भारतीय भाषाओं द्वारा ज्ञान

Knowledge through Indian Languages

Dictionary

Janapada Vastukosha (Kannada)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ನಾಮದಯಾ

ತೀರ್ಥವನ್ನು ಹಾಕುವುದಕ್ಕೆ ಬಳಸುವ ಕಂಚಿನ ಪುಟ್ಟ ಪಾತ್ರೆ. ಇದಕ್ಕೆ ಗಿಂಡಿಯ ಆಕಾರವಿರುತ್ತದೆ. ಬದಿಗಳಲ್ಲಿ ಕಿವಿಯ ಆಕಾರದ ಮೂರು ರಚನೆಗಳಿದ್ದು ಅವಕ್ಕೆ ರಂಧ್ರಗಳಿರುತ್ತವೆ. ಈ ರಂಧ್ರಗಳ ಮೂಲಕ ಸರಪಳಿ ಕಟ್ಟಿ ನಾಮದಯವನ್ನು ನೇತುಹಾಕುತ್ತಾರೆ. ತೀರ್ಥವು ನೆಲಸ್ಪರ್ಶವಾಗಬಾರದೆಂಬ ಸಂಕಲ್ಪಕ್ಕಾಗಿ ನಾಮದಯಾದ ತಳಭಾಗದಲ್ಲಿ ಮೂರು ಪುಟ್ಟ ಕಾಲುಗಳಂಥ ರಚನೆಗಳಿರುತ್ತವೆ. ನಾಮದಯಾದಲ್ಲಿ ಸುಮಾರು ಒಂದು ಅಥವಾ ಎರಡು ತೆಂಗಿನಕಾಯಿಗಳ ನೀರು ಹಿಡಿಸುತ್ತದೆ. ಕಂಚಿನಿಂದ ನಾಮದಯಾವನ್ನು ತಯಾರಿಸುತ್ತಾರೆ.

ನಿಂಬೆ ಒತ್ತೊಳ್ಳು

ನಿಂಬೆಯ ರಸವನ್ನು ಹಿಂಡಲು ಬಳಸುವ ಸರಳ ಸಲಕರಣೆ. ಒಂದೇ ಗಾತ್ರದ ಎರಡು ಪುಟ್ಟ ಮರದ ಹಲಗೆಗಳಿಂದ ಇದರ ನಿರ್ಮಾಣ. ಹಿಡಿಕೆಯ ಆಕಾರದ ಮುಂದೆ ಒಂದರಲ್ಲಿ ನಿಂಬೆ ಹೋಳು ನಿಲ್ಲುವಷ್ಟು ಗಾತ್ರದ ಒಂದು ಅರೆರಂಧ್ರವಿದೆ. ರಂಧ್ರದ ಕೆಳಗೆ ಸಣ್ಣ ಸಣ್ಣ ನಾಲ್ಕೋ ಐದೋ ತೀರ ಕಿರು ರಂಧ್ರಗಳು ಇದ್ದು ಹಿಂಡಲ್ಪಟ್ಟ ನಿಂಬೆರಸವು ಕೆಳಗೆ ಒಸರುವುದಕ್ಕೆ ಅನುವಾಗುತ್ತದೆ. ಇನ್ನೊಂದರಲ್ಲಿ ನಿಂಬೆಯ ಹೋಳನ್ನು ಮೇಲಿನಿಂದ ಒತ್ತಲು ಅನುಕೂಲವಾಗುವಂತೆ ಮರದ ಒಂದು ಸಣ್ಣ ಉಂಡೆಯನ್ನು ಮೊಳೆ ಹೊಡೆದು ಜೋಡಿಸಲಾಗುತ್ತದೆ. ಎರಡೂ ಹಲಗೆಗಳ ತುದಿಗೆ ಒಂದು ಬಿಜಾಗ್ರಿಯನ್ನು/ಮರಡನ್ನು ಜೋಡಿಸುತ್ತಾರೆ. ಇದರಿಂದ ಎರಡು ಹಲಗೆಗಳು ಸಲೀಸಾಗಿ ಕಾರ್‍ಯವೆಸಗಲು ಅನುಕೂಲವಾಗುತ್ತದೆ. ಈಗ ಪ್ಲಾಸ್ಟಿಕ್, ಲೋಹದ ಒತ್ತೊಳ್ಳುಗಳು ಬಂದಿವೆ. ಆದುದರಿಂದ ಮರದ ಒತ್ತೊಳ್ಳುಗಳ ಬಳಕೆ ಕಡಿಮೆಯಾಗಿದೆ.

ನೆರಕೋಲು/ಒಕ್ಕಣೆಕೋಲು/ಒಕ್ಕಲುಕೋಲು

ಭತ್ತ, ರಾಗಿ, ಜೋಳ, ಸಜ್ಜೆ, ನವಣೆ ಮುಂತಾದವುಗಳ ಪೈರುಗಳಿಂದ ಧಾನ್ಯಗಳನ್ನು ಪ್ರತ್ಯೇಕಿಸುವ ಕ್ರಿಯೆಯಲ್ಲಿ ಇದು ಒಂದು ಅತ್ಯಗತ್ಯ ಸಲಕರಣಿ. ಈ ಪೈರು/ತೆನೆಗಳನ್ನು ಆಗಾಗ ಅಡಿಮೇಲಾಗಿ ಮಗುಚಿ ಅವುಗಳಿಂದ ಕಾಳುಗಳನ್ನು ಪ್ರತ್ಯೇಕಿಸಲು ಇದು ತುಂಬ ಸಹಾಯಕ. ತೆನೆ ಮತ್ತು ಹುಲ್ಲುಗಳನ್ನು ಒಣಗಿಸುವುದಕ್ಕೂ ಇದನ್ನು ಉಪಯೋಗಿಸುತ್ತಾರೆ. ಭತ್ತ ರಾಗಿ ಮುಂತಾದವುಗಳ ಪೈರುಗಳನ್ನು ಒಕ್ಕಲು ಇದು ಬಳಕೆಯಾಗುವುದರಿಂದ ಇದಕ್ಕೆ ಒಕ್ಕಲುಕೋಲು ಎಂಬ ಹೆಸರು ಬಂದಿದೆ. ಕಿರುಬಿದಿರು ಅಥವಾ ಮರದ ರೆಂಬೆಗಳಿಂದ ಇದನ್ನು ತಯಾರಿಸಲಾಗಿದೆ. ನೇರವಾದ ಕೋಲಿನ ತುದಿಯಲ್ಲಿ ಸ್ವಲ್ಪ ಬಾಗಿದ ಕೋಡಿನ ರಚನೆ ಇರುತ್ತದೆ. ನೆರೆಕೋಲು ಸುಮಾರು ಐದು/ಆರು ಅಡಿ ಉದ್ದವಿರುತ್ತದೆ. ಇದರ ಬಳಕೆ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು. ಕಣ ಒಕ್ಕಲು ಮಾಡುವುದಕ್ಕೆ ಯಂತ್ರಗಳು ಬಂದಿರುವುದರಿಂದ ಒಕ್ಕಣಿ ಕ್ರಿಯೆಯ ಸ್ವರೂಪವು ಈಗ ಬದಲಾಗಿಬಿಟ್ಟಿದೆ.

