भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

RSS

ಆರ್‌ಎಸ್‌ಎಸ್
Kannada Equivalent: (ರೂಪಿಸಬೇಕಿದೆ)
Short Description : ರಿಚ್ ಸೈಟ್ ಸಮ್ಮರಿ; ವಿವಿಧ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು – ಅವುಗಳನ್ನು ಪ್ರತ್ಯೇಕವಾಗಿ ಸಂದರ್ಶಿಸುವ ಅಗತ್ಯವಿಲ್ಲದೆ – ನೇರವಾಗಿ ಪಡೆದುಕೊಳ್ಳಲು ನೆರವಾಗುವ ತಂತ್ರಜ್ಞಾನ
Long Description: ವಿಶ್ವವ್ಯಾಪಿ ಜಾಲದಲ್ಲಿ ಪ್ರತಿ ವಿಷಯಕ್ಕೂ ಸಂಬಂಧಪಟ್ಟ ಲಕ್ಷಗಟ್ಟಲೆ ಜಾಲತಾಣಗಳಿವೆ. ಆ ಪೈಕಿ ಹಲವು ತಾಣಗಳಲ್ಲಿ ನಮಗೆ ಇಷ್ಟವಾಗುವ – ಉಪಯುಕ್ತವೆನಿಸುವ ಮಾಹಿತಿ ದೊರಕುವುದು ಸಾಮಾನ್ಯ. ಆದರೆ ಅಷ್ಟೂ ಜಾಲತಾಣಗಳ ವಿಳಾಸ ನೆನಪಿಟ್ಟುಕೊಳ್ಳುವುದು, ಅಲ್ಲಿ ಪ್ರಕಟವಾಗುವ ಹೊಸ ಬರಹಗಳನ್ನು ಗಮನಿಸುವುದು ಕಷ್ಟದ ಕೆಲಸ.
ವಿವಿಧ ತಾಣಗಳಲ್ಲಿ ಪ್ರಕಟವಾಗುವ ಹೊಸ ಬರಹಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಿ ಈ ಸಮಸ್ಯೆಯನ್ನು ಕೊಂಚಮಟ್ಟಿಗೆ ಪರಿಹರಿಸುವ ತಂತ್ರಜ್ಞಾನವೇ ಆರ್‌ಎಸ್‌ಎಸ್, ಅರ್ಥಾತ್ ‘ರಿಚ್ ಸೈಟ್ ಸಮ್ಮರಿ’. ರಿಯಲಿ ಸಿಂಪಲ್ ಸಿಂಡಿಕೇಶನ್ ಎಂದೂ ಕರೆಸಿಕೊಳ್ಳುವ ಈ ವ್ಯವಸ್ಥೆಯನ್ನು ಬಳಸಿ ವಿವಿಧ ಜಾಲತಾಣಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನು ನೇರವಾಗಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಹೀಗೆ ಪಡೆದ ಮಾಹಿತಿಯನ್ನು ಒಟ್ಟುಸೇರಿಸಿ ಒಂದೇಕಡೆ ಪ್ರದರ್ಶಿಸುವ ಹಲವಾರು ಜಾಲತಾಣಗಳಿವೆ.
ಅಷ್ಟೇ ಅಲ್ಲ, ನಮ್ಮ ಆಯ್ಕೆಯ ತಾಣಗಳಿಂದ ಆರ್‌ಎಸ್‌ಎಸ್ ಫೀಡ್ ಪಡೆದು ಆ ಲೇಖನಗಳನ್ನೆಲ್ಲ ಒಂದೇಕಡೆ ನೋಡಲು ನೆರವಾಗುವ ತಂತ್ರಾಂಶಗಳು – ಮೊಬೈಲ್ ಆಪ್‌ಗಳೂ ಇವೆ. ಕೆಲವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಇಂತಹ ತಂತ್ರಾಂಶಗಳ ಬಳಕೆ ಈಗ ಕಡಿಮೆಯಾಗಿದೆಯಾದರೂ ಒಟ್ಟಾರೆಯಾಗಿ ಆರ್‌ಎಸ್‌ಎಸ್ ವ್ಯವಸ್ಥೆ ಜಾಲಲೋಕದಲ್ಲಿ ಇನ್ನೂ ವ್ಯಾಪಕವಾಗಿ ಬಳಕೆಯಾಗುತ್ತಿದೆ.

RGB

ಆರ್‌ಜಿಬಿ
Kannada Equivalent: (ರೂಪಿಸಬೇಕಿದೆ)
Short Description : ಡಿಜಿಟಲ್ ಜಗತ್ತಿನ ಎಲ್ಲ ಬಣ್ಣಗಳಿಗೂ ಮೂಲವಾದ ಕೆಂಪು, ಹಸಿರು ಹಾಗೂ ನೀಲಿ (ರೆಡ್-ಗ್ರೀನ್-ಬ್ಲೂ) ಬಣ್ಣಗಳನ್ನು ಸೂಚಿಸುವ ಹೆಸರು
Long Description: ಪ್ರಾಥಮಿಕ ಬಣ್ಣಗಳನ್ನು (ಪ್ರೈಮರಿ ಕಲರ್ಸ್) ಸೇರಿಸಿ ಹೊಸ ಬಣ್ಣಗಳನ್ನು ರೂಪಿಸಿಕೊಳ್ಳುವುದು ಹೊಸ ಸಂಗತಿಯೇನಲ್ಲ. ಯಾವ ಬಣ್ಣಕ್ಕೆ ಯಾವ ಬಣ್ಣ ಸೇರಿಸಿದರೆ ಯಾವ ಬಣ್ಣ ಸೃಷ್ಟಿಯಾಗುತ್ತದೆ ಎನ್ನುವುದನ್ನು ಮಕ್ಕಳು ಶಾಲೆಯ ದಿನಗಳಲ್ಲೇ ಆಸಕ್ತಿಯಿಂದ ಕಲಿಯುತ್ತಾರೆ. ಉದಾ: ಹಳದಿ ಮತ್ತು ನೀಲಿ ಸೇರಿಸಿದರೆ ಹಸಿರು ಬಣ್ಣ ಬರುತ್ತದೆ.
ಭೌತಿಕ ಜಗತ್ತಿನಲ್ಲಿರುವಂತೆ ಡಿಜಿಟಲ್ ಜಗತ್ತಿನಲ್ಲೂ ಅಸಂಖ್ಯ ಬಣ್ಣಗಳು ನಮ್ಮ ಮುಂದೆ ಕಾಣಸಿಗುತ್ತವಲ್ಲ, ಅಲ್ಲಿಯೂ ಇಂತಹುದೇ ತಂತ್ರ ಬಳಕೆಯಾಗುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಇತ್ಯಾದಿಗಳಲ್ಲಿ ನಮಗೆ ಕಾಣಿಸುವ ಎಲ್ಲ ಬಣ್ಣಗಳೂ ಕೆಂಪು, ಹಸಿರು ಹಾಗೂ ನೀಲಿ ಬಣ್ಣದ ಬೆಳಕಿನ ಸಂಯೋಜನೆಯಿಂದ ರೂಪುಗೊಂಡಿರುತ್ತವೆ.
ಮೂರೂ ಬಣ್ಣಗಳ ಇಂಗ್ಲಿಷ್ ಹೆಸರಿನ (ರೆಡ್-ಗ್ರೀನ್-ಬ್ಲೂ) ಮೊದಲ ಅಕ್ಷರಗಳನ್ನು ಸೇರಿಸಿ ಈ ವ್ಯವಸ್ಥೆಯನ್ನು ಆರ್‌ಜಿಬಿ ಎಂದು ಕರೆಯಲಾಗುತ್ತದೆ. ನಮ್ಮ ಆಯ್ಕೆಯ ಬಣ್ಣ ಕಾಣಬೇಕಾದರೆ ಈ ಮೂರು ಬಣ್ಣಗಳು ಯಾವ ಪ್ರಮಾಣದಲ್ಲಿ ಬೆರೆಯಬೇಕು ಎನ್ನುವುದನ್ನು ಪ್ರತ್ಯೇಕ ಸಂಖ್ಯೆಗಳು ಸೂಚಿಸುತ್ತವೆ. ಮೂರೂ ಬಣ್ಣಗಳನ್ನು ಸೊನ್ನೆಯ ಮಟ್ಟದಲ್ಲಿಟ್ಟರೆ ಕಪ್ಪು, ಗರಿಷ್ಠ ಮಟ್ಟಕ್ಕೆ ಕೊಂಡೊಯ್ದರೆ ಬಿಳಿ, ಕೆಂಪು-ಹಸಿರು ಮಾತ್ರವೇ ಬಳಕೆಯಾದರೆ ಕಂದುಬಣ್ಣ – ಹೀಗೆ ಮೂರು ಬಣ್ಣಗಳ ಪ್ರಮಾಣವನ್ನು ಬದಲಿಸುತ್ತ ಹೋದಂತೆ ಹೊಸ ಬಣ್ಣಗಳು ಸೃಷ್ಟಿಯಾಗುತ್ತವೆ.
ಅಂದಹಾಗೆ ಆರ್‌ಜಿಬಿ ಸಂಯೋಜನೆಯಲ್ಲಿ ರೂಪುಗೊಂಡ ಬಣ್ಣಗಳು ಪರದೆಯ ಮೇಲೆ ಪ್ರದರ್ಶನಕ್ಕೆ ಹೊಂದುವಷ್ಟು ಚೆನ್ನಾಗಿ ಮುದ್ರಣಕ್ಕೆ ಹೊಂದಿಕೊಳ್ಳುವುದಿಲ್ಲ. ಏಕೆಂದರೆ ಮುದ್ರಣದಲ್ಲಿ ಕೈಗೆ ಮೆತ್ತುವ ಉತ್ಪಾದಿತ ಬಣ್ಣಗಳು ಬಳಕೆಯಾಗುತ್ತವೆ. ಹಾಗಾಗಿ ಮುದ್ರಣವನ್ನೇ ಉದ್ದೇಶವಾಗಿಟ್ಟುಕೊಂಡು ಕಂಪ್ಯೂಟರ್ ಚಿತ್ರಗಳನ್ನು ರೂಪಿಸುವಾಗ ಆರ್‌ಜಿಬಿ ಬದಲಿಗೆ ‘ಸಿಎಂವೈಕೆ’ಯನ್ನೂ ಬಳಸಲಾಗುತ್ತದೆ. ಆರ್‌ಜಿಬಿಯಲ್ಲಿ ಕೆಂಪು, ಹಸಿರು, ನೀಲಿ ಇದ್ದಂತೆ ಸಿಎಂವೈಕೆಯಲ್ಲಿ ಸಿಯಾನ್ (ಹಸಿರು ಛಾಯೆಯ ನೀಲಿ), ಮಜೆಂಟಾ (ಕಡುಗೆಂಪು), ಹಳದಿ ಹಾಗೂ ಕಪ್ಪು ಬಣ್ಣಗಳನ್ನು ಬಳಸಲಾಗುತ್ತದೆ.

