भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Reuse

ರೀಯೂಸ್
Kannada Equivalent: ಮರುಬಳಕೆ
Short Description : ಒಂದು ಅಗತ್ಯಕ್ಕೆ ಪ್ರತಿಯಾಗಿ ರೂಪಿಸಿದ ತಂತ್ರಾಂಶದ ಭಾಗಗಳನ್ನು ಇತರ ಸನ್ನಿವೇಶಗಳಲ್ಲೂ ಬಳಸಿಕೊಳ್ಳುವ ಪರಿಕಲ್ಪನೆ
Long Description: ರೀಯೂಸ್, ಅಂದರೆ ಮರುಬಳಕೆಯ ಪರಿಕಲ್ಪನೆ ನಮ್ಮೆಲ್ಲರಿಗೂ ಪರಿಚಿತ. ವಸ್ತುಗಳನ್ನು ಒಂದೇ ಬಾರಿ ಬಳಸಿ ಎಸೆಯದೆ ಸಾಧ್ಯವಾದಷ್ಟು ಸಾರಿ ಮತ್ತೆ ಬಳಸುವುದು ಪರಿಸರ ಸಂರಕ್ಷಣೆಗೆ ಪೂರಕ ಎನ್ನುವುದು ಈ ಪರಿಕಲ್ಪನೆಯ ಆಶಯ.
ಈ ಪರಿಕಲ್ಪನೆ ಕಂಪ್ಯೂಟರ್ ಪ್ರಪಂಚದಲ್ಲೂ ಇದೆ. ಒಂದು ಅಗತ್ಯಕ್ಕೆ ಪ್ರತಿಯಾಗಿ ರೂಪಿಸಿದ ತಂತ್ರಾಂಶದ ಭಾಗಗಳನ್ನು ಇತರ ಸನ್ನಿವೇಶಗಳಲ್ಲೂ ಬಳಸಿಕೊಳ್ಳುವುದು ಸಾಧ್ಯವಾದರೆ ಆ ಮೂಲಕ ಸಾಕಷ್ಟು ಶ್ರಮ, ಸಮಯ ಹಾಗೂ ಹಣವನ್ನು ಉಳಿಸಬಹುದು ಎನ್ನುವುದು ಇದರ ಹಿಂದಿರುವ ಉದ್ದೇಶ. ಇಂತಹ ಭಾಗಗಳನ್ನು ಮೊದಲಬಾರಿ ವಿನ್ಯಾಸಗೊಳಿಸುವುದು ಕೊಂಚ ಹೆಚ್ಚಿನ ಕೆಲಸ ಎನ್ನಿಸಬಹುದಾದರೂ ಮುಂದೆ ಅದರ ಮರುಬಳಕೆಯಿಂದ ಲಾಭವೇ ಹೆಚ್ಚು.
ಹೀಗೆ ಮತ್ತೆ ಬಳಸಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದಲೇ ತಂತ್ರಾಂಶಗಳನ್ನು ಘಟಕಗಳಾಗಿ ರೂಪಿಸಲಾಗಿರುವುದುಂಟು. ನಿರ್ದಿಷ್ಟ ದತ್ತಾಂಶಗಳನ್ನು (ಇನ್‌ಪುಟ್) ಸ್ವೀಕರಿಸಿ ನಿರ್ದಿಷ್ಟ ಫಲಿತಾಂಶ (ಔಟ್‌ಪುಟ್) ನೀಡುವಂತೆ ಈ ಘಟಕಗಳನ್ನು ವಿನ್ಯಾಸಗೊಳಿಸಿರುವುದರಿಂದ ಅವನ್ನು ಬೇರೆಬೇರೆ ಕಡೆಗಳಲ್ಲೂ ಬಳಸುವುದು ಸಾಧ್ಯವಾಗುತ್ತದೆ.
ತಂತ್ರಾಂಶದ ಭಾಗಗಳಷ್ಟೇ ಅಲ್ಲದೆ ಅದರ ವಿನ್ಯಾಸ (ಡಿಸೈನ್) ಹಾಗೂ ಅಭಿವೃದ್ಧಿಗೆ (ಡೆವೆಲಪ್‌ಮೆಂಟ್) ಸಂಬಂಧಪಟ್ಟ ಕಡತಗಳು, ಪರೀಕ್ಷೆಯ (ಟೆಸ್ಟಿಂಗ್) ಯೋಜನೆ ಮುಂತಾದ ಅನೇಕ ಅಂಶಗಳೂ ಮರುಬಳಕೆಯ ಪರಿಧಿಯೊಳಗೆ ಬರುತ್ತವೆ. ಎಕ್ಸೆಲ್‌ನಂತಹ ತಂತ್ರಾಂಶಗಳಲ್ಲಿ ಬಳಸಲು ಫಾರ್ಮುಲಾ ಇತ್ಯಾದಿಗಳನ್ನು ಗೂಗಲ್‌ನಲ್ಲಿ ಹುಡುಕಿಕೊಳ್ಳುತ್ತೇವಲ್ಲ, ಅದು ಕೂಡ ಒಂದು ರೀತಿಯ ಮರುಬಳಕೆಯೇ!

Recycle Bin

ರೀಸೈಕಲ್ ಬಿನ್
Kannada Equivalent: (ರೂಪಿಸಬೇಕಿದೆ)
Short Description : ಬಳಕೆದಾರರು ಅಳಿಸಿದ ಕಡತಗಳನ್ನು ತಾತ್ಕಾಲಿಕವಾಗಿ ಉಳಿಸಿಟ್ಟುಕೊಳ್ಳುವ ಸ್ಥಳ
Long Description: ಕಂಪ್ಯೂಟರಿನಲ್ಲಾಗಲಿ ಸ್ಮಾರ್ಟ್‌ಫೋನಿನಲ್ಲೇ ಆಗಲಿ ಸಂಗ್ರಹವಾಗುವ ಮಾಹಿತಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಇಷ್ಟೆಲ್ಲ ಮಾಹಿತಿಯನ್ನು ತುಂಬಿಟ್ಟುಕೊಳ್ಳಲು ಮೆಮೊರಿ ಸಾಲದೆ ಹೋದಾಗ ಅಥವಾ ಈ ರಾಶಿಯಲ್ಲಿ ಬೇಕಾದುದನ್ನು ಹುಡುಕಿಕೊಳ್ಳಲು ಕಷ್ಟ ಎನಿಸಿದಾಗ ನಾವು ಅನಗತ್ಯ ಕಡತಗಳನ್ನು ಅಳಿಸಿಹಾಕಲು ಪ್ರಯತ್ನಿಸುತ್ತೇವೆ.
ಅನಗತ್ಯ ಕಡತಗಳನ್ನು ಅಳಿಸುವುದು (ಡಿಲೀಟ್) ಒಳ್ಳೆಯ ಕ್ರಮವೇ. ಆದರೆ ಕೆಲ ಸಂದರ್ಭಗಳಲ್ಲಿ ನಮ್ಮ ಆತುರದಿಂದಲೋ ಕಣ್ತಪ್ಪಿನಿಂದಲೋ ಅನಗತ್ಯ ಕಡತಗಳ ಜೊತೆಗೆ ಬೇಕಾದ ಕಡತಗಳೂ ಡಿಲೀಟ್ ಆಗಿಬಿಡುತ್ತವೆ. ತಕ್ಷಣದಲ್ಲೇ ಆಗಲಿ ಕೆಲ ದಿನಗಳ ನಂತರವೇ ಆಗಲಿ, ಆ ಕಡತ ಮತ್ತೆ ಬೇಕು ಎನ್ನುವುದು ಅರಿವಾದಾಗ ಪರದಾಟ ತಪ್ಪಿದ್ದಲ್ಲ!
ಈ ಪರದಾಟವನ್ನು ತಪ್ಪಿಸಲು ನಮ್ಮ ಸಹಾಯಕ್ಕೆ ಬರುವ ಉಪಾಯವೇ ‘ರೀಸೈಕಲ್ ಬಿನ್’. ಕಂಪ್ಯೂಟರಿನಲ್ಲಿ ಯಾವುದೋ ಕಡತವನ್ನು ಆಯ್ದು ಡಿಲೀಟ್ ಗುಂಡಿ ಒತ್ತಿದ ತಕ್ಷಣ ಆ ಕಡತವನ್ನು ಅಳಿಸಿಹಾಕುವ ಬದಲು ತಾತ್ಕಾಲಿಕವಾಗಿ ಇಲ್ಲಿಗೆ ವರ್ಗಾಯಿಸಲಾಗುತ್ತದೆ. ಈ ಕಡತ ನಿಜಕ್ಕೂ ಬೇಡವೆಂದು ತೀರ್ಮಾನಿಸಿ ಪೂರ್ಣವಾಗಿ ಅಳಿಸಿಹಾಕುವವರೆಗೂ ಅದು ರೀಸೈಕಲ್ ಬಿನ್‌ನಲ್ಲಿಯೇ ಇರುತ್ತದೆ, ಮತ್ತು ತಪ್ಪಾಗಿ ಅಳಿಸಿದ ಕಡತವಾಗಿದ್ದರೆ ಅದನ್ನು ವಾಪಸ್ ಪಡೆಯುವುದು ಸುಲಭವಾಗುತ್ತದೆ.
ರೀಸೈಕಲ್ ಬಿನ್ ಆಯ್ಕೆ ಹಲವು ಸ್ಮಾರ್ಟ್‌ಫೋನುಗಳಲ್ಲೂ ಲಭ್ಯವಿದೆ. ಡಿಲೀಟ್ ಮಾಡಿದ ಕಡತ ರೀಸೈಕಲ್ ಬಿನ್‌ಗೆ ಹೋಗಬೇಕೋ ಅಥವಾ ನೇರವಾಗಿ ಅಳಿಸಿಹೋಗಬೇಕೋ ಎನ್ನುವುದನ್ನೂ ಕೆಲ ಫೋನುಗಳಲ್ಲಿ ನಾವೇ ಸೂಚಿಸಬಹುದು. ಇದು ಕಂಪ್ಯೂಟರಿಗೂ ಅನ್ವಯಿಸುತ್ತದೆ – ವಿಂಡೋಸ್ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಡಿಲೀಟ್ ಕೀಲಿ ಒತ್ತುವ ಬದಲು ಶಿಫ್ಟ್-ಡಿಲೀಟ್ ಒತ್ತುವ ಮೂಲಕ ಬೇಡದ ಕಡತಗಳು ರೀಸೈಕಲ್ ಬಿನ್‌ನಲ್ಲೂ ಉಳಿಯದಂತೆ ಅಳಿಸಿಹಾಕಬಹುದು.

