಟಮ್ಸ್ ಡೆವೆಲಪ್‌ಮೆಂಟ್ ಲೈಫ್ ಸೈಕಲ್ (ತಂತ್ರಾಂಶ ವ್ಯವಸ್ಥೆಗಳ ಅಭಿವರ್ಧನೆಯ ಜೀವನಚಕ್ರ) ಎಂದು ಕರೆಯುತ್ತಾರೆ. ಎಸ್‌ಡಿಎಲ್‌ಸಿ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ. ಸಾಮಾನ್ಯ ಬಳಕೆಯಲ್ಲಿ ‘ಸಾಫ್ಟ್‌ವೇರ್ ಡೆವೆಲಪ್‌ಮೆಂಟ್ ಲೈಫ್ ಸೈಕಲ್’ ಎಂದು ಗುರುತಿಸುವುದೂ ಇದನ್ನೇ.
ಎಸ್‌ಡಿಎಲ್‌ಸಿಯನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ಅನುಷ್ಠಾನಗೊಳಿಸಲು ಸಂಸ್ಥೆಗಳು ಹಲವು ಕಾರ್ಯವಿಧಾನ ಮಾದರಿಗಳನ್ನು (ಪ್ರಾಸೆಸ್ ಮಾಡೆಲ್) ಬಳಸುತ್ತವೆ. ಮೂಲತಃ ಈ ಎಲ್ಲ ಮಾದರಿಗಳಲ್ಲೂ ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆಯಲ್ಲಿರುವ ಮೂಲ ಹೆಜ್ಜೆಗಳೇ (ರಿಕ್ವೈರ್‌ಮೆಂಟ್ಸ್ ಅನಾಲಿಸಿಸ್, ಡಿಸೈನ್, ಡೆವೆಲಪ್‌ಮೆಂಟ್, ಟೆಸ್ಟಿಂಗ್ ಇತ್ಯಾದಿ) ಬಳಕೆಯಾಗುತ್ತವಾದರೂ ಆ ಹೆಜ್ಜೆಗಳ ಅನುಷ್ಠಾನ ಮಾತ್ರ ಭಿನ್ನವಾಗಿರುತ್ತದೆ. ವಾಟರ್‌ಫಾಲ್ ಮಾಡೆಲ್, ಇನ್‌ಕ್ರಿಮೆಂಟಲ್ ಮಾಡೆಲ್, ಅಜೈಲ್ – ಇವು ಕಾರ್ಯವಿಧಾನ ಮಾದರಿಗೆ ಕೆಲ ಉದಾಹರಣೆಗಳು.
ಈ ಪೈಕಿ ವಾಟರ್‌ಫಾಲ್ ಮಾದರಿಯಲ್ಲಿ ತಂತ್ರಾಂಶ ಅಭಿವರ್ಧನೆಯ ಅಷ್ಟೂ ಕೆಲಸವನ್ನು ಒಟ್ಟಿಗೆ ಒಂದೇ ಕಂತಿನಲ್ಲಿ ಮುಗಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಇನ್‌ಕ್ರಿಮೆಂಟಲ್ ಹಾಗೂ ಅಜೈಲ್ ಮಾದರಿಗಳಲ್ಲಿ ಇಡೀ ಪ್ರಕ್ರಿಯೆಯನ್ನು ಹಲವು ಭಾಗಗಳಾಗಿ ವಿಭಜಿಸಿಕೊಂಡು ಅವನ್ನು ಒಂದಾದನಂತರ ಒಂದರಂತೆ ಪೂರ್ಣಗೊಳಿಸಲಾಗುತ್ತದೆ.

IRNSS

ಐಆರ್‌ಎನ್‌ಎಸ್‌ಎಸ್
Kannada Equivalent: (ರೂಪಿಸಬೇಕಿದೆ)
Short Description : ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ; ಜಿಪಿಎಸ್‌ಗೆ ಪರ್ಯಾಯವಾಗಿ ರೂಪುಗೊಂಡಿರುವ ಭಾರತೀಯ ವ್ಯವಸ್ಥೆ
Long Description: ಎಲ್ಲಿಗಾದರೂ ಹೊರಟಾಗ ಆಟೋ ಅಥವಾ ಟ್ಯಾಕ್ಸಿ ಕರೆಸಲು ಮೊಬೈಲ್ ಆಪ್ ಬಳಸುವುದು ನಗರವಾಸಿಗಳಿಗೆ ಈಗಾಗಲೇ ಚೆನ್ನಾಗಿ ಅಭ್ಯಾಸವಾಗಿರುವ ಸಂಗತಿ. ಹೀಗೆ ಟ್ಯಾಕ್ಸಿ ಬುಕ್ ಮಾಡಿದಾಗ ನಾವೆಲ್ಲಿದ್ದೇವೆ ಎಂದು ಟ್ಯಾಕ್ಸಿ ಚಾಲಕರಿಗೂ, ಅವರೆಲ್ಲಿದ್ದಾರೆ ಎಂದು ನಮಗೂ ಆಪ್‌ನಲ್ಲಿರುವ ಮ್ಯಾಪ್ ಮೂಲಕ ತಿಳಿಯುತ್ತದೆ; ಇದಕ್ಕಾಗಿ ಬಳಕೆಯಾಗುವ ವ್ಯವಸ್ಥೆಯೇ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ (ಜಿಪಿಎಸ್).
ಈ ವ್ಯವಸ್ಥೆಯ ಹಿಂದೆ ಉಪಗ್ರಹಗಳ ಒಂದು ಜಾಲವೇ ಇದೆ. ಮೊಬೈಲ್ ಫೋನಿನಲ್ಲೋ ಪ್ರತ್ಯೇಕ ಉಪಕರಣದಲ್ಲೋ ಜಿಪಿಎಸ್ ರಿಸೀವರ್ ಇರುವ ಯಾರು ಬೇಕಿದ್ದರೂ ಈ ಉಪಗ್ರಹಗಳಿಂದ ಸಂಕೇತ ಪಡೆದುಕೊಂಡು ತಮ್ಮ ಸ್ಥಾನವನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ.
ಆದರೆ ಜಿಪಿಎಸ್ ಸೌಲಭ್ಯ ಒದಗಿಸಲು ಕೆಲಸಮಾಡುತ್ತಿರುವ ಉಪಗ್ರಹಗಳೆಲ್ಲ ಅಮೆರಿಕಾ ಸರಕಾರದ ನಿಯಂತ್ರಣದಲ್ಲಿವೆ. ಹೀಗಾಗಿ ಜಿಪಿಎಸ್ ಬಳಕೆದಾರರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕಾದ ಮೇಲೆಯೇ ಅವಲಂಬಿಸಬೇಕಾದ್ದು ಅನಿವಾರ್ಯ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನೋಡಿದರೆ ಇಂತಹ ಅವಲಂಬನೆ ಒಳ್ಳೆಯದಲ್ಲವಲ್ಲ, ಹಾಗಾಗಿ ನಮ್ಮ ದೇಶ ಜಿಪಿಎಸ್‌ಗೊಂದು ಪರ್ಯಾಯವನ್ನು ರೂಪಿಸಿದೆ. ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ (ಐಆರ್‌ಎನ್‌ಎಸ್‌ಎಸ್) ಎಂಬ ಹೆಸರಿನ ಈ ವ್ಯವಸ್ಥೆಯಲ್ಲಿ ನಮ್ಮದೇ ಆದ ಏಳು ಉಪಗ್ರಹಗಳ ಜಾಲ ಬಳಕೆಯಾಗುತ್ತದೆ.
ಇದಕ್ಕೆ ನಾವಿಕ್ (ನ್ಯಾವಿಗೇಶನ್ ವಿಥ್ ಇಂಡಿಯನ್ ಕಾನ್ಸ್‌ಟೆಲೇಶನ್) ಎಂಬ ಹೆಸರೂ ಇದೆ. ಈ ವ್ಯವಸ್ಥೆ ಸಾಮಾನ್ಯ ಬಳಕೆದಾರರಿಗೆ ಸ್ಟಾಂಡರ್ಡ್ ಪೊಸಿಶನಿಂಗ್ ಸರ್ವಿಸ್ (ಎಸ್‌ಪಿಎಸ್) ಹಾಗೂ ಸೇನಾಪಡೆಗಳಂತಹ ವಿಶೇಷ ಬಳಕೆದಾರರಿಗೆ ರಿಸ್ಟ್ರಿಕ್ಟೆಡ್ ಸರ್ವಿಸ್ (ಆರ್‌ಎಸ್) ಎಂಬ ಎರಡು ಮಾರ್ಗದರ್ಶಕ ಸೇವೆಗಳನ್ನು ಒದಗಿಸಲಿದೆ.

IM

ಐಎಂ
Kannada Equivalent: (ರೂಪಿಸಬೇಕಿದೆ)
Short Description : ಇನ್ಸ್‌ಟಂಟ್ ಮೆಸೇಜ್; ನಿರ್ದಿಷ್ಟ ತಂತ್ರಾಂಶ ಅಥವಾ ಜಾಲತಾಣದ ಬಳಕೆದಾರರು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾದ ಸಂದೇಶ
Long Description: ಅಂತರಜಾಲದ ದೆಸೆಯಿಂದ ಸಂವಹನದ ಅನೇಕ ಸರಳ ಮಾರ್ಗಗಳು ನಮಗೆ ದೊರೆತಿವೆ. ಇಂತಹ ಮಾರ್ಗಗಳ ಪೈಕಿ ಇನ್ಸ್‌ಟಂಟ್ ಮೆಸೇಜ್ ಕೂಡ ಒಂದು. ಐಎಂ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ.
ನಿರ್ದಿಷ್ಟ ತಂತ್ರಾಂಶ ಅಥವಾ ಜಾಲತಾಣದ ಬಳಕೆದಾರರು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾದ ಸಂದೇಶಗಳನ್ನೇ ಐಎಂ ಎಂದು ಗುರುತಿಸಲಾಗುತ್ತದೆ. ಇಂತಹ ಸೇವೆಯೊಂದನ್ನು ಬಳಸುತ್ತಿದ್ದಾಗ (ಲಾಗಿನ್ ಆಗಿದ್ದಾಗ) ಸಂದೇಶಗಳನ್ನು ಥಟ್ಟನೆ ಕಳುಹಿಸುವುದು ಹಾಗೂ ಬಂದ ಸಂದೇಶಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡುವುದು ಸಾಧ್ಯ. ಇವನ್ನು ಇನ್ಸ್‌ಟಂಟ್ (ತತ್‌ಕ್ಷಣದ) ಸಂದೇಶಗಳೆಂದು ಕರೆಯುವುದಕ್ಕೆ ಇದೇ ಕಾರಣ. ಐಎಂ ತಂತ್ರಾಂಶದಲ್ಲಿ ಸಂದೇಶಗಳು – ಪ್ರತಿಕ್ರಿಯೆಗಳು ಒಂದರ ಕೆಳಗೊಂದರಂತೆ ಕಾಣಿಸಿಕೊಳ್ಳುವುದರಿಂದ ಅವುಗಳ ಬಳಕೆಯೂ ಬಹಳ ಸುಲಭ.
ಜಿಮೇಲ್, ಫೇಸ್‌ಬುಕ್ ಸೇರಿದಂತೆ ಹಲವಾರು ತಾಣಗಳು ಐಎಂ ಸೇವೆಗಳನ್ನು ಒದಗಿಸುತ್ತವೆ. ಇಂತಹ ಯಾವುದೇ ಸೇವೆಯನ್ನು ಏಕಕಾಲದಲ್ಲಿ ಬಳಸುತ್ತಿರುವ ಯಾವುದೇ ಗ್ರಾಹಕರು ಐಎಂಗಳನ್ನು ಕಳಿಸುವುದು-ಪಡೆದುಕೊಳ್ಳುವುದು ಸಾಧ್ಯ.
ಅನೇಕ ಐಎಂ ಸೇವೆಗಳಲ್ಲಿ ಪಠ್ಯದ ಜೊತೆಗೆ ಚಿತ್ರ, ಧ್ವನಿ ಹಾಗೂ ವೀಡಿಯೋ ರೂಪದ ಸಂದೇಶಗಳನ್ನೂ ವಿನಿಮಯಮಾಡಿಕೊಳ್ಳಬಹುದು. ಐಎಂ ಮಾತುಕತೆಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಭಾಗವಹಿಸುವುದೂ ಸಾಧ್ಯ. ಇನ್ಸ್‌ಟಂಟ್ ಮೆಸೇಜ್‌ಗಳನ್ನು ಪ್ರೈವೇಟ್ ಮೆಸೇಜ್ (ಪಿಎಂ) ಹಾಗೂ ಡೈರೆಕ್ಟ್ ಮೆಸೇಜ್ (ಡಿಎಂ) ಎಂದೂ ಕರೆಯುತ್ತಾರೆ.