Algorithm

ಆಲ್ಗರಿದಮ್
Kannada Equivalent: ಕ್ರಮಾವಳಿ
Short Description : ಯಾವುದೇ ಸಮಸ್ಯೆಯನ್ನು ಪರಿಹರಿಸಲು ಕೈಗೊಳ್ಳಬೇಕಾದ ಹೆಜ್ಜೆಗಳ ಸರಣಿ
Long Description: ಪ್ರೋಗ್ರಾಮ್ ಬರೆಯಲು ಹೊರಟಾಗ ಅದರ ಪ್ರತಿಯೊಂದು ಹೆಜ್ಜೆಯನ್ನೂ ಪ್ರತ್ಯೇಕವಾಗಿ ವಿವರಿಸಬೇಕಾಗುತ್ತದೆ. ಇಂತಹ ಹೆಜ್ಜೆಗಳ ಸರಣಿಯೇ ಆಲ್ಗರಿದಮ್.
ಪ್ರೋಗ್ರಾಮ್‌ಗೆ ನೀಡಲಾಗುವ ಇನ್‌ಪುಟ್ ಅನ್ನು ಸೂಕ್ತವಾಗಿ ಸಂಸ್ಕರಿಸಿ ನಮಗೆ ಬೇಕಾದ ರೂಪದ ಔಟ್‌ಪುಟ್ ನೀಡುವಂತೆ ನಿರ್ದೇಶಿಸುವುದು ಆಲ್ಗರಿದಮ್‌ನ ಕೆಲಸ. ಉಳಿಸಿಟ್ಟ ಕಡತದ ಮೇಲೆ ಕ್ಲಿಕ್ಕಿಸಿದಾಗ ಅದು ತೆಗೆದುಕೊಳ್ಳುವುದರಿಂದ ಹಿಡಿದು ಅತ್ಯಂತ ಕ್ಲಿಷ್ಟವಾದ ಸಮಸ್ಯೆಯನ್ನು ಬಿಡಿಸುವವರೆಗೆ ಕಂಪ್ಯೂಟರಿನಲ್ಲಿ ಯಾವ ಕೆಲಸ ಆಗಬೇಕಾದರೂ ಅದಕ್ಕೆ ಸಂಬಂಧಪಟ್ಟ ಪ್ರತಿಯೊಂದು ಹೆಜ್ಜೆಯನ್ನೂ ಆ ಪ್ರೋಗ್ರಾಮಿನ ಆಲ್ಗರಿದಮ್ ಪರಿಗಣಿಸಿರಬೇಕು. ಪ್ರೋಗ್ರಾಮ್ ಬರೆಯುವ ಮುನ್ನ ಅದರ ತರ್ಕ (ಲಾಜಿಕ್) ಹೇಗಿರಬೇಕು ಎನ್ನುವುದನ್ನು ಅಂತಿಮಗೊಳಿಸುವಲ್ಲಿ ಆಲ್ಗರಿದಮ್‌ನದೇ ಪ್ರಮುಖ ಪಾತ್ರ.
ಪ್ರೋಗ್ರಾಮ್ ಬರೆಯಲು ಹೊರಟಿರುವುದು ಯಾವ ಭಾಷೆಯಲ್ಲೇ (ಸಿ++, ಜಾವಾ ಇತ್ಯಾದಿ) ಆಗಲಿ, ಆ ಕೆಲಸ ಶುರುಮಾಡುವ ಮೊದಲು ನಮ್ಮ ಉದ್ದೇಶಕ್ಕೆ ಹೊಂದುವ ಸಮರ್ಥ ಆಲ್ಗರಿದಮ್ ಅನ್ನು ಆರಿಸಿಕೊಳ್ಳುವುದು ಪ್ರೋಗ್ರಾಮಿಂಗ್‌ನ ಮಹತ್ವದ ಹೆಜ್ಜೆಗಳಲ್ಲೊಂದು. ವೇಗ, ಸಂಪನ್ಮೂಲದ ಬಳಕೆ, ಅನುಷ್ಠಾನದ ಜಟಿಲತೆ ಮುಂತಾದ ಅಂಶಗಳಮೇಲೆ ವಿವಿಧ ಆಲ್ಗರಿದಮ್‌ಗಳನ್ನು ಹೋಲಿಸಿ ಅವುಗಳ ಪೈಕಿ ಅತ್ಯಂತ ಸೂಕ್ತವೆಂದು ತೋರುವುದನ್ನಷ್ಟೆ ಆಯ್ದುಕೊಂಡು ಮುಂದುವರೆಯುವುದು ಸಾಮಾನ್ಯ ಅಭ್ಯಾಸ. ಹೀಗೆ ಆರಿಸಲಾದ ಆಲ್ಗರಿದಮ್‌ನ ತರ್ಕ ಎಷ್ಟು ಸಮರ್ಥವಾಗಿರುತ್ತದೋ ಅಂತಿಮವಾಗಿ ಸಿದ್ಧವಾಗುವ ಪ್ರೋಗ್ರಾಮಿನ ಸಾಮರ್ಥ್ಯದ ಪ್ರಮಾಣವೂ ಅಷ್ಟೇ ಇರುತ್ತದೆ.

Aspect Ratio

ಆಸ್ಪೆಕ್ಟ್ ರೇಶಿಯೋ
Kannada Equivalent: (ರೂಪಿಸಬೇಕಿದೆ)
Short Description : ಡಿಜಿಟಲ್ ರೂಪದಲ್ಲಿರುವ ಚಿತ್ರವೊಂದರ ಉದ್ದ ಮತ್ತು ಅಗಲಗಳ ನಡುವಿನ ಅನುಪಾತ
Long Description: ಡಿಜಿಟಲ್ ರೂಪದಲ್ಲಿರುವ ಚಿತ್ರವೊಂದರ ಉದ್ದ ಮತ್ತು ಅಗಲಗಳ ನಡುವಿನ ಅನುಪಾತವನ್ನು ಅದರ ‘ಆಸ್ಪೆಕ್ಟ್ ರೇಶಿಯೋ’ ಸೂಚಿಸುತ್ತದೆ. ಉದಾಹರಣೆಗೆ ಒಂದು ಚಿತ್ರದ ಅಗಲ ಅದರ ಎತ್ತರದ ಒಂದೂವರೆಪಟ್ಟು ದೊಡ್ಡದಿದೆ ಎನ್ನುವುದಾದರೆ ಅದರ ಆಸ್ಪೆಕ್ಟ್ ರೇಶಿಯೋ ೩:೨ ಆಗಿರುತ್ತದೆ. ಪ್ರದರ್ಶಕಗಳು (ಡಿಸ್ಪ್ಲೇ) ಹಾಗೂ ಮುದ್ರಿತ ಛಾಯಾಚಿತ್ರಗಳ ಉದ್ದ-ಅಗಲಗಳ ಅನುಪಾತವನ್ನು ಪ್ರತಿನಿಧಿಸಲೂ ಆಸ್ಪೆಕ್ಟ್ ರೇಶಿಯೋವನ್ನೇ ಬಳಸಲಾಗುತ್ತದೆ.
ಚಿತ್ರಗಳನ್ನು ಮುದ್ರಿಸುವಾಗ ಹಾಗೂ ಬೇರೆಬೇರೆ ಗಾತ್ರದ ಪರದೆಗಳ ಮೇಲೆ ಪ್ರದರ್ಶಿಸುವಾಗ ಅದರ ಆಸ್ಪೆಕ್ಟ್ ರೇಶಿಯೋ ಕಡೆಗೆ ಗಮನಹರಿಸಬೇಕಾದ್ದು ಅನಿವಾರ್ಯ. ಉದಾಹರಣೆಗೆ ೪:೩ ಆಸ್ಪೆಕ್ಟ್ ರೇಶಿಯೋದಲ್ಲಿ ತೆಗೆದ ಚಿತ್ರವನ್ನು ನೀವು ೬”x೪” ಗಾತ್ರದಲ್ಲಿ ಮುದ್ರಿಸಹೊರಟರೆ ಚಿತ್ರದ ಸ್ವಲ್ಪ ಭಾಗ ಕತ್ತರಿಸಿಹೋಗುತ್ತದೆ. ಅದೇ ೩:೨ ಆಸ್ಪೆಕ್ಟ್ ರೇಶಿಯೋದಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ೬”x೪” ಗಾತ್ರದಲ್ಲಿ ಪೂರ್ಣವಾಗಿ ಮುದ್ರಿಸಿಕೊಳ್ಳಬಹುದು. ೪:೩ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರ ೬”x೪.೫” ಗಾತ್ರದಲ್ಲಿ ಸರಿಯಾಗಿ ಮುದ್ರಣವಾಗುತ್ತದೆ. ಇದೇರೀತಿ ೧೬:೯ ಆಸ್ಪೆಕ್ಟ್ ರೇಶಿಯೋ ಇರುವ ಟೀವಿಯಲ್ಲಿ ೩:೨ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರವನ್ನು ನೋಡಿದರೆ ಎರಡೂ ಬದಿಗಳಲ್ಲಿ ಕಪ್ಪು ಬಣ್ಣ ಕಾಣಿಸುತ್ತದೆ; ೧೬:೯ ಆಸ್ಪೆಕ್ಟ್ ರೇಶಿಯೋ ಇರುವ ಚಿತ್ರವನ್ನೇ ನೋಡಿದರೆ ಈ ಸಮಸ್ಯೆ ಇರದು!
ಬಹುತೇಕ ಕ್ಯಾಮೆರಾಗಳಲ್ಲಿ ಚಿತ್ರ ಕ್ಲಿಕ್ಕಿಸುವ ಮುನ್ನವೇ ನಮಗೆ ಬೇಕಾದ ಆಸ್ಪೆಕ್ಟ್ ರೇಶಿಯೋ ಹೊಂದಿಸಿಕೊಳ್ಳುವುದು ಸಾಧ್ಯ. ಕ್ಲಿಕ್ಕಿಸಿದ ನಂತರದಲ್ಲಿ ಚಿತ್ರದ ಒಂದಷ್ಟು ಭಾಗವನ್ನು ಕತ್ತರಿಸುವ ಮೂಲಕ ಅವುಗಳ ಆಸ್ಪೆಕ್ಟ್ ರೇಶಿಯೋ ಬದಲಿಸಿಕೊಳ್ಳಬಹುದು. ಕಂಪ್ಯೂಟರಿನಲ್ಲಿ ಚಿತ್ರಗಳನ್ನು ಹಿಗ್ಗಿಸಲು ಇಲ್ಲವೇ ಕುಗ್ಗಿಸಲು ಪ್ರಯತ್ನಿಸುವಾಗ ಅವುಗಳ ಮೂಲ ಆಸ್ಪೆಕ್ಟ್ ರೇಶಿಯೋ ಉಳಿಸಿಕೊಳ್ಳಬೇಕಾಗುತ್ತದೆ.

Inkjet

ಇಂಕ್‌ಜೆಟ್
Kannada Equivalent: (ರೂಪಿಸಬೇಕಿದೆ)
Short Description : ಕಾಗದದ ಮೇಲೆ ಬಣ್ಣದ (ಇಂಕ್) ಹನಿಗಳನ್ನು ಸಿಂಪಡಿಸುವ ಮೂಲಕ ಪಠ್ಯ ಅಥವಾ ಚಿತ್ರಗಳನ್ನು ಮೂಡಿಸುವ ತಂತ್ರಜ್ಞಾನ; ಈ ತಂತ್ರಜ್ಞಾನ ಬಳಸುವ ಪ್ರಿಂಟರುಗಳನ್ನೂ ಇದೇ ಹೆಸರಿನಿಂದ ಗುರುತಿಸಲಾಗುತ್ತದೆ.
Long Description: ಇಂದಿನ ಐಟಿ ಯುಗದಲ್ಲಿ ನಾವು ಬಹುತೇಕ ಕಡತ-ದಾಖಲೆಗಳನ್ನು ಡಿಜಿಟಲ್ ರೂಪದಲ್ಲೇ ಬಳಸುತ್ತೇವೆ, ನಿಜ. ಹಾಗೆಂದು ಮುದ್ರಿತ ಪ್ರತಿಗಳ ಬಳಕೆ ಸಂಪೂರ್ಣವಾಗೇನೂ ನಿಂತಿಲ್ಲ. ಕಂಪ್ಯೂಟರಿನಲ್ಲಿ ರೂಪಿಸಿದ ಅಥವಾ ಡೌನ್‌ಲೋಡ್ ಮಾಡಿಕೊಂಡ ಕಡತವನ್ನು ಮುದ್ರಿಸಲು ನಾವು ಈಗಲೂ ಪ್ರಿಂಟರಿನ ಮೊರೆಹೋಗುತ್ತಲೇ ಇರುತ್ತೇವೆ.
ಈ ಉದ್ದೇಶಕ್ಕಾಗಿ ಬಳಕೆಯಾಗುವ ಹಲವು ಬಗೆಯ ಪ್ರಿಂಟರುಗಳ ಪೈಕಿ ಇಂಕ್‌ಜೆಟ್ ಪ್ರಿಂಟರ್ ಕೂಡ ಒಂದು. ಪ್ರಿಂಟರಿನೊಳಗೆ ಹಾದುಬರುವ ಕಾಗದದ ಮೇಲೆ ಬಣ್ಣದ (ಇಂಕ್) ಹನಿಗಳನ್ನು ಸಿಂಪಡಿಸುವ ಮೂಲಕ ಪಠ್ಯ ಅಥವಾ ಚಿತ್ರಗಳನ್ನು ಮೂಡಿಸುವುದು ಈ ಪ್ರಿಂಟರಿನ ಕಾರ್ಯವಿಧಾನ. ‘ಇಂಕ್‌ಜೆಟ್’ ಎಂಬ ಹೆಸರಿಗೂ ಇದೇ ಕಾರಣ.
ಬಹುತೇಕ ಇಂಕ್‌ಜೆಟ್ ಪ್ರಿಂಟರುಗಳಲ್ಲಿ ಇಂಕ್ ತುಂಬಿದ ಎರಡು ಪುಟ್ಟ ಡಬ್ಬಿ(ಕಾರ್ಟ್‌ರಿಜ್)ಗಳಿರುತ್ತವೆ. ಈ ಪೈಕಿ ಒಂದರಲ್ಲಿ ಕಪ್ಪು ಬಣ್ಣದ ಇಂಕ್ ಇದ್ದರೆ ಇನ್ನೊಂದರಲ್ಲಿ ಪ್ರಾಥಮಿಕ ಬಣ್ಣಗಳನ್ನು ಪ್ರತ್ಯೇಕವಾಗಿ ತುಂಬಿಟ್ಟಿರುತ್ತಾರೆ. ಸಿಂಪಡಣೆಗೆ ಮುನ್ನ ಇವನ್ನು ನಿಗದಿತ ಪ್ರಮಾಣದಲ್ಲಿ ಬೆರೆಸುವ ಮೂಲಕ ಕಾಗದದ ಮೇಲೆ ಬೇಕಾದ ಬಣ್ಣವನ್ನು ಮೂಡಿಸುವುದು ಸಾಧ್ಯವಾಗುತ್ತದೆ.
ಲೇಸರ್ ಪ್ರಿಂಟರಿನ ಹೋಲಿಕೆಯಲ್ಲಿ ಇಂಕ್‌ಜೆಟ್ ಪ್ರಿಂಟರುಗಳ ಬೆಲೆ ಬಹಳ ಕಡಿಮೆ (ಮುದ್ರಣ ಗುಣಮಟ್ಟವೂ ಕೊಂಚ ಕಡಿಮೆಯೇ). ಹೀಗಾಗಿ ಮನೆಗಳಲ್ಲಿ ಪ್ರಿಂಟರ್ ಬಳಸುವ ಬಹುತೇಕ ಮಂದಿ ಇಂಕ್‌ಜೆಟ್ ಪ್ರಿಂಟರುಗಳನ್ನೇ ಇಷ್ಟಪಟ್ಟು ಬಳಸುತ್ತಾರೆ.

