भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Mail Server

ಮೇಲ್ ಸರ್ವರ್
Kannada Equivalent: (ರೂಪಿಸಬೇಕಿದೆ)
Short Description : ಬಳಕೆದಾರರು ಕಳಿಸಿದ ಇಮೇಲ್ ಸಂದೇಶಗಳನ್ನು ವಿಳಾಸದಾರರಿಗೆ ತಲುಪಿಸಲು, ಬೇರೆಯವರಿಂದ ಬಂದ ಸಂದೇಶಗಳನ್ನು ಅವರಿಗೆ ತಲುಪಿಸಲು ಬಳಕೆಯಾಗುವ ಸರ್ವರ್
Long Description: ಜಾಲತಾಣದಲ್ಲಿರುವ ಮಾಹಿತಿ ಅಲ್ಲಿಗೆ ಭೇಟಿಕೊಡುವ ಗ್ರಾಹಕರ ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಕಾಣಿಸಿಕೊಳ್ಳಬೇಕೆಂದರೆ ಅದು ಯಾವುದೋ ಕಂಪ್ಯೂಟರಿನಿಂದ ಅಲ್ಲಿಗೆ ವರ್ಗಾವಣೆಯಾಗಬೇಕು. ಬಳಕೆದಾರರ ಬೇಡಿಕೆಯನ್ನು ಪಡೆದುಕೊಂಡು ಅವರಿಗೆ ಬೇಕಾದ ಮಾಹಿತಿಯನ್ನು ಪೂರೈಸುವ ಇಂತಹ ಕಂಪ್ಯೂಟರುಗಳನ್ನು ‘ಸರ್ವರ್’ಗಳೆಂದು ಕರೆಯುತ್ತಾರೆ.
ಇಮೇಲ್ ವ್ಯವಸ್ಥೆಯಲ್ಲಿಯೂ ಹೀಗೆಯೇ. ಬಳಕೆದಾರರು ಕಳಿಸಿದ ಸಂದೇಶಗಳನ್ನು ವಿಳಾಸದಾರರಿಗೆ ತಲುಪಿಸಲು, ಬೇರೆಯವರಿಂದ ಬಂದ ಸಂದೇಶಗಳನ್ನು ಅವರಿಗೆ ತಲುಪಿಸಲು ವಿಶೇಷ ಕಂಪ್ಯೂಟರುಗಳು ಬಳಕೆಯಾಗುತ್ತವೆ. ಇಂತಹ ಕಂಪ್ಯೂಟರುಗಳಿಗೆ ‘ಮೇಲ್ ಸರ್ವರ್’ ಅಥವಾ ‘ಇಮೇಲ್ ಸರ್ವರ್’ಗಳೆಂದು ಹೆಸರು.
ಎಸ್‌ಎಂಟಿಪಿ, ಐಎಂಎಪಿ, ಪಿಓಪಿ೩ ಮುಂತಾದ ನಿರ್ದಿಷ್ಟ ಶಿಷ್ಟಾಚಾರಗಳನ್ನು (ಪ್ರೋಟೋಕಾಲ್) ಪಾಲಿಸುವ ಮೂಲಕ ಇವು ಇಮೇಲ್ ಸಂದೇಶಗಳ ವಿನಿಮಯವನ್ನು ಸಾಧ್ಯವಾಗಿಸುತ್ತವೆ. ಈ ಪೈಕಿ ಇಮೇಲ್ ಸಂದೇಶಗಳನ್ನು ರವಾನಿಸಲು ಎಸ್‌ಎಂಟಿಪಿ (ಸಿಂಪಲ್ ಮೇಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್) ಬಳಕೆಯಾದರೆ ಸಂದೇಶಗಳನ್ನು ಪಡೆದುಕೊಳ್ಳಲು ಐಎಂಎಪಿ (ಇಂಟರ್‌ನೆಟ್ ಮೆಸೇಜ್ ಆಕ್ಸೆಸ್ ಪ್ರೋಟೋಕಾಲ್ – ಐಮ್ಯಾಪ್) ಹಾಗೂ ಪಿಓಪಿ೩ (ಪೋಸ್ಟ್ ಆಫೀಸ್ ಪ್ರೋಟೋಕಾಲ್೩ – ಪಾಪ್೩) ಬಳಕೆಯಾಗುತ್ತವೆ.
ಇಮೇಲ್ ಸಂದೇಶಗಳನ್ನಷ್ಟೇ ಅಲ್ಲ, ಇಮೇಲ್ ವಿಳಾಸಗಳನ್ನು ನಿಭಾಯಿಸುವುದೂ ಈ ಕಂಪ್ಯೂಟರಿನದೇ ಕೆಲಸ. ಇಲ್ಲಿರುವ ಮೇಲ್ ಸರ್ವರ್ ತಂತ್ರಾಂಶ ಹೊಸ ಇಮೇಲ್ ವಿಳಾಸಗಳನ್ನು ರೂಪಿಸುವುದು ಹಾಗೂ ಬಳಸುವುದನ್ನು ಸಾಧ್ಯವಾಗಿಸುತ್ತದೆ. ಜಿಮೇಲ್‌ನಂತಹ ಜಾಲತಾಣಗಳನ್ನು, ಔಟ್‌ಲುಕ್‌ನಂತಹ ತಂತ್ರಾಂಶಗಳನ್ನು ಇಮೇಲ್ ಗ್ರಾಹಕರಾದ ನಾವು ಬಳಸುತ್ತೇವಲ್ಲ, ಅವನ್ನು ಇಮೇಲ್ ಕ್ಲೈಂಟ್‌ಗಳೆಂದು ಗುರುತಿಸಲಾಗುತ್ತದೆ.

Micro PC

ಮೈಕ್ರೋ ಪಿಸಿ
Kannada Equivalent: (ರೂಪಿಸಬೇಕಿದೆ)
Short Description : ಪೆನ್‌ಡ್ರೈವ್‌ನಂತಹ ಸಾಧನದೊಳಗೆ ಅಡಕವಾಗಿರುವ ಕಂಪ್ಯೂಟರ್
Long Description: ಕಂಪ್ಯೂಟರುಗಳು ಮೊದಲಿಗೆ ಕಾಣಿಸಿಕೊಂಡಾಗ ಕೋಣೆಯ ತುಂಬ ತುಂಬಿಕೊಂಡಿರುತ್ತಿದ್ದವಂತೆ. ಆಮೇಲೆ ನಿಧಾನಕ್ಕೆ ಅವುಗಳ ಗಾತ್ರ ಕಡಿಮೆಯಾಗುತ್ತ ಬಂದು ಈಗ ಲ್ಯಾಪ್‌ಟಾಪು, ಟ್ಯಾಬ್ಲೆಟ್ಟು, ಸ್ಮಾರ್ಟ್‌ಫೋನುಗಳೆಲ್ಲ ನಮ್ಮನ್ನು ತಲುಪಿವೆ.
ಕಂಪ್ಯೂಟರಿನ ಗಾತ್ರ ಇದಕ್ಕಿಂತ ಚಿಕ್ಕದಾದರೆ ಹೇಗಿರಬಹುದು? ಮನೆಯ ಟೀವಿಗೆ ಪೆನ್‌ಡ್ರೈವ್ ಜೋಡಿಸಿ ಫೋಟೋ – ವೀಡಿಯೋ ನೋಡಿದಂತೆ ಈ ಪುಟ್ಟ ಕಂಪ್ಯೂಟರನ್ನು ಚುಚ್ಚಿ ಟೀವಿಯನ್ನೇ ಕಂಪ್ಯೂಟರ್ ಮಾಡಿಕೊಂಡುಬಿಡಬಹುದು!
ವಿಚಿತ್ರವೆನಿಸುವ ಈ ಆಲೋಚನೆಯನ್ನು ಸಾಧ್ಯವಾಗಿಸಿರುವುದು ‘ಮೈಕ್ರೋ ಪಿಸಿ’ಗಳು. ಈ ಪುಟ್ಟ ಕಂಪ್ಯೂಟರುಗಳನ್ನು ಎಚ್‌ಡಿಎಂಐ ಪೋರ್ಟ್ (ಎಚ್‌ಡಿ ಸೆಟ್‌ಟಾಪ್ ಬಾಕ್ಸ್ ಜೋಡಿಸಲು ಬಳಕೆಯಾಗುತ್ತದಲ್ಲ, ಯುಎಸ್‌ಬಿ ಪೋರ್ಟ್‌ನಂತಹುದೇ ಕಿಂಡಿ) ಇರುವ ಯಾವುದೇ ಟೀವಿಗೆ ಸುಲಭವಾಗಿ ಜೋಡಿಸಬಹುದು. ಈ ಸಾಧನ, ಅಂತರಜಾಲ ಸಂಪರ್ಕ ಹಾಗೂ ಕೀಬೋರ್ಡ್ – ಮೌಸ್ ಇದ್ದರೆ ಸಾಕು, ಮನೆಯ ಟೀವಿಯೇ ಕಂಪ್ಯೂಟರ್ ಆಗಿ ಬದಲಾಗುತ್ತದೆ (ಮೈಕ್ರೋ ಪಿಸಿಗೆ ವಿದ್ಯುತ್ ಸಂಪರ್ಕ ನೀಡಲು ಪ್ರತ್ಯೇಕ ಅಡಾಪ್ಟರ್ ಅನ್ನೂ ಬಳಸಬೇಕು).
ಮೈಕ್ರೋ ಪಿಸಿಗಳ ಶೇಖರಣಾ ಸಾಮರ್ಥ್ಯ ಕಡಿಮೆಯಿರುವುದರಿಂದ ತಂತ್ರಾಂಶಗಳೂ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಅವು ಅಂತರಜಾಲ ಸಂಪರ್ಕವನ್ನು ಅವಲಂಬಿಸಿರುತ್ತವೆ. ಇದೇ ಕಾರಣದಿಂದಾಗಿ ದೊಡ್ಡಗಾತ್ರದ ಕಡತಗಳನ್ನು ಕಂಪ್ಯೂಟರಿನ ಹೊರಗೆ (ಪೆನ್‌ಡ್ರೈವ್, ಹಾರ್ಡ್ ಡಿಸ್ಕ್, ಗೂಗಲ್ ಡ್ರೈವ್ ಮುಂತಾದೆಡೆ) ಉಳಿಸಿಡಬೇಕಾದ್ದು ಅನಿವಾರ್ಯ.
ಇಂಟೆಲ್‌ನ ‘ಕಂಪ್ಯೂಟ್ ಸ್ಟಿಕ್’, ಗೂಗಲ್‌ನ ‘ಕ್ರೋಮ್‌ಬಿಟ್’ ಸೇರಿದಂತೆ ಅನೇಕ ಮಾದರಿಯ ಮೈಕ್ರೋ ಪಿಸಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ದೊರಕುತ್ತಿವೆ.