IMPS

ಐಎಂಪಿಎಸ್
Kannada Equivalent: (ರೂಪಿಸಬೇಕಿದೆ)
Short Description : ಇಮ್ಮೀಡಿಯೆಟ್ ಪೇಮೆಂಟ್ ಸರ್ವಿಸ್, ಎರಡು ಬ್ಯಾಂಕ್ ಖಾತೆಗಳ ನಡುವೆ ಯಾವುದೇ ಸಮಯದಲ್ಲಾದರೂ ಥಟ್ಟನೆ ಹಣ ವರ್ಗಾವಣೆ ಸಾಧ್ಯವಾಗಿಸುವ ವ್ಯವಸ್ಥೆ.
Long Description: ಯಾರಿಗಾದರೂ ಹಣ ಪಾವತಿಸಬೇಕಾದಾಗ ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ನೀಡುವ ಅಭ್ಯಾಸ ಬಹಳ ಹಳೆಯದು. ಈ ವಿಧಾನದಲ್ಲಿ ಹಣ ಅವರ ಕೈಸೇರಲು ಬೇಕಾದ ಸಮಯವೂ ಹೆಚ್ಚು. ಇದರ ಬದಲು ಹಣವನ್ನೇ ಕೊಂಡೊಯ್ಯುತ್ತೇವೆಂದರೆ ಸುರಕ್ಷತೆಯ ತಲೆನೋವು ನಮ್ಮನ್ನು ಕಾಡುತ್ತದೆ.
ಈ ಸಮಸ್ಯೆಗೆ ಮೊದಲ ಪರಿಹಾರ ‘ಎನ್‌ಇಎಫ್‌ಟಿ’ (ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್) ವ್ಯವಸ್ಥೆ. ಈ ವ್ಯವಸ್ಥೆ ಮೂಲಕ ದೇಶದ ಯಾವುದೇ ಬ್ಯಾಂಕ್ ಗ್ರಾಹಕ ಯಾವುದೇ ಬ್ಯಾಂಕಿನ ಮತ್ತೊಬ್ಬ ಗ್ರಾಹಕನ ಖಾತೆಗೆ ಹಣ ವರ್ಗಾಯಿಸುವುದು ಸಾಧ್ಯ. ಆರ್‌ಟಿಜಿಎಸ್ (ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್) ಎನ್ನುವುದೂ ಇಂಥದ್ದೇ ಇನ್ನೊಂದು ವ್ಯವಸ್ಥೆ. ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಹಣ ವರ್ಗಾಯಿಸಲು ಇದು ಬಳಕೆಯಾಗುತ್ತದೆ.
ಆದರೆ ಎನ್‌ಇಎಫ್‌ಟಿ-ಆರ್‌ಟಿಜಿಎಸ್‌ಗಳ ಮೂಲಕ ಹಣ ವರ್ಗಾವಣೆಯಾಗುವುದು ಬ್ಯಾಂಕ್ ಕೆಲಸದ ದಿನಗಳಲ್ಲಿ, ಅದೂ ನಿರ್ದಿಷ್ಟ ಸಮಯದಲ್ಲಿ ಮಾತ್ರ. ಇಂತಹ ಯಾವುದೇ ನಿರ್ಬಂಧವಿಲ್ಲದೆ ಯಾವಾಗ ಬೇಕಾದರೂ ಥಟ್ಟನೆ ಹಣ ವರ್ಗಾಯಿಸಲು ಇರುವ ವ್ಯವಸ್ಥೆಯೇ ಐಎಂಪಿಎಸ್ (ಇಮ್ಮೀಡಿಯೆಟ್ ಪೇಮೆಂಟ್ ಸರ್ವಿಸ್). ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಸಂಸ್ಥೆ ರೂಪಿಸಿರುವ ಈ ವ್ಯವಸ್ಥೆ ಬಳಸಿ ನೆಟ್‌ಬ್ಯಾಂಕಿಂಗ್ ಮೂಲಕವಷ್ಟೇ ಅಲ್ಲ, ಮೊಬೈಲ್ ಮೂಲಕವೂ ಹಣವನ್ನು ವರ್ಗಾಯಿಸುವುದು ಸಾಧ್ಯ.
ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಎನ್ನುವುದು ಇದೇ ಐಎಂಪಿಎಸ್‌ನ ಇನ್ನಷ್ಟು ಸುಧಾರಿತ-ಸರಳ ರೂಪ.

ISP

ಐಎಸ್‌ಪಿ
Kannada Equivalent: (ರೂಪಿಸಬೇಕಿದೆ)
Short Description : ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್; ಅಂತರಜಾಲ ಸೇವೆಗಳನ್ನು ಒದಗಿಸುವ ಸಂಸ್ಥೆ
Long Description: ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕಗಳೆಲ್ಲ ಇದ್ದಹಾಗೆ ಅಂತರಜಾಲ ಸಂಪರ್ಕವೂ ಇದೀಗ ಅನಿವಾರ್ಯವಾಗಿಬಿಟ್ಟಿದೆ. ಅಂತರಜಾಲ ಸಂಪರ್ಕ ಒದಗಿಸುವ ಸಂಸ್ಥೆಗಳು ಈಗ ಪ್ರತಿ ಊರಿನ ಪ್ರತಿ ಬಡಾವಣೆಯಲ್ಲೂ ಕಾಣಸಿಗುತ್ತವೆ. ಇಂತಹ ಸಂಸ್ಥೆಗಳನ್ನು ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್ ಅಥವಾ ಐಎಸ್‌ಪಿಗಳೆಂದು ಕರೆಯುತ್ತಾರೆ.
ಅಂತರಜಾಲ ಸಂಪರ್ಕಕ್ಕೆಂದು ನಾವು ಈ ಸಂಸ್ಥೆಗಳಿಗೆ ಹಣ ನೀಡುತ್ತೇವಲ್ಲ, ಆ ಸಂಸ್ಥೆಗಳ ಬಳಿ ನಿರ್ದಿಷ್ಟ ಪ್ರದೇಶದಲ್ಲಿ (ಒಂದು ಬಡಾವಣೆ, ನಗರ, ರಾಜ್ಯ ಅಥವಾ ದೇಶ) ಅಂತರಜಾಲ ಸಂಪರ್ಕ ಒದಗಿಸುವಷ್ಟು ಸೌಕರ್ಯ ಮಾತ್ರ ಇರುತ್ತದೆ.
ಆದರೆ ಅಂತರಜಾಲ ಇಡೀ ಪ್ರಪಂಚವನ್ನು ಆವರಿಸಿಕೊಂಡಿರುತ್ತದೆ. ಹಾಗಾಗಿ ಐಎಸ್‌ಪಿಗಳು ನಮ್ಮ ವ್ಯಾಪ್ತಿ ಇಷ್ಟೇ ಎಂದು ಹೇಳುವಂತಿಲ್ಲ. ಈ ಸಮಸ್ಯೆಯನ್ನು ತಪ್ಪಿಸಲೆಂದೇ ಸಣ್ಣ ಐಎಸ್‌ಪಿಗಳು ತಮಗಿಂತ ದೊಡ್ಡ ಐಎಸ್‌ಪಿಗಳೊಡನೆ ಸಂಪರ್ಕ ಹೊಂದಿರುತ್ತವೆ. ಆ ದೊಡ್ಡ ಐಎಸ್‌ಪಿಗಳಿಗೆ ಇನ್ನೂ ದೊಡ್ಡ ಐಎಸ್‌ಪಿಗಳ ಸಂಪರ್ಕ ಇರುತ್ತದೆ.
ಐಎಸ್‌ಪಿಗಳು ಪರಸ್ಪರ ಸಂಪರ್ಕಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವಲ್ಲ, ಸಂಪರ್ಕದ ಆ ಬಿಂದುವನ್ನು ನೆಟ್‌ವರ್ಕ್ ಆಕ್ಸೆಸ್ ಪಾಯಿಂಟ್ (ಎನ್‌ಎಪಿ) ಎಂದು ಕರೆಯುತ್ತಾರೆ. ದೇಶ-ದೇಶಗಳ, ಖಂಡ-ಖಂಡಗಳ ನಡುವಿನ ಸಂಪರ್ಕ ವ್ಯವಸ್ಥೆ ‘ಇಂಟರ್‌ನೆಟ್ ಬ್ಯಾಕ್‌ಬೋನ್’ ಎಂದು ಕರೆಸಿಕೊಳ್ಳುತ್ತದೆ. ಸಮುದ್ರದಾಳದ ‘ಸಬ್‌ಮರೀನ್ ಕಮ್ಯುನಿಕೇಶನ್ಸ್ ಕೇಬಲ್’ಗಳು ಈ ವ್ಯವಸ್ಥೆಯ ಪ್ರಮುಖ ಅಂಗ.

