भारतीय भाषाओं द्वारा ज्ञान

Knowledge through Indian Languages

Dictionary

Janapada Vastukosha (Kannada)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಜ್ಜೋಡು

ಬಡಿಗೇರರು ಮರದ ಕೆತ್ತನೆ ಕೆಲಸ ಮಾಡುವ ಸಂದರ್ಭದಲ್ಲಿ ಬಾಚಿ ಅಥವಾ ಇತರೆ ವಸ್ತುವಿನಿಂದ ಕೆತ್ತಿದ ಮರವನ್ನು/ಹಲಗೆಯನ್ನು ನುನುಪಾಗಿ ಕೆತ್ತಲು ಬಳಸುವ ಪರಿಕರ. ಇದರ ಗಾತ್ರ ಮತ್ತು ವಿನ್ಯಾಸಗಳಲ್ಲಿ ಹಲವು ವ್ಯತ್ಯಾಸಗಳಿರುತ್ತವೆ. ಸಾಮಾನ್ಯವಾಗಿ ಒಂದು ಅಡಿ ಉದ್ದ, ನಾಲ್ಕು ಇಂಚು ಅಗಲ, ಮೂರು ಇಂಚು ಎತ್ತರದ ಆಯಾತಾಕಾರದ ಮರದ ತುಂಡಿನಿಂದ ತಯಾರಿಸುತ್ತಾರೆ. ಈ ತುಂಡಿನ ನಡುವೆ ಸುಮಾರು ಎರಡು ಇಂಚು ಅಳತೆಯುಳ್ಳ (ಗಾತ್ರಕ್ಕೆ ಅನುಕೂಲವಾಗುವಂತೆ ಬೇರೆ ಬೇರೆ ಅಳತೆಯ) ಹರಿತವಾದ ತಗುಡನ್ನು ಜೋಡಿಸಲಾಗುತ್ತದೆ. ಈ ತಗುಡನ್ನು ಬಿಗಿಗೊಳಿಸಿಕೊಳ್ಳಲು ಬಿಗಿಗೂಟವಿದೆ. ಉಜ್ಜೋಡಿನ ಒಂದು ಭಾಗದ ಮೇಲ್ಭಾಗದಲ್ಲಿ ಎರಡೂ ಕೈಯಲ್ಲಿ ಹಿಡಿಯಲು ಅನುಕೂಲವಾಗುವ ಹಿಡಿಕೆ ಇದೆ. ಇದನ್ನು ಒಬ್ಬರು ಅಥವಾ ಇಬ್ಬರೂ ಬಳಸಬಹುದು. ನುಣುಪುಗೊಳಿಸುವ ಆಧುನಿಕ ಯಂತ್ರಗಳು ಬಂದ ನಂತರ ಇದರ ಬಳಕೆ ಅತ್ಯಂತ ಕಡಿಮೆಯಾಗಿದೆ.

ಉಡಿ

ಬಿತ್ತನೆ ಮಾಡುವಾಗ ಸಣ್ಣ ಪ್ರಮಾಣದಲ್ಲಿ ಬೀಜಗಳನ್ನು ಇದರಲ್ಲಿ ತುಂಬಿಕೊಂಡು ರೈತರು ಸೊಂಟಕ್ಕೆ (ಹೊಟ್ಟೆಯಮೇಲೆ) ಕಟ್ಟಿಕೊಳ್ಳುತ್ತಾರೆ. ಇದರ ಮುಂಭಾಗದಲ್ಲಿ ಚೀಲದಂತಹ ರಚನೆ ಇದ್ದು, ಬಿತ್ತುವ ಬೀಜವನ್ನು ತುಂಬಿಕೊಳ್ಳುತ್ತಾರೆ. ಹಾಗೆ ತುಂಬಿಕೊಂಡಬಳಿಕ ಕೂರಿಗೆ/ರಂಟೆ/ಮಡಕೆ ಹೊಡೆಯುವವರ ಹಿಂದಿನಿಂದ ಉಡಿಯಿಂದ ಆಗಾಗ ಬೀಜಗಳನ್ನು ತೆಗೆದುಕೊಳ್ಳುತ್ತ ಬಿತ್ತನೆ ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ಕೂರಿಗೆ/ರಂಟೆ ಹೊಡೆಯುವವನು ಕೂಡಾ ಉಡಿಯನ್ನು ಬಳಸಿಕೊಂಡು ಬಿತ್ತನೆ ಮಾಡಬಹುದು. ಇದರಲ್ಲಿ ಸುಮಾರು ಮೂರು ನಾಲ್ಕು ಕೆ.ಜಿ ಬೀಜಗಳನ್ನು ತುಂಬಿಕೊಳ್ಳಬಹುದು.

ಉಣ್ಣೆಕತ್ರಿ / ತುಪ್ಪಟ ಕತ್ರಿ

ಕುರಿಗಳ ತುಪ್ಪಟನ್ನು ಕತ್ತರಿಸಲು ಬಳಸುವ ಸಲಕರಣೆ. ಇದು ಸುಮಾರು ಒಂದು ಅಡಿಯಿಂದ ಸುಮಾರು ಹದಿನೈದು ಇಂಚು ಉದ್ದವಿರುತ್ತದೆ. ಮಧ್ಯದಲ್ಲಿ ಸುಮಾರು ಎರಡು ಇಂಚು ಅಗಲವಿದ್ದು ತುದಿ ಭಾಗಕ್ಕೆ ಬಂದಂತೆ ಕಡಿಮೆ ಅಗಲವಿರುವ ತೆಳು ತಗಡುಗಳನ್ನು ಒಂದಕ್ಕೊಂದು ಅಭಿಮುಖವಾಗುವಂತೆ ವಿನ್ಯಾಸಗೊಳಿಸಿದ ಒಂದೇ ತಗಡಿನ ತುಂಡಿನಿಂದ ಇದನ್ನು ರಚಿಸುತ್ತಾರೆ. ಇದನ್ನು ಮಧ್ಯದಲ್ಲಿ ಸಂಪೂರ್ಣವಾಗಿ ಬಾಗಿಸಿದಾಗ ಕತ್ತರಿಯ ಆಕಾರವು ಲಭ್ಯವಾಗುತ್ತದೆ. ಬುಡಭಾಗವೇ ಹಿಡಿಯೂ ಆಗಿರುತ್ತದೆ ಹೊರತು ಪ್ರತ್ಯೇಕ ಹಿಡಿ ಇರುವುದಿಲ್ಲ.