Microsite

ಮೈಕ್ರೋಸೈಟ್
Kannada Equivalent: (ರೂಪಿಸಬೇಕಿದೆ)
Short Description : ಸಂಸ್ಥೆಯೊಂದರ ಮೂಲ ಜಾಲತಾಣಕ್ಕೆ ಪೂರಕವಾಗಿ ರೂಪಿಸಲಾಗಿರುವ ಜಾಲತಾಣ; ಇವುಗಳಲ್ಲಿ ಆ ಸಂಸ್ಥೆಯ ನಿರ್ದಿಷ್ಟ ಚಟುವಟಿಕೆಯೊಂದಕ್ಕೆ ಸಂಬಂಧಪಟ್ಟ ಮಾಹಿತಿ ಮಾತ್ರ ಇರುತ್ತದೆ.
Long Description: ವಾಣಿಜ್ಯ ಸಂಸ್ಥೆಗಳು ವಿವಿಧ ಉದ್ದೇಶಗಳಿಗಾಗಿ ಜಾಲತಾಣ, ಅಂದರೆ ವೆಬ್‌ಸೈಟ್‌ಗಳನ್ನು ನಿರ್ಮಿಸಿಕೊಳ್ಳುವುದು ನಮಗೆ ಗೊತ್ತೇ ಇದೆ. ಆಯಾ ಸಂಸ್ಥೆಗೆ ಸಂಬಂಧಪಟ್ಟ ಒಂದಷ್ಟು ಸಾಮಾನ್ಯ ಮಾಹಿತಿ ಇಂತಹ ತಾಣಗಳಲ್ಲಿರುತ್ತದೆ.
ಇದರ ಜೊತೆಗೆ ವಿಶೇಷ ಸನ್ನಿವೇಶಗಳಲ್ಲಿ ಮಾತ್ರವೇ ಪ್ರಸ್ತುತವೆನಿಸುವ (ಉದಾ: ಕಾರ್ಯಕ್ರಮಗಳನ್ನು ಆಯೋಜಿಸಿದಾಗ, ಕೊಡುಗೆಗಳನ್ನು ಘೋಷಿಸಿದಾಗ) ಮಾಹಿತಿಯನ್ನೂ ಪ್ರಕಟಿಸಬೇಕಾದ ಅಗತ್ಯ ಸಂಸ್ಥೆಗಳಿಗೆ ಆಗಾಗ್ಗೆ ಒದಗಿಬರುವುದು ಸಾಧ್ಯ. ಇಂತಹ ಮಾಹಿತಿ ಪ್ರಕಟಿಸಲು ಅವು ರೂಪಿಸಿಕೊಳ್ಳುವ ಹೊಸ ಜಾಲತಾಣಗಳನ್ನು ‘ಮೈಕ್ರೋಸೈಟ್’ ಎಂದು ಗುರುತಿಸುತ್ತಾರೆ. ಉಚಿತ ಕೊಡುಗೆ ಪಡೆಯಲಿಕ್ಕೋ ಯಾವುದೋ ಸ್ಪರ್ಧೆಯಲ್ಲಿ ಭಾಗವಹಿಸಲಿಕ್ಕೋ ಇಂತಹ ಜಾಲತಾಣಕ್ಕೆ ಹೋಗಿ ಎಂದು ಸಂಸ್ಥೆಗಳು ಜಾಹೀರಾತು ನೀಡುತ್ತವಲ್ಲ, ಅಂತಹ ಬಹುತೇಕ ತಾಣಗಳು ಮೈಕ್ರೋಸೈಟ್‌ಗಳೇ ಆಗಿರುತ್ತವೆ.
ಮೂಲ ಸಂಸ್ಥೆಯ ಒಡೆತನದಲ್ಲಿರುವ ಜಾಲತಾಣವೇ ಆದರೂ ಮೈಕ್ರೋಸೈಟ್‌ಗಳಲ್ಲಿರುವುದು ಆ ಸಂಸ್ಥೆಯ ನಿರ್ದಿಷ್ಟ ಚಟುವಟಿಕೆಯೊಂದಕ್ಕೆ ಸಂಬಂಧಪಟ್ಟ ಮಾಹಿತಿ ಮಾತ್ರ. ಮೂಲ ಜಾಲತಾಣಕ್ಕೆ ಹೋಲಿಸಿದರೆ ಮೈಕ್ರೋಸೈಟ್‌ನಲ್ಲಿರುವ ಪುಟಗಳ ಸಂಖ್ಯೆಯೂ ಕಡಿಮೆಯೇ. ಕೆಲವು ಮೈಕ್ರೋಸೈಟ್‌ಗಳು ಸಂಸ್ಥೆಯ ಜಾಲತಾಣದ ಸಬ್‌ಡೊಮೈನ್ ಅನ್ನು ಬಳಸಿದರೆ ಇನ್ನು ಕೆಲವು ಮೈಕ್ರೋಸೈಟ್‌ಗಳಿಗೆ ತಮ್ಮದೇ ಆದ ಪ್ರತ್ಯೇಕ ಡೊಮೈನ್ ನೇಮ್ ಇರುತ್ತದೆ.
ಮೈಕ್ರೋಸೈಟ್‌ಗಳನ್ನು ‘ಮಿನಿಸೈಟ್’ಗಳೆಂದು ಗುರುತಿಸುವ ಅಭ್ಯಾಸವೂ ಇದೆ. ಅಂದಹಾಗೆ ವೆಬ್‌ಸೈಟ್-ಮೈಕ್ರೋಸೈಟ್-ಮಿನಿಸೈಟ್‌ಗಳ ನಡುವಿನ ವ್ಯತ್ಯಾಸವೆಲ್ಲ ಏನಿದ್ದರೂ ಅವುಗಳ ಉದ್ದೇಶದಲ್ಲಿ ಮಾತ್ರ. ತಾಂತ್ರಿಕವಾಗಿ ಅವೆಲ್ಲವೂ ವೆಬ್‌ಸೈಟ್‌ಗಳೇ.

Modem

ಮೋಡೆಮ್
Kannada Equivalent: (ರೂಪಿಸಬೇಕಿದೆ)
Short Description : ‘ಮಾಡ್ಯುಲೇಟರ್-ಡಿಮಾಡ್ಯುಲೇಟರ್’ ಎನ್ನುವುದರ ಸಂಕ್ಷಿಪ್ತ ರೂಪ; ಅಂತರಜಾಲ ಸಂಪರ್ಕ ಪಡೆಯಲು ಅತ್ಯಗತ್ಯವಾಗಿ ಬೇಕಾದ ಸಾಧನ
Long Description: ಅಂತರಜಾಲ ಸಂಪರ್ಕ ಸಾಧಿಸಲು ಅತ್ಯಗತ್ಯವಾಗಿ ಬೇಕಾದ ಸಾಧನ ಮೋಡೆಮ್. ಈಗ ಹಲವು ಬಗೆಯ ಅಂತರಜಾಲ ಸಂಪರ್ಕಗಳನ್ನು ಪಡೆಯುವುದು ಸಾಧ್ಯವಿದೆಯಲ್ಲ, ಅಂತಹ ಪ್ರತಿಯೊಂದು ಬಗೆಯ ಸಂಪರ್ಕದಲ್ಲೂ ಅದಕ್ಕೆ ಸೂಕ್ತವಾದ ಮೋಡೆಮ್ ಬಳಕೆ ಅನಿವಾರ್ಯ.
ಮೋಡೆಮ್ ಎಂಬ ಹೆಸರು ‘ಮಾಡ್ಯುಲೇಟರ್-ಡಿಮಾಡ್ಯುಲೇಟರ್’ ಎನ್ನುವುದರ ಸಂಕ್ಷಿಪ್ತ ರೂಪ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಇತ್ಯಾದಿಗಳಿಂದ ಹೊರಹೋಗುವ ಡಿಜಿಟಲ್ ಮಾಹಿತಿಯನ್ನು ಅನಲಾಗ್ ರೂಪಕ್ಕೆ ಬದಲಿಸುವುದು, ಹಾಗೂ ಅನಲಾಗ್ ರೂಪದಲ್ಲಿ ಒಳಬರುವ ಮಾಹಿತಿಯನ್ನು ಕಂಪ್ಯೂಟರಿಗೆ ಅರ್ಥವಾಗುವ ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಈ ಸಾಧನದ ಕೆಲಸ.
ಅಂತರಜಾಲ ಬಂದ ಹೊಸತರಲ್ಲಿ ಮನೆಯಲ್ಲಿ ಇರುತ್ತಿದ್ದದ್ದು ಒಂದೇ ಕಂಪ್ಯೂಟರ್. ಮೋಡೆಮ್ ಸಂಪರ್ಕವನ್ನು ಅದಕ್ಕೆ ಜೋಡಿಸಿಬಿಟ್ಟರೆ ಕೆಲಸ ಅಷ್ಟಕ್ಕೇ ಮುಗಿಯುತ್ತಿತ್ತು. ಆದರೆ ಈಗ ‘ಸ್ಮಾರ್ಟ್’ ಸಾಧನಗಳು ಹೆಚ್ಚಾಗಿ ಮನೆತುಂಬಾ ಕಂಪ್ಯೂಟರುಗಳೇ ಆಗಿಬಿಟ್ಟಿವೆಯಲ್ಲ, ಹಾಗಾಗಿ ಅಂತರಜಾಲ ಸಂಪರ್ಕವನ್ನು ಅವಕ್ಕೆಲ್ಲ ಹಂಚಿಕೊಡುವ ಸಾಧನವೂ ಈಗ ಇರಬೇಕಾಗುತ್ತದೆ. ‘ರೂಟರ್’ ಎಂದು ಕರೆಯುವುದು ಇದೇ ಸಾಧನವನ್ನು. ವೈ-ಫೈ ಸೌಲಭ್ಯವಿರುವ ರೂಟರ್ ಅನ್ನು ಸಾಮಾನ್ಯ ಮೋಡೆಮ್‌ಗೆ ಜೋಡಿಸಿದರೆ ವೈ-ಫೈ ಸೌಲಭ್ಯ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.
ಮೋಡೆಮ್ ಹಾಗೂ ರೂಟರ್ ಎರಡರ ಕೆಲಸಗಳನ್ನೂ ಒಂದೇ ಸಾಧನ ಮಾಡುವುದು ಈಗ ಸಾಮಾನ್ಯ ಸಂಗತಿ. ನಮ್ಮ ಮನೆಗಳಲ್ಲಿ ವೈ-ಫೈ ಸೌಲಭ್ಯವಿರುತ್ತದಲ್ಲ, ಅಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸಿಕೊಡುವ ಮೋಡೆಮ್ ಹಾಗೂ ವೈ-ಫೈ ಮೂಲಕ ಬೇರೆಬೇರೆ ಸಾಧನಗಳಿಗೆ ಅದನ್ನು ಒದಗಿಸುವ ರೂಟರ್ ಎರಡೂ ಒಂದೇ ಸಾಧನದಲ್ಲಿ ಅಡಕವಾಗಿರುತ್ತದೆ. ಅಂತರಜಾಲ ಸಂಪರ್ಕ ಪಡೆದುಕೊಳ್ಳಲು, ಹಾಟ್‌ಸ್ಪಾಟ್ ಮೂಲಕ ಅದನ್ನು ಇತರ ಸಾಧನಗಳಿಗೆ ಹಂಚಲು ಇಂದಿನ ಸ್ಮಾರ್ಟ್‌ಫೋನುಗಳಲ್ಲೂ ಮೋಡೆಮ್-ರೂಟರ್ ಜೋಡಿ ಇರುತ್ತದೆ.

Mouse

ಮೌಸ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರ್ ಪರದೆಯ ಮೇಲೆ ಅತ್ತಿತ್ತ ಓಡಾಡಲು, ಕೊಂಡಿಗಳ ಮೇಲೆ ಕ್ಲಿಕ್ ಮಾಡಲು, ಕಡತಗಳನ್ನು ನಿಭಾಯಿಸಲು ನೆರವಾಗುವ ಸಾಧನ
Long Description: ವಿಶ್ವದೆಲ್ಲೆಡೆಯ ಕಂಪ್ಯೂಟರ್ ಬಳಕೆದಾರರ ಅಚ್ಚುಮೆಚ್ಚಿನ ಸಂಗಾತಿ ಮೌಸ್. ಕಂಪ್ಯೂಟರ್ ಪರದೆಯ ಮೇಲೆ ಅತ್ತಿತ್ತ ಓಡಾಡಲು, ಕೊಂಡಿಗಳ ಮೇಲೆ ಕ್ಲಿಕ್ ಮಾಡಲು, ಕಡತಗಳನ್ನು ನಿಭಾಯಿಸಲು ನೆರವಾಗುವ ಸಾಧನ ಇದು. ಕಂಪ್ಯೂಟರ್ ಬಳಕೆದಾರರು ಪಠ್ಯರೂಪದ ಆದೇಶಗಳನ್ನು ಟೈಪ್ ಮಾಡಬೇಕಿದ್ದ ಪರಿಸ್ಥಿತಿ (ಕ್ಯಾರೆಕ್ಟರ್ ಯೂಸರ್ ಇಂಟರ್‌ಫೇಸ್, ಸಿಯುಐ) ತಪ್ಪಿಸಿ ಚಿತ್ರಾತ್ಮಕ ಸಂಪರ್ಕ ಸಾಧನ (ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್, ಜಿಯುಐ) ಬಳಸುವುದನ್ನು ಸುಲಭವಾಗಿಸಿದ್ದು ಈ ಸಾಧನದ ಹೆಚ್ಚುಗಾರಿಕೆ.
ಗಟ್ಟಿಯಾದ ಯಾವುದೇ ಪದಾರ್ಥದ ಮೇಲೆ ಮೌಸ್ ಓಡಾಡಿಸಿದರೆ ಕಂಪ್ಯೂಟರ್ ಪರದೆಯ ಮೇಲಿನ ಮೌಸ್ ಪಾಯಿಂಟರ್ (ಕರ್ಸರ್) ಕೂಡ ಅದರಂತೆಯೇ ಓಡಾಡುವುದನ್ನು ನಾವು ನೋಡಿದ್ದೇವೆ. ಇಂದಿನ ಆಪ್ಟಿಕಲ್ ಮೌಸ್‌ಗಳಲ್ಲಿ ಇದು ಸಾಧ್ಯವಾಗುವುದು ಬೆಳಕಿನ ಕಿರಣಗಳ ಮೂಲಕ: ಮೌಸ್ ಕೆಳಬದಿಯಲ್ಲಿ ಹೊರಹೊಮ್ಮುವ ಬೆಳಕು ಅದರ ಚಲನೆಯನ್ನು ಗುರುತಿಸಲು ನೆರವಾಗುತ್ತದೆ (ಹಿಂದಿನ ಕಾಲದ ಮೌಸ್‌ಗಳಲ್ಲಿ ಪುಟ್ಟದೊಂದು ಚೆಂಡಿನಂತಹ ವಸ್ತು ಈ ಕೆಲಸವನ್ನು ಮಾಡುತ್ತಿತ್ತು).
ಚಲನೆಯನ್ನು ಗುರುತಿಸಿದ ಮೇಲೆ ಆ ಮಾಹಿತಿಯನ್ನು ಕಂಪ್ಯೂಟರಿಗೆ ಕಳಿಸಬೇಕಲ್ಲ, ಇಲಿಬಾಲದಂತಹ ವೈರು ಮೌಸ್‌ಗೂ ಕಂಪ್ಯೂಟರಿಗೂ ಸಂಪರ್ಕ ಕಲ್ಪಿಸುವುದು ಇದೇ ಕೆಲಸಕ್ಕಾಗಿ. ಬಾಲವಿಲ್ಲದ ವೈರ್‌ಲೆಸ್ ಮೌಸ್‌ಗಳಲ್ಲಿ ರೇಡಿಯೋ ಅಲೆಗಳು ಈ ಕೆಲಸ ಮಾಡುತ್ತವೆ. ಇಂತಹ ಮೌಸ್‌ಗಳಿಂದ ಕಳಿಸಲಾಗುವ ಮಾಹಿತಿಯನ್ನು ಯುಎಸ್‌ಬಿ ಮೂಲಕ ಕಂಪ್ಯೂಟರಿಗೆ ಜೋಡಿಸಲಾದ ಪುಟಾಣಿ ರಿಸೀವರ್ ಪಡೆದುಕೊಳ್ಳುತ್ತದೆ. ಬ್ಲೂಟೂತ್ ಸಂಪರ್ಕ ಬಳಸಿಕೊಳ್ಳುವ ಮೌಸ್‌ಗಳೂ ಇವೆ; ಇವನ್ನು ಬಳಸುವಾಗ ಕಂಪ್ಯೂಟರಿಗೆ ಪ್ರತ್ಯೇಕ ರಿಸೀವರ್ ಜೋಡಿಸುವ ಅಗತ್ಯ ಇರುವುದಿಲ್ಲ.
ಅಂದಹಾಗೆ ಮೌಸ್ ರೂಪಿಸಿದ್ದು ಡಗ್ಲಸ್ ಎಂಗೆಲ್‌ಬರ್ಟ್ ಎಂಬ ಅಮೆರಿಕನ್ ತಂತ್ರಜ್ಞ. ಆತ ಮೊತ್ತಮೊದಲ ಬಾರಿಗೆ ಮೌಸ್ ಕಾರ್ಯಾಚರಣೆಯನ್ನು ಪ್ರದರ್ಶಿಸಿದ್ದು ೧೯೬೮ರಲ್ಲಿ.