ನೆಲುವು/ಸಿಕ್ಕ

ಹಾಲು, ಮೊಸರು, ಮಜ್ಜಿಗೆ, ತುಪ್ಪ ಇತ್ಯಾದಿ ಪದಾರ್ಥಗಳನ್ನು ಇರಿಸಿದ ಗಡಿಗೆಗಳು ಬೆಕ್ಕು, ಮಕ್ಕಳ ಕೈಗೆ ಸಿಗದಂತೆ ಮತ್ತು ಕೆಡದಂತೆ ಕಾಪಾಡಿ ಇಟ್ಟುಕೊಳ್ಳಲು ಬಳಸುವ ಸಾಧನ. ಇದನ್ನು ಮನೆಯೊಳಗೆ ಹೆಚ್ಚಾಗಿ ಜನರು ಅಡ್ಡಾಡದ ಜಾಗದಲ್ಲಿ ಅಟ್ಟದ ತೊಲೆ, ಅಡ್ಡ, ಕೊಕ್ಕೆ ಮುಂತಾದುವುಗಳಿಗೆ ನೇತುಹಾಕಲಾಗುತ್ತದೆ. ಮೆದೆಹುಲ್ಲು/ನೊದೆ ಹುಲ್ಲಿನಿಂದ ತಳಸಿಂಬೆಯನ್ನು ತಯಾರಿಸಿಕೊಳ್ಳುತ್ತಾರೆ. ಮೂರು ಕಡೆಗಳಿಂದ ಎಳೆದ ಹುರಿಗಳನ್ನು ಸಿಂಬೆಗೆ ಜೋಡಿಸಲಾಗುತ್ತದೆ. ಸಿಂಬೆಯಲ್ಲಿ ಗಡಿಗೆಗಳನ್ನು ಇಡಲಾಗುತ್ತದೆ. ಪ್ರಾದೇಶಿಕವಾಗಿ ಲಭ್ಯವಾಗುವ ಬಳ್ಳಿ, ಹುಲ್ಲು, ಹಳೆಬಟ್ಟೆ, ಹುರಿಹಗ್ಗ ಇತ್ಯಾದಿಗಳಿಂದ ನೆಲುವನ್ನು ತಯಾರಿಸಿಕೊಳ್ಳಬಹುದು. ಇತ್ತೀಚೆಗೆ ನೆಲುವು ಹಾಲು, ಮೊಸರುಗಳನ್ನು ಇಡಲು ಬಳಕೆಯಾಗುವುದರ ಬದಲಾಗಿ ಅಲಂಕಾರಿಕ ಸಾಧನವಾಗಿ ಮಾರ್ಪಟ್ಟು ಹೂಗಿಡಗಳನ್ನು ತೂಗುತ್ತದೆ.

