भारतीय भाषाओं द्वारा ज्ञान

Knowledge through Indian Languages

Dictionary

Computer Tantrajnana Padavivarana Kosha (English-Kannada)

Kannada Abhivrudhhi Pradhikara and Ejnana Trust

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Format

ಫಾರ್ಮ್ಯಾಟ್
Kannada Equivalent: (ರೂಪಿಸಬೇಕಿದೆ)
Short Description : ಮಾಹಿತಿ ಶೇಖರಣಾ ಸಾಧನಗಳಲ್ಲಿ ಹೊಸದಾಗಿ ಫೈಲ್ ಸಿಸ್ಟಂ ರೂಪಿಸುವ ಪ್ರಕ್ರಿಯೆ. ಪದಸಂಸ್ಕರಣಾ ತಂತ್ರಾಂಶಗಳಲ್ಲಿ ಪುಟವನ್ನು-ಪಠ್ಯವನ್ನು ವಿನ್ಯಾಸಗೊಳಿಸುವ ಕ್ರಿಯೆಗೂ ಇದೇ ಹೆಸರು. ಕಡತಗಳ ವಿಧಗಳನ್ನೂ ಫಾರ್ಮ್ಯಾಟ್‌ಗಳೆಂದೇ ಕರೆಯುತ್ತಾರೆ.
Long Description: ತಂತ್ರಜ್ಞಾನದ ಜಗತ್ತಿನಲ್ಲಿ ಬೇರೆಬೇರೆ ಅರ್ಥವಿರುವ ಪದಗಳ ಬಳಕೆ ಅಪರೂಪವೇನಲ್ಲ. ಇಂತಹ ಪದಗಳ ಪೈಕಿ ‘ಫಾರ್ಮ್ಯಾಟ್’ ಕೂಡ ಒಂದು.
ಹಾರ್ಡ್ ಡಿಸ್ಕ್, ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಮುಂತಾದ ಸಾಧನಗಳೊಡನೆ ನಮ್ಮ ಕಂಪ್ಯೂಟರ್, ಮೊಬೈಲ್ ಅಥವಾ ಕ್ಯಾಮೆರಾಗಳು ವ್ಯವಹರಿಸಬೇಕೆಂದರೆ ಅವುಗಳಲ್ಲಿ ಸೂಕ್ತ ಫೈಲ್ ಸಿಸ್ಟಂ ಇರಬೇಕಾದ್ದು ಅತ್ಯಗತ್ಯ. ಇಂತಹ ಸಾಧನಗಳನ್ನು ಪರೀಕ್ಷಿಸಿ ಅವುಗಳಲ್ಲಿ ಹೊಸದಾಗಿ ಫೈಲ್ ಸಿಸ್ಟಂ ರೂಪಿಸುವ ಪ್ರಕ್ರಿಯೆಯನ್ನು ಫಾರ್ಮ್ಯಾಟಿಂಗ್ (‘ಫಾರ್ಮ್ಯಾಟ್ ಮಾಡುವುದು’) ಎಂದು ಕರೆಯುತ್ತಾರೆ. ಬಹುಪಾಲು ಹೊಸ ಸಾಧನಗಳು ಮುಂಚಿತವಾಗಿಯೇ ಫಾರ್ಮ್ಯಾಟ್ ಆಗಿರುತ್ತವೆ. ಹಳೆಯ ಸಾಧನಗಳನ್ನೂ ನಾವು ಅಗತ್ಯಬಿದ್ದಾಗ ಫಾರ್ಮ್ಯಾಟ್ ಮಾಡುವುದು ಸಾಧ್ಯ – ಆದರೆ ನೆನಪಿರಲಿ, ಹೀಗೆ ಮಾಡಿದಾಗ ಅದರಲ್ಲಿರುವ ಎಲ್ಲ ಮಾಹಿತಿಯೂ ಅಳಿಸಿಹೋಗುತ್ತದೆ!
ಮೈಕ್ರೋಸಾಫ್ಟ್ ವರ್ಡ್‌ನಂತಹ ಪದಸಂಸ್ಕರಣಾ ತಂತ್ರಾಂಶಗಳಲ್ಲಿ (ವರ್ಡ್ ಪ್ರಾಸೆಸರ್) ಪುಟಗಳನ್ನು – ಅದರಲ್ಲಿನ ಪಠ್ಯವನ್ನು ನಮ್ಮ ಇಚ್ಛೆಯಂತೆ ವಿನ್ಯಾಸಗೊಳಿಸುತ್ತೇವಲ್ಲ – ಆ ಪ್ರಕ್ರಿಯೆಯ ಹೆಸರೂ ಫಾರ್ಮ್ಯಾಟಿಂಗ್ ಎಂದೇ. ಪುಟದ ಗಾತ್ರ, ಅಂಚುಗಳಲ್ಲಿ ಬಿಡಬೇಕಾದ ಖಾಲಿ ಜಾಗ (ಮಾರ್ಜಿನ್), ಸಾಲುಗಳ ನಡುವೆ ಇರಬೇಕಾದ ಅಂತರ, ಅಕ್ಷರಗಳ ಶೈಲಿ ಇತ್ಯಾದಿಗಳನ್ನೆಲ್ಲ ಹೊಂದಿಸುವುದು ಈ ಪ್ರಕ್ರಿಯೆಯ ಅಂಗವಾಗಿಯೇ.
ಬೇರೆಬೇರೆ ಬಗೆಯ ಕಡತಗಳನ್ನು ಬೇರೆಬೇರೆ ರೀತಿಯಲ್ಲಿ ಉಳಿಸಬಹುದಾದ ವಿಧಗಳನ್ನು ‘ಫೈಲ್ ಫಾರ್ಮ್ಯಾಟ್’ ಎಂದು ಕರೆಯುತ್ತಾರೆ. ನಿರ್ದಿಷ್ಟ ಕಡತದಲ್ಲಿರುವ ಮಾಹಿತಿ ಹೇಗೆ ಸಂಯೋಜಿಸಲಾಗಿದೆ ಎನ್ನುವುದನ್ನು ಆ ಕಡತದ ಫಾರ್ಮ್ಯಾಟ್ ಸೂಚಿಸುತ್ತದೆ. ಬೇರೆಬೇರೆ ರೀತಿಯ ಕಡತಗಳನ್ನು ಗುರುತಿಸಲು ಬಳಕೆಯಾಗುವ ಜೆಪಿಜಿ, ಪಿಡಿಎಫ್, ಎಂಪಿ೩ ಇವುಗಳೆಲ್ಲ ಫೈಲ್ ಫಾರ್ಮ್ಯಾಟ್‌ನ ಉದಾಹರಣೆಗಳು.

Fast Charging

ಫಾಸ್ಟ್ ಚಾರ್ಜಿಂಗ್
Kannada Equivalent: (ರೂಪಿಸಬೇಕಿದೆ)
Short Description : ಸಾಮಾನ್ಯ ಚಾರ್ಜರುಗಳಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಸುವ ಮೂಲಕ ಬ್ಯಾಟರಿ ಬೇಗ ಚಾರ್ಜ್ ಆಗುವಂತೆ ಮಾಡುವ ತಂತಜ್ಞಾನ
Long Description: ಈಚಿನ ದಿನಗಳಲ್ಲಿ ಮೊಬೈಲ್ ಫೋನುಗಳೇನೋ ಸ್ಮಾರ್ಟ್ ಆಗುತ್ತಿವೆ, ಸರಿ. ಆದರೆ ಅವುಗಳ ಬ್ಯಾಟರಿಯಲ್ಲಿ ಮಾತ್ರ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ; ಪದೇಪದೇ ಚಾರ್ಜ್ ಮಾಡಬೇಕಾದ ಪರಿಸ್ಥಿತಿಯಿಂದ – ಪ್ರತಿಬಾರಿ ಚಾರ್ಜ್ ಮಾಡಲು ಗಂಟೆಗಟ್ಟಲೆ ಕಾಯಬೇಕಾದ ಫಜೀತಿಯಿಂದ ಇನ್ನೂ ಬಿಡುಗಡೆ ಸಿಕ್ಕಿಲ್ಲ.
ಫೋನ್ ಚಾರ್ಜ್ ಆಗಲು ಹೀಗೆ ಗಂಟೆಗಟ್ಟಲೆ ಕಾಯುವ ಬದಲಿಗೆ ಕೆಲವೇ ಸೆಕೆಂಡುಗಳಲ್ಲಿ ಪೂರ್ತಿ ಚಾರ್ಜ್ ಆಗುವ ಬ್ಯಾಟರಿ ಸಿಕ್ಕರೆ ಹೇಗೆ? ಈ ಪ್ರಶ್ನೆಗೆ ಉತ್ತರ ಹುಡುಕಲು ಹಲವು ಪ್ರಯತ್ನಗಳು ನಡೆದಿವೆ.
ಈಚೆಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ‘ಫಾಸ್ಟ್ ಚಾರ್ಜಿಂಗ್’ ತಂತ್ರಜ್ಞಾನ ಇಂತಹ ಪ್ರಯತ್ನಗಳಲ್ಲೊಂದು. ಸಾಮಾನ್ಯ ಚಾರ್ಜರುಗಳಿಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಸುವ ಮೂಲಕ ಬ್ಯಾಟರಿ ಬೇಗ ಚಾರ್ಜ್ ಆಗುವಂತೆ ಮಾಡುವುದು ಈ ತಂತ್ರಜ್ಞಾನದ ಉದ್ದೇಶ. ಸಾಮಾನ್ಯ ಚಾರ್ಜರುಗಳಿಗೆ ಹೋಲಿಸಿದಾಗ ಈ ತಂತ್ರಜ್ಞಾನ ಬಳಸುವ ಚಾರ್ಜರುಗಳು ಬ್ಯಾಟರಿ ಚಾರ್ಜ್ ಮಾಡಲು ಸರಿಸುಮಾರು ಅರ್ಧದಷ್ಟು ಸಮಯವನ್ನಷ್ಟೆ ತೆಗೆದುಕೊಳ್ಳುತ್ತವೆ.
ಕೆಲ ಮೊಬೈಲ್ ತಯಾರಕರು ತಮ್ಮ ಸಂಸ್ಥೆಯ ಮೊಬೈಲುಗಳ ಜೊತೆಗೇ ಫಾಸ್ಟ್ ಚಾರ್ಜರುಗಳನ್ನು ನೀಡುತ್ತಾರೆ. ಇನ್ನು ಕೆಲ ಮೊಬೈಲುಗಳ ಜೊತೆಗೆ ಫಾಸ್ಟ್ ಚಾರ್ಜರ್ ಬಾರದಿದ್ದರೂ ಮಾರುಕಟ್ಟೆಯಲ್ಲಿ ದೊರಕುವ ಬೇರೆ ಫಾಸ್ಟ್ ಚಾರ್ಜರ್ ಬಳಸಿ ಅವನ್ನೂ ಬೇಗನೆ ಚಾರ್ಜ್ ಮಾಡಿಕೊಳ್ಳಬಹುದು.