RuPay

ರುಪೇ
Kannada Equivalent: (ರೂಪಿಸಬೇಕಿದೆ)
Short Description : ಕ್ರೆಡಿಟ್ ಕಾರ್ಡ್ – ಡೆಬಿಟ್ ಕಾರ್ಡ್ ಪಾವತಿಗಳನ್ನು ನಿರ್ವಹಿಸುವ ಭಾರತೀಯ ವ್ಯವಸ್ಥೆ
Long Description: ಪ್ರಪಂಚದಲ್ಲಿ ಕ್ರೆಡಿಟ್ ಕಾರ್ಡ್ – ಡೆಬಿಟ್ ಕಾರ್ಡ್ ನೀಡುವ ಸಾವಿರಾರು ಬ್ಯಾಂಕುಗಳಿವೆ, ಲಕ್ಷಗಟ್ಟಲೆ ವ್ಯಾಪಾರಸ್ಥರಿದ್ದಾರೆ, ಕೋಟ್ಯಂತರ ಸಂಖ್ಯೆಯ ಗ್ರಾಹಕರಿದ್ದಾರೆ. ಕಾರ್ಡ್ ನೀಡುವ ಪ್ರತಿ ಬ್ಯಾಂಕಿನ ಸಂಪರ್ಕ ಪ್ರತಿಯೊಬ್ಬ ವ್ಯಾಪಾರಸ್ಥನಿಗೂ ಇರಬೇಕು ಎಂದರೆ ಅದು ಅಸಾಧ್ಯವೇ ಸರಿ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕ, ವ್ಯಾಪಾರಸ್ಥ ಹಾಗೂ ಬ್ಯಾಂಕುಗಳ ನಡುವಿನ ಸಂಪರ್ಕ ಸೇತುವಿನಂತೆ ವೀಸಾ ಹಾಗೂ ಮಾಸ್ಟರ್‌ಕಾರ್ಡ್‌ನಂತಹ ಸಂಸ್ಥೆಗಳು ಕೆಲಸಮಾಡುತ್ತವೆ.
ಯಾವುದೇ ವ್ಯಾಪಾರಸ್ಥನೊಡನೆ ವ್ಯವಹರಿಸುವಾಗ ಗ್ರಾಹಕ ತನ್ನ ಕಾರ್ಡ್ ಬಳಸುತ್ತಾನೆ ಎಂದುಕೊಳ್ಳೋಣ. ಆತನ ಬ್ಯಾಂಕ್ ಖಾತೆ ಪರಿಶೀಲಿಸಿ ಅದರಲ್ಲಿ ಸಾಕಷ್ಟು ಹಣವಿದ್ದರೆ ಅದನ್ನು ಆತನ ಬ್ಯಾಂಕಿನಿಂದ ವ್ಯಾಪಾರಸ್ಥನ ಬ್ಯಾಂಕಿಗೆ-ಖಾತೆಗೆ ವರ್ಗಾಯಿಸಲು ನೆರವಾಗುವುದು ಈ ಸಂಸ್ಥೆಗಳ ಕೆಲಸ. ಇದಕ್ಕಾಗಿ ಅವು ಬ್ಯಾಂಕುಗಳಿಂದ ಶುಲ್ಕ ವಸೂಲಿ ಮಾಡುತ್ತವೆ.
ಈ ಕೆಲಸಕ್ಕಾಗಿ ವಿದೇಶಿ ಸಂಸ್ಥೆಗಳನ್ನೇ ಅವಲಂಬಿಸುವುದು ಅನಿವಾರ್ಯವೇನಲ್ಲ. ಇಂತಹುದೇ ಕೆಲಸಮಾಡುವ ‘ರುಪೇ’ ಎಂಬ ಭಾರತೀಯ ವ್ಯವಸ್ಥೆಯೂ ಇದೆ. ಭಾರತ ಸರಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಎಂಬ ಸಂಸ್ಥೆ ನಿರ್ವಹಿಸುತ್ತಿರುವ ವ್ಯವಸ್ಥೆ ಇದು. ವೀಸಾ – ಮಾಸ್ಟರ್‌ಕಾರ್ಡ್ ಮೊದಲಾದ ಸಂಸ್ಥೆಗಳು ಮಾಡುವಂತಹುದೇ ಕೆಲಸವನ್ನು ಅವಕ್ಕಿಂತ ಬಹಳ ಕಡಿಮೆ ಶುಲ್ಕದಲ್ಲಿ ಮಾಡುವುದು ‘ರುಪೇ’ಯ ಹೆಚ್ಚುಗಾರಿಕೆ.

Responsive Web Design

ರೆಸ್ಪಾನ್ಸಿವ್ ವೆಬ್ ಡಿಸೈನ್
Kannada Equivalent: (ರೂಪಿಸಬೇಕಿದೆ)
Short Description : ನಿರ್ದಿಷ್ಟ ಜಾಲತಾಣವನ್ನು ನಾವು ಯಾವ ಸಾಧನದಲ್ಲಿ ವೀಕ್ಷಿಸುತ್ತಿದ್ದೇವೋ ಅದರ ಪರದೆಯ ಗಾತ್ರಕ್ಕೆ ತಕ್ಕಂತೆ ಪುಟದ ವಿನ್ಯಾಸ ಬದಲಾಗುವಂತೆ ಮಾಡುವ ತಂತ್ರ
Long Description: ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ಪರಿಚಯವಾದ ಸಂದರ್ಭದಲ್ಲಿ ಜಾಲತಾಣಗಳನ್ನು ನೋಡಲು ಕಂಪ್ಯೂಟರುಗಳು ಮಾತ್ರವೇ ಬಳಕೆಯಾಗುತ್ತಿದ್ದವು. ಅವುಗಳಲ್ಲಿ ಬಳಕೆಯಾಗುತ್ತಿದ್ದ ಯಂತ್ರಾಂಶ-ತಂತ್ರಾಂಶಗಳ ರೂಪುರೇಖೆಯಲ್ಲೂ ಹೆಚ್ಚಿನ ವ್ಯತ್ಯಾಸಗಳಿರುತ್ತಿರಲಿಲ್ಲ.
ಆದರೆ ಈಗ ಹಾಗಲ್ಲ. ನಾಲ್ಕಿಂಚು ಪರದೆಯ ಸ್ಮಾರ್ಟ್‌ಫೋನಿನಿಂದ ಹಿಡಿದು ನಲವತ್ತು ಇಂಚಿನ ಸ್ಮಾರ್ಟ್ ಟಿವಿಯವರೆಗೆ ವಿವಿಧ ಸಾಧನಗಳಲ್ಲಿ ನಾವು ಜಾಲತಾಣಗಳನ್ನು ವೀಕ್ಷಿಸುತ್ತೇವೆ. ಬೇರೆಬೇರೆ ಸಾಧನಗಳಲ್ಲಿ ಬೇರೆಬೇರೆ ಕಾರ್ಯಾಚರಣ ವ್ಯವಸ್ಥೆಗಳನ್ನು – ಬ್ರೌಸರ್ ತಂತ್ರಾಂಶಗಳನ್ನೂ ಬಳಸುತ್ತೇವೆ.
ಹೀಗಾಗಿ ಇಂದಿನ ಜಾಲತಾಣಗಳು ಎಲ್ಲಬಗೆಯ ಸಾಧನ ಹಾಗೂ ತಂತ್ರಾಂಶಗಳಲ್ಲೂ ಸರಿಯಾಗಿ ಕಾಣಿಸುವಂತಿರಬೇಕಾದ್ದು ಅನಿವಾರ್ಯ. ದೊಡ್ಡ ಪರದೆಗಳಿಗೆ ಮಾತ್ರವೇ ಹೊಂದುವಂತೆ ಪುಟಗಳ ವಿನ್ಯಾಸ ಮಾಡಿಟ್ಟರೆ ಅದನ್ನು ಮೊಬೈಲಿನಲ್ಲಿ ನೋಡುವುದೇ ಕಷ್ಟವಾಗುತ್ತದಲ್ಲ!
ಈ ಸಮಸ್ಯೆಯನ್ನು ಪರಿಹರಿಸಿ, ಪರದೆಯ ಗಾತ್ರಕ್ಕೆ ತಕ್ಕಂತೆ ಪುಟದ ವಿನ್ಯಾಸ ಬದಲಾಗುವಂತೆ ಮಾಡುವ ತಂತ್ರವೇ ‘ರೆಸ್ಪಾನ್ಸಿವ್ ವೆಬ್ ಡಿಸೈನ್’. ಈ ತಂತ್ರ ಬಳಸಿ ರೂಪಿಸಲಾದ ಪುಟಗಳು ನಾವು ಯಾವ ಸಾಧನ ಬಳಸುತ್ತಿದ್ದೇವೋ ಆ ಸಾಧನದ ಪರದೆಯ ಗಾತ್ರವನ್ನು ಗ್ರಹಿಸಿಕೊಂಡು ಅದಕ್ಕೆ ತಕ್ಕಂತೆ ತಮ್ಮ ವಿನ್ಯಾಸವನ್ನು ಬದಲಿಸಿಕೊಳ್ಳುತ್ತವೆ. ಸನ್ನಿವೇಶಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವುದರಿಂದಲೇ ಈ ವಿನ್ಯಾಸಕ್ಕೆ ‘ರೆಸ್ಪಾನ್ಸಿವ್’ ಎಂಬ ಹೆಸರು ಬಂದಿದೆ (ರೆಸ್ಪಾನ್ಸ್ = ಪ್ರತಿಕ್ರಿಯೆ).
ಈಗ ಬಹುತೇಕ ಬಳಕೆದಾರರು ಜಾಲತಾಣಗಳನ್ನು ತಮ್ಮ ಮೊಬೈಲಿನಿಂದಲೇ ತೆರೆಯುವುದರಿಂದ ರೆಸ್ಪಾನ್ಸಿವ್ ವಿನ್ಯಾಸಕ್ಕೆ ಎಲ್ಲಿಲ್ಲದ ಮಹತ್ವ. ನಾವು ಬಳಸುತ್ತಿರುವ ತಂತ್ರಾಂಶವನ್ನು ಗಮನಿಸಿಕೊಂಡು ಅದರಲ್ಲಿನ ಸೌಲಭ್ಯಗಳಿಗೆ ತಕ್ಕಂತೆ ಜಾಲತಾಣದ ಮಾಹಿತಿಯನ್ನು ಹೊಂದಿಸಿಕೊಳ್ಳುವುದೂ ರೆಸ್ಪಾನ್ಸಿವ್ ವಿನ್ಯಾಸದ ಪರಿಧಿಯಲ್ಲೇ ಬರುತ್ತದೆ.

Roaming

ರೋಮಿಂಗ್
Kannada Equivalent: (ರೂಪಿಸಬೇಕಿದೆ)
Short Description : ಸೇವಾಸಂಸ್ಥೆಯ ಭೌಗೋಳಿಕ ಮಿತಿಯ ಹೊರಗೂ ಬಳಕೆದಾರರು ತಮ್ಮ ಮೊಬೈಲ್ ಸಂಪರ್ಕ ಬಳಸಲು ಅನುವುಮಾಡಿಕೊಡುವ ವ್ಯವಸ್ಥೆ
Long Description: ಮೊಬೈಲ್ ಫೋನ್ ಸಂಪರ್ಕ ಪಡೆದುಕೊಳ್ಳುವಾಗ ನಾವು ಯಾವುದೋ ಒಂದು ಸಂಸ್ಥೆಯನ್ನು ಆಯ್ದುಕೊಂಡಿರುತ್ತೇವೆ. ನಮಗೆ ಮೊಬೈಲ್ ಜಾಲದ ಸೌಲಭ್ಯಗಳನ್ನು ಬಳಸಲು ಅನುವುಮಾಡಿಕೊಡುವುದು ಮತ್ತು ಅದಕ್ಕೆ ಪ್ರತಿಯಾಗಿ ಶುಲ್ಕ ಪಡೆದುಕೊಳ್ಳುವುದು ಆ ಸಂಸ್ಥೆಯ ಜವಾಬ್ದಾರಿ.
ಆದರೆ ನಾವು ಹೋದಲ್ಲೆಲ್ಲ ಆ ಸಂಸ್ಥೆಯ ಸೇವೆ ಲಭ್ಯವಿರಬೇಕು ಎಂದೇನೂ ಇಲ್ಲ. ಹೀಗಿರುವಾಗ ಸೇವಾಸಂಸ್ಥೆಯ ಭೌಗೋಳಿಕ ಮಿತಿಗಳನ್ನೆಲ್ಲ ಮೀರಿ ಬಳಕೆದಾರರು ತಮ್ಮ ಮೊಬೈಲ್ ಸಂಪರ್ಕವನ್ನು ಎಲ್ಲಿ ಬೇಕಾದರೂ ಬಳಸಲು ಅನುವುಮಾಡಿಕೊಡುವ ವ್ಯವಸ್ಥೆಯೇ ರೋಮಿಂಗ್. ಬೇರೆ ರಾಜ್ಯಕ್ಕೋ ದೇಶಕ್ಕೋ ಹೋದಾಗ ನಮ್ಮ ಸಂಪರ್ಕದ ಬದಲು ಅಲ್ಲಿ ಸಕ್ರಿಯವಾಗಿರುವ ಮೊಬೈಲ್ ಸೇವಾಸಂಸ್ಥೆಯ ಸಂಪರ್ಕ ಬಳಸುವುದನ್ನು ಈ ವ್ಯವಸ್ಥೆ ಸಾಧ್ಯವಾಗಿಸುತ್ತದೆ.
ರೋಮಿಂಗ್‌ನಲ್ಲಿರುವಾಗ ನಾವು ಯಾವ ಸಂಸ್ಥೆಯ ಸೇವೆ ಬಳಸುತ್ತೇವೆ ಎನ್ನುವುದು ಬಹಳಷ್ಟು ಸಾರಿ ಸ್ವಯಂಚಾಲಿತವಾಗಿಯೇ ತೀರ್ಮಾನವಾಗುತ್ತದೆ. ಒಂದೊಮ್ಮೆ ಹಾಗೆ ಆಗದಿದ್ದಲ್ಲಿ ನಾವು ನಮ್ಮ ಇಷ್ಟದ ಸಂಸ್ಥೆಯ ಸೇವೆಯನ್ನು ಆರಿಸಿಕೊಳ್ಳುವುದೂ ಸಾಧ್ಯ.
ರೋಮಿಂಗ್ ಸೌಲಭ್ಯ ಒದಗಿಸುವುದಕ್ಕಾಗಿಯೇ ಹೆಚ್ಚುವರಿ ಶುಲ್ಕ ವಿಧಿಸುವ ಅಭ್ಯಾಸ ಕೆಲಸಮಯದ ಹಿಂದೆ ಇತ್ತು. ಆದರೆ ಈಗ ಬಹುತೇಕ ಸಂಸ್ಥೆಗಳು ಈ ಸೌಲಭ್ಯಕ್ಕಾಗಿ ಪ್ರತ್ಯೇಕ ಶುಲ್ಕವನ್ನೇನೂ ಪಡೆದುಕೊಳ್ಳುವುದಿಲ್ಲ. ರೋಮಿಂಗ್‌ನಲ್ಲಿ ನಾವು ಎರಡೆರಡು ಸಂಸ್ಥೆಗಳ ಸೇವೆ ಬಳಸುವುದರಿಂದ ದೂರವಾಣಿ ಕರೆ ಮಾಡಿದ್ದಕ್ಕೆ, ಎಸ್ಸೆಮ್ಮೆಸ್ ಕಳಿಸಿದ್ದಕ್ಕೆಲ್ಲ ಹೆಚ್ಚುವರಿ ಹಣ ನೀಡಬೇಕಾದ್ದು ಮಾತ್ರ ಇನ್ನೂ ಅನಿವಾರ್ಯ. ದೇಶದೊಳಗಿನ ರೋಮಿಂಗ್‌ಗೆ ಹೋಲಿಸಿದರೆ ಅಂತಾರಾಷ್ಟ್ರೀಯ ರೋಮಿಂಗ್ ಇನ್ನೂ ದುಬಾರಿ. ಈ ಎಲ್ಲ ಸನ್ನಿವೇಶಗಳಲ್ಲೂ ನಮ್ಮಿಂದ ಹಣಪಡೆದು ಇನ್ನೊಂದು ಸಂಸ್ಥೆಗೆ ಅವರ ಪಾಲನ್ನು ಪಾವತಿಸುವ ಜವಾಬ್ದಾರಿಯನ್ನು ಮೂಲ ಮೊಬೈಲ್ ಸೇವಾಸಂಸ್ಥೆಯೇ ನಿರ್ವಹಿಸುತ್ತದೆ.