ನೊಗ

ಎತ್ತು/ಕೋಣಗಳನ್ನು ಜತೆಯಾಗಿ ಬಳಸಿಕೊಳ್ಳುವಾಗ ಬಳಸುವ ಸಾಧನ. ಕುಸುರಿ ಕೆತ್ತನೆಯಿಂದ ಕೂಡಿದ ಈ ನೊಗದ ಮಧ್ಯಭಾಗದಲ್ಲಿ ಸುಮಾರು ನಾಲ್ಕು-ಐದು ಅಡಿ ಜಾಗದಲ್ಲಿ ಚಿತ್ತಾರದ ಕೆತ್ತನೆಗಳಿವೆ. ಇದನ್ನು ಮುಖ್ಯವಾಗಿ ಆರಾಧನೆ, ಜಾತ್ರೆ, ಉತ್ಸವಗಳಿಗೆ ಹೋಗುವಾಗ ಬಳಸುತ್ತಾರೆ. ಇದು ಸುಮಾರು ಆರು ಅಡಿ ಉದ್ದವಿರುತ್ತದೆ. ಇದರ ಎರಡು ತುದಿಗಳು ಎತ್ತುಗಳ ಹೆಗಲುಗಳ ಮೇಲೆ ಇಡುವುದಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಂಡಿವೆ. ತುದಿ ಭಾಗಗಳಲ್ಲಿ ನಿರ್ದಿಷ್ಟ ಅಂತರದಲ್ಲಿ ಒಂದು/ಎರಡು ಸಣ್ಣ ರಂಧ್ರಗಳನ್ನು ಕೊರೆದು ಅವುಗಳ ಮೂಲಕ ಕೊರಳ ಪಟ್ಟಿಯನ್ನು ಜೋಡಿಸಲಾಗುತ್ತದೆ. ನೊಗದ ಮಧ್ಯದಲ್ಲಿ ಪಟ್ಟಿಗಳನ್ನು ಕೊರೆದಿರುತ್ತಾರೆ. ಇದರಿಂದ ಎತ್ತುಗಳಿಗೆ ಪರಸ್ಪರ ಸಮಾನವಾಗಿ ಶ್ರಮವು ಹಂಚಿಹೋಗುತ್ತದೆ.
ನೊಗಗಳಲ್ಲಿ ನಾನಾ ಬಗೆಯವು ಇವೆ. ಇವುಗಳಲ್ಲಿ ಒಂಟೆತ್ತಿನ ನೊಗ, ಎಂಟು ಗೇಣಿನ ನೊಗ, ಹತ್ತು ಗೇಣಿನ ನೊಗ, ಹನ್ನೆರಡು ಗೇಣಿನ ನೊಗ ಮುಂತಾದುವು ಒಂದು ವಿಧದವು. ಎಂಟು ಗೇಣಿನ ನೊಗವು ರೆಂಟೆ ಹೊಡೆಯಲು, ಹತ್ತು ಗೇಣಿನ ನೊಗವು ಕುಂಟೆ ಹೊಡೆಯಲು, ಹನ್ನೆರಡು ಗೇಣಿನ ನೊಗವು ಕುಂಟೆ ಎಡೆಗುಂಟೆ ಹೊಡೆಯಲು ಬಳಕೆಯಾಗುತ್ತವೆ. ಕಬ್ಬಿಣದ ರೆಂಟೆಯನ್ನು ಉಪಯೋಗಿಸುವಾಗ ಕಡಿಮೆ ಉದ್ದದ ನೊಗವನ್ನು ಬಳಸಲಾಗುತ್ತದೆ. ಇದರ ಉದ್ದವು ಸುಮಾರು ನಾಲ್ಕೂವರೆ ಅಡಿ. ಬಂಡಿನೊಗವು ಇನ್ನೊಂದು ಬಗೆಯದು. ಇದು ಎತ್ತಿನ ಗಾಡಿಗಳಿಗೆ ಬಳಕೆಯಾಗುತ್ತದೆ. ಬಂಡಿ ನೊಗಗಳು ಸಾಮಾನ್ಯವಾಗಿ ಇತರ ನೊಗಗಳಂತೆ ಇರುತ್ತವಾದರೂ ವಿಶೇಷ ಸಂದರ್ಭಗಳಲ್ಲಿ (ಮದುವೆ ದಿಬ್ಬಣ, ಜಾತ್ರೆ, ಎತ್ತುಗಳ ಮೆರವಣಿಗೆಇ॒ತ್ಯಾದಿ) ಬಳಸುವ ನೊಗಗಳು ಸಾಗುವಾನಿ, ಹೊನ್ನೆ ಮುಂತಾದ ಮರಗಳಿಂದ ತಯಾರಾಗುತ್ತವೆ. ಇಂಥ ನೊಗಗಳಲ್ಲಿ ಬಸವಣ್ಣ, ಸಿಂಹ, ಮುಂತಾದ ಚಿತ್ರಗಳಿವೆ. ನೊಗಗಳ ಕುರಿತಾಗಿ ಜನಪದರಲ್ಲಿ ವಿಶೇಷ ಗೌರವ, ನಂಬಿಕೆ, ವಿಧಿನಿಷೇಧಗಳಿವೆ. ಬಳಕೆಯಾಗುತ್ತಿರುವಾಗ ನೊಗ ಮುರಿದು ಹೋಗಬಾರದೆಂದು ಶ್ರದ್ಧೆ ವಹಿಸಲಾಗುತ್ತದೆ. ನೊಗಗಳನ್ನು ಸಾಮಾನ್ಯವಾಗಿ ಕಾಸರಕನ, ಅರೆಬೇವು, ತೇಗ ಮರಗಳಿಂದ ತಯಾರಿಸುತ್ತಾರೆ. ಅದನ್ನು ತುಳಿಯಬಾರದು, ಉರಿಸಬಾರದು ಎಂಬ ನಂಬಿಕೆಗಳಿವೆ.

ಪಂಚೇರುಗಲ್ಲು

ವಸ್ತು, ದವಸ ಧಾನ್ಯಗಳನ್ನು ತಕ್ಕಡಿಯಲ್ಲಿಟ್ಟು ತೂಕ ಮಾಡುವ ಸಂದರ್ಭದಲ್ಲಿ ತಕ್ಕಡಿಯ ಒಂದು ಪರಡಿ/ತಟ್ಟೆಯಲ್ಲಿಟ್ಟು ತೂಕ ಮಾಡುವುದಕ್ಕೆ ಬಳಸುತ್ತಿದ್ದ ವಸ್ತು. ಇದು ಇವತ್ತಿನ ಐದು ಕಿ.ಗ್ರಾಂ ತೂಕವನ್ನು ಒಳಗೊಂಡಿದೆ. ಕಬ್ಬಿಣದ ತೂಕದ ಕಲ್ಲುಗಳು ಬಳಕೆಗೆ ಬರುವ ಪೂರ್ವದಲ್ಲಿ ಈ ಕಲ್ಲುಗಳನ್ನೇ ತೂಕ ಮಾಡಲು ಬಳಸಲಾಗುತ್ತಿತ್ತು. ಆಧುನಿಕ ತೂಕ ಪದ್ಧತಿಯ ಬಳಕೆ ಹೆಚ್ಚಾದ ಪರಿಣಾಮವಾಗಿ ಪಾರಂಪರಿಕವಾದ ತೂಕದ ಕಲ್ಲುಗಳ ಉಪಯೋಗ ಕಡಿಮೆಯಾಗಿದೆ.