Internet of Things

ಇಂಟರ್‍‍ನೆಟ್ ಆಫ್ ಥಿಂಗ್ಸ್
Kannada Equivalent: ವಸ್ತುಗಳ ಅಂತರಜಾಲ
Short Description : ನಿತ್ಯದ ಬಳಕೆಯ ವಸ್ತುಗಳನ್ನೂ ಅಂತರಜಾಲದ ವ್ಯಾಪ್ತಿಗೆ ತಂದು ಅವುಗಳೊಡನೆ ಮಾಹಿತಿ ವಿನಿಮಯ ಸಾಧ್ಯವಾಗಿಸುವ ಪರಿಕಲ್ಪನೆ
Long Description: ಇಂಟರ್‌ನೆಟ್ ಎಂದಾಕ್ಷಣ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳಷ್ಟೇ ನಮ್ಮ ಮನಸ್ಸಿಗೆ ಬರುವುದು ಸಾಮಾನ್ಯ. ಅಂತರಜಾಲ ಸಂಪರ್ಕವನ್ನು ಇಂತಹ ಸಾಧನಗಳಿಗಷ್ಟೇ ಸೀಮಿತಗೊಳಿಸದೆ ನಿತ್ಯದ ಬಳಕೆಯ ವಸ್ತುಗಳನ್ನೂ ಅದರ ವ್ಯಾಪ್ತಿಗೆ ತರುವ, ಅವುಗಳ ನಡುವೆ ಸಂವಹನ ಸಾಧ್ಯವಾಗಿಸುವ ಪರಿಕಲ್ಪನೆಯೇ ಐಓಟಿ: ಇಂಟರ್‌ನೆಟ್ ಆಫ್ ಥಿಂಗ್ಸ್, ಅಂದರೆ ವಸ್ತುಗಳ ಅಂತರಜಾಲ.
ನಾವು ದಿನನಿತ್ಯವೂ ಬಳಸುವ ನೂರಾರು, ಸಾವಿರಾರು ಸಂಖ್ಯೆಯ ವಸ್ತುಗಳು (ಥಿಂಗ್ಸ್) ಬೃಹತ್ ಜಾಲವೊಂದರ ಭಾಗವಾಗಿ ಬೆಳೆದಾಗ ರೂಪುಗೊಳ್ಳುವುದೇ ವಸ್ತುಗಳ ಅಂತರಜಾಲ. ನಮ್ಮ ಪರಿಚಯದ ಅಂತರಜಾಲದಲ್ಲಿ ಹೇಗೆ ಲ್ಯಾಪ್‌ಟಾಪ್-ಡೆಸ್ಕ್‌ಟಾಪುಗಳು, ಸರ್ವರುಗಳು, ಮೊಬೈಲ್-ಟ್ಯಾಬ್ಲೆಟ್ಟುಗಳು ಒಂದಕ್ಕೊಂದು ಸಂಪರ್ಕಿತವಾಗಿವೆಯೋ ಹಾಗೆ ವಸ್ತುಗಳ ಈ ಅಂತರಜಾಲದಲ್ಲಿ ನಾವು ಕಲ್ಪಿಸಿಕೊಳ್ಳಬಹುದಾದ ಯಾವುದೇ ಸಾಧನ ಜಾಲದ ಸಂಪರ್ಕ ಪಡೆದುಕೊಳ್ಳಬಲ್ಲದು.
ಗೃಹೋಪಯೋಗಿ ವಸ್ತುಗಳು – ವಾಹನಗಳು ಮಾತ್ರವೇ ಅಲ್ಲ, ನಮ್ಮ ದೇಹದೊಳಗೆ ಸೇರಿ ಆರೋಗ್ಯವನ್ನೂ ನಮ್ಮ ಓಡಾಟವನ್ನೂ ಗಮನಿಸಿಕೊಳ್ಳುವ ಸೆನ್ಸರುಗಳಂತಹ ಅತಿಸೂಕ್ಷ್ಮ ವಸ್ತುಗಳೂ ಈ ಮೂಲಕ ಅಂತರಜಾಲ ಸಂಪರ್ಕ ಪಡೆದುಕೊಳ್ಳಬಲ್ಲವು; ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದು ವ್ಯಕ್ತಿಯ ಗಮನಕ್ಕೆ ಬರುವ ಮುನ್ನವೇ ಅವನ ವೈದ್ಯರ ಗಮನಕ್ಕೆ ಬರುವಂತೆ ಮಾಡಬಲ್ಲವು. ಮನುಷ್ಯರಷ್ಟೇ ಏಕೆ, ಜಾನುವಾರುಗಳ ಬಗ್ಗೆ ನಿಗಾವಹಿಸುವುದು – ಯಂತ್ರಗಳ ಸ್ಥಿತಿಗತಿ ತಿಳಿದುಕೊಳ್ಳುವುದು ಮುಂತಾದವನ್ನೂ ಇಂತಹ ಜಾಲ ಸಾಧ್ಯವಾಗಿಸುತ್ತದೆ.
ಅಂದಹಾಗೆ ಇಂತಹುದೊಂದು ಜಾಗತಿಕ ವ್ಯವಸ್ಥೆಯ ಬಗೆಗೆ ಯೋಚಿಸಿ ಅದನ್ನು ‘ಇಂಟರ್‌ನೆಟ್ ಆಫ್ ಥಿಂಗ್ಸ್’ ಎಂದು ಕರೆದ ಶ್ರೇಯ ಕೆವಿನ್ ಆಶ್‌ಟನ್ ಎಂಬ ತಂತ್ರಜ್ಞನಿಗೆ ಸಲ್ಲುತ್ತದೆ. ಐಓಟಿ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು ನಮ್ಮ ಆರೋಗ್ಯ ಗಮನಿಸಿಕೊಳ್ಳುವ ಸ್ಮಾರ್ಟ್‌ವಾಚುಗಳು, ಮೊಬೈಲ್ ಬಳಸಿ ನಿಯಂತ್ರಿಸಬಹುದಾದ ಲೈಟ್ ಬಲ್ಬುಗಳಂತಹ ಸಾಧನಗಳು ಈಗಾಗಲೇ ಮಾರುಕಟ್ಟೆಗೂ ಬಂದುಬಿಟ್ಟಿವೆ.

Internet

ಇಂಟರ್‍‍ನೆಟ್
Kannada Equivalent: ಅಂತರಜಾಲ
Short Description : ಅನೇಕ ಕಂಪ್ಯೂಟರ್ ಜಾಲಗಳ ಅಂತರ್‌ಸಂಪರ್ಕದಿಂದ ರೂಪುಗೊಂಡ ಮಹಾಜಾಲ
Long Description: ಒಂದಕ್ಕಿಂತ ಹೆಚ್ಚು ಕಂಪ್ಯೂಟರುಗಳನ್ನು ಪರಸ್ಪರ ಸಂಪರ್ಕಿಸಿದ ಜಾಲಗಳನ್ನು (ನೆಟ್‌ವರ್ಕ್) ಕಚೇರಿಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ, ಬ್ಯಾಂಕುಗಳಲ್ಲಿ, ಬಸ್ಸು-ರೈಲು-ವಿಮಾನ ಸಂಸ್ಥೆಗಳಲ್ಲಿ ಬಳಸುವುದನ್ನು ನಾವು ನೋಡಿದ್ದೇವೆ. ಒಂದು ಕಂಪ್ಯೂಟರಿನಿಂದ ಸಾಧ್ಯವಾಗುವುದಕ್ಕಿಂತ ಹೆಚ್ಚಿನದನ್ನು ಸಾಧಿಸಿಕೊಳ್ಳಲು ಇಂತಹ ಜಾಲಗಳು ಸಹಾಯಮಾಡುತ್ತವೆ.
ಇಂತಹ ಹಲವು ಜಾಲಗಳು ಒಟ್ಟುಸೇರಿದರೆ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಲ್ಲ ಎಂಬ ಉದ್ದೇಶದಿಂದ ರೂಪುಗೊಂಡದ್ದೇ ಇಂಟರ್‌ನೆಟ್, ಅಂದರೆ ಅಂತರಜಾಲ. ಈ ಹೆಸರಿನ ಭಾವಾರ್ಥ ‘ಇಂಟರ್ ಕನೆಕ್ಷನ್ ಆಫ್ ನೆಟ್‌ವರ್ಕ್ಸ್’ ಎಂದು. ಅನೇಕ ಜಾಲಗಳ ಅಂತರ್‌ಸಂಪರ್ಕದಿಂದ ರೂಪುಗೊಂಡ ಮಹಾಜಾಲ ಇದು. ಸಂವಹನದ ಪರಿಕಲ್ಪನೆಯನ್ನೇ ಆಮೂಲಾಗ್ರವಾಗಿ ಬದಲಿಸಿದ ಹೆಗ್ಗಳಿಕೆ ಈ ಅಂತರಜಾಲದ್ದು.
ವಿಶ್ವದ ವಿವಿಧೆಡೆಗಳಲ್ಲಿರುವ ಕಂಪ್ಯೂಟರುಗಳು, ಮೊಬೈಲ್ ಫೋನುಗಳು, ಸಂಬಂಧಿತ ಸಾಧನಗಳು, ಲ್ಯಾನ್ – ವ್ಯಾನ್ ಮುಂತಾದ ಜಾಲಗಳೆಲ್ಲ ಸೇರಿ ಅಂತರಜಾಲ ರೂಪುಗೊಂಡಿದೆ. ವಿವಿಧ ಯಂತ್ರಾಂಶಗಳು, ಅವುಗಳ ನಡುವೆ ಸಂವಹನ ಸಾಧ್ಯವಾಗಿಸುವ ವ್ಯವಸ್ಥೆಗಳೆಲ್ಲ ಇದರ ಭಾಗಗಳು. ಅಂತರಜಾಲದ ಸಂಪರ್ಕದಲ್ಲಿರುವ ಪ್ರತಿಯೊಂದು ಸಾಧನಕ್ಕೂ ಅಂತರಜಾಲದಲ್ಲಿರುವ ಇತರ ಎಲ್ಲ ಸಾಧನಗಳ ಜೊತೆಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಅವಕಾಶ ಇರುತ್ತದೆ. ವಿಶ್ವವ್ಯಾಪಿ ಜಾಲಕ್ಕೆ (ವರ್ಲ್ಡ್ ವೈಡ್ ವೆಬ್) ಮೂಲಸೌಕರ್ಯ ಒದಗಿಸುವುದು ಇದೇ ಅಂತರಜಾಲದ ಜವಾಬ್ದಾರಿ.
ಅಂತರಜಾಲದಲ್ಲಿರುವ ಸಾಧನಗಳ ನಡುವಿನ ಸಂಪರ್ಕ ಹೇಗಿರಬೇಕು ಎಂದು ನಿರ್ದೇಶಿಸುವುದು ‘ಟಿಸಿಪಿ/ಐಪಿ’ ಎಂಬ ಶಿಷ್ಟಾಚಾರ. ಇದು ‘ಟ್ರಾನ್ಸ್‌ಮಿಶನ್ ಕಂಟ್ರೋಲ್ ಪ್ರೋಟೋಕಾಲ್/ಇಂಟರ್‌ನೆಟ್ ಪ್ರೋಟೋಕಾಲ್’ ಎಂಬ ಹೆಸರಿನ ಹ್ರಸ್ವರೂಪ.

