भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ALU

ಎಎಲ್‍ಯು
Kannada Equivalent: (ರೂಪಿಸಬೇಕಿದೆ)
Short Description : ಅರ್ಥ್‌ಮೆಟಿಕ್ ಲಾಜಿಕ್ ಯುನಿಟ್; ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್‌ನ (ಸಿಪಿಯು) ಒಂದು ಭಾಗ. ದತ್ತಾಂಶ ಸಂಸ್ಕರಣೆಯಲ್ಲಿ ಅಗತ್ಯವಾದ ಅಂಕಗಣಿತ ಹಾಗೂ ತರ್ಕದ ಲೆಕ್ಕಾಚಾರಗಳನ್ನು ಮಾಡುವುದು ಇದರ ಜವಾಬ್ದಾರಿ.
Long Description: ಯಾವುದೇ ಕಂಪ್ಯೂಟರಿನ ಪ್ರಮುಖ ಅಂಗ ಅದರ ಕೇಂದ್ರೀಯ ಸಂಸ್ಕರಣ ಘಟಕ, ಅರ್ಥಾತ್ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎನ್ನುವ ವಿಷಯ ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಠ್ಯಗಳಲ್ಲೇ ಇರುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳಲ್ಲಿ ನಡೆಯುವ ಅಪಾರ ಪ್ರಮಾಣದ ದತ್ತಾಂಶ ಸಂಸ್ಕರಣೆಯನ್ನು ನಿಭಾಯಿಸುವುದು ಇದರ ಜವಾಬ್ದಾರಿ.
ದತ್ತಾಂಶವನ್ನು ಸಂಸ್ಕರಿಸುವ ಈ ಕೆಲಸದಲ್ಲಿ ಹಲವು ವಿಭಾಗಗಳಿರುತ್ತವೆ. ದತ್ತಾಂಶ ಸಂಸ್ಕರಣೆಯಲ್ಲಿ ಅಗತ್ಯವಾದ ಅಂಕಗಣಿತ ಹಾಗೂ ತರ್ಕದ ಲೆಕ್ಕಾಚಾರಗಳನ್ನು ಮಾಡುವುದು ಇಂತಹ ವಿಭಾಗಗಳಲ್ಲೊಂದು.
ಸಿಪಿಯು ಒಳಗೆ ಇದನ್ನು ನಿರ್ವಹಿಸುವ ಜವಾಬ್ದಾರಿ ಎಎಲ್‌ಯು ಎಂಬ ಭಾಗದ್ದು. ಈ ಹೆಸರಿನ ಪೂರ್ಣರೂಪ ‘ಅರ್ಥ್‌ಮೆಟಿಕ್ ಲಾಜಿಕ್ ಯುನಿಟ್’ ಎಂದು. ಕೂಡಿಸುವ – ಕಳೆಯುವ ಸರಳ ಕೆಲಸಗಳಿಂದ ಪ್ರಾರಂಭಿಸಿ ಬೂಲಿಯನ್ ಆಲ್ಜೀಬ್ರಾದವರೆಗೆ ಎಲ್ಲ ಬಗೆಯ ಲೆಕ್ಕಾಚಾರಗಳನ್ನೂ ಇದು ನಿಭಾಯಿಸಬಲ್ಲದು.
ಕಂಪ್ಯೂಟರಿನಲ್ಲಿರುವ ಯಾವುದೇ ಮಾಹಿತಿ ಅದಕ್ಕೆ ಅರ್ಥವಾಗುವುದು ದ್ವಿಮಾನ (ಬೈನರಿ) ಪದ್ಧತಿಯ ಅಂಕಿಗಳ ರೂಪದಲ್ಲಿದ್ದಾಗಲಷ್ಟೇ. ಹೀಗಾಗಿ ಎಎಲ್‌ಯುವಿನಲ್ಲಿ ನಡೆಯುವ ಲೆಕ್ಕಾಚಾರಗಳೂ ಇವೇ ಅಂಕಿಗಳನ್ನು ಬಳಸುತ್ತವೆ.
ಕಂಪ್ಯೂಟರಿನಲ್ಲಿ, ಸ್ಮಾರ್ಟ್‌ಫೋನಿನಲ್ಲಿ ಸಿಪಿಯು ಕೆಲಸವನ್ನು ಅವುಗಳ ಪ್ರಾಸೆಸರ್ ಮಾಡುತ್ತದಲ್ಲ, ಅಂತಹ ಪ್ರತಿ ಪ್ರಾಸೆಸರ್‌ನಲ್ಲೂ ಎಎಲ್‌ಯು ಇರುತ್ತದೆ. ಉನ್ನತ ಗುಣಮಟ್ಟದ ಚಿತ್ರಗಳನ್ನು (ಗ್ರಾಫಿಕ್ಸ್) ಸಂಸ್ಕರಿಸಲು – ಪ್ರದರ್ಶಿಸಲು ಬಳಕೆಯಾಗುವ ಗ್ರಾಫಿಕ್ಸ್ ಪ್ರಾಸೆಸಿಂಗ್ ಯುನಿಟ್(ಜಿಪಿಯು)ನಲ್ಲೂ ಎಎಲ್‌ಯು ಇರುತ್ತದೆ.

EXIF

ಎಕ್ಸಿಫ್
Kannada Equivalent: (ರೂಪಿಸಬೇಕಿದೆ)
Short Description : ಎಕ್ಸ್‌ಚೇಂಜಬಲ್ ಇಮೇಜ್ ಫೈಲ್ ಫಾರ್ಮ್ಯಾಟ್; ಡಿಜಿಟಲ್ ಛಾಯಾಚಿತ್ರಗಳ ತಾಂತ್ರಿಕ ವಿವರಗಳನ್ನು ನೀಡುವ ಮಾಹಿತಿ
Long Description: ಡಿಜಿಟಲ್ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸಿದಾಗ ಆ ಚಿತ್ರದ ಜೊತೆಗೆ ಉಳಿಸಿಡಲಾಗುವ ಹೆಚ್ಚುವರಿ ಮಾಹಿತಿಯೇ ಎಕ್ಸಿಫ್. ಇದು ‘ಎಕ್ಸ್‌ಚೇಂಜಬಲ್ ಇಮೇಜ್ ಫೈಲ್ ಫಾರ್ಮ್ಯಾಟ್’ ಎಂಬ ಹೆಸರಿನ ಹ್ರಸ್ವರೂಪ. ಚಿತ್ರ ಕ್ಲಿಕ್ಕಿಸಿದ್ದು ಯಾವಾಗ, ಉಪಯೋಗಿಸಿದ ಕ್ಯಾಮೆರಾ ಯಾವುದು, ಬಳಸಿದ ಸೆಟಿಂಗ್ (ಐಎಸ್‌ಒ, ಶಟರ್ ಸ್ಪೀಡ್, ಅಪರ್ಚರ್ ಇತ್ಯಾದಿ) ಏನು ಎನ್ನುವ ವಿವರವೆಲ್ಲ ಎಕ್ಸಿಫ್ ಡೇಟಾದಲ್ಲಿರುತ್ತದೆ. ಅಷ್ಟೇ ಅಲ್ಲ, ನಿಮ್ಮ ಕ್ಯಾಮೆರಾದಲ್ಲಿ (ಮೊಬೈಲ್ ಕ್ಯಾಮೆರಾ ಸೇರಿದಂತೆ) ಜಿಪಿಎಸ್ ಸೌಲಭ್ಯ ಬಳಸುತ್ತಿದ್ದರೆ ಚಿತ್ರ ಕ್ಲಿಕ್ಕಿಸಿದ್ದು ಎಲ್ಲಿ ಎನ್ನುವ ಮಾಹಿತಿಯೂ ಇದರಲ್ಲಿ ಸೇರಿಕೊಳ್ಳುತ್ತದೆ.
ಚಿತ್ರಗಳನ್ನು ವೀಕ್ಷಿಸುವ ಅಥವಾ ಸಂಪಾದಿಸುವ ಹಲವು ತಂತ್ರಾಂಶಗಳಲ್ಲಿ ನೀವು ಚಿತ್ರದ ಎಕ್ಸಿಫ್ ವಿವರಗಳನ್ನು ನೋಡಬಹುದು. ಕೆಲವೊಮ್ಮೆ ಚಿತ್ರದ ಬಗ್ಗೆ ಇಷ್ಟೆಲ್ಲ ವಿವರ ಹಂಚಿಕೊಳ್ಳುವುದು ಅನಗತ್ಯ ಎನಿಸುತ್ತದಲ್ಲ, ಅಂತಹ ಸಂದರ್ಭಗಳಲ್ಲಿ ಚಿತ್ರದಿಂದ ಎಕ್ಸಿಫ್ ವಿವರಗಳನ್ನು ತೆಗೆದುಹಾಕಲು ಅನುವುಮಾಡಿಕೊಡುವ ತಂತ್ರಾಂಶಗಳೂ ಇವೆ.

Extranet

ಎಕ್ಸ್‌ಟ್ರಾನೆಟ್
Kannada Equivalent: (ರೂಪಿಸಬೇಕಿದೆ)
Short Description : ನಿರ್ಬಂಧಿತ ಪ್ರವೇಶವಿರುವ ಇಂಟ್ರಾನೆಟ್ ಅನ್ನು ಜಾಲತಾಣವೊಂದರ ಮೂಲಕ ಪ್ರವೇಶಿಸಲು ಅನುವುಮಾಡಿಕೊಡುವ ವ್ಯವಸ್ಥೆ
Long Description: ಭಾರೀ ಸಂಖ್ಯೆಯ ಕಂಪ್ಯೂಟರುಗಳ ಪರಸ್ಪರ ಸಂಪರ್ಕದಿಂದ ರೂಪುಗೊಂಡ ಬೃಹತ್ ಜಾಲವೇ ಇಂಟರ್‌ನೆಟ್. ಯಾರು ಬೇಕಿದ್ದರೂ ಇದರ ಸಂಪರ್ಕವನ್ನು ಪಡೆದುಕೊಳ್ಳುವುದು, ಮುಕ್ತವಾಗಿ ಬಳಸುವುದು ಸಾಧ್ಯ.
ನಿರ್ದಿಷ್ಟ ಮಿತಿಯೊಳಗೆ ಮಾತ್ರವೇ ಕಾರ್ಯನಿರ್ವಹಿಸುವ, ಆಯ್ದ ಬಳಕೆದಾರರಿಗಷ್ಟೇ ಪ್ರವೇಶವಿರುವ ಖಾಸಗಿ ಜಾಲಗಳೂ ಇವೆ. ಇಂತಹ ಜಾಲಗಳಿಗೆ ಇಂಟ್ರಾನೆಟ್ ಎಂದು ಹೆಸರು.
ಈ ಎರಡೂ ಜಾಲಗಳನ್ನು ಬಳಸಿಕೊಳ್ಳುವುದು ‘ಎಕ್ಸ್‌ಟ್ರಾನೆಟ್’ ಪರಿಕಲ್ಪನೆಯ ವೈಶಿಷ್ಟ್ಯ. ನಿರ್ಬಂಧಿತ ಪ್ರವೇಶವಿರುವ ಇಂಟ್ರಾನೆಟ್ ಅನ್ನು ಜಾಲತಾಣವೊಂದರ ಮೂಲಕ ಪ್ರವೇಶಿಸಲು ಇದು ಅನುವುಮಾಡಿಕೊಡುತ್ತದೆ. ಜಾಲತಾಣದಲ್ಲಿರುವ ಈ ವ್ಯವಸ್ಥೆ ಅಂತರಜಾಲದ ಮೂಲಸೌಕರ್ಯ ಬಳಸಿಕೊಳ್ಳುತ್ತದಾದರೂ ಸೂಕ್ತ ಅನುಮತಿಯಿರುವ (ಅದಕ್ಕೆ ಬೇಕಾದ ಪಾಸ್‌ವರ್ಡ್ ಇತ್ಯಾದಿಗಳನ್ನು ತಿಳಿದಿರುವ) ಬಳಕೆದಾರರು ಮಾತ್ರ ಇಂಟ್ರಾನೆಟ್ ಅನ್ನು ಪ್ರವೇಶಿಸುವುದು ಸಾಧ್ಯವಾಗುತ್ತದೆ.
ಹೊರಗಿನ ಬಳಕೆದಾರರೊಡನೆ ತಮ್ಮ ಇಂಟ್ರಾನೆಟ್‌ನಲ್ಲಿರುವ ಮಾಹಿತಿಯನ್ನು ಹಂಚಿಕೊಳ್ಳುವ ಅವಶ್ಯಕತೆ ಬಂದಾಗ ಸಂಸ್ಥೆಗಳು ಎಕ್ಸ್‌ಟ್ರಾನೆಟ್ ಪರಿಕಲ್ಪನೆಯ ಮೊರೆಹೋಗುತ್ತವೆ. ಇಮೇಲ್ ಸೇವೆಗೋ ಸಮಾಜಜಾಲಕ್ಕೋ ಲಾಗ್‌ಇನ್ ಆಗುವಂತೆಯೇ ಅಂತಹ ಬಳಕೆದಾರರು ಬ್ರೌಸರ್ ತಂತ್ರಾಂಶ ಬಳಸಿ ಸಂಸ್ಥೆಯ ಇಂಟ್ರಾನೆಟ್ ಪ್ರವೇಶಿಸುವುದು ಸಾಧ್ಯ. ಹೀಗೆ ಪ್ರವೇಶಿಸುವಾಗ ಸಾಮಾನ್ಯ ಜಾಲತಾಣಗಳ ಹೋಲಿಕೆಯಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಇಂತಹ ಬಳಕೆದಾರರು ಇಂಟ್ರಾನೆಟ್‌ನಲ್ಲಿರುವ ಮಾಹಿತಿಯಲ್ಲಿ ನಿರ್ದಿಷ್ಟ ಭಾಗವನ್ನಷ್ಟೇ ಪಡೆದುಕೊಳ್ಳುವಂತೆ ನಿರ್ಬಂಧಿಸುವ ಅಭ್ಯಾಸಗಳೂ ಇವೆ.