Phishing

ಫಿಶಿಂಗ್
Kannada Equivalent: (ರೂಪಿಸಬೇಕಿದೆ)
Short Description : ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಹಗರಣ
Long Description: ಬ್ಯಾಂಕಿನ ಹೆಸರಿನಲ್ಲಿ ಇಮೇಲ್ ಕಳುಹಿಸಿ ಬ್ಯಾಂಕ್ ಖಾತೆ – ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳುವುದು, ಅರ್ಜಿಯನ್ನೇ ಹಾಕದಿದ್ದಾಗಲೂ ಕೆಲಸಕೊಡುವುದಾಗಿ ಸಂದೇಶ ಕಳಿಸುವುದು, ಲಕ್ಷಾಂತರ ರೂಪಾಯಿ ಬಹುಮಾನದ ಆಸೆ ತೋರಿಸಿ ಅದನ್ನು ತಲುಪಿಸಲು ಹಣ ಕೇಳುವುದು – ವಿಶ್ವವ್ಯಾಪಿ ಜಾಲದ ಬಹುತೇಕ ಬಳಕೆದಾರರಿಗೆ ಇಂತಹ ಘಟನೆಗಳ ಅನುಭವ ಆಗಿರುತ್ತದೆ. ಇಂತಹ ಸಂದೇಶಗಳು ಇಮೇಲ್ ಮಾತ್ರವಲ್ಲದೆ ಎಸ್ಸೆಮ್ಮೆಸ್ ಮೂಲಕವೂ ನಮ್ಮತ್ತ ಬರುವುದು ಸಾಮಾನ್ಯವೇ ಆಗಿಹೋಗಿದೆ.
ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಈ ಹಗರಣಕ್ಕೆ ಫಿಶಿಂಗ್ ಎಂದು ಹೆಸರು.
ಫಿಶಿಂಗ್‌ಗೆ ಬಲಿಯಾಗುವ ಮಾಹಿತಿಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಮಾಹಿತಿಯದೇ ಹೆಚ್ಚಿನ ಪಾಲು; ಆದರೆ ಈ ಮಾಹಿತಿಯ ಜೊತೆಗೆ ಸಮುದಾಯ ತಾಣಗಳು ಹಾಗೂ ಇಮೇಲ್ ಖಾತೆಯ ಪಾಸ್‌ವರ್ಡ್‌ಗಳಂತಹ ಅನೇಕ ಬಗೆಯ ಮಾಹಿತಿಗಳೂ ಫಿಶಿಂಗ್ ಬಲೆಗೆ ಬೀಳುತ್ತವೆ.
ಫಿಶಿಂಗ್ ಪ್ರಯತ್ನದಲ್ಲಿ ಎಸ್ಸೆಮ್ಮೆಸ್, ಇಮೇಲ್ ಸಂದೇಶ, ನಕಲಿ ಜಾಲತಾಣಗಳನ್ನು ಬಳಸುವ ಬದಲು ದೂರವಾಣಿ ಕರೆಗಳ ಮೊರೆಹೋಗುವ ಕುತಂತ್ರಿಗಳೂ ಇದ್ದಾರೆ. ಇದು ಧ್ವನಿ ಅಥವಾ ‘ವಾಯ್ಸ್’ ಆಧರಿತ ಫಿಶಿಂಗ್ ಆದ್ದರಿಂದ ಈ ವಂಚನೆಯನ್ನು ವಿಶಿಂಗ್ ಎಂದು ಗುರುತಿಸಲಾಗುತ್ತದೆ. ಎಸ್ಸೆಮ್ಮೆಸ್ ಸಂದೇಶಗಳ ಮೂಲಕ ನಡೆಯುವ ಫಿಶಿಂಗ್‌ಗೆ ‘ಸ್ಮಿಶಿಂಗ್’ ಎಂದು ಹೆಸರು.

Feature Phone

ಫೀಚರ್ ಫೋನ್
Kannada Equivalent: (ರೂಪಿಸಬೇಕಿದೆ)
Short Description : ಸ್ಮಾರ್ಟ್‌ಫೋನ್ ಹೋಲಿಕೆಯಲ್ಲಿ ಸೀಮಿತ ಸೌಲಭ್ಯಗಳಿರುವ, ಕಡಿಮೆ ಬೆಲೆಗೆ ದೊರಕುವ ಮೊಬೈಲ್ ಫೋನು
Long Description: ಯಾರ ಕೈಯಲ್ಲಿ ನೋಡಿದರೂ ಒಂದೊಂದು ಸ್ಮಾರ್ಟ್‌ಫೋನ್, ಅದರೊಳಗೆ ಕಂಪ್ಯೂಟರನ್ನೂ ಮೀರಿಸುವ ಸಂಸ್ಕರಣಾ ಸಾಮರ್ಥ್ಯ ಇರುವುದು ಈಗ ತೀರಾ ಸಹಜ ಎಂದು ನಾವು ಭಾವಿಸುತ್ತೇವೆ. ಆದರೆ ಅಂಕಿ ಅಂಶಗಳ ಪ್ರಕಾರ ಭಾರತದ ಮೊಬೈಲ್ ಬಳಕೆದಾರರಲ್ಲಿ ಶೇ. ೬೫ರಷ್ಟು ಮಂದಿ ಇಂದಿಗೂ ಸ್ಮಾರ್ಟ್ ಫೋನ್ ಬಳಕೆದಾರರಲ್ಲ!
ಇಷ್ಟೆಲ್ಲ ದೊಡ್ಡ ಸಂಖ್ಯೆಯ ಬಳಕೆದಾರರು ಇಂದಿಗೂ ಮೊಬೈಲ್ ಬಳಸುವುದು ಮುಖ್ಯವಾಗಿ ದೂರವಾಣಿ ಕರೆಗಳಿಗಷ್ಟೇ. ಹಾಗಾಗಿ ಅವರು ಮೂಲಭೂತ ಸೌಲಭ್ಯಗಳಷ್ಟೇ ಇರುವ ಮೊಬೈಲುಗಳನ್ನು ಇಷ್ಟಪಡುತ್ತಾರೆ. ಕರೆಮಾಡುವುದು, ಎಸ್ಸೆಮ್ಮೆಸ್ ಕಳುಹಿಸುವುದೇ ಮೊದಲಾದ ಸೀಮಿತ ಸೌಲಭ್ಯಗಳಿರುವ, ಕಡಿಮೆ ಬೆಲೆಗೆ ದೊರಕುವ ಇಂತಹ ಫೋನುಗಳನ್ನೇ ‘ಫೀಚರ್ ಫೋನ್’ ಎಂದು ಗುರುತಿಸಲಾಗುತ್ತದೆ.
ಸ್ಮಾರ್ಟ್‌ಫೋನುಗಳಲ್ಲಿ ನಮಗಿಷ್ಟವಾದ ಆಪ್‌ಗಳನ್ನೆಲ್ಲ ಬಳಸುವಂತೆ ಈ ಫೋನುಗಳಲ್ಲಿ ಮಾಡಲಾಗುವುದಿಲ್ಲ – ಇಲ್ಲಿ ಯಾವೆಲ್ಲ ತಂತ್ರಾಂಶಗಳನ್ನು ಬಳಸಬಹುದೆಂದು ಫೋನಿನ ನಿರ್ಮಾತೃಗಳೇ ತೀರ್ಮಾನಿಸುತ್ತಾರೆ. ಸೀಮಿತ ಸೌಲಭ್ಯಗಳಿರುವುದರ ಅನುಕೂಲವೆಂದರೆ ಫೀಚರ್ ಫೋನುಗಳ ಬ್ಯಾಟರಿ ಸ್ಮಾರ್ಟ್‌ಫೋನ್ ಹೋಲಿಕೆಯಲ್ಲಿ ಹೆಚ್ಚುಕಾಲ ಬಾಳಿಕೆ ಬರುತ್ತದೆ.
ಸದ್ಯದ ಬಹಳಷ್ಟು ಫೀಚರ್ ಫೋನುಗಳು ೨ಜಿ ಸಂಪರ್ಕವನ್ನಷ್ಟೇ ಬಳಸುತ್ತವೆ. ೩ಜಿ-೪ಜಿ ಸಂಪರ್ಕಗಳನ್ನು ಬಳಸುವ, ಹೆಚ್ಚುವರಿ ಸೌಲಭ್ಯಗಳನ್ನು ಹೊಂದಿರುವ ಫೀಚರ್ ಫೋನುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೆಚ್ಚಿನ ಬಳಕೆದಾರರನ್ನು ಸ್ಮಾರ್ಟ್‌ಫೋನುಗಳತ್ತ ಸೆಳೆಯುವ ಪ್ರಯತ್ನವೂ ನಡೆದಿದೆ.

Favicon

ಫೇವೈಕನ್
Kannada Equivalent: (ರೂಪಿಸಬೇಕಿದೆ)
Short Description : ಜಾಲತಾಣವನ್ನು ತೆರೆದಿದ್ದಾಗ ಬ್ರೌಸರ್ ಕಿಟಕಿಯ ಮೇಲ್ಭಾಗದಲ್ಲಿ ಕಾಣಸಿಗುವ ಲಾಂಛನ
Long Description: ಅಂತರಜಾಲ ಸಂಪರ್ಕ ಬಳಸುವಾಗ ನಾವು ಒಂದಾದ ಮೇಲೆ ಒಂದರಂತೆ ಜಾಲತಾಣಗಳನ್ನು ತೆರೆಯುತ್ತಾ ಹೋಗುತ್ತೇವೆ. ಹಾಗೆ ತೆರೆದ ಜಾಲತಾಣಗಳು ಬೇರೆಬೇರೆ ಬ್ರೌಸರ್ ಕಿಟಕಿಗಳಲ್ಲೋ, ಒಂದೇ ಕಿಟಕಿಯ ವಿಭಿನ್ನ ಟ್ಯಾಬ್‌ಗಳಲ್ಲೋ ಕಾಣಿಸಿಕೊಳ್ಳುತ್ತವೆ ಎನ್ನುವುದೂ ನಮಗೆ ಗೊತ್ತು.
ಇಂತಹ ಪ್ರತಿಯೊಂದು ಕಿಟಕಿಯ ಮೇಲ್ಭಾಗದಲ್ಲೂ (ಬ್ರೌಸರಿನ ಟೈಟಲ್ ಬಾರ್‌ನಲ್ಲಿ) ನಾವು ತೆರೆದಿರುವ ತಾಣದ ಬಗ್ಗೆ ಕೆಲವು ಪದಗಳು ಮೂಡಿಬರುತ್ತವೆ. ಈ ಹೆಸರಿನ ಪಕ್ಕದಲ್ಲೇ ಪುಟ್ಟದೊಂದು ಚಿತ್ರವೂ ಇರುತ್ತದೆ. ಈ ಚಿತ್ರವನ್ನು ‘ಫೇವ್‌ಐಕನ್’ ಎಂದು ಗುರುತಿಸಲಾಗುತ್ತದೆ. ಇದು ‘ಫೇವರಿಟ್ ಐಕನ್’ ಎನ್ನುವ ಹೆಸರಿನ ಹ್ರಸ್ವರೂಪ.
ಗೂಗಲ್, ಫೇಸ್‌ಬುಕ್, ಜಿಮೇಲ್‌ಗಳಲ್ಲೆಲ್ಲ ಮಾಡಿದಂತೆ ಜಾಲತಾಣದ ಲಾಂಛನವನ್ನೇ ಅದರ ಫೇವ್‌ಐಕನ್ ಆಗಿಯೂ ಬಳಸುವುದು ಸಂಪ್ರದಾಯ. ಕೆಲ ತಾಣಗಳಲ್ಲಿ ಬೇರೆಯ ಚಿತ್ರಗಳೂ ಫೇವ್‌ಐಕನ್ ಆಗಿರುವುದುಂಟು. ಬ್ಲಾಗ್ ಸೇವೆ ಒದಗಿಸುವ ತಾಣದ ಲಾಂಛನವೇ ನಮ್ಮ ಬ್ಲಾಗುಗಳಲ್ಲೂ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ; ಆದರೆ ಅದನ್ನು ನಮ್ಮ ಇಷ್ಟದ ಚಿತ್ರಕ್ಕೆ ಬದಲಿಸಿಕೊಳ್ಳುವುದೂ ಸುಲಭ.
ಅಂದಹಾಗೆ ಬ್ರೌಸರುಗಳಲ್ಲಿ ಫೇವ್‌ಐಕನ್ ಪ್ರದರ್ಶಿಸುವ ಸೌಲಭ್ಯ ಪ್ರಾರಂಭವಾದದ್ದು ೧೯೯೯ರಲ್ಲಿ. ಈ ಸೌಲಭ್ಯವನ್ನು ಮೊದಲಿಗೆ ಪರಿಚಯಿಸಿದ ಬ್ರೌಸರ್ ಎಂಬ ಹೆಗ್ಗಳಿಕೆ ಆ ವರ್ಷ ಬಿಡುಗಡೆಯಾದ ‘ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೫’ಗೆ ಸಲ್ಲುತ್ತದೆ. ಬ್ರೌಸರ್ ಬಳಕೆದಾರರು ತಮಗೆ ಅಚ್ಚುಮೆಚ್ಚಿನದೆಂದು (ಫೇವರಿಟ್) ಉಳಿಸಿಟ್ಟುಕೊಂಡ ಜಾಲತಾಣಗಳ ವಿಳಾಸದೊಡನೆ ಪ್ರದರ್ಶಿಸಲು ಈ ಚಿತ್ರದ ಪರಿಕಲ್ಪನೆಯನ್ನು ಹುಟ್ಟುಹಾಕಲಾಯಿತಂತೆ.