Icon

ಐಕನ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ಕಡತ, ತಂತ್ರಾಂಶ ಅಥವಾ ಅದರೊಳಗಿನ ನಿರ್ದಿಷ್ಟ ಚಟುವಟಿಕೆಗಳನ್ನು ಪ್ರತಿನಿಧಿಸುವ ಚಿತ್ರಾತ್ಮಕ ಸಂಕೇತ
Long Description: ಕಂಪ್ಯೂಟರುಗಳು ವಿಕಾಸವಾಗುತ್ತಿದ್ದಾಗ ಅವುಗಳ ಕೆಲಸವೆಲ್ಲ ಪಠ್ಯದ ಮೂಲಕವೇ ನಡೆಯುತ್ತಿತ್ತು. ಅಂದರೆ, ಅವುಗಳಿಂದ ಏನು ಕೆಲಸಮಾಡಿಸಿಕೊಳ್ಳಬೇಕಾದರೂ ನಿರ್ದಿಷ್ಟ ಆದೇಶಗಳನ್ನು ಟೈಪ್ ಮಾಡುವುದು ಅನಿವಾರ್ಯವಾಗಿತ್ತು.
‘ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್’ ಪರಿಕಲ್ಪನೆಯ ಪರಿಚಯವಾದದ್ದು ಹಲವು ದಶಕಗಳ ನಂತರ. ಪ್ರತಿಯೊಂದಕ್ಕೂ ಆದೇಶಗಳನ್ನು ಟೈಪಿಸುವ ಬದಲು ಚಿತ್ರಗಳ – ಸಂಕೇತಗಳ ಮೇಲೆ ಕ್ಲಿಕ್ ಮಾಡಿ ಕೆಲಸ ಪೂರೈಸಿಕೊಳ್ಳುವ ಸಾಧ್ಯತೆಯನ್ನು ತೋರಿಸಿಕೊಟ್ಟದ್ದು ಈ ಪರಿಕಲ್ಪನೆಯ ಹೆಚ್ಚುಗಾರಿಕೆ.
ಈ ಪರಿಕಲ್ಪನೆಯ ಪ್ರಮುಖ ಅಂಗವೇ ಚಿತ್ರಾತ್ಮಕ ಸಂಕೇತ, ಅಂದರೆ ‘ಐಕನ್’. ಯಾವುದೇ ತಂತ್ರಾಂಶ ಅಥವಾ ಕಡತವನ್ನು ಪುಟಾಣಿ ಚಿತ್ರದ ಮೂಲಕ ಪ್ರತಿನಿಧಿಸುವುದು ಹಾಗೂ ಚಿತ್ರದ ಮೇಲೆ ಕ್ಲಿಕ್ಕಿಸುವ ಮೂಲಕ ಅದನ್ನು ತೆರೆಯಲು ಅನುವುಮಾಡಿಕೊಡುವುದು ಐಕನ್‌ಗಳ ಉದ್ದೇಶ. ಕಂಪ್ಯೂಟರಿನಲ್ಲಷ್ಟೇ ಅಲ್ಲ, ಐಕನ್‌ಗಳು ಮೊಬೈಲ್ – ಟ್ಯಾಬ್ಲೆಟ್ – ಎಟಿಎಂ ಸೇರಿದಂತೆ ಬಳಕೆದಾರರೊಡನೆ ವ್ಯವಹರಿಸುವ ಬಹುತೇಕ ಎಲ್ಲ ಯಾಂತ್ರಿಕ ವ್ಯವಸ್ಥೆಗಳಲ್ಲೂ ಕಾಣಸಿಗುತ್ತವೆ. ತಂತ್ರಾಂಶಗಳನ್ನು ಪ್ರತಿನಿಧಿಸಲಷ್ಟೇ ಅಲ್ಲ, ತಂತ್ರಾಂಶಗಳ ಒಳಗೆ ನಿರ್ದಿಷ್ಟ ಚಟುವಟಿಕೆಗಳನ್ನು ಸೂಚಿಸಲಿಕ್ಕೂ ಐಕನ್‌ಗಳ ಬಳಕೆ ಸಾಮಾನ್ಯ.
ವಿವಿಧ ಉದ್ದೇಶಗಳಿಗಾಗಿ ವಿವಿಧ ರೀತಿಯ ಐಕನ್‌ಗಳು ಬಳಕೆಯಾಗುತ್ತವೆ. ನಿರ್ದಿಷ್ಟ ತಂತ್ರಾಂಶಗಳಿಗೆ ಸೀಮಿತವಾಗಿರುವ ವಿನ್ಯಾಸಗಳ ಜೊತೆಗೆ ಹಲವಾರು ತಂತ್ರಾಂಶಗಳಲ್ಲಿ ಮಾನಕದಂತೆ ಬಳಕೆಯಾಗುವ ಐಕನ್‌ಗಳೂ ಇವೆ – ಕಟ್ ಮಾಡುವ ಕತ್ತರಿ, ಸೇವ್ ಮಾಡುವ ಫ್ಲಾಪಿ ಡಿಸ್ಕ್, ಹೊಸ ಕಡತವನ್ನು ಪ್ರತಿನಿಧಿಸುವ ಬಿಳಿಯ ಹಾಳೆಗಳಂತಹವು ಇದಕ್ಕೆ ಉದಾಹರಣೆಗಳು.

IT

ಐಟಿ
Kannada Equivalent: ಮಾಹಿತಿ ತಂತ್ರಜ್ಞಾನ
Short Description : ಇನ್‌ಫರ್ಮೇಶನ್ ಟೆಕ್ನಾಲಜಿ ಎಂಬ ಹೆಸರಿನ ಹ್ರಸ್ವರೂಪ
Long Description: ಇನ್‌ಫರ್ಮೇಶನ್ ಟೆಕ್ನಾಲಜಿ, ಅರ್ಥಾತ್ ಮಾಹಿತಿ ತಂತ್ರಜ್ಞಾನ ಎನ್ನುವುದು ನಮಗೆಲ್ಲ ಚಿರಪರಿಚಿತ ಹೆಸರು. ದತ್ತಾಂಶದ (ಡೇಟಾ) ಸೃಷ್ಟಿ, ಸಂಸ್ಕರಣೆ, ಶೇಖರಣೆ ಹಾಗೂ ವಿನಿಮಯದಂತಹ ಪ್ರಕ್ರಿಯೆಗಳಲ್ಲಿ ಕಂಪ್ಯೂಟರ್ ಹಾಗೂ ಅದಕ್ಕೆ ಸಂಬಂಧಿಸಿದ ಸಾಧನ-ವ್ಯವಸ್ಥೆಗಳ ಬಳಕೆಯನ್ನು ಈ ಹೆಸರು ಪ್ರತಿನಿಧಿಸುತ್ತದೆ. ಐಟಿ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ.
ಸಂವಹನ ಮಾಧ್ಯಮಗಳನ್ನು ಪೂರಕವಾಗಿ ಬಳಸುವುದರಿಂದ ಈ ಕ್ಷೇತ್ರ ಇನ್ನೂ ಹೆಚ್ಚು ಪರಿಣಾಮಕಾರಿಯಾಗುವುದು ಸಾಧ್ಯ. ಈ ಉದ್ದೇಶದಿಂದ ರೂಪುಗೊಂಡಿರುವುದೇ ಐಸಿಟಿ ಪರಿಕಲ್ಪನೆ. ಐಸಿಟಿ ಎನ್ನುವುದು ಇನ್‌ಫರ್ಮೇಶನ್ ಆಂಡ್ ಕಮ್ಯೂನಿಕೇಶನ್ ಟೆಕ್ನಾಲಜಿ, ಅರ್ಥಾತ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಎಂಬ ಹೆಸರಿನ ಹ್ರಸ್ವರೂಪ.

ಐಟಿಯಲ್ಲಿ ಬಳಕೆಯಾಗುವ ಕಂಪ್ಯೂಟರ್ ಮತ್ತಿತರ ಸಾಧನಗಳ ಜೊತೆಗೆ ಐಸಿಟಿ ಪರಿಕಲ್ಪನೆಯಲ್ಲಿ ದೂರವಾಣಿ, ಅಂತರಜಾಲ, ಉಪಗ್ರಹ ತಂತ್ರಜ್ಞಾನ ಮುಂತಾದ ಸಂಗತಿಗಳೂ ಸೇರುತ್ತವೆ. ಇನ್ಸ್‌ಟೆಂಟ್ ಮೆಸೇಜಿಂಗ್, ವೀಡಿಯೋ ಕಾನ್ಫರೆನ್ಸಿಂಗ್, ಸೋಶಿಯಲ್ ನೆಟ್‌ವರ್ಕಿಂಗ್, ಆನ್‌ಲೈನ್ ಗೇಮಿಂಗ್‌ಗಳೆಲ್ಲ ಸಾಧ್ಯವಾಗುವುದು ಇವೆಲ್ಲ ಒಟ್ಟಿಗೆ ಸೇರಿದಾಗಲೇ.
ಇಷ್ಟೆಲ್ಲ ಸವಲತ್ತುಗಳನ್ನು ಒಟ್ಟಾಗಿ ಬಳಸುವ ಮೂಲಕ ಕ್ರೀಡೆಯಿಂದ ಮನರಂಜನೆಯವರೆಗೆ, ಶಿಕ್ಷಣದಿಂದ ಸಂಶೋಧನೆಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಸಾಧ್ಯತೆಗಳನ್ನು ರೂಪಿಸಿಕೊಳ್ಳಬಹುದು ಎನ್ನುವುದು ಐಸಿಟಿಯ ಆಶಯ.

IDE

ಐಡಿಇ
Kannada Equivalent: (ರೂಪಿಸಬೇಕಿದೆ)
Short Description : ಇಂಟಿಗ್ರೇಟೆಡ್ ಡೆವೆಲಪ್‌ಮೆಂಟ್ ಎನ್‌ವಿರಾನ್‌ಮೆಂಟ್; ತಂತ್ರಾಂಶ ಅಭಿವರ್ಧನೆಯಲ್ಲಿ ಬೇಕಾಗುವ ಎಲ್ಲ ತಂತ್ರಾಂಶಗಳ ಸೌಲಭ್ಯಗಳನ್ನೂ ಒಳಗೊಂಡ ವ್ಯವಸ್ಥೆ
Long Description: ತಂತ್ರಾಂಶ ಅಭಿವರ್ಧನೆಯ ಪ್ರಕ್ರಿಯೆ ಬಹಳ ಸಂಕೀರ್ಣವಾದದ್ದು. ಈ ಕೆಲಸದಲ್ಲಿ ತೊಡಗಿಕೊಂಡಿರುವ ತಂತ್ರಜ್ಞರಿಗೆ ಹಲವಾರು ತಂತ್ರಾಂಶಗಳು ನೆರವಾಗುತ್ತವೆ. ಆದೇಶಗಳನ್ನು ಟೈಪ್ ಮಾಡಲು ಬೇಕಾದ ಎಡಿಟರ್, ತಪ್ಪುಗಳನ್ನು ಗುರುತಿಸುವ ಡೀಬಗರ್, ಕಾರ್ಯಗತಗೊಳಿಸಲು ನೆರವಾಗುವ ಕಂಪೈಲರ್ – ಹೀಗೆ ಇಲ್ಲಿ ಅನೇಕ ತಂತ್ರಾಂಶಗಳು ಬಳಕೆಯಾಗುತ್ತವೆ.
ಇವಿಷ್ಟೂ ತಂತ್ರಾಂಶಗಳನ್ನು ಪ್ರತ್ಯೇಕವಾಗಿ ಬಳಸುವುದು ಕಿರಿಕಿರಿಯ ಸಂಗತಿ ಎನ್ನಿಸಬಹುದಲ್ಲ, ಅದಕ್ಕೆ ಇಂತಹ ಎಲ್ಲ ಪೂರಕ ತಂತ್ರಾಂಶಗಳನ್ನೂ ಒಟ್ಟಾಗಿ ನೀಡುವ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಲಾಗಿದೆ. ಈ ವ್ಯವಸ್ಥೆಯ ಹೆಸರೇ ಐಡಿಇ, ಅರ್ಥಾತ್ ‘ಇಂಟಿಗ್ರೇಟೆಡ್ ಡೆವೆಲಪ್‌ಮೆಂಟ್ ಎನ್‌ವಿರಾನ್‌ಮೆಂಟ್’. ಮೇಲೆ ಹೇಳಿದ ಎಲ್ಲ ತಂತ್ರಾಂಶಗಳ ಸೌಲಭ್ಯಗಳನ್ನೂ ಒಳಗೊಂಡ ವಿಶಿಷ್ಟ ತಂತ್ರಾಂಶ ಇದು. ಕೆಲ ಐಡಿಇಗಳಲ್ಲಿ ತಂತ್ರಾಂಶದ ವಿವಿಧ ಆವೃತ್ತಿಗಳನ್ನು ನಿರ್ವಹಿಸುವ (ವರ್ಶನ್ ಕಂಟ್ರೋಲ್) ಸೌಲಭ್ಯವೂ ಇರುತ್ತದೆ. ತಂತ್ರಾಂಶ ಅಭಿವರ್ಧನೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನೂ ಒಂದೇ ತಂತ್ರಾಂಶ ಬಳಸಿ ನಡೆಸುವುದು ಸಾಧ್ಯವಾಗುವುದರಿಂದ ಐಡಿಇ ಬಳಕೆಯಿಂದ ಈ ಪ್ರಕ್ರಿಯೆಯ ಸಂಕೀರ್ಣತೆ ಕೊಂಚ ಕಡಿಮೆಯಾಗುತ್ತದೆ.
ಅಂದಹಾಗೆ ಐಡಿಇ ಎಂಬ ಹೆಸರಿನ ಬಳಕೆ ಯಂತ್ರಾಂಶ ಕ್ಷೇತ್ರದಲ್ಲೂ ಇತ್ತು. ಹಾರ್ಡ್ ಡ್ರೈವ್‌ಗಳ ನಿಯಂತ್ರಕವನ್ನು (ಕಂಟ್ರೋಲರ್) ಡ್ರೈವ್‌ನೊಳಗೇ ಸಂಯೋಜಿಸಲಾಗಿದೆ ಎಂದು ಸೂಚಿಸುತ್ತಿದ್ದ ಈ ಹೆಸರಿನ ಪೂರ್ಣರೂಪ ‘ಇಂಟಿಗ್ರೇಟೆಡ್ ಡ್ರೈವ್ ಇಲೆಕ್ಟ್ರಾನಿಕ್ಸ್’ ಎಂದು. ಈ ತಂತ್ರಜ್ಞಾನ ಬಳಸುವ ಹಾರ್ಡ್ ಡ್ರೈವ್‌ಗಳು ಈಗ ಚಾಲ್ತಿಯಲ್ಲಿಲ್ಲ.