HTTP

ಎಚ್‌ಟಿಟಿಪಿ
Kannada Equivalent: (ರೂಪಿಸಬೇಕಿದೆ)
Short Description : ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್; ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಯ ವಿನಿಮಯ ಮಾಡಿಕೊಳ್ಳುವಾಗ ಪಾಲಿಸಬೇಕಾದ ನಿಯಮಗಳನ್ನು ಸೂಚಿಸುವ ಶಿಷ್ಟಾಚಾರ
Long Description: ಬಹುತೇಕ ಎಲ್ಲ ಜಾಲತಾಣಗಳ ವಿಳಾಸವೂ ‘ಹೆಚ್‌ಟಿಟಿಪಿ’ ಎನ್ನುವ ಅಕ್ಷರಗಳಿಂದ ಪ್ರಾರಂಭವಾಗುತ್ತದಲ್ಲ, ಇಲ್ಲಿ ‘ಹೆಚ್‌ಟಿಟಿಪಿ’ ಎನ್ನುವುದು ‘ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್’ ಎಂಬ ಹೆಸರಿನ ಹ್ರಸ್ವರೂಪ.
ಇಂದಿನ ಕಂಪ್ಯೂಟರ್ ಪ್ರಪಂಚದಲ್ಲಿ ಪ್ರತಿ ಕ್ಷಣವೂ ಒಂದಲ್ಲ ಒಂದು ಬಗೆಯ ಸಂವಹನ ನಡೆಯುತ್ತಿರುತ್ತದೆ. ಬಳಕೆದಾರರೊಡನೆ, ಕಂಪ್ಯೂಟರಿನ ವಿವಿಧ ಯಂತ್ರಾಂಶಗಳ ನಡುವೆ, ಅಂತರಜಾಲದಲ್ಲಿರುವ ಬೇರೆ ಕಂಪ್ಯೂಟರುಗಳೊಡನೆ ಮಾಹಿತಿಯ ವಿನಿಮಯ ಸಾಗಿರುತ್ತದೆ. ಹೀಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಲ್ಲ, ಅದಕ್ಕೆ ಹಲವು ಶಿಷ್ಟಾಚಾರಗಳನ್ನು (ಪ್ರೋಟೋಕಾಲ್) ರೂಪಿಸಲಾಗಿದೆ.
ಹೆಚ್‌ಟಿಟಿಪಿ ಕೂಡ ಇಂತಹುದೇ ಒಂದು ಶಿಷ್ಟಾಚಾರ. ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಬಹುತೇಕ ಸಂವಹನವೆಲ್ಲ ಈ ಶಿಷ್ಟಾಚಾರಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ನಾವು ಬ್ರೌಸರಿನಲ್ಲಿ ತಾಣದ ವಿಳಾಸ ಟೈಪ್ ಮಾಡಿ ಎಂಟರ್ ಒತ್ತಿದಾಗ ವೆಬ್ ಪುಟ ತೆರೆದುಕೊಳ್ಳುತ್ತದಲ್ಲ, ಇದರ ಹಿನ್ನೆಲೆಯಲ್ಲಿ ನಮ್ಮ ಕಂಪ್ಯೂಟರಿನಿಂದ ಜಾಲತಾಣದ ಸರ್ವರ್‌ಗೆ ಹೋದ ಹೆಚ್‌ಟಿಟಿಪಿ ಆದೇಶವೊಂದು ಕೆಲಸಮಾಡಿರುತ್ತದೆ. ಯಾವ ಸಂದರ್ಭದಲ್ಲಿ ಯಾವರೀತಿಯ ಎರರ್ ಸಂದೇಶಗಳನ್ನು ತೋರಿಸಬೇಕು ಎನ್ನುವುದೂ ಹೆಚ್‌ಟಿಟಿಪಿ ಶಿಷ್ಟಾಚಾರದ್ದೇ ನಿಯಮ.

Https

ಎಚ್‌ಟಿಟಿಪಿಎಸ್
Kannada Equivalent: (ರೂಪಿಸಬೇಕಿದೆ)
Short Description : ಎಚ್‌ಟಿಟಿಪಿ ಸೆಕ್ಯೂರ್; ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಯ ಸುರಕ್ಷಿತ ವಿನಿಮಯವನ್ನು ಸಾಧ್ಯವಾಗಿಸುವ ಶಿಷ್ಟಾಚಾರ
Long Description: ಆನ್‌ಲೈನ್ ಲೋಕದಲ್ಲಿ ಹಣಕಾಸಿನ ವಹಿವಾಟು ನಡೆಸುವ ಸಂದರ್ಭದಲ್ಲಿ ಬಳಸುವ ಜಾಲತಾಣದ ವಿಳಾಸ ‘https://’ ಎಂದು ಪ್ರಾರಂಭವಾಗುವುದನ್ನು ನೀವು ನೋಡಿರಬಹುದು, ಬ್ರೌಸರಿನ ಅಡ್ರೆಸ್ ಪಟ್ಟಿಯಲ್ಲಿ ಪುಟ್ಟದೊಂದು ಬೀಗದ ಚಿತ್ರ ಕಾಣಿಸಿಕೊಳ್ಳುವುದನ್ನೂ ಗಮನಿಸಿರಬಹುದು. ಸಾಮಾನ್ಯವಾಗಿ ಕಾಣಸಿಗುವ httpಯ ಹೋಲಿಕೆಯಲ್ಲಿ ‘https://’ನಲ್ಲಿರುವ ಹೆಚ್ಚುವರಿ ‘s’ ಸೆಕ್ಯೂರ್ ಅರ್ಥಾತ್ ಸುರಕ್ಷಿತ ಎನ್ನುವುದರ ಸೂಚಕ.
ಇಂತಹ ಸುರಕ್ಷಿತ ತಾಣಗಳು ಸಾಮಾನ್ಯ ತಾಣಗಳಿಗಿಂತ ಪ್ರತ್ಯೇಕವಾದ ಶಿಷ್ಟತೆಯನ್ನು (ಪ್ರೋಟೋಕಾಲ್) ಬಳಸುತ್ತವೆ. ನೀವು ತೆರೆದಿರುವ ತಾಣದ ವಿವರಗಳನ್ನು ಪರಿಶೀಲಿಸಿ ಅದು ವಿಶ್ವಾಸಾರ್ಹವೋ ಅಲ್ಲವೋ ಎಂದು ನಿಮಗೆ ತಿಳಿಸುವುದು ಈ ಶಿಷ್ಟತೆಯ ಕೆಲಸ. ಅಷ್ಟೇ ಅಲ್ಲ, ಈ ವ್ಯವಸ್ಥೆ ಬಳಕೆದಾರ ಹಾಗೂ ಜಾಲತಾಣದ ನಡುವಿನ ಮಾಹಿತಿ ಸಂವಹನವನ್ನು ಸುರಕ್ಷಿತಗೊಳಿಸುತ್ತದೆ. ಇದರಿಂದಾಗಿ ಜಾಲತಾಣದಲ್ಲಿ ನೀವು ದಾಖಲಿಸುವ ಪಾಸ್‌ವರ್ಡ್ (ಗುಪ್ತಪದ), ಕ್ರೆಡಿಟ್ ಕಾರ್ಡ್ ವಿವರ ಮುಂತಾದ ಖಾಸಗಿ ಮಾಹಿತಿ ಅಂತರಜಾಲದ ಮೂಲಕ ಸಾಗುವಾಗ ಬೇರೆ ಯಾರೂ ಅದನ್ನು ಕದಿಯುವುದು ಸಾಧ್ಯವಿಲ್ಲದಂತಾಗುತ್ತದೆ.
ಹಣಕಾಸು ವಹಿವಾಟು ನಡೆಸುವಾಗ ಮಾತ್ರವೇ ಅಲ್ಲ, ಇಮೇಲ್ ಹಾಗೂ ಸಮಾಜಜಾಲಗಳ ಮೂಲಕವೂ ಸಾಕಷ್ಟು ಪ್ರಮಾಣದ ಖಾಸಗಿ ಮಾಹಿತಿ ವಿನಿಮಯವಾಗುವುದರಿಂದ ಆ ತಾಣಗಳಿಗೂ ಹೆಚ್ಚುವರಿ ಸುರಕ್ಷತೆ ಬೇಕಾಗುತ್ತದೆ. ಹೀಗಾಗಿಯೇ ಇಂತಹ ಸೇವೆ ಒದಗಿಸುವ ಹಲವಾರು ತಾಣಗಳು ಈ ರೀತಿಯ ಹೆಚ್ಚುವರಿ ಸುರಕ್ಷತೆ ಬಳಸುತ್ತವೆ.