Interface

ಇಂಟರ್‌ಫೇಸ್
Kannada Equivalent: ಅಂತರ ಸಂಪರ್ಕ ಸಾಧನ
Short Description : ವಿದ್ಯುನ್ಮಾನ ಸಾಧನಗಳು ಹಾಗೂ ಬಳಕೆದಾರರ ನಡುವೆ – ಅಥವಾ – ಒಂದಕ್ಕಿಂತ ಹೆಚ್ಚು ವಿದ್ಯುನ್ಮಾನ ಸಾಧನಗಳ ನಡುವೆ ಪರಸ್ಪರ ಸಂವಹನವನ್ನು ಸಾಧ್ಯವಾಗಿಸುವ ವ್ಯವಸ್ಥೆ
Long Description: ಕಂಪ್ಯೂಟರ್, ಮೊಬೈಲ್ ಫೋನ್ ಮುಂತಾದ ಸಾಧನಗಳನ್ನು ಬಳಸುವಾಗ ಪ್ರತಿ ಕ್ಷಣದಲ್ಲೂ ಒಂದಲ್ಲ ಒಂದು ರೀತಿಯ ಸಂವಹನ ನಡೆಯುತ್ತಿರುತ್ತದೆ. ಈ ಸಂವಹನ ಬಳಕೆದಾರರ ಜೊತೆಯಲ್ಲಿರಬಹುದು, ತಂತ್ರಾಂಶಗಳ ನಡುವೆ ಇರಬಹುದು ಇಲ್ಲವೇ ಎರಡು ಯಂತ್ರಾಂಶಗಳ ನಡುವೆಯೂ ನಡೆಯಬಹುದು.
ಇಂತಹ ಪ್ರತಿ ಸಂವಹನಕ್ಕೂ ಸೂಕ್ತ ವ್ಯವಸ್ಥೆಯೊಂದರ ಅಗತ್ಯ ಇರುತ್ತದೆ: ಬಳಕೆದಾರರು ತಮ್ಮ ಅಗತ್ಯಗಳನ್ನು ಸೂಚಿಸಲು (ಮೌಸ್-ಟಚ್‌ಸ್ಕ್ರೀನ್ ಇತ್ಯಾದಿಗಳ ಮೂಲಕ) ತಂತ್ರಾಂಶದ ಪರದೆ ನೆರವಾಗುತ್ತದಲ್ಲ, ಅಂಥದ್ದು. ಇದೇ ರೀತಿ ಪರಸ್ಪರ ಸಂಪರ್ಕಿಸುವ ಸಾಧ್ಯತೆ (ಉದಾ: ಕೇಬಲ್ ಮೂಲಕ) ಇದ್ದರೆ ಮಾತ್ರವೇ ಯಂತ್ರಾಂಶಗಳ ನಡುವಿನ ಸಂವಹನ ಸಾಧ್ಯವಾಗುತ್ತದೆ.
‘ಇಂಟರ್‌ಫೇಸ್’, ಅಂದರೆ ಅಂತರ ಸಂಪರ್ಕ ಸಾಧನ ಎಂದು ಗುರುತಿಸುವುದು ಈ ಬಗೆಯ ವ್ಯವಸ್ಥೆಗಳನ್ನೇ.
ಈ ಪೈಕಿ ಬಳಕೆದಾರರೊಡನೆ ಸಂವಹನ ಸಾಧ್ಯವಾಗಿಸುವ ವ್ಯವಸ್ಥೆಗೆ ‘ಯುಐ’ (ಯೂಸರ್ ಇಂಟರ್‌ಫೇಸ್) ಎಂದು ಹೆಸರು. ಇದೇ ರೀತಿ ಯಂತ್ರಾಂಶಗಳ ನಡುವೆ ಸಂಪರ್ಕ ಸಾಧ್ಯವಾಗಿಸುವ ವ್ಯವಸ್ಥೆಯನ್ನು ಹಾರ್ಡ್‌ವೇರ್ ಇಂಟರ್‌ಫೇಸ್ ಎಂದು ಕರೆಯುತ್ತಾರೆ: ಕಂಪ್ಯೂಟರಿನಲ್ಲಿ – ಮೊಬೈಲಿನಲ್ಲಿ ಇರುವ ಯುಎಸ್‌ಬಿ ಪೋರ್ಟ್ ಇದಕ್ಕೊಂದು ಉದಾಹರಣೆ.
ಅಂದಹಾಗೆ ಇಂಟರ್‌ಫೇಸ್‌ಗಳ ಬಳಕೆ ಕಂಪ್ಯೂಟರು-ಮೊಬೈಲ್ ಫೋನುಗಳಿಗಷ್ಟೇ ಸೀಮಿತವೇನಲ್ಲ. ಡಿವಿಡಿ ಪ್ಲೇಯರ್ – ಸೆಟ್ ಟಾಪ್ ಬಾಕ್ಸ್ ಇತ್ಯಾದಿಗಳೊಡನೆ ಟೀವಿಯ ಸಂಪರ್ಕ ಸಾಧ್ಯವಾಗಿಸುವುದು, ಡಿಜಿಟಲ್ ಕ್ಯಾಮೆರಾದಿಂದ ಫೋಟೋಗಳನ್ನು ವರ್ಗಾಯಿಸಲು ನೆರವಾಗುವುದು – ಇವೆಲ್ಲವೂ ಇಂಟರ್‌ಫೇಸ್‌ಗಳದೇ ಕೆಲಸ.

Intranet

ಇಂಟ್ರಾನೆಟ್
Kannada Equivalent: (ರೂಪಿಸಬೇಕಿದೆ)
Short Description : ನಿರ್ದಿಷ್ಟ ಉದ್ದೇಶ ಅಥವಾ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುವ ಖಾಸಗಿ ಜಾಲ (ನೆಟ್‌ವರ್ಕ್)
Long Description: ಇಂಟರ್‌ನೆಟ್, ಅಂದರೆ ಅಂತರಜಾಲದ ಪರಿಚಯ ನಮ್ಮೆಲ್ಲರಿಗೂ ಇದೆ. ಪ್ರಪಂಚದ ವಿವಿಧೆಡೆಗಳಲ್ಲಿರುವ ವಿದ್ಯುನ್ಮಾನ ಸಾಧನಗಳು ಹಾಗೂ ಅವುಗಳ ಜಾಲಗಳೆಲ್ಲ ಒಟ್ಟುಸೇರಿ ರೂಪುಗೊಂಡಿರುವ ಬೃಹತ್ ಜಾಲ (ನೆಟ್‌ವರ್ಕ್) ಇದು. ಯಾರು ಬೇಕಾದರೂ ಅಂತರಜಾಲದ ಭಾಗವಾಗುವುದು, ಅದರ ಸೌಲಭ್ಯಗಳನ್ನು ಬಳಸುವುದು ಸಾಧ್ಯ.
ಅಂತರಜಾಲದ ಈ ಮುಕ್ತ ಸ್ವರೂಪ ಒಳ್ಳೆಯದೇ ಆದರೂ ಇದು ಎಲ್ಲ ಉಪಯೋಗಗಳಿಗೂ ಸರಿಹೊಂದುವುದಿಲ್ಲ. ಹಲವು ಸಂದರ್ಭಗಳಲ್ಲಿ (ಉದಾ: ಒಂದು ಸಂಸ್ಥೆಯ ಉದ್ಯೋಗಿಗಳು ಮಾತ್ರ ಬಳಸಬಹುದಾದ ವ್ಯವಸ್ಥೆ) ನಮ್ಮ ಜಾಲಕ್ಕೆ ನಿರ್ದಿಷ್ಟ ಬಳಕೆದಾರರಿಗಷ್ಟೇ ಪ್ರವೇಶ ನೀಡುವುದು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬಳಕೆಯಾಗುವುದೇ ಇಂಟ್ರಾನೆಟ್.
ಹೆಸರೇ ಹೇಳುವಂತೆ ಇಂಟ್ರಾನೆಟ್ ಎನ್ನುವುದು ಒಂದು ಮಿತಿಯೊಳಗೆ ಮಾತ್ರವೇ ಕಾರ್ಯನಿರ್ವಹಿಸುವ ಖಾಸಗಿ ಜಾಲ. ಒಂದು ಕಟ್ಟಡದೊಳಗಿನ ಬಳಕೆದಾರರು, ಒಂದು ಸಂಸ್ಥೆಯ ಉದ್ಯೋಗಿಗಳು – ಹೀಗೆ ಇಂಟ್ರಾನೆಟ್‌ಗಳನ್ನು ನಿರ್ದಿಷ್ಟ ಬಳಕೆದಾರರು ಮಾತ್ರವೇ ಸಂಪರ್ಕಿಸುವುದು ಸಾಧ್ಯ.
ಅಂದಹಾಗೆ ಇಂಟ್ರಾನೆಟ್‌ಗಳಿಗೆ ಭೌಗೋಳಿಕ ಮಿತಿ ಇರಲೇಬೇಕೆಂದೇನೂ ಇಲ್ಲ. ಒಂದು ಸಂಸ್ಥೆಯ ಉದ್ಯೋಗಿಗಳು – ಅವರು ಯಾವ ಊರಿನಲ್ಲಿ, ಯಾವ ದೇಶದಲ್ಲೇ ಇದ್ದರೂ – ಬಳಸಲು ಸಾಧ್ಯವಾಗುವಂತಹ ಇಂಟ್ರಾನೆಟ್‌ಗಳನ್ನು ರೂಪಿಸುವುದು ಸಾಧ್ಯವಿದೆ. ಇಂತಹ ಸಂಪರ್ಕಗಳನ್ನು ಸಾಧ್ಯವಾಗಿಸಲು ಅಂತರಜಾಲದ ನೆರವು ಪಡೆದುಕೊಳ್ಳುವುದೂ ಅಪರೂಪವೇನಲ್ಲ. ಈ ಉದ್ದೇಶಕ್ಕಾಗಿ ವಿಪಿಎನ್‌ನಂತಹ ತಂತ್ರಜ್ಞಾನಗಳೂ ಬಳಕೆಯಾಗುತ್ತವೆ.