Face recognition

ಫೇಸ್ ರೆಕಗ್ನಿಶನ್
Kannada Equivalent: (ರೂಪಿಸಬೇಕಿದೆ)
Short Description : ಮುಖಚರ್ಯೆಯನ್ನು ಗುರುತಿಸುವ ತಂತ್ರಜ್ಞಾನ
Long Description: ಪ್ರತಿಯೊಬ್ಬರಿಗೂ ವಿಶಿಷ್ಟವಾಗಿರುವ ಬೆರಳೊತ್ತಿನ ಸಹಾಯದಿಂದ ವ್ಯಕ್ತಿಗಳನ್ನು ಗುರುತಿಸುವುದನ್ನು ‘ಬಯೋಮೆಟ್ರಿಕ್ಸ್’ ಪರಿಕಲ್ಪನೆ ಸಾಧ್ಯವಾಗಿಸುತ್ತದಲ್ಲ, ಮನುಷ್ಯನ ಮುಖಚರ್ಯೆಯನ್ನು ಕೂಡ ಇದೇ ಉದ್ದೇಶಕ್ಕೆ ಬಳಸುವುದು ಸಾಧ್ಯ.
ಬೆರಳೊತ್ತನ್ನು ಗುರುತಿಸಲು ಫಿಂಗರ್‌ಪ್ರಿಂಟ್ ರೆಕಗ್ನಿಶನ್ ತಂತ್ರಜ್ಞಾನ ಬಳಕೆಯಾದಂತೆ ಮುಖಚರ್ಯೆಯನ್ನು ಗುರುತಿಸಲು ‘ಫೇಸ್ ರೆಕಗ್ನಿಶನ್’, ಅಂದರೆ ಮುಖಚರ್ಯೆಯನ್ನು ಗುರುತಿಸುವ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಮೂಗಿನ ಉದ್ದ-ಅಗಲ, ಕಣ್ಣಿನ ಸ್ಥಾನ, ಕೆನ್ನೆಯೆಲುಬಿನ ಆಕಾರ – ಹೀಗೆ ಮುಖದ ಅನೇಕ ಲಕ್ಷಣಗಳನ್ನು ದಾಖಲಿಸಿಕೊಂಡು ಗುರುತು ದೃಢೀಕರಣಕ್ಕಾಗಿ ಬಳಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ (ಹೀಗೆ ದಾಖಲಿಸಿಕೊಳ್ಳುವ ಮಾಹಿತಿಯನ್ನು ‘ಫೇಸ್‌ಪ್ರಿಂಟ್’ ಎಂದೂ ಗುರುತಿಸಲಾಗುತ್ತದೆ). ಒಮ್ಮೆ ಈ ಮಾಹಿತಿಯನ್ನೆಲ್ಲ ದಾಖಲಿಸಿಕೊಂಡಮೇಲೆ ಕ್ಯಾಮೆರಾ ಎದುರಿನ ವ್ಯಕ್ತಿಯ ಮುಖವನ್ನು ಇದರೊಡನೆ ಹೋಲಿಸಿನೋಡಿ ಅವರನ್ನು ಗುರುತಿಸುವುದು ಸಾಧ್ಯವಾಗುತ್ತದೆ.
ಸುರಕ್ಷತಾ ಕ್ರಮಗಳ ಅಂಗವಾಗಿ, ಹಣಕಾಸು ವ್ಯವಹಾರಗಳನ್ನು ದೃಢೀಕರಿಸಲು, ಗುಂಪಿನಲ್ಲಿರುವ ವ್ಯಕ್ತಿಗಳನ್ನು ಗುರುತಿಸಲು – ಹೀಗೆ ಈ ತಂತ್ರಜ್ಞಾನ ಹಲವಾರು ಉದ್ದೇಶಗಳಿಗಾಗಿ ಬಳಕೆಯಾಗುತ್ತದೆ. ಸಮಾಜಜಾಲದಲ್ಲಿ ಸೇರಿಸುವ ಚಿತ್ರಗಳಲ್ಲಿ ಯಾರಿದ್ದಾರೆ ಎಂದು ಊಹಿಸಿ ಹೇಳುತ್ತದಲ್ಲ, ಅದೂ ಈ ತಂತ್ರಜ್ಞಾನದ್ದೇ ಇನ್ನೊಂದು ರೂಪ. ಮೊಬೈಲ್ ಫೋನ್ ಸುರಕ್ಷತೆಗೆ ಪಾಸ್‌ವರ್ಡ್, ಫಿಂಗರ್‌ಪ್ರಿಂಟ್ ಇತ್ಯಾದಿಗಳನ್ನು ಬಳಸಿದಂತೆ ಮುಖಚರ್ಯೆಯನ್ನು ಗುರುತಿಸುವ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ. ಬೆಳಕು ಕಡಿಮೆಯಿದ್ದಾಗ, ವ್ಯಕ್ತಿಯ ಮುಖ ಅಷ್ಟೇನೂ ಸ್ಪಷ್ಟವಾಗಿ ಕಾಣದಿದ್ದಾಗ ಕೂಡ ಗುರುತಿಸುವಿಕೆ ಸರಿಯಾಗಿರುವಂತೆ ಮಾಡಲು ಫೇಸ್ ರೆಕಗ್ನಿಶನ್ ತಂತ್ರಜ್ಞಾನವನ್ನು ಸುಧಾರಿಸಲಾಗುತ್ತಿದೆ.

Firewall

ಫೈರ್‌ವಾಲ್
Kannada Equivalent: (ರೂಪಿಸಬೇಕಿದೆ)
Short Description : ಕಂಪ್ಯೂಟರ್ ವ್ಯವಸ್ಥೆಯನ್ನು ಪ್ರವೇಶಿಸಲು – ಅದರ ಸಂಯೋಜನೆಯನ್ನು ಬದಲಿಸಲು ನಡೆಯುವ ಅನಧಿಕೃತ ಪ್ರಯತ್ನಗಳನ್ನು ಗುರುತಿಸಿ ತಡೆಯುವ ವ್ಯವಸ್ಥೆ
Long Description: ಕಂಪ್ಯೂಟರ್ ಜಾಲಗಳಲ್ಲಿ (ನೆಟ್‌ವರ್ಕ್) ಮಾಹಿತಿ ಒಂದೆಡೆಯಿಂದ ಇನ್ನೊಂದೆಡೆಗೆ ಹರಿಯುವುದು ತೀರಾ ಸಾಮಾನ್ಯ. ಜಾಲಗಳ ಜಾಲವಾದ ಅಂತರಜಾಲದಲ್ಲಂತೂ ಮಾಹಿತಿಯ ಮಹಾಪೂರವೇ ಇರುತ್ತದೆ. ಹೀಗಿರುವಾಗ ನಮ್ಮ ಕಂಪ್ಯೂಟರಿನಿಂದ ಏನೆಲ್ಲ ಮಾಹಿತಿ ಹೊರಹೋಗುತ್ತಿದೆ, ಜಾಲದ ಸಂಪರ್ಕದಲ್ಲಿದ್ದಾಗ ಯಾರೆಲ್ಲ ನಮ್ಮ ಕಂಪ್ಯೂಟರನ್ನು ಪ್ರವೇಶಿಸಬಹುದು ಎನ್ನುವುದನ್ನೆಲ್ಲ ಗಮನಿಸಿಕೊಳ್ಳುವುದು ಅನಿವಾರ್ಯ.
ಈ ಕೆಲಸಕ್ಕಾಗಿ ಬಳಕೆಯಾಗುವ ವ್ಯವಸ್ಥೆಯೇ ‘ಫೈರ್‌ವಾಲ್’. ಹೆಸರೇ ಹೇಳುವಂತೆ ಅಂತರಜಾಲದ ಲೋಕದಲ್ಲಿ ನಮ್ಮ ಕಂಪ್ಯೂಟರಿಗೆ ಇದೊಂದು ಸುರಕ್ಷತಾ ಬೇಲಿಯಿದ್ದಂತೆ. ದುಷ್ಕರ್ಮಿಗಳು ನಮ್ಮ ಕಂಪ್ಯೂಟರನ್ನು ಪ್ರವೇಶಿಸಲು, ಅದರ ಸಂಯೋಜನೆಯನ್ನು ಬದಲಿಸಲು ಪ್ರಯತ್ನಿಸಿದರೆ ಅಂತಹ ಪ್ರಯತ್ನಗಳನ್ನು ಗುರುತಿಸಿ ವಿಫಲಗೊಳಿಸುವುದು ಫೈರ್‌ವಾಲ್‌ನ ಕೆಲಸ.
ಫೈರ್‌ವಾಲ್‌ಗಳು ತಂತ್ರಾಂಶ ಹಾಗೂ ಯಂತ್ರಾಂಶ ಎರಡೂ ರೂಪಗಳಲ್ಲಿ ಇರಬಹುದು. ಇಂದಿನ ದಿನಗಳಲ್ಲಿ ಅಂತರಜಾಲ ಸಂಪರ್ಕ ವ್ಯಾಪಕವಾಗಿರುವುದರಿಂದ ಎಲ್ಲ ಕಂಪ್ಯೂಟರ್ ಬಳಕೆದಾರರೂ ಫೈರ್‌ವಾಲ್ ಬಳಸುವುದು ಒಳ್ಳೆಯ ಅಭ್ಯಾಸ. ಕೆಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ (ಉದಾ: ವಿಂಡೋಸ್‌ನ ಕೆಲ ಆವೃತ್ತಿಗಳು) ಫೈರ್‌ವಾಲ್ ವ್ಯವಸ್ಥೆ ಪೂರ್ವನಿಯೋಜಿತವಾಗಿಯೇ ಇರುತ್ತದೆ. ಫೈರ್‌ವಾಲ್ ತಂತ್ರಾಂಶಗಳನ್ನು ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಿಕೊಂಡೂ ಬಳಸಬಹುದು; ಉತ್ತಮ ಗುಣಮಟ್ಟದ ತಂತ್ರಾಂಶವನ್ನು ನಂಬಲರ್ಹ ತಾಣಗಳಿಂದಲಷ್ಟೇ ಪಡೆದುಕೊಳ್ಳುವ ಎಚ್ಚರವೊಂದಿದ್ದರೆ ಸಾಕು!
ಅಂದಹಾಗೆ ಸ್ಮಾರ್ಟ್‌ಫೋನ್‌ಗಳಲ್ಲೂ ಫೈರ್‌ವಾಲ್ ಸೌಲಭ್ಯ ನೀಡುವ ಕೆಲ ಆಪ್‌ಗಳಿವೆ. ಅಂತಹ ಆಪ್‌ಗಳನ್ನು ಬಳಸಲು ಕೊಂಚ ತಾಂತ್ರಿಕ ಪರಿಣತಿ ಅಪೇಕ್ಷಣೀಯ.

File Association

ಫೈಲ್ ಅಸೋಸಿಯೇಶನ್
Kannada Equivalent: (ರೂಪಿಸಬೇಕಿದೆ)
Short Description : ಯಾವ ಬಗೆಯ ಕಡತವನ್ನು ಯಾವ ತಂತ್ರಾಂಶ ಬಳಸಿ ತೆರೆಯಬೇಕೆಂದು ಸೂಚಿಸುವ ಹೊಂದಾಣಿಕೆ
Long Description: ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರುಗಳನ್ನು ಬಳಸುವಾಗ ಭಾರೀ ಪ್ರಮಾಣದ ಮಾಹಿತಿ ನಮ್ಮ ಸಂಪರ್ಕಕ್ಕೆ ಬರುವುದು ಸಾಮಾನ್ಯ. ಈ ಮಾಹಿತಿ ಬೇರೆಬೇರೆ ರೀತಿಯ ಕಡತಗಳ ರೂಪದಲ್ಲಿರಬಹುದು. ಇಂತಹ ಕಡತದಲ್ಲಿರುವ ಮಾಹಿತಿಯ ಸ್ವರೂಪ ಹಾಗೂ ಅದನ್ನು ಹೇಗೆ ಉಳಿಸಿಡಲಾಗಿದೆ ಎನ್ನುವುದನ್ನು ಅದರ ‘ಫೈಲ್ ಟೈಪ್’ ಅಥವಾ ‘ಫೈಲ್ ಫಾರ್ಮ್ಯಾಟ್’ ಸೂಚಿಸುತ್ತದೆ.
ಕೆಲವು ಬಗೆಯ ಕಡತಗಳನ್ನು (ಉದಾ: ‘ಪಿಎಸ್‌ಡಿ’ ರೂಪದ ಫೋಟೋಶಾಪ್ ಚಿತ್ರ) ನಿರ್ದಿಷ್ಟ ತಂತ್ರಾಂಶದಲ್ಲಿ ಮಾತ್ರವೇ ತೆರೆಯಲು ಸಾಧ್ಯ. ಆದರೆ ಛಾಯಾಚಿತ್ರ, ಧ್ವನಿ, ಪಠ್ಯ ಮುಂತಾದ ಇನ್ನು ಕೆಲ ರೂಪದಲ್ಲಿರುವ ಕಡತಗಳನ್ನು ತೆರೆಯಲು ನಮ್ಮ ಆಯ್ಕೆಯ ಯಾವುದೇ ತಂತ್ರಾಂಶವನ್ನು ಬಳಸುವುದು ಸಾಧ್ಯ. ನಮ್ಮ ಕಂಪ್ಯೂಟರ್ ಇಲ್ಲವೇ ಫೋನಿನಲ್ಲಿ ಯಾವ ಬಗೆಯ ಕಡತವನ್ನು ಯಾವ ತಂತ್ರಾಂಶ ಬಳಸಿ ತೆರೆಯಬೇಕೆಂದು ಸೂಚಿಸುವ ಹೊಂದಾಣಿಕೆಯೇ ‘ಫೈಲ್ ಅಸೋಸಿಯೇಶನ್’.
ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಬಳಕೆದಾರರು ನಿರ್ದಿಷ್ಟ ಬಗೆಯ ಕಡತದ ಮೇಲೆ ರೈಟ್ ಕ್ಲಿಕ್ ಮಾಡಿದಾಗ ಕಾಣುವ ‘ಓಪನ್ ವಿಥ್’ ಆಯ್ಕೆಯಡಿಯಲ್ಲಿ ಅದನ್ನು ಯಾವ ತಂತ್ರಾಂಶ ಬಳಸಿ ತೆರೆಯಬೇಕೆಂದು ಸೂಚಿಸುವುದು ಸಾಧ್ಯ. ಇಂತಹುದೇ ಸೌಲಭ್ಯ ಸ್ಮಾರ್ಟ್‌ಫೋನುಗಳಲ್ಲೂ ಇರುತ್ತದೆ (ಆಂಡ್ರಾಯ್ಡ್‌ನಲ್ಲಿ ‘ಸೆಟಿಂಗ್ಸ್ > ಆಪ್ಸ್’): ನಿರ್ದಿಷ್ಟ ಜಾಲತಾಣದ ಕೊಂಡಿಯನ್ನು ಬ್ರೌಸರಿನಲ್ಲಿ ತೆರೆಯಬೇಕೋ ಆ ತಾಣದ ಆಪ್‌ನಲ್ಲಿ ತೆರೆಯಬೇಕೋ ಎನ್ನುವುದರಿಂದ ಪ್ರಾರಂಭಿಸಿ ಇಮೇಲ್ ವಿಳಾಸವೊಂದರ ಮೇಲೆ ಕ್ಲಿಕ್ ಮಾಡಿದಾಗ ಯಾವ ಆಪ್ ತೆರೆದುಕೊಳ್ಳಬೇಕು ಎನ್ನುವವರೆಗೆ ಹಲವು ಬಗೆಯ ಆಯ್ಕೆಗಳನ್ನು ಅಲ್ಲಿ ನಾವು ನೋಡಬಹುದು.