MAC Address

ಮ್ಯಾಕ್ ಅಡ್ರೆಸ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರಿನ ನೆಟ್‌ವರ್ಕ್ ಕಾರ್ಡ್ ಅನ್ನು ಪ್ರತ್ಯೇಕವಾಗಿ ಗುರುತಿಸಲು ಬಳಕೆಯಾಗುವ ವಿಳಾಸ
Long Description: ನಿಮ್ಮ ಕಂಪ್ಯೂಟರು ಜಾಲವೊಂದರ (ನೆಟ್‌ವರ್ಕ್) ಸಂಪರ್ಕಕ್ಕೆ ಬರಬೇಕಾದರೆ ಅದರಲ್ಲಿ ನೆಟ್‌ವರ್ಕ್ ಕಾರ್ಡ್ ಎಂಬ ಸಾಧನವೊಂದು ಇರಬೇಕು. ಇಂತಹ ಪ್ರತಿಯೊಂದು ಸಾಧನವನ್ನೂ ಪ್ರತ್ಯೇಕವಾಗಿ ಗುರುತಿಸಲು ಬಳಕೆಯಾಗುವ ವಿಳಾಸವೇ ‘ಮೀಡಿಯಾ ಆಕ್ಸೆಸ್ ಕಂಟ್ರೋಲ್ ಅಡ್ರೆಸ್’. ಹ್ರಸ್ವವಾಗಿ ಇದನ್ನೇ ‘ಮ್ಯಾಕ್ ಅಡ್ರೆಸ್’ ಎಂದು ಕರೆಯುತ್ತಾರೆ (ಇಲ್ಲಿ ಬಳಕೆಯಾಗಿರುವ ‘ಮ್ಯಾಕ್’ಗೂ ‘ಮ್ಯಾಕ್’ ಬ್ರಾಂಡಿನ ಕಂಪ್ಯೂಟರುಗಳಿಗೂ ಸಂಬಂಧವಿಲ್ಲ). B4-B6-76-B9-12-E3 ಇದು ಮ್ಯಾಕ್ ಅಡ್ರೆಸ್‌ಗೊಂದು ಉದಾಹರಣೆ.
ಯಂತ್ರಾಂಶ ಭಾಗವೊಂದನ್ನು ಗುರುತಿಸುವುದರಿಂದ ಇದನ್ನು ಯಂತ್ರಾಂಶ ವಿಳಾಸ (ಹಾರ್ಡ್‌ವೇರ್ ಅಡ್ರೆಸ್) ಎಂದೂ ಕರೆಯುವ ಅಭ್ಯಾಸವಿದೆ. ಫಿಸಿಕಲ್ ಅಡ್ರೆಸ್ ಎನ್ನುವುದೂ ಇದೇ ಮ್ಯಾಕ್ ಅಡ್ರೆಸ್‌ನ ಇನ್ನೊಂದು ಹೆಸರುಗಳು.
ಅಂತರಜಾಲದ ಸಂಪರ್ಕದಲ್ಲಿರುವ ಸಾಧನಗಳನ್ನು ಗುರುತಿಸಲು ಐಪಿ ಅಡ್ರೆಸ್ ಎಂಬ ವಿಳಾಸ ಬಳಕೆಯಾಗುತ್ತದಲ್ಲ, ಅದು ಮ್ಯಾಕ್ ಅಡ್ರೆಸ್‌ಗಿಂತ ಭಿನ್ನವಾದದ್ದು. ಬೇರೆಬೇರೆ ಅಂತರಜಾಲ ಸಂಪರ್ಕಗಳನ್ನು ಬಳಸುವಾಗ ನಮ್ಮ ಐಪಿ ವಿಳಾಸ ಬೇರೆಬೇರೆಯಾಗಿರುವುದು ಸಾಧ್ಯ; ಆದರೆ ಒಂದು ನೆಟ್‌ವರ್ಕ್ ಕಾರ್ಡಿನ ಮ್ಯಾಕ್ ಅಡ್ರೆಸ್ ಯಾವಾಗಲೂ ಒಂದೇ ಆಗಿರುತ್ತದೆ. ಒಂದು ಕಂಪ್ಯೂಟರಿನಲ್ಲಿ ಎರಡು ನೆಟ್‌ವರ್ಕ್ ಕಾರ್ಡುಗಳಿದ್ದ ಪಕ್ಷದಲ್ಲಿ (ಉದಾ: ಈಥರ್‌ನೆಟ್ ಕಾರ್ಡ್ ಮತ್ತು ವೈ-ಫೈ ಕಾರ್ಡ್) ಆ ಕಂಪ್ಯೂಟರಿನಲ್ಲಿ ಎರಡು ಮ್ಯಾಕ್ ಅಡ್ರೆಸ್‌ಗಳು ಬಳಕೆಯಾಗುವುದು ಸಾಧ್ಯ.

Music Streaming

ಮ್ಯೂಸಿಕ್ ಸ್ಟ್ರೀಮಿಂಗ್
Kannada Equivalent: (ರೂಪಿಸಬೇಕಿದೆ)
Short Description : ಡೌನ್‌ಲೋಡ್ ಮಾಡಿಕೊಳ್ಳುವ ಬದಲು ವಿಶ್ವವ್ಯಾಪಿ ಜಾಲದಲ್ಲೇ ಹಾಡುಗಳನ್ನು ಕೇಳಲು ಅನುವುಮಾಡಿಕೊಡುವ ವ್ಯವಸ್ಥೆ
Long Description: ಒಂದು ಕಾಲ ಇತ್ತು. ಹೊಸ ಸಿನಿಮಾ ಹಾಡನ್ನು ಬೇಕೆಂದಾಗ ಕೇಳಬೇಕಾದರೆ ಅಂಗಡಿಗೆ ಹೋಗಿ ಆಡಿಯೋ ಕ್ಯಾಸೆಟ್ ಕೊಳ್ಳಬೇಕಿತ್ತು. ಇಲ್ಲದಿದ್ದರೆ ರೇಡಿಯೋದಲ್ಲೋ ಟೀವಿಯ ಚಿತ್ರಹಾರ್ – ಚಿತ್ರಮಂಜರಿಗಳಲ್ಲೋ ನಮ್ಮ ಇಷ್ಟದ ಹಾಡು ಪ್ರಸಾರವಾಗುವುದನ್ನೇ ಕಾಯಬೇಕಿತ್ತು. ತಂತ್ರಜ್ಞಾನ ಬೆಳೆದಂತೆ ಸಿ.ಡಿ., ಡಿವಿಡಿಗಳು ಬಂದವು. ಎಂಪಿ೩ ಅಂತೂ ಹಾಡು ಕೇಳುವ ಅನುಭವವನ್ನು ಆಮೂಲಾಗ್ರವಾಗಿ ಬದಲಿಸಿಬಿಟ್ಟಿತು.
ಇದರ ಜೊತೆಯಲ್ಲೇ ಪೈರಸಿ ಪಿಡುಗು ಕೂಡ ಬೆಳೆಯಿತು. ನಕಲಿ ಸಿ.ಡಿ.ಗಳಷ್ಟೇ ಅಲ್ಲ, ಎಂಪಿ೩ಗಳನ್ನು ಗೆಳೆಯರಿಂದ ಕಾಪಿಮಾಡಿಕೊಳ್ಳುವ ಸರಳ ಅಭ್ಯಾಸ ಕೂಡ ಈ ಪಿಡುಗಿಗೆ ನೀರೆರೆಯಿತು ಎನ್ನಬಹುದು.
ಪೈರಸಿಗೆ ಪ್ರೋತ್ಸಾಹಿಸದೆಯೇ ಸೂಪರ್‌ಹಿಟ್ ಹಾಡುಗಳನ್ನು ಕೇಳುವ ಸೌಲಭ್ಯವನ್ನು ನಮಗೆ ಒದಗಿಸಿರುವುದು ಮ್ಯೂಸಿಕ್ ಸ್ಟ್ರೀಮಿಂಗ್ ತಾಣಗಳು. ಹಾಡನ್ನು ಡೌನ್‌ಲೋಡ್ ಮಾಡಿಕೊಳ್ಳಲು ಬಿಡದೆ ನಮಗೆ ಬೇಕಾದ ಹಾಡನ್ನು ವಿಶ್ವವ್ಯಾಪಿ ಜಾಲದಲ್ಲೇ ಕೇಳಿಸುವುದು ಈ ತಾಣಗಳ ವೈಶಿಷ್ಟ್ಯ. ಡೆಸ್ಕ್‌ಟಾಪ್-ಲ್ಯಾಪ್‌ಟಾಪ್‌ಗಳಲ್ಲಷ್ಟೇ ಏಕೆ, ಈ ಸೌಲಭ್ಯವನ್ನು ಮೊಬೈಲ್ ಆಪ್‌ಗಳ ಮೂಲಕವೂ ಪಡೆದುಕೊಳ್ಳುವುದು ಸಾಧ್ಯ. ಇಂತಹ ಅನೇಕ ಆಪ್‌ಗಳು ಇದೀಗ ನಮ್ಮ ದೇಶದಲ್ಲಿ ಜನಪ್ರಿಯವಾಗುತ್ತಿವೆ. ಅಷ್ಟೇ ಅಲ್ಲ, ಹಿಂದಿ – ಇಂಗ್ಲಿಷ್ ಜೊತೆಗೆ ಪ್ರಾದೇಶಿಕ ಭಾಷೆಗಳ ಹಾಡುಗಳನ್ನೂ ತಮ್ಮ ಗ್ರಾಹಕರಿಗೆ ಕೇಳಿಸುತ್ತಿವೆ.
ಇಂತಹ ಬಹುತೇಕ ಸೇವೆಗಳನ್ನು ಬಳಸಿ ಹಾಡು ಕೇಳಲು ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ (ಆದರೆ ಹಾಡು ಕೇಳುವ ಸಮಯದಲ್ಲಿ ಅಂತರಜಾಲ ಸಂಪರ್ಕ ಇರಲೇಬೇಕು). ಹಾಡುಗಳ ನಡುವೆ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೂಲಕ ಈ ತಾಣಗಳು ಹಣ ಸಂಪಾದಿಸುತ್ತವೆ, ಆ ಆದಾಯದ ಒಂದು ಭಾಗವನ್ನು ಹಾಡುಗಳ ಮೂಲ ಮಾಲೀಕರಿಗೂ ನೀಡುತ್ತವೆ. ಜಾಹೀರಾತು ಬೇಡ, ನಮ್ಮ ನೆಚ್ಚಿನ ಹಾಡುಗಳನ್ನು ಅಂತರಜಾಲ ಸೌಲಭ್ಯವಿಲ್ಲದಾಗಲೂ (ಆಫ್‌ಲೈನ್) ಕೇಳುವಂತಿರಬೇಕು ಎಂದೆಲ್ಲ ಹೇಳುವವರು ನಿರ್ದಿಷ್ಟ ಶುಲ್ಕಕ್ಕೆ ಪ್ರತಿಯಾಗಿ ಆ ಸೌಲಭ್ಯಗಳನ್ನೂ ಪಡೆದುಕೊಳ್ಳಬಹುದು.

