भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Wi-FI

ವೈ-ಫೈ
Kannada Equivalent: (ರೂಪಿಸಬೇಕಿದೆ)
Short Description : ನಿಸ್ತಂತು ಅಂತರಜಾಲ ಸಂಪರ್ಕ
Long Description: ವೈರು – ಕೇಬಲ್ಲುಗಳನ್ನು ಜೋಡಿಸುವ ಗೊಡವೆಯಿಲ್ಲದೆ ಸರಾಗವಾಗಿ ಅಂತರಜಾಲ ಸಂಪರ್ಕ ನೀಡಿಬಿಡುವ ವೈ-ಫೈ ತಂತ್ರಜ್ಞಾನದ ಪರಿಚಯ ನಮಗೆ ಚೆನ್ನಾಗಿಯೇ ಇದೆ. ರೇಡಿಯೋ ಅಲೆಗಳ ಮೂಲಕ ತನ್ನ ಸಂಪರ್ಕದಲ್ಲಿರುವ ಸಾಧನಗಳಿಗೆ ಅಂತರಜಾಲ ಸಂಪರ್ಕ ಒದಗಿಸಿಕೊಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ.
ಅಂತರಜಾಲ ಸಂಪರ್ಕ ನಮ್ಮ ಮನೆಯವರೆಗೆ ಹಲವು ವಿಧಗಳಲ್ಲಿ ತಲುಪಬಹುದು. ಅದು ನಮ್ಮ ಸಾಧನಗಳಿಗೆ ಅರ್ಥವಾಗುವ ರೂಪಕ್ಕೆ ಬದಲಾಗುವುದು ಮೋಡೆಮ್ ಮೂಲಕ. ಈ ಸಂಕೇತಗಳನ್ನು ವೈ-ಫೈ ರೂಪಕ್ಕೆ ತರುವುದು ರೌಟರ್ ಎನ್ನುವ ಸಾಧನದ ಕೆಲಸ (ಬಹಳಷ್ಟು ಸನ್ನಿವೇಶಗಳಲ್ಲಿ ಮೋಡೆಮ್, ರೌಟರ್ ಎರಡೂ ಸಾಧನಗಳ ಕೆಲಸವನ್ನು ಒಂದೇ ಯಂತ್ರ ಮಾಡುತ್ತದೆ). ಈ ಸಾಧನದಿಂದ ಹೊರಹೊಮ್ಮುವ ಸಂಕೇತಗಳನ್ನು ಬಳಸಲು ಶಕ್ತವಾದ ಯಾವುದೇ ಸಾಧನ ಅಂತರಜಾಲ ಸಂಪರ್ಕವನ್ನು ಪಡೆದುಕೊಳ್ಳಬಹುದು. ಕಂಪ್ಯೂಟರ್ – ಟ್ಯಾಬ್ಲೆಟ್ – ಮೊಬೈಲ್ ಮಾತ್ರವೇ ಅಲ್ಲ, ಸ್ಮಾರ್ಟ್ ಟೀವಿ – ಸ್ಮಾರ್ಟ್ ವಾಚ್ – ಸ್ಟ್ರೀಮಿಂಗ್ ಡಿವೈಸ್‌ಗಳಂತಹ ಇನ್ನೂ ಅನೇಕ ಸಾಧನಗಳೂ ವೈ-ಫೈ ಬಳಸುತ್ತವೆ.
ಅಂದಹಾಗೆ ‘ವೈ-ಫೈ’ ಹೆಸರಿನ ಹಿನ್ನೆಲೆ ಕುರಿತು ಕೊಂಚ ಗೊಂದಲವಿದೆ. ‘ಹೈ-ಫೈ’ ಎಲ್ಲರಿಗೂ ಪರಿಚಯವಿತ್ತಲ್ಲ, ಅದನ್ನೇ ಅನುಸರಿಸಿ ವೈ-ಫೈ ಎನ್ನುವ ಹೆಸರು ರೂಪಿಸಲಾಯಿತು ಎನ್ನುವುದನ್ನು ಅನೇಕರು ಒಪ್ಪುತ್ತಾರೆ. ಈ ತಂತ್ರಜ್ಞಾನ ಪರಿಚಯವಾದ ಹೊಸತರಲ್ಲಿ ಪ್ರಕಟವಾದ ಜಾಹೀರಾತುಗಳಲ್ಲಿ ‘ವೈರ್‌ಲೆಸ್ ಫಿಡೆಲಿಟಿ’ ಎನ್ನುವ ಹೆಸರಿನ ಪ್ರಸ್ತಾಪವೂ ಇತ್ತು; ‘ವೈ-ಫೈ’ ಎನ್ನುವುದು ಅದೇ ಹೆಸರಿನ ಹ್ರಸ್ವರೂಪ ಎನ್ನುವುದು ಇನ್ನು ಕೆಲವರ ಅನಿಸಿಕೆ.
ವೈರು – ಕೇಬಲ್ಲುಗಳನ್ನು ಜೋಡಿಸುವ ಗೊಡವೆಯಿಲ್ಲದೆ ಸರಾಗವಾಗಿ ಅಂತರಜಾಲ ಸಂಪರ್ಕ ನೀಡಿಬಿಡುವ ವೈ-ಫೈ ತಂತ್ರಜ್ಞಾನದ ಪರಿಚಯ ನಮಗೆ ಚೆನ್ನಾಗಿಯೇ ಇದೆ. ರೇಡಿಯೋ ಅಲೆಗಳ ಮೂಲಕ ತನ್ನ ಸಂಪರ್ಕದಲ್ಲಿರುವ ಸಾಧನಗಳಿಗೆ ಅಂತರಜಾಲ ಸಂಪರ್ಕ ಒದಗಿಸಿಕೊಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ.
ಅಂತರಜಾಲ ಸಂಪರ್ಕ ನಮ್ಮ ಮನೆಯವರೆಗೆ ಹಲವು ವಿಧಗಳಲ್ಲಿ ತಲುಪಬಹುದು. ಅದು ನಮ್ಮ ಸಾಧನಗಳಿಗೆ ಅರ್ಥವಾಗುವ ರೂಪಕ್ಕೆ ಬದಲಾಗುವುದು ಮೋಡೆಮ್ ಮೂಲಕ. ಈ ಸಂಕೇತಗಳನ್ನು ವೈ-ಫೈ ರೂಪಕ್ಕೆ ತರುವುದು ರೌಟರ್ ಎನ್ನುವ ಸಾಧನದ ಕೆಲಸ (ಬಹಳಷ್ಟು ಸನ್ನಿವೇಶಗಳಲ್ಲಿ ಮೋಡೆಮ್, ರೌಟರ್ ಎರಡೂ ಸಾಧನಗಳ ಕೆಲಸವನ್ನು ಒಂದೇ ಯಂತ್ರ ಮಾಡುತ್ತದೆ). ಈ ಸಾಧನದಿಂದ ಹೊರಹೊಮ್ಮುವ ಸಂಕೇತಗಳನ್ನು ಬಳಸಲು ಶಕ್ತವಾದ ಯಾವುದೇ ಸಾಧನ ಅಂತರಜಾಲ ಸಂಪರ್ಕವನ್ನು ಪಡೆದುಕೊಳ್ಳಬಹುದು. ಕಂಪ್ಯೂಟರ್ – ಟ್ಯಾಬ್ಲೆಟ್ – ಮೊಬೈಲ್ ಮಾತ್ರವೇ ಅಲ್ಲ, ಸ್ಮಾರ್ಟ್ ಟೀವಿ – ಸ್ಮಾರ್ಟ್ ವಾಚ್ – ಸ್ಟ್ರೀಮಿಂಗ್ ಡಿವೈಸ್‌ಗಳಂತಹ ಇನ್ನೂ ಅನೇಕ ಸಾಧನಗಳೂ ವೈ-ಫೈ ಬಳಸುತ್ತವೆ.
ಅಂದಹಾಗೆ ‘ವೈ-ಫೈ’ ಹೆಸರಿನ ಹಿನ್ನೆಲೆ ಕುರಿತು ಕೊಂಚ ಗೊಂದಲವಿದೆ. ‘ಹೈ-ಫೈ’ ಎಲ್ಲರಿಗೂ ಪರಿಚಯವಿತ್ತಲ್ಲ, ಅದನ್ನೇ ಅನುಸರಿಸಿ ವೈ-ಫೈ ಎನ್ನುವ ಹೆಸರು ರೂಪಿಸಲಾಯಿತು ಎನ್ನುವುದನ್ನು ಅನೇಕರು ಒಪ್ಪುತ್ತಾರೆ. ಈ ತಂತ್ರಜ್ಞಾನ ಪರಿಚಯವಾದ ಹೊಸತರಲ್ಲಿ ಪ್ರಕಟವಾದ ಜಾಹೀರಾತುಗಳಲ್ಲಿ ‘ವೈರ್‌ಲೆಸ್ ಫಿಡೆಲಿಟಿ’ ಎನ್ನುವ ಹೆಸರಿನ ಪ್ರಸ್ತಾಪವೂ ಇತ್ತು; ‘ವೈ-ಫೈ’ ಎನ್ನುವುದು ಅದೇ ಹೆಸರಿನ ಹ್ರಸ್ವರೂಪ ಎನ್ನುವುದು ಇನ್ನು ಕೆಲವರ ಅನಿಸಿಕೆ.

Viral Marketing

ವೈರಲ್ ಮಾರ್ಕೆಟಿಂಗ್
Kannada Equivalent: (ರೂಪಿಸಬೇಕಿದೆ)
Short Description : ಅಂತರಜಾಲದ ಬಳಕೆದಾರರ ನಡುವೆ ತಮ್ಮ ಮಾಹಿತಿಯನ್ನು ಹರಡುವ ಮೂಲಕ – ಜಾಹೀರಾತಿನ ದುಬಾರಿ ವೆಚ್ಚವಿಲ್ಲದೆಯೇ – ಅಪಾರ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ
Long Description: ವೈರಸ್ಸುಗಳಿವೆಯಲ್ಲ, ಜೀವಜಗತ್ತಿನವು, ಒಂದೆಡೆಯಿಂದ ಇನ್ನೊಂದೆಡೆಗೆ ಕ್ಷಿಪ್ರವಾಗಿ ಸಾಗುವಲ್ಲಿ ಅವನ್ನು ಬಿಟ್ಟರಿಲ್ಲ. ಸೊಳ್ಳೆಗಳ ಮೂಲಕವೋ ನೀರು-ಗಾಳಿಯ ಮೂಲಕವೋ ಅವು ಹರಡುತ್ತಲೇ ಹೋಗುತ್ತವೆ, ಅದೆಷ್ಟೋ ಜನರಿಗೆ ರೋಗಗಳನ್ನು ಅಂಟಿಸುತ್ತವೆ.
ಡಿಜಿಟಲ್ ಜಗತ್ತಿನ ವೈರಸ್ಸುಗಳೂ ಜೀವಜಗತ್ತಿನ ವೈರಸ್ಸುಗಳಂತೆಯೇ. ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುತ್ತ ಸಿಕ್ಕ ಕಂಪ್ಯೂಟರು – ಸ್ಮಾರ್ಟ್‌ಫೋನುಗಳಿಗೆಲ್ಲ ತೊಂದರೆಕೊಡುವುದೇ ಅವುಗಳ ಕೆಲಸ.
ಈ ವೈರಸ್ಸುಗಳು ಹರಡುವ ರೀತಿಯಿದೆಯಲ್ಲ, ಅದನ್ನೇ ಅನುಕರಿಸುವ ಇನ್ನೊಂದು ವಿದ್ಯಮಾನವೂ ಈಚೆಗೆ ಹೆಸರುಮಾಡುತ್ತಿದೆ. ಅಂತರಜಾಲದ ಮಾಧ್ಯಮ ಬಳಸಿ – ಜಾಹೀರಾತಿನ ದುಬಾರಿ ವೆಚ್ಚವಿಲ್ಲದೆಯೇ – ಅಪಾರ ಪ್ರಚಾರ ಗಿಟ್ಟಿಸಿಕೊಳ್ಳುವ ಸಂಗತಿಗಳು ಬಳಸುವ ತಂತ್ರದ ಹೆಸರೂ ‘ವೈರಲ್’ ಎಂದೇ.
ಜನರ ಮನಸ್ಸನ್ನು ತಟ್ಟುವ ಭಾವನಾತ್ಮಕ ವಿಷಯಗಳಿಂದ ಪ್ರಾರಂಭಿಸಿ ವಿವಿಧ ಉತ್ಪನ್ನಗಳ ಜಾಹೀರಾತಿನವರೆಗೆ ಅನೇಕ ಸಂಗತಿಗಳು ಅಂತರಜಾಲದಲ್ಲಿ ಒಬ್ಬರಿಂದೊಬ್ಬರಿಗೆ ಹರಡುತ್ತ ವೈರಲ್ ಆಗಬಲ್ಲವು. ಜೋಕುಗಳು, ಸುಳ್ಳು ಸುದ್ದಿಗಳು, ಅವಹೇಳನಕಾರಿ ಸಂದೇಶಗಳು, ಕಡೆಗೆ ಸಮಾಜವಿರೋಧಿ ವಿಷಯಗಳೂ ವೈರಲ್ ಆಗುವುದುಂಟು.
ಫೇಸ್‌ಬುಕ್-ಟ್ವಿಟ್ಟರಿನಂತಹ ಸಮಾಜಜಾಲಗಳ ಅಗಾಧ ವ್ಯಾಪ್ತಿಯಿಂದಾಗಿ ಬಹುತೇಕ ಯಾವುದೇ ಖರ್ಚಿಲ್ಲದೆ ಭಾರೀ ಪ್ರಚಾರ ಪಡೆದುಕೊಳ್ಳುವುದು ಈ ಸಂಗತಿಗಳಿಗೆ ಸಾಧ್ಯವಾಗುತ್ತದೆ. ಲೈಕು-ಶೇರುಗಳ ಮೂಲಕ, ಸಂದೇಶಗಳಲ್ಲಿ ನಿರ್ದಿಷ್ಟ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವ ಮೂಲಕ ಈ ವೈರಲ್ ವಿದ್ಯಮಾನ ನಡೆಯುತ್ತದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಈ ವಿದ್ಯಮಾನದ ಬಳಕೆ ಅದೆಷ್ಟು ಹೆಚ್ಚಿದೆಯೆಂದರೆ ಅಲ್ಲೀಗ ‘ವೈರಲ್ ಮಾರ್ಕೆಟಿಂಗ್’ ಎಂಬ ಹೊಸದೊಂದು ಪರಿಕಲ್ಪನೆಯೇ ರೂಪುಗೊಂಡಿದೆ.