ಊದುಬತ್ತಿ ಸ್ಟ್ಯಾಂಡ್

ಮನೆಗಳ ಜಗಲಿಯಲ್ಲಿ, ದೇವರಕೋಣೆ, ದೇವರ ಫೋಟೋ ಅಥವಾ ದೇವರ ಮೂರ್ತಿಗಳ ಮುಂಭಾಗದಲ್ಲಿ ಊದು ಬತ್ತಿ ಉರಿಸಿಡಲು ಬಳಸುವ ಸಾಧನ. ಇದು ಸುಮಾರು ಏಳು ಇಂಚು ಎತ್ತರವಿದ್ದು, ತಳಭಾಗದಲ್ಲಿ ಆಯಾತಾಕಾರದ ಪೀಠವಿದೆ. ಈ ಪೀಠಕ್ಕೆ ನಾಲ್ಕು ಕಾಲುಗಳಿದ್ದು, ಪೀಠದ ಮೇಲ್ಭಾಗದಲ್ಲಿ ಹೂವಿನ ಚಿತ್ತಾರದ ಹಿತ್ತಾಳೆಯ ಕೊಕ್ಕೆಗಳಿವೆ. ಈ ಕೊಕ್ಕೆಗಳ ಮೇಲ್ಭಾಗದಲ್ಲಿರುವ ರಂಧ್ರಗಳಿಗೆ ಊದುಬತ್ತಿಯನ್ನು ಸಿಕ್ಕಿಸುತ್ತಾರೆ. ಕೆಲವರು ದಿನನಿತ್ಯ ಬಳಸಿದರೆ ಇನ್ನು ಕೆಲವರು ಹಬ್ಬ, ಜಾತ್ರೆ, ಉತ್ಸವ, ಮುಂತಾದ ವಿಶೇಷ ಪೂಜಾಕಾರ್ಯಗಳಲ್ಲಿ ಬಳಕೆ ಮಾಡುತ್ತಾರೆ.

ಊರುಗೋಲು

ವಯಸ್ಸಾದವರು ಸ್ವತಂತ್ರವಾಗಿ ನಡೆಯಲು ಸಾಧ್ಯವಾಗದೇ ಹೋದಾಗ ಸಹಾಯಕ್ಕಾಗಿ ಬಳಸುವ ಮರದ ದೊಣ್ಣೆ. ಇದು ಸುಮಾರು ಮೂರರಿಂದ ಐದು ಅಡಿಗಳಷ್ಟು ಎತ್ತರವಿದೆ. ಎರಡು ಇಂಚಿನಿಂದ ಮೂರು ಇಂಚಿನಷ್ಟು ಸುತ್ತಳತೆ ಇದೆ. ಊರುಗೋಲುಗಳನ್ನು ಬೆತ್ತ, ಬಿದಿರು, ಜೋಣಿಗಿಡದಂಥ ಗಿಡಗಳ ಕೋಲುಗಳಿಂದ ಮಾಡಲಾಗುತ್ತದೆ. ಕೋಲಿನ ತುದಿಗೆ ಕಬ್ಬಿಣದ ಬಳೆಯನ್ನು ಜೋಡಿಸಿರುತ್ತಾರೆ. ಶ್ರೀಮಂತರು ಕಂಚಿನ ಬಳೆಗಳನ್ನು ಹಾಕಿರುವುದೂ ಉಂಟು. ಹಿಡಿಯ ಮೇಲ್ಭಾಗದಲ್ಲಿ ಬಾಗಿದ ಹಿಡಿಕೆ ನಾಗರ ಹೆಡೆಯಾಕಾರದಲ್ಲಿಯೂ ಇರುತ್ತದೆ.

ಊರುಗೋಲು ಕತ್ತಿ

ಪಾಳೇಗಾರರು, ಊರಿನ ಗೌಡರು, ಶ್ರೀಮಂತರು, ತಮ್ಮ ಆತ್ಮರಕ್ಷಣೆಗಾಗಿ ಬಳಸುವ ಸಾಧನ. ಇದು ಸುಮಾರು ಎರಡರಿಂದ ಎರಡೂವರೆ ಅಡಿ ಉದ್ದವಿದ್ದು ಅರ್ಧ ಅಡಿ ಮರದ ಹಿಡಿಕೆ ಹೊಂದಿರುತ್ತದೆ. ಕತ್ತಿಯ ಎರಡು ಪಾರ್ಶ್ವಗಳೂ ಹರಿತವಾಗಿರುತ್ತವ, ತುದಿ ಚೂಪಾಗಿರುತ್ತದೆ. ಇದನ್ನು ಕಣ್ಣಿಗೆ ಕಾಣದ ಹಾಗೆ ಊರುಗೋಲ ಒಳಗಡೆ ಅಳವಡಿಸಿರುತ್ತಾರೆ. ಅವಶ್ಯಕತೆ ಬಂದಾಗ ಮಾತ್ರ ಅದನ್ನು ಹೊರಗೆ ತೆಗೆಯುತ್ತಾರೆ. ಕಳ್ಳಕಾಕರು, ದರೋಡೆಕೋರರು, ಶತ್ರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಮಾತ್ರ ಈ ಕತ್ತಿಯನ್ನು ಬಳಸುತ್ತಾರೆ. ನೋಡುಗರಿಗೆ ಕೇವಲ ಆಸರೆ, ದರ್ಪ, ಘನತೆಗಾಗಿ ಈ ಊರುಗೋಲನ್ನು ಬಳಸುತ್ತಾರೆಂದು ತೋರಿದರೂ ಇದರ ಒಳಗಡೆ ಕತ್ತಿ ಇರುತ್ತದೆ.