USSD

ಯುಎಸ್‌ಎಸ್‌ಡಿ
Kannada Equivalent: (ರೂಪಿಸಬೇಕಿದೆ)
Short Description : ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ; ಜಿಎಸ್‌ಎಂ ಮೊಬೈಲ್ ಸೇವೆ ಒದಗಿಸುವ ಸಂಸ್ಥೆ ಹಾಗೂ ಗ್ರಾಹಕರ ನಡುವೆ ಮಾಹಿತಿ ಸಂವಹನಕ್ಕೆಂದು ಬಳಕೆಯಾಗುವ ಶಿಷ್ಟಾಚಾರಗಳಲ್ಲೊಂದು. ಇದನ್ನು ಬಳಸಲು ಅಂತರಜಾಲ ಸಂಪರ್ಕದ ಅಗತ್ಯವಿಲ್ಲ.
Long Description: ನಿರ್ದಿಷ್ಟ ಅಂಕಿ ಹಾಗೂ ಚಿಹ್ನೆಗಳ ಜೋಡಣೆಯನ್ನು ಒತ್ತುವ ಮೂಲಕ (ಉದಾ: *೧೨೩#) ಮೊಬೈಲಿನ ಪ್ರೀಪೇಯ್ಡ್ ಖಾತೆಯಲ್ಲಿ ದುಡ್ಡೆಷ್ಟಿದೆ ಎಂದು ತಿಳಿದುಕೊಳ್ಳುವುದು ನಮಗೆ ಗೊತ್ತೇ ಇದೆ. ಇಲ್ಲಿ ಬಳಕೆಯಾಗುವ ವ್ಯವಸ್ಥೆಯ ಹೆಸರು ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ, ಅಂದರೆ ‘ಯುಎಸ್‌ಎಸ್‌ಡಿ’.
ಜಿಎಸ್‌ಎಂ ಮೊಬೈಲ್ ಸೇವೆ ಒದಗಿಸುವ ಸಂಸ್ಥೆ ಹಾಗೂ ಗ್ರಾಹಕರ ನಡುವೆ ಮಾಹಿತಿ ಸಂವಹನಕ್ಕೆಂದು ಬಳಕೆಯಾಗುವ ಶಿಷ್ಟಾಚಾರಕ್ಕೆ (ಪ್ರೋಟೋಕಾಲ್) ಇದೊಂದು ಉದಾಹರಣೆ.
ಬ್ಯಾಲೆನ್ಸ್ ತಿಳಿದುಕೊಳ್ಳಲು ಮಾಡುವಂತೆ ನಿರ್ದಿಷ್ಟ ಕ್ರಮದಲ್ಲಿ ಚಿಹ್ನೆ ಹಾಗೂ ಅಂಕಿಗಳನ್ನು ಒತ್ತುವ ಮೂಲಕ ನಾವು ವಿವಿಧ ಯುಎಸ್‌ಎಸ್‌ಡಿ ಸೇವೆಗಳನ್ನು ಬಳಸಬಹುದು. ಅಂತಹುದೊಂದು ಸೇವೆ ತೆರೆದುಕೊಂಡ ನಂತರವೂ ಅಷ್ಟೆ, ನಿರ್ದಿಷ್ಟ ಅಂಕಿಗಳನ್ನು ಒತ್ತುವ ಮೂಲಕ ಪರದೆಯ ಮೇಲೆ ಕಾಣುವ ಆಯ್ಕೆಗಳನ್ನು (ಉದಾ: ಬಿಲ್ ಆಗದಿರುವ ಮೊತ್ತ, ಹಿಂದಿನ ಬಿಲ್ ವಿವರ, ಸೇವೆಗಳ ನಿಲುಗಡೆ/ಸೇರ್ಪಡೆ ಇತ್ಯಾದಿ) ಬಳಸಬಹುದು. ನಾವಾಗಿ ನಿರ್ಗಮಿಸುವವರೆಗೂ ಯುಎಸ್‌ಎಸ್‌ಡಿ ಸಂಪರ್ಕ ತೆರೆದೇ ಇರುವುದರಿಂದ ಪ್ರತಿಕ್ರಿಯೆ ತಕ್ಷಣವೇ ದೊರಕುತ್ತದೆ, ಎಸ್ಸೆಮ್ಮೆಸ್ಸಿನ ಹಾಗೆ ಕಾಯುವ ಅಗತ್ಯ ಇರುವುದಿಲ್ಲ. ಇಷ್ಟೆಲ್ಲ ಆಯ್ಕೆಗಳ ಅಗತ್ಯವಿಲ್ಲದ ಸನ್ನಿವೇಶಗಳಲ್ಲೂ (ಉದಾ: ಫೋನಿನ ಐಎಂಇಐ ಸಂಖ್ಯೆ ತಿಳಿದುಕೊಳ್ಳಲು) ಯುಎಸ್‌ಎಸ್‌ಡಿ ಬಳಕೆ ಸಾಧ್ಯ.
ಎಲ್ಲೆಲ್ಲೂ ಸ್ಮಾರ್ಟ್‌ಫೋನುಗಳೇ ರಾರಾಜಿಸುತ್ತಿರುವ ಇಂದಿನ ಕಾಲದಲ್ಲಿ ಹಳೆಯ ತಂತ್ರಜ್ಞಾನದಂತೆ ತೋರಿದರೂ ವಿವಿಧ ಸೇವೆಗಳನ್ನು ಕಟ್ಟಕಡೆಯ ಮೊಬೈಲ್ ಗ್ರಾಹಕನವರೆಗೂ ಸುಲಭವಾಗಿ ತಲುಪಿಸಲು ನೆರವಾಗುತ್ತಿರುವುದು ಯುಎಸ್‌ಎಸ್‌ಡಿಯ ಹೆಗ್ಗಳಿಕೆ. ಸರಕಾರಿ ಸೌಲಭ್ಯಗಳು, ಬ್ಯಾಂಕಿಂಗ್ ಸೇವೆ ಇತ್ಯಾದಿಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲೂ ಇದು ವ್ಯಾಪಕವಾಗಿ ಬಳಕೆಯಾಗುತ್ತಿದೆ.

USB

ಯುಎಸ್‌ಬಿ
Kannada Equivalent: (ರೂಪಿಸಬೇಕಿದೆ)
Short Description : ಯೂನಿವರ್ಸಲ್ ಸೀರಿಯಲ್ ಬಸ್; ವಿವಿಧ ವಿದ್ಯುನ್ಮಾನ ಸಾಧನಗಳ ನಡುವೆ ಸುಲಭ ಸಂಪರ್ಕ ಸಾಧ್ಯವಾಗಿಸುವ ಮಾನಕ. ಇದರ ನೆರವಿನಿಂದ ಮಾಹಿತಿ ಸಂವಹನವಷ್ಟೇ ಅಲ್ಲ, ವಿದ್ಯುತ್ ಪೂರೈಕೆ ಕೂಡ ಸಾಧ್ಯ.
Long Description: ಕಂಪ್ಯೂಟರ್ ಜಗತ್ತಿನಲ್ಲಿ ಬಳಕೆಯಾಗುವ ಮಾನಕಗಳ (ಸ್ಟಾಂಡರ್ಡ್) ಪೈಕಿ ಯೂನಿವರ್ಸಲ್ ಸೀರಿಯಲ್ ಬಸ್, ಅಂದರೆ ‘ಯುಎಸ್‌ಬಿ’ಗೆ ಮಹತ್ವದ ಸ್ಥಾನವಿದೆ. ಕಾರ್ಡ್ ರೀಡರಿನಿಂದ ಕಾರ್ ಸ್ಟೀರಿಯೋವರೆಗೆ, ಮನೆಯ ಟೀವಿಯಿಂದ ಮೊಬೈಲ್ ಫೋನಿನವರೆಗೆ, ಆಟಿಕೆಗಳಿಂದ ಡಿಜಿಟಲ್ ಕ್ಯಾಮೆರಾವರೆಗೆ ಎಲ್ಲೆಲ್ಲೂ ನಾವು ಇದರ ಬಳಕೆಯನ್ನು ಕಾಣಬಹುದು.
ಹಲವು ಬಗೆಯ ಸಾಧನಗಳ ಕೇಬಲ್ ಅನ್ನು ಕಂಪ್ಯೂಟರಿಗೆ (ಅಥವಾ ಚಾರ್ಜರ್‌ಗೆ) ಸೇರಿಸುವ ಸಂಪರ್ಕ – ‘ಪೋರ್ಟ್’ – ಒಂದೇ ಬಗೆಯದಾಗಿರುವುದು ಯುಎಸ್‌ಬಿಯಿಂದ ಸಾಧ್ಯವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ (ಉದಾ: ಇಂದಿನ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲಿ ಬಳಕೆಯಾಗುವ ಮೈಕ್ರೋ ಯುಎಸ್‌ಬಿ) ಕೇಬಲ್‌ನ ಇನ್ನೊಂದು ತುದಿಯ ವಿನ್ಯಾಸ ಕೂಡ ಸಾರ್ವತ್ರಿಕವಾಗಿರುತ್ತದೆ. ಬೇರೆಬೇರೆ ಸಾಧನಗಳಿಗೆ ಬೇರೆಬೇರೆ ರೀತಿಯ ಕೇಬಲ್ ಬಳಸಬೇಕಾದ ಅಗತ್ಯ ಇದರಿಂದ ಬಹುಮಟ್ಟಿಗೆ ಕಡಿಮೆಯಾಗಿಬಿಟ್ಟಿದೆ.
ಒಂದೇ ಕೇಬಲ್ಲಿನ ಮೂಲಕ ವಿದ್ಯುತ್ ಹಾಗೂ ದತ್ತಾಂಶಗಳೆರಡನ್ನೂ ಕೊಂಡೊಯ್ಯಲು ಸಾಧ್ಯವಾಗಿಸುವುದು ಯುಎಸ್‌ಬಿಯ ವೈಶಿಷ್ಟ್ಯ. ಹಾಗಾಗಿಯೇ ಬಹಳಷ್ಟು ಸಾಧನಗಳನ್ನು ಬಳಸುವಾಗ ಅವು ಕೆಲಸಮಾಡಲು ಬರಿಯ ಯುಎಸ್‌ಬಿ ಸಂಪರ್ಕವೊಂದೇ ಸಾಕು. ದತ್ತಾಂಶ ಕೊಂಡೊಯ್ಯುವ ಕೇಬಲ್ ಮೂಲಕ ವಿದ್ಯುತ್ತೂ ಹರಿಯುವುದರಿಂದಲೇ – ಇಂದಿನ ಮೊಬೈಲುಗಳ ಡೇಟಾ ಕೇಬಲ್ ಹಾಗೂ ಚಾರ್ಜಿಂಗ್ ಕೇಬಲ್ ಎರಡೂ ಒಂದೇ ಆಗಿರುವುದು.

USB OTG

ಯುಎಸ್‌ಬಿ ಓಟಿಜಿ
Kannada Equivalent: (ರೂಪಿಸಬೇಕಿದೆ)
Short Description : ಯುಎಸ್‌ಬಿ ಆನ್ ದ ಗೋ; ನಡುವೆ ಕಂಪ್ಯೂಟರನ್ನು ಬಳಸುವ ಅಗತ್ಯವಿಲ್ಲದೆ ಎರಡು ಸಾಧನಗಳ ನಡುವೆ ಯುಎಸ್‌ಬಿ ಸಂಪರ್ಕ ಸಾಧ್ಯವಾಗಿಸುವ ಸೌಲಭ್ಯ.
Long Description: ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳ ಬಳಕೆ ಜಾಸ್ತಿಯಾದಂತೆ ಅವು ಕಂಪ್ಯೂಟರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿವೆಯಲ್ಲ, ಹಾಗಾಗಿ ಯುಎಸ್‌ಬಿ ಬಳಸುವ ವಿವಿಧ ಸಾಧನಗಳನ್ನು (ಪೆನ್‌ಡ್ರೈವ್, ಮೌಸ್, ಕೀಬೋರ್ಡ್ ಇತ್ಯಾದಿ) ಅವುಗಳಿಗೆ ಸಂಪರ್ಕಿಸುವ ಪರಿಪಾಠವೂ ಬೆಳೆಯುತ್ತಿದೆ.
ಕಂಪ್ಯೂಟರಿನ ನೆರವಿಲ್ಲದೆ ಮೊಬೈಲಿಗೋ ಟ್ಯಾಬ್ಲೆಟ್ಟಿಗೋ ಈ ಸಾಧನಗಳನ್ನೆಲ್ಲ ಸಂಪರ್ಕಿಸಲು ಸಾಧ್ಯವಾಗಿಸಿರುವುದು ‘ಯುಎಸ್‌ಬಿ ಆನ್ ದ ಗೋ’ ಅಥವಾ ‘ಓಟಿಜಿ’ ಸೌಲಭ್ಯ. ಈ ಸೌಲಭ್ಯವಿರುವ ಯಾವುದೇ ಮೊಬೈಲ್ ಹಾಗೂ ಟ್ಯಾಬ್ಲೆಟ್ಟಿಗೆ ನಾವು ಯುಎಸ್‌ಬಿ ಸಾಧನಗಳನ್ನು ಜೋಡಿಸಬಹುದು. ಇದಕ್ಕೆಂದೇ ಮೈಕ್ರೋ ಯುಎಸ್‌ಬಿ ಪೋರ್ಟ್‌ಗೆ ಜೋಡಿಸಬಹುದಾದ ಪೆನ್‌ಡ್ರೈವ್, ಕಾರ್ಡ್ ರೀಡರುಗಳೆಲ್ಲ ಬಂದಿವೆ. ಮೊಬೈಲಿಗೋ ಪವರ್‌ಬ್ಯಾಂಕಿಗೋ ಸಂಪರ್ಕಿಸಿ ಬಳಸಬಹುದಾದ ಫ್ಯಾನ್ ಕೂಡ ಇದೆ!
ಇನ್ನಿತರ ಸಾಮಾನ್ಯ ಯುಎಸ್‌ಬಿ ಸಾಧನಗಳನ್ನೂ ಮೈಕ್ರೋ ಯುಎಸ್‌ಬಿ ಪೋರ್ಟ್‌ಗೆ ಜೋಡಿಸುವುದು ಸಾಧ್ಯ; ಇದಕ್ಕಾಗಿ ಒಂದು ಬದಿ ಮೈಕ್ರೋ ಯುಎಸ್‌ಬಿ ಸಂಪರ್ಕವಿರುವ, ಇನ್ನೊಂದು ಬದಿಯಲ್ಲಿ ಸಾಮಾನ್ಯ ಯುಎಸ್‌ಬಿ ಸಾಧನ ಜೋಡಿಸಬಹುದಾದ ಓಟಿಜಿ ಕೇಬಲ್ ಅಥವಾ ಅಡಾಪ್ಟರುಗಳನ್ನು ಬಳಸಬಹುದು. ನೆನಪಿಡಿ, ಇದನ್ನೆಲ್ಲ ಬಳಸಲು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ಟಿನಲ್ಲಿ ಓಟಿಜಿ ಸೌಲಭ್ಯ ಇರಬೇಕಾದ್ದು ಕಡ್ಡಾಯ.