IDN

ಐಡಿಎನ್
Kannada Equivalent: (ರೂಪಿಸಬೇಕಿದೆ)
Short Description : ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್, ಜಾಲತಾಣದ ವಿಳಾಸಗಳನ್ನು ಇಂಗ್ಲಿಷ್ ಹೊರತಾದ ಲಿಪಿಗಳಲ್ಲೂ ರೂಪಿಸಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆ.
Long Description: ಅಂತರಜಾಲ ಬಳಸುವವರಿಗೆಲ್ಲ ಜಾಲತಾಣಗಳು (ವೆಬ್‌ಸೈಟ್) ಗೊತ್ತು. ನಿರ್ದಿಷ್ಟ ಜಾಲತಾಣಗಳನ್ನು ಗುರುತಿಸಲು ಬಳಸುವ ವಿಳಾಸವಿದೆಯಲ್ಲ – ವಿಜಯವಾಣಿ ಡಾಟ್ ನೆಟ್, ಇಜ್ಞಾನ ಡಾಟ್ ಕಾಮ್ ಇತ್ಯಾದಿ – ಅದನ್ನು ಡೊಮೈನ್ ನೇಮ್ ಎಂದು ಕರೆಯುತ್ತಾರೆ (http://www.ejnana.com/2017/01/cellphone.html ಎನ್ನುವಂತಹ ರೂಪದ ಪೂರ್ಣ ವಿಳಾಸಕ್ಕೆ ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‌ಎಲ್ ಎಂದು ಹೆಸರು; ಡೊಮೈನ್ ನೇಮ್ ಎನ್ನುವುದು ಯುಆರ್‌ಎಲ್‌ನ ಒಂದು ಭಾಗ).
ಜಾಲತಾಣದಲ್ಲಿರುವ ಮಾಹಿತಿ ಯಾವ ಭಾಷೆಯದೇ ಆದರೂ ಅದರ ವಿಳಾಸ ಮಾತ್ರ ಇಂಗ್ಲಿಷಿನಲ್ಲೇ ಇರುವುದನ್ನು ನಾವು ನೋಡುತ್ತೇವಲ್ಲ, ಈ ಪರಿಸ್ಥಿತಿ ಇದೀಗ ಬದಲಾಗುತ್ತಿದೆ. ಜಾಲತಾಣದಲ್ಲಿರುವ ಮಾಹಿತಿಯಂತೆ ಅದರ ವಿಳಾಸದಲ್ಲೂ ನಮ್ಮ ಆಯ್ಕೆಯ ಭಾಷೆಯನ್ನು ಬಳಸಲು ಅನುವುಮಾಡಿಕೊಡುವುದು ‘ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್’ಗಳ (ಐಡಿಎನ್) ವೈಶಿಷ್ಟ್ಯ.
ಜಾಲತಾಣದ ಹೆಸರು ಸ್ಥಳೀಯ ಲಿಪಿಯಲ್ಲಿರುವುದಷ್ಟೇ ಅಲ್ಲ; ಡಾಟ್ ಕಾಮ್, ಡಾಟ್ ನೆಟ್‌ಗಳ ಜಾಗದಲ್ಲಿ ಜಾಲತಾಣದ ವಿಶೇಷಣವನ್ನು (ಟಾಪ್‌ಲೆವೆಲ್ ಡೊಮೈನ್ ಅಥವಾ ಟಿಎಲ್‌ಡಿ) ಕೂಡ ಅದೇ ಲಿಪಿಯಲ್ಲಿ ‘ಡಾಟ್ ಭಾರತ’ ಎಂದು ಬರೆಯಬಹುದು.

IP Address

ಐಪಿ ಅಡ್ರೆಸ್
Kannada Equivalent: (ರೂಪಿಸಬೇಕಿದೆ)
Short Description : ಅಂತರಜಾಲದ ಸಂಪರ್ಕದಲ್ಲಿರುವ ಪ್ರತಿಯೊಂದು ಸಾಧನವನ್ನೂ ಪ್ರತ್ಯೇಕವಾಗಿ ಗುರುತಿಸಲು ಬಳಕೆಯಾಗುವ ವಿಳಾಸ
Long Description: ಅಂತರಜಾಲದ ವ್ಯಾಪ್ತಿ ವಿಸ್ತರಿಸುತ್ತ ಹೋದಂತೆ ಹೆಚ್ಚುಹೆಚ್ಚು ಸಾಧನಗಳು ಅದರ ಸಂಪರ್ಕಕ್ಕೆ ಬರುತ್ತಿವೆ. ಹೀಗೆ ಅಂತರಜಾಲದ ಸಂಪರ್ಕದಲ್ಲಿರುವ ಪ್ರತಿಯೊಂದು ಸಾಧನವನ್ನೂ ಪ್ರತ್ಯೇಕವಾಗಿ ಗುರುತಿಸಲು ಬಳಕೆಯಾಗುವ ವಿಳಾಸವನ್ನು ಐಪಿ ಅಡ್ರೆಸ್ ಎಂದು ಕರೆಯುತ್ತಾರೆ. ಈ ಹೆಸರಿನಲ್ಲಿರುವ ‘ಐಪಿ’, ಇಂಟರ್‌ನೆಟ್ ಪ್ರೋಟೊಕಾಲ್ ಎನ್ನುವುದರ ಹ್ರಸ್ವರೂಪ.
ಅಂತರಜಾಲದಲ್ಲಿ ವಿವಿಧ ಬಗೆಯ ಸಾಧನಗಳ ನಡುವೆ ವಿನಿಮಯವಾಗುವ ಮಾಹಿತಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ ಎಂದು ಗುರುತಿಸಲು ಈ ವಿಳಾಸ ಬಳಕೆಯಾಗುತ್ತದೆ. ಬರೆದ ಪತ್ರವನ್ನು ಅಂಚೆಗೆ ಹಾಕುವ ಮೊದಲು ಲಕೋಟೆಯ ಮೇಲೆ ಅದು ತಲುಪಬೇಕಾದ ವಿಳಾಸ ಹಾಗೂ ಅದನ್ನು ಕಳುಹಿಸುತ್ತಿರುವವರ ವಿಳಾಸ ಬರೆಯುತ್ತೇವಲ್ಲ, ಇದೂ ಹಾಗೆಯೇ.
ನೀವು ಗೂಗಲ್ ಸರ್ಚ್ ಮಾಡಲು ಹೊರಟಿದ್ದೀರಿ ಎಂದುಕೊಳ್ಳೋಣ. ನೀವು ಹೋಗಬೇಕಾದ್ದು ಗೂಗಲ್‌ಗೆ ಎಂದು ಕಂಪ್ಯೂಟರಿಗೆ ಗೊತ್ತಾಗುವುದು ಅದರ ವಿಳಾಸ, ಅಂದರೆ ಯುಆರ್‌ಎಲ್‌ನಿಂದ. ಪ್ರತಿ ಯುಆರ್‌ಎಲ್ ಹಿಂದೆಯೂ ಒಂದು ಐಪಿ ವಿಳಾಸ ಇರುತ್ತದೆ. ಹುಡುಕಾಟದ ಫಲಿತಾಂಶವನ್ನು ಕಳುಹಿಸಬೇಕಾದ್ದು ನಿಮಗೆ ಎಂದು ಗೂಗಲ್‌ಗೆ ಗೊತ್ತಾಗುವುದೂ ಅಷ್ಟೆ, ನಿಮ್ಮ ಕಂಪ್ಯೂಟರಿನ ಐಪಿ ವಿಳಾಸದಿಂದ!