Wireless Charging

ವೈರ್‌ಲೆಸ್ ಚಾರ್ಜಿಂಗ್
Kannada Equivalent: (ರೂಪಿಸಬೇಕಿದೆ)
Short Description : ಇಂಡಕ್ಷನ್ (ಪ್ರೇರಣೆ) ಎಂಬ ವಿದ್ಯಮಾನ ಬಳಸಿ ವಿದ್ಯುನ್ಮಾನ ಸಾಧನಗಳನ್ನು ಚಾರ್ಜ್ ಮಾಡುವ ನಿಸ್ತಂತು ವ್ಯವಸ್ಥೆ
Long Description: ನಮ್ಮ ಮೊಬೈಲ್ ಯಾವಾಗಲೂ ಸಕ್ರಿಯವಾಗಿರಬೇಕಾದರೆ ಅದರಲ್ಲಿ ಸಾಕಷ್ಟು ಚಾರ್ಜ್ ಇರುವಂತೆ ನೋಡಿಕೊಳ್ಳುವುದು ಅನಿವಾರ್ಯ. ಮೊಬೈಲನ್ನು ಚಾರ್ಜ್ ಮಾಡುವ ಮಾರ್ಗಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕೂಡ ಒಂದು.
ನಾವೆಲ್ಲ ಸಾಮಾನ್ಯವಾಗಿ ಮಾಡುವಂತೆ ಕೇಬಲ್‌ನ ಒಂದು ತುದಿಯನ್ನು ಚಾರ್ಜರಿಗೂ ಇನ್ನೊಂದನ್ನು ಮೊಬೈಲಿಗೂ ಚುಚ್ಚಿಡುವ ಬದಲು ಇಲ್ಲಿ ಪುಟ್ಟದೊಂದು ಫಲಕದ (ಚಾರ್ಜಿಂಗ್ ಪ್ಯಾಡ್) ಮೇಲೆ ಮೊಬೈಲನ್ನು ಇಟ್ಟರೆ ಸಾಕು, ಅದು ಚಾರ್ಜ್ ಆಗಲು ಶುರುವಾಗುತ್ತದೆ!
ಅಡುಗೆಮನೆಯ ಆಧುನಿಕ ಒಲೆಯಂತೆ ಇಲ್ಲೂ ಬಳಕೆಯಾಗುವುದು ಇಂಡಕ್ಷನ್ (ಪ್ರೇರಣೆ) ಎಂಬ ವಿದ್ಯಮಾನ. ಇಂಡಕ್ಷನ್ ಒಲೆಯಲ್ಲಿ ಈ ವಿದ್ಯಮಾನ ಆಹಾರ ಪದಾರ್ಥಗಳನ್ನು ಬಿಸಿಮಾಡಿದರೆ ಮೊಬೈಲ್ ಚಾರ್ಜರಿನಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ.
ಆದರೆ ನೆನಪಿಡಿ, ಎಲ್ಲ ಗ್ಯಾಜೆಟ್‌ಗಳನ್ನೂ ಈ ವಿಧಾನದ ಮೂಲಕ ಚಾರ್ಜ್ ಮಾಡುವಂತಿಲ್ಲ್ಲ; ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುವ ಮಾದರಿಗಳು ಮಾತ್ರವೇ ಹೀಗೆ ಚಾರ್ಜ್ ಆಗಬಲ್ಲವು. ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಬಳಸಿ ಇತರ ಸಾಧನಗಳನ್ನೂ ಚಾರ್ಜ್ ಮಾಡಲು ಕೆಲ ಹೆಚ್ಚುವರಿ ಸಲಕರಣೆಗಳು ಮಾರುಕಟ್ಟೆಯಲ್ಲಿ ಸಿಗುತ್ತವಾದರೂ ಅದನ್ನು ನಮ್ಮ ಜವಾಬ್ದಾರಿ ಹಾಗೂ ಎಚ್ಚರಿಕೆಯಲ್ಲೇ ಬಳಸಬೇಕು.

Wildcard

ವೈಲ್ಡ್‌ಕಾರ್ಡ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರಿಗೆ ನೀಡುವ ಆದೇಶದಲ್ಲಿ ಒಂದು ಅಥವಾ ಹೆಚ್ಚಿನ ಸಂಖ್ಯೆಯ ಅಕ್ಷರ – ಅಂಕಿ – ಲೇಖನಚಿಹ್ನೆಗಳನ್ನು ಪ್ರತಿನಿಧಿಸುವ ಚಿಹ್ನೆ
Long Description: ಅರ್ಹತಾ ಸುತ್ತುಗಳಲ್ಲಿ ಭಾಗವಹಿಸದೆ ಸ್ಪರ್ಧೆಯ ಮುಂದಿನ ಹಂತಕ್ಕೆ ನೇರ ಪ್ರವೇಶ ಪಡೆಯುವವರಿಗೆ ‘ವೈಲ್ಡ್ ಕಾರ್ಡ್’ ಸ್ಪರ್ಧಿಗಳೆಂಬ ಹೆಸರಿರುವುದನ್ನು ನಾವು ಕೇಳಿರುತ್ತೇವೆ. ಕಂಪ್ಯೂಟರ್ ಜಗತ್ತಿನಲ್ಲಿ ಕೆಲ ಚಿಹ್ನೆಗಳನ್ನೂ ಈ ಹೆಸರಿನಿಂದ ಗುರುತಿಸಲಾಗುತ್ತದೆ.
‘ವೈಲ್ಡ್‌ಕಾರ್ಡ್ ಕ್ಯಾರೆಕ್ಟರ್’ ಎಂದು ಕರೆಸಿಕೊಳ್ಳುವ ಈ ಚಿಹ್ನೆಗಳು ಕಂಪ್ಯೂಟರಿಗೆ ನೀಡುವ ಆದೇಶದಲ್ಲಿ ಒಂದು ಅಥವಾ ಹೆಚ್ಚಿನ ಸಂಖ್ಯೆಯ ಅಕ್ಷರ – ಅಂಕಿ – ಲೇಖನಚಿಹ್ನೆಗಳನ್ನು ಪ್ರತಿನಿಧಿಸಬಲ್ಲವು.
ನಿಮಗೆ ‘notes’ ಎಂಬ ಪದದಿಂದ ಪ್ರಾರಂಭವಾಗುವ ಹೆಸರುಳ್ಳ ಎಲ್ಲ ಕಡತಗಳನ್ನೂ ನೋಡಬೇಕಿದೆ ಎಂದುಕೊಳ್ಳೋಣ. ಸರ್ಚ್ ಪರದೆಯಲ್ಲಿ ‘notes*’ ಎಂದು ಟೈಪ್ ಮಾಡಿದರೆ ನಿಮ್ಮ ಕಂಪ್ಯೂಟರ್ ಅಂತಹ ಎಲ್ಲ ಕಡತಗಳನ್ನೂ (notes1.txt, notes-kannada.doc – ಹೀಗೆ) ಪಟ್ಟಿಮಾಡಿ ತೋರಿಸುತ್ತದೆ.
ಇಲ್ಲಿ ‘*’ ಎನ್ನುವುದು ಒಂದಕ್ಕಿಂತ ಹೆಚ್ಚಿನ ಸಂಭಾವ್ಯ ಅಕ್ಷರಗಳನ್ನು ಸೂಚಿಸುವ ವೈಲ್ಡ್‌ಕಾರ್ಡ್ ಕ್ಯಾರೆಕ್ಟರ್. ಇದನ್ನು ಗೂಗಲ್ ಸರ್ಚ್‌ನಲ್ಲೂ ಬಳಸುವುದು ಸಾಧ್ಯ – ಕಪ್ಪೆ ಅರಭಟ್ಟನ ಶಾಸನದ ಪಠ್ಯವನ್ನು ‘* ಕಲಿಗೆ * ವಿಪರೀತನ್’ ಎಂದು ಬಿಟ್ಟಪದ ತುಂಬಿಸುವ ರೀತಿಯಲ್ಲಿ ಗೂಗಲಿಸಿದರೆ ವೈಲ್ಡ್‌ಕಾರ್ಡ್ ಕ್ಯಾರೆಕ್ಟರುಗಳ ಸ್ಥಳಕ್ಕೆ ಬರಬೇಕಾದ ಸರಿಯಾದ ಪದಗಳನ್ನು (‘ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್’) ಹುಡುಕಿಕೊಳ್ಳಬಹುದು.
ಇದೇರೀತಿ ವಿವಿಧ ತಂತ್ರಾಂಶಗಳಲ್ಲಿ ‘?’, ‘%’ ಮುಂತಾದ ಚಿಹ್ನೆಗಳೂ ವೈಲ್ಡ್‌ಕಾರ್ಡ್ ಕ್ಯಾರೆಕ್ಟರ್‌ಗಳಾಗಿ ಬಳಕೆಯಾಗುತ್ತವೆ. ಈ ಪೈಕಿ ‘?’ ಅನ್ನು ಒಂದು ಅಕ್ಷರದ ಬದಲಿಗೆ ಹಾಗೂ ‘%’ ಅನ್ನು ಹೆಚ್ಚಿನ ಸಂಖ್ಯೆಯ ಅಕ್ಷರಗಳ ಬದಲಿಗೆ (‘*’ನಂತೆ) ಬಳಸುವುದು ಸಂಪ್ರದಾಯ.

Wallet

ವ್ಯಾಲೆಟ್
Kannada Equivalent: (ರೂಪಿಸಬೇಕಿದೆ)
Short Description : ಗ್ರಾಹಕರಿಂದ ಮುಂಚಿತವಾಗಿ ಹಣ ಪಡೆದು ಅದನ್ನು ನಿರ್ದಿಷ್ಟ ಸೇವೆಗಳಿಗೆ ಪ್ರತಿಯಾಗಿ ಬಳಸಲು ಅನುವುಮಾಡಿಕೊಡುವ ಆನ್‌ಲೈನ್ ವ್ಯವಸ್ಥೆ
Long Description: ಗ್ರಾಹಕರಿಂದ ಮುಂಚಿತವಾಗಿಯೇ ಹಣ ಪಡೆದು ಅದು ಮುಗಿಯುವವರೆಗೂ ನಿರ್ದಿಷ್ಟ ಸೇವೆಗಳನ್ನು ಒದಗಿಸುವ ವ್ಯವಸ್ಥೆಯೇ ವ್ಯಾಲೆಟ್. ಜೇಬಿನಲ್ಲೋ ಬ್ಯಾಗಿನಲ್ಲೋ ಇಟ್ಟುಕೊಳ್ಳುವ ಪರ್ಸನ್ನು ವ್ಯಾಲೆಟ್ ಎಂದು ಕರೆಯುತ್ತೇವಲ್ಲ, ಇದೂ ಅಂತಹುದೇ ಪರ್ಸು; ಕಣ್ಣಿಗೆ ಕಾಣುವುದಿಲ್ಲ ಅಷ್ಟೆ! ಜಾಲತಾಣಗಳು ಹಾಗೂ ಮೊಬೈಲ್ ಆಪ್‌ಗಳ ಮೂಲಕ ಇವನ್ನು ಬಳಸಬಹುದು.
ವ್ಯಾಲೆಟ್‌ಗಳಲ್ಲಿ ಹಲವು ವಿಧ. ನೀವು ಕೊಟ್ಟ ಹಣವನ್ನು ಒಂದೇ ಕಡೆ ಬಳಸಬೇಕು ಎನ್ನುವುದಾದರೆ ಅದನ್ನು ‘ಕ್ಲೋಸ್ಡ್ (ಮುಚ್ಚಿದ) ವ್ಯಾಲೆಟ್’ ಎಂದು ಕರೆಯುತ್ತಾರೆ.
ಒಮ್ಮೆ ದುಡ್ಡು ಸೇರಿಸಿದರೆ ಅದನ್ನು ಹಲವೆಡೆ ಬಳಸುವುದು ಸಾಧ್ಯ ಎನ್ನುವುದಾದರೆ ಅದು ‘ಸೆಮಿ-ಕ್ಲೋಸ್ಡ್ (ಅರೆಮುಚ್ಚಿದ) ವ್ಯಾಲೆಟ್’. ಇಂತಹ ವ್ಯಾಲೆಟ್‌ಗೆ ಸೇರಿಸಿದ ಹಣವನ್ನು ಒಂದಕ್ಕಿಂತ ಹೆಚ್ಚು ಸೇವೆಗಳಿಗೆ ಪಾವತಿಸಲು ಬಳಸಬಹುದು; ಆದರೆ ವಾಪಸ್ ಪಡೆಯುವಂತಿಲ್ಲ ಅಷ್ಟೇ.
ವ್ಯಾಲೆಟ್‌ಗೆ ಸೇರಿಸಿದ ದುಡ್ಡನ್ನು ವಿವಿಧ ಸೇವೆಗಳಿಗೆ ಪಾವತಿಸಲು ಬಳಸುವ ಜೊತೆಗೆ ಅಗತ್ಯಬಿದ್ದಾಗ ಮರಳಿ ಪಡೆಯುವ ಆಯ್ಕೆಯೂ ಇದ್ದರೆ ಅಂತಹ ವ್ಯಾಲೆಟ್‌ಗಳನ್ನು ‘ಓಪನ್ (ತೆರೆದ) ವ್ಯಾಲೆಟ್’ ಎಂದು ಕರೆಯುತ್ತಾರೆ.