USB Type C

ಯುಎಸ್‍ಬಿ ಟೈಪ್ ಸಿ
Kannada Equivalent: (ರೂಪಿಸಬೇಕಿದೆ)
Short Description : ಯುಎಸ್‌ಬಿ ಕೇಬಲ್ ಹಾಗೂ ಪೋರ್ಟ್‌ಗಳ ಒಂದು ವಿಧ. ವಿನ್ಯಾಸದ ಸರಳತೆ, ಹೆಚ್ಚಿನ ವೇಗದ ದತ್ತಾಂಶ ವರ್ಗಾವಣೆ ಹಾಗೂ ಹೆಚ್ಚು ಪ್ರಮಾಣದ ವಿದ್ಯುತ್ ಪೂರೈಕೆ ಈ ಮಾದರಿಯ ವೈಶಿಷ್ಟ್ಯಗಳು. ಯುಎಸ್‌ಬಿ ಟೈಪ್-ಸಿ ಕನೆಕ್ಟರುಗಳಲ್ಲಿ ಕೇಬಲ್ ತಿರುಗುಮುರುಗಾಗುವ ಸಮಸ್ಯೆಯೇ ಇಲ್ಲ.
Long Description: ವಿವಿಧ ವಿದ್ಯುನ್ಮಾನ ಸಾಧನಗಳ ನಡುವೆ ಸುಲಭ ಸಂಪರ್ಕ ಸಾಧ್ಯವಾಗಿಸುವ ಜನಪ್ರಿಯ ಮಾನಕ ಯುಎಸ್‌ಬಿ. ಇದರ ನೆರವಿನಿಂದ ಮಾಹಿತಿ ಸಂವಹನವಷ್ಟೇ ಅಲ್ಲ, ವಿದ್ಯುತ್ ಪೂರೈಕೆ ಕೂಡ ಸುಲಭಸಾಧ್ಯ.
ಹೀಗಿದ್ದರೂ ಯುಎಸ್‌ಬಿ ಬಳಕೆ ಕಿರಿಕಿರಿಯಿಂದ ಸಂಪೂರ್ಣ ಮುಕ್ತವೇನಲ್ಲ. ಯುಎಸ್‌ಬಿ ಕೇಬಲ್ಲುಗಳನ್ನು ಕಂಪ್ಯೂಟರಿಗೆ ಜೋಡಿಸುವಾಗ, ಕಾರಿನ ಸ್ಟೀರಿಯೋಗೆ ಪೆನ್‌ಡ್ರೈವ್ ಸಿಕ್ಕಿಸುವಾಗ ಅಥವಾ ಮೊಬೈಲ್ ಫೋನನ್ನು ಚಾರ್ಜಿಂಗ್‌ಗೆ ಹಾಕುವಾಗ ಅದೆಷ್ಟೋ ಬಾರಿ ನಾವು ಕೇಬಲ್ ಅನ್ನು ತಿರುಗುಮುರುಗಾಗಿ ಹಿಡಿದಿರುತ್ತೇವೆ; ಅದೇರೀತಿ ಸಂಪರ್ಕಿಸಲು ಪ್ರಯತ್ನಿಸಿ ಅದು ವಿಫಲವಾದ ನಂತರವಷ್ಟೇ ಕೇಬಲ್ಲನ್ನು ಸರಿಯಾಗಿ ತಿರುಗಿಸುತ್ತೇವೆ.
ಈ ಗೊಂದಲವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪರಿಚಯಿಸಲಾಗಿರುವ ಹೊಸ ಆವೃತ್ತಿಯೇ ‘ಯುಎಸ್‌ಬಿ ಟೈಪ್-ಸಿ’. ೨೦೧೫ರಿಂದ ಈಚೆಗೆ ಪ್ರಚಲಿತಕ್ಕೆ ಬರುತ್ತಿರುವ, ಕೆಲವು ಹೊಸ ಮೊಬೈಲುಗಳಲ್ಲಿ ಕಾಣಿಸಿಕೊಂಡಿರುವ ಯುಎಸ್‌ಬಿ ಟೈಪ್-ಸಿ ಕನೆಕ್ಟರುಗಳಲ್ಲಿ ಕೇಬಲ್ ತಿರುಗುಮುರುಗಾಗುವ ಸಮಸ್ಯೆಯೇ ಇಲ್ಲ: ಮೇಲ್ನೋಟಕ್ಕೆ ಮೈಕ್ರೋ ಯುಎಸ್‌ಬಿಯಂತೆಯೇ ಕಂಡರೂ ಈ ಕನೆಕ್ಟರುಗಳನ್ನು ಹೇಗೆ ಬೇಕಾದರೂ ಜೋಡಿಸುವುದು ಸಾಧ್ಯ. ಹೀಗಾಗಿ ಈ ಬಗೆಯ ಕನೆಕ್ಟರ್ ಇರುವ ಮೊಬೈಲ್ ಫೋನಿಗೆ ನಾವು ಚಾರ್ಜಿಂಗ್ ಕೇಬಲನ್ನು ಕಣ್ಣುಮುಚ್ಚಿಕೊಂಡೂ ಜೋಡಿಸಿಬಿಡಬಹುದು! ಅಷ್ಟೇ ಅಲ್ಲ, ಮುಂದೊಂದು ದಿನ ಎರಡೂ ಬದಿಯಲ್ಲಿ ಈ ಬಗೆಯ ಸಂಪರ್ಕಗಳೇ ಇರುವ ಕೇಬಲ್ಲುಗಳು ಬಳಕೆಗೆ ಬಂದರೆ ಕಂಪ್ಯೂಟರಿಗೆ ಸಂಪರ್ಕಿಸುವ ಬದಿ ಯಾವುದು, ಮೊಬೈಲಿಗೆ ಸಂಪರ್ಕಿಸುವ ಬದಿ ಯಾವುದು ಎಂದು ಯೋಚಿಸುವ ಅಗತ್ಯವೂ ಇರಲಾರದು.
ಅಂದಹಾಗೆ ಟೈಪ್-ಸಿ ಕೇಬಲ್ಲುಗಳ ಹೆಚ್ಚುಗಾರಿಕೆ ವಿನ್ಯಾಸದ ಸರಳತೆಯಷ್ಟೇ ಅಲ್ಲ. ಇವುಗಳ ಮೂಲಕ ದತ್ತಾಂಶ ಹರಿಯುವ ವೇಗ ಹಿಂದೆಂದಿಗಿಂತ ಹೆಚ್ಚು; ಜೊತೆಗೆ ಇವು ಹಿಂದಿನ ಯುಎಸ್‌ಬಿ ವಿನ್ಯಾಸಗಳಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ತನ್ನೂ ಪೂರೈಸಬಲ್ಲವು.

USB Hub

ಯುಎಸ್‌ಬಿ ಹಬ್
Kannada Equivalent: (ರೂಪಿಸಬೇಕಿದೆ)
Short Description : ಒಂದಕ್ಕಿಂತ ಹೆಚ್ಚು ಸಂಖ್ಯೆಯ ಯುಎಸ್‌ಬಿ ಪೋರ್ಟುಗಳನ್ನು ಹೊಂದಿರುವ ಸಾಧನ; ಕಂಪ್ಯೂಟರಿನಲ್ಲಿರುವ ಒಂದೇ ಯುಎಸ್‌ಬಿ ಪೋರ್ಟ್ ಬಳಸಿಕೊಂಡು ಹೆಚ್ಚಿನ ಸಂಖ್ಯೆಯ ಸಾಧನಗಳನ್ನು ಸಂಪರ್ಕಿಸುವುದನ್ನು ಇದು ಸಾಧ್ಯವಾಗಿಸುತ್ತದೆ.
Long Description: ಮೊಬೈಲ್ ಚಾರ್ಜರ್, ಪೆನ್‌ಡ್ರೈವ್, ಕಾರ್ಡ್ ರೀಡರ್, ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್ – ಹೀಗೆ ನಾವು ಪ್ರತಿನಿತ್ಯವೂ ಬಳಸುವ ಹಲವಾರು ಸಾಧನಗಳಿಗೆ ಯುಎಸ್‌ಬಿ ಸಂಪರ್ಕ ಅತ್ಯಗತ್ಯ. ಸಾಂಪ್ರದಾಯಿಕವಾಗಿ ಬೇರೆ ಬಗೆಯ ಸಂಪರ್ಕಗಳನ್ನು ಬಳಸುತ್ತಿದ್ದ ಪ್ರಿಂಟರ್, ಸ್ಪೀಕರ್ ಮುಂತಾದ ಸಾಧನಗಳೂ ಈಚಿನ ವರ್ಷಗಳಲ್ಲಿ ಯುಎಸ್‌ಬಿಯತ್ತ ಮುಖಮಾಡಿರುವುದರಿಂದ ಕಂಪ್ಯೂಟರಿನಲ್ಲಿ ಯುಎಸ್‌ಬಿ ಪೋರ್ಟುಗಳು ಎಷ್ಟಿದ್ದರೂ ಸಾಲುವುದೇ ಇಲ್ಲ.
ಇಂತಹ ಪರಿಸ್ಥಿತಿಯಲ್ಲಿ ನಮ್ಮ ನೆರವಿಗೆ ಬರುವುದು ‘ಯುಎಸ್‌ಬಿ ಹಬ್’ ಎಂಬ ವಿಶೇಷ ಸಾಧನ. ವಿದ್ಯುತ್ ಸಂಪರ್ಕ ಬಳಸಲು ಒಂದೇ ಪ್ಲಗ್ ಇರುವಾಗ ಅದಕ್ಕೆ ಎಕ್ಸ್‌ಟೆನ್ಶನ್ ಬಾಕ್ಸ್ ಹಾಕಿಕೊಂಡು ಒಂದಕ್ಕಿಂತ ಹೆಚ್ಚು ಸಾಧನಗಳನ್ನು ಜೋಡಿಸುತ್ತೇವಲ್ಲ, ಈ ಯುಎಸ್‌ಬಿ ಹಬ್ ಕೆಲಸಮಾಡುವುದೂ ಹೆಚ್ಚೂಕಡಿಮೆ ಅದೇರೀತಿ. ಒಂದಕ್ಕಿಂತ ಹೆಚ್ಚು ಸಂಖ್ಯೆಯ ಯುಎಸ್‌ಬಿ ಪೋರ್ಟುಗಳನ್ನು ಹೊಂದಿರುವ ಈ ಸಾಧನವನ್ನು ಕಂಪ್ಯೂಟರಿಗೆ ಜೋಡಿಸಿದರೆ ಆಯಿತು, ಅದರ ಮೂಲಕ ಪೆನ್‌ಡ್ರೈವ್ – ಕಾರ್ಡ್ ರೀಡರ್ ಮುಂತಾದ ಬೇರೆಬೇರೆ ಸಾಧನಗಳನ್ನು ಏಕಕಾಲದಲ್ಲೇ ಸಂಪರ್ಕಿಸುವುದು ಸಾಧ್ಯವಾಗುತ್ತದೆ.
ಯುಎಸ್‌ಬಿ ಹಬ್‌ಗಳಲ್ಲಿ ಪ್ರಮುಖವಾಗಿ ಎರಡು ವಿಧಗಳನ್ನು ಗುರುತಿಸಬಹುದು. ಮೊದಲನೆಯ ವಿಧದ ಹಬ್‌ಗಳು ಯುಎಸ್‌ಬಿ ಮೂಲಕ ದೊರಕುವ ವಿದ್ಯುತ್ತನ್ನಷ್ಟೇ ಬಳಸುತ್ತವೆ – ಮೌಸ್, ಕೀಬೋರ್ಡ್, ಕಾರ್ಡ್ ರೀಡರ್ ಮುಂತಾದ ಸಾಧನಗಳನ್ನು ಸಂಪರ್ಕಿಸಲು ಈ ಬಗೆಯವನ್ನು ಧಾರಾಳವಾಗಿ ಬಳಸಬಹುದು. ಇನ್ನೊಂದು ವಿಧದ ಹಬ್‌ಗಳಿಗೆ ಪ್ರತ್ಯೇಕ ವಿದ್ಯುತ್ ಸಂಪರ್ಕ ನೀಡಬೇಕಿರುತ್ತದೆ: ಎಕ್ಸ್‌ಟರ್ನಲ್ ಹಾರ್ಡ್‌ಡಿಸ್ಕ್‌ನಂತಹ ಸಾಧನಗಳನ್ನು ಇಂತಹ ಯುಎಸ್‌ಬಿ ಹಬ್ ಜೊತೆಗೇ ಬಳಸುವುದು ಅಪೇಕ್ಷಣೀಯ. ಈ ಬಗೆಯ ಹಬ್‌ಗಳ ಬೆಲೆ, ಸಹಜವಾಗಿಯೇ, ಮೊದಲ ಬಗೆಯ ಯುಎಸ್‌ಬಿ ಹಬ್‌ಗಳಿಗಿಂತ ಜಾಸ್ತಿಯಿರುತ್ತದೆ.
ಈಚೆಗೆ ಹೆಚ್ಚುಹೆಚ್ಚು ಸಾಧನಗಳು ಯುಎಸ್‌ಬಿ ೩.೦ ತಂತ್ರಜ್ಞಾನವನ್ನು ಬಳಸುತ್ತಿರುವುದರಿಂದ ನಾವು ಕೊಳ್ಳುವ ಯುಎಸ್‌ಬಿ ಹಬ್‌ನಲ್ಲೂ ಆ ಸೌಲಭ್ಯ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು.