IFrame

ಐಫ್ರೇಮ್
Kannada Equivalent: (ರೂಪಿಸಬೇಕಿದೆ)
Short Description : ಇನ್‌ಲೈನ್ ಫ್ರೇಮ್; ಬಾಹ್ಯ ಜಾಲತಾಣದ ಪುಟವನ್ನು ನಮ್ಮ ಜಾಲತಾಣದಲ್ಲಿ ಸೇರಿಸಿಕೊಳ್ಳುವುದನ್ನು ಸಾಧ್ಯವಾಗಿಸುವ ಸೌಲಭ್ಯ
Long Description: ಯೂಟ್ಯೂಬ್ ವೀಡಿಯೋಗಳನ್ನು, ಫೇಸ್‌ಬುಕ್-ಟ್ವಿಟರ್ ಪೋಸ್ಟುಗಳನ್ನು ಬೇರೆಬೇರೆ ಜಾಲತಾಣ-ಪುಟಗಳಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಇಂತಹ ಬಹಳಷ್ಟು ಉದಾಹರಣೆಗಳಲ್ಲಿ ಮಾಹಿತಿಯ ಮೂಲ ಆಕರವನ್ನು (ಉದಾ: ಯೂಟ್ಯೂಬ್ ತಾಣದಲ್ಲಿರುವ ವೀಡಿಯೋ) ನಮ್ಮ ಪುಟದೊಳಗಿನಿಂದ ತೆರೆಯುವ ಮೂಲಕ ಅದು ನಮ್ಮ ಪುಟದ್ದೇ ಭಾಗ ಇರಬೇಕು ಎನ್ನುವಂತಹ ಭಾವನೆಯನ್ನು ಮೂಡಿಸಲಾಗುತ್ತದೆ.
ಇದನ್ನು ಸಾಧ್ಯವಾಗಿಸುವ ಪರಿಕಲ್ಪನೆಯ ಹೆಸರೇ ಇನ್‌ಲೈನ್ ಫ್ರೇಮ್, ಅರ್ಥಾತ್ ‘ಐಫ್ರೇಮ್’. ಜಾಲತಾಣಗಳನ್ನು ರಚಿಸಲು ಎಚ್‌ಟಿಎಂಎಲ್ ಭಾಷೆ ಬಳಕೆಯಾಗುತ್ತದಲ್ಲ, ಅದರಲ್ಲಿ ಲಭ್ಯವಿರುವ ಸೌಲಭ್ಯ ಇದು. ಇದನ್ನು ಬಳಸುವ ಮೂಲಕ ಬಾಹ್ಯ ಜಾಲತಾಣದ ಪುಟವನ್ನು ನಮ್ಮ ಜಾಲತಾಣದಲ್ಲಿ ಸೇರಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಫೇಸ್‌ಬುಕ್, ಟ್ವಿಟರ್‌ನಂತಹ ತಾಣಗಳಲ್ಲಿನ ಮಾಹಿತಿಯನ್ನು ಹಂಚಿಕೊಳ್ಳುವುದರ ಜೊತೆಗೆ ಜಾಹೀರಾತುಗಳನ್ನು ಪ್ರದರ್ಶಿಸಲೂ ಐಫ್ರೇಮ್ ಸೌಲಭ್ಯ ವ್ಯಾಪಕವಾಗಿ ಬಳಕೆಯಾಗುತ್ತದೆ.
ಐಫ್ರೇಮ್ ಮೂಲಕ ಸೇರಿಸಿಕೊಳ್ಳುವ ಮಾಹಿತಿಗೆ ನಮ್ಮ ಪುಟದಲ್ಲಿ ಎಷ್ಟು ಸ್ಥಳಾವಕಾಶ ನೀಡಬೇಕು (ಉದ್ದ ಮತ್ತು ಅಗಲ, ಪಿಕ್ಸೆಲ್‌ಗಳಲ್ಲಿ) ಎನ್ನುವುದನ್ನೂ ನಿಗದಿಪಡಿಸುವುದು ಸಾಧ್ಯ. ಈ ಸೌಲಭ್ಯದಲ್ಲಿ ಮಾಹಿತಿಯ ಪ್ರತಿಯನ್ನು ಬಳಸುವ ಬದಲು ಮೂಲ ಆಕರವನ್ನೇ ಪ್ರದರ್ಶಿಸುವುದರಿಂದ ಮೂಲದಲ್ಲಿನ ಬದಲಾವಣೆಗಳು ತಕ್ಷಣವೇ ನಮ್ಮ ತಾಣದಲ್ಲೂ ಕಾಣಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಾಹಿತಿಯ ಆಕರ ಹಾಗೂ ಅದನ್ನು ಪ್ರದರ್ಶಿಸುತ್ತಿರುವ ತಾಣದ ನಡುವೆ ಮಾಹಿತಿ ವಿನಿಮಯ ನಡೆಯುವುದರಿಂದ ಮೂಲ ತಾಣದ ನಿರ್ವಾಹಕರಿಗೆ ನಮ್ಮ ಮಾಹಿತಿ ಎಲ್ಲೆಲ್ಲಿ ಬಳಕೆಯಾಗುತ್ತಿದೆ ಎಂಬ ಮಾಹಿತಿ ಕಲೆಹಾಕುವ ಅವಕಾಶವೂ ದೊರಕುತ್ತದೆ.

IVR

ಐವಿಆರ್
Kannada Equivalent: (ರೂಪಿಸಬೇಕಿದೆ)
Short Description : ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್; ದೂರವಾಣಿ ಕರೆಯಲ್ಲಿ ಕೇಳಿಸಲಾಗುವ ಆಯ್ಕೆಗಳಿಗೆ ನಿಗದಿತ ಅಂಕಿಗಳನ್ನು ಒತ್ತುವ ಮೂಲಕ ಪ್ರತಿಕ್ರಿಯೆ ನೀಡುವುದು ಮತ್ತು ಅದಕ್ಕೆ ಪ್ರತ್ಯುತ್ತರ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವ ತಂತ್ರಜ್ಞಾನ
Long Description: ಬ್ಯಾಂಕು, ವಿಮಾ ಸಂಸ್ಥೆ, ಡಿಟಿಎಚ್ ಸೇವೆಗಳಿಗೆ ಕರೆಮಾಡಿದಾಗ ಯಾಂತ್ರಿಕ ಧ್ವನಿಯೊಂದು ನಮ್ಮ ಕರೆ ಸ್ವೀಕರಿಸುವುದರ ಅನುಭವ ಬಹುತೇಕ ಎಲ್ಲರಿಗೂ ಆಗಿರುತ್ತದೆ. ಧ್ವನಿಯ ರೂಪದಲ್ಲಿ ನಮಗೆ ಕೇಳುವ ಆಯ್ಕೆಗಳಿಗೆ ಬೇರೆಬೇರೆ ಅಂಕಿಗಳನ್ನು ಒತ್ತುವ ಮೂಲಕ ಪ್ರತಿಕ್ರಿಯೆ ನೀಡುವುದು ಮತ್ತು ಅದಕ್ಕೆ ಪ್ರತ್ಯುತ್ತರ ಪಡೆದುಕೊಳ್ಳುವುದು ಸಾಧ್ಯ. ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಅಥವಾ ಐವಿಆರ್ ಎಂದು ಗುರುತಿಸುವುದು ಇಂತಹ ವ್ಯವಸ್ಥೆಗಳನ್ನೇ.
ದೂರವಾಣಿ ಮೂಲಕ ನಡೆಯುವ ಗ್ರಾಹಕ ಸೇವೆಯ ಒಂದಷ್ಟು ಭಾಗವನ್ನು ವ್ಯಕ್ತಿಗಳ ಬದಲು ಯಂತ್ರಗಳೇ ನಿರ್ವಹಿಸುವುದನ್ನು ಐವಿಆರ್ ವ್ಯವಸ್ಥೆಗಳು ಸಾಧ್ಯವಾಗಿಸುತ್ತವೆ. ಕರೆಮಾಡಿದ ಗ್ರಾಹಕರಿಗೆ ಯಾವೆಲ್ಲ ಆಯ್ಕೆಗಳನ್ನು ನೀಡಬೇಕು, ಹಾಗೂ ಅದಕ್ಕೆ ಬರುವ ಪ್ರತ್ಯುತ್ತರಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಈ ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಮೊದಲೇ ದಾಖಲಾಗಿರುತ್ತದೆ. ಧ್ವನಿರೂಪದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರವಾಗಿ ನಾವು ಬೇರೆಬೇರೆ ಅಂಕಿಗಳನ್ನು ಒತ್ತುತ್ತೇವಲ್ಲ, ದೂರವಾಣಿ ವ್ಯವಸ್ಥೆಯಲ್ಲಿ ಅದನ್ನು ಪ್ರತಿನಿಧಿಸುವ – ಡ್ಯುಯಲ್ ಟೋನ್ ಮಲ್ಟಿಫ್ರೀಕ್ವೆನ್ಸಿ (ಡಿಟಿಎಂಎಫ್) ಎಂಬ ಹೆಸರಿನಿಂದ ಗುರುತಿಸಲಾಗುವ – ಸಂಕೇತವನ್ನೂ ಈ ವ್ಯವಸ್ಥೆ ಗುರುತಿಸಬಲ್ಲದು.
ಪ್ರತಿ ಪ್ರಶ್ನೆಗೂ ನಾವು ಉತ್ತರಿಸಿದಾಗ ಐವಿಆರ್ ವ್ಯವಸ್ಥೆ ಆ ಉತ್ತರ ಪಡೆದುಕೊಳ್ಳುವುದು ಈ ಸಂಕೇತದ ರೂಪದಲ್ಲೇ. ಪೂರ್ವನಿರ್ಧಾರಿತ ತರ್ಕಕ್ಕೆ (ಲಾಜಿಕ್) ಅನುಸಾರವಾಗಿ ಈ ಸಂಕೇತವನ್ನು ಸಂಸ್ಕರಿಸುವ ಮೂಲಕ ನಮ್ಮ ಸಂವಹನ ಮುಂದಿನ ಹಂತಕ್ಕೆ ಹೋಗುತ್ತದೆ; ಖಾತೆಯ ಬ್ಯಾಲೆನ್ಸ್ ತಿಳಿಯುವುದೋ, ಗ್ರಾಹಕ ಸೇವಾ ಅಧಿಕಾರಿಯೊಡನೆ ಕನ್ನಡದಲ್ಲಿ ಮಾತನಾಡುವುದೋ, ಮೊಬೈಲ್ ಬಿಲ್‌ನ ನಕಲು ಪ್ರತಿಯನ್ನು ಇಮೇಲ್ ಮೂಲಕ ಪಡೆದುಕೊಳ್ಳುವುದೋ ಸಾಧ್ಯವಾಗುತ್ತದೆ!