Ransomware

ರ್‍ಯಾನ್‌ಸಮ್‌ವೇರ್
Kannada Equivalent: (ರೂಪಿಸಬೇಕಿದೆ)
Short Description : ಮಾಹಿತಿಯನ್ನು ಗೂಢಲಿಪೀಕರಣಗೊಳಿಸಿ ಬಳಸಲಾಗದಂತೆ ಮಾಡುವ ಮತ್ತು ಅದನ್ನು ಸರಿಪಡಿಸಲು ಹಣಕ್ಕಾಗಿ ಬೇಡಿಕೆಯಿಡುವ ಕುತಂತ್ರಾಂಶ
Long Description: ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುವ ದುರುಳರ ಬಗ್ಗೆ ನಾವು ಕೇಳಿದ್ದೇವಲ್ಲ, ಅಂತಹ ದುಷ್ಕರ್ಮಿಗಳು ಸೈಬರ್ ಲೋಕದಲ್ಲೂ ಇದ್ದಾರೆ. ಅವರು ಒತ್ತೆಯಾಳುಗಳಾಗಿ ಇರಿಸಿಕೊಳ್ಳುವುದು ಜನರನ್ನಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳನ್ನು!
ಈ ಕೆಟ್ಟ ಉದ್ದೇಶಕ್ಕಾಗಿ ಬಳಕೆಯಾಗುವ ತಂತ್ರಾಂಶಗಳನ್ನು ‘ರ್‍ಯಾನ್‌ಸಮ್‌ವೇರ್’ ಎಂದು ಗುರುತಿಸಲಾಗುತ್ತದೆ (‘ರ್‍ಯಾನ್‌ಸಮ್’ ಎಂದರೆ ಸುಲಿಗೆಯ ಹಣ). ಸೈಬರ್ ಲೋಕವನ್ನು ಕಾಡುವ ಹಲವು ಬಗೆಯ ಕುತಂತ್ರಾಂಶಗಳಲ್ಲಿ ಇದೂ ಒಂದು.
ತಂತ್ರಾಂಶಗಳನ್ನು – ಕಡತಗಳನ್ನು ಗೂಢಲಿಪೀಕರಣಗೊಳಿಸಿ (ಎನ್‌ಕ್ರಿಪ್ಟ್ ಮಾಡಿ) ಬಳಸಲಾಗದಂತೆ ಮಾಡುವುದು ರ್‍ಯಾನ್‌ಸಮ್‌ವೇರ್ ಕಾರ್ಯವೈಖರಿ. ಕೆಡಿಸಿದ ಕಡತಗಳನ್ನು ಮತ್ತೆ ಸರಿಪಡಿಸಬೇಕಾದರೆ ನಾವು ಕೇಳಿದಷ್ಟು ದುಡ್ಡುಕೊಡಿ ಎಂದು ಈ ಕುತಂತ್ರಾಂಶ ರೂಪಿಸಿದವರು ಬೇಡಿಕೆಯಿಡುತ್ತಾರೆ. ಕಂಪ್ಯೂಟರಿಗೆ – ಅದರಲ್ಲಿನ ಕಡತಗಳಿಗೆ ಪಾಸ್‌ವರ್ಡ್ ಹಾಕಿ ಲಾಕ್ ಮಾಡಿಟ್ಟು ಅದೇನೆಂದು ಹೇಳಲು ಹಣಕೇಳುವ ಉದಾಹರಣೆಗಳೂ ಇವೆ. ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳ ಜೊತೆಗೆ ಸ್ಮಾರ್ಟ್ ಟೀವಿಗಳಲ್ಲೂ ರ್‍ಯಾನ್‌ಸಮ್‌ವೇರ್ ಹಾವಳಿ ಕಂಡುಬಂದಿದೆಯಂತೆ.
ಈ ಕುತಂತ್ರಾಂಶದ ಬಲೆಗೆ ಬೀಳದಿರಲು ಕೆಲ ಸೂತ್ರಗಳಿವೆ. ಅಪರಿಚಿತರು ಕಳಿಸಿದ ಇಮೇಲ್-ಮೆಸೇಜುಗಳ ಮೂಲಕವಾಗಲಿ ಸಂಶಯಾಸ್ಪದ ಜಾಲತಾಣಗಳಿಂದಾಗಲಿ ಏನನ್ನೂ ಡೌನ್‌ಲೋಡ್ ಮಾಡದಿರುವುದು ರ್‍ಯಾನ್‌ಸಮ್‌ವೇರ್‌ನಿಂದ ಪಾರಾಗುವ ಮೊದಲ ಹೆಜ್ಜೆ. ನಮ್ಮ ಮಾಹಿತಿಯನ್ನು ಕಾಲಕಾಲಕ್ಕೆ ಬ್ಯಾಕಪ್ ಮಾಡಿಡುವುದು ಹಾಗೂ ಸೂಕ್ತ ಆಂಟಿವೈರಸ್ ತಂತ್ರಾಂಶ ಬಳಸುವುದು ಕೂಡ ಒಳ್ಳೆಯ ಯೋಚನೆಗಳೇ.

RAM

ರ್‍ಯಾಮ್
Kannada Equivalent: (ರೂಪಿಸಬೇಕಿದೆ)
Short Description : ರ್‍ಯಾಂಡಮ್ ಆಕ್ಸೆಸ್ ಮೆಮೊರಿ; ಕಂಪ್ಯೂಟರ್ ಅಥವಾ ಮೊಬೈಲ್ ಕೆಲಸಮಾಡುತ್ತಿರುವಾಗ ಮಾಹಿತಿಯನ್ನು ತಾತ್ಕಾಲಿಕವಾಗಿ ಉಳಿಸಿಟ್ಟುಕೊಳ್ಳುವ ಶೇಖರಣಾ ವ್ಯವಸ್ಥೆ. ಈ ಮಾಹಿತಿ ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ಉಳಿದಿರುತ್ತದೆ.
Long Description: ಕಂಪ್ಯೂಟರ್ ಅಥವಾ ಮೊಬೈಲಿನಲ್ಲಿ ಕೆಲಸಮಾಡುವಾಗ ನಾವು ಒಂದಲ್ಲ ಒಂದು ರೀತಿಯ ಮಾಹಿತಿಯೊಡನೆ ವ್ಯವಹರಿಸುತ್ತಿರುತ್ತೇವೆ, ಮತ್ತು ಈ ಮಾಹಿತಿ ಅಂತಿಮವಾಗಿ ಹಾರ್ಡ್ ಡಿಸ್ಕ್‌ನಲ್ಲೋ, ಪೆನ್‌ಡ್ರೈವ್‌ನಲ್ಲೋ, ಮೆಮೊರಿ ಕಾರ್ಡಿನಲ್ಲೋ ಶೇಖರವಾಗುತ್ತದೆ. ನಾವು ಕೆಲಸಮಾಡುತ್ತಿರುವಷ್ಟು ಹೊತ್ತು – ಕಡತವನ್ನು ಉಳಿಸುವ ಮೊದಲು – ಇದನ್ನೆಲ್ಲ ಸಂಗ್ರಹಿಸಿಟ್ಟುಕೊಳ್ಳಲು ರ್‍ಯಾಮ್, ಅಂದರೆ ರ್‍ಯಾಂಡಮ್ ಆಕ್ಸೆಸ್ ಮೆಮೊರಿ ಬಳಕೆಯಾಗುತ್ತದೆ.
ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಕೆಲಸಮಾಡುತ್ತಿರುವಾಗ ತಾನು ಆ ಕ್ಷಣದಲ್ಲಿ ಬಳಸುತ್ತಿರುವ ದತ್ತಾಂಶ ಹಾಗೂ ಮಾಹಿತಿಯನ್ನೆಲ್ಲ ಇದರಲ್ಲಿ ಉಳಿಸಿಡುತ್ತದೆ. ರ್‍ಯಾಮ್ ಒಂದು ತಾತ್ಕಾಲಿಕ ಶೇಖರಣಾ ವ್ಯವಸ್ಥೆ ಮಾತ್ರ. ಅಂದರೆ, ವಿದ್ಯುತ್ ಪೂರೈಕೆ ಇರುವವರೆಗೆ ಮಾತ್ರ ರ್‍ಯಾಮ್‌ನಲ್ಲಿರುವ ಸಂಗತಿಗಳೆಲ್ಲ ಉಳಿದಿರುತ್ತವೆ. ಇದ್ದಕ್ಕಿದ್ದಂತೆ ಕರೆಂಟು ಹೋದಾಗ ನೀವು ನೋಟ್‌ಪ್ಯಾಡಿನಲ್ಲಿ ಟೈಪ್ ಮಾಡುತ್ತಿದ್ದ, ಇನ್ನೂ ಸೇವ್ ಮಾಡದ, ಕಡತ ಮಾಯವಾಗಿಬಿಡುತ್ತದಲ್ಲ, ಅದಕ್ಕೆ ಇದೇ ಕಾರಣ!
ನಾವು ಸೇರಿಸುತ್ತಿರುವ ಮಾಹಿತಿಯನ್ನು ನಿರ್ದಿಷ್ಟ ಅವಧಿಗೊಮ್ಮೆ ಸ್ವಯಂಚಾಲಿತವಾಗಿ ಸೇವ್ ಮಾಡಿಟ್ಟುಕೊಳ್ಳುವ ಸೌಲಭ್ಯ ಕೆಲ ತಂತ್ರಾಂಶಗಳಲ್ಲಿರುತ್ತದೆ. ಆ ಸೌಲಭ್ಯವಿಲ್ಲದ ತಂತ್ರಾಂಶಗಳಲ್ಲಿ ನಾವು ಸೇರಿಸುವ ಮಾಹಿತಿಯನ್ನು ಆಗಿಂದಾಗ್ಗೆ ಸೂಕ್ತವಾಗಿ ಉಳಿಸಿಡುವುದು ಒಳ್ಳೆಯದು.