ಪಡ್ಡಿನ ಹಂಚು/ಪಡ್ಡಂಚು

ಅಕ್ಕಿಯಿಂದ ತಯಾರಿಸುವ ಪಡ್ಡು ಎಂಬ ತಿಂಡಿಯನ್ನು ಬೇಯಿಸುವ ಹಂಚು. ವೃತ್ತಾಕಾರದಲ್ಲಿರುತ್ತದೆ. ಈ ಹಂಚುಗಳಲ್ಲಿ ವ್ಯತ್ಯಾಸಗಳಿವೆ. ಇದರಲ್ಲಿ ಸುಮಾರು ಒಂದು ಇಂಚು ಆಳ ಒಂದೂವರೆ ಇಂಚು ವ್ಯಾಸದ (ಅಳತೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ) ಐದರಿಂದ ಹನ್ನೊಂದು ಗುಳಿಗಳಿರುತ್ತವೆ. ಇದರಲ್ಲಿ ಒಂದಿಷ್ಟು ಎಣ್ಣೆ ಹೊಯ್ದು ಪಡ್ಡನ್ನು ಬೇಯಿಸುತ್ತಾರೆ. ಇದನ್ನು ಬಳಪದ ಕಲ್ಲಿನಿಂದ ತಯಾರಿಸಿದ್ದಾರೆ. ಪಡ್ಡಿನ ಹಂಚುಗಳನ್ನು ಲೋಹದಿಂದಲೂ ನಿರ್ಮಿಸುತ್ತಾರೆ. ಇದರ ಬಳಕೆ ಉತ್ತರ ಕರ್ನಾಟಕದಲ್ಲಿ ಹೆಚ್ಚು. ಬೆಸಸಂಖ್ಯೆಯ ಗುಳಿಗಳ ಹಂಚುಗಳೇ ಹೆಚ್ಚಾಗಿದ್ದರೂ ಅಪೂರ್ವವಾಗಿ ಸಮಸಂಖ್ಯೆಯ ಗುಳಿಗಳವೂ ಇವೆ.

ಪಾವು

ದವಸ ಧಾನ್ಯಗಳನ್ನು ಅಳತೆ ಮಾಡಲು ಬಳಸುತ್ತಿದ್ದ ಸಾಧನ. ಇದು ಸುಮಾರು ಅರ್ಧ ಅಡಿ ಎತ್ತರ ಮೂರು ಇಂಚು ವ್ಯಾಸವಿದೆ. ಇದರ ರಚನೆ ಮತ್ತು ವಿನ್ಯಾಸಗಳಲ್ಲಿ ಹಲವು ವ್ಯತ್ಯಾಸಗಳಿವೆ. ಸಾಮಾನ್ಯವಾಗಿ ಇದರ ಮೇಲ್ಭಾಗ ಮತ್ತು ತಳಭಾಗದಲ್ಲಿ ಒಂದು ಇಂಚು ಅಗಲದ ಪಟ್ಟಿಗಳನ್ನು ಹಾಕಿ ತಯಾರಿಸಿರುವುದು ಹೆಚ್ಚು. ಇದು ಸೇರಿನ ನಾಲ್ಕನೆಯ ಒಂದು ಭಾಗವಿದು. ಈ ಅಳತೆ ಮಾಪಕವನ್ನು ಅಡುಗೆಮನೆಯಲ್ಲೂ ವ್ಯಾಪಾರ ಕೇಂದ್ರಗಳಲ್ಲೂ ಬಳಸುತ್ತಿದ್ದರು. ಕಬ್ಬಿಣದ ತಗಡಿನಿಂದ ಇದನ್ನು ತಯಾರಿಸಿದ್ದಾರೆ.

ಪಿಕಾಸಿ/ಗುದ್ದಲಿ

ಕೃಷಿ ಹಾಗೂ ಕಾರ್ಮಿಕ ಕೆಲಸಗಳಲ್ಲಿ ಬಳಕೆಯಾಗುವ ಒಂದು ಮುಖ್ಯವಾದ ಸಲಕರಣೆ. ಅಗತ್ಯಕ್ಕೆ ತಕ್ಕಂತೆ ಮಣ್ಣಿನ ಗುಂಡಿ ತೆಗೆಯಲು, ಸಸಿಗಳನ್ನು ಬೇರು ಸಹಿತ ಕೀಳಲು ಹಾಗೂ ನೇಗಿಲಿನಿಂದ ಉಳುಮೆ ಮಾಡಲು ಸಾಧ್ಯವಿಲ್ಲದ ಸ್ಥಳವನ್ನು ಅಗೆಯಲು ಇದನ್ನು ಬಳಸಲಾಗುತ್ತದೆ. ಕಾರ್ಮಿಕರು ಪೈಪ್‌ಲೈನ್‌ಗಳ ಗುಂಡಿ ತೆಗೆಯಲು ಅಧಿಕವಾಗಿ ಬಳಸುತ್ತಾರೆ. ಇದರ ಎರಡು ತುದಿಗಳಲ್ಲೂ ಒಂದು ಇಂಚು ಅಗಲದ ಚೂಪಾದ ತುದಿಗಳಿದ್ದು ಮಧ್ಯಭಾಗದ ರಂಧ್ರದ ಮೂಲಕ ಹಿಡಿಕೆಯನ್ನು ಜೋಡಿಸಲಾಗುತ್ತದೆ. ಮರದ ಹಿಡಿಕೆಯು ಸುಮಾರು ಎರಡು ಇಂಚು ದಪ್ಪ, ಮೂರು ಅಡಿ ಉದ್ದವಿರುತ್ತದೆ. ಕಬ್ಬಿಣದಿಂದ ತಯಾರಿಸಲಾದ ಈ ಸಲಕರಣಿ ಜೆ.ಸಿ.ಬಿ. ಟ್ರ್ಯಾಕ್ಟರ್, ಟಿಲ್ಲರ್‌ಗಳು ಬಳಕೆಗೆ ಬಂದನಂತರವೂ ಇದರ ಬಳಕೆ ಕಡಿಮೆಯಾಗದಿರುವುದು ಇದರ ಅಗತ್ಯದ ಬಗೆಗೆ ಬೆರಳುಮಾಡಿ ಯಂತ್ರಗಳ ಅಸಹಾಯಕ ಸ್ಥಿತಿಯನ್ನು ಅಣುಕಿಸುವಂತಿದೆ.