Vlog

ವ್ಲಾಗ್
Kannada Equivalent: (ರೂಪಿಸಬೇಕಿದೆ)
Short Description : ವೀಡಿಯೋ ಬ್ಲಾಗ್ ಎನ್ನುವುದರ ಹ್ರಸ್ವರೂಪ; ವೀಡಿಯೋ ಮಾಹಿತಿಯಿರುವ ಬ್ಲಾಗ್
Long Description: ವಿಶ್ವವ್ಯಾಪಿ ಜಾಲವನ್ನು ಬಳಸಿಕೊಂಡು ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಇರುವ ಪ್ರಭಾವಶಾಲಿ ಮಾಧ್ಯಮವೇ ಬ್ಲಾಗ್. ನಮ್ಮ ಬರಹ – ಅನಿಸಿಕೆ – ಅಭಿಪ್ರಾಯಗಳನ್ನು ಸುಲಭವಾಗಿ ಹಂಚಿಕೊಳ್ಳಲು, ಓದುಗರೊಡನೆ ವಿಚಾರವಿನಿಮಯ ನಡೆಸಲು ಇದು ಒಳ್ಳೆಯ ವೇದಿಕೆ ಒದಗಿಸುತ್ತದೆ.
ಬರಹಗಳನ್ನು ಹಂಚಿಕೊಳ್ಳಬಹುದು ಎಂದಮಾತ್ರಕ್ಕೆ ಬ್ಲಾಗಿನಲ್ಲಿ ಪಠ್ಯರೂಪದ ಮಾಹಿತಿಯನ್ನಷ್ಟೇ ಪ್ರಕಟಿಸಬೇಕು ಎಂದೇನೂ ಇಲ್ಲ. ಬ್ಲಾಗ್ ಮೂಲಕ ಚಿತ್ರಗಳು, ವೀಡಿಯೋ ಮುಂತಾದ ಬಹುಮಾಧ್ಯಮ (ಮಲ್ಟಿಮೀಡಿಯಾ) ಮಾಹಿತಿಯನ್ನೂ ಸುಲಭವಾಗಿ ಹಂಚಿಕೊಳ್ಳಬಹುದು.
ಈ ಪೈಕಿ ವೀಡಿಯೋ ಮಾಹಿತಿಯಿರುವ ಬ್ಲಾಗುಗಳನ್ನು ವೀಡಿಯೋ ಬ್ಲಾಗ್ ಎಂದು ಕರೆಯುತ್ತಾರೆ. ‘ವ್ಲಾಗ್’ ಎನ್ನುವುದು ಇದೇ ಹೆಸರಿನ ಹ್ರಸ್ವರೂಪ. ಬ್ಲಾಗ್ ಪೋಸ್ಟುಗಳಲ್ಲಿ ಪಠ್ಯ-ಚಿತ್ರಗಳೆರಡೂ ಇರುವಂತೆ ವ್ಲಾಗ್ ಪೋಸ್ಟುಗಳಲ್ಲಿ ವೀಡಿಯೋ, ಪಠ್ಯ, ಚಿತ್ರ – ಎಲ್ಲವೂ ಇರುವುದು ಸಾಧ್ಯ.
ಶಿಕ್ಷಣ, ಪ್ರವಾಸ, ಅಡುಗೆ ಮುಂತಾದ ಅನೇಕ ವಿಷಯಗಳನ್ನು ಕುರಿತ ವ್ಲಾಗುಗಳನ್ನು ನಾವು ವಿಶ್ವವ್ಯಾಪಿ ಜಾಲದಲ್ಲಿ ನೋಡಬಹುದು. ಬ್ಲಾಗ್ ಬರೆಯುವವರನ್ನು ಬ್ಲಾಗರುಗಳೆಂದು ಹೆಸರಿರುವಂತೆ ವೀಡಿಯೋ ಬ್ಲಾಗ್ ನಡೆಸುವವರನ್ನು ವ್ಲಾಗರ್‌ಗಳೆಂದು ಕರೆಯುತ್ತಾರೆ. ವೀಡಿಯೋಗಳನ್ನು ಮೊದಲು ಯೂಟ್ಯೂಬ್‌ಗೆ ಸೇರಿಸಿ ಅದನ್ನು ವ್ಲಾಗಿನಲ್ಲಿ ಅಳವಡಿಸಿಕೊಳ್ಳುವುದು ಸಾಮಾನ್ಯ ಅಭ್ಯಾಸ. ಜನಪ್ರಿಯ ವ್ಲಾಗರುಗಳು ತಮ್ಮ ವ್ಲಾಗಿನಲ್ಲಿ ನಿಯತವಾಗಿ ಹೊಸ ಪೋಸ್ಟುಗಳನ್ನು ಸೇರಿಸುತ್ತಿರುತ್ತಾರೆ.

Short URL

ಶಾರ್ಟ್ ಯುಆರ್‌ಎಲ್
Kannada Equivalent: (ರೂಪಿಸಬೇಕಿದೆ)
Short Description : ಉದ್ದನೆಯ ಯುಆರ್‌ಎಲ್‌ಗಳನ್ನು ಕಿರಿದಾಗಿಸಿ ರೂಪಿಸಿಕೊಂಡ ಪುಟ್ಟ ವಿಳಾಸ
Long Description: ಬೇರೆಬೇರೆ ಜಾಲತಾಣಗಳಿಗೆ ಭೇಟಿಕೊಡಲು ನಾವು ಬ್ರೌಸರ್ ತಂತ್ರಾಂಶಗಳನ್ನು ಬಳಸುತ್ತೇವಲ್ಲ, ಅದರ ಮೇಲ್ತುದಿಯಲ್ಲಿರುವ ವಿಳಾಸಪಟ್ಟಿಯಲ್ಲಿ (ಅಡ್ರೆಸ್ ಬಾರ್) ನಾವು ಭೇಟಿಕೊಟ್ಟಿರುವ ತಾಣ ಅಥವಾ ಪುಟದ ಪೂರ್ಣ ವಿಳಾಸವನ್ನು ನೋಡಬಹುದು.
ಈ ವಿಳಾಸಕ್ಕೆ ‘ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್’ ಅಥವಾ ‘ಯುಆರ್‌ಎಲ್’ ಎಂದು ಹೆಸರು. ನೀವು ಇಜ್ಞಾನ ಜಾಲತಾಣಕ್ಕೆ ಭೇಟಿಕೊಟ್ಟಿದ್ದೀರಿ ಎಂದುಕೊಂಡರೆ ನಿಮಗೆ ಮೊದಲು ಕಾಣಿಸುವ ಪುಟದ ಯುಆರ್‌ಎಲ್ ‘http://www.ejnana.com/’ ಎಂದಿರುತ್ತದೆ. ಒಳಗಿನ ಪುಟಗಳಿಗೆ ಹೋದಂತೆ ಈ ಯುಆರ್‌ಎಲ್‌ನ ಉದ್ದ ಜಾಸ್ತಿಯಾಗುತ್ತ ಹೋಗುತ್ತದೆ (ಉದಾ: http://www.ejnana.com/p/blog-page_13.html). ಆನ್‌ಲೈನ್ ಶಾಪಿಂಗ್ ತಾಣಗಳಲ್ಲಂತೂ ನಾವು ಇನ್ನೂ ಉದ್ದನೆಯ ಯುಆರ್‌ಎಲ್‌ಗಳನ್ನು ನೋಡಬಹುದು.
ಇಷ್ಟೆಲ್ಲ ಉದ್ದದ ವಿಳಾಸಗಳನ್ನು ನೆನಪಿಟ್ಟುಕೊಳ್ಳುವುದು, ಹಂಚಿಕೊಳ್ಳುವುದು ಕಷ್ಟ. ಈ ಸಮಸ್ಯೆಯನ್ನು ತಪ್ಪಿಸಲು ಸೃಷ್ಟಿಯಾಗಿರುವುದೇ ‘ಶಾರ್ಟ್ ಯುಆರ್‌ಎಲ್’ ಪರಿಕಲ್ಪನೆ. ತೀರಾ ಉದ್ದನೆಯ ಯುಆರ್‌ಎಲ್‌ಗಳನ್ನು ಕಿರಿದಾಗಿಸಿ ಪುಟ್ಟ ವಿಳಾಸಗಳನ್ನು ಸೃಷ್ಟಿಸುವುದು ಈ ಪರಿಕಲ್ಪನೆಯ ಉದ್ದೇಶ. ಇಂತಹ ಸೇವೆ ಒದಗಿಸುವ ಯಾವುದೇ ತಾಣಕ್ಕೆ (ಉದಾ: bit.ly, goo.gl, tinyurl.com) ಹೋದರೆ ಉದ್ದನೆಯ ವಿಳಾಸಗಳನ್ನು ಶಾರ್ಟ್ ಯುಆರ್‌ಎಲ್ ಆಗಿ ಪರಿವರ್ತಿಸಿಕೊಳ್ಳುವುದು ಸಾಧ್ಯ. ಎರಡೂ ವಿಳಾಸಗಳನ್ನು ನೆನಪಿಟ್ಟುಕೊಳ್ಳುವ ಇಂತಹ ತಾಣಗಳು ಅವೆರಡನ್ನೂ ಹೊಂದಿಸಿ ಬಳಕೆದಾರರು ಪುಟ್ಟ ವಿಳಾಸ ದಾಖಲಿಸಿದಾಗೆಲ್ಲ ಅವರನ್ನು ಮೂಲ ವಿಳಾಸಕ್ಕೇ ಕರೆದೊಯ್ಯುತ್ತವೆ.