Laser Printer

ಲೇಸರ್ ಪ್ರಿಂಟರ್
Kannada Equivalent: (ರೂಪಿಸಬೇಕಿದೆ)
Short Description : ಬೆಳಕಿನ ಕಿರಣಗಳ ಸಹಾಯದಿಂದ ಮುದ್ರಿಸುವ ಯಂತ್ರ
Long Description: ಡಿಜಿಟಲ್ ಕಡತಗಳ ಮುದ್ರಣದಲ್ಲಿ ಹಲವು ಬಗೆಯ ಪ್ರಿಂಟರುಗಳು ಬಳಕೆಯಾಗುತ್ತವೆ. ಈ ಪೈಕಿ ಲೇಸರ್ ಪ್ರಿಂಟರುಗಳದು ಪ್ರಮುಖ ಹೆಸರು. ಕಡಿಮೆ ಸಂಖ್ಯೆಯ ಪ್ರಿಂಟುಗಳು ಸಾಕು ಎನ್ನುವವರು ಇಂಕ್‌ಜೆಟ್ ಪ್ರಿಂಟರುಗಳನ್ನು ಬಳಸಿದರೆ ಹೆಚ್ಚು ಪ್ರತಿಗಳನ್ನು ಮುದ್ರಿಸುವ ಅಗತ್ಯವಿರುವಲ್ಲಿ ಲೇಸರ್ ಪ್ರಿಂಟರ್‌ಗೆ ಮೊದಲ ಪ್ರಾಶಸ್ತ್ಯ.
ಹೆಸರೇ ಹೇಳುವಂತೆ ಲೇಸರ್ ಪ್ರಿಂಟರುಗಳಲ್ಲಿ ಬೆಳಕಿನ ಕಿರಣಗಳ ಬಳಕೆಯಾಗುತ್ತದೆ. ನಾವು ಮುದ್ರಿಸಬೇಕಿರುವ ವಿನ್ಯಾಸಕ್ಕೆ ಅನುಗುಣವಾಗಿ ಈ ಕಿರಣಗಳು ಪ್ರಿಂಟರಿನ ‘ಫೋಟೋರಿಸೆಪ್ಟರ್’ (ಡ್ರಮ್) ಮೇಲೆ ಬೀಳುತ್ತವೆ, ಆ ಕಿರಣಗಳು ಎಲ್ಲೆಲ್ಲಿ ಬೀಳುತ್ತವೋ ಅಲ್ಲಿನ ವಿದ್ಯುತ್ ಪೂರೈಕೆಯಲ್ಲಿ (ಚಾರ್ಜ್) ವ್ಯತ್ಯಾಸವಾಗುತ್ತದೆ ಹಾಗೂ ಆ ಮೂಲಕ ಡ್ರಮ್ ಮೇಲೆ ಪುಟದ ವಿನ್ಯಾಸ ರೂಪುಗೊಳ್ಳುತ್ತದೆ. ಅದರ ಮೇಲೆ ಟೋನರ್ (ಬಣ್ಣ) ಅನ್ನು ಹಚ್ಚುವುದು ಮುಂದಿನ ಹೆಜ್ಜೆ. ಬಣ್ಣ ಹಚ್ಚಿದ ಡ್ರಮ್ ಮೇಲೆ ಪೇಪರ್ ಹಾದುಬಂದಾಗ ಆ ಬಣ್ಣ ಕಾಗದಕ್ಕೆ ವರ್ಗಾವಣೆಯಾಗುತ್ತದೆ, ನಮಗೆ ಬೇಕಾದ ಪ್ರಿಂಟ್‌ಔಟ್ ಸಿದ್ಧವಾಗುತ್ತದೆ!
ಅಂದಹಾಗೆ ಫೋಟೋಕಾಪಿ (ಜ಼ೆರಾಕ್ಸ್) ಯಂತ್ರಗಳಲ್ಲಿ ಬಳಕೆಯಾಗುವುದೂ ಇದೇ ತಂತ್ರಜ್ಞಾನ. ‘ಜ಼ೆರಾಗ್ರಫಿ’ ಎನ್ನುವುದು ಇದರ ಹೆಸರು. ಫೋಟೋಕಾಪಿ ಯಂತ್ರಗಳಲ್ಲಿ ನಮ್ಮ ಕಡತದ ಛಾಯೆ ಮುದ್ರಣವಾದರೆ ಲೇಸರ್ ಪ್ರಿಂಟರಿನಲ್ಲಿ ಮುದ್ರಣವಾಗುವ ಸಾಮಗ್ರಿ ಕಂಪ್ಯೂಟರಿನಿಂದ ಬರುತ್ತದೆ ಎನ್ನುವುದಷ್ಟೇ ವ್ಯತ್ಯಾಸ.
ಬಹುತೇಕ ಲೇಸರ್ ಪ್ರಿಂಟರುಗಳಲ್ಲಿ ಕಪ್ಪು ಬಣ್ಣವೊಂದೇ ಉಪಯೋಗವಾಗುತ್ತದೆ, ನಿಜ. ಆದರೆ ಬಹುವರ್ಣದಲ್ಲಿ ಮುದ್ರಿಸಬಲ್ಲ ಲೇಸರ್ ಪ್ರಿಂಟರುಗಳೂ ಇವೆ. ಈ ಬಣ್ಣಗಳೆಲ್ಲ ಪುಡಿಯ ರೂಪದಲ್ಲಿರುತ್ತದೆ ಎನ್ನುವುದು ಲೇಸರ್ ಪ್ರಿಂಟರಿಗೂ ದ್ರವರೂಪದ ಬಣ್ಣಗಳನ್ನು ಬಳಸುವ ಇಂಕ್‌ಜೆಟ್ ಪ್ರಿಂಟರಿಗೂ ಇರುವ ವ್ಯತ್ಯಾಸಗಳಲ್ಲೊಂದು. ಲೇಸರ್ ಪ್ರಿಂಟರ್ ಮುದ್ರಣದ ಗುಣಮಟ್ಟ ಇಂಕ್‌ಜೆಟ್‌ಗಿಂತ ಉತ್ತಮವಾಗಿರುವುದಕ್ಕೂ ಇದೇ ಕಾರಣ.

Like Farming

ಲೈಕ್ ಫಾರ್ಮಿಂಗ್
Kannada Equivalent: (ರೂಪಿಸಬೇಕಿದೆ)
Short Description : ಫೇಸ್‌ಬುಕ್‌ನಂತಹ ಸಮಾಜಜಾಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರ ಮೆಚ್ಚುಗೆ (ಲೈಕ್) ಪಡೆಯಲು ನಡೆಯುವ ಚಟುವಟಿಕೆ; ಇದು ಬಹಳಷ್ಟು ಬಾರಿ ದುರುದ್ದೇಶಪೂರಿತವಾಗಿರುವುದು ಸಾಧ್ಯ.
Long Description: “ಈ ಚಿತ್ರ ಲೈಕ್ ಮಾಡಿ, X ಅಂತ ಟೈಪ್ ಮಾಡಿ, ಆಮೇಲೆ ಮ್ಯಾಜಿಕ್ ನೋಡಿ!” ಎನ್ನುವಂತಹ ಸಂದೇಶಗಳನ್ನು ಸೋಶಿಯಲ್ ನೆಟ್‌ವರ್ಕ್‌ಗಳಲ್ಲಿ ನಾವು ಆಗಿಂದಾಗ್ಗೆ ನೋಡುತ್ತಿರುತ್ತೇವೆ. X-Y-Z ಏನು ಟೈಪ್ ಮಾಡಿದರೂ ಅಷ್ಟೇ, ಮ್ಯಾಜಿಕ್ಕೂ ಇಲ್ಲ ಏನೂ ಇಲ್ಲ! ಯಾವುದೋ ಅಸಂಬದ್ಧ ಚಿತ್ರವನ್ನು ಲೈಕ್ ಮಾಡಿದ್ದಷ್ಟೇ ಲಾಭ.
ಮ್ಯಾಜಿಕ್ ನೋಡುವ ಆಸೆಯಲ್ಲಿ ಯಾರಾದರೂ ಇಂಥದ್ದನ್ನು ಲೈಕ್ ಮಾಡುತ್ತಾರೆ ಎಂದುಕೊಳ್ಳೋಣ. ಆದರೆ ಜನ ಇಂಥದ್ದನ್ನು ಹಂಚಿಕೊಳ್ಳುವುದು ಯಾಕೆ?
ಈ ಅಭ್ಯಾಸದ ಹಿನ್ನೆಲೆಯಲ್ಲಿರುವುದು ಲೈಕುಗಳ ಆಸೆ. ಫೇಸ್‌ಬುಕ್‌ನಂತಹ ಸಮಾಜಜಾಲಗಳಲ್ಲಿ ಪುಟಗಳನ್ನು ಸೃಷ್ಟಿಸುವುದು, ಇಂತಹ ಗಿಮಿಕ್‌ಗಳ ಮೂಲಕ ಅದಕ್ಕೆ ಹೆಚ್ಚುಹೆಚ್ಚು ಲೈಕ್ ಸಂಪಾದಿಸುವುದು ಇಂತಹ ಕಿಡಿಗೇಡಿಗಳ ಉದ್ದೇಶ. ಈ ಚಟುವಟಿಕೆಯನ್ನು ‘ಲೈಕ್ ಫಾರ್ಮಿಂಗ್’ ಎಂದು ಕರೆಯುತ್ತಾರೆ.
ಯಾವುದೇ ಪುಟದಲ್ಲಿರುವ ಮಾಹಿತಿಗೆ ಹೆಚ್ಚುಹೆಚ್ಚು ಲೈಕ್ ಬರುತ್ತಿದೆ ಎಂದರೆ ಆ ಪುಟ ಪ್ರತ್ಯಕ್ಷವಾಗಿ – ಪರೋಕ್ಷವಾಗಿ ಹೆಚ್ಚು ಬಳಕೆದಾರರನ್ನು ತಲುಪುತ್ತದೆ. ಹೀಗೆ ಹೆಚ್ಚು ಬಳಕೆದಾರರನ್ನು ತಲುಪುವ ಪುಟಗಳನ್ನು ದುರುದ್ದೇಶಪೂರಿತ ವ್ಯಕ್ತಿಗಳು ತಮ್ಮ ಲಾಭಕ್ಕೆ (ಉದಾ: ಖಾಸಗಿ ಮಾಹಿತಿಯ ಕಳವು) ಬಳಸಿಕೊಳ್ಳುತ್ತಾರೆ. ಮ್ಯಾಜಿಕ್ ನೋಡಿ ಎನ್ನುವಂತಹ ಸಂದೇಶಗಳನ್ನು, ಮೊಬೈಲ್ ಫೋನ್ – ಕಾರುಗಳನ್ನೆಲ್ಲ ಉಚಿತವಾಗಿ ಪಡೆಯಿರಿ ಎನ್ನುವ ಆಮಿಷಗಳನ್ನು ಸಂಪೂರ್ಣವಾಗಿ ಉಪೇಕ್ಷಿಸುವ ಮೂಲಕ ನಾವು ಇಂತಹ ಪಿಡುಗುಗಳನ್ನು ಮೂಲದಲ್ಲಿಯೇ ನಿವಾರಿಸಬಹುದು.