File extension

ಫೈಲ್ ಎಕ್ಸ್‌ಟೆನ್ಶನ್
Kannada Equivalent: (ರೂಪಿಸಬೇಕಿದೆ)
Short Description : ಕಡತವೊಂದರ ಹೆಸರಿನ ಉತ್ತರಾರ್ಧ; ಅದು ಯಾವ ಬಗೆಯ ಕಡತ ಎನ್ನುವುದನ್ನು ಸೂಚಿಸುವ ವಿಶೇಷಣ
Long Description: ಕಂಪ್ಯೂಟರಿನಲ್ಲಿ ಯಾವುದೇ ಕಡತವನ್ನು ಉಳಿಸಿಡುವಾಗ ಅದಕ್ಕೊಂದು ಹೆಸರಿಡುವುದು ನಮಗೆಲ್ಲ ಗೊತ್ತೇ ಇದೆ. ಕಡತಗಳನ್ನು ಹೀಗೆ ಉಳಿಸಿಡಲು ನಾವು ಯಾವ ತಂತ್ರಾಂಶವನ್ನು ಬಳಸುತ್ತೇವೋ ಅದಕ್ಕೆ ಅನುಗುಣವಾಗಿ ಕಡತದ ಹೆಸರಿಗೊಂದು ಬಾಲಂಗೋಚಿ, ಅಂದರೆ ಫೈಲ್ ಎಕ್ಸ್‌ಟೆನ್ಷನ್ ಸೇರ್ಪಡೆಯಾಗುವುದನ್ನು ನೀವು ಗಮನಿಸಿರಬಹುದು. ನೋಟ್‌ಪ್ಯಾಡ್ ಕಡತಗಳಿಗೆ ‘.ಟಿಎಕ್ಸ್‌ಟಿ’, ಮೈಕ್ರೋಸಾಫ್ಟ್ ವರ್ಡ್ ಕಡತಕ್ಕೆ ‘.ಡಿಒಸಿ’, ಸಿನಿಮಾ ಹಾಡಿನ ಫೈಲಿಗೆ ‘.ಎಂಪಿ೩’ – ಹೀಗೆ ಸಾಗುತ್ತದೆ ಫೈಲ್ ಎಕ್ಸ್‌ಟೆನ್ಷನ್‌ಗಳ ಈ ಪಟ್ಟಿ.
ಚಿತ್ರಗಳೂ ಅಷ್ಟೆ. ನಮ್ಮ ಕಂಪ್ಯೂಟರಿನಲ್ಲಿರುವ ಚಿತ್ರಗಳನ್ನೆಲ್ಲ ಒಟ್ಟುಸೇರಿಸಿ ನೋಡಿದರೆ ಆ ಕಡತಗಳ ಹೆಸರಿಗೆ ಬೇರೆಬೇರೆ ಬಗೆಯ ಎಕ್ಸ್‌ಟೆನ್ಷನ್‌ಗಳಿರುವುದು ನಮ್ಮ ಗಮನಕ್ಕೆ ಬರುತ್ತದೆ. ಅವುಗಳಲ್ಲಿ ಕೆಲವು ಜೆಪಿಜಿ ಕಡತಗಳಾಗಿದ್ದರೆ ಇನ್ನು ಕೆಲವು ಬಿಎಂಪಿ, ಇನ್ನಷ್ಟು ಪಿಎನ್‌ಜಿ, ಒಂದೆರಡು ಪಿಎಸ್‌ಡಿ, ಮಿಕ್ಕವು ಪಿಎನ್‌ಜಿ.
ಇವು, ಹಾಗೂ ಇಂತಹ ಇನ್ನೂ ಹಲವು ಎಕ್ಸ್‌ಟೆನ್ಷನ್‌ಗಳು ಕಂಪ್ಯೂಟರಿನಲ್ಲಿ ಆ ಚಿತ್ರಗಳನ್ನು ಹೇಗೆ ಉಳಿಸಿಡಲಾಗಿದೆ ಎನ್ನುವುದನ್ನು ಸೂಚಿಸುತ್ತವೆ. ಇವನ್ನು ಫೈಲ್ ಫಾರ್ಮ್ಯಾಟ್ಸ್ ಅಥವಾ ಫೈಲ್ ಟೈಪ್ಸ್ ಎಂದೂ ಕರೆಯುತ್ತಾರೆ. ಚಿತ್ರದ ಗಾತ್ರವನ್ನು ಕುಗ್ಗಿಸಲು ಬಳಸಲಾದ ವಿಧಾನ, ಚಿತ್ರವನ್ನು ರೂಪಿಸಲು ಬಳಕೆಯಾದ ತಂತ್ರಾಂಶ – ಇಂತಹ ಹಲವು ವಿವರಗಳನ್ನು ಫೈಲ್ ಫಾರ್ಮ್ಯಾಟುಗಳು ಹೇಳಬಲ್ಲವು. ಈ ಪೈಕಿ ಕೆಲವು ಬಗೆಯ ಕಡತಗಳನ್ನು ಸುಲಭವಾಗಿ ಎಲ್ಲ ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳಲ್ಲೂ ವೀಕ್ಷಿಸಬಹುದಾದರೆ ಇನ್ನು ಕೆಲವನ್ನು (ಉದಾ: ಪಿಎಸ್‌ಡಿ – ಫೋಟೋಶಾಪ್ ಕಡತ) ತೆರೆಯಲು ನಿರ್ದಿಷ್ಟ ತಂತ್ರಾಂಶಗಳೇ ಬೇಕು.

File recovery

ಫೈಲ್ ರಿಕವರಿ
Kannada Equivalent: (ರೂಪಿಸಬೇಕಿದೆ)
Short Description : ಸಾಮಾನ್ಯ ವಿಧಾನದಲ್ಲಿ ತೆರೆಯಲು ಸಾಧ್ಯವಾಗದ ಕಡತಗಳನ್ನು ವಿಶೇಷ ತಂತ್ರಾಂಶಗಳ ನೆರವಿನಿಂದ ತೆರೆಯುವ ಪ್ರಯತ್ನ
Long Description: ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನೆಲ್ಲ ಮತ್ತೆ ಮತ್ತೆ ಬಳಸುತ್ತಿರುವುದು ಸುಲಭ, ನಿಜ. ಆದರೆ ಮಾಹಿತಿ ತುಂಬುವ – ಅಳಿಸುವ – ಮತ್ತೆ ತುಂಬುವ ಈ ಪ್ರಕ್ರಿಯೆ ಒಂದಷ್ಟು ಸಾರಿ ಪುನರಾವರ್ತನೆ ಆಗುತ್ತಿದ್ದಂತೆ ಆ ಸಾಧನದ ವಿಶ್ವಾಸಾರ್ಹತೆ ಕಡಿಮೆಯಾಗುತ್ತ ಬರುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ಅದರಲ್ಲಿರುವ ಮಾಹಿತಿಯನ್ನು ಓದುವುದೇ ಸಾಧ್ಯವಾಗುವುದಿಲ್ಲ!
ಹೀಗಾಗಲು ಹಲವು ಕಾರಣಗಳಿರಬಹುದು. ಬಹಳಷ್ಟು ಸಾರಿ ಬಳಸಿ ಹಳೆಯದಾಗಿರುವುದರಿಂದ ಅದು ಹಾಳಾಗಿರಬಹುದು, ಅಥವಾ ಬ್ಯಾಡ್ ಸೆಕ್ಟರ್ ಸಮಸ್ಯೆ ಸೃಷ್ಟಿಯಾಗಿರಬಹುದು. ಅಷ್ಟೇ ಏಕೆ, ವೈರಸ್ ಬಂದಿರುವ ಅಥವಾ ಕಂಪ್ಯೂಟರಿನಲ್ಲೇ ಸಮಸ್ಯೆಯಿರುವ ಸಾಧ್ಯತೆಯೂ ಇರುತ್ತದೆ.
ಇಂತಹ ಸನ್ನಿವೇಶದಲ್ಲಿ ಮೊದಲು ಅದನ್ನು ಬೇರೊಂದು ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಬಳಸಲು ಪ್ರಯತ್ನಿಸಬಹುದು. ಆಂಟಿವೈರಸ್ ತಂತ್ರಾಂಶ ಬಳಸಿ ವೈರಸ್ ಕಾಟವೇನಾದರೂ ಇದೆಯೇ ಎಂದೂ ಪರೀಕ್ಷಿಸಬಹುದು.
ಇಷ್ಟಾದರೂ ಸಮಸ್ಯಾತ್ಮಕ ಮೆಮೊರಿ ಕಾರ್ಡ್ ಅಥವಾ ಪೆನ್‌ಡ್ರೈವನ್ನು ತೆರೆಯುವುದು ಸಾಧ್ಯವಾಗುತ್ತಿಲ್ಲ ಎಂದರೆ ಫೈಲ್ ರಿಕವರಿ ತಂತ್ರಾಂಶಗಳ ಮೊರೆಹೋಗಬೇಕಾದ್ದು ಅನಿವಾರ್ಯವಾಗುತ್ತದೆ.
ಸಾಮಾನ್ಯ ಮಾರ್ಗದಲ್ಲಿ ಓದಲು ಸಾಧ್ಯವಾಗದ ಮಾಹಿತಿಯನ್ನು ಹಲವು ಬಗೆಯ ಶೇಖರಣಾ ಮಾಧ್ಯಮಗಳಿಂದ ಮರಳಿ ಪಡೆಯಲು ನೆರವಾಗುವುದು ಈ ತಂತ್ರಾಂಶಗಳ ವೈಶಿಷ್ಟ್ಯ. ಅಳಿಸಿಹೋದ ಮಾಹಿತಿಯನ್ನು ಮರಳಿ ಪಡೆಯುವಲ್ಲೂ ಈ ತಂತ್ರಾಂಶಗಳು ನೆರವಾಗಬಲ್ಲವು.
ಹತ್ತಾರು ಬಗೆಯ ಫೈಲ್ ರಿಕವರಿ ತಂತ್ರಾಂಶಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ; ಅವುಗಳಲ್ಲಿ ಕೆಲವು ಉಚಿತವಾಗಿಯೂ ದೊರಕುವುದು ವಿಶೇಷ (ವಿವರಗಳಿಗೆ ಗೂಗಲ್ ಮಾಡಿ ನೋಡಬಹುದು). ಆದರೆ ನೆನಪಿರಲಿ: ಇಂತಹ ತಂತ್ರಾಂಶಗಳನ್ನು ಬಳಸಿದ ಮಾತ್ರಕ್ಕೆ ನಿಮ್ಮ ಮಾಹಿತಿಯೆಲ್ಲ ಸಿಕ್ಕಿಬಿಡುತ್ತದೆ ಎನ್ನುವ ಯಾವುದೇ ಖಾತ್ರಿ ಇರುವುದಿಲ್ಲ!