Submarine Communications Cable

ಸಬ್‌ಮರೀನ್ ಕಮ್ಯೂನಿಕೇಶನ್ಸ್ ಕೇಬಲ್
Kannada Equivalent: (ರೂಪಿಸಬೇಕಿದೆ)
Short Description : ವಿವಿಧ ರಾಷ್ಟ್ರಗಳ – ಖಂಡಗಳ ನಡುವೆ ಮಾಹಿತಿ ಸಂವಹನ ಸಾಧ್ಯವಾಗಿಸುವ ಸಮುದ್ರದಾಳದ ಕೇಬಲ್
Long Description: ನಾವು ಮೊಬೈಲಿನಲ್ಲಿ ಮಾತನಾಡುತ್ತೇವೆ, ಅಂತರಜಾಲ ಸಂಪರ್ಕ ಬಳಸುತ್ತೇವೆ. ಇದೆಲ್ಲ ಹೇಗೆ ಸಾಧ್ಯವಾಗುತ್ತದೆ ಎಂದು ಕೇಳಿದರೆ ಕಿಟಕಿಯಿಂದಾಚೆ ಕಾಣುವ ಮೊಬೈಲ್ ಟವರ್ ಅನ್ನು ತೋರಿಸುತ್ತೇವೆ. ಆದರೆ ಅಲ್ಲಿಂದ ಮುಂದಿನ ಸಂಪರ್ಕ ಸಾಧ್ಯವಾಗುವುದು, ನಮ್ಮ ಕರೆ ಬೇರೆಲ್ಲೋ ಇರುವ ಇನ್ನೊಬ್ಬರನ್ನು ತಲುಪುವುದು ಹೇಗೆ?
ಉತ್ತರ ಗೊತ್ತಿಲ್ಲದಿದ್ದರೆ ಆಕಾಶ ನೋಡಬೇಕಿಲ್ಲ, ಕಾಲ ಕೆಳಗಿನ ನೆಲವನ್ನಷ್ಟೇ ನೋಡಿದರೆ ಸಾಕು. ಏಕೆಂದರೆ ಮೊಬೈಲ್ ಟವರ್‌ಗಳ ನಂತರದ ಹಂತದ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುವುದು ನೆಲದಡಿಯ ಕೇಬಲ್ಲುಗಳು. ಇಲ್ಲಿ ಬಳಕೆಯಾಗುವುದೇ ಆಪ್ಟಿಕಲ್ ಫೈಬರ್ ಕೇಬಲ್ ಅಥವಾ ಓಎಫ್‌ಸಿ.
ನೆಲದ ಮೇಲೇನೋ ಸರಿ, ಬಡಾವಣೆಯಿಂದ ಬಡಾವಣೆಗೆ – ಊರಿಂದ ಊರಿಗೆ ಈ ಕೇಬಲ್ಲುಗಳು ಸಂಪರ್ಕ ಕಲ್ಪಿಸುತ್ತವೆ. ಆದರೆ ಸಂವಹನದ ಸಮುದ್ರೋಲ್ಲಂಘನ? ಅಲ್ಲೂ ಇಂತಹ ಕೇಬಲ್ಲುಗಳೇ ಬಳಕೆಯಾಗುತ್ತವೆ!
ವಿವಿಧ ರಾಷ್ಟ್ರಗಳ – ಖಂಡಗಳ ನಡುವೆ ಸಂವಹನ ಸಾಧ್ಯವಾಗಿಸುವ ಇಂತಹ ಕೇಬಲ್ಲುಗಳನ್ನು ಸಬ್‌ಮರೀನ್ ಕಮ್ಯೂನಿಕೇಶನ್ಸ್ ಕೇಬಲ್ಲುಗಳೆಂದು ಕರೆಯುತ್ತಾರೆ. ನಾವು-ನೀವು ರಸ್ತೆಬದಿಯಲ್ಲಿ ಕಾಣುವ ಕೇಬಲ್ಲುಗಳಿಗಿಂತ ಹೆಚ್ಚು ಸದೃಢ ರಚನೆಯ ಈ ಕೇಬಲ್ಲುಗಳನ್ನು ಸಮುದ್ರದಾಳದಲ್ಲಿ ಹುದುಗಿಸಿಡಲು ವಿಶೇಷ ಹಡಗುಗಳು ಬಳಕೆಯಾಗುತ್ತವೆ. ಇಂತಹ ಕೇಬಲ್ಲುಗಳನ್ನು ಅಳವಡಿಸಿ ನಿರ್ವಹಿಸುವುದೇ ಹಲವು ದೊಡ್ಡ ಸಂಸ್ಥೆಗಳ ಕೆಲಸ.

Soft Copy – Hard Copy

ಸಾಫ್ಟ್‌ ಕಾಪಿ – ಹಾರ್ಡ್ ಕಾಪಿ
Kannada Equivalent: (ರೂಪಿಸಬೇಕಿದೆ)
Short Description : ಡಿಜಿಟಲ್ ರೂಪದಲ್ಲಿರುವ ಕಡತ ಹಾಗೂ ಅವುಗಳ ಮುದ್ರಿತ ರೂಪವನ್ನು ಪ್ರತಿನಿಧಿಸುವ ಹೆಸರುಗಳು
Long Description: ಕೆಲವು ದಶಕಗಳ ಹಿಂದೆ ಕಡತ ಎಂದರೆ ಅದು ಕಾಗದದ ಮೇಲೆಯೇ ಇರಬೇಕಿದ್ದು ಅನಿವಾರ್ಯವಾಗಿತ್ತು. ಮಾಹಿತಿ ತಂತ್ರಜ್ಞಾನ ಬೆಳೆದಂತೆ ಈ ಪರಿಸ್ಥಿತಿ ಬದಲಾಗಿದ್ದು ನಮಗೆಲ್ಲ ಗೊತ್ತೇ ಇದೆ. ಕಂಪ್ಯೂಟರ್ ಬಳಸಿ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಉಳಿಸಿಡಲು ಸಾಧ್ಯವಾದಮೇಲೆ ಅಲ್ಲೂ ಕಡತಗಳನ್ನು ರೂಪಿಸುವುದು ಸಾಧ್ಯವಾಯಿತು. ‘ಸಾಫ್ಟ್ ಕಾಪಿ’ ಎಂದು ಗುರುತಿಸಲಾಗುವುದು ಕಡತಗಳ ಈ ಡಿಜಿಟಲ್ ರೂಪವನ್ನೇ. ಇದೇರೀತಿ ಭೌತಿಕ ರೂಪದಲ್ಲಿರುವ ಕಡತವನ್ನು ‘ಹಾರ್ಡ್ ಕಾಪಿ’ ಎಂದು ಕರೆಯುತ್ತಾರೆ.
ಸಾಫ್ಟ್‌ಕಾಪಿ – ಹಾರ್ಡ್‌ಕಾಪಿಗಳ ನಡುವೆ ಇನ್ನೂ ಅನೇಕ ವ್ಯತ್ಯಾಸಗಳಿವೆ. ಸಾಫ್ಟ್‌ಕಾಪಿಗಳು ಕಾಗದ ಬಳಸುವುದಿಲ್ಲವಾದ್ದರಿಂದ ಆ ಮಟ್ಟಿಗೆ ಅವು ಪರಿಸರಸ್ನೇಹಿ; ಅವುಗಳನ್ನು ರೂಪಿಸಲು ಖರ್ಚೂ ಕಡಿಮೆ. ಪುಸ್ತಕದ ವಿಷಯಕ್ಕೆ ಬಂದರಂತೂ ಸಾಫ್ಟ್ ಕಾಪಿಯ ಪ್ರಕಟಣೆ (ಇ-ಪುಸ್ತಕ) ಹಾರ್ಡ್ ಕಾಪಿ ಪ್ರಕಟಣೆಯ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ಖರ್ಚಿನ ವ್ಯವಹಾರ. ಸಾಫ್ಟ್ ಕಾಪಿಯನ್ನು ಬದಲಿಸುವುದು – ಹಂಚುವುದು ಸುಲಭವಾದ್ದರಿಂದ ಅದರ ನಿರ್ವಹಣೆಯೂ ಬಹಳ ಸುಲಭ.
ಕಾಗದರೂಪದಲ್ಲಿರುವ ಪ್ರಮುಖ ದಾಖಲೆಗಳನ್ನು ವಾತಾವರಣದ ಪ್ರಭಾವದಿಂದ ಸುರಕ್ಷಿತವಾಗಿಡಲು ನಾವು ಎಚ್ಚರವಹಿಸುತ್ತೇವಲ್ಲ, ಅದೇ ರೀತಿ ಡಿಜಿಟಲ್ ರೂಪದಲ್ಲಿರುವ ಕಡತಗಳನ್ನು ಕಾಯ್ದಿಡಲಿಕ್ಕೂ ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹಾರ್ಡ್ ಡಿಸ್ಕ್‌ನಂತಹ ಸಾಧನಗಳ ಯಾಂತ್ರಿಕ ವೈಫಲ್ಯದಿಂದ, ಕುತಂತ್ರಾಂಶಗಳ ಕಾಟದಿಂದ ಅವು ಹಾಳಾಗದಂತೆ ನೋಡಿಕೊಳ್ಳಲು ಕಡತಗಳನ್ನು ಬ್ಯಾಕಪ್ ಮಾಡಿಡುವುದು ಇಂತಹ ಕ್ರಮಗಳಲ್ಲೊಂದು.
ಬಹಳಷ್ಟು ಸಾರಿ ಸಾಫ್ಟ್ ಕಾಪಿಗಳನ್ನು ತೆರೆಯಲು ನಿರ್ದಿಷ್ಟ ತಂತ್ರಾಂಶ ಹಾಗೂ ಫಾಂಟುಗಳೇ ಬೇಕಿರುತ್ತವೆ. ಅಂತಹ ಕಡತಗಳನ್ನು (ಉದಾ: ಪ್ರಕಾಶಕ್ ಫಾಂಟುಗಳನ್ನು ಬಳಸಿ ರೂಪಿಸಿದ ಪೇಜ್‌ಮೇಕರ್ ಕಡತ) ಉಳಿಸಿಡುವಾಗ ಸಾಧ್ಯವಾದರೆ ಅಗತ್ಯ ತಂತ್ರಾಂಶ ಹಾಗೂ ಫಾಂಟುಗಳನ್ನೂ ಉಳಿಸಿಟ್ಟುಕೊಳ್ಳಬಹುದು. ಇದು ಸಾಧ್ಯವಾಗದ ಪಕ್ಷದಲ್ಲಿ ಅಂತಹ ಕಡತಗಳನ್ನು ಪಿಡಿಎಫ್ ರೂಪಕ್ಕಾದರೂ ಬದಲಿಸಿಟ್ಟುಕೊಳ್ಳುವುದು ಒಳ್ಳೆಯದು.

Software

ಸಾಫ್ಟ್‌ವೇರ್
Kannada Equivalent: ತಂತ್ರಾಂಶ
Short Description : ಕಂಪ್ಯೂಟರ್ ತನ್ನ ಕೆಲಸಗಳನ್ನು ಮಾಡಲು ನೀಡುವ ನಿರ್ದೇಶನಗಳ ಸಂಗ್ರಹ
Long Description: ಕಂಪ್ಯೂಟರ್‌ಗೆ ತನ್ನದೇ ಆದ ಸ್ವಂತ ಬುದ್ಧಿ ಇರುವುದಿಲ್ಲ. ಅದು ಯಾವ ಕೆಲಸ ಮಾಡಬೇಕಾದರೂ ಕೆಲಸದ ಎಲ್ಲ ಹೆಜ್ಜೆಗಳ ವಿವರವನ್ನೂ ಅದಕ್ಕೆ ಹೇಳಿಕೊಡಬೇಕು.
ಹೀಗೆ ಕಂಪ್ಯೂಟರಿಗೆ ಪಾಠಹೇಳುವುದು ಸಾಫ್ಟ್‌ವೇರ್ ಅಥವಾ ತಂತ್ರಾಂಶದ ಕೆಲಸ. ನಾವು ಕೊಟ್ಟ ವಿವರಗಳನ್ನು (ಇನ್‌ಪುಟ್) ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು, ಯಾವ ರೀತಿಯ ಉತ್ತರ (ಔಟ್‌ಪುಟ್) ಕೊಡಬೇಕು ಎನ್ನುವುದನ್ನೆಲ್ಲ ಅದು ಕಂಪ್ಯೂಟರ್‌ಗೆ ವಿವರಿಸುತ್ತದೆ.
ವಿವಿಧ ಉದ್ದೇಶ ಹಾಗೂ ಉಪಯೋಗಗಳಿಗಾಗಿ ಅನೇಕ ಬಗೆಯ ತಂತ್ರಾಂಶಗಳು ಬಳಕೆಯಾಗುತ್ತವೆ. ಕಂಪ್ಯೂಟರ್ ತನ್ನ ಕೆಲಸ ಪ್ರಾರಂಭಿಸಲು ನೆರವಾಗುವ ಬಯಾಸ್‌ನಿಂದ ಪ್ರಾರಂಭಿಸಿ ಅದರ ಕೆಲಸಕಾರ್ಯಗಳನ್ನೆಲ್ಲ ನಿಯಂತ್ರಿಸುವ ಆಪರೇಟಿಂಗ್ ಸಿಸ್ಟಂವರೆಗೆ ಎಲ್ಲವೂ ತಂತ್ರಾಂಶಗಳೇ. ಕಂಪ್ಯೂಟರ್ ಬಳಸಿ ಕಡತಗಳನ್ನು ರೂಪಿಸಲು, ಚಿತ್ರಬರೆಯಲು, ಆಟವಾಡಲು, ಹಾಡು ಕೇಳಲು, ಸಿನಿಮಾ ನೋಡಲು ನಾವು ವಿವಿಧ ತಂತ್ರಾಂಶಗಳನ್ನು ಬಳಸುತ್ತೇವೆ.
ಕಂಪ್ಯೂಟರ್ ಅಷ್ಟೇ ಅಲ್ಲ, ಮೊಬೈಲ್ ಫೋನ್, ಟ್ಯಾಬ್ಲೆಟ್, ಸೆಟ್‌ಟಾಪ್ ಬಾಕ್ಸ್ ಮುಂತಾದ ಹಲವಾರು ವಿದ್ಯುನ್ಮಾನ ಸಾಧನಗಳಲ್ಲೂ ತಂತ್ರಾಂಶಗಳು ಬಳಕೆಯಾಗುತ್ತವೆ: ನಮಗೆಲ್ಲ ಚಿರಪರಿಚಿತವಾದ ಮೊಬೈಲ್ ಆಪ್‌ಗಳೂ ತಂತ್ರಾಂಶಗಳೇ. ಆಧುನಿಕ ಕಾರುಗಳಲ್ಲಿ, ಟೀವಿ – ಫ್ರಿಜ್ – ವಾಶಿಂಗ್ ಮಶೀನುಗಳ ಕಾರ್ಯಾಚರಣೆಯಲ್ಲೂ ತಂತ್ರಾಂಶಗಳ ಕೈವಾಡ ಇರುತ್ತದೆ.