HDMI

ಎಚ್‌ಡಿಎಂಐ
Kannada Equivalent: (ರೂಪಿಸಬೇಕಿದೆ)
Short Description : ಹೈ ಡೆಫನಿಶನ್ ಮಲ್ಟಿಮೀಡಿಯಾ ಇಂಟರ್‌ಫೇಸ್; ಉನ್ನತ ಗುಣಮಟ್ಟದ ವೀಡಿಯೋ ಸಂಕೇತಗಳನ್ನು ಅಷ್ಟೇ ಉತ್ತಮ ಗುಣಮಟ್ಟದಲ್ಲಿ ವೀಕ್ಷಿಸಲು ಅನುವುಮಾಡಿಕೊಡುವ ತಂತ್ರಜ್ಞಾನ
Long Description: ಉತ್ತಮ ಗುಣಮಟ್ಟದ ವೀಡಿಯೋ ಚಿತ್ರೀಕರಿಸುವುದು ಈಗ ಬಹಳ ಸುಲಭ. ಹೀಗೆ ಚಿತ್ರೀಕರಿಸಿದ ವೀಡಿಯೋಗಳನ್ನು ಅಷ್ಟೇ ಒಳ್ಳೆಯ ಗುಣಮಟ್ಟದಲ್ಲಿ ನೋಡಲು ನೆರವಾಗುವ ತಂತ್ರಜ್ಞಾನದ ಹೆಸರು ಎಚ್‌ಡಿಎಂಐ. ಈ ಹೆಸರು ‘ಹೈ ಡೆಫನಿಶನ್ ಮಲ್ಟಿಮೀಡಿಯಾ ಇಂಟರ್‌ಫೇಸ್’ ಎನ್ನುವುದರ ಹ್ರಸ್ವರೂಪ. ಅತ್ಯುತ್ತಮ ಗುಣಮಟ್ಟದ ವೀಡಿಯೋ ಸಂಕೇತಗಳನ್ನು ಅತ್ಯಂತ ಕ್ಷಿಪ್ರವಾಗಿ ವರ್ಗಾಯಿಸುವ ಸಾಮರ್ಥ್ಯ ಈ ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯ.
ಎಚ್‌ಡಿ ಟೀವಿಗಳಲ್ಲಿ, ಡಿವಿಡಿ ಪ್ಲೇಯರುಗಳಲ್ಲಿ, ಸೆಟ್ ಟಾಪ್ ಬಾಕ್ಸುಗಳಲ್ಲಿ, ಕಂಪ್ಯೂಟರುಗಳಲ್ಲಿ, ಹಲವಾರು ಡಿಜಿಟಲ್ ಕ್ಯಾಮೆರಾ, ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೂ ಈಗ ಎಚ್‌ಡಿಎಂಐ ಪೋರ್ಟ್ ಇರುತ್ತದೆ. ನೋಡಲು ಸರಿಸುಮಾರು ಯುಎಸ್‌ಬಿ ಪೋರ್ಟ್‌ನಂತೆಯೇ ಕಾಣುವ ಎಚ್‌ಡಿಎಂಐ ಪೋರ್ಟ್ ಮೂಲಕ ನಾವು ವಿವಿಧ ಸಾಧನಗಳನ್ನು ಪರಸ್ಪರ ಸಂಪರ್ಕಿಸಿ ಎಚ್‌ಡಿ ಗುಣಮಟ್ಟದ ವೀಡಿಯೋ ವೀಕ್ಷಿಸುವುದು ಸಾಧ್ಯ.
ಕ್ರೋಮ್‌ಕಾಸ್ಟ್‌ನಂತಹ ಮೀಡಿಯಾ ಸ್ಟ್ರೀಮಿಂಗ್ ಸಾಧನಗಳನ್ನೂ ಎಚ್‌ಡಿಎಂಐ ಪೋರ್ಟ್ ಮೂಲಕ ಸಂಪರ್ಕಿಸಲಾಗುತ್ತದೆ. ಹಲವು ಪ್ರೊಜೆಕ್ಟರುಗಳೂ ಎಚ್‌ಡಿಎಂಐ ಸಂಪರ್ಕವನ್ನೇ ಬಳಸುತ್ತವೆ. ಅಂದಹಾಗೆ ಎಚ್‌ಡಿಎಂಐ ಸೌಲಭ್ಯವಿರುವ ಉಪಕರಣಗಳನ್ನು ಸಂಪರ್ಕಿಸಲು ಎಚ್‌ಡಿಎಂಐ ಕೇಬಲ್ಲುಗಳನ್ನೇ ಬಳಸಬೇಕಾದ್ದು ಕಡ್ಡಾಯ.

NFC

ಎನ್‌ಎಫ್‌ಸಿ
Kannada Equivalent: (ರೂಪಿಸಬೇಕಿದೆ)
Short Description : ನಿಯರ್ ಫೀಲ್ಡ್ ಕಮ್ಯೂನಿಕೇಶನ್; ಪರಸ್ಪರ ಸಮೀಪವಿರುವ ಸಾಧನಗಳ ನಡುವೆ ನಿಸ್ತಂತು ಸಂವಹನವನ್ನು ಸಾಧ್ಯವಾಗಿಸುವ ತಂತ್ರಜ್ಞಾನ
Long Description: ಬಹುತೇಕ ಮೊಬೈಲ್ ಫೋನುಗಳಲ್ಲಿ, ಹಲವು ಕ್ರೆಡಿಟ್ ಕಾರ್ಡುಗಳಲ್ಲಿ ಎನ್‌ಎಫ್‌ಸಿ ಸೌಲಭ್ಯವಿರುವುದರ ಕುರಿತು ನಾವು ಕೇಳುತ್ತಿರುತ್ತೇವೆ. ಎನ್‌ಎಫ್‌ಸಿ ಎಂಬ ಈ ಹೆಸರು ‘ನಿಯರ್ ಫೀಲ್ಡ್ ಕಮ್ಯೂನಿಕೇಶನ್’ ಎನ್ನುವುದರ ಹ್ರಸ್ವರೂಪ. ಪರಸ್ಪರ ಸಮೀಪವಿರುವ ಸಾಧನಗಳ ನಡುವೆ ನಿಸ್ತಂತು ಸಂವಹನವನ್ನು (ವೈರ್‌ಲೆಸ್ ಕಮ್ಯೂನಿಕೇಶನ್) ಸಾಧ್ಯವಾಗಿಸುವ ತಂತ್ರಜ್ಞಾನ ಇದು.
ಮ್ಯಾಗ್ನೆಟಿಕ್ ಇಂಡಕ್ಷನ್ (ಕಾಂತ ಪ್ರೇರಣೆ) ಎಂಬ ವಿದ್ಯಮಾನವನ್ನು ಬಳಸಿಕೊಂಡು ಕೆಲಸಮಾಡುವ ಈ ತಂತ್ರಜ್ಞಾನ ಪರಸ್ಪರ ಹತ್ತಿರದಲ್ಲಿರುವ ಎರಡು ಸಾಧನಗಳ ನಡುವೆ ಮಾಹಿತಿ ವಿನಿಮಯವನ್ನು ಸಾಧ್ಯವಾಗಿಸುತ್ತದೆ. ಮಾಹಿತಿ ವಿನಿಮಯವಷ್ಟೇ ಏಕೆ, ನಿಸ್ತಂತು ಹಣಪಾವತಿಯಿಂದ ಜಾಹೀರಾತು ಪ್ರಸಾರದವರೆಗೆ ಹಲವು ಉದ್ದೇಶಗಳಿಗಾಗಿ ಎನ್‌ಎಫ್‌ಸಿ ಬಳಕೆ ಸಾಧ್ಯ. ಮೊಬೈಲಿನೊಡನೆ ಬ್ಲೂಟೂತ್ ಸಂಪರ್ಕ ಕಲ್ಪಿಸಿಕೊಳ್ಳಲು ಎನ್‌ಎಫ್‌ಸಿ ಬಳಸುವ ಸ್ಪೀಕರ್ – ಹೆಡ್‌ಫೋನ್ ಇತ್ಯಾದಿಗಳೂ ಇವೆ.
ಸೂಪರ್‌ಮಾರ್ಕೆಟಿನಲ್ಲಿ ಕೊಂಡ ವಸ್ತುಗಳಿಗೆ ಹಣ ಪಾವತಿಸಲು ಬಿಲ್ಲಿಂಗ್ ವಿಭಾಗದಲ್ಲಿರುವ ರೀಡರಿನ ಮುಂದೆ ಎನ್‌ಎಫ್‌ಸಿ ಕ್ರೆಡಿಟ್ ಕಾರ್ಡನ್ನೋ ಮೊಬೈಲ್ ಫೋನನ್ನೋ ಹಿಡಿದು ಮುಂದೆ ಸಾಗುವ ಕಲ್ಪನೆಯನ್ನು ಈ ತಂತ್ರಜ್ಞಾನ ಬಳಸಿ ಸಾಕಾರಗೊಳಿಸಬಹುದು. ಹಾಗೆ ಮಾಡಿದಾಗ ಎನ್‌ಎಫ್‌ಸಿ ಮೂಲಕ ವರ್ಗಾವಣೆಯಾಗುವ ಮಾಹಿತಿ ಬಳಸಿ ಬಿಲ್ಲಿನ ಹಣವನ್ನು ನಮ್ಮ ಖಾತೆಯಿಂದ ಅಂಗಡಿಯವರ ಖಾತೆಗೆ ವರ್ಗಾಯಿಸುವುದು ಸಾಧ್ಯವಾಗುತ್ತದೆ.

Encoding

ಎನ್‌ಕೋಡಿಂಗ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರಿನಂತಹ ಸಾಧನಗಳಲ್ಲಿ ದಾಖಲಿಸಿದ ಪಠ್ಯವನ್ನು ದ್ವಿಮಾನ ಪದ್ಧತಿಯ ಅಂಕಿಗಳ ರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆ
Long Description: ಕಂಪ್ಯೂಟರಿನಲ್ಲಾಗಲಿ ಸ್ಮಾರ್ಟ್‌ಫೋನಿನಲ್ಲೇ ಆಗಲಿ, ನಾವು ಟೈಪ್ ಮಾಡಿದ ಪಠ್ಯ ಅಂತಿಮವಾಗಿ ಶೇಖರವಾಗುವುದು ದ್ವಿಮಾನ ಪದ್ಧತಿಯ (ಬೈನರಿ) ಅಂಕಿಗಳ ರೂಪದಲ್ಲೇ. ಹೀಗೆ ಶೇಖರವಾಗುವ ಪ್ರತಿ ಅಕ್ಷರ, ಅಂಕಿ ಹಾಗೂ ವ್ಯಾಕರಣ ಚಿಹ್ನೆಯನ್ನೂ ನಿರ್ದಿಷ್ಟವಾದ ಒಂದು ಸಂಖ್ಯೆ ಪ್ರತಿನಿಧಿಸುತ್ತದೆ.
ಪಠ್ಯವನ್ನು ಹೀಗೆ ಸಂಖ್ಯಾರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆಯಿದೆಯಲ್ಲ, ಅದನ್ನು ‘ಎನ್‌ಕೋಡಿಂಗ್’ ಎಂದು ಕರೆಯುತ್ತಾರೆ. ಇಲ್ಲಿ ನಿರ್ದಿಷ್ಟ ಸೂತ್ರ ಬಳಸಿಕೊಂಡು ಮೂಲ ದತ್ತಾಂಶವನ್ನು ಮುಂದಿನ ಬಳಕೆಗಾಗಿ (ಉದಾ: ಹಾರ್ಡ್ ಡಿಸ್ಕ್‌ನಲ್ಲಿ ಉಳಿಸಿಡಲು) ಪರಿವರ್ತಿಸಲಾಗುತ್ತದೆ.
ಹೀಗೆ ಪರಿವರ್ತಿಸುವಾಗ ಯಾವ ಅಕ್ಷರವನ್ನು ಯಾವ ಸಂಖ್ಯೆ ಪ್ರತಿನಿಧಿಸಬೇಕು ಎಂದು ತಿಳಿಸುವ ಕೆಲಸವನ್ನು ಎನ್‌ಕೋಡಿಂಗ್ ವ್ಯವಸ್ಥೆಗಳು ಮಾಡುತ್ತವೆ. ನಾವು ಆಗಿಂದಾಗ್ಗೆ ಕೇಳುವ ಹೆಸರುಗಳಾದ ಆಸ್ಕಿ (ಅಮೆರಿಕನ್ ಸ್ಟಾಂಡರ್ಡ್ ಕೋಡ್ ಫಾರ್ ಇನ್‌ಫರ್ಮೇಶನ್ ಇಂಟರ್‌ಚೇಂಜ್), ಯುನಿಕೋಡ್ ಮುಂತಾದವೆಲ್ಲ ಎನ್‌ಕೋಡಿಂಗ್ ವ್ಯವಸ್ಥೆಗಳೇ.
ಆಸ್ಕಿಯ ಉದಾಹರಣೆಯನ್ನೇ ತೆಗೆದುಕೊಂಡರೆ ೦ಯಿಂದ ೧೨೭ರವರೆಗಿನ ಸಂಖ್ಯೆಗಳು ಅಲ್ಲಿ ಇಂಗ್ಲಿಷ್ ವರ್ಣಮಾಲೆ, ಅಂಕಿಗಳು ಹಾಗೂ ಕೆಲವು ಚಿಹ್ನೆಗಳನ್ನು ಪ್ರತಿನಿಧಿಸುತ್ತವೆ. ಸೀಮಿತ ಸಂಖ್ಯೆಯ ಅಕ್ಷರ ಹಾಗೂ ಚಿಹ್ನೆಗಳನ್ನಷ್ಟೇ ಪ್ರತಿನಿಧಿಸುವ ಈ ವ್ಯವಸ್ಥೆಗೆ ತದ್ವಿರುದ್ಧವಾಗಿ ವಿಶ್ವದ ಹಲವು ಲಿಪಿಗಳನ್ನು ಒಂದೇ ಎನ್‌ಕೋಡಿಂಗ್ ವ್ಯವಸ್ಥೆ ಮೂಲಕ ಪ್ರತಿನಿಧಿಸುತ್ತಿರುವುದು ಯುನಿಕೋಡ್‌ನ ಹೆಗ್ಗಳಿಕೆ. ಹೀಗಾಗಿಯೇ ಒಂದೇ ಕಡತದಲ್ಲಿ ಹಲವು ಭಾಷೆಗಳ ಪಠ್ಯವನ್ನು – ನಿರ್ದಿಷ್ಟ ಫಾಂಟ್‌ಗಳನ್ನೇ ಉಪಯೋಗಿಸಬೇಕೆಂಬ ನಿರ್ಬಂಧವಿಲ್ಲದೆ – ಉಳಿಸಿಡುವುದನ್ನು ಯುನಿಕೋಡ್ ಸಾಧ್ಯವಾಗಿಸುತ್ತದೆ.

