भारतीय भाषाओं द्वारा ज्ञान

Knowledge through Indian Languages

Dictionary

Janapada Vastukosha (Kannada)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಹಾಳೆ ಕೊರೆಯುವ ಕುಡುಗೋಲು

ಹೊಲಗಳಲ್ಲಿನ ಬದುಗಳು ಮತ್ತು ಹುಲ್ಲನ್ನು ಕೊಯ್ಯಲು ಬಳಸಿಕೊಳ್ಳುವ ಉಪಕರಣ. ಇದು ಸು. ಎರಡು ಅಡಿಯಿಂದ ಐದು ಅಡಿಗಳಷ್ಟು ಉದ್ದವಿರುವ ಅಲಗು. ಅಲಗು ಸು.ಎರಡರಿಂದ ಮೂರು ಇಂಚು ಅಗಲವಿರುತ್ತದೆ, ಸಂಪೂರ್ಣ ಬಾಗಿರುತ್ತದೆ. ಅದರ ಒಳಭಾಗದ ಮಧ್ಯದಲ್ಲಿ ಹಲ್ಲುಗಳಿರುತ್ತವೆ. ಬುಡದಲ್ಲಿ ಸು. ಐದು/ಆರು ಇಂಚು ಉದ್ದದ, ನಾಲ್ಕು ಇಂಚು ಸುತ್ತಳತೆಯ ಮರದ ಹಿಡಿಕೆ ಇರುತ್ತದೆ. ಹೊಲಗಳ ಬದುಗಳ ಬದಿಗಳನ್ನು ಹುಲ್ಲು ಸಮೇತ ಕೊಯ್ಯಲು, ಇದರ ಮುಖ್ಯ ಬಳಕೆ. ಹೊಲಗಳಲ್ಲಿನ ಬದುಗಳಿಂದ ನೀರು ಹರಿದು ಹೋಗುವಂತೆ ಮಾಡಲು ಈ ಉಪಕರಣದಿಂದ ಬದುವನ್ನು ಅಡ್ಡಕ್ಕೆ ಕೊಯ್ಯಲೂ ಸಹ ಇದನ್ನು ಬಳಸಿಕೊಳ್ಳಲಾಗುತ್ತದೆ. ಅಂತೆಯೇ ಬದುಗಳ ಬದಿಯಲ್ಲಿ ಎತ್ತರಕ್ಕೆ ಬೆಳದೆ ಹುಲ್ಲನ್ನು(ಒಬ್ಬನು ಬಾಗಿಸಿ ಹಿಡಿದುಕೊಂಡಾಗ) ಈ ಕುಡುಗೋಲಿನಿಂದ ಕೊಯ್ಯವುದಕ್ಕೂ ಬಳಕೆಯಾಗುತ್ತದೆ. ದೊಡ್ಡ ಕುಡಗೋಲುಗಳಾದರೆ ಕುಡಗೋಲಿನ ಮುಂಭಾಗಕ್ಕೆ ಹಗ್ಗ ಕಟ್ಟಿಕೊಂಡು ಒಬ್ಬ ಹಿಡಿಕೆಯನ್ನು ಮತ್ತೊಬ್ಬ ಹಗ್ಗವನ್ನು ಹಿಡಿದು ಗರಗಸದಂತೆ ಬದುಗಳನ್ನು ಕತ್ತರಿಸುವ ವಿಧಾನಕ್ಕೂ ಬಳಸುತ್ತಾರೆ.