ಎಡೆಕುಂಟೆ

ಇದು ಮುಖ್ಯವಾಗಿ ಬೆಳೆಗಳ ಸಾಲುಗಳ ಮಧ್ಯದಲ್ಲಿನ ಕಳೆಯನ್ನು ಕೀಳುವುದಕ್ಕೆ ಮತ್ತು ಬೆಳೆಗಳ ಬುಡಕ್ಕೆ ನಿರ್ದಿಷ್ಟ ಪ್ರಮಾಣದ ಮಣ್ಣನ್ನು ಹೇರುವುದಕ್ಕೆ ಬಳಕೆಯಾಗುತ್ತದೆ. ಅದಕ್ಕಾಗಿಯೇ ಇದಕ್ಕೆ ಎಡೆಕುಂಟೆ ಎಂದು ಹೆಸರು. ಎರಡು ಸಾಲುಗಳಲ್ಲಿ ಬೆಳೆದಿರುವ ಬೆಳೆಗಳ ಮಧ್ಯೆ ಇದನ್ನು ಹಾಯಿಸಿದಾಗ ಕಳೆಗಿಡಗಳು ಕಿತ್ತುಹೋಗಿ ನಾಶವಾಗುತ್ತವೆ. ಎರಡನೆ ಹಂತದಲ್ಲಿ ಇದರ ಬಳಕೆಯು ಬೆಳೆಯ ಕೆಲವು ಬೇರುಗಳನ್ನು ಹರಿಯುವುದಾಗಿರುತ್ತದೆ (ಜೊತೆಗೆ ಕಳೆಕೂಡಾ ನಾಶವಾಗುತ್ತದೆ). ಇದರಿಂದ ಬೆಳೆಯಲ್ಲಿ ಹೊಸ ಬೇರುಗಳು ಸಮೃದ್ಧವಾಗಿ ಮೂಡಿಬರುತ್ತವೆ ಎನ್ನವುದು ರೈತರ ಅಭಿಪ್ರಾಯ. ಮೂರನೆ ಹಂತದಲ್ಲಿ ಬೆಳೆಯ ಬುಡಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಎಡೆಯ ಮಣ್ಣನ್ನು ಒದಗಿಸುವುದೇ ಇದರ ಉದ್ದೇಶವಾಗಿರುತ್ತದೆ. ಒಂದನೇ ಎರಡನೇ ಹಂತಗಳಲ್ಲಿ ಎಡೆಕುಂಟೆಯ ತಾಳಿನ ರಂಧ್ರದಲ್ಲಿ ಮಣ್ಣು ಹಿಂದಕ್ಕೆ ಬೀಳುತ್ತಾ ಹೋದರೆ ಮೂರನೆ ಹಂತದಲ್ಲಿ ತಾಳಿನ ಈ ರಂಧ್ರವನ್ನು ಹಗ್ಗ/ಬಳ್ಳಿಯನ್ನು ಸುತ್ತಿ ಮುಚ್ಚಿಬಿಡುವುದರಿಂದ ಮಣ್ಣು ಹಿಂದಕ್ಕೆ ಬೀಳದೆ ಬದಿಗಳಿಂದ ಸರಿದು ಬೆಳೆಗಳ ಬುಡಕ್ಕೆ ಬೀಳುತ್ತದೆ.
ಎತ್ತುಗಳ ನೊಗಕ್ಕೆ ಎಡೆಕುಂಟೆಯನ್ನು ಹಗ್ಗದ ಸಹಾಯದಿಂದ ಕಟ್ಟಲಾಗುತ್ತದೆ. ಒಂದು ಕುಂಟೆಯನ್ನಷ್ಟೆ ಬಳಸುವಾಗ ನೊಗವು ಚಿಕ್ಕದಾಗಿರುತ್ತದೆ. ಮಣ್ಣನ್ನು ಬೆಳೆಯ ಬುಡಕ್ಕೆ ಹಾಕುವಾಗ ಸಾಮಾನ್ಯವಾಗಿ ಒಂದೇ ಕುಂಟೆಯನ್ನು ಕಟ್ಟುತ್ತಾರೆ. ಎರಡು ಅಥವಾ ಮೂರು ಮೂರು ಕುಂಟೆಗಳನ್ನು ಬಳಸುವಾಗ ದೊಡ್ಡ ನೊಗವನ್ನು (ಸುಮಾರು ಹನ್ನೆರಡು ಗೇಣು) ಕಟ್ಟುತ್ತಾರೆ. ಕುಂಟೆಯಲ್ಲಿ ಈಸು (ನೊಗಕ್ಕೆ ಜೋಡಿಸುವ ಭಾಗ), ತಾಳು (ದಿಂಡು ಮತ್ತು ಕುಡಗಳನ್ನು ಜೋಡಿಸುವ ಮರದ ಪಟ್ಟಿ), ಕುಡ(ಕಳೆಯನ್ನು ಕತ್ತರಿಸುವ ಮತ್ತು ಮಣ್ಣನ್ನು ಅಗೆಯುವ ಭಾಗ), ಮೇಳಿ (ಹಿಡಿಕೆ)-ಎಂಬ ಭಾಗಗಳಿವೆ. ಮಣ್ಣು ಗಟ್ಟಿಯಾಗಿದ್ದಾಗ ಕುಂಟೆಗೆ ಇನ್ನಷ್ಟು ಒತ್ತಡ ಹಾಕಲು ಬ್ಯಾಕೋಲು/ಕವೆಗೋಲು/ಕೊಕ್ಕೆಕೋಲನ್ನು ಬಳಸುತ್ತಾರೆ (ಇದು ಸುಮಾರು ಮೂರು, ಮೂರೂವರೆ ಅಡಿ ಎತ್ತರವಿರುತ್ತದೆ). ಅಗತ್ಯವಿದ್ದಾಗ ಬೆಳೆಗಳ ಮಧ್ಯೆ ನೀರು ಹರಿಸಿಕೊಂಡು ಎಡೆನಾಟಿ ಮಾಡುವಾಗಲೂ ಎಡೆಕುಂಟೆಯ ಉಪಯೋಗವಾಗುತ್ತದೆ.

ಎಣ್ಣೆಕಾಯಿ

ಉರಿಸಿದ ದೀಪಗಳಲ್ಲಿ ಎಣ್ಣೆ ಮುಗಿಯುತ್ತಿದ್ದಂತೆ ಮತ್ತೆ ಮತ್ತೆ ಎಣ್ಣೆ ಎರೆಯಲು ಇದನ್ನು ಬಳಸುತ್ತಾರೆ. ದೀಪ ಉರಿಯುತ್ತಿರುವಾಗಲೆ ದೀಪ ಆರದಂತೆ ಎಣ್ಣೆ ಹಾಕುವಂತಿರುವ ನಳಿಗೆಯುಳ್ಳ ಲೋಹದ ಪಾತ್ರೆ. ಇದು ಕಿತ್ಲಿ (ಏeಣಣಟe) ಆಕಾರದಲ್ಲಿದೆ. ಸ್ಥಳೀಯರು ಇದನ್ನು ಎಣ್ಣೆಕಾಯಿ ಎನ್ನುತ್ತಾರೆ. ಇದರಲ್ಲಿ ಸುಮಾರು ಒಂದು ಲೀಟರ್‌ನಷ್ಟು ಎಣ್ಣೆಯನ್ನು ಹಾಕಿ ಇಟ್ಟುಕೊಳ್ಳಬಹುದು. ಇದನ್ನು ತಾಮ್ರ, ಕಂಚು, ಹಿತ್ತಾಳೆ ಮುಂತಾದ ಲೋಹಗಳಿಂದ ತಯಾರಿಸುತ್ತಾರೆ.