Encryption

ಎನ್‌ಕ್ರಿಪ್ಶನ್
Kannada Equivalent: ಗೂಢ ಲಿಪೀಕರಣ
Short Description : ಜಾಲಗಳ ಮೂಲಕ ಮಾಹಿತಿ ರವಾನಿಸುವಾಗ ನಿರ್ದಿಷ್ಟ ಸೂತ್ರ ಬಳಸಿ ಗೂಢಲಿಪಿಯನ್ನಾಗಿ ಪರಿವರ್ತಿಸುವ ಮೂಲಕ ಅದು ವಿಳಾಸದಾರರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳುವ ಪ್ರಕ್ರಿಯೆ
Long Description: ಅಂತರಜಾಲ ಸಂಪರ್ಕವಿಲ್ಲದ ಕಾಲದಲ್ಲಿ ನಮ್ಮ ಕಂಪ್ಯೂಟರಿನ ತಂತ್ರಾಂಶಗಳನ್ನು ಹೇಗೆ ಬಳಸುತ್ತಿದ್ದೆವೋ ವಿವಿಧ ಜಾಲತಾಣಗಳನ್ನು ಈಗ ಅಷ್ಟೇ ಸರಾಗವಾಗಿ ಬಳಸುತ್ತೇವೆ. ಆದರೆ ಅಂತರಜಾಲ ಸಂಪರ್ಕವಿಲ್ಲದ ಕಂಪ್ಯೂಟರಿನಲ್ಲಿ ತಂತ್ರಾಂಶ ಬಳಸುವುದಕ್ಕೂ ಜಾಲತಾಣಗಳನ್ನು ಬಳಸುವುದಕ್ಕೂ ಒಂದು ಮುಖ್ಯ ವ್ಯತ್ಯಾಸವಿದೆ. ಜಾಲತಾಣಗಳ ಮೂಲಕ ವ್ಯವಹರಿಸುವಾಗ ಅಪಾರ ಪ್ರಮಾಣದ ಮಾಹಿತಿಯನ್ನು ನಾವು ನಮ್ಮ ಕಂಪ್ಯೂಟರಿನಿಂದ ಹೊರಕ್ಕೆ ಕಳುಹಿಸುತ್ತೇವೆ ಎನ್ನುವುದೇ ಆ ವ್ಯತ್ಯಾಸ.
ಹೀಗೆ ಹೊರಹೋಗುವ ಮಾಹಿತಿಯಲ್ಲಿ ಒಂದಷ್ಟು ನಮ್ಮ ಖಾಸಗಿ ಮಾಹಿತಿಯಾಗಿರುತ್ತದೆ, ಇನ್ನಷ್ಟು ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟದ್ದೂ ಇರುತ್ತದೆ. ಈ ಮಾಹಿತಿಯೆಲ್ಲ ಕಿಡಿಗೇಡಿಗಳ ಕೈಗೆ ಸಿಕ್ಕದಂತೆ, ನಾವು ಯಾರಿಗೆ ಕಳುಹಿಸಿದ್ದೆವೋ ಅವರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳಲು ಎನ್‌ಕ್ರಿಪ್‌ಶನ್, ಅಂದರೆ ಗೂಢ ಲಿಪೀಕರಣವನ್ನು ಬಳಸಲಾಗುತ್ತದೆ.
ಕಳುಹಿಸಲಾಗುವ ಮಾಹಿತಿಯನ್ನು ನಿರ್ದಿಷ್ಟ ಸೂತ್ರ ಬಳಸಿ ಗೂಢಲಿಪಿಯನ್ನಾಗಿ ಪರಿವರ್ತಿಸುವುದು ಎನ್‌ಕ್ರಿಪ್‌ಶನ್‌ನ ಮೂಲ ಮಂತ್ರ. ಮನೆಯ ಬಾಗಿಲಿಗೆ ಎರಡು ಡೋರ್‌ಲಾಕ್ ಇರುತ್ತದಲ್ಲ, ಹಾಗೆ ಗೂಢಲಿಪಿಯನ್ನಾಗಿ ಪರಿವರ್ತಿಸುವ ಸೂತ್ರದಲ್ಲೂ ಎರಡು ಭಾಗಗಳಿರುತ್ತವೆ. ಇವೆರಡೂ ಬೀಗದ ಕೀಲಿಗಳು ಸಿಕ್ಕವರು ಮಾತ್ರ ಗೂಢಲಿಪಿಯನ್ನು ಮತ್ತೆ ಮೂಲರೂಪಕ್ಕೆ ಬದಲಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಮಾಹಿತಿ ಸಂವಹನದಲ್ಲಿ ಎನ್‌ಕ್ರಿಪ್‌ಶನ್‌ನ ಹಲವು ವಿಧಾನಗಳು ಬಳಕೆಯಾಗುತ್ತವೆ. ನಾವು ಯಾರಿಗೆ ಕಳುಹಿಸಿದ್ದೆವೋ ಅವರು ನಾವು ಕಳುಹಿಸಿದ ಮಾಹಿತಿಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎನ್ನುವುದು ಆಯಾ ವಿಧಾನವನ್ನು ಅವಲಂಬಿಸಿರುತ್ತದೆ. ‘ಪಬ್ಲಿಕ್ ಕೀ ಎನ್‌ಕ್ರಿಪ್‌ಶನ್’ ಎನ್ನುವ ವಿಧಾನದಲ್ಲಿ ಮೇಲಿನ ಉದಾಹರಣೆಯ ಎರಡು ಬೀಗಗಳ ಪೈಕಿ ಒಂದರ ಕೀಲಿ ಮೂಲ ವಿಳಾಸದಾರರ ಬಳಿಯಲ್ಲಿ ಮಾತ್ರವೇ ಇರುವಂತೆ ನೋಡಿಕೊಳ್ಳಲಾಗುತ್ತದೆ.

API

ಎಪಿಐ
Kannada Equivalent: (ರೂಪಿಸಬೇಕಿದೆ)
Short Description : ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್‌ಫೇಸ್; ಎರಡು ತಂತ್ರಾಂಶಗಳ ನಡುವೆ ಮಾಹಿತಿಯ ವಿನಿಮಯ ಸಾಧ್ಯವಾಗಿಸುವ ವ್ಯವಸ್ಥೆ
Long Description: ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ನೂರೆಂಟು ಬಗೆಯ ಕೆಲಸಗಳನ್ನು ಸುಲಭವಾಗಿ ಸಾಧಿಸಿಕೊಳ್ಳಬಹುದು. ಇದಕ್ಕೆಲ್ಲ ಬೇಕಾದ ತಂತ್ರಾಂಶಗಳನ್ನು (ಸಾಫ್ಟ್‌ವೇರ್) ಸಿದ್ಧಪಡಿಸುವುದು ತಂತ್ರಾಂಶ ಪರಿಣತರ ಕೆಲಸ.
ಯಾವುದೇ ತಂತ್ರಾಂಶವಾದರೂ ಅದರಿಂದ ನಿರ್ದಿಷ್ಟವಾದ ಕೆಲ ಅಪೇಕ್ಷೆಗಳಿರುತ್ತವೆ. ಅಂತಹ ಪ್ರತಿಯೊಂದು ಅಪೇಕ್ಷೆಯನ್ನೂ ನಾವು ಸಿದ್ಧಪಡಿಸುವ ಹೊಸ ತಂತ್ರಾಂಶವೇ ಪೂರೈಸಬೇಕು ಎಂದೇನೂ ಇಲ್ಲ. ನಮ್ಮ ತಂತ್ರಾಂಶ ಮಾಡಬೇಕಾದ ಕೆಲಸದ ಒಂದು ಭಾಗವನ್ನು ಚೆಂದವಾಗಿ ಮಾಡಬಲ್ಲ ಇನ್ನೊಂದು ತಂತ್ರಾಂಶ ಈಗಾಗಲೇ ಇದೆ ಎನ್ನುವುದಾದರೆ ನಮ್ಮ ತಂತ್ರಾಂಶ ಅದರ ಸೇವೆಯನ್ನು ಪಡೆದುಕೊಳ್ಳುವುದು ಸಾಧ್ಯ.
ಇದರ ಅರ್ಥ ಬೇರೊಬ್ಬರ ತಂತ್ರಾಂಶವನ್ನು ಕದ್ದು ಅಥವಾ ಕಾಪಿಹೊಡೆದು ಬಳಸುವುದು ಎಂದಲ್ಲ. ಎರಡು ತಂತ್ರಾಂಶಗಳ ನಡುವೆ ಮಾಹಿತಿಯ ವಿನಿಮಯ ಸಾಧ್ಯವಾದರೆ ಅವು ಒಟ್ಟಿಗೆ ಕೆಲಸಮಾಡಬಲ್ಲವು ಎನ್ನುವುದು ಇಲ್ಲಿರುವ ಆಲೋಚನೆ. ಇದನ್ನು ಸಾಧ್ಯವಾಗಿಸುವ ಪರಿಕಲ್ಪನೆಯೇ ಎಪಿಐ, ಅರ್ಥಾತ್ ‘ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್‌ಫೇಸ್’.
ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಸೇರಿದಂತೆ ಬೇರೊಂದು ತಂತ್ರಾಂಶದಲ್ಲಿರುವ ಸೌಲಭ್ಯವನ್ನು ನಮ್ಮ ತಂತ್ರಾಂಶದಲ್ಲಿ ಬಳಸಿಕೊಳ್ಳಬೇಕು ಎಂದಾಗ ಎಪಿಐಗಳು ನಮಗೆ ನೆರವಾಗುತ್ತವೆ. ಆಯಾ ತಂತ್ರಾಂಶದ ನಿರ್ಮಾತೃಗಳು ರೂಪಿಸಿರುವ ವಿನ್ಯಾಸಕ್ಕೆ ಅನುಗುಣವಾಗಿ ನಮ್ಮ ತಂತ್ರಾಂಶ ಅಲ್ಲಿಗೆ ಮಾಹಿತಿ ರವಾನಿಸಿದರೆ ನಿರ್ದಿಷ್ಟ ರೂಪದ ಫಲಿತಾಂಶ ನಮಗೆ ಅಲ್ಲಿಂದ ದೊರಕುತ್ತದೆ. ಈ ಸೇವೆ ಕೆಲವುಬಾರಿ ಉಚಿತವಾಗಿ ದೊರೆತರೆ ಇನ್ನು ಕೆಲ ಉದಾಹರಣೆಗಳಲ್ಲಿ ಇದಕ್ಕಾಗಿ ಹಣನೀಡಬೇಕಾಗಬಹುದು.
ಕಂಪ್ಯೂಟರಿನಲ್ಲಿ ಕ್ಲಿಕ್ ಮಾಡುವುದು – ಮೊಬೈಲ್ ಪರದೆಯನ್ನು ಮುಟ್ಟಿದ್ದೆಲ್ಲ ತಂತ್ರಾಂಶಗಳಿಗೆ ಗೊತ್ತಾಗುತ್ತದಲ್ಲ, ಅಂತಹ ಉದಾಹರಣೆಗಳಲ್ಲೆಲ್ಲ ಬಳಕೆಯಾಗುವುದು ಇಂತಹ ಎಪಿಐಗಳೇ. ನಮ್ಮ ಜಾಲತಾಣದಲ್ಲಿ ನೇರವಾಗಿ ಕನ್ನಡದಲ್ಲೇ ಟೈಪಿಸುವುದು ಸಾಧ್ಯವಾಗಬೇಕು ಎನ್ನುವವರು ಅಲ್ಲಿ ಗೂಗಲ್ ಟ್ರಾನ್ಸ್‌ಲಿಟರೇಟ್ ಸೌಲಭ್ಯ ನೀಡುತ್ತಾರಲ್ಲ, ಅದು ಕೆಲಸಮಾಡುವುದೂ ಎಪಿಐ ಮೂಲಕವೇ.