Virtual Reality

ವರ್ಚುಯಲ್ ರಿಯಾಲಿಟಿ
Kannada Equivalent: ಛಾಯಾವಾಸ್ತವ
Short Description : ನೈಜ ಅಸ್ತಿತ್ವವಿಲ್ಲದ ವಸ್ತು-ಸಂಗತಿಗಳನ್ನು ಕೃತಕವಾಗಿ ರೂಪಿಸಿ ಅವು ನೈಜವೇ ಇರಬಹುದೇನೋ ಎನ್ನುವ ಭಾವನೆ ಬರುವಂತೆ ನಮ್ಮೆದುರು ಪ್ರಸ್ತುತಪಡಿಸುವ ತಂತ್ರಜ್ಞಾನ
Long Description: ನೈಜ ಅಸ್ತಿತ್ವವಿಲ್ಲದ ವಸ್ತು-ಸಂಗತಿಗಳನ್ನು ಕೃತಕವಾಗಿ ರೂಪಿಸಿ ಅವು ನೈಜವೇ ಇರಬಹುದೇನೋ ಎನ್ನುವ ಭಾವನೆ ಬರುವಂತೆ ನಮ್ಮೆದುರು ಪ್ರಸ್ತುತಪಡಿಸುವ ತಂತ್ರಜ್ಞಾನವೇ ‘ವರ್ಚುಯಲ್ ರಿಯಾಲಿಟಿ’ (ವಿಆರ್). ಕಂಪ್ಯೂಟರ್ ಗೇಮಿಂಗ್, ಜಾಹೀರಾತು, ಮಾರ್ಕೆಟಿಂಗ್ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಇದನ್ನು ಬಳಸಲಾಗುತ್ತಿದೆ.
‘ವರ್ಚುಯಲ್ ರಿಯಾಲಿಟಿ ಹೆಡ್‌ಸೆಟ್’ ಎಂಬ ದೊಡ್ಡಗಾತ್ರದ ಕನ್ನಡಕದಂತಹ ಸಾಧನ ಕುರಿತ ಲೇಖನಗಳನ್ನು, ಜಾಹೀರಾತುಗಳನ್ನು ನೀವು ನೋಡಿರಬಹುದು. ನಮ್ಮ ಮೊಬೈಲನ್ನೇ ಬಳಸಿ ವರ್ಚುಯಲ್ ರಿಯಾಲಿಟಿ ಅನುಭವವನ್ನು ಕಟ್ಟಿಕೊಡುವುದು ಈ ಸಾಧನಗಳ ವೈಶಿಷ್ಟ್ಯ. ಈ ಸಾಧನದೊಳಗೆ ಮೊಬೈಲನ್ನು ಅಳವಡಿಸಿ, ಅದು ನಮ್ಮ ಕಣ್ಣಮುಂದೆ ಬರುವಂತೆ ಕಟ್ಟಿಕೊಂಡರೆ ಆಯಿತು – ವಿಶೇಷ ಆಪ್‌ಗಳ ಸಹಾಯದಿಂದ ಹೊಸದೊಂದು ಜಗತ್ತೇ ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತದೆ; ಬೆಂಗಳೂರಿನ ಮನೆಯೊಳಗೇ ಕುಳಿತು ಬಾರ್ಸಿಲೋನಾದಲ್ಲಿ ಸುತ್ತಾಡಿದಂತೆ, ಸೋಫಾ ಮೇಲೆ ಕುಳಿತೇ ರೇಸಿಂಗ್ ಕಾರ್ ಓಡಿಸಿದಂತೆಲ್ಲ ಅನ್ನಿಸುವ ಹಾಗೆ ಈ ತಂತ್ರಜ್ಞಾನ ಮಾಡಬಲ್ಲದು.
ಗೇಮಿಂಗ್‌ನಲ್ಲಿ ಆಸಕ್ತಿಯಿಲ್ಲ, ಹೆಚ್ಚಿನ ದುಡ್ಡು ಖರ್ಚುಮಾಡುವ ಉದ್ದೇಶವೂ ಇಲ್ಲ ಎನ್ನುವವರು ಕೂಡ ವರ್ಚುಯಲ್ ರಿಯಾಲಿಟಿ ಅನುಭವ ಪಡೆಯಲು ಗೂಗಲ್ ಕಾರ್ಡ್‌ಬೋರ್ಡ್ ಎಂಬ ರಟ್ಟಿನ ಪೆಟ್ಟಿಗೆ ಸಹಾಯಮಾಡುತ್ತದೆ. ಗೂಗಲ್ ಮೂಲಕ ದೊರಕುವ ಮಾಹಿತಿ ಬಳಸಿ ನಾವು ಇದನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು, ಅಥವಾ ಕೆಲವೇ ನೂರು ರೂಪಾಯಿಗಳನ್ನು ಖರ್ಚುಮಾಡಿ ಆನ್‌ಲೈನ್ ಅಂಗಡಿಗಳಲ್ಲೂ ಕೊಳ್ಳಬಹುದು.

Word Processor

ವರ್ಡ್ ಪ್ರಾಸೆಸರ್
Kannada Equivalent: ಪದಸಂಸ್ಕಾರಕ
Short Description : ಕಡತಗಳ ರಚನೆ, ಸಂಪಾದನೆ, ಪುಟವಿನ್ಯಾಸ ಹಾಗೂ ಮುದ್ರಣದಲ್ಲಿ ನೆರವಾಗುವ ತಂತ್ರಾಂಶ
Long Description: ಕಂಪ್ಯೂಟರಿನ ಅಸಂಖ್ಯ ಉಪಯೋಗಗಳ ಪೈಕಿ ಕಡತಗಳ ರಚನೆ, ಸಂಪಾದನೆ, ಪುಟವಿನ್ಯಾಸ ಹಾಗೂ ಮುದ್ರಣಕ್ಕೆ ಪ್ರಮುಖ ಸ್ಥಾನವಿದೆ. ಇವಿಷ್ಟೂ ಅಂಶಗಳನ್ನು ಒಟ್ಟುಸೇರಿಸಿ ‘ವರ್ಡ್ ಪ್ರಾಸೆಸಿಂಗ್’ (ಪದಸಂಸ್ಕರಣೆ) ಎಂದು ಗುರುತಿಸಲಾಗುತ್ತದೆ.
ಪದಸಂಸ್ಕರಣೆಯ ಈ ಕೆಲಸದಲ್ಲಿ ನೆರವಾಗುವ ತಂತ್ರಾಂಶಗಳನ್ನು ವರ್ಡ್ ಪ್ರಾಸೆಸರ್, ಅಂದರೆ ಪದಸಂಸ್ಕಾರಕಗಳೆಂದು ಕರೆಯುತ್ತಾರೆ. ಅಂದಹಾಗೆ ಪದಸಂಸ್ಕಾರಕಗಳಲ್ಲಿರುವುದು ಕಡತಗಳ ರಚನೆ ಹಾಗೂ ವಿನ್ಯಾಸಕ್ಕೆ ಬೇಕಾದ ಸೌಲಭ್ಯಗಳಷ್ಟೇ ಅಲ್ಲ. ಕಡತದಲ್ಲಿರುವ ಪದಗಳ ಸಂಖ್ಯೆಯನ್ನು ತಿಳಿಸುವ, ಅಕ್ಷರದೋಷ – ವ್ಯಾಕರಣದ ತಪ್ಪುಗಳನ್ನು ತೋರಿಸುವ, ಕಡತದಲ್ಲಿ ಮಾಡಲಾದ ಬದಲಾವಣೆಗಳ ಇತಿಹಾಸವನ್ನು ತೋರಿಸುವಂತಹ ಅನುಕೂಲಗಳೂ ಅನೇಕ ಪದಸಂಸ್ಕಾರಕಗಳಲ್ಲಿರುತ್ತವೆ.
ಪಠ್ಯವನ್ನಷ್ಟೇ ಟೈಪ್ ಮಾಡಿ ಉಳಿಸಿಡಲು ಸಹಾಯಮಾಡುವ ನೋಟ್‌ಪ್ಯಾಡ್‌ನಂತಹ ಸರಳ ತಂತ್ರಾಂಶಗಳಿಂದ ಪ್ರಾರಂಭಿಸಿ ಪತ್ರಿಕೆ-ಪುಸ್ತಕಗಳ ವಿನ್ಯಾಸದಲ್ಲಿ ಬಳಕೆಯಾಗುವ ಇನ್‌ಡಿಸೈನ್‌ನಂತಹ ತಂತ್ರಾಂಶಗಳವರೆಗೆ ವಿವಿಧ ಉದ್ದೇಶಗಳಿಗಾಗಿ ಬೇರೆಬೇರೆ ಪದಸಂಸ್ಕಾರಕಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸ. ಮೈಕ್ರೋಸಾಫ್ಟ್ ಆಫೀಸ್, ಓಪನ್‌ಆಫೀಸ್, ಲಿಬ್ರೆಆಫೀಸ್ ಮುಂತಾದ ಎಲ್ಲ ತಂತ್ರಾಂಶಸಂಗ್ರಹಗಳಲ್ಲೂ ಒಂದೊಂದು ಪದಸಂಸ್ಕಾರಕ ಇರುತ್ತದೆ. ಮೈಕ್ರೋಸಾಫ್ಟ್‌ನ ಆಫೀಸ್ ತಂತ್ರಾಂಶಸಂಗ್ರಹದ ಭಾಗವಾದ ‘ಮೈಕ್ರೋಸಾಫ್ಟ್ ವರ್ಡ್’ ಸಾಕಷ್ಟು ಹೆಸರುಮಾಡಿರುವ, ವ್ಯಾಪಕವಾಗಿ ಬಳಕೆಯಾಗುವ ಇಂತಹ ಪದಸಂಸ್ಕಾರಕಗಳಲ್ಲೊಂದು. ಕನ್ನಡದಲ್ಲಿ ಕಡತಗಳ ಸೃಷ್ಟಿಯನ್ನು ಸಾಧ್ಯವಾಗಿಸುವ ಬರಹ, ನುಡಿ, ಪದ ಮುಂತಾದ ತಂತ್ರಾಂಶಗಳೂ ಪದಸಂಸ್ಕಾರಕಗಳೇ.

Worldwide Web

ವರ್ಲ್ಡ್​ವೈಡ್ ವೆಬ್
Kannada Equivalent: ವಿಶ್ವವ್ಯಾಪಿ ಜಾಲ
Short Description : ಜಾಲತಾಣಗಳು (ವೆಬ್‌ಸೈಟ್), ಅವುಗಳ ಪುಟಗಳು (ವೆಬ್‌ಪೇಜ್) ಹಾಗೂ ಕಡತಗಳ (ಡಾಕ್ಯುಮೆಂಟ್ಸ್) ಮೂಲಕ ಅಂತರಜಾಲದಲ್ಲಿ ಮಾಹಿತಿಯನ್ನು ಪ್ರಕಟಿಸಲು ಸಾಧ್ಯವಾಗಿಸುವ ವ್ಯವಸ್ಥೆ
Long Description: ಬಹುತೇಕ ಎಲ್ಲ ಜಾಲತಾಣಗಳ ವಿಳಾಸಗಳೂ ‘WWW’ ಎಂಬ ಮೂರು ಅಕ್ಷರಗಳಿಂದ ಪ್ರಾರಂಭವಾಗುತ್ತವಲ್ಲ, ಇದು ‘ವರ್ಲ್ಡ್‌ವೈಡ್ ವೆಬ್’ ಎಂಬ ಹೆಸರಿನ ಸಂಕ್ಷಿಪ್ತರೂಪ. ಕನ್ನಡದಲ್ಲಿ ವಿಶ್ವವ್ಯಾಪಿ ಜಾಲವೆಂದು ಕರೆಯುವುದು ಇದನ್ನೇ.
ಸಾಮಾನ್ಯ ಬಳಕೆಯಲ್ಲಿ ಅಂತರಜಾಲ (ಇಂಟರ್‌ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಹೆಸರುಗಳನ್ನು ಪರ್ಯಾಯವಾಗಿ ಬಳಸಲಾಗುತ್ತದೆ, ನಿಜ. ಆದರೆ ಇವೆರಡೂ ಒಂದೇ ಅಲ್ಲ: ವಿಶ್ವವ್ಯಾಪಿ ಜಾಲ ಅಂತರಜಾಲದ ಒಂದು ಭಾಗ ಅಷ್ಟೇ.
ವಿಶ್ವದ ವಿವಿಧೆಡೆಗಳಲ್ಲಿರುವ ಕಂಪ್ಯೂಟರುಗಳು, ಮೊಬೈಲ್ ಫೋನುಗಳು, ಸಂಬಂಧಿತ ಸಾಧನಗಳು, ಅವುಗಳು ಸೇರಿ ರೂಪುಗೊಂಡಿರುವ ಜಾಲಗಳು – ಇವೆಲ್ಲ ಸೇರಿ ರೂಪುಗೊಂಡಿರುವುದೇ ಅಂತರಜಾಲ. ವಿವಿಧ ಯಂತ್ರಾಂಶಗಳು, ಅವುಗಳ ನಡುವೆ ಸಂವಹನ ಸಾಧ್ಯವಾಗಿಸುವ ವ್ಯವಸ್ಥೆಗಳೆಲ್ಲ ಇದರ ಭಾಗಗಳು.
ಜಾಲತಾಣಗಳು (ವೆಬ್‌ಸೈಟ್), ಅವುಗಳ ಪುಟಗಳು (ವೆಬ್‌ಪೇಜ್) ಹಾಗೂ ಕಡತಗಳ (ಡಾಕ್ಯುಮೆಂಟ್ಸ್) ಮೂಲಕ ಅಂತರಜಾಲದಲ್ಲಿ ಮಾಹಿತಿಯನ್ನು ಪ್ರಕಟಿಸಲು ಸಾಧ್ಯವಾಗಿಸುವುದು ವಿಶ್ವವ್ಯಾಪಿ ಜಾಲ. ಹೀಗೆ ಪ್ರಕಟಿಸಿದ ಬಹುಮಾಧ್ಯಮ (ಮಲ್ಟಿಮೀಡಿಯಾ) ಮಾಹಿತಿಯನ್ನು ನಿರ್ದಿಷ್ಟ ವಿಳಾಸಗಳ (ಯುಆರೆಲ್) ಮೂಲಕ ಪಡೆದುಕೊಳ್ಳುವುದು, ಕೊಂಡಿಗಳ (ಹೈಪರ್‌ಲಿಂಕ್) ಮೂಲಕ ವಿವಿಧ ಆಕರಗಳ ನಡುವೆ ಸಂಪರ್ಕ ಕಲ್ಪಿಸುವುದು ವಿಶ್ವವ್ಯಾಪಿ ಜಾಲದಿಂದಾಗಿ ಸಾಧ್ಯವಾಗುತ್ತದೆ.
ವಿಶ್ವವ್ಯಾಪಿ ಜಾಲವನ್ನು ರೂಪಿಸಿದ ಶ್ರೇಯ ಬ್ರಿಟಿಷ್ ವಿಜ್ಞಾನಿ ಟಿಮ್ ಬರ್ನರ್‍ಸ್-ಲೀ ಅವರಿಗೆ ಸಲ್ಲುತ್ತದೆ.