ಎತ್ತಿನ ಕೊಂಬಿನ ನಶ್ಯಡಬ್ಬಿ

ನಶ್ಯ ಹಾಕುವವರು ನಶ್ಯ ತುಂಬಿಟ್ಟುಕೊಳ್ಳಲು ಬಳಸುವ ಡಬ್ಬಿ. ಇದು ಸುಮಾರು ೨.೪ ಇಂಚು ಎತ್ತರವಿದೆ. ಸುಮಾರು ೩ ಇಂಚು ವ್ಯಾಸವನ್ನು ಹೊಂದಿದೆ. ಎತ್ತಿನ ಕೊಂಬಿನಿಂದ ತಯಾರಿಸಿದ್ದಾರೆ. ಎತ್ತಿನ ಕೊಂಬಿನ ತುದಿಭಾಗವು ಇದಕ್ಕೆ ಉಪಯೋಗವಾಗಿದೆ. ಇತ್ತೀಚೆಗೆ ಲೋಹದ ನಶ್ಯ ಡಬ್ಬಿಗಳು ಬಂದ ಮೇಲೆ ಇದರ ಬಳಕೆ ಬಹಳ ಕಡಿಮೆಯಾಗಿದೆ. ವಿವಿಧ ರೂಪದ ನಶ್ಯ ಡಬ್ಬಿಗಳನ್ನು ನೋಡಬಹುದಾಗಿದೆ. ಬೆಳ್ಳಿ, ಸಿಲ್ವರ್, ತೆಂಗಿನ ಚಿಪ್ಪು,ಗಾಜು, ಪ್ಲಾಸ್ಟಿಕ್‌ಗಳಿಂದ ಕೂಡ ನಶ್ಯಡಬ್ಬಗಳುಳ್ಳ ನಿರ್ಮಾಣಗೊಳ್ಳುತ್ತವೆ.

ಎರ್‍ಮುಳ್ಳು/ಹೆರೆಮಣೆ

ತೆಂಗಿನ ಕಾಯಿ ತುರಿಯಲು ಬಳಸುವ ವಸ್ತು. ತೆಂಗಿನಕಾಯಿಯನ್ನು ಇದರ ಹಲ್ಲುಗಳಿಂದ ತುರಿದಾಗ ಕಾಯಿ ಸಣ್ಣ ಸಣ್ಣ ತುರಿಗಳಾಗಿ ಕೆಳಗೆ ಉದುರುತ್ತದೆ. ಕಬ್ಬಿಣದ ತಗಡನ್ನು ಅಲ್ಲಿಲ್ಲಿ ಮೇಲ್ಮುಖವಾಗಿ ಬಾಗಿಸಿ ಸಾಲು ಸಾಲು ಹಲ್ಲುಗಳು ಬರುವಂತೆ ರಚನೆ ಮಾಡಿರುತ್ತಾರೆ. (ಇದು ಇತ್ತೀಚಿನ ಚೌಕ/ಆಯತಾಕಾರದ ತುರಿಮಣೆಗಳಲ್ಲಿರುತ್ತವೆ). ಆಯತಾಕಾರದಲ್ಲಿರುವ ಇದರ ಮಣೆಯ ನಾಲ್ಕು ಮೂಲೆಗಳು ಭದ್ರವಾಗಿ ನೆಲದಲ್ಲಿ ಸ್ಥಾಪಿತವಾಗಲು ಕಾಲುಗಳನ್ನು ಜೋಡಿಸುತ್ತಾರೆ. ಉದ್ದಗಲಗಳು ೬x೪ ಇಂಚು, ಎರಡು ಇಂಚು ಎತ್ತರ ಇರುತ್ತವ.

ಎಳೆಗೌರಮ್ಮನ ಮೂರ್ತಿ

ಚೌತಿಹಬ್ಬದ ನಾಲ್ಕನೆಯ ದಿನ ಎಂದರೆ ಅಷ್ಟಮಿಯ ದಿನ ಈ ಮೂರ್ತಿಯನ್ನು ನೀರು ತುಂಬಿದ ಕೊಡದಲ್ಲಿರಿಸಿ ಪೂಜಿಸುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿದೆ. ಇದು ಒಂದು ಮನುಷ್ಯಮುಖ ಪ್ರಮಾಣದ ಮುಖ. ಇದನ್ನು ಕೊಡದಲ್ಲಿ ಇಡುವುದಕ್ಕೆ ಅನುಕೂಲವಾಗುವಂತೆ ಇದರ ಕೊರಳನ್ನು ವಿನ್ಯಾಸಗೊಳಿಸಲಾಗಿದೆ. ಯಕ್ಷಗಾನದ ಹಳೆಯ ಸ್ತ್ರೀವೇಷದಂತೆ ಹಿಂದಲೆಯ ಮೇಲ್ಭಾಗದಲ್ಲಿ ಒಂದು ಕಿರೀಟಾಕೃತಿಯೂ ಕೊರಳಲ್ಲಿ ಅಡ್ಡಿಕೆಗಳೂ ಇವ. ಅಂತೆಯೇ ಕಿವಿಗೆ ಓಲೆ, ಮೂಗಿಗೆ ನತ್ತು ಇರಿಸಲು ಅನುಕೂಲವಾಗುವಂತೆ ರಚಿಸಲಾಗಿದೆ. ಮುಂದಿನ ವರ್ಷಗಳಲ್ಲೂ ಇದೇ ಸಂದರ್ಭದಲ್ಲಿ ಈ ಮೂರ್ತಿಯನ್ನು ಬಳಸಿಕೊಳ್ಳುವಂತೆ ಪೂಜೆಯ ಬಳಿಕ ಜೋಪಾನವಾಗಿಡುತ್ತಾರೆ. ಈ ಮೂರ್ತಿಯನ್ನು ಬೇವಿನ ಮರದಿಂದ ತಯಾರಿಸುತ್ತಾರೆ.