FAQ

ಎಫ್‌ಎಕ್ಯೂ
Kannada Equivalent: ಪದೇಪದೇ ಕೇಳಲಾಗುವ ಪ್ರಶ್ನೆಗಳು
Short Description : ಫ್ರೀಕ್ವೆಂಟ್‌ಲಿ ಆಸ್ಕ್‌ಡ್ ಕ್ವೆಶ್ಚನ್ಸ್ (ಪದೇಪದೇ ಕೇಳಲಾಗುವ ಪ್ರಶ್ನೆಗಳು); ನಿರ್ದಿಷ್ಟ ಉತ್ಪನ್ನದ ಕುರಿತು ಬಳಕೆದಾರರು ಕೇಳಬಹುದಾದ ಸಾಮಾನ್ಯ ಪ್ರಶ್ನೆಗಳು ಹಾಗೂ ಅವುಗಳ ಉತ್ತರದ ಪಟ್ಟಿ
Long Description: ಜಾಲತಾಣ, ಕಂಪ್ಯೂಟರ್ ತಂತ್ರಾಂಶ, ಮೊಬೈಲ್ ಆಪ್ ಅಥವಾ ಹೊಸ ಯಂತ್ರಾಂಶ – ಯಾವುದೇ ಆದರೂ ಅದನ್ನು ಉಪಯೋಗಿಸುವ ಕುರಿತು ಬಳಕೆದಾರರಲ್ಲಿ ಹಲವು ಪ್ರಶ್ನೆಗಳಿರುವುದು ಸಹಜ. ಇಂತಹ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರಗಳನ್ನು ನೀಡುವುದು ಉತ್ಪಾದಕರ ಜವಾಬ್ದಾರಿಯೂ ಹೌದು.
ಆದರೆ ಒಂದೇ ಬಗೆಯ ಪ್ರಶ್ನೆಗಳಿಗೆ ಪ್ರತ್ಯೇಕವಾಗಿ ಉತ್ತರಿಸುತ್ತ ಕುಳಿತರೆ ಬಳಕೆದಾರ – ಉತ್ಪಾದಕ ಇಬ್ಬರ ಸಮಯವೂ ಹಾಳು. ಈ ಸನ್ನಿವೇಶವನ್ನು ತಪ್ಪಿಸಲು ಬಳಕೆಯಾಗುವ ಉಪಾಯವೇ ಎಫ್‌ಎಕ್ಯೂ, ಅಂದರೆ ‘ಫ್ರೀಕ್ವೆಂಟ್‌ಲಿ ಆಸ್ಕ್‌ಡ್ ಕ್ವೆಶ್ಚನ್ಸ್’ (ಪದೇಪದೇ ಕೇಳಲಾಗುವ ಪ್ರಶ್ನೆಗಳು). ನಿರ್ದಿಷ್ಟ ಉತ್ಪನ್ನದ ಕುರಿತು ಬಳಕೆದಾರರು ಕೇಳಬಹುದಾದ ಪ್ರಶ್ನೆಗಳನ್ನು ಗುರುತಿಸಿ ಅವೆಲ್ಲಕ್ಕೂ ಉತ್ತರಗಳನ್ನು ಪಟ್ಟಿಮಾಡಿಡುವುದು ಎಫ್‌ಎಕ್ಯೂ ಬಳಕೆಯ ಹಿಂದಿನ ಉದ್ದೇಶ. ಪ್ರತಿ ಪ್ರಶ್ನೆಗೂ ಸಂಸ್ಥೆಯ ಗ್ರಾಹಕಸೇವಾ ವಿಭಾಗವನ್ನು ಸಂಪರ್ಕಿಸುವ ಬದಲಿಗೆ ಬಹುತೇಕ ಉತ್ತರಗಳನ್ನು ಗ್ರಾಹಕರೇ ಹುಡುಕಿಕೊಳ್ಳುವುದು ಇಂತಹ ಪಟ್ಟಿಯ ಸಹಾಯದಿಂದ ಸಾಧ್ಯವಾಗುತ್ತದೆ.
ಪ್ರಶ್ನೆ-ಉತ್ತರಗಳ ಈ ಪಟ್ಟಿಯನ್ನು ತಂತ್ರಾಂಶದೊಡನೆ ಕಡತದಂತೆ, ಜಾಲತಾಣದಲ್ಲೊಂದು ಪುಟದಂತೆ ಅಥವಾ ಯಂತ್ರಾಂಶದ ಜೊತೆಗೆ ಮುದ್ರಿತ ಪುಸ್ತಿಕೆಯಂತೆ ಕೊಡುವುದು ಸಾಧ್ಯ. ಹೊಸ ಪ್ರಶ್ನೆಗಳನ್ನು ಸೇರಿಸಿಕೊಂಡು ಎಫ್‌ಎಕ್ಯೂ ಪಟ್ಟಿಯನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡುವ ಅಭ್ಯಾಸ ಅನೇಕ ಸಂಸ್ಥೆಗಳಿಗೆ ಇರುವುದರಿಂದ ಇದನ್ನು ಜಾಲತಾಣದಲ್ಲಿ ಉಳಿಸಿಡುವ ಅಭ್ಯಾಸವೇ ಹೆಚ್ಚು ವ್ಯಾಪಕ. ಆ ಮೂಲಕ ನಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ಹುಡುಕಿಕೊಳ್ಳುವುದೂ ಸಾಧ್ಯವಾಗುವುದರಿಂದ ಗ್ರಾಹಕರಿಗೂ ಈ ಅಭ್ಯಾಸವೇ ಅಚ್ಚುಮೆಚ್ಚು ಎನ್ನಬಹುದು.

FTTH

ಎಫ್‌ಟಿಟಿಎಚ್
Kannada Equivalent: (ರೂಪಿಸಬೇಕಿದೆ)
Short Description : ಫೈಬರ್ ಟು ದ ಹೋಮ್; ಮನೆ ಅಥವಾ ಕಚೇರಿಯವರೆಗೂ ಆಪ್ಟಿಕಲ್ ಫೈಬರ್ ಸಂಪರ್ಕವನ್ನೇ ಕಲ್ಪಿಸಿಕೊಡುವ ಮೂಲಕ ಅತಿವೇಗದ ಅಂತರಜಾಲ ಸೇವೆ ಒದಗಿಸುವ ತಂತ್ರಜ್ಞಾನ
Long Description: ಅತ್ಯಂತ ವೇಗವಾದ ಹಾಗೂ ನಿಖರವಾದ ಮಾಹಿತಿ ಸಂವಹನಕ್ಕೆ ಆಪ್ಟಿಕಲ್ ಫೈಬರ್‌ಗಳು ಬಳಕೆಯಾಗುತ್ತವೆ. ವಿಶ್ವದೆಲ್ಲೆಡೆ ಅಂತರಜಾಲ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳಲ್ಲಿ ಇವುಗಳ ಬಳಕೆ ತೀರಾ ಸಾಮಾನ್ಯ; ಆದರೆ ಸಂಪರ್ಕವನ್ನು ಬಳಕೆದಾರರಿಗೆ ಮುಟ್ಟಿಸುವ ಕೊನೆಯ ಹಂತದಲ್ಲಿ (ಇದನ್ನು ‘ಲಾಸ್ಟ್ ಮೈಲ್’ ಎಂದು ಗುರುತಿಸುತ್ತಾರೆ) ಇನ್ನೂ ಟೆಲಿಫೋನ್ ತಂತಿಗಳಂತಹ ಹಳೆಯ ವಿಧಾನಗಳೇ ಹೆಚ್ಚು ಬಳಕೆಯಾಗುತ್ತವೆ.
ಇದನ್ನು ತಪ್ಪಿಸಿ ಬಳಕೆದಾರರ ಮನೆ ಅಥವಾ ಕಚೇರಿಯವರೆಗೂ ಆಪ್ಟಿಕಲ್ ಫೈಬರ್ ಸಂಪರ್ಕವನ್ನೇ ಕಲ್ಪಿಸಿಕೊಡುವುದು ಎಫ್‌ಟಿಟಿಎಚ್ ಪರಿಕಲ್ಪನೆಯ ಉದ್ದೇಶ. ಈ ಹೆಸರಿನ ಪೂರ್ಣರೂಪ ‘ಫೈಬರ್ ಟು ದ ಹೋಮ್’ ಎಂದು. ಈ ತಂತ್ರಜ್ಞಾನದಲ್ಲಿ ಸಂಪೂರ್ಣವಾಗಿ ಆಪ್ಟಿಕಲ್ ಫೈಬರ್‌ಗಳೇ ಬಳಕೆಯಾಗುವುದರಿಂದ ಸಾಮಾನ್ಯ ಅಂತರಜಾಲ ಸಂಪರ್ಕಗಳಿಗಿಂತ ಅನೇಕ ಪಟ್ಟು ಹೆಚ್ಚಿನ ವೇಗದ ಸಂಪರ್ಕಗಳನ್ನು ಬಳಕೆದಾರರಿಗೆ ನೀಡುವುದು ಸಾಧ್ಯವಾಗುತ್ತದೆ.