VoLTE

ವಿಒಎಲ್‌ಟಿಇ
Kannada Equivalent: (ರೂಪಿಸಬೇಕಿದೆ)
Short Description : ವಾಯ್ಸ್ ಓವರ್ ಎಲ್‌ಟಿಇ; ಮೊಬೈಲ್ ಜಾಲಗಳಲ್ಲಿ ಧ್ವನಿರೂಪದ ಕರೆಗಳು (ವಾಯ್ಸ್) ಹಾಗೂ ಅಂತರಜಾಲ ಸಂಪರ್ಕ (ಡೇಟಾ) ಎರಡನ್ನೂ ಒಟ್ಟಿಗೆ ನಿರ್ವಹಿಸುವ ವ್ಯವಸ್ಥೆ
Long Description: ಮೊಬೈಲ್ ಜಾಲಗಳ ಬಗ್ಗೆ ಮಾತನಾಡುವಾಗ ೩ಜಿ – ೪ಜಿಗಳ ಪ್ರಸ್ತಾಪ ಬರುವುದು ಸಾಮಾನ್ಯ. ಈ ಪೈಕಿ ೪ಜಿ ತಂತ್ರಜ್ಞಾನವನ್ನು ‘ಎಲ್‌ಟಿಇ’ ಎಂದು ಗುರುತಿಸಲಾಗುತ್ತದೆ. ಇದು ‘ಲಾಂಗ್ ಟರ್ಮ್ ಎವಲ್ಯೂಶನ್’ ಎಂಬ ಹೆಸರಿನ ಹ್ರಸ್ವರೂಪ.
ಮೊಬೈಲ್ ಜಗತ್ತಿನಲ್ಲಿ ತೀರಾ ಇತ್ತೀಚಿನವರೆಗೂ ಧ್ವನಿರೂಪದ ಕರೆಗಳು (ವಾಯ್ಸ್) ಹಾಗೂ ಅಂತರಜಾಲ ಸಂಪರ್ಕ (ಡೇಟಾ) ಬಳಸುವ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸಲಾಗುತ್ತಿತ್ತು. ನಮ್ಮ ದೇಶದ ಮಟ್ಟಿಗೆ ಈಗಲೂ ಬಹುಪಾಲು ಸಂಪರ್ಕಗಳು ಹೀಗೆಯೇ ಕೆಲಸಮಾಡುತ್ತವೆ.
ಇದರ ಬದಲು ವಾಯ್ಸ್ – ಡೇಟಾ ಎರಡನ್ನೂ ಒಟ್ಟಿಗೆ ನಿರ್ವಹಿಸಿದರೆ? ಪ್ರತ್ಯೇಕ ಮೂಲಸೌಕರ್ಯವನ್ನು ನಿಭಾಯಿಸಬೇಕಾದ ಖರ್ಚೂ ಉಳಿಯುತ್ತದೆ, ಸ್ಪರ್ಧಾತ್ಮಕ ಬೆಲೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೂ ಸಾಧ್ಯವಾಗುತ್ತದೆ. ಈ ಉದ್ದೇಶದಿಂದ ರೂಪುಗೊಂಡಿರುವ ತಂತ್ರಜ್ಞಾನವೇ ‘ವಿಒಎಲ್‌ಟಿಇ’, ಅಂದರೆ ‘ವಾಯ್ಸ್ ಓವರ್ ಎಲ್‌ಟಿಇ’.
ಡೇಟಾ ಸಂಪರ್ಕವನ್ನು ನಾವು ನೂರೆಂಟು ಕೆಲಸಗಳಿಗೆ ಬಳಸಿಕೊಳ್ಳುತ್ತೇವಲ್ಲ, ವಾಯ್ಸ್ ಓವರ್ ಎಲ್‌ಟಿಇ ತಂತ್ರಜ್ಞಾನ ಬಳಸುವ ಮೊಬೈಲ್ ಜಾಲಗಳಲ್ಲಿ ಧ್ವನಿರೂಪದ ಕರೆಗಳೂ ಡೇಟಾ ಬಳಸಿ ಮಾಡುವ ಇನ್ನೊಂದು ಕೆಲಸದಂತೆಯೇ ಪರಿಗಣಿಸಲ್ಪಡುತ್ತವೆ. ಹಾಗಾಗಿ ಮೊಬೈಲ್ ಸೇವಾ ಸಂಸ್ಥೆಗಳಿಗೆ ಅಂತರಜಾಲ ಬಳಕೆಗೆ ಬೇರೆ, ಮೊಬೈಲ್ ಕರೆಗಳಿಗೆ ಬೇರೆ ಎಂದು ಬೆಲೆ ನಿಗದಿಪಡಿಸುವ ಅನಿವಾರ್ಯತೆಯೂ ಇರುವುದಿಲ್ಲ.

VoIP

ವಿಓಐಪಿ
Kannada Equivalent: (ರೂಪಿಸಬೇಕಿದೆ)
Short Description : ವಾಯ್ಸ್ ಓವರ್ ಇಂಟರ್‌ನೆಟ್ ಪ್ರೋಟೊಕಾಲ್; ದತ್ತಾಂಶ ವರ್ಗಾವಣೆಯ ಶಿಷ್ಟಾಚಾರವಾದ ಇಂಟರ್‌ನೆಟ್ ಪ್ರೋಟೊಕಾಲ್ (ಐಪಿ) ಬಳಸಿ ಧ್ವನಿರೂಪದ ಕರೆಗಳನ್ನೂ ಸಾಧ್ಯವಾಗಿಸುವ ತಂತ್ರಜ್ಞಾನ
Long Description: ವಾಟ್ಸ್‌ಆಪ್ ಬಂದಮೇಲೆ ಎಸ್ಸೆಮ್ಮೆಸ್ ಬಳಕೆ ತೀರಾ ಕಡಿಮೆಯಾದದ್ದು ನಮಗೆಲ್ಲ ಗೊತ್ತೇ ಇದೆ. ಪ್ರತಿ ಸಂದೇಶಕ್ಕೆ ಇಷ್ಟು ಪೈಸೆ ಎಂದು ಲೆಕ್ಕ ಹಾಕುವ ಬದಲು ವಾಟ್ಸ್‌ಆಪ್ ಬಳಕೆಯನ್ನು ನಮ್ಮ ಡೇಟಾ ವೆಚ್ಚದೊಳಗೆ ಸೇರಿಸುವುದೂ ಗೊತ್ತಿರುವ ವಿಷಯವೇ.
ಹಾಗಾದರೆ ವಾಟ್ಸ್‌ಆಪ್-ಹೈಕ್-ವೈಬರ್ ಇತ್ಯಾದಿಗಳಲ್ಲಿ ಪಠ್ಯ ಸಂದೇಶಗಳನ್ನು ಪ್ರತ್ಯೇಕವಾಗಿ ನೋಡುವ (ಎಸ್ಸೆಮ್ಮೆಸ್‌ನಲ್ಲಿದ್ದಂತೆ) ಬದಲು ಬರಿಯ ದತ್ತಾಂಶವಾಗಷ್ಟೇ (ಅಂತರಜಾಲ ಸಂಪರ್ಕದಲ್ಲಿದ್ದಂತೆ) ಪರಿಗಣಿಸಲಾಗುತ್ತದೆ ಎಂದಾಯಿತು. ಇದೇ ರೀತಿ ಧ್ವನಿರೂಪದ ಕರೆಗಳನ್ನೂ ಅಂತರಜಾಲ ಸಂಪರ್ಕದ ಮೂಲಕವೇ ಮಾಡುವುದನ್ನು ಸಾಧ್ಯವಾಗಿಸುವ ತಂತ್ರಜ್ಞಾನವೇ ವಿಒಐಪಿ.
‘ವಾಯ್ಸ್ ಓವರ್ ಇಂಟರ್‌ನೆಟ್ ಪ್ರೋಟೊಕಾಲ್’ ಎನ್ನುವುದು ಈ ಹೆಸರಿನ ಪೂರ್ಣರೂಪ. ಅಂತರಜಾಲದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ದತ್ತಾಂಶದ ವರ್ಗಾವಣೆಯಾಗುವಾಗ ಪಾಲಿಸಬೇಕಾದ ನಿಯಮಗಳನ್ನು ಐಪಿ, ಅಂದರೆ ಇಂಟರ್‌ನೆಟ್ ಪ್ರೋಟೊಕಾಲ್ ಎನ್ನುವ ಶಿಷ್ಟಾಚಾರ ನಿರ್ದೇಶಿಸುತ್ತದೆ. ಇದೇ ಶಿಷ್ಟಾಚಾರದಡಿ ಧ್ವನಿರೂಪದ ಕರೆಗಳನ್ನೂ ಸಾಧ್ಯವಾಗಿಸುವುದು ವಿಒಐಪಿ ತಂತ್ರಜ್ಞಾನದ ಹೆಗ್ಗಳಿಕೆ. ಅಂತರಜಾಲ ಸಂಪರ್ಕ ಬಳಸಿಕೊಂಡು ಧ್ವನಿರೂಪದ ಕರೆಗಳನ್ನು ಮಾಡಲು ಅನುವುಮಾಡಿಕೊಡುವ ಸ್ಕೈಪ್, ವಾಟ್ಸ್‌ಆಪ್, ವೈಬರ್ ಮುಂತಾದ ತಂತ್ರಾಂಶಗಳೆಲ್ಲ ಇದೇ ತಂತ್ರಜ್ಞಾನವನ್ನು ಬಳಸುತ್ತವೆ.
ಇಲ್ಲಿ ಧ್ವನಿಯನ್ನೂ ದತ್ತಾಂಶದಂತೆಯೇ ಪರಿಗಣಿಸಲಾಗುವುದರಿಂದ ಬಳಕೆದಾರರು ಕರೆಗಳಿಗೆ ಪ್ರತ್ಯೇಕವಾಗಿ ಹಣ ಪಾವತಿಸುವ ಅಗತ್ಯ ಇರುವುದಿಲ್ಲ (ಅಂತರಜಾಲದ ವೆಚ್ಚದಲ್ಲೇ ಕರೆಗಳ ಲೆಕ್ಕವೂ ಸೇರಿಕೊಳ್ಳುತ್ತದೆ). ಅನೇಕ ಸಂದರ್ಭಗಳಲ್ಲಿ ವಿಒಐಪಿ ಕರೆಗಳ ಧ್ವನಿ ಗುಣಮಟ್ಟ ಸಾಮಾನ್ಯ ದೂರವಾಣಿ ಕರೆಗಳ ಹೋಲಿಕೆಯಲ್ಲಿ ಕಡಿಮೆಯಿರುವುದು ಸಾಧ್ಯ.