ಏಕತಾರಿ/ತಂಬೂರಿ

ಜನಪದ ಸಂಗೀತ ಸಾಧನಗಳಲ್ಲಿ ಒಂದು. ಇದು ಸುಮಾರು ನಾಲ್ಕರಿಂದ ಐದು ಅಡಿ ಉದ್ದವಿದೆ. ಇದರ ಕೆಳಭಾಗದಲ್ಲಿ ಬಿದರಿನ ಕಡ್ಡಿಗಳನ್ನು ಕುಂಬಳಕಾಯಿಯ ಆಕಾರದಲ್ಲಿ ಹೆಣೆದಿದೆ. ಇದರ ಅಲಂಕಾರಕ್ಕಾಗಿ ವಿವಿಧ ಬಣ್ಣಗಳನ್ನು ಲೇಪಿಸಿದೆ. ಇದಕ್ಕೆ ಸುಮಾರು ನಾಲ್ಕರಿಂದ ಐದು ಅಡಿ ಉದ್ದದ ಬಿದರಿನ ಕೋಲನ್ನು ಜೋಡಿಸಿ ಅದರ ಕೊನೆಯ ತುದಿಯಿಂದ ಸ್ವಲ್ಪ ಕೆಳಭಾಗದಲ್ಲಿ ಬೆಣೆ ಜೋಡಿಸಿದ್ದಕ್ಕೆ ಬುರುಡೆಯಿಂದ ಹೊರಟ ತಂತಿಯನ್ನು ಬಿಗಿಯಲಾಗಿದೆ. ಬುಟ್ಟಿಯ ಮೇಲೆ ಹಾದು ಹೋದ ತಂತಿಯ ಬುಟ್ಟಿಗೆ ತಾಗದಂತೆ ನಾಣ್ಯ ಅಥವಾ ಗಡಿಗೆಯ ತುಂಡನ್ನು ಮೇಣದ ಸಹಾಯದಿಂದ ಅಂಟಿಸಿ ಇಟ್ಟಿದ್ದಾರೆ. ಆಗ ಅದರ ನಾದ ಸ್ಪಷ್ಟವಾಗಿ ಹೊರಹೊಮ್ಮುತ್ತದೆ. ಈ ತರಹದ ಏಕತಾರಿ ಅಪೂರ್ವವಾಗಿದೆ. ದಾಸರ ಪದಗಳನ್ನು ಹಾಡಲು ಏಕತಾರಿಗಳನ್ನು ಬಳಸುತ್ತಾರೆ. ಕೆಲವು ಕಡೆ ಭಜನೆ ಮಾಡುವ ಸಂದರ್ಭಗಳಲ್ಲಿ ಕೂಡ ಅವನ್ನು ಉಪಯೋಗಿಸುತ್ತಾರೆ. ಏಕತಾರಿಯು ತಂತಿವಾದ್ಯ.

ಏತರಾಟೆ/ಕಪ್ಲಿರಾಟೆ

ನೆಲಬಾವಿಯಿಂದ ಎತ್ತುಗಳ ಮೂಲಕ ಕಪ್ಲಿ ಹೊಡೆದು ನೀರನ್ನು ಮೇಲೆತ್ತಲು ಬಳಸುವ ಒಂದು ಸಾಧನ. ಸುಮಾರು ಹತ್ತು ಇಂಚು ವ್ಯಾಸ, ಆರು ಇಂಚು ದಪ್ಪದ ಮರದಿಂದ ತಯಾರಿಸಿದ್ದಾರೆ. ಇದು ವೃತ್ತಾಕಾರದಲ್ಲಿದ್ದು ಅದರ ಹೊರ ಅಂಚಿನಲ್ಲಿ ಹಗ್ಗವು ಅತ್ತಿತ್ತ ಹೊರ ಹೋಗದೆ ಸಲೀಸಾಗಿ ಚಲಿಸಲು ಅನುಕೂಲವಾಗುವಂತೆ ಕೆತ್ತಿರುತ್ತಾರೆ. ರಾಟೆಯ ಮಧ್ಯಭಾಗದಲ್ಲಿ ಸುಮಾರು ಎರಡು ಇಂಚು ವ್ಯಾಸದ ರಂಧ್ರವಿರುತ್ತದೆ. ಅದಕ್ಕೆ ಬಲವಾದ ಸರಳನ್ನು ಜೋಡಿಸಲಾಗತ್ತದೆ. ಭಾರವಾದ ನೀರು/ವಸ್ತುವನ್ನು ಆಳದಿಂದ ಮೇಲೆತ್ತಲು ರಾಟೆಯ ತಂತ್ರವನ್ನು ಅಳವಡಿಸುವುದರಿಂದ ಶ್ರಮವು ತುಂಬಾ ಕಡಿಮೆಯಾಗುತ್ತದೆ.

ಒನಕೆ

ಭತ್ತ ಕುಟ್ಟಿ ಅಕ್ಕಿ ಮಾಡುವುದಕ್ಕೆ ಬಳಕೆಯಾಗುತ್ತಿದ್ದ ಪಾರಂಪರಿಕ ಸಾಧನ. ಅಂತೆಯೇ ಜೋಳ, ನವಣೆ, ಗೋಧಿ ಮುಂತಾದ ಧಾನ್ಯಗಳ ಹೊಟ್ಟನ್ನು ತೆಗೆಯುವುದಕ್ಕೂ ಒನಕೆಯು ಬಳಕೆಯಾಗುತ್ತದೆ. ಇದು ಸುಮಾರು ನಾಲ್ಕರಿಂದ ಐದು ಅಡಿಗಳಷ್ಟು ಎತ್ತರವಾಗಿದ್ದು ಸುಮಾರು ಐದರಿಂದ ಎಂಟು ಇಂಚು ಸುತ್ತಳತೆಯುಳ್ಳದ್ದಾಗಿರುತ್ತದೆ. ಇದರ ತಳಭಾಗದಲ್ಲಿ ಕಬ್ಬಿಣದ ಬಳೆಯನ್ನು ಹಾಕಲಾಗುತ್ತದೆ. ಒರಳಿನಲ್ಲಿ ಧಾನ್ಯಗಳನ್ನು ಹಾಕಿ ನಿಂತುಕೊಂಡು ಒನಕೆಯಿಂದ ಕುಟ್ಟುತ್ತಾರೆ. ಒನಕೆಯನ್ನು ಸಾಗುವಾನಿ, ಬಾರಿ, ಬೋರೆ, ತಾಳೆ, ಜಾಲಿ ಮುಂತಾದ ಭಾರವಾದ ಮತ್ತು ಗಟ್ಟಿಮುಟ್ಟಾದ ಮರಗಳಿಂದ ತಯಾರಿಸುತ್ತಾರೆ.
ಒನಕೆಯಿಂದ ಕುಟ್ಟುವ ಒರಳಿನ ಬಳಿ ಒಬ್ಬಾಕೆ ಕುಳಿತುಕೊಂಡು ಮತ್ತು ಇನ್ನೊಬ್ಬಾಕೆ ನಿಂತುಕೊಂಡು (ಒಂದೇ ಒನಕೆಯಿಂದ) ಕುಟ್ಟಬಹುದು. ಇದಲ್ಲದೆ ಪ್ರತ್ಯೇಕ ಒನಕೆಗಳನ್ನು ತೆಗೆದುಕೊಂಡು ಒಂದು ಒರಳಲ್ಲಿ ಇಬ್ಬರು ಅಥವಾ ಕೆಲವೊಮ್ಮೆ ಮೂರು ಮಂದಿ ಕೂಡಾ ಕುಟ್ಟಬಹುದು. ಇದಕ್ಕೆ ಸ್ವಲ್ಪ ಪರಿಣತಿಯ ಅಗತ್ಯವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಒಬ್ಬ ವ್ಯಕ್ತಿಯೇ ಕುಳಿತುಕೊಂಡು ಕುಟ್ಟುವುದಕ್ಕೆ ಕಿರು ಒನಕೆಗಳು ಬಳಕೆಯಾಗುತ್ತವೆ. ಇದು ಸುಮಾರು ಮೂರು ಅಡಿಗಳಷ್ಟು ಎತ್ತರವಿರುತ್ತದೆ ಅಷ್ಟೆ.