File System

ಫೈಲ್ ಸಿಸ್ಟಂ
Kannada Equivalent: (ರೂಪಿಸಬೇಕಿದೆ)
Short Description : ಮಾಹಿತಿ ಶೇಖರಣಾ ಸಾಧನಗಳಲ್ಲಿ ಕಡತಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ನೆರವಾಗುವ ವ್ಯವಸ್ಥೆ
Long Description: ಕಂಪ್ಯೂಟರುಗಳಲ್ಲಿ, ಸ್ಮಾರ್ಟ್‌ಫೋನಿನಲ್ಲಿ ಭಾರೀ ಸಂಖ್ಯೆಯ ಕಡತಗಳನ್ನು ಸಂಗ್ರಹಿಸಿಡುವಲ್ಲಿ ನಾವು ನಿಷ್ಣಾತರು. ಹೀಗೆ ನಾವು ಶೇಖರಿಸಿಡುವ ಟೆರಾಬೈಟ್‌ಗಟ್ಟಲೆ ಮಾಹಿತಿಯ ಜೊತೆಗೆ ಕಾರ್ಯಾಚರಣ ವ್ಯವಸ್ಥೆ ಹಾಗೂ ವಿವಿಧ ತಂತ್ರಾಂಶಗಳೂ ಅಗಾಧ ಪ್ರಮಾಣದಲ್ಲಿ ಕಡತಗಳನ್ನು ಉಳಿಸಿಡುತ್ತವೆ.
ಇಷ್ಟೆಲ್ಲ ಕಡತಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ನೆರವಾಗುವ ವ್ಯವಸ್ಥೆಯ ಹೆಸರೇ ‘ಫೈಲ್ ಸಿಸ್ಟಂ’. ನಮ್ಮ ಕಡತಗಳನ್ನು ವಿವಿಧ ಫೋಲ್ಡರುಗಳಲ್ಲಿ ಶೇಖರಿಸಿಡಲು ಹಾಗೂ ನಿರ್ದಿಷ್ಟ ವಿಳಾಸಕ್ಕೆ ಹೋಗುವ ಮೂಲಕ ಹಾಗೆ ಉಳಿಸಿಟ್ಟ ಕಡತಗಳನ್ನು ಮತ್ತೆ ಪಡೆದುಕೊಳ್ಳಲು ನೆರವಾಗುವುದು ಈ ವ್ಯವಸ್ಥೆಯ ವೈಶಿಷ್ಟ್ಯ.
ಕಡತಗಳನ್ನು, ಫೋಲ್ಡರುಗಳನ್ನು ಹೆಸರಿಸುವಾಗ ಪಾಲಿಸಬೇಕಾದ ನಿಯಮಗಳನ್ನೂ ಈ ವ್ಯವಸ್ಥೆಯೇ ತೀರ್ಮಾನಿಸುತ್ತದೆ. ಕಡತದ ಹೆಸರು ಇಷ್ಟೇ ಅಕ್ಷರಗಳಿರಬೇಕು, ಇಂತಹ ಚಿಹ್ನೆಗಳನ್ನು ಹೆಸರಿನಲ್ಲಿ ಉಪಯೋಗಿಸಬಾರದು ಎನ್ನುವಂತಹ ನಿರ್ಬಂಧಗಳಿರುತ್ತವಲ್ಲ, ಅವನ್ನೆಲ್ಲ ಕಾರ್ಯಗತಗೊಳಿಸುವುದೂ ಫೈಲ್ ಸಿಸ್ಟಂನದೇ ಕೆಲಸ. ಕಡತ – ಫೋಲ್ಡರುಗಳನ್ನು ಮೊದಲಿಗೆ ರೂಪಿಸಿದ – ಬದಲಿಸಿದ ದಿನಾಂಕಗಳು, ಮೆಮೊರಿಯಲ್ಲಿ ಅವು ಬಳಸುತ್ತಿರುವ ಸ್ಥಳಾವಕಾಶ ಮುಂತಾದ ಪೂರಕ ಮಾಹಿತಿಯನ್ನು (ಮೆಟಾಡೇಟಾ) ನಿರ್ವಹಿಸುವ ಕೆಲಸ ಕೂಡ ಈ ವ್ಯವಸ್ಥೆಯದೇ.
ಬೇರೆಬೇರೆ ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಉಪಯೋಗಿಸುವ ಸಾಧನಗಳು ಬೇರೆಬೇರೆ ರೀತಿಯ ಫೈಲ್ ಸಿಸ್ಟಂಗಳನ್ನು ಬಳಸುವುದು ಸಾಧ್ಯ. FAT32 ಹಾಗೂ NTFS – ಇವು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಫೈಲ್ ಸಿಸ್ಟಂಗೆ ಉದಾಹರಣೆಗಳು.

Photoshop

ಫೋಟೋಶಾಪ್
Kannada Equivalent: (ರೂಪಿಸಬೇಕಿದೆ)
Short Description : ಚಿತ್ರಗಳ ರಚನೆ ಹಾಗೂ ಸಂಪಾದನೆಯಲ್ಲಿ ಬಳಕೆಯಾಗುವ ತಂತ್ರಾಂಶ; ಅಡೋಬಿ ಸಂಸ್ಥೆಯ ಉತ್ಪನ್ನ. ಕಂಪ್ಯೂಟರ್ ಸಹಾಯದಿಂದ ಚಿತ್ರಗಳನ್ನು ಬದಲಿಸುವ ಕೆಲಸವನ್ನು ‘ಫೋಟೋಶಾಪಿಂಗ್’ ಎಂದು ಗುರುತಿಸಲಾಗುತ್ತದೆ.
Long Description: ಅತ್ಯಂತ ಜನಪ್ರಿಯ ಕಂಪ್ಯೂಟರ್ ತಂತ್ರಾಂಶಗಳ ಪೈಕಿ ಅಗ್ರಗಣ್ಯ ಹೆಸರು ಫೋಟೋಶಾಪ್‌ನದು. ಈ ತಂತ್ರಾಂಶದ ಜನಪ್ರಿಯತೆ ಎಷ್ಟರಮಟ್ಟದ್ದು ಎಂದರೆ ಕಂಪ್ಯೂಟರ್ ಸಹಾಯದಿಂದ ಚಿತ್ರಗಳನ್ನು ಬದಲಿಸುವ ಕೆಲಸವನ್ನು ‘ಫೋಟೋಶಾಪಿಂಗ್’ ಎಂದೇ ಗುರುತಿಸಲಾಗುತ್ತದೆ.
ಫೋಟೋಶಾಪ್ ತಂತ್ರಾಂಶವನ್ನು ಥಾಮಸ್ ಮತ್ತು ಜಾನ್ ನಾಲ್ ಎಂಬ ಸಹೋದರರು ೧೯೮೮ರಲ್ಲಿ ರೂಪಿಸಿದರು. ಮೊದಲಿಗೆ ಈ ತಂತ್ರಾಂಶ ಮ್ಯಾಕ್ (ಆಪಲ್) ಕಂಪ್ಯೂಟರುಗಳಲ್ಲಷ್ಟೇ ಕೆಲಸಮಾಡುತ್ತಿತ್ತು. ಕೆಲ ಸಮಯದ ನಂತರ ಅಡೋಬಿ ಸಂಸ್ಥೆ ಈ ತಂತ್ರಾಂಶವನ್ನು ಕೊಂಡಾಗ ಫೋಟೋಶಾಪ್ ಹೆಸರಿನ ಹಿಂದಕ್ಕೆ ಅಡೋಬಿ ಸಂಸ್ಥೆಯ ಹೆಸರೂ ಸೇರಿಕೊಂಡು ಸಾಫ್ಟ್‌ವೇರ್ ಪ್ರಪಂಚದ ಅತ್ಯಂತ ಜನಪ್ರಿಯ ನಾಮಧೇಯವೊಂದು ಸೃಷ್ಟಿಯಾಯಿತು.
ಅಲ್ಲಿಂದ ಮುಂದೆ ನಡೆದದ್ದೆಲ್ಲ ಇತಿಹಾಸವೇ. ಚಿತ್ರವಿನ್ಯಾಸಕರಿಗೆ ಈ ತಂತ್ರಾಂಶದ ಅಪಾರ ಸಾಧ್ಯತೆಗಳು ಅರಿವಾಗುತ್ತಿದ್ದಂತೆ ಅವರು ಹೆಚ್ಚಿನ ಸಂಖ್ಯೆಯಲ್ಲಿ ಫೋಟೋಶಾಪ್ ಬಳಕೆದಾರರಾದರು. ವಿಂಡೋಸ್ ಜನಪ್ರಿಯತೆ ಹೆಚ್ಚಿದಂತೆ ಫೋಟೋಶಾಪ್‌ನ ವಿಂಡೋಸ್ ಆವೃತ್ತಿಯೂ ಬಂತು.
ಚಿತ್ರಗಳ ವಿಷಯಕ್ಕೆ ಬಂದರೆ ಈಗಂತೂ ಫೋಟೋಶಾಪ್‌ನಲ್ಲಿ ಏನೇನು ಸಾಧ್ಯ ಎನ್ನುವುದಕ್ಕಿಂತ ಏನೇನು ಸಾಧ್ಯವಿಲ್ಲ ಎಂದು ಹುಡುಕುವುದೇ ಸುಲಭವೇನೋ. ಯಾವುದೋ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಸಾಧಾರಣ ಚಿತ್ರವೂ ಫೋಟೋಶಾಪ್ ಪರಿಣತರ ಕೈಚಳಕದಿಂದ ಅದ್ಭುತ ಕಲಾಕೃತಿಯಾಗಿ ಬದಲಾಗಬಲ್ಲದು. ಬಣ್ಣ-ಕುಂಚಗಳನ್ನೆಲ್ಲ ಬಿಟ್ಟು ಫೋಟೋಶಾಪ್ (ಮತ್ತು ಅದರಂತಹ ಇನ್ನಿತರ ಕೆಲ ತಂತ್ರಾಂಶಗಳ) ಸಹಾಯದಿಂದ ಕಲೆಯ ಸೃಷ್ಟಿ ಮಾಡುವ ಡಿಜಿಟಲ್ ಆರ್ಟ್ ಎಂಬ ಕ್ಷೇತ್ರವೇ ರೂಪುಗೊಂಡಿದೆ.
ಡೆಸ್ಕ್‌ಟಾಪ್-ಲ್ಯಾಪ್‌ಟಾಪ್ ಕಂಪ್ಯೂಟರುಗಳ ಪರಿಮಿತಿಯನ್ನು ದಾಟಿ ಹೊರಬಂದಿರುವ ಫೋಟೋಶಾಪ್ ಈಗ ಸ್ಮಾರ್ಟ್‌ಫೋನುಗಳಲ್ಲೂ ಬಳಕೆಗೆ ಸಿಗುತ್ತಿದೆ. ತಿಂಗಳಿಗೆ ಇಷ್ಟೆಂದು ಶುಲ್ಕ ನೀಡಿ ಕ್ಲೌಡ್ ತಂತ್ರಜ್ಞಾನದ ಮೂಲಕ ಈ ತಂತ್ರಾಂಶವನ್ನು ಬಳಸುವುದು ಕೂಡ ಸಾಧ್ಯವಾಗಿದೆ.