ERP

ಇಆರ್‌ಪಿ
Kannada Equivalent: (ರೂಪಿಸಬೇಕಿದೆ)
Short Description : ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್; ಯಾವುದೇ ಸಂಸ್ಥೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನೂ ಒಟ್ಟಿಗೆ ಶೇಖರಿಸಿಟ್ಟು ವಿವಿಧ ಕ್ರಮವಿಧಿಗಳ ನೆರವಿನಿಂದ ಆ ಮಾಹಿತಿಯ ಸೂಕ್ತ ಉಪಯೋಗ ಮಾಡಿಕೊಳ್ಳಲು ಇಆರ್‌ಪಿ ಸಹಾಯಮಾಡುವ ತಂತ್ರಾಂಶದ ಹೆಸರು.
Long Description: ಕಂಪ್ಯೂಟರೀಕರಣವಾಗಿರುವ ಸಣ್ಣ-ದೊಡ್ಡ ಸಂಸ್ಥೆಗಳಲ್ಲಿ ಇಆರ್‌ಪಿ, ಅಂದರೆ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ತಂತ್ರಾಂಶಗಳ ಬಳಕೆ ಸಾಮಾನ್ಯ. ನಿರ್ದಿಷ್ಟ ಸಂಸ್ಥೆಯ ಎಲ್ಲ ವಿಭಾಗಗಳ ಅಗತ್ಯಗಳಿಗೂ ಒದಗಿಬರುವುದು ಈ ತಂತ್ರಾಂಶದ ವೈಶಿಷ್ಟ್ಯ.
ಯಾವುದೇ ಸಂಸ್ಥೆಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನೂ ಒಟ್ಟಿಗೆ ಶೇಖರಿಸಿಟ್ಟು ವಿವಿಧ ಕ್ರಮವಿಧಿಗಳ ನೆರವಿನಿಂದ ಆ ಮಾಹಿತಿಯ ಸೂಕ್ತ ಉಪಯೋಗ ಮಾಡಿಕೊಳ್ಳಲು ಇಆರ್‌ಪಿ ಸಹಾಯಮಾಡುತ್ತದೆ. ಅಷ್ಟೇ ಅಲ್ಲ, ಸಂಸ್ಥೆಯ ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುವ ಮೂಲಕ ಅಲ್ಲಿನ ಕೆಲಸಗಳ ನಿರ್ವಹಣೆಯನ್ನೂ ಉತ್ತಮಗೊಳಿಸುತ್ತದೆ.
ಸಂಸ್ಥೆಯ ಎಲ್ಲ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಇಆರ್‌ಪಿ ವ್ಯವಸ್ಥೆಯಲ್ಲಿ ಶೇಖರಿಸಿಡಬಹುದು. ಆಸ್ತಿಪಾಸ್ತಿ ವಿವರ, ಉತ್ಪನ್ನಗಳು ಖರ್ಚಾಗುತ್ತಿರುವ ಪ್ರಮಾಣ, ಬಂದಿರುವ ಖರೀದಿ ಆದೇಶಗಳು, ಗೋದಾಮಿನಲ್ಲಿರುವ ಕಚ್ಚಾವಸ್ತುಗಳ ವಿವರ, ಮುಂದಿನ ತಿಂಗಳು ಬೇಕಾಗಬಹುದಾದ ಕಚ್ಚಾವಸ್ತುವಿನ ಪ್ರಮಾಣದ ಅಂದಾಜು, ಅದರ ತಯಾರಕರಿಗೆ ಕೊಡಬೇಕಾದ ಬಾಕಿ, ಖರ್ಚುವೆಚ್ಚ ಲಾಭನಷ್ಟಗಳ ಲೆಕ್ಕ, ಉದ್ಯೋಗಿಗಳ ಸಂಬಳ, ಗ್ರಾಹಕರ ವಿವರ – ಹೀಗೆ ಪ್ರತಿಯೊಂದು ವಿವರವನ್ನೂ ಇಆರ್‌ಪಿಯ ಘಟಕಗಳು ಸಂಗ್ರಹಿಸಿಟ್ಟುಕೊಳ್ಳಬಲ್ಲವು. ಈ ಎಲ್ಲ ಘಟಕಗಳೂ ಒಂದರ ಜೊತೆಗೊಂದು ಸಂಪರ್ಕದಲ್ಲಿರುವುದರಿಂದ ವಿಭಾಗಗಳ ನಡುವಿನ ಮಾಹಿತಿಯ ಹರಿವು ಸರಾಗವಾಗುತ್ತದೆ, ಸಂಸ್ಥೆಯ ಕಾರ್ಯನಿರ್ವಹಣೆ ಹೆಚ್ಚು ಸಕ್ಷಮವಾಗುತ್ತದೆ. ಯಾರಿಗೆ ಯಾವ ಮಾಹಿತಿ ಲಭ್ಯವಾಗಬೇಕು ಅಥವಾ ಲಭ್ಯವಾಗಬಾರದು ಎಂಬುದನ್ನೂ ಕೂಡ ಇಆರ್‌ಪಿ ತಂತ್ರಾಂಶಗಳಲ್ಲಿ ಬಹಳ ಸುಲಭವಾಗಿ ನಿಗದಿಪಡಿಸಬಹುದು.
ಎಸ್‌ಎಪಿ ಹಾಗೂ ಅರೇಕಲ್ ಸಂಸ್ಥೆಗಳು ಇಆರ್‌ಪಿ ತಂತ್ರಾಂಶಗಳ ಪ್ರಮುಖ ತಯಾರಕರು. ಹಲವು ಇಆರ್‌ಪಿ ತಂತ್ರಾಂಶಗಳೊಡನೆ ಹೊಂದಿಕೊಂಡು ಕೆಲಸಮಾಡುವ, ಅದರಲ್ಲಿರುವ ವಿವರಗಳ ಕುರಿತು ವರದಿಗಳನ್ನು ನೀಡುವ ಬಿಸಿನೆಸ್ ಇಂಟೆಲಿಜೆನ್ಸ್ ತಂತ್ರಾಂಶಗಳೂ ಇವೆ.

E-Ink

ಇ-ಇಂಕ್
Kannada Equivalent: (ರೂಪಿಸಬೇಕಿದೆ)
Short Description : ಇಲೆಕ್ಟ್ರಾನಿಕ್ ಇಂಕ್; ವಿದ್ಯುನ್ಮಾನ ಸಾಧನಗಳಲ್ಲಿ ಬೆಳಕನ್ನು ಹೊರಸೂಸದ ಪರದೆಗಳನ್ನು ರೂಪಿಸಲು ನೆರವಾಗುವ ತಂತ್ರಜ್ಞಾನ. ಇದು ಇ-ಬುಕ್ ರೀಡರುಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ.
Long Description: ಕಂಪ್ಯೂಟರ್, ಮೊಬೈಲ್ ಫೋನ್, ಟ್ಯಾಬ್ಲೆಟ್ ಮುಂತಾದ ಸಾಧನಗಳ ಪರದೆ ಬೆಳಕನ್ನು ಹೊರಸೂಸುವುದರಿಂದ ಅವುಗಳನ್ನು ದೀರ್ಘಕಾಲ ಬಳಸಿದರೆ ಕಣ್ಣಿಗೆ ಕಿರಿಕಿರಿಯಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ರೂಪುಗೊಂಡಿರುವುದೇ ‘ಇ-ಇಂಕ್’ ತಂತ್ರಜ್ಞಾನ.
ಈ ತಂತ್ರಜ್ಞಾನ ಬಳಸುವ ಪರದೆಗಳು ಬೆಳಕನ್ನು ಹೊರಸೂಸುವುದಿಲ್ಲವಾದ್ದರಿಂದ ಅವನ್ನು ನೋಡುವುದು ಕಣ್ಣಿಗೆ ಶ್ರಮವೆನಿಸುವುದಿಲ್ಲ. ಇವು ಕಡಿಮೆ ವಿದ್ಯುತ್ ಬಳಸುವುದರಿಂದ ಬ್ಯಾಟರಿಯೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ; ಪದೇಪದೇ ಚಾರ್ಜ್ ಮಾಡುವ ತಾಪತ್ರಯವೂ ಇರುವುದಿಲ್ಲ. ಅಷ್ಟೇ ಅಲ್ಲ, ಪರದೆಯ ಮೇಲೆ ಮೂಡಿರುವ ಪಠ್ಯವನ್ನು ಬಿಸಿಲಿನಲ್ಲೂ ಶ್ರಮವಿಲ್ಲದೆ ಓದುವುದು ಸಾಧ್ಯ.
ಹೀಗಾಗಿ ಇ-ಬುಕ್ ರೀಡರುಗಳಲ್ಲಿ ಈ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತದೆ. ಅಮೆಜಾನ್ ಕಿಂಡಲ್, ಕೋಬೋ ಮುಂತಾದ ನಿರ್ಮಾತೃಗಳು ಹಲವು ಮಾದರಿಯ ಇ-ಬುಕ್ ರೀಡರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಪಠ್ಯ-ಚಿತ್ರಗಳನ್ನು ಬಹುವರ್ಣದಲ್ಲಿ ಪ್ರದರ್ಶಿಸುವ ಇ-ಇಂಕ್ ತಂತ್ರಜ್ಞಾನವೂ ಇದೆ; ಆದರೆ ಸದ್ಯ ಮಾರುಕಟ್ಟೆಯಲ್ಲಿರುವ ಬಹುತೇಕ ಇ-ಬುಕ್ ರೀಡರುಗಳು ಕಪ್ಪು ಬಿಳುಪಿನ ಪರದೆಯನ್ನೇ ಬಳಸುತ್ತಿವೆ. ಹಲವು ಸ್ಮಾರ್ಟ್‌ವಾಚ್‌ಗಳಲ್ಲೂ ಇ-ಇಂಕ್ ಪರದೆಯನ್ನು ಬಳಸಲಾಗಿದೆ.

Inbox

ಇನ್‍ಬಾಕ್ಸ್
Kannada Equivalent: (ರೂಪಿಸಬೇಕಿದೆ)
Short Description : ಇಮೇಲ್ ಖಾತೆಯಲ್ಲಿ ನಮಗೆ ಬಂದ ಸಂದೇಶಗಳು ಇರುವ ಫೋಲ್ಡರಿಗೆ ಇನ್‌ಬಾಕ್ಸ್ ಎಂದು ಹೆಸರು.
Long Description: ಕಾಗದದ ಕಡತಗಳನ್ನು ನಿಭಾಯಿಸುವ ಕಚೇರಿಗಳಲ್ಲಿ ಒಳಬರುವ ಕಡತಗಳನ್ನು, ಹೊರಹೋಗುವ ಕಡತಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳುವ ಅಭ್ಯಾಸವಿದೆ. ಹೊಸದಾಗಿ ಪರಿಶೀಲನೆಗೆ ಬಂದ ಕಡತಗಳನ್ನು ‘ಇನ್ ಟ್ರೇ’ಯಲ್ಲೂ ಪರಿಶೀಲನೆಯ ನಂತರ ಮುಂದಿನ ಕ್ರಮಕ್ಕೆ ಕಳುಹಿಸಬೇಕಾದವನ್ನು ‘ಔಟ್ ಟ್ರೇ’ಯಲ್ಲೂ ಇಡುವುದು ಇದನ್ನು ಸಾಧಿಸುವ ಕ್ರಮಗಳಲ್ಲೊಂದು.
ಕಾಗದದ ಕಡತಗಳಿಗಿಂತ ಸಂಪೂರ್ಣ ಭಿನ್ನವಾದ ಇಮೇಲ್ ವ್ಯವಸ್ಥೆಯಲ್ಲೂ ಇಂತಹುದೇ ಒಂದು ಪರಿಕಲ್ಪನೆಯಿದೆ. ನಮಗೆ ಬಂದ ಇಮೇಲ್ ಸಂದೇಶಗಳನ್ನು, ನಾವು ಕಳುಹಿಸುತ್ತಿರುವ ಸಂದೇಶಗಳನ್ನು ಪ್ರತ್ಯೇಕವಾಗಿಡುವುದು ಈ ಪರಿಕಲ್ಪನೆಯ ಉದ್ದೇಶ. ಇದಕ್ಕಾಗಿ ನಮ್ಮ ಇಮೇಲ್ ಖಾತೆಯಲ್ಲಿ ಪ್ರತ್ಯೇಕ ಫೋಲ್ಡರುಗಳನ್ನು ಬಳಸಲಾಗುತ್ತದೆ, ಕಚೇರಿಯಲ್ಲಿ ಬೇರೆಬೇರೆ ಕಾಗದಗಳನ್ನು ಬೇರೆಬೇರೆ ಫೈಲುಗಳಲ್ಲಿ ಇಡುವಂತೆಯೇ!
ಈ ಪೈಕಿ ನಮಗೆ ಬಂದ ಸಂದೇಶಗಳು ‘ಇನ್‌ಬಾಕ್ಸ್’ನಲ್ಲಿರುತ್ತವೆ. ಇಮೇಲ್ ಖಾತೆಗೆ ಲಾಗಿನ್ ಆದಾಗ ಮೊದಲಿಗೆ ಇದೇ ಫೋಲ್ಡರ್ ಕಾಣಿಸಿಕೊಳ್ಳುವುದು ಸಾಮಾನ್ಯ. ನಾವು ಇಮೇಲ್‌ಗಳನ್ನು ಕಳಿಸುತ್ತೇವಲ್ಲ, ಅವು ವಿಳಾಸದಾರರಿಗೆ ರವಾನೆಯಾಗುವವರೆಗೂ ಉಳಿದುಕೊಳ್ಳುವ ಫೋಲ್ಡರಿಗೆ ‘ಔಟ್‌ಬಾಕ್ಸ್’ ಎಂದು ಹೆಸರು. ಬಹಳಷ್ಟು ಸಂದರ್ಭಗಳಲ್ಲಿ ಇಮೇಲ್‌ಗಳು ಥಟ್ಟನೆ ರವಾನೆಯಾಗುವುದರಿಂದ ಇದು ನಮ್ಮ ಗಮನಕ್ಕೆ ಬರುವುದೇ ಅಪರೂಪ – ಅಂತರಜಾಲ ಸಂಪರ್ಕ ಇಲ್ಲದಾಗ, ವೇಗ ಕಡಿಮೆಯಿದ್ದಾಗ ಅಥವಾ ದೊಡ್ಡ ಅಟ್ಯಾಚ್‌ಮೆಂಟ್ ಜೊತೆಗೆ ಇಮೇಲ್ ಕಳಿಸಿದರಷ್ಟೇ ಅದು ಈ ಫೋಲ್ಡರಿನ ಮೂಲಕ ಹಾದುಹೋಗುವುದನ್ನು ನೋಡಬಹುದು. ರವಾನೆಯಾದ ಸಂದೇಶಗಳ ಒಂದು ಪ್ರತಿ ‘ಸೆಂಟ್ ಮೆಸೇಜಸ್’ ಎಂಬ ಫೋಲ್ಡರಿನಲ್ಲಿ ಉಳಿದುಕೊಂಡಿರುತ್ತದೆ.