Software Engineering

ಸಾಫ್ಟ್‌ವೇರ್ ಇಂಜಿನಿಯರಿಂಗ್
Kannada Equivalent: (ರೂಪಿಸಬೇಕಿದೆ)
Short Description : ನಮ್ಮ ಅಗತ್ಯಗಳಿಗೆ ತಕ್ಕಂತೆ ಪರಿಣಾಮಕಾರಿಯಾಗಿ ಕೆಲಸಮಾಡುವ ತಂತ್ರಾಂಶವನ್ನು ನಿಗದಿತ ಅವಧಿ ಹಾಗೂ ವೆಚ್ಚದ ಮಿತಿಯೊಳಗೆ ರೂಪಿಸಲು ನೆರವಾಗುವ ಪ್ರಕ್ರಿಯೆ
Long Description: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳನ್ನೆಲ್ಲ ಸಾಫ್ಟ್‌ವೇರ್ ಇಂಜಿನಿಯರುಗಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಸಾಫ್ಟ್‌ವೇರ್ ಇಂಜಿನಿಯರುಗಳ ಕೆಲಸ ಪ್ರೋಗ್ರಾಮುಗಳನ್ನು – ತಂತ್ರಾಂಶಗಳನ್ನು ರಚಿಸುವುದು ಎನ್ನುವುದೂ ಸಾಮಾನ್ಯವಾಗಿರುವ ಇನ್ನೊಂದು ಅಭಿಪ್ರಾಯ.
ಆದರೆ ಸಾಫ್ಟ್‌ವೇರ್ ಇಂಜಿನಿಯರಿಂಗ್ ಕ್ಷೇತ್ರದ ವ್ಯಾಪ್ತಿ ಇಷ್ಟು ಸೀಮಿತವೇನಲ್ಲ. ಇದು ತಂತ್ರಾಂಶ ಅಭಿವೃದ್ಧಿಯನ್ನು ಪ್ರೋಗ್ರಾಮಿಂಗ್‌ಗಷ್ಟೇ ಸೀಮಿತವಾಗಿ ನೋಡದೆ ಅದನ್ನೊಂದು ಕ್ರಮಬದ್ಧ ಪ್ರಕ್ರಿಯೆಯಾಗಿ ರೂಪಿಸಲು ನೆರವಾಗುತ್ತದೆ.
ನಮ್ಮ ಅಗತ್ಯಗಳಿಗೆ ತಕ್ಕಂತೆ ಪರಿಣಾಮಕಾರಿಯಾಗಿ ಕೆಲಸಮಾಡುವ ತಂತ್ರಾಂಶವನ್ನು ನಿಗದಿತ ಅವಧಿ ಹಾಗೂ ವೆಚ್ಚದ ಮಿತಿಯೊಳಗೆ ರೂಪಿಸುವುದು ಸಾಫ್ಟ್‌ವೇರ್ ಇಂಜಿನಿಯರಿಂಗ್‌ನ ಮೂಲ ಉದ್ದೇಶ.
ತಂತ್ರಾಂಶದ ಉದ್ದೇಶವನ್ನು ನಿಖರವಾಗಿ ಗುರುತಿಸಿ ವಿಶ್ಲೇಷಿಸುವ ಮೂಲಕ ಈ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ತಂತ್ರಾಂಶದ ಉದ್ದೇಶ ಸ್ಪಷ್ಟವಾದ ನಂತರ ಅದಕ್ಕೆ ಅಗತ್ಯವಾದ ವಿನ್ಯಾಸವನ್ನು (ಡಿಸೈನ್) ಸಿದ್ಧಪಡಿಸಲಾಗುತ್ತದೆ. ತಂತ್ರಾಂಶ ಅಭಿವರ್ಧನೆಯ (ಡೆವೆಲಪ್‌ಮೆಂಟ್) ಕೆಲಸ ಪ್ರಾರಂಭವಾಗುವುದು ಇವೆಲ್ಲ ಮುಗಿದ ನಂತರವೇ.
ತಂತ್ರಾಂಶ ರಚನೆ ಮುಗಿದ ತಕ್ಷಣ ಅದನ್ನು ಗ್ರಾಹಕರಿಗೆ ಕೊಟ್ಟುಬಿಡುವಂತಿಲ್ಲ. ಅದನ್ನು ವಿವರವಾಗಿ ಪರೀಕ್ಷಿಸಿ, ಇರಬಹುದಾದ ಕುಂದುಕೊರತೆಗಳನ್ನು ಸೂಕ್ತ ಸಮಯದಲ್ಲಿ ಪತ್ತೆಹಚ್ಚಿ ಸರಿಪಡಿಸುವುದು ಕೂಡ ಮುಖ್ಯ ಎಂದು ಸಾಫ್ಟ್‌ವೇರ್ ಇಂಜಿನಿಯರಿಂಗ್ ಪರಿಕಲ್ಪನೆ ಹೇಳುತ್ತದೆ. ಈ ಎಲ್ಲ ಹಂತಗಳ ವಿವರಗಳನ್ನೂ ಕಡತಗಳಲ್ಲಿ ದಾಖಲಿಸಿ ಭವಿಷ್ಯದ ಬಳಕೆಗಾಗಿ ಉಳಿಸಿಡುವುದು ಕೂಡ ಸಾಫ್ಟ್‌ವೇರ್ ಇಂಜಿನಿಯರಿಂಗ್‌ನ ಭಾಗವೇ.

Software Project Management

ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್
Kannada Equivalent: (ರೂಪಿಸಬೇಕಿದೆ)
Short Description : ತಂತ್ರಾಂಶ ಅಭಿವೃದ್ಧಿಯ ಕೆಲಸ ಒಂದು ನಿರ್ದಿಷ್ಟ ಯೋಜನೆಗೆ ಅನುಗುಣವಾಗಿ ನಡೆಯುವಂತೆ ನೋಡಿಕೊಳ್ಳುವ ಪ್ರಕ್ರಿಯೆ
Long Description: ತಂತ್ರಾಂಶಗಳನ್ನು ರೂಪಿಸುವಾಗ ಕೆಲಸದ ಅಗಾಧತೆ, ಸಂಕೀರ್ಣ ವಿನ್ಯಾಸ ಇವೆಲ್ಲ ಸೇರಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಬಹಳ ಕ್ಲಿಷ್ಟವಾಗಿಬಿಡುತ್ತದೆ. ನಿಗದಿತ ಅವಧಿಯೊಳಗೆ ನಿರ್ದಿಷ್ಟ ವೆಚ್ಚದಲ್ಲಿ ಬಳಕೆದಾರರ ಅಗತ್ಯಗಳಿಗೆ ಸರಿಹೊಂದುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕಾದ ಸವಾಲನ್ನು ಎದುರಿಸುವ ಈ ಕೆಲಸ ಸುಲಭವೇನಲ್ಲ.
ಇಂತಹ ಸನ್ನಿವೇಶಗಳಲ್ಲಿ ತಂತ್ರಾಂಶ ಅಭಿವೃದ್ಧಿಯ ಕೆಲಸ ಒಂದು ನಿರ್ದಿಷ್ಟ ಯೋಜನೆಗೆ ಅನುಗುಣವಾಗಿ ನಡೆದರೆ ಮಾತ್ರ ಅದು ಯಶಸ್ವಿಯಾಗುವುದು ಸಾಧ್ಯ. ಹಾಗೊಂದು ಯೋಜನೆಯನ್ನು ರೂಪಿಸಿ ಅದರಂತೆ ತಂತ್ರಾಂಶ ಅಭಿವೃದ್ಧಿಯ ಕೆಲಸ ಕೈಗೊಳ್ಳಲು ನೆರವಾಗುವುದು ‘ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್’ ಎಂಬ ಪರಿಕಲ್ಪನೆ.
ನಿರ್ದಿಷ್ಟ ಅವಧಿಯಲ್ಲಿ ನಡೆಯುವ ತಂತ್ರಾಂಶವೊಂದರ ರಚನೆ, ಬದಲಾವಣೆ ಅಥವಾ ಉನ್ನತೀಕರಣದ ಕೆಲಸವನ್ನು ಪ್ರಾಜೆಕ್ಟ್ ಎಂದು ಕರೆಯಬಹುದು. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸಮಾಡುವವರು ಪ್ರಾಜೆಕ್ಟುಗಳ ಬಗ್ಗೆ ಮಾತನಾಡುತ್ತಾರಲ್ಲ, ಅವೂ ಇಂತಹವೇ.
ಯಾವುದೇ ಪ್ರಾಜೆಕ್ಟಿಗೆ ಸಾಕಷ್ಟು ನಿರ್ಬಂಧಗಳಿರುತ್ತವೆ: ಸಮಯ, ವೆಚ್ಚ, ವ್ಯಾಪ್ತಿ – ಹೀಗೆ. ಈ ಎಲ್ಲ ನಿರ್ಬಂಧಗಳನ್ನೂ ಅರಿತುಕೊಂಡು ನಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸಿದಾಗಲಷ್ಟೆ ಪ್ರಾಜೆಕ್ಟ್ ಯಶಸ್ವಿಯಾಗುವುದು ಸಾಧ್ಯ. ಇದು ಸಾಧ್ಯವಾಗುವ ನಿಟ್ಟಿನಲ್ಲಿ ನೆರವು ನೀಡುವುದು ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನ ಉದ್ದೇಶ. ತಂತ್ರಾಂಶ ತಯಾರಿಯ ಪ್ರಕ್ರಿಯೆಯುದ್ದಕ್ಕೂ ಗ್ರಾಹಕರೊಡನೆ ನಡೆಯುವ ಸಂವಹನ, ತಯಾರಾಗುವ ತಂತ್ರಾಂಶದ ಗುಣಮಟ್ಟ ಮುಂತಾದ ಅಂಶಗಳಿಗೂ ಇಲ್ಲಿ ಪ್ರಾಮುಖ್ಯವಿರುತ್ತದೆ.