ಒರಳುಕಲ್ಲು

ಜೋಳದ ಜರಗು, ಭತ್ತ, ಗೋಧಿ ಮುಂತಾದುವನ್ನು ಕುಟ್ಟುವುದಕ್ಕೂ ಚಟ್ನಿ, ಹಿಂಡಿ(ಖಾರ ತಿಂಡಿ) ಇತ್ಯಾದಿಗಳನ್ನು ಅರೆಯುವುದಕ್ಕೂ ಬೇಳೆ ಹೂರಣವನ್ನು ರುಬ್ಬುವುದಕ್ಕೂ ಬಳಸುವ ಸಾಧನ. ಒರಳುಕಲ್ಲನ್ನು ಮನೆಯಲ್ಲಿ ಮುಖ್ಯವಾಗಿ ಎರಡು ಕಡೆಗಳಲ್ಲಿ ಸ್ಥಾಪಿಸುತ್ತಾರೆ-ಅಡುಗೆಮನೆ ಮತ್ತು ಪಡಸಾಲೆಗಳಲ್ಲಿ. ಅಡುಗೆ ಮನೆಯಲ್ಲಿನ ಒರಳು ಕಲ್ಲಿನಲ್ಲಿ ಹೆಚ್ಚಾಗಿ ರುಬ್ಬುವ ಮತ್ತು ಅರೆಯುವ ಕ್ರಿಯೆಗಳು ನಡೆಯುತ್ತವೆ. ಪಡಸಾಲೆ ಅಥವಾ ಕಟ್ಟೆಗಳ ಮೇಲೆ ಇಟ್ಟಿರುವ ಒರಳು ಕಲ್ಲು ಕುಟ್ಟುವುದಕ್ಕೆ ಬಳಕೆಯಾಗುತ್ತದೆ. ಸಾಮಾನ್ಯವಾಗಿ ರುಬ್ಬುವ ಮತ್ತು ಅರೆಯುವ ಒರಳು ಕಲ್ಲುಗಳು ಸುಮಾರು ಆರು ಇಂಚು ವ್ಯಾಸ ಮತ್ತು ಸುಮಾರು ಆರರಿಂದ ಎಂಟು ಇಂಚು ಆಳವಿರುತ್ತವೆ. ರುಬ್ಬುಗುಂಡುಗಳನ್ನು ಮತ್ತು ಮಡ್ಡೊನಕೆ/ಮೊಂಡೊನಕೆಯನ್ನು ಬಳಸಿಕೊಂಡು ರುಬ್ಬುವ, ಅರೆಯುವ ಕೆಲಸ ಮಾಡುತ್ತಾರೆ.
ಒರಳು ಕಲ್ಲಿನ ಬಾಯಿಯು ಸುಮಾರು ಅರ್ಧ ಅಡಿ ವ್ಯಾಸವಿರುತ್ತದೆ. ಒನಕೆಗಳನ್ನು ಬಳಸಿ ಇದರಲ್ಲಿ ಕುಟ್ಟುವ ಕೆಲಸವನ್ನು ಮಾಡುತ್ತಾರೆ. ಒರಳು ಕಲ್ಲಿಗೆ ಸಂಬಂಧಿಸಿ ಅದರ ಮೇಲೆ ಕುಳಿತುಕೊಳ್ಳಬಾರದು, ಅದನ್ನು ತುಳಿಯಬಾರದು ಮುಂತಾದ ನಿಷೇಧಗಳಿವೆ. ಮದುವೆಯಂಥ ಸಮಾರಂಭಗಳಲ್ಲಿ ಇದನ್ನು ಪೂಜಿಸುವ ಸಂಪ್ರದಾಯ ಜನಪದರಲ್ಲಿದೆ. ಒರಳು ಕಲ್ಲುಗಳನ್ನು ಕಗ್ಗಲ್ಲಿಂದಲೇ ತಯಾರಿಸಲಾಗುತ್ತದೆ. ರೈಸ್ ಮಿಲ್ಲುಗಳು, ಮಿಕ್ಸಿ-ಗ್ರೈಂಡರ್‌ಗಳು ಬಂದ ಬಳಿಕ ಒರಳು ಕಲ್ಲುಗಳ ಬಳಕೆ ಮೂಲೆಗುಂಪಾಗತೊಡಗಿವೆ. ಆದರೆ ಆಚರಣೆಯಲ್ಲಿ ಉಳಿದಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಪ್ರತಿ ಮನೆಗಳ ಅಡುಗೆಮನೆಯ ಮೂಲೆಯಲ್ಲಿ ಒರಳು ಕಲ್ಲನ್ನು ಪ್ರತಿಷ್ಠಾಪಿಸುದನ್ನು ಈಗಲೂ ಕಾಣಬಹುದು.