FTP

ಎಫ್‌ಟಿಪಿ
Kannada Equivalent: (ರೂಪಿಸಬೇಕಿದೆ)
Short Description : ಫೈಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್; ಯಾವುದೇ ಜಾಲದ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ನಡುವೆ ಕಡತಗಳ ವಿನಿಮಯ ಮಾಡಿಕೊಳ್ಳುವಾಗ ಪಾಲಿಸಬೇಕಾದ ಶಿಷ್ಟಾಚಾರ
Long Description: ಕಂಪ್ಯೂಟರಿನಲ್ಲಿ ಒಂದು ಫೋಲ್ಡರಿನಿಂದ ಇನ್ನೊಂದು ಫೋಲ್ಡರಿಗೆ ಕಡತಗಳನ್ನು ವರ್ಗಾಯಿಸುವುದು ಅಥವಾ ನಕಲಿಸುವುದು ನಮಗೆ ಬಹಳ ಸುಲಭ. ಬೇರೊಂದು ಕಂಪ್ಯೂಟರಿಗೆ ಕಡತಗಳನ್ನು ವರ್ಗಾಯಿಸಲು ಪೆನ್‌ಡ್ರೈವ್ ಬಳಸುವುದೂ ಸರಾಗವೇ. ಆದರೆ ನಾವು ಕಡತಗಳನ್ನು ವರ್ಗಾಯಿಸಬೇಕಿರುವುದು ಪ್ರಪಂಚದ ಇನ್ನೊಂದು ಮೂಲೆಯಲ್ಲಿರುವ ಕಂಪ್ಯೂಟರಿಗಾದರೆ?
ಇಂತಹ ಸನ್ನಿವೇಶಗಳಲ್ಲಿ ಬಳಕೆಯಾಗುವ ಶಿಷ್ಟಾಚಾರವೇ ‘ಫೈಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್’, ಅಂದರೆ ಎಫ್‌ಟಿಪಿ. ಡಿಜಿಟಲ್ ಜಗತ್ತಿನಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವಾಗ ಪಾಲಿಸಬೇಕಾದ ನಿಯಮಗಳನ್ನು ಸೂಚಿಸುವ ಶಿಷ್ಟಾಚಾರಗಳ (ಪ್ರೋಟೋಕಾಲ್) ಪೈಕಿ ಇದೂ ಒಂದು.
ಯಾವುದೇ ಜಾಲದ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ನಡುವೆ ಕಡತಗಳ ವಿನಿಮಯ ಈ ಶಿಷ್ಟಾಚಾರಕ್ಕೆ ಅನುಗುಣವಾಗಿಯೇ ನಡೆಯುತ್ತದೆ (ಮೊಬೈಲ್ ಜಗತ್ತಿನಲ್ಲೂ ಎಫ್‌ಟಿಪಿ ಬಳಕೆ ಉಂಟು). ಈ ಕಂಪ್ಯೂಟರುಗಳು ಪರಸ್ಪರ ಎಷ್ಟೇ ದೂರದಲ್ಲಿದ್ದರೂ ಪರವಾಗಿಲ್ಲ, ನಮ್ಮ ಕಂಪ್ಯೂಟರಿನ ಎರಡು ಫೋಲ್ಡರುಗಳ ನಡುವೆ ಕಡತಗಳನ್ನು ವರ್ಗಾಯಿಸಿದಷ್ಟೇ ಸುಲಭವಾಗಿ ಆ ಎರಡು ಕಂಪ್ಯೂಟರುಗಳ ನಡುವೆ ಕಡತಗಳ ವಿನಿಮಯ ಎಫ್‌ಟಿಪಿ ತಂತ್ರಾಂಶಗಳ ನೆರವಿನಿಂದ ಸಾಧ್ಯವಾಗುತ್ತದೆ. ಕಡತಗಳ ವರ್ಗಾವಣೆ ಹೆಚ್ಚು ಸುರಕ್ಷಿತವಾಗಿ ಆಗಬೇಕಾದಾಗ ‘ಸೆಕ್ಯೂರ್ ಎಫ್‌ಟಿಪಿ’ ಶಿಷ್ಟಾಚಾರವನ್ನೂ ಬಳಸಲಾಗುತ್ತದೆ.
ಸಾಮಾನ್ಯ ಬಳಕೆದಾರರು ಅಂತರಜಾಲ ಸಂಪರ್ಕ ಉಪಯೋಗಿಸುವಾಗ ಅವರ ಬಹಳಷ್ಟು ಕೆಲಸಗಳು ಎಚ್‌ಟಿಟಿಪಿ (ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್) ಶಿಷ್ಟಾಚಾರಕ್ಕೆ ಅನುಗುಣವಾಗಿ ನಡೆಯುತ್ತವೆ. ಹಾಗಾಗಿ ಅವರು ಎಫ್‌ಟಿಪಿ ಬಳಸುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.

Emoji

ಎಮೋಜಿ
Kannada Equivalent: (ರೂಪಿಸಬೇಕಿದೆ)
Short Description : ಎಸ್ಸೆಮ್ಮೆಸ್, ಚಾಟ್ ಹಾಗೂ ವಾಟ್ಸ್‌ಆಪ್ ಮೆಸೇಜಿನಂತಹ ಮಾಧ್ಯಮಗಳಲ್ಲಿ ಭಾವನೆಗಳನ್ನು ಅಭಿವ್ಯಕ್ತಿಸಲು ನೆರವಾಗುವ ಪುಟಾಣಿ ಚಿತ್ರ; ಎಮೋಟೈಕನ್‌ಗಳ ಸುಧಾರಿತ ರೂಪ ಎಂದರೂ ಸರಿಯೇ
Long Description: ಎಸ್ಸೆಮ್ಮೆಸ್ ಕಳುಹಿಸುವಾಗ, ಚಾಟ್ ಮಾಡುವಾಗಲೆಲ್ಲ ಪಠ್ಯದೊಡನೆ ಕೆಲ ಭಾವನೆಗಳನ್ನೂ ಅಭಿವ್ಯಕ್ತಿಸಲು ನೆರವಾಗುವ ಪುಟ್ಟ ಚಿತ್ರಗಳನ್ನು ‘ಎಮೋಜಿ’ಗಳೆಂದು ಕರೆಯುತ್ತಾರೆ. ಈ ಚಿತ್ರಾಕ್ಷರಗಳು ಮೊದಲಿಗೆ ಕಾಣಿಸಿಕೊಂಡದ್ದು ಜಪಾನ್ ದೇಶದಲ್ಲಿ. ಅಲ್ಲಿನ ಎನ್‌ಟಿಟಿ ಡೋಕೋಮೋ ಸಂಸ್ಥೆ ೧೯೯೦ರ ದಶಕದ ಕೊನೆಯಲ್ಲಿ ಇವುಗಳನ್ನು ಪರಿಚಯಿಸಿತಂತೆ.
ಸ್ಮಾರ್ಟ್‌ಫೋನುಗಳ, ಮೆಸೇಜಿಂಗ್ ಸೇವೆಗಳ ಬಳಕೆ ಹೆಚ್ಚುತ್ತಿದ್ದಂತೆ ಇವು ಈಗ ಎಲ್ಲೆಲ್ಲೂ ಕಾಣಸಿಗುತ್ತಿವೆ. ಜಿಮೇಲ್, ಫೇಸ್‌ಬುಕ್ ಸೇರಿದಂತೆ ಹಲವೆಡೆ ಎಮೋಟೈಕನ್‌ಗಳನ್ನು ಟೈಪಿಸುತ್ತಿದ್ದಂತೆ ಅದು ತನ್ನಷ್ಟಕ್ಕೆ ತಾನೇ ಎಮೋಜಿ ಆಗಿ ಬದಲಾಗುವ ವ್ಯವಸ್ಥೆ ಕೂಡ ಇದೆ. ಯುನಿಕೋಡ್ ಶಿಷ್ಟತೆಯಲ್ಲೂ ಈ ಚಿತ್ರಾಕ್ಷರಗಳು ಸ್ಥಾನಪಡೆದಿವೆ.
ಬೇರೆಬೇರೆ ತಂತ್ರಾಂಶ ಬಳಸುವ ಸಾಧನಗಳಲ್ಲಿ ನಾವು ಬೇರೆಬೇರೆ ವಿನ್ಯಾಸದ ಎಮೋಜಿಗಳನ್ನು ನೋಡಬಹುದು. ಆಪಲ್ ಸಂಸ್ಥೆ ತಯಾರಿಸುವ ಐಫೋನ್, ಐಪ್ಯಾಡ್ ಮುಂತಾದ ಸಾಧನಗಳಲ್ಲಿರುವ ಎಮೋಜಿಗಳ ಪೈಕಿ ಕ್ಯಾಲೆಂಡರ್ ಚಿತ್ರವಿರುವ ಎಮೋಜಿಯಲ್ಲಿ ಜುಲೈ ೧೭ ಎಂಬ ದಿನಾಂಕ ಇದೆ. ಅದಕ್ಕಾಗಿ ಆ ದಿನವನ್ನು ಎಮೋಜಿ ದಿನ ಎಂದು ಕರೆಯುತ್ತಾರೆ. ೨೦೦೨ರಲ್ಲಿ ಆಪಲ್ ಕ್ಯಾಲೆಂಡರ್ ತಂತ್ರಾಂಶ (ಐಕ್ಯಾಲ್) ಬಿಡುಗಡೆಯಾದದ್ದು ಆ ದಿನದಂದು.

Emoticon

ಎಮೋಟೈಕನ್
Kannada Equivalent: (ರೂಪಿಸಬೇಕಿದೆ)
Short Description : ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಸಂಕೇತಗಳು (ಐಕನ್)
Long Description: ಕೆಲವೇ ಪದ-ಅಕ್ಷರಗಳಲ್ಲಿ ನಮ್ಮ ಸಂದೇಶವನ್ನು ಮುಗಿಸಬೇಕಿರುವ ಎಸ್ಸೆಮ್ಮೆಸ್‌ನಂತಹ ಮಾಧ್ಯಮಗಳಲ್ಲಿ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದು ಕಷ್ಟ. ಈ ಸಮಸ್ಯೆಯನ್ನು ಎದುರಿಸಲು ಬಳಕೆಯಾಗುವ ಸುಲಭ ಉಪಾಯವೇ ಎಮೋಟೈಕನ್‌ಗಳ ಬಳಕೆ. ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಈ ಸಂಕೇತಗಳ (ಐಕನ್) ಹೆಸರು ರೂಪುಗೊಂಡಿರುವುದು ಎಮೋಶನ್ ಹಾಗೂ ಐಕನ್ – ಎರಡೂ ಪದಗಳು ಸೇರಿ.
ಸಂತೋಷ ವ್ಯಕ್ತಪಡಿಸಲು 🙂 ದುಃಖ ತೋರಿಸಲು 🙁 ಮುಂತಾದ ಸಂಕೇತಗಳನ್ನು ನಾವು ಎಸ್ಸೆಮ್ಮೆಸ್ ಕಳುಹಿಸುವಾಗ, ಚಾಟ್ ಮಾಡುವಾಗಲೆಲ್ಲ ಬಳಸುತ್ತೇವಲ್ಲ, ಅವೆಲ್ಲ ಎಮೋಟೈಕನ್‌ಗಳೇ. ಗಹಗಹಿಸಿ ನಗುವ ಮುಖ, ಆಶ್ಚರ್ಯದಿಂದ ಬಾಯಿತೆರೆದಿರುವ ಮುಖ, ಕಿಲಾಡಿತನದಿಂದ ಕಣ್ಣುಹೊಡಿಯುತ್ತಿರುವ ಮುಖ, ಕನ್ನಡಕ ಧರಿಸಿ ಸ್ಮಾರ್ಟ್ ಆಗಿರುವ ಮುಖ, ಮೀಸೆಧಾರಿಯ ನಗುಮುಖಗಳೂ ಎಮೋಟೈಕನ್ ಲೋಕದಲ್ಲಿವೆ. ಇಂತಹ ಎಲ್ಲ ಸಂಕೇತಗಳನ್ನೂ ಅಕ್ಷರ, ಅಂಕಿ ಹಾಗೂ ಲೇಖನ ಚಿಹ್ನೆಗಳ ಜೋಡಣೆಯಿಂದ ರೂಪಿಸಲಾಗಿರುತ್ತದೆ ಎನ್ನುವುದು ವಿಶೇಷ.
ಈಗ ಪರಿಚಿತವಾಗಿರುವ ರೂಪದಲ್ಲಿ ಎಮೋಟೈಕನ್‌ಗಳ ಸೃಷ್ಟಿಯಾದದ್ದು ೧೯೮೨ರಲ್ಲಿ. ಅವನ್ನು ರೂಪಿಸಿದ್ದು ಅಮೆರಿಕಾದ ಸ್ಕಾಟ್ ಫಾಲ್‌ಮನ್ ಎನ್ನುವ ವಿಜ್ಞಾನಿ.