Software Maintenance

ಸಾಫ್ಟ್‌ವೇರ್ ಮೇಂಟೆನೆನ್ಸ್
Kannada Equivalent: ತಂತ್ರಾಂಶ ನಿರ್ವಹಣೆ
Short Description : ಈಗಾಗಲೇ ಇರುವ ತಂತ್ರಾಂಶವನ್ನು ನಿರ್ವಹಿಸುವ, ಅಗತ್ಯಗಳಿಗೆ ತಕ್ಕಂತೆ ಬದಲಾಯಿಸಿಕೊಳ್ಳುವ ಕೆಲಸ
Long Description: ಕಂಪ್ಯೂಟರಿನ ನಿರ್ವಹಣೆಯೆಂದ ತಕ್ಷಣ ಹೆಚ್ಚಾಗಿ ನಮ್ಮ ಮನಸ್ಸಿಗೆ ಬರುವುದು ಯಂತ್ರಾಂಶದ (ಹಾರ್ಡ್‌ವೇರ್) ನಿರ್ವಹಣೆಯ ವಿಷಯವೇ. ಮೌಸ್ ಕೆಲಸಮಾಡುತ್ತಿಲ್ಲವೆಂದೋ ಮೋಡೆಮ್ ಕೆಟ್ಟಿದೆಯೆಂದೋ ಇನ್ನಾವುದೋ ಭಾಗ ಹಳೆಯದಾಗಿದೆಯೆಂದೋ ಸಾಕಷ್ಟು ಖರ್ಚುಮಾಡಿರುವ ವಿಷಯ ನಮ್ಮೆಲ್ಲರ ನೆನಪಿನಲ್ಲೂ ಇರುತ್ತದೆ.
ಆದರೆ ನಿರ್ವಹಣೆ ಬೇಕಿರುವುದು ಕೇವಲ ಯಂತ್ರಾಂಶಕ್ಕೆ ಮಾತ್ರವಲ್ಲ, ನಾವು ಬರೆಯುವ ತಂತ್ರಾಂಶವನ್ನು (ಸಾಫ್ಟ್‌ವೇರ್) ನಿರ್ವಹಿಸುವುದೂ ಸಾಕಷ್ಟು ದೊಡ್ಡ ಕೆಲಸವೇ.
ತಂತ್ರಾಂಶದ ರಚನೆಯ ಸಂದರ್ಭದಲ್ಲಿದ್ದ ಅಗತ್ಯಗಳು ನಂತರದ ದಿನಗಳಲ್ಲಿ ಬದಲಾದರೆ ತಂತ್ರಾಂಶದಲ್ಲಿ ಬದಲಾವಣೆಗಳು ಬೇಕಾಗುತ್ತವೆ. ತಂತ್ರಾಂಶ ತನ್ನ ಮೂಲ ಉದ್ದೇಶವನ್ನು ಬಹಳ ಚೆನ್ನಾಗಿ ಪೂರೈಸಿದಾಗಲೂ ಅಷ್ಟೆ: ಬಳಕೆದಾರರು ಅದಕ್ಕೆ ಹೆಚ್ಚುವರಿ ಸೌಲಭ್ಯಗಳನ್ನು ಸೇರಿಸುವಂತೆ ಕೇಳಿದಾಗಲೂ ತಂತ್ರಾಂಶದಲ್ಲಿ ಬದಲಾವಣೆ ಅಗತ್ಯವಾಗುತ್ತದೆ. ತಂತ್ರಾಂಶದ ಬಳಕೆಯಾಗುತ್ತಿರುವ ಕಂಪ್ಯೂಟರುಗಳಲ್ಲಿ ಯಂತ್ರಾಂಶದ, ಅಥವಾ ಆಪರೇಟಿಂಗ್ ಸಿಸ್ಟಂನಂತಹ ತಂತ್ರಾಂಶಗಳ ಬದಲಾವಣೆಯಾದಾಗಲೂ ತಂತ್ರಾಂಶದಲ್ಲಿ ಬದಲಾವಣೆಗಳು ಅಗತ್ಯವಾಗಬಹುದು. ತಂತ್ರಾಂಶ ರಚಿಸುವವರ, ಬಳಸುವವರಷ್ಟೇ ಅಲ್ಲದೆ ಈ ಚಟುವಟಿಕೆಗೆ ಸರಕಾರ ಅಥವಾ ಮಾರುಕಟ್ಟೆಯ ಕಡೆಯಿಂದ ಕಾಣಿಸಿಕೊಳ್ಳುವ ಬದಲಾವಣೆಗಳೂ ಕಾರಣವಾಗಬಹುದು (ಉದಾ: ತೆರಿಗೆ ಸ್ವರೂಪದ ಬದಲಾವಣೆ, ವೆಬ್‌ಸೈಟುಗಳು ಮೊಬೈಲಿನಲ್ಲೂ ಸರಿಯಾಗಿ ಕೆಲಸಮಾಡಬೇಕಾದ ಅನಿವಾರ್ಯತೆ ಇತ್ಯಾದಿ).
ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಪತ್ತೆಯಾದ ತೊಂದರೆಗಳನ್ನು ಸರಿಪಡಿಸುವುದು, ಬದಲಾದ ಪರಿಸ್ಥಿತಿಯಲ್ಲಿ ತಂತ್ರಾಂಶದ ಕಾರ್ಯಾಚರಣೆ ನಿರಾತಂಕವಾಗಿರುವಂತೆ ನೋಡಿಕೊಳ್ಳುವುದು, ತಂತ್ರಾಂಶದ ಕಾರ್ಯಕ್ಷಮತೆಯನ್ನು ಉತ್ತಮಪಡಿಸುವುದು – ಹೀಗೆ ತಂತ್ರಾಂಶ ನಿರ್ವಹಣೆಯ ಚಟುವಟಿಕೆಗಳಲ್ಲಿ ಅನೇಕ ವಿಧಗಳಿರುತ್ತವೆ. ತಂತ್ರಾಂಶದಲ್ಲಿ ಯಾವುದೇ ತೊಂದರೆ ಕಾಣಿಸಿಕೊಳ್ಳುವ ಮೊದಲೇ ಅವುಗಳ ಸಾಧ್ಯತೆಯನ್ನು ಅಂದಾಜಿಸಿ ಸರಿಪಡಿಸುವುದೂ ಈ ಚಟುವಟಿಕೆಗಳ ಭಾಗವಾಗಿರುವುದು ಸಾಧ್ಯ.

Syntax

ಸಿಂಟ್ಯಾಕ್ಸ್
Kannada Equivalent: (ರೂಪಿಸಬೇಕಿದೆ)
Short Description : ಯಾವುದೇ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ಪ್ರೋಗ್ರಾಮುಗಳನ್ನು ಬರೆಯುವಾಗ ಅಲ್ಲಿನ ಪದವಿನ್ಯಾಸ ಹಾಗೂ ವಾಕ್ಯರಚನೆಯನ್ನು ನಿರ್ದೇಶಿಸುವ ನಿಯಮಗಳು
Long Description: ಉಪಯೋಗಿಸುವ ಭಾಷೆ ಯಾವುದೇ ಆದರೂ ಅದರ ಬರವಣಿಗೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾದ್ದು ಅನಿವಾರ್ಯ. ಈ ನಿಯಮ ಭೌತಿಕ ಜಗತ್ತಿನ ಭಾಷೆಗಳಿಗಷ್ಟೇ ಅಲ್ಲ, ಕಂಪ್ಯೂಟರ್ ಪ್ರಪಂಚದ ಭಾಷೆಗಳಿಗೂ ಅನ್ವಯಿಸುತ್ತದೆ.
ಯಾವುದೇ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ಪ್ರೋಗ್ರಾಮುಗಳನ್ನು ಬರೆಯುವಾಗ ಅಲ್ಲಿನ ಪದವಿನ್ಯಾಸ ಹಾಗೂ ವಾಕ್ಯರಚನೆ ನಿರ್ದಿಷ್ಟವಾಗಿ ಹೀಗೆಯೇ ಇರಬೇಕು ಎಂದು ನಿರ್ದೇಶಿಸುವ ಹಲವು ನಿಯಮಗಳಿರುತ್ತವೆ. ಇಂತಹ ನಿಯಮಗಳನ್ನು ಒಟ್ಟಾಗಿ ಆ ಪ್ರೋಗ್ರಾಮಿಂಗ್ ಭಾಷೆಯ ‘ಸಿಂಟ್ಯಾಕ್ಸ್’ ಎಂದು ಕರೆಯುತ್ತಾರೆ. ಪ್ರೋಗ್ರಾಮಿನಲ್ಲಿ ಬಳಸಬಹುದಾದ ಪದಗಳು, ಲೇಖನಚಿಹ್ನೆಗಳು, ಅವೆಲ್ಲವುಗಳ ಅಪೇಕ್ಷಿತ ಅನುಕ್ರಮ – ಇದೆಲ್ಲ ಸೇರಿ ಸಿಂಟ್ಯಾಕ್ಸ್ ರೂಪುಗೊಂಡಿರುತ್ತದೆ.
ಬೇರೆಬೇರೆ ಪ್ರೋಗ್ರಾಮಿಂಗ್ ಭಾಷೆಗಳಿಗೆ ಈ ನಿಯಮಗಳು ಬೇರೆಬೇರೆಯಾಗಿರುವುದು ಸಾಮಾನ್ಯ. ಕೆಲವು ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದೇ ರೀತಿಯ ಅಥವಾ ಒಂದಕ್ಕೊಂದು ಬಹುಪಾಲು ಹೋಲಿಕೆಯಾಗುವ ಸಿಂಟ್ಯಾಕ್ಸ್ ಇರುವುದೂ ಉಂಟು.
ಸಿಂಟ್ಯಾಕ್ಸ್‌ನಲ್ಲಿ ಯಾವುದೇ ತಪ್ಪುಗಳಿದ್ದರೆ ನಮ್ಮ ಪ್ರೋಗ್ರಾಮು ಸರಿಯಾಗಿ ಕೆಲಸಮಾಡುವುದಿಲ್ಲ. ಒಂದು ಅಲ್ಪವಿರಾಮವೋ ಪೂರ್ಣವಿರಾಮವೋ ಬಿಟ್ಟುಹೋಗಿದ್ದರೂ ಪ್ರೋಗ್ರಾಮ್ ತನ್ನ ಕೆಲಸ ಮಾಡುವಲ್ಲಿ ವಿಫಲವಾಗುತ್ತದೆ. ಇಂತಹ ತಪ್ಪುಗಳನ್ನು ‘ಸಿಂಟ್ಯಾಕ್ಸ್ ಎರರ್’ ಎಂದು ಗುರುತಿಸಲಾಗುತ್ತದೆ. ನಮ್ಮ ಪ್ರೋಗ್ರಾಮು ಕಂಪೈಲ್ ಆಗುವ ಮೊದಲೇ ಇಂತಹ ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಸೌಲಭ್ಯ ಬಹುತೇಕ ಐಡಿಇಗಳಲ್ಲಿ ಇರುತ್ತದೆ.
ಉಪಯೋಗಿಸುವ ಭಾಷೆ ಯಾವುದೇ ಆದರೂ ಅದರ ಬರವಣಿಗೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾದ್ದು ಅನಿವಾರ್ಯ. ಈ ನಿಯಮ ಭೌತಿಕ ಜಗತ್ತಿನ ಭಾಷೆಗಳಿಗಷ್ಟೇ ಅಲ್ಲ, ಕಂಪ್ಯೂಟರ್ ಪ್ರಪಂಚದ ಭಾಷೆಗಳಿಗೂ ಅನ್ವಯಿಸುತ್ತದೆ.
ಯಾವುದೇ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿ ಪ್ರೋಗ್ರಾಮುಗಳನ್ನು ಬರೆಯುವಾಗ ಅಲ್ಲಿನ ಪದವಿನ್ಯಾಸ ಹಾಗೂ ವಾಕ್ಯರಚನೆ ನಿರ್ದಿಷ್ಟವಾಗಿ ಹೀಗೆಯೇ ಇರಬೇಕು ಎಂದು ನಿರ್ದೇಶಿಸುವ ಹಲವು ನಿಯಮಗಳಿರುತ್ತವೆ. ಇಂತಹ ನಿಯಮಗಳನ್ನು ಒಟ್ಟಾಗಿ ಆ ಪ್ರೋಗ್ರಾಮಿಂಗ್ ಭಾಷೆಯ ‘ಸಿಂಟ್ಯಾಕ್ಸ್’ ಎಂದು ಕರೆಯುತ್ತಾರೆ. ಪ್ರೋಗ್ರಾಮಿನಲ್ಲಿ ಬಳಸಬಹುದಾದ ಪದಗಳು, ಲೇಖನಚಿಹ್ನೆಗಳು, ಅವೆಲ್ಲವುಗಳ ಅಪೇಕ್ಷಿತ ಅನುಕ್ರಮ – ಇದೆಲ್ಲ ಸೇರಿ ಸಿಂಟ್ಯಾಕ್ಸ್ ರೂಪುಗೊಂಡಿರುತ್ತದೆ.
ಬೇರೆಬೇರೆ ಪ್ರೋಗ್ರಾಮಿಂಗ್ ಭಾಷೆಗಳಿಗೆ ಈ ನಿಯಮಗಳು ಬೇರೆಬೇರೆಯಾಗಿರುವುದು ಸಾಮಾನ್ಯ. ಕೆಲವು ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಒಂದೇ ರೀತಿಯ ಅಥವಾ ಒಂದಕ್ಕೊಂದು ಬಹುಪಾಲು ಹೋಲಿಕೆಯಾಗುವ ಸಿಂಟ್ಯಾಕ್ಸ್ ಇರುವುದೂ ಉಂಟು.
ಸಿಂಟ್ಯಾಕ್ಸ್‌ನಲ್ಲಿ ಯಾವುದೇ ತಪ್ಪುಗಳಿದ್ದರೆ ನಮ್ಮ ಪ್ರೋಗ್ರಾಮು ಸರಿಯಾಗಿ ಕೆಲಸಮಾಡುವುದಿಲ್ಲ. ಒಂದು ಅಲ್ಪವಿರಾಮವೋ ಪೂರ್ಣವಿರಾಮವೋ ಬಿಟ್ಟುಹೋಗಿದ್ದರೂ ಪ್ರೋಗ್ರಾಮ್ ತನ್ನ ಕೆಲಸ ಮಾಡುವಲ್ಲಿ ವಿಫಲವಾಗುತ್ತದೆ. ಇಂತಹ ತಪ್ಪುಗಳನ್ನು ‘ಸಿಂಟ್ಯಾಕ್ಸ್ ಎರರ್’ ಎಂದು ಗುರುತಿಸಲಾಗುತ್ತದೆ. ನಮ್ಮ ಪ್ರೋಗ್ರಾಮು ಕಂಪೈಲ್ ಆಗುವ ಮೊದಲೇ ಇಂತಹ ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಸೌಲಭ್ಯ ಬಹುತೇಕ ಐಡಿಇಗಳಲ್ಲಿ ಇರುತ್ತದೆ.