ಹುಟ್ಟು

ಮನೆಯಲ್ಲಿ ಕುದಿಯುತ್ತಿರುವ ಅಥವಾ ಬೇಯುತ್ತಿರುವ ಹಿಟ್ಟು/ ದ್ರವ ಪದಾರ್ಥ ಗಳನ್ನು ತಿರುವಲು ಬಳಸುವ ವಸ್ತು. ಇದರ ಹಿಡಿಕೆ ಮತ್ತು ತುದಿಭಾಗದ ಚಪ್ಪಟೆಯಾಕಾರದ ಭಾಗಗಳನ್ನು ಒಂದೇ ಮರದ ತುಂಡಿನಿಂದ ತಯಾರಿಸುತ್ತಾರೆ. ಹೆಚ್ಚು ಪ್ರಮಾಣದ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಕೈಗಳಿಗೆ ಶಾಖವು ಬಡಿಯದಂತೆಯೂ ಪಾತ್ರೆಯ ತಳದಲ್ಲಿನ ಪದಾರ್ಥಗಳು ತಳಹಿಡಿಯದಂತೆಯೂ ತಿರುವಲು ಇವು ಅನುಕೂಲವಾಗುತ್ತವೆ. ಇವು ಸಾಕಷ್ಟು ಉದ್ದವಾಗಿಯೂ ಗಟ್ಟಿಮುಟ್ಟಾಗಿಯೂ ಇವೆ. ಇವನ್ನು ಔಷಧೀಯ ಗುಣಗಳುಳ್ಳ ಇಂಗಳಾರ ಮುಂತಾದ ಮರಗಳಿಂದ ತಯಾರಿಸುತ್ತಾರೆ. ಇವುಗಳ ಗಾತ್ರದಲ್ಲಿ ವ್ಯತ್ಯಾಸ ಮಾಡಿಕೊಂಡು ಬೇರೆ ಬೇರೆ ಪ್ರಮಾಣದ ಹುಟ್ಟುಗಳನ್ನು ತಯಾರಿಸಿಕೊಳ್ಳಬಹುದು. ಲೋಹದ ಹುಟ್ಟುಗಳಂತೆ ಇವು ಬಿಸಿಯಾಗುವುದಿಲ್ಲ ಮತ್ತು ಇವುಗಳಂತೆ ಔಷಧೀಯ ಗುಣಗಳು ಲೋಹದ ಹುಟ್ಟುಗಳಿಗೆ ಇರುವುದಿಲ್ಲ ಎನ್ನುವುದು ಗಮನಾರ್ಹ. ಈ ಹುಟ್ಟನ್ನು ಬಳಸಿ ತಯಾರಿಸಿದ ಆಹಾರ ಬೇಗನೆ ಹಾಳಾಗುವುದಿಲ್ಲ ಎನ್ನುವುದು ಜನಪದರ ಅನುಭವ.

ಹೂಜಿ

ಕುಡಿಯುವ ನೀರು ಹಾಕಿಡಲು ಬಳಸುವ ಮಣ್ಣಿನ ಹೂಜಿ. ಇದರ ತಳಭಾಗವು ಸಮತಟ್ಟಾಗಿದ್ದು ಭದ್ರವಾಗಿ ಸಮತಟ್ಟು ಜಾಗದಲ್ಲಿ ಇಡುವುದಕ್ಕೆ ಅನುಕೂಲವಾಗಿರುತ್ತದೆ. ಇದರ ಮಧ್ಯಭಾಗವು ಸುಮಾರು ಮೂವತ್ತು ಇಂಚು ವ್ಯಾಸವಿರುತ್ತದೆ. ಬಾಯಿಯು, ಸುಮಾರು ಐದು ಇಂಚು ವ್ಯಾಸವಿರುತ್ತದೆ. ಹೂಜಿಯಲ್ಲಿ ನೀರು ಸುರಿಯಲು ವಿವಿಧ ವಿನ್ಯಾಸಗಳ ಒಂದು ರಂಧ್ರವಿರುವುದೂ ಇದೆ. ಹೂಜಿಗೆ ಮುಚ್ಚಲು ಒಂದು (ಚಿತ್ತಾರದ) ಮುಚ್ಚಳವಿರುತ್ತದೆ. ಹೂಚಿ ಸುಮಾರು ಒಂದೂವರೆ ಅಡಿ ಎತ್ತರವಿರುತ್ತದೆ. ಹೂಜಿಗಳ ಆಕಾರ, ಗಾತ್ರ ವಿನ್ಯಾಸಗಳಲ್ಲಿ ವ್ಯತ್ಯಾಸವಿರುತ್ತದೆ. ಹೂಜಿಯನ್ನು ಮಣ್ಣಿನಿಂದ ತಯಾರು ಮಾಡುತ್ತಾರೆ. ಪಿಂಗಾಣಿಯಿಂದಲೂ ಹೂಜಿಗಳು ನಿರ್ಮಾಣಗೊಳ್ಳುತ್ತವೆ.