E-Book

ಇ-ಬುಕ್
Kannada Equivalent: ವಿದ್ಯುನ್ಮಾನ ಪುಸ್ತಕ
Short Description : ಇಲೆಕ್ಟ್ರಾನಿಕ್ ಬುಕ್; ಕಂಪ್ಯೂಟರ್, ಮೊಬೈಲ್ ಫೋನ್, ಟ್ಯಾಬ್ಲೆಟ್, ಇ-ಬುಕ್ ರೀಡರ್ ಮುಂತಾದ ಸಾಧನಗಳಲ್ಲಿ ಓದಬಹುದಾದ ವಿದ್ಯುನ್ಮಾನ ರೂಪದ ಪುಸ್ತಕ
Long Description: ಪ್ರಕಟವಾದ ಒಳ್ಳೆಯ ಪುಸ್ತಕಗಳೆಲ್ಲ ನಮಗೆ ಸಿಗುವುದಿಲ್ಲ, ಸಿಕ್ಕರೂ ಎಲ್ಲವನ್ನೂ ಕೊಂಡಿಟ್ಟುಕೊಳ್ಳಲು ಮನೆಯಲ್ಲಿ ಜಾಗ ಇರುವುದಿಲ್ಲ. ಈ ಸಮಸ್ಯೆ ತಪ್ಪಿಸಲು ಹುಟ್ಟಿಕೊಂಡದ್ದೇ ವಿದ್ಯುನ್ಮಾನ ಪುಸ್ತಕ, ಅಂದರೆ ಇ-ಬುಕ್‌ಗಳ ಪರಿಕಲ್ಪನೆ.
ಪುಸ್ತಕದ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಅದರ ಭೌತಿಕ ರೂಪವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಇ-ಪುಸ್ತಕಗಳ ವೈಶಿಷ್ಟ್ಯ. ಇವನ್ನು ಓದಲೆಂದೇ ಕಿಂಡಲ್‌ನಂತಹ ಪ್ರತ್ಯೇಕ ಸಾಧನಗಳು (ಇ-ಬುಕ್ ರೀಡರ್) ರೂಪುಗೊಂಡಿವೆ. ಅಂತಹುದೊಂದು ಸಾಧನವಿದ್ದರೆ ಸಾಕು, ಆ ಪುಸ್ತಕಗಳಂತೆ ಇ-ಪುಸ್ತಕದಲ್ಲೂ ಪುಟ ತಿರುಗಿಸಬಹುದು, ಬುಕ್‌ಮಾರ್ಕ್ ಇಡಬಹುದು!
ಪ್ರತ್ಯೇಕವಾಗಿ ಇ-ಬುಕ್ ರೀಡರನ್ನೇಕೆ ಕೊಳ್ಳಬೇಕು ಎನ್ನುವವರೂ ಚಿಂತಿಸಬೇಕಿಲ್ಲ. ಅಪಾರ ಸಂಖ್ಯೆಯ ವಿದ್ಯುನ್ಮಾನ ಪುಸ್ತಕಗಳನ್ನು ನಮ್ಮ ಕಂಪ್ಯೂಟರ್, ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೇ ದೊರಕಿಸುವ ಅಮೆಜಾನ್ ಕಿಂಡಲ್ ಹಾಗೂ ಗೂಗಲ್ ಪ್ಲೇ ಬುಕ್ಸ್‌ನಂತಹ ಹಲವು ತಂತ್ರಾಂಶಗಳು – ಮೊಬೈಲ್ ಆಪ್‌ಗಳು ಇವೆ. ಇ-ಪುಸ್ತಕಗಳ ಡಿಜಿಟಲ್ ಗ್ರಂಥಾಲಯಗಳೂ ರೂಪುಗೊಂಡಿವೆ. ಹೀಗೆ ಹಲವೆಡೆಗಳಲ್ಲಿ ದೊರಕುವ ಇ-ಪುಸ್ತಕಗಳ ಪೈಕಿ ಕೆಲವು ಉಚಿತವಾದರೆ ಇನ್ನು ಕೆಲವನ್ನು ದುಡ್ಡುಕೊಟ್ಟು ಕೊಳ್ಳಬೇಕು.

E-Waste

ಇ-ವೇಸ್ಟ್
Kannada Equivalent: ವಿದ್ಯುನ್ಮಾನ ಕಸ
Short Description : ಇಲೆಕ್ಟ್ರಾನಿಕ್ ವೇಸ್ಟ್; ಕಸದ ರಾಶಿ ಸೇರುವ ನಿರುಪಯುಕ್ತ ವಿದ್ಯುನ್ಮಾನ ಸಾಧನಗಳನ್ನು ಪ್ರತಿನಿಧಿಸುವ ಹೆಸರು
Long Description: ವಿದ್ಯುನ್ಮಾನ ಸಾಧನಗಳ ಜಗತ್ತಿನಲ್ಲಿ ಬಹಳ ವೇಗವಾಗಿ ಬದಲಾವಣೆಗಳಾಗುತ್ತಿರುತ್ತವೆ. ಈ ವೇಗಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಬಳಕೆದಾರರಾದ ನಾವುಗಳೂ ಆಗಿಂದಾಗ್ಗೆ ಹೊಸಹೊಸ ಸಾಧನಗಳನ್ನು ಕೊಳ್ಳುತ್ತಿರುತ್ತೇವೆ, ಹಳೆಯವನ್ನು ಮನೆಯಿಂದಾಚೆಗೆ ಕಳುಹಿಸುತ್ತೇವೆ. ಇದನ್ನೇ ವಿದ್ಯುನ್ಮಾನ ಕಸ, ಅಥವಾ ‘ಇ-ಕಸ’ (ಇಲೆಕ್ಟ್ರಾನಿಕ್ ವೇಸ್ಟ್) ಎಂದು ಗುರುತಿಸಲಾಗುತ್ತದೆ.
ಇಂತಹ ಪ್ರತಿ ಸಾಧನದಲ್ಲೂ ದೊಡ್ಡ ಸಂಖ್ಯೆಯ ಬಿಡಿಭಾಗಗಳಿರುತ್ತವೆ, ಮತ್ತು ಅಂತಹ ಪ್ರತಿಯೊಂದು ಬಿಡಿಭಾಗವನ್ನೂ ಪ್ಲಾಸ್ಟಿಕ್ಕಿನಿಂದ ಚಿನ್ನದವರೆಗೆ ಅನೇಕ ವಸ್ತುಗಳನ್ನು ಬಳಸಿ ರೂಪಿಸಲಾಗಿರುತ್ತದೆ. ಈ ವಸ್ತುಗಳ ಪೈಕಿ ಅನೇಕ ವಿಷಕಾರಿ ಅಂಶಗಳೂ ಇರುತ್ತವೆ.
ನಾವು ಹೊರಹಾಕುವ ವಿದ್ಯುನ್ಮಾನ ಸಾಧನಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅದರಲ್ಲಿರುವ ವಿಷಕಾರಿ ಅಂಶಗಳು ಪರಿಸರಕ್ಕೆ ಹಾನಿ ಉಂಟುಮಾಡಬಲ್ಲವು. ಹೀಗಾಗಿಯೇ ಪರಿಸರ ಸೇವಾ ಸಂಸ್ಥೆಗಳು, ಸರಕಾರಗಳು ಹಾಗೂ ಕೆಲವೊಮ್ಮೆ ವಿದ್ಯುನ್ಮಾನ ಉತ್ಪನ್ನ ತಯಾರಿಸುವ ಸಂಸ್ಥೆಗಳೂ ಇ-ಕಸದ ಸಮರ್ಪಕ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನದಲ್ಲಿರುತ್ತವೆ.
ಉಪಯುಕ್ತ ವಸ್ತುಗಳನ್ನು (ಉದಾ: ಚಿನ್ನ, ತಾಮ್ರ) ಇ-ಕಸದಿಂದ ಬೇರ್ಪಡಿಸಿ ಮರುಬಳಕೆ ಮಾಡುವುದು, ಹಾಗೂ ನಿರುಪಯುಕ್ತ ಭಾಗಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಪರಿಸರದ ದೃಷ್ಟಿಯಿಂದ ಮಾತ್ರವಲ್ಲ, ಆರ್ಥಿಕವಾಗಿಯೂ ಸಾಕಷ್ಟು ಲಾಭದಾಯಕ. ಅಷ್ಟೇ ಅಲ್ಲ, ನವೀಕರಿಸಲಾಗದ ಸಂಪನ್ಮೂಲಗಳ (ಉದಾ: ಗ್ಯಾಲಿಯಂ, ಇಂಡಿಯಂ ಮುಂತಾದ ವಿರಳ ಧಾತುಗಳು, ಅಂದರೆ ರೇರ್ ಅರ್ಥ್ ಎಲಿಮೆಂಟ್ಸ್) ದೃಷ್ಟಿಯಿಂದ ನೋಡಿದರೆ ಮರುಬಳಕೆ ಅನಿವಾರ್ಯವೂ ಹೌದು.

Ethernet

ಈಥರ್‍‍ನೆಟ್
Kannada Equivalent: (ರೂಪಿಸಬೇಕಿದೆ)
Short Description : ಕೇಬಲ್‌ಗಳ ಮೂಲಕ ಕಂಪ್ಯೂಟರುಗಳನ್ನು, ಸಂಬಂಧಪಟ್ಟ ಸಾಧನಗಳನ್ನು ಸಂಪರ್ಕಿಸುವ ಮಾನಕ
Long Description: ಒಂದಕ್ಕಿಂತ ಹೆಚ್ಚು ಕಂಪ್ಯೂಟರುಗಳ ನಡುವೆ ಪರಸ್ಪರ ಸಂಪರ್ಕ ಏರ್ಪಟ್ಟಾಗ ಅದನ್ನು ನೆಟ್‌ವರ್ಕ್, ಅಂದರೆ ಜಾಲ ಎಂದು ಕರೆಯುತ್ತಾರೆ. ಒಂದೇ ಕಟ್ಟಡದೊಳಗೆ ಕಾರ್ಯನಿರ್ವಹಿಸುವ ಸ್ಥಳೀಯ ಜಾಲ ಇರಲಿ, ವಿಶ್ವಮಟ್ಟದ ವ್ಯಾಪ್ತಿಯಿರುವ ಅಂತರಜಾಲವೇ ಇರಲಿ – ಹೀಗೆ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ನಡುವೆ ಮಾಹಿತಿ ವಿನಿಮಯ ಸಾಧ್ಯವಾಗುತ್ತದೆ.
ಕಂಪ್ಯೂಟರುಗಳ ನಡುವೆ ಸಂಪರ್ಕ ಕಲ್ಪಿಸಲು ಅನೇಕ ಮಾರ್ಗಗಳಿವೆ. ಕೇಬಲ್‌ಗಳ ಬಳಕೆ ಇಂತಹ ಮಾರ್ಗಗಳಲ್ಲೊಂದು. ಈಥರ್‌ನೆಟ್ ಎನ್ನುವುದು ಹೀಗೆ ಕೇಬಲ್‌ಗಳ ಮೂಲಕ ಕಂಪ್ಯೂಟರುಗಳನ್ನು, ಸಂಬಂಧಪಟ್ಟ ಸಾಧನಗಳನ್ನು ಸಂಪರ್ಕಿಸುವ ಮಾನಕ (ಸ್ಟಾಂಡರ್ಡ್). ಕೇಬಲ್ ಸಂಪರ್ಕದ ಮೂಲಕ ರೂಪಿಸಲಾಗುವ ಸ್ಥಳೀಯ ಜಾಲಗಳಲ್ಲಿ ದತ್ತಾಂಶದ ಪ್ರಸರಣ ಯಾವ ರೀತಿಯಲ್ಲಿ ಆಗುತ್ತದೆ ಎನ್ನುವುದನ್ನು ಈ ಮಾನಕ ನಿರ್ದೇಶಿಸುತ್ತದೆ.
ಈ ರೀತಿಯಾಗಿ ಕಂಪ್ಯೂಟರುಗಳನ್ನು, ರೂಟರುಗಳನ್ನೆಲ್ಲ ಸಂಪರ್ಕಿಸಲು ಬಳಕೆಯಾಗುವ ಕೇಬಲ್ ಅನ್ನು ಈಥರ್‌ನೆಟ್ ಕೇಬಲ್ ಎಂದು ಕರೆಯುತ್ತಾರೆ. ನೋಡಲು ದೂರವಾಣಿ ಕೇಬಲ್ಲಿನಂತೆಯೇ ಕಾಣುವ ಇದು ಗಾತ್ರದಲ್ಲಿ ಮಾತ್ರ ದೊಡ್ಡದಾಗಿರುತ್ತದೆ ಎನ್ನುವುದು ವಿಶೇಷ. ಕೇಬಲ್ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ ಬಳಸುವ ಕಂಪ್ಯೂಟರುಗಳಲ್ಲಿ ಬಳಕೆಯಾಗುವುದು ಇದೇ ಕೇಬಲ್. ಈ ಕೇಬಲ್‌ನ ಕೊನೆಗಳು ಕಂಪ್ಯೂಟರಿಗೆ – ರೂಟರಿಗೆ ಸಂಪರ್ಕಗೊಳ್ಳುತ್ತವಲ್ಲ, ಅವನ್ನು ಆರ್‌ಜೆ೪೫ ಕನೆಕ್ಟರುಗಳೆಂದು ಕರೆಯುತ್ತಾರೆ. ಬಹುತೇಕ ಕಂಪ್ಯೂಟರುಗಳಲ್ಲಿ ಇವನ್ನು ಸಂಪರ್ಕಿಸಲು ಬೇಕಾದ ವ್ಯವಸ್ಥೆ ಪೂರ್ವನಿಯೋಜಿತವಾಗಿಯೇ ಇರುತ್ತದೆ.
ವೈಫೈ ತಂತ್ರಜ್ಞಾನದ ಜನಪ್ರಿಯತೆ ಹೆಚ್ಚಿದಂತೆ ಹಲವು ಕ್ಷೇತ್ರಗಳಲ್ಲಿ ಈಥರ್‌ನೆಟ್ ಬಳಕೆ ನಿಧಾನವಾಗಿ ಕಡಿಮೆಯಾಗುತ್ತಿದೆ.