Unicode

ಯುನಿಕೋಡ್
Kannada Equivalent: (ರೂಪಿಸಬೇಕಿದೆ)
Short Description : ಮಾಹಿತಿ ಶೇಖರಣೆಗಾಗಿ ಬಳಸಲಾಗುವ ಜಾಗತಿಕ ಸಂಕೇತ ವಿಧಾನ. ಮಾಹಿತಿ ಸಂವಹನೆಯಲ್ಲಿ ಅಕ್ಷರಶೈಲಿಯ (ಫಾಂಟ್) ಸಂಕೇತಗಳ ಬದಲಿಗೆ ಮೂಲ ಮಾಹಿತಿಯನ್ನೇ ಕಳುಹಿಸುವುದರಿಂದ ಆ ಮಾಹಿತಿಯನ್ನು ಬಳಸುವವರು ಇಂಥದ್ದೇ ಅಕ್ಷರಶೈಲಿ ಬಳಸಬೇಕೆಂಬ ನಿರ್ಬಂಧ ಇರುವುದಿಲ್ಲ.
Long Description: ಹಿಂದೆ ಕನ್ನಡ ಪದಸಂಸ್ಕಾರಕಗಳನ್ನು ಬಳಸುವಾಗ ನಾವು ನಿರ್ದಿಷ್ಟ ಫಾಂಟುಗಳನ್ನು ಅವಲಂಬಿಸಬೇಕಾದ್ದು ಅನಿವಾರ್ಯವಾಗಿತ್ತು. ಟೈಪಿಸುವುದು ಹಾಗಿರಲಿ, ಫಾಂಟ್ ಇನ್‌ಸ್ಟಾಲ್ ಮಾಡಿಕೊಳ್ಳದೆ ಕನ್ನಡದ ಪಠ್ಯ ಓದುವುದೂ ಆಗ ಸಾಧ್ಯವಾಗುತ್ತಿರಲಿಲ್ಲ.
ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ (ನೆನಪಿಡಿ, ಯುನಿಕೋಡ್ ಒಂದು ಸಂಕೇತ ವಿಧಾನ – ತಂತ್ರಾಂಶ ಅಲ್ಲ). ಈ ಸೌಲಭ್ಯವಿರುವ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ, ಹಳೆಯ ತಂತ್ರಾಂಶಗಳಂತೆ ಅಕ್ಷರಶೈಲಿಯ (ಫಾಂಟ್) ಸಂಕೇತಗಳಲ್ಲಿ ಅಲ್ಲ. ಹಾಗಾಗಿ ಯುನಿಕೋಡ್‌ನಲ್ಲಿರುವ ಮಾಹಿತಿಯನ್ನು ಬೇರೊಬ್ಬರು ಓದಲು ಕನ್ನಡದ ಯಾವುದೇ ಯುನಿಕೋಡ್ ಅಕ್ಷರಶೈಲಿ ಇದ್ದರೆ ಸಾಕು. ಹಾಗಾಗಿ ಇಮೇಲ್ ಕಳುಹಿಸುವುದು, ಜಾಲತಾಣಗಳಿಗೆ-ಬ್ಲಾಗುಗಳಿಗೆ ಮಾಹಿತಿ ಸೇರಿಸುವುದು, ಅವನ್ನು ಓದುವುದು, ಕನ್ನಡದ ಮಾಹಿತಿಯನ್ನು ಸರ್ಚ್ ಇಂಜನ್‌ಗಳಲ್ಲಿ ಕನ್ನಡದಲ್ಲೇ ಹುಡುಕುವುದು – ಇದೆಲ್ಲವನ್ನೂ ನಿರ್ದಿಷ್ಟ ತಂತ್ರಾಂಶದ ಮೇಲೆ ಅವಲಂಬಿತರಾಗದೆ ಮಾಡುವುದು ಸಾಧ್ಯವಾಗುತ್ತದೆ.
‘ಬರಹ’, ‘ನುಡಿ’, ‘ಪದ’ ಸೇರಿದಂತೆ ಈಚಿನ ಬಹುತೇಕ ತಂತ್ರಾಂಶಗಳನ್ನು ಬಳಸಿ ಯುನಿಕೋಡ್‌ನಲ್ಲಿ ಟೈಪ್ ಮಾಡುವುದು ಸಾಧ್ಯ. ಅಂದಹಾಗೆ ಯುನಿಕೋಡ್ ಅಕ್ಷರಶೈಲಿಯೆಂದರೆ ವಿಂಡೋಸ್‌ನಲ್ಲಿ ದೊರಕುವ ‘ತುಂಗಾ’ ಒಂದೇ ಅಲ್ಲ. ಬರಹ, ನುಡಿ ಸೇರಿದಂತೆ ಹಲವು ತಂತ್ರಾಂಶಗಳಲ್ಲಿ ಯುನಿಕೋಡ್‌ಗೆಂದೇ ಪ್ರತ್ಯೇಕ ಫಾಂಟುಗಳಿವೆ.

UPI

ಯುಪಿಐ
Kannada Equivalent: (ರೂಪಿಸಬೇಕಿದೆ)
Short Description : ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್; ಸುರಕ್ಷಿತವಾಗಿ, ಸುಲಭವಾಗಿ ಹಣ ವರ್ಗಾಯಿಸಲು ಅನುವುಮಾಡಿಕೊಡುವ ನಗದುರಹಿತ ವ್ಯವಸ್ಥೆ.
Long Description: ಅಂಚೆ ವ್ಯವಸ್ಥೆಯಲ್ಲಿ ಇಮೇಲ್ ತಂದಂತಹುದೇ ಬದಲಾವಣೆಯನ್ನು ನಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವ ಕೆಲಸದಲ್ಲಿ ತಂದಿರುವುದು ಭಾರತ ಸರಕಾರದ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ರೂಪಿಸಿರುವ ‘ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್’ (ಯುಪಿಐ) ಎಂಬ ವ್ಯವಸ್ಥೆ. ಇಮೇಲ್ ಕಳುಹಿಸಿದಷ್ಟೇ ಸುಲಭವಾಗಿ ಹಣ ವರ್ಗಾಯಿಸುವುದು ಈ ವ್ಯವಸ್ಥೆಯಿಂದಾಗಿ ಸಾಧ್ಯವಾಗುತ್ತದೆ ಎನ್ನುವುದು ವಿಶೇಷ.
ಯುಪಿಐ ಬೆಂಬಲಿಸುವ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಅದಕ್ಕೆ ನಮ್ಮ ಖಾತೆಯನ್ನು ಜೋಡಿಸುವುದು ಇಲ್ಲಿ ಮಾಡಬೇಕಿರುವ ಮೊದಲ ಕೆಲಸ (ಇದಕ್ಕಾಗಿ ಕೇಂದ್ರ ಸರಕಾರದ ‘ಭೀಮ್’, ನಮ್ಮದೇ ಬ್ಯಾಂಕಿನ ಆಪ್ ಅಥವಾ ‘ಫೋನ್‌ಪೆ’ಯಂತಹ ಖಾಸಗಿ ಆಪ್‌ಗಳನ್ನು ಬಳಸಬಹುದು). ಆನಂತರ ನಮ್ಮ ಖಾತೆಯನ್ನು ಪ್ರತಿನಿಧಿಸುವ ವರ್ಚುಯಲ್ ಪ್ರೈವೇಟ್ ಅಡ್ರೆಸ್ (ವಿಪಿಎ, you@yourbank ಎಂಬ ರೂಪದ್ದು) ರೂಪಿಸಿಕೊಂಡರೆ ಆಯಿತು, ನಮಗೆ ಹಣಕೊಡಬೇಕಿರುವ ಯಾರು ಬೇಕಾದರೂ ಆ ವಿಳಾಸಕ್ಕೆ ಥಟ್ಟನೆ ಹಣ ವರ್ಗಾಯಿಸುವುದು ಸಾಧ್ಯ. ನಾವೂ ಅಷ್ಟೇ, ಇಮೇಲ್ ಕಳಿಸಿದಷ್ಟೇ ಸುಲಭವಾಗಿ ಬೇರೊಬ್ಬರ ವಿಳಾಸಕ್ಕೆ ತಕ್ಷಣವೇ ಹಣ ಕಳುಹಿಸಬಹುದು (ಐಎಫ್‌ಎಸ್‌ಸಿ-ಅಕೌಂಟ್ ಸಂಖ್ಯೆ, ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ-ಎಂಎಂಐಡಿ ಬಳಸಿಯೂ ಹಣ ಪಾವತಿಸುವುದು ಸಾಧ್ಯ).
ಯುಪಿಐ ವ್ಯವಸ್ಥೆ ಹಣ ವರ್ಗಾವಣೆಗೆ ಐಎಂಪಿಎಸ್ ವಿಧಾನ ಬಳಸುವುದರಿಂದ ಇಲ್ಲಿ ತಕ್ಷಣವೇ ಹಣ ವರ್ಗಾವಣೆಯಾಗುತ್ತದೆ. ಹಣ ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯಾಗುವುದರಿಂದ ವ್ಯಾಲೆಟ್‌ಗೆ ಹಣ ಹಾಕಿಡುವ ತಲೆಬಿಸಿಯೂ ಇಲ್ಲ. ವ್ಯವಹಾರವೆಲ್ಲ ಮೊಬೈಲಿನಲ್ಲೇ ನಡೆಯುವುದರಿಂದ ಹಣ ಪಡೆದುಕೊಳ್ಳುವವರು ಸ್ವೈಪಿಂಗ್ ಮಶೀನ್ ಇಟ್ಟುಕೊಳ್ಳಬೇಕಾಗಿಯೂ ಇಲ್ಲ. ವಿಪಿಎ ಬಳಸುವುದರಿಂದ ಪ್ರತಿ ಬಾರಿಯೂ ಐಎಫ್‌ಎಸ್‌ಸಿ ಸಂಖ್ಯೆ, ಅಕೌಂಟ್ ಸಂಖ್ಯೆಗಳನ್ನೆಲ್ಲ ನೀಡಬೇಕಾದ ಅಗತ್ಯ ಕೂಡ ನಿವಾರಣೆಯಾಗುತ್ತದೆ.
ಅಂದಹಾಗೆ ಯುಪಿಐ ಬಳಸಲು ಸ್ಮಾರ್ಟ್‌ಫೋನ್ ಹಾಗೂ ಅಂತರಜಾಲ ಸಂಪರ್ಕ ಇರಬೇಕಾದ್ದು, ನಿಮ್ಮ ಬ್ಯಾಂಕು ಯುಪಿಐ ಸೌಲಭ್ಯ ನೀಡಬೇಕಾದ್ದು, ಬ್ಯಾಂಕಿನಲ್ಲಿ ನೋಂದಾಯಿತವಾದ ಮೊಬೈಲ್ ಸಂಖ್ಯೆಯನ್ನೇ ಬಳಸಬೇಕಾದ್ದು ಕಡ್ಡಾಯ.

User Interface

ಯೂಸರ್ ಇಂಟರ್‌ಫೇಸ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರು-ಮೊಬೈಲಿನ ಸವಲತ್ತುಗಳನ್ನು ಬಳಸುವಾಗ ನಮ್ಮೆದುರು ತೆರೆದುಕೊಳ್ಳುವ ಪರದೆಗಳನ್ನು, ಕಾಣಿಸಿಕೊಳ್ಳುವ ಆಯ್ಕೆಗಳನ್ನು ಪ್ರತಿನಿಧಿಸುವ ಹೆಸರು
Long Description: ಕಂಪ್ಯೂಟರಿನ, ಮೊಬೈಲಿನ ತಂತ್ರಾಂಶಗಳು ನಮ್ಮ ಅದೆಷ್ಟೋ ಕೆಲಸಗಳನ್ನು ಸುಲಭವಾಗಿಸುತ್ತವೆ. ಅವನ್ನೆಲ್ಲ ಉಪಯೋಗಿಸುವುದೂ ಸುಲಭವಾಗಿರಬೇಕಾದ್ದು ಅತ್ಯಗತ್ಯ: ತಂತ್ರಾಂಶ ಎಷ್ಟೇ ಸಮರ್ಥವಾಗಿದ್ದರೂ ಬಳಕೆದಾರರ ಮಟ್ಟಿಗೆ ಉಪಯೋಗಿಸಲು ಕಷ್ಟವಾಗುವಂತಿದ್ದರೆ ಅದನ್ನು ರೂಪಿಸಿದ ಮೂಲ ಉದ್ದೇಶದಲ್ಲೇ ವಿಫಲವಾದಂತೆ!
ಕಂಪ್ಯೂಟರು-ಮೊಬೈಲಿನ ಸವಲತ್ತುಗಳನ್ನು ಬಳಸುವಾಗ ನಮ್ಮೆದುರು ಅನೇಕ ಪರದೆಗಳು ತೆರೆದುಕೊಳ್ಳುತ್ತವೆ, ಆಯ್ಕೆಗಳು ಮೂಡುತ್ತವೆ. ಇವನ್ನೆಲ್ಲ ಒಟ್ಟಾಗಿ ‘ಯೂಸರ್ ಇಂಟರ್‌ಫೇಸ್’ (ಯುಐ) ಅಥವಾ ಅಂತರ ಸಂಪರ್ಕ ಸಾಧನ ಎಂದು ಕರೆಯುತ್ತಾರೆ. ಬಳಕೆದಾರರು ನಿರ್ದಿಷ್ಟ ತಂತ್ರಾಂಶದ ಮೂಲಕ ಕಂಪ್ಯೂಟರ್ ಇಲ್ಲವೇ ಸ್ಮಾರ್ಟ್‌ಫೋನಿನೊಡನೆ ಒಡನಾಡಲು ಅನುವುಮಾಡಿಕೊಡುವುದು ಇದರ ಕೆಲಸ. ಈ ಅಂತರ ಸಂಪರ್ಕ ಸಾಧನದ ವಿನ್ಯಾಸ (ಯುಐ ಡಿಸೈನ್), ಹಾಗಾಗಿಯೇ, ತಂತ್ರಾಂಶ ಅಭಿವೃದ್ಧಿಯ ಪ್ರಮುಖ ಭಾಗಗಳಲ್ಲೊಂದು.
ತಂತ್ರಾಂಶದ ಬಳಕೆ ಕಷ್ಟವೆನಿಸುವಂತಿದ್ದರೆ ಬಳಕೆದಾರ ತಪ್ಪುಮಾಡುವ ಸಾಧ್ಯತೆಗಳು ಜಾಸ್ತಿ. ತಪ್ಪುಗಳಾಗುತ್ತಿದ್ದಂತೆ ಬಳಕೆದಾರನ ತಾಳ್ಮೆಯೂ ಕೆಡುತ್ತದೆ, ತಂತ್ರಾಂಶದತ್ತ ಅವನ ಆಸಕ್ತಿಯೂ ಕಡಿಮೆಯಾಗುತ್ತದೆ. ಇದನ್ನು ತಪ್ಪಿಸುವುದು ಯುಐ ಡಿಸೈನ್ ಸೂತ್ರಗಳ ಮೊದಲ ಉದ್ದೇಶ. ಪದೇಪದೇ ಬಳಸುವ ಸೌಲಭ್ಯಗಳು ಸುಲಭವಾಗಿ ದೊರಕುವಂತಿರುವುದು, ಪರದೆಯ ವಿನ್ಯಾಸ ಕಣ್ಣಿಗೆ ಹಿತವಾಗುವಂತಿರುವುದು, ಉಪಯುಕ್ತ ಮಾಹಿತಿಯನ್ನು ಪ್ರಮುಖವಾಗಿ ತೋರಿಸುವುದು, ಬಳಕೆದಾರರು ತಪ್ಪುಮಾಡುವ ಸಾಧ್ಯತೆಗಳಿರುವ ಕಡೆ (ಉದಾ: ಎಲ್ಲ ಮಾಹಿತಿಯನ್ನೂ ಅಳಿಸು) ಹೆಚ್ಚಿನ ಸುರಕ್ಷತಾ ಸೌಲಭ್ಯಗಳನ್ನು ನೀಡುವುದು – ಇವೆಲ್ಲವೂ ಯುಐ ಡಿಸೈನ್ ಪರಿಧಿಯೊಳಗೆ ಬರುತ್ತವೆ.