OEM

ಓಇಎಮ್
Kannada Equivalent: ಸಲಕರಣೆಯ ಮೂಲ ಉತ್ಪಾದಕ
Short Description : ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫಾಕ್ಚರರ್; ಬೇರೊಂದು ಸಂಸ್ಥೆಯ ಉತ್ಪನ್ನದಲ್ಲಿ ಬಳಸಲು ನಿರ್ದಿಷ್ಟ ಭಾಗಗಳನ್ನು ತಯಾರಿಸಿಕೊಡುವ ಸಂಸ್ಥೆ
Long Description: ಇಂದಿನ ವಿದ್ಯುನ್ಮಾನ ಉಪಕರಣಗಳೆಲ್ಲ ರೂಪುಗೊಳ್ಳುವುದು ಭಾರೀ ಸಂಖ್ಯೆಯ ಬಿಡಿಭಾಗಗಳ ಜೋಡಣೆಯಿಂದ. ಈ ಬಿಡಿಭಾಗಗಳೆಲ್ಲ ಅದೆಷ್ಟು ಸಂಕೀರ್ಣವಾಗಿರುತ್ತವೆ ಎಂದರೆ ಅವನ್ನೆಲ್ಲ ಒಂದೇ ಸಂಸ್ಥೆ ತಯಾರಿಸುವುದು ಹೆಚ್ಚೂಕಡಿಮೆ ಅಸಾಧ್ಯವೇ ಎನ್ನಬೇಕು.
ಹಾಗಾಗಿಯೇ ಇಂತಹ ಯಾವುದೇ ಉತ್ಪನ್ನದ ನಿರ್ಮಾತೃ ಎಂದು ಒಂದೇ ಸಂಸ್ಥೆಯ ಹೆಸರಿದ್ದರೂ ಆ ಉತ್ಪನ್ನದೊಳಗಿರುವ ವಿವಿಧ ಭಾಗಗಳನ್ನು ಬೇರೆಬೇರೆ ಸಂಸ್ಥೆಗಳು ತಯಾರಿಸಿರುವುದು ಸಾಮಾನ್ಯ ಸಂಗತಿ. ಮೊಬೈಲ್ ಫೋನಿನ ಉದಾಹರಣೆಯನ್ನೇ ತೆಗೆದುಕೊಂಡರೆ ಬೇರೆಬೇರೆ ಸಂಸ್ಥೆಗಳು ನಿರ್ಮಿಸಿದ ಪ್ರಾಸೆಸರ್, ಕ್ಯಾಮೆರಾ, ಸ್ಪೀಕರುಗಳನ್ನೆಲ್ಲ ತೆಗೆದುಕೊಂಡು ಒಟ್ಟುಸೇರಿಸಿ ಇನ್ನೊಂದು ಸಂಸ್ಥೆ ಮೊಬೈಲನ್ನು ತಯಾರಿಸುತ್ತದೆ. ಕಂಪ್ಯೂಟರು-ಕ್ಯಾಮೆರಾ-ಟೀವಿಗಳಲ್ಲೂ ಅಷ್ಟೇ, ಅವುಗಳ ನಿರ್ದಿಷ್ಟ ಭಾಗಗಳನ್ನು ತಯಾರಿಸುವುದನ್ನಷ್ಟೇ ತಮ್ಮ ಕೆಲಸವಾಗಿಟ್ಟುಕೊಂಡ ಅನೇಕ ಸಂಸ್ಥೆಗಳಿವೆ.
ಹೀಗೆ ಬೇರೊಂದು ಸಂಸ್ಥೆಯ ಉತ್ಪನ್ನದಲ್ಲಿ ಬಳಸಲು ನಿರ್ದಿಷ್ಟ ಭಾಗಗಳನ್ನು ತಯಾರಿಸಿಕೊಡುವ ಸಂಸ್ಥೆಗಳನ್ನು ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫಾಕ್ಚರರ್ (ಸಲಕರಣೆಯ ಮೂಲ ಉತ್ಪಾದಕ) ಅಥವಾ ‘ಓಇಎಮ್’ ಎಂದು ಕರೆಯುತ್ತಾರೆ. ಉದಾಹರಣೆಗೆ ಎಬಿಸಿ ಎನ್ನುವ ಸಂಸ್ಥೆಯ ಮೊಬೈಲಿನಲ್ಲಿ ಎಕ್ಸ್ ಎನ್ನುವ ಸಂಸ್ಥೆಯ ಕ್ಯಾಮೆರಾ ಬಳಕೆಯಾಗಿದ್ದರೆ ಎಕ್ಸ್ ಸಂಸ್ಥೆಯನ್ನು ಓಇಎಮ್ ಎಂದು ಗುರುತಿಸಲಾಗುತ್ತದೆ.
ಅಂದಹಾಗೆ ಓಇಎಮ್ ಪರಿಕಲ್ಪನೆ ಬಳಕೆಯಲ್ಲಿರುವುದು ವಿದ್ಯುನ್ಮಾನ ಕ್ಷೇತ್ರದಲ್ಲಷ್ಟೇ ಅಲ್ಲ, ಯಂತ್ರೋಪಕರಣ – ವಾಹನ ಮುಂತಾದ ಇನ್ನೂ ಹಲವಾರು ಸಾಧನಗಳ ನಿರ್ಮಾಣದಲ್ಲೂ ಓಇಎಮ್‌ಗಳ ನೆರವು ಪಡೆದುಕೊಳ್ಳುವುದು ಸಾಮಾನ್ಯ ಸಂಗತಿ.

OFC

ಓಎಫ್‌ಸಿ
Kannada Equivalent: (ರೂಪಿಸಬೇಕಿದೆ)
Short Description : ಆಪ್ಟಿಕಲ್ ಫೈಬರ್ ಕೇಬಲ್; ಅತಿವೇಗದ ಮಾಹಿತಿ ಸಂವಹನದಲ್ಲಿ ಬಳಕೆಯಾಗುವ ಈ ಕೇಬಲ್ಲುಗಳೊಳಗೆ ಆಪ್ಟಿಕಲ್ ಫೈಬರ್‌ಗಳೆಂಬ ಗಾಜಿನ ಎಳೆಗಳು ಇರುತ್ತವೆ.
Long Description: ನಾವು ರಸ್ತೆಬದಿಗಳಲ್ಲಿ ನೋಡುತ್ತೇವಲ್ಲ, ದೂರವಾಣಿ ಸಂಸ್ಥೆಗಳು ಅಳವಡಿಸುವ ಬಣ್ಣಬಣ್ಣದ ದಪ್ಪನೆಯ ಕೊಳವೆಗಳು, ಆ ಕೊಳವೆಗಳ ಒಳಗೆ ಆಪ್ಟಿಕಲ್ ಫೈಬರ್ ಕೇಬಲ್ಲುಗಳಿರುತ್ತವೆ, ಮತ್ತು ಇಂತಹ ಪ್ರತಿಯೊಂದು ಕೇಬಲ್ಲಿನೊಳಗೂ ಒಂದಷ್ಟು ಆಪ್ಟಿಕಲ್ ಫೈಬರ್‌ಗಳಿರುತ್ತವೆ. ಅತ್ಯಂತ ಶುದ್ಧ ಗಾಜಿನಿಂದ ಪಾರದರ್ಶಕ ಸಲಾಕೆಗಳನ್ನು ತಯಾರಿಸಿ ಅವು ಬಳುಕುವಷ್ಟು ತೆಳ್ಳಗೆ, ಉದ್ದಕ್ಕೆ ಆಗುವ ತನಕ ಜಗ್ಗಿಸಿ ಎಳೆಯುವುದರಿಂದ ರೂಪುಗೊಳ್ಳುವ ಎಳೆಗಳು ಅವು.
ಈ ಆಪ್ಟಿಕಲ್ ಫೈಬರ್‌ಗಳ ಮೂಲಕ ಬೆಳಕಿನ ಕಿರಣಗಳ ರೂಪದಲ್ಲಿ ಅಪಾರ ಪ್ರಮಾಣದ ಮಾಹಿತಿಯನ್ನು ರವಾನಿಸುವುದು ಸಾಧ್ಯ. ಹೀಗೆ ರವಾನಿಸಲಾದ ಮಾಹಿತಿ ಸುಲಭವಾಗಿ ಅನೇಕ ಕಿಲೋಮೀಟರುಗಳಷ್ಟು ದೂರ ಕ್ರಮಿಸಬಲ್ಲದು.
ಆಪ್ಟಿಕಲ್ ಫೈಬರ್ ಎಳೆಗಳನ್ನು ಅತ್ಯಂತ ಶುದ್ಧವಾದ ಗಾಜಿನಿಂದ ತಯಾರಿಸಲಾಗುವುದರಿಂದ ಅದರ ಮೂಲಕ ಸಾಗುವ ಬೆಳಕಿನ ಕಿರಣಗಳು ಸಂಪೂರ್ಣ ಆಂತರಿಕ ಪ್ರತಿಫಲನಕ್ಕೆ (ಟೋಟಲ್ ಇಂಟರ್ನಲ್ ರಿಫ್ಲೆಕ್ಷನ್) ಒಳಗಾಗುತ್ತವೆ – ಅಂದರೆ, ಬೆಳಕಿನ ಕಿರಣಗಳು ಈ ಎಳೆಯೊಳಗೇ ಸಂಪೂರ್ಣವಾಗಿ ಪ್ರತಿಫಲಿತವಾಗುತ್ತವೆ. ಹೀಗಾಗಿ ಆಪ್ಟಿಕಲ್ ಫೈಬರ್‌ಗಳಲ್ಲಿ ಮಾಹಿತಿ ಸೋರಿಕೆ ತೀರಾ ಕಡಿಮೆ ಹಾಗೂ ಮಾಹಿತಿ ಸಂವಹನದ ನಿಖರತೆ ಹೆಚ್ಚಾಗಿರುತ್ತದೆ. ಆಪ್ಟಿಕಲ್ ಫೈಬರ್‌ಗಳ ಈ ವಿಶಿಷ್ಟ ಗುಣದಿಂದಾಗಿಯೇ ಅವು ಈಗ ಅಂತರಜಾಲ, ಸ್ಥಿರ ದೂರವಾಣಿ, ಮೊಬೈಲ್ ಸೇವೆಗಳು ಮುಂತಾದ ಎಲ್ಲ ಮಾಹಿತಿ ಮೂಲಗಳಿಗೂ ಬೆನ್ನೆಲುಬಿನಂತೆ ಆಗಿಬಿಟ್ಟಿವೆ.

OTA

ಓಟಿಎ
Kannada Equivalent: (ರೂಪಿಸಬೇಕಿದೆ)
Short Description : ಓವರ್ ದಿ ಏರ್; ಮೊಬೈಲಿನಂತಹ ವಿದ್ಯುನ್ಮಾನ ಸಾಧನಗಳಲ್ಲಿ ಬಳಕೆಯಾಗುವ ತಂತ್ರಾಂಶಗಳನ್ನು ಕಂಪ್ಯೂಟರ್, ಯುಎಸ್‌ಬಿ ಕೇಬಲ್ ಇತ್ಯಾದಿಗಳ ಗೊಡವೆಯಿಲ್ಲದೆ ನೇರವಾಗಿ ಅಪ್‌ಡೇಟ್ ಮಾಡಿಕೊಳ್ಳುವ ಸುಲಭ ವಿಧಾನ
Long Description: ಒಂದು ಕಾಲವಿತ್ತು, ಯಾವುದೋ ತಂತ್ರಾಂಶವನ್ನು ಅಪ್‌ಡೇಟ್ ಮಾಡಬೇಕೆಂದರೆ ಗೆಳೆಯರಿಂದ ಸೀಡಿ ಕಡತರಬೇಕಿತ್ತು – ಇಲ್ಲವೇ – ಹೊಸ ಆವೃತ್ತಿಗೆ ಕಾದು ಅದನ್ನು ಡೌನ್‌ಲೋಡ್ ಮಾಡಿ ಬಳಸಬೇಕಿತ್ತು. ಈ ವಿಧಾನ ಕಂಪ್ಯೂಟರುಗಳಲ್ಲಿ ಕೊಂಚಮಟ್ಟಿಗೆ ಸರಿಯೆನಿಸಬಹುದಾದರೂ ಮೊಬೈಲಿನ ತಂತ್ರಾಂಶಗಳನ್ನು ಅಪ್‌ಡೇಟ್ ಮಾಡಿಕೊಳ್ಳಲು ಅಷ್ಟೇನೂ ಸೂಕ್ತವೆನಿಸುವುದಿಲ್ಲ.
ಈ ಸಮಸ್ಯೆಯನ್ನು ಪರಿಹರಿಸುವ ಮಾರ್ಗವೇ ಓಟಿಎ, ಅಂದರೆ ‘ಓವರ್ ದಿ ಏರ್’. ಮೊಬೈಲಿನ ತಂತ್ರಾಂಶಗಳನ್ನು ಕಂಪ್ಯೂಟರ್, ಯುಎಸ್‌ಬಿ ಕೇಬಲ್ ಇತ್ಯಾದಿಗಳ ಗೊಡವೆಯಿಲ್ಲದೆ ಅಪ್‌ಡೇಟ್ ಮಾಡಿಕೊಳ್ಳುವ ಸುಲಭ ವಿಧಾನ ಇದು.
ಸ್ಮಾರ್ಟ್‌ಫೋನಿನ ಕಾರ್ಯಾಚರಣ ವ್ಯವಸ್ಥೆಗೆ ಆಗಿಂದಾಗ್ಗೆ ಅಪ್‌ಡೇಟ್‌ಗಳು ಬರುತ್ತಿರುತ್ತವಲ್ಲ, ಅವು ಇದೇ ವಿಧಾನವನ್ನು ಬಳಸುತ್ತವೆ. ಸೆಟ್‌ಟಾಪ್ ಬಾಕ್ಸಿನ ತಂತ್ರಾಂಶ ಅಪ್‌ಡೇಟ್ ಆಗುವುದೂ ಇದೇ ವಿಧಾನದಲ್ಲಿ. ಸ್ಮಾರ್ಟ್‌ಫೋನ್ ತಂತ್ರಾಂಶಗಳನ್ನು ಅಪ್‌ಡೇಟ್ ಮಾಡಲು ಅಂತರಜಾಲ ಸಂಪರ್ಕ ಬಳಕೆಯಾದರೆ ಸೆಟ್‌ಟಾಪ್ ಬಾಕ್ಸ್ ತಂತ್ರಾಂಶವನ್ನು ಉಪಗ್ರಹ ಸಂಕೇತಗಳ ಮೂಲಕವೇ ಅಪ್‌ಡೇಟ್ ಮಾಡಲಾಗುತ್ತದೆ.
ತಂತ್ರಾಂಶದ ಹೊಸ ಆವೃತ್ತಿಯನ್ನು ಬಳಕೆದಾರರಿಗೆ ತಲುಪಿಸಲು ಓಟಿಎ ಅಪ್‌ಡೇಟ್‌ಗಳನ್ನು ಬಳಸಲಾಗುತ್ತದೆ. ತಂತ್ರಾಂಶದಲ್ಲಿ ಪತ್ತೆಯಾಗುವ ಕೊರತೆಗಳನ್ನು, ಸುರಕ್ಷತಾ ಸಮಸ್ಯೆಗಳನ್ನು ಪರಿಹರಿಸಲಿಕ್ಕೂ ಈ ಮಾರ್ಗ ಸಾಮಾನ್ಯವಾಗಿ ಬಳಕೆಯಾಗುತ್ತದೆ. ಓಟಿಎ ಮಾರ್ಗದಲ್ಲಿ ಫೋನಿನ ತಂತ್ರಾಂಶಗಳನ್ನು ಅಪ್‌ಡೇಟ್ ಮಾಡಲು ಅಂತರಜಾಲ ಸಂಪರ್ಕ ಬೇಕಲ್ಲ, ಅದಕ್ಕೆ ಮೊಬೈಲ್ ಇಂಟರ್‌ನೆಟ್ ಬಳಸಬಹುದೋ ವೈ-ಫೈ ಸಂಪರ್ಕವನ್ನೇ ಕಾಯಬೇಕೋ ಎನ್ನುವುದನ್ನು ನಾವೇ ಸೂಚಿಸಬಹುದು.