ಹೂಬುಟ್ಟಿ

ಪೂಜಾ ಸಾಮಗ್ರಿಗಳನ್ನು ಕೊಂಡೊಯ್ಯಲು ಬಳಸುವ ವಸ್ತು. ಇದು ಸುಮಾರು ಹನ್ನೆರಡು ಇಂಚು ಎತ್ತರ ಇಪ್ಪತ್ತೇಳು ಇಂಚು ಸುತ್ತಳತೆ ಹೊಂದಿರುತ್ತದೆ. ಇದಕ್ಕೆ ಮುಚ್ಚಳವನ್ನು ಜೋಡಿಸಲಾಗಿರುತ್ತದೆ. ಅಲ್ಲದೆ ಭದ್ರವಾಗಿರಲು ಬೀಗ ಹಾಕುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿರುತ್ತದೆ. ಇದಕ್ಕೆ ವಿವಿಧ ಬಣ್ಣದ ಪ್ಲಾಸ್ಟಿಕ್ ವೈರಿನಿಂದ ಅಲಂಕಾರಗೊಳಿಸಲಾಗಿದೆ. ತೋಟದಿಂದ ಹೂಗಳನ್ನು ಕೊಯ್ದು ತರಲು, ದೇವಸ್ಥಾನಕ್ಕೆ ಮನೆಯಿಂದ ಪೂಜಾ ಸಾಮಗ್ರಿಗಳನ್ನು ಕೊಂಡೊಯ್ಯಲು (ವಿಶೇಷವಾಗಿ ಹೂಗಳನ್ನು) ಕೊಂಡೊಯ್ಯಲು ಬಳಕೆಯಾಗುತ್ತದೆ. ಇತ್ತೀಚೆಗೆ ಇಂಥವುಗಳಲ್ಲಿ ತರಕಾರಿಗಳನ್ನು ಹಾಕಿಡಲು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಬಿದಿರಿನಿಂದ ತಯಾರಿಸುತ್ತಾರೆ. ವಿವಿಧ ರೂಪಗಳಲ್ಲಿ ಇವನ್ನು ಕಾಣಬಹುದಾಗಿದೆ.

ಹೂವಾರತಿ / ಆರತಿ ತಟ್ಟೆ

ಹಬ್ಬ ಹರಿದಿನ, ಜಾತ್ರೆ, ಉತ್ಸವಗಳಲ್ಲಿ ದೇವರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಪಣತಿ, ಕುಂಕುಮ ಭರಣಿ/ಬಟ್ಟಲು, ಕಳಸ ಮುಂತಾದವುಗಳನ್ನು ಇಟ್ಟುಕೊಂಡು ಆರತಿ ಮಾಡುವುದಕ್ಕೆ ಬಳಸುವ ಸಾಧನ. ಇದು ಸುಮಾರು ಇಪ್ಪತ್ತು ಇಂಚು ಉದ್ದವಿದ್ದು, ಸುಮಾರು ಹತ್ತು ಇಂಚು ವ್ಯಾಸವಿದೆ. ತಟ್ಟೆಯು ಹೂವಿನ ಚಿತ್ತಾರದಿಂದ ಕೂಡಿದ್ದು, ಹಿಡಿಯಲು ಹಿಡಿಕೆಯನ್ನು ಹೊಂದಿದೆ. ಸುಮಾರು ಇಪ್ಪತ್ತನೇ ಶತಮಾನದ ಪೂರ್ವಾರ್ಧಕ್ಕೆ ಸೇರಿದೆ. ಹಿತ್ತಾಳೆಯಿಂದ ತಯಾರಿಸಲಾಗಿದೆ. ಆರತಿ ತಟ್ಟೆಯಲ್ಲಿ ಕರ್ಪೂರ ಹಚ್ಚಿ ದೇವರಿಗೆ ಮಂಗಳಾರತಿ ಮಾಡಲೂ ಬಳಸುತ್ತಾರೆ. ವಿವಿಧ ಆಕಾರದ ಆರತಿ ತಟ್ಟೆಗಳು ಇವೆ.

ಹೆಂಟೆಕೊಡತಿ

ಗದ್ದೆ, ಹೊಲಗಳಲ್ಲಿನ ಮಣ್ಣಿನ ಹೆಂಟೆಗಳನ್ನು ಹೊಡೆದು ಪುಡಿ ಮಾಡಲು ಬಳಸುವ ಮರದ ಸಾಧನ. ಇದರಲ್ಲಿ ಈಸು ಮತ್ತು ದಿಂಡು ಎಂಬ ಎರಡು ಭಾಗಗಳಿವೆ. ದಿಂಡು ಸುಮಾರು ಮುಕ್ಕಾಲರಿಂದ ಒಂದು ಅಡಿಯಷ್ಟು ಉದ್ದ, ಸುಮಾರು ಅರ್ಧ ಅಡಿ ಎತ್ತರದ್ದಾಗಿದೆ. ಈಸು ಸುಮಾರು ಐದು ಅಡಿ ಉದ್ದವಿದೆ. ಔಡಲ, ಅಲಸಂದೆ, ರಾಗಿ ಮುಂತಾದವುಗಳ ಕಾಳುಗಳನ್ನು ಬೇರ್ಪಡಿಸಿಕೊಳ್ಳುವುದಕ್ಕೂ ಹೆಂಟೆ ಕೊಡತಿಯು ಉಪಯೋಗವಾಗುತ್ತದೆ. ದಿಂಡನ್ನು ಸಾಗುವಾನಿಯಾಗಲಿ ಇತರ ನಾರುಜಾತಿಯ, ಭಾರವುಳ್ಳ, ಗಟ್ಟಿ ಮರಗಳಿಂದಾಗಲಿ ತಯಾರಿಸಲಾಗುತ್ತದೆ.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App