Wikipedia

ವಿಕಿಪೀಡಿಯ
Kannada Equivalent: (ರೂಪಿಸಬೇಕಿದೆ)
Short Description : ಯಾರು ಬೇಕಾದರೂ ಸಂಪಾದಿಸಬಹುದಾದ ಮುಕ್ತ ಆನ್‌ಲೈನ್ ವಿಶ್ವಕೋಶ
Long Description: ಯಾವುದೋ ವಿಷಯದ ಕುರಿತು ಗೂಗಲ್ ಸರ್ಚ್ ಮಾಡುವಾಗ ಬಹಳಷ್ಟು ಸಾರಿ ಅಲ್ಲಿ ಕಾಣುವ ಫಲಿತಾಂಶಗಳಲ್ಲಿ ವಿಕಿಪೀಡಿಯ ತಾಣಕ್ಕೆ ಅಗ್ರಸ್ಥಾನ ಇರುತ್ತದೆ.
ಈ ವಿಕಿಪೀಡಿಯ ಎನ್ನುವುದೊಂದು ವಿಶ್ವಕೋಶ. ಹಿಂದೆ ಗ್ರಂಥಾಲಯದ ಕಪಾಟಿನಲ್ಲಿರುತ್ತಿದ್ದ ದೊಡ್ಡದೊಡ್ಡ ಪುಸ್ತಕಗಳ ರೂಪದ ವಿಶ್ವಕೋಶಕ್ಕೂ ವಿಕಿಪೀಡಿಯಕ್ಕೂ ಬಹಳ ವ್ಯತ್ಯಾಸವಿದೆ. ಇದು ಮುದ್ರಿತ ರೂಪದಲ್ಲಿಲ್ಲ ಮತ್ತು ಇದನ್ನು ಬಳಸಲು ಹಣ ಕೊಡಬೇಕಿಲ್ಲ ಎನ್ನುವುದು ಒಂದು ವ್ಯತ್ಯಾಸವಾದರೆ ಇದಕ್ಕೆ ಯಾರು ಬೇಕಾದರೂ ಮಾಹಿತಿ ಸೇರಿಸಬಹುದು, ಅಲ್ಲಿರುವ ಮಾಹಿತಿಯನ್ನು ಉತ್ತಮಪಡಿಸಬಹುದು ಎನ್ನುವುದು ಇನ್ನೊಂದು ಮುಖ್ಯವಾದ ವ್ಯತ್ಯಾಸ.
ವಿಕಿಮೀಡಿಯ ಫೌಂಡೇಶನ್ ಆಶ್ರಯದಲ್ಲಿ ನಡೆಯುವ ಈ ತಾಣವನ್ನು ರೂಪಿಸಿದ ಕೀರ್ತಿ ಜಿಮ್ಮಿ ವೇಲ್ಸ್ ಹಾಗೂ ಲ್ಯಾರಿ ಸ್ಯಾಂಗರ್ ಅವರದ್ದು. ಕನ್ನಡವೂ ಸೇರಿದಂತೆ ಪ್ರಪಂಚದ ೨೫೦ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯವಿದೆ.
ಅಂದಹಾಗೆ ವಿಕಿ ಎಂಬ ಶಬ್ದ ಹವಾಯಿ ಭಾಷೆಯದ್ದು. ಆ ಭಾಷೆಯಲ್ಲಿ ವಿಕಿ ಎಂದರೆ ‘ಚುರುಕಾದ’ ಅಥವಾ ‘ಚಟುವಟಿಕೆಯ’ ಎಂದು ಅರ್ಥವಂತೆ.

VPN

ವಿಪಿಎನ್
Kannada Equivalent: (ರೂಪಿಸಬೇಕಿದೆ)
Short Description : ವರ್ಚುಯಲ್ ಪ್ರೈವೇಟ್ ನೆಟ್‌ವರ್ಕ್; ಅಂತರಜಾಲದಂತಹ ಸಾರ್ವಜನಿಕ ಜಾಲವನ್ನೇ ಬಳಸಿ ರೂಪಿಸಿಕೊಂಡ ಖಾಸಗಿ ಜಾಲ
Long Description: ಅಂತರಜಾಲದ ಲೋಕ ದೊಡ್ಡದೊಂದು ಜಾತ್ರೆಯಂತೆ. ಜಾತ್ರೆ ನೋಡಲು ಬಂದ ಸಾಮಾನ್ಯ ಜನರ ಜೊತೆಗೆ ಜೇಬುಗಳ್ಳರೂ ಬರುವಂತೆ ಕಳ್ಳರು-ಸುಳ್ಳರು ಇಲ್ಲೂ ಇರುತ್ತಾರೆ. ಜಾತ್ರೆಯಲ್ಲಿ ನಮ್ಮ ಜೇಬನ್ನು-ಬ್ಯಾಗನ್ನು ಕಾಪಾಡಿಕೊಳ್ಳುವಂತೆ ಇಲ್ಲಿ ನಮ್ಮ ಮಾಹಿತಿಯನ್ನು ಜೋಪಾನಮಾಡುವುದು ಅನಿವಾರ್ಯ. ನಮ್ಮ ನಿಮ್ಮ ವೈಯಕ್ತಿಕ ಮಾಹಿತಿಯಷ್ಟೇ ಅಲ್ಲ, ಸಂಸ್ಥೆಗಳು ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು.
ಯಾವುದೋ ಸಂಸ್ಥೆ ಒಂದೇ ಕಟ್ಟಡದಲ್ಲಿ ಕೆಲಸಮಾಡುತ್ತಿದ್ದರೆ ಅದರದೇ ಒಂದು ಜಾಲವನ್ನು (ನೆಟ್‌ವರ್ಕ್) ರೂಪಿಸಿಕೊಳ್ಳಬಹುದು, ಸರಿ. ಆದರೆ ಆ ಸಂಸ್ಥೆಯ ಶಾಖೆಗಳು ದೇಶದ ಬೇರೆಬೇರೆ ರಾಜ್ಯಗಳಲ್ಲಿ – ಪ್ರಪಂಚದ ವಿವಿಧ ದೇಶಗಳಲ್ಲಿ ಇದ್ದರೆ?
ಅಂತಹ ಸಂದರ್ಭಗಳಲ್ಲಿ ಅದು ಅನಿವಾರ್ಯವಾಗಿ ಅಂತರಜಾಲದ ಮೊರೆಹೋಗಬೇಕಾಗುತ್ತದೆ. ಅಂತರಜಾಲದಂತಹ ಸಾರ್ವಜನಿಕ ಜಾಲವನ್ನೇ ಬಳಸಿ ತಮ್ಮ ಖಾಸಗಿ ಜಾಲವನ್ನು ರೂಪಿಸಿಕೊಳ್ಳಲು ಬೇಕಾದ ತಂತ್ರಜ್ಞಾನಗಳು ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಬರುತ್ತವೆ. ಹೀಗೆ ರೂಪಿಸಿಕೊಂಡ ಜಾಲಗಳನ್ನು ‘ವರ್ಚುಯಲ್ ಪ್ರೈವೇಟ್ ನೆಟ್‌ವರ್ಕ್’ (ವಿಪಿಎನ್) ಎಂದು ಗುರುತಿಸಲಾಗುತ್ತದೆ.
ಬಳಸುತ್ತಿರುವುದು ಅಂತರಜಾಲವನ್ನೇ ಆದರೂ ತಮ್ಮದೇ ಸ್ವಂತ ಜಾಲದಲ್ಲಿರುವಂತೆ ಮಾಹಿತಿಯ ಸುರಕ್ಷಿತ ವಿನಿಮಯವನ್ನು ಸಾಧ್ಯವಾಗಿಸುವುದು ವಿಪಿಎನ್ ಹೆಗ್ಗಳಿಕೆ. ಹಲವು ಸಂಸ್ಥೆಗಳ ಸಿಬ್ಬಂದಿ ಎಲ್ಲೇ ಇದ್ದರೂ ತಮ್ಮ ಕಚೇರಿಯ ಕಂಪ್ಯೂಟರುಗಳನ್ನು ಸಂಪರ್ಕಿಸಿ ಕೆಲಸಮಾಡುತ್ತಾರಲ್ಲ, ಅವರ ನೆರವಿಗೆ ಬರುವುದೂ ಇದೇ ವಿಪಿಎನ್. ತಮ್ಮ ಖಾಸಗಿ ಮಾಹಿತಿಯ ಓಡಾಟವನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಹಲವು ವೈಯಕ್ತಿಕ ಬಳಕೆದಾರರೂ ವಿಪಿಎನ್ ಸೌಲಭ್ಯ ಬಳಸುವುದುಂಟು.
ನಿಷೇಧಿತ ಅಥವಾ ನಿರ್ಬಂಧಿತ ಜಾಲತಾಣಗಳನ್ನು ತೆರೆಯುವುದು, ಸ್ಪಾಮ್ ಸಂದೇಶಗಳನ್ನು ಕಳುಹಿಸುವುದು, ಪೈರಸಿಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮುಂತಾದ ದುರುದ್ದೇಶಪೂರಿತ ಚಟುವಟಿಕೆಗಳಲ್ಲೂ ವಿಪಿಎನ್‌ಗಳು ಬಳಕೆಯಾಗುತ್ತಿರುವುದು ವಿಪರ್ಯಾಸ. ಇಂತಹ ಹಲವು ಚಟುವಟಿಕೆಗಳು ಶಿಕ್ಷಾರ್ಹ ಅಪರಾಧಗಳೂ ಹೌದು.

Vishing

ವಿಶಿಂಗ್
Kannada Equivalent: (ರೂಪಿಸಬೇಕಿದೆ)
Short Description : ಧ್ವನಿ (ವಾಯ್ಸ್) ರೂಪದ ಫಿಶಿಂಗ್; ದೂರವಾಣಿ ಕರೆ ಮೂಲಕ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಹಗರಣ
Long Description: ಮೆಸೇಜು – ನಕಲಿ ಜಾಲತಾಣಗಳನ್ನು ಬಳಸಿ ಗ್ರಾಹಕರನ್ನು ವಂಚಿಸುವ ‘ಫಿಶಿಂಗ್’ ಹಗರಣದಂತೆ ದೂರವಾಣಿ ಕರೆಯ ಮೂಲಕವೇ ಬಳಕೆದಾರರ ಮಾಹಿತಿ ಕದಿಯಲು ನಡೆಸುವ ಪ್ರಯತ್ನವೂ ಒಂದಿದೆ; ಅದನ್ನು ‘ವಿಶಿಂಗ್’ (ವಾಯ್ಸ್, ಅಂದರೆ ಧ್ವನಿ ರೂಪದ ಫಿಶಿಂಗ್) ಎಂದು ಕರೆಯುತ್ತಾರೆ.
ವಿವಿಧ ಮೂಲಗಳಿಂದ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಬ್ಯಾಂಕು, ಕ್ರೆಡಿಟ್ ಕಾರ್ಡ್ ಸಂಸ್ಥೆ, ವಿಮಾ ಕಂಪನಿಗಳ ಹೆಸರಿನಲ್ಲಿ ಅವರಿಗೆಲ್ಲ ಕರೆಮಾಡುವುದು ಈ ಹಗರಣದ ಮೊದಲ ಹೆಜ್ಜೆ. ಖಾತೆ ಬ್ಲಾಕ್ ಆಗಿದೆಯೆಂದೋ, ಉಚಿತ ಕೊಡುಗೆ – ಬಹುಮಾನ ನೀಡುತ್ತೇವೆಂದೋ ಹೇಳಿ ಖಾತೆಯ ವಿವರ ಕೇಳುವ ವಂಚಕರು ತಮಗೆ ಬೇಕಾದ ಮಾಹಿತಿ ಸಿಕ್ಕ ಕೂಡಲೇ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಸುಳ್ಳು ಹೇಳಿ ತಮ್ಮ ಖಾತೆಗೆ ಹಣ ಹಾಕಿಸಿಕೊಳ್ಳುವುದು, ನಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯುವುದು, ತಮ್ಮ ಶಾಪಿಂಗಿಗೆ ನಮ್ಮ ಕ್ರೆಡಿಟ್ ಕಾರ್ಡ್ ಬಳಸುವುದೆಲ್ಲ ಈ ವಂಚನೆಯ ಪರಿಣಾಮಗಳೇ.
ಹೀಗಾಗಿ ಅಪರಿಚಿತ ವಿಳಾಸಗಳಿಂದ ಬರುವ ಇಮೇಲ್ ಸಂದೇಶಗಳ ಬಗೆಗೆ ಇರುವಷ್ಟೇ ಎಚ್ಚರ ಅಪರಿಚಿತ ಸಂಖ್ಯೆಗಳಿಂದ ಬರುವ ದೂರವಾಣಿ ಕರೆಗಳ ಬಗೆಗೂ ಇರಬೇಕು. ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್ ಮಾಹಿತಿ, ಪಾಸ್‌ವರ್ಡ್, ಓಟಿಪಿ ಮುಂತಾದ ವಿವರಗಳನ್ನು ಯಾವ ಕಾರಣಕ್ಕೂ ಯಾರೊಡನೆಯೂ ಹಂಚಿಕೊಳ್ಳದಿರುವುದು ಒಳ್ಳೆಯದು.