ಪುಚ್ಕೂಳಿ

ಅತ್ಯಂತ ಕಿರುತೊರೆ/ಕಿರು ಕಾಲುವೆಗಳಲ್ಲಿ, ಹೊಂಡ/ಕಟ್ಟೆ/ಕೆರೆಗಳಿಂದ ಹರಿಯುವ ನೀರಲ್ಲಿನ ಮೀನುಗಳನ್ನು ಹಿಡಿಯಲು ಬಳಸುವ ಉಪಕರಣ. ವಿಶೇಷವಾಗಿ ಹತ್ತುಮೀನು ಹಾಗೂ ಏಡಿ ಹಿಡಿಯಲು ಬಳಕೆಯಾಗುತ್ತದೆ. ಇದನ್ನು ಬಿದಿರ ಸೀಳುಗಳಿಂದ ತಯಾರಿಸಲಾಗುತ್ತದೆ. ಇದು ಹಕ್ಕಿಗಳ ಪುಕ್ಕದ ಆಕಾರದಲ್ಲಿ ಇರುವುದರಿಂದ ಇದಕ್ಕೆ ಪುಚ್ಚ+ಕೂಳಿ= ಪುಚ್ಕುಳಿ ಎಂದು ಹೆಸರು. ತೆಂಗಿನ ಕಡ್ಡಿಗಳಿಂದ ಹೆಣೆದು ಇದನ್ನು ರಚಿಸುತ್ತಾರೆ. ಇದರ ಬಾಯಿ ವೃತ್ತಾಕಾರದಲ್ಲಿದ್ದು ಮಧ್ಯೆ ಒಂದು ಕೋಲನ್ನು ಹಿಡಿಕೆಯಾಗಿ ಜೋಡಿಸಲಾಗಿರುತ್ತದೆ. ಹಿಂಭಾಗವನ್ನು ಜೋಡಿಸಿ ಕಟ್ಟಿದಾಗ ಅದು ಹಕ್ಕಿಯ ಪುಕ್ಕದಂತಿರುತ್ತದೆ. ಹರಿಯುವ ನೀರಲ್ಲಿ ಕೂಡಾ ಮೀನು ಹಿಡಿದುಕೊಳ್ಳಲು ಬಳಸಿಕೊಳ್ಳುತ್ತಾರೆ. ಒಂದು ಕೋಲನ್ನು ಇದರ ಮುಂಭಾಗಕ್ಕೆ ಅಡ್ಡವಾಗಿ ಕಟ್ಟುತ್ತಾರೆ. ಕಾಲುವೆಯ ಎರಡು ಬದಿಗಳಿಗೆ ಎರಡು ಗೂಟಗಳನ್ನು ನಾಟಿ ಅವಕ್ಕೆ ಪುಚ್ಕುಳಿಗೆ ಕಟ್ಟಿದ ಅಡ್ಡ ಕಟ್ಟಿಗೆಯನ್ನು ಕಟ್ಟಿ ಮೀನು ಹಿಡಿಯುತ್ತಾರೆ. ಅಂತೆಯೇ ಹಿಂದಿನ ಭಾಗದಲ್ಲಿ ಸಂಗ್ರಹಿತವಾಗುವ ಮೀನುಗಳನ್ನು ಇನ್ನೊಂದು ಚೀಲದಲ್ಲಿ ತುಂಬುವಂತೆ ಹಿಂಭಾಗಕ್ಕೆ ಚೀಲವನ್ನು ಕಟ್ಟುವುದೂ ಇದೆ. ಇತ್ತೀಚೆಗೆ ಪಾರಂಪರಿಕ ಕೆರೆ, ಕಟ್ಟೆ, ಬಾವಿಗಳು ನಿರ್ನಾಮವಾಗುತ್ತಿರುವುದರಿಂದ ಪುಚ್ಕುಳಿಯಂಥ ಸಲಕರಣೆಗಳು ಕಣ್ಮರೆಯಾಗುತ್ತಿವೆ. ಸರಕಾರದ ಪ್ರೋತ್ಸಾಹದಿಂದ ಮೀನು ಸಾಕಣೆ ಹೆಚ್ಚಿ ಮತ್ತೆ ಪುಚ್ಕುಳಿಗಳು ಚಾಲ್ತಿಗೆ ಬರುವ ಸಾಧ್ಯತೆಗಳಿವೆ.

ಪುರಾತನ ಇಟ್ಟಿಗೆ

ಇದು ಶಾತವಾಹನರ ಕಾಲಕ್ಕೆ ಸೇರಿದ್ದು (ಸುಮಾರು ಎರಡನೇ ಶತಮಾನ). ಗೋಡೆಕಟ್ಟಲು ಬಳಸಿದ್ದ ಪರಿಕರ. ಇದು ಬಹಳ ದೊಡ್ಡಗಾತ್ರದ ಇಟ್ಟಿಗೆ. ಇದು ಸುಮಾರು ಇಪ್ಪತ್ತು ಇಂಚು ಉದ್ದ, ಸುಮಾರು ಹತ್ತು ಇಂಚು ಅಗಲ, ಸುಮಾರು ಐದು ಇಂಚು ದಪ್ಪವಾಗಿದೆ. ಇಟ್ಟಿಗೆಯನ್ನು ಮಣ್ಣಿನಿಂದ ತಯಾರಿಸಲಾಗಿದೆ. ಈ ಇಟ್ಟಿಗೆಯು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಈಸೂರು ಗ್ರಾಮದಲ್ಲಿ ದೊರೆತಿದೆ.