Ergonomics

ಎರ್ಗೊನಾಮಿಕ್ಸ್
Kannada Equivalent: (ರೂಪಿಸಬೇಕಿದೆ)
Short Description : ವಿವಿಧ ವಸ್ತುಗಳಿಗೆ ಹಾಗೂ ಅವುಗಳನ್ನು ಬಳಸುವ ಪರಿಸರಕ್ಕೆ ಅತ್ಯಂತ ಸಮರ್ಪಕವಾದ ವಿನ್ಯಾಸಗಳನ್ನು ರೂಪಿಸುವ ವಿಜ್ಞಾನದ ಶಾಖೆ
Long Description: ರೇಜರ್‌ನಿಂದ ಪ್ರಾರಂಭಿಸಿ ಕುರ್ಚಿ, ಚಾಕು, ಟಿವಿ ರಿಮೋಟ್, ರೋಡ್‌ರೋಲರ್‌ವರೆಗೆ ಯಾವುದೇ ವಸ್ತುವಿನ ವಿನ್ಯಾಸವಾದರೂ ಅದು ಬಳಕೆದಾರನಿಗೆ ಅನುಕೂಲವಾಗುವಂತಿರಬೇಕು. ಹೀಗಾಗಿಯೇ ವಸ್ತುಗಳ ವಿನ್ಯಾಸ ಬಹಳ ದೊಡ್ಡ ಕ್ಷೇತ್ರವಾಗಿ ಬೆಳೆದಿದೆ; ಕೆಲ ವರ್ಷದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ನಾವು ಬಳಸುವ ಬಹುತೇಕ ವಸ್ತುಗಳ ವಿನ್ಯಾಸವೆಲ್ಲ ಗಣನೀಯವಾಗಿ ಬದಲಾಗಿದೆ.
ಯಂತ್ರಗಳ ವಿನ್ಯಾಸವಷ್ಟೇ ಅಲ್ಲ, ಅವುಗಳನ್ನು ನಾವು ಬಳಸುವ ಸ್ಥಳದ ವಿನ್ಯಾಸವೂ ನಮಗೆ ತೊಂದರೆಮಾಡದಂತಿರಬೇಕು. ಅಷ್ಟೇ ಅಲ್ಲ, ವಿವಿಧ ಸಾಧನಗಳನ್ನು ಬಳಸುವಾಗ ನಮ್ಮ ದೈಹಿಕ ಭಂಗಿ ಕೂಡ ಸರಿಯಾಗಿರಬೇಕು. ಇದೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಬೇರೆಬೇರೆ ಸನ್ನಿವೇಶಗಳಿಗೆ ಮಾನವ ಅಂಗಾಂಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ನೋಡಿಕೊಂಡು ಅತ್ಯಂತ ಸಮರ್ಪಕವಾದ ವಿನ್ಯಾಸಗಳನ್ನು ರೂಪಿಸುವ ವಿಜ್ಞಾನದ ಶಾಖೆಯೇ ಎರ್ಗೊನಾಮಿಕ್ಸ್.
ಕಂಪ್ಯೂಟರನ್ನೋ ಮೊಬೈಲ್ ಫೋನನ್ನೋ ಗಂಟೆಗಟ್ಟಲೆ ಬಳಸುವುದು ಇದೀಗ ಸಾಮಾನ್ಯ ಸಂಗತಿ. ಆದರೆ ಲ್ಯಾಪ್‌ಟಾಪನ್ನೋ ಡೆಸ್ಕ್‌ಟಾಪನ್ನೋ ಬಳಸುವಾಗ ನಾವು ಕುಳಿತಿರುವ ಭಂಗಿ ಸರಿಯಿಲ್ಲದಿದ್ದರೆ, ಕತ್ತು ಬಗ್ಗಿಸಿಕೊಂಡು ಮೊಬೈಲ್ ಫೋನನ್ನು ದೀರ್ಘಕಾಲ ದಿಟ್ಟಿಸುತ್ತಿದ್ದರೆ ಅದು ಹಲವು ದೈಹಿಕ ತೊಂದರೆಗಳಿಗೆ ಕಾರಣವಾಗಬಹುದು. ಹೀಗಾಗಿ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತು ಆರಾಮವಾಗಿ ಕೆಲಸಮಾಡಬೇಕೆಂದರೆ ಎರ್ಗೊನಾಮಿಕ್ ವಿನ್ಯಾಸದ ಪೀಠೋಪಕರಣ ಬಳಸುವುದು ಅಪೇಕ್ಷಣೀಯ. ಇದೇ ರೀತಿ ಲ್ಯಾಪ್‌ಟಾಪ್-ಮೊಬೈಲ್ ಇತ್ಯಾದಿಗಳನ್ನು ಬಳಸುವಾಗ ನಮ್ಮ ದೈಹಿಕ ಭಂಗಿ ಹೇಗಿದ್ದರೆ ಒಳ್ಳೆಯದು ಎನ್ನುವುದನ್ನೂ ಎರ್ಗೊನಾಮಿಕ್ಸ್ ಪರಿಕಲ್ಪನೆಗಳು ವಿವರಿಸುತ್ತವೆ.

LED

ಎಲ್‌ಇಡಿ
Kannada Equivalent: (ರೂಪಿಸಬೇಕಿದೆ)
Short Description : ಲೈಟ್ ಎಮಿಟಿಂಗ್ ಡಯೋಡ್; ವಿದ್ಯುತ್ ಪ್ರವಹಿಸಿದಾಗ ಬೆಳಕನ್ನು ಹೊರಸೂಸುವ ಅರೆವಾಹಕ ಸಾಧನ
Long Description: ಮಕ್ಕಳ ಆಟಿಕೆ, ಸೀರಿಯಲ್ ಸೆಟ್, ಟ್ರಾಫಿಕ್ ಸಿಗ್ನಲ್, ಬಸ್ಸು – ರೈಲಿನ ಬೋರ್ಡು ಮುಂತಾದ ಕಡೆಗಳಲ್ಲಿ ಎಲ್‌ಇಡಿಗಳು ಬಳಕೆಯಾಗುವುದು ನಮಗೆ ಗೊತ್ತೇ ಇದೆ. ಬಹುತೇಕ ಟೀವಿ, ಮೊಬೈಲ್ ಫೋನುಗಳ ಪರದೆಯನ್ನು ಬೆಳಗುವುದೂ ಇದೇ ಎಲ್‌ಇಡಿಗಳು.
ಎಲ್‌ಇಡಿ ಎನ್ನುವುದು ಲೈಟ್ ಎಮಿಟಿಂಗ್ ಡಯೋಡ್ ಎನ್ನುವ ಹೆಸರಿನ ಹ್ರಸ್ವರೂಪ. ಡಯೋಡ್ ಎಂಬ ಅರೆವಾಹಕ (ಸೆಮಿಕಂಡಕ್ಟರ್) ಸಾಧನದ ಮೂಲಕ ವಿದ್ಯುತ್ ಹರಿಸಿದಾಗ ಅದರೊಳಗೆ ಸಂಚರಿಸುವ ಇಲೆಕ್ಟ್ರಾನುಗಳು ಫೋಟಾನ್ ಎಂಬ ಕಣಗಳನ್ನು ಬಿಡುಗಡೆಮಾಡುತ್ತವೆ. ಬೆಳಕಿನ ಮೂಲ ಕಣಗಳೇ ಈ ಫೋಟಾನುಗಳು. ಬಹಳಷ್ಟು ಡಯೋಡುಗಳಿಂದ ಹೊರಸೂಸುವ ಬೆಳಕು ನಮ್ಮ ಕಣ್ಣಿಗೆ ಕಾಣದ ರೂಪದಲ್ಲಿರುತ್ತವೆ (ಉದಾ: ಇನ್‌ಫ್ರಾರೆಡ್, ಅಂದರೆ ಅತಿರಕ್ತ ಕಿರಣಗಳು). ಡಯೋಡುಗಳ ನಿರ್ಮಾಣದಲ್ಲಿ ನಿರ್ದಿಷ್ಟ ಅರೆವಾಹಕ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಕಣ್ಣಿಗೆ ಕಾಣುವ ಬೆಳಕು ಹೊರಸೂಸುವಂತೆ ಮಾಡುವುದೂ ಸಾಧ್ಯ. ನಿತ್ಯವೂ ನಮ್ಮ ಸಂಪರ್ಕಕ್ಕೆ ಬರುವ ಬಹುತೇಕ ಎಲ್‌ಇಡಿಗಳು ಇದೇ ಪರಿಕಲ್ಪನೆಯನ್ನು ಬಳಸುತ್ತವೆ.
ಅಂದಹಾಗೆ ಎಲ್‌ಇಡಿಗಳ ಬಳಕೆ ಬೆಳಕಿನ ಉತ್ಪಾದನೆಗಷ್ಟೇ ಸೀಮಿತವೇನಲ್ಲ. ನೀರಿನ ಶುದ್ಧೀಕರಣ, ಮಾಹಿತಿ ಸಂವಹನ ಮುಂತಾದ ಕ್ಷೇತ್ರಗಳಲ್ಲೂ ಇವುಗಳ ಬಳಕೆ ಸಾಧ್ಯವಿದೆ. ನಿಸ್ತಂತು (ವೈರ್‌ಲೆಸ್) ಮಾಹಿತಿ ಸಂವಹನದಲ್ಲಿ ರೇಡಿಯೋ ಅಲೆಗಳ ಬದಲಿಗೆ ಬೆಳಕಿನ ಕಿರಣಗಳನ್ನು ಬಳಸಿದರೆ ಕ್ಷಿಪ್ರ ಹಾಗೂ ಸುರಕ್ಷಿತ ಮಾಹಿತಿ ಸಂವಹನ ಸಾಧ್ಯವಾಗುತ್ತದೆ. ನಮಗೆಲ್ಲ ಪರಿಚಯವಿರುವ ವೈ-ಫೈ ತಂತ್ರಜ್ಞಾನಕ್ಕೆ ಪರ್ಯಾಯವಾಗಿ ಬೆಳೆಯಬಲ್ಲ ಈ ಲೈ-ಫೈ, ಅಂದರೆ ‘ಲೈಟ್ ಎನೇಬಲ್ಡ್ ವೈ-ಫೈ’ಯಲ್ಲಿ ಎಲ್‌ಇಡಿಗಳ ಬಳಕೆ ಸಾಧ್ಯವೆಂದು ವಿಜ್ಞಾನಿಗಳು ಈಗಾಗಲೇ ತೋರಿಸಿದ್ದಾರೆ.

LMS

ಎಲ್‍ಎಂಎಸ್
Kannada Equivalent: (ರೂಪಿಸಬೇಕಿದೆ)
Short Description : ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಂ; ಪಾಠಗಳ ನಿರ್ವಹಣೆ, ಸಂಬಂಧಪಟ್ಟ ಕಡತಗಳ ಶೇಖರಣೆ, ವಿದ್ಯಾರ್ಥಿಯ ಪ್ರಗತಿ ಕುರಿತ ಮಾಹಿತಿ ಸಂಗ್ರಹಣೆ ಮುಂತಾದ್ದನ್ನೆಲ್ಲ ನಿಭಾಯಿಸುವ ತಂತ್ರಾಂಶ
Long Description: ನಮ್ಮ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದು ಮಾಹಿತಿ ತಂತ್ರಜ್ಞಾನದ (ಐಟಿ) ಹೆಚ್ಚುಗಾರಿಕೆ. ಐಟಿಯಿಂದ ಗಮನಾರ್ಹವಾಗಿ ಬದಲಾದ ಕ್ಷೇತ್ರಗಳಲ್ಲಿ ಶಿಕ್ಷಣಕ್ಕೆ ಪ್ರಮುಖ ಸ್ಥಾನವಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿಕೊಂಡಿದ್ದು ಇಲ್ಲಿನ ಬದಲಾವಣೆಗಳಲ್ಲೊಂದು. ಇದರಿಂದಾಗಿಯೇ ಇದೀಗ ಕಂಪ್ಯೂಟರು – ಮೊಬೈಲ್ ಫೋನುಗಳ ಮೂಲಕವೂ ಶಿಕ್ಷಣ ಪಡೆಯುವುದು ಸಾಧ್ಯವಾಗಿದೆ.
ಹೀಗೆ ಶಿಕ್ಷಣ ನೀಡಲು ಅಗತ್ಯವಾದ ಸಂಪನ್ಮೂಲಗಳನ್ನೆಲ್ಲ (ಪಠ್ಯ, ವೀಡಿಯೋ, ಧ್ವನಿ, ಆನ್‌ಲೈನ್ ಪರೀಕ್ಷೆ ಇತ್ಯಾದಿ) ನಿಭಾಯಿಸಬೇಕಲ್ಲ, ಅದಕ್ಕಾಗಿ ಬಳಕೆಯಾಗುವ ತಂತ್ರಾಂಶವೇ ಎಲ್‌ಎಂಎಸ್, ಅಂದರೆ ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಂ.
ಪಾಠಗಳ ನಿರ್ವಹಣೆ, ಸಂಬಂಧಪಟ್ಟ ಕಡತಗಳ ಶೇಖರಣೆ, ವಿದ್ಯಾರ್ಥಿಯ ಪ್ರಗತಿ ಕುರಿತ ಮಾಹಿತಿ ಸಂಗ್ರಹಣೆ – ಇವೆಲ್ಲವೂ ಈ ತಂತ್ರಾಂಶದ ಜವಾಬ್ದಾರಿ. ಹಾಗೆಯೇ ಪರೀಕ್ಷೆಗಳನ್ನು ನಡೆಸಲೂ ಈ ತಂತ್ರಾಂಶವನ್ನು ಬಳಸಬಹುದು.
ಆನ್‌ಲೈನ್ ತರಗತಿಗಳನ್ನು ನಡೆಸುವ ಜಾಲತಾಣಗಳು, ತಮ್ಮ ಉದ್ಯೋಗಿಗಳಿಗೆ ಇ-ಲರ್ನಿಂಗ್ ಸೌಲಭ್ಯ ಒದಗಿಸುವ ಸಂಸ್ಥೆಗಳು ಎಲ್‌ಎಂಎಸ್ ತಂತ್ರಾಂಶಗಳನ್ನು ವ್ಯಾಪಕವಾಗಿ ಬಳಸುತ್ತವೆ. ಶಾಲಾ ತರಗತಿಗಳಿಗೆ ಪೂರಕವಾಗಿ ನಡೆಯುವ ಚಟುವಟಿಕೆಗಳನ್ನು ನಿಭಾಯಿಸಲೂ ಈ ತಂತ್ರಾಂಶಗಳನ್ನು ಬಳಸುವುದು ಸಾಧ್ಯ.
ಸಕ್ಸೆಸ್‌ಫ್ಯಾಕ್ಟರ್ಸ್ ಲರ್ನಿಂಗ್, ಸಮ್‌ಟೋಟಲ್ ಲರ್ನ್ ಮುಂತಾದವು ಕಾರ್ಪೊರೇಟ್ ಕ್ಷೇತ್ರದಲ್ಲಿ ಎಲ್‌ಎಂಎಸ್ ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಗೆ ಕೆಲ ಉದಾಹರಣೆಗಳು. ವಾಣಿಜ್ಯ ಉತ್ಪನ್ನಗಳ ಜೊತೆಗೆ ಮೂಡಲ್‌ನಂತಹ (moodle) ಮುಕ್ತ (ಓಪನ್‌ಸೋರ್ಸ್) ತಂತ್ರಾಂಶಗಳೂ ಎಲ್‌ಎಂಎಸ್‌ಗಳ ಪೈಕಿ ಸಾಕಷ್ಟು ಹೆಸರು ಗಳಿಸಿವೆ.