OTT

ಓಟಿಟಿ
Kannada Equivalent: (ರೂಪಿಸಬೇಕಿದೆ)
Short Description : ಓವರ್ ದ ಟಾಪ್; ಇತರ ದೂರಸಂಪರ್ಕ ಸಂಸ್ಥೆಗಳು ಜಾಲವನ್ನು ಬಳಸಿಕೊಂಡು ತಮ್ಮ ಸೇವೆ ಒದಗಿಸುವ ಉತ್ಪನ್ನಗಳನ್ನು ಈ ಹೆಸರಿನಿಂದ ಗುರುತಿಸಲಾಗುತ್ತದೆ.
Long Description: ಮೊಬೈಲ್ ಫೋನ್ ಮೂಲಕ ನಾವು ಎರಡು ಬಗೆಯ ಸಂಸ್ಥೆಗಳ ಸೇವೆಗಳನ್ನು ಪಡೆದುಕೊಳ್ಳುತ್ತೇವೆ: ಮೊದಲ ಬಗೆಯವು ತಮ್ಮ ಸೇವೆ ಒದಗಿಸಲು ತಮ್ಮದೇ ಆದ ಮೊಬೈಲ್ ಜಾಲವನ್ನು ಸ್ಥಾಪಿಸಿ ನಿರ್ವಹಿಸುತ್ತವೆ; ಎರಡನೆಯವು ಇಂತಹ ಸಂಸ್ಥೆಗಳ ಜಾಲವನ್ನು ಬಳಸಿಕೊಂಡು ತಮ್ಮ ಸೇವೆ ಒದಗಿಸುತ್ತವೆ.
ವಾಟ್ಸ್‌ಆಪ್ ಸಂದೇಶಗಳು, ಸ್ಕೈಪ್ ಕರೆಗಳೆಲ್ಲ ಕೆಲಸಮಾಡುವುದು ಹೀಗೆಯೇ. ಇದನ್ನೆಲ್ಲ ಬಳಸುವಾಗ ಮೊಬೈಲ್ ಗ್ರಾಹಕರು ಬಳಸಿದ ಡೇಟಾ ಪ್ರಮಾಣಕ್ಕೆ ಸರಿಯಾಗಿ ಶುಲ್ಕ ಪಾವತಿಸುತ್ತಾರೆಯೇ ಹೊರತು ಕರೆಮಾಡಿದ್ದಕ್ಕೆ ಇಷ್ಟು, ಸಂದೇಶ ಕಳಿಸಿದ್ದಕ್ಕೆ ಇಷ್ಟು ಎಂದು (ಮೊಬೈಲ್ ಸೇವೆಗಳಲ್ಲಿ ಮಾಡುವಂತೆ) ಪ್ರತ್ಯೇಕ ಶುಲ್ಕವನ್ನೇನೂ ಪಾವತಿಸುವುದಿಲ್ಲ.
ದೂರಸಂಪರ್ಕ ಜಗತ್ತಿನ ಪರಿಭಾಷೆಯಲ್ಲಿ ಇಂತಹ ಸೇವೆಗಳನ್ನು ‘ಓವರ್ ದ ಟಾಪ್’ (ಓಟಿಟಿ) ಸೇವೆಗಳೆಂದು ಗುರುತಿಸಲಾಗುತ್ತದೆ. ವಾಟ್ಸ್‌ಆಪ್-ಸ್ಕೈಪ್‌ನಂತಹ ವ್ಯವಸ್ಥೆಗಳು ಇತರ ಸಂಸ್ಥೆಗಳು ಒದಗಿಸುವ ಅಂತರಜಾಲ ಸಂಪರ್ಕವನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಸೇವೆಗಳನ್ನು ಒದಗಿಸುತ್ತವಲ್ಲ, ಹಾಗಾಗಿಯೇ ಈ ಹೆಸರು ಹುಟ್ಟಿಕೊಂಡಿದೆ (ಓಟಿಟಿ ಸೇವೆಗಳಿಗೆ ಮೊಬೈಲ್ ಅಂತರಜಾಲವೇ ಬೇಕು ಎಂದೇನೂ ಇಲ್ಲವಲ್ಲ; ಅವು ವೈ-ಫೈ ಸಂಪರ್ಕಗಳಲ್ಲೂ ಸರಾಗವಾಗಿ ಕೆಲಸಮಾಡುತ್ತವೆ).
ಇವು ತಮ್ಮ ಕಾರ್ಯಾಚರಣೆಗೆ ಮೊಬೈಲ್ ಜಾಲಗಳನ್ನೇ ಬಳಸಿಕೊಂಡರೂ ಇಂತಹ ಸೇವೆಗಳಿಂದ ಮೊಬೈಲ್ ಸಂಸ್ಥೆಗಳಿಗೆ ವಿಶೇಷ ಆದಾಯವೇನೂ ಬರುವುದಿಲ್ಲ. ಹೀಗಾಗಿ ಓಟಿಟಿ ಸೇವೆಗಳ ಮೇಲೆ ನಿಯಂತ್ರಂಣ ಹೇರಬೇಕೆಂಬ ಒತ್ತಾಯ ಕೆಲವು ಸಂದರ್ಭಗಳಲ್ಲಿ ಕೇಳಿಬಂದಿತ್ತು. ಅಂತಹ ಯಾವುದೇ ನಿರ್ಬಂಧ ಅಂತರಜಾಲದ ಮುಕ್ತ ಸ್ವರೂಪಕ್ಕೆ ಧಕ್ಕೆ ತಂದಂತೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಆ ಎಲ್ಲ ಒತ್ತಾಯಗಳೂ ಈಗ ಹಿನ್ನೆಲೆಗೆ ಸರಿದಿವೆ; ಓಟಿಟಿ ಸೇವೆಗಳು ಅಬಾಧಿತವಾಗಿ ಮುಂದುವರೆದಿವೆ.