ಪೂಜಾಸಾಮಗ್ರಿಗಳು

ಪೂಜಾಪರಿಕರಗಳು ಮತ್ತು ಪೂಜೆಗೂಳ್ಳುವ ವಸ್ತುಗಳನ್ನು ಈ ವಿಭಾಗದಲ್ಲಿ ಅಡಕಗೊಳಿಸಿದೆ. ಕಿಶೋರಿಯರಿಗಷ್ಟೆ ಸೀಮಿತವಾಗಿರುವ ಅಲ್ಲೆಪಿಲ್ಲೆಗಿಂಡಿ, ಗುಳ್ಳವ್ವನ ಬಾಗಿಲುಗಳಿಂದ ತೊಡಗಿ ಮನೆಗಳಲ್ಲಿ ಬಳಕೆಯಾಗುವ ತೂಗುದೀಪ, ಚೊಂಗ್ಯನ ಮಣೆ, ಕುಂಕುಮದ ಭರಣಿಗಳು; ಸಮಷ್ಟಿಬಳಕೆಗೆ ಒದಗುವ ವಿಭೂತಿ ಕರಡಿಗೆ, ಕೂರಿಗೆವ್ವ, ಎಳೆಗೌರಮ್ಮನ ಮೂರ್ತಿ, ಹರಕೆ ತೊಟ್ಟಿಲು ಮುಂತಾದವು ಒಳಗೊಂಡು ಯೋಗದಂಡ, ಡೋಣಿ, ಗುಗ್ಗುಳಕೊಡ, ಶಸ್ತ್ರ ಮುಂತಾದ ವಿಶಿಷ್ಟ ಧಾರ್ಮಿಕ ಸಾಮಗ್ರಿಗಳೂ ಈ ವಿಭಾಗದಲ್ಲಿ ಸೇರಿವೆ. ಜನಪದ ಮನಸ್ಸಿನ ಧಾರ್ಮಿಕ ಗತಿಸೂಚಕಗಳಾದ ಈ ವಿಭಾಗದ ವಸ್ತುಗಳು ಜನಪದರ ಮನೋವೈಜ್ಞಾನಿಕ ಬದುಕನ್ನು ಅರ್ಥಮಾಡಿಕೊಳ್ಳಲು ಅತ್ಯಗತ್ಯವಾಗಿವೆ. ಮುಂದಿನ ಸಂಪುಟಗಳಲ್ಲಿನ ಇಂಥವಸ್ತುಗಳ ಪರಿಚಯವೂ ಸೇರಿಕೊಂಡಾಗ ಓದುಗರಿಗೆ ಕರ್ನಾಟಕದ ಗ್ರಾಮೀಣ ಧಾರ್ಮಿಕ ಬದುಕನ್ನು ಅವು ಕಟ್ಟಿಕೊಡುವುದರಲ್ಲಿ ಸಂಶಯವಿಲ್ಲ.

ಪೆಟಾರಿ/ಟ್ರಂಕು

ಬೇರೆ ಬೇರೆ ಗ್ರಾಮೀಣ ಕಸುಬುಗಳವರು ತಮ್ಮ ಪರಿಕರಗಳನ್ನು ಇಟ್ಟುಕೊಂಡು ಹೋಗಲು ಬಳಸುವ ಸಾಧನ. ಇದು ಸುಮಾರು ಹದಿನೇಳುವರೆ ಇಂಚು ಉದ್ದ ಹನ್ನೊಂದೂವರೆ ಇಂಚು ಅಗಲ, ಐದು ಇಂಚು ಎತ್ತರ ಹೊಂದಿದೆ. ಇದಕ್ಕೆ ಮುಚ್ಚುವ ಮತ್ತು ತೆರೆಯುವ ವ್ಯವಸ್ಥೆ ಇದ್ದು ಬೀಗ ಹಾಕುವ ವ್ಯವಸ್ಥೆ ಕೂಡ ಇದೆ. ಮನೆಯಲ್ಲಿ ಬಟ್ಟೆ, ಕಾಗದ ಪತ್ರಗಳನ್ನು ಇಟ್ಟುಕೊಳ್ಳಲು ಬಳಸುತ್ತಾರೆ. ಲೋಹದಿಂದ ತಯಾರಿಸಿದ ಇವು ಈಗಲೂ ಬಳಕೆಯಲ್ಲಿವೆ.

ಬಂಕ

ಕೃಷಿಗೆ ಬಳಕೆಯಾಗುವ ಮಿಣಿ, ಹಗ್ಗ, ಬಾರುಕೋಲು ಇತ್ಯಾದಿಗಳನ್ನು ಗೆದ್ದಲು ತಿನ್ನದಂತೆ ಮತ್ತು ನಾಯಿಗಳಂಥ ಪ್ರಾಣಿಗಳು ಕಡಿಯದಂತೆ ಎತ್ತರದಲ್ಲಿ ತೂಗುಹಾಕಲು ಈ ಸಾಧನವು ಗ್ರಾಮೀಣರಲ್ಲಿ ಬಳಕೆಯಾಗುತ್ತದೆ. ಬಾಗಿದ ಬಿದಿರಿನಿಂದ ಇದನ್ನು ತಯಾರಿಸಲಾಗುತ್ತದೆ. ಇದೇ ಉದ್ದೇಶಕ್ಕೆ ಅಪರೂಪವಾಗಿ ಜಿಂಕೆಯ ಕೊಂಬುಗಳು ಕೂಡ ಬಳಕೆಯಾಗುತ್ತವೆ.

ಬಂಟ

ಎತ್ತಿನ ಗಾಡಿಯು ನಿಂತಿರುವ ಸಂದರ್ಭಗಳಲ್ಲಿ ಅದರ ಹೊರೆಯು ಎತ್ತುಗಳ ಮೇಲೆ ಬೀಳದಂತೆ ಮಾಡಲು ಈ ಸಾಧನವು ಬಳಕೆಯಾಗುತ್ತದೆ. ಮೂರಾಗಿ ಕವಲೊಡೆದು ಬೆಳೆದ ಮರದ ಕೊಂಬೆಯನ್ನಾಗಲಿ ಮರವನ್ನಾಗಲಿ ನಿರ್ದಿಷ್ಟ ಪ್ರಮಾಣಕ್ಕೆ ತುಂಡರಿಸಿಕೊಂಡು ಇದನ್ನು ತಯಾರು ಮಾಡಲಾಗುತ್ತದೆ. ಸುಮಾರು ಎರಡೂವರೆಯಿಂದ ಮೂರು ಅಡಿಗಳಷ್ಟು ಎತ್ತರವಿರುತ್ತದೆ. ಬಳಸುವಾಗ ಇದನ್ನು ತುದಿಕೆಳಗಾಗಿಟ್ಟು ಅದರ ಮೇಲೆ ಗಾಡಿಯ ಮೂಕಿಯು ನಿಲ್ಲುವಂತೆ ಇರಿಸಿಕೊಳ್ಳುತ್ತಾರೆ. ಅಪರೂಪಕ್ಕೆ ಬಂಟಕ್ಕೆ ಎರಡು ಕಾಲುಗಳಷ್ಟೇ ಇರುವುದೂ ಇದೆ. ಇದನ್ನು ನಾರುಳ್ಳ ಗಟ್ಟಿಮರಗಳಿಂದ ತಯಾರಿಸುತ್ತಾರೆ. ಹಳೆಕಾಲದ ಬಂಡಿಗಾಲಿಗಳ ಮುಂದೆ ಇದನ್ನಿಟ್ಟು, ಅಥವಾ ಹಟ್ಟಿಹಬ್ಬದಲ್ಲಿ ಇಟ್ಟು ಪೂಜೆ ಮಾಡುವುದು ರೂಢಿ.