ROM

ರಾಮ್
Kannada Equivalent: (ರೂಪಿಸಬೇಕಿದೆ)
Short Description : ರೀಡ್ ಓನ್ಲಿ ಮೆಮೊರಿ; ಇಲ್ಲಿ ಶೇಖರವಾಗಿರುವ ಮಾಹಿತಿಯನ್ನು ಓದಬಹುದೇ ವಿನಾ ಬದಲಾಯಿಸಲು ಸಾಧ್ಯವಿಲ್ಲ. ಕಂಪ್ಯೂಟರಿನ – ಸ್ಮಾರ್ಟ್‌ಫೋನಿನ ಕೆಲಸ ಪ್ರಾರಂಭವಾಗಲು ಬೇಕಾದ ಕೆಲ ತಂತ್ರಾಂಶಗಳನ್ನು ಇದರಲ್ಲಿ ಉಳಿಸಿಟ್ಟಿರುತ್ತಾರೆ.
Long Description: ಕಂಪ್ಯೂಟರಿನ ಮೆಮೊರಿ ಬಗ್ಗೆ ಮಾತನಾಡುವಾಗಲೆಲ್ಲ ರ್‍ಯಾಮ್ ಮತ್ತು ರಾಮ್ ಎಂಬ ಎರಡು ಹೆಸರುಗಳು ನಮ್ಮ ಮನಸ್ಸಿಗೆ ಬರುತ್ತವೆ. ಈ ಪೈಕಿ ರಾಮ್ ಎನ್ನುವುದು ರೀಡ್ ಓನ್ಲಿ ಮೆಮೊರಿ ಎಂಬ ಹೆಸರಿನ ಹ್ರಸ್ವರೂಪ. ಇಲ್ಲಿ ಶೇಖರವಾಗಿರುವ ಮಾಹಿತಿ ವಿದ್ಯುತ್ ಸಂಪರ್ಕವಿದ್ದರೂ ಇಲ್ಲದಿದ್ದರೂ ಹಾಗೆಯೇ ಉಳಿದಿರುತ್ತದೆ. ಹೆಸರೇ ಹೇಳುವಂತೆ ಇಲ್ಲಿರುವ ಮಾಹಿತಿಯನ್ನು ಓದುವುದು ಮಾತ್ರ ಸಾಧ್ಯ, ಬದಲಾಯಿಸುವುದು ಅಷ್ಟು ಸುಲಭವಲ್ಲ (ವಿಶೇಷ ಯಂತ್ರಾಂಶಗಳ ಸಹಾಯದಿಂದ ಅಳಿಸಿ ಮತ್ತೆ ಬರೆಯಬಹುದಾದ ರಾಮ್‌ಗಳೂ ಇವೆ). ಕಂಪ್ಯೂಟರಿನ ಉದಾಹರಣೆ ತೆಗೆದುಕೊಳ್ಳುವುದಾದರೆ ಅದರ ಕೆಲಸ ಪ್ರಾರಂಭವಾಗಲು ಬೇಕಾದ ನಿರ್ದೇಶನಗಳು ರಾಮ್‌ನಲ್ಲಿ ದಾಖಲಾಗಿರುತ್ತವೆ.
ಕಂಪ್ಯೂಟರಿನಂತೆ ಸ್ಮಾರ್ಟ್‌ಫೋನಿನಲ್ಲೂ ರಾಮ್ ಇರುತ್ತದೆ. ಮೊಬೈಲಿನ ಆಪರೇಟಿಂಗ್ ಸಿಸ್ಟಂ ಇತ್ಯಾದಿಗಳೆಲ್ಲ ಶೇಖರವಾಗುವುದು ಇಲ್ಲೇ. ಕಂಪ್ಯೂಟರಿನಲ್ಲಿರುವಂತೆ ಪ್ರತ್ಯೇಕವಾಗಿರುವ ಬದಲು ಮೊಬೈಲಿನ ಆಂತರಿಕ ಶೇಖರಣಾ ಸಾಮರ್ಥ್ಯದ (ಇಂಟರ್ನಲ್ ಮೆಮೊರಿ) ಒಂದು ಭಾಗವೇ ರಾಮ್‌ನಂತೆ ಬಳಕೆಯಾಗುತ್ತದೆ ಎನ್ನುವುದು ವ್ಯತ್ಯಾಸ. ಮೊಬೈಲಿನಲ್ಲಿ ೩೨ ಜಿಬಿ ಶೇಖರಣಾ ಸಾಮರ್ಥ್ಯವಿದೆ ಎಂದು ತಯಾರಕರು ಹೇಳಿಕೊಂಡರೂ ಅಷ್ಟು ಮೆಮೊರಿ ನಮ್ಮ ಬಳಕೆಗೆ ಸಿಗುವುದಿಲ್ಲವಲ್ಲ, ಅದಕ್ಕೆ ಇದೇ ಕಾರಣ.

Raspberry Pi

ರಾಸ್‍ಬೆರಿ ಪೈ
Kannada Equivalent: (ರೂಪಿಸಬೇಕಿದೆ)
Short Description : ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನವನ್ನು ಪರಿಚಯಿಸುವ ಉದ್ದೇಶದ, ಕಡಿಮೆ ಬೆಲೆಯ ಪುಟ್ಟ ಕಂಪ್ಯೂಟರ್. ಕೀಬೋರ್ಡ್, ಮಾನಿಟರ್‌ಗಳನ್ನೆಲ್ಲ ಸಂಪರ್ಕಿಸಿ ಇದನ್ನು ಕಂಪ್ಯೂಟರಿನಂತೆಯೇ ಬಳಸುವುದು, ಪ್ರೋಗ್ರಾಮುಗಳನ್ನು ಬರೆಯುವುದು, ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದೆಲ್ಲ ಸಾಧ್ಯ.
Long Description: ಕಂಪ್ಯೂಟರಿನಿಂದಾಗಿ ಓದಿನತ್ತ ವಿದ್ಯಾರ್ಥಿಗಳ ಗಮನ ಕಡಿಮೆಯಾಯಿತು ಎನ್ನುವವರು ಅನೇಕರಿದ್ದಾರೆ. ಕಂಪ್ಯೂಟರ್ ಮುಂದೆ ಕುಳಿತು ವೃಥಾ ಕಾಲಹರಣ ಮಾಡಿ ಈ ಆರೋಪವನ್ನು ಪುಷ್ಟೀಕರಿಸುವ ವಿದ್ಯಾರ್ಥಿಗಳೂ ಇದ್ದಾರೆ. ಇವರೆಲ್ಲರ ನಡುವೆ ಕಂಪ್ಯೂಟರನ್ನು ಶೈಕ್ಷಣಿಕ ಸಾಧನದಂತೆ ಬಳಸುವ ಹಲವು ಪ್ರಯತ್ನಗಳೂ ನಡೆದಿವೆ.
ಇಂತಹ ಪ್ರಯತ್ನಗಳಲ್ಲೊಂದು ರಾಸ್‌ಬೆರಿ ಪೈ. ಹಣ್ಣಿನಿಂದ ಮಾಡುವ ಸಿಹಿತಿಂಡಿಯಂತೆ ಕೇಳುವ ಈ ಹೆಸರು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನವನ್ನು ಪರಿಚಯಿಸುವ ಪುಟ್ಟದೊಂದು ಸಾಧನದ್ದು (ಅಂದಹಾಗೆ ಈ ಹೆಸರಿನಲ್ಲಿರುವ ‘ಪೈ’ ತಿಂಡಿಯ ಹೆಸರಾದ pie ಅಲ್ಲ, ಗ್ರೀಕ್ ವರ್ಣಮಾಲೆಯ ಅಕ್ಷರ pi). ಸರಳ ವಿನ್ಯಾಸದ ಈ ಸಾಧನವನ್ನು ರೂಪಿಸಿದ್ದು ಯುನೈಟೆಡ್ ಕಿಂಗ್‌ಡಂನ ರಾಸ್‌ಬೆರಿ ಪೈ ಫೌಂಡೇಶನ್ ಎಂಬ ಸಂಸ್ಥೆ.
ಕಂಪ್ಯೂಟರಿನ ಪ್ರಾಥಮಿಕ ಚಟುವಟಿಕೆಗಳಿಗೆ ಬೇಕಾದ ಪ್ರಾಸೆಸರ್, ರ್‍ಯಾಮ್, ಯುಎಸ್‌ಬಿ ಪೋರ್ಟ್ ಮುಂತಾದ ಅನೇಕ ಸವಲತ್ತುಗಳು ಅಂಗೈಯಗಲದ ಈ ಪುಟ್ಟ ಸಾಧನದಲ್ಲಿರುತ್ತವೆ. ಕೀಬೋರ್ಡ್, ಮಾನಿಟರ್ ಇತ್ಯಾದಿಗಳನ್ನು ಸಂಪರ್ಕಿಸಿ ಇದನ್ನೊಂದು ಕಂಪ್ಯೂಟರಿನಂತೆಯೇ ಬಳಸುವುದು, ಅದಕ್ಕಾಗಿ ಪ್ರೋಗ್ರಾಮುಗಳನ್ನು ಬರೆಯುವುದು, ಅಂತರಜಾಲ ಸಂಪರ್ಕ ಪಡೆದುಕೊಳ್ಳುವುದೆಲ್ಲ ಸಾಧ್ಯ. ಹೆಚ್ಚು ಸಂಕೀರ್ಣವಾದ ಪ್ರಯೋಗಗಳಿಗೆ ಈ ಸಾಧನವನ್ನು ಬಳಸಿಕೊಳ್ಳಬೇಕು ಎನ್ನುವವರು ಕ್ಯಾಮೆರಾ, ಕಾರ್ಡ್ ರೀಡರ್, ಟಚ್‌ಸ್ಕ್ರೀನ್ ಮುಂತಾದ ಹೆಚ್ಚುವರಿ ಯಂತ್ರಾಂಶ ಭಾಗಗಳನ್ನೂ ಕೊಂಡು ಬಳಸಬಹುದು.
ಇಷ್ಟೆಲ್ಲ ಸೌಲಭ್ಯಗಳನ್ನು ಪೂರ್ಣಪ್ರಮಾಣದ ಕಂಪ್ಯೂಟರುಗಳಿಗಿಂತ ಕಡಿಮೆ ಬೆಲೆಯಲ್ಲಿ ಒದಗಿಸುವುದು ಈ ಸಾಧನದ ಹೆಚ್ಚುಗಾರಿಕೆ. ಮೂಲತಃ ಶೈಕ್ಷಣಿಕ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಸೃಷ್ಟಿಯಾದ ಈ ಸಾಧನ ಇದೀಗ ವಿಶ್ವದೆಲ್ಲೆಡೆಯ ತಂತ್ರಜ್ಞಾನ ಆಸಕ್ತರನ್ನೂ ತನ್ನತ್ತ ಸೆಳೆದುಕೊಂಡಿರುವುದು ಇದೇ ಕಾರಣದಿಂದ.