CMS

ಸಿಎಂಎಸ್
Kannada Equivalent: (ರೂಪಿಸಬೇಕಿದೆ)
Short Description : ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ; ಜಾಲತಾಣದ ಪುಟಗಳನ್ನು ರೂಪಿಸುವುದು, ಅವುಗಳಿಗೆ ಅಗತ್ಯ ಮಾಹಿತಿ ಸೇರಿಸುವುದು ಹಾಗೂ ವಿಶ್ವವ್ಯಾಪಿ ಜಾಲದಲ್ಲಿ ಪ್ರಕಟಿಸುವುದನ್ನು ಸಾಧ್ಯವಾಗಿಸುವ ವ್ಯವಸ್ಥೆ
Long Description: ಜಾಲತಾಣಗಳನ್ನು ನಡೆಸುವವರು ಸಾಕಷ್ಟು ಪ್ರಮಾಣದ, ಹಲವು ರೂಪಗಳಲ್ಲಿರುವ (ಪಠ್ಯ, ಚಿತ್ರ, ವೀಡಿಯೋ, ಧ್ವನಿ ಇತ್ಯಾದಿ) ಮಾಹಿತಿಯನ್ನು ನಿಭಾಯಿಸಬೇಕಾಗುತ್ತದೆ. ಆಗಿಂದಾಗ್ಗೆ ಹೊಸ ಮಾಹಿತಿ ಸೇರಿಸುವುದು, ಇರುವ ಮಾಹಿತಿಯನ್ನು ಬದಲಿಸುವುದು ಇಲ್ಲಿ ಸಾಮಾನ್ಯ.
ಈ ಕೆಲಸದಲ್ಲಿ ನೆರವಾಗುವ ವ್ಯವಸ್ಥೆಯೇ ಸಿಎಂಎಸ್. ಇದು ‘ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ’ ಎಂಬ ಹೆಸರಿನ ಹ್ರಸ್ವರೂಪ. ಜಾಲತಾಣದ ಪುಟಗಳನ್ನು ರೂಪಿಸುವುದು, ಅವುಗಳಿಗೆ ಅಗತ್ಯ ಮಾಹಿತಿ ಸೇರಿಸುವುದು ಹಾಗೂ ವಿಶ್ವವ್ಯಾಪಿ ಜಾಲದಲ್ಲಿ ಪ್ರಕಟಿಸುವುದನ್ನು ಈ ವ್ಯವಸ್ಥೆ ಸಾಧ್ಯವಾಗಿಸುತ್ತದೆ. ವರ್ಡ್‌ಪ್ರೆಸ್, ಬ್ಲಾಗರ್, ಜೂಮ್ಲಾ, ದ್ರುಪಾಲ್ – ಇವೆಲ್ಲ ಸಿಎಂಎಸ್‌ಗೆ ಉದಾಹರಣೆಗಳು.
ಸಿಎಂಎಸ್ ಅನ್ನು ನಾವೇ ಇನ್‌ಸ್ಟಾಲ್ ಮಾಡಿ ನಿಭಾಯಿಸಬಹುದು, ಇಲ್ಲವೇ ನಿರ್ದಿಷ್ಟ ಜಾಲತಾಣದ ಮೂಲಕ ಬಳಸಿಕೊಳ್ಳಬಹುದು. ಸಿಎಂಎಸ್‌ನ ಹೊಸ ಆವೃತ್ತಿಗಳು ಬಂದಂತೆಲ್ಲ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುವುದು ಇಂತಹ ಜಾಲ ಆಧರಿತ (ವೆಬ್-ಬೇಸ್ಡ್) ಸೌಲಭ್ಯಗಳ ವೈಶಿಷ್ಟ್ಯ. ಇಲ್ಲಿ ನಾವೇ ನಿಭಾಯಿಸುವ ಸಿಎಂಎಸ್‌ನಂತೆ ಅಗತ್ಯ ತಂತ್ರಾಂಶಗಳನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಬೇಕಾದ ಅನಿವಾರ್ಯತೆ ಇರುವುದಿಲ್ಲ.
ಗೂಗಲ್ ಸಂಸ್ಥೆಯ ‘ಬ್ಲಾಗರ್’ನಂತಹ ಕೆಲ ಸಿಎಂಎಸ್‌ಗಳನ್ನು ಯಾವುದೇ ಶುಲ್ಕವಿಲ್ಲದೆ ಬಳಸುವುದು ಸಾಧ್ಯ. ಹಣ ಪಾವತಿಸಿ ಬಳಸಬೇಕಾದ ಸಿಎಂಎಸ್‌ಗಳಲ್ಲಿ, ಸಹಜವಾಗಿಯೇ, ಉಚಿತ ಸಿಎಂಎಸ್‌ಗಳ ಹೋಲಿಕೆಯಲ್ಲಿ ಹೆಚ್ಚಿನ ಸೌಲಭ್ಯಗಳು ದೊರಕುತ್ತವೆ. ವರ್ಡ್‌ಪ್ರೆಸ್‌ನಂತಹ ಸಿಎಂಎಸ್‌ಗಳಲ್ಲಿ ನಮ್ಮ ತಾಣಕ್ಕೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುವ ‘ಪ್ಲಗ್-ಇನ್’ಗಳನ್ನು ಪ್ರತ್ಯೇಕವಾಗಿ ಕೊಳ್ಳುವ ಆಯ್ಕೆಯೂ ಇರುತ್ತದೆ.

Signal Strength

ಸಿಗ್ನಲ್ ಸ್ಟ್ರೆಂಥ್
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲಿಗೆ ಸಿಗುತ್ತಿರುವ ಸಂಕೇತದ ಶಕ್ತಿ
Long Description: ಮೊಬೈಲ್ ಪರದೆಯ ಬಲಭಾಗದ ಮೇಲ್ತುದಿಯಲ್ಲಿ ಕಾಣಿಸುವ ಸಣ್ಣ ಗೆರೆಗಳು ಮೊಬೈಲ್ ಸಂಕೇತದ ಶಕ್ತಿ ಎಷ್ಟಿದೆಯೆಂದು ತಿಳಿಸುತ್ತವೆ. ಅಲ್ಲಿ ಹೆಚ್ಚು ಗೆರೆಗಳಿದ್ದರೆ ನಮ್ಮ ಮೊಬೈಲಿಗೆ ಸಿಗುತ್ತಿರುವ ಸಂಕೇತದ ಶಕ್ತಿ (ಸಿಗ್ನಲ್ ಸ್ಟ್ರೆಂಥ್) ತೃಪ್ತಿಕರವಾಗಿದೆ ಎಂದು ಅರ್ಥ. ಹಾಗಿದ್ದಾಗ ಮೊಬೈಲ್ ಕರೆ ಮಾಡುವುದು, ಇಂಟರ್‌ನೆಟ್ ಬಳಸುವುದೆಲ್ಲ ಸರಾಗ. ಕಾಣಿಸುವ ಗೆರೆಗಳ ಸಂಖ್ಯೆ ಕಡಿಮೆಯಾದಷ್ಟೂ ಸಂಕೇತದ ಶಕ್ತಿ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬಹುದು.
ಮೊಬೈಲ್ ಸಂಕೇತದ ಶಕ್ತಿಯನ್ನು ಡಿಬಿಎಂ (dBm) ಎಂಬ ಏಕಮಾನದಲ್ಲಿ ಅಳೆಯಲಾಗುತ್ತದೆ. ಡಿಬಿಎಂ ಎನ್ನುವುದು ಡೆಸಿಬಲ್-ಮಿಲಿವ್ಯಾಟ್ಸ್ ಎಂಬ ಹೆಸರಿನ ಹ್ರಸ್ವರೂಪ. ಮೊಬೈಲಿನ ಸೆಟಿಂಗ್ಸ್‌ಗೆ ಹೋದರೆ ಸದ್ಯ ನಮಗೆ ದೊರಕುತ್ತಿರುವ ಸಿಗ್ನಲ್ ಸ್ಟ್ರೆಂಥ್ ಎಷ್ಟು ಎಂದು ತಿಳಿದುಕೊಳ್ಳಬಹುದು (ಆಂಡ್ರಾಯ್ಡ್‌ನಲ್ಲಿ ಅಬೌಟ್ > ಸ್ಟೇಟಸ್ > ಸಿಮ್ ಸ್ಟೇಟಸ್).
ಈ ಸಂಖ್ಯೆ ಸಾಮಾನ್ಯವಾಗಿ ಋಣಾತ್ಮಕವಾಗಿರುತ್ತದೆ (ನೆಗೆಟಿವ್). ಇದು ಸೊನ್ನೆಗೆ ಸಮೀಪವಿದ್ದಷ್ಟೂ (-೬೦, -೮೦, -೯೦ ಹೀಗೆ) ಮೊಬೈಲ್ ಸಂಕೇತ ಸಾಕಷ್ಟು ಶಕ್ತಿಶಾಲಿಯಾಗಿದೆ ಎಂದರ್ಥ. -೧೦೦ ಅಥವಾ ಅದಕ್ಕೂ ಕಡಿಮೆಯಾದಾಗ (-೧೧೦, -೧೨೦ ಹೀಗೆ) “ಮೊಬೈಲಿನಲ್ಲಿ ಸಿಗ್ನಲ್ ಇಲ್ಲ”ವೆಂದು ದೂರುವ ಪರಿಸ್ಥಿತಿ ಬರುತ್ತದೆ.

SIM

ಸಿಮ್
Kannada Equivalent: (ರೂಪಿಸಬೇಕಿದೆ)
Short Description : ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್; ಮೊಬೈಲ್ ಚಂದಾದಾರರನ್ನು ಗುರುತಿಸುವ, ಮೊಬೈಲ್ ಜಾಲದ ಸಂಪರ್ಕ ಕಲ್ಪಿಸಿಕೊಡುವ ಘಟಕ
Long Description: ‘ಸಿಮ್’ ಎಂಬ ಹೆಸರು ‘ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್’, ಅಂದರೆ ಚಂದಾದಾರರನ್ನು ಗುರುತಿಸುವ ಘಟಕ ಎನ್ನುವುದರ ಹ್ರಸ್ವರೂಪ.
ಮೊಬೈಲ್ ಜಾಲ ಹಾಗೂ ನಮ್ಮ ದೂರವಾಣಿಯ ನಡುವೆ ಸಂಪರ್ಕ ಏರ್ಪಡಿಸುವುದು ಸಿಮ್‌ನ ಕೆಲಸ. ಹೆಸರೇ ಹೇಳುವಂತೆ ಅದು ಮೊಬೈಲ್ ಚಂದಾದಾರರನ್ನು ಗುರುತಿಸಬೇಕಲ್ಲ, ಈ ಉದ್ದೇಶಕ್ಕಾಗಿ ಬಳಕೆಯಾಗುವ ಇಂಟರ್‌ನ್ಯಾಶನಲ್ ಮೊಬೈಲ್ ಸಬ್‌ಸ್ಕ್ರೈಬರ್ ಐಡೆಂಟಿಟಿ (ಐಎಂಎಸ್‌ಐ) ಸಂಖ್ಯೆ ಸಿಮ್‌ನಲ್ಲಿ ಶೇಖರವಾಗಿರುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು ಮೊಬೈಲ್ ಚಂದಾದಾರರನ್ನು ಗುರುತಿಸಿ ಅವರ ದೂರವಾಣಿಗೆ ಜಾಲದ ಸಂಪರ್ಕ ಕಲ್ಪಿಸಿಕೊಡುವ ಕೆಲಸವನ್ನು ಸಿಮ್ ಮಾಡುತ್ತದೆ.
ಇಷ್ಟೆಲ್ಲ ಕೆಲಸಮಾಡುವ ಸಿಮ್‌ಗೂ ಒಂದು ಗುರುತು ಬೇಕಲ್ಲ, ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್ (ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಪ್ರಪಂಚದಲ್ಲಿರುವ ಪ್ರತಿಯೊಂದು ಸಿಮ್‌ಗೂ ಪ್ರತ್ಯೇಕ ಐಸಿಸಿಐಡಿ ಇರಬೇಕು ಎನ್ನುವುದು ನಿಯಮ.
ಫೋನುಗಳ ಸುದ್ದಿ ಬಂದಾಗ ಐಎಂಇಐ ಎನ್ನುವ ಇನ್ನೊಂದು ಸಂಖ್ಯೆಯ ಪ್ರಸ್ತಾಪವೂ ಬರುತ್ತದಲ್ಲ, ಅದಕ್ಕೂ ಸಿಮ್‌ಗೂ ಯಾವ ಸಂಬಂಧವೂ ಇಲ್ಲ. ‘ಇಂಟರ್‌ನ್ಯಾಶನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ’ ಎಂಬ ಹೆಸರಿನ ಹ್ರಸ್ವರೂಪವಾದ ಐಎಂಇಐ, ಪ್ರಪಂಚದಲ್ಲಿರುವ ಪ್ರತಿಯೊಂದು ಮೊಬೈಲ್ ದೂರವಾಣಿಯನ್ನೂ ಪ್ರತ್ಯೇಕವಾಗಿ ಗುರುತಿಸುವ ಸಂಖ್ಯೆ.