ಬಟ್ಟೆ ಗೂಟ

ಗೋಡೆಗಳ ನಿರ್ದಿಷ್ಟ ಎತ್ತರದಲ್ಲಿ ಬಟ್ಟೆಗಳನ್ನು, ಸಣ್ಣ ಚೀಲಗಳನ್ನು ನೇತು ಹಾಕಲು ಬಳಸುವ ಸಾಧನ. ಇದರಲ್ಲಿ ಪಟ್ಟಿ ಮತ್ತು ಗೂಟ ಎಂಬ ಎರಡು ಮುಖ್ಯ ಭಾಗಗಳಿರುತ್ತವೆ. ಗೂಟಗಳ ಸಂಖ್ಯೆಯು ಅಗತ್ಯಾನುಸಾರ ವ್ಯತ್ಯಾಸವಾಗುತ್ತದೆ. ಬಟ್ಟೆಗೂಟದ ಪಟ್ಟಿಯನ್ನು ಮೊಳೆಗಳಿಂದ ಗೋಡೆಗೆ ಭದ್ರವಾಗಿ ಜೋಡಿಸಲಾಗುತ್ತದೆ. ಲೋಹ, ಪ್ಲಾಸ್ಟಿಕ್ ಹ್ಯಾಂಗರ್‌ಗಳು ಬಂದ ನಂತರ ಮರದ ಬಟ್ಟೆಗೂಟಗಳು ಮರೆಯಾಗುತ್ತಿವೆ.

ಬಂಡಿಗಾಲಿ (ಬೆಲ್ಲದ ಬಂಡಿಗಾಲಿ)

ವಿಶೇಷವಾಗಿ ಆಚರಣೆಯಲ್ಲಿ ಬಳಕೆಯಗುವ ಬಂಡಿಯ ಚಕ್ರಗಳು ಬಂಡಿಯನ್ನು ತಳಿರು, ತೋರಣ, ಬಾಳೆಗಿಡ, ಹೂಗಳಿಂದ ಶೃಂಗರಿಸಿ ಮೆರವಣಿಗೆ ಮಡುತ್ತಾರೆ. ಗಾಲಿಯ ಸುತ್ತಲೂ ಎಡೆಯಿಲ್ಲದೆ ಕಬ್ಬಿಣವನ್ನು ಹೆಚ್ಚು ಬಳಕೆಮಾಡಿ ರಚಿಸಿರುವ ಗಾಲಿ. ಚಕ್ಕಡಿಗಾಲಿಗಳ ಮಧ್ಯ ತುಂಬ ಖಾಲಿ ಎಡೆಗಳಿರುತ್ತವೆ. ಚಕ್ಕಡಿಗಾಲಿಗಿಂತ ಬಂಡಿಗಾಲಿಯು ಹೆಚ್ಚು ಭಾರವೂ ಗಟ್ಟಿಮುಟ್ಟಿನದೂ ಆಗಿರುತ್ತದೆ. ಗಾತ್ರದಲ್ಲಿ ಇದು ಚಕ್ಕಡಿಗಾಲಿಗಿಂತ ಸಣ್ಣದು.

ಬಡಿಮಣೆ/ಕೊಡತಿ/ಕೊಡಚಿ

ಬಡಿಮಣೆ ಕಣದಲ್ಲಿ ಒಕ್ಕಲು ಸಂದರ್ಭದಲ್ಲಿ ಔಡಲ, ಕಡಲೆ ಮುಂತಾದುವನ್ನು ಬಡಿಯುವುದಕ್ಕೆ, ನೆಲಕಡಲೆ (ಬುಡ್ಡಿ) ಮುಂತಾದುವನ್ನು ಒಡೆಯುವುದಕ್ಕೆ ಬಳಸುವ ಸಾಧನ. ಒಂದು ಕೈಯಿಂದ ಸಲೀಸಾಗಿ ಎತ್ತಿ ಬೇಕಷ್ಟೇ ಬಲವಾಗಿ ಬಡಿಯುವುದಕ್ಕೂ ಅನುಕೂಲವಾಗುವಂತೆ ಇದರ ವಿನ್ಯಾಸ ಮತ್ತು ಭಾರವಿದೆ. ಅಪವಾದ ರೂಪದಲ್ಲಿ ನೆಲ/ಗೋಡೆಗಳನ್ನು ತಟ್ಟಿ ಸಮತಟ್ಟು ಮಾಡುವುದಕ್ಕೂ ಇದನ್ನು ಬಳಸಲಾಗುತ್ತದೆ. ಇದರ ಹಿಂಭಾಗದಲ್ಲಿ ಒಂದು ಕೈಯೊಳಗೆ ಅಡಗುವಂತೆ ಹಿಡಿಕೆಯೂ ಅದರ ಮುಂಭಾಗದಲ್ಲಿ ಚಪ್ಪಟೆಯಾದ ಹಲಗೆಯ ಭಾಗವೂ ಇದೆ. ಇದನ್ನು ಹುಣಸೆ, ಕರಿಜಾಲಿ ಮುಂತಾದ ಮರಗಳಿಂದ ತಯಾರಿಸುತ್ತಾರೆ.