SEO

ಎಸ್‌ಇಒ
Kannada Equivalent: (ರೂಪಿಸಬೇಕಿದೆ)
Short Description : ಸರ್ಚ್ ಇಂಜನ್ ಆಪ್ಟಿಮೈಸೇಶನ್; ಸರ್ಚ್ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯಲು ಜಾಲತಾಣಗಳು ಅನುಸರಿಸುವ ಕ್ರಮಗಳು
Long Description: ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಏನು ಮಾಹಿತಿ ಬೇಕೆಂದರೂ ನಾವು ಥಟ್ಟನೆ ಸರ್ಚ್ ಇಂಜನ್‌ಗಳತ್ತ ಮುಖಮಾಡುತ್ತೇವೆ. ಹಾಗೆ ಸರ್ಚ್ ಮಾಡುವಾಗಲೂ ಅಷ್ಟೆ, ನಾವು ಗಮನಿಸುವುದು ಫಲಿತಾಂಶ ಪಟ್ಟಿಯ ಮೊದಲ ಕೆಲ ಸ್ಥಾನಗಳಲ್ಲಿರುವ ತಾಣಗಳನ್ನು ಮಾತ್ರವೇ. ಹೀಗಾಗಿಯೇ ಬಹಳಷ್ಟು ಜಾಲತಾಣಗಳು ಸರ್ಚ್ ಫಲಿತಾಂಶಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ಆ ಮೂಲಕ ಹೆಚ್ಚಿನ ಓದುಗರನ್ನು ತಮ್ಮತ್ತ ಸೆಳೆಯುವ, ತಮ್ಮ ವಹಿವಾಟನ್ನು ವಿಸ್ತರಿಸಿಕೊಳ್ಳುವ ಉದ್ದೇಶ ಅವುಗಳದು.
ಸರ್ಚ್ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆಯಲು ಜಾಲತಾಣಗಳು ಅನುಸರಿಸುವ ಕ್ರಮಗಳನ್ನು ಒಟ್ಟಾರೆಯಾಗಿ ಸರ್ಚ್ ಇಂಜನ್ ಆಪ್ಟಿಮೈಸೇಶನ್ (ಎಸ್‌ಇಒ) ಎಂದು ಕರೆಯುತ್ತಾರೆ.
ಬೇರೆಬೇರೆ ಸರ್ಚ್ ಇಂಜನ್‌ಗಳು ಹೇಗೆ ಕೆಲಸಮಾಡುತ್ತವೆ, ಅವುಗಳ ಬಳಕೆದಾರರು ಏನನ್ನು ಹುಡುಕುತ್ತಾರೆ, ಹುಡುಕಲು ಹೆಚ್ಚಾಗಿ ಬಳಕೆಯಾಗುವ ಕೀವರ್ಡ್‌ಗಳು ಯಾವುವು ಎನ್ನುವುದನ್ನೆಲ್ಲ ಎಸ್‌ಇಒ ತಂತ್ರಗಳು ಗಮನದಲ್ಲಿಟ್ಟುಕೊಳ್ಳುತ್ತವೆ. ಈ ಅಂಶಗಳಿಗೆ ಅನುಗುಣವಾಗಿ ಜಾಲತಾಣದ ವಿನ್ಯಾಸ ಹಾಗೂ ಅದರಲ್ಲಿರುವ ಮಾಹಿತಿಯನ್ನು ಬದಲಿಸಲಾಗುತ್ತದೆ. ಸರ್ಚ್ ಇಂಜನ್‌ಗಳಿಗೆ ಹುಡುಕಲು ಸುಲಭವಾಗುವಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು, ತಾಣದಲ್ಲಿರುವ ಮಾಹಿತಿಯನ್ನು ವ್ಯವಸ್ಥಿತವಾಗಿ ವಿಂಗಡಿಸುವುದು, ಮಾಹಿತಿಯ ಜೊತೆಗೆ ಸೂಕ್ತ ಕೀವರ್ಡ್‌ಗಳನ್ನು (‘ಟ್ಯಾಗ್’) ಜೋಡಿಸಿಡುವುದು, ಓದುಗರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುವಂತೆ – ಅವರು ತಾಣದ ಕೊಂಡಿಗಳನ್ನು ಹೆಚ್ಚುಹೆಚ್ಚಾಗಿ ಶೇರ್ ಮಾಡುವಂತೆ ನೋಡಿಕೊಳ್ಳುವುದು – ಇವೆಲ್ಲ ಎಸ್‌ಇಒ ಚಟುವಟಿಕೆಯ ಅಂಗಗಳೇ.

SSD

ಎಸ್‌ಎಸ್‌ಡಿ
Kannada Equivalent: (ರೂಪಿಸಬೇಕಿದೆ)
Short Description : ಸಾಲಿಡ್ ಸ್ಟೇಟ್ ಡ್ರೈವ್; ಮಾಹಿತಿ ಶೇಖರಣೆಯಲ್ಲಿ ಹಾರ್ಡ್ ಡಿಸ್ಕ್‌ಗೆ ಪರ್ಯಾಯವಾಗಿ ಬೆಳೆಯುತ್ತಿರುವ ಹೆಚ್ಚು ಸಕ್ಷಮ – ವಿಶ್ವಾಸಾರ್ಹ ಸಾಧನ.
Long Description: ಕಂಪ್ಯೂಟರಿನಲ್ಲಿ ಮಾಹಿತಿ ಸಂಗ್ರಹಿಸಿಡಲು ಹಾರ್ಡ್ ಡಿಸ್ಕ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತವೆ. ಆದರೆ ಅವುಗಳಲ್ಲಿ ಮಾಹಿತಿಯನ್ನು ಓದಿ-ಬರೆಯುವ ವೇಗ ಕಡಿಮೆ, ಜೊತೆಗೆ ಯಾಂತ್ರಿಕ ವೈಫಲ್ಯದ ಸಾಧ್ಯತೆಯೂ ಇರುತ್ತದೆ.
ಈ ಪರಿಸ್ಥಿತಿ ಬದಲಿಸಬೇಕೆಂದರೆ ಮಾಹಿತಿ ಶೇಖರಣೆಯಲ್ಲಿ ವಿಭಿನ್ನ ಮಾರ್ಗಗಳ ಬಳಕೆ ಅಗತ್ಯವಾಗುತ್ತದೆ. ಅಂತಹುದೊಂದು ಮಾರ್ಗವೇ ಸಾಲಿಡ್ ಸ್ಟೇಟ್ ಡ್ರೈವ್ (ಎಸ್‌ಎಸ್‌ಡಿ). ಹಾರ್ಡ್ ಡಿಸ್ಕ್‌ನ ತಟ್ಟೆಗಳ, ಚಲಿಸುವ ಭಾಗಗಳ ಜಾಗದಲ್ಲಿ ಇದು ಫ್ಲಾಶ್ ಮೆಮೊರಿ ಚಿಪ್‌ಗಳನ್ನು ಬಳಸುತ್ತದೆ. ಪೆನ್‌ಡ್ರೈವ್‌ಗಳಲ್ಲಿ ಬಳಕೆಯಾಗುವುದೂ ಫ್ಲಾಶ್ ಮೆಮೊರಿಯೇ, ಆದರೆ ಎಸ್‌ಎಸ್‌ಡಿಯಲ್ಲಿ ಇನ್ನೂ ಹೆಚ್ಚು ಕಾರ್ಯಕ್ಷಮತೆಯ ಚಿಪ್‌ಗಳು ಬಳಕೆಯಾಗುತ್ತವೆ ಅಷ್ಟೇ.
ಎಸ್‌ಎಸ್‌ಡಿಗಳು ಹಾರ್ಡ್ ಡಿಸ್ಕ್‌ಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ, ಹೆಚ್ಚು ವೇಗವಾಗಿ ಕೆಲಸಮಾಡುತ್ತವೆ ಮತ್ತು ಅವುಗಳ ವಿಶ್ವಾಸಾರ್ಹತೆಯೂ ಹೆಚ್ಚು. ಜೊತೆಗೆ ಅವುಗಳ ಬೆಲೆಯೂ ಹೆಚ್ಚು: ಸದ್ಯ ಹಲವು ದುಬಾರಿ ಕಂಪ್ಯೂಟರುಗಳಲ್ಲಿ ಮಾತ್ರವೇ ಅವು ಬಳಕೆಯಾಗುತ್ತಿವೆ.
ಹಾರ್ಡ್ ಡಿಸ್ಕ್ ಡ್ರೈವ್ ಹಾಗೂ ಸಾಲಿಡ್ ಸ್ಟೇಟ್ ಡ್ರೈವ್‌ಗಳೆರಡರ ತಂತ್ರಜ್ಞಾನಗಳನ್ನೂ ಒಟ್ಟಿಗೆ ಬಳಸುವ ಸಾಲಿಡ್ ಸ್ಟೇಟ್ ಹೈಬ್ರಿಡ್ ಡ್ರೈವ್ (ಎಸ್‌ಎಸ್‌ಎಚ್‌ಡಿ) ಎನ್ನುವ ಸಾಧನ ಕೂಡ ಇದೆ. ಸಾಮಾನ್ಯ ಹಾರ್ಡ್ ಡಿಸ್ಕ್ ಜೊತೆಗೆ ಕೊಂಚಮಟ್ಟಿನ ಸಾಲಿಡ್ ಸ್ಟೇಟ್ ಶೇಖರಣಾ ಸಾಮರ್ಥ್ಯವನ್ನೂ ಒದಗಿಸುವುದು ಈ ಸಾಧನದ ವೈಶಿಷ್ಟ್ಯ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App