MAh

ಎಂಎಎಚ್
Kannada Equivalent: (ರೂಪಿಸಬೇಕಿದೆ)
Short Description : ಮಿಲಿ ಆಂಪಿಯರ್ ಅವರ್; ಬ್ಯಾಟರಿ ಸಾಮರ್ಥ್ಯವನ್ನು ಅಳೆಯುವ ಏಕಮಾನ
Long Description: ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಮುಂತಾದ ಸಾಧನಗಳಲ್ಲಿರುವ ಬ್ಯಾಟರಿ ಸಾಮರ್ಥ್ಯವನ್ನು ಎಂಎಎಚ್‌ಗಳಲ್ಲಿ ಅಳೆಯಲಾಗುತ್ತದೆ. ಇಲ್ಲಿ ಎಂಎಎಚ್ ಅಂದರೆ ಮಿಲಿ ಆಂಪಿಯರ್ ಅವರ್ (ಆಂಪಿಯರ್ ಎನ್ನುವುದು ವಿದ್ಯುತ್ ಪ್ರವಾಹದ ಏಕಮಾನ). ಯಾವುದೇ ಬ್ಯಾಟರಿ – ಪೂರ್ತಿ ಚಾರ್ಜ್ ಆಗಿದ್ದಾಗ – ಎಷ್ಟು ಪ್ರಮಾಣದ ವಿದ್ಯುತ್ತನ್ನು ಎಷ್ಟು ಹೊತ್ತಿನವರೆಗೆ ಪೂರೈಸಬಲ್ಲದು ಎನ್ನುವುದನ್ನು ಇದು ಸೂಚಿಸುತ್ತದೆ.
ವಾಹನಗಳಲ್ಲಿ ಇಂಧನ ಟ್ಯಾಂಕಿನ ಸಾಮರ್ಥ್ಯ ಇರುತ್ತದಲ್ಲ, ಇದೂ ಹಾಗೆಯೇ. ಎರಡು ಲೀಟರ್ ಸಾಮರ್ಥ್ಯದ ಟ್ಯಾಂಕು ಬೈಕಿನಲ್ಲಿದ್ದರೆ ಅಷ್ಟು ಪೆಟ್ರೋಲ್ ತುಂಬಿಸಿ ನಾವು ನೂರು ಕಿಲೋಮೀಟರ್ ಕ್ರಮಿಸಬಹುದು; ಕಾರಿನಲ್ಲಾದರೆ ಇಪ್ಪತ್ತೋ ಮೂವತ್ತೋ ಕಿಲೋಮೀಟರ್ ಹೋಗುವಷ್ಟರಲ್ಲಿ ಇನ್ನೊಂದು ಪೆಟ್ರೋಲ್ ಬಂಕ್ ಹುಡುಕಬೇಕಾಗುತ್ತದೆ.
ಬ್ಯಾಟರಿ ಸಾಮರ್ಥ್ಯವೂ ಅಷ್ಟೆ. ಉದಾಹರಣೆಗೆ ೩೦೦೦ ಎಂಎಎಚ್ ಸಾಮರ್ಥ್ಯದ ಒಂದು ಬ್ಯಾಟರಿಯನ್ನು ತೆಗೆದುಕೊಂಡರೆ ಅದರ ವರ್ತನೆ ಬೇರೆಬೇರೆ ಗ್ಯಾಜೆಟ್‌ಗಳಲ್ಲಿ ಬೇರೆಬೇರೆ ರೀತಿಯಲ್ಲಿರುತ್ತದೆ. ಗಂಟೆಗೆ ೧೦೦ ಮಿಲಿಆಂಪಿಯರ್ ವಿದ್ಯುತ್ ಬೇಡುವ ಗ್ಯಾಜೆಟ್‌ಗೆ ಈ ಬ್ಯಾಟರಿ ೩೦ ಗಂಟೆಗಳ ಕಾಲ ಜೀವತುಂಬಬಲ್ಲದು; ಅದೇರೀತಿ ಗಂಟೆಗೆ ೨೦೦ ಮಿಲಿಆಂಪಿಯರ್ ಬೇಕಾದಾಗ ೧೫ ಗಂಟೆಗಳಲ್ಲೇ ಬ್ಯಾಟರಿ ಖಾಲಿಯಾಗಿಬಿಡುತ್ತದೆ. ಅಂದರೆ, ಒಮ್ಮೆ ಚಾರ್ಜ್ ಮಾಡಿದ ಬ್ಯಾಟರಿ ಎಷ್ಟು ಹೊತ್ತು ಬಾಳುತ್ತದೆ ಎನ್ನುವುದು ಬ್ಯಾಟರಿ ಸಾಮರ್ಥ್ಯದ ಜೊತೆಗೆ ನಮ್ಮ ಮೊಬೈಲ್ ಫೋನು ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರು ಎಷ್ಟು ಪ್ರಮಾಣದ ವಿದ್ಯುತ್ ಬಳಸುತ್ತದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.

MNP

ಎಂಎನ್‌ಪಿ
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ನಂಬರ್ ಪೋರ್ಟಬಿಲಿಟಿ; ಮೊಬೈಲ್ ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಂಡು ಸೇವಾ ಸಂಸ್ಥೆಯನ್ನು ಬದಲಿಸಲು ಅನುವುಮಾಡಿಕೊಡುವ ವ್ಯವಸ್ಥೆ
Long Description: ನಾವು ಯಾವುದೋ ಸಂಸ್ಥೆಯ ಮೊಬೈಲ್ ಸಂಪರ್ಕ ಬಳಸುತ್ತಿರುತ್ತೇವಲ್ಲ, ಅದಕ್ಕಿಂತ ಉತ್ತಮ ಗುಣಮಟ್ಟದ ಸೇವೆ ಹಾಗೂ ಕಡಿಮೆ ದರ ಇನ್ನೊಂದು ಸಂಸ್ಥೆಯಲ್ಲಿ ದೊರಕುತ್ತಿವೆ ಎಂದರೆ ನಮ್ಮ ಈಗಿನ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಂಡೇ ಆ ಹೊಸ ಸಂಸ್ಥೆಯತ್ತ ಮುಖಮಾಡುವುದು ಸಾಧ್ಯವಿದೆ. ಇದನ್ನು ಸಾಧ್ಯವಾಗಿಸಿರುವುದು ‘ಮೊಬೈಲ್ ನಂಬರ್ ಪೋರ್ಟಬಿಲಿಟಿ’ (ಎಂಎನ್‌ಪಿ) ಎನ್ನುವ ಪರಿಕಲ್ಪನೆ. ಸೇವೆ ಬದಲಾದರೂ ಮೊಬೈಲ್ ಸಂಖ್ಯೆ ಬದಲಾಗದಂತೆ ನೋಡಿಕೊಳ್ಳುವುದು, ಆ ಮೂಲಕ ಎಲ್ಲರಿಗೂ ನಮ್ಮ ಸಂಖ್ಯೆಯನ್ನು ಮತ್ತೊಮ್ಮೆ ತಿಳಿಸಬೇಕಾದ ಅನಿವಾರ್ಯತೆಯನ್ನು ತಪ್ಪಿಸುವುದು ಎಂಎನ್‌ಪಿಯ ವೈಶಿಷ್ಟ್ಯ. ಬಳಕೆದಾರರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವ ಮೂಲಕ ಈ ವ್ಯವಸ್ಥೆ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆ ಯಾವಾಗಲೂ ಇರುವಂತೆ ನೋಡಿಕೊಳ್ಳುತ್ತದೆ.
ನಮ್ಮ ಸದ್ಯದ ಮೊಬೈಲ್ ಸಂಪರ್ಕವನ್ನು ಭಾರತದ ಯಾವುದೇ ಮೊಬೈಲ್ ಸೇವೆಗೆ ವರ್ಗಾಯಿಸಲು ‘ಯುನೀಕ್ ಪೋರ್ಟಿಂಗ್ ಕೋಡ್’ ಎಂಬ ಸಂಖ್ಯೆ ಇದ್ದರೆ ಸಾಕು. ಈ ಸಂಖ್ಯೆಯನ್ನು ನಮ್ಮ ಮೊಬೈಲಿನಿಂದ ೧೯೦೦ಗೆ ‘PORT <ಮೊಬೈಲ್ ಸಂಖ್ಯೆ>‘ ಎಂದು ಎಸ್ಸೆಮ್ಮೆಸ್ ಕಳಿಸುವ ಮೂಲಕ ಪಡೆದುಕೊಳ್ಳಬಹುದು. ನಾವು ಯಾವ ಸೇವೆಗೆ ಬದಲಿಸಬೇಕೆಂದಿದ್ದೇವೋ ಆ ಸಂಸ್ಥೆಯವರು ಈ ಸಂಖ್ಯೆಯನ್ನು ಪಡೆದು ನಮ್ಮ ಮೊಬೈಲನ್ನು ತಮ್ಮ ಜಾಲಕ್ಕೆ ಸೇರಿಸಿಕೊಳ್ಳುತ್ತಾರೆ.
ಬೇರೆ ಸಂಸ್ಥೆಯ ಗ್ರಾಹಕರನ್ನು ತಮ್ಮತ್ತ ಸೆಳೆಯಲು, ತಮ್ಮ ಗ್ರಾಹಕರು ಬೇರೆ ಸಂಸ್ಥೆಯತ್ತ ಹೋಗದಂತೆ ತಡೆಯಲು ಮೊಬೈಲ್ ಸಂಸ್ಥೆಗಳು ಆಗಿಂದಾಗ್ಗೆ ವಿಶೇಷ ಕೊಡುಗೆಗಳನ್ನು ಘೋಷಿಸುತ್ತಲೇ ಇರುತ್ತವೆ. ಪೋರ್ಟ್ ಎಂದು ಸಂದೇಶ ಕಳಿಸಿದ ನಂತರವೂ ನಿರ್ಧಾರ ಬದಲಿಸುವಂತೆ ಗ್ರಾಹಕರ ಮನವೊಲಿಸುವ ಪ್ರಯತ್ನಗಳು ನಡೆಯುವುದು ಇಲ್ಲಿ ಸಾಮಾನ್ಯ.