Phablet

ಫ್ಯಾಬ್ಲೆಟ್
Kannada Equivalent: (ರೂಪಿಸಬೇಕಿದೆ)
Short Description : ಸಾಮಾನ್ಯ ಮೊಬೈಲ್ ಹಾಗೂ ಟ್ಯಾಬ್ಲೆಟ್ ನಡುವಿನ ಗಾತ್ರದ ಮೊಬೈಲ್ ಫೋನ್; ‘ಫೋನ್’ ಹಾಗೂ ‘ಟ್ಯಾಬ್ಲೆಟ್’ ಜೋಡಿಸಿ ಈ ಹೆಸರನ್ನು ರೂಪಿಸಲಾಗಿದೆ.
Long Description: ಮೊಬೈಲ್ ದೂರವಾಣಿಗಳು ಮೊದಲಿಗೆ ಕಾಣಿಸಿಕೊಂಡಾಗ ಅವುಗಳಲ್ಲಿರುತ್ತಿದ್ದದ್ದು ಪುಟ್ಟದೊಂದು ಪರದೆಯಷ್ಟೇ. ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಬಂದು ಕಂಪ್ಯೂಟರಿನಲ್ಲಿ ಮಾಡುವ ಹೆಚ್ಚೂಕಡಿಮೆ ಎಲ್ಲ ಕೆಲಸಗಳನ್ನೂ ಅವುಗಳಲ್ಲಿ ಮಾಡಬಹುದು ಎಂದಾಗ ಪರದೆ ಇನ್ನಷ್ಟು ದೊಡ್ಡದಿರಬೇಕು ಎನ್ನಿಸಲು ಶುರುವಾಯಿತು; ಒಂದೆರಡು ಇಂಚಿನ ಪರದೆಯ ಜಾಗದಲ್ಲಿ ಮೂರು-ನಾಲ್ಕು ಇಂಚಿನ ಪರದೆಗಳು ಕಾಣಿಸಿಕೊಂಡವು.
ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆ ಅವುಗಳ ಉಪಯೋಗವೂ ಹೆಚ್ಚಿತಲ್ಲ, ಅಷ್ಟೆಲ್ಲ ಕೆಲಸಗಳಿಗೆ ಇನ್ನೂ ದೊಡ್ಡ ಪರದೆ ಬೇಕು ಎನ್ನಿಸಲು ಶುರುವಾದದ್ದು ಆಗ. ಏಳೆಂಟು ಇಂಚಿನ ಪರದೆಯಿರುವ ಟ್ಯಾಬ್ಲೆಟ್‌ಗಳು ಜನಪ್ರಿಯವಾದದ್ದೂ ಇದೇ ಕಾರಣಕ್ಕಾಗಿ.
ಆದರೆ ಎರಡೆರಡು ಸಾಧನಗಳನ್ನು ನಿಭಾಯಿಸುವುದು ನಿಧಾನಕ್ಕೆ ಕಿರಿಕಿರಿಯೆನಿಸಲು ಶುರುವಾಯಿತು. ಮೊಬೈಲ್ ಫೋನಿನ ಪರದೆ ಇನ್ನಷ್ಟು ದೊಡ್ಡದಾಗಿರಬೇಕು ಎನ್ನುವ ಬೇಡಿಕೆಗೆ ಕಾರಣವಾದದ್ದು ಇದೇ ಅಂಶ. ಇದರ ಪರಿಣಾಮವಾಗಿ ಕಾಣಿಸಿಕೊಂಡವುಗಳೇ ಈಗ ನಾವು ನೋಡುವ ದೊಡ್ಡ ಪರದೆಯ ಫೋನುಗಳು.
ಸಾಮಾನ್ಯ ಮೊಬೈಲ್ (೫.೫ ಇಂಚಿಗಿಂತ ಸಣ್ಣದು) ಹಾಗೂ ಟ್ಯಾಬ್ಲೆಟ್ (೭ ಇಂಚಿಗಿಂತ ದೊಡ್ಡದು) ನಡುವಿನ ಗಾತ್ರದ ಈ ಮೊಬೈಲುಗಳನ್ನು (೫.೫-೭ ಇಂಚಿನ ಪರದೆ) ‘ಫ್ಯಾಬ್ಲೆಟ್’ ಎಂದು ಗುರುತಿಸಲಾಗುತ್ತದೆ. ಇದು ಫೋನ್ ಹಾಗೂ ಟ್ಯಾಬ್ಲೆಟ್ ಎನ್ನುವ ಹೆಸರುಗಳನ್ನು ಸೇರಿಸಿ ರೂಪಿಸಲಾದ ಹೊಸ ನಾಮಧೇಯ.

Front end

ಫ್ರಂಟ್ ಎಂಡ್
Kannada Equivalent: (ರೂಪಿಸಬೇಕಿದೆ)
Short Description : ಜಾಲತಾಣ ಅಥವಾ ತಂತ್ರಾಂಶದಲ್ಲಿ ಮೇಲ್ನೋಟಕ್ಕೆ ನಮ್ಮ ಗಮನಕ್ಕೆ ಬರುವ ಸಂಗತಿಗಳನ್ನು ಸೂಚಿಸುವ ಹೆಸರು
Long Description: ಕಂಪ್ಯೂಟರ್ ಪ್ರಪಂಚದಲ್ಲಿ ನೂರೆಂಟು ಸಂಗತಿಗಳಿರುತ್ತವಲ್ಲ, ಅವೆಲ್ಲದರ ವಿವರಗಳನ್ನು ಕೇಳುತ್ತ ಹೋದರೆ ಇದೆಷ್ಟು ಕ್ಲಿಷ್ಟ ಎಂಬ ಭಾವನೆ ಬಾರದೆ ಇರದು. ಒಂದು ಜಾಲತಾಣದ ವಿಷಯವನ್ನೇ ತೆಗೆದುಕೊಂಡರೆ ಅದರ ಹಿನ್ನೆಲೆಯಲ್ಲಿ ಅದೆಷ್ಟೋ ಸಂಗತಿಗಳು (ಸರ್ವರ್, ಡೇಟಾಬೇಸ್ ಇತ್ಯಾದಿ) ಅಡಗಿರುತ್ತವೆ. ಅವೆಲ್ಲದರ ಪೈಕಿ ನಮ್ಮ ಗಮನಕ್ಕೆ ಬರುವುದು ಜಾಲತಾಣದ ವಿನ್ಯಾಸ, ಚಿತ್ರಗಳು, ಅದರಲ್ಲಿರುವ ಮಾಹಿತಿ – ಹೀಗೆ ಪರದೆಯ ಮೇಲೆ ಕಾಣುವುದೆಷ್ಟೋ ಅಷ್ಟೇ!
ಜಾಲತಾಣ ಅಥವಾ ತಂತ್ರಾಂಶದಲ್ಲಿ ಹೀಗೆ ನಮ್ಮ ಗಮನಕ್ಕೆ ಬರುವ ಸಂಗತಿಗಳನ್ನು ‘ಫ್ರಂಟ್ ಎಂಡ್’ ಎಂದು ಗುರುತಿಸಲಾಗುತ್ತದೆ. ಜಾಲತಾಣದಲ್ಲಿ ಕಾಣುವ ಮಾಹಿತಿ, ಅಲ್ಲಿ ನಾವು ಬಳಸುವ ಆಯ್ಕೆಗಳು, ಇಮೇಲ್ ಸಂದೇಶ ಕಳುಹಿಸಲು ಬಳಸುವ ಪರದೆ – ಇದೆಲ್ಲ ಫ್ರಂಟ್ ಎಂಡ್ ಪರಿಧಿಯೊಳಗೆ ಬರುತ್ತದೆ. ಇನ್ನಿತರ ತಂತ್ರಾಂಶಗಳಲ್ಲೂ ಅಷ್ಟೇ, ನಮ್ಮ ಕಣ್ಣಿಗೆ ಏನೆಲ್ಲ ಕಾಣುತ್ತದೋ ಅದೆಲ್ಲವನ್ನೂ ‘ಫ್ರಂಟ್ ಎಂಡ್’ ಎಂದೇ ಕರೆಯಬಹುದು. ಇದಕ್ಕೆ ‘ಯೂಸರ್ ಇಂಟರ್‌ಫೇಸ್’ ಎಂಬ ಹೆಸರೂ ಇದೆ.

Fragmentation

ಫ್ರಾಗ್ಮೆಂಟೇಶನ್
Kannada Equivalent: (ರೂಪಿಸಬೇಕಿದೆ)
Short Description : ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಒಂದೇ ಕಡತದ ತುಣುಕುಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಬೇರೆಬೇರೆ ಕಡೆ ಉಳಿಸಿಡುವ ಪ್ರಕ್ರಿಯೆ
Long Description: ಕಂಪ್ಯೂಟರಿನಲ್ಲಿ ಮಾಹಿತಿಯನ್ನು ಉಳಿಸಿಡುತ್ತೇವಲ್ಲ, ಅದೆಲ್ಲ ಶೇಖರವಾಗುವುದು ಹಾರ್ಡ್ ಡಿಸ್ಕ್‌ನ ಭಾಗವಾದ ಲೋಹದ ತಟ್ಟೆಗಳ ಮೇಲ್ಮೈಯಲ್ಲಿ.
ಕಡತಗಳನ್ನು ಹೀಗೆ ಶೇಖರಿಸುವಾಗ ಅವುಗಳ ಅಷ್ಟೂ ಮಾಹಿತಿಯನ್ನು ಒಟ್ಟಿಗೆ ಒಂದೇ ಘಟಕದಂತೆ ಉಳಿಸಿಡುವುದು ಅಪೇಕ್ಷಣೀಯ. ಆದರೆ ಕಂಪ್ಯೂಟರ್ ಬಳಸುವಾಗ ಕಡತಗಳನ್ನು ಉಳಿಸುವ – ಅಳಿಸುವ ಪ್ರಕ್ರಿಯೆ ಪದೇಪದೇ ನಡೆಯುವುದರಿಂದ ಕಡತಗಳ ಮಾಹಿತಿಯಷ್ಟನ್ನೂ ಒಂದೇಕಡೆ ಉಳಿಸಲು ಜಾಗ ದೊರಕದೆ ಹೋಗಬಹುದು.
ಇಂತಹ ಸಂದರ್ಭಗಳಲ್ಲಿ ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಕಡತವನ್ನು ವಿಭಜಿಸಿ, ಆ ತುಣುಕುಗಳನ್ನು ಹಾರ್ಡ್ ಡಿಸ್ಕ್ ಮೇಲ್ಮೈಯಲ್ಲಿ ಬೇರೆಬೇರೆ ಕಡೆ ಉಳಿಸಿಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಫ್ರಾಗ್ಮೆಂಟೇಶನ್ ಎಂದು ಗುರುತಿಸಲಾಗುತ್ತದೆ.
ಹೀಗೆ ಕಡತವನ್ನು ಉಳಿಸಿಡುವಾಗ ತುಣುಕುಗಳಾಗಿ ವಿಭಜಿಸುವ – ಮತ್ತೆ ತೆರೆಯುವಾಗ ಅವನ್ನೆಲ್ಲ ಒಟ್ಟಿಗೆ ಸೇರಿಸುವ ಕ್ರಿಯೆ ಹಿನ್ನೆಲೆಯಲ್ಲೇ ನಡೆಯುವುದರಿಂದ ಇದು ಬಳಕೆದಾರರಿಗೆ ಗೊತ್ತಾಗುವುದಿಲ್ಲ; ಆದರೆ ಇದಕ್ಕೆಲ್ಲ ಹೆಚ್ಚುವರಿಯಾಗಿ ಕೆಲಸಮಾಡಬೇಕಾದ್ದರಿಂದ ಕಂಪ್ಯೂಟರಿನ ಕಾರ್ಯಾಚರಣೆ ಕಾಲಕ್ರಮೇಣ ನಿಧಾನವಾಗುತ್ತದೆ.
ಇದನ್ನು ತಪ್ಪಿಸಲು ಕಾಲಕಾಲಕ್ಕೆ ಕಡತದ ಎಲ್ಲ ತುಣುಕುಗಳನ್ನೂ ಜೋಡಿಸಿ ಒಂದೇಕಡೆ ಉಳಿಸಿಡುವುದು ಅಗತ್ಯವಾಗುತ್ತದೆ. ಇದನ್ನು ಡೀಫ್ರಾಗ್ಮೆಂಟೇಶನ್ ಎಂದು ಕರೆಯುತ್ತಾರೆ. ಬಹುತೇಕ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲೂ ಈ ಕೆಲಸ ಮಾಡುವ ತಂತ್ರಾಂಶಗಳಿರುತ್ತವೆ. ಕೆಲ ಸಂದರ್ಭಗಳಲ್ಲಿ ಈ ತಂತ್ರಾಂಶಗಳು ಸ್ವಯಂಚಾಲಿತವಾಗಿಯೂ ಕೆಲಸಮಾಡುತ್ತವೆ; ಅವನ್ನು ನಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸುವುದೂ ಸಾಧ್ಯ.