ಬಲಿಯಾ

ಲಂಬಾಣಿಗರ ಭಾಷೆಯಲ್ಲಿ ಬಲಿಯಾ ಎಂದರೆ ತೋಳಬಂದಿ ಎಂದರ್ಥ. ಲಂಬಾಣಿ ಮಹಿಳೆಯರು ತಮ್ಮ ತೋಳುಗಳಲ್ಲಿ ಇವನ್ನು ಧರಿಸುತ್ತಾರೆ. ಒಂದೊಂದು ತೋಳಿಗೆ ಎರಡೆರಡು ಬಳೆಗಳೆಂಬುದು ಲೆಕ್ಕ. ಈ ಬಳೆಗಳನ್ನು ತೊಡುವುದು ಅಲಂಕಾರಕ್ಕಾಗಿ ಎಂದು ಮೇಲು ನೋಟಕ್ಕೆ ಅನಿಸಿದರೂ ಇದು ಅವರ ಸಾಮಾಜಿಕ, ಧಾರ್ಮಿಕ ಕಟ್ಟು ಕಟ್ಟಳೆಯಂತೆ ತೋಳಲ್ಲಿ ಧರಿಸಲ್ಪಡುತ್ತದ. ಇವು ಇತರರ ತಾಳಿಗೆ/ಮಂಗಲಸೂತ್ರಕ್ಕೆ ಸಮಾನವಾದ ಸಂಕಲ್ಪದಿಂದ ಕೂಡಿದವು. ಮದುವೆಯಾದ ದಿನದಂದು ಗಂಡನ ಮನೆಯವರು ಕೊಡುವ ಇಂಥ ಐದು ಬಳೆಗಳಲ್ಲಿ ನಾಲ್ಕನ್ನು ವಿವಾಹಿತೆ ಧರಿಸಿದರೆ ಉಳಿದ ಒಂದನ್ನು ಅವಳ ತಾಯಿಗೆ ಕೊಡುವ ಸಂಪ್ರದಾಯವಿದೆ. ತಾಯಿಗೆ ಈ ಬಳೆಯು ಮಗಳನ್ನು ಕೊಟ್ಟುದಕ್ಕೆ ಪ್ರತಿಯಾಗಿ ನೀಡುವ ಕಾಣಿಕೆಯಾಗಿರುತ್ತದೆ. ತೋಳಿಗೆ ಈ ಬಳೆಯನ್ನು ಧರಿಸುವುದೆಂದರೆ ಗಂಡನೇ ತಾಳಿಕಟ್ಟಿದ್ದಕ್ಕೆ ಸಮಾನವಾಗುತ್ತದೆ. ಗಂಡ ಜೀವಂತವಿರುವ ತನಕ ಇದನ್ನು ತೆಗೆದು ಹಾಕುವಂತಿಲ್ಲ. ಗಂಡನು ಸತ್ತಾಗ ಕೆಲವರು ಈ ಬಳೆಗಳನ್ನು ಪತಿಯ ಚಿತೆಗೆ ಹಾಕುವ ರೂಢಿ ಇತ್ತು. ಈಗ ಅಂಥ ಆಚರಣೆ ಕಡಿಮೆಯಾಗಿದೆ.
ಬಲಿಯಾಗಳನ್ನು ಫೈಬರ್ ಅಥವಾ ರಬ್ಬರ್‌ನಿಂದ ತಯಾರಿಸುತ್ತಾರೆ. ಬಳೆಯ ಒಂದು ಭಾಗವನ್ನು ತುಂಡರಿಸಿರುವ ಕಾರಣ ತೋಳುಗಳಲ್ಲಿ ಅದನ್ನು ಧರಿಸಲು ಸುಲಭವಾಗುತ್ತದೆ. ಲಂಬಾಣಿ ಸಮುದಾಯವು ವಿವಾಹಗಳಲ್ಲಿ ಸರಗಳನ್ನು ಬಳಸಲು ತೊಡಗಿದ ಬಳಿಕ ಬಲಿಯಾದ ಪ್ರಾಧಾನ್ಯ ಮತ್ತು ಅಗತ್ಯ ಕಡಿಮೆಯಾಗುತ್ತ ಬರುತ್ತಿದೆ. ಲಂಬಾಣಿ ಸ್ತ್ರೀಯರು ಪಾರಂಪರಿಕ ಉಡುಗೆಗಳನ್ನು ಬಿಟ್ಟು ಸೀರೆ/ಸೆಲ್ವಾರ್ ಕಮೀಜ್ ಧರಿಸಲಾರಂಭಿಸಿದ ಬಳಿಕ ಬಲಿಯಾ ಅವರಿಗೆ ಆಕರ್ಷಕ ಸಾಧನವಾಗುವಲ್ಲಿ ವಿಫಲವಾಗಿದೆ.

ಬಾಚಿ

ಮರದ ತುಂಡುಗಳನ್ನು ಅಗತ್ಯಾನುಸಾರ ಕ್ರಮಬದ್ದವಾಗಿ ಕೆತ್ತನೆ ಮಾಡಲು ಬಡಗಿಗಳು ಬಳಸುವ ಆಯುಧ. ಬಾಚಿಯು ಆರು ಇಂಚು ಉದ್ದ, ಸುಮಾರು ಮೂರು ಇಂಚು ಅಗಲವಿರುತ್ತದೆ. ಅಲಗಿನ ತುದಿ ಭಾಗವು ಹರಿತವಾಗಿರುತ್ತದೆ. ಹಿಡಿಕೆಯು ಸುಮಾರು ಎರಡು ಅಡಿ ಉದ್ದವಿರುತ್ತದೆ. ಕಬ್ಬಿಣದಿಂದ ಬಾಚಿಯನ್ನು ತಯಾರಿಸಲಾಗುತ್ತದ. ಅದಕ್ಕೆ ಮರದ ಹಿಡಿಕೆಯನ್ನು ಹಾಕುತ್ತಾರೆ. ಬಾಚಿಯ ಗಾತ್ರಗಳಲ್ಲಿ ವ್ಯತ್ಯಾಸಗಳಿರುತ್ತವೆ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App