CVV

ಸಿವಿವಿ
Kannada Equivalent: (ರೂಪಿಸಬೇಕಿದೆ)
Short Description : ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ; ಭೌತಿಕವಾಗಿ ಕಾರ್ಡ್ ಸ್ವೈಪ್ ಮಾಡದೆ ನಡೆಸುವ ಹಣಕಾಸು ವ್ಯವಹಾರಗಳನ್ನು ದೃಢೀಕರಿಸಲು ನೀಡಬೇಕಾದ ಮಾಹಿತಿಯ ಪೈಕಿ ಈ ಸಂಖ್ಯೆಯೂ ಒಂದು.
Long Description: ಆನ್‌ಲೈನ್ ಜಗತ್ತಿನಲ್ಲಿ ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡುಗಳನ್ನು ಬಳಸುವಾಗ ಒಂದಷ್ಟು ಮಾಹಿತಿಯನ್ನು ತಪ್ಪದೇ ದಾಖಲಿಸಬೇಕು: ಕಾರ್ಡ್ ಸಂಖ್ಯೆ, ಕೊನೆಗೊಳ್ಳುವ ದಿನಾಂಕ, ಕೆಲವೊಮ್ಮೆ ಕಾರ್ಡುದಾರರ ಹೆಸರು.
ಇಷ್ಟು ಮಾಹಿತಿಯ ಜೊತೆಗೆ ನಾವು ದಾಖಲಿಸಬೇಕಾದ ಇನ್ನೊಂದು ಸಂಖ್ಯೆಯ ಹೆಸರೇ ಸಿವಿವಿ, ಅರ್ಥಾತ್ ‘ಕಾರ್ಡ್ ವೆರಿಫಿಕೇಶನ್ ವ್ಯಾಲ್ಯೂ’. ಇದನ್ನು ಸಿವಿವಿ೨, ಸಿವಿಸಿ, ಸಿವಿಸಿ೨ ಎಂದೂ ಗುರುತಿಸಲಾಗುತ್ತದೆ (ಸಿವಿಸಿ ಎನ್ನುವುದು ‘ಕಾರ್ಡ್ ವೆರಿಫಿಕೇಶನ್ ಕೋಡ್’ ಎಂಬ ಹೆಸರಿನ ಹ್ರಸ್ವರೂಪ). ಮೂರಂಕಿಯ ಈ ಸಂಖ್ಯೆ ಬಹುತೇಕ ಕಾರ್ಡುಗಳ ಹಿಂಬದಿಯಲ್ಲಿ, ಹಸ್ತಾಕ್ಷರದ ಪಕ್ಕದಲ್ಲಿ ಮುದ್ರಿತವಾಗಿರುತ್ತದೆ.
ಭೌತಿಕವಾಗಿ ಕಾರ್ಡ್ ಸ್ವೈಪ್ ಮಾಡದೆ ನಡೆಸುವ (“ಕಾರ್ಡ್ ನಾಟ್ ಪ್ರೆಸೆಂಟ್”) ವ್ಯವಹಾರಗಳಲ್ಲಿ ವಂಚನೆಯನ್ನು ತಡೆಯಲು ಕೈಗೊಳ್ಳಲಾಗಿರುವ ಹಲವು ಕ್ರಮಗಳಲ್ಲಿ ಸಿವಿವಿ ಬಳಕೆಯೂ ಒಂದು. ಕ್ರೆಡಿಟ್ ಕಾರ್ಡಿನ ಮ್ಯಾಗ್ನೆಟಿಕ್ ಪಟ್ಟಿಯಲ್ಲಾಗಲಿ, ಕಾರ್ಡ್ ವಿವರಗಳನ್ನು ಉಳಿಸಿಟ್ಟುಕೊಂಡಿರುವ ಜಾಲತಾಣದಲ್ಲಾಗಲಿ ಈ ಸಂಖ್ಯೆಯನ್ನು ಶೇಖರಿಸಲಾಗಿರುವುದಿಲ್ಲ – ಹಾಗಾಗಿ ಆನ್‌ಲೈನ್ ವಹಿವಾಟು ನಡೆಸುವಾಗ ಮೇಲೆ ಹೇಳಿದ ಮಾಹಿತಿಯ ಜೊತೆಗೆ ಈ ಸಂಖ್ಯೆಯನ್ನೂ ದಾಖಲಿಸುವಂತೆ ಕೇಳಲಾಗುತ್ತದೆ.
ಭಾರತ ಸೇರಿದಂತೆ ಜಗತ್ತಿನ ಹಲವೆಡೆ ಸಿವಿವಿ ಜೊತೆಗೆ ಇನ್ನೊಂದು ಪಾಸ್‌ವರ್ಡನ್ನೂ ದಾಖಲಿಸುವಂತೆ ಕೇಳಲಾಗುತ್ತದೆ. ಆ ಪಾಸ್‌ವರ್ಡು ಸಿವಿವಿಯಂತೆ ಕಾರ್ಡಿನ ಮೇಲೆ ಮುದ್ರಿತವಾಗಿರುವುದಿಲ್ಲ; ಹಾಗಾಗಿ ಅದು ಸಿವಿವಿಗಿಂತ ಕೊಂಚ ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ.
ನೆನಪಿಡಿ, ಕಾರ್ಡ್ ವಿವರಗಳನ್ನಾಗಲಿ ಸಿವಿವಿ – ಪಾಸ್‌ವರ್ಡ್ – ಓಟಿಪಿಗಳನ್ನಾಗಲಿ ಇತರರೊಡನೆ ಹಂಚಿಕೊಳ್ಳುವುದು ಖಂಡಿತಾ ಒಳ್ಳೆಯ ಅಭ್ಯಾಸವಲ್ಲ!

Cc – bcc

ಸಿಸಿ – ಬಿಸಿಸಿ
Kannada Equivalent: (ರೂಪಿಸಬೇಕಿದೆ)
Short Description : ಕಾರ್ಬನ್ ಕಾಪಿ ಹಾಗೂ ಬ್ಲೈಂಡ್ ಕಾರ್ಬನ್ ಕಾಪಿ; ಕಳುಹಿಸುತ್ತಿರುವ ಇಮೇಲ್ ಸಂದೇಶದ ಬಗ್ಗೆ ಮುಖ್ಯ ವಿಳಾಸದಾರರ ಜೊತೆಗೆ ಇತರರಿಗೂ ಮಾಹಿತಿ ನೀಡಲು ಬಳಸಬಹುದಾದ ಆಯ್ಕೆಗಳು
Long Description: ಇಮೇಲ್ ಕಳುಹಿಸುವಾಗ ಸಂದೇಶ ತಲುಪಬೇಕಾದವರ ವಿಳಾಸ ದಾಖಲಿಸಲು ಮೂರು ಆಯ್ಕೆಗಳಿರುವುದನ್ನು ನೋಡಿರಬಹುದು: ಟು, ಸಿಸಿ ಹಾಗೂ ಬಿಸಿಸಿ. ನಮ್ಮ ಸಂದೇಶ ಯಾರಿಗೆ ತಲುಪಬೇಕೋ ಅವರ ಇಮೇಲ್ ವಿಳಾಸವನ್ನು ‘ಟು’ ವಿಭಾಗದಲ್ಲಿ ದಾಖಲಿಸುತ್ತೇವೆ.
ಕಳುಹಿಸುತ್ತಿರುವ ಸಂದೇಶದ ಬಗೆಗೆ ಬೇರೆ ಯಾರಿಗಾದರೂ ಮಾಹಿತಿ ನೀಡಬೇಕು ಎನ್ನುವುದಾದಲ್ಲಿ ಅವರ ವಿಳಾಸವನ್ನು ‘ಸಿಸಿ’ (ಕಾರ್ಬನ್ ಕಾಪಿ) ವಿಭಾಗದಲ್ಲಿ ಬರೆಯಬಹುದು. ‘ಸಿಸಿ’ ವಿಭಾಗದಲ್ಲಿ ನೀವು ಯಾರ ಇಮೇಲ್ ವಿಳಾಸವನ್ನು ದಾಖಲಿಸುತ್ತೀರೋ ಅವರಿಗೆ ಆ ಸಂದೇಶದ ಒಂದು ಪ್ರತಿ ತಲುಪುತ್ತದೆ. ಇಮೇಲ್ ಸಂದೇಶ ಯಾರಿಗೆಲ್ಲ ಹೋಗಿದೆ ಎನ್ನುವ ವಿಷಯ ‘ಟು’ ಹಾಗೂ ‘ಸಿಸಿ’ ವಿಭಾಗದಲ್ಲಿರುವ ಎಲ್ಲರಿಗೂ ತಿಳಿಯುತ್ತದೆ.
ಇಮೇಲ್ ಸಂದೇಶವನ್ನು ಯಾರಿಗೆ ಕಳುಹಿಸುತ್ತಿದ್ದೀರಿ ಎನ್ನುವುದು ಬೇರೆಯವರಿಗೆ ತಿಳಿಯದಂತೆ ಮಾಡುವುದೂ ಸಾಧ್ಯ. ಇದಕ್ಕಾಗಿ ವಿಳಾಸಗಳನ್ನು ‘ಬಿಸಿಸಿ’ (ಬ್ಲೈಂಡ್ ಕಾರ್ಬನ್ ಕಾಪಿ) ವಿಭಾಗದಲ್ಲಿ ದಾಖಲಿಸಿದರೆ ಸಾಕು, ನಿಮ್ಮ ಸಂದೇಶದ ಪ್ರತಿಗಳನ್ನು ಬೇರೆ ಯಾರಿಗೆಲ್ಲ ಕಳುಹಿಸಿದ್ದೀರಿ ಎನ್ನುವ ವಿಷಯ ಆ ಸಂದೇಶವನ್ನು ಪಡೆದುಕೊಳ್ಳುವವರಿಗೆ ತಿಳಿಯುವುದಿಲ್ಲ.
ನಿಮ್ಮ ಸಂದೇಶವನ್ನು ಒಂದೇಬಾರಿ ಬಹಳ ಜನರಿಗೆ ಕಳುಹಿಸುವಾಗ (ಆಮಂತ್ರಣ ಪತ್ರ ಇತ್ಯಾದಿ) ಬಿಸಿಸಿ ಆಯ್ಕೆ ಬಳಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಓದುಗರು ಅನಗತ್ಯವಾಗಿ ‘ರಿಪ್ಲೈ ಆಲ್’ ಬಳಸಿ ಎಲ್ಲರಿಗೂ ಉತ್ತರಿಸುವುದನ್ನು ತಪ್ಪಿಸಬಹುದು.

Supercomputer

ಸೂಪರ್‌ಕಂಪ್ಯೂಟರ್
Kannada Equivalent: (ರೂಪಿಸಬೇಕಿದೆ)
Short Description : ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯವಿರುವ, ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಬಳಕೆಯಾಗುವ ಕಂಪ್ಯೂಟರುಗಳು
Long Description: ಪ್ರಪಂಚದಲ್ಲಿ ಅನೇಕ ಬಗೆಯ ಕಂಪ್ಯೂಟರುಗಳಿರುವುದು ನಮಗೆಲ್ಲ ಗೊತ್ತು. ಅವುಗಳ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವವುಗಳನ್ನು ಸೂಪರ್‌ಕಂಪ್ಯೂಟರ್‌ಗಳೆಂದು ಕರೆಯುತ್ತಾರೆ. ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ವೈಜ್ಞಾನಿಕ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಇವು ಬಳಕೆಯಾಗುತ್ತವೆ.
ಇವುಗಳ ಸಂಸ್ಕರಣಾ ಸಾಮರ್ಥ್ಯವನ್ನು ಅಳೆಯಲು ‘ಫ್ಲೋಟಿಂಗ್ ಪಾಯಿಂಟ್ ಇನ್ಸ್‌ಟ್ರಕ್ಷನ್ಸ್ ಪರ್ ಸೆಕೆಂಡ್’ (ಫ್ಲಾಪ್ಸ್) ಎಂಬ ಏಕಮಾನವನ್ನು ಬಳಸಲಾಗುತ್ತದೆ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಎಷ್ಟು ಲೆಕ್ಕಾಚಾರಗಳನ್ನು ಮಾಡಬಲ್ಲದು ಎನ್ನುವುದನ್ನು ಈ ಮಾಪನ ಸೂಚಿಸುತ್ತದೆ. ನಮ್ಮ-ನಿಮ್ಮ ಮನೆಗಳಲ್ಲಿರುವ ಇಂದಿನ ಸಾಮಾನ್ಯ ಕಂಪ್ಯೂಟರುಗಳು ಪ್ರತಿ ಸೆಕೆಂಡಿಗೆ ಇಂತಹ ನೂರಾರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲವು.
ಯಾವುದೋ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ ನೂರು ಕೋಟಿ ಲೆಕ್ಕಾಚಾರಗಳನ್ನು ಮಾಡಬಲ್ಲದು ಎಂದರೆ ಅದರ ಸಾಮರ್ಥ್ಯ ಒಂದು ಗಿಗಾಫ್ಲಾಪ್ಸ್ ಆಗುತ್ತದೆ. ಮೇಲ್ನೋಟಕ್ಕೆ ಇದು ಬಹಳ ದೊಡ್ಡ ಸಾಮರ್ಥ್ಯವೆಂದು ತೋರಿದರೂ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯದ ಮುಂದೆ ಇದು ತೃಣಸಮಾನ. ಏಕೆಂದರೆ ಸದ್ಯದ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯ ಹತ್ತಾರು ಪೆಟಾಫ್ಲಾಪ್ಸ್‌ಗಳಲ್ಲಿರುತ್ತದೆ. ಪೆಟಾ ಎಂದರೆ ಒಂದರ ಮುಂದೆ ಹದಿನೈದು ಸೊನ್ನೆ ಜೋಡಿಸಿದಷ್ಟು ದೊಡ್ಡ ಸಂಖ್ಯೆ!

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App