Frame Rate

ಫ್ರೇಮ್ ರೇಟ್
Kannada Equivalent: (ರೂಪಿಸಬೇಕಿದೆ)
Short Description : ನಿರ್ದಿಷ್ಟ ವೀಡಿಯೋದಲ್ಲಿ ಒಂದು ಸೆಕೆಂಡಿಗೆ ಎಷ್ಟು ಫ್ರೇಮ್(ಚಿತ್ರ)ಗಳನ್ನು ಸೆರೆಹಿಡಿಯಲಾಗಿದೆ ಅಥವಾ ಪ್ರದರ್ಶಿಸಲಾಗುತ್ತಿದೆ ಎನ್ನುವುದರ ಮಾಪನ
Long Description: ಮಾನವನ ಮೆದುಳು ಚಿತ್ರಗಳನ್ನು ಗ್ರಹಿಸುವ ರೀತಿ ವಿಶಿಷ್ಟವಾದದ್ದು. ನಿರ್ದಿಷ್ಟ ಸಮಯದ ಅಂತರದಲ್ಲಿ ಪ್ರದರ್ಶಿಸಿದಾಗ ಚಿತ್ರಗಳನ್ನು ಪ್ರತ್ಯೇಕವಾಗಿಯೇ ಗುರುತಿಸುವ ಮೆದುಳು ಸಮಯದ ಅಂತರ ಕಡಿಮೆಯಾದಂತೆ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸುವಲ್ಲಿ ಸೋಲುತ್ತದೆ. ಛಾಯಾಚಿತ್ರಗಳ ಸರಣಿ ಚಲನಚಿತ್ರವಾಗಿ ಬದಲಾಗುವುದು ಹೀಗೆಯೇ: ಬಿಡಿಚಿತ್ರಗಳ ಸರಣಿಯನ್ನು ಪಟಪಟನೆ ಪ್ರದರ್ಶಿಸಿದಾಗ ಅವುಗಳ ನಡುವಿನ ವ್ಯತ್ಯಾಸ ಮಸುಕಾಗಿ ಅಲ್ಲಿನ ವಿಷಯಗಳು ಚಲಿಸುವಂತೆ ಕಾಣಲು ಶುರುವಾಗುತ್ತದೆ.
ನಾವು ಕ್ಯಾಮೆರಾದಲ್ಲಿ ಸೆರೆಹಿಡಿಯುವ, ಜಾಲಲೋಕದಲ್ಲಿ ನೋಡುವ ವೀಡಿಯೋ ಕಡತಗಳಲ್ಲಿ ಚಿತ್ರಗಳನ್ನು ಎಷ್ಟು ವೇಗವಾಗಿ ಪ್ರದರ್ಶಿಸಲಾಗುತ್ತದೆ ಎನ್ನುವುದನ್ನು ಆ ವೀಡಿಯೋದ ‘ಫ್ರೇಮ್ ರೇಟ್’ ತಿಳಿಸುತ್ತದೆ. ಫ್ರೇಮ್ಸ್ ಪರ್ ಸೆಕೆಂಡ್ (ಎಫ್‌ಪಿಎಸ್) ಎನ್ನುವುದು ಫ್ರೇಮ್ ರೇಟನ್ನು ಅಳೆಯುವ ಏಕಮಾನ. ನಿರ್ದಿಷ್ಟ ವೀಡಿಯೋದಲ್ಲಿ ಒಂದು ಸೆಕೆಂಡಿಗೆ ಎಷ್ಟು ಫ್ರೇಮ್(ಚಿತ್ರ)ಗಳನ್ನು ಸೆರೆಹಿಡಿಯಲಾಗಿದೆ ಅಥವಾ ಪ್ರದರ್ಶಿಸಲಾಗುತ್ತಿದೆ ಎಂದು ಸೂಚಿಸುವುದು ಇದರ ಕೆಲಸ. ಈ ಸಂಖ್ಯೆ ಹೆಚ್ಚಿದ್ದಷ್ಟೂ ವೀಡಿಯೋ ನೋಡುವ ಅನುಭವ ಹೆಚ್ಚು ಆಪ್ತವೆನಿಸುತ್ತದೆ.
ಉದಾಹರಣೆಗೆ, ಸೆಕೆಂಡಿಗೆ ಎಂಟು – ಹತ್ತು ಚಿತ್ರಗಳನ್ನಷ್ಟೇ ಪ್ರದರ್ಶಿಸುವ ವೀಡಿಯೋ ಆದರೆ (೮-೧೦ ಎಫ್‌ಪಿಎಸ್) ಅದರ ಗುಣಮಟ್ಟ ಅಷ್ಟೇನೂ ಚೆನ್ನಾಗಿದೆ ಎನ್ನಿಸುವುದಿಲ್ಲ. ಅಷ್ಟೇ ಏಕೆ, ಚಿತ್ರಗಳು ಬೇರೆಬೇರೆಯಾಗಿ ಕಾಣುವುದರಿಂದ ನಾವು ವೀಡಿಯೋ ನೋಡುತ್ತಿದ್ದೇವೆ ಎಂಬ ಭಾವನೆಯೂ ಬರಲಿಕ್ಕಿಲ್ಲವೇನೋ. ಹಾಗಾಗಿ ವೀಡಿಯೋಗಳ ಫ್ರೇಮ್ ರೇಟ್ ಸಾಮಾನ್ಯವಾಗಿ ೨೪ ಎಫ್‌ಪಿಎಸ್ ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. ೫೦-೬೦ ಎಫ್‌ಪಿಎಸ್‌ಗಿಂತ ಹೆಚ್ಚಿನ ಗುಣಮಟ್ಟದ ವೀಡಿಯೋಗಳು ಇದೀಗ ಸಾಮಾನ್ಯವಾಗುತ್ತಿವೆ.

Flaming

ಫ್ಲೇಮಿಂಗ್
Kannada Equivalent: (ರೂಪಿಸಬೇಕಿದೆ)
Short Description : ದ್ವೇಷಪೂರಿತವಾದ, ಇತರರನ್ನು ಕೆರಳಿಸುವಂತಹ ಸಂದೇಶಗಳನ್ನು ಕಳಿಸುವ ಮೂಲಕ ಸಮಾಜಜಾಲಗಳಲ್ಲಿ ಅಶಾಂತಿ ಉಂಟುಮಾಡುವ ಪ್ರಕ್ರಿಯೆ
Long Description: ಅಂತರಜಾಲದಿಂದಾಗಿ ನಮಗೆ ಹಲವು ಹೊಸ ಸಂವಹನ ವಿಧಾನಗಳು ದೊರೆತಿವೆ. ಈ ಸಂವಹನ ವಿಧಾನಗಳ ನೆರವಿನಿಂದ ಇಬ್ಬರ ನಡುವಿನ ನೇರ ಸಂವಹನವಷ್ಟೇ ಅಲ್ಲದೆ ಏಕಕಾಲದಲ್ಲಿ ಗುಂಪುಗಳೊಡನೆಯೂ ವಿಚಾರವಿನಿಮಯ ನಡೆಸುವುದು ಸಾಧ್ಯವಾಗಿದೆ. ಇದನ್ನು ಸಾಧ್ಯವಾಗಿಸಿರುವ ಸವಲತ್ತುಗಳ ಪಟ್ಟಿಯಲ್ಲಿ ಫೇಸ್‌ಬುಕ್‌ನಂತಹ ಸಮಾಜಜಾಲಗಳಿಗೆ, ಗ್ರೂಪ್ ಚಾಟ್ ಸೌಲಭ್ಯ ನೀಡುವ ವಾಟ್ಸ್‌ಆಪ್‌ನಂತಹ ತಂತ್ರಾಂಶಗಳಿಗೆ ಪ್ರಮುಖ ಸ್ಥಾನ.
ಒಬ್ಬರಿಗಿಂತ ಹೆಚ್ಚು ಜನರೊಡನೆ ಸಂವಹನ ನಡೆಸುವಾಗ ಅದು ಯಾವಾಗಲೂ ಸೌಹಾರ್ದಯುತವಾಗಿರಬೇಕು ಎಂದೇನೂ ಇಲ್ಲವಲ್ಲ! ಹಾಗಾಗಿಯೇ ಇಲ್ಲಿ ಜಗಳಗಳು, ದೂಷಣೆ, ಅವಹೇಳನಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಅಷ್ಟೇ ಏಕೆ, ಜಗಳಕ್ಕೆ ಸದಾಸಿದ್ಧರೂ ಇಲ್ಲಿ ಸಿಗುತ್ತಾರೆ.
ಸಂವಾದಗಳಲ್ಲಿ ದ್ವೇಷಪೂರಿತವಾದ, ಇತರರನ್ನು ಕೆರಳಿಸುವಂತಹ ಸಂದೇಶಗಳನ್ನು ಕಳಿಸುವುದು ಇಂಥವರ ಕಾರ್ಯವಿಧಾನ. ಇಂತಹ ಸಂದೇಶಗಳನ್ನು ‘ಫ್ಲೇಮ್’ (ಬೆಂಕಿಯ ಉರಿ, ಜ್ವಾಲೆ) ಎಂದೂ, ಗುಂಪಿನ ಸದಸ್ಯರ ನಡುವೆ ಜಗಳ ಪ್ರಾರಂಭಿಸುವ ಈ ಪ್ರಕ್ರಿಯೆಯನ್ನು ‘ಫ್ಲೇಮಿಂಗ್’ (ಉರಿಯೆಬ್ಬಿಸು) ಎಂದೂ ಗುರುತಿಸಲಾಗುತ್ತದೆ. ಈ ಪೈಕಿ ಸಾಮಾನ್ಯ ಸಂವಾದಗಳಲ್ಲಿ ಜಗಳ ಹುಟ್ಟಿಸುವುದು ಒಂದು ವಿಧಾನವಾದರೆ ಜಗಳ ಸೃಷ್ಟಿಸಲೆಂದೇ ಸಂವಾದಗಳನ್ನು ಪ್ರಾರಂಭಿಸುವುದು ಇನ್ನೊಂದು ವಿಧ. ಕೋಪೋದ್ರೇಕದ ಪ್ರತಿಕ್ರಿಯೆಗಳನ್ನು ಪಡೆಯಲೆಂದೇ ಸಂದೇಶಗಳನ್ನು ಹಂಚಿಕೊಳ್ಳುವ ಈ ಕ್ರಿಯೆಗೆ ‘ಫ್ಲೇಮ್‌ಬೇಯ್ಟ್’ (ಬೇಯ್ಟ್ = ಪ್ರಲೋಭನೆ) ಎಂಬ ಹೆಸರೂ ಇದೆ.

Flight Mode

ಫ್ಲೈಟ್ ಮೋಡ್
Kannada Equivalent: (ರೂಪಿಸಬೇಕಿದೆ)
Short Description : ಮೊಬೈಲ್ ಫೋನಿನ ಬಾಹ್ಯ ಸಂಪರ್ಕಗಳನ್ನು ಸ್ಥಗಿತಗೊಳಿಸುವ ಸೌಕರ್ಯ; ವಿಮಾನ ಪ್ರಯಾಣದ ಸಂದರ್ಭದಲ್ಲಿ ಇದನ್ನು ಬಳಸುವುದು ಕಡ್ಡಾಯ.
Long Description: ಮೊಬೈಲಿನಿಂದ ಹೊರಡುವ ಅಥವಾ ಅದನ್ನು ತಲುಪುವ ರೇಡಿಯೋ ತರಂಗಾಂತರದ (ರೇಡಿಯೋ-ಫ್ರೀಕ್ವೆನ್ಸಿ) ಸಂಕೇತಗಳನ್ನು ನಿರ್ಬಂಧಿಸುವುದು ಫ್ಲೈಟ್ ಮೋಡ್‌ನ ಉದ್ದೇಶ. ಇದನ್ನು ಬಳಸಿದಾಗ ನಮ್ಮ ಮೊಬೈಲಿನ ನೆಟ್‌ವರ್ಕ್ ಸಂಪರ್ಕ ಕಡಿದುಹೋಗುತ್ತದೆ, ಅಂತರಜಾಲ ಸಂಪರ್ಕ – ಬ್ಲೂಟೂತ್ ಇತ್ಯಾದಿಗಳು ನಿಷ್ಕ್ರಿಯವಾಗುತ್ತವೆ. ಫೋಟೋ ಕ್ಲಿಕ್ಕಿಸುವುದು, ಹಾಡು ಕೇಳುವುದು ಮುಂತಾದ – ಬಾಹ್ಯ ಸಂಪರ್ಕದ ಅಗತ್ಯವಿಲ್ಲದೆ ಮಾಡಬಹುದಾದ – ಕೆಲಸಗಳನ್ನು ಮಾತ್ರ ಯಾವುದೇ ನಿರ್ಬಂಧವಿಲ್ಲದೆ ಮಾಡಿಕೊಳ್ಳಬಹುದು.
ಟೇಕ್-ಆಫ್‌ನಿಂದ ಪ್ರಾರಂಭಿಸಿ ಲ್ಯಾಂಡಿಂಗ್‌ವರೆಗೆ ವಿಮಾನ ಪ್ರಯಾಣದಲ್ಲಿ ಮೊಬೈಲ್ ಬಳಕೆ ನಿಷಿದ್ಧ. ಮೊಬೈಲ್ ಸಂಕೇತಗಳು ವಿಮಾನದ ನಿಯಂತ್ರಣ ಹಾಗೂ ಸಂವಹನ ವ್ಯವಸ್ಥೆಗಳೊಡನೆ ಹಸ್ತಕ್ಷೇಪ ಮಾಡದಿರಲಿ ಎನ್ನುವುದು ಈ ನಿಷೇಧದ ಉದ್ದೇಶ. ಇದಕ್ಕೆ ಕಾರಣವಾದ ಸಂಕೇತಗಳನ್ನಷ್ಟೆ ನಿರ್ಬಂಧಿಸಿ ಮೊಬೈಲಿನ ಬೇರೆ ಸೌಲಭ್ಯಗಳನ್ನು ಬಳಸಲು ಅನುವುಮಾಡಿಕೊಡುವುದರಿಂದಲೇ ಫ್ಲೈಟ್ ಮೋಡ್ ಹೆಸರಿನಲ್ಲಿ ವಿಮಾನಕ್ಕೂ ಜಾಗ ಸಿಕ್ಕಿದೆ. ಅಂದಹಾಗೆ ಬೇರೆಬೇರೆ ಮೊಬೈಲುಗಳಲ್ಲಿ ಇದನ್ನು ಏರ್‌ಪ್ಲೇನ್ ಮೋಡ್ ಅಥವಾ ಏರೋಪ್ಲೇನ್ ಮೋಡ್ ಎಂದೂ ಗುರುತಿಸಲಾಗುತ್ತದೆ.
ಫ್ಲೈಟ್ ಮೋಡ್‌ನಲ್ಲಿದ್ದಾಗ ಮೊಬೈಲಿನ ಬ್ಯಾಟರಿ ಸಾಮಾನ್ಯಕ್ಕಿಂತ ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಮೊಬೈಲ್ ಕರೆ-ಸಂದೇಶಗಳ ಕಾಟ ಜಾಸ್ತಿ ಎನ್ನಿಸಿದಾಗ, ಮೊಬೈಲನ್ನು ಅಲಾರಂ ಗಡಿಯಾರದಂತೆಯೋ ಎಂಪಿ೩ ಪ್ಲೇಯರಿನಂತೆಯೋ ಮಾತ್ರವೇ ಬಳಸಬೇಕು ಎನ್ನಿಸಿದಾಗ ಇದನ್ನು ಖಂಡಿತಾ ಬಳಸಿ ನೋಡಬಹುದು!