Requirement

ರಿಕ್ವೈರ್‌ಮೆಂಟ್
Kannada Equivalent: (ರೂಪಿಸಬೇಕಿದೆ)
Short Description : ತಂತ್ರಾಂಶ ರಚನೆ ಅಥವಾ ಬದಲಾವಣೆಯ ಉದ್ದೇಶವನ್ನು ಕುರಿತ ವಿವರಗಳು
Long Description: ಹಲವು ಉದ್ದೇಶಗಳಿಗಾಗಿ ತಂತ್ರಾಂಶಗಳನ್ನು (ಸಾಫ್ಟ್‌ವೇರ್) ಸಿದ್ಧಪಡಿಸುವುದು, ಸಿದ್ಧ ತಂತ್ರಾಂಶದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುವುದು ತೀರಾ ಸಾಮಾನ್ಯ ಸಂಗತಿ.
ಹೀಗೆ ತಂತ್ರಾಂಶ ತಯಾರಿ ಅಥವಾ ಬದಲಾವಣೆಗೆ ಹೊರಡುವ ಮುನ್ನ ತಿಳಿದಿರಬೇಕಾದ ಮೊತ್ತಮೊದಲ ಸಂಗತಿ ಎಂದರೆ ಈ ಪ್ರಕ್ರಿಯೆಯಿಂದ ನಾವೇನು ನಿರೀಕ್ಷಿಸುತ್ತಿದ್ದೇವೆ ಎನ್ನುವುದರ ವಿವರ. ಸಾಫ್ಟ್‌ವೇರ್ ಕ್ಷೇತ್ರದ ಪರಿಭಾಷೆಯಲ್ಲಿ ಇದನ್ನು ರಿಕ್ವೈರ್‌ಮೆಂಟ್ ಎಂದು ಕರೆಯುತ್ತಾರೆ. ತಂತ್ರಾಂಶ ರಚನೆ ಅಥವಾ ಬದಲಾವಣೆಯಿಂದ ನಾವು ಏನನ್ನು ಸಾಧಿಸಲು ಹೊರಟಿದ್ದೇವೆ, ನಮ್ಮ ತಂತ್ರಾಂಶ ನಿರ್ದಿಷ್ಟವಾಗಿ ಪರಿಹರಿಸಬೇಕಾದ ಸಮಸ್ಯೆಗಳು ಯಾವುವು, ನಿರ್ದಿಷ್ಟ ಸನ್ನಿವೇಶಗಳಲ್ಲಿ ಅದರ ವರ್ತನೆ ಹೇಗಿರಬೇಕು ಎನ್ನುವುದನ್ನೆಲ್ಲ ಈ ಹಂತದಲ್ಲಿ ಗುರುತಿಸಿ ದಾಖಲಿಸಿಕೊಳ್ಳಲಾಗುತ್ತದೆ.
ತಂತ್ರಾಂಶ ಬೇಕಿರುವುದು ಬಳಕೆದಾರರಿಗೇ ಆದರೂ ಆ ತಂತ್ರಾಂಶದ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆಯಿರುವುದು, ಅದನ್ನೆಲ್ಲ ತಂತ್ರಜ್ಞಾನದ ಭಾಷೆಯಲ್ಲಿ ಹೇಳಲು ಸಾಧ್ಯವಾಗುವುದು ಅಪರೂಪ. ಅಲ್ಲದೆ ತಂತ್ರಾಂಶ ರಚನೆಯ ಕೆಲಸ ಶುರುವಾದ ಮೇಲೆ ಅದು ಮುಗಿಯುವಷ್ಟರಲ್ಲಿ ಬಳಕೆದಾರರ ಅಗತ್ಯಗಳು ಬದಲಾಗುವುದೂ ಉಂಟು. ಇಂತಹ ಸನ್ನಿವೇಶಗಳನ್ನು ತಪ್ಪಿಸಲು ಈ ಹಂತದಲ್ಲಿ ದಾಖಲಿಸಿಕೊಂಡ ಅಷ್ಟೂ ವಿಷಯಗಳನ್ನು ಒಂದು ಕಡತದಲ್ಲಿ ಅಡಕಗೊಳಿಸಿ ಬಳಕೆದಾರರೊಡನೆ ಹಂಚಿಕೊಳ್ಳಲಾಗುತ್ತದೆ ಮತ್ತು ಅದರಲ್ಲಿರುವ ಅಂಶಗಳಿಗೆ ಅವರ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ತಂತ್ರಾಂಶ ರಚನೆ ಪ್ರಕ್ರಿಯೆ ನಡೆಯುತ್ತಿದ್ದಾಗ ಅದರ ಸ್ವರೂಪ ಬದಲಿಸಬೇಕಾದರೆ ಪಾಲಿಸಬೇಕಾದ ನಿಯಮಗಳನ್ನೂ (ಉದಾ: ಯಾವ ರೀತಿಯ ಬದಲಾವಣೆಗಳನ್ನು ಕೇಳುವಂತಿಲ್ಲ, ಯಾವ ಬದಲಾವಣೆಗಳನ್ನು ಹೆಚ್ಚಿನ ಸಮಸ್ಯೆಯಿಲ್ಲದೆ ಮಾಡಬಹುದು ಇತ್ಯಾದಿ) ಬಹಳಷ್ಟು ಬಾರಿ ಈ ಹಂತದಲ್ಲೇ ರೂಪಿಸಿಕೊಳ್ಳಲಾಗುತ್ತದೆ.

Refresh

ರಿಫ್ರೆಶ್
Kannada Equivalent: (ರೂಪಿಸಬೇಕಿದೆ)
Short Description : ನಾವು ವೀಕ್ಷಿಸುತ್ತಿರುವ ಪುಟದ ಮಾಹಿತಿಯನ್ನು ಮತ್ತೊಮ್ಮೆ ಪಡೆದುಕೊಳ್ಳುವ ಪ್ರಕ್ರಿಯೆ
Long Description: ಬಹಳಷ್ಟು ಜಾಲತಾಣಗಳಲ್ಲಿರುವ ಮಾಹಿತಿ ಆಗಿಂದಾಗ್ಗೆ ಬದಲಾಗುತ್ತಿರುವುದು ಸಾಮಾನ್ಯ ಸಂಗತಿ. ಇತ್ತೀಚಿನ ಸುದ್ದಿ, ಶೇರು ಬೆಲೆ, ಕ್ರಿಕೆಟ್ ಸ್ಕೋರುಗಳನ್ನೆಲ್ಲ ತೋರಿಸುವ ತಾಣಗಳಲ್ಲಿ ಇಂತಹ ಬದಲಾವಣೆಗಳು ಬಹಳ ಕ್ಷಿಪ್ರವಾಗಿರುತ್ತವೆ. ನಾವು ಈಗಾಗಲೇ ತೆರೆದಿರುವ ಪುಟದಲ್ಲಿ ಈ ಹೊಸ ಮಾಹಿತಿಯೂ ಕಾಣಿಸಿಕೊಳ್ಳುವಂತೆ ಮಾಡುವ ಪ್ರಕ್ರಿಯೆಯೇ ‘ರಿಫ್ರೆಶ್’.
ಯಾವುದೇ ಪುಟವನ್ನು ರಿಫ್ರೆಶ್ ಮಾಡುವುದು ಎಂದರೆ ಆ ಪುಟದ ಮಾಹಿತಿಯನ್ನು ಮತ್ತೊಮ್ಮೆ ಪಡೆಯುವುದು ಎಂದರ್ಥ. ಹೀಗೆ ಮಾಡಿದಾಗ ಅಲ್ಲಿರುವ ಹೊಸ ಮಾಹಿತಿ ನಮ್ಮ ಪರದೆಯಲ್ಲೂ ಕಾಣಿಸಿಕೊಳ್ಳುತ್ತದೆ.
ಬಹುತೇಕ ಬ್ರೌಸರ್ ತಂತ್ರಾಂಶಗಳಲ್ಲಿ F5 ಕೀಲಿಯನ್ನು ಒತ್ತುವ ಮೂಲಕ ಪುಟವನ್ನು ರಿಫ್ರೆಶ್ ಮಾಡಬಹುದು. ಹೀಗೆ ಮಾಡಿದಾಗ ಕೆಲವೊಮ್ಮೆ ಸ್ಥಳೀಯವಾಗಿ ಉಳಿಸಿಡಲಾಗಿರುವ (ಕ್ಯಾಶ್) ಮಾಹಿತಿಯನ್ನೇ ಮತ್ತೆ ತೋರಿಸುವ ಸಾಧ್ಯತೆಯಿರುತ್ತದೆ; ಇದರ ಬದಲಿಗೆ ಮಾಹಿತಿಯನ್ನು ಸರ್ವರ್‌ನಿಂದಲೇ ಹೊಸದಾಗಿ ಪಡೆಯುವಂತೆ ಮಾಡಲು Ctrl+F5 ಬಳಸಬಹುದು. ನಿರ್ದಿಷ್ಟ ಅವಧಿಗೊಮ್ಮೆ ಹೊಸ ಮಾಹಿತಿಯನ್ನು ತೋರಿಸುವ ಸ್ವಯಂಚಾಲಿತ ರಿಫ್ರೆಶ್ ವ್ಯವಸ್ಥೆಯೂ ಕೆಲವು ಜಾಲತಾಣಗಳಲ್ಲಿರುತ್ತದೆ.
ಮೊಬೈಲಿನಲ್ಲಿ ಫಂಕ್ಷನ್ ಕೀಲಿಗಳಿರುವುದಿಲ್ಲವಲ್ಲ, ಅಲ್ಲಿ ಬ್ರೌಸರಿನ ಸೆಟಿಂಗ್ಸ್‌ಗೆ ಹೋಗಿ ಪುಟವನ್ನು ರಿಫ್ರೆಶ್ ಮಾಡುವುದು ಸಾಧ್ಯ. ಪುಟದ ಮೇಲ್ತುದಿಯಿಂದ ಕೆಳಮುಖವಾಗಿ ಸ್ವೈಪ್ ಮಾಡುವುದು (ಪುಲ್‌ಡೌನ್) ಈ ಕೆಲಸ ಸಾಧಿಸಿಕೊಳ್ಳಲು ಇರುವ ಇನ್ನೊಂದು ಆಯ್ಕೆ.
ಅಂದಹಾಗೆ ರಿಫ್ರೆಶ್ ಬರಿಯ ಜಾಲತಾಣಗಳಿಗೆ – ಬ್ರೌಸರ್‌ಗಳಿಗೆ ಸೀಮಿತವಾದ ಸಂಗತಿಯೇನಲ್ಲ, ಕಂಪ್ಯೂಟರಿನ ಫೋಲ್ಡರುಗಳಲ್ಲೂ (ಹೊಸದಾಗಿ ಸೇರಿಸಿದ ಕಡತಗಳನ್ನು ನೋಡಲು) ರಿಫ್ರೆಶ್ ಮಾಡುವುದು ಸಾಧ್ಯ. ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಈ ಉದ್ದೇಶಕ್ಕಾಗಿ F5 ಕೀಲಿಯೇ ಬಳಕೆಯಾಗುತ್ತದೆ.

Refurbished

ರೀಫರ್ಬಿಶ್‌ಡ್
Kannada Equivalent: (ರೂಪಿಸಬೇಕಿದೆ)
Short Description : ತಯಾರಕರೇ ಸರಿಪಡಿಸಿ ಮತ್ತೆ ಹೊಸದಾಗಿಸಿದ ಸಾಧನ
Long Description: ರೀಫರ್ಬಿಶ್ಡ್ ಎನ್ನುವ ಪದವನ್ನು ‘ಮತ್ತೆ ಹೊಸದಾಗಿಸಿದ’ ಎಂದು ಅರ್ಥೈಸಬಹುದು. ವಾರಂಟಿ ಅವಧಿಯಲ್ಲಿ ಕೆಟ್ಟುಹೋದ ಸಾಧನಗಳನ್ನು ಗ್ರಾಹಕರು ಸೇವಾಕೇಂದ್ರಕ್ಕೆ ಮರಳಿಸುತ್ತಾರಲ್ಲ, ಅವುಗಳನ್ನು ತಯಾರಕರೇ ಸರಿಪಡಿಸಿ ಈ ಹೆಸರಿನಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡುತ್ತಾರೆ. ಅಂಗಡಿಗಳಲ್ಲಿ ಪ್ರದರ್ಶನಕ್ಕಿಟ್ಟ ಸಾಧನಗಳು, ಪರೀಕ್ಷೆ – ವಿಮರ್ಶೆಗೆ ಬಳಕೆಯಾಗುವ ಸಾಧನಗಳೂ ಇದೇ ಹಾದಿಯತ್ತ ಹೊರಳುವುದು ಸಾಧ್ಯ.
ರೀಫರ್ಬಿಶ್ಡ್ ಸಾಧನಗಳಿಗೆ ಒಂದಷ್ಟು ಅವಧಿಯ ವಾರಂಟಿಯನ್ನೂ ಕೊಡುವ ಅಭ್ಯಾಸವಿದೆ. ಇವುಗಳ ಬೆಲೆ, ಹೊಸ ಸಾಧನಗಳ ಹೋಲಿಕೆಯಲ್ಲಿ, ಸಹಜವಾಗಿಯೇ ಕಡಿಮೆಯಿರುತ್ತದೆ.
ಇಂತಹ ಸಾಧನಗಳು ಸೇವಾಕೇಂದ್ರಕ್ಕೆ ಹೋಗುವ ಮುನ್ನ ಒಂದಷ್ಟು ದಿನ ಬಳಕೆಯಾಗಿರುತ್ತವಲ್ಲ, ಹಾಗಾಗಿ ನಾವು ಕೊಳ್ಳುವ ರೀಫರ್ಬಿಶ್ಡ್ ಸಾಧನಗಳಲ್ಲಿ ಸಣ್ಣಪುಟ್ಟ ಗೀಚುಗಳು ಇರುವುದು ಸಾಧ್ಯ. ಆದರೆ ತಯಾರಕರೇ ಸಂಪೂರ್ಣವಾಗಿ ಪರೀಕ್ಷಿಸಿ ಅಗತ್ಯಬಿದ್ದಲ್ಲಿ ಹೊಸ ಭಾಗಗಳನ್ನೂ ಅಳವಡಿಸಿರುವುದರಿಂದ ಇವು ಸೆಕೆಂಡ್ ಹ್ಯಾಂಡ್ ಸಾಧನಗಳಿಗಿಂತ ಕೊಂಚ ಭಿನ್ನ ಎನ್ನಬಹುದು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App