ಔಂಗು ಗಡಿಗೆ

ಅರಿವಿ ಎಂಬ ಸಿಹಿ ಪದಾರ್ಥ ಮಾಡುವಾಗ (ಗೋಧಿ ಹಿಟ್ಟು, ಬೆಲ್ಲವನ್ನು ನೀರಿನಿಂದ ಮಿಶ್ರಣ ಮಾಡಿ ಸುಮಾರು ಮೂರು ನಾಲ್ಕು ತಾಸು ಬಿಡುತ್ತಾರೆ) ಬಳಕೆಯಾಗುವ ವಸ್ತು. ಇದು ಸುಮಾರು ಹದಿನಾಲ್ಕು ಇಂಚು ಎತ್ತರ, ಕಂಠದ ಬಾಯಿಯ ವ್ಯಾಸ ಒಂಭತ್ತು ಇಂಚು, ನಡು ಪಟ್ಟಿಯ ಸುತ್ತಳತೆ ಐವತ್ತು ನಾಲ್ಕು ಇಂಚು ಇರುತ್ತದೆ. ಕಂಠದ ಕೆಳಭಾಗದಲ್ಲಿ ಸುತ್ತಲೂ ನಾಲ್ಕು ಕಡೆ ಬಾಣ, ಸಂಕಲನ ಚಿಹ್ನೆ, ತ್ರಿಭುಜ, ವೃತ್ತಾಕಾರದ ರಂಧ್ರಗಳಿರುತ್ತವೆ. ಈ ಔಂಗು ಗಡಿಗೆಯನ್ನು ಒಲೆ ಮೇಲೆ ಬೋರಲು ಹಾಕಿ ತೆಳುವಾದ ಬಟ್ಟೆಯನ್ನು ಅದರ ಮೇಲೆ ಹಾಸಿ ನೆನಸಿಟ್ಟು, ಲಟ್ಟಿಸಿದ ಅರಿವಿಯನ್ನು ಸುಡಲು ಈ ಗಡಿಗೆಯನ್ನು ಬಳಸುತ್ತಾರೆ.

ಕಡಬತ್ ಕಲ್ಲು

ಕಾರ, ಹಿಂಡಿ (ಒಂದು ತೆರನ ಚಟ್ನಿ) ಮಸಾಲೆ, ಕಷಾಯಹುಡಿ, ಚಟ್ನಿ ಮುಂತಾದವುಗಳನ್ನು ಅರೆಯಲು, ಕುಟ್ಟಲು ಬಳಸುವ ಪರಿಕರ. ಇದು ಒಂದು ಚಿಕ್ಕ ದೋಣಿಯಾಕಾರದಲ್ಲಿರುತ್ತದೆ. ಒಂದು ಅಡಿ ಉದ್ದ ಅರ್ಧ ಅಡಿ ಎತ್ತರವಿರುತ್ತದೆ. ಕಡಬತ್ ಕಲ್ಲುಗಳಲ್ಲಿ ವ್ಯತ್ಯಾಸಗಳಿವೆ. ಈ ಕಲ್ಲಿನಿಂದ ಮಸಾಲೆ ಅರೆದು ಸಾಂಬಾರು ಮಾಡಿದರೆ ಬಹಳ ರುಚಿಯಾಗಿರುತ್ತದೆ ಹಾಗೂ ಹೆಚ್ಚುಕಾಲ ಕೆಡದಂತೆ ಇರತುತದೆ ಎನ್ನವುದು ಜನಪದರ ಅನುಭವ. ಗ್ರಾಮೀಣ ಪ್ರದೇಶದ ಜನರು ಇಂದಿಗೂ ಈ ಕಲ್ಲಿನಲ್ಲೇ ಕಾರ, ಮಸಾಲೆ ಅರೆಯುತ್ತಾರೆ. ಬಳಪದ ಕಲ್ಲಿನಿಂದ ಇದನ್ನು ತಯಾರಿಸುತ್ತಾರೆ.

ಕಡೆಗೋಲು/ ಮಂತು

ಮೊಸರು ಕಡೆಯಲು ಸಾರ್ವತ್ರಿಕವಾಗಿ ಬಳಸುವ ಸಾಧನ. ಕಡೆಯುವ (ಮೊಸರನ್ನು) ಕೋಲು ಎಂಬುದೇ ಕಡೆಗೋಲು ಎಂದು ಸ್ವರೂಪ ಪಡೆಯಿತು. ಇದರಲ್ಲಿ ಮೊಸರನ್ನು ಕಡೆಯುವ ಮುದ್ದೆ/ಗಡ್ಡೆಯು ಮೂರು ಕಿರು ಹಂತಗಳಲ್ಲಿ ಎಸಳೆಸಳಾಗಿ ವಿನ್ಯಾಸಗೊಂಡಿರುತ್ತದೆ. ಮರದ ಒಂದೇ ತುಂಡಿನಿಂದ ಕಡೆಗೋಲನ್ನು ತಯಾರಿಸುತ್ತಾರೆ. ಕಡೆಗೋಲು ಮುದ್ದೆಯನ್ನು ತಯಾರಿಸಿ ಹಿಡಿಕೆಯನ್ನು ಜೋಡಿಸುವ ಕ್ರಮವೂ ಇದೆ. ಈ ಹಿಡಿಕೆ ಕೂಡ ಎರಡು ಅಂಗೈಗಳ ನಡುವೆ ಇರಿಸಿ ಅತ್ತಿತ್ತ ತಿರುಗಿಸುವಾಗ ಜಾರದಂತೆ ಹಿಡಿತಯನ್ನು ಉಳಿಸಿಕೊಳ್ಳುವ ತೆರನ ವಿನ್ಯಾಸವುಳ್ಳದ್ದು. ಕಡೆಗೋಲುಗಳು ವಿಭಿನ್ನ ಗಾತ್ರಗಳಲ್ಲಿರುತ್ತವೆ. ಸಣ್ಣ ಪ್ರಮಾಣದ ಅಂದರೆ ಸುಮಾರು ಎರಡು ಲೀಟರ್‌ನಷ್ಟು ಮೊಸರನ್ನು ಸಣ್ಣ ಕಡೆಗೋಲಿನಿಂದ ಕಡೆಯಬಹುದು. ಇಂಥ ಕಡೆಗೋಲಿನ ಬೊಡ್ಡೆಯು ಸುಮಾರು ಎಂಟರಿಂದ ಹತ್ತು ಇಂಚುಗಳ ಸುತ್ತಳತೆಯದಾಗಿದ್ದು ಹಿಡಿಕೆಯು ಸುಮಾರು ಒಂದರಿಂದ ಒಂದೂವರೆ ಅಡಿ ಎತ್ತರವಿರುತ್ತದೆ. ಇನ್ನೂ ಹೆಚ್ಚು ಪ್ರಮಾಣದ ಮೊಸರನ್ನು ಕಡೆಯಲು ಮಧ್ಯಮ ಗಾತ್ರದ ಕಡೆಗೋಲು ಬಳಕೆಯಾಗುತ್ತದೆ. ಮೊಸರಿನ ಪ್ರಮಾಣವೂ ತುಂಬ ಹೆಚ್ಚಾಗಿದ್ದಾಗ ಅದನ್ನು ಸುಮಾರು ನಾಲ್ಕು ಅಡಿ ಎತ್ತರದ ಬಿದಿರ ಅಂಡೆ/ಮರ ಅಥವಾ ಲೋಹದ ಪಾತ್ರೆಗಳಲ್ಲಿ ಹಾಕಿ ಬೃಹತ್ ಗಾತ್ರದ ಕಡೆಗೋಲಿನಿಂದ ನಿಂತುಕೊಂಡು ಕಡೆಯಲಾಗುತ್ತದೆ. ಇಂಥ ಕಡೆಗೋಲುಗಳ ಬೊಡ್ಡೆಯು ಸುಮಾರು ಒಂದರಿಂದ ಒಂದೂವರೆ ಅಡಿಗಳಷ್ಟು ಸುತ್ತಳತೆಯದಾಗಿದ್ದು ಅದರ ಹಿಡಿಕೆಯು ಸುಮಾರು ಐದು ಅಡಿಗಳಷ್ಟು ಉದ್ದವಿರುತ್ತದೆ.
ಕಡೆಗೋಲನ್ನು ವಿಶಿಷ್ಟ ಜಾತಿಯ ಮರಗಳಿಂದ ನಿರ್ಮಿಸುತ್ತಾರೆ. ಸಾಮಾನ್ಯವಾಗಿ ತೇಗ, ಹಲಸು ಮುಂತಾದ ಮರಗಳನ್ನು ಬಳಸಲಾಗುತ್ತದೆ. ಮಂತಿನ ರಚನೆಯಲ್ಲೂ ಬಡಗಿಗಳು ಕಾಷ್ಟ ಕೌಶಲವನ್ನು ತೋರುವುದಿದೆ. ಇದರ ಗಡ್ಡೆಯ ಎಸಳುಗಳು ಸಮ ಸಂಖ್ಯೆಯಲ್ಲೆ ಇರುತ್ತವೆ. ಮೊಸರು ಕಡೆಯಲು ಯಂತ್ರಗಳು ಬಂದ ಬಳಿಕ ಪಾರಂಪರಿಕ ಕಡೆಗೋಲುಗಳು ವಸ್ತು ಸಂಗ್ರಹಾಲಯದ ಸಾಧನಗಳಾಗಿ ತಮ್ಮ ಜಾಗವನ್ನು ತೆರವು ಮಾಡುತ್ತಿವೆ. ಜತೆಗೆ, ಮುಂಜಾನೆಯ ತಂಪು ಹೊತ್ತಿನಲ್ಲಿ ಮೊಸರು ಕಡೆಯುತ್ತ ಜನಪದ ಮಹಿಳೆಯರು ಹಾಡಿಕೊಳ್ಳುತ್ತಿದ್ದ ಉದಯರಾಗ/ಜನಪದ ಹಾಡುಗಳೂ ಮರೆಯಾಗುತ್ತಿವೆ.