Flowchart

ಫ್ಲೋಚಾರ್ಟ್
Kannada Equivalent: ಪ್ರವಾಹನಕ್ಷೆ
Short Description : ಯಾವುದೇ ಕೆಲಸವನ್ನು ಪ್ರಾರಂಭಿಸುವುದರಿಂದ ಮುಗಿಸುವವರೆಗಿನ ಎಲ್ಲ ಹೆಜ್ಜೆಗಳನ್ನೂ ಚಿತ್ರರೂಪದಲ್ಲಿ ಪ್ರತಿನಿಧಿಸುವ ನಕ್ಷೆ
Long Description: ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗೆ ಏನಾದರೂ ಕೆಲಸ ಮಾಡುವಂತೆ ಹೇಳಬೇಕಾದರೆ ಆ ಕೆಲಸದ ವಿವರಗಳನ್ನೆಲ್ಲ ತಿಳಿಸುವ ಒಂದು ಪ್ರೋಗ್ರಾಮ್ ಬರೆಯಬೇಕು. ಪ್ರೋಗ್ರಾಮ್ ಬರೆಯುವ ಮೊದಲು ನಾವು ಆ ವಿವರಗಳನ್ನೆಲ್ಲ ಕ್ರಮಬದ್ಧವಾಗಿ ಜೋಡಿಸಿಕೊಳ್ಳಬೇಕಲ್ಲ, ಅದಕ್ಕಾಗಿ ಬಳಕೆಯಾಗುವ ಹಲವು ವಿಧಗಳಲ್ಲಿ ಫ್ಲೋಚಾರ್ಟ್ (ಪ್ರವಾಹನಕ್ಷೆ) ಕೂಡ ಒಂದು.
ಯಾವುದೇ ಕೆಲಸವನ್ನು ಪ್ರಾರಂಭಿಸುವುದರಿಂದ ಮುಗಿಸುವವರೆಗಿನ ಎಲ್ಲ ಹೆಜ್ಜೆಗಳನ್ನೂ ಇಲ್ಲಿ ಚಿತ್ರರೂಪದಲ್ಲಿ ಪ್ರತಿನಿಧಿಸಲಾಗುತ್ತದೆ. ಅಂದರೆ ಪ್ರತಿಯೊಂದು ಹೆಜ್ಜೆಯನ್ನೂ ಒಂದೊಂದು ಪೆಟ್ಟಿಗೆಯಲ್ಲಿ ಬರೆದು ಯಾವ ಹೆಜ್ಜೆಯ ನಂತರ ಯಾವ ಹೆಜ್ಜೆಗೆ ಯಾವಾಗ, ಹೇಗೆ ಮುನ್ನಡೆಯಬೇಕು ಎನ್ನುವುದನ್ನು ಬಾಣದ ಗುರುತಿನಿಂದ ತೋರಿಸಲಾಗುತ್ತದೆ.
ಬೇರೆಬೇರೆ ರೀತಿಯ ಕೆಲಸಗಳನ್ನು ಬೇರೆಬೇರೆ ರೀತಿಯ ಆಕೃತಿಗಳಿಂದ ಗುರುತಿಸುವುದು ಸಾಮಾನ್ಯ ಅಭ್ಯಾಸ. ಕೆಲಸದ ಆರಂಭ-ಅಂತ್ಯದ ಹೆಜ್ಜೆಗಳನ್ನು ವೃತ್ತಗಳೊಳಗೆ ಬರೆದರೆ ನಿರ್ದಿಷ್ಟ ಕೆಲಸಮಾಡುವಂತೆ ಹೇಳುವ (ಉದಾ: ಎರಡು ಸಂಖ್ಯೆಗಳನ್ನು ಕೂಡಿಸು) ಹೆಜ್ಜೆಗಳನ್ನು ಆಯತಾಕೃತಿಗಳೊಳಗೆ ಬರೆಯಲಾಗುತ್ತದೆ. ಇಂತಹ ಪ್ರತಿಯೊಂದು ಹೆಜ್ಜೆಯಿಂದ ಮುಂದಿನ ಹೆಜ್ಜೆಗೆ ಬಾಣದ ಗುರುತಿನಿಂದ ತೋರಿಸಲಾದ ಒಂದು ಮಾರ್ಗವಷ್ಟೆ ಇರುವುದು ಸಾಧ್ಯ. ಪ್ರೋಗ್ರಾಮಿನಲ್ಲಿ ಯಾವುದೇ ಷರತ್ತುಗಳನ್ನು ಪರಿಶೀಲಿಸುವ ಹೆಜ್ಜೆಗಳಿದ್ದರೆ (ಉದಾ: ಸಂಬಳದ ಮೊತ್ತಕ್ಕೆ ಅನುಗುಣವಾಗಿ ತೆರಿಗೆ ಲೆಕ್ಕಹಾಕು) ಅವನ್ನೂ ಪ್ರವಾಹನಕ್ಷೆಯಲ್ಲಿ ಪರಿಣಾಮಕಾರಿಯಾಗಿ ಪ್ರತಿನಿಧಿಸುವುದು ಸಾಧ್ಯ.
ರಚನೆ, ವಿನ್ಯಾಸ ಹಾಗೂ ಅರ್ಥಮಾಡಿಕೊಳ್ಳುವುದರಲ್ಲಿನ ಸರಳತೆಯಿಂದಾಗಿ ಪ್ರವಾಹ ನಕ್ಷೆಗಳು ಪ್ರೋಗ್ರಾಮಿಂಗ್ ಕಲಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳಷ್ಟೇ ಅಲ್ಲ, ಐಟಿ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವವರು ಕೂಡ ಕ್ರಮವಿಧಿ ರಚನೆ ಸೇರಿದಂತೆ ಹಲವು ಪ್ರಕ್ರಿಯೆಗಳ ವಿಶ್ಲೇಷಣೆ, ದಾಖಲಿಸುವಿಕೆ ಹಾಗೂ ನಿರ್ವಹಣೆಯಲ್ಲಿ ಪ್ರವಾಹ ನಕ್ಷೆಗಳನ್ನು ಬಳಸುತ್ತಾರೆ.

Flash Memory

ಫ್ಲ್ಯಾಶ್ ಮೆಮೊರಿ
Kannada Equivalent: (ರೂಪಿಸಬೇಕಿದೆ)
Short Description : ಪೆನ್‌ಡ್ರೈವ್, ಮೆಮೊರಿ ಕಾರ್ಡ್ ಮುಂತಾದ ಸಾಧನಗಳಲ್ಲಿ ಮಾಹಿತಿಯನ್ನು ಉಳಿಸಿಡಲು ಬಳಕೆಯಾಗುವ ತಂತ್ರಜ್ಞಾನ
Long Description: ಡಿಜಿಟಲ್ ಮಾಹಿತಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯಲು ನೆರವಾಗುವ ಮೆಮೊರಿ ಸಾಧನಗಳಿಗೆ ಉದಾಹರಣೆ ಕೊಡಿ ಎಂದರೆ ಒಂದು ಕಾಲದಲ್ಲಿ ಎಲ್ಲರೂ ಫ್ಲಾಪಿ ಹಾಗೂ ಸಿ.ಡಿ.-ಡಿ.ವಿ.ಡಿ.ಗಳ ಹೆಸರು ಹೇಳುತ್ತಿದ್ದರು. ಆದರೆ ಈಗ ಅವನ್ನೆಲ್ಲ ಕೇಳುವವರೇ ಇಲ್ಲ. ಅವುಗಳ ಸ್ಥಾನದಲ್ಲಿ ಈಗ ಪೆನ್‌ಡ್ರೈವ್‌ಗಳು, ಮೆಮೊರಿ ಕಾರ್ಡುಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ.
ಈ ಸಾಧನಗಳಲ್ಲಿ ಮಾಹಿತಿಯನ್ನು ಉಳಿಸಿಡಲು ಬಳಕೆಯಾಗುವ ತಂತ್ರಜ್ಞಾನವೇ ಫ್ಲ್ಯಾಶ್ ಮೆಮೊರಿ.
ಕಂಪ್ಯೂಟರಿನ ರಾಮ್ (ರೀಡ್ ಓನ್ಲಿ ಮೆಮೊರಿ) ಬಗ್ಗೆ ಕೇಳಿದ್ದೇವಲ್ಲ, ಫ್ಲ್ಯಾಶ್ ಮೆಮೊರಿಯಲ್ಲಿ ಬಳಕೆಯಾಗುವುದು ಇದೇ ರೀಡ್ ಓನ್ಲಿ ಮೆಮೊರಿಯ ಇನ್ನೊಂದು ರೂಪ. ‘ಇಲೆಕ್ಟ್ರಾನಿಕಲಿ ಇರೇಸಬಲ್ ಪ್ರೋಗ್ರಾಮಬಲ್ ರೀಡ್ ಓನ್ಲಿ ಮೆಮೊರಿ’ (ಇಇಪಿ-ರಾಮ್) ಎಂಬ ಹೆಸರಿನ ಈ ಚಿಪ್‌ನಲ್ಲಿ ಶೇಖರವಾಗಿರುವ ಮಾಹಿತಿಯನ್ನು ಅಳಿಸಿ ಮತ್ತೆಮತ್ತೆ ಬೇರೆಯ ಮಾಹಿತಿಯನ್ನು ಸೇರಿಸಬಹುದು ಎನ್ನುವುದು ವಿಶೇಷ. ಕಂಪ್ಯೂಟರಿನ ರಾಮ್‌ಗೂ, ಫ್ಲ್ಯಾಶ್ ಮೆಮೊರಿಗೂ ಇರುವ ಬಹುದೊಡ್ಡ ವ್ಯತ್ಯಾಸವೂ ಇದೇ.
ಹಿಂದಿನ ಫ್ಲಾಪಿ ಡಿಸ್ಕ್ ಹಾಗೂ ಇಂದಿನ ಹಾರ್ಡ್‌ಡಿಸ್ಕ್‌ನಂತೆ ಇಲ್ಲಿ ಯಾವುದೇ ತಿರುಗುವ ಭಾಗಗಳಿಲ್ಲ, ಹಾಗಾಗಿ ಶಬ್ದವೂ ಇಲ್ಲ; ಯಾಂತ್ರಿಕ ವೈಫಲ್ಯದ ಸಾಧ್ಯತೆಯೂ ಕೊಂಚ ಕಡಿಮೆಯೇ ಎನ್ನಬಹುದು. ಇತರ ಮಾಧ್ಯಮಗಳಿಗೆ ಹೋಲಿಸಿದಾಗ ಮಾಹಿತಿ ವರ್ಗಾವಣೆಯ ವೇಗ ಜಾಸ್ತಿ. ಎಲ್ಲದಕ್ಕಿಂತ ಮಿಗಿಲಾಗಿ ಗಾತ್ರ ತೂಕ ಎರಡೂ ಕಡಿಮೆ. ಈ ಎಲ್ಲ ಕಾರಣಗಳಿಂದಲೇ ಕ್ಲೌಡ್ ಕಂಪ್ಯೂಟಿಂಗ್ ಭರಾಟೆಯ ನಡುವೆಯೂ ಪೆನ್‌ಡ್ರೈವ್‌ಗಳು, ಮೆಮೊರಿ ಕಾರ್ಡುಗಳು ಇನ್ನೂ ತಮ್ಮ ಅಸ್ತಿತ್ವವನ್ನು, ಜನಪ್ರಿಯತೆಯನ್ನು ಉಳಿಸಿಕೊಂಡಿವೆ ಎನ್ನಬಹುದು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App