Video on Demand

ವೀಡಿಯೋ ಆನ್ ಡಿಮ್ಯಾಂಡ್
Kannada Equivalent: (ರೂಪಿಸಬೇಕಿದೆ)
Short Description : ಲಭ್ಯವಿರುವ ಚಲನಚಿತ್ರ ಹಾಗೂ ಇತರ ಕಾರ್ಯಕ್ರಮಗಳ ಪೈಕಿ ನಮಗಿಷ್ಟವಾದುದನ್ನು ನಮಗಿಷ್ಟಬಂದಾಗ ನೋಡಲು ಅನುವುಮಾಡಿಕೊಡುವ ವ್ಯವಸ್ಥೆ
Long Description: ಚಲನಚಿತ್ರವಾಗಲಿ ಟೀವಿ ಕಾರ್ಯಕ್ರಮವಾಗಲಿ ಅದು ಪ್ರಸಾರವಾಗುವ ಸಮಯದಲ್ಲಷ್ಟೇ ನೋಡಬೇಕಾದ್ದು ಅನಿವಾರ್ಯ. ಟೀವಿಯಲ್ಲಂತೂ ನೋಡಲು ಇಷ್ಟವಾಗುವಂತಹ ಕಾರ್ಯಕ್ರಮ ಸಿಗುವವರೆಗೂ ಚಾನಲ್ಲುಗಳನ್ನು ಬದಲಿಸುತ್ತಾ ಹೋಗುವುದು ನಮಗೆಲ್ಲ ಚೆನ್ನಾಗಿಯೇ ಅಭ್ಯಾಸವಾಗಿಬಿಟ್ಟಿದೆ.
ಈ ಪರಿಸ್ಥಿತಿ ಬದಲಿಸಿ, ನಮ್ಮ ಆಯ್ಕೆಯ ಕಾರ್ಯಕ್ರಮವನ್ನು ನಮಗೆ ಬೇಕಾದಾಗ ನೋಡಲು ಅನುವುಮಾಡಿಕೊಟ್ಟಿರುವುದು ವೀಡಿಯೋ ಆನ್ ಡಿಮ್ಯಾಂಡ್ ಎಂಬ ಪರಿಕಲ್ಪನೆ. ಲಭ್ಯವಿರುವ ಚಲನಚಿತ್ರ ಹಾಗೂ ಇತರ ಕಾರ್ಯಕ್ರಮಗಳ ಪೈಕಿ ನಮಗಿಷ್ಟವಾದುದನ್ನು ಆರಿಸಿಕೊಂಡು ಟಿವಿ, ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಮೂಲಕ ನೋಡುವುದನ್ನು ಈ ಪರಿಕಲ್ಪನೆ ಸಾಧ್ಯವಾಗಿಸುತ್ತದೆ.
ಇಂತಹ ಸೌಲಭ್ಯ ಬಳಸಲು ಬಹಳಷ್ಟು ಸಾರಿ ನಿರ್ದಿಷ್ಟ ಶುಲ್ಕ ನೀಡಬೇಕಾಗುತ್ತದೆ. ತಿಂಗಳು – ವರ್ಷದ ಲೆಕ್ಕದಲ್ಲಿ ಚಂದಾಹಣ ಪಾವತಿಸಿ ಸದಸ್ಯತ್ವ ಪಡೆದುಕೊಳ್ಳುವುದೂ ಸಾಧ್ಯ. ಕೆಲ ಕಾರ್ಯಕ್ರಮಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಗಳೂ ಇವೆ. ಡಿಟಿಎಚ್ ವ್ಯವಸ್ಥೆಗಳಲ್ಲಿ, ವಿಮಾನದೊಳಗಿನ ಮನರಂಜನಾ ವ್ಯವಸ್ಥೆಗಳಲ್ಲೂ ವೀಡಿಯೋ ಆನ್ ಡಿಮ್ಯಾಂಡ್ ಪರಿಕಲ್ಪನೆ ಬಳಕೆಯಾಗುತ್ತದೆ.

Vaporware

ವೇಪರ್‌ವೇರ್
Kannada Equivalent: (ರೂಪಿಸಬೇಕಿದೆ)
Short Description : ವಿಪರೀತ ಸುದ್ದಿಮಾಡಿ ಆಮೇಲೆ ಸದ್ದಿಲ್ಲದೆ ಮರೆಯಾಗುವ ತಂತ್ರಜ್ಞಾನದ ಉತ್ಪನ್ನಗಳನ್ನು ಗುರುತಿಸಲು ಬಳಕೆಯಾಗುವ ಹೆಸರು
Long Description: ತಂತ್ರಜ್ಞಾನದ ಲೋಕದಲ್ಲಿ ಸದಾಕಾಲವೂ ಹೊಸ ಸಂಗತಿಗಳದೇ ಭರಾಟೆ. ಪ್ರತಿದಿನವೂ ಒಂದಲ್ಲ ಒಂದು ಹೊಸ ಯಂತ್ರಾಂಶ ಅಥವಾ ತಂತ್ರಾಂಶದ ಸುದ್ದಿ ಇಲ್ಲಿ ಕೇಳಸಿಗುತ್ತಲೇ ಇರುತ್ತದೆ.
ಆದರೆ ಹಾಗೆ ಸುದ್ದಿಮಾಡುವ ಎಲ್ಲ ಉತ್ಪನ್ನಗಳೂ ಹೇಳಿದ ಸಮಯಕ್ಕೆ ಮಾರುಕಟ್ಟೆಗೆ ಬರುವುದಿಲ್ಲ. ಈ ಪೈಕಿ ಕೆಲ ಉತ್ಪನ್ನಗಳು ಮಾರುಕಟ್ಟೆಗೆ ಬರುವುದು ತೀರಾ ನಿಧಾನವಾದರೆ ಇನ್ನು ಕೆಲವು ಪತ್ರಿಕಾಗೋಷ್ಠಿಯಿಂದಾಚೆಗೆ ಎಲ್ಲಿಯೂ ಕಾಣಿಸಿಕೊಳ್ಳುವುದೇ ಇಲ್ಲ. ವಿಪರೀತ ಸುದ್ದಿಮಾಡಿ ಆಮೇಲೆ ಸದ್ದಿಲ್ಲದೆ ಆವಿಯಾಗಿಬಿಡುತ್ತವಲ್ಲ, ಇಂತಹ ಉತ್ಪನ್ನಗಳನ್ನು ತಾಂತ್ರಿಕ ಪರಿಭಾಷೆಯಲ್ಲಿ ‘ವೇಪರ್‌ವೇರ್’ ಎಂದು ಕರೆಯುತ್ತಾರೆ (ವೇಪರ್ = ಆವಿ).
ಕೆಲವರ್ಷಗಳ ಹಿಂದೆ ವಿಪರೀತ ಸುದ್ದಿಮಾಡಿದ್ದ, ಹಾಗೂ ವಿಪರೀತ ತಡವಾಗಿ ಮಾರುಕಟ್ಟೆಗೆ ಬಂದ ಆಕಾಶ್ ಟ್ಯಾಬ್ಲೆಟ್ ಅನ್ನು ವೇಪರ್‌ವೇರ್ ಉದಾಹರಣೆಯೆಂದು ಕರೆಯಬಹುದು. ಎರಡುನೂರ ಐವತ್ತೊಂದು ರೂಪಾಯಿಗಳಿಗೆ ಮೊಬೈಲ್ ಕೊಡುವುದಾಗಿ ಹೇಳಿ ಪುಕ್ಕಟೆ ಪ್ರಚಾರ ಗಳಿಸಿಕೊಂಡ ‘ಫ್ರೀಡಮ್ ೨೫೧’ ಕೂಡ ಇದೇ ಗುಂಪಿಗೆ ಸೇರುವ ಇನ್ನೊಂದು ಉತ್ಪನ್ನ.
ಅಂದಹಾಗೆ ಒಂದು ಸಮಯದಲ್ಲಿ ವೇಪರ್‌ವೇರ್ ಎಂದು ಕರೆಸಿಕೊಂಡ ಉತ್ಪನ್ನ ಇಲ್ಲವೇ ತಂತ್ರಜ್ಞಾನ ಆನಂತರದಲ್ಲಿ ಯಶಸ್ವಿಯಾಗಬಾರದು ಎಂದೇನೂ ಇಲ್ಲ. ಏಕೆಂದರೆ ೩ಜಿ ಹಾಗೂ ಬ್ಲೂಟೂತ್ ತಂತ್ರಜ್ಞಾನಗಳನ್ನೂ ಒಂದು ಕಾಲದಲ್ಲಿ ವೇಪರ್‌ವೇರ್ ಎಂದು ಗುರುತಿಸಲಾಗಿತ್ತು!

Wearable

ವೇರಬಲ್
Kannada Equivalent: (ರೂಪಿಸಬೇಕಿದೆ)
Short Description : ವಾಚುಗಳು, ಕನ್ನಡಕ, ಆಭರಣ, ಬಟ್ಟೆ ಸೇರಿದಂತೆ ವಿವಿಧ ರೂಪಗಳಲ್ಲಿರಬಹುದಾದ, ಧರಿಸಬಹುದಾದ, ಕಂಪ್ಯೂಟರ್
Long Description: ಈಗ ಎಲ್ಲೆಲ್ಲೂ ಕಂಪ್ಯೂಟರುಗಳೇ: ಕಚೇರಿಯಲ್ಲಿ, ಮನೆಯ ಮೇಜಿನ ಮೇಲೆ ಇರುವುದು ಸಾಲದೆಂದು ಈಗ ಕಾರಿನೊಳಗೂ ಕಂಪ್ಯೂಟರ್ ಇದೆ. ಮನೆಯ ಟೀವಿ – ಅಂಗೈಯ ಮೊಬೈಲುಗಳೂ ಕಂಪ್ಯೂಟರುಗಳಾಗಿಬಿಟ್ಟಿವೆ. ಇಷ್ಟೆಲ್ಲ ಆದಮೇಲೆ ನಮ್ಮ ಮೈಮೇಲೂ ಕಂಪ್ಯೂಟರುಗಳಿದ್ದರೆ ಏನು ತಪ್ಪು?
ತಂತ್ರಜ್ಞಾನ ಜಗತ್ತಿನಲ್ಲಿ ಆಗಿಂದಾಗ್ಗೆ ಕೇಳಿಬರುವ ‘ವೇರಬಲ್’ ಅಥವಾ ‘ವೇರಬಲ್ ಕಂಪ್ಯೂಟರ್’ ಎನ್ನುವ ಹೆಸರು ಹೀಗೆ ಧರಿಸಬಹುದಾದ ಕಂಪ್ಯೂಟರುಗಳನ್ನು ಸೂಚಿಸುತ್ತದೆ. ವಾಚುಗಳು, ಕನ್ನಡಕ, ಆಭರಣ, ಬಟ್ಟೆ – ಹೀಗೆ ವೇರಬಲ್ ಕಂಪ್ಯೂಟರುಗಳು ಹಲವು ರೂಪಗಳಲ್ಲಿರುವುದು ಸಾಧ್ಯ.
ವೇರಬಲ್ ಕಂಪ್ಯೂಟರುಗಳ ಪೈಕಿ ಸ್ಮಾರ್ಟ್‌ವಾಚುಗಳು ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿವೆ. ಮೊಬೈಲಿಗೆ ಬರುವ ಕರೆಗಳ, ಇಮೇಲ್ ಮತ್ತಿತರ ಸಂದೇಶಗಳನ್ನು ಪ್ರದರ್ಶಿಸುವುದಷ್ಟೇ ಅಲ್ಲದೆ ದೈಹಿಕ ಚಟುವಟಿಕೆಗಳ ಕುರಿತು (ಎಷ್ಟು ವ್ಯಾಯಾಮ ಮಾಡಿದ್ದೇವೆ, ಎಷ್ಟು ಹೊತ್ತು ನಿದ್ರಿಸಿದ್ದೇವೆ ಇತ್ಯಾದಿ) ಮಾಹಿತಿಯನ್ನೂ ನೀಡುವುದು ಈ ವಾಚುಗಳ ವೈಶಿಷ್ಟ್ಯ. ದೈಹಿಕ ಚಟುವಟಿಕೆಗಳ ಬಗೆಗಷ್ಟೇ ಗಮನಹರಿಸುವ ಫಿಟ್‌ನೆಸ್ ಟ್ರಾಕರ್‌ಗಳೆಂಬ (ನೋಡಲು ಕೈಗಡಿಯಾರದಂತೆಯೇ ಕಾಣುವ) ಸಾಧನಗಳೂ ಇವೆ. ಈ ಸಾಧನಗಳು ಮಾಡುವ ಕೆಲ ಕೆಲಸಗಳನ್ನು ಹೈಟೆಕ್ ಆಭರಣಗಳಿಗೆ – ಉಡುಪುಗಳಿಗೆ ವಹಿಸಿಕೊಡುವ ಪ್ರಯತ್ನಗಳೂ ನಡೆದಿವೆ.
ಅಂದಹಾಗೆ ವೇರಬಲ್ ಕಂಪ್ಯೂಟರುಗಳು ವೈಯಕ್ತಿಕ ಬಳಕೆಗಷ್ಟೇ ಸೀಮಿತವೇನಲ್ಲ. ಕಾರ್ಖಾನೆ ತಪಾಸಣೆ, ಯಂತ್ರಗಳ ನಿರ್ವಹಣೆ, ಮಿಲಿಟರಿ ಮುಂತಾದ ಕ್ಷೇತ್ರಗಳಲ್ಲೂ ಹಲಬಗೆಯ ವೇರಬಲ್ ಕಂಪ್ಯೂಟರುಗಳು ಬಳಕೆಯಾಗುತ್ತವೆ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App