ಕತ್ತಿ

ಎಮ್ಮೆ ಕೋಣಗಳ ಮೈಯ ಕೂದಲನ್ನು ಹೆರೆಯಲು ಬಳಸುವ ಕಿರುಗತ್ತಿ. ಇದರಲ್ಲಿ ಹಿಡಿಕೆಯು ಮರದ್ದಾಗಿದ್ದು ಕತ್ತಿಯು ಕಬ್ಬಿಣದಿಂದ ನಿರ್ಮಿತವಾಗಿದೆ. ಒಟ್ಟು ಉದ್ದ ಸುಮಾರು ಹತ್ತು ಇಂಚು. ಕತ್ತಿಯ ಅಲಗು ಕಬ್ಬಿಣದ ತೆಳುತಗಡಿನಿಂದ ರಚಿತವಾಗಿದೆ. ಎಮ್ಮೆ ಕೋಣಗಳ ಕೂದಲುಗಳನ್ನು ಹೆರೆಯದಿದ್ದರೆ. ಅದರಲ್ಲಿ ಕ್ರಿಮಿ-ಕೀಟ-ಹೇನುಗಳು ತುಂಬುವುದಲ್ಲದೆ ಕೊಳೆ, ಕೆಸರು ಕೂಡ ತುಂಬುತ್ತದೆ. ಇದರಿಂದ ಅವಕ್ಕೆ ಅಸ್ವಸ್ಥತೆಯುಂಟಾಗುತ್ತದೆ ಮತ್ತು ಕೊಳಕಾಗಿರುತ್ತವೆ. ಇದನ್ನು ನಿವಾರಿಸಲು ಕತ್ತಿಯ ಬಳಕೆ ಪಶುಪಾಲಕರಿಗೆ ತುಂಬ ಅಗತ್ಯ.

ಕದರು

ನೆಲಬಾವಿಯಿಂದ ಎತ್ತುಗಳ ಮೂಲಕ ಕಪ್ಲಿ ಹೊಡೆದು ನೀರನ್ನು ಮೇಲೆತ್ತಲು ಬಳಸುವ ಮತ್ತೊಂದು ಸಾಧನ. ಇದು ಸುಮಾರು ಮೂರು ಅಡಿ ಉದ್ದದ ಕಂಭಾಕಾರದಲ್ಲಿದ್ದು ಒಂದು ಅಡಿ ಸುತ್ತಳತೆ ಇರುತ್ತದೆ. ಇದರ ಎರಡು ತುದಿಗಳಲ್ಲಿ ಸುಮಾರು ಅರ್ಧ ಅಡಿ ಉದ್ದದ ಕಬ್ಬಿಣದ ಸರಳನ್ನು ಜೋಡಿಸಲಾಗುತ್ತದೆ. ಕಂಭಾಕಾರದ ಮಧ್ಯಭಾಗದಲ್ಲಿ ಸುತ್ತಲೂ ತಿರುಪಿನಾಕಾರದಲ್ಲಿ ಕೊರೆದು ಅದರ ಮೂಲಕ ಹೂಟೆ ಹಗ್ಗವು ಸಲೀಸಾಗಿ ತಿರುಗಲು ಅನುವಾಗುವಂತೆ ರಚನೆ ಇರುತ್ತದೆ. ಕದರನ್ನು ಹುಣಸೆ ಮರದಿಂದ ತಯಾರಿಸುತ್ತಾರೆ. ಕಪ್ಲಿಬಾವಿಗಳು ವಿರಳವಾಗಿರುವುದರಿಂದ ಈಗ ಇವುಗಳ ಬಳಕೆ ನಿಂತು ಹೋಗುವ ಸ್ಥಿತಿಯಲ್ಲಿದೆ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App