End User

ಎಂಡ್ ಯೂಸರ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ತಂತ್ರಾಂಶ ಅಥವಾ ತಂತ್ರಾಂಶ ಸೇವೆಯ ಬಳಕೆದಾರರನ್ನು ಸೂಚಿಸುವ ಹೆಸರು
Long Description: ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಾಗ, ಜಾಲತಾಣಗಳಲ್ಲಿ ನೋಂದಾಯಿಸಿಕೊಳ್ಳುವಾಗ ಬಳಕೆಯ ನಿಯಮ-ನಿಬಂಧನೆಗಳನ್ನು ಕುರಿತ ವಿಸ್ತೃತ ಮಾಹಿತಿ ನಮಗೆ ಕಾಣಸಿಗುವುದು ಸಾಮಾನ್ಯ. ಇನ್‌ಸ್ಟಾಲ್ ಮಾಡುವ ಅಥವಾ ನೋಂದಣಿಯ ಪ್ರಕ್ರಿಯೆ ಪೂರ್ಣಗೊಳ್ಳುವುದು ಇದನ್ನೆಲ್ಲ ಓದಿ ಒಪ್ಪಿದ್ದೇನೆ ಎಂದು ದೃಢೀಕರಿಸಿದ ನಂತರವೇ.
ನಿರ್ದಿಷ್ಟ ತಂತ್ರಾಂಶ ಅಥವಾ ಜಾಲತಾಣದ ಬಳಕೆಯನ್ನು ಕುರಿತ ಈ ನಿಯಮ-ನಿಬಂಧನೆಗಳನ್ನು ‘ಎಂಡ್ ಯೂಸರ್ ಲೈಸೆನ್ಸ್ ಅಗ್ರೀಮೆಂಟ್’ (ಇಯುಎಲ್‌ಎ) ಎಂದು ಕರೆಯುತ್ತಾರೆ. ಇದನ್ನು ತಂತ್ರಾಂಶದ ನಿರ್ಮಾತೃ ಹಾಗೂ ಅದರ ಬಳಕೆದಾರರ ನಡುವಿನ ಒಪ್ಪಂದ ಎಂದೂ ಕರೆಯಬಹುದು.
ಇಲ್ಲಿ ಬಳಕೆಯಾಗಿರುವ ‘ಎಂಡ್ ಯೂಸರ್’ ಎಂಬ ಹೆಸರು ಯಾವುದೇ ತಂತ್ರಾಂಶ ಅಥವಾ ತಂತ್ರಾಂಶ ಸೇವೆಯ ಬಳಕೆದಾರರನ್ನು ಸೂಚಿಸುತ್ತದೆ. ತಂತ್ರಾಂಶಗಳು – ಜಾಲತಾಣಗಳು ಸೃಷ್ಟಿಯಾಗುವುದೇ ಇವರನ್ನು ಗಮನದಲ್ಲಿಟ್ಟುಕೊಂಡು. ತಂತ್ರಾಂಶ ರಚನೆ ಹಾಗೂ ನಿರ್ವಹಣೆ ಪ್ರಕ್ರಿಯೆಯಲ್ಲಿ ವಿನ್ಯಾಸಕರು – ತಂತ್ರಜ್ಞರು ಒಂದು ಕೊನೆಯಲ್ಲಿದ್ದರೆ ‘ಎಂಡ್ ಯೂಸರ್’ಗಳು ಇನ್ನೊಂದು ಕೊನೆಯಲ್ಲಿರುತ್ತಾರೆ. ತಮ್ಮ ಕೆಲಸಗಳಲ್ಲಿ ತಂತ್ರಾಂಶವನ್ನು ಬಳಸುವ ಜೊತೆಗೆ ಅದರ ಕುರಿತು ಹಿಮ್ಮಾಹಿತಿ ನೀಡುವುದು, ಬೇಕಾದ ಹೊಸ ಸೌಲಭ್ಯಗಳ ಕುರಿತು ತಂತ್ರಜ್ಞರ ಗಮನಸೆಳೆಯುವುದೂ ಇಂತಹ ಬಳಕೆದಾರರದೇ ಜವಾಬ್ದಾರಿ. ಹೊಸ ತಂತ್ರಾಂಶಗಳನ್ನು ಪರಿಚಯಿಸುವಾಗ, ಇರುವ ತಂತ್ರಾಂಶಕ್ಕೆ ಹೊಸ ಸೌಲಭ್ಯಗಳನ್ನು ಸೇರಿಸುವಾಗ ಪರೀಕ್ಷೆಯ (ಟೆಸ್ಟಿಂಗ್) ಹಂತದಲ್ಲಿ ಈ ಗುಂಪಿನ ಸಹಾಯವನ್ನೂ ಪಡೆದುಕೊಳ್ಳುವುದು ವಾಡಿಕೆ.

MP3

ಎಂಪಿ೩
Kannada Equivalent: (ರೂಪಿಸಬೇಕಿದೆ)
Short Description : ಎಂಪಿಇಜಿ ಆಡಿಯೋ ಲೇಯರ್ ೩; ಧ್ವನಿರೂಪದ ಕಡತಗಳನ್ನು ಶೇಖರಿಸಿಡಲು ಬಳಕೆಯಾಗುವ ಡಿಜಿಟಲ್ ತಂತ್ರಜ್ಞಾನ
Long Description: ಮೂವಿಂಗ್ ಪಿಕ್ಚರ್ಸ್ ಎಕ್ಸ್‌ಪರ್ಟ್ ಗ್ರೂಪ್ (ಎಂಪಿಇಜಿ) ಎಂಬ ಸಂಸ್ಥೆ ಧ್ವನಿರೂಪದ ಕಡತಗಳನ್ನು ಶೇಖರಿಸಿಡಲು ರೂಪಿಸಿದ ತಂತ್ರಜ್ಞಾನವೇ ಎಂಪಿ೩. ಇದು ‘ಎಂಪಿಇಜಿ ಆಡಿಯೋ ಲೇಯರ್ ೩’ ಎಂಬ ಹೆಸರಿನ ಹ್ರಸ್ವರೂಪ. ಧ್ವನಿರೂಪದ ಮಾಹಿತಿಯನ್ನು ಬಹಳ ಕಡಿಮೆ ಸ್ಥಳಾವಕಾಶ ಬಳಸುವ ಕಡತಗಳಾಗಿ ಉಳಿಸಿಡುವುದು ಈ ತಂತ್ರದ ಹೆಚ್ಚುಗಾರಿಕೆ. ಮೂಲಧ್ವನಿಯಲ್ಲಿ ಮಾನವರಿಂದ ಗ್ರಹಿಸಲು ಅಸಾಧ್ಯವಾದ ಅಷ್ಟೂ ಭಾಗವನ್ನು ತೆಗೆದುಹಾಕುವ ಹಾಗೂ ಮಿಕ್ಕ ಮಾಹಿತಿಯನ್ನು ಬಹಳ ಸಮರ್ಥವಾಗಿ ಕುಗ್ಗಿಸುವ ಮೂಲಕ ಇದು ಸಾಧ್ಯವಾಗುತ್ತದೆ. ಧ್ವನಿಯ ಗುಣಮಟ್ಟ ತೀರಾ ಉನ್ನತವಾಗೇನೂ ಇರಬೇಕಿಲ್ಲ ಎನ್ನುವುದಾದರೆ ಕಡತದ ಗಾತ್ರವನ್ನು ಇನ್ನಷ್ಟು ಕುಗ್ಗಿಸಬಹುದು. ಡಿಜಿಟಲ್ ರೂಪದಲ್ಲಿರುವ ಹಾಡು-ಸಂಗೀತವನ್ನೆಲ್ಲ ಎಂಪಿ೩ ಎಂದೇ ಗುರುತಿಸುವ ಮಟ್ಟಿಗೆ ಈ ತಂತ್ರಜ್ಞಾನ ಜನಪ್ರಿಯವಾಗಿದೆ.
ಎಂಪಿ೩ ತಂತ್ರಜ್ಞಾನ ಅನ್ವಯಿಸುವುದು ಧ್ವನಿರೂಪದ ಕಡತಗಳಿಗೆ ಮಾತ್ರ. ಧ್ವನಿಯ ಜೊತೆಗೆ ವೀಡಿಯೋ, ಸಬ್‌ಟೈಟಲ್ ಮುಂತಾದ ಮಾಹಿತಿಯನ್ನೂ ಸಣ್ಣ ಗಾತ್ರದ ಕಡತಗಳಲ್ಲಿ ಉಳಿಸಿಡಲು ಎಂಪಿ೪ (ಎಂಪಿಇಜಿ-೪ ಪಾರ್ಟ್ ೧೪) ತಂತ್ರಜ್ಞಾನ ಬಳಕೆಯಾಗುತ್ತದೆ.
ಎಂಪಿ೩ ಹಾಗೂ ಎಂಪಿ೪ ತಂತ್ರಜ್ಞಾನ ಬಳಸುವ ಕಡತಗಳ ಫೈಲ್ ಎಕ್ಸ್‌ಟೆನ್ಷನ್ ಆಗಿ ಆ ಹೆಸರುಗಳೇ ಬಳಕೆಯಾಗುತ್ತವೆ. ಎಂಪಿ೪ ತಂತ್ರಜ್ಞಾನ ಬಳಸಿಕೊಂಡು ಧ್ವನಿರೂಪದ ಮಾಹಿತಿಯನ್ನಷ್ಟೇ ಉಳಿಸಿಡುವ ಕಡತಗಳನ್ನು .m4a ಎಂಬ ಫೈಲ್ ಎಕ್ಸ್‌ಟೆನ್ಷನ್‌ನೊಡನೆ ಗುರುತಿಸುವ ಅಭ್ಯಾಸವೂ ಇದೆ.

Mbps

ಎಂಬಿಪಿಎಸ್
Kannada Equivalent: (ರೂಪಿಸಬೇಕಿದೆ)
Short Description : ಮೆಗಾಬಿಟ್ಸ್ ಪರ್ ಸೆಕೆಂಡ್; ದೂರಸಂಪರ್ಕ ವ್ಯವಸ್ಥೆಯಲ್ಲಿ ದತ್ತಾಂಶ ವರ್ಗಾವಣೆಯ ವೇಗವನ್ನು ಅಳೆಯುವ ಏಕಮಾನಗಳಲ್ಲೊಂದು
Long Description: ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ (ಡೇಟಾ) ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ.
ಡೇಟಾ ರೇಟ್ ಅನ್ನು ಅಳೆಯುವ ಏಕಮಾನವೇ ಡೇಟಾ ರೇಟ್ ಯುನಿಟ್. ಎಂಬಿಪಿಎಸ್ ಎನ್ನುವುದು ಇಂತಹುದೇ ಒಂದು ಡೇಟಾ ರೇಟ್ ಯುನಿಟ್. ಯಾವುದೋ ಅಂತರಜಾಲ ಸಂಪರ್ಕದಲ್ಲಿ ಪ್ರತಿ ಸೆಕೆಂಡಿಗೆ ಹತ್ತು ಲಕ್ಷ ಬಿಟ್‌ನಷ್ಟು ದತ್ತಾಂಶದ ಹರಿವು ಸಾಧ್ಯವಾದರೆ ಅದನ್ನು ೧ ಮೆಗಾಬಿಟ್ಸ್ ಪರ್ ಸೆಕೆಂಡ್ (ಎಂಬಿಪಿಎಸ್) ಸಂಪರ್ಕವೆಂದು ಗುರುತಿಸಲಾಗುತ್ತದೆ. ಕಿಲೋಬಿಟ್ಸ್ ಪರ್ ಸೆಕೆಂಡ್ (ಕೆಬಿಪಿಎಸ್), ಗಿಗಾಬಿಟ್ಸ್ ಪರ್ ಸೆಕೆಂಡ್ (ಜಿಬಿಪಿಎಸ್) ಮುಂತಾದವೂ ಡೇಟಾ ರೇಟ್ ಯುನಿಟ್‌ಗಳೇ.
ದತ್ತಾಂಶದ ರವಾನೆಗೆ ನಾವು ಯಾವುದೇ ಮಾರ್ಗ ಆಯ್ದುಕೊಂಡಾಗ ಅದರ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಪ್ರಮಾಣದ ದತ್ತಾಂಶವಷ್ಟೆ ಹಾದುಹೋಗುವುದು ಸಾಧ್ಯ. ಇದನ್ನು ಆ ಮಾರ್ಗದ ಬ್ಯಾಂಡ್‌ವಿಡ್ತ್ ಎಂದು ಕರೆಯುತ್ತಾರೆ. ಬ್ಯಾಂಡ್‌ವಿಡ್ತ್ ಹೆಚ್ಚಿದ್ದಷ್ಟೂ ಡೇಟಾ ರೇಟ್ ಕೂಡ ಹೆಚ್ಚಾಗಿರುವುದು ಸಾಧ್ಯ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App