OTP

ಓಟಿಪಿ
Kannada Equivalent: (ರೂಪಿಸಬೇಕಿದೆ)
Short Description : ಒನ್ ಟೈಮ್ ಪಾಸ್‌ವರ್ಡ್; ವಿಶ್ವವ್ಯಾಪಿ ಜಾಲದ ಮೂಲಕ ನಡೆಯುವ ವ್ಯವಹಾರಗಳಲ್ಲಿ ಬಳಕೆದಾರರ ಗುರುತನ್ನು ಖಾತರಿಪಡಿಸಿಕೊಳ್ಳಲು ಬಳಕೆಯಾಗುವ ಹೆಚ್ಚುವರಿ ಪಾಸ್‌ವರ್ಡ್. ಇದನ್ನು ಒಮ್ಮೆ ಮಾತ್ರ ಬಳಸುವುದು ಸಾಧ್ಯ.
Long Description: ಕಾರ್ಡುಗಳನ್ನು, ನೆಟ್‌ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಹಣಪಾವತಿಸುವುದು ನಮ್ಮಲ್ಲಿ ಅನೇಕರಿಗೆ ಚೆನ್ನಾಗಿಯೇ ಅಭ್ಯಾಸವಾಗಿದೆ. ಹೀಗೆ ಪಾವತಿಸುವಾಗ ಹಣ ತೆಗೆಯಬೇಕಾದ್ದು ಯಾವ ಖಾತೆಯಿಂದ ಎಂದು ಬ್ಯಾಂಕಿಗೆ ಗೊತ್ತಾಗಬೇಕಲ್ಲ, ನಾವು ಖಾತೆಯ ವಿವರಗಳನ್ನು (ಲಾಗಿನ್, ಅಕೌಂಟ್ ಸಂಖ್ಯೆ ಇತ್ಯಾದಿ) ದಾಖಲಿಸುವುದು ಇದಕ್ಕಾಗಿಯೇ. ಅದನ್ನು ದಾಖಲಿಸುತ್ತಿರುವವರು ನಾವೇ ಎಂದೂ ಗೊತ್ತಾಗಬೇಡವೇ, ಅದಕ್ಕಾಗಿ ಪಾಸ್‌ವರ್ಡನ್ನೂ ಎಂಟರ್ ಮಾಡುತ್ತೇವೆ.
ಆದರೆ ನಮ್ಮ ಪಾಸ್‌ವರ್ಡ್ ನಮಗೆ ಮಾತ್ರ ಗೊತ್ತು ಎಂದು ಏನು ಗ್ಯಾರಂಟಿ? ಅದನ್ನು ಬೇರೆ ಯಾರೋ ಕದ್ದು ತಿಳಿದುಕೊಂಡುಬಿಟ್ಟಿರಬಹುದಲ್ಲ! ಇಂತಹ ಸನ್ನಿವೇಶಗಳನ್ನು ಕೊಂಚಮಟ್ಟಿಗಾದರೂ ತಪ್ಪಿಸುವ ಉದ್ದೇಶದಿಂದ ಬಳಕೆಯಾಗುವ ತಂತ್ರಗಳಲ್ಲೊಂದು ಓಟಿಪಿ.
ಓಟಿಪಿ ಎನ್ನುವುದು ‘ಒನ್ ಟೈಮ್ ಪಾಸ್‌ವರ್ಡ್’ ಎಂಬ ಹೆಸರಿನ ಹ್ರಸ್ವರೂಪ. ಈ ವಿಧಾನ ಬಳಸುವಾಗ ಖಾತೆಯ ವಿವರ-ಪಾಸ್‌ವರ್ಡುಗಳ ಜೊತೆಗೆ ಬಳಕೆದಾರರ ಮೊಬೈಲಿಗೆ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಿದ ಇನ್ನೊಂದು ಪಾಸ್‌ವರ್ಡನ್ನೂ ದಾಖಲಿಸುವಂತೆ ಕೇಳಲಾಗುತ್ತದೆ. ಕೆಲವೆಡೆ ಮೊಬೈಲಿಗೆ ಬರುವ ಈ ಸಂದೇಶವನ್ನು ಸಾಮಾನ್ಯ ಪಾಸ್‌ವರ್ಡ್ ಬದಲಿಗೆ ಉಪಯೋಗಿಸುವ ಸೌಲಭ್ಯವೂ ಇರುತ್ತದೆ.
ಈ ಪಾಸ್‌ವರ್ಡನ್ನು ಒಮ್ಮೆ ಮಾತ್ರವೇ – ಅದೂ ನಿಗದಿತ ಅವಧಿಯೊಳಗೆ ಮಾತ್ರ – ಉಪಯೋಗಿಸುವುದು ಸಾಧ್ಯ. ಎಸ್ಸೆಮ್ಮೆಸ್‌ನಂತಹ ಸರಳ ಮಾಧ್ಯಮವನ್ನು ಬಳಸಿ ಆನ್‌ಲೈನ್ ವ್ಯವಹಾರಗಳಿಗೆ ಹೆಚ್ಚಿನ ಸುರಕ್ಷತೆ ತಂದುಕೊಡುತ್ತಿರುವುದು ಓಟಿಪಿಯ ಹೆಚ್ಚುಗಾರಿಕೆ. ಕಾರ್ಡು, ಪಾಸ್‌ವರ್ಡುಗಳ ಜೊತೆಗೆ ಮೊಬೈಲ್ ಫೋನ್ ಕೂಡ ಕಳ್ಳರ ಪಾಲಾದ ಸಂದರ್ಭಗಳನ್ನು ಹೊರತುಪಡಿಸಿದಂತೆ ಇದರ ವಿಶ್ವಾಸಾರ್ಹತೆ ಸಾಕಷ್ಟು ಉತ್ತಮವಾಗಿಯೇ ಇರುತ್ತದೆ. ಓಟಿಪಿಯ ಉದ್ದೇಶ ನಮ್ಮ ಸುರಕ್ಷತೆಯೇ ಆದ್ದರಿಂದ ನಾವು ಅದನ್ನು ಇತರರಿಗೆ ತಿಳಿಸುವುದು ಖಂಡಿತಾ ಒಳ್ಳೆಯದಲ್ಲ.

Open Source

ಓಪನ್‌ ಸೋರ್ಸ್
Kannada Equivalent: ಮುಕ್ತ ತಂತ್ರಾಂಶ
Short Description : ಬಳಸಲು, ಹಂಚಲು ಹಾಗೂ ಬದಲಾಯಿಸಲು ಮುಕ್ತ ಅವಕಾಶವಿರುವ ತಂತ್ರಾಂಶ
Long Description: ಕಂಪ್ಯೂಟರಿನಲ್ಲಿ – ಸ್ಮಾರ್ಟ್‌ಫೋನಿನಲ್ಲಿ ವಿವಿಧ ಉದ್ದೇಶಗಳಿಗಾಗಿ ನಾವು ಬಳಸುವ ತಂತ್ರಾಂಶಗಳಲ್ಲಿ ಹಲವು ವಿಧ. ಇವುಗಳಲ್ಲಿ ಕೆಲವನ್ನು ದುಡ್ಡುಕೊಟ್ಟು ಬಳಸಬೇಕು, ಕೆಲವನ್ನು ಬಳಸುವಾಗ ಜಾಹೀರಾತುಗಳನ್ನು ನೋಡಲು ಸಿದ್ಧರಿರಬೇಕು, ಮತ್ತೆ ಇನ್ನು ಕೆಲವು ನಮಗೆ ಪೂರ್ತಿ ಉಚಿತವಾಗಿಯೇ ದೊರಕುತ್ತವೆ.
ಆದರೆ ಇದೆಲ್ಲ ಏನಿದ್ದರೂ ತಂತ್ರಾಂಶದ ಬಳಕೆಗೆ ಮಾತ್ರವೇ ಸೀಮಿತ. ತಂತ್ರಾಂಶದ ಕ್ರಮವಿಧಿಗಳೆಲ್ಲ ಅದರ ತಯಾರಕರ ಬಳಿಯೇ ಭದ್ರವಾಗಿರುವುದರಿಂದ ಅದರಲ್ಲಿ ಬಳಕೆದಾರರು ಯಾವುದೇ ರೀತಿಯ ಬದಲಾವಣೆ ಮಾಡುವಂತಿಲ್ಲ.
ಈ ನಿರ್ಬಂಧವನ್ನು ಹೋಗಲಾಡಿಸುವುದು ಓಪನ್‌ಸೋರ್ಸ್, ಅಂದರೆ ಮುಕ್ತ ತಂತ್ರಾಂಶಗಳ ವೈಶಿಷ್ಟ್ಯ. ಇಲ್ಲಿ ತಂತ್ರಾಂಶದ ಕ್ರಮವಿಧಿಗಳು ಕೂಡ ಬಳಕೆದಾರರಿಗೆ ಮುಕ್ತವಾಗಿ ದೊರಕುತ್ತವೆ. ಅದನ್ನು ಬಳಸುವುದು, ಹಂಚುವುದು ಮತ್ತು ಬದಲಾಯಿಸುವುದು – ಎಲ್ಲವುದಕ್ಕೂ ಸ್ವಾತಂತ್ರ್ಯವಿರುತ್ತದೆ. ಬೇರೆ ಯಾರೋ ರೂಪಿಸಿದ ಓಪನ್‌ಸೋರ್ಸ್ ತಂತ್ರಾಂಶದ ಕಾರ್ಯವೈಖರಿಯನ್ನು ಬದಲಿಸುವ, ಅದನ್ನು ಇನ್ನಷ್ಟು ಉತ್ತಮಪಡಿಸುವ ಅವಕಾಶವೂ ನಮಗೆ ದೊರಕುತ್ತದೆ.
ಓಪನ್‌ಸೋರ್ಸ್ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ವಿಶ್ವದೆಲ್ಲೆಡೆಯ ತಂತ್ರಜ್ಞರು ಭಾಗವಹಿಸುವುದರಿಂದ – ಮತ್ತು ಆ ಪೈಕಿ ಒಬ್ಬರ ಕೆಲಸವನ್ನು ಉತ್ತಮಪಡಿಸಲು ಇನ್ನೊಬ್ಬರು ನೆರವಾಗುವುದರಿಂದ – ಅವುಗಳ ಗುಣಮಟ್ಟ ಬಹಳಷ್ಟು ಉತ್ತಮವಾಗಿರುತ್ತದೆ. ತಂತ್ರಾಂಶ ಜಗತ್ತಿನಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಫೈರ್‌ಫಾಕ್ಸ್, ವಿಎಲ್‌ಸಿ ಪ್ಲೇಯರ್, ಓಪನ್‌ಅಫೀಸ್, ಗಿಂಪ್ ಮುಂತಾದವೆಲ್ಲ ಓಪನ್‌ಸೋರ್ಸ್ ತಂತ್ರಾಂಶಗಳೇ.

OCR

ಓಸಿಆರ್
Kannada Equivalent: (ರೂಪಿಸಬೇಕಿದೆ)
Short Description : ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್; ಮುದ್ರಿತ ಅಥವಾ ಕೈಬರಹದ ಅಕ್ಷರಗಳನ್ನು ಕಂಪ್ಯೂಟರ್ ಸಹಾಯದಿಂದ ಗುರುತಿಸಿ ಚಿತ್ರರೂಪದಿಂದ ಪಠ್ಯರೂಪಕ್ಕೆ ಬದಲಿಸಿಕೊಡುವ ತಂತ್ರಾಂಶ
Long Description: ಮುದ್ರಿತ ಅಥವಾ ಕೈಬರಹದ ಅಕ್ಷರಗಳನ್ನು ಕಂಪ್ಯೂಟರ್ ಸಹಾಯದಿಂದ ಗುರುತಿಸಲು ನೆರವಾಗುವುದು ಓಸಿಆರ್. ಇದು ‘ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್’ ಎನ್ನುವುದರ ಹ್ರಸ್ವರೂಪ. ಕಂಪ್ಯೂಟರ್ ಹಾಗೂ ಮಾನವರ ನಡುವಿನ ಸಂವಹನದ ಹೊಸದೊಂದು ಆಯಾಮವನ್ನು ಪರಿಚಯಿಸುವ ತಂತ್ರಜ್ಞಾನ ಇದು.
ಸ್ಕ್ಯಾನ್ ಮಾಡಿಯೋ ಫೋಟೋ ಕ್ಲಿಕ್ಕಿಸಿಯೋ ಅಕ್ಷರಗಳನ್ನು ಕಂಪ್ಯೂಟರಿಗೆ ಊಡಿಸುತ್ತೇವಲ್ಲ, ಆ ಚಿತ್ರದಲ್ಲಿ ಇರಬಹುದಾದ ಬರಹವನ್ನು ಗುರುತಿಸುವುದು ಹೇಗೆ, ಗುರುತಿಸಿದ ಚಿತ್ರವನ್ನು ಪಠ್ಯರೂಪಕ್ಕೆ ಬದಲಿಸುವುದು ಹೇಗೆ ಎನ್ನುವುದನ್ನೆಲ್ಲ ಕಂಪ್ಯೂಟರಿಗೆ ಹೇಳಿಕೊಡುವುದು ಓಸಿಆರ್ ತಂತ್ರಾಂಶದ ಕೆಲಸ. ಹಳೆಯ ಪುಸ್ತಕಗಳಲ್ಲಿರುವ ಪಠ್ಯವನ್ನು ಗುರುತಿಸಿ ಕಂಪ್ಯೂಟರೀಕರಿಸಲು, ಮುದ್ರಿತ ಅಥವಾ ಲಿಖಿತ ದಾಖಲೆಗಳನ್ನು ಸ್ವಯಂಚಾಲಿತವಾಗಿ ವರ್ಗೀಕರಿಸಲು – ಸಂಸ್ಕರಿಸಲು ಇದು ನೆರವಾಗುತ್ತದೆ.
ಸ್ಕ್ಯಾನ್ ಮಾಡಿದ ಪುಟಗಳಲ್ಲಿ ಏನು ಮುದ್ರಿತವಾಗಿದೆ ಎಂದು ಗುರುತಿಸುವ, ಹಾಗೂ ಅದನ್ನು ಪಠ್ಯರೂಪಕ್ಕೆ ಬದಲಿಸಿಕೊಡುವ ಹಲವು ಓಸಿಆರ್ ತಂತ್ರಾಂಶಗಳು ಕನ್ನಡದಲ್ಲೂ